ಸುಮಾರು ೭೫ ವರ್ಷಗಳ ಹಿಂದೆ ಜನಿಸಿದ ಇವರು ಸೇಲಂ ಜಿಲ್ಲೆಯ ಪುದುಪಾಳೆಯಂ ಗ್ರಾಮದ ಗಾಂಧಿ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡಿದರು. ಮಧುರೈ ನಗರದಲ್ಲಿ ವಾಸಿಸುವಾಗ ಅಲ್ಲಿ ದೇವದಾಸಿಯರ ’ಸದಿರ್’ ನಾಟ್ಯದ ದರ್ಶನದಿಂದ ಸ್ಪೂರ್ತಿ ಪಡೆದು ಪಂದನಲ್ಲೂರು ಮೀನಾಕ್ಷಿ ಸುಂದರಂ ಪಿಳ್ಳೆಯವರಲ್ಲಿ ಮೂರು ವರ್ಷಗಳ ಕಾಲ ಶಿಷ್ಯ ವೃತ್ತಿ ಮಾಡಿ ಭರತ ನಾಟ್ಯವನ್ನು ಅಭ್ಯಾಸ ಮಾಡಿದರು. ನಂತರ ಭರತ ನಾಟ್ಯ ಪಟು ಶ್ರೀಮತಿ ಕೌಸಲ್ಯಾ ನಾರಾಯಣನ್ ಅವರಲ್ಲಿ ನಾಟ್ಯಾಭ್ಯಾಸವನ್ನು ಮುಂದುವರೆಸಿದರು. ಅನೇಕ ನಾಟಕ ಕಂಪೆನಿಗಳಲ್ಲಿ ನೃತ್ಯ ಕಲಾವಿದರಾಗಿ, ನಾಟ್ಯ ನಿರ್ದೇಶಕರಾಗಿ ಕೆಲಸ ಮಾಡಿದರು.

ಕೇರಳದ ಮಹಾಕವಿ ವಲ್ಲತ್ತೋಳ್‌ರ ಕಲಾ ಮಂಡಳಲ್ಲಿ ನೃತ್ಯ ಅಧ್ಯಾಪಕರಾಗಿ ನಾಲ್ಕು ವರ್ಷ ಕೆಲಸ ಮಾಡಿದ್ದಾರೆ. ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲಸಿ ಅನೇಕ ಭರತ ನಾಟ್ಯ ಪಟುಗಳನ್ನು ತಯಾರು ಮಾಡಿದರು. ಮೈಸೂರಿನ ಆಗಿನ ಯುವರಾಜರಾಗಿದ್ದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರಿಂದ ’ಅಭಿನಯ ಶಿರೋಮಣಿ’ ಬಿರುದನ್ನು ಪಡೆದರು. ಅನೇಕ ಸನ್ಮಾನಗಳು ಸಂದಿವೆ. ಕೇರಳ ಸಂಗೀತ ನಾಟಕ ಅಕಾಡೆಮಿಯ ’ಫೆಲೋಷಿಪ್’ ಪಡೆದರು.

ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ೧೯೮೪-೮೫ರ ಪ್ರಶಸ್ತಿ ಹಾಗು ’ಕರ್ನಾಟಕ ಕಲಾ ತಿಲಕ’ ಎಂಬ ಬಿರುದು ಇವರಿಗೆ ಸಂದಿದೆ.