೨೪. ನಿಜೇನ ದೋಷ್ಣಾ ನಿಖಿಲಾಂ ಧರಿತ್ರೀ
ಮಸ್ಮಿನ್ವಹತ್ಯಂಗದನಿರ್ವಿಶೇಷಮ್ |
ತದ್ಯುಕ್ತಮೀಶೇನ ತದೋರಗಾಣಾಂ
ಕುಲೋದ್ವಹಃ ಕುಂಡಲಿತೋ ಯದಾಸೀತ್ ||

ಈ ತಿಮ್ಮ ಭೂಪಾಲನು ತನ್ನ ಭುಜಬಲ ಸಾಮರ್ಥ್ಯದಿಂದ ಸಮಸ್ತವಾದ ಭೂಮಿಯನ್ನು ಒಂದಂಗುಲ ಬಿಡದೇ ವಶಪಡಿಸಿಕೊಂಡನು. ಹೇಗೆಂದರೆ ಪರಮೇಶ್ವರನಿಂದ ಸರ್ಪಗಳ ಶ್ರೇಷ್ಠನಾದ ಆದಿಶೇಷನು ಕುಂಡಲನವೆಂಬ ಚಿಹ್ನೆವಿಶೇಷವನ್ನು ಪಡೆದುಕೊಂಡಂತೆ ಪಡೆದುಕೊಂಡನು.

೨೫. ಪ್ರತೀಕ್ಷಮಾಪಾವಲಿ ಪರ್ಯಟಂತ್ಯಾ
ವೀ
ರಶ್ರೀಯೋ ವಿಶ್ರಮಹೇತುಬಾಹುಃ |
ಶ್ರೀ ತಿಮ್ಮಭೂಪಾಜ್ಜಿತಭೂಸ್ತತೋsಭೂ
ದ್ಯಶೋಧನಾದೀಶ್ವರಭೂಮಿಪಾಲಃ ||

ತಿಮ್ಮರಾಜನ ನಂತರ ವೈರಿರಾಜ ಸಮೂಹವನ್ನು ಪರ್ಯಟನಗೈದು ನಾಶಪಡಿಸಿದ, ತನ್ನ ಬಾಹುಬಲದಿಂದ ವೀರಲಕ್ಷ್ಮಿಗೆ ಆವಾಸಸ್ಥಾನನೆನಿಸಿರುವ, ವೀರಶ್ರೀಯು ಇವನ ತೋಳಿನ ಆಸರೆ ಬಯಸುವಂತಹ, ಯಶೋಧನನಾದ ಈಶ್ವರನೆಂಬ ರಾಜನು ಇದ್ದನು.

೨೬. ವೃಷಾಂಕಯೋರೀಶ್ವರಯೋರ್ವಿಭೂತಿ
ಮುಪೇಯುಷೋರೇಷ ಪರಂ ವಿಶೇಷಃ |
ರಾಜ್ಯೋತ್ತಮಾಂಗೇ ರಚಿತಾಂಘ್ರಿರೇಕ
ಸ್ತತ್ಪಾದಧನ್ಯಸ್ವಶಿರಾ ಯದನ್ಯಃ ||

ರಾಜನಾದ ಈಶ್ವರನು ಧರ್ಮವನ್ನು ಚಿಹ್ನೆಯಾಗಿ ಹೊಂದಿ, ಐಶ್ವರ್ಯದಿಂದ ಸಂಪದ್ಭರಿತನಾಗಿ, ಇನ್ನುಳಿದ ರಾಜರ ತಲೆಯ ಮೇಲೆ ಪಾದವಿಡುವನು. ಆದರೆ ಪರಮೇಶ್ವರನು ವೃಷಭಾಂಕನಾಗಿ, ಭಸ್ಮಧಾರಿಯಾಗಿ, ಚಂದ್ರನ ಕಿರಣಗಳನ್ನು ತಲೆಯಲ್ಲಿ ಧರಿಸುವನು.

೨೭. ಕ್ರಮಾದ್ಭೂತಾಮಥ ಬುಕ್ಕಮಾಯಾಂ
ನೃಸಿಂಹತಿಮ್ಮಕ್ಷಿತಿಪಾಲಸಿಂಹೌ |
ಪ್ರತೀಕವಂತಾವಿವ ದೋಃ ಪ್ರತಾಪ
ಯಶೋಗುಣಾವೀಶ್ವರಭೂವಲಾರೇಃ ||

ಈಶ್ವರ ರಾಜನ ಎರಡು ಪರಾಕ್ರಮಗಳಾದ ಭುಜಬಲ ಮತ್ತು ಯಶೋಗುಣಗಳನ್ನು ಪ್ರತೀಕವಾಗಿ ಹೊಂದಿರುವ ನೃಸಿಂಹ ಮತ್ತು ತಿಮ್ಮ ಎಂಬ ರಾಜಶ್ರೇಷ್ಠರುಗಳು ಬುಕ್ಕಮಾಂಬೆಯಲ್ಲಿ ಕ್ರಮವಾಗಿ ಜನಿಸಿದರು.

೨೮. ಆರಭ್ಯ ಬಾಲ್ಯಾದಜನಿ ಪ್ರಜಾನಾ
ಮಾನಂದ ಹೇತುರ್ನರಸಾವನೀಂದ್ರಃ |
ಪ್ರೌಢೋsರ್ಭಕೋ ವಾ ಪತಿರುತ್ಪಾಲಿನ್ಯಾಃ
ಪ್ರಮೋದನತ್ವೇ ಪರಿಹೀಯತೇ ಕಿಮ್ ||

ನೃಸಿಂಹರಾಜನು ಬಾಲ್ಯದಿಂದಲೇ ಪ್ರಜೆಗಳ ಆನಂದಕ್ಕೆ ಕಾಣನಾಗಿದ್ದನು. ಪ್ರೌಢನಾಗಲಿ ಅಥವಾ ಬಾಲಕನಿರಲಿ ಚಂದ್ರನು ಕಮಲಗಳ ಸಂತೋಷಕ್ಕೆ ಕಾರಣನಾಗುವಂತೆ ಇವನು ಕಾರಣನಾಗುವನು. ಕಳೆಗುಂದುವ ಕಾರಣವೇ ಇಲ್ಲ.

೨೯. ಮಹೀಪತಿರ್ಮಾನವನಾಮ ದುರ್ಗಂ
ಶಕಾಧಿನಾಥೇನ ಸಮಂ ಗೃಹೀತ್ವಾ |
ಸ್ಫುಟೀಚರಾರಸ್ಯ ಪುನರ್ವಿತೀರ್ಯ
ಶೌರ್ಯಂ ತಥೌದಾರ್ಯಮವಾರ್ಯ ||

ನೃಸಿಂಹ ಭೂಪತಿಯು ಮಾನವ ಎಂಬ ದುರ್ಗವನ್ನು ಶಕರಾಜನಿಂದ ವಶಪಡಿಸಿಕೊಂಡು ಸೌಹಾರ್ದಯುತ ಸಂಬಂಧ ಸ್ಥಾಪನೆಗೋಸ್ಕರ ಪುನಃ ಕೊಟ್ಟು ಪ್ರತಿಬಂಧವಿಲ್ಲದ ಪರಾಕ್ರಮ ಸಂಕೇತವಾಗಿ ಶೌರ್ಯವನ್ನು ಮತ್ತು ಔದಾರ್ಯವನ್ನು ಏಕಾಕಾಲಕ್ಕೆ ವ್ಯಕ್ತಗೊಳಿಸಿದನು.

೩೦. ಪ್ರಾಯೋsರ್ಣವೇ ಸೇತುಕೃತೋsವತಾರಃ
ಪ್ರಾಗ್ಜನ್ಮಸಂಸ್ಕಾರವಶಾದಿವೈಷಃ |
ಸೇತುಂ ವಿಧಾಯಾಂಭಸಿ ಸಹ್ಯಜಾಯಾಃ
ಶ್ರೀರಂಗಪೂರ್ವಂ ನಗರೀಂ ಜಹಾರ ||

ಬಹುಶಃ ನೃಸಿಂಹರಾಜನು ಸಮುದ್ರದಲ್ಲಿ ಸೇತುನಿರ್ಮಾಣ ಮಾಡಿದ ಶ್ರೀರಾಮಚಂದ್ರನ ಅವತಾರವಾಗಿರುವ ಪೂರ್ವಜನ್ಮಸಂಸ್ಕಾರ ವಿಶೇಷದಿಂದ ಕಾವೇರಿ ನದಿಗೆ ಸೇತುವೆಯನ್ನು ನಿರ್ಮಿಸಿ ಶ್ರೀರಂಗಂ ಪೂರ್ವಕ್ಕಿರುವ ನಗರವನ್ನು ವಶಪಡಿಸಿಕೊಂಡನು.

೩೧. ಕಂಸಂ ಯಥಾ ಕೈಟಭಜಿದ್ಬಲೇನ
ಸಮನ್ವಿತಃ ಸೈನಿಕಮಲ್ಲಹಂತಾ |
ಮದಪ್ರವೃತ್ತಂ ಮರವಂ ಮಥಿತ್ವಾ
ಮಹೀಮಹೇಂದ್ರೇ ಮಧುರಾಮಹಾರ್ಷಿತ್ ||

ಬಲರಾಮನಿಂದ ಸಹಿತವಾಗಿ ಅತಿರಥ ಮಹಾರಥರನ್ನೆಲ್ಲಾ ಕೊಂದು, ಸೇನಾಮಲ್ಲನಾದ ಚಾಣೂರನನ್ನು ಕೊಂದು, ಕೃಷ್ಣನು ಕಂಸನನ್ನು ಹೇಗೆ ಕೊಂದನೋ ಹಾಗೆ ನೃಸಿಂಹರಾಜನು ಸೈನ್ಯ ಸಮೇತನಾಗಿ ಮದೋನ್ಮತ್ತನಾದ ಮರವ ಜಾತಿಯ ರಾಜನನ್ನು ಕೊಂದು ಪಾಂಡ್ಯರ ರಾಜಧಾನಿಯಾದ ದಕ್ಷಿಣದೇಶದ ಮಧುರೈ ನಗರವನ್ನು ವಶಪಡಿಸಿಕೊಂಡನು.

೩೨. ಮಹೇಂದ್ರಲೋಕಂ ಮರವಾಯ ದತ್ವಾ
ಮಧ್ಯೇಸಮೀಕಂ ಮಧುರಾಂ ಜಹ್ನೇ |
ಮಹೀಯಸಾಮೇಷ ಮಹೀಪತೀನಾಂ
ನಯೋ ವಿಪಕ್ಷೇಷ್ವಪಿ ನಾನ್ಯಥಾ ಸ್ಯಾತ್ ||

ನೃಸಿಂಹ ಭೂಪತಿಯು ಯುದ್ಧಮಧ್ಯದಲ್ಲಿ ಮರವ ರಾಜನಿಗೆ ಸ್ವರ್ಗವನ್ನು ಕೊಟ್ಟು/ಕೊಂದು ಮಧುರಾನಗರವನ್ನು ವಶಪಡಿಸಿಕೊಂಡನು. ಶ್ರೇಷ್ಠವಾದ ರಾಜರುಗಳು ಸ್ವಲ್ಪವನ್ನು ಸ್ವೀಕರಿಸಿ ಅಧಿಕವಾದುದನ್ನು ಕೊಡುವ ತೆರದಲ್ಲಿ [ರೂಢಿಯಂತೆ ಯುದ್ಧದಲ್ಲಿ ಮರಣಹೊಂದಿದರೆ ಸ್ವರ್ಗ ಪ್ರಾಪ್ತಿ ಎಂಬುದು ಉಲ್ಲೇಖನೀಯ]

೩೩. ಕ್ರುಧಾಪತಂತಂ ಸಹ ಕುಂಜರೌಘೈಃ
ಕೋನೇಟಿರಾಜಂ ಕ್ಷುಭಿತಾನ್ಯಸೈನ್ಯಃ |
ಜಗ್ರಾಹ ಪಾಣೌ ಜಗದೇಕವೀರೋ
ಜಯಾಬ್ಧಿಕನ್ಯಾಮಪಿ ಜನ್ಯಭೂಮೌ ||

ಲೋಕೈಕ ಶೂರನಾದ ನೃಸಿಂಹರಾಜನು, ಕ್ಷೋಭೆಯಿಂದ ಶತ್ರುಸೈನ್ಯದೊಂದಿಗೆ, ಗಜ ಸಮೂಹಗಳೊಂದಿಗೆ ಕೋಪದಿಂದ ಯುದ್ಧಮಾಡಲು ಬಂದ ಕೊನೇಟಿ ಎಂಬ ರಾಜನನ್ನು ಸದೆಬಡಿದು ಜಯಲಕ್ಷ್ಮಿಯನ್ನು ಯುದ್ಧ ಭೂಮಿಯಲ್ಲಿ ಪಾಣಿಗ್ರಹಣ ಮಾಡಿದನು. ಇಲ್ಲವೇ ಯುದ್ಧಭೂಮಿಯಲ್ಲಿ ಪಲಾಯನಗೈಯುವ ರಾಜನನ್ನು ಬಂಧಿಸಿದನು.

೩೪. ಪ್ರಯಾಣಮಾಶಾವಿಜಯಾಯ ತಸ್ಯ
ಪ್ರಾಯೋ ಗೃಹಪ್ರಾಂಗಣ ಭೂವಿಹಾರ |
ದಾನಾನ್ಯಹೋ ಷೋಡಶ ವಿಶ್ರುತಾನಿ
ಜಾತಾನಿ ದೈನಂದಿನಮೇವ ಕೃತ್ಯಮ್ ||

ನೃಸಿಂಹರಾಜನು ದಿಗ್ವಿಜಯಕ್ಕಾಗಿ ನಾಲ್ಕು ದಿಕ್ಕಿನಲ್ಲೂ ಪ್ರಯಾಣಬೆಳೆಸಿದನು. ಅತ್ಯಂತ ಲೀಲಾಜಾಲವಾಗಿ ವಿಹಾರ ಮಾಡಿ ವಿಜಯಿಯಾದನು. ಈ ದಿಗ್ವಿಜಯದ ಕಾರಣದಿಂದಾಗಿ ಪ್ರಸಿದ್ಧವಾದ ೧೬ ದಾನಗಳನ್ನು ದೈನಂದಿನ ಕಾರ್ಯವಾಗಿ ಪೂರೈಸುತ್ತಿದ್ದನು. [ಈ ೧೬ ದಾನಗಳು ಈ ರೀತಿಯಾಗಿವೆ. ಭೂಮಿ, ಆಸನ, ಜಲ, ವಸ್ತ್ರ, ಅನ್ನ, ತಾಬೂಲ, ಛತ್ರ, ಗಂಧ, ಮಾಲೆ, ಫಲ, ಶಯ್ಯಾ, ಪಾದುಕ, ಗೋವು, ಕಾಂಚನ, ರಜತ]

೩೫. ತತ್ಸ್ವಾತಿ ವರ್ಷಿಣಿ ತಥಾ ಬುಧಾನಾಂ
ಪೂರ್ಣಾಸು ಜಾತಾ ಕರಶುಕ್ತಿಕಾಸು |
ಮುಕ್ತಾ ಯಶೋಮೂರ್ತಿಜುಷೋ ವಿಭೂಷಾಃ
ಕಂಠೇಷ್ವಭೂವನ್ಕಕುವಂಗನಾನಾಮ್ ||

ಸ್ವಾತಿ ನಕ್ಷತ್ರದ ಮಳೆಯಿಂದ ಚಿಪ್ಪುಗಳಲ್ಲಿ ಮುತ್ತುಗಳಾಗುವಂತೆ, ನೃಸಿಂಹರಾಜನ ಅತಿಶಯ ದಾನ ವರ್ಷಣದಿಂದ ವಿದ್ವಾಂಸರ ಕರ ಶುಕ್ತಿಗಳಲ್ಲಿ ಮುತ್ತುಗಳು ಉಂಟಾಗುತ್ತಿದ್ದವು. ತನ್ಮೂಲಕ ಕೀರ್ತಿರೂಪವೆಂಬ ಈ ಮುತ್ತುಗಳು ದಿಕ್‌ಸ್ತ್ರೀಯರ ಕೊರಳಲ್ಲಿ ಆಭರಣಗಳಾಗುತ್ತಿದ್ದವು.

೩೬. ಗೌರಿತ್ಯಟವ್ಯಾಂ ಗವಯಂ ಪ್ರಕಾಶ್ಯ
ಪಯಃ ಪ್ರದೋಹಂ ಪ್ರತಿಬಾಧ್ಯಮಾನಾಃ |
ಕೂಲಂಕಷಕ್ಷುತರಲೈಃ ಕುಮಾರೈ
ವ್ರೀಡಾಮವಾಪುರ್ವೀಮತ್ತಾಸ್ತದೀಯಾಃ ||

ಗೋವುಗಳಿರುವ ಅಡವಿಯಲ್ಲಿ ಗೋವುಗಳನ್ನು ತೋರಿಸಿ ಹಾಲನ್ನು ಕರೆಯಲು ಅಡ್ಡಿಪಡಿಸುವ ರೀತಿಯಲ್ಲಿ ನೃಸಿಂಹರಾಜನ ದಾಯಾದಿಗಳು, ಶತ್ರುಗಳು ಈ ರಾಜಕುಮಾರರಿಂದ ಸಮಾನವಾಗಿ ದುರವಸ್ಥೆ ಹೊಂದಿ ಪರಿಹಾಸ್ಯಕ್ಕೊಳಗಾದರು.

೩೭. ಪ್ರಯಾತುಮೇತತ್ಪ್ರತಿಭೂಪತೀನಾಂ
ಪ್ರಾಣಾನಿಲೋ ನಾಕ್ಷಮತಾಹವೇಷು |
ವ್ಯಲಂಬತೈಷಾಂ ವದನೇಷು ತೃಣ್ಯಾಂ
ವಿಲೋಕ್ಯ ಕಿಂ ವಾಹಮೃಗೋsದಸೀಯ ||

ಯುದ್ಧದಲ್ಲಿ ನೃಸಿಂಹರಾಜನ ಶತ್ರುಪಕ್ಷದವರು ಪ್ರಾಣವಾಯುವನ್ನು ಉಸಿರಾಡಲು ಶಕ್ಯರಾಗಲಿಲ್ಲ. ಸೇನಾನಾಯಕನ ಹಾಗೂ ಸೈನಿಕರ ಸ್ಥಿತಿಯು ಪ್ರತಿಬಂಧಿಸಲ್ಪಟ್ಟ ಹರಿಣವು ಹುಲ್ಲುಗಾವಲನ್ನು ನೋಡಿದೊಡನೆ ವಿಲಂಬ ಮಾಡದೇ ಓಡಿಹೋಗುವ ತೆರದಲ್ಲಿ ಇತ್ತು. ಯುದ್ಧದಲ್ಲಿ ಭಯಗೊಂಡ ರಾಜರುಗಳನ್ನು ನೃಸಿಂಹರಾಜನು ರಕ್ಷಿಸುತ್ತಿದ್ದನು.

೩೮. ಪ್ರಕಾಶಮಾನಾದಿಶಿ ತತ್ಪ್ರತಾಪಾ
ತ್ಪ್ರಾಯೇಣ ಲಬ್ಧ್ವಾ ಪರಿಭೂತಿತಾಪಮ್ |
ಪತಿಸ್ಥ್ವಿಷಾಂಪಂಕಜಕೋರಶೇಷಂ
ಕಾಲಂ ನಯತ್ಯೇಷ ಕರಂ ನಿಧಾಯ ||

ಸೂರ್ಯನು ಪೂರ್ವದಿಕ್ಕಿನಲ್ಲಿ ಬೆಳಗುತ್ತಿರುವಾಗ ನೃಸಿಂಹನ ಪ್ರತಾಪದಿಂದ ಪರಾಜಯ ಹೊಂದಿ, ಶೈತ್ಯೋಪಚಾರಕ್ಕಾಗಿ ಕಮಲದ ಮೊಗ್ಗುಗಳಲ್ಲಿ ತನ್ನ ಕಿರಣಗಳನ್ನು ಬಿಟ್ಟು ಕಾಲವನ್ನು ಕಳೆಯುತ್ತಿದ್ದನು.

೩೯. ವಸ್ವೋಕಸಾರೇವ ವಿಭೋರ್ವಸೂನಾಂ
ವಲಾಭಿಯಾತೇರಮರಾವತಿವ |
ವಿದ್ಯಾಪುರೀ ವಿಸ್ಮಯಾಭೂರಮುಷ್ಯ
ವಿಶಿಷ್ಯ ರಾಜ್ಞೋsಜನಿ ರಾಜಧಾನೀ ||

ವಿಶೇಷವಾಗಿ, ಆಶ್ಚರ್ಯಕರವಾದ ಸ್ಥಾನವೆನಿಸಿದ ರಾಜಧಾನಿ ವಿದ್ಯಾಪುರಿಯು ಧನಸಂಪತ್ತಿನಿಂದ ಕುಬೇರನ ಅಲಕಾಪುರಿಯಂತೆ, ಇಂದ್ರನ ಅಮರಾವತಿಯಂತೆ ಕಂಗೊಳಿಸುತ್ತಿತ್ತು.

೪೦. ಬಿಲೇಶಯೇಷಂ ಬಿಸಮಿತ್ಯವೇತ್ಯ
ಗೃಹ್ಣಂತಿ ಯತ್ಖೇಯಕೃತಾವಗಾಹಾಃ |
ಆಲೋಕ್ಯ ತನ್ಮೌಲಿಮಣೀನಲಾತ
ಮೋಹೇನ ಮುಂಚಂತಿ ಪುನರ್ಮದೇಭಾಃ ||

ಮದಗಜಗಳು ಸರ್ಪಗಳನ್ನು ತಾವರೆದಂಟುಗಳೆಂದು ತಿಳಿದು ಹಿಡಿದು ಮತ್ತೆ ನಂತರ ಸರ್ಪಗಳ ಹೆಡೆಯಲ್ಲಿರುವ ರತ್ನಗಳನ್ನು ನೋಡಿ, ಕೊಳ್ಳಿ, ಬೆಂಕಿ ಎಂಬ ಭ್ರಮೆಯಿಂದ ಬಿಡುವ ಹಾಗೆ ವಿದ್ಯಾಪರಿಯ ಪ್ರವೇಶವು ಕಠಿಣವಾಗಿತ್ತು.

೪೧. ಸುಧಾಭುಜೋ ಯತ್ಸದನಧ್ವಜೇಷು
ಸ್ವೈರಂ ನಭೋಲಂಘನಜಾಂಘಿಕೇಷು |
ಜಾನತೇ ನಂದನವಲ್ಲರೀಣಾ
ಮುಪಘೃವಿನ್ಯಾಸಭುವಃ ಪ್ರಯಾಸಾನ್ ||

ದೇವತೆಗಳು ಕೂಡ ವಿದ್ಯಾಪುರಿಯ ಮನೆಮುಂದಿನ ಪತಾಕೆಗಳು ಸ್ವೇಚ್ಛೆಯಿಂದ ಹಾರಾಡುತ್ತ ಆಕಾಶವನ್ನೂ ಲಂಘಿಸಲು ತುಸುದೂರ ಕ್ರಮಿಸುವುದನ್ನು, ನಂದನ್ಯೋದ್ಯಾನದ ಲತೆಗಳು ಆಶ್ರಯಿಸಿರುವ ವೃಕ್ಷಗಳ ಮೂಲವನ್ನು ಪ್ರಯಾಸದಿಂದ ತಿಳಿಯುವದಿಲ್ಲ.

೪೨. ಕಪೋಲಕಾಷಾತ್ಕರಿಣೋ ವಲಾರೇಃ
ಶ್ಲಥಾಸು ಯತ್ಸೌಧಮಣಿಚ್ಛಟಾಸು |
ಮದಾಂಬುದೇಖಾಜುಷಿ ತತ್ಪ್ರದೇಶೇ
ಮಗ್ನಾ ದ್ವಿರೇಫಾ ಮಣಯೋ ಭವಂತಿ ||

ಐರಾವತದ ಕಪೋಲಘರ್ಷಣದಿಂದ ಕೆಳಗೆ ಬಿದ್ದ ಮದಜಲಕಣಗಳನ್ನು ಹೊಂದುವ ಆಸೆಯಿಂದ ಬಂದ ಭ್ರಮರಗಳೇ ರತ್ನಗಳಾಗುತ್ತವೆ. ಇಂತಹ ರತ್ನಗಳನ್ನುಳ್ಳ ಮಣಿಮಯ ಅರಮನೆಗಳು ನಗರದಲ್ಲಿದ್ದವು.

೪೩. ಸಯತ್ನನಿರ್ಯತ್ನಗತಿರ್ಗವಾಕ್ಷ
ಮಾರ್ಗೇ ಯದುಚ್ಚೈರ್ಮಮಣಿಹರ್ಮ್ಯರುದ್ಧಃ |
ಪ್ರಾಯೇಣ ಪಕ್ಷದ್ವಿತಯೇ ಪ್ರವೃದ್ದಿ
ಪರಿಕ್ಷಯೌ ನಿಂದತಿ ನಂದತೀಂದುಃ ||

ಪ್ರಯತ್ನದಿಂದಲೇ ಕಿಟಕಿಮಾರ್ಗದಲ್ಲಿ ಬರುವ ಚಂದ್ರನು ಪ್ರಯಾಸದಿಂದ ಉನ್ನತವಾದ, ರತ್ನ ಖಚಿತವಾದ ಧನಿಕರ ಉಪ್ಪರಿಗೆಗಳಿಂದ ಪ್ರತಿಬಂಧಿಸಲ್ಪಡುತ್ತಾನೆ. ಪ್ರಾಯಶಃ ಶುಕ್ಲಪಕ್ಷದಲ್ಲಿ ವೃದ್ದಿಯನ್ನು, ಕೃಷ್ಣಪಕ್ಷದಲ್ಲಿ ಕ್ಷಯವನ್ನು ಹೊಂದುವನು. ಹೀಗೆ ವೃದ್ದಿಕ್ಷಯಗಳೆರಡನ್ನು ಪಡೆಯುವ ಚಂದ್ರನು ಕ್ಷಯವನ್ನು ನಿಂದಿಸುತ್ತಾನೆ. ಮತ್ತು ವೃದ್ದಿಯನ್ನು ಆನಂದಿಸುತ್ತಾನೆ.

೪೪. ಸೌಧಾಗ್ರಕೇಲ್ಯಾಂ ಯದಣೂದರೀಷು
ಶಾಖಾರ್ಪಿತಪ್ರಸ್ಮೃತಭೂಷಣಾಸು |
ಐಶ್ವರ್ಯವಂತಸ್ತರವಃ ಸುರಾಣಾ
ಮೌದಾರ್ಯಮಂದ್ರಾಂ ಧುವಮಾಶ್ರಯಂತೇ ||

ಕೃಶೋದರಿಯರು ಅರಮನೆಗಳ ಉಪ್ಪರಿಗೆಗಳ ಮೇಲೆ ವಿಹಾರ ಮಾಡುವ ಕಾಲದಲ್ಲಿ ಕೊಂಬೆಗಳ ಮೇಲೆ ಇಟ್ಟು ಮರೆತ ಆಭರಣಗಳಿಂದಾಗಿ ಆ ವೃಕ್ಷಗಳು ಸಮೃದ್ದಿಯ ಔದಾರ್ಯದ ಸಂಕೇತವಾದ ಕಲ್ಪವೃಕ್ಷದಂತೆ ಕಾಣಬರುತ್ತದೆ. [ಕಲ್ಪವೃಕ್ಷ ಬೇಡಿದ್ದನ್ನು ಕೊಡುತ್ತದೆ ಎಂಬುದು ಪುರಾಣ ಪ್ರಸಿದ್ಧ]

೪೫. ಮದಾವಲಾನಾಂ ಕಟಮಧ್ಯವಾಂತೈ
ರ್ಮದೈರ್ನದೀಮಾತೃಕತಾಂ ಪ್ರಯಾತಾ |
ಯನ್ನೇತುರುರ್ವೀಕಮಿತುರ್ಯಶೋಭಿ
ರಶೋಭಿ ಭೂರಾಶ್ರಿತಸಸ್ಯಲಾಸ್ಯಾ ||

ಮದಗಜಗಳ ಕಪೋಲ ಸ್ಥಳದಿಂದ ಬಿದ್ದ ಮದಜಲದಿಂದಾಗಿ ಜಲಸಮೃದ್ದಿಯಾಗಿರು, ಭೂಮಿಯಲ್ಲಿರುವ ಸಸ್ಯಗಳು ನರ್ತನದಿಂದ ಅಭಿವೃದ್ದಿಯನ್ನು ಸೂಚಿಸುತ್ತಿರುವ ಸ್ಥಾನದಲ್ಲಿ ನೃಸಿಂಹರಾಜನು ಯಶಸ್ಸಿನಿಂದ ಶೋಭಿಸುತ್ತಿದ್ದನು.

೪೬. ಮಖಾವತೀರ್ಣೀಷು ಮಹೀಸುರಾಣಾಂ
ಮರುತ್ಸು ಶೂನ್ಯಾ ನಗರೀ ಮಘೋನಃ |
ಪ್ರಜಾಸಮಾಜೈಃ ಪರಿಣಾಹಿಲಕ್ಷ್ಮ್ಯಾಃ
ಪ್ರಯಾತಿ ಯಸ್ಯಾ ಸಮಾನಕಕ್ಷ್ಯಾಮ್ ||

ದೇವತೆಗಳು, ಬ್ರಾಹ್ಮಣರುಗಳು ಯಾಗವನ್ನು ನೋಡಲು ಬಂದಿರುವದರಿಂದ ಶೂನ್ಯವಾಗಿರುವ ಇಂದ್ರನ ರಾಜಧಾನಿ ಅಮರಾವತಿಗೂ ಪ್ರಜಾಸಮೂಹದಿಂದ, ವಿಸ್ತಾರವಾದ, ಸಂಪತ್ತಿನಿಂದ ಕೂಡಿರುವ ವಿದ್ಯಾಪುರಿಗೂ ಎಂದೂ ಸಾದೃಶ್ಯವಾಗುವದಿಲ್ಲ.

೪೭. ಉಪರ್ಯಧಃ ಪುಷ್ಪಫಲೈರುದಗ್ರ
ಮುದ್ಯಾನಯಾಮೋದ್ಯ ದಿವಂ ಭುವಂ |
ಆವಾಲವಾರಿಣ್ಯನುಬಿಂಬದಂಭಾ
ದ್ರಸಾತಲಂ ರಂಜಯತೀವ ಯಸ್ಯಾಮ್ ||

ಯಾವ ಉದ್ಯಾನವು ಸಮೃದ್ದಿ ವೃಕ್ಷಗಳಿಂದ ಫಲಪುಷ್ಪಗಳಿಂದ ಶ್ಲಾಘ್ಯವಾಗಿದೆಯೋ, ಸ್ವರ್ಗದಲ್ಲೂ ಮತ್ತು ಭೂಮಿಗೂ ವಾಸಯೋಗ್ಯ ಆಹ್ಲಾದಕಾರಿಯೆನಿಸಿದೆಯೋ, ಪಾತಿಯ ನೀರಿನಲ್ಲಿ ಪಾತಳವು ಪ್ರತಿಬಿಂಬಗೊಂಡು ಸಂತೋಷಪಡುವದೋ ಅಂತಹ ನಗರ ಇದಾಗಿದೆ. [ಇಲ್ಲಿ ವೃಕ್ಷ ಎಂಬುದನ್ನು ನಗರಕ್ಕೆ ಸಮೀಕರಿಸಲಾಗಿದೆ]

೪೮. ವಿಯತ್ತರೂಣಾಂ ವ್ಯತಿಘಟ್ಟಿತಾಸು
ಶಾಖಾಂಚಲೈಃ ಸೌಧಪತಾಕಿಕಾಸು |
ಸೌಧರ್ಮ್ಯಭಾಜಾ ಶತಮನ್ಯುಪುರ್ಯಾ
ಸದಂಡಲಾಸ್ಯೆವ ಸಮೀಕ್ಷ್ಯತೇ ಯಾ ||

ಈ ನಗರದ ಅರಮನೆಗಳ ಉಪ್ಪರಿಗೆಗಳ ಮೇಲಿನ ಧ್ವಜದಂಜಗಳಿಗೆ ಹಾಗೂ ಕಲ್ಪವೃಕ್ಷದ ಕೊಂಬೆಗಳಿಗೆ ಒಂದಕ್ಕೊಂದು ಘರ್ಷಣೆ ಉಂಟಾಗುತ್ತಿತ್ತು. ಇಂತಹ ದಂಡ ಲಾಸ್ಯದೊಂದಿಗೆ ಅಲ್ಲಿ ಇಂದ್ರನ ನಗರದ ಸಾದೃಶ್ಯ ಉಂಟಾಗುತ್ತಿತ್ತು. ಇಲ್ಲಿ ಕೇವಲ ಸಾದೃಶ್ಯವಿಷ್ಟೇ ಅಲ್ಲ, ಪೈಪೋಟಿ ಇರುವದನ್ನು ವರ್ಣಿಸಲಾಗಿದೆ.

೪೯. ಪುಷೋತ್ಪಲೇಶಾವಪಿ ಪುಷ್ಪವಂತಾ
ವಿತೀವ ಯತ್ರೋಪವನೀ ಕೃತೇರ್ಷ್ಯಾ |
ಪ್ರವರ್ಧ್ಧ್ಯ ಚೈತದ್ರಿಪುಮಂತರಂಧಂ
ಪಾದಾರ್ಪಣಂ ಕ್ಷಮತೇ ತದೀಯಮ್ ||

ನಗರದ ಉದ್ಯಾವನದಲ್ಲಿ ಸೂರ್ಯಚಂದ್ರರಿಬ್ಬರೂ ಸಮೃದ್ಧರಾಗಿ, ಪರಸ್ಪರ ಈರ್ಷೆಯಿಂದ ಇದ್ದರೂ ತಮ್ಮ ಪ್ರದೇಶದಲ್ಲಿ ತಮ್ಮ ಶತ್ರುವಾದ ಕತ್ತಲೆಯನ್ನು ಬೆಳೆಯಲು ಅವಕಾಶ ಕೊಡದೆ ತಮ್ಮ ತಮ್ಮ ಕಿರಣಗಳಿಂದ ಪ್ರಕಾಶಿಸುತ್ತಿದ್ದರು.

೫೦. ಸ್ಪೃಶತ್ಯುದಸ್ತೇನ ವಿಧಾವುದಗ್ರಂ
ಪಾದೇನ ಯತ್ಸೌಧಪಿತಾಮಹಾಂಡಮ್ |
ಸಮಂತತಃ ಕಂದಲತೀಂದುಕಾಂತ
ನಿಷ್ಯಂದಸಂದೋಹನಿಭಾದ್ದ್ಯುಸಿಂಧುಃ ||

ಚಂದ್ರ ಪಸರಿಸಿದ ತನ್ನ ಕಿರಣದಿಂದಾಗಿ ಉನ್ನತವಾದ ಸೌಧಗಳನ್ನು ಏರಿ ತನ್ನ ಕಾಂತಿಯನ್ನು ಚೆಲ್ಲುತ್ತಾನೆ. ಇನ್ನೊಂದರ್ಥದಲ್ಲಿ ವಿಷ್ಣುವು ಪಸರಿಸಿದ ತನ್ನ ಪ್ರಭಾವದಿಂದಾಗಿ ಬಿಳಿನೊರೆಯುಳ್ಳ ಗಂಗೆಯನ್ನು ಹರಿಯಬಿಡುತ್ತಾನೆ ಎಂಬುದು ತಾತ್ಪರ್ಯ.

೫೧. ಅದ್ಯೈರಪಿ ಕ್ಷೋಣಿಪತಿ ಪ್ರಕಾಂಡೈ
ರಾಕಾಂಕ್ಷಣಿಂiಸ್ವಯಶೋವತಾರ |
ವಸನ್ ತನ್ಯಾಂ ವಸುಧಾಪತೀನಾಂ
ಕನ್ಯಾಮಣೀಃ ಕಾಶ್ಚನಪರ್ಯಣೈಷೀತ್ ||

ಪೂರ್ವಜರುಗಳಾದ ನಲ, ನಹುಷ, ರಾಮಾದಿ ರಾಜಶ್ರೇಷ್ಠರುಗಳ ಯಶಸ್ಸಿನ ನಿಜ ಅವತಾರ ಸ್ವರೂಪಿಯಾದ ಈ ನೃಸಿಂಹರಾಜನು ವಿದ್ಯಾಪುರಿಯಲ್ಲಿ ನೆಲೆಸಿರುವಾಗಲೇ ಕೆಲವು ರಾಜಕುಮಾರಿಯರನ್ನು ಮದುವೆಯಾದನು.

೫೨. ತಿಸ್ರೋ ನೃಪಸ್ಯೇತ್ಯಭವನ್ನಭೀಷ್ವಾ
ಸ್ತಿಪ್ಪಾಂಬಿಕಾ ತಾಸು ನಾಗಮಾಂಬಾ |
ಪತ್ವಾಭಿಷಿಕ್ತಾ ಪತಿದೇವತಾನಾ
ಮುತ್ತಂಸಭೂಷಾ ಮಣಿರೋಜಮಾಂಬಾ ||

ಮದುವೆಯಾದ ಅನೇಕ ರಾಜಕನ್ನಿಕೆಯರಲ್ಲಿ ತಿಪ್ಪಾಂಬಿಕಾ, ನಾಗಮಾಂಬಾ ಪಟ್ಟ ಮಹಿಷೆಯರಾಗಿ ಅಭಿಷಿಕ್ತರಾದರು. ಪತಿಯೇ ದೇವರೆಂದು ತಿಳಿದ ಆ ಪತಿವ್ರತೆಯರು ಶ್ರೇಷ್ಠ ಆಭರಣವಾದ ಚೂಡಾಮಣಿಯಂತಿದ್ದರು. ಓಬಮ್ಮಾಂಬೆ ಎಂಬ ಮೂರನೆಯವಳು ರಾಜನಿಗೆ ಪ್ರೀತಿಪಾತ್ರಳಾಗಿದ್ದಳು.

೫೩. ತಿಪ್ಪಾಂಬಿಕಾಯಾಂ ದ್ವಿಜಸಂಪದೇsಭೂ
ದ್ವಿಖ್ಯಾತಿಮಾನ್ವೀರ ನೃಸಿಂಹರಾಯಃ |
ನಾಗಾಂಬಿಕಾಯಾಂ ನರಸಾವನೀಂದೋ
ಕೀರ್ತ್ಯಾಕರೋsಜಾಯತ ಕೃಷ್ಣರಾಯಃ ||

ನೃಸಿಂಹರಾಜನಿಗೆ ಬ್ರಾಹ್ಮಣರ ಸಂಪದರ್ಥವಾಗಿ ಅಂದರೆ ದಾನ ಧರ್ಮಗಳ ಪುಣ್ಯಫಲವಾಗಿ ತಿಪ್ಪಾಂಬಿಕೆಯಲ್ಲಿ ಪ್ರಸಿದ್ಧನಾದ ವೀರನೃಸಿಂಹರಾಯನು ನಾಗಾಂಬಿಕೆಯಲ್ಲಿ ಕೀರ್ತಿವಂತನಾದ ಕೃಷ್ಣರಾಯನು ಜನಿಸಿದರು.

೫೪. ಅನನ್ಯಸಾಮಾನ್ಯತಯಾ ಧರಾಯಾಂ
ದಾನೇನ ತೌ ಖ್ಯಾತತರಾಮಭೂತಾಮ್ |
ಅದ್ಯಸ್ತಯೋರ್ದೈನ್ಯಮುಷಾ ದ್ವಿಜಾನಾ
ಮನ್ಯೋಪಿ ವೈಗುಣ್ಯಪುಷಾ ಪರೇಷಾಮ್ ||

ವೀರನೃಸಿಂಹ ಕೃಷ್ಣರಾಯರಿಬ್ಬರೂ ಬ್ರಾಹ್ಮಣರ ದಾನಧರ್ಮಗಳಿಂದ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿದರು. ಶತ್ರುಗಳಿಗೆ ದುಃಖಜನಕರಾಗಿದ್ದರು. ಅಸಾಮಾನ್ಯ ಸಾಮರ್ಥ್ಯದಿಂದ ಭೂಮಿಯಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದರು.

೫೫. ಮಣಿಮಿವ ಖನಿಭೂರ್ಮಹಿಸುರಾಶೀ
ರಭಿಮತಮರ್ಥಮಿವಾಂಬುರಾಶಿವೇಲಾ |
ಉಡುರಮಣಮಿವೇಯಮೋಬಮ್ಮಾಂಬಾ
ಭುವನಹಿತಾಯ ಬಭಾರ ಗರ್ಭಭಾರಮ್ ||

ಖನಿಜಭೂಮಿಯಲ್ಲಿನ ರತ್ನದಂತೆ, ಬ್ರಾಹ್ಮಣರ ಶುಭಾಶೀರ್ವಾದಿಂದ ಅಭೀಷ್ಟ ಸಿದ್ದಿಯಾದಂತೆ, ಚಂದ್ರನಿಂದ ಸಮುದ್ರ ತೀರಪ್ರದೇಶಕ್ಕೆ ಅಲ್ಲೋಲಕಲ್ಲೋಲಗಳುಂಟಾಗುವಂತೆ ಈ ಓಬಮಾಂಬೆಯು ಲೋಕಕಲ್ಯಾಣಕ್ಕಾಗಿ ಗರ್ಭವನ್ನು ಧರಿಸಿದಳು.