ಸುಸಂಸ್ಕೃತ ಮನೆತನದಲ್ಲಿ ೨೩-೨-೧೯೩೭ರಂದು ಮೈಸೂರಿನಲ್ಲಿ ಜನಿಸಿದ ರಾಜಲಕ್ಷ್ಮೀಯವರ ಸಂಗೀತ ಶಿಕ್ಷಣ ವೀಣಾ ವೆಂಕಟಗಿರಿಯಪ್ಪನವರಲ್ಲಿ ಆರಂಭಗೊಂಡಿತು. ನಂತರ ಆರ್. ಎನ್‌. ದೊರೆಸ್ವಾಮಿಯವರಲ್ಲಿ ಪ್ರೌಢ ಶಿಕ್ಷಣ ಪಡೆದರು. ಟಿ.ಎನ್‌. ಕೃಷ್ಣನ್‌, ಲಾಲ್‌ಗುಡಿ ಜಯರಾಮನ್‌ ಅವರ ಮಾರ್ಗದರ್ಶನದ ಲಾಭವೂ ಇವರಿಗೆ ದೊರಕಿದೆ. ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನವನ್ನು ಪಡೆದರು. ಜೊತೆಗೆ ಬಿ.ಎ. ಪದವೀಧರರೂ ಆದರು.

‘ಎ’ ಶ್ರೇಣಿಯ ಕಲಾವಿದೆಯಾದ ಇವರ ವೀಣಾ ವಾದನ ಆಕಾಶವಾಣಿ ದೂರದರ್ಶನ ಕೇಂದ್ರಗಳಿಂದ ಪ್ರಸಾರವಾಗುತ್ತಿದೆ. ರಾಜ್ಯದ ಹಾಗೂ ನೆರೆ ರಾಜ್ಯಗಳ ಪ್ರತಿಷ್ಠಿತ ಸಭೆಗಳಲ್ಲಿಯೂ ಇವರ ವಿನಿಕೆ ನಡೆದಿದೆ. ಅನೇಕ ವೀಣೆಗಳನ್ನೊಳಗೊಂಡ ‘ಶೃಂಗಾರ ಮಾಧುರಿ’ ಇವರ ನಿರ್ದೇಶನ ನೇತೃತ್ವದಲ್ಲಿ ನಡೆದ ಯಶಸ್ವಿ ಪ್ರದರ್ಶನ. ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ನೃತ್ಯ ನಾಟಕ ವಿಭಾಗದ ಅಧ್ಯಾಪಕಿಯಾಗಿ, ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

‘ವಾಗ್ಗೇಯ ವೈಃಭವ ಭಾಗ-೧’, ‘ವೀಣಾ ಧನಮ್ಮಾಳ್‌ ಹಾಗೂ ‘ಗಾನಶಾಸ್ತ್ರ’ ಎಂಬ ಪುಸ್ತಕಗಳೂ, ಹಲವಾರು ಲೇಖನಗಳೂ ಇವರ ಲೇಖನಿಯಿಂದ ಮೂಡಿ ಬಂದಿವೆ. ಸ್ವಲ್ಪ ಕಾಲ ಕರ್ನಾಟಕ ಗಾನಕಲಾ ಪರಿಷತ್ತಿನ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದರು.

‘ಗಾನ ಕಲಾ ಭೂಷಣ’, ‘ಕಲಾ ಜ್ಯೋತಿ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಶ್ರೀಮತಿಯವರು ಪುರಸ್ಕೃತರಾಗಿದ್ದಾರೆ. ಇವರ ಶಿಷ್ಯರ ಸಮೂಹವೂ ಹಿರಿದಾದುದು. ಶಾಸ್ತ್ರೀಯತೆ, ಮಾಧುರ್ಯ, ಸರಳತೆಗಳಿಂದ ಕೂಡಿದ ನೆಮ್ಮದಿಯ ವಾದನ ಶೈಲಿ ಇವರದಾಗಿದೆ.