. ಕಕ್ಷ್ಯಾಂತರೇs ಮಗಧಾಃ ಕರಜಾಗ್ರಯೋಗಾ
ದೆದ್ವ್ಯಕ್ತಿಕೃತಶುತಿಸುಖಾಂ ವಿರಚ್ಯ ವೀಣಾಮ್ |
ನಾಥಂ
ಭುವೋ ಭಣಿತಿಭಿರ್ನಯಜಾಗರೂಕಂ
ಪ್ರಾಬೋಧಯಂದಿನಮುಖಸ್ತುತಿಪಕ್ಷ್ಮಲಾಭಿಃ ||

ಬೇರೊಂದು ಕಡೆಯಲ್ಲಿದ್ದ ಹೊಗಳುಭಟರು ಕೈಗಳ ಸ್ಪರ್ಶದಿಂದ ಕಿವಿಗೆ ಸುಖವನ್ನು ಕೊಡುವ ಧ್ವನಿಯನ್ನು ವೀಣೆಯನ್ನು ಶ್ರುತಿಮಾಡಿಕೊಂಡು ನೀತಿಯಲ್ಲಿ ಸದಾ ಜಾಗರೂಕಾನಾಗಿದ್ದ ರಾಜನನ್ನು ಪ್ರಭಾತಸ್ತುತಿಯಿಂದ ರಮಣೀಯವಾಗಿದ್ದ ನುಡಿಗಳಿಂದ ಎಚ್ಚರಗೊಳಿಸಿದರು.

. ಆಸ್ವಾದ್ಯ ಪೂರ್ವಮವಿಶಂಕಮಭೀಶಂಕಮಭೀಶುಮಿಂದೋ
ರಾರಾದ್ವಿರಾಮಸಮಯೇ ಕಣಶೋ ಗೃಹೀತಮ್ |
ಚಂಚೂಪುಟೇಷು ಕಲಯಂತಿ ಚಕೋರಕಾಂತಾಃ
ಸಂಚಿಂತ್ಯ ಶಾಬಕಕುಲಾನಿ ತೃಷಾssಕುಲಾನಿ ||

ಚಂದ್ರನ ಕಿರಣಗಳನ್ನು ನಿಶ್ಯಂಕವಾಗಿ ಮೊದಲು ಆಸ್ವಾದಿಸಿದ ಹೆಣ್ಣು ಚಕೋರಪಕ್ಷಿಗಳು ರಾತ್ರಿವೇಳೆಯಲ್ಲಿ ಕಣಕಣವಾಗಿ ಸಂಗ್ರಹಿಸಿದ ಚಂದ್ರಕಿರಣವನ್ನು ಬಾಯಾರಿಕೆಯಿಂದ ಬಳಲುವ ತಮ್ಮ ಮರಿಗಳನ್ನು ಚಿಂತಿಸಿ ತಮ್ಮ ಕೊಕ್ಕುಗಳಲ್ಲಿ ರಕ್ಷಿಸಿಕೊಳ್ಳುತ್ತವೆ.

. ಸಾಯಮ್ಮಿಲ್ಲದ್ದಲಶತಾಕ್ರಮಣಾದ್ವಿರೇಫ
ಸ್ಸಂರಕ್ಷಿತಂ ಸಹಚರೀಂ ವಿತತೌ ಚಿರಾಯ |
ಸಂಕೋಚಯತ್ಯತಿಜಡೌ ಗರುತೌಕಥಂಚಿ
ತ್ಸಾಂಹಾಸಿಕಸ್ಪೃಶಿ ಶೈನರ್ಮುಕುಲೇನಲಿನ್ಯಾಃ ||

ಸಾಯಂಕಾಲದಲ್ಲಿ ಒಟ್ಟಿಗೆ ಮುಚ್ಚಿಕೊಂಡ ನೂರುದಳಗಳ ಆಕ್ರಮಣದಿಂದ ತನ್ನ ಸಹಚರಿಯನ್ನು ರಕ್ಷಿಸುವುದಕ್ಕಾಗಿ ಬಹುಕಾಲ ಹರಡಿಕೊಂಡಿದ್ದ ತನ್ನ ರೆಕ್ಕೆಗಳನ್ನು ಬಳಲಿಕೆಯ ಕಾರಣದಿಂದಾಗಿ, ಪದ್ಮಸರೋವರದ ಪದ್ಮಗಳ ಮೊಗ್ಗು ಮೆಲ್ಲನೆ ಅರಳಲು ಆರಂಭಿಸಿದಾಗ ಭ್ರಮರವು ಮುಚ್ಚಿಕೊಂಡಿತು.

. ಕಾರಾನಿಭಾತ್ಕಮಲಕುಡ್ಮಲತಶ್ಚಿರಾಯ
ನಿರ್ಗತ್ಯ ಷಟ್ಪದಯುವಾ ಕುಮುದೇ ನ್ಯವಾತ್ಸೀತ್ |
ತತ್ರಾsಪಿ ಸಂಕುಚದದಶಚ್ಛದ ಪೀಡಿತೋsಭೂ
ತ್ಕುತ್ರಾsಪಿ ಭಾವಿ ಜಹಾತ್ಯಸುಖಂ ಸುಖಂ ವಾ ||

ಕಾರಾಗೃಹದಂತೆ ಇದ್ದ ಕಮಲದ ಮೊಗ್ಗಿನಿಂದ ಹೇಗೋ ಹೊರಗೆ ಬಂದು ತರುಣ ಭ್ರಮರವು ನೈದಿಲೆಯಲ್ಲಿ ನಿಂತಿತು. ಅದು ಮುಚ್ಚಿಕೊಂಡಾಗ ಅದರ ದಳಗಳಿಂದಲೂ ಪೀಡಿತವಾಯಿತು. ಎಲ್ಲಿಗೆ ಹೋದರೂ ಆಗಬೇಕಾದ ಸುಖವಾಗಲಿ ದುಃಖವಾಗಲಿ ಬಿಡುವುದಿಲ್ಲವಲ್ಲವೇ?

. ಜೋತ್ಸ್ನಾಂಬುಪೂರಮಪಸಾರ್ಯ ದಿಶಾವಕಾಶ
ಕೂಲಂಕಷಂ ಕುವಲಯಾಕ್ರಮಣಾನುಕೂಲಮ್ |
ಧ್ವಾಂತೌಘಮುದ್ಗರಖರಾಂಶುಖನಿತ್ರಪಾತಾ
ನ್ವಿಸ್ತಾರಯತ್ಯರೂಣ ಎಷ ವಿಯತ್ತಟಾಕಮ್ ||

ದಿಕ್ಕುಗಳ ದಡಗಳನ್ನು ಮುಟ್ಟುತ್ತಿದ್ದ ಹಾಗೂ ಕುವಲಯದ ಆಕ್ರಮಣಕ್ಕೆ ಅನುಕೂಲವಾದ ರೀತಿಯಲ್ಲಿ ಬೆಳದಿಂಗಳೆಂಬ ನೀರಿನ ಪ್ರವಾಹವನ್ನು ತಡೆದು ಅರುಣನು ತೀಕ್ಷಣವಾದ ಕಿರಣಗಳೆಂಬ ಗುದ್ದಲಿಯನ್ನು ಬಳಸಿ ಆಕಾಶವೆಂಬ ಕತ್ತಲೆ ತುಂಬಿದ್ದ ಕೆರೆಯನ್ನು ಅಗೆದು ವಿಶಾಲಗೊಳಿಸುತ್ತಿದ್ದಾನೆ.

. ಪಾದಾಗ್ರತಃ ಕಮಲಿನೀ ಪರಿದೃಶ್ಯಮಾನಾ
ಪ್ರಾದುಸ್ಮಿತಾಂಬುಜಮಿಷಾತ್ ಪ್ರಥಮಂ ಪ್ರಬುದ್ಧಾ |
ಪತ್ಯುರ್ನಿಜಸ್ಯ ಪರಿಪಾಲಯತೀವ ಬೋಧಂ
ಪಂಥಾ ಹ್ಯಯಂ ಪರಿಚಿತಃ ಪತಿದೇವತಾಭಿಃ ||

ಪಾದತಾಡನದಿಂದ ಅಂದರೆ ಕಿರಣಗಳ ಸ್ವರ್ಶದಿಂದ ಕಮಲವು ತನ್ನ ಅರಳುವಿಕೆಯ ನೆವದಿಂದ ಮುಗುಳುನಕ್ಕು ಎಚ್ಚರಗೊಂಡು ತನ್ನ ಪತಿ ಸೂರ್ಯನ ಆದೇಶವನ್ನು ಪಾಲಿಸುತ್ತಿರುವಂತೆ ಕಾಣುತ್ತಾಳೆ. ಪತಿವ್ರತೆಯರಿಗೆ ಇದು ಪರಿಚಿತವಾದ ಮಾರ್ಗವಲ್ಲವೇ?

. ಆಲೋಕ್ಯ ದೂರಮಿತರೇತರಮಶ್ರುಯೋಗಾ
ದಗ್ರೇsಪಿ ಮಾರ್ಗಮವಗಂತುಮಪಾರಯಂತೌ |
ಪಶ್ಚಾತ್ಪರಸ್ಪರರವಾನುಗಮಾದ್ಭ್ರಮಂತೌ
ಸಂರಂಭತೋ ರಥಪದೌ ದಿವಸಂ ಘಟೇತೇ ||

ಚಕ್ರವಾಕ ದಂಪತಿಗಳು ಪರಸ್ಪರರನ್ನು ದೂರದಿಂದ ನೋಡಿ ಆನಂದಭಾಷ್ಪಗಳು ಉಕ್ಕಿದುದರಿಂದ ದಾರಿಯನ್ನು ಕಾಣಲು ಅಶಕ್ತವಾಗಿ, ಆಮೇಲೆ ಪರಸ್ಪರ ಶಬ್ದವನ್ನು ಅನುಸರಿಸಿ ಚಲಿಸಿ ಸಂಭ್ರಮದಿಂದ ದಿನವೆಲ್ಲ ನಲಿಯುತ್ತವೆ.

. ವ್ಯಗ್ರಾಸ್ಸಮೀಹಿತಫಲಾಯ ವಿಧಾಯ ದೃಷ್ಟಿಂ
ವ್ಯಾಪ್ತಾರುಣದ್ಯುತಿನಿ ವಿಷ್ಣುಪದೇನುವೇಲಮ್ |
ವಿದ್ಯೋತಯಂತಿ ವಿವಿಧಾಗಮಶಾಖಿಕಾಯಾ
ಮುಚ್ಚೈಃಸ್ವರ ಪ್ರಕರಣಾನ್ಯುದಯೇ ದ್ವಿಜಾಘಾಃ ||

ಪಕ್ಷಿಸಂಕುಲವೆಲ್ಲ ಇಷ್ಟಾರ್ಥಕ್ಕಾಗಿ ಸೂರ್ಯಪ್ರಕಾಶ ಹರಡುವಲ್ಲಿ ಅಂದರೆ ಸೂರ‍್ಯೋದಯವಾಗುವದನ್ನು ನಿರೀಕ್ಷಿಸಿ ವಿವಿಧ ಗಿಡಮರಗಳಲ್ಲಿ ಕುಳಿತು ರಾಗವಾಗಿ ಉಲಿಯುತ್ತವೆ. ಇನ್ನೊಂದರ್ಥ ದ್ವಿಜ ಸಮೂಹದವರು ಇಷ್ಟಾರ್ಥ ಪ್ರಾಪ್ತಿಗಾಗಿ ಸೂರ‍್ಯೋದಯವನ್ನೆ ನಿರೀಕ್ಷಿಸುತ್ತಾ ವಿವಿಧ ಆಗಮ ಶಾಖೆಗಳಲ್ಲಿನ ಸ್ವರಪ್ರಕರಣಗಳನ್ನು ಎತ್ತರದ ಧ್ವನಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ.

. ಆಶ್ಲೆನ್ಷವಿಚ್ಯುತಿಸಹಾನವಕಲ್ಪ್ಯ ಮುಗ್ಧಾನೆ
ಜಗ್ಧಾವಶಿಷ್ಟಕಣಿಶಾರ್ಪಣತಃ ಕಿಶೋರಾನ್ |
ಕ್ವಾಪಿ ಕ್ರಮೋಪಚಿತಕೂಜನಧೋರಣೀಕಾ
ನಿರ್ಯಾಂತ್ಯತಶಶಕುನಯಸ್ತರುನಿಷ್ಕುಟಾಂತಾತ್ ||

ತಾವು ಅಗಿದು ಉಳಿಸಿದ ಧಾನ್ಯಗಳ ಚೂರುಗಳನ್ನು ಗುಟುಕು ಕೊಟ್ಟು ಮುಗ್ಧವಾದ ಮರಿಗಳನ್ನು ಆಲಿಂಗನ ವಿಚ್ಛೇದವನ್ನು ಸಹಿಸಲು ಶಕ್ತವನ್ನಾಗಿ ಮಾಡಿ ಪಕ್ಷಿಗಳು ಮರಗಳ ತೋಪುಗಳಿಂದ, ಕ್ರಮವಾಗಿ ಜೋರಾಗಿ ಕೂಗಿಕೊಳ್ಳುತ್ತಾ ಹೊರಗೆ ಹೊರಡುತ್ತಿವೆ.

೧೦. ಅರ್ಘ್ಯೋದಕಾನಿ ಮಹಸಾಮಧಿಪಾಯ
ದಾತುಮಾಬಿಭ್ರತೋsಂಜಲಿಪ್ರಚೇಷ್ಟಖಿಲಾಂದ್ವಿಜಾತೀನ್ |
ಅಂಭೋಜಿನಿಪರಿಷದಃ ಕಿಮಹಾನುಕುರ್ವಂ
ತ್ಯಂತರ್ಮರಂದರಸದಂತುರಿತಾರವಿಂದಾಃ ||

ತೇಜೋನಿಧಿಯಾದ ಸೂರ್ಯನಿಗೆ ಅರ್ಘ್ಯಜಲವನ್ನು ಕೊಡಲು ಬೊಗಸೆಗಳಲ್ಲಿ ನೀರನ್ನು ತುಂಬಿಕೊಂಡು ನಿಂತಿರುವ ಸಮಸ್ತ ಬ್ರಾಹ್ಮಣರನ್ನು ತಮ್ಮೊಳಗೆ ಮಕರಂದವನ್ನು ತುಂಬಿಕೊಂಡಿರುವ ಪುಷ್ಕರಣಿಯ ತಾವರೆಗಳು ಅನುಕರಿಸುತ್ತಿವೆಯೇನು?

೧೧. ವಿಸ್ತಾರ್ಯಮಾಣಮರವಿಂದಕರನ್ನಲಿನ್ಯಾ
ವಿಪ್ರಶ್ನಿಕಾ ಸಮವಲೋಕ್ಯ ನಿಶಾಂತವೇಲಾ |
ಸಂಧ್ಯಾಶುದಂಡಮಧಿಶಕ್ರದಿಶಂ ಪ್ರಚಾಲ್ಯ
ಪ್ರಾಹ ಪ್ರಿಯಾಗಮಶುಭಂ ಪತತಾಂ ವಿರಾವೈಃ ||

ತಾವರೆಯು ತನ್ನ ಕೈಯನ್ನು ಮುಂದೆ ಚಾಚಿದಾಗ ಪ್ರಭಾತಮೇಳೆಯೆಂಬ ಜೋಗಿತಿಯು ಅದನ್ನು ಪರೀಕ್ಷಿಸಿ ಪ್ರಾತಃಸಂಧ್ಯಾಕಾಲದ ಕಿರಣವೆಂಬ ದಂಡವನ್ನು ಪೂರ್ವದಿಕ್ಕಿನಲ್ಲಿ ಬೀಸಿ ಪ್ರಿಯಾಗಮದ ಶುಭವಾರ್ತೆಯನ್ನುಪಕ್ಷಿಗಳ ಕಲರವದಿಂದ ತಿಳಿಸುತ್ತಿದ್ದಾಳೆ.

೧೨. ಅಂತೇವಸಂತಮಪಸಾರಿತಪಾಶಬಂಧಂ
ವತ್ಸಂ ಕಟಾಕ್ಷಿತತನೌ ಸುರಭೌ ನಿಯೋಜ್ಯ |
ಗೋಪಾಲಕೋಯಮಮೃತಂ ಗುರುಮಪ್ರಮೇಯ
ಮಾಪೀಡಿತೋ ಮಿಷದಧಸ್ತನಜನ್ಮ ದುಗ್ಧೇ ||

ಹಗ್ಗದ ಕಟ್ಟನ್ನು ಬಿಚ್ಚಿದಾಗ ತಾಯಿಯ ಬಳಿ ನಿಂತ ಕರುವನ್ನು ಹಸು ನೋಡುತ್ತಿರಲು ಗೋಪಾಲನು ಅದರ ಕೆಚ್ಚಲಿನಿಂದ ಪಾತ್ರೆಯಲ್ಲಿ ಹಿಡಸಲಾರದಷ್ಟು ಹಾಲನ್ನು ಕರೆಯುತ್ತಿದ್ದಾನೆ.

೧೩. ಇಂದೀವರಾಣ್ಯುದಯತೀಶೀತಂ ಗೃಹಾಣಾಂ
ನಿದ್ರಾಂತಿ ಯನ್ನಿಯತಮಭ್ಯುದಯಾನ್ಯಮೂನಿ |
ಇತ್ಯೇವ ತಾನಿ ಪರಿಹೃತ್ಯ ವಲಂತಿ ಮಂದ
ಮಿಂದಿಂದಿರದ್ವಿಜಕುಲಾನ್ಯರವಿಂದವೃಂದೇ ||

ಗ್ರಹಗಳ ಪತಿಯಾದ ಸೂರ್ಯನು ಉದಯಿಸಿದಾಗ ನೈದಿಲೆಗಳು ನಿಯತವಾಗಿ ನಿದ್ರಿಸಲಾರಂಭಿಸುತ್ತವೆ. ಆದರೆ ಕಮಲಗಳು ಅರಳುತ್ತವೆ ಎಂದು ಆಲೋಚಿಸಿ ಭ್ರಮರಗಳೆಂಬ ದ್ವಿಜರು ನೈದಿಲೆಗಳನ್ನು ತ್ಯಜಿಸಿ ಕಮಲಗಳ ಸಮೂಹದ ಕಡೆಗೆ ಚಲಿಸುತ್ತಿದ್ದಾರೆ.

೧೪. ಸಂಧ್ಯಾಚ್ಛಲೇನ ಮುಖಮಾರ್ಜನವಸ್ತ್ರಮಾಶಾ
ಸೌತ್ರಾಮಣೀ ವರುಣಾದಿಕ್ಚ್ಛಶಿಮಂಡಲಾಗ್ರಮ್ |
ಅಭ್ರಶ್ರಿಯೈವ ವಿಜಿಹೀಷತಿ ಭಾನುಮಾಲಿ
ನ್ಯಂಭೋಜಿನೀ ವಹತಿ ಚಾಬ್ಜಮಯಿಂ ಕಲಾಚೀಮ್ ||

ಪೂರ್ವಸಂಧ್ಯೆಯ ನೆವದಿಂದ ಇಂದನ ದಿಕ್ಕು ನಿನಗೆ ಮುಖವನನಉ ಒರೆಸಿಕೊಳ್ಳುವ ಬಟ್ಟೆಯನ್ನು, ವರುಣನ ದಿಕ್ಕು ಚಂದ್ರನೆಂಬ ಮಂಡಲಾಗ್ರವನ್ನು, ಅಂಭೋಜನೀಯು ಪದ್ಮವೆಂಬ ಕಲಾಚಿಯನ್ನು ಹಿಡಿದುನಿಂತಿವೆ. ಸೂರ್ಯನು ಆಕಾಶದ ಲಕ್ಷ್ಮಿಯಿಂದಲೇ ನಿನಗೆ ಸೇವೆಸಲ್ಲಿಸಲು ಇಚ್ಛಿಸುತ್ತಿದ್ದಾನೆ.

೧೫. ಮಂದೇಹಲೋಕಮಖಿಲಂ ಮಧಿತುಂ ಪಯೋಧೇ
ರ್ನಿರ್ಗಚ್ಛತಶಶುಭ ನಿರೀಕ್ಷಣಕಾಲಜನ್ಮಾ |
ನಿಶ್ವಾಸಬಂಧ ಇವ ನೀರಜಲೋಕಬಂಧೋಃ
ಪ್ರಾಭಾತಿಕೋ ವಿವಂತೇ ಪವನಸ್ತುಷಾರಃ ||

ಮಂದೇಹರೆಂಬ ರಾಕ್ಷಸರ ಸಮಸ್ತ ಸಮೂಹವನ್ನು ನಾಶಪಡಿಸಲು ಸಮುದ್ರದಿಂದ ಮೇಲೆ ಏಳುತ್ತಿರುವ ಲೋಕಬಂಧು ಸೂರ್ಯನ ಶುಭಕಾಲ ನಿರೀಕ್ಷಣೆಯಿಂದ ಉಂಟಾದ ನಿಶ್ವಾಸದ ಸೇತುವೆಯಂತೆ ಬೆಳಗಿನ ತಂಪಾದ ಗಾಳಿಯು ಈಗ ಬೀಸುತ್ತಿದೆ.

೧೬. ಸಂಪ್ರೇಷ್ಯ ಹೇತಿಸಮವಾಯಮಹರ್ಮುಖೇನ
ಸಂದಾರಿತಾಂಧತಮಸಃ ಪ್ರಸರಂ ಸಮಂತಾತ್ |
ಪಾಥೋಜಿನಿ ಕಿಮಖಿಲಾಃ ಪಾರಿಣೀಯ ದೂರಾತ್
ಪ್ರಖ್ಯಾಯತೇ ಪತಿರಸಾವಿತಿ ಭಾನುರಾಸಾಮ್ ||

ಉಷಃಕಾಲದಲ್ಲಿ ಕಿರಣಗಳೆಂಬ ಆಯುಧಗಳನ್ನು ಕಳುಹಿಸಿ ಎಲ್ಲ ಕಡೆಯಲ್ಲೂ ಕತ್ತಲೆಯ ಹರಡುವಿಕೆಯನ್ನು ಕತ್ತರಿಸಿಹಾಕಿ ಸಮಸ್ತ ಪದ್ಮಿನಿಯರನ್ನು ಮದುವೆಯಾಗಿ ಸೂರ್ಯನು ಅವರೆಲ್ಲರ ಪತಿಯೆಂದು ಈಗ ಮೆರೆಯುತ್ತಿರುವನೇನು?

೧೭. ನಿಕ್ಷಿಪ್ತಮಾತ್ಮನಿ ಸುರಕ್ಷಿತಮಾಪ್ರಭಾತಂ
ಪೂಷ್ಣೇ ವಸೂಚ್ಚಯಮಯಿ ಪುನರರ್ಪಯಿತ್ವಾ |
ದೀಪಾಸ್ಸಜಾಡ್ಯಮವಪತ್ಯ ದಶಾಂಶುಕಾಂತೇ
ನಿದ್ರಾಂತಿ ಸಂಕುಚದಭೀಶುನಿಭಪ್ರತೀಕಾಃ ||

ಸೂರ್ಯನು ತಮ್ಮಲ್ಲಿ ನ್ಯಾಸವಾಗಿಟ್ಟಿದ್ದ ಕಾಂತಿರಾಶಿಯನ್ನು ದೀಪಗಳು ಬೆಳಗಿನವರೆಗೆ ರಕ್ಷಿಸಿಕೊಂಡಿದ್ದು ಈಗ ಪುನಃ ಸೂರ್ಯನಿಗೆ ಅದನ್ನು ಅರ್ಪಿಸಿ ಬಳಲಿಕೆಯಿಂದ ಬತ್ತಿಯೆಂಬ ಬಟ್ಟೆಯ ತುದಿಯಲ್ಲಿ ಬಿದ್ದು ಕುಗ್ಗುತ್ತಿರುವ ಕಿರಣಗಳೆಂಬ ಅಂಗಗಳನ್ನು ಹೊಂದಿ ನಿದ್ದೆ ಮಾಡುವಂತಿದೆ.

೧೮. ಅಭೋಗವತ್ಪ್ರಥಮಶೈಲಕುಚಾಗ್ರಲೀನ
ಮಾಕೃಷ್ಯ ಚಂದ್ರಕಿರಣಾಂಶುಕಮಬ್ಜಬಂಧೌ |
ಅಶ್ಲಿಷ್ಯತಿ ಸ್ವಮುಚಿರೇಣ ಹರಿದ್ವಲಾರೇ
ರಾಲಕ್ಷ್ಯತೇ ಸುಖನಿಮೀಲಿತತಾರಕೇಯಮ್ ||

ಭೋಗಾಸಕ್ತಿಯಿಂದ ಕುಚಶೈಲಗಳ ಮೇಲೆ ಹರಡಿದ್ದ ಚಂದ್ರಕಿರಣಗಳೆಂಬ ಬಟ್ಟೆಯನ್ನು ಸೆಳೆದುಹಾಕಿ ಸೂರ್ಯನು ದಿಗಂಗನೆಯನ್ನು ಆಲಂಗಿಸಿದಾಗ ಅವಳು ಸುಖಾನುಭವದಿಂದ ತಾರಕೆಗಳೆಂಬ ಕಣ್ಣುಗಳನ್ನು ಮುಚ್ಚಿಕೊಂಡಳೋ ಎಂಬಂತೆ ಭಾಸವಾಗುತ್ತದೆ. ಅಂದರೆ ಸೂರ್ಯೋದಯವಾಯಿತು ಎಂಬುದು ತಾತ್ಪರ್ಯ

೧೯. ನಿರ್ಗಚ್ಛತೋ ನಿಖಿಲಸಂತಮಸಂ ನಿಯಂತುಂ
ನೇತುಸ್ತಿಷಾಂ ತ್ರಿಭುವನಾನುಜಿಘೃಕ್ಷಯಾsಗ್ರೇ |
ಸ್ಥಾತುಂ ಯುಕ್ತಮಸಹಾಯತಯೇತಿ ಕುತ್ರಾ
ಪ್ಯಂತರ್ದಧಾತಿ ರಭಸಾದಧಿಭೂರ್ದ್ವಿಜಾನಾಮ್ ||

ಮೂರುಲೋಕಗಳಿಗೂ ಅನುಗ್ರಹವನ್ನು ಮಾಡಲು ಸಮಸ್ತ ಕತ್ತಲೆಯನ್ನು ನಿಯಂತ್ರಿಸುವುದಕ್ಕಾಗಿ ಸೂರ್ಯನು ಹೊರಟಿರುವಾಗ ನಾನು ಅಸಹಾಯಕನಾಗಿ ಸುಮ್ಮನೇ ಎದುರಿಗೆ ನಿಂತಿರುವುದು ಸರಿಯಲ್ಲ ಎಂಬ ಭಾವನೆಯಿಂದ ದ್ವಿಜಾಧಿಪತಿಯಾದ ಚಂದ್ರನು ಎಲ್ಲೋ ಬೇಗನೇ ಅವಿತಿಟ್ಟುಕೊಳ್ಳುತ್ತಿದ್ದಾನೆ.

೨೦. ಆಕರ್ಣ್ಯ ಕರ್ಣಮಧುರಾಮಿತಿ ಮಾಗಧೋಕ್ತಿಃ
ಕಾಂತೋ ಭುವಃ ಪರಿಸಮಾಪಿತ ಕಾಲ್ಯಕರ್ಮಾ |
ಪ್ರಾತಿಷ್ಠತಾಸ್ತಪವಮಾನಜವಾಭಿಮಾನ
ಮಾರುಹ್ಯ ವಾಹಮಪರೋಕ್ಷಿತತಾರ್ರ್ಷ್ಯವಾಹಃ ||

ಈ ರೀತಿಯಾದ, ಕಿವಿಗೆ ಇಂಪಾದ ವಂದಿಮಾಗಧರ ಮಾತುಗಳನ್ನು ಕೇಳಿದ ರಾಜ ಅಚ್ಯುತರಾಯನು ತತ್ಕಾಲೋಚಿತವಾದ ಕೆಲಸಗಳನ್ನೆಲ್ಲ ಮುಗಿಸಿ ವಾಯುವೇಗದ ಅಭಿಮಾನಕ್ಕೆ ಮಿಗಿಲಾದ ಶ್ರೇಷ್ಠ ಅಶ್ವವನ್ನೇರಿ ಪ್ರತ್ಯಕ್ಷ ವಿಷ್ಣುವಿನಂತೆ ಅಲ್ಲಿಂದ ಹೊರಟನು.

೨೧. ಕಕ್ಷ್ಯಾಂತರೇಷು ಕಲಿತಸ್ಥಿತಿಭಿಃ ಪುರೈವ
ಕಾಲಾನುಕೂಲಪರಿಕರ್ಮಕರಂಬಿತಾಂಗೈಃ |
ಆರೂಢವಾಹನಿವಹೈರನುಬದ್ಧರಾಗಂ
ನಾಥೋsನ್ವಗಾಮಿ ಧರಣೇರ್ನರಪಾಲವರ್ಗೈಃ ||

ಸಮೀಪದಲ್ಲಿಯೇ ಬೇರೆ ಬೇರೆ ಕೊಠಡಿಗಳಲ್ಲಿ ಬಿಡಾರ ಹೂಡಿದ್ದ ಇತರ ರಾಜರೂ ಮೊದಲೇ ಕಾಲಾನುಗುಣವಾದ ಸಿದ್ಧತೆಯಿಂದ ಸನ್ನದ್ಧರಾಗಿದ್ದು ಕುದುರೆಗಳನ್ನೇರಿ ಪ್ರೀತಿಯಿಂದ ಅಚ್ಯುತರಾಯನನ್ನು ಹಿಂಬಾಲಿಸಿದರು.

೨೨. ನಿರ್ಭತ್ಸ್ಯಮಾನಕುಲಿಶಾರಭಟೀನಿರೂqs
ನಿಸ್ಸಾಣರಾಣಮಿವ ಸೋಢುಮಶಕ್ನುವಾನಃ |
ಆವರ್ತಕರ್ಣವಿವರಾರ್ಪಿತಫೇನಕೂಲ
ಮಾಲೋಕ್ಯತೇ ಕಿಮಪರಂ ಪತಿರಾಪಗಾನಾಮ್ ||

ಗುಡುಗಿನ ಸದ್ದನ್ನೂ ಹೀಯಾಳಿಸುವಂತೆ ಮೊಳಗುತ್ತಿದ್ದ ತಮಟೆಗಳ ಶಬ್ದವನ್ನು ತಾಳಲಾರನೋ ಎಂಬಂತೆ ಸಮುದ್ರರಾಜನು ತನ್ನ ಸುಳಿಗಳೆಂಬ ಕಿವಿಗಳಿಗೆ ನೊರೆಯೆಂಬ ಹತ್ತಿಯನ್ನು ಇಟ್ಟುಕೊಂಡನು. ಹೀಗಿರಲು ಬೇರೆ ಏನು ಹೇಳುವುದು?

೨೩. ನಿರ್ಗಚ್ಛತಾಂ ಕಲಕೈರ್ನಿಬಿಡಂ ಭಟಾನಾಂ
ನಿರ್ಯಾಣತೂರ್ಯಜನುಷಾ ನಿನದಾರಭಟ್ಯಾ |
ಗಂಧರ್ವಹೇಷಿತರವೈರ್ಗಜರ್ಗಜಿತಸ್ಯ
ಸರ್ಗೋ ವಿಧೇರಜನಿ ಶಬ್ದಮಯಃ ಕಿಲೈಷಃ ||

ಹೊರಗೆ ನುಗ್ಗುತ್ತಿದ್ದ ಭಟರ ಕಲಕಲಧ್ವನಿಯಿಂದಲೂ ಪ್ರಯಾಣಸೂಚಕ ದುಂದುಭಿಗಳ ನಿನಾದದ ಆರ್ಭಟದಿಂದಲೂ ಕುದುರೆಗಳ ಕೆನೆತದ ಶಬ್ದಗಳಿಂದಲೂ ಘೀಳಿಡುತ್ತಿದ್ದ ಆನೆಗಳ ಗರ್ಜನೆಯಿಂದಲೂ, ಬ್ರಹ್ಮನ ಸೃಷ್ಟಿಯೆಲ್ಲವೂ ಶಬ್ದಮಯವಾದಂತೆ ಇತ್ತು.

೨೪. ಸಂಭ್ರಾಮ್ಯತೋಪಕರಣಗ್ರಹಣೇ ಸಮಂತಾತ್
ಪ್ರಾಕ್ಪ್ರೇಷಿತಾಖಿಲಪದಾರ್ಥನಿರಾಕುಲೇನ |
ವಿಕ್ಷಿಪ್ಯ ವಸ್ತು ಚಲಿತೇನ ವಿನಾ ಸಹಾಯಂ
ತದ್ಗ್ರಾಹಿಣಾಜನಿ ಜವೇನ ತದಾsಪರೇಣ ||

ಉಪಕರಣಗಳನ್ನು ಹಿಡಿಯುವುದಕ್ಕಾಗಿ ಸುತ್ತಲೂ ಸುತ್ತುತ್ತಿದ್ದ ಸಕಲ ಪದಾರ್ಥಗಳನ್ನು ಮೊದಲೇ ಕಳುಹಿಸಿ ಬಿಟ್ಟಿದ್ದ ಅನೇಕ ವಸ್ತುಗಳನ್ನು ಅಲ್ಲಿಯೇ ಎಸೆದು ಯಾವ ಸಹಾಯವನ್ನು ಅಪೇಕ್ಷಿಸದೇ ನಡೆಯುತ್ತಿದ್ದ ಸೈನ್ಯವು ಆಗ ಹೊಸ ಸೈನ್ಯವೋ ಎಂಬಂತೆ ಆಯಿತು.

೨೫. ಅಗ್ರೇ ದೃಶೋರ್ವಿದಧತೀವ ಜಗತ್ತ್ರಯೈಕ್ಯ
ಮಾಕ್ರಮ್ಯ ಸರ್ವಮವನೀತಲಮಪ್ಯಮಾಂತೀ |
ಆಲಕ್ಷ್ಯತಃ ಕ್ಷಿತಿಧರಾಕ್ರಮಣಾಪದೇಶಾ
ದ್ರಾಶೀಕೃತೇವ ವಸುಧಾರಮಣಸ್ಯ ಸೇನಾ ||

ಕಣ್ಣುಗಳ ಮುಂದೆ ಮೂರು ಲೋಕಗಳನ್ನು ಒಟ್ಟುಗೂಡಿಸಿದಂತೆ ಸಮಸ್ತ ಭೂಮಿಯನ್ನು ಆಕ್ರಮಿಸಿದ್ದರೂ ಅದರಲ್ಲಿ ಹಿಡಿಸಲಾಗದಂತೆ ಇದ್ದ ರಾಜನ ಸೇನೆಯು ಶತ್ರುರಾಜರ ಮೇಲೆ ಆಕ್ರಮಣೋದ್ದೇಶದಿಂದ ರಾಶಿಹಾಕಲ್ಪಟ್ಟಿದ್ದಂತೆ ಕಾಣಿಸುತ್ತಿತ್ತು.

೨೬. ಆಶಾಸ್ವಹಂಪ್ರಥಮಿಕೋಲ್ಲಸಿತೈರನೀಕಿ
ನ್ಯಶ್ವೀಯಪಾಂಸುಭಿರಗಾದನ ವೇಕ್ಷ್ಯಮಾಣಾ |
ಅಶಂಕ್ಯ ಧಾವನಮರಾತಿಮಹೀಪತೀನಾ
ಮಾಬಿಭ್ರತೀವ ಮಹತೀಯಮದೃಶ್ಯವಿದ್ಯಾಮ್ ||

ನಾನು ಮುಂದೆ ತಾನು ಮುಂದೆ ಎಂದು ಓಡುತ್ತಿದ್ದ ಕುದುರೆಗಳ ಖುರಪುಟದಿಂದ ಆಗ ಎಲ್ಲ ದಿಕ್ಕುಗಳಲ್ಲಿ ಎದ್ದ ಧೂಳಿನಿಂದ ಸೈನ್ಯವೇ ಕಾಣಿಸದಂತೆ ಆಯಿತು. ಶತ್ರುರಾಜರು ಓಡಿಹೋಗಬಹುದು ಎಂಬ ಶಂಕೆಯಿಂದ ಆ ದೊಡ್ಡ ಸೈನ್ಯವು ಅದೃಶ್ಯವಾಗುವ ಮಾಯವಾಗುವ ವಿದ್ಯೆಯನ್ನು ಬಳಸುತ್ತಿದೆಯೋ ಎಂಬಂತೆ ತೋರುತ್ತಿತ್ತು.

೨೭. ಆಸ್ವಾದ್ಯ ತೋಯಮಧಿವರ್ತ್ಯ ಜನಾನಜಸ್ರಂ
ಛಾಯಾಲಭೂಮಿಷು ನಿಷದ್ಯ ನಿಷದ್ಯಯಾತಾನ್ |
ಆಶಾಂತದಿಗ್ಗಜಮದಾಂಬುವಿಲಂಬಿನಿರ್ಯ
ದಾರಾದ್ಧ್ವಜಾಟವಿಷು ಸೈನ್ಯರಜೋನ್ವಕಾರ್ಷತ್ ||

ದಾರಿಯಲ್ಲಿ ಅಲ್ಲಲ್ಲಿ ನೀರನ್ನು ಕುಡಿದು, ನೆರಳಿದ್ದ ಜಾಗಗಳಲ್ಲಿ ಆಗಾಗ ವಿಶ್ರಮಿಸಿ ಪಯಣಿಸುವ ಜನರನ್ನು, ದಿಗ್ಗಜಗಳ ಮದಜಲವನ್ನು ಹೀರಿ ಮೇಲೆ ಹಾರುತ್ತಿರುವ ಧ್ವಜಗಳನ್ನು ಅಡವಿಯಲ್ಲಿ ಸ್ವಲ್ಪಕಾಲ ನಿಂತು ಮೇಲೆ ಏರುತಿದ್ದ ಧೂಳು ಅನುಕರಿಸುತ್ತಿತ್ತು.

೨೮. ಎತತ್ಪ್ರಯಾತು ಬಲಮೇತದಪಿ ಪ್ರಯಾಯಾ
ದಿತ್ಯೇವ ಕಶ್ಚಿದಪಥೇ ಸುಚಿರಂ ನ್ಯವಾತ್ಸೀತ್ |
ಆಗಚ್ಛದೇತದಧಿಕಂ ಖಲು ವ್ಯರಂಸೀ
ದಸ್ಯೈವ ಕಿಂತುವಿರಲಂ ಪಥಿ ಗಂತುಮಾಶಾ ||

ಈ ಸೈನ್ಯವು ಮುಂದೆ ಹೋಗಲಿ, ಈ ಸೈನ್ಯವು ಮುಂದೆ ಸಾಗಲಿ ಎಂದು ಒಬ್ಬನು ಮಾರ್ಗದ ಪಕ್ಕದಲ್ಲಿ ಚಿರಕಾಲ ನಿಂತಿದ್ದನು. ಅದಕ್ಕಿಂತಲೂ ಹೆಚ್ಚು ಸೈನ್ಯವು ಬರುತ್ತಿತ್ತಲ್ಲದೇ ಹಾಗೇ ಸೈನ್ಯ ಬರುವದು ನಿಲ್ಲಲೇ ಇಲ್ಲ. ದಾರಿಯಲ್ಲಿ ಹಾಯಾಗಿ ಹೋಗಬೇಕೆಂಬ ಅವನ ಆಸೆ ವಿರಳವಾಯಿತೇನೋ.

೨೯. ಸಮ್ಮರ್ದತಃ ಪಥಿ ಚಮೂಶಿಶಥಿಲಾ ಸಮಂ
ತಾತ್ಸಂವರ್ತಸಿಂಧುಸಮಸನ್ನಹನಾ ವ್ರಜಂತೀ |
ಆವಿಮಿsಥಃ ಕಲಕಲಾರವಮಂತರಾಲೇ
ಪ್ಯಾದ್ಯಂತಯೋಸ್ತಟವತೀ ಮಹತೀರತಾರೀತ್ ||

ದಾರಿಯಲ್ಲಿ ಉಂಟಾಗುತ್ತಿದ್ದ ಘರ್ಷಣೆಯಿಂದ ಸೈನ್ಯವು ಸುತ್ತಲೂ ಚದುರಿಕೊಂಡಿತ್ತು. ಪ್ರಳಯಕಾಲದ ಸಮುದ್ರದಂತೆ ಸನ್ನದ್ಧವಾಗಿ ಆ ಸೇನೆ ಮುನ್ನಡೆಯುತ್ತಿತ್ತು. ಮಧ್ಯದಲ್ಲಿ ಕಲಕಲಧ್ವನಿ ಅದರ ಆರಂಭ ಮತ್ತು ಅಂತ್ಯ ಇಡೀ ಸೇನೆಯನ್ನಾವರಿಸಿತ್ತು. ಸೈನ್ಯವು ದೊಡ್ಡ ದೊಡ್ಡ ನದಿಗಳನ್ನು ದಾಟಿ ಮುನ್ನಡೆಯಿತು.

೩೦. ಅಬುದ್ಧ್ಯ ತಥ್ಯಮಿತಿ ಕೂಟಕೃತಂ ಭಟಾನಾ
ಮಾಯೋಧನಂ ಸುವದನಾssಶ್ಲಿಷದಾತ್ಮನಾಥi |
ತತ್ತ್ವಂ ತದಾತ್ವಜನಿತಂ ಜನೋsಪದಿಸ್ಯ
ತಾಂ ವಾರಯನ್ನಿವ ಭಯಾತ್ತರಸಾssಲಿಲಿಂಗ ||

ಭಟರು ತಮ್ಮ ತಮ್ಮಲ್ಲಿ ವಿನೋದಕ್ಕಾಗಿ ಮಾಡಿದ ಸುಳ್ಳು ಹೋರಾಟವನ್ನು ನಿಜವೆಂದು ಭಾವಿಸಿ ಒಬ್ಬ ಸುಂದರಿಯು ತನ್ನ ಪತಿಯನ್ನು ತಬ್ಬಿಕೊಂಡಳು. ವಸ್ತುಸ್ಥಿತಿಯನ್ನು ವಿವರಿಸಿ ಅವಳ ಭಯವನ್ನು ನಿವಾರಿಸುವವನಂತೆ ಅವನೂ ಅವಳನ್ನು ದೃಢವಾಗಿ ಆಲಂಗಿಸಿದನು.

೩೧. ಆರೋಪಿತಾ ತುರಗಮಾಶು ನಿಯಮ್ಯ ಕಂಠ
ಮಾಬಧ್ನತೀ ಸವಲಯೇನ ಭುಜೇನ ಕಾಚೀತ್ |
ನಾಥೇsಂಗಭಾರಮತನಿಷ್ಟ ನತಭ್ರುವೋsಸ್ಯಾ
ವಾಹಾಧಿರೋಹಣಮಜಾಯತ ವೈಭವಾಯ ||

ಇನ್ನೊಬ್ಬಳನ್ನು ಕುದುರೆಯ ಮೇಲೆ ಹತ್ತಿಸಿದಾಗ ಅವಳು ಬಳೆಗಳಿಂದ ಶೋಭಿಸುತ್ತಿದ್ದ ತನ್ನ ಕೈಗಳಿಂದ ತನ್ನ ಪತಿಯ ಕಂಠವನ್ನು ಬಳಸಿ ತನ್ನ ಭಾರವನ್ನೆಲ್ಲ ಅವನ ಮೇಲೆ ಬಿಟ್ಟಳು. ಆ ಸುಂದರಿಯ ಅಶ್ವಾರೋಹಣ ಕೇವಲ ವೈಭವಕ್ಕೆ ಕಾಣವಾಯಿತು.

೩೨. ದಾಶೇರಕತ್ವರೀತದರ್ಶನತೋ ಮಹೋಕ್ಷ
ಮುತ್ಪ್ಲುತ್ಯ ಯಾಂತಮನುಯಾತುಮುದಗ್ರವೇಗಮ್ |
ಸ್ರಸ್ತಾಂ ವಿಹಾತುಮಪಟುಸ್ಸರಣೌ ಗೋಣೀ
ಮಧ್ಯೇ ತ್ರಿಶಂಕುರಿವ ಕೋಪಿ ವಣಿಗ್ಭಭೂವ ||

ಒಬ್ಬ ವರ್ತಕನ ಎತ್ತು ಒಂಟಿಯನ್ನು ನೋಡಿ ಹೆದರಿ ಎಗರಿ ಎಗರಿ ಓಡಿತು. ಅದರ ಮೇಲಿದ್ದ ಗೋಣಿಚೀಲವು ಜಾರಿಬಿದ್ದಿತು. ವೇಗವಾಗಿ ಓಡಿದ ಆ ಎತ್ತನ್ನು ಹಿಂಬಾಲಿಸಲು ಹಾಗೂ ಹಿಂದೆ ಬಿದ್ದಿದ್ದ ಗೋಣಿಯನ್ನು ಎತ್ತಿಕೊಳ್ಳಲು ಕೈಲಾಗದ ಆ ವರ್ತಕನು ಮಧ್ಯದಲ್ಲಿ ತ್ರಿಶಂಕುವಿನಂತೆ ನಿಂತನು.

೩೩. ಕಶ್ಚಿದ್ಭಯೇನ ಸಹ ಕಾಪಥಧಾವಿತೇನ
ಗಾಢಂ ನಿಪತ್ಯ ಭುವಿ ನಾವ್ಯಧತಾssಹತೋಪಿ |
ಸೋsಯಂ ಗತಾನುಗತಿಕಾಖಿಲಲೋಕಹಾಸ
ಕೋಲಾಹಲೈರಹಹ ಕೋರಕಿತವ್ಯಥೋsಭೂತ್ ||

ಆ ಮಾರ್ಗದಲ್ಲಿ ಭಯದಿಂದ ಓಡಿ ಬಂದವನೊಬ್ಬನು ಢಿಕ್ಕಿ ಹೊಡೆದಾಗ ಢಿಕ್ಕಿ ಹೊಡೆಸಿಕೊಂಡವನು ನೆಲಕ್ಕೆ ಬಿದ್ದರೂ ವ್ಯಥೆ ಪಡಲಿಲ್ಲ. ಆದರೆ ಎಲ್ಲ ಜನರೂ ಗತಾನುಗತಿಕವಾಗಿ ಒಬ್ಬರಿಂದೊಬ್ಬರು ನಕ್ಕು ಕೇಕೆ ಹಾಕಿದಾಗ ಅವನಿಗೆ ವ್ಯಥೆ ಉಂಟಾಯಿತು.

೩೪. ಸಂಬೋಧತೋ ವಿಶಿಥಿಲಂ ಜರತೀ ಸ್ವವರ್ಗ್ಯಾ
ನಾಖ್ಯಾನಪೂರ್ವಕಮನುಕ್ಷಣ ಮಾಹ್ವಯಂತೀ |
ವಿಷಕ್ತಥಾsನುವದತೋ ಜಗತೋ ವಿನೋದಾತ್
ಪ್ರೀತ್ಯೈ ಕಟೂಕ್ತಿ ಮುಖಾರಾssಪ್ಯಭವನ್ಮಹತ್ಯೈ ||

ಒತ್ತಾಗಿ ಜನರು ಸೇರಿದ್ದಾಗ ಒಬ್ಬ ಮುದುಕಿಯು ತನ್ನ ನೆಂಟರನ್ನೆಲ್ಲ ಮತ್ತೆ ಮತ್ತೆ ಹೆಸರನ್ನು ಹಿಡಿದು ಕೂಗುತ್ತಿರುವಾಗ ಆ ಜನರು ಅದಕ್ಕೆ ಪ್ರತಿಯಾಗಿ ಉತ್ತರಕೊಡುತ್ತಿದ್ದರು. ಅದರಿಂದ ಉಂಟಾದ ವಿನೋದದಿಂದ ಅವಳು ಕಟುಭಾಷಿಣಿಯಾಗಿದ್ದರೂ ಕೂಡ ಜನರ ಹೆಚ್ಚಾದ ಪ್ರೀತಿಗೆ ಪಾತ್ರಳಾದಳು.

೩೫. ಅನ್ಯಶ್ಚಮೂನಿಬಿಡಿತಾನವಿಷಹ್ಯ ಮಾರ್ಗಾ
ನ್ಮಾರ್ಗಾಂತರಂ ಸಮನುಗಂತುಮನಾಶ್ಚಜಾಲ |
ತತ್ರಾವಕಾಶಮನವಾಪ್ಯ ತಥಾ ವಿಮರ್ದಾತ್
ಕುಂಠಕ್ರಮೋಜನಿ ಕುತೋ ಗತಿರಸ್ಥಿರಾಣಾಮ್ ||

ಸೈನ್ಯಗಳ ಘರ್ಷಣೆಯಿಂದ ನಿಬಿಡವಾಗಿದ್ದ ಮಾರ್ಗಗಳನ್ನು ಬಿಟ್ಟು ಒಬ್ಬನು ಬೇರೊಂದು ಮಾರ್ಗವನ್ನು ಹಿಡಿಯಲು ಹೋದನು. ಅಲ್ಲಿಯೂ ದಟ್ಟಣೆಯಿಂದ ಅವಕಾಶವನ್ನು ಪಡೆಯಲಾಗದೆ ಇದ್ದ ಅವನ ಗತಿ ಕುಂಠಿತವಾಯಿತು. ಅಸ್ಥಿರ ಮನಸ್ಸಿನವರಿಗೆ ಎಲ್ಲಿ ತಾನೆ ಆಶ್ರಯವಿದೆ?

೩೬. ಸಂರಂಭತಸ್ಸರಯಮುತ್ಪತಿತಾಶ್ಚಮೂನಾಂ
ಸ್ಥಾತುಂ ಜನೈರವಿರತಾಸ್ವಟವೀಷ್ವಶಕ್ತಾಃ |
ಶ್ರಾಂತಾಶ್ಚಿರಾಯ ದಿವಿ ಭ್ರಮಿತುಂ ಶಕುಂತಾ
ವೇತಂಡಕೇತುಷು ವಿಶಶ್ರಮುರುಚ್ಛಿಖೇಷು ||

ಸೈನ್ಯದ ಕೋಲಾಹಲದಿಂದ ಮೇಲೆ ಹಾರಿದ ಹಕ್ಕಿಗಳು ಕಾಡಿಗೆ ಹೋದಾಗ ಅಲ್ಲೂ ಜನರು ತುಂಬಿದುದರಿಂದ ಅವುಗಳಿಗೆ ನಿಲ್ಲಲು ಅಶಕ್ಯವಾಯಿತು. ಬಹುಕಾಲ ಆಕಾಶದಲ್ಲಿ ಹಾರಾಡಿ, ಬಳಲಿಕೆಯಿಂದ ಅಶಕ್ತವಾಗಿ, ಕೊನೆಗೆ ಎತ್ತರದಲ್ಲಿದ್ದ ಆನೆಗಳ ಧ್ವಜಗಳ ಮೇಲೆ ಆ ಹಕ್ಕಿಗಳು ವಿಶ್ರಮಿಸಿದವು.

೩೭. ಕಶ್ಚಿಚ್ಛಶಃ ಕಲಕಲಾಕುಲಮೇವ ಲೋಕೈ
ರಾಬದ್ಧಚಕ್ರಮಭಿತೋಪ್ಯನುಧಾವ್ಯಮಾನಃ |
ಸಂಬಾಧವದ್ಗಜಹಯಾಂಘ್ರಿಚಯಾಂತರಾಲಂ
ಸದ್ಯಃ ಪ್ರದಿಶ್ಯ ಚತುರಕ್ರಮಭ್ಯಧಾವತ್ ||

ಜನರೆಲ್ಲ ಕೋಲಾಹಲ ಮಾಡುತ್ತಾ ಸುತ್ತುಗಟ್ಟಿ ಒಂದು ಮೊಲವನ್ನು ಅಟ್ಟಿಕೊಂಡು ಹೋದಾಗ ಆ ಮೊಲವು ಇಕ್ಕಟ್ಟಿನಲ್ಲಿ ಓಡಾಡುತ್ತಿದ್ದ ಆನೆ ಕುದುರೆಗಳ ಪಾದಗಳ ಮಧ್ಯದ ಪ್ರದೇಶದಲ್ಲಿ ಚಾತುರ್ಯದಿಂದ ಓಡಿಹೋಯಿತು.

೩೮. ಅಚ್ಛಿದ್ಯ ಕಂಕಣನಿಯಂತ್ರಿತಮಂಘ್ರಿಸೂತ್ರಂ
ಯಾತಃ ಕ್ವ ವಾ ಶುಕ ಇತೀಹ ಕಯಾಚಿದೂಚೇ |
ಜಾನೇ ಶಂಕಂ ಜಹಿಹಿ ಖೇದಮಪಾಶಮಾಸ್ತೇ
ಬ್ರಹ್ಮಣ್ಯಸಾವಿತಿ ಬಭಾಣ ಸಲೀಲಮೇಕಃ ||

ಕಂಕಣಕ್ಕೆ ಕಟ್ಟಿದ್ದ ಕಾಲಿನ ದಾರವನ್ನು ಕಿತ್ತುಹಾಕಿ ನನ್ನ ಶುಕ ಗಿಣಿ ಎಲ್ಲಿ ಹೋದನೋ ಎಂದೊಬ್ಬಳು ಹೇಳಿದಳು. ಶುಕ ನನಗೆ ಗೊತ್ತು ಬೇಸರಪಡಬೇಡ ಆ ಶುಕ ಪಾಶವನ್ನು ಕಿತ್ತೊಗೆದು ಬ್ರಹ್ಮನಲ್ಲಿ ನಿಂತಿದ್ದಾನೆ ಎಂದೊಬ್ಬನು ವಿನೋದದಿಂದ ಉತ್ತರಿಸಿದನು.

೩೯. ಯಾನೇನ ಸಂಚರಣಮೂರುಯುಗೇನ ಶುಂಡಾಂ
ಕುಂಭಂ ಮಿಥೋ ಮಿಲಿತಯೋಃ ಕುಚಯೋರ್ಯುಗೇನ |
ಸ್ವೈರಂ ಯತೋ ವಿಜಯಸೇ ಸುತನೋ ಕರೇಣೋ
ರಾರೋಹಣಂ ತದಿದಮೌಪಯಿಕಂ ಭವತ್ಯಾಃ ||

ನಡಿಗೆಯಿಂದ ಗಜಗಾಂಭೀರ್ಯವನ್ನು, ತೊಡೆಗಳಿಂದ ಆನೆಯ ಸೊಂಡಿಲನ್ನು ಕುಚಯುಗ್ಮಗಳಿಂದ ಕುಂಭಸ್ಥಳವನ್ನು ಸ್ವಚ್ಛಂದವಾಗಿ ಗೆದ್ದಿರುವೆ. ಈ ಕಾರಣದಿಂದಾಗಿಯೇ ಗಜಾರೋಹಣ ಮಾಡುವದು ಯುಕ್ತವಾಗಿದೆ.

೪೦. ಕಾಂತೋಪಗೂಢಚರಮಾಂಗತಯಾ ಗಜಸ್ಯ
ಸ್ಕಂಧೇ ಭವಸ್ಯ ಪಿತುರಂಗತನೌ ನಿಷಣ್ಣಃ |
ಎತನ್ನ ಪಶ್ಯತಿ ಮದೋಪರಿ ಪಾತುಕೋಶ್ವಃ
ಪಶ್ಯೆಜ್ಜನಃ ಕಿಮಿವ ಪಂಚಶಿಲೀಮುಖಾಂಧಃ ||

ಆನೆಯ ಮೇಲೇರಿ ಕುಳಿತುಕೊಂಡವನಿಗಾಗಲಿ, ತಂದೆಯ ತೊಡೆಯೇರಿ ಕುಳಿತುಕೊಂಡವನಿಗಾಗಲಿ ಲೀಲಜಾಲವಾಗಿ ಕುದುರೆಯನ್ನು ಓಡಿಸುವವನು ಕಾಣುವನೇ ವಿನಃ ಕುದುರೆ ಅವನನ್ನು ಬೀಳಿಸುವ ಪರಿ ಕಾಣಿಸುವದಿಲ್ಲ. ಕಾಮಪರವಶವಾದವನಿಗೆ ಜನರು ಕಾಣಿಸುವುದಿಲ್ಲವೋ ಹಾಗೆ.

೪೧. ಪಶ್ಚಾದ್ಗತಸ್ಯ ಮಹತಃ ಪಥಿ ನಾsವಕಾಶಂ
ಲೋಕಸ್ಯದತ್ತ ಪುರತೋ ನಿಬಿಡಂ ಪ್ರಯಾತ |
ದತ್ತಾಬಲಿಸ್ಸ ಹರಯೇ ತ್ರಿತಯಂ ಪದಾನಾಂ
ಯತ್ಸೌಖ್ಯಮಾಪ ತದಿದಂ ವಿದಿತನ್ನ ಕಿಂ ವಾ ||

ಹಿಂದಿರುವ ಹೆಚ್ಚು ಜನರಿಗೆ ದಾರಿಯಲ್ಲಿ ಅವಕಾಶವನ್ನು ನೀಡಬೇಡಿರಿ ಮುಂದಕ್ಕೆ ಒಟ್ಟಾಗಿ ಸಂಚರಿಸಿರಿ. ಆ ಬಲಿಚಕ್ರವರ್ತಿಯು ವಿಷ್ಣುವಿಗೆ ಮೂರು ಪದಗಳಷ್ಟು ಜಾಗವನ್ನು ನೀಡಿ ಯಾವ ಸೌಖ್ಯವನ್ನು ಪಡೆದನೆಂಬುದು ನಿಮಗೆ ತಿಳಿದಿದೆಯೋ ಇಲ್ಲವೋ

೪೨. ಆಲಿಪ್ತಮೂಧಸಿ ಗವಾಂಕುಲಮಧ್ವಪಂಕೈಃ
ಕಿಂ ವಾ ಕೃಥಾಃ ಕೃಪಣ ತರ್ಣಕವಕ್ತ್ರಬಂಧಮ್ |
ಶಾಖಾಂ ಪ್ರಗೃಹ್ಯ ಪುರತಸ್ತ್ಯತಜಸಿ ಪ್ರತೂರ್ಣಂ
ಶಾಖಾಮೃಗಸ್ಯ ಇವಾಸಿ ಸಚಾಪಲಸ್ತ್ವಮ್ ||

ಎಲೈ ಜಿಪುಣನೇ ದಾರಿಯ ಕೆಸರಿನಿಂದ ಹಸುಗಳ ಕೆಚ್ಚಲುಗಳೆಲ್ಲ ಮುಚ್ಚಿಹೋಗಿವೆ ಎಂದು ಕರುಗಳ ಬಾಯಿಗೆ ಬುಟ್ಟಿಯನ್ನೇಕೆ ಕಟ್ಟುತ್ತಿರುವೆ ಮುಂದಿರುವ ಕೊಂಬೆಯನ್ನು ಹಿಡಿದುಕೊಂಡು ಬೇಗ ಅದನ್ನು ಬಿಡುವ ಕೋತಿಯಂತೆ ಚಾಂಚಲ್ಯವನ್ನು ಹೊಂದಿರುವ ನಿನಗೂ ಅದಕ್ಕೂ ಸಂಬಂಧವಿದೆಯಲ್ಲವೇ?

೪೩. ಜಂಬಾಲಮಗ್ನಚರಣೇ ಶಕಟೇ ಚಿರಾಯ
ನಿಷ್ಪಂದಮಧ್ವನಿ ನಿರೀಕ್ಷ್ಯರುಷಾ ಮಹೋಕ್ಷಮ್ |
ಆಹಂತಿ ಕೋಪಿ ಕರಯಾ ಪುನರ್ಯುಗಾಂತೇ
ಹಂತಾ ಹತೋ ನಿಜಶಿರಃ ಪ್ರಸೃತಾಗ್ರಕಾಯಃ ||

ಗಾಡಿಯು ಕೆಸರಿನಲ್ಲಿ ಹೂತುಹೋದಾಗ ಬಹುಕಾಲ ದಾರಿಯಲ್ಲಿ ಚಲಿಸದೆ ನಿಂತ ದೊಡ್ಡ ಎತ್ತನ್ನು ನೋಡಿ ರೋಷದಿಂದ ಯಾವನೋ ಚಾಟಿಯಿಂದ ಅದನ್ನು ಹೊಡೆಯುತ್ತಿದ್ದಾನೆ. ಪಾಪ ಆ ಎತ್ತು ತನ್ನ ತಲೆಯ ಕಡೆಗೆ ಶರೀರದ ಮುಂಭಾಗವನ್ನು ನೊಗಕ್ಕೆ ಸೇರಿಸಿ ತಳ್ಳುತ್ತಿದೆ.

೪೪. ಆಲಾಪಭಂಗಿಭಿರತೀವ ತರಂಗಿತಾಭಿ
ರಜ್ಞಾತದೂರಗಮನಾರ್ತಿರನೀತಿನಿಯಮ್ |
ನಾಸಿರಸೀಮ್ನಿ ಚಲಿತಾ ನರಪಾಲಮೌಲೇ
ರಾಶಾಮಪೂರಯತ ಪಾಶಾಧರಾಧಿನಾಥಮ್ ||

ಹೆಚ್ಚಾಗಿ ಉಕ್ಕಿಬರುತ್ತಿದ್ದ ಮಾತಿನ ವಿಧಾನಗಳಿಂದ ಆ ಸೈನ್ಯಕ್ಕೆ ದೂರ ಪ್ರಯಾಣದ ಕಷ್ಟವೇ ತಿಳಿಯಲಿಲ್ಲ. ಚಕ್ರವರ್ತಿಯ ಮುಂಚೂಣಿಯಲ್ಲಿ ಚಲಿಸಿದ ಸೇನೆಯು ವರುಣನ ಅಧಿಪತ್ಯದಲ್ಲಿ ಪಶ್ಚಿಮದಿಕ್ಕನ್ನು ತುಂಬಿಸಿತು.

೪೫. ಕಲ್ಲೋಲಜಾಲಶಿಶಿರೇಣ ಕವೇರಜಾಯಾಃ
ಕೂಲಾಧ್ವನೈವ ಪರಿಲಿಂಗ್ಯಸ ಕೊಂಕದೇಶಾನ್ |
ಶ್ರೀರಂಗಪಟ್ಟಣ ಪತ್ತನ ಮಗಾಜ್ಜಯ ಸಿಂದುಕನ್ಯಾ
ನಾಟ್ಯ ಕ್ರಿಯಾಸಮುಚಿತಂ ತರಸಾsವನೀಂದುಃ ||

ಅಲೆಗಳ ಜಾಲದಿಂದ ತಂಪಾಗಿದ್ದ ಕಾವೇರಿ ದಡದ ಮಾರ್ಗದಿಂದಲೇ ಅಚ್ಯುತರಾಯನು ಕೊಂಕಣದೇಶವನ್ನು ದಾಟಿ ಜಯಲಕ್ಷ್ಮಿಯ ನರ್ತನಕ್ಕೆ ಸಮುಚಿತವಾಗಿದ್ದ ಶ್ರೀರಂಗಪಟ್ಟಣಕ್ಕೆ ವೇಗದಿಂದ ಹೊರಟನು.

೪೬. ತನ್ನಿರ್ಗತಸ್ತದನು ತೌಲವಭೂಮಿಪಾಲೈ
ರಾದಾಯ ದತ್ತಮನಿಯತ್ತತಯಾ ವಿತ್ತಮ್ |
ಆಶಾಂ ಕುಬೇರ ಭರಿತಾಮವಗಾಹಮಾನಃ
ಪ್ರಾಯಾತ್ಸಪಾದಮಭಿಪಾಲಯಿತಾ ಧರಾಯಾಃ ||

ಅಚ್ಯುತರಾಯನು ತೌಳವ ರಾಜರಿಂದ ತುಳುದೇಶದ ದೊರೆಗಳಿಂದ ಕೊಡಲ್ಪಟ್ಟ ಅಪಾರವಾದ ಸಂಪತ್ತನ್ನು ಪಡದುಕೊಂಡು ಕುಬೇರನ ಆವಾಸಸ್ಥಳವಾದ ಉತ್ತರದಿಕ್ಕೆಗೆ ಪ್ರಯಾಣ ಬೆಳಸಿ ಭೂಮಂಡಲದ ನಾಲ್ಕನೆಯ ಒಂದು ಭಾಗದ ಪಾಲಕನಾದನು.

೪೭. ನಿಖಲಫಣಾಧರೇಂದ್ರನಯನಾನ್ಧ್ಯನಿಬಂಧನಕೃ
ತ್ಪ್ರತಿಭೂಯತೂರ್ಯಭಾಂಕ್ಕೃತಿವಿದೀರ್ಯದಹಾರ್ಯತಟಃ |
ಪತಿರವನೇಃ ಕ್ರಮೇಣ ಪರಿಲಂಘ್ಯ ನಿಜಾನ್ವಿಷಯಾನ್
ಹಯಪತಿರಕ್ಷಿತಾಂ ಕ್ಷಿತಿಮಣಾದರಿಶಿಕ್ಷಯಿತಾ ||

ಶತ್ರು ಶಿಕ್ಷಕನಾದ ರಾಜ ಅಚ್ಯುತರಾಯನು ಸಮಸ್ತಸರ್ಪಗಳಿಗೆ ಕುರುಡುತನವನ್ನುಂಟು ಮಾಡುವವನು, ಭಯಂಕರವಾದ ಭೇರಿಗಳ ಭಾಂಕಾರದಿಂದ ಪರ್ವತಗಳ ತಪ್ಪಲುಗಳನ್ನು ಸೀಳುವವನೂ ಆಗಿ ಕ್ರಮವಾಗಿ ತನ್ನ ಸೀಮೆಯನ್ನು ದಾಟಿ ಹಯಪತಿಯ ರಾಜ್ಯಕ್ಕೆ ದಂಡೆತ್ತಿಹೋದನು. ಚಕ್ಷುಶ್ರವಃ ಹಾವುಗಳಿಗೆ ಕಿವಿಗಳೇ ಕಣ್ಣುಗಳಾಗಿರುವದರಿಂದ.