೩೭. ಕಿಮಪಿ ಕ್ಷಿತಿಪಾತ್ಮಜೇ ವೀವಕ್ಷೌ
ವಿಮತಾನಾಂ ವಿರರಾಮ ವೀರವಾದಃ |
ಸದನಾಂಕಣಸೀಮ್ನಿ ಸಂಚರಿಷ್ಣೌ
ಚಲಿತುಂ ದಿಕ್ಷು ಯಶಃ ಶಶಾಕ ನೈಷಾಮ್ ||

ರಾಜಕುಮಾರನು ತೊದಲನುಡಿಗಳನ್ನು ಆಡಲು ಬಯಸಿದಾಗ ಶತ್ರುಗಳ ಅಹಂಕಾರದ ಕೋಲಾಹಲವು ಶಾಂತವಾಯಿತು. ನಾಲ್ಕು ದಿಕ್ಕುಗಳಲ್ಲಿಯೂ ಶತ್ರುಗಳು ಓಡಾಡಲು ಸಾಧ್ಯವಾಗಲಿಲ್ಲ.

೩೮. ಅಜನಿಷ್ಟ ಯದಾಧಿವೇಶ್ಮ ಲೌಲ್ಯಾ
ನ್ಮಣಿ ದೀಪಗ್ರಹಣಂ ಮಹೀಶಸೂನೋಃ |
ಪರಿಶೀಲನಮೇವ ಪರ್ಯಣಂಸೀ
ತ್ತದಹೋ ವೈರಿಮಹೋಹಠಾತ್ಕ್ರಿಯಾಯಾಃ ||

ಮನೆಯಲ್ಲಿ ರಾಜಕುಮಾರನ ಲಾಲನೆ ಪಾಲನೆಗಳಿಂದ ರತ್ನದೀಪಗಳನ್ನು ಹಿಡಿದು ಓಡಾಡುವಂತಾಯಿತು. ಈ ರೀತಿ ಮಣಿದೀಪಗಳನ್ನು ಹಿಡಿಯುವುದರಿಂದಾಗಿ ಶತ್ರುಗಳ ತೇಜಸ್ಸು ಕುಂಠಿತವಾಯಿತು. ಇದರಿಂದ ಶತ್ರುಗಳು ಮುಂದಿನ ಪರಿಣಾಮಗಳನ್ನು ಪರಿಶೀಲಿಸುವಂತಾಯಿತು.

೩೯. ಅವಲಂಬ್ಯ ಶನೈಃ ಸಚಂಕ್ರಮೋsಭೂ
ದವರೋಧಪ್ರಮದಾಂಗುಲೀದಲಾನಿ |
ಪವಮಾನಶಿಶುಃ ಪ್ರತಾನಿನೀನಾಂ
ಪರಿಗೃಹ್ಣನ್ನಿವ ಬಾಲಪಲ್ಲವಾನಿ ||

ರಾಜಕುಮಾರನು ಅಂತಃಪುರ ಸ್ತ್ರೀಯರ ಕೈಬೆರಳುಗಳನ್ನು ಮುತ್ತುಗದ ಮುರುವು ಎಳೆ ಚಿಗುರುಗಳೊಂದಿಗಿರುವ ಬಳ್ಳಿಗಳನ್ನು ಹಿಡುಕೊಂಡಿರುವಂತೆ ಹಿಡಿದುಕೊಂಡು ನಿಧಾನವಾಗಿ ಓಡಾಡುತ್ತಿದ್ದನು.

೪೦. ಬಹುಶೋ ಯದಶೋಭಿ ರತ್ನಭಿತ್ತೌ
ನೃಪಡಿಂಭಪ್ರತಿಬಿಂಬಸಂಪ್ರದಾಯಃ |
ಪರಿತೋ ವಿಮತಾನ್ಭವಿಷ್ಯದಾತ್ಮ
ಸ್ಫುರಣಾನಾಂ ನಿರಣಾಯಿ ಪೂರ್ವರಂಗಃ ||

ರತ್ನದ ಗೋಡೆಯಲ್ಲಿ ರಾಜಕುಮಾರನ ಪ್ರತಿಬಿಂಬವು ಪರಂಪರಾಗತ ಸಂಪ್ರದಾಯದಂತೆ ಶೋಭಿಸುತ್ತದೆ. ಇದರಿಂದಾಗಿ ಸುತ್ತಲಿನ ಶತ್ರುಗಳು ಭವಿಷ್ಯತ್ತಿನಲ್ಲಿ ರಾಜಕುಮಾರನ ಲೀಲೆಗಳನ್ನು ಪೂರ್ವರಂಗವಾಗಿರುವ ಇಂದೇ ನಿರ್ಣಯಿಸುವಂತಾಯಿತು.

೪೧. ಸುದೃಶಾಮಭಜತ್ಸುತೋsಂಕಮಂಕಾ
ತ್ಕಲಿತಾಹ್ವಾನಗಿರಾಂ ಕರಂ ಪ್ರಸಾರ್ಯ |
ವಲದಂಬುರುಹಾಂ ಯಥಾ ಮರಾಲೋ
ನಲಿನೀನಾಮಲಿನೀವಿರಾವಿಣೀನಾಮ್ ||

ರಾಜಕುಮಾರನು ಕೈಯನ್ನು ಚಾಚಿ, ಬಾಬಾ ಎಂದು ತಮ್ಮತ್ತ ಕರೆಯುವ ಸ್ತ್ರೀಯರಿಂದ ಸ್ತ್ರೀಯರ ಕಡೆಗೆ ಎದುರಾಗಿ ತೊಡೆಯಿಂದ ತೊಡೆಗೆ ಹಂಸಗಳಂತೆ, ಭ್ರಮರಗಳು ಝೆಂಕಾರದಿಂದ ಕೂಡಿ ಕಮಲಗಳ ಕಡೆಗೆ ಹೇಗೆ ಚಲಿಸುತ್ತಿರುವವೋ ಹಾಗೇ ಈ ರೀತಿಯಲ್ಲಿ ಅಂತಃಪುರದ ಸ್ತ್ರೀಯರು ಎತ್ತಿಕೊಂಡು ಆಟವಾಡಿಸಿದರು.

೪೨. ಮುಖರೀಕೃತಮುಗ್ಧಕಿಂಕಿಣೀಕಂ
ಮುಹುರಂಕಕೂರಿತಕೇಲಿರಂಕಣೀಷು |
ತನುಲಗ್ನರಜೋಭರಸ್ತದಾನೀ
ಮವನೀಧಾರಣಸಾಧನಾಮತಾನೀತ್ ||

ಅಂಗಳದಲ್ಲಿ ಮುಗ್ಧಮನೋಹರವಾಗಿ ಕಿರುಗಜ್ಜೆಗಳಿಂದ ಪುನಃ ಪುನಃ ಸದ್ದು ಮಾಡುತ್ತ ಓಡಾಡುವಾಗ ಅವನ ಬಾಲಲೀಲೆಗಳು ಹೆಚ್ಚಾದವು. ಈ ರೀತಿಯ ಆಟಗಳಿಂದ ಧೂಳೆಲ್ಲ ಮೈಗೆ ಮೆತ್ತಿಕೊಂಡು ಭೂಭಾರ ವಹಿಸಿಕೊಳ್ಳುವ, ಭೂಮಿಯನ್ನು ಹೊತ್ತುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಿದ್ದನು.

೪೩. ಅವನೀವಲಹಂತುರಂಕಮಧ್ಯೇ
ವಿಹರನ್ವ್ಯಂಜಿತಚಾಪಲೋ ವ್ಯಲಾಸೀತ್ |
ಅಧಿಸಾನು ಯಥಾನುಕೂಲಕೇಲಿಃ
ಕನಕಕ್ಷೋಣಿಭೃತಃ ಕರೀಂದ್ರಶಾಬಃ ||

ನೃಸಿಂಹರಾಜನ ತೊಡೆಯಲ್ಲಿ ಆಡುತ್ತಿರುವ, ತನ್ನ ಆಟಪಾಠಗಳನ್ನು ತೋರಿಸುತ್ತಿರುವ, ರಾಜಕುಮಾರನು ಮೇರುಪರ್ವತದಲ್ಲಿ ಸ್ವಚ್ಛಂದವಾಗಿ ಆಟವಾಡಿಕೊಂಡಿರುವ ಮರಿ ಆನೆಯಂತೆ ಶೋಧಿಸುತ್ತಿದ್ದನು.

೪೪. ಅಪಮಾರ್ಜ್ಯ ದುರಕ್ಷರಾಣ್ಯವನ್ಯಾ
ರಜಸೋ ವಿಸ್ತೃತಿಲಕ್ಷ್ಯತಃ ಕುಮಾರಃ |
ವಲದಂಗುಲಿನೀತವರ್ಣರೇಖೋ
ವ್ಯಲಿಖತ್ಕಿಂ ಸ್ವಕಲತ್ರಭಾವರೇಖಾಮ್ ||

ರಾಜಕುಮಾರನು ಧೂಳಿನಿಂದಾಗಿ ಮಸುಕಾಗಿರುವ ಭೂಮಿಯ ಹಣೆಬರಹವನ್ನು ಅಂದರೆ ಬ್ರಹ್ಮನು ಬರೆದ ದುಷ್ಟಅಕ್ಷರಗಳನ್ನು ಅಳಿಸಿ, ಸ್ವತಂತ್ರವಾಗಿ ಯೋಚಿಸಿ ತನ್ನ ಬೆರಳುಗಳಿಂದ ಚಾತಕಲಗ್ನದ ರೇಖೆಗಳನ್ನು ವರ್ಣಾತ್ಮಕವಾಗಿ ಬರುತ್ತಾನೋ ಎನ್ನುವಂತೆ ಕಂಗೊಳಿಸುತ್ತಿದ್ದನು.

೪೫. ಅಥ ಕೈಶ್ಚಿದಹೋಭಿರೇವ ವಿದ್ಯಾ
ಗುರುರಧ್ಯಾಪಯಮತಿ ಸ್ಮ ತಂ ಕುಮಾರಮ್ |
ಮಧುರುನ್ಮೀಷಿತಾಲಿಮಂಜುಘೋಷಃ
ಪರಪುಷ್ಟಂ ಕಿಲ ಪಂಚಮಪ್ರಪಂಚಾನ್ ||

ಆನಂತರ ಆಚಾರ್ಯರುಗಳು ಭ್ರಮರಗಳ ಮಂಜು ಘೋಷದ ಮಧುರಝೆಂಕಾರದಂತೆ, ವಸಂತಕಾಲದ ವಾತಾವರಣದಿಂದ ಪರಪುಷ್ಟವಾದ ಕೋಗಿಲೆಯ ಪಂಚಮ ಸ್ವರದಂತೆ ರಾಜಕುಮಾರನಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು.

೪೬. ನೃಪವರ್ಯಶಿಶೋರ್ನಿಸರ್ಗಜಾನಾಂ
ನಿಖಿಲಾನಾಮಪಿ ದೇಶಿಕಃ ಕಲಾನಾಮ್ |
ಪರಮುಲ್ಲಸನಾಯ ಪರ್ಯಣಂಸೀ
ತ್ಸವಿತೇವಾಂಬುಜಕೋಶಸೌರಭಾಣಾಮ್ ||

ರಾಜಕುಮಾರನ ನಿಸರ್ಗ ಸಹಜವಾದ, ಜನ್ಮದತ್ತವಾದ ಸಮಸ್ತ ವಿದ್ಯೆಗಳಿಂದಾಗಿ ಆಚಾರ್ಯರುಗಳು, ಹೇಗೆ ಸೂರ್ಯನು ಕಮಲಗಳ ಮೊಗ್ಗುಗಳ ಬಿರಿಯುವಿಕೆಗೆ ಹಾಗೂ ಸುವಾಸನೆ ಹರಡಿ ಉಲ್ಲಾಸ ಮೂಡಲು ಕಾರಣನಾಗುವನೋ ಹಾಗೆ ನಿಮಿತ ಮಾತ್ರರಾಗಿದ್ದರು.

೪೭. ತರಲೀಕೃತಖಂಗವಲ್ಲರೀಕಃ
ಖುರಲೀಸೀಮ್ನೀ ಸಖೇಟಕಃ ಕುಮಾರಃ |
ಸಮಶೋಭತ ಸಂಚಲತ್ತರಂಗೋ
ಜನಿತಾವರ್ತ ಇವಾಕರೋ ಜಲಾನಾಮ್ ||

ಅದೇ ರೀತಿ ಶಸ್ತ್ರಾಭ್ಯಾಸದಲ್ಲೂ ಕೂಡ, ಕೃಶವಾಗಿರುವ ಬಳ್ಳಿ ಹೇಗೆ ಸರಾಗವಾಗಿ ತೂಗುತ್ತದೆಯೋ ಹಾಗೆ ಗುರಾಣಿಯಿಂದ ವೈರಭಟನನ್ನು ಎದುರಿಸುವಲ್ಲಿಯೂ ಅಷ್ಟೇ ಲೀಲಾಜಾಲವಾಗಿ ತನ್ನ ಚಾಕಚಕ್ಯತೆಯಿಂದ ಕಂಗೊಳಿಸುತ್ತಿದ್ದನು. ಚಲಿಸುವ ಅಲೆಗಳ ಜನಕನಾದ ಸಮುದ್ರದಂತೆ ಅನೇಕ ನೈಪುಣ್ಯಗಳನ್ನು ಹೊಂದಿದ ಮಹಾನ್ ಆಕರವಾಗಿದ್ದನು.

೪೮. ಅಧಿರೋಪಯತೀಂದುವಂಶರತ್ನೇ
ಸಚಮತ್ಕಾರತಯಾ ಶರಾಸನೇ ಜ್ಯಾಮ್ |
ಅತಿಚಿತ್ರಮಮಿತ್ರಪಾರ್ಥಿವಾನಾ
ಮವರೂಢಜನಿ ಸೇಯಮಂಸಕೂಟಾತ್ ||

ಚಂದ್ರವಂಶಜರಲ್ಲಿ ರತ್ನದಂತಿರುವ ರಾಜಕುಮಾರನು ಧನುಸ್ಸನ್ನು ಚಮತ್ಕಾರ ವಿಶೇಷದಿಂದ ಹೆದೆಯೇರಿಸುವಾಗ ಶತ್ರುರಾಜರುಗಳು ಧನಸ್ಸನ್ನು ಹೆಗಲಿನಿಂದ ಇಳಿಸುತ್ತಿದ್ದರು. ಇದು ಅತ್ಯಾಶ್ಚರ್ಯ ವಿಷಯ. ಅಂದರೆ ಶತ್ರುಗಳೇ ಇಲ್ಲದೇ ರಾಜ್ಯಪಾಲಿಸುತ್ತಿದ್ದನು. ಅಜಾತಶತ್ರುವಾಗಿ ರಾಜ್ಯಭಾರ ಮಾಡುತ್ತಿದ್ದನು.

೪೯. ಪರಿರಕ್ಷಣತೋ ವರಂ ಹಿ ಶಿಕ್ಷಾ
ಪ್ರಕೃತಾನೇನ ವಿಖಂಡಿತಃ ಪಟಿಮ್ಯಾ |
ಮಣಿಚಾಮರಹೇಮಮಾನಿತೋ
ದ್ದ್ರೀಯತೇ ವಂದಿಜನೇನ ಲೋಹದಂಡಃ ||

ರಕ್ಷಣಾರ್ಥವಾಗಿರುವ ದಂಡಗಳು ಶಿಕ್ಷೆಗಾದರೂ ಶಿಕ್ಷೆಗಾಗಿ ಉಪಯೋಗಿಸಲ್ಪಡುವವುಗಳಾದರೂ, ವರವಾಗಿದ್ದವು. ಹೇಗೆಂದರೆ ರಾಜಕುಮಾರನ ಸಾಮರ್ಥ್ಯದಿಂದ ಮುರಿಯಲ್ಪಟ್ಟ ಲೋಹದಂಡವನ್ನು ರತ್ನ, ಚಾಮರ, ಸ್ವರ್ಣಗಳಿಂದ ಮನ್ನಿತರಾದ ಸ್ತುತಿಪಾಠಕರು ಹಿಡಿದುಕೊಳ್ಳುತ್ತಿದ್ದರು. ಅವನ ಸಾಮರ್ಥ್ಯದ ಪ್ರದರ್ಶನಕ್ಕಾಗಿ ದಂಡ ಹಿಡಿದುಕೊಂಡಿದ್ದರಿಂದ ಅವರಿಗೆ ಅದು ರಕ್ಷಣೆಯಾಗುತ್ತಿತ್ತು.

೫೦. ಮರುತಂ ಸುಹೃದಂ ಮದೀಯಧಾಮ
ಜ್ವಲನಸ್ಯ ಜ್ವಲತಃ ಪುರೀಷ್ವರೀಣಾಮ್ |
ನಿರುಣ್ಣದ್ದೀತರಾಂ ನಿಜಾಂತರಿತ್ಯಾ
ಹಿತರೋಷೋsಭಿನದೇಷ ಚರ್ಮಭಸ್ತ್ರಮ್ ||

ಶತ್ರುಗಳ ನಗರಗಳಲ್ಲಿ ಮಾರುತನೆಂಬ ಗೆಳೆಯನ ಸಹಾಯದಿಂದ ಜ್ವಲಿಸಬೇಕಾದ ತೇಜಸ್ಸೆಂಬ ಅಗ್ನಿಯನ್ನು ತನ್ನ ಅಂತರಂಗದಲ್ಲಿ ಪ್ರತಿಬಂಧಿಸಿದ್ದನು. ಹೀಗೆ ಉತ್ಪನ್ನವಾದ ರೋಷವನ್ನು ಕಟ್ಟಿಹಾಕಿದ ರಾಜಕುಮಾರನು ತಾನೇ ತೊಗಲಿನ ಚೀಲವನ್ನು ಕಟ್ಟಿಕೊಂಡಿರುವಂತೆ ತೋರುತ್ತಿದ್ದನು. ಅಂದರೆ ಚರ್ಮಚೀಲದಲ್ಲಿರುವ ಬೆಂಕಿಯಂತೆ ಮಹಾನ್ ಸಾಮರ್ಥ್ಯ ಹೊಂದಿದ್ದನು.

೫೧. ಅಧಿಗತ್ಯ ಗತಿತ್ವರಾಂ ಹಯಾನಾ
ಮಧಿಬಾಹ್ಯಾಲ್ಯಮುನಾ ಪ್ರಚಾಲಿತಾನಾಮ್ |
ಪರಿಪಾಲಯಂತೀವ ಭಕ್ತಿಮುದ್ರಾಂ
ಪವಮಾನಃ ಪದರೇಣುಧಾರಣೇನ ||

ರಾಜಕುಮಾರನು ಹೊರಗಿನ ಪ್ರಚಲಿತ ವಿದ್ಯಮಾನವನ್ನು, ವಿಹರಿಸುವ ಭೃಂಗಗಳಿಂದ, ಧಾವಿಸುವ ಕುದುರೆಗಳ ವೇಗದಿಂದ ಗ್ರಹಿಸುತ್ತಿದ್ದನು. ಇದೇ ಸರಿಪಾಠ ಎನ್ನುವಂತೆ ಆ ಗಾಳಿಯಲ್ಲಿನ ಕಾಲಧೂಳಿನಿಂದ ಎಲ್ಲವನ್ನು ತಿಳಿದುಕೊಳ್ಳುತ್ತಿದ್ದನು. ಮತ್ತು ಶ್ರದ್ಧೆಯಿಂದ ಕಾರ್ಯತತ್ಪರನಾಗುತ್ತಿದ್ದನು.

೫೨. ಅಧಿರೋಪಯತಿ ಸ್ಮ ಹಸ್ತಿಕಂಠೇ
ಜನತಾಂ ತೋಷಮಿಷೇಣ ಜಾತಮಾತ್ರಃ |
ಅಧುನಾ ಪಟುತಾಮನೇಕಪೇಂದ್ರೇ
ವ್ಯವೃಣೋದಿತ್ಯಪಿ ಕಿಂ ನು ವಿಸ್ಮಯಾಯ ||

ಹುಟ್ಟಿದಾಗಿನಿಂದಲೇ ಆನೆಯ ಮೇಲೇರುವ ಮೂಲಕ ಜನಸಮೂಹವನ್ನು ಸಂತೋಷಗೊಳಿಸುವ ರಾಜಕುಮಾರನು ಈಗ ಆನೆಗಳ ವಿಷಯ ಮತ್ತು ಅವುಗಳ ಮೇಲೇರುವ ಕ್ರಮದ ಬಗ್ಗೆ ವಿವರಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಹುಟ್ಟಿದಾಗ ಬೇರಯವರಿಂದ ಆನೆ ಏರುವ ರಾಜಕುಮಾರನು ಈಗ ತಾನೇ ಸ್ವತಃ ಏರುವುದು ಆಶ್ಚರ್ಯವಲ್ಲ. ಜಗತ್ತಿನಲ್ಲಿ ಆನೆ ಮೇಲೇರುವದು ಸಂತೋಷದ ಪರಾಕಾಷ್ಠೆ.

೫೩. ವಿದ್ಯಾಃ ಸಮೇತ್ಯ ವಿವಿಧಾ ನೃಪತೇಸ್ತದಾಸೀ
ದಾನಂದಹೇತುರತಿವಾಹಿತಶೈಶವೋsಯಮ್ |
ಯಾತಃ ಕ್ರಮಾದ್ವಿಲಸೀತಾನಿ ಯಥಾ ಕಲಾನಾಂ
ಪಾಥೋನಿಧೇಃ ಕಿಮಪಿ ಪಾರ್ವಣಶರ್ವರೀಶಃ ||

ವಿಧವಿಧವಾದ ಎಲ್ಲ ವಿದ್ಯೆಗಳಲ್ಲೂ ಪಾರಂಗತನಾಗಿ, ಬಾಲ್ಯಾವಸ್ಥೆಯನ್ನು ದಾಟಿ ರಾಜಕುಮಾರನು ಬೆಳೆದನು. ನಂತರ ಎಲ್ಲ ಕಲೆಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಎಲ್ಲ ನಿಧಿಗಳ ಖನಿಜವೆನಿಸಿದ ಸಮುದ್ರದಂತೆ ನೃಸಿಂಹರಾಜನ ಎಲ್ಲ ಸಂತೋಷಕ್ಕೂ ಕಾರಣೀಭೂತನಾದನು.