ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ೨೮-೪-೧೯೨೯ ರಂದು ಜನಿಸಿದ ರಾಜಮ್ಮನವರ ಸಂಗೀತ ಶಿಕ್ಷಣ ಶ್ರೀಯುತರಾದ ಕೆ.ಎಸ್‌. ರಾಮಚಂದ್ರನ್‌, ಬಿ. ದೇವೇಂದ್ರಪ್ಪ, ಬಿ. ಕೃಷ್ಣಪ್ಪ, ಬಿ. ಶೇಷಪ್ಪ, ಬಿ. ಪರಶುರಾಮ್‌, ಆರ್.ಕೆ. ನಾರಾಯಣಸ್ವಾಮಿ, ಆರ್. ಕೆ. ಶ್ರೀಕಂಠನ್‌ ಮುಂತಾದ ವಿದ್ವಾಂಸರುಗಳ ಮೂಲಕ ಪಡೆದು ಸಂಗೀತ ವಿದುಷಿಯಾದರು. ವಿವಾಹಾನಂತರ ಪತಿ ಶ್ರೀ ಕೇಶವಮೂರ್ತಿಯವರ ಸಹಕಾರ ಉತ್ತೇಜನಗಳನ್ನು ಪಡೆದಿದ್ದ ಶ್ರೀಮತಿಯವರು ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು ಮೂರು ದಶಕಗಳಿಗೂ ಮೇಲ್ಪಟ್ಟು ಶಿಕ್ಷಕಿಯಾಗಿ, ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿದ್ದಾರೆ. ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ದೇಶದ ಮುಖ್ಯ ನಗರಗಳ ಪ್ರತಿಷ್ಠಿತ ಸಭೆಗಳಲ್ಲೂ ಇವರ ಗಾಯನವು ನಡೆದಿದೆ. ಆಕಾಶವಾಣಿ ಹಾಗೂ ದೂರದರ್ಶನಗಳ ಮೂಲಕವೂ ಇವರ ಸಂಗೀತವು ಶ್ರೋತೃಗಳನ್ನು ತಣಿವಿದೆ.

ಚಿಕ್ಕಮಗಳೂರಿನಲ್ಲಿ ನಡೆದ ಭಾರತೀಯ ಧರ್ಮ ಸಮ್ಮೇಳನದಲ್ಲಿ ‘ಸಂಗೀತ ರತ್ನ’, ತ್ಯಾಗರಾಜ ಗಾನ ಸಭೆಯ ‘ಕಲಾನಿಧಿ’, ಚಿಂತಲ ಪಲ್ಲಿಯಲ್ಲಿ ‘ಸಂಗೀತ ಸರಸ್ವತಿ’, ರಾಜ್ಯ ಸಂಗೀತ – ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’, ‘ರಾಜ್ಯೋತ್ಸವ ಪ್ರಶಸ್ತಿ’ ಮುಂತಾದ ಗೌರವಗಳೂ ಹಲವಾರು ಸಭೆಗಳಿಂದ ಸನ್ಮಾನಗಳೂ ಇವರಿಗೆ ಪ್ರಾಪ್ತವಾಗಿವೆ.

ಇವರ ಮೂವರು ಪುತ್ರರೂ ಸಹ ಸಂಗೀತ ಕ್ಷೇತ್ರದಲ್ಲಿ ಸಕ್ರಿಯವಾಗಿ ವಿದ್ವಾಂಸರಾಗಿ ವಿಭಿನ್ನ ಕಲಾ ಪ್ರಕಾರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಮತಿಯವರು ಇಂದು ನೆಮ್ಮದಿಯ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.