ಬದುಕಿದ್ದಾಗಲೇ ದಂತಕತೆಯಾದ ಡಾ. ಸುಬ್ಬರಾವ್

 

ಸರಕಾರದ ಮಂತ್ರಿಯಾಗಿದ್ದರೂ ಸ್ವಂತ ಮನೆಯನ್ನಾಗಲೀ, ಸ್ವಂತಕಾರನ್ನಾಗಲೀ ಖರೀದಿಸದವರು ಇರಬಹುದೇ? ಎಂ.ಪಿ. ಮತ್ತು ಎಂ.ಎಲ್.ಎ. ಆಗಿದ್ದರೂ ಜೀವಮಾನವಿಡೀ ಬಾಡಿಗೆ ಮನೆಯಲ್ಲೇ ವಾಸ ಮಾಡಿದವರು ಇದ್ದಾರೆಯೇ? ಡಾಕ್ಟರ್ ಆಗಿದ್ದರೂ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಸ್ವಂತ ಕ್ಲಿನಿಕ್ ಅಥವಾ ನರ್ಸಿಂಗ್ ಹೋಂ ಮಾಡಿಕೊಳ್ಳದವರು (ಅಂದರೆ ಬಾಡಿಗೆ ಕ್ಲಿನಿಕ್‌ನಲ್ಲಿಯೇ ವೃತ್ತಿ ನಡೆಸಿದವರು) ಇರಬಹುದೇ?ಅಂಥವರೊಬ್ಬರು ಇದ್ದರು – ಅವರೇ ಡಾಕ್ಟರ್ ಅಡ್ಡೂರು ಸುಬ್ಬರಾವ್. ಕೇರಳದ ಉತ್ತರ ತುದಿಯ ಮಂಜೇಶ್ವರ – ಕಾಸರಗೋಡು ಪ್ರದೇಶದಲ್ಲಿ ಅವರ ಹೆಸರು ಕೇಳದವರಿಲ್ಲ. ತಮ್ಮ ಕರ್ಮಭೂಮಿ ಮಂಜೇಶ್ವರದಲ್ಲಿ ಆರು ದಶಕಗಳ ಕಾಲ ಮಾಡಿದ ಜನಸೇವೆಯಿಂದಾಗಿ ಬದುಕಿದ್ದಾಗಲೇ ದಂತಕತೆಯಾದವರು ಡಾಕ್ಟರ್ ಸುಬ್ಬರಾವ್. ಇಂದಿಗೂ ಅಲ್ಲಿನ ಜನರಿಗೆ ‘ಡಾಕ್ಟರ್’ ಅಂದರೆ ‘ಡಾಕ್ಟರ್ ಸುಬ್ಬರಾವ್’ ಒಬ್ಬರೇ.ಇಂತಹ ಡಾಕ್ಟರ್ ಸುಬ್ಬರಾವ್ ಅವರ ಬಾಲ್ಯ ಹೇಗಿತ್ತು? ಅವರ ಯೌವನದ ದಿನಗಳು ಹೇಗಿದ್ದವು?

 

ಬಾಲ್ಯ – ಯೌವನ

ಡಾ. ಸುಬ್ಬರಾಯರ ಬಾಲ್ಯದ ಹಾಗೂ ಯೌವನದ ದಿನಗಳನ್ನು ಅವರ ತಮ್ಮ ಅಡ್ಡೂರು ಶಿವಶಂಕರ ರಾವ್ ಹೀಗೆ ನೆನಪು ಮಾಡಿಕೊಳ್ಳುತ್ತಾರೆ :ನನ್ನ ಸಣ್ಣಣ್ಣ ಡಾ|| ಸುಬ್ಬರಾವ್ ಅಕ್ಟೋಬರ್ ೧೬, ೧೯೧೯ರಲ್ಲಿ  ವಿಶಾಖಪಟ್ಟಣ ದಲ್ಲಿ ಜನಿಸಿದ್ದ. ಆಗ ನಮ್ಮ ತಂದೆಯವರು ಅಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರಾಗಿದ್ದರು. ನಾನು ಸಹ ಅಲ್ಲೇ (೧೯೨೨) ಜನಿಸಿದೆ. ನನಗೂ ಅವನಿಗೂ ಸುಮಾರು ಎರಡೂವರೆ ವರುಷಗಳ ಅಂತರ.ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಗುರುಪುರ ಹತ್ತಿರದ ಅಡ್ಡೂರು ನನ್ನ ಕುಟುಂಬದ ನೆಲೆ. ಸರಕಾರಿ ವೈದ್ಯರ ವೃತ್ತಿಯಲ್ಲಿದ್ದ ನನ್ನ ತಂದೆಗೆ ಆಗಾಗ ವರ್ಗಾವಣೆ. ಆವರೆಗೆ ಆಂಧ್ರ, ಕೇರಳದ ವಿವಿಧ ಊರುಗಳಿಗೆ ಅವರಿಗೆ ವರ್ಗವಾಗಿತ್ತು. ಆಗೆಲ್ಲ ಅವರ ಜೊತೆ ಹೋದ ನಮ್ಮ ವಿದ್ಯಾಭ್ಯಾಸಕ್ಕೆ ತೊದರೆಯಾದದ್ದನ್ನು ಅವರು ಕಂಡಿದ್ದರು. ಈ ತೊಂದರೆ ಪರಿಹರಿಸಲಿಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಅಧ್ಯಾಪಕ ವೃತ್ತಿಯನ್ನು ಅವರು ಆರಿಸಿಕೊಂಡರು. ಇದರಿಂದಾಗಿ ತಂಜಾವೂರಿನ ಮೆಡಿಕಲ್ ಸ್ಕೂಲಿಗೆ ಅವರ ನೇಮಕ ವಾಯಿತು. ಅನಂತರ ಒಂದೇ ಊರಿನಲ್ಲಿ ನೆಲೆಸಿ, ಒಂದೇ ಭಾಷೆ ಕಲಿತು ವಿದ್ಯಾಭ್ಯಾಸ ಮಾಡುವ ಅವಕಾಶ ನಮಗೆ ಒದಗಿತು. ತಂಜಾವೂರಿನಲ್ಲಿ ಏಳೂವರೆ ವರುಷ ಅಂದರೆ ೧೯೨೬ರಿಂದ ೧೯೩೩ರ ವರೆಗೆ, ನಂತರ ೧೯೩೩ರಿಂದ ೧೯೩೯ರ ವರೆಗೆ ಮದರಾಸಿನಲ್ಲಿ ಇದ್ದುದರಿಂದ ತಮಿಳು ಭಾಷೆಯಲ್ಲಿ ಕಲಿಯುವ ಅವಕಾಶವೂ ನಮಗೆ ಒದಗಿತು.

 

ಬಾಲ್ಯದ ದಿನಗಳು

ತಂಜಾವೂರಿನ ನಮ್ಮ ಜೀವನದ ಸ್ವಾರಸ್ಯದ ಘಟನೆಗಳನ್ನು ಮರೆಯಲಾಗದು. ಅಲ್ಲಿ ಒಂದು ವರುಷ ಖಾಸಗಿ ಶಾಲೆಯಲ್ಲಿ ಓದಿ ನಾನು ಮತ್ತು ನನ್ನ ಅಣ್ಣಂದಿರು ಬೇರೆ ಶಾಲೆ ಸೇರಿದೆವು. ನನ್ನ ದೊಡ್ಡಣ್ಣ ಕಲ್ಯಾಣ ಸುಂದರಂ ಪ್ರೌಢಶಾಲೆಗೂ, ನಾನು ಮತ್ತು ಸುಬ್ಬರಾವ್ ಸೈಂಟ್ ಜಾರ್ಜ್ ಸ್ಪೋರ್ಟ್ಸ್ ಸ್ಕೂಲಿಗೂ ಸೇರಿದೆವು.ಮೂರನೇ ತರಗತಿಯ ಅಧ್ಯಾಪಕರೊಬ್ಬರು ಬಹಳ ಕ್ರೂರಿ. ಯಾರಿಗೂ ಅವರನ್ನು ಕಂಡರೆ ಆಗುತ್ತಿರಲಿಲ್ಲ. ಮಕ್ಕಳ ಮೇಲೆ ಬೆತ್ತ ಪ್ರಯೋಗಿಸುವುದರಲ್ಲಿ ಅವರು ನಿಸ್ಸೀಮರು. ಆ ಕೆಲಸ ಅವ್ಯಾಹತವಾಗಿ ನಡೆಯುತ್ತಿತ್ತು. ಆದರೂ ಯಾರೂ ಅವರ ಮೇಲೆ ದೂರು ಹೇಳುತ್ತಿರಲಿಲ್ಲ.ಒಮ್ಮೆ ಕೆಲವು ಹುಡುಗರು ತಂಟೆ ಮಾಡಿದರೆಂಬುದಕ್ಕಾಗಿ ಎಲ್ಲರಿಗೂ ಜೋರಾಗಿ ಏಟು ಬಾರಿಸಿದರು. ಏನೂ ಚೇಷ್ಟೆ ಮಾಡದಿದ್ದರೂ ನನ್ನ ಅಣ್ಣನಿಗೂ ಜೋರಾಗಿ ಪೆಟ್ಟು ಬಿತ್ತು. ಬಾಸುಂಡೆ ಬಂದು ಅನಂತರ ಜ್ವರದಲ್ಲಿ ನರಳುವಂತಾಯಿತು. ನನ್ನ ತಂದೆಯವರು ಶಾಲೆಯ ಮುಖ್ಯಸ್ಥರಿಗೆ ದೂರು ನೀಡಿದರು. ದೂರು ತನಿಖೆಯಾಗಿ ಆ ಅಧ್ಯಾಪಕರು ಕೆಲಸ ಕಳೆದುಕೊಳ್ಳಬೇಕಾಯಿತು. ಅವನು ಜ್ವರದಲ್ಲಿ ಮಲಗಿದ್ದಾಗ ಪ್ರತಿದಿನವೂ ಶಾಲೆಯಿಂದ ಅನೇಕ ಮಕ್ಕಳು ಅವನನ್ನು ನೋಡಲು ಬರುತ್ತಿದ್ದರು.

 

ನಾಟಕದ ಗೀಳು

ನನ್ನ ಅಣ್ಣನಿಗೆ ಬಾಲ್ಯದಿಂದಲೇ ನಾಟಕದ ಗೀಳು. ನಮ್ಮ ತಂದೆಯವರ ಸಹೋದ್ಯೋಗಿ ಡಾ† ರಾಘವಾಚಾರಿ ಅವರು ಸತ್ಯ ಹರಿಶ್ಚಂದ್ರನ ಬಗ್ಗೆ ನಾಟಕವೊಂದನ್ನು ಸಂಯೋಜಿಸಿದ್ದರು. ಅಣ್ಣನಿಗೂ ಒಂದು ಪಾತ್ರವಿತ್ತು.ಅದೇ ನಾಟಕವನ್ನು ನಮ್ಮ ಬೀದಿಯಲ್ಲಿದ್ದ ಶ್ಯಾಮಾ ಮತ್ತು ಸುಂದರಂ ಅವರ ಮನೆಯಲ್ಲಿ ಪುನಃ ಆಡಲಾಯಿತು. ಮಾಳಿಗೆಯು ನಾಟಕದ ವೇದಿಕೆಯಾಗಿತ್ತು. ಸುತ್ತಮುತ್ತಲಿನ ಹಲವಾರು ಜನರು ಬಂದಿದ್ದರು. ಅಲ್ಲಿ ನಾಟಕದಲ್ಲಿ ಅಣ್ಣನದು ಹರಿಶ್ಚಂದ್ರನ ಪಾತ್ರ. ಹರಿಶ್ಚಂದ್ರನ ಮನೆಗೆ ಋಷಿಗಳು ಬಂದಾಗ ಅಲ್ಲಿ ಗಂಡು ಮಕ್ಕಳಿಲ್ಲ ಎಂಬ ಕಾರಣ ಅವನ ಮನೆಯಲ್ಲಿ ಊಟ ಮಾಡಲು ನಿರಾಕರಿಸುತ್ತಾರೆ. ಆಗ ಹರಿಶ್ಚಂದ್ರ ‘ಹಾಯ್’ ಎಂದು ದೊಪ್ಪನೆ ಬೀಳಬೇಕು. ಅಣ್ಣನ ಪಾತ್ರ ಎಷ್ಟು ಅಮೋಘವಾಗಿತ್ತೆಂದರೆ ಸಬಿಕರಿಂದ ‘Once more’ ಕೇಳಿಬಂತು. ಹಾಗಾಗಿ ಆ ದೃಶ್ಯವನ್ನು ಪುನಃ ಅಭಿನಯಿಸಲಾಯಿತು.ಆ ನಾಟಕದಲ್ಲಿ ನನಗೂ ಒಂದು ಪಾತ್ರ ಇತ್ತು. ಲೋಹಿತಾಶ್ವನ ಪಾಠಶಾಲೆಯಲ್ಲಿ ನನ್ನದು ಅಧ್ಯಾಪಕನ ಪಾತ್ರ. ನಾನು ಕೈಯಲ್ಲಿ ಬೆತ್ತ ಹಿಡಿದಿದ್ದೆ. ಲೋಹಿತಾಶ್ವ ಒಳ್ಳೆಯ ಹುಡುಗ ಎಂಬುದನ್ನು ನಾಟಕದಲ್ಲಿ ತೋರಿಸಬೇಕಾಗಿತ್ತು. ಇತರ ಮಕ್ಕಳು ಚೇಷ್ಟೆ ಮಾಡುವುದನ್ನು ಅಭಿನಯಿಸಿದಾಗ ನಾನು ಬಲವಾಗಿ ಬೆತ್ತವನ್ನು ಪ್ರಯೋಗಿಸಿದೆ. ನನ್ನ ಬೆತ್ತದ ಏಟು ಜೋರಾಗಿ ಬಿತ್ತು. ಏಟು ತಿಂದ ಮಕ್ಕಳು ನನ್ನ ಕೈಯಿಂದ ಬೆತ್ತ ಎಳೆದು ನನ್ನ ಮೇಲೆ ಮುಗಿಬಿದ್ದರು. ಲೋಹಿತಾಶ್ವ ಅದೇ ಬೆತ್ತದಲ್ಲಿ ನನಗೆ ಬಾರಿಸಿದ! ನನಗೆ ಅಳು ಬಂದು ಕೂಡಲೇ ವೇದಿಕೆಯಿಂದ ಕಾಲ್ಕಿತ್ತೆ.ಇದೇ ನಾಟಕವನ್ನು ತನ್ನ ಮನೆಯಲ್ಲೂ ಆಡಿಸಬೇಕೆಂದು ಇನ್ನೊಬ್ಬ ಹುಡುಗ ಲಕ್ಷಿ ್ಮೀನಾರಾಯಣನ್ ಆಹ್ವಾನಿಸಿದ. ನಾವು ಅವನಲ್ಲಿಗೆ ಹೋದೆವು. ಸಬಿಕರು ತುಂಬಿದ್ದರು. ನಾಟಕ ಶುರುವಾಯಿತು. ಆಗ ಕೆಲಸಕ್ಕೆ ಹೋಗಿದ್ದ ಆ ಮನೆಯ ಯಜಮಾನ ಮರಳಿ ಬಂದರೆಂದು ಯಾರೋ ಬೊಬ್ಬೆ ಹಾಕಿದ್ರು. ನಮ್ಮ ಉಡುಪು ಸರಂಜಾಮುಗಳೆಲ್ಲವನ್ನೂ ಬಿಟ್ಟು ಓಟ ಕಿತ್ತೆವು. ನಾಟಕ ಅರ್ಧದಲ್ಲೇ ನಿಂತಿತು.ನಮ್ಮಲ್ಲಿ ಒಂದು ಹೆಚ್.ಎಂ.ವಿ. ಗ್ರಾಮಾಫೋನ್ ಇತ್ತು. ಹಲವು ಹಾಡಿನ ಪ್ಲೇಟ್‌ಗಳಿದ್ದವು. ಪರವೂರಿನಿಂದ ನಮ್ಮಲ್ಲಿಗೆ ಬಂದ ಅತಿಥಿಗಳಿಗೆ ಪ್ಲೇಟ್‌ಗಳನ್ನು ಹಾಕಿ ಹಾಡು ಕೇಳಿಸುತ್ತಿದ್ದೆವು. ಹಾಡಿನ ಸಂಗ್ರಹದಲ್ಲಿ ಒಂದು ಹೆಂಡ ಕುಡುಕರ ಹಾಡು ಇತ್ತು. ಅದನ್ನು ಹಾಕಿ ಅಣ್ಣ ಹೆಂಡಕುಡುಕರ ಹಾಗೆ ನರ್ತಿಸಿ ತೋರಿಸುತ್ತಿದ್ದ. ಆಗ ಎಲ್ಲರೂ ನಗುತ್ತಿದ್ದರು.

ಮದ್ರಾಸಿನ ದಿನಗಳು

೧೯೩೩ರಲ್ಲಿ ತಂಜಾವೂರಿನ ವೈದ್ಯಕೀಯ ಶಾಲೆ ಮುಚ್ಚಲ್ಪಟ್ಟಿತು. ನನ್ನ ತಂದೆ ಯವರನ್ನು ಮದರಾಸಿಗೆ ವರ್ಗ ಮಾಡಿದರು. ಹಾಗಾಗಿ ಬಾಲ್ಯದ ದಿನಗಳನ್ನು ಕಳೆದ ತಂಜಾವೂರನ್ನು ಬಿಡಬೇಕಾಯಿತು. ಮದರಾಸಿನಲ್ಲಿ ಮುಂದಿನ ಆರೂವರೆ ವರುಷಗಳನ್ನು ಕಳೆದೆವು.ಮೈಲಾಪುರದಲ್ಲಿ ನಮ್ಮ ವಸತಿ. ಪಿ.ಎಸ್. ಹೈಸ್ಕೂಲ್ ಎಂಬ ಪ್ರಸಿದ್ಧ ಶಾಲೆಗೆ ಸೇರಿದೆವು. ಅಣ್ಣ ಐದನೇ ಫಾಮರ್ (ಹತ್ತನೇ ತರಗತಿ) ಮತ್ತು ನಾನು ಮೂರನೇ ಫಾಮರ್ (ಎಂಟನೇ ತರಗತಿ). ನಾನು ಹತ್ತರೊಟ್ಟಿಗೆ ಹನ್ನೊಂದು ಎಂಬ ಬಾಲಕನಾಗಿದ್ದರೂ ಸಣ್ಣಣ್ಣ ಅವನ ಒಳ್ಳೆಯ ಗುಣಗಳಿಂದಾಗಿ ತರಗತಿಯ ಮಕ್ಕಳಲ್ಲಿ ಪ್ರಮುಖನಾಗಿ ಕಾಣಿಸಿಕೊಳ್ಳುತ್ತಿದ್ದ.ಒಮ್ಮೆ ನಾನು ಮಕ್ಕಳ ಗುಂಪಿನೊಂದಿಗೆ ನಡೆಯುತ್ತ ಕೆಲವರನ್ನು ಹಿಂದಕ್ಕೆ ಹಾಕಿ ಮುಂದೆ ನಡೆಯಲು ಪ್ರಯತ್ನಿಸಿದಾಗ ಒಬ್ಬ ಹುಡುಗ ‘ಡಬ್ಬಾ’ ಎಂದು ಹೇಳುವುದು ಕೇಳಿಸಿತು. ಡಬ್ಬಾ ಎಂದರೆ ಕೆಟ್ಟ ಶಬ್ದ. ಅದರ ಅರ್ಥ ನನಗೆ ಆಗ ಗೊತ್ತಿರಲಿಲ್ಲ. ಕೆಟ್ಟ ಶಬ್ದ ಎಂದಷ್ಟೇ ಗೊತ್ತು. ಅವನು ನನ್ನನ್ನೇ ಉದ್ದೇಶಿಸಿ ಹಾಗೆ ಹೇಳಿದ್ದೆಂದು ಭಾವಿಸಿ ನಾನು ಕೋಪಗೊಂಡೆ. ಸಣ್ಣಣ್ಣ ನನ್ನ ಹಿಂದಿನಿಂದ ಬರುತ್ತಿದ್ದ. ಅವನೊಂದಿಗೆ ದೂರು ಹೇಳಿದೆ. ಸಣ್ಣಣ್ಣ ನೇರವಾಗಿ ಆ ಹುಡುಗನ ಹತ್ತಿರ ಹೋಗಿ ‘ನೀನು ಏನು ಹೇಳಿದ್ದು ಇವನಿಗೆ’ ಎಂದು ವಿಚಾರಿಸಿದ. ಅವನಿಗೆ ಹೇಗೆ ಉತ್ತರಿಸುವುದೆಂದು ಗೊತ್ತಾಗಲಿಲ್ಲ. ತಾನು ಏನು ಹೇಳಿದ್ದೆಂದು ಅವನಿಗೂ ನೆನಪಿಲ್ಲ. ಆದರೆ ‘ಹಾಗೆ ಹೇಳಿದರೆ ನೀನೇನು ಮಾಡುವೆ?’ ಎಂದು ಆತ ಎದುರಾಡಿದ. ಅಲ್ಲೇ ಮಾರ್ಗದ ಮಧ್ಯೆ ಅವರಿಬ್ಬರಿಗೂ ಹೊಕೈಯಾಯಿತು. ಆಗ ಬೇರೆಯವರು ಬಂದು ಬಿಡಿಸಿದರು. ಕೆಲವು ದಿನಗಳ ಬಳಿಕ ಅವರಿಬ್ಬರೂ ಸ್ನೇಹಿತರಾದರು. ಇಬ್ಬರಲ್ಲೂ ದ್ವೇಷ ಉಳಿಯಲಿಲ್ಲ.ಹೈಸ್ಕೂಲ್ ಮುಗಿಸಿ ನನ್ನ ಅಣ್ಣ ಸುಬ್ಬರಾವ್ ಪಚ್ಚಪ್ಪಾಸ್ ಕಾಲೇಜಿಗೆ ಸೇರಿ ಅಲ್ಲಿ ಎರಡು ವರುಷ ಕಲಿತ. ಮುಂದೆ ಕೀಲ್ಪಾರ್ಕ್ ವೈದ್ಯಕೀಯ ಸ್ಕೂಲಿಗೆ ಸೇರಿದ. ದೊಡ್ಡಣ್ಣ ತಿಮ್ಮಪ್ಪಯ್ಯ ಗಳಿಸಿದಷ್ಟು ಉತ್ತಮ ಅಂಕ ಇವನು ಗಳಿಸಲಿಲ್ಲ. ಆದ್ದರಿಂದ ಇವನಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಹಾಗಾಗಿ ಎಲ್.ಐ.ಎಂ. ಕಲಿಯಲು ಮುಂದಾದ.ಆ ಸಮಯದಲ್ಲಿ ಆತ ತಾಯಿಗೆ ಮನೆ ಕೆಲಸದಲ್ಲಿ ಸಹಕರಿಸುತ್ತಿದ್ದ. ತರಕಾರಿ ತರುವುದು, ಜೀನಸು ತರುವುದು, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುವುದು… ಇತ್ಯಾದಿ. ನಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬೇರೆ ಜನರಿದ್ದರು. ಹಾಗಾಗಿ ಮನೆಯಲ್ಲಿ ಹೆಚ್ಚು ಕೆಲಸವಿರುತ್ತಿರಲಿಲ್ಲ. ಆದರೆ ನಾನು ಯಾವ ಕೆಲಸಕ್ಕೂ ಸಿಕ್ಕುತ್ತಿರಲಿಲ್ಲ. ‘ಉಪಕಾರಗೇಡಿ’ ಎಂಬ ಬಿರುದು ಗಳಿಸಿದ್ದೆ! ನಾವು ವರ್ಷಂಪ್ರತಿ ಊರಿಗೆ ಬೇಸಿಗೆ ರಜೆಯಲ್ಲಿ ಹೋಗಿ ಬರುತ್ತಿದ್ದೆವು. ಬರುವಾಗ ಸೆಂಟ್ರಲ್ ಸ್ಟೇಷನ್‌ನಲ್ಲಿ ಬೆಳಿಗ್ಗೆ ರೈಲಿನಿಂದಿಳಿದು ಕಾರಿನಲ್ಲಿ ಮನೆಗೆ ಬಂದು ಉಪಾಹಾರ ಮಾಡುತ್ತಿದ್ದೆವು. ಆದರೆ ಸಣ್ಣಣ್ಣನಿಗೆ ಮಾತ್ರ ಸಾಮಾನನ್ನೆಲ್ಲ ಎತ್ತಿನ ಗಾಡಿಯಲ್ಲಿ ತುಂಬಿ ಗಾಡಿಯಲ್ಲೇ ಕುಳಿತು ಮೈಲಾಪುರಕ್ಕೆ ಬರುವ ಕೆಲಸ. ಹಾಗಾಗಿ ಅವನು ಮನೆಗೆ ಬಂದು ಉಪಾಹಾರ ಮಾಡುವಾಗ ಸುಮಾರು ಮಧ್ಯಾಹ್ನ ಗಂಟೆ ಹನ್ನೆರಡಾಗುತ್ತಿತ್ತು.ಹೀಗಿರುವಾಗ ಒಮ್ಮೆ ತಾಯಿ ನನಗೆ ‘ದೇವಸ್ಥಾನಕ್ಕೆ ಹಣ್ಣುಕಾಯಿ ಮಾಡಲು ನೀನು ಹೋಗಬಾರದೇ? ಅವನು ಎಷ್ಟು ಸಲ ಹೋಗುತ್ತಾನೆ?’ ಎಂದರು. ನಾನು ಇದನ್ನು ಸಣ್ಣಣ್ಣನಿಗೆ ಹೇಳಿದಾಗ, ‘ಭಕ್ತಿಯಿಂದ ಯಾರು ಅಲ್ಲಿಗೆ ಹೋಗುತ್ತಾರೆ? ನಾನು ಅಲ್ಲಿಗೆ ಬರುವವರನ್ನು ನೋಡಲು ಹೋಗುವುದು’ ಎಂದ.ತಂದೆಯವರು ತಾನು ಶಾಲೆಗೆ ಹೋಗಲು ಬಳಸುತ್ತಿದ್ದ ಸೈಕಲನ್ನು ಸಣ್ಣಣ್ಣನಿಗೆ ಕೊಟ್ಟಿದ್ದರು. ಪ್ರತೀದಿನ ಸಂಜೆ ನಾನು ಫುಟ್‌ಬಾಲ್ ಮತ್ತು ಅವನು ಕ್ರಿಕೆಟ್ ಆಡುತ್ತಿದ್ದೆವು.ಮದರಾಸಿನಲ್ಲಿ ನನಗೂ ಅವನಿಗೂ ಓದಲು ಒಂದೇ ಕೋಣೆ. ಕೆಲವು ಸಲ ಜಗಳವಾಗಿ ನಮ್ಮೊಳಗೆ ಜಟಾಪಟಿ ಆಗುತ್ತಿತ್ತು. ನನಗೆ ಕೆಲವೊಮ್ಮೆ ಹಿಂದಿನಿಂದ ತಿವಿಯುವುದು, ಗುದ್ದುವುದು.. ಇಂತಹ ತಂಟೆಗಳನ್ನು ನನ್ನ ತಂಗಿಯರು ಮಾಡುತ್ತಿದ್ದರು. ನನ್ನ ಸಹಾಯಕ್ಕೆ ಯಾರೂ ಬರುತ್ತಿರಲಿಲ್ಲ. ಎಲ್ಲರೂ ಅವನ ಸಹಾಯಕರೇ. ಇದು ಸಾಲದೆಂಬಂತೆ ಸಂಜೆ ತಂದೆಯವರು ಬಂದಾಗ ಅವರಿಗೆ ದೂರು ಹೇಳಿ ನನಗೆ ಬೆಲ್ಟಿನಿಂದ ಏಟು ಸಿಗುವಂತೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ತಂದೆಯವರ ಕೈಯಿಂದ ಬೆಲ್ಟಿನಿಂದ ಏಟು ತಿಂದವನು ನಾನೊಬ್ಬನೇ.

 

ತಂದೆಯವರ ನಿಧನಾನಂತರ

ಮದರಾಸಿನಲ್ಲಿದ್ದಾಗ ತಂದೆಯವರು (೧೯೩೯ ನವೆಂಬರ್ ೬ರಂದು) ತೀರಿಕೊಂಡರು. ತಾಯಿ ನಮಗೆ ಬಿಡಾರ ಮಾಡಿಕೊಟ್ಟು ಊರಿಗೆ ಮರಳಿದರು. ತಂದೆಯ ಕೆಲವು ಆಪ್ತರು ಹೋಗುವುದು ಬೇಡ, ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತದೆ ಎಂದರೂ ಕೇಳದೆ ಅಮ್ಮ ಅಡ್ಡೂರಿಗೆ ಹೊರಟುಹೋದಳು. ಆಗ ದೊಡ್ಡಣ್ಣ ಎಂಬಿಬಿಎಸ್ ಕೊನೆಯ ವರುಷದಲ್ಲಿ ಕಲಿಯುತ್ತಿದ್ದ. ಇನ್ನು ಒಂದು ವರುಷ ಓದಿ ಹೌಸ್ ಸರ್ಜನ್ ಮುಗಿಸಿದರೆ ಆತನ ವಿದ್ಯಾಭ್ಯಾಸ ಮುಗಿಯಲಿತ್ತು. ನಾನು ಎಫ್.ಎ.ಯಲ್ಲಿ ಓದುತ್ತಿದ್ದೆ. ಸಣ್ಣಣ್ಣ ಎಲ್.ಐ.ಎಂ. ಓದುತ್ತಿದ್ದ. ನಾನು ಮತ್ತು ದೊಡ್ಡಣ್ಣ ಒಂದು ರೂಂ ಮಾಡಿ ವಿದ್ಯಾಭ್ಯಾಸ ಮುಂದುವರಿಸಿದೆವು. ಸಣ್ಣಣ್ಣ ಅವನ ಕಾಲೇಜಿನ ಸಹಪಾಠಿಗಳೊಂದಿಗೆ ಇರುತ್ತಿದ್ದ.ನಮಗೆ ಖರ್ಚಿಗೆ ತಿಂಗಳಿಗೆ ಇಪ್ಪತ್ತೈದು ರೂಪಾಯಿ ಸಿಗುತ್ತಿತ್ತು. ಸಣ್ಣಣ್ಣ ಕಾಲೇಜು ದಿನಗಳಲ್ಲಿ ದುಂದುವೆಚ್ಚ ಮಾಡದೆ ಮಿತವ್ಯಯದಲ್ಲಿ ಜೀವನ ನಡೆಸುತ್ತಿದ್ದ. ೧೯೪೦ರ ಮಾರ್ಚ್‌ನಲ್ಲಿ ನಾನು ಮಂಗಳೂರಿಗೆ ಬಂದೆ. ನನ್ನ ತಮ್ಮ ಊರಿಗೆ ಬಂದು ಮಂಗಳೂರಿನಲ್ಲಿ ಕಲಿಯಲು ಶುರು ಮಾಡಿದ. ದೊಡ್ಡಣ್ಣನ ವಿದ್ಯಾಭ್ಯಾಸ ಮುಗಿದಿತ್ತು. ಇನ್ನು ಕ್ಲಿನಿಕ್ ತೆರೆಯಲು ತಾನು ತಂದೆಯವರ ಉಳಿತಾಯದ ಹಣ ಖರ್ಚು ಮಾಡಿದರೆ ಸೋದರ ಸೋದರಿಯರ ವಿದ್ಯಾಭ್ಯಾಸಕ್ಕೆ ತೊಂದರೆಯಾದೀತೆಂದು ಆತ ಸೈನ್ಯಕ್ಕೆ ಸೇರಿದ.ತಂದೆಯವರ ನಿವೃತ್ತಿ ವೇತನ ಮತ್ತು ಇತರ ಅಲ್ಪಸ್ವಲ್ಪ ಉಳಿತಾಯದ ಹಣವನ್ನು ಅಮ್ಮ ಬ್ಯಾಂಕಿಗೆ ಹಾಕುತ್ತಿರಲಿಲ್ಲ. ಅವರು ಅದರಿಂದ ಕೃಷಿಭೂಮಿ ಖರೀದಿಸಿ ಗೇಣಿ ವಸೂಲಿ ಮಾಡಿ ಬದುಕಬೇಕೆಂದು ನಿಶ್ಚಯಿಸಿದ್ದರು. ಇದಕ್ಕೆ ಸಣ್ಣಣ್ಣನ ಬೆಂಬಲವಿತ್ತು. ಇದರಿಂದಾಗಿ ನಮ್ಮ ಒಟ್ಟು ಉತ್ಪತ್ತಿ ಸುಮಾರು ೪೫೦ ಮುಡಿ ಅಕ್ಕಿ ಗೇಣಿ ಬರುವಷ್ಟಾಯಿತು. ಹಿಂದೆ ಅದು ೧೫೦ ಅಕ್ಕಿ ಮುಡಿಗಳಾಗಿತ್ತು. ಈ ಹಣದಿಂದ ನನ್ನ ತಾಯಿ ಮನೆ ಖರ್ಚನ್ನು, ಮಕ್ಕಳ ವಿದ್ಯಾಭ್ಯಾಸವನ್ನು ನಿಭಾಯಿಸಲು ಸಾಧ್ಯವಾಯಿತು.ಮದರಾಸಿನಲ್ಲಿ ಅವನಿಗೆ ರಾಜಕೀಯದ ಗಂಧಗಾಳಿ ಇರಲಿಲ್ಲ. ಆಗ ಎರಡನೇ ಮಹಾಯುದ್ಧ ಶುರುವಾಗಿತ್ತು. ಚಳುವಳಿ ಜೋರಾಗಿತ್ತು. ಆದರೆ ಅವನು ಅದೆಲ್ಲದರಿಂದ ದೂರವಾಗಿದ್ದ.

 

ರಾಜಕೀಯದ ಅಲೆಗಳಲ್ಲಿ

ಇತ್ತ ಮಂಗಳೂರಿನಲ್ಲಿ ಬೀಸುತ್ತಿದ್ದ ರಾಜಕೀಯದ ಅಲೆಯಿಂದಾಗಿ ನಾನು ಇರುತ್ತಿದ್ದ ಹಾಸ್ಟೆಲ್‌ನಲ್ಲಿ ರಾಜಕೀಯ ಚಟುವಟಿಕೆ ಜೋರಾಯಿತು. ನಾನು ಇದನ್ನು ಸೇರಿಕೊಂಡೆ. ಕಮ್ಯೂನಿಸ್ಟ್ ಸಿದ್ಧಾಂತಗಳು ಮತ್ತು ಅದರಿಂದ ಪ್ರೇರಿತವಾದ ಕಾರ್ಯಗಳಲ್ಲಿ ನಾನು ಕಟ್ಟುಬಿದ್ದೆ.ಒಮ್ಮೆ ಸಣ್ಣಣ್ಣ ಮಂಗಳೂರಿಗೆ ಬಂದಿದ್ದಾಗ ನನ್ನ ಹಾಸ್ಟೆಲ್ ರೂಂನಲ್ಲಿ ತಂಗಿದ್ದ. ರಾತ್ರಿಯಿಡೀ ನನ್ನ ರಾಜಕೀಯ ಜೀವನದ ಬಗ್ಗೆ ಚರ್ಚಿಸಿದ್ದ. ಬೆಳಿಗ್ಗೆ ಅವನೊಂದಿಗೆ ರೈಲ್ವೇ ನಿಲ್ದಾಣಕ್ಕೆ ನಾನೂ ಹೊರಟೆ. ಹೋಗುತ್ತಿದ್ದಾಗ ಕಮ್ಯೂನಿಸ್ಟ್ ಪತ್ರಿಕೆಯೊಂದನ್ನು ಕೊಂಡು ಕೊಳ್ಳಲು ವಿನಂತಿಸಿದೆ. ರಾಜಕೀಯದ ಅರಿವಿಲ್ಲದ ಅವನು ನಿರಾಕರಿಸಿದ. ಇದರಿಂದಾಗಿ ನನಗೆ ಬೇಸರವಾಗಿತ್ತು.ರೈಲ್ವೇನಿಲ್ದಾಣ ಸಮೀಪಿಸುತ್ತಿದ್ದಂತೆ ಆತನ ಚಪ್ಪಲಿಯ ಬಾರ್ ಕಡಿಯಿತು. ಚಪ್ಪಲಿ ಹಾಕಿಕೊಂಡು ಹೋಗುವ ಸ್ಥಿತಿಯಲ್ಲಿರಲಿಲ್ಲ. ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿತ್ತು. ಆಗ ಅವನಿಗೆ ನನ್ನ ಪತ್ರಿಕೆ ನೆನಪಾಗಿ ‘ಒಂದು ಪೇಪರ್ ಕೊಡು’ ಎಂದು ಕೇಳಿದ. ನಾನು ಕೊಡುವುದಿಲ್ಲವೆಂದು ಹೇಳಿದೆ. ‘ಹಣ ಕೊಡುತ್ತೇನೆ, ಕೊಡು’ ಎಂದು ಒತ್ತಾಯಿಸಿದ. ನೀನು ಎಷ್ಟೇ ಹಣ ಕೊಟ್ಟರೂ ನಿನಗೆ ಕೊಡುವುದಿಲ್ಲ ಎಂದು ನಾನು ಪಟ್ಟು ಹಿಡಿದೆ. ಇದರಿಂದಾಗಿ ನನ್ನ ಪಕ್ಷನಿಷ್ಠೆಯ ಕುರಿತು ಆತನಿಗೆ ತಿಳಿದಿರಬೇಕು. ಮತ್ತೆ ಆತ ಒತ್ತಾಯಿಸಲಿಲ್ಲ. ಅದಾದ ಬಳಿಕ ತಾಯಿಯ ಬಳಿ ಹೇಳಿ ನನ್ನನ್ನು ತಿದ್ದಲು ಅವನು ಪ್ರಯತ್ನಿಸುತ್ತಿದ್ದ.ಪಕ್ಷದ ಮೇಲಿನ ನಿರ್ಬಂಧ ತೆಗೆಯಲಾಯಿತು. ಕಮ್ಯೂನಿಸ್ಟ್ ಪಕ್ಷದ ಕೆಲಸ ಚುರುಕಿನಿಂದ ಆರಂಭವಾಯಿತು. ಪಕ್ಷಕ್ಕೆ ಬೇಕಾದ ಅರ್ಥಿಕ ಮೂಲಕ್ಕಾಗಿ ಪಕ್ಷದ ನಿಧಿಯೊಂದನ್ನು ರೂಪಿಸಲಾಯಿತು. ಹಲವು ಅಭಿಮಾನಿಗಳು, ಪ್ರೋತ್ಸಾಹಕರು, ಪಕ್ಷ ಕಾರ್ಯಕರ್ತರು ಸಾಧ್ಯವಾದಷ್ಟು ನೆರವಾದರು. ರಾಜೇಶ್ವರ ರಾಯರು ಅವರ ಪೂರ್ಣ ಆಸ್ತಿ ಮಾರಿ, ಅವರ ಹೆಂಡತಿಗೆ ಜೀವನಕ್ಕಾಗಿ ಆರು ಎಮ್ಮೆ ತೆಗೆದುಕೊಟ್ಟು ಉಳಿದೆಲ್ಲಾ ಸಂಪತ್ತನ್ನು ಪಕ್ಷಕ್ಕೆ ಧಾರೆಯೆರೆದರು.ಈ ವಿಚಾರ ನನಗೆ ಸ್ಫೂರ್ತಿ ನೀಡಿತು. ನನ್ನಲ್ಲಿ ಹಣ ಎಲ್ಲಿಂದ? ನಮ್ಮ ಕುಟುಂಬದ ಆಸ್ತಿ ಇದೆ. ಹಾಗಾಗಿ ಅಮ್ಮನ ಹತ್ತಿರ ನನ್ನ ಪಾಲಿನ ಬಾಬ್ತು ಕೇವಲ ಮೂರು ಸಾವಿರ ಕೇಳಿದೆ. ನನ್ನೆಲ್ಲಾ ಹಕ್ಕನ್ನು ನಿಮಗೆ ಬರೆದುಕೊಡುತ್ತೇನೆ ಎಂದಿದ್ದೆ. ಅಮ್ಮ ‘ಆಗುವುದಿಲ್ಲ’ ಎಂದರು.

 

ರಾಜಕೀಯಕ್ಕೆ ಧುಮುಕಿದ ಸಣ್ಣಣ್ಣ

ರಾಜಕೀಯದ ಗಂಧಗಾಳಿಯೂ ಇಲ್ಲದ, ಅದರ ಮೇಲೆ ಆಸ್ಥೆಯೂ ಇಲ್ಲದ ಸುಬ್ಬರಾವ್ ಏಕಾಏಕಿ ರಾಜಕೀಯ ರಂಗಕ್ಕೆ ಧುಮುಕಿದ. ೧೯೪೨ರ ಚಳುವಳಿ ಅವನ ಮೇಲೆ ಯಾವುದೇ ಪ್ರಭಾವ ಬೀರಿರಲಿಲ್ಲ. ೧೯೪೩ರಲ್ಲಿ ಗಾಂದೀಜಿ ಉಪವಾಸ ಸತ್ಯಾಗ್ರಹ ಪ್ರಾರಂಬಿಸಿದಾಗ ಅವನ ಕಾಲೇಜಿನ ಹಾಗೂ ಮದ್ರಾಸಿನ ಕಾಲೇಜುಗಳ ವಿದ್ಯಾರ್ಥಿ ಸಮುದಾಯ ಸತ್ಯಾಗ್ರಹಕ್ಕೆ ಇಳಿಯಿತು. ಗಾಂದೀಜಿಯವರ ಬಿಡುಗಡೆಗೆ ಒತ್ತಾಯಿಸಿ ತಂಡ ತಂಡವಾಗಿ ಸತ್ಯಾಗ್ರಹ ಮಾಡಬೇಕೆಂದು ಅವರು ನಿರ್ಣಯಿಸಿದ್ದರು. ಒಂದೆರಡು ತಂಡಗಳವರು ಬಂದಿತರಾಗಿ ಸತ್ಯಾಗ್ರಹ ಮುಂದುವರಿಸಲು ಸ್ವಯಂಸೇವಕರ ಕೊರತೆ ಕಂಡಾಗ ಸಣ್ಣಣ್ಣನಿಗೆ ಸಿಟ್ಟು ಬಂತು. ಅವನೂ ಸತ್ಯಾಗ್ರಹಕ್ಕೆ ಧುಮುಕಿದ. ಹಲವರೊಂದಿಗೆ ಅಣ್ಣನೂ ಬಂಧನಕ್ಕೊಳಗಾದನು. ಅವನನ್ನು ಅಲಿಪುರಂ ಜೈಲಿಗೆ ಒಯ್ಯಲಾಯಿತು.ಅವನು ಅಲ್ಲಿದ್ದಾಗ ಒಂದು ಸ್ವಾರಸ್ಯ ನಡೆಯಿತು. ಅಲಿಪುರಂ ಜೈಲಿನಲ್ಲಿ ಸಾವಿರಾರು ರಾಜಕೀಯ ಕೈದಿಗಳಿಗೆ ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಗೆ ಜೈಲಿನ ಆವರಣ ದೊಳಗಿನ ಕಂಪೌಂಡ್‌ನಲ್ಲಿ ಅಡ್ಡಾಡಲು ಅವರವರ ಕೋಣೆಗಳಿಂದ ಹೊರಬಿಡುತ್ತಿದ್ದರು. ಆ ಸಮಯದಲ್ಲೇ ಸ್ನಾನ ಮಾಡಬೇಕಿತ್ತು. ಎಲ್ಲರೂ ನಳ್ಳಿಯ ಹತ್ತಿರ ಜಮಾಯಿಸಿದ್ದರು. ಕೆಲವರಿಗೆ ಸ್ನಾನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಎಲ್ಲರನ್ನೂ ಹೊರಗೆ ಬಿಟ್ಟಾಗ ಯಾರೂ ನಳ್ಳಿಯ ಹತ್ತಿರ ಜಮಾಯಿಸದಿದ್ದುದನ್ನು ಕಂಡು ಅಣ್ಣನಿಗೆ ಕುತೂಹಲ ವಾಯಿತು. ಕೂಡಲೇ ಬೈರಾಸ್ ಹಿಡಿದುಕೊಂಡು ನಳ್ಳಿಯ ಹತ್ತಿರ ಹೋಗಿ ಸ್ನಾನ ಮಾಡುವಾಗ ಶುರುವಾಯಿತು – ಧೂಳಿನ ಸುಂಟರಗಾಳಿ. (ಅದು ಬಳ್ಳಾರಿ ಜಿಲ್ಲೆಯ ವಾತಾವರಣದಲ್ಲಿ ಉಂಟಾಗುವ ವೈಪರೀತ್ಯ). ಆಗ ಆಗಸದಲ್ಲಿ ಮೋಡ ಕವಿದಿತ್ತು. ಅವನ ಮೈಯೆಲ್ಲಾ ಧೂಳು ಮೆತ್ತಿಕೊಂಡಿತು. ಇತರರು ಯಾಕೆ ಸ್ನಾನಕ್ಕೆ ಹೋಗಲಿಲ್ಲವೆಂಬುದು ಆಗ ಆತನಿಗೆ ತಿಳಿಯಿತು.ಮೂರು ತಿಂಗಳುಗಳ ಕಠಿಣ ಶಿೆಯ ನಂತರ ಅವನ ಬಿಡುಗಡೆಯಾಯಿತು. ಕೂಡಲೇ ಅವನು ಅಡ್ಡೂರಿಗೆ ಬಂದ. ಅದನ್ನು ತಿಳಿದು ನಾನೂ ಅಡ್ಡೂರಿಗೆ ಧಾವಿಸಿದೆ.ನನಗೂ ಅವನಿಗೂ ಬಿಸಿಬಿಸಿ ವಾದ ನಡೆಯಿತು. ಅವನು ನಮ್ಮ ಕಮ್ಯೂನಿಸ್ಟ್ ಪಕ್ಷವನ್ನು ಜರೆದ. ನೀವು ದ್ರೋಹಿಗಳೆಂದು ಹೀಗಳೆದ. ನಾನೂ ಸುಮ್ಮನಿರಲಿಲ್ಲ. ಹೊರಗಿನಿಂದ ನೋಡುವವರಿಗೆ ನಾವು ಬಡಿದಾಡಿಕೊಂಡಂತೆ ಭಾಸವಾಗುತ್ತಿತ್ತು. ಹೀಗೆ ಮಾತನಾಡುವಾಗ ನನ್ನ ಅಮ್ಮ ‘ನೀನು ಇವನಿಗೆ ಸ್ವಲ್ಪ ಬುದ್ಧಿ ಹೇಳು ಸುಬ್ಬರಾವ್. ಅವನಿನ್ನೂ ಸಂಪಾದನೆಯ ದಾರಿಯಲ್ಲಿ ಹೋಗುವಂತೆ ಕಾಣುವುದಿಲ್ಲ. ಅವನಿಗೆ ಹಣ ಕೊಡಲು ನನ್ನಿಂದ ಸಾಧ್ಯವಿಲ್ಲ. ಗೇಣಿಯೂ ಸರಿಯಾಗಿ ಬರುತ್ತಿಲ್ಲ’ ಎಂದು ಒಗ್ಗರಣೆ ಹಾಕುತ್ತಿದ್ದಳು. ‘ಗೇಣಿ ಯಾಕೆ ಬರುವುದಿಲ್ಲ?’ ಎಂದು ಅಣ್ಣ ಕೇಳಿದ. ‘ಅವರಿಗೆ ಹೊಟ್ಟೆತುಂಬ ಊಟ ಮಾಡಬೇಕು’ ಎಂದರು ಅಮ್ಮ. ಅದನ್ನು ಕೇಳಿ ನನಗೂ ಆಶ್ಚರ್ಯವಾಯಿತು. ‘ಹೊಟ್ಟೆತುಂಬ ತಿಂದರೆ ಗೇಣಿ ಕೊಡುವುದು ಕಷ್ಟವೇ?’ ಎಂದು ಕೇಳಿದೆ. ಅಮ್ಮ ಸತ್ಯವಾದುದನ್ನೇ ಹೇಳಿದ್ದಳು, ‘ಸಮಾ ಊಟ ಮಾಡಿದರೆ ಗೇಣಿ ಹೇಗೆ ಕೊಡಲಿಕ್ಕಾಗುತ್ತದೆ?’ ಎಂದು. ನಾನು ಕಮ್ಯೂನಿಸ್ಟ್ ಸಿದ್ಧಾಂತವನ್ನು ಒಪ್ಪಿದವನಾದ್ದರಿಂದ ಅದನ್ನು ಕೇಳಿ ಸುಮ್ಮನಾದೆ. ನನ್ನ ಮುಖ ನೋಡಿ ಅಣ್ಣನೂ ಚಿಂತಿಸತೊಡಗಿದ. ಆಗಿನ ಸಮಾಜದ ಆಗುಹೋಗುಗಳು ಮತ್ತು ಕಷ್ಟಸುಖಗಳು ಅದೇ ಮೊದಲ ಬಾರಿಗೆ ಅವನಿಗೆ ಮನವರಿಕೆಯಾದಂತಿತ್ತು.

 

ಮಂಜೇಶ್ವರದಲ್ಲಿ ವೃತ್ತಿ ಆರಂಭ

ಮುಂದೆ ಅಣ್ಣ ಮಂಜೇಶ್ವರದಲ್ಲಿ ಡಿಸೆಂಬರ್ ೧೯೪೩ರಲ್ಲಿ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ಮುಂದುವರಿಸಿದ. ನಾವು ಒಟ್ಟು ಸೇರಿದಾಗ ಮೊದಲಿನಂತೆ ಚರ್ಚೆ ಆಗುತ್ತಿತ್ತು. ಆಗ ನೆಹರೂ ಮೈದಾನದ ಅಂಚಿನಲ್ಲಿದ್ದ ಪಕ್ಷದ ಕಚೇರಿಯಲ್ಲಿ ಹೆಚ್ಚು ಸಮಯವಿರುತ್ತಿದ್ದೆ. ಮುಖ್ಯವಾಗಿ ಅಲ್ಲಿ ಶಾಂತಾರಾಂ ಪೈ, ಬಿ.ವಿ. ಕಕ್ಕಿಲ್ಲಾಯರು ಇರುತ್ತಿದ್ದರು. ಅಣ್ಣನಿಗೆ ಅವರೊಂದಿಗೂ ಸಂಪರ್ಕವಾಯಿತು. ಅಣ್ಣನು ಆಗಾಗ್ಗೆ ಬಂದಾಗ ರಾಜಕೀಯ ಕುರಿತು ಬಿಸಿಬಿಸಿ ವಿಚಾರ ವಿನಿಮಯವಾಗುತ್ತಿತ್ತು.ಮಂಜೇಶ್ವರದಲ್ಲಿ ಸಣ್ಣಣ್ಣ ಕ್ರಿಕೆಟ್ ಮುಂತಾದ ಕ್ರೀಡೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯುವಕರಿಗೆಲ್ಲಾ ಮುಂದಾಳಾಗಿದ್ದನು. ಕಾಂಗ್ರೆಸ್ಸಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದನು. ಮಂಗಳೂರಿನಲ್ಲಿ ಸನ್ಯಾಸಿಗುಡ್ಡೆಯಲ್ಲಿ ನಮ್ಮ ಬಿಡಾರ ಇತ್ತು. ೧೯೪೬ರ ನಂತರ ಅಮ್ಮ ಅಡ್ಡೂರಿಗೆ ಹೋಗಿ ನೆಲೆಸಿದಳು. ಹಾಗಾಗಿ ನಾವು (ನಾನು ಮತ್ತು ಪಕ್ಷದ ಸದಸ್ಯರು) ಅಲ್ಲೇ ಸಣ್ಣ ಮನೆಯೊಂದಕ್ಕೆ ಬಿಡಾರ ಬದಲಿಸಿದ್ದೆವು. ಹೊಳ್ಳರು, ಕಕ್ಕಿಲ್ಲಾಯರು, ಶಾಂತಾರಾಂ ಅಲ್ಲದೆ ಹಲವು ಪಕ್ಷದ ಮುಖಂಡರು ಆಗಾಗ್ಗೆ ಅಲ್ಲಿಗೆ ಬರುತ್ತಿದ್ದರು. ಅಣ್ಣನೂ ಬರುತ್ತಿದ್ದ. ಹಾಗಾಗಿ ಅಣ್ಣನಿಗೆ ಅವರೆಲ್ಲರ ಪರಿಚಯವಾಗಿತ್ತು.ಆಗ ಕಮ್ಯೂನಿಸ್ಟ್ ಪಕ್ಷದ ಧೋರಣೆ ಗಡುಸಾಗಿತ್ತು. ಎರಡನೇ ಮಹಾಯುದ್ಧ ಮುಗಿದಾಗ ಸೋವಿಯತ್ ರಷ್ಯಾ ಅಜೇಯವಾಗಿ ಉಳಿದು, ಅದು ನಾಶವಾಗುವುದೆಂದು ನಂಬಿದ್ದ ಸಾಮ್ರಾಜ್ಯಶಾಹಿ ಜಗತ್ತಿಗೆ ನಿರಾಶೆಯಾಯಿತು. ಸೋವಿಯತ್ ರಷ್ಯದ ಸ್ಫೂರ್ತಿಯಿಂದ ಜಗತ್ತಿನಾದ್ಯಂತ ಕಾರ್ಮಿಕರ ಮತ್ತು ವಸಾಹತು ಜನರ ಹೋರಾಟ ಹುರುಪುಗೊಂಡಿತು. ಭಾರತದಲ್ಲಿ ಹೋರಾಟ ಚುರುಕಾಯಿತು. ಇದರಲ್ಲಿ ಕಮ್ಯೂನಿಸ್ಟ್ ಪಕ್ಷವು ಮುಂಚೂಣಿಯಲ್ಲಿತ್ತು. ಹಲವರು ಹೋರಾಟಗಳಲ್ಲಿ ನೇತೃತ್ವ ವಹಿಸಿದರು. ನಾವಿಕರ ಬಂಡಾಯ, ಅಂಚೆ ಮುಷ್ಕರ, ಐ.ಎನ್.ಐ. ಕೈದಿಗಳ ಬಿಡುಗಡೆ ಮುಂತಾದ ಹೋರಾಟಗಳು ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ನಾಯಕರಿಗೂ ಚಳಿ ಹುಟ್ಟಿಸಿತು. ಕಾಂಗ್ರೆಸ್ ಸರಕಾರವು ಕಮ್ಯೂನಿಸ್ಟರ ಹುಟ್ಟಡಗಿಸುವ ಛಲ ಕೈಗೊಂಡಿತ್ತು. ಕೆಲವರನ್ನು ಜೈಲಿಗೆ ಹಾಕುವ ಕಾರ್ಯ ಭರದಿಂದ ಸಾಗುತ್ತಿತ್ತು. ಕೆಲವರು ಭೂಗತರಾದರು. ಈ ದಬ್ಬಾಳಿಕೆಯನ್ನು ಸಣ್ಣಣ್ಣ ಸುಬ್ಬರಾವ್ ಸಹಿಸುತ್ತಿರಲಿಲ್ಲ. ಇದನ್ನು ಖಂಡಿಸುತ್ತಿದ್ದ. ಸರಕಾರದ ಈ ಧೋರಣೆಗಳಿಂದ ಆತನಿಗೆ ಕಾಂಗ್ರೆಸ್ ಮೇಲಿನ ವ್ಯಾಮೋಹ ಕಡಿಮೆಯಾಗತೊಡಗಿತು.

 

ಕಮ್ಯುನಿಸ್ಟ್ ಚಳವಳಿಗೆ ರಂಗ ಪ್ರವೇಶ

ಡಾ. ಸುಬ್ಬರಾವ್ ವೈದ್ಯವೃತ್ತಿ ಆರಂಬಿಸಿದ ಮಂಜೇಶ್ವರ ಪಟ್ಟಣ ಕಾಸರಗೋಡು ಪ್ರದೇಶದಲ್ಲಿದೆ. ಅಲ್ಲಿ ರೈಲುನಿಲ್ದಾಣವಿದ್ದರೂ ಅದು ಹಿಂದುಳಿದ ಪ್ರದೇಶವಾಗಿತ್ತು. ಬಹುಪಾಲು ಜನರು ಅನಕ್ಷಸ್ಥರು ಹಾಗೂ ಸಾಮಾಜಿಕವಾಗಿ ಹಿಂದುಳಿದವರು. ಅಲ್ಲಿನ ರೈತರು ಹಾಗೂ ಕೃಷಿ ಕಾರ್ಮಿಕರು ಭೂಮಾಲಿಕರ ಗುಲಾಮರಂತೆ ಜೀವಿಸುತ್ತಿದ್ದರು. ಕಯ್ಯೂರಿನಲ್ಲಿ ಭೂಮಾಲಿಕರ ವಿರುದ್ಧ ಸ್ವಾತಂತ್ರ್ಯ ಸಮರ ಸೇನಾನಿಗಳು ನಡೆಸಿದ ಹೋರಾಟ ದಕ್ಷಿಣಭಾರತದಲ್ಲೇ ಸುದ್ದಿಯಾಗಿದ್ದರೂ ಮಂಜೇಶ್ವರಕ್ಕೆ ಅದರ ಬಿಸಿ ತಟ್ಟಿರಲಿಲ್ಲ. ಆದ್ದರಿಂದಲೇ ಭೂಮಾಲೀಕರಿಂದ ರೈತರ ಶೋಷಣೆ ರಾಜಾರೋಷವಾಗಿ ನಡೆಯುತ್ತಿತ್ತು. ಒಕ್ಕಲುಗಳು ಸಲ್ಲಿಸಿದ ಗೇಣಿಗೆ ಭೂಮಾಲೀಕರು ರಶೀದಿ ನೀಡುತ್ತಿರಲಿಲ್ಲ. ಬೆಳೆ ನಾಶವಾಗಿ ಗೇಣಿ ಕೊಡದಿದ್ದರೂ ಒಕ್ಕಲೆಬ್ಬಿಸುತ್ತಿದ್ದರು. ಪ್ರತಿಭಟಿಸಿದವರ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದರು. ಕೂಲಿಕಾರ್ಮಿಕರ ಸ್ಥಿತಿಯೂ ಶೋಚನೀಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ರೈತರನ್ನೂ ಕೂಲಿಕಾರ್ಮಿಕರನ್ನೂ ಸಂಘಟಿಸಲು ದೀರ ನೇತಾರನೊಬ್ಬನ ಅಗತ್ಯವಿತ್ತು.ಈ ಹೊತ್ತಿನಲ್ಲಿ, ೧೯೫೨ರಲ್ಲಿ ಮಂಜೇಶ್ವರದ ಎಸ್.ಎ.ಟಿ. ಹೈಸ್ಕೂಲಿಗೆ ಅಧ್ಯಾಪಕರಾಗಿ ರಾಮಪ್ಪ ಮಾಸ್ಟರರ ಆಗಮನ. ಊರಿನವರನ್ನು ಬೇಗನೇ ಪರಿಚಯ ಮಾಡಿಕೊಂಡ ರಾಮಪ್ಪ ಮಾಸ್ಟರ್ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯಕರ್ತರು. ಅವರು ಡಾ. ಸುಬ್ಬರಾಯರ ನಾಯಕತ್ವ ಗುಣಗಳನ್ನು ಗುರುತಿಸಿದರು. ರೈತರ ಹಾಗೂ ಕೂಲಿಕಾರ್ಮಿಕರ ಸಂಘಟನೆಗೆ ಡಾ. ಸುಬ್ಬರಾಯರೇ ಮುಂದಾಳುತನ ವಹಿಸಬೇಕೆಂದು ನಿಧಾನವಾಗಿ ಮನವೊಲಿಸಿದರು. ರೈತರನ್ನು ಆಗಿನ ಕಾಲದಲ್ಲಿ ಸಂಘಟಿಸುವುದು ಸುಲಭವಾಗಿರಲಿಲ್ಲ. ರೈತ ಸಂಘಟನೆಗೆ ಸೇರಿದರೆ ಧನಿಗಳು ಒಕ್ಕಲೆಬ್ಬಿಸುತ್ತಾರೆಂದು ಹೆದರುತ್ತಿದ್ದ ರೈತರಲ್ಲಿ ಆತ್ಮವಿಶ್ವಾಸ ತುಂಬಬೇಕಿತ್ತು. ಡಾ. ಸುಬ್ಬರಾವ್ ಈ ಸವಾಲನ್ನು ಸ್ವೀಕರಿಸಿದರು. ರೈತ ಸಂಘಟನೆ ಕಟ್ಟುವ ಮೂಲಕ ಕಮ್ಯುನಿಸ್ಟ್ ಚಳವಳಕ್ಕೆ ರಂಗಪ್ರವೇಶ ಮಾಡಿದರು.ಅವರಿಗೆ ರಾಮಪ್ಪ ಮಾಸ್ಟರರ ಸಮರ್ಥ ಬೆಂಬಲ. ಇವರಿಬ್ಬರ ನಾಯಕತ್ವದಲ್ಲಿ ಸಂಘಟನೆ ಬೆಳೆಯಿತು. ಹೆಚ್ಚು ಹೆಚ್ಚು ರೈತರು ರೈತಸಂಘ ಸೇರತೊಡಗಿದರು. ಇದರಿಂದ ಆತಂಕಗೊಂಡ ಭೂಮಾಲೀಕರು ಒಕ್ಕಲು ರೈತರನ್ನೂ ಕೂಲಿ ಕಾರ್ಮಿಕರನ್ನೂ, ಪೀಡಿಸ ತೊಡಗಿದರು. ಗೂಂಡಾಗಳ ಸಹಾಯದಿಂದ ಬೆದರಿಸತೊಡಗಿದರು. ಗೇಣಿ ಬಾಕಿಯಿದೆ ಎಂಬ ನೆಪ ಹೇಳಿ, ರೈತರು ಬೆಳೆದ ಪೈರನ್ನು ಧನಿಗಳ ಗೂಂಡಾಗಳು ಕಟಾವು ಮಾಡತೊಡಗಿದರು. ಇದನ್ನು ವಿರೋದಿಸಿ ವರ್ಕಾಡಿ ಪಂಚಾಯತಿ ಮತ್ತು ಪುತ್ತಿಗೆ ಪಂಚಾಯಿತಿಗಳಲ್ಲಿ ಡಾ. ಸುಬ್ಬರಾವ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕೊನೆಗೂ ಧನಿಯ ಗೂಂಡಾಗಳು ಕಟಾವು ಮಾಡಿದ್ದ ಪೈರನ್ನು ಅವನ್ನು ಬೆಳೆಸಿದ್ದ ರೈತರಿಗೇ ಹಿಂತಿರುಗಿಸುವಲ್ಲಿ ಡಾ. ಸುಬ್ಬರಾವ್ ಯಶಸ್ವಿಯಾದರು. ಇದುವೇ ಅವರ ಮುಂದಿನ ಹೋರಾಟಗಳಿಗೆ ಭದ್ರ ಬುನಾದಿಯಾಯಿತು.ಈ ಹೋರಾಟಗಳಲ್ಲಿ ಡಾ. ಸುಬ್ಬರಾಯರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಹಲವರು. ನಾರಾಯಣ ತಾಳಿತ್ತಾಯ, ಅನಂತರಾಮ ತಾಳಿತ್ತಾಯ, ನಾರಾಯಣ ಮಡಿವಾಳ, ನಾರಾಯಣ ಹೆಗ್ಗಡೆ, ದೂಮ ಮೂಲ್ಯ, ಐತಪ್ಪ ಪೂಜಾರಿ, ಮಾಂಕು ಸಾಲಿಯಾನ್ ಇತರರು. ಸಾವಿರಾರು ಮುಡಿ ಅಕ್ಕಿ ಗೇಣಿ ಪಡೆಯುತ್ತಿದ್ದ ಒಬ್ಬ ಧನಿ, ಒಕ್ಕಲು ತಂದೊಪ್ಪಿಸಿದ ಒಂದು ಅಕ್ಕಿ ಮುಡಿ ಸಡಿಲವಾಗಿತ್ತು ಎಂಬ ಕಾರಣಕ್ಕೆ ಆ ಒಕ್ಕಲಿಗೆ ಹೊಡೆದುರುಳಿಸಿದ್ದ ಕಾಲಘಟ್ಟದಲ್ಲಿ ಡಾ. ಸುಬ್ಬರಾಯರ ರೈತಪರ ಹೋರಾಟವು ಚಾರಿತ್ರಿಕ ಘಟನೆ.

 

ಪ್ರತಿಭಟನೆಗಳ ಮುಂಚೂಣಿಯಲ್ಲಿ

ಮಂಜೇಶ್ವರದಲ್ಲಿ ಪ್ರತಿಭಟನೆಗಳ ಮುಂಚೂಣಿಯಲ್ಲಿ ಇರುತ್ತಿದ್ದವರು ಡಾ. ಸುಬ್ಬರಾವ್. ಮೈನವಿರೇಳಿಸುವ ಪ್ರತಿಭಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ ಸಿ.ಪಿ.ಐ. ಜಿಲ್ಲಾ ಸಮಿತಿ ಸದಸ್ಯರಾದ ಪಿ. ರಾಘವನ್. ೧೯೮೪-೮೫ರಲ್ಲಿ ಕೇಂದ್ರ ಸರಕಾರದ ಜನವಿರೋದಿ ನೀತಿಯನ್ನು ಪ್ರತಿಭಟಿಸಲು ‘ರೈಲುತಡೆ ಚಳವಳ’ಕ್ಕೆ ಕಮ್ಯುನಿಸ್ಟ್ ಪಾರ್ಟಿ ಕರೆ ನೀಡಿತ್ತು. ಮಂಜೇಶ್ವರದ ಕಮ್ಯುನಿಸ್ಟ್ ಕಾರ್ಯಕರ್ತರು ಕಣ್ವತೀರ್ಥದಲ್ಲಿ ರೈಲು ತಡೆ ಹಮ್ಮಿಕೊಂಡಿದ್ದರು.ರೈಲುಹಳಿಗಳಲ್ಲಿ ನೂರಾರು ಕಮ್ಯುನಿಸ್ಟ್ ಕಾರ್ಯಕರ್ತರು ನಿಂತಿದ್ದರು. ಆ ದಿನ ಬೆಳಗ್ಗೆಯೇ ರೈಲು ಅತೀ ವೇಗದಿಂದ ಕಾರ್ಯಕರ್ತರತ್ತ ನುಗ್ಗಿ ಬರತೊಡಗಿತು. ಇದನ್ನು ಕಂಡ ಒಬ್ಬಿಬ್ಬರು ಅಂಜಿ ನಿಂತಲ್ಲಿಂದ ಪಕ್ಕಕ್ಕೆ ಓಡಿಹೋದರು. ಪಿ. ರಾಘವನ್, ಬಿ.ವಿ. ರಾಜನ್, ಆದಂ ಕುಂಞಿ, ಪಟ್ಣ ರಾಘವ, ಹೊನ್ನೆ ನಾರಾಯಣ, ಪಿಂಟು ಮೂಲ್ಯ, ಟೈಲರ್ ನಾರಾಯಣ ಮುಂತಾದವರ ಮುಂದೆ ರೈಲಿಗೆದುರಾಗಿ ಡಾ. ಸುಬ್ಬರಾವ್ ನಿಂತಿದ್ದರು. ರೈಲು ಕ್ಷಣಕ್ಷಣಕ್ಕೂ ಹತ್ತಿರ ಬರುತ್ತಿದ್ದರೂ ಅವರು ಒಂದಿನಿತೂ ಅಂಜಲಿಲ್ಲ, ಅಳುಕಲಿಲ್ಲ. ಧೈರ್ಯದ ಹೆಬ್ಬಂಡೆಯಾಗಿ ಡಾ. ಸುಬ್ಬರಾವ್ ನಿಂತಿದ್ದರೆ, ಅಂತಿಮವಾಗಿ ರೈಲ್ವೇ ಕೆಲಸಗಾರನೊಬ್ಬ ಸಿಗ್ನಲ್ ನೀಡಿದ್ದರಿಂದಾಗಿ ರೈಲು ನಿಂತಿತು – ಕೆಲವೇ ಮೀಟರ್ ಅಂತರದಲ್ಲಿ.ಅಲ್ಲೇ ಕಾದು ನಿಂತಿದ್ದ ಮೀಸಲು ಪೊಲೀಸರು ಇವರನ್ನೆಲ್ಲ ದಸ್ತಗಿರಿ ಮಾಡಿದರು. ಆ ದಿನ ಹೊಸಂಗಡಿಯಲ್ಲೂ ಪೈವಳಿಕೆಯ ಗೋಡಣ್ಣ ಪೂಜಾರಿ ಮತ್ತು ಚೂಡಪ್ಪ ಪೂಜಾರಿ ಯವರ ನೇತೃತ್ವದಲ್ಲಿ ರೈಲುತಡೆ ನಡೆಯಿತು. ಕಣ್ವತೀರ್ಥದಲ್ಲಿ ಡಾ. ಸುಬ್ಬರಾಯರು ತೋರಿದ ಧೈರ್ಯವನ್ನು ಕಣ್ಣಾರೆ ಕಂಡ ಕಮ್ಯುನಿಸ್ಟ್ ಕಾರ್ಯಕರ್ತರೆಲ್ಲರೂ ಪುಳಕಿತರಾಗಿದ್ದರು ಎನ್ನುತ್ತಾರೆ ಪಿ. ರಾಘವನ್.

 

ಜನಸೇವೆಗೆ ಸದಾ ಸಿದ್ಧ

೧೯೭೭ರಲ್ಲಿ ಡಾಕ್ಟರ ಕ್ಲಿನಿಕ್‌ಗೆ ಹತ್ತಿರದ ಬಂಗ್ರಮಂಜೇಶ್ವರದಲ್ಲಿ ಭಾರೀ ನೆರೆ. ಹೊಳೆಯಲ್ಲಿ ನೀರು ಉಕ್ಕಿ ಹರಿದು ಸಮೀಪದ ಸಸಿಹಿತ್ಲು ಜಲಾವೃತವಾಗಿತ್ತು. ಆ ಸಂದರ್ಭ ದಲ್ಲಿ ಡಾಕ್ಟರ್ ಸುಬ್ಬರಾವ್ ಅಲ್ಲಿನ ಮನೆಗಳಿಂದ ಮಕ್ಕಳನ್ನು ಸ್ವತಃ ಎತ್ತಿಕೊಂಡು ಬಂದು, ಹಳೆಯ ವಿಜಯಾ ಬ್ಯಾಂಕಿನ ಮಾಳಿಗೆಯಲ್ಲಿ ತಾತ್ಕಾಲಿಕ ನೆರೆ ಪರಿಹಾರ ಶಿಬಿರಕ್ಕೆ ತಲಪಿಸಿ, ಹಗಲುರಾತ್ರಿಯೆನ್ನದೆ ಪರಿಹಾರಕಾರ್ಯದಲ್ಲಿ ತೊಡಗಿದ್ದನ್ನು ಬಿ.ವಿ. ರಾಜನ್ ನೆನಪು ಮಾಡಿಕೊಳ್ಳುತ್ತಾರೆ. ‘ಡಾಕ್ಟರರ ಪರಿಚಯವಾದ ಬಳಿಕ ಅದೇ ಮೊದಲ ಬಾರಿ ಅವರ ಸೇವಾ ಮನೋಭಾವ ಕಂಡು ದಂಗಾಗಿ ಹೋದೆ’ ಎಂದು ರಾಜನ್ ದಾಖಲಿಸಿದ್ದಾರೆ.ಕಣ್ವತೀರ್ಥದಲ್ಲಿ ನೆರೆ ಏರುತ್ತಿದ್ದಂತೆ ಡಾಕ್ಟರ್ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯಕರ್ತ ರನ್ನು ಸಂಘಟಿಸಿದರು; ಗೋಣಿಚೀಲಗಳಲ್ಲಿ ಹೊಯಿಗೆ (ಮರಳು) ತುಂಬಿಸಿ, ಅವನ್ನು ಸಾಲಾಗಿಟ್ಟು ಅಡ್ಡಗೋಡೆ ನಿರ್ಮಿಸಿದರು. ಆ ಮೂಲಕ ಹಲವಾರು ವಸತಿ, ಸೊತ್ತು, ಜೀವಗಳನ್ನು ಉಳಿಸಿ ದುರಂತ ತಪ್ಪಿಸಿದರು ಎಂದು ಪಿ. ರಾಘವನ್ ಜ್ಞಾಪಿಸಿಕೊಳ್ಳುತ್ತಾರೆ.ಅನಂತರ ನೆರೆಪೀಡಿತರನ್ನು ಸಮೀಪದ ಎಸ್.ಎ.ಟಿ. ಹೈಸ್ಕೂಲಿನ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ನೆರೆ ಪರಿಹಾರ ನಿಧಿ ಸಂಗ್ರಹ, ನೆರೆಪೀಡಿತರಿಗಾಗಿ ಬಟ್ಟೆಬರೆ ಸಂಗ್ರಹ ಇತ್ಯಾದಿಗಾಗಿ ಡಾಕ್ಟರ್ ಸುಬ್ಬರಾವ್ ಎಡೆಬಿಡದೆ ಕೆಲಸ ಮಾಡಿದರು. ನೆರೆಪೀಡಿತರ ಶಿಬಿರಕ್ಕೆ ಆಗಾಗ ಭೇಟಿ ನೀಡಿ ಆಹಾರ ಸರಬರಾಜಿನ ವ್ಯವಸ್ಥೆಯನ್ನು ಸ್ವತಃ ಪರಿಶೀಲಿಸುತ್ತಿದ್ದರು. ತಮ್ಮ ಕ್ಲಿನಿಕ್‌ನ ಪಕ್ಕದ ಕೊಠಡಿಯಿಂದಲೇ ಇವೆಲ್ಲ ಪರಿಹಾರ ಕೆಲಸಗಳಿಗೆ ನಿರ್ದೇಶನ ಕೊಡುತ್ತಿದ್ದರು. ತಮ್ಮ ವೈದ್ಯವೃತ್ತಿಯ ಜೊತೆ ಜೊತೆಗೆ ಅವರು ಇಷ್ಟೆಲ್ಲ ಪರಿಹಾರ ಕೆಲಸ ಮಾಡಿದರೆಂಬುದು ನಂಬಲಸಾಧ್ಯವೆನಿಸುತ್ತದೆ.ಸುಮಾರು ೨೦ ವರುಷಗಳ ನಂತರ, ೧೯೯೬ರಲ್ಲಿ ಒಂದು ದಿನ ರಾತ್ರಿ ೨ ಗಂಟೆಗೆ ಉಪ್ಪಳ ಹೊಳೆಯ ರೈಲ್ವೇ ಸೇತುವೆ ಬಳಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ, ಬೋಗಿಗಳು ಮಗುಚಿ ಬಿದ್ದವು. ಆಗ ರೈಲ್ವೆ ಇಲಾಖೆಯವರಿಗೂ ನೆನಪಾದದ್ದು ಡಾ. ಸುಬ್ಬರಾಯರು ಎಂದು ಬಿ.ವಿ. ರಾಜನ್ ದಾಖಲಿಸಿದ್ದಾರೆ. ತಕ್ಷಣವೇ ಡಾಕ್ಟರ್ ಸುಬ್ಬರಾವ್ ಇನ್ನೂ ಹಲವು ವೈದ್ಯರಿಗೆ ತಿಳಿಸಿ ಪ್ರಥಮ ಚಿಕಿತ್ಸೆಗೆ ಬೇಕಾದ ಔಷದಿ – ಸಲಕರಣೆಗಳೊಂದಿಗೆ ಅಪಘಾತದ ಸ್ಥಳಕ್ಕೆ ಧಾವಿಸಿ, ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕಳಿಸಿಕೊಟ್ಟರೆಂದು ಪಿ. ರಾಘವನ್ ಸ್ಮರಿಸುತ್ತಾರೆ.ಆಗ ಡಾಕ್ಟರ್ ಸುಬ್ಬರಾಯರಿಗೆ ಸುಮಾರು ೭೭ ವರುಷ ವಯಸ್ಸು. ಆ ಇಳಿವಯಸ್ಸಿನಲ್ಲಿ ಮಧ್ಯರಾತ್ರಿ ದಾಟಿದ ಹೊತ್ತಿನಲ್ಲಿ ಗಾಯಾಳುಗಳ ಶುಶ್ರೂಷೆಗಾಗಿ ತಕ್ಷಣವೇ ಧಾವಿಸಿ ಹೋದದ್ದು ಅವರ ಮಾನವೀಯತೆಗೆ ಸಾಕ್ಷಿ.ಮಂಜೇಶ್ವರದಲ್ಲಿ ಸಾಂಕ್ರಾಮಿಕ ರೋಗ ಕಾಲರಾ ಹರಡಿದಾಗ ಡಾ. ಸುಬ್ಪರಾವ್ ಸಮಾರೋಪಾದಿಯಲ್ಲಿ ಚಿಕಿತ್ಸೆ ನೀಡಿದ್ದನ್ನೂ, ಯುವಕರನ್ನು ಸಂಘಟಿಸಿ ಬಾವಿಗಳಿಗೆ ಮದ್ದು ಹಾಕಿದ್ದನ್ನೂ ಬಿ.ಎಂ. ಅನಂತ್ ನೆನಪು ಮಾಡಿಕೊಳ್ಳುತ್ತಾರೆ.ಅವರ ಸೇವಾ ತತ್ಪರತೆಗೆ ಪುರಾವೆಯಾಗಿ ಅವರ ಜೀವನದುದ್ದಕ್ಕೂ ಇಂತಹ ಹಲವಾರು ಘಟನೆಗಳನ್ನು ದಾಖಲಿಸಬಹುದು.

 

ಬಹುಮುಖಿ ಡಾ. ಸುಬ್ಬರಾವ್

ವೈದ್ಯರಾಗಿವೈದ್ಯರಾಗಿ ಡಿಸೆಂಬರ್ ೧೯೪೩ರಲ್ಲಿ ಮಂಜೇಶ್ವರಕ್ಕೆ ಕಾಲಿಟ್ಟ ಡಾ. ಸುಬ್ಬರಾವ್ ‘ಡಾಕ್ಟರ್ ಎಂದರೆ ಅವರೊಬ್ಬರೇ’ ಆಗಿ ಬೆಳೆದರು. ಅವರು ಅಲ್ಲಿ ಇಂದಿಗೂ ಜನಮನದಲ್ಲಿ ಡಾಕ್ಟರ್ ಆಗಿ ಉಳಿದಿದ್ದಾರೆ.ಅವರು ಹೇಗೆ ಚಿಕಿತ್ಸೆ ನೀಡುತ್ತಿದ್ದರು? ಮಂಜೇಶ್ವರದ ಶ್ರೀಮತಿ ಲಿಲ್ಲಿಬಾ ಟೀಚರ್ ಹೀಗೆ ಜ್ಞಾಪಿಸಿಕೊಳ್ಳುತ್ತಾರೆ : ಅವರು ನಮ್ಮ ನೆರೆಹೊರೆಯವರು. ಇಂಗ್ಲಿಷ್ ಮದ್ದಿನ ಡಾಕ್ಟರೆಂದು ಅವರನ್ನು ನಮ್ಮ ಮನೆಯಲ್ಲಿ ಕರೆಯುವ ರೂಡಿ. ಯಾಕೆಂದರೆ ಅವರು ಇಂಗ್ಲಿಷ್ ಮದ್ದು, ಇಂಜೆಕ್ಷನ್ ಕೊಡುವವರು. ಚಿಕಿತ್ಸೆಗಾಗಿ ಅವರ ಕ್ಲಿನಿಕ್ ಹತ್ತಿರದಲ್ಲಿ ಆಯುರ್ವೇದ ಔಷಧಾಲಯವೂ ಇತ್ತು. ಅದು ‘ಅಪ್ಪಾ ಭಟ್ಟರ ಷಾಫು’! ನಮಗೆ ಕಾಯಿಲೆಯಾದಾಗ ನಾವು ಕ್ಲಿನಿಕ್‌ಗೆ ಹೋಗಿ ಔಷದಿ ತರುವ ಕ್ರಮ. ಆದರೆ ನಮ್ಮ ನೆರೆಮನೆಯಲ್ಲಿ ಹೃದಯ ಕಾಯಿಲೆಗೆ ಒಳಗಾದ ಮಹಿಳೆಯೊಬ್ಬರಿಗೆ ಡಾ. ಸುಬ್ಬರಾವ್ ಮನೆಗೆ ಬಂದು ಶುಶ್ರೂಷೆ ನೀಡುತ್ತಿದ್ದರು. ದಿನಂಪ್ರತಿ ತಪಾಸಣೆಗೂ ಬರುತ್ತಿದ್ದರು. ಆ ಮಹಿಳೆಗೆ ಮಾತ್ರೆ, ಮದ್ದು ತರಲಿಕ್ಕಾಗಿ ಆಗಾಗ ಡಾಕ್ಟರ ಕ್ಲಿನಿಕಿಗೆ ಹೋಗಬೇಕಾಗುತ್ತಿತ್ತು. ಇಂಗ್ಲಿಷ್ ಮದ್ದು, ಇಂಜೆಕ್ಷನ್ ಭಯದಿಂದ ಅವರೊಂದಿಗೆ ಹೆದರಿಕೊಂಡೇ ಮಾತಾಡುತ್ತಿದ್ದೆ. ಒಮ್ಮೆ ಕಾಲು ಉಳುಕಿದಾಗ ಅಯೋಡೆಕ್ಸ್ ಪಡೆಯಲೆಂದು ಡಾಕ್ಟರಲ್ಲಿಗೆ ಹೋಗಿದ್ದೆ. ಆ ಕಾಲದಲ್ಲಿ ಅಯೋಡೆಕ್ಸನ್ನು ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದರು. ಡಾಕ್ಟರ್ ಅಯೋಡೆಕ್ಸ್ ಪ್ಯಾಕ್ ಮಾಡಿಕೊಟ್ಟು ‘ನಾಲ್ಕು ಆಣೆಯದ್ದು ಇದೆ’ ಎಂದರು. ನನ್ನ ಬಳಿ ಅಷ್ಟು ದುಡ್ಡಿಲ್ಲವೆಂದೆ. ‘ಎಷ್ಟಿದೆ?’ ಎಂದು ಕೇಳಿದರು. ಬರೇ ೧೦ ಪೈಸೆಯ ಪಾವಲಿ ತೋರಿಸಿದಾಗ, ‘ಸಾಕು ಹೋಗು’ ಎಂದರು.ನಾವೂರು ಕೃಷ್ಣ ಆಳ್ವರ ನೆನಪುಗಳು ಹೀಗಿವೆ : ಡಾಕ್ಟರ್ ಸುಬ್ಬರಾಯರು, ನನ್ನಜ್ಜ ಅಪ್ಪಯ್ಯ ಭಂಡಾರಿಗಳ ಮನೆ ವೈದ್ಯರು. ನಾನು ಮೊದಲು ಅವರನ್ನು ಕಂಡದ್ದು ಹಾಗೆ. ದುರ್ಗಿಪಳ್ಳದಿಂದ ಬೆಜ್ಜದ ಮಾಗಂದಡಿ ತನಕ ಅವರು ನಡೆದುಬರುವಾಗ ದಾರಿಯುದ್ದಕ್ಕೂ ಅವರಿಗೆ ಜನರಿಂದ ವಂದನೆ. ಆಗ ಅವರಿಂದ ಕಷ್ಟ ಸುಖಗಳ ವಿಚಾರಣೆ.ಧೂಮಾವತಿಯ ಉಯ್ಯಾಲೆಯಿರುವ ನಮ್ಮ ಚಾವಡಿಗೆ ಹತ್ತಿ, ಇರುವ ಒಂದೇ ಕುರ್ಚಿಯಲ್ಲಿ ಅಂಗಿ ತೆಗೆದು ಕುಳಿತು ಮೊದಲ ಬೊಂಡ ಕುಡಿದು ಆರಾಮವಾಗಿ ಚಿಕಿತ್ಸೆ ಶುರು ಮಾಡುತ್ತಿದ್ದರು. ಡಾಕ್ಟರರ ಆಗಮನದ ಮುಂಚಿತವಾಗಿ ಬಿಸಿನೀರು, ಸಾಬೂನು ರೆಡಿಯಾಗಿರಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೆ ‘ಎಂಚಿನ ಮಾರಾಯ..’ ಎಂಬಲ್ಲಿಂದ ಶುರುವಾಗುವ ಅವರ ಬೈಗುಳ ಕೇಳಬೇಕಾಗುತ್ತಿತ್ತು.ಚಿಕಿತ್ಸೆ ಮುಗಿದಾದ ಕೂಡಲೇ ಎರಡನೇ ಸೀಯಾಳ ಕುಡಿದು ಹೊರಡುತ್ತಾರೆ. ನನ್ನಜ್ಜನಿಗೂ ಕೆಲವು ಸಲ ಬೇಕಾದದ್ದು ಅಷ್ಟೇ. ಡಾಕ್ಟರರು (ಡಾಕ್ಟರರೆಂದರೆ ಒಬ್ಬರೇ) ಬಂದರೆ, ಬಂದು ಮಾತನಾಡಿದರೆ, ‘ಇತ್ತೆ ದಾಲ ಸೈಪುಜರ್’ (ಈಗ ಅಂತ್ಯಕಾಲ ಬಂದಿಲ್ಲ) ಅಂತ ಹೇಳಿದರೆ, ಸಂತೋಷದಿಂದ ಬೊಚ್ಚುಬಾಯಿ ಬಿರಿದು ನಗುತ್ತಾ ಬೀಳ್ಕೊಡುತ್ತಾರೆ.ಮಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಒಂದು ದಿನ ನನ್ನ ಹಳೆ ರೋಗವಾದ ತಲೆಸಿಡಿತ ಆರಂಭವಾಗಿ ಒಂದು ಬದಿ ಕಾಣದಂತಾಯಿತು. ಮಂಜೇಶ್ವರದ ರೈಲ್ವೆ ಸ್ಟೇಶನ್‌ನಲ್ಲಿ ವಾಂತಿ ಮಾಡಲಾರಂಬಿಸಿದೆ. ಸೀದಾ ಡಾಕ್ಟರರಲ್ಲಿಗೆ ಹೋಗು ಎಂದು ಗೋವಿಂದಣ್ಣ ಅಪ್ಪಣೆ ಮಾಡಿದಾಗ, ಸೀದಾ ಮಾಳಿಗೆ ತಲುಪಿದೆ. ಅಲ್ಲಿ ಎಷ್ಟು ಸಲ ಕಾರಿದೆ ಎಂದು ನೆನಪಿಲ್ಲ. ಕಂಪೌಂಡರಾಗಲಿ, ನರ್ಸ್ ಆಗಲೀ ಇಲ್ಲದ ಡಾಕ್ಟರರು ಸ್ವತಃ ಸ್ವಚ್ಛಗೊಳಿಸಿದರು. ಸಾಮಾನ್ಯ ಮದ್ದಿಗೆ ಗುಣವಾಗದ್ದರಿಂದ ಕೂಡಲೇ ಒಂದು ಕಾರು ತರಿಸಿದರು. ಹೊಳ್ಳರ ಆಸ್ಪತ್ರೆಗೆ ಹೋಗುವಾಗ ಹೊಸಂಗಡಿಯಿಂದ ಯಾರಲ್ಲಿಯೋ ನನ್ನ ಮಾವ ವಿಠಲ ಶೆಟ್ಟಿಗೆ ಹೇಳಿ ಕಳುಹಿಸಿದರು. ಉಪ್ಪಳದಲ್ಲಿ ಎಡ್ಮಿಟ್ ಮಾಡಿಸಿ ಹೊಳ್ಳರೊಂದಿಗೆ ಸೇರಿ ಡ್ರಿಪ್ ಹಾಕಿದ ನಂತರ ಮಾವ ಬಂದಾಗ, ಏಳು ಗಂಟೆ ಆಗಿತ್ತು. ಅನಂತರ ಅವರು ಮಂಜೇಶ್ವರಕ್ಕೆ ಹಿಂತಿರುಗಿದರು. ಒಂದು ವಾರದ ಅನಂತರ ಚಿಕಿತ್ಸೆ ಮುಗಿದು ಹೊರಡುವಾಗ, ಒಂದು ಮಾತ್ರೆಯ ಹೆಸರು ಬರೆದಿತ್ತರು. ‘ಯಾವಾಗ ನಿನಗೆ ತಲೆಸಿಡಿತ ಆರಂಭವಾದರೂ ಈ ಮಾತ್ರೆ ತಗೋ’ ಎಂದು ಅವರು ಹೇಳಿದ್ದು ಈಗ ಕೇಳಿದಂತಿದೆ.ಹಲವಾರು ವರ್ಷಗಳ ಕಾಲ ಬಡವರ ಮನೆಗಳಿಗೆ ಸೈಕಲಿನಲ್ಲಿ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು ಡಾಕ್ಟರ್ ಸುಬ್ಬರಾವ್. ಔಷದಿಗೆ ಹಣ ಪಾವತಿಸಲಾಗದ ಬಡವರಿಂದ ಹಣವನ್ನು ಪಡೆಯುತ್ತಿರಲಿಲ್ಲ. ಇಂತಹ ಡಾಕ್ಟರನ್ನು ಜನರು ‘ತಮ್ಮ ಪಾಲಿನ ದೇವರು’ ಎಂದು ಪರಿಗಣಿಸಿದ್ದರಲ್ಲಿ ಅಚ್ಚರಿಯೇನಿದೆ? ‘ಡಾಕ್ಟರರು ಪ್ರಾಕ್ಟೀಸು ನಡೆಸುತ್ತಿದ್ದುದು ಮಧ್ಯಾಹ್ನದವರೆಗೆ ಮಾತ್ರ’ ಎಂದು ನೆನಪು ಮಾಡಿಕೊಳ್ಳುತ್ತಾರೆ ಬಿ.ವಿ. ರಾಜನ್. ಮಧ್ಯಾಹ್ನದ ಬಳಿಕ ಅವರ ಸಮಯವೆಲ್ಲ ಕಮ್ಯುನಿಸ್ಟ್ ಪಕ್ಷಕ್ಕೆ ಮೀಸಲಾಗಿತ್ತು. ಚುನಾವಣೆಯಲ್ಲಿ ಪ್ರಥಮ ಬಾರಿ ಗೆದ್ದು ಶಾಸಕರಾಗುವ ತನಕ ಡಾಕ್ಟರರು ಈ ರೂಡಿ ಮುಂದುವರಿಸಿಕೊಂಡು ಬಂದಿದ್ದರು. ಮಧ್ಯಾಹ್ನದ ಬಳಿಕ ಚಿಕಿತ್ಸೆಗಾಗಿ ಯಾರೇ ಬಂದರು ಡಾಕ್ಟರ್ ಜೋರು ಮಾಡುತ್ತಿದ್ದರು. ಆದರೆ ಕ್ಲಿನಿಕ್‌ನಲ್ಲಿದ್ದರೆ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರೋಗಿಯನ್ನು ಪರೀಕ್ಷಿಸುತ್ತಿದ್ದರು. ‘ಯಾರೆಲ್ಲ ರೋಗಿಗಳು ಬರುತ್ತಾರೆಂದು’ ಬಕಪಕ್ಷಿಯಂತೆ ಕಾಯುವ ಸ್ವಭಾವ ಅವರದ್ದಲ್ಲ. ಆದ್ದರಿಂದಲೇ ಒಂದು ನರ್ಸಿಂಗ್ ಹೋಂ ಮಾಡುವ ಅಥವಾ ಕಾರು ಖರೀದಿಸುವ ಆಶೆ ಅವರಲ್ಲಿ ಯಾವತ್ತೂ ಸುಳಿಯಲಿಲ್ಲ.ರೋಗಿಗಳು ಗುಣಮುಖರಾಗುವ ಬಗ್ಗೆ ಡಾ. ಸುಬ್ಬರಾಯರಿಗೆ ಅತೀವ ಕಾಳಜಿ. ಔಷದಿ ಸೇವನೆ, ಆರೈಕೆ ಮತ್ತು ರೋಗಿಗಳ ಸ್ಥಿತಿ ತಿಳಿಸುವ ಬಗ್ಗೆ ತಾನಿತ್ತ ನಿರ್ದೇಶನಗಳ ಕುರಿತು ಅವರು ಬಹಳ ಕಟ್ಟುನಿಟ್ಟು. ಅವನ್ನು ಪಾಲಿಸದಿದ್ದರೆ ನಿಷ್ಠುರರಾಗಿ ವ್ಯವಹರಿಸುತ್ತಿದ್ದರು. ಅಂತಹ ಸಂದರ್ಭವೊಂದನ್ನು ಸ್ಮರಿಸುತ್ತಾರೆ ಸಿ.ಪಿ.ಐ. ಜಿಲ್ಲಾ ಸಮಿತಿ ಸದಸ್ಯರಾದ ಪಿ. ರಾಘವನ್ : ೧೯೬೫ರಲ್ಲಿ ಒಮ್ಮೆ ನನ್ನ ಮಗುವಿಗೆ ಜ್ವರ ಬಂದಾಗ ಅವರ ಕ್ಲಿನಿಕಿಗೆ ಮಗುವನ್ನು ಎತ್ತಿಕೊಂಡು ಹೋಗಿದ್ದೆ. ಅವರು ಮಗುವನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಿ ಮದ್ದು ಕೊಟ್ಟರು. ಎರಡು ದಿನಗಳ ಮದ್ದು ನೀಡಿ, ಮಗುವನ್ನು ಜಾಗ್ರತೆಯಿಂದ ನೋಡಿಕೊಳ್ಳ ಬೇಕೆಂದೂ ಮರುದಿನವೇ ಬಂದು ಮಗುವಿಗೆ ಹೇಗಿದೆಂಯೆಂದು ತಿಳಿಸಬೇಕೆಂದೂ ಹೇಳಿದರು.ನಾನು ಮಗುವಿನೊಂದಿಗೆ ಮನೆಗೆ ಮರಳಿ ಆ ದಿನ ಮಧ್ಯಾಹ್ನ, ರಾತ್ರಿ ಹಾಗೂ ಮರುದಿನ ಬೆಳಗ್ಗೆ ಮದ್ದು ಕೊಡುವಷ್ಟರಲ್ಲಿ ಮಗು ಸಂಪೂರ್ಣ ಗುಣವಾಗಿ ಆಟವಾಡತೊಡಗಿತು. ಎರಡನೇ ದಿನದ ಮದ್ದು ಕೊಡಲಿಕ್ಕಿದೆ; ಆದ್ದರಿಂದ ಮೂರನೇ ದಿನವೇ ಡಾಕ್ಟರ ಕ್ಲಿನಿಕಿಗೆ ಹೋಗುವುದೆಂದು ನಿರ್ಧರಿಸಿದೆ. ಆದರೆ ಡಾಕ್ಟರ್ ಸುಬ್ಬರಾವ್ ಏನೆಂದುಕೊಳ್ಳುತ್ತಾರೆಂದು ನಾನು ಯೋಚಿಸಲಿಲ್ಲ.ಮಗು ಗುಣವಾದ ಬಗ್ಗೆ ಡಾಕ್ಟರಿಗೆ ತಿಳಿಸಲು ಮೂರನೇ ದಿನ ನಾನು ಅವರ ಕ್ಲಿನಿಕಿಗೆ ಹೋದೆ. ಆಗ ಅಲ್ಲಿ ಹೆಚ್ಚು ಜನ ಇರಲಿಲ್ಲ. ನಾನು ಕಾದು ಕುಳಿತೆ. ನನ್ನ ಸರತಿ ಬಂದಾಗಲೂ ಡಾಕ್ಟರ್ ನನ್ನನ್ನು ಕರೆಯಲಿಲ್ಲ. ನನ್ನ ನಂತರ ಬಂದವರಿಗೆ ಔಷದಿ ನೀಡಿ ಕಳಿಸಿದರೂ ನನ್ನನ್ನು ಕರೆಯಲಿಲ್ಲ. ಕೊನೆಗೆ ನಾನೇ ಎದ್ದು ಹೋಗಿ ಡಾಕ್ಟರರ ಎದುರು ನಿಂತು, ‘ನನ್ನ ಮಗು ಹುಷಾರಾಗಿದೆ’ ಎಂದೆ. ಡಾಕ್ಟರ್ ಸಿಟ್ಟಿನಿಂದ ನನ್ನನ್ನು ನೋಡಿದರು. ಅವರ ತೀಕ್ಷ್ಣ ನೋಟ ದಿಂದಾಗಿ ಅವರ ಮುಖ ನೋಡಲು ನನಗೆ ಭಯವಾಯಿತು. ‘‘ಈಗ ಯಾಕೆ ಬಂದೆ?’’ ಎಂದು ಗಡಸು ದನಿಯಲ್ಲಿ ಕೇಳಿದರು. ಮಗುವಿಗೆ ಸಂಪೂರ್ಣ ಗುಣವಾಗಿದೆ ಎಂದು ತೊದಲುತ್ತಲೇ ಹೇಳಿದೆ. ‘‘ಹೌದು, ನಿನ್ನ ಮಗುವಿಗೆ ಗುಣವಾಗಿದೆ. ಆದರೆ ನನ್ನ ಆತಂಕ ನಿನಗೆ ಹೇಗೆ ಗೊತ್ತಾಗಬೇಕು? ನಿನ್ನ ಮಗುವಿಗೆ ಮೊನ್ನೆ ನಿಮೋನಿಯಾ ಜ್ವರ ಏರಿತ್ತು. ಅದಕ್ಕೇ ನಾನು ಹೇಳಿದ್ದು, ಮರುದಿನವೇ ಬಂದು ಮಗುವಿಗೆ ಹೇಗಿದೆ ಅಂತ ತಿಳಿಸಬೇಕು. ನನಗೆ ಆ ಮಗುವಿನ ಸ್ಥಿತಿ ತಿಳಿಯದೆ ಮನಸ್ಸಿಗೆ ನೆಮ್ಮದಿಯಿರಲಿಲ್ಲ. ಕೊನೆಗೆ ನಿನ್ನ ನೆರೆಮನೆಯವರಿಂದ ವಿಷಯ ತಿಳಿದುಕೊಳ್ಳಬೇಕಾಯಿತು’’ ಎಂದು ರೇಗಿದರು. ಅಷ್ಟಕ್ಕೇ ಮಾತು ಮುಗಿಸದೆ, ಡಾಕ್ಟರ್ ಹೇಳಿದರು, ‘‘ಡಾಕ್ಟರ್ ಔಷದಿ ಕೊಟ್ಟರೆ ಅವರ ಜವಾಬ್ದಾರಿ ಮುಗಿಯುತ್ತದೇನು? ರೋಗಿ ಪೂರ್ಣ ಗುಣವಾಗುವವರೆಗೆ ಜವಾಬ್ದಾರಿ ವಹಿಸುವವನೇ ಸರಿಯಾದ ಡಾಕ್ಟರ್’’.ಜನತಾ ರಂಗಭೂಮಿ ಕಲಾವಿದಡಾ. ಸುಬ್ಬರಾಯರಿಗೆ ಕಲಾ ಚಟುವಟಿಕೆಗಳಲ್ಲಿ ಬಹಳ ಆಸಕ್ತಿ. ನಾಟಕ ಮಾಧ್ಯಮ ವನ್ನು ಜನಜಾಗೃತಿಗಾಗಿ ಪರಿಣಾಮಕಾರಿಯಾಗಿ ಬಳಸಿದವರು ಅವರು. ಸಭೆಗಳಲ್ಲಿ ಜನರನ್ನು ಹುರಿದುಂಬಿಸಲಿಕ್ಕಾಗಿ ಮತ್ತು ಜನಸಮೂಹಗಳಲ್ಲಿ ವಿದ್ಯುತ್ ಸಂಚಾರ ಉಂಟು ಮಾಡಲಿಕ್ಕಾಗಿ ಗೀತೆಗಳನ್ನು ಹಾಡುವುದರಲ್ಲಿ ಅವರು ಎತ್ತಿದ ಕೈ. ೧೯೪೩ರಲ್ಲಿ ಮಂಜೇಶ್ವರದಲ್ಲಿ ನೆಲೆಸಿ, ವೈದ್ಯವೃತ್ತಿ ಆರಂಬಿಸಿದಾಗ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಅವರು ಕಟ್ಟಿದ ವೇದಿಕೆ ‘ಜನತಾ ರಂಗಭೂಮಿ’. ಇಂದು ಅದು ಸಕ್ರಿಯವಾಗಿಲ್ಲ. ಆದರೆ ಡಾ. ಸುಬ್ಬರಾಯರ ಯೌವನದ ದಿನಗಳಲ್ಲಿ ಜನಸಾಮಾನ್ಯರಿಗೆ ಜನಪರ ಸಂದೇಶಗಳನ್ನು ತಲುಪಿಸಲು ಅದು ಸಮರ್ಥ ಸಾಧನವಾಗಿತ್ತು. ಐದು ದಶಕಗಳ ಹಿಂದಿನ ಆ ದಿನಗಳಲ್ಲಿ, ಜನತಾ ರಂಗಭೂಮಿಯ ನಾಟಕ ಪ್ರದರ್ಶನಗಳು, ರೈತ ಸಂಘದ ಪ್ರತಿಭಟನೆಗಳು ಮತ್ತು ಕಮ್ಯುನಿಸ್ಟ್ ಪಕ್ಷದ ಸಂಘಟನಾ ಚಟುವಟಿಕೆಗಳು ಒಳ್ಳೆಯ ಬದುಕಿನ ಆಶಯದತ್ತ ಮಂಜೇಶ್ವರದ ಅನೇಕ ಯುವಕರನ್ನು ಸೆಳೆದದ್ದಂತೂ ನಿಜ. ಜನತಾ ರಂಗಭೂಮಿಯಲ್ಲಿ ಡಾ. ಸುಬ್ಬರಾಯರೊಂದಿಗೆ ಸಕ್ರಿಯರಾಗಿದ್ದವರು ಕುಂಞಿಕಣ್ಣ ಮಾಸ್ಟರ್, ಹರಿಶ್ಚಂದ್ರ ಮಾಸ್ಟರ್ (ಹರಿ ಮಾಸ್ಟರ್), ಮಂಜಪ್ಪ ಬಂಗೇರ, ಕೇಶವ ಕಾಮತ್ ಮತ್ತು ಬಾಲಚಂದ್ರ. ಇವರೆಲ್ಲ ಡಾ. ಸುಬ್ಬರಾಯರ ನಿಧನದ ಮುಂಚೆಯೇ ನಮ್ಮನ್ನಗಲಿದರು. ಇವರೆಲ್ಲ ಡಾ. ಸುಬ್ಬರಾವ್ ಅವರೊಂದಿಗೆ ಸೇರಿ ಹಲವಾರು ನಾಟಕಗಳನ್ನು ಪ್ರದರ್ಶಿಸಿದರು. ಅನೇಕ ನಾಟಕ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದರು. ಕಾಸರಗೋಡಿನ ಲಲಿತಕಲಾ ಸದನದ ಸ್ಪರ್ಧೆಗಳಲ್ಲಿಯೂ ಪ್ರಶಸ್ತಿ ಪಡೆದರು. ಆ ಹಿರಿಯರೊಂದಿಗೆ ಬಿ.ಎಂ. ಅನಂತ, ಬಿ.ಎಂ. ಜಗನ್ನಾಥ್, ಶೇಷಗಿರಿ, ದಿನಕರ ಶೆಟ್ಟಿ ಹಾಗೂ ಇನ್ನೂ ಕೆಲವು ಪ್ರತಿಭಾವಂತರು ಜನತಾ ರಂಗಭೂಮಿಯ ಜನಪ್ರಿಯತೆಗೆ ಕಾರಣಪುರುಷರು.ಜನತಾ ರಂಗಭೂಮಿಗೆ ಮರುಜನ್ಮ ನೀಡಬೇಕೆಂಬುದು ಡಾ. ಸುಬ್ಬರಾಯರ ಆಶೆಯಾಗಿತ್ತು. ಯಾಕೆಂದರೆ ಅವರ ಕಲಾ ಆಸಕ್ತಿ ಯಾವತ್ತೂ ಹಸಿರಾಗಿತ್ತು. ಆದರೆ ಅವರ ಆಶೆ ಈಡೇರಲಿಲ್ಲ. ಅದೇನಿದ್ದರೂ ಜನಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ನಾಟಕ ಮಾಧ್ಯಮದ ಶಕ್ತಿಯ ಬಗ್ಗೆ ತಿಳಿಯಬೇಕೆಂಬವರಿಗೆ ಜನತಾ ರಂಗಭೂಮಿ ಒಂದು ಚಾರಿತ್ರಿಕ ಪಾಠ.ಗಾಯಕ ಮತ್ತು ವಾಗ್ಮಿಡಾ. ಸುಬ್ಬರಾವ್ ಹಾಡುವುದನ್ನು ಕೇಳಿದವರಿಗೆ ಗೊತ್ತು ಅವರ ಕಂಠದ ತಾಕತ್ತು. ಸಂಘಟನೆ ಕಟ್ಟುವ ಆರಂಭದ ದಿನಗಳಲ್ಲಿ ಕೆ. ವೆಂಕಟರಾವ್ ಬರೆದ ಕ್ರಾಂತಿಯ ಹಾಡುಗಳನ್ನು ಸಭೆಗಳಲ್ಲಿ ಉತ್ಸಾಹದಿಂದ ಹಾಡುತ್ತಿದ್ದರು. ಅವರ ಹಾಡುಗಾರಿಕೆಯನ್ನು ಕೆ.ವಿ. ಕೃಷ್ಣನ್ ಹೀಗೆ ನೆನಪು ಮಾಡಿಕೊಳ್ಳುತ್ತಾರೆ : ಕಾಸರಗೋಡಿನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಿತು. ಅದರ ಮುಕ್ತಾಯದಲ್ಲಿ ಡಾ. ಸುಬ್ಬರಾವ್ ಹಾಡಿದ ಹಾಡು, ‘ವಿಪ್ಲವ ಗಾನ’. ನೆರೆದಿದ್ದ ಸಾವಿರಾರು ಜನರ ಮನ ತಟ್ಟಿದ ಆ ಗಾನವೇ ಅಂದಿನ ಸಭೆಯ ವಿಶೇಷ. ಅನಂತರ ಹಲವಾರು ಸಭೆಗಳಲ್ಲಿ ಜನಸಾಗರದಲ್ಲಿ ಅಲೆಗಳನ್ನೆಬ್ಬಿಸಿದ ಗಾನವೆಂದೇ ಅದು ಜನಪ್ರಿಯವಾಯಿತು. ಈ ಬಗ್ಗೆ ನಾರಾಯಣನ್ ಪೆರಿಯ ಅವರೂ ಜ್ಞಾಪಿಸಿಕೊಳ್ಳುತ್ತಾರೆ, ‘‘ಕಾಂಞಂಗಾಡ್ ನಲ್ಲಿ ಜಿಲ್ಲಾ ಸಮ್ಮೇಳನದಲ್ಲಿ ಭಾಷಣಗಳು ಮುಗಿದ ಬಳಿಕ ಡಾ. ಸುಬ್ಬರಾವ್ ಎದ್ದುನಿಂತು ಹಾಡಿದ್ದು ‘ವಿಪ್ಲವಗಾನ’. ಅದನ್ನು ಕೇಳುತ್ತಿದ್ದಂತೆ ಅಲ್ಲಿ ಸೇರಿದ್ದ ಜನರಿಗೆ ರೋಮಾಂಚನ. ಅಲ್ಲಿ ಸಾವಿರಾರು ಜನರು ಒಟ್ಟಾಗಿ ಎದ್ದು ನಿಂತು, ತಮ್ಮ ತಮ್ಮ ಬಿಗಿಮುಷ್ಠಿ ಮೇಲೆತ್ತಿ ಜಯಘೋಷವನ್ನು ಮಾಡಿದ ಚಿತ್ರ ಈಗಲೂ ನನ್ನ ಕಣ್ಣ ಮುಂದಿದೆ’’. ಡಾ. ಸುಬ್ಬರಾಯರ ಮಾತು ಕೇಳುವುದೇ ಒಂದು ವಿಶೇಷ ಅನುಭವ. ಸತ್ಯಾಂಶಗಳನ್ನು ಆಧರಿಸಿ, ತರ್ಕಬದ್ಧವಾಗಿ ಅವರು ವಾದ ಮಂಡನೆ ಮಾಡುವ ರೀತಿ ಅಮೋಘ. (ರಾಜ್ಯಸಭೆ ಮತ್ತು ವಿಧಾನಸಭೆಗಳಲ್ಲಿ ಅವರು ಮಾಡಿದ ಭಾಷಣಗಳು ಮುಂದಿನ ಪುಟಗಳಲ್ಲಿವೆ.) ನಾರಾಯಣನ್ ಪೆರಿಯ ಸ್ಮರಿಸುತ್ತಾರೆ : ‘‘ಕಣ್ಣೂರಿನಲ್ಲಿ ಕಾಲೇಜು ಬೇಕೇ? ಬೇಡವೇ? ಎಂಬುದನ್ನು ಚರ್ಚಿಸಲು ಒಂದು ಸಭೆ ಏರ್ಪಡಿಸಲಾಗಿತ್ತು. ಅಲ್ಲಿ ಡಾಕ್ಟರ ಭಾಷಣ ಕೇಳಿ, ಭಾಷಣಗಳಿಗೆ ಪೂರ್ವತಯಾರಿ ಯಾಕೆ ಬೇಕು? ಎಂಬ ವಿಷಯ ನನಗೆ ತಿಳಿಯಿತು’’. ಯಾವುದೇ ಸಭೆಗೆ ಭಾಷಣ ಮಾಡಲು ಹೋಗುವುದಿದ್ದರೂ ಅವರು ಪೂರ್ವ ತಯಾರಿ ಮಾಡಿಯೇ ಹೋಗುತ್ತಿದ್ದರು.ನಾರಾಯಣನ್ ಪೆರಿಯ ಅವರು ಇನ್ನೊಂದು ವಿಷಯವನ್ನು ತಿಳಿಸಿದ್ದಾರೆ.
ಡಾ. ಸುಬ್ಬರಾಯರಿಗೆ ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಭಾಷಣ ಮಾಡಲು ಆಸಕ್ತಿ. ಒಂದು ಸಭೆಯಲ್ಲಿ ಆಯೋಜಕರು ‘‘ಡಾಕ್ಟರೇ, ನೀವು ಇಂಗ್ಲಿಷಿನಲ್ಲಿ ಮಾತಾಡಿದರೂ ಆದೀತು’’ ಎಂದಾಗ, ತಟ್ಟನೆ ಡಾಕ್ಟರರ ಪ್ರತಿಕ್ರಿಯೆ ‘‘ನಿಮಗೆ ನನಗೆ ಇಂಗ್ಲಿಷ್ ಅರ್ಥವಾಗುತ್ತದೆ. ಅಲ್ಲಿ ಸೇರಿದ ಜನರಿಗೆ ಅರ್ಥವಾಗುತ್ತದೆಯೇ? ನನ್ನ ಮಲೆಯಾಳ ಕೆಟ್ಟದಾದರೂ ಪರವಾಗಿಲ್ಲ, ಅದರಲ್ಲೇ ಮಾತಾಡುತ್ತೇನೆ’’. ಅಂದಿನ ಡಾಕ್ಟರ ಮಲೆಯಾಳ ಭಾಷಣ ಮನಸ್ಸಿಗೆ ನಾಟಿದ್ದಂತೂ ನಿಜ.ಕರ್ನಾಟಕದ ಕಮ್ಯುನಿಸ್ಟ್ ನಾಯಕ ಬಿ.ವಿ. ಕಕ್ಕಿಲ್ಲಾಯರ ನೆನಪಿನಲ್ಲಿ ಹಸಿರಾಗಿರುವ ಒಂದು ಘಟನೆ : ಕಮ್ಯುನಿಸ್ಟ್ ಪಾರ್ಟಿಯ ಆಲ್ ಇಂಡಿಯಾ ಪಾರ್ಟಿ ಕಾಂಗ್ರೆಸ್‌ನಲ್ಲಿ ಕರ್ನಾಟಕದ ಪ್ರತಿನಿಧಿಗಳಿಗೆ ಒಂದು ಹಾಡು ಹಾಡಬೇಕೆಂದು ಸೂಚಿಸಲಾಯಿತು. ಆಗ ದುಡಿಯುವ ಜನರೆಲ್ಲಾ ಒಂದುಗೂಡಬೇಕೆಂದು ಕರೆ ನೀಡುವ ಹಾಡು ಹಾಡಿದವರು ಎಂ.ಎಸ್. ಕೃಷ್ಣನ್ ಮತ್ತು ಡಾ. ಸುಬ್ಬರಾವ್. ಆ ಮಹಾ ಸಮ್ಮೇಳನದಲ್ಲಿ ಆ ಹಾಡು ಎಂತಹ ಮಿಂಚಿನ ಸಂಚಾರ ಉಂಟುಮಾಡಿತೆಂದರೆ ಅಲ್ಲಿ ನೆರೆದವರೆಲ್ಲೂ ಎದ್ದು ನಿಂತು ಆ ಇಬ್ಬರು ಗಾಯಕರಿಗೆ ಗೌರವ ಸೂಚಿಸಿದರು.

 

ಪ್ರಮುಖ ಸಾಧನೆಗಳು

ದಿನೇಶ್ ಬೀಡಿ ಸೊಸೈಟಿ – ದೇಶಕ್ಕೊಂದು ಮಾದರಿಮಂಜೇಶ್ವರ ಪ್ರದೇಶದಲ್ಲಿ ೧೯೬೭ರಲ್ಲಿ ಮಂಗಳೂರಿನ ಖಾಸಗಿ ‘ಗಣೇಶ್ ಬೀಡಿ ಕಂಪೆನಿ’ಯ ಫ್ಯಾಕ್ಟರಿಗಳಲ್ಲಿ ಸಾವಿರಾರು ಕಾರ್ಮಿಕರನ್ನು ಮಾಲೀಕರು ದುಡಿಸುತ್ತಿದ್ದರು. ಮಂಜೇಶ್ವರ, ಕಾಸರಗೋಡು, ಕಾಂಞಂಗಾಡು ಮೊದಲಾದ ಸ್ಥಳಗಳಲ್ಲಿ ಅವರ ಫ್ಯಾಕ್ಟರಿಗಳಿದ್ದವು. ಅಲ್ಲದೆ, ಕಂಟ್ರಾಕ್ಟರ್‌ಗಳ ಮೂಲಕ ಹೊಗೆಸೊಪ್ಪು ಎಲೆಗಳನ್ನು ಕಾರ್ಮಿಕರಿಗೆ ನೀಡಿ, ಮನೆಗಳಲ್ಲಿಯೂ ಬೀಡಿ ಕಟ್ಟಿಸುತ್ತಿದ್ದರು.ಆ ಸಮಯದಲ್ಲಿ ಕೇರಳದಲ್ಲಿ ಎಡಪಕ್ಷ ಸರಕಾರ ಅಧಿಕಾರಕ್ಕೆ ಬಂತು. ಬೀಡಿ ಕಾರ್ಮಿಕರಿಗೆ ಕನಿಷ್ಠ ಮಜೂರಿ ನಿಗದಿಪಡಿಸಿ ಸರಕಾರ ಆದೇಶ ಹೊರಡಿಸಿತು. ಆದರೆ ಕನಿಷ್ಠ ಮಜೂರಿಯನ್ನು ಕಾರ್ಮಿಕರಿಗೆ ಪಾವತಿಸಲು ಗಣೇಶ್ ಬೀಡಿ ಕಂಪೆನಿ ಸಿದ್ಧವಿರಲಿಲ್ಲ. ಹಾಗಾಗಿ ಡಾ. ಸುಬ್ಬರಾಯರ ಮುಂದಾಳುತನದಲ್ಲಿ ಎಡಪಕ್ಷಗಳ ಕಾರ್ಮಿಕ ಸಂಘಟನೆಗಳು ಗಣೇಶ್ ಬೀಡಿ ಕಂಪೆನಿ ಮಾಲಕರೊಂದಿಗೆ ಸಮಾಲೋಚನೆ ನಡೆಸಿದವು. ಕಾರ್ಮಿಕರಿಗೆ ನ್ಯಾಯಬದ್ಧ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದವು. ಆದರೆ ಮಾಲೀಕರು ಒಪ್ಪಲಿಲ್ಲ. ಕೊನೆಗೆ ತಮ್ಮ ಬೀಡಿ ಫ್ಯಾಕ್ಟರಿಗಳನ್ನು ಮುಚ್ಚಿಯೇ ಬಿಟ್ಟರು. ಸಾವಿರಾರು ಕಾರ್ಮಿಕರಿಗೂ, ಅವರ ಕುಟುಂಬಗಳಿಗೂ ಜೀವನೋಪಾಯವಿಲ್ಲದ ಸಂಕಟದ ಸನ್ನಿವೇಶ. ಗಣೇಶ್ ಬೀಡಿ ಕಂಪೆನಿಯ ಮಂಗಳೂರಿನ ಕಚೇರಿ ಎದುರು ನಡೆಸಿದ ದೀರ್ಘ ಪ್ರತಿಭಟನೆಯೂ ನಿಷ್ಫಲ.ಆಗಿನ ಕೈಗಾರಿಕಾ ಸಚಿವ ಸಿ.ಪಿ.ಐ. ನೇತಾರ ಟಿ.ವಿ. ಥಾಮಸ್‌ರನ್ನು
ಡಾ. ಸುಬ್ಬರಾವ್, ರಾಮಪ್ಪ ಮಾಸ್ಟರ್, ಸಿ.ಎಚ್. ಕೃಷ್ಣನ್ ಹಾಗೂ ಇತರ ಮುಖಂಡರು ಭೇಟಿ ಮಾಡಿ ಚರ್ಚಿಸಿದರು. ಅನಂತರ ಜಿಲ್ಲಾ ಕೇಂದ್ರ ಕಣ್ಣಾನೂರಿನಲ್ಲಿ ಒಂದು ವಾರದ ಶಿಬಿರ ನಡೆಸಿ ಸುದೀರ್ಘ ಸಮಾಲೋಚನೆ ನಡೆಯಿತು. ಅಂತಿಮವಾಗಿ, ಕಾರ್ಮಿಕರೇ ನಿರ್ವಹಿಸುವ ಸಹಕಾರಿ ರಂಗದ ದಿನೇಶ್ ಬೀಡಿ ಸಹಕಾರಿ ಸೊಸೈಟಿ ಸ್ಥಾಪಿಸಲು ನಿರ್ಧಾರ.ಕಣ್ಣಾನೂರನ್ನು ಕೇಂದ್ರವಾಗಿರಿಸಿಕೊಂಡು ದಿನೇಶ್ ಬೀಡಿ ಸೊಸೈಟಿ ಕಾರ್ಯಾರಂಭ ಮಾಡಿತು. ತಲಶ್ಶೇರಿಯಿಂದ ಮಂಜೇಶ್ವರ ತನಕ ಅನೇಕ ಪ್ರಾದೇಶಿಕ ಸೊಸೈಟಿಗಳನ್ನು ಸ್ಥಾಪಿಸಿ, ಕೆಲಸಗಾರರನ್ನು ನೋಂದಾಯಿಸಿ, ಬೀಡಿ ಉತ್ಪಾದನೆ ಆರಂಭ. ಮಂಜೇಶ್ವರ ಪ್ರೈಮರಿ ಸೊಸೈಟಿಯ ಅಧ್ಯಕ್ಷರಾಗಿ ಡಾ. ಸುಬ್ಬರಾಯರ ಆಯ್ಕೆ. ಅವರು ಅದೇ ಸ್ಥಾನದಲ್ಲಿ ಮುಂದಿನ ೨೩ ವರುಷ ಮುಂದುವರಿದು, ದಿನೇಶ್ ಬೀಡಿ ಸೊಸೈಟಿಗೆ ಭದ್ರ ಬುನಾದಿ ಹಾಕಿದರು.ಆರಂಭದಲ್ಲಿ ಖಾಸಗಿ ಬೀಡಿ ಕಂಪೆನಿಗಳೊಂದಿಗೆ ಸ್ಪರ್ದಿಸುವುದು ಸುಲಭ ವಾಗಿರಲಿಲ್ಲ. ಆದರೂ ಕಾರ್ಮಿಕರ ಸಹಕಾರದಿಂದಾಗಿ ದಿನೇಶ್ ಬೀಡಿ ಸೊಸೈಟಿ ಬೆಳೆಯಿತು. ಉತ್ತಮ ಗುಣಮಟ್ಟ ಕಾದುಕೊಂಡು ಜನಪ್ರಿಯವಾಯಿತು. ಖಾಸಗಿ ಬೀಡಿ ಕಂಪೆನಿಗಳಿಗಿಂತ ೩೦-೪೦% ಜಾಸ್ತಿ ಮಜೂರಿ ಪಾವತಿ ದಿನೇಶ್ ಬೀಡಿ ಸೊಸೈಟಿಯ ಹೆಗ್ಗಳಿಕೆ. ಜೊತೆಗೆ ಆದಿತ್ಯವಾರದ ರಜಾವೇತನ, ಹೆರಿಗೆ ಭತ್ತೆ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ಪಾವತಿ. ಇದರೊಂದಿಗೆ ಮರಣಾನಂತರ ಹಣ ಸಹಾಯ, ವಾರ್ಷಿಕ ರಜಾವೇತನ, ಹಬ್ಬ ಹರಿದಿನಗಳಿಗೆ ವಿಶೇಷ ವೇತನ ಪಾವತಿ. ಇಷ್ಟೆಲ್ಲ ಸವಲತ್ತುಗಳನ್ನು ಒದಗಿಸಿಯೂ ದಿನೇಶ್ ಬೀಡಿ ಸೊಸೈಟಿ ಲಾಭದಲ್ಲಿ ವಹಿವಾಟು ನಡೆಸಲು ಸಮರ್ಥವಾಯಿತು. ಇದಕ್ಕೆಲ್ಲಾ ಕಾರಣ ಡಾ. ಸುಬ್ಬರಾಯರಂತಹ ನಿಸ್ವಾರ್ಥಿ ನಾಯಕರು.ಮಂಜೇಶ್ವರದಲ್ಲಿ ಡಾ. ಸುಬ್ಬರಾಯರ ಕ್ಲಿನಿಕ್‌ನ ಹತ್ತಿರದಲ್ಲಿಯೇ ದಿನೇಶ್ ಬೀಡಿಯ ಮೈನ್ ಡಿಪೋ ಫ್ಯಾಕ್ಟರಿ. ಅಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ವಾರಕ್ಕೊಮ್ಮೆ ಒಟ್ಟು ಸೇರಿಸಿ ಸಭೆ ನಡೆಸುತ್ತಿದ್ದರು. ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳು, ಕಮ್ಯುನಿಸ್ಟ್ ಪಕ್ಷದ ಧೋರಣೆ, ಕಾರ್ಮಿಕ ವರ್ಗದ ಮುಂದಿರುವ ಸವಾಲುಗಳನ್ನು ಸರಳ ಭಾಷೆಯಲ್ಲಿ ವಿವರಿಸುತ್ತಿದ್ದರು. ಇತರ ಫ್ಯಾಕ್ಟರಿಗಳಲ್ಲಿಯೂ ತಿಂಗಳಿಗೊಮ್ಮೆ ಫ್ಯಾಕ್ಟರಿ ಸಮಿತಿಯ ಸಭೆ ನಡೆಸುತ್ತಿದ್ದರು. ಈ ರೀತಿಯಲ್ಲಿ ದಿನೇಶ್ ಬೀಡಿ ಕಾರ್ಮಿಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದರು. ಫ್ಯಾಕ್ಟರಿ ಸಮಿತಿಯ ವಾರ್ಷಿಕ ಮಹಾಸಭೆಯನ್ನು ಪ್ರತಿ ವರುಷವೂ ಜರಗಿಸಿ, ಎಐಟಿಯುಸಿ ಸಮಿತಿಯನ್ನು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಆರಿಸುತ್ತಿದ್ದರು. ಈ ಕ್ರಮವನ್ನು ಶಾಸಕರಾಗಿ ಹೋಗುವ ತನಕ ನಿಯಮಬದ್ಧವಾಗಿ ಶಿಸ್ತಿನಿಂದ ನಡೆಸಿದ ಹಿರಿಮೆ ಅವರದು.ಡಾ. ಸುಬ್ಬರಾವ್ ದಿನೇಶ್ ಬೀಡಿ ಸೊಸೈಟಿಯ ಕಣ್ಣಾನೂರಿನ ಕೇಂದ್ರ ಸಂಘದ ನಿರ್ದೇಶಕರು. ಕೇಂದ್ರ ಸಂಘದ ಸಭೆಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದರು. ಕಾರ್ಮಿಕರ ಹಿತದ ಬಗ್ಗೆ ಅವರಿಗೆ ಸದಾ ಕಾಳಜಿ. ಆ ಸಭೆಗಳಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಪರಿಹಾರ ಕ್ರಮಗಳಿಗಾಗಿ ಆಗ್ರಹಿಸುತ್ತಿದ್ದರು. ಕಾರ್ಮಿಕರಿಗೆ ಕಳಪೆ ಬೀಡಿ ಎಲೆಗಳನ್ನು ವಿತರಿಸಿದಾಗ, ಅದರ ಸ್ಯಾಂಪಲನ್ನು ಡಾ. ಸುಬ್ಬರಾವ್ ತನ್ನ ಬ್ಯಾಗಿನಲ್ಲಿ ಒಯ್ದು, ಕೇಂದ್ರ ಸಮಿತಿಯ ಸಭೆಯಲ್ಲೇ ಪ್ರದರ್ಶಿಸಿ, ‘ಇಂತಹ ಎಲೆಗಳಿಂದ ಉತ್ತಮ ಬೀಡಿ ತಯಾರಿಸುವುದು ಹೇಗೆ?’ ಎಂದು ಪ್ರಶ್ನಿಸಿದ್ದರು.ಮಂಜೇಶ್ವರದ ದಿನೇಶ್ ಬೀಡಿಯ ಮೈನ್ ಡಿಪೊ, ಉದ್ಯಾವರ, ಕುಂಜತ್ತೂರು, ಕೆದಂಬಾಡಿ, ವರ್ಕಾಡಿ, ಪಾವೂರು, ದೈಗೋಳಿ, ಕಡಂಬಾರ್, ಮಜಿಬೈಲು, ಮೂಡಂಬೈಲು, ಉಪ್ಪಳ, ಭಗವತೀ ಗೇಟ್, ಪುಳಿಕುತ್ತಿ – ಈ ೧೨ ಫ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದ ಸುಮಾರು ೧೫೦೦ ಕಾರ್ಮಿಕರ ಬದುಕಿಗೊಂದು ನೆಲೆ ಒದಗಿಸಿದವರು ಡಾ. ಸುಬ್ಬರಾವ್. ಇವೆಲ್ಲ ಫ್ಯಾಕ್ಟರಿಗಳು ಡಾ. ಸುಬ್ಬರಾವ್ ಅಧ್ಯಕ್ಷರಾಗಿದ್ದ ಅವದಿಯಲ್ಲೇ ಸ್ಥಾಪನೆಯಾದವುಗಳು. ಅವರು ಅಧ್ಯಕ್ಷ ಸ್ಥಾನ ತೆರವು ಮಾಡಿದ ಬಳಿಕ ಯಾವುದೇ ಹೊಸ ಫ್ಯಾಕ್ಟರಿ ಆರಂಭವಾಗಲಿಲ್ಲ ಎಂಬುದು ಗಮನಿಸಬೇಕಾದ ವಿಷಯ. ‘ಕಾರ್ಮಿಕರಿಂದ ಕಾರ್ಮಿಕರಿಗಾಗಿ’ ಎಂಬ ತತ್ವದ ನೆಲೆಯಲ್ಲಿ ದಿನೇಶ್ ಬೀಡಿ ಸೊಸೈಟಿಯನ್ನು ಮುನ್ನಡೆಸಿ, ಅದನ್ನು ದೇಶಕ್ಕೇ ಒಂದು ಮಾದರಿ ಉತ್ಪಾದನಾ ಸಂಸ್ಥೆಯಾಗಿ ಕಟ್ಟಿ ಬೆಳೆಸುವಲ್ಲಿ ಡಾ. ಸುಬ್ಬರಾಯರದು ಪ್ರಧಾನ ಪಾತ್ರ.ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜುಮಂಜೇಶ್ವರಕ್ಕೆ ಒಂದು ಕಾಲೇಜು ಬೇಕೆಂಬುದು ಅಲ್ಲಿನ ಜನರ ಬಹುದಿನಗಳ ಬೇಡಿಕೆ. ಅಲ್ಲಿನ ಹಲವಾರು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ದೂರದ ಮಂಗಳೂರಿಗೆ ಪ್ರತಿದಿನ ಹೋಗಿ ಬರಬೇಕಾದ ಪರಿಸ್ಥಿತಿ ಇತ್ತು. ಈ ಬವಣೆ ತಪ್ಪಿಸಲಿಕ್ಕಾಗಿ ರಾಷ್ಟ್ರಕವಿ ಗೋವಿಂದ ಪೈಗಳ ಸ್ಮಾರಕವಾಗಿ ಸರಕಾರಿ ಕಾಲೇಜನ್ನೇ ಸ್ಥಾಪಿಸಬೇಕೆಂಬುದು ಡಾ. ಸುಬ್ಬರಾಯರ ಕನಸು. ಈ ಕನಸು ನನಸಾಗುವ ಅವಕಾಶ ಒದಗಿದ್ದು ಅವರು ಶಾಸಕರಾದಾಗ.ಒಂದೂರಿಗೆ ಸರಕಾರಿ ಕಾಲೇಜು ಮಂಜೂರು ಮಾಡಿಸಿ, ಅಂತಿಮವಾಗಿ ಅದು ಕಾರ್ಯಾರಂಭ ಮಾಡುವವರೆಗಿನ ವಿವಿಧ ಹಂತಗಳ ಅಡಚಣೆಗಳು ಅವನ್ನೆಲ್ಲ ಅನುಭವಿಸಿದವರಿಗೇ ಗೊತ್ತು. ಅಂತೂ ಮಂಜೇಶ್ವರಕ್ಕೊಂದು ಕಾಲೇಜೆಂಬ ಕನಸು ನನಸಾಗುವಲ್ಲಿ ಹಲವರ ಶ್ರಮವಿದೆ. ಜಯಂತ ಕಿಣಿ, ಡಾ. ಗಣಪತಿ ಭಟ್, ದಿವಂಗತ ಎಂ. ರಾಮಪ್ಪ ಮಾಸ್ಟರ್ ಇವರೆಲ್ಲರೊಂದಿಗೆ ಛಲ ಬಿಡದೆ ಶ್ರಮಿಸಿದವರು ಡಾ. ಸುಬ್ಬರಾವ್. ಕಾಲೇಜು ಕಾರ್ಯಾರಂಭ ಮಾಡಿದ ನಂತರವೂ ಅದರ ಆಗುಹೋಗುಗಳಲ್ಲಿ ವಿಶೇಷ ಆಸಕ್ತಿ ವಹಿಸಿದವರು. ಸರಕಾರದ ಅನುದಾನಗಳು ಕಾಲ ಕಾಲಕ್ಕೆ ಕಾಲೇಜಿಗೆ ದೊರಕಲು ಅವರ ಮುತುವರ್ಜಿಯೇ ಕಾರಣ. ಅದೇ ರೀತಿಯಲ್ಲಿ ರಾಷ್ಟ್ರಕವಿಯ ನಿವಾಸವಿರುವ ಜಾಗದಲ್ಲೂ ಗ್ರಂಥಾಲಯ ಮತ್ತು ವಾಚನಾಲಯ ಸ್ಥಾಪನೆಗೂ ಡಾಕ್ಟರರ ಆಸಕ್ತಿಯೇ ಕಾರಣ.ಕಾಸರಗೋಡು ಜಿಲ್ಲೆಗಾಗಿಈಗ ಕಾಸರಗೋಡು ಒಂದು ಜಿಲ್ಲೆ. ಈ ಹೊಸ ಜಿಲ್ಲೆ ರಚನೆಯಾಗಲು ಶತಪ್ರಯತ್ನ ಮಾಡಿದವರಲ್ಲಿ ಡಾ. ಸುಬ್ಬರಾವ್ ಪ್ರಮುಖರು. ಆದರೆ ಡಾಕ್ಟರ್ ಅದು ತನ್ನ ಸಾಧನೆ ಎಂದು ಹೇಳಿಕೊಳ್ಳಲಿಲ್ಲ. ಯಾಕೆಂದರೆ ಅವರು ಹೆಸರಿಗಾಗಿ ಕೆಲಸ ಮಾಡಿದವರೇ ಅಲ್ಲ.ಈ ಬಗ್ಗೆ ಸಿ. ರಾಘವನ್ ಮುಖ್ಯ ಸಂಗತಿಯೊಂದನ್ನು ತಿಳಿಸುತ್ತಾರೆ : ‘‘ಜಿಲ್ಲಾ ಸುವರ್ಣ ಸ್ವಾತಂತ್ರ್ಯ ಸಮಿತಿಯ ಸಮಾರಂಭಕ್ಕಾಗಿ ದಾಖಲೆಗಳನ್ನು ಹುಡುಕಾಡಿದಾಗ, ಕಾಸರಗೋಡು ಜಿಲ್ಲೆಯ ಸ್ಥಾಪನೆಗಾಗಿ ಡಾ. ಸುಬ್ಬರಾವ್ ಮಾಡಿದ ಕೆಲಸದ ಅಗಾಧತೆ ನನಗೆ ತಿಳಿಯಿತು’’.ಕಾಸರಗೋಡು ಜಿಲ್ಲೆ ರಚನೆಯಾದಾಗ, ಕಮ್ಯುನಿಸ್ಟ್ ಪಾರ್ಟಿಯ ಅಲ್ಲಿನ ಜಿಲ್ಲಾ ಸಮಿತಿಗೆ ಸಹಜವಾಗಿಯೇ ಡಾ. ಸುಬ್ಬರಾವ್ ಅಧ್ಯಕ್ಷರಾದರು. ಜಿಲ್ಲಾ ಸಮಿತಿಯ ಕಚೇರಿ ಸ್ಥಾಪಿಸಲು ಕಮ್ಯುನಿಸ್ಟ್ ಪಾರ್ಟಿಯ ರಾಜ್ಯ ಸಮಿತಿ ನಿರ್ದೇಶನ ನೀಡಿತು. ಅದಕ್ಕಾಗಿ ರೂ. ೮ ಲಕ್ಷ ಹಣ ಬೇಕಾಗಿತ್ತು. ಡಾ. ಸುಬ್ಬರಾವ್ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನ ಮನೆಗೆ ಹೋಗಿ, ದೇಣಿಗೆ ವಿನಂತಿಸಿದರು. ಈ ರೀತಿಯಲ್ಲಿ ಒಂದು ತಿಂಗಳಿಡೀ ಕೆಲಸ ಮಾಡಿ ರೂ. ೮ ಲಕ್ಷ ಸಂಗ್ರಹಿಸಿ, ಜಿಲ್ಲಾ ಸಮಿತಿಯ ಕಚೇರಿ ಸ್ಥಾಪಿಸಿದರು. ಸಂಘಟನೆ ಕಟ್ಟುವುದರಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ ಪಾತ್ರವೂ ಮುಖ್ಯ ಎಂಬುದನ್ನು ಅವರು ಕೊನೆಯವರೆಗೂ ಅನುಸರಿಸಿದರು. ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿಡಾಕ್ಟರ್ ಸುಬ್ಬರಾವ್ ತಾನು ಭಾಷಾ ಅಲ್ಪಸಂಖ್ಯಾತರ ಪ್ರತಿನಿಧಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದರು. ಕೇರಳದ ಉತ್ತರ ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಮಾತನಾಡುವವರ ಮತ್ತು ತಮಿಳ್ನಾಡಿಗೆ ಹೊಂದಿಕೊಂಡ ಗಡಿಪ್ರದೇಶಗಳಲ್ಲಿ ತಮಿಳು ಮಾತನಾಡುವವರ ಹಿತರಕ್ಷಣೆ ಬಗ್ಗೆ ಅವರಿಗೆ ಸಮಾನ ಕಾಳಜಿಯಿತ್ತು. ಇದಕ್ಕೆ ಕಾರಣವೂ ಇತ್ತು. ಅವರ ಮನೆಮಾತು ಕನ್ನಡವಾದರೆ, ತಂಜಾವೂರು ಮತ್ತು ಮದ್ರಾಸಿನಲ್ಲಿ ಬಾಲ್ಯ ಹಾಗೂ ಯೌವನದಲ್ಲಿ ಅವರು ವಿದ್ಯಾಭ್ಯಾಸ ಪಡೆದ ಭಾಷೆ ತಮಿಳು.ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಮಾತಾಡಿ ಕೂರುವವರಲ್ಲ ಡಾ. ಸುಬ್ಬರಾವ್. ಕೇರಳದ ವಿಧಾನಸಭೆಯಲ್ಲಿಯೂ ಅವರು ಈ ವಿಷಯ ಪ್ರಸ್ತಾಪಿಸಿದ್ದರು. (ವಿವರಗಳಿಗಾಗಿ ಓದಿ : ವಿಧಾನಸಭೆಯಲ್ಲಿ ಡಾ. ಸುಬ್ಬರಾವ್). ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಉತ್ತಮ ಪಠ್ಯಪುಸ್ತಕಗಳನ್ನು ಒದಗಿಸಬೇಕೆಂಬುದು ಅವರ ಅಭಿಪ್ರಾಯ. ಭಾಷಾವಾರು ರಾಜ್ಯ ಪುನರ್ರಚನೆ ಬಳಿಕ, ಕೇರಳದಲ್ಲಿ (ಮಲೆಯಾಳ ಭಾಷಾ ಪಠ್ಯಪುಸ್ತಕಗಳ ಹೊರತಾಗಿ) ಪಠ್ಯಪುಸ್ತಕಗಳನ್ನು ಇಂಗ್ಲಿಷಿನಲ್ಲಿ ಬರೆಯಿಸಿ, ಅನಂತರ ಮಲೆಯಾಳ, ತಮಿಳು ಮತ್ತು ಕನ್ನಡ ಭಾಷೆಗಳಿಗೆ ಭಾಷಾಂತರಿಸಿ ಮುದ್ರಿಸಲಾಗುತ್ತಿತ್ತು. ಹೀಗೆ ಭಾಷಾಂತರಿಸಿದ ಪಠ್ಯಪುಸ್ತಕಗಳಲ್ಲಿ ತಪ್ಪುಗಳು ಇರುತ್ತಿದ್ದವು. ಇದು ಡಾ. ಸುಬ್ಬರಾಯರ ಗಮನಕ್ಕೆ ಬಂದಾಗ, ಅವನ್ನು ಪರೀಕ್ಷಿಸಬೇಕೆಂದು ಅವರು ಕೆಲವು ವಿದ್ವಾಂಸರನ್ನು ವಿನಂತಿಸಿದರು. ಅನಂತರ ಆ ತಪ್ಪುಗಳನ್ನು ಸರಕಾರದ ಗಮನಕ್ಕೆ ತಂದರು. ಭಾಷಾಂತರದ ತರುವಾಯ, ವಿದ್ವಾಂಸರು ಪರಿಶೀಲಿಸಿ, ಭಾಷಾದೋಷಗಳನ್ನೆಲ್ಲ ಸರಿಪಡಿಸಿದ ಬಳಿಕವೇ ಪುಸ್ತಕಗಳನ್ನು ಮುದ್ರಿಸಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ಕೊಡಿಸಿದರು. ಹೀಗೆ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಯಲ್ಲಿಯೂ ಅವರದು ರಚನಾತ್ಮಕ ಧೋರಣೆ.ಮಂಜೇಶ್ವರದ ಕರ್ಮಭೂಮಿಯಲ್ಲಿಡಾ. ಎ. ಸುಬ್ಬರಾಯರ ಕರ್ಮಭೂಮಿ ಕೇರಳದ ಉತ್ತರ ತುದಿಯ ಮಂಜೇಶ್ವರ. ಅವರಲ್ಲಿಗೆ ವೈದ್ಯರಾಗಿ ಕಾಲಿಟ್ಟದ್ದು ೧೯೪೩ರಲ್ಲಿ. ವೈದ್ಯವೃತ್ತಿಯಿಂದಲೂ, ಜನತಾ ರಂಗಭೂಮಿಯ ಕಲಾ ಚಟುವಟಿಕೆಗಳಿಂದಲೂ ಅಲ್ಲೇ ಜನಾನುರಾಗ ಗಳಿಸಿದರು. ಕಮ್ಯೂನಿಸ್ಟ್ ಪಕ್ಷ ಸೇರಿ ಸಂಘಟನೆ ಕಟ್ಟಿ ಬೆಳೆಸಿದರು. ದಿನೇಶ್ ಬೀಡಿ ಸೊಸೈಟಿ ಹಾಗೂ ಮಂಜೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಜವಾಬ್ದಾರಿಯ ಸ್ಥಾನಗಳನ್ನು ಹಲವಾರು ವರುಷ ನಿರ್ವಹಿಸಿದರು. ನಿಸ್ವಾರ್ಥದಿಂದ ಜನಸೇವೆ ಮಾಡುತ್ತಲೇ ಜನನಾಯಕರಾದರು. ಸರಳತೆಯಿಂದಲೇ ಪ್ರತಿಯೊಬ್ಬರ ಮನ ಗೆದ್ದರು. ನೇರ ನಡೆನುಡಿ, ಶುದ್ಧ ಚಾರಿತ್ರ್ಯದಿಂದಾಗಿ ಎಲ್ಲರ ಗೌರವ ಗಳಿಸಿದರು. ರಾಜ್ಯಸಭಾ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಯಾಗಿ ನಿಷ್ಕಳಂಕವಾಗಿ ಕರ್ತವ್ಯ ನಿರ್ವಹಣೆ ಮಾಡಿ, ಜನರ ಹೃದಯಗಳಲ್ಲಿ ಶಾಶ್ವತ ಸ್ಥಾನ ಗಳಿಸಿದರು. ೧೪ ಸಪ್ಟಂಬರ್ ೨೦೦೩ರಂದು ನಿಧನರಾದ ಅವರು ತನಗಾಗಿ ಏನನ್ನೂ ಬಯಸಲಿಲ್ಲ. ಕೂಡಿ ಹಾಕಲಿಲ್ಲ. ತನ್ನ ಮಕ್ಕಳು ಹಾಗೂ ಕುಟುಂಬದವರಿಗೂ ಪ್ರೀತಿ ವಿಶ್ವಾಸ ಗಳನ್ನಷ್ಟೇ ಕೊಟ್ಟರು. ಶ್ರೀಮದ್ ಅನಂತೇಶ್ವರ ದೇವಸ್ಥಾನದ ಎದುರಿನ ಕಟ್ಟಡದ ಮಾಳಿಗೆಯ ಕೋಣೆಯಲ್ಲಿ ಕ್ಲಿನಿಕ್ ಆರಂಬಿಸಿ, ಅಲ್ಲಿಯೇ ವೈದ್ಯವೃತ್ತಿ ನಡೆಸಿದರು. ಮಂತ್ರಿಯಾದಾಗ, ಅದನ್ನೂ ವೈದ್ಯರೊಬ್ಬರಿಗೆ ಧಾರೆಯೆರೆದರು. ಮಂಜೇಶ್ವರದ ಕ್ಲಿನಿಕ್‌ನ ಎದುರಿನ ಬಾಡಿಗೆ ಮನೆಯಲ್ಲೇ ಕೊನೆಯವರೆಗೂ ಬದುಕಿ, ಬಾಳಿ, ಮಹಾನ್ ವ್ಯಕ್ತಿಯಾಗಿ ಬೆಳೆದರು.