ವಿಜಯನಗರ ಸಾಮ್ರಾಜ್ಯವನ್ನಾಳಿದ ರಾಜಮಹಾರಾಜರು ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ಪ್ರೋತ್ಸಾಹ ನೀಡಿದ ಬಗೆಗೆ ಅನೇಕ ದಾಖಲೆಗಳು ಚರಿತ್ರೆಯಲ್ಲಿ ಲಭ್ಯವಿವೆ. ವಿಜಯನಗರವನ್ನಾಳಿದ ರಾಜರು ಕವಿ, ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದಲ್ಲದೇ ಸ್ವತಃ ಕವಿಗಳು ಆಗಿದ್ದರು ಎಂಬುದು ವಿಶೇಷ. ವಿಜಯನಗರ ಅರಸುಗಳ ಆಶ್ರಯದಲ್ಲಿ ತೆಲುಗು, ಕನ್ನಡ, ಸಂಸ್ಕೃತ ವಾಙ್ಮಯಿಗಳು ಬರೆದ ಕೃತಿಗಳು, ಪ್ರವಾಸಿಗಳು ಬರೆದ ಪ್ರವಾಸಿ ಬರೆಹಗಳು, ಶಾಸನ ಪ್ರತಿಗಳು ಸಾಕಷ್ಟು ಲಭ್ಯವಿವೆ. ಆದರೂ ಆಸ್ಥಾನ ಕವಿಯೊಬ್ಬ ಸಮಕಾಲೀನ ವಸ್ತುಸ್ಥಿತಿಯನ್ನು ಆಧರಿಸಿ ನೇರ ನಿರೂಪಣೆಯ ಮೂಲಕ ಸಮರ್ಥ ವಿವರಗಳನ್ನು ಒದಗಿಸುವುದು ವಿಶೇಷ ಸಂಗತಿ. ಇಂತಹ ಅಪರೂಪ ವಸ್ತುವನ್ನೊಳಗೊಂಡ ‘ಅಚ್ಯುತರಾಯಾಭ್ಯುದಯಂ’ ಸಂಸ್ಕೃತ ಕಾವ್ಯವಾಗಿದೆ.

ಇದು ಅಚ್ಯುತರಾಯನ ಸಮಕಾಲೀನ ವಿಜಯನಗರ ಸಾಮ್ರಾಜ್ಯದ ಸ್ಥಿತಿಗತಿಗಳ ಬಗೆಗಿನ ಐತಿಹಾಸಿಕ ಉಲ್ಲೇಖಗಳನ್ನೊಳಗೊಂಡಿದೆ. ಈ ಕಾವ್ಯದಲ್ಲಿ ೧೨ ಸರ್ಗಗಳಿವೆ. ವಿಜಯನಗರ ಕಾಲದ ಇತಿಹಾಸದ ವಿಚಾರಗಳಿಗೆ ಇದೊಂದು ಸಮರ್ಥ ಆಕರಗ್ರಂಥವೆಂಬುದು ಹಲವಾರು ವಿದ್ವಾಂಸರ ಅಭಿಮತ. ಇತರೇ ಆಕರಗಳಿಂದ ಲಭ್ಯವಾಗುವ ವಿಚಾರಗಳ ಜೊತೆ ಇಲ್ಲಿಯ ವಿಚಾರಗಳನ್ನು ತೌಲನಿಕವಾಗಿ ನೋಡುವ ಹಾಗೂ ಹೊಸ ಹೊಳಹುಗಳನ್ನು ನೀಡುವ ಆಶಯದಿಂದ ಈ ಕೃತಿಯನ್ನು ಅನುವಾದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲೂ ವಿಜಯನಗರ ಕಾಲದ ಸಾಂಸ್ಕೃತಿಕ ರಾಜಕಾರಣವನ್ನು ಗ್ರಹಿಸುವಲ್ಲೂ ಈ ಕೃತಿ ನೆರವಾಗಲಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಅಚ್ಯುತರಾಯಾಭ್ಯುದಯಂ ಅನೇಕ ಆಸಕ್ತಿಗಳ ವಸ್ತು ವಿಷಯವಾಗಬಲ್ಲದು ಎಂಬ ಆಶಯದಿಂದ ಪ್ರಸ್ತುತ ಕಾವ್ಯವನ್ನು ಕನ್ನಡಿಸಲಾಗಿದೆ.

‘ಅಚ್ಯುತರಾಯಾಭ್ಯುದಯಂ’ ಅತಿ ವಿರಳವಾದ, ಅಷ್ಟೇ ಮಹತ್ವಪೂರ್ಣ ಐತಿಹಾಸಿಕ ಕಾವ್ಯ. ದಕ್ಷಿಣ ಭಾರತದ ಇತಿಹಾಸವನ್ನು, ಅದರಲ್ಲೂ ವಿಜಯನಗರದ ಸಮಕಾಲೀನ ಸಂದರ್ಭವನ್ನು ಈ ಕಾವ್ಯ ನಿರೂಪಿಸುವ ರೀತಿ ಅನನ್ಯ. ಇಂತಹ ಕಾವ್ಯಗಳ ಅಧ್ಯಯನದ ಮೂಲಕ ಕಳೆದುಹೋದ ಇತಿಹಾಸದ ವಿವರಗಳನ್ನು ಹೆಕ್ಕಿ ತೆಗೆಯಲು ಸಾಧ್ಯವಿದೆ. ಆಸ್ಥಾನ ಕವಿಯೊಬ್ಬ ತನ್ನ ಕಾಲದ ಘಟನೆಗಳನ್ನು ಯಥಾವತ್ತಾಗಿ ವರ್ಣಿಸುವುದು ತುಂಬ ಕಡಿಮೆ. ಈ ಕಾವ್ಯ ಅದಕ್ಕೆ ಹೊರತಾಗಿದ್ದು, ಲಭ್ಯವಾದ ಅನ್ಯ ಆಕರವಿವರಗಳಿಗೂ ಇಲ್ಲಿನ ಮಾಹಿತಿಗೂ ಹೋಲಿಕೆಯಿದೆ. ಇತಿಹಾಸಕ್ಕೆ ಸಂಬಂಧಿಸಿದ ನಿರ್ಧರಿತ ಹಾಗೂ ಹೆಚ್ಚು ವಿಶ್ವಾಸಾರ್ಹ ವಿವರಗಳು ಇದರಲ್ಲಿ ಲಭ್ಯವಿವೆ. ಕಾವ್ಯದ ತೊಡುಗೆ ತೊಟ್ಟುಕೊಂಡಿದ್ದರೂ ಈ ವಿವರಗಳು ಸತ್ಯದಿಂದ ದೂರವಿಲ್ಲ. ಈ ಹಿನ್ನೆಲೆಯಲ್ಲಿ ಅಚ್ಯುತರಾಯನ ಆಳ್ವಿಕೆಯ ಸಮರ್ಥವಾದ ದಾಖಲೆಯಾಗಿ ಈ ಕಾವ್ಯವನ್ನು ಗ್ರಹಿಸಬಹುದು. ಇತಿಹಾಸದಲ್ಲಿ ಕೃಷ್ಣದೇವರಾಯನ ಬಗೆಗೆ ವಿಪುಲ ಮಾಹಿತಿ ಯಿದೆ, ಆದರೆ ಅಚ್ಯುತರಾಯನ ಬಗೆಗಿನ ವಿವರಗಳು ಅಷ್ಟಾಗಿ ಲಭ್ಯವಿಲ್ಲ. ಈ ಕಾರಣ ದಿಂದಾಗಿ ‘ಅಚ್ಯುತರಾಯಾಭ್ಯುದಯಂ’ ಕಾವ್ಯವು ಇತಿಹಾಸಕ್ಕೆ ಸಮರ್ಥ ಆಕರವೆನಿಸಿದೆ.

ಕವಿ ಪರಿಚಯ

ಅಚ್ಯುತರಾಯಾಭ್ಯುದಯಂ ಕೃತಿಯ ಕರ್ತೃ ರಾಜನಾಥ ಡಿಂಡಿಮ. ಇವನು ೧೬ನೇ ಶತಮಾನದಲ್ಲಿದ್ದನು. ಅಚ್ಯುತರಾಯನ ಆಸ್ಥಾನಕವಿಯೆನಿಸಿದ. ರಾಜನಾಥ ಡಿಂಡಿಮನು ಅಚ್ಯುತರಾಯಾಭ್ಯುದಯಂ ಮತ್ತು ಭಾಗವತ ಚಂಪೂ ಎಂಬ ಕಾವ್ಯಗಳನ್ನು ಬರೆದಿದ್ದಾನೆ. ಮೊದಲನೆಯ ಕೃತಿ ಐತಿಹಾಸಿಕ ಕಾವ್ಯವಾಗಿದೆ. ಇದರಲ್ಲಿ ಕವಿ ತನ್ನ ಪ್ರಭುವಿನ ಜೀವನ ವೃತ್ತಾಂತವನ್ನು ನಿರೂಪಿಸುತ್ತಾನೆ. ಇಲ್ಲಿ ಕವಿಯು ಐತಿಹಾಸಿಕ ಸಂಗತಿಗಳಿಗೆ ಕಾವ್ಯದ ಉಡುಗೆ ಯನ್ನು ತೊಡಿಸಿದರೂ ವಿವರಿಸಿದ ಸಂಗತಿಗಳೆಲ್ಲವೂ ಸತ್ಯಾಂಶದಿಂದ ಕೂಡಿವೆ. ಆದ್ದರಿಂದ ಅವನ ಕಾವ್ಯವು ಅಚ್ಯುತರಾಯನ ಅಧಿಕಾರಾವಧಿಯ ಸಮಕಾಲೀನ ಅಂಶಗಳ ಬಗೆಗೆ ಮಹತ್ವದ ಆಕರವೆನಿಸುತ್ತದೆ ಎಂಬ ಅಂಶವನ್ನು ಡಾ. ವೆಂಕಟರಮಣಯ್ಯನವರು ಸ್ಪಷ್ಟಪಡಿಸುತ್ತಾರೆ.[1]

ರಾಜನಾಥ ಡಿಂಡಿಮನ ಪೂರ್ವಿಕರು ಗಂಗೆಯ ದಡದಿಂದ ಸ್ಥಳಾಂತರ ಮಾಡಿ ದಕ್ಷಿಣ ಭಾರತಕ್ಕೆ ಚೋಳರಾಜನ ಆಹ್ವಾನದ ಮೇರೆಗೆ ೧೨ನೇ ಶತಮಾನದ ಹೊತ್ತಿಗೆ ಬಂದರು. ಕಾವ್ಯದಿಗ್ಗಜರಾದ ಅವರಿಗೆ ಡಿಂಡಿಮ ನಗಾರಿಯನ್ನು ತೆಗೆದುಕೊಂಡು ಹೋಗುವ ವಿಶೇಷ ಗೌರವ ಪ್ರಾಪ್ತವಾಗಿ ಅವರು ಗೌಡ ಡಿಂಡಿಮ ಅಧವಾ ಡಿಂಡಿಮ ಪ್ರಭುವನ್ನೇ ಕುಟುಂಬದ ದೈವವಾಗಿ ಸ್ವೀಕರಿಸಿದರು. ವಿಜಯನಗರದ ಮೊದಲ ಸಂಗಮವಂಶದ ರಾಜರು ಶೈವರಾಗಿದ್ದರು. ರಾಜನಾದ ಎರಡನೆಯ ದೇವರಾಯನು ಕವಿಸಾರ್ವಭೌಮ ಬಿರುದಿನ ಅರುಣಗಿರಿನಾಥ ಡಿಂಡಿಮ ಕವಿಗೆ ನಂದನಾವನವೆಂಬ ಅಗ್ರಹಾರವನ್ನು ದಾನವಾಗಿ ನೀಡಿದ್ದನು. ಆ ಅಗ್ರಹಾರವು ಡಿಂಡಿಮಾಲಿಯಂ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬುದನ್ನು ಎ. ಎನ್. ಕೃಷ್ಣ ಅಯ್ಯಂಗಾರವರು ತಮ್ಮ ಅಚ್ಯುತರಾಯಾಭ್ಯುದಯಂ ಕೃತಿಯ ಸಂಪಾದನಾ ಮುನ್ನುಡಿಯಲ್ಲಿ ಬರೆಯುತ್ತಾರೆ.

ಈ ರೀತಿಯಲ್ಲಿ ಡಿಂಡಿಮವಂಶ ಮತ್ತು ರಾಜವಂಶದ ಸಂಬಂಧ ರಾಜವಂಶಸ್ಥರು ಬದಲಾದ ಮೇಲೆಯೂ ಮುಂದುವರೆಯಿತು. ಅರುಣಗಿರಿನಾಥನ ನಂತರ ರಾಜನಾಥ ಕವಿ ಎರಡನೆಯ ಸಾಳುವ ನರಸಿಂಹರಾಜನ ಅವಧಿಯಲ್ಲಿ (೧೪೫೫-೧೪೯೨) ಆತನ ಆಶ್ರಯದಲ್ಲಿದ್ದು ಸಾಳುವಾಭ್ಯುದಯವನ್ನು ಬರೆದನು. ಮತ್ತೆ ಇವನ ಮಗ ಅರುಣಗಿರಿನಾಥನು ವೀರಭದ್ರ ವಿಜಯಂ ಎಂಬ ಕಾವ್ಯವನ್ನು ಬರೆದನು. ಇವನು ಮೂರನೆಯ ತಲೆಮಾರಿನ ಆಸ್ಥಾನಕವಿ ಯಾಗಿದ್ದನು. ಇವನ ಮಗ ರಾಜನಾಥಕವಿಯು ಪ್ರಸ್ತುತ ಚರ್ಚೆಯ ಅಚ್ಯುತರಾಯಾಭ್ಯುದಯಂ ಕಾವ್ಯವನ್ನು ಬರೆದನು. ಇವನು ಅಚ್ಯುತದೇವರಾಯನ (೧೫೨೯-೧೫೪೨) ಆಸ್ಥಾನಕವಿ ಯಾಗಿದ್ದನು.

ಕೃತಿಪರಿಚಯ

ಅಚ್ಯುತರಾಯಾಭ್ಯುದಯಂ ಮಹಾಕಾವ್ಯವು ಕಾವ್ಯಾದರ್ಶದ ಲಕ್ಷಣಗಳ ನೆರಳಿನಲ್ಲಿ ರಚಿತವಾದ ಕೃತಿ. ಒಬ್ಬ ರಾಜನನ್ನು ಅದು ಆಳುವ ರಾಜನನ್ನು ಮಹಾನಾಯಕನಂತೆ ಚಿತ್ರಿಸಿ ಕಾವ್ಯರಚಿಸುವದು ಆ ಕಾಲದ ರೀತಿಗೆ ವಿರುದ್ಧವಾಗಿರಲಿಲ್ಲವಾದರೂ ಆಸ್ಥಾನಕವಿಗೆ ತನ್ನ ಅಭಿಪ್ರಾಯವನ್ನು ದಾಖಲಿಸಲು ಅತ್ಯಂತ ಕಡಿಮೆ ಅವಕಾಶವಿರುತ್ತಿತ್ತು. ಕಾವ್ಯದಲ್ಲಿನ ವಿವರಗಳು ಜೀವಂತ ರಾಜನ ಕುರಿತಾಗಿರುವದರಿಂದ ಸ್ತುತಿಸುವದು ತೀರ ಔಪಚಾರಿಕ ಮತ್ತು ಅಪರಿಹಾರ್ಯವಾಗಿರುತ್ತದೆ. ಹಾಗಾಗಿ ಇಲ್ಲಿನ ವಿವರಗಳ ಸತ್ಯಾಸತ್ಯತೆಯು ಬೇರೆಯದೇ ಆದ ಆಕರದ ವಿವರಗಳನ್ನು ತೂಗಿನೋಡಿದಾಗ ಅರ್ಥವಾಗಬಹುದು. ಶಾಸನಗಳು, ಕಾಗದಪತ್ರಗಳ ಸಂಪರ್ಕ ಆಸ್ಥಾನವಿದ್ವಾಂಸರಿಗೆ ನಿಕಟವಾಗಿರುವದು ಸಾಮಾನ್ಯವಾದರೂ ಆಸ್ಥಾನದ ವಾತಾವರಣವೂ ನಿಷ್ಪಕ್ಷಪಾತ ನಿಲುವುಗಳನ್ನು ಪ್ರಕಟಿಸಲು ಅನುಕೂಲಕರವಾಗಿರುವುದಿಲ್ಲ. ಇಷ್ಟೆಲ್ಲ ಇರುವಲ್ಲಿಯೂ ಕವಿಯ ಸಾಮರ್ಥ್ಯ, ಕಲ್ಪನಾಶಕ್ತಿ, ಯುಕ್ತಾಯುಕ್ತಗಳ ಔಚಿತ್ಯ ಇವೆಲ್ಲ ರಾಜನಾಥನ ಹಿರಿಮೆಯನ್ನು ಸಾರುತ್ತವೆ. ಕಾವ್ಯದಲ್ಲಿನ ಪ್ರತಿಯೊಂದು ಸಂಗತಿಗಳು ಬೇರೆ ಕಾವ್ಯ ಹಾಗೂ ಐತಿಹಾಸಿಕ ದಾಖಲೆಗಳಿಗೆ ಸರಿಯಾಗಿವೆ. ಇಲ್ಲಿನ ವಿವರಗಳು ಬೇರೆ ಪ್ರವಾಸಿಗರು ದಾಖಲಿಸುವ ಸಂಗತಿಗಳಿಗಿಂತ ನಿಖರವಾಗಿವೆ.

ಕೃತಿ ರಚನಾ ಕಾಲ

ಈ ಕಾವ್ಯದ ಆಂತರಿಕ ವಿವರಗಳು ಅದರ ರಚನಾಕಾಲದ ಬಗ್ಗೆ ಖಚಿತ ಆಧಾರಗಳನ್ನು ಕೊಡುತ್ತವೆ. ಸಹಜವಾಗಿಯೇ ಅದು ಅಚ್ಯುತರಾಯನ ಆಳ್ವಿಕೆಯ (೧೫೨೯-೧೫೪)ರ ವರೆಗಿನ ಅವಧಿಯದಾಗಿರಬಹುದು. ತಿರುವದಿಯ ದಾಳಿ ಮತ್ತು ತುಳುರಾಜ್ಯದ ಪಾಳೆಯಗಾರರ ಶರಣಾಗತಿ, ಬಿಜಾಪುರ ಸುಲ್ತಾನನೊಂದಿಗಿನ ಸಮರ ಇತ್ಯಾದಿ ಘಟನೆಗಳ ನಂತರ ಕಾವ್ಯರಚನೆಗೆಯಾಗಿರಬೇಕು. ಆದ್ದರಿಂದ ೧೫೩೬ ರಿಂದ ೧೫೪೨ರ ಅವಧಿಯಲ್ಲಿ ಕಾವ್ಯ ಬರೆಯಲ್ಪಟ್ಟಿರಬೇಕು.

ಸಾಹಿತ್ಯಿಕವಾಗಿ ಕೃತಿಯ ಮಹತ್ವ

ಅಚ್ಯುತರಾಯಾಭ್ಯುದಯಂ ಐತಿಹಾಸಿಕ ಕಾವ್ಯ. ಸಾಹಿತ್ಯಿಕವಾಗಿ ಕೂಡ ತನ್ನದೇ ಸುಲಭ ಸುಲಲಿತ ಶೈಲಿಯೊಡನೆ ಮೂಡಿಬಂದಿರುವ ಸಂಸ್ಕೃತಕಾವ್ಯ. ಕಾವ್ಯಾದರ್ಶದಲ್ಲಿ ಉಕ್ತವಾಗಿರುವ “ಸರ್ಗ ಬಂಧೋ ಮಹಾಕಾವ್ಯಮುಚ್ಯತೇ ತಸ್ಯ ಲಕ್ಷಣಮ್ | ಆಶೀರ್ನಮಸ್ಕ್ರಿಯಾ ವಸ್ತುನಿರ್ದೇಶೋ ವಾಪಿ ತನ್ಮುಖಮ್|| ಇತಿಹಾಸ ಕಥೋದ್ಭೊತಮಿತರದ್ವಾ ಸದಾಶ್ರಯಮ್ | ಚತುರ್ವರ್ಗ ಫಲೋಪೇತಂ ಚತುರೋದ್ಘಾತ ನಾಯಕಮ್ | ನಗರಾರ್ಣವ ಶೈಲರ್ತು ಚಂದ್ರಾರ್ಕೋದಯ ವರ್ಣನೈಃ | ಉದ್ಯಾನ ಸಲಿಲ ಕ್ರೀಡಾ ಮಧುಪಾನ ರಥೋತ್ಸವೈಃ | ವಿಪ್ರಲಂಭೈರ್ವಿವಾಹೈಶ್ವ ಕುಮಾರೋದಯ ವರ್ಣನೈಃ | ಮಂತ್ರದೂತ ಪ್ರಯಾಣಾಜಿನಾಯಕಾ ಭ್ಯುದಯೈರಪಿ | ಅಲಂಕೃತಮಂ ಸಂಕ್ಷಿಪ್ತಂ ರಸಭಾವನಿರಂತರಮ್ | ಸರ್ಗೈರನತಿ ವಿಸ್ತೀರ್ಣೈ ಶ್ರಾವ್ಯವೃತ್ತೈಃ ಸುಸಂಧಿಭಿಃ | ಸರ್ವತ್ರ ಭಿನ್ನವೃತ್ತಾಂತೈರುಪೇತಂ ಲೋಕರಂಜಕಮ್ | ಕಾವ್ಯಂ ಕಲ್ಪಾಂತರಸ್ಥಾಯಿ ಜಾಯತೇ ಸದಲಂಕೃತಿ ||” ಎನ್ನುವ ಲಕ್ಷಣಗಳಿಂದೊಡಗೂಡಿ ೧೨ ಸರ್ಗಗಳ ಬಂಧವಾಗಿ ರಚಿತವಾಗಿದೆ ಈ ಮಹಾಕಾವ್ಯ. ೧೨ ಸರ್ಗಗಳಲ್ಲಿ ಮಹಾಕಾವ್ಯದ ಸದಾಶಯ ಗಳೆಲ್ಲ ವಸ್ತು ವಿಷಯವಾಗಿ ನಿರೂಪಿತವಾಗಿವೆ. ಅಲ್ಲದೆ ಬಹಳಷ್ಟು ಶ್ಲೋಕಗಳು ಒಂದು ಮತ್ತು ಒಂದಕ್ಕಿಂತ ಹೆಚ್ಚು ಅಲಂಕಾರಗಳಲ್ಲಿ ಮೂಡಿಬಂದಿವೆ. ಮೊದಲಿನ ಶ್ಲೋಕವನ್ನೇ ವಿರೋಧಾಭಾಸ ಅಲಂಕಾರದಿಂದ ಶ್ಲೇಷಯುಕ್ತವಾಗಿ ರಚಿಸಿದ್ದಾನೆ.

ನಾಲೀಕಾಕ್ಷಮಲೀಕಾಕ್ಷಂ ನಾಗೇಶಯಮಗೇಶಯಮ್ |
ವಿಪುಂಗವಧ್ವಜಂ ಧಾಮ ಪುಂಗವಧ್ವಜಮಾಶ್ರಯೇ ||

ಈ ಪ್ರಾರ್ಧನಾ ಪದ್ಯದಲ್ಲಿ ವಿಷ್ಣುಶಿವ ಇವರುಗಳನ್ನು ಶ್ಲೇಷೆಯಿಂದ ವರ್ಣಿಸಲಾಗಿದೆ. ವಿಷ್ಣುಪರ ಕಮಲದ ಕಣ್ಣಿರುವ, ಶೇಷಶಾಯಿ, ಗರುಜಧ್ವಜನಾದ ತೇಜೋಮಯನಾದ ವಿಷ್ಣುವನ್ನು ಭಜಿಸಿರಿ. ಶಿವಪರ: ಮುಕ್ಕಣ್ಣನಾದ, ಪರ್ವತಶಾಯಿ. ವೃಷಭಧ್ವಜನಾಗಿ ತೇಜೋ ಮಯನಾದ ಶಿವನನ್ನು ಭಜಿಸಿರಿ.

ಇನ್ನು ಅಚ್ಯುತರಾಯನ ಆಸ್ಥಾನವನ್ನು ಸಮಾಸೋಕ್ತಿ ಅಲಂಕಾರದಿಂದ ವರ್ಣಿಸಿದ್ದಾನೆ.

ಸುವರ್ಣರೂಪೈಃ ಶುಭನಾಯಕಾಂಕೈಃ
ರೌಜ್ವಲ್ಯವದ್ಭಿರ್ಧ್ವನಿಮಶ್ನುವಾನೈಃ |
ಪರಿಷ್ಕೃತಾದಿಕ್ಷಿತಿಪಾನಪ್ರಬಂಧೈಃ
ಪ್ರಾಚೇತಸಾದೀನ್ಪ್ರಣುಮಃ ವೀಂದ್ರಾನ್ ||

ಅಲ್ಲದೇ ಯಾವುದೇ ಅಲಂಕಾರವಿಲ್ಲದೇ ಹೋದರೂ ವಿಶಿಷ್ಟ ಬಂಧದಲ್ಲಿ ಕಾವ್ಯಸೃಜನೆಯ ಹೊಸಬಗೆಯನ್ನು ಕಾಣಬಹುದಾಗಿದೆ. ಪಾಂಡಿತ್ಯಪೂರ್ಣ, ಶಬ್ದಕೋಶ ವಿಟ್ಟುಕೊಂಡ ಕಾವ್ಯ ರಚನೆಯಿದಲ್ಲ. ಸರಳ ಸುಂದರ ಶೈಲಿಯಲ್ಲಿ ಅಲ್ಪ ಪ್ರಯಾಸದಿಂದ ಮಹತ್ತರ ಅರ್ಥ ಹೊರಡಿ ಸುವ ಜಾಣ್ಮೆ ತೋರಿಬರುತ್ತದೆ. ಉದಾಹರಣೆಗೆ,

ವಿಯುಕ್ತವರ್ಗೇ ವಿಹಿತಪ್ರತಾಪಃ
ಸಂಯುಕ್ತಲೋಕೇ ಸರಸಪ್ರಭಾವಃ |
ಉದಂಚಿತೋ ರಾಜಪದಾನುಕೂಲಂ
ಯೋ ಮಂಡಲಂ ಧಾರಯತೇsನುರಕ್ತಮ್ ||

ಶತ್ರುಗಣದಲ್ಲಿ ಪ್ರಕೋಷ್ಠವಾದ ತಾಪವನ್ನು ಹೊಂದಿದ್ದನು. ಪರಸ್ಪರ ಸೌಹಾರ್ದ ಯುತರಾದ ಜನರಲ್ಲಿ ಮಹಿಮೆಯಿಂದ ಕೂಡಿದವನಾಗಿದ್ದನು. ಕೋಶಾಗಾರದಲ್ಲಿ ತೇಜಸ್ವಿ ಯಾಗಿದ್ದನು. ಉದಯೋನ್ಮುಖನು ಸುಪೂಜಿತನು, ರಾಜಪದವಿಗೆ ಭೂಷಣ ಪ್ರಾಯನಾಗಿ ರಾಷ್ಟ್ರವನ್ನು ನಡೆಸಿದ್ದನು. ಇಲ್ಲಿ ರಾಜ ಶಬ್ದವನ್ನು ಚಂದ್ರ, ನೃಪ ಎಂಬೆರಡು ಅರ್ಥಗಳಲ್ಲಿ ಉಭಯವಾಚಕವಾಗಿ ಬಳಸಿದ್ದಾರೆ. ಮಂಡಲಂ ಎನ್ನುವುದು ಚಂದಮಂಡಲದ ಬಿಂಬ ಮತ್ತು ರಾಷ್ಟ್ರವನ್ನು ಸೂಚಿಸುತ್ತದೆ.

ಈ ರೀತಿಯಾಗಿ ಕೇವಲ ವರ್ಣನೆಗಳ ಮೂಲಕ ಐತಿಹಾಸಿಕ ಅಂಶಗಳನ್ನು ಕಡೆಗಣಿಸದೇ, ವರ್ಣನೆಗಳು ಕಾವ್ಯಕ್ಕೆ ಇಂಬುಕೊಡುವ ಹಾಗೆ ವರ್ಣಿಸುತ್ತ ನೇರ ಐತಿಹಾಸಿಕ ವಿಚಾರಕ್ಕೆ ಪ್ರವೇಶಿಸುತ್ತಾನೆ.

ನಾಲೀಕಿನೀನಾಯಕವದ್ಗ್ರಹೇಷು
ನೀಹಾರ ಭೂಮಿಧರವನ್ನಗೇಷು |
ವಲಾಸುಹೃದ್ವಾರಣವದ್ಗಜೇಷು
ತೇಷು ಪ್ರತೀತೋsಜನಿ ತಿಮ್ಮಭೂಪಃ ||

ಇಲ್ಲಿ ವರ್ಣನೆಗಳ ಜಾಲದಲ್ಲಿ ಇತಿಹಾಸವನ್ನು ಹೆಣೆಯುವ ಕ್ರಮ ಅನನ್ಯವಾಗಿದೆ. ಚಂದ್ರಾದಿಗ್ರಹಗಳಲ್ಲಿ ಶ್ರೇಷ್ಠನಾದ, ಕಮಲಗಳ ನಾಯಕನಾದ, ಸೂರ್ಯನಂತೆ, ಪರ್ವತಗಳಲ್ಲಿ ಹಿಮಾಲಯ ಪರ್ವತದಂತೆ, ಆನೆಗಳಲ್ಲಿ ವಲನೆಂಬ ರಾಕ್ಷಸ ವೈರಿಯಾದ, ಇಂದ್ರನ ಆನೆಯಾದ ಐರಾವತದಂತೆ ಶ್ರೇಷ್ಠವಾದ ರಾಜರ ವಂಶದಲ್ಲಿ ತಿಮ್ಮನೆಂಬ ರಾಜನು ಪ್ರಖ್ಯಾತನಾಗಿದ್ದನು. ಇಂಧ ಅನೇಕ ಉಪಮೆಗಳ ಮೂಲಕ ತಿಮ್ಮರಾಜನನ್ನು ಉಪಮೇಯವಾಗಿಸುವ ಬಗೆ ಇಲ್ಲಿ ಮನನೀಯ ಅಂಶವಾಗಿದೆ. ಇನ್ನೊಂದು ಉದಾಹರಣೆಯನ್ನು ಇಲ್ಲಿ ಪೂರಕವಾಗಿ ನೋಡ ಬಹುದು.

ಪ್ರತೀಕ್ಷಮಾಪಾವಲಿ ಪರ್ಯಟರಿತ್ಯಾ
ವೀರೆಶ್ರೀಯೋ ವಿಶ್ರಮಹೇತುಬಾಹುಃ |
ಶ್ರೀ ತಿಮ್ಮಭೂಪಾಂಚ್ಚಿತ ಭೂಸ್ತೆತೋsಭೂ
ದ್ಯಶೋಧನಾದೀಶ್ವರ ಭೂಮಿಪಾಲಃ ||

ವೈರಿ ರಾಜಸಮೂಹವನ್ನು ಪರ್ಯಟನಗೈದು ನಾಶಪಡಿಸಿದ, ವೀರಶ್ರೀಯು ತೋಳಿನ ಆಸರೆಯನ್ನು ಬಯಸುವ ಭೂಪಾಲನಾದ ಈಶ್ವರನೆಂಬ ರಾಜನು ಯಶೋಧನನಾಗಿ ತಿಮ್ಮರಾಜನ ನಂತರ ಇದ್ದನು.

ಪೌರಾಣಿಕ ವಿವರಗಳನ್ನು ಪ್ರಸ್ತುತ ವಿಷಯದೊಡನೆ ಹೋಲಿಸುವ ಕ್ರಮ ಉತ್ಪ್ರೇಕ್ಷಾ ಅಲಂಕಾರವಾದರೂ ಅತಿಶಯೋಕ್ತಿ ಎನಿಸುವುದಿಲ್ಲ. ಅಂದರೆ ಆ ವರ್ಣನೆ ಅಷ್ಟು ಅನ್ವಯವಾಗಿದೆ. ಉದಾಹರಣೆಗೆ,

ಪುರೂರವಾಃ ಪುಣ್ಯಫಲಾದತೋಭೂ
ದಭೂತತಪೂರ್ವಾಭ್ಯುದಯಸ್ಯ ಯಸ್ಯ |
ಪ್ರಶಸ್ತಿ ಮುದ್ರಾಲಿಖಿನಾದ್ವಿಶಾಲಂ
ಪ್ರತ್ಯಥಿವಕ್ಷಃ ಫಲಕಂ ಕಿಲಾಸೀತ್ ||

ಬುಧನ ಪುಣ್ಯಫಲದಿಂದ ಪುರೂರವನೆಂಬ ರಾಜನು ಜನಿಸಿದನು. ಈತನು ಅಭೂತ ಪೂರ್ವವಾದ ಅಭ್ಯುದಯದಿಂದ ವಿಶಾಲವಾದ ಶತ್ರುಗಳ ಎದೆಯನ್ನೇ ತನ್ನ ಪ್ರಶಸ್ತಿ ಚಿಹ್ನೆಯ ಬರವಣಿಗೆಯ ಫಲಕವಾಗಿಸಿದ್ದಾನೆ.

ಪ್ರಾಯೋsರ್ಣವೇ ಸೇತುಕೃತೋsವತಾರಃ
ಪ್ರಾಗ್ಜ್ನ್ಮಸಂಸ್ಕಾರ ವಶಾದಿವೈಷಃ |
ಸೇತುಂ ವಿಧಾಯಾಂಭಸಿ ಸಹ್ಯಜಾಯಾಃ
ಶ್ರೀರಂಗಪೂರ್ವಂ ನಗರೀಂ ಜಹಾರ ||

ಸಮುದ್ರದಲ್ಲಿ ಸೇತುವನ್ನು ನಿರ್ಮಿಸಿದ ಶ್ರೀರಾಮಚಂದ್ರನ ಅವತಾರ ಸ್ಮರಣೆಯಿಂದಲೇ ನೃಸಿಂಹರಾಜನು ಪೂರ್ವಜನ್ಮ ಸಂಸ್ಕಾರ ವಶದಿಂದ ಕಾವೇರಿ ನದಿಗೆ ಸೇತುವೆಯನ್ನು ನಿರ್ಮಿ ಸಿದನು. ತನ್ಮೂಲಕ ಶ್ರೀರಂಗಂನ ಪೂರ್ವದ ನಗರವನ್ನು ವಶಪಡಿಸಿಕೊಂಡನು.

ಕಂಸಂ ಯಥಾ ಕೈಟಭಜಿದ್ಬಲೇನ
ಸಮನ್ವಿತಃ ಸೈನಿಕ ಮಲ್ಲಹಂತಾ |
ಮದಪ್ರವೃತ್ತಂ ಮರವಂ ಮಥಿತ್ವಾ
ಮಹಿಮಹೇಂದ್ರೋ ಮಧುರಾಮಹಾರ್ಷಿತ್ ||

ನೃಸಿಂಹ ಭೂಪಾಲನು ನಂತರ ಸೈನ್ಯ ಸಮೇತನಾಗಿ ಅತಿರಥ ಮಹಾರಥರನ್ನೆಲ್ಲಾ ಕೊಂದು ಮದೋನ್ಮತ್ತನಾದ ಮರವ ಜಾತಿಯ ಪ್ರಮುಖ ರಾಜನನ್ನು ಕೃಷ್ಣನು ಕಂಸನನ್ನು ಕೊಂದ ಹಾಗೇ ಕೊಂದು ಪಾಂಡ್ಯರ ರಾಜಧಾನಿಯಾದ ದಕ್ಷಿಣದೇಶದ ಮಧುರಾನಗರವನ್ನು ವಶಪಡಿಸಿ ಕೊಂಡನು.

ಸರ್ಗಕಾವ್ಯ ಲಕ್ಷಣವೆನಿಸಿದ ಕುಮಾರೋದಯ ವರ್ಣನೆಯು ೨ನೇ ಸರ್ಗದಲ್ಲಿ ವಿಫುಲವಾಗಿ ಬಂದಿದೆ.

ಉದಭೂಜ್ಜಗದದ್ಭುತೋದಯನಾ
ಮುಚಿತೋ ಗರ್ಭಮಾಪೇಯುಷೋsರ್ಭಕಸ್ಯ |
ಮಹಿತೋ ಭುಜಧಾಮವಿಭ್ರಮಾಣಾಂ
ಮಹಿಲಾರತ್ನ ಮನೋರಥ ಪ್ರಚಾರಃ ||

ಜಗತ್ತಿನ ಅದ್ಭುತಗಳ ಉತ್ಪತ್ತಿಗೆ ಅನುಗುಣವಾಗಿ ಓಬಮಾಂಬೆಗೆ ಗರ್ಭವು ಪ್ರಾಪ್ತ ವಾಗಿತ್ತು. ಅಂತಹ ಮಗುವಿನ ಹುಟ್ಟುವಿಕೆಯೇ ಹಲವು ಅದ್ಭುತಗಳಿಗೆ ಕಾರಣವಾಗಿತ್ತು. ಭುಜಬಲ ವಿಲಾಸವನ್ನು ವ್ಯಕ್ತಗೊಳಿಸಲು ಅರ್ಧಾತ್ ಅವನ ಶೌರ್ಯಸಾಹಸಗಳನ್ನು ಪೂರ್ವಾನ್ವ ಯವಾಗಿಯೇ ತಿಳಿಸುವ ಕಾರಣದಿಂದಾಗಿ ಶ್ರೇಷ್ಠಳಾದ ಓಬಮಾಂಬೆಯ ಬಯಕೆಗಳ ರೂಪದಲ್ಲಿ ಹೊರಹೊಮ್ಮಿತು.

ಅವನೀರಮಣೈರ್ವಿತೀರ್ಣಮಾದೈ
ರಗಮತ್ಪ್ರಾಕ್ತನತಾಂ ಯಶೋದುಕೂಲಮ್ |
ತದಿದಂ ನವಮೇಷ ದಾಸ್ಯತೀತಿ
ಪ್ರಮದೇನೇವ ದಿಶೋ ದಶ ಪ್ರಸೇದುಃ ||

ಪೂರ್ವಜರುಗಳಿಂದ ಅಂದರೆ ಪೂರ್ವದ ರಾಜರುಗಳಿಂದ ಕೊಡಲ್ಪಟ್ಟ ಕೀರ್ತಿವಸ್ತ್ರ ಹಳೆಯದಾಗಿರುವುದರಿಂದ ರಾಜಕುಮಾರನು ನೂತನವಾದ ಯಶೋವಸ್ತ್ರವನ್ನು ಕೊಡುವನೆಂದು ತಿಳಿದು ಎಲ್ಲ ದಿಕ್ಕುಗಳು ಸಂತೋಷಭರಿತವಾದವು.

ಇದಲ್ಲದೆ ರಾಜತಂತ್ರದ ವಿವರಣೆಯನ್ನು ಕವಿಯು ಲೀಲಾಜಾಲವಾಗಿ ಉಪಮೆಯ ಮೂಲಕ ನಿರೂಪಿಸುತ್ತಾನೆ. ಲೋಕರೂಢಿಗಳನ್ನು, ಸಮಾಜದ ಅನೇಕ ರೀತಿನೀತಿಗಳನ್ನು ಇಲ್ಲಿ ವಿವರಿಸುತ್ತಾನೆ. ರಾಜತಂತ್ರಗಳಲ್ಲಿರುವ ಸಾಮ ಭೇದ ದಂಡೋಪಾಯಗಳನ್ನು ನಯವಾಗಿ ಆದರೆ ಮನಮುಟ್ಟುವ ರೀತಿಯಲ್ಲಿ ಹೇಳುತ್ತಾನೆ. ಉದಾಹರಣೆಗೆ,

ಕ್ವಾಪಿ ಸಾಮ ಭುಜಧಾಮ ಕುತ್ರಚಿ
ತ್ಕಲ್ಪತೇ ಕ್ಷಿತಿಪ ಕಾರ್ಯಸಂಪದೇ |
ಕೋಪಿ ಪುಷ್ಯತಿ ಗಿರೈವ ಸುಭ್ರುವಾಂ
ಪಾದಪಶ್ಚರಣತಾಡನಾತ್ಪರಃ ||

ರಾಜನ್ ಕಾರ್ಯಸಂಪತ್ತಿಯಲ್ಲಿ ಯಾವುದೇ ಸಾಮೋಪಾಯ ಉಪಯುಕ್ತವಾಗಿರುತ್ತದೆ. ಕೆಲವೊಮ್ಮೆ ಬಹುಪರಾಕ್ರಮವು ಉಪಯುಕ್ತವಾಗಿರುತ್ತದೆ. ಮಂದಾರವೃಕ್ಷ ಸ್ತ್ರೀಯರ ಮಾತಿನಿಂದ ವಿಕಸಿಸುತ್ತದೆ. ಆದರೆ ಅಶೋಕ ವೃಕ್ಷ ಪಾದತಾಡನದಿಂದ ವಿಕಸಿಸುತ್ತದೆ ಎಂಬು ದಾಗಿ ಮಂತ್ರಿಯಿಂದ ಉಪದೇಶ ವಾಕ್ಯವನ್ನು ಕವಿಯು ಹೇಳಿಸುತ್ತಲೇ ರಾಜಕಾರಣದ ಸೂಕ್ಷ್ಮ ಒಳನೋಟಗಳನ್ನು ಕೊಡುತ್ತಾನೆ.

ಅಚ್ಯುತರಾಯಾಭ್ಯುದಯಂ ಕಾವ್ಯದ ಓದುಗರು ಕವಿಯ ಅತ್ಯುನ್ನತ ಮಟ್ಟದ ಪ್ರತಿಭೆ ಮತ್ತು ಕಾವ್ಯಲೋಕದಲ್ಲಿನ ಅವನ ಸಹಜ ಸಂಚಾರ ಮನಗಾಣದೇ ಇರಲಾರರು. ಒಂದು ಮಹಾಕಾವ್ಯವಾಗಿ ಅದು ನಗರ, ಸಾಗರ, ಶಿಖರ, ಋತುಗಳ ವರ್ಣನೆಗಳನ್ನು ಸಹಜವಾಗಿಯೇ ಒಳಗೊಂಡಿದೆ. ವಿದ್ಯಾನಗರವು (ವಿಜಯನಗರವು) ನರಸನಾಯಕನ ರಾಜಧಾನಿಯಾಗಿರುವುದನ್ನು ಮತ್ತು ಅಚ್ಯುತರಾಯನ ಪಟ್ಟಾಭಿಷೇಕದ ವರ್ಣನೆಗಳು ಆ ಕಾಲದ ವೈಭವದ ದಿನಗಳನ್ನು ಸಾರಿ ಹೇಳುತ್ತವೆ. ನಾಲ್ಕನೇ ಸರ್ಗದಲ್ಲಿನ ಮಳೆಗಾಲದ ವರ್ಣನೆಯು ಅವಸ್ಥಾಂತರಗಳು, ನದಿಯಲ್ಲಿನ ನಾದಮಯತೆಯನ್ನು, ಉಕ್ಕುವ ಹಾಗೂ ಕುಗ್ಗುವ ನೀರಿನ ಮಟ್ಟವನ್ನು ಮತ್ತು ಸೆಳವನ್ನು ನೆನಪಿಗೆ ತರುತ್ತದೆ. ಏಳನೆಯ ಸರ್ಗದಲ್ಲಿನ ಆರಂಭದಲ್ಲಿನ ಸಮುದ್ರದ ವರ್ಣನೆ ಅಷ್ಟೇ ಗಮನಸೆಳೆಯುತ್ತದೆ. ೧. ಒಂಭತ್ತನೆಯ ಸರ್ಗದಲ್ಲಿನ ಕಲ್ಪನಾವಿಲಾಸವಿರಲಿ  (erotic sentiment) ಅಥವಾ ೨. ಸೈನ್ಯದ ತುಕಡಿಯ ಯುದ್ಧದಲ್ಲಿನ ಕಠಿಣ ಸಂಚಲನವಿರಲಿ ಕವಿ ಈ ಎರಡು ಪ್ರಸಂಗದಲ್ಲಿ ಸಹಜವಾಗಿ ಈಜುತ್ತಾನೆ. ಕಲ್ಪನಾ ವಿಲಾಸದ ಶೃಂಗ ಅತ್ಯುನ್ನತ ಮಟ್ಟ ಏರಿದ್ದು ೧೨ನೇ ಸರ್ಗದಲ್ಲಿನ ವರ್ಣನೆಯಲ್ಲಿ. ಅಲ್ಲದೇ ಕೆಲವು ಆಸಕ್ತಿಕರ ವಿಷಯಗಳನ್ನು ಸಮಕಾಲೀನ ಸಂದರ್ಭವಾಗಿ ವಿವರಿಸಿದ್ದಾನೆ. ಅಚ್ಯುತರಾಯನ ರಾಜ್ಯಾಭಿಷೇಕಕ್ಕಾಗಿ ವಿದ್ಯಾನಗರದ ವಿಶೇಷ ವೈಭವವನ್ನು ಕುರಿತು ಕೆಲವು ಸ್ವಾರಸ್ಯಕರ ಸಂಪ್ರದಾಯ ಮತ್ತು ಸನ್ನಿವೇಶಗಳನ್ನು ಕವಿ ವರ್ಣನೆ ಮಾಡುತ್ತಾನೆ. ಅರಟ್ಟಾ ರಾಜ್ಯದ ಸ್ತ್ರೀಯರಿಂದ ಅತ್ಯುತ್ತಮ ವೀಣಾವಾದನ ಕೇಳಬಹುದಾಗಿದೆ. ಕೊಂಕಣಸ್ತ್ರೀಯರು ಅತ್ಯುತ್ತಮ ಮೃದಂಗವಾದಕರು. ಅವರ ಕಂಕಣದ ಸದ್ದು ಮೃದಂಗದ ಸದ್ದಿನೊಂದಿಗೆ ಸುಮಧುರವಾಗಿ ಬೆರೆತಿದೆ. ಕಳಿಂಗ ರಾಜ್ಯದವರು ಕಸ್ತೂರಿಯ ಅತ್ಯುನ್ನತ ಮಿಶ್ರಣವನ್ನು ನಿರ್ಮಿಸಬಲ್ಲರು. ಲಾಟದೇಶದ ಸ್ತ್ರೀಯರು ಶ್ರೀಗಂಧದ ಕರ್ಪೂರದ ಮಿಶ್ರಣವನ್ನು ಉತ್ತಮವಾಗಿ ಪ್ರಸ್ತುತಪಡಿಸಬಲ್ಲರು. ವಿರಾಟ ಮತ್ತು ಸೌರಾಷ್ಟ್ರದೇಶದ ಸ್ತ್ರೀಯರು ತಾಂಬೂಲ ಕಾರಣೀಕವನ್ನು ಅದರ ಅತ್ಯುತ್ತಮ ವಿನ್ಯಾಸದಲ್ಲಿ ಪ್ರಸ್ತುತಪಡಿಸಬಲ್ಲರು. ಮಂಗಳಾರತಿಯ ಬೆಳಕು ಅತ್ಯಂತ ಸುಂದರವಾಗಿ ಮತ್ತು ವರ್ಣನಾತ್ಮಕವಾಗಿ ತ್ರಿಗರ್ತಸ್ತ್ರೀಯರ ಸಮೂಹದಿಂದ ಸೂಚಿತವಾಗುತ್ತಿತ್ತು. ಅವಂತಿ, ಕುಂತಿ ಮತ್ತು ಆಂಧ್ರಪ್ರದೇಶದ ಸ್ತ್ರೀಯರು ರಚಿಸಿದ ಹಾರದಲ್ಲಿನ ನೇಯ್ಗೆಯ ಕಲೆ ತನ್ನ ಪರಾಕಾಷ್ಠೆಯನ್ನು ಮುಟ್ಟಿತು. ವಿದರ್ಭದೇಶದವರು ಕೇಶಶೃಂಗಾರದಲ್ಲಿ ಅತ್ಯುತ್ತಮರಾಗಿದ್ದರು. ನೇಪಾಳಿದೇಶದ ರಾಜಕುಮಾರಿಯರ ಮುಕ್ತ ಸುವಾಸನೆ ಅವರು ರೂಪಿಸಿಕೊಂಡ ಕಲೆಯ ಸಂಕೇತವಾಗಿತ್ತು. ಬಹುಶಃ ಜಗತ್ತಿನಲ್ಲಿ ಸರ್ವಶ್ರೇಷ್ಠವಾದುದು ಅಲ್ಲಿತ್ತು ಎನ್ನುವ ಭಾವ ಕವಿಯದಾಗಿರಬೇಕು. ಇದರಿಂದಾಗಿಯೇ ಸಮಕಾಲೀನ ಸಂದರ್ಭದ ವಿವಿಧ ದೇಶಗಳ ಮತ್ತು ಅದರ ಕಲೆಯ ನಾಮಾವಳಿಗಳನ್ನು ಅದರ ಕಲೆಯ ವೈವಿಧ್ಯತೆಗಳನ್ನು ಇಲ್ಲಿ ತಿಳಿಯಬಹುದಾಗಿದೆ.

ಕಲ್ಪನೆಯಲ್ಲಿ ವೈಭವವಿದೆ. ವಸ್ತುವಿನಲ್ಲಿ ವರ್ಣನೆಯಲ್ಲಿ ಸ್ವೋಪಜ್ಞತೆಯಿದೆ. ಆಯ್ಕೆಯಲ್ಲಿ ಜಾಣ್ಮೆಯಿದೆ. ಅವನ ಅನುಭವ ಮತ್ತು ವಸ್ತುನಿಷ್ಠತೆ ಸಂಬಂಧಿಸಿದ ಸಾಮಾನ್ಯ ಹೇಳಿಕೆಗಳು ಆಶ್ಚರ್ಯಕರವಾಗಿ ಸಹಜ ಭಾಷೆಯಲ್ಲಿವೆ. ಅದನ್ನು ಸುಲಭವಾಗಿ ಅನುಕರಣ ಮಾಡಲು ಸಾಧ್ಯವಿಲ್ಲ.

ಐತಿಹಾಸಿಕವಾಗಿ ಕೃತಿಯ ಮಹತ್ವ

ಅಚ್ಯುತರಾಯಾಭ್ಯುದಯಮ್ ಕಾವ್ಯವಾದರೂ ಐತಿಹಾಸಿಕ ವಿಷಯಗಳನ್ನೊಳಗೊಂಡ, ದಾಖಲಾರ್ಹ ಅಂಶಗಳೊಂದಿಗೆ ಮೂಡಿಬಂದಿರುವ ಆಕರಗ್ರಂಥವೆನಿಸಿದೆ. ಕಾರಣ ರಾಜನಾಥ ಒದಗಿಸಿದ ಲಿಖಿತ ದಾಖಲೆ, ಲಭ್ಯವಿರುವ ಇತರ ಆಕರಗೊಳೊಡನೆ ಸಮಪ್ರಮಾಣದ ಪೈಪೋಟಿ ಒದಗಿಸುತ್ತದೆ. ಆ ಎಲ್ಲ ದಾಖಲೆಗಳನ್ನು ಲಭ್ಯ ಆಕರಗಳೊಂದಿಗೆ ಹೋಲಿಸಿದಾಗ ಕಂಡು ಬರುವ ಅಂಶಗಳನ್ನು ಈ ರೀತಿ ಗ್ರಹಿಸಬಹುದಾಗಿದೆ.

ರಾಜನಾಥ ಕೊಟ್ಟಂತಹ ವಂಶಾವಳಿಯ ವಿವರಗಳು ಇನ್ನೂ ಹಲವಾರು ಆಕರಗಳಲ್ಲಿ ಲಭ್ಯವಿದ್ದು ಅಕ್ಷರಶಃ ಒಂದೇ ರೀತಿಯಾಗಿವೆ. ಅಚ್ಯುತರಾಯನಿಗೆ ಸಂಬಂಧಿಸಿದ ಕೆದಲಾದಿ[2] ಮತ್ತು ಉನಮಂಜರಿ ತಾಮ್ರಪಟಗಳಲ್ಲಿ ಹಾಗೂ ವೀರನರಸಿಂಹನಿಗೆ ಸಂಬಂಧಿಸಿದ ದಾನ ಶಾಸನದಲ್ಲಿ[3] ಕಂಡುಬರುವ ವಿವರ ಕೂಡ ಇದನ್ನೇ ಹೇಳುತ್ತದೆ. ಅಲ್ಲದೇ ಸದಾಶಿವರಾಜನಿಗೆ ಸಂಬಂಧಿಸಿದ ಬೇವಿನಹಳ್ಳಿ[4] ದಾನಶಾಸನದಲ್ಲೂ ಕೂಡ ಇದೇ ರೀತಿಯಾದ ವಿವರಗಳು ದೊರೆಯುತ್ತವೆ. ಎಲ್ಲ ಆಕರಗಳಲ್ಲೂ ಚಂದ್ರನಿಂದ ಪ್ರಾರಂಭವಾಗುವ ಈ ವಂಶಾವಳಿಯ ವಿವರ ಈ ರೀತಿಯಾಗಿದೆ. ಚಂದ್ರ > ಬುಧು > ಪೂರೂರವಸ್ > ಆಯು > ನಹುಷ > ತುರ್ವಸು > \  ತಿಮ್ಮ > ಈಶ್ವರ > ನರಸ > ವೀರನರಸಿಂಹ > ಕೃಷ್ಣದೇವರಾಯ ಇತ್ಯಾದಿ.

೧. ಶ್ರೀ ಗಣಾಧಿಪತಯೇನಮಃ ……….
…………………

೮. ತಸ್ಯ ಪುರುಷೋ ಯುದ್ಧೇ ಯಯಾತಿಃ ಕ್ಷಿತೌ ೧ ಖ್ಯಾತಸ್ಯ ತು ತುರ್ವಸುರ್ವ
ಸುನಿಭಃ ಶ್ರೀದೇ

೯. ವಯಾನೀಪತೇಃ ತದ್ವಂಶೇ ದೇವಕಿಜನಿರ್ದಿದೋಷೇ ತಿಮ್ಮಭೂಪತಿಃ

ಕೃಷ್ಣದೇವರಾಯನಿಗೆ ಸಂಬಂಧಿಸಿದ ಕಂಚೀಪುರಂನ ತಾಮ್ರಪಟ ಮತ್ತು ಕೃಷ್ಣದೇವರಾಯನ ಕುರಿತು ಶ್ರೀರಂಗಂ ಗುಡಿಯ ತಾಮ್ರಪಟಗಳು [Vol.xviii. pp. 160-169] ಇದನ್ನೇ ಹೇಳುತ್ತವೆ.

ರಾಜನಾಥ ವರ್ಣಿಸುವ ನರಸನಾಯಕನ ದಂಡಯಾತ್ರೆ ಮೊದಲಾದವುಗಳನ್ನು ಇನ್ನಿತರೆ ಕಾವ್ಯಗಳಲ್ಲಿಯೂ ಕಾಣಬಹುದಾಗಿದೆ. ಅಚ್ಯುತರಾಯಭ್ಯುದಯಮ್‌ನಲ್ಲಿ ಬರುವ ಮಾನವದುರ್ಗ ವಶ, ಶ್ರೀರಂಗಪಟ್ಟಣದೆಡೆಗೆ ಸಾಗುವುದು, ಸೇತುಕಾರ್ಯ ನಿರ್ಮಾಣ ಇನ್ನಿತರ ವಿವರಗಳು ನಂದಿತಿಮ್ಮಣ್ಣನ ‘ಪಾರಿಜಾತಾಪಹರನಮು’ ಎಂಬ ಕಾವ್ಯದ ಪೀಠಿಕಾ ಭಾಗದಲ್ಲಿ ದೊರೆಯುತ್ತದೆ. ವಂಶಾವಳಿ ಮಾಹಿತಿ, ನರಸನಾಯಕನ ದಿಗ್ವಿಜಯ ಇತ್ಯಾದಿ ವಿವರಗಳು ಯಥಾವತ್ತಾಗಿದೆ. ‘ಪಾರಿಜಾತಾಪಹರನಮು’ದ ವಿವರಗಳನ್ನು ಈ ರೀತಿ ಗ್ರಹಿಸಬಹುದಾಗಿದೆ.[5] ನಂದಿ ತಿಮ್ಮಣ್ಣನ ಪಾರಿಜಾತಪಹರಣಮು ಕೃತಿಯಲ್ಲಿ ಸಾಮ್ರಾಟ ಕೃಷ್ಣದೇವರಾಯನಿಗೆ ಸಮರ್ಪಿತವಾದ ಈ ಕಾವ್ಯದಲ್ಲಿ ಕವಿಯೂ ತನ್ನ ಒಡೆಯನ ಕುಲವೃತ್ತಾಂತದ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತಾನೆ. ಚಂದ್ರವಂಶದ ತುರ್ವಸುವಿನ ಕುಲದಲ್ಲಿ ಈಶ್ವರ ಎಂಬ ಹೆಸರಿನ ರಾಜ ಜನಿಸಿದನು. ಅವನು ದೇವನಾದ ಪರಶಿವನನ್ನು ತನ್ನ ಗುಣಸಾಮರ್ಥ್ಯದಿಂದ ಮೀರಿಸಿದ್ದನು. ಈಶ್ವರ ಎಂಬುದು ಶಿವನ ಇನ್ನೊಂದು ಹೆಸರೂ ಹೌದು. ಈಶ್ವರನು ಲುಕ್ಕಂಬ ಎಂಬುವಳೊಡನೆ ವಿವಾಹವಾಗಿ ನರಸ ಎಂಬ ಮಗನನ್ನು ಪಡೆದನು. ಈ ನರಸ ಒಬ್ಬ ಶ್ರೆಷ್ಠ ಯೋಧನಾಗಿದ್ದ. ಅವನು ವೀರಪರಾಕ್ರಮಗಳಿಗೆ ಹೆಸರಾದಂತೆ ಅಮೂಲ್ಯ ದಾನ ಧರ್ಮಗಳಿಗೂ ಹೆಸರಾಗಿದ್ದ. ಕುಂತಳೇಶ್ವರ(ವಿಜಯನಗರ)ವು ಸಂಕಟದಲ್ಲಿದ್ದಾಗ ತನ್ನ ಸಾಹಸ ಪರಾಕ್ರಮಗಳಿಂದ ವಿಜಯನಗರವನ್ನು ವಶಪಡಿಸಿಕೊಂಡು ಪರ್ಶಿಯನ್ ಮಹಮ್ಮದೀಯ ಸುಲ್ತಾನನ್ನು ಮಾನಾವದುರ್ಗ ಮಾನ್ವಿ ಕದನದಲ್ಲಿ ಸಾಯಿಸಿದನು. ಹಾಗೆಯೇ ಚೋಳರಾಜನನ್ನು ಕೊಂದ ನಂತರ ಮದುರಾಪಟ್ಟಣವನ್ನು ವಶಪಡಿಸಿಕೊಂಡನು. ನಂತರ ಶ್ರೀರಂಗಪಟ್ಟಣದ ಹೂಣ ರಾಜನಿಗೆ ತನ್ನ ಸಾಮರ್ಥ್ಯವನ್ನು ತೋರಿಸಿದನು. ರಾಮಸೇತುವಿನಲ್ಲಿ ಷೋಡಶ ದಾನಗಳನ್ನು ನೆರವೇರಿಸಿದನು.

ಇದೇ ವಿವರ ಉದಯಂಬಕಮ್[6] ದಾನಶಾಸನ ಪ್ರತಿಯಲ್ಲೂ ಲಭ್ಯವಿದೆ. ನರಸಿಂಹ ವರ್ಣನಮ್ ಎಂಬಲ್ಲಿ ನರಸನಾಯಕನ ದಿಗ್ವಿಜಯ ವರ್ಣನೆ ಹೀಗಿದೆ – “ವಿವಿಧ ಸುಕೃತೋದ್ಪಾ ಮೇರಾಮೇಶ್ವರ ಪ್ರಮುಖೇ ಮುಹುಃ ಮುದೀತ ಹೃದಯಸ್ಥಾನೇ ವ್ಯಧತ್ತ ಯಥಾವಿಧಿ | ಬುಧ ಪರಿವೃತೋ ನಾನಾ ದಾನಾನಿ ಯೋ ಷೋಡಶ ತ್ರಿಭೂವನ ಜನೋದ್ಗೀತಂ ಸ್ಥಿತಂ ಯಶಃ ಪುನರುಕ್ತ ಯಥಾ ವಿಧಿ ||

ಕಾವೇರಿಮಾಶು ಬದ್ಧ್ವಾಬಹಲಜಲಭರಾಂ ಯೋ ವಿಲಂಘೈವ ಶತ್ರೂನ್ ಜೀವಗ್ರಾಹಂ ಗೃಹೀತ್ವಾ ಸಮಿತಿ ಭುಜಬಲಾತ್ತಂ ಚ ರಾಜ್ಯಂ ತದೀಯಮ್ | ಕೃತ್ವಾ ಶ್ರೀರಂಗಪೂರ್ವಂ ತದನುನಿಜವಶೇ ಪಟ್ಟಣಂ ಯೋ ಬಭಾಸೇ ಕೀರ್ತಿಸ್ತಂಭಂ ನಿರವಾತಂ ತ್ರಿಭುವನ ಭುವನ ಸ್ತೂಯಮಾನಾಪದಾನಃ | ಚೇರಂ ಚೋಲಂ ಚ ಪಾಂಡ್ಯಂ ತದಪಿ ಚ ಮಧುರಾವಲ್ಲಭ್ ಮಾನಭೂಷಂ ವೀರೋದಗ್ರಂ ತುರುಷ್ಕಂ ಗಜಪತಿ ನೃಪತಿಂ ಚಾಪಿ ಜಿತ್ವಾ ತದನ್ಯಾನ್||” ಇದೇ ವಿವರ ವೀರನರಸಿಂಹನ ದಾನಶಾಸನದಲ್ಲಿ ಲಭ್ಯವಿದೆ.[7]

\ರುಮಲಾಂಬಾ ಕೃತ ವರದಾಂಬಿಕಾ ಪರಿಣಯಮ್‌ನಲ್ಲಿನ ವಿವರ ಹೀಗಿದೆ: ನರಸನಾಯಕನು ಮಧುರೈಗೆ ಹೋದ ನಂತರ ಸಮುದ್ರದ ದಂಡೆಗುಂಟ ರಾಮೇಶ್ವರಕ್ಕೆ ತೆರಳುತ್ತಾನೆ. ಅಲ್ಲಿಂದ ಶ್ರೀರಂಗಪಟ್ಟಕ್ಕೆ ಹೊರಟು ಕಾವೇರಿ ನದಿಗೆ ಸೇತುವೆ ನಿರ್ಮಿಸಿ ಅಲ್ಲಿಂದ ತಾರಾಸಿಂಗಿ ಕೋಟೆಯನ್ನು ಗೆದ್ದನೆಂದು ಹೇಳಲಾಗಿದೆ. ಪಶ್ಚಿಮಘಟ್ಟದ ಗೋಕರ್ಣಕ್ಕೆ ತೆರಳಿ ತುಲಾಪುರುಷದಾನ ಮಾಡುವ ವಿವರವಿದೆ. ಆದರೆ ಕೊನೇಟಿ ರಾಜನ ವಿರುದ್ಧದ ಜಯವನ್ನು ಈ ಕೃತಿ ವಿವರಿಸುವುದಿಲ್ಲ. ಚೋಳರಾಜನ ಮೇಲೆ ದಂಡೆತ್ತಿ ಹೋಗುವದು ಮತ್ತು ಸೇತುರಾಮೇಶ್ವರಕ್ಕೆ ತೆರಳುವದು ಎಂಬೆಲ್ಲ ಹೆಚ್ಚಿನ ವಿವರಗಳಿವೆ. ಕಾಂಚೀವರಂ ತಾಮ್ರಪಟ ದಲ್ಲಿರುವ ವಿವರಗಳು ರಾಜನಾಥ ಮತ್ತು ತಿರುಮಲಾಂಬಾ ಅವರಿಬ್ಬರೂ ನೀಡಿರುವ ವಿವರಗಳಿಗೆ ಪುಷ್ಟಿಯನ್ನು ಒದಗಿಸುತ್ತವೆ. ಕಾವೇರಿಯ ಮೇಲಿನ ಸೇತುವೆ, ಶ್ರೀರಂಗಪಟ್ಟಣ ವಶ, ಚೋಳ-ಚೇರ ಮತ್ತು ಪಾಂಡ್ಯರಾಜನ ವಿರುದ್ಧ ಜಯ ಈ ಎಲ್ಲ ವಿವರಗಳನ್ನು ರಾಜನಾಥ ಕೊಟ್ಟು, ಕಾಲ್ಪನಿಕ ಸಂಗತಿಗಳನ್ನು ಜಾಗ್ರತೆಯಾಗಿ ಕೈಬಿಟ್ಟಿದ್ದಾನೆ.

ಸಂಸ್ಕೃತ ಚಂಪೂಕಾವ್ಯ ವರದಾಂಬಿಕಾಪರಿಣಯದಲ್ಲಿ ಅಚ್ಯುತರಾಯ ಮತ್ತು ವರದಾಂಬಿಕೆಯ ವಿವಾಹವೇ ವಸ್ತುವಾಗಿದೆ. ಇದನ್ನು ತಿರುಮಲಾಂಬಾ ಬರೆದಿದ್ದಾಳೆ. ಈ ಕಾವ್ಯವು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಬರೆಯಲಾಗಿದೆ ಎಂಬುದು ಚಿನ್ನ ವೆಂಕಟಾದ್ರಿಯ ವಿವರದೊಂದಿಗೆ ಸಮಾಪ್ತಿಯಾಗುವ ಈ ಕಾವ್ಯದ ವಿಷಯದಿಂದ ನಿರ್ಧರಿತ ವಾಗುತ್ತದೆ. ಈ ಕಾವ್ಯದ ವಂಶಾವಳಿಯ ವಿವರ ಹೀಗಿದೆ: ಚಂದ್ರವಂಶದ ತಿಮ್ಮ ಮತ್ತು ದೇವಕಿ, ಇವರ ಮಗನಾದ ಈಶ್ವರನು ಬುಕ್ಕಮ್ಮಳೊಂದಿಗೆ ಮದುವೆಯಾಗಿ ನರಸನಾಯಕನನ್ನು ಪಡೆಯುತ್ತಾರೆ. ಇದು ಅಚ್ಯುತರಾಯಾಭ್ಯುದಯಮ್ ಕಾವ್ಯದ ವಿವರಕ್ಕೆ ಸರಿದೂಗುತ್ತದೆ.

ಅನನ್ಯಸಾಮಾನ್ಯಗುಣಾದಿಸಾಂದ್ರಃ ತದನ್ವವಾಯರ್ಣವಪೂರ್ಣಚಂದ್ರಃ |
ಕೌಕ್ಷೇಯಸಾಕ್ಷಿಕೃತ ವೀ ಲಕ್ಷ್ಮೀಕರಗ್ರಹೋsಭೂದ್ಭುವಿ ತಿಮ್ಮಭೂಪಃ ||
ಪುರಾ ಹರೀಂ ಪುತ್ರಮಸೂತ ದೇವಕೀಮಂದೂಹ್ಯ ಕಶ್ಚಿದ್ಯದುರಿತ್ಯುದಾರಧಿಃ
ದೇವಕಿನಾಮ್ನಿ ಪರಿಗ್ರಹೇ ಶುಭೇ ಸುತಂ ಪ್ರಸೂಯೇಶ್ವರಮತ್ಯಶೇತ್ತತಮ್ ||

ನರಸನಾಯಕನು ದಿಗ್ವಿಜಯಕ್ಕಾಗಿ ಭೂಮಂಡಲ ಪ್ರವಾಸವನ್ನು ಕೈಕೊಳ್ಳುತ್ತಾನೆ. ಪೂರ್ವದ ವೈರಿಗಳೊಡನೆ ಸೆಣಸಿ, ಪಶ್ಚಿಮಕ್ಕೆ ಹೊರಡುತ್ತಾನೆ. ತೊಂಡಮಂಡಲ ನಾಡನ್ನು ದಾಟಿ ಚೋಳ ರಾಜ್ಯಕ್ಕೆ ಪ್ರವೇಶಿಸುತ್ತಾನೆ. ಚೋಳರಾಜ ಇದನ್ನು ಪ್ರತಿಭಟಿಸುತ್ತಾನೆ. ನರಸನಾಯಕನು ಕಾವೇರಿ ನದಿ ದಾಟಿ ಚೋಳರಾಜ್ಯಕ್ಕೆ ಬರುತ್ತಾನೆ. ಚೋಳರಾಜ್ಯವನ್ನು ಜಯಿಸುತ್ತಾನೆ. ನಂತರ ಮಧುರೆಗೆ ಹೋಗಿ ಅಲ್ಲಿಂದ ರಾಮೇಶ್ವರಕ್ಕೆ ತೆರಳುತ್ತಾನೆ. ರಾಮೇಶ್ವರದಲ್ಲಿ ದಾನವನ್ನು ಪೂರೈಸಿ, ಶ್ರೀರಂಗಂಗೆ ತೆರಳುತ್ತಾನೆ. ಅಲ್ಲಿ ಒಂದು ಸೇತುವೆ ನಿರ್ಮಿಸುತ್ತಾನೆ.

ತದನು ವಿಹಸ್ಯ ನರಸಿಂಹಮಹೇಶ್ವರಃ ಪ್ರವಿಶ್ಯ ಮಧುರಾಪುರೀಂ ತತ್ರತ್ಯನೃಪೋಪದೀಕೃತ
ಸಮಸ್ತವಸ್ತುಜಾತಃ ರಾಮೇಶ್ವರಪ್ರಣಿನಂಸಯಾ ಸೇತುಮಾರ್ಗೇಣ ನಿರ್ಜಗಾಮ ||
ತತೋ………….. ಕ್ರಮೇಣಾಪರಾಂತನದೀಕಾಂತವೇಲಾಪರ್ಯಂತದಿಶಾಚಕ್ರ
ಸಮಾಕ್ರಮಣೇsಪಿ ಸಮಗ್ರತರತ್ಯುಗ್ರಶೌರ್ಯಸೂರ್ಯೋದಯಃ
ಸಾಗರಾಂತರಾವಾಸದುರ್ಲಂಘಾಂ
ಲಂಕಾಮಿವ ರಘುಪುಂಗವಃ ಕಾವೇರಿಪರಿವೇಷ್ಟಿತಾಂ ಶ್ರೀರಂಗಪಟ್ಟಣಾಭಿಧಾಂ
ಅವರಿಷ್ಟಪುರೀಮ್||

ಸ್ಥಿರೇ ಜಲೇ ಸೇತುಕಾರಿ ಪೂರ್ವಂ ತದ್ಭುತಂ ನೇತಿ ಕವೇರಜಾಯಾಃ |
ಸೇತುಂ ಪ್ರವಾಹೇಷು ಗುಣಾಭಿರಾಮಃ ಚಿತ್ತೇ ಸತಾಮದ್ಭುತಮಪ್ಯಬಧ್ಯಾತ್ ||

ಈ ರೀತಿಯಾಗಿ ವರದಾಂಬಿಕಾ ಪರಿಣಯದ ಬಹುತೇಕ ವಿವರಗಳನ್ನು ಅಚ್ಯುತರಾಯಾ ಭ್ಯುದಯಮ್ ಕಾವ್ಯದ ವಿವರಗಳೊಂದಿಗೆ ಅಲ್ಲಲ್ಲಿ ಕೆಲವು ಬದಲಾವಣೆಗಳೊಂದಿಗೆ ತೂಗಿಸಿ ನೋಡಬಹುದಾಗಿದೆ.

ಶ್ರೀವೆಂಕಟಾದ್ರೀಶವರಪ್ರಸಾದಾತ್ ಜಾತಂ ಕುಮಾರಂ ಜಗತೀಸುಧಾಂಶುಃ |
ಅಮುಂ ಹರೇಶಂಶಭವಂ ವಿದಿತ್ವಾ ನಾಮ್ನಾ ವ್ಯತಾನೀತ್ ಚಿನವೆಂಕಟಾದ್ರಿಮ್ ||

ಅನಂತರಮಚ್ಯುತಮಹೀಮಹೇಂದ್ರೋ ಬಾಲ್ಯ ಏವ ಸಮುಲ್ಲಸದಸಾಧಾರಣಾನುಭಾವಂ ನಾರಾಯಣ ಚರಣಾರವಿಂದಭಾವಂ ಅತ್ಯುದಾರಂ ಕುಮಾರಮಾಲೋಕ್ಯ ಸಾಕಮಾಗತ್ಯ ಗಣೇನ ಸಕಲ ಗ್ರಹೀತು ಸಂತ್ರಾಣಧೂರ್ಯಂ ಅವತಾರ್ಯಂ ಶುಭಂಯುನಿ ದಿನೇ ……….. ಶಾಶ್ವತಂ ಯುವರಾಜ ಪದಮ್ ||

ಚಿನ್ನವೆಂಕಟಾದ್ರಿ ಎಂಬುವನು ಅಚ್ಯುತರಾಯನ ಮಗನಾಗಿದ್ದನು. ಅವನಿಗೆ ಯುವರಾಜ ಪಟ್ಟಾಭಿಷೇಕವು ಆಗಿತ್ತು ಎಂಬ ಅಂಶ ವರದಾಂಬಿಕಾ ಪರಿಣಯಂ ಮತ್ತು ಅಚ್ಯುತರಾಯಾ ಭ್ಯುದಯಂ ಎರಡೂ ಕಾವ್ಯಗಳಲ್ಲೂ ನಿರೂಪಿತವಾಗಿದೆ.

ರಾಜನಾಥ ವಿವರಿಸಿದ ನರಸನಾಯಕನ ಷೋಡಶ ಮಹಾದಾನದ ವಿವರಗಳು ಎಲ್ಲ ಆಕರಗಳಲ್ಲೂ, ಬಹುತೇಕ ಎಲ್ಲ ಶಾಸನಪಾಠಗಳಲ್ಲೂ ಲಭ್ಯವಿವೆ.

ಬ್ರಹ್ಮಾಂಡಂ ವಿಶ್ವಚಕ್ರಂಘಟಿ ಮುಂದಿತ ಮಹಾಭೂತಕಂ ರತ್ನಧೇನುಂ|
ಸಪ್ತಾಂಬೋಧೀಂ ಕಲ್ಪಕ್ಷಿತಿರುಹಲತಿಕೇ ಕಾಂಚನೀಂ ಕಾಮಧೇನು ||
ಸ್ವರ್ಣಾಕ್ಷ್ಮಾಯೋ ಹಿರಣ್ಯಾಶ್ವರಥಮಪಿ ತುಲಾಪುರುಷಂ ಗೋಸಹಸ್ರಂ |
ಹೇಮಾಶ್ವಂ ಹೇಮಗರ್ಭಂ ಕನಕಕರಿರಥಮ್ ಪಂಚಲಾಂಗಲ್ಯತಾನೂತ್ ||

ಎಪಿಗ್ರಾಫಿಯಾ ಇಂಡಿಕಾದಲ್ಲಿ ಬರುವ (xiii, pp 127-8) ಸಾಲುಗಳು ವೀರನರಸಿಂಹನ ದಾನದ ಕುರಿತು ಹೇಳುತ್ತಿವೆ. “ನಾನಾದಾನಾನ್ಯಕಾರ್ಷಿತ್ಕನಕಸದಸಿ ಯಃ ಶ್ರೀ ವಿರೂಪಾಕ್ಷ ದೇವಸ್ಥಾನೇ, ಶ್ರೀ ಕಾಲಹಸ್ತಿಪಿತುರಪಿ ನಗರೇವಂಕಟಾದ್ರೌ ಚ ಕಾಂಚ್ಯಾಮ್ | ಶ್ರೀಶೈಲೇ ಶೋಣಶೈಲೇ ಮಹತಿ ಹರಿಹರೇs ಹೋಬಲೇ ಸಂಗಮೇ ಚ ಶ್ರೀರಂಗೇ ಕುಂಭಕೋಣೇ ಹತತಮಸಿ ಮಹಾನಂದತೀರ್ಥೋ ನಿವೃತೈ|| ಗೋಕರ್ಣೇ ರಾಮಸೇತೌ ಜಗತೀ ತದಿತರೇಷ್ವಪ್ಯ ಶೇಷೇಷು ಸ್ಥಾನೇಷ್ವಾಲಬ್ಧನಾನಾವಿಧಿಬಹಲ ಮಹಾದಾನವಾರಿ ಪ್ರವಾಹೈಃ||” ಈ ಸಾಲುಗಳು ಅಚ್ಯುತರಾಯಾಭ್ಯುದಯಂನ ವಿವರಗಳನ್ನು ಸರಿದೂಗಿಸುತ್ತವೆ.

ನರಸಿಂಹನಾಯಕನ ನಂತರ ವೀರನರಸಿಂಹನಾಯಕನು ಪಟ್ಟಕ್ಕೆ ಬಂದನು.


[1] “Rajanatha Dindima Achyuta’s poet-laureate wrote poems the Achyutarayabhyudayam and the Bhagavata campu. The former is an historical kavya in which the outhor describes the early Career of his Master. Though Dindima clothes the events in poetical garb, they are nevertheless genuine. Therefore his poem should be regarded as the most valuable contemporary document of Achyuta’s reign” [Studies in the History of third dynasty of Vijayanagar, Dr. N. Venkataramanayya, (University of Madras) 1985, p.424]
[2] Vol. xiv, No. 22 KADALADI PLATES OF ACHYUTARAYA SAKA – 1451, P. 323 KRISHADEVARAYA UNAMANJARAI PLATES, ep.ind, III P.P 147-158.

[3] No. 17 THE KUDIYANATAN DAL GRANT OF VIRA – NARASIMHA : SAKA 1429 “the inscription is very important as the first copper plate record that we have of viranarasimha of the second vijayanagara dynasty. It makes The King the Son of Narasa Avanipalaka by Tippaji. This Narasa bettes Known as Narasa Nayaka is Supposed to be the founder of the Tuluva dynasty. But the plates before us have the genealogy. Thus Timma Bhupati, Isvara Kshitipalaka and Narasa Avanipalaka.”

[4] Vol. xiv No. 16 P. P 210-231 BEVINAHALLI GRANT OF SADASIVA RAYA : SAKA 1473 The inscription gives in detail the genealogy of the family to which Ramaraja belonged.

[5] In ‘Parjatapaharanamu’ By Nandi Timmanna – “In the begining of this Telugu poem dedicated to the Emperer Krishana Raya, the poet Nandi Timmanna gives a short account of the family of his patron. In the family of Turuasu of the lunar race was born a king by name Isvara who excelled by his virtues even god Siva, who is also called Isvara. In the battle at Kandukur which he fought with the cavalry of the Mahammadan ruler of Bedar he caused their blood to flowing many streams. Isvara married Lukkamba and got son Narasa, by her. This Narasa became a very great warrior. He was famous for his conquests and Munificent gifts. He asCended the throne of Vijayanagara which was a mirror to the whole world. When the lord of Kuntala (Vijayanagara) country was in trouble, he excited his valour and captured the city of vidyapura (Vijanagara). He killed the persian (muhammdan) ruler in the battle of Manavadurga (Manvi?). He captured the town of Madura after killing the chola ruler and exhibited his swordsmanship to the Heuna ruler of Seringapatam. He performed the sixteen sacred gifts at Ramasetu” (p. 106 Sources of Vijanagara)

[6] The first historical kings of the dynasty : Timma, Isvara, Narasa. The gifts made by Narasa in Rameswaram and other places. exploits of Narasa his capture of Srirangapatam, defeat of Chola, Chera, Pandya and Musalman kings of the chieftain of Maduara and the king of orissa and his Suzeranty over the Dakhan from Lanka to the banks of the Ganga (probably the Penganga of central India) Birth of his sons vira Narasimhendra and krishna Raya parises of Vira – Narasimhendra and his gifts in holy places…..” [Ep. Indica, xiv, No.12 Vdayabamkam Grant of krisnadevaraya. Saka 1450 p. 168-175]
[7] No. 17 THE KUDIYANTANDAL GRANT OF VIRA NARASIMIHA SAKA 1429 “The brave vira Narasimha seated on his jewelled throne at vijayanagara eclipsed in fame and policy other kings of the world like Nriga Nala and Nahusha. He ruled the Kingdom between the eastern and western mountains drawing him the hearts of all people. He gifts at holy places such as chidambaram, kalahastic, Tirupathi, Srirangalu Kumbhakanam, Conjeevaram, Ahobalam, Gokarna, Ramasetu etc”.