ಹಿಂದೆ ಮೈಸೂರು ಮಹಾರಾಜರಿಗೆ ಪ್ರಿಯವಾಗಿದ್ದ ರಾಜಮುಡಿಎಂಬ ಭತ್ತವನ್ನು ಹಳ್ಳಿಯಲ್ಲಿ ಈಗ ನಿರ್ವಿಷವಾಗಿ ಬೆಳೆಸಲಾಗುತ್ತಿದ್ದು, ಇದರ ಮೌಲ್ಯವರ್ಧಿತ ಅಕ್ಕಿರವೆಈಗ ರಾಜಧಾನಿ ಹೊಕ್ಕಿ.

ಅಡುಗೆ ಮನೆಯಿಂದ ಬೇಯುತ್ತಿರುವ ಅನ್ನದ ಪರಿಮಳಕ್ಕೆ ಹೊರಜಗಲಿಯಲ್ಲಿ ಕುಳಿತವರ ಮೂಗು ಅರಳಿತ್ತು! ‘ಚಲೋ ಪರಿಮಳ’ ಅಡುಗೆ ಮನೆಯಿಂದ ಶೈಲಜಾ ಕೂಗಿದರು. ‘ಅದಾ..ಸಾವಯವದಲ್ಲಿ ಬೆಳೆದದ್ದಲ್ವಾ. ಹಾಂಗಾಗಿ ಪರಿಮಳ’ ನಂಜುಂಡಪ್ಪ ದನಿಸೇರಿಸಿದರು. ‘ಬನ್ರಿ ಊಟಕ್ಕೆ’ ಬಟ್ಟಲು ಸದ್ದುಮಾಡಿತು. ಅನ್ನವನ್ನು ಸಾಕಷ್ಟು ಬಡಿಸಿಕೊಂಡು ಒಬ್ಬೊಬ್ಬ ಉಂಡದ್ದೇ ಉಂಡದ್ದು. ‘ನೋಡ್ರಿ ಇದು ರಾಜಮುಡಿಯ ಮಹಿಮೆ’ ಹಿರಿಯರಾದ ಸಿದ್ದಪ್ಪಾಜಿ ಹೇಳಿದರು.

ಹಿಂದೆ ಮೈಸೂರು ಮಹಾರಾಜರಿಗೆ ಹಾಸನ ಜಿಲ್ಲೆಯ ಹೊಳೆನರಸಿಪುರದಿಂದ ‘ರಾಜಮುಡಿ ಅಕ್ಕಿ’ ಸರಬರಾಜಾಗುತ್ತಿತ್ತು. ರಾಜರಿಗೆ ಅದು ಮುಡಿಪಾದುದರಿಂದ ‘ರಾಜಮುಡಿ’ ಅಂತ ಪ್ರತೀತಿ. ‘ಮಹಾರಾಜರಲ್ಲಿ ರೈಟ್ರಾಗಿ, ಕಾರ್ಮಿಕರಾಗಿ ಹೊಲದಲ್ಲಿ ದುಡಿಯಲು ಇತ್ತ ಕಡೆಯಿಂದಲೇ ಜನರಿದ್ದರು. ಹಾಗಾಗಿ ಇಲ್ಲಿನ ಅಕ್ಕಿ ಮೈಸೂರಿಗೆ ಹೋಗಿರಬಹುದು’ ನಂಜುಂಡಪ್ಪ ಉವಾಚ.

ಹೊಳೆನರಸಿಪುರ, ಚನ್ನರಾಯಪಟ್ನ, ಕೆ.ಆರ್.ನಗರ ಮತ್ತು ಕೆ.ಆರ್.ಪೇಟೆ ಸುತ್ತಲಿನ ಕೃಷಿ ಪ್ರದೇಶದಲ್ಲಿ ‘ರಾಜಮುಡಿ’ಗೆ ಸಿಂಹಪಾಲು. ಬೇರೆಡೆ ಒಯ್ದು ಬೆಳೆದರೆ ಇಲ್ಲಿನ ರುಚಿ ಸಿಗದು. ಬಹುಶಃ ಮಣ್ಣಿನ ಫಲವತ್ತತೆ.

ಜುಲಾಯಿ ತಿಂಗಳಲ್ಲಿ ನಾಟಿ. ೧೫೦ ದಿವಸದ ಬೆಳೆ. ಅಕ್ಕಿ ಸಿಹಿ. ಒಂದು ಲೋಟ ಅಕ್ಕಿಯಿಂದ ನಾಲ್ಕು ಲೋಟ ಅನ್ನ ಆಗುವಷ್ಟು ಒದಗು. ರೋಗನಿರೋಧಕ ಶಕ್ತಿಯಿದೆ. ಕಾಳು ಸಣ್ಣ. ಕಾಳಿಂದ ಕಾಳಿಗೆ ಸಮಾನಾಂತರ. ಉಳಿದ ಭತ್ತಗಳಿಗಿಂತ ತೂಕ ಜಾಸ್ತಿ. ನಾಲ್ಕೂವರೆ ಅಡಿ ಎತ್ತರವಾಗಿ ಬೆಳೆಯುತ್ತದೆ. ಹೆಚ್ಚು ರಾಸಾಯನಿಕ ಗೊಬ್ಬರ ಬಳಸಿದಲ್ಲಿ ಗಿಡ ಇನ್ನಷ್ಟು ಎತ್ತರ ಬೆಳೆದು ಬಾಗಿ, ಬಿದ್ದೋಗುವ ಗುಣವಿದೆ. ಉಳಿದ ಭತ್ತದ ತಳಿಗಳಿಗಿಂತ ಇಳುವರಿ ಜಾಸ್ತಿ. ಎಕರೆಗೆ ಸರಿಸುಮಾರು ೧೫ ಕ್ವಿಂಟಾಲ್.

ರಾಜಮುಡಿಯಲ್ಲಿ ಮೂರು ವಿಧ. ಬಿಳಿ, ಕೆಂಪು ಮತ್ತು ಜಡೆ. ಒತ್ತೊತ್ತಾಗಿ ಕಾಳುಬಿಟ್ಟಿರುವುದು ಬಿಳಿಯ ಲಕ್ಷಣ. ಬೀಜಕ್ಕಾಗಿ ಪ್ರತ್ಯೇಕವಾಗಿ ಆಯದಿದ್ದರೆ ಇದೇ ‘ಬಿಳಿ’  ಮುಂದೆ ಕೆಂಪಾಗುತ್ತದೆ. ಹೆಣ್ಮಕ್ಕಳು ಜಡೆ ನೇಯ್ದಂತೆ ಕಾಣುವ, ಅಂದರೆ ಒತ್ತೊತ್ತಾಗಿ ಭತ್ತವಿರುವುದು ಜಡೆರಾಜಮುಡಿ. ಶೇ.೧೦ರಷ್ಟು ಹೆಚ್ಚು ಇಳುವರಿ. ತಾಲೂಕಿನ ಬೆಟ್ಟದ ಸಾತೆನಹಳ್ಳಿಯಲ್ಲಿ ಜಡೆ ರಾಜಮುಡಿಯನ್ನು ಪ್ರತ್ಯೇಕವಾಗಿ ಬೆಳೆಯುತ್ತಾರೆ. ಹಿಂದೆ ‘ಬೀಜಕ್ಕಾಗಿ’ಯೇ ಭತ್ತ ಬೆಳೆಸುತ್ತಿದ್ದರು. ‘ಬಿಳಿ ರಾಜಮುಡಿ ಕೆಂಪಾದಾಗ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ’ ಎನ್ನುತ್ತಾರೆ ಜ್ಯೋತಿ.

ಸಾವಯವದಕ್ಕಿ

ರಾಜಮುಡಿಯ ತೆಕ್ಕೆಯೊಳಗೆ ಹೊಯ್ಸಳ ಎಸ್. ಅಪ್ಪಾಜಿ

ಹೊಳೆನರಸಿಪುರದ ‘ಉಣ್ಣೇನಹಳ್ಳಿ’ ತೀರಾ ಹಳ್ಳಿ. ದಿವಸಕ್ಕೆ ಎರಡ್ಮೂರು ಬಾರಿ ಬರುವ ಸರಕಾರಿ ಬಸ್ಸು. ಅದು ಕೈಕೊಟ್ಟರೆ ಮುಖ್ಯರಸ್ತೆಗೆ ಸಾಗಲು ಎರಡೂವರೆ ಕಿಮೀ ಕಾಲ್ನಡಿಗೆ.

ಈ ಹಳ್ಳಿ ಈಗ ಕೃಷಿ ಇಲಾಖೆಯ ತಾಲೂಕು ಮಟ್ಟದ ‘ಸಾವಯವ ಗ್ರಾಮ’. ಶೇ.೫೦ರಷ್ಟು ರೈತರು ಸಾವಯವದಲ್ಲಿ ಭತ್ತ ಬೆಳೆಯುತ್ತಾರೆ. ಇನ್ನಷ್ಟು ಮಂದಿ ಸಾವಯವಕ್ಕೆ ಬದಲಾಗುತ್ತಿದ್ದಾರೆ.

ಭತ್ತದ ಕೃಷಿ ಇಲ್ಲಿ ಪಾರಂಪರಿಕ. ಖರ್ಚು ಹೆಚ್ಚು ಬೇಡುತ್ತಿದ್ದರೂ, ‘ವರ್ಷಪೂರ್ತಿ ಉಣ್ಣುವುದಕ್ಕೆ ತೊಂದರೆಯಿಲ್ಲವಲ್ಲಾ’ ಎನ್ನುತ್ತಾ ಬೆಳೆಯುತ್ತಾರೆ. ಹೇಮಾವತಿ ನದಿಯ ಗೊರೂರು ಎಡದಂಡೆ ಮತ್ತು ಶ್ರೀರಾಮದೇವರ ಎಡದಂಡೆ ನಾಲೆಗಳಲ್ಲಿ ಹರಿವ ನೀರು ಭತ್ತದ ಕೃಷಿಗೆ ಮೂಲ. ನಾಲೆಯಲ್ಲಿ ಜನವರಿ ನಂತರ ನೀರಿನ ಹರಿವಿಲ್ಲ. ಹಾಗಾಗಿ ವರುಷಕ್ಕೆ ಒಂದೇ ಬೆಳೆ.

ರುಚಿಯೇ ಮುಖ್ಯವಾಗುಳ್ಳ ರಾಜಮುಡಿಗೆ ರಾಜಧಾನಿಯಲ್ಲೂ ಬೇಡಿಕೆ! ಸುತ್ತುಮುತ್ತಲಿನ ತಾಲೂಕುಗಳ ರೈತರು ಹುಡುಕಿ ಬರುತ್ತಾರೆ. ‘ಏನಿಲ್ಲವೆಂದರೂ ವರುಷಕ್ಕೆ ೫೦-೬೦ ಕ್ವಿಂಟಾಲ್ ಅಕ್ಕಿ ಮಾರಾಟವಾಗುತ್ತಾದೆ’ ಎನ್ನುತ್ತಾರೆ ಸಾವಯವ ಗ್ರಾಮದ ಉಸ್ತುವಾರಿಹೊತ್ತ ಹೊಯ್ಸಳ ಅಪ್ಪಾಜಿ.

‘ದೂರದ ರೈತರು ನಾವೇ ಬೆಳೀತೀವಿ-ಎನ್ನುತ್ತಾ ಬೀಜ ಒಯ್ತಾರೆ. ಮೂರು ವರುಷಗಳ ನಂತರ ಪುನಃ ಬೀಜಕ್ಕಾಗಿ ಬರ‍್ತಾರೆ’ ಎನ್ನುತ್ತಾರೆ ರೈತ ಚೆನ್ನವೀರಪ್ಪ. ಮಣ್ಣಿನ ಗುಣದಿಂದಾಗಿ ಅಕ್ಕಿಗೆ ಅಷ್ಟೊಂದು ರುಚಿ. ಬೇರೆಡೆ ಈ ರುಚಿ ಬಾರದು.

ಸಾರು, ಸಾಂಬಾರಿನೊಂದಿಗೆ ರಾಜಮುಡಿ ಅನ್ನ ಚೆನ್ನಾಗಿ ಬೆರೆಯುತ್ತದೆ. ರೊಟ್ಟಿ, ದೋಸೆ, ಕಡುಬು, ಶ್ಯಾವಿಗೆ, ಹಪ್ಪಳ – ಇಲ್ಲಿನ ಅಡುಗೆ ಮನೆಯಲ್ಲಿ ತಯಾರಾಗುವ ವಿವಿಧ ವೈವಿಧ್ಯಗಳು.

ಸುಮಾರು ನಾಲ್ಕೂವರೆ ಅಡಿ ಬೆಳೆಯುವ ಇದರ ಹುಲ್ಲು ಮೃದುವಾದುದರಿಂದ ಜಾನುವಾರುಗಳಿಗೆ ಪ್ರಿಯ. ಗುಡಿಸಲು, ಕೊಟ್ಟಿಗೆಯ ಸೂರಿಗೆ ಹಾಸಲು ಬಳಸುವುದಿದೆ.

ಶುದ್ಧತಳಿ ಆಯ್ಕೆ

ಮೂರ್ನಾಲ್ಕು ವರುಷಕ್ಕೊಮ್ಮೆ ರೈತರೇ ಬೀಜದಾಯ್ಕೆ ಮಾಡುತ್ತಾರೆ. ಗದ್ದೆಯಲ್ಲಿ ಅತೀ ಹೆಚ್ಚು ಬಲಿತ ತೆನೆಯನ್ನು ಬೀಜಕ್ಕಾಗಿ ತೆಗೆದಿಡುತ್ತಾರೆ. ಅವರದ್ದದೇ ಅದ ಮೌಲ್ಯಮಾಪನ. ಕೊಯ್ಲಿನ ಹದಿನೈದು ದಿನ ಮೊದಲು ಈ ಪ್ರಕ್ರಿಯೆ. ಮುಂದಿನ ಋತುವಿನಲ್ಲಿ ಬಿತ್ತನೆ. ‘ಈ ರೀತಿ ಮಾಡದಿದ್ದರೆ ಬಿಳಿ ರಾಜಮುಡಿ ಕ್ರಮೇಣ ಕೆಂಪಾಗುತ್ತದೆ. ಭತ್ತವನ್ನು ಗೋಣಿಗೆ ತುಂಬಿಸುವಾಗ, ಗೋಣಿಯಲ್ಲಿ ಎಲ್ಲಾದರೂ ಬೇರೆ ತಳಿಯ ಒಂದು ಬೀಜವಿದ್ದರೆ, ಅದು ಮತ್ತೆ ಇನ್ನಷ್ಟು ಬೆರಕೆ ತಳಿಯನ್ನು ಸೃಷ್ಟಿಯಾಗುತ್ತದೆ.. ಹಾಗಾಗಿ ಬೀಜದಾಯ್ಕೆ ಮಾಡಲೇ ಬೇಕಾಗುತ್ತದೆ’ ಎನ್ನುತ್ತಾರೆ ಹೊಯ್ಸಳ ಅಪ್ಪಾಜಿ.

‘ನಮಗದು ಆಭ್ಯಾಸದಿಂದ ಬಂದ ಅನುಭವ. ಒಂದೇ ಗದ್ದೆಯಲ್ಲಿ ಬಿಳಿ, ಕೆಂಪು ಮತ್ತು ಜಡೆ – ಮಿಶ್ರ ಆಗಿರುತ್ತೆ. ಒಂದೇ ವಿಧದವುಗಳ ತೆನೆಗಳನ್ನು ಬೀಜಕ್ಕಾಗಿ ಪ್ರತ್ಯೇಕವಾಗಿ ಬೇರ್ಪಡಿಸುತ್ತೇವೆ. ಅನ್ನದ ರುಚಿಯಲ್ಲಿ ಎಲ್ಲವೂ ಒಂದೇ ರುಚಿ’ ನಂಜುಂಡಪ್ಪ ಅನುಭವ ಹೇಳುತ್ತಾರೆ.

ರಾಜಮುಡಿ ಭತ್ತದ ವೈಜ್ಞಾನಿಕ ‘ಶುದ್ಧ ಬೀಜದಾಯ್ಕೆ’ಗಾಗಿ ಉಣ್ಣೇನಹಳ್ಳಿಯ ವಸುಂಧರಾ ಜೈವಿಕ ಕೃಷಿಕರ ಸೇವಾ ಸಂಸ್ಥೆ ಪ್ರಯತ್ನಿಸುತ್ತಿದೆ. ಬೆಂಗಳೂರಿನ ‘ಸಹಜ ಸಮೃದ್ಧ’ದ ಸಹಕಾರ ಇದಕ್ಕಾಗಿಯೇ ಪ್ರತ್ಯೇಕವಾದ ಭತ್ತ ಉತ್ಸವ ಜರುಗಿದೆ.

ಶುದ್ಧತಳಿ ಆಯ್ಕೆ ಪ್ರಕ್ರಿಯೆಯಲ್ಲಿ ಮಹಿಳಾ ರೈತರು

ಮೌಲ್ಯವರ್ಧನೆ

ಇಲ್ಲಿಯವರಿಗೆ ಬೆಳೆಯಲು ಮಾತ್ರ ಗೊತ್ತಿರುವುದಲ್ಲ, ಮಾರುಕಟ್ಟೆ ಮಾಡಲೂ ಗೊತ್ತು! ‘ಅಕ್ಕಿ ರವೆ’ – ರಾಜಮುಡಿಯ ಮೌಲ್ಯವರ್ಧಿತ ರೂಪ. ಸಾಮಾನ್ಯವಾಗಿ ಮಿಲ್ಲಿನಲ್ಲಿ ಅಕ್ಕಿ ರವೆಯಾಗುತ್ತದೆ. ಇಲ್ಲಿ ಹಾಗಲ್ಲ. ರಾಗಿ ಕಲ್ಲಿನಲ್ಲಿ ಬೀಸಿ ರವೆ ಮಾಡುತ್ತಾರೆ.

ಹೊಯ್ಸಳ ಅಪ್ಪಾಜಿ ಹೇಳುತ್ತಾರೆ – ‘ಮಿಲ್ಲಿನಲ್ಲಿ ಅಕ್ಕಿ ರವೆಯಾಗುವಾಗ ಅಕ್ಕಿಯೂ ಬಿಸಿಯಾಗುತ್ತದೆ. ಅಂದರೆ ಒಂದು ಹಂತದಲ್ಲಿ ಅಕ್ಕಿ ಬೆಂದ ಹಾಗೆ. ಆಗ ರವೆ ರುಚಿ, ಪರಿಮಳವನ್ನು ಕಳೆದುಕೊಳ್ಳುತ್ತದೆ. ರಾಗಿಕಲ್ಲಲ್ಲಿ ಬೀಸಿದಾಗ ಸಹಜ ಗುಣ ಉಳಿದುಕೊಳ್ಳುತ್ತದೆ’. ಬಹುಶಃ ಸಾವಯವದಲ್ಲಿ ಬೆಳೆದ ಕಾರಣವೂ ಸೇರಿತೆನ್ನಿ.

ಉಣ್ಣೇನಹಳ್ಳಿಯ ವಸುಂಧರೆ ಜೈವಿಕ ಕೃಷಿಕರ ಸೇವಾ ಸಂಸ್ಥೆಯ ಸ್ವಸಹಾಯ ಗುಂಪುಗಳು ರವೆಯನ್ನು ತಯಾರಿಸುತ್ತವೆ. ಮಳೆಗಾಲದಲ್ಲಿ ರಜೆ. ವರುಷದಲ್ಲಿ ಒಂದೂವರೆ ಟನ್ ರವೆ ಸಿದ್ಧ. ರಾಜಮುಡಿ ಅಕ್ಕಿಗೆ ಕಿಲೋಗೆ ಇಪ್ಪತ್ತೈದು ರೂಪಾಯಿ. ರವೆಗೆ ಇಪ್ಪತ್ತೆಂಟು ರೂಪಾಯಿ. ‘ಹೀಂಗೆ ಮಾಡಿದ್ಮೇಲೆ ನಮ್ಮೂರಿನ ಹೆಣ್ಮಕ್ಕಳು ತುಂಬಾ ಬ್ಯುಸೀರೀ..’ ಹಿರಿಯರಾದ ಡಾ.ಸಿ.ಸಿದ್ಧಪ್ಪಾಜಿ ಖುಷಿಪಡ್ತಾರೆ.

ರವೆಗೆ ರಾಜಧಾನಿಯಲ್ಲಿ ನಿಶ್ಚಿತ ಗ್ರಾಹಕರಿದ್ದಾರೆ. ಕೇಳಿ ಪಡೆವ ಅಕ್ಕಿಪ್ರಿಯರಿದ್ದಾರೆ. ‘ಇದು ಸಾವಯವದಲ್ವಾ. ನನಗಿಷ್ಟು ಕೊಡಿ’ ದುಂಬಾಲು ಬೀಳುವ ಮಂದಿಯಿದ್ದಾರೆ.

ಕೃಷಿಮೇಳ, ಜೈವಿಕ ಮೇಳ..ಮೊದಲಾದ ಕೃಷಿ ಕಾರ್ಯಕ್ರಮಗಳಲ್ಲಿ ಮಳಿಗೆ ತೆರೆದು, ರಾಜಮುಡಿ ಅಕ್ಕಿ-ರವೆಗಳ ಬಗ್ಗೆ ವಿವರ ಹೇಳಿ ‘ಒಯ್ದು ರುಚಿ ಹೇಳುವಂತೆ’ ಬಿನ್ನವಿಸುತ್ತಾರೆ ಹೊಯ್ಸಳ. ಹೀಗೆ ಬಾಯಿಂದ ಬಾಯಿಗೆ ಪ್ರಚಾರ. ‘ಇದುವರೆಗೆ ಯಾವುದೇ ಜಾಹೀರಾತು ಕೊಟ್ಟಿಲ್ಲ’ ಎನ್ನುತ್ತಾರೆ.

ಮೈಸೂರು ಮಲ್ಲಿಗೆ, ಧಾರವಾಡದ ಪೇಡಾ, ಕೊಡಗಿನ ಕಿತ್ತಳೆಗೆ ಸನ್ನದು ಸಿಕ್ಕಿದಂತೆ, ಇಲ್ಲಿನ ‘ರಾಜಮುಡಿ’ ಭತ್ತಕ್ಕೂ ಸನ್ನದು ಪಡೆಯುವ ಬಗ್ಗೆ ಒಂದಷ್ಟು ಮಾತುಕತೆ ನಡೆಯುತ್ತಿದೆ.

ಅಧಿಕ ಫಲ ನೀಡುವ ತಳಿಗಳು ದಾಂಗುಡಿಯಿಡುತ್ತಿರುವ ಹೊತ್ತಲ್ಲಿ, ಮೂಲ ತಳಿಯನ್ನು ಉಳಿಸಿ ಬೆಳೆಸುವ, ಅದರಲ್ಲೂ ವಿಷರಹಿತವಾಗಿ ಬೆಳೆಯುವ ಹಳ್ಳಿಯ ರೈತರ ಪ್ರಯತ್ನ ರಾಜ್ಯಕ್ಕೇ ಸಂದೇಶ.

ಹೊಯ್ಸಳ ಎಸ್. ಅಪ್ಪಾಜಿ, ‘ವಸುಂಧರೆ’, ಉಣ್ಣೇನಹಳ್ಳಿ, ಅಂಚೆ : ಬೀಚೇನಹಳ್ಳಿ, ಹೊಳೆನರಸಿಪುರ ತಾಲೂಕು, ಹಾಸನ ಜಿಲ್ಲೆ – ೫೭೩ ೨೧೧  ಸಂಚಾರಿವಾಣಿ: ೯೪೪೯೪ ೬೨೩೯೭)