. ಶರಕಾಂಡವಿಪಾಂಡುನಾ ಮುಖೇನ
ಸ್ತನಯೋರಪ್ಯುಪಜಾತಮೇಚಕಿಮ್ನಾ |
ಪರಿಣೇತೃಮುದಾ ಸಮಂ ತದಾಸೀ
ತ್ಪ್ರಕಟಂ ದೌಹೃದಲಕ್ಷ್ಮ ಪಕ್ಷ್ಮಲಾಕ್ಷ್ಯಾಃ ||

ಸುಂದರವಾದ ರೆಪ್ಪೆಗೂದಲುಗಳಿಂದ ಕೂಡಿದ ಕಣ್ಣುಳ್ಳವಳಾಗಿ, ಬಿಳುಪಾದ ಮುಖಕಾಂತಿಯನ್ನು ಹೊಂದಿದವಳಾಗಿ, ಮೇಘವರ್ಣದಿಂದ ಕೂಡಿದ ಸ್ತನಾಗ್ರಳನ್ನು ಗರ್ಭಚಿಹ್ನೆಗಳಾಗಿ ಹೊಂದಿ ಓಬಬಾಂಬೆಯು ನೃಸಿಂಹ ನಾಯಕನ ಸಂತೋಷಕ್ಕೆ ಕಾರಣಳಾಗಿದ್ದಳು.

. ತನಯಾನುಪಲಂಭಸಂಭವೋ ಯೋ
ನೃಪತೇರೈಕ್ಷ್ಯತ ನೀಲಿಮಾ ಮುಖೇಂದೌ |
ಕುಚಯೋಃ ಯುಗೇನ ಕೋಮಲಾಂಗ್ಯಾ
ಮುಷಿತಶ್ಚೂಚುಕನೀಲಿಮಾಪದೇಶಾತ್ ||

ಮಗನ ಹುಟ್ಟಿನ ಸಂಭ್ರಮದಲ್ಲಿ, ಶ್ಯಾಮಲ ಕಪ್ಪು ಬಣ್ಣವನ್ನು ಹೊಂದಿದಳು. ಹೇಗೆಂದರೆ ರಾಜನ ಮುಖವೆಂಬ ಚಂದ್ರ ದೃಷ್ಟಿಯಿಂದಾಗಿ ಅವಳ ಸುಕುಮಾರ ಶರೀರವೆಲ್ಲ ಚಂದ್ರಕಲೆಗಳನ್ನು ಕದ್ದಿರುವಂತೆ ಕಪ್ಪಾಯಿತು.

. ಉದರಸ್ಥಿತಮುತ್ಪಲೇಕ್ಷಣಾಯಾಃ
ಕುಲದೀಪಂ ಕುಮುದಿನ್ಯಧೀಶ್ವರೇಣ |
ಅಭಿರಕ್ಷಿತುಮರ್ಭಕಂ ವಿಸೃಷ್ಟಾ
ರಜನೀವಾಜನಿ ರೋಮರಾಚಿರಖ್ಯಾಃ ||

ಕಮಲದಂತೆ ಕಣ್ಣುಗಳಿರುವ ರಾಣಿಯ ಉದರದ ಮೇಲಿರುವ ರೋಮಾವಳಿಯು ವಂಶಜ್ಯೋತಿಯಾದ ಶಿಶುವನ್ನು ರಕ್ಷಿಸಲು ಚಂದ್ರನಿಂದ ಕಳಿಸಲ್ಪಟ್ಟ ರಾತ್ರಿಯಂತೆ ಆಯಿತು.

. ಅವತಾರ ಇತಿ ಸ್ವಯಂ ಮುರಾರೇ
ರುದರಸ್ಥಃ ಶಿಶುರುತ್ಪಲೇಕ್ಷಣಾಯಾಃ |
ವಲಿವೈಭವವಂಚನಾನುಕೂಲಂ
ವಪುಷಾ ವೃದ್ದಿಜುಷಾ ವಿಭಾವ್ಯತೇ ಸ್ಮ ||

ಕಮಲಾಕ್ಷಿಯ ಉದರದಲ್ಲಿರುವ ಶಿಶುವು ತ್ರಿವಳಿಗಳ ವೈಭವವನ್ನು ಕಡಿಮೆ ಮಾಡಲು ಅನುಗುಣವಾಗಿ ಇನ್ನೊಂದರ್ಥದಲ್ಲಿ ವಿರೋಚನನ ಮಗನಾದ ಬಲಿಯೆಂಬ ದಾನವನ ಮಹಿಮೆಯೆಂಬ ವೈಭವವನ್ನು ತಡೆಯಲು ವೃದ್ದಿಹೊಂದಿದ ವಾಮನನಾದ ವಿಷ್ಣುವು ತ್ರಿವಿಕ್ರಮನಾಗಿ ಬೆಳೆದ ರೀತಿಯಂತೆ ಇದು ತೋರುತ್ತಿತ್ತು.

. ಕುಚಕೋಕಮುಖೇ ವಿಧಾಯ ಕಾರ್ಷ್ಣ್ಯಂ
ಸುದೃಶಃ ಶ್ವೇತಿಮಕೌಮುದೀಂ ತಥಾಂಗೇ |
ನಿಯತಂ ಕುಲನೇತುರನ್ವಕಾರ್ಷೀ
ಜ್ಜಠರಸ್ಥೋ ಜಗದೀಶಸೂನುರಿಂದೋಃ ||

ಉದರದಲ್ಲಿರುವ ಶಿಶುವು (ರಾಜಕುಮಾರನು) ಚಕ್ರವಾಕ ಪಕ್ಷಿಯ ಮುಖದಂತೆ ಓಬಮಾಂಬೆಯ ಮುಖವನ್ನು ದುಃಖ ಉಂಟಾದ ಹಾಗೆ ಕಪ್ಪಾಗಿ ಮಾಡಿ ಶ್ವೇತ ವರ್ಣದ ಬೆಳದಿಂಗಳಂತೆ ವಂಶನಾಯಕನಾದ ಚಂದ್ರನನ್ನು ನಿಶ್ಚಿತವಾಗಿಯೂ ಅನುಕರಿಸುತ್ತಿದ್ದನು.

. ಪ್ರಸಮೀಕ್ಷ್ಯ ಪಯೋಧರಂ ಮೃಗಾಕ್ಷ್ಯಾ
ಮುಖತಃ ಶ್ಯಾಮಲಿಮಾನಮಶ್ಯುವಾನಮ್ |
ಅಪಿ ಗರ್ಭಘನೋದಯೇ ವ್ಯಲಾಸೀ
ದಜಹತ್ಪ್ರೀತಿರಹೋ ರಾಜಹಂಸಃ ||

ರಾಜಹಂಸನಾದ ರಾಜಶ್ರೇಷ್ಠನಾದ ನೃಸಿಂಹ ಭೂಪತಿಯು ಹಂಸಗಳು ಮೇಘಗಳ ಬರುವಿಕೆಯಿಂದ ವರ್ಷಾಕಾಲವೆಂದು ಸಂತೋಷ ಪಡುವಂತೆ ಅಥವಾ ಗರ್ಭದ ಬೆಳವಣಿಗೆಯಿಂದ ರಾಜನು ಸಂತೋಷಪಡುತ್ತಿದ್ದನು. ಇಲ್ಲಿ ಹಂಸ ಮತ್ತು ರಾಜನನ್ನು ಏಕಕಾಲಕ್ಕೆ ವರ್ಣಿಸಲಾಗಿದೆ.

. ಮುಹುರುಚ್ಛ್ವಸಿತಂ ಮುಖೇನ ತನ್ವ್ಯಾ
ನಯನಾಭ್ಯಾಂ ಸಹ ನರ್ತಿತಪ್ರಸಾದಮ್ |
ಅವಲಗ್ನಮಿವಾಂತರಂಗಮಾಸೀ
ದವನೀಪಾಲಶಿಖಾಮಣೀರ ಶೂನ್ಯಮ್ ||

ರಾಜಚೂಡಾಮಣಿಯೆನಿಸಿದ ನೃಸಿಂಹರಾಜನು ಓಬಮಾಂಬೆಯ ಹೃದಯದ ಸಂತೋಷವನ್ನು ಉಚ್ಛ್ವಾಸ ಮತ್ತು ನಿಚ್ಛ್ವಾಸಗಳಿಂದಲೂ, ಕಣ್ಣುಗಳಿಂದ ಸೂಸುತ್ತಿರುವ ಅಭಿವೃದ್ದಿಯ ಪ್ರಸನ್ನತೆಯಲ್ಲೂ, ವೈಕಲ್ಯರಹಿತವಾದ ಕಾಂತಿಯಿಂದಲೂ ಮನಸ್ಸಿನಲ್ಲಿ ಗ್ರಹಿಸಿಕೊಂಡನು.

. ಉದಭೂಜ್ಜಗದದ್ಭುತೋದಯಾನಾ
ಮುಂಚಿತೋ ಗರ್ಭಮುಪೇಯುಕ್ಷೋರ್ಭಕಸ್ಯ |
ಮಹಿತೋ ಭುಜಧಾಮವಿಭ್ರಮಾಣಾಂ
ಮಹಿಲಾರತ್ನಮನೋರಥಪ್ರಚಾರಃ ||

ಜಗತ್ತಿನ ಅದ್ಭುತಗಳ ಉತ್ಪತ್ತಿಗೆ ಅನುಗುಣವಾಗಿ ಗರ್ಭತ್ವವು ಪ್ರಾಪ್ತವಾಗಿತ್ತು. ಅಂತಹ ಮಗುವಿನ ಹುಟ್ಟುವಿಕೆಯೇ ಹಲವು ಅದ್ಭುತಗಳಿಗೆ ಕಾರಣವಾಗಿತ್ತು. ಭುಜಬಲ ವಿಲಾಸವನ್ನು ವ್ಯಕ್ತಗೊಳಿಸಲು ಅರ್ಥಾತ್ ಅವನ ಶೌರ್ಯಸಾಹಸಗಳನ್ನು ಪೂರ್ವಾನ್ವಯವಾಗಿಯೇ ತಿಳಿಯುವ ಕಾರಣದಿಂದಾಗಿ ಶ್ರೇಷ್ಠಳಾದ ಓಬಮಾಂಬೆಯ ಮನೋರಥಗಳೆಲ್ಲ ದೇಹದ ಬಯಕೆಗಳ ರೂಪದಲ್ಲಿ ಹೊರಹೊಮ್ಮಿತು.

. ಸುದತೀ ಮಹತೀಷು ಸಿಂಧುಮುಕ್ತಾ
ಸ್ವನವಾಪ್ಯಾದರಮಾಹವಾಜಿರೇಷು |
ಕಮಿತುಃ ಕರವಾಲಖಂಡಿತಾನಾಂ
ಕರಿಣಾಂ ಕುಂಭಮಣೀಗಣಾನಕಾಂಕ್ಷೀತ್ ||

ಉತ್ತಮ ದಂತಪಂಕ್ತಿ ಹೊಂದಿರುವ ರಾಣಿ ಓಬಮಾಂಬೆಯು ಶ್ರೇಷ್ಠವಾದ ಸಮುದ್ರದಿಂದ ಆಯ್ದು ತಂದ ಮುತ್ತುಗಳನ್ನು ತಿರಸ್ಕರಿಸಿ, ರಣರಂಗದಲ್ಲಿ ಮೃತ್ಯುಖಡ್ಗದಿಂದ ಕತ್ತರಿಸಿದ ಆನೆಗಳ ತಲೆಯಲ್ಲಿ ಹೊಳೆಯುವ ಮಣಿರಾಶಿಯನ್ನು ಅಪೇಕ್ಷಿಸಿದಳು.

೧೦. ಲಲನಾವ್ಯಜನಾನಿಲೈರ್ನ ಕಿಂಚಿ
ಚ್ಚಕಮೇ ಸೌಧಗತಾ ಶ್ರಮಂ ವಿನೇತುಮ್ |
ಅಲಮೈಹತ ಕಂಧರಾಧಿರೂಢಾ
ಶ್ರವಣೋಪಾಂಡಸಮೀರಣೈಃ ಕರೇಣೋಃ ||

ಓಬಮಾಂಬೆಯು ಅರಮನೆಯಲ್ಲಿದ್ದರೂ ಪರಿಶ್ರಮದಿಂದುಂಟಾದ ಬೆವರುವಿಕೆಯನ್ನು ಪರಿಚಾರಿಕೆಯರು ಬೀಸುವ ಗಾಳಿಯಿಂದಪರಿಹರಿಸಿಕೊಳ್ಳಲು ಬಯಸಲಿಲ್ಲ. ಆನೆಗಳ ಕುತ್ತಿಗೆಯಲ್ಲಿ ಕುಳಿತು ಆನೆಗಳ ಮೊರದಗಲದ ಕಿವಿಗಳ ಅಲ್ಲಾಡುವಿಕೆಯಿಂದ ಉಂಟಾದ ಗಾಳಿಯಿಂದ ಶ್ರಮವನ್ನು ಪರಿಹರಿಸಿಕೊಳ್ಳಲು ಇಚ್ಛಿಸಿದರು.

೧೧. ಪದಮರ್ಪಯಿತುಂ ನಚ ಪ್ರಸೂನ
ಪ್ರಕರೇಷ್ವೀಷದಪಿ ಪ್ರಗಲ್ಭಮಾನಾ |
ಮಹಿಷೀ ಭೃಶಕರ್ಕರೇಷಂ ಚೂಡಾ
ಮಣಿಷು ದ್ವೇಷಿಮೃಗೀದೃಶಾಮಿಯೇಷ ||

ವಿಶಾಲಾಕ್ಷಿಯಾದ ರಾಣಿಯು ಚಂದ್ರನ ಗರ್ವವನ್ನು ಮುರಿದ ತನ್ನ ಮುಖವನ್ನು ಕನ್ನಡಿಯಲ್ಲಿ ತೋರಿಸಲು ಸಖಿಯರು ಕನ್ನಡಿ ಹಿಡಿದರೂ ಅವಳು ಅದನ್ನು ನೋಡಲಿಲ್ಲ. ಬದಲಾಗಿ ಶತ್ರುಸ್ತ್ರೀಯರ ನಿರ್ಮಲವಾದ ಕಪೋಲಗಳಲ್ಲಿಯೇ ತನ್ನನ್ನು ನೋಡಲು ಅಪೇಕ್ಷಿಸಿದಳು.

೧೨. ಮುಕುರೇsಭಿಮುಖೀಕೃತೇ ಸುಖೀಭಿಃ
ರ್ಮುಖಮಾಲೋಕಿ ಮುದ್ರಿತೆಂದುಗರ್ವಮ್ |
ವಿಮತೈಣನೃಶಾಂ ವಿನೀತವಾಚಾಂ
ವಿಪ್ರಲಾಕ್ಷ್ಯಾ ವಿಮಲೇ ಕಪೋಲ ಎವ ||

ಪಟ್ಟಮಹಿಷೆಯಾದ ಓಬಮಾಂಬೆಗೆ ಕುಸುಮಗಳ ರಾಶಿಯಲ್ಲಿ ಪಾದವಿಡಲು ಸ್ವಲ್ಪವಾದರೂ ಸಾಧ್ಯವಾಗಲಿಲ್ಲ. ಬದಲಾಗಿ ಕಠೋರವಾದರೂ ಶತ್ರುಸ್ತ್ರೀಯರ ಚೂಡಾಮಣಿಗಳ ಮೇಲೆ ಪಾದವನ್ನು ಇಡಲು ಇಚ್ಛಿಸಿದಳು.

೧೩. ಅವಧೀರ್ಯ ನದೀರತಿಪ್ರಸನ್ನಾ
ಹರಿಣಾಕ್ಷ್ಯಾ ಮಹುರಾಲುಲೋಕಿಪಾಸೀತ್
ಪರಿಪಂಥ್ಯಬಲಾಶ್ರುವಾಹಿನೀಷು
ಪ್ರಥಮಾಮಾನಾಂಜನಯೋಗಪಂಕಿಲಾಸು

ಅತ್ಯಂತ ಶುದ್ಧವಾದ ನದಿಯ ನೀರನ್ನು ತಿರಸ್ಕರಿಸಿ, ಕಣ್ಣಿನ ಕಾಡಿಗೆಯಿಂದ ಕೂಡಿದ ಕೆಸರಿನಿಂದ ತುಂಬಿರುವ ಶತ್ರುಸ್ತ್ರೀಯರ ಕಣ್ಣೀರಿನಲ್ಲಿ ಹರಿಣಾಕ್ಷಿಯು ಪದೇ ಪದೇನೋಡಲು ಇಚ್ಛಿಸಿದಳು.

೧೪. ಕದಲೀ ಲಲಿತೋರುಕಾಂಡಸಾಮ್ಯೇ
ಜನಯಾಮಾಸ ಜಾತು ಸೌಮನಸ್ಯಮ್ |
ಅದಸೀಯವಿಖಂಡನೈಶಶೌಂಡಾ
ಕರಿಶುಂಡೈವ ನೃಸಿಂಹಕಂಬುಕಂಠ್ಯಾಃ ||

ಶಂಖುವಿನಂತೆ ಕೊರಳಿರುವ ಬಾಳೆದಿಂಡಿನಂತೆ ಸುಕೋಮಲ ಶರೀರದಿಂದಾಗಿ ಪ್ರೀತಿಯನ್ನು ಹುಟ್ಟಿಸಲು ಸಾಧ್ಯವಾಗಲಿಲ್ಲ. ಬಾಳೆದಿಂಡುಗಳನ್ನು ಮನಬಂದಂತೆ ತುಳಿದು ನಾಶಮಾಡುವ ಬಲಿಷ್ಠ ಆನೆಸೊಂಡಿಲಿನಿಂದ ಪ್ರೀತಿಯು ಹುಟ್ಟಿತು.

೧೫. ಅಪಹಾಯ ಸುಮಾನಿ ಹಾಸಪಾತ್ರಾ
ಣ್ಯಪಿ ಪಾದಾಂಚಲತಾಡನಾಸ್ವದಾನಿ |
ಪ್ರಮದಂ ಪರಮಾಣುಮಧ್ಯಮಾಯಾಃ
ಸುಂದತೀಗೀತಿಸುಧೋಚಿತಾನಿ ತೇನುಃ ||

ಬಡನಡುವಿನಿಂದ ಕೂಡಿದವಳು, ಮಂದಸ್ಮಿತೆಯಾಗಿರುವ ಓಬಮಾಂಬೆಯು ಚಂಪಕ ಹೂಗಳು ಅರಳಲು ಪಾದತಾಡನವನ್ನು ಮಾಡಬೇಕಿದ್ದರೂ, ಅದನ್ನು ತ್ಯಜಿಸಿ ಅಶೋಕಪುಷ್ಪಗಳನ್ನು ಕೂಡ ತ್ಯಜಿಸಿ ಸಂಶ್ರಾವ್ಯವಾಗಿ ಹಾಡುವ ಹಾಡಿನಿಂದ ಹೂಗಳು ಅರಳಲು ಬಯಸಿದಳು.

೧೬. ಅಥ ಪುಂಸವನಾವಿಕಂ ಯಥಾವ
ದ್ವಿಹಿತಂ ಕರ್ಮ ವಿಶಾಮಧೀಶ್ವರೇಣ |
ತನಯಸ್ಯ ತದೀಯಗರ್ಭಭಾಜೋ
ವಿಭವಸ್ಯವ ನಯೋ ವಿವೃದ್ಧಯೇsಭೂತ್ ||

ಅನಂತರ ನೃಸಿಂಹರಾಜನಿಂದ ಶಾಸ್ತ್ರೋಕ್ತವಾಗಿ ವಿಹಿತ ವಿಧಿವಿಧಾನಗಳಿಂದ ಸೀಮಂತ ಸಂಸ್ಕಾರವು ನಡೆಯಿತು. ಗರ್ಭಸ್ಥ ಮಗುವಿಗೆ ಯಥಾರೀತಿ ಐಶ್ವರ್ಯ ಮತ್ತು ಅಭ್ಯುದಯಕ್ಕಾಗಿ ಇದು ನಡೆಯಿತು.

೧೭. ಅಥ ವೈಜನನೇ ದಿನೇ ಶುಭಯೌ
ಹರಿಣಾಕ್ಷಿ ನೃಪತೇರಸೂತ ಸೂನುಮ್ |
ವಸುಧಾತಿಭರಾಪನೋವಹೇತುಂ
ವಸುದೇವಪ್ರಮದೇವ ವಾಸುದೇವಮ್ ||

ಅನಂತರ ನವಮಾಸಗಳ ನಂತರ ಶುಭತಿಥಿಯಲ್ಲಿ ರಾಣಿ ಓಬಮಾಂಬೆಯು ಭೂಮಿಗೆ ಅತೀ ಭಾರವಾಗಿರುವಂತಿರುವ ಭಾರವನ್ನು ಕಡಿಮೆಮಾಡುವ ಕಾರಣದಿಂದಾಗಿ ವಸುದೇವ ದೇವಕಿಯರ ಮಗನಾದ ಶ್ರೀಕೃಷ್ಣನಂತೆ ಮಗನನ್ನು ಪಡೆದಳು.

೧೮. ಸುದೃಶಾಮಜನಿಷ್ಟ ಸೂತಿಗೇಹೇ
ಸುತಜನ್ಮೋತ್ಯವಸೂಚನೋ ನಿನಾದಃ |
ಉದಯತ್ಯುಡುಬಾಂಧವೇ ಕಿಮಾಬ್ಥೇ
ರ್ಧೃತಮೌಖರ್ಯವಿಪರ್ಯಯಯಾ ಲಹರ್ಯಃ ||

ಸೂತಿಕಾಗೃಹದಲ್ಲಿ ಸ್ತ್ರೀಯರಿಂದ ಪುತ್ರೋತ್ಸವದಿಂದಾಗಿ ಕಲ ಕಲ ಶಬ್ದವು ಕೇಳಿಬರುತ್ತಿತ್ತು. ಹೇಗೆ ಚಂದ್ರನು ಉದಯಿಸುವಾಗ ಸಮುದ್ರದ ಅಲೆಗಳು ಕೋಲಾಹಲ ಎಬ್ಬಿಸುತ್ತವೆಯೋ ಹಾಗೆ ಅಥವಾ ಎಬ್ಬಿಸುವುದಿಲ್ಲವೇನೋ

೧೯. ಅವನೀರಮಣೈರ್ವಿತೀರ್ಣಮಾದೈ
ರಗಮತ್ಪ್ರಾಕ್ತನತಾಂ ಯಶೋದುಕೂಲಮ್ |
ತದಿದಂ ನವೇಮೇಷ ದಾಸ್ಯತೀತಿ
ಪ್ರಮದೇನೇವ ದಿಶೋ ದಶ ಪ್ರಸೇದುಃ ||

ಪೂರ್ವಜರುಗಳಿಂದ ಪೂರ್ವದ ರಾಜರುಗಳಿಂದ ಕೊಡಲ್ಪಟ್ಟ ಕೀರ್ತಿವಸ್ತ್ರ ಕಳೆಗುಂದಿರುವುದನ್ನು ತಿಳಿದು ಹಳೆಯದಾಗಿರುವುದರಿಂದ ರಾಜಕುಮಾರನು ನೂತನವಾದ ಯಶೋವಸ್ತ್ರವನ್ನು ಕೊಡುವನೆಂದು ತಿಳಿದು ಎಲ್ಲ ದಿಕ್ಕುಗಳು ಸಂತೋಷಭರಿತವಾದವು.

೨೦. ಅಪನೀತರಜಃ ಕಣಾನುಷಂಗಾಃ
ಪರಿತೋಷಾಶ್ರೂಭರೈರಿವ ಪ್ರಜಾನಾಮ್ |
ಮರುತೋ ವ್ಯವಲಂತ ಮಂದಂಮಂದಂ
ನವಗಂಧೋದಯನರ್ತಿತದ್ವಿರೇಫಾಃ ||

ಗಾಳಿಯೂ ಪ್ರಜೆಗಳ ಆನಂದಾಶ್ರುಗಳಿಂದ ಬೀಳಲ್ಪಟ್ಟು, ಅಂಟಿಕೊಂಡ ಧೂಳಿನಿಂದಾಗಿ ಆಘ್ರಾಣಿಸಲು ಬಾರದಂತಾಯಿತು. ಈ ರೀತಿಯಾದ ಹೊಸ ಪರಿಮಳದಿಂದಾಗಿ ನರ್ತಿಸುತ್ತ, ಸಂತೋಷಗೊಂಡ ಭ್ರಮರಗಳು ಸಾವಕಾಶವಾಗಿ ಹಾರಾಡುತ್ತಿದ್ದವು.

೨೧. ನರಪಾಲಕನಂದನೋ ರಿಪೂಣಾಂ
ನಗರೀರೇಷ ಗರೀಯಸೀವಿತೀರ್ಯ |
ಪರಿತೋಷಯಿತಾ ಮಮೇತಿ ನೂನಂ
ಪ್ರನನರ್ತ ಜ್ವಲನಃ ಪ್ರದಕ್ಷಿಣಾರ್ಚಿಃ ||

ಈ ರಾಜಕುಮಾರನು ಬೃಹತ್ತಾದ ಶತ್ರುಗಳ ನಗರಗಳನ್ನು ನನಗೆ ಕೊಟ್ಟು ನನ್ನನ್ನು ಪೋಷಿಸುವನು ಎಂದು ಅಗ್ನಿಯು ಅಲ್ಲಲ್ಲಿ ಸುತ್ತುವರೆಯುತ್ತ ನಿಜವಾಗಿಯೂ ವಿಜೃಂಭಿಸುತ್ತಿದ್ದನು. [ಖಾಂಡವವನ ದಹಿಸಲು ಅರ್ಜುನನು ಅನುವುಮಾಡಿಕೊಟ್ಟ ಬಗೆ ಇಲ್ಲಿ ಉಲ್ಲೇಖನೀಯವಾಗಿದೆ]

೨೨. ಅಚಿರೇಣ ದಿಶಾಮಮುಷ್ಯ ಜೇತುಃ
ಕಮಲಾಂ ಕಲ್ಪಿತವಿಭ್ರಮಾಂ ಕಟಾಕ್ಷ್ಯೇ |
ಅಪಿ ಕಲ್ಪತರುಂ ಕರೇsಕ್ಷಿಲಕ್ಷ್ಯಂ
ಕರವಾಣೀತಿ ಕಿಮಂಬುಧಿರ್ಜಜೃಂಭೇ ||

ಯಾವುದೇ ವಿಳಂಬವಿಲ್ಲದೇ ಎಲ್ಲ ದಿಕ್ಕುಗಳನ್ನು ಗೆದ್ದು, ದಿಗ್ವಿಜಯಮಾಡಿ ರಾಜಕುಮಾರನ ಕಣ್ಣಂಚಿನಲ್ಲಿ ಲಕ್ಷ್ಮಿಯನ್ನು ಕಲ್ಪಿಸಿ ವಿಲಾಸವಿಟ್ಟು ಕೈಯಲ್ಲಿ ಕಲ್ಪತರುವನ್ನು ನೋಡುವಂತೆ ಮಾಡಿದ ಸಮುದ್ರವು ವಿಜೃಂಭಿಸುತ್ತಿತ್ತು. ಅಂದರೆ ಕಲ್ಪವೃಕ್ಷವನ್ನು ಕೇಳುವುದಷ್ಟೇ ಅಲ್ಲದೇ ರಾಜಕುಮಾರನ ಕೈಯಲ್ಲಿ ನೋಡಲು ಸಾಧ್ಯವಿತ್ತು ಎಂಬುದು ಭಾವ.

೨೩. ನಿಖಿಲೋsಪಿ ಪರಿಷ್ಕ್ರಿಯಾಕಲಾಪೋ
ಜಗೃಹೇsತಃ ಪುರಚಾರಿಣಾ ಜನೇನ |
ತನಯೋದಯಶಂಸಿನಾ ತದಾನೀಂ
ಪುಲಕಾಃ ಪುಸ್ಫುರುರಸ್ಯ ಭೂಷಣಾನಿ ||

ಆ ನಂತರ ರಾಜಕುಮಾರನು ಹುಟ್ಟಿದ ವಿಷಯದಿಂದ ಅಂತಃಪುರದಲ್ಲಿ ಪರಿಚಾರಿಕೆಯರು ಎಲ್ಲ ಬಗೆಯ ಆಭರಣಗಳ ರಾಶಿಯನ್ನು ಹಿಡಿದು ರೋಮಾಂಚನದಿಂದ ಸ್ತಬ್ಧಗೊಂಡರು.

೨೪. ಅಧಿಗಮ್ಯ ಗಿರಾಮತೀತಮೂಲ್ಯಾಂ
ಶೃತಿಭೂಷಾಂ ಸುತಜನ್ಮಸೂಚಕಸ್ಯ |
ಪ್ರವಿತೀರ್ಣಪರಿಷ್ಕ್ರಿಯಾ ವಿಶೇಷೋ
sಪ್ಯಯಮಾತ್ಮಾನಮಮನ್ಯತಾಧಮರ್ಣಮ್ ||

ನೃಸಿಂಹರಾಜನು ರಾಜಕುಮಾರನು ಹುಟ್ಟಿದ ಸುದ್ದಿಯನ್ನು ತಿಳಿಸಿದವರಿಗೆ ಅಮೂಲ್ಯವಾದ ಕರ್ಣಾಭರಣವನ್ನು ಕೊಟ್ಟನು. ಆಭರಣವನ್ನು ಕೊಡುವುದರ ಮೂಲಕ ಋಣವನ್ನು ತೀರಿಸಿದೆ ಎಂದು ತಿಳಿಸಿದನು.

೨೫. ವಿಹಿತಸ್ನಪನೋ ವಿಶಾಮಧೀಶೋ
ವಸನೇ ಹಂಸವಿಚಿತ್ರಿತೇ ವಸಾನಃ |
ಅವಲೋಕಿತುಮರ್ಭಕಂ ಪ್ರಮೋದಾ
ದವಕೃಷ್ಟಃ ಪ್ರಯಯಾವರಿಷ್ಟಗೇಹಮ್ ||

ನೃಸಿಂಹರಾಜನು ಸ್ನಾನವನ್ನು ಮಾಡಿ, ಹಂಸಾಕಾರದ ಚಿಹ್ನೆಯಿಂದ ಚಿತ್ರಿತವಾದ ವಸ್ತ್ರವನ್ನು ಧರಿಸಿ ಮಗುವನ್ನು ನೋಡಲು ಸಂತೋಷಭರಿತನಾಗಿ ಸೂತಿಕಾಗೃಹವನ್ನು ಪ್ರವೇಶಿಸಿದನು.

೨೬. ಅಮುಮರ್ಭಕಮಂಕಸೀಮ್ನಿ ಧಾತ್ರ್ಯಾಃ
ಶಯಿತಂ ಸಾತಿಶಯಶ್ರೀಯಂ ಪಶ್ಯನ್ |
ವಿಭವೇನ ವಿಡೌಜಸೋsನುಕುರ್ವ
ನ್ನಪಿ ನೇತ್ರೈರನುಕರ್ತುಮಾದೃತೋsಭೂತ್ ||

ಐಶ್ವರ್ಯದಿಂದ ಇಂದ್ರನನ್ನು ಸರಿತೂಗುವ ನೃಸಿಂಹರಾಜನು ದಾದಿಯ ತೊಡೆಯಲ್ಲಿ ಮಲಗಿರುವ ಶೋಭಾಯಮಾನವಾದ ಆ ಮಗುವನ್ನು ನೋಡಿ ಕಣ್ಣುಗಳನ್ನು ಅಲುಗಾಡಿಸದಂತೆ ನಿಂತನು.

೨೭. ಪರಿವರ್ಧ್ಯ ಜಾತಕರ್ಮಣಾ ತಂ
ಪರಿಣೇತಾ ಧರಣೀಃ ಪ್ರಮೋದಮಾನ್ಃ |
ವಸುಧಾವಿಬುಧಾನ್ವಸುಪ್ರಕರ್ಷೇ
ರ್ಬಹುಧಾನಂದಧುರಂಧರಾನತಾನೀತ್ ||

ಭೂಮಿಯ ನಾಯಕನಾದ ರಾಜನು ಸಂತೋಷಗೊಂಡು ಆ ಮಗುವಿನ ಜಾತಕರ್ಮ ಸಂಸ್ಕಾರಗಳಿಂದ ಮಗುವಿನ ಅಭಿವೃದ್ದಿಗೆ ಕಾರಣನಾದವನು. ಬ್ರಾಹ್ಮಣರನ್ನು ದಾನಧರ್ಮಗಳಿಂದ ಸಂತೋಷಪಡಿಸಿದನು.

೨೮. ಚರಣೇನ ಸಮೇತ್ಯ ಶಂಖಪದ್ಮೌ
ಮಕರಾಂಕೇನ ಮನೀಷಿಣಾಂ ನಿಧಾನೇ |
ಉದಿತೇ ತನಯೇ ತದಾ ಪಿತೃಣಾ
ಮೃಣಮುರ್ವೀರಮಣಸ್ಯ ರೀಣಮಾಸೀತ್ ||

ಶಂಖಪದ್ಮಗಳಿಂದ ರೇಖೆಗಳನ್ನು ಹೊಂದಿದ ಮೀನಿನ ರೇಖೆಯನ್ನು ಹೊಂದಿರುವ ಪಾದಗಳಿರುವ ಪುತ್ರನೆಂದು ಋಷಿಗಳಿಂದ ತಿಳಿದು ರಾಜನ ಪಿತೃಋಣವು ತೀರಿಹೋಯಿತು. ಪುತ್ರಸಂತಾನದಿಂದ ಪಿತೃಗಳಿಗೆ ಮೋಕ್ಷ ಸಿಗುತ್ತದೆಂಬುದು ಪುರಾಣ ಪ್ರಸಿದ್ಧವಾದುದು. ಯಾಗದಿಂದ ದೇವರ, ದಾನಧರ್ಮಗಳಿಂದ ಋಷಿಗಳ, ಸಂತತಿಯಿಂದ ಪಿತೃಗಳ ಋಣವು ತೀರುತ್ತದೆ ಎಂಬುದು ಲೋಕನಿಯಮ.

೨೯. ಕಮಲಾಕರಪೀಡನಕ್ಷಮೇsಃಸ್ಮಿ
ನ್ನುದಿತೇ ರಾಜಶಿಶು ಮುದೇ ಜಗತ್ಯಾಃ |
ಶಿಥಿಲಾಜನಿ ಸಾಗಸಾಂ ನೃಪಾಣಾಂ
ಚಿರಕಾರಾಸದನಾಂಧಕಾರ ಪೀಡಾ ||

ಲಕ್ಷ್ಮಿಯ ಪಾಣಿಗ್ರಹಣ ಮಾಡಿದ್ದರಿಂದ ರಾಜ್ಯದಲ್ಲಿ ಕ್ಷೇಮವಿತ್ತು. ಅರ್ಥಾತ್ ಸಂಪದ್ಭರಿತ ರಾಜ್ಯದಲ್ಲಿ ಕ್ಷೇಮವೂ ಇತ್ತು. ಅಂತಹ ಜಗತ್ತಿನಲ್ಲಿ ರಾಜಕುಮಾರನು ಹುಟ್ಟಲು ಅಂದರೆ ಅವನು ಹುಟ್ಟಿದ ಸಮಾಚಾರದಿಂದ ಅಪರಾಧಿಗಳ ಕಾರಾಗೃಹವಾಸ ಅಂಧಕಾರವು ತೊಲಗಿ ಉಪದ್ರವು ಕರಗಿ ಹೋಯಿತು. ಹೇಗೆ ಪದ್ಮ ಸರಸ್ಸಿನಿಂದ ಲಕ್ಷ್ಮಿಯ ಜೊತೆಗೆ ಚಂದ್ರನು ಹುಟ್ಟಿ ಅಂಧಕಾರವನ್ನು ತೊಲಗಿಸಿದನೋ ಹಾಗೆ. [ರಾಜನ ಅಭ್ಯುದಯ ಕಾಲಕ್ಕೆ ಬಂಧಿಗಳನ್ನು ಬಿಡುಗಡೆ ಮಾಡುವುದು ಆಚಾರ]

೩೦. ಪರಂ ಪ್ರಭಯಾ ನರೇಂದ್ರಸೂನೋ
ರಭಿಭೂತಾರ್ಚಿರರಿಷ್ಟದೀಪಿಕಾಸೀತ್ |
ಪರಿಪಂಥಿವಸುಂಧರಾಪತೀನಾಂ
ಹರಿದಂತೇಷ್ಟಪಿ ಪ್ರತಾಪದೀಪಃ ||

ರಾಜಕುಮಾರನ ಕಾಂತಿಯಿಂದ ಸೂತಿಕಾಗೃಹದಲ್ಲಿ ಬೆಳಗುವ ದೀಪಗಳೆಲ್ಲ ಕಳಾಹೀನಗೊಂಡವು. ಅದರಂತೆ ದಿಕ್ಕುದಿಕ್ಕುಗಳಲ್ಲಿ ಶತ್ರುರಾಜರುಗಳು ಇವನ ಸಾಮರ್ಥ್ಯದ ಬೆಳಕಿನಿಂದಾಗಿ ತಿರಸ್ಕೃತಗೊಂಡರು.

೩೧. ಮಣಿಮಂಚಸಮಂಚಿತೋಥ ಧಾತ್ರ್ಯಾ
ಮಧುರಾಲೋಲಿಕಯಾಜನಿಷ್ಟ ಹೃಷ್ಟಃ |
ನಿನದೈರಿವ ನಿಮ್ನಗಾಲಹರ್ಯಾಃ
ಕಲಹಂಸಃ ಕಮಲಾಂತರಾಲಶಾಯೀ ||

ರತ್ನದ ತೂಗುಮಂಚದಲ್ಲಿ ಮಲಗಿದ ರಾಜಕುಮಾರನು ಸೇವಕಿಯು ಮೃದುವಾಗಿ ತೂಗುತ್ತಿರುವುದರಿಂದಾಗಿ, ನದಿಯ ಅಲೆಗಳಿಂದ ಕೂಡಿದ ಕಮಲದ ಮಧ್ಯದಲ್ಲಿ ಮಲಗಿದ ಕಲಹಂಸದಂತೆ ಸಂತೋಷ ಹೊಂದಿದನು.

೩೨. ನಯತೋ ಕದಾಚನ ಚ್ಯುತಃ ಸ್ಯಾ
ದವತೀರ್ಣಃ ಸ್ವಯಮಚ್ಯುತೋsಯಮುರ್ವಾಮ್ |
ಇತಿ ಶೋಭನಲಕ್ಷಣೈಃ ಜಾನ
ನ್ನಕರೋದಾತ್ಮಜಮಚ್ಯುತಾಭಿಧಾನಮ್ ||

ಈ ಕುಮಾರನು ಎಂದಿಗೂ ಭೃಷ್ಟತೆಯನ್ನು ತರಲಿಲ್ಲವಾದ್ದರಿಂದ ಅಲ್ಲದೆ ಭೂಮಿಯಲ್ಲಿ ಸಾಕ್ಷಾತ್ ಅಚ್ಯುತ ವಿಷ್ಣು ಸ್ವರೂಪದಿಂದ ಶುಭಲಕ್ಷಣಗಳನ್ನು ಹೊಂದಿರುವದರಿಂದ ನೃಸಿಂಹರಾಜನು ತನ್ನ ಮಗನಿಗೆ ಅಚ್ಯುತನೆಂದು ನಾಮಕರಣ ಮಾಡಿದನು.

೩೩. ಅಧಿಮಂಚಮನುಕ್ಷಣಂ ಜಿಧೃಕ್ಷುಃ
ಕುರುವಿಂದಸ್ತಬಕಂ ಕುತೂಹಲೇನ |
ಸಮನಹ್ಯದಯಂ ಯಥೋದಯಾದ್ರೇ
ಸ್ತಟಶಾಯೀ ತಪನಂ ಮೃಗೇಂದ್ರಶಾಬಃ ||

ಈ ರಾಜಕುಮಾರನು ಕುತೂಹಲದಿಂದ ಮಂಚದ ಮೇಲೆ ಕಟ್ಟಿರುವ ಮಾಣಿಕ್ಯದ ಗುಚ್ಛವನ್ನು, ಉದಯಪರ್ವತದ ತುದಿಯಲ್ಲಿ ಮಲಗಿರುವ ಸಿಂಹಶಿಶುವು ಸೂರ್ಯನನ್ನು ಹಿಡಿಯಲು ಬಯಸುವಂತೆ, ಆ ಮಾಣಿಕ್ಯಗುಚ್ಛವನ್ನು ಹಿಡಿಯಲು ಉತ್ಸಾಹಿತನಾಗಿದ್ದನು.

೩೪. ಉದಯಾರುಣಮೂರ್ತಿರೋಷಧೀಶೋ
ನಿಯತಂ ವಂಶಭುವೋ ನೃಸಿಂಹಸೂನೋಃ |
ವ್ಯರುಚದ್ವ್ಯಪದಿಶ್ಯ ರತ್ನಗುಚ್ಛಂ
ಶಯನಸ್ಯೋಪರಿ ಸಂತತಾವನಾಯ ||

ಉದಯಕಾಲದಲ್ಲಿ ಅರುಣರಾಗದಿಂದ ಹೊಂಬಣ್ಣದಿಂದ ಮೂಡಣವು ಕೂಡಿರಲು ಚಂದ್ರನು ತನ್ನ ವಂಶಜನಾದ ನೃಸಿಂಭೂಪಾಲನ ಸಂತತಿಯ ರಕ್ಷಣೆಗಾಗಿ ಮಂಚದ ಮೇಲಿನ ರತ್ನಗುಚ್ಛದಲ್ಲಿ ನೆಪಕ್ಕಾಗಿಯೋ ಎಂಬಂತೆ ಶೋಭಿಸಿದನು.

೩೫. ವಲಮಾನಲಲಂತಿಕಾವಿಭೂಷಾ
ವಹಮಾನದ್ಯುತಿವರ್ಧಿತಾಭಿರೂಪ್ಯಮ್ |
ಅವಲೀಢ ಸುಧಾಂಶುಲೀಲಮಾಸೀ
ದನಿದಾನಸ್ಮಿತಮಾನನಂ ತದಿಯಮ್ ||

ಚಲಿಸುತ್ತಿರುವ ಅಲುಗಾಡುತ್ತಿರುವ ಕಂಠಾಭರಣವನ್ನು ಧರಿಸಿ ಕಾಂತಿಯಿಂದ ಕಂಗೊಳಿಸುವ, ಯಾವುದೇ ನಿಮಿತ್ತವಿಲ್ಲದೆ ಮಂಹಾಸ ಬೀರುವ ಮುಖವನ್ನು ಹೊಂದಿ, ಚಂದ್ರನ ವಿಲಾಸದಂತೆ ಅಥವಾ ಚಂದ್ರನಂತಿದ್ದನು.

೨೬. ಅವಲಂಬತಯಾ ಸ್ಥಿತೋsಪಿ ಧಾತ್ರ್ಯಾಃ
ಕರಮಾಲಂಬ್ಯ ಕಾನಿಚಿತ್ಪದಾನಿ |
ಮಣಿನೂಪುರಶಿಂಜಿತೇನ ಕಿಂಚಿ
ತ್ಯೃತಸಂಖ್ಯಾನಿ ಕಿಲಾಂಕಣೇ ವ್ಯತಾನೀತ್ ||

ಆ ರಾಜಕುಮಾರನು ಭೂಮಿಯ ಆಧಾರದಿಂದ ನಿಂತರೂ ಕೂಡ ದಾದಿಯ ಕೈಯನ್ನು ಹಿಡಿದುಕೊಂಡು ರತ್ನಮಯ ಗೆಜ್ಜೆಯ ಶಬ್ದದಿಂದ ಒಂದೊಂದೇ ಹೆಜ್ಜೆ ಎಣಿಸುವಂತೆ ಪಾದಗಳನ್ನು ಇಟ್ಟು ಅಂಗಳದಲ್ಲಿ ಮೆಲ್ಲ ಮೆಲ್ಲನೆ ಓಡಾಡುತ್ತಿದ್ದನು.