ವೆಲ್ಲೂರಿನ ಕೇಂದ್ರ ಸೆರೆಮನೆ. ಅನೇಕ ಸ್ವಾತಂತ್ರ‍್ಯ ಹೋರಾಟಗಾರರನ್ನು ಅಲ್ಲಿ ಬಂಧಿಸಿಡಲಾಗಿತ್ತು. ೧೯೩೧ನೆಯ ಇಸವಿಯ ಕೊನೆ ಕೊನೆಯ ದಿನಗಳು. ಆವಾರದಲ್ಲಿದ್ದ ಮರಗಳಡಿ ಕೆಲವರು ಕುಳಿತು ಏನನ್ನೋ ಚರ್ಚಿಸುತ್ತಿದ್ದರು,  ಅಷ್ಟರಲ್ಲಿ ಕೃಶಕಾಯದ, ಕರಿ ಕನ್ನಡಕಧಾರಿ ವ್ಯಕ್ತಿ ಧೋತರದ ಚುಂಗನ್ನು ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು ಅಂಗಳದಲ್ಲಿ ಸಾಗುತ್ತಿದ್ದಾಗ ಮರಗಳಡಿ ಕುಳಿತವರು ಗೌರವದಿಂದ ಎದ್ದು ನಿಂತರು.

’ಈಗ ಹೋದರಲ್ಲ ಈ ವ್ಯಕ್ತಿ ಯಾರು?’ಒಬ್ಬರು ಕೇಳಿದರು.

’ಗೊತ್ತಿಲ್ಲವೆ? ಅವರೇ ರಾಜಾಜಿ. ಭಾರತದ ಗವರ್ನರ‍್ ಜನರಲ್ ಹುದ್ದೆಗೆ ಏರಬಲ್ಲ ವ್ಯಕ್ತಿ’ ಎಂದು ಉತ್ತರಿಸಿದರು ಅಲ್ಲೆ ಇದ್ದ ಪ್ರೊ. ಎನ್.ಜಿ. ರಂಗಾ. ಸುಮಾರು ಹದಿನೇಳು ವರ್ಷಗಳ ನಂತರ ರಾಜಾಜಿ ಭಾರತದ ಗವರ್ನರ‍್ ಜನರಲ್ ಆದರು.

ಗವರ್ನರ‍್ ಜನರಲ್

೧೯೪೭ರ ಆಗಸ್ಟ್ ೧೫, ಭಾರತದ ದಾಸ್ಯ ಶೃಂಖಲೆಗಳು ಕಳಚಿದವು. ಭಾರತವು ಸ್ವತಂತ್ರ ರಾಷ್ಟ್ರವಾಯಿತು. ಮಹಾತ್ಮಾ ಗಾಂಧಿ, ಪಟೇಲ್, ನೆಹರೂ ಮುಂತಾದವರ ಅವಿರತ ಪ್ರಯತ್ನದಿಂದ  ಬ್ರಿಟಿಷರು ಭಾರತದಿಂದ ತೊಲಗಿದರು.ಕೆಲವು ತಿಂಗಳ ಕಾಲ ಲಾರ್ಡ್ ಮೌಂಟ್ ಬೇಟನ್ನರೇ ಕೊನೆಯ ಬ್ರಿಟಿಷ್ ಗವರ್ನರ‍್ ಜನರಲ್ ಆಗಿದ್ದರು. ೧೯೪೮ರ ಜೂನ್ ತಿಂಗಳಲ್ಲಿ ಅವರೂ ಇಂಗ್ಲೆಂಡಿಗೆ ತೆರಳುವ ಪ್ರಸಂಗ.

ಭಾರತೀಯರೊಬ್ಬರು ಗವರ್ನರ‍್ ಜನರಲ್ ಆಗಬೇಕು.

’ಸ್ವತಂತ್ರ ಭಾರತದ ಗರ್ವನರ‍್ ಜನರಲ್ ಹುದ್ದೆ ಬಹು ದೊಡ್ಡದು. ಅದಕ್ಕೆ ಯೋಗ್ಯ ವ್ಯಕ್ತಿ ಯಾರು?’ ಎಂಬ ಪ್ರಶ್ನೆ ಉದ್ಭವಿಸಿತು. ಆಗ ಎಲ್ಲರ ಕಣ್ಣುಗಳು ರಾಜಾಜಿಯವರನ್ನು ಅರಸಿದವು. ರಾಜಾಜಿ ಸ್ವತಂತ್ರ ಭಾರತದ ಪ್ರಥಮ ಭಾರತೀಯ ಗವರ್ನರ‍್ ಜನರಲ್ ಆದರು. ಸುಮಾರು ಇಪ್ಪತ್ತು ತಿಂಗಳ ಕಾಲ ಅವರು ಆಡಳಿತ ನಡೆಸಿ ೧೯೫೦ ಜನವರಿ ೨೬ ರಂದು ಭಾರತವನ್ನು ಗಣರಾಜ್ಯವನ್ನಾಗಿ ಘೋಷಿಸಿದರು.

ರಾಜಾಜಿ ದೊಡ್ಡ ದೇಶಭಕ್ತ, ದೇಶಾಭಿಮಾನಿ, ಅಸಾಮಾನ್ಯ ರಾಜಕಾರಣಿ, ಸಮಾಜ ಸುಧಾರಕ, ದಕ್ಷ ಆಡಳಿತಗಾರ, ಲೋಕಪ್ರಿಯ ಸಾಹಿತಿ, ಸ್ವಾತಂತ್ರ‍್ಯ ಯೋಧ, ಮಹಾತ್ಮಾ ಗಾಂಧೀಜಿಯವರ ಸಮೀಪವರ್ತಿ, ಸ್ವತಂತ್ರ ಭಾರತದ ನಿರ್ಮಾಪಕರಲ್ಲೊಬ್ಬ, ಗಾಂಧೀಜಿಯ ತಲೆಮಾರಿನ ಮಹಾಮುಖಂಡರಲ್ಲೊಬ್ಬ, ಸ್ವತಂತ್ರ ಪಕ್ಷದ ಸಂಸ್ಥಾಪಕ

ಚಕ್ರವರ್ತಿ  ಮನೆತನ

ರಾಜಾಜಿಯವರ ನಿಜವಾದ ಹೆಸರು ಚಕ್ರವರ್ತಿ ರಾಜಗೋಪಾಲಾಚಾರಿ. ಪ್ರೀತಿಯಿಂದ ಜನರು ಇವರನ್ನು ರಾಜಾಜಿ ಎನ್ನುತ್ತಿದ್ದರು.

ರಾಜಾಜಿಯವರ ಮನೆತನಕ್ಕೆ ಚಕ್ರವರ್ತಿ ಎಂಬ ಹೆಸರು ಬಂದಿರುವ ಕಥೆಯು ಸ್ವಾರಸ್ಯವಾಗಿದೆ. ಚಕ್ರವರ್ತಿ ಎಂದರೆ ಸಂಸ್ಕೃತದಲ್ಲಿ ರಾಜರುಗಳ ರಾಜ. ರಾಜಾಜಿಯವರ ಪೂರ್ವಜರೊಬ್ಬರು ತಮ್ಮ ಊರಿನ ಸನಿಹದ ಹೊಳೆಯಲ್ಲಿ ಸ್ನಾನ ಮಾಡುತ್ತಿರುವಾಗ ಹೆಣವೊಂದು ನದಿಯಲ್ಲಿ ತೇಲುತ್ತಿದ್ದುದ್ದನ್ನು ಕಂಡರು. ಹೀಗೆಯೇ ಬಿ‌ಟ್ಟರೆ ಹೆಣವು ಹದ್ದು ಗಿಡುಗಗಳ ಪಾಲಾಗುವುದೆಂಬ ಆತಂಕದಿಂದ ಅವರು ಆ ಹೆಣವನ್ನು ನದಿಯಿಂದ ಹೊರಕ್ಕೆ ತೆಗೆದು ಅಂತ್ಯಸಂಸ್ಕಾರ ಮಾಡಿದರು. ಆದರೆ ಆ ಹೆಣ ಹರಿಜನ ವ್ಯಕ್ತಿಯದೆಂದು ಅನಂತರ ತಿಳಿಯಿತು. ಇದರಿಂದಾಗಿ ಹಳ್ಳಿಯಲ್ಲಿನ ಬ್ರಾಹ್ಮಣರೆಲ್ಲರೂ ಅವರಿಗೆ ಬಹಿಷ್ಕಾರ ಹಾಕಿದರು. ಒಂದು ದಿನ ಮನೆಯಲ್ಲಿ ಶ್ರಾದ್ಧವಿದ್ದಾಗ ಊಟಕ್ಕೆ ಬರಲು ಯಾವ ಬ್ರಾಹ್ಮಣನೂ ಒಪ್ಪಲಿಲ್ಲ. ರಾಜಾಜಿಯವರ ಪೂರ್ವಜರಿಗೆ ನಿರಾಶೆ ಹಾಗೂ ದುಃಖ. ಅಷ್ಟರಲ್ಲಿ ಯಾರೋ ಒಬ್ಬಾತ ಬಂದ. ತಾನೊಬ್ಬ ಬ್ರಾಹ್ಮಣ, ಅವರ ಮನೆಯಲ್ಲಿ ಪೂಜೆ ಮಾಡಿ ಭೋಜನ ಮಾಡುತ್ತೇನೆ ಎಂದು ಹೇಳಿದ. ಊಟ ಮಾಡಿ ಹೋಗುತ್ತಿರುವಾಗ ’ನಲ್ಲಾನ್ ಚಕ್ರವರ್ತಿ (ಒಳ್ಳೆಯ ಚಕ್ರವರ್ತಿ) ಎಂದು ಕರೆದು ಮಾಯವಾದ. ಆಗ ಎಲ್ಲರಿಗೂ ಎನಿಸಿತು, ಈತ ಸಾಮಾನ್ಯ ಮನುಷ್ಯನಲ್ಲ.ಯಾರೋ ಅಲೌಕಿಕ ವ್ಯಕ್ತಿ ಎಂದು. ಅಂದಿನಿಂದ ಈ ಮನೆತನಕ್ಕೆ ಚಕ್ರವರ್ತಿ ಎಂಬ ಹೆಸರು ಬಂದಿತು – ಹೀಗೆ ಸಭೆ ಹೇಳುತ್ತಾರೆ.

ಯಶಸ್ವಿ ವಕೀಲರು

ಈಗಿನ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಹೊಸೂರು ಬಳಿ ಇರುವ ತೋರಪಲ್ಲಿ ಗ್ರಾಮದಲ್ಲಿ ರಾಜಾಜಿಯವರು ೧೮೭೮ರ ಡಿಸೆಂಬರ‍್ ೮ ರಂದು ಜನಿಸಿದರು. ತಾಯಿಯ ಹೆಸರು ಶೃಂಗಾರಮ್ಮ, ತಂದೆ ಚಕ್ರವರ್ತಿ ಅಯ್ಯಂಗಾರ‍್ ಗ್ರಾಮ ಮುನ್ಸೀಫ್ ರಾಗಿದ್ದರಲ್ಲದೆ ವೇದಶಾಸ್ತ್ರಪುರಾಣಗಳಲ್ಲಿಯೂ ವಿದ್ವಾಂಸರಾಗಿದ್ದರು. ರಾಜಾಜಿ ಹುಟ್ಟಿದ ಹಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಹೊಸೂರಿನ ಜಿಲ್ಲಾ ಬೋರ್ಡ್ ಹೈಸ್ಕೂಲನ್ನು ಸೇರಿದರು. ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅನಂತರ ಮದರಾಸಿನಲ್ಲಿ ಕಾನೂನು ಪದವಿ ಗಳಿಸಿದರು.

ರಾಜಾಜಿ ಲಾ ಕಾಲೇಜಿನಲ್ಲಿ  ಓದುತ್ತಿದ್ದಾಗ ನಡೆದ ಒಂದು ಸಂಗತಿ ಸ್ವಾರಸ್ಯವಾಗಿದೆ.

ಸ್ವಾಮಿ ವಿವೇಕಾನಂದರು ಮದರಾಸಿಗೆ ಬಂದಿದ್ದರು. ರಾಜಗೋಪಾಲಚಾರಿಯವರು  ವಾಸವಾಗಿದ್ದ ವಿದ್ಯಾರ್ಥಿ ನಿಲಯದಲ್ಲೇ ಅವರ ಬಿಡಾರ. ವಿದ್ಯಾರ್ಥಿಗಳ ಕೊಠಡಿಗಳನ್ನು ನೋಡುತ್ತ ರಾಜಗೋಪಾಲಚಾರಿಯವರಿದ್ದ ಕೊಠಡಿಗೆ ಬಂದರು. ಅಲ್ಲಿ ಶ್ರೀಕೃಷ್ಣನ ಚಿತ್ರ ಗೋಡೆಯ ಮೇಲೆ ಕಂಡಿತು. ವಿದ್ಯಾರ್ಥಿಯನ್ನು ಕೇಳಿದರು : ’ಶ್ರೀ ಕೃಷ್ಣನಿಗೆ ನೀಲಿಯ ಬಣ್ಣ ಏಕೆ?’

ವಿದ್ಯಾರ್ಥಿ ರಾಜಗೋಪಾಲಚಾರಿ ಉತ್ತರಿಸಿದರು :”ಸಮುದ್ರಕ್ಕೆ ಮೇರೆ ಇಲ್ಲ, ಆಕಾಶಕ್ಕೆ ಮೇರೆ ಇಲ್ಲ, ಅವುಗಳ ಬಣ್ಣ ನೀಲಿ, ಪರಮಾತ್ಮನೂ ಅಪಾರ. ಆದುದರಿಂದಲೇ ಅವನ ಬಣ್ಣವೂ ನೀಲಿ’.

ವಿವೇಕಾನಂದರು ತುಂಬಾ ಸಂತೋಷಪಟ್ಟು, ’ಮುಂದೆ ವಿದ್ಯಾರ್ಥಿ ದೊಡ್ಡ ಪದವಿಗೆ ಬಂದು ಕೀರ್ತಿವಂತನಾಗುತ್ತಾನೆ”ಎಂದರು.

ರಾಜಾಜಿ ಸೇಲಂನಲ್ಲಿ ಸ್ವತಂತ್ರವಾಗಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಆಗ ಇವರಿಗೆ ಇಪ್ಪತ್ತು ವರ್ಷ. ಕ್ರಿಮಿನಲ್ ಮೊಕದ್ದಮೆಗಳನ್ನು ನಡೆಸುವುದರಲ್ಲಿ ಅವರು ಸಿದ್ಧಹಸ್ತರು. ತಮ್ಮ ಜಾಣ್ಮೆಯಿಂದ ಕ್ಲಿಷ್ಟವಾದ ಮೊಕದ್ದಮೆಗಳನ್ನು ಸಹ ಅವರು ಲೀಲಾಜಾಲವಾಗಿ ಗೆದ್ದುಬಿಡುತ್ತಿದ್ದರು.

ರಾಜಾಜಿ ಸೇಲಂನಲ್ಲಿ ಬಹುಬೇಗ ಪ್ರಖ್ಯಾತ ವಕೀಲರಾದರು. ಅಲ್ಲಿ ಪ್ರಥಮವಾಗಿ ಇವರು ಮೋಟಾರು ಕಾರೊಂದನ್ನು ಇಟ್ಟರು. ಇಪ್ಪತ್ತನೆಯ ವಯಸ್ಸಿನಲ್ಲಿ ಅಲಮೇಲು ಮಂಗಮ್ಮಾಳರನ್ನು ಮದುವೆಯಾದರು. ಇಪ್ಪತ್ತೊಂದು ವರ್ಷ ವಯಸ್ಸಾಗುವ  ಹೊತ್ತಿಗೆ ರಾಜಾಜಿ ಕಷ್ಟವಾದ ಮೊಕದ್ದಮೆಗಳನ್ನು ಸ್ವತಂತ್ರವಾಗಿ ನಡೆಸಿದ್ದರು. ಅವರ ಕಾನೂನು ಜ್ಞಾನ, ಬುದ್ಧಿವಂತಿಕೆ, ನಿರ್ಭಯತೆ ಇವು ಅವರಿಗೆ ಕೆಲವೇ ದಿನಗಳಲ್ಲಿ ಕೀರ್ತಿಯನ್ನೂ ಹಣವನ್ನೂ ತಂದವು. ಸರ್ಕಾರಕ್ಕೆ ವಿರುದ್ಧವಾಗಿ ಮಾತನಾಡಿದರೆಂದು ವರದರಾಜುಲು ನಾಯುಡು ಎಂಬ ದೇಶಪ್ರೇಮಿಯ ಮೇಲೆ ಸರ್ಕಾರ ಮೊಕದ್ದಮೆ ಹೂಡಿತು. ವರದರಾಜುಲು ನಾಯುಡು ಅವರ ವಕೀಲರು ರಾಜಗೋಪಾಲಚಾರಿಯವರು. ಆಚಾರ್ಯರು ಮಾತನಾಡಲು ಎದ್ದಾಗಲೆಲ್ಲ ನ್ಯಾಯಾಧೀಶರು ಅವರನ್ನು ’ಕುಳಿತುಕೊಳ್ಳಿ’ ಎನ್ನುತ್ತಿದ್ದರು. ಮಾರನೆಯ ದಿನ ರಾಜಾಜಿ, ’ನ್ಯಾಯಾಧಿಪತಿಗಳಲ್ಲಿ ನನಗೆ ಬಹಳ ಗೌರವವುಂಟು. ಆದರೆ ತರಗತಿಯಲ್ಲಿ ಉಪಾಧ್ಯಾಯರು ಹುಡುಗರನ್ನು ಕೂಡಿಸುವಂತೆ ತಾವು ನನ್ನನ್ನು ಕೂಡಿಸಿದರೆ ನಾನು ನನ್ನ ಕರ್ತವ್ಯವನ್ನು ಮಾಡಲು ಸಾಧ್ಯವಾಗುವುದಿಲ್ಲ, ನ್ಯಾಯಾಲಯದ ಘನತೆಗೂ ಕುಂದು’ ಎಂದರು. ನ್ಯಾಯಾಧಿಪತಿ ರಾಜಾಜಿಯವರ ಕ್ಷಮೆ ಬೇಡಿದರು. ಮುಂದೆ ರಾಜಾಜಿಯವರ ವಾದದ ಆಧಾರದಿಂದಲೇ ವರದರಾಜುಲು ನಾಯುಡು ಅವರ ಬಿಡುಗಡೆ ಆಯಿತು.

’ಪರಮಾತ್ಮನೂ ಅಪಾರ.ಆದ್ದರಿಂದ ಅವನ ಬಣ್ಣ ನೀಲಿ’

ಪುರಸಭೆಯ ಅಧ್ಯಕ್ಷರು

ವ್ಯಕ್ತಿ ಸಮಾಜದ ಅಂಗ, ಸಮಾಜದ ಜೀವನಕ್ಕೆ ತನ್ನಿಂದಾದ ಕೊಡುಗೆಯನ್ನು ನೀಡಬೇಕು ಎಂದು ರಾಜಾಜಿ ಭಾವಿಸಿದ್ದರು. ೧೯೧೭ರಲ್ಲಿ ಅವರು ಸೇಲಂನ ಪುರಸಭೆಯ ಅಧ್ಯಕ್ಷರಾದರು. ಅವರು ಕಾಲಿಟ್ಟಿದೇ ತಡ, ಪುರಸಭೆಯ ಕೆಲಸಕ್ಕೆ ಹೊಸ ಹುರುಪು ಬಂದಿತು. ವಯಸ್ಕರಿಗಾಗಿ ಶಾಲೆಗಳನ್ನು ತೆರೆದರು, ಕಾರ್ಮಿಕರಿಗಾಗಿ ರಾತ್ರಿಯ ಶಾಲೆಗಳನ್ನು ತೆರೆದರು. ಹರಿಜನರಿಗಾಗಿ ಶಾಲೆಗಳಾದವು. ವಿಜ್ಞಾನದ ವಿಷಯಗಳನ್ನು ತಮಿಳಿನಲ್ಲಿ ಬೋಧಿಸಲು ಅನುಕೂಲವಾಗುವಂತೆ ಶಬ್ದ ಕೋಶವೊಂದನ್ನು ಸಿದ್ಧಮಾಡಲು ಒಂದು ಸಮಿತಿಯನ್ನು ರೂಪಿಸಿದರು. ಹರಿಜನರಿಗೆ ನೀರನ್ನು ಒದಗಿಸಲು ವ್ಯವಸ್ಥೆ ಯೊಂದನ್ನು ಸಿದ್ಧಮಾಡಿದರು. ಸೇಲಂ ನಗರವನ್ನು ವ್ಯವಸ್ಥಿತವಾಗಿ ಬೆಳೆಸಲು ಯೋಜನೆ ಹಾಕಿದರು.

ಹರಿಜನರಿಗಾಗಿ ರಾಜಾಜಿ ಬಹು ದುಡಿದರು. ಒಂದು ವಿದ್ಯಾರ್ಥಿ ನಿಲಯಕ್ಕೆ ಹರಿಜನ ವಿದ್ಯಾರ್ಥಿಗಳನ್ನು ಸೇರಿಸಿದಾಗ ರಾಜಾಜಿಯನ್ನು ಬಹು ಗೌರವಿಸುತ್ತಿದ್ದ ಹಲವರು ಹಿರಿಯರೂ ಅವರನ್ನು ವಿರೋಧಿಸಿದರು. ಆದರೆ ರಾಜಾಜಿ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ.

ರಾಷ್ಟ್ರನಾಯಕರ ಸಹವಾಸ

ರಾಜಾಜಿಯವರಿಗೆ ವಿದ್ಯಾರ್ಥಿ ದೆಸೆಯಿಂದಲೇ ರಾಜಕಾರಣದಲ್ಲಿ ಆಸಕ್ತಿ. ಆ ಕಾಲದಲ್ಲಿ ಅವರಿಗೆ ಚಿದಂಬರಂ ಪಿಳ್ಳೆ, ಸುಬ್ರಹ್ಮಣ್ಯ ಭಾರತಿಯಂತಹ ಮಹಾನುಭಾವರ ಮಾರ್ಗದರ್ಶನ ಸಿಕ್ಕಿತು.

ಸ್ವಾತಂತ್ರ‍್ಯವನ್ನು ಕಳೆದುಕೊಂಡಿದ್ದ ಭಾರತೀಯರನ್ನು ಎಚ್ಚರಿಸಲು ಶ್ರಮಿಸುತ್ತಿದ್ದ ನಾಯಕರ ಪ್ರಭಾವ ರಾಜಾಜಿಯವರ ಮೇಲಾಯಿತು. ಅನಿಬೆಸೆಂಟ್, ಬಾಲ ಗಂಗಾಧರ ತಿಲಕರು ಮೊದಲಾದವರನ್ನು ಅವರು ಮೆಚ್ಚಿಕೊಂಡಿದ್ದರು. ರಾಜಾಜಿ ರಾಜಕೀಯವನ್ನು ಪ್ರವೇಶಿಸಿದ್ದು ಆಶ್ಚರ್ಯವಲ್ಲ. ೧೯೧೬ರಲ್ಲಿ ಅನಿಬೆಸೆಂಟರನ್ನು ಸರ್ಕಾರ ಬಂಧಿಸಿತು.  ಅವರಿದ್ದ ರೈಲು ಸೇಲಂಗೆ ಬಂದಾಗ ಜನ ಅವರನ್ನು ನೋಡಬೇಕೆಂದು ಬಯಸಿದರು. ಸರ್ಕಾರ ಅವಕಾಶ ಕೊಡಲಿಲ್ಲ. ಜನ ರೈಲುಕಂಬಿಗಳ ಮೇಲೆ ಕುಳಿತರು. ಕಲೆಕ್ಟರನು ಪೊಲೀಸರನ್ನು ಕರೆಸಿದ. ಗುಂಡು ಹಾರಿಸಲು ಆಜ್ಞೆ ಕೊಡಲು ಸಿದ್ಧನಾಗಿದ್ದ. ರಾಜಾಜಿ ಆತನೊಂದಿಗೆ ವಾದಿಸಿದರು. ಜನರು ಶಾಂತಿಯಿಂದ ವರ್ತಿಸುವಂತೆ ನೋಡಿಕೊಳ್ಳುವ ಹೊಣೆ ಹೊತ್ತರು. ಜನ ಅನಿಬೆಸೆಂಟರಿಗೆ ಹೂಮಾಲೆ ಗಳನ್ನು ಅರ್ಪಿಸಿ ಕೃತಜ್ಞತೆ ತೋರಿಸಿದರು. ರಾಜಾಜಿಯು ಆಕೆಯ ಪರ ನ್ಯಾಯಾಲಯದಲ್ಲಿ ವಾದಿಸಿದರು, ಅವರಿಗೆ ಬಿಡುಗಡೆಯಾಯಿತು.

ದಕ್ಷಿಣ ಆಫ್ರಿಕದಲ್ಲಿ ಸರ್ಕಾರವೂ ಬಿಳಿಯರೂ  ಬಿಳಿಯರಲ್ಲದವರನ್ನು ಕಾಲುಕಸವಾಗಿ ಕಾಣುತ್ತಿದ್ದರು. ಇದರ ವಿರುದ್ಧ ಗಾಂಧೀಜಿ ಅದ್ಭುತ ಹೋರಾಟ ನಡೆಸಿದರು. ಅಲ್ಲಿ ನಡೆಸಿದ ಸತ್ಯಾಗ್ರಹದಿಂದಲೇ ಅವರ ಅಸಾಧಾರಣ ನಾಯಕಶಕ್ತಿ ಬೆಳಕಿಗೆ ಬಂದದ್ದು. ಅವರು ಭಾರತಕ್ಕೆ ಹಿಂದಿರುಗುವಾಗ ರಾಜಾಜಿಯೂ ಅವರ ನಾಯಕತ್ವಕ್ಕೆ ಒಲಿದರು.

ಅವರನ್ನು ಮದರಾಸಿಗೆ ಆಹ್ವಾನಿಸಬೇಕೆಂದು ರಾಜಾಜಿ ಹಿಂದೂ ಪತ್ರಿಕೆಯ ಸಂಪಾದಕರಾಗಿದ್ದ ಕಸ್ತೂರಿ ರಂಗಯ್ಯಂಗಾರ್ಯರಿಗೆ ಸೂಚಿಸಿದರು. ಅದರಂತೆ ಆಹ್ವಾನ ಹೋಯಿತು. ಗಾಂಧೀಜಿ ಬಂದು ರಾಜಾಜಿಯ ಮನೆಯಲ್ಲೇ ಇಳಿದುಕೊಂಡರು. ತಮ್ಮನ್ನು ಆಹ್ವಾನಿಸಿದವರು ರಾಜಾಜಿ ಎಂದು ಕೆಲವು ದಿನಗಳು ಗಾಂಧೀಜಿಗೆ ತಿಳಿಯಲೇ ಇಲ್ಲ. ರಾಜಾಜಿ ನಡೆದುಕೊಳ್ಳುತ್ತಿದ್ದ ರೀತಿಯಿಂದ ಅವರೂ ಒಬ್ಬ ಅತಿಥಿ ಎಂದೇ ತಿಳಿದುಕೊಂಡಿದ್ದರು!

ಅಸ್ಪಶ್ಯತೆಯ ವಿರುದ್ದ ಹೋರಾಟ

ರಾಜಾಜಿ ಅಸ್ಪೃಶ್ಯತೆ ನಿವಾರಣೆಗೆ ಬಹಳ ಮಹತ್ವ ಕೊಟ್ಟಿದ್ದರು. ತಾವು ಸ್ಥಾಪಿಸಿದ  ಗಾಂಧಿ ಆಶ್ರಯದಲ್ಲಿ ಹರಿಜನರನ್ನೂ ಸೇರಿಸಿಕೊಂಡರು. ತಮ್ಮ ಅಡಿಗೆ ತಯಾರಿಸಲು ಅಗಸನೊಬ್ಬನನ್ನು ಇಟ್ಟುಕೊಂಡಿದ್ದರು.

ಒಂದು ಸಲ ಹರಿಜನ ಭಕ್ತನೊಬ್ಬ ಮೈಕೈಗಳಿಗೆ ಭಸ್ಮ ಧರಿಸಿ ದೇವರ ಭಜನೆ ಹಾಡುತ್ತ ದೇವಸ್ಥಾನದೊಳಗೆ ಪ್ರವೇಶಿಸಿದ್ದನೆಂದು ಜನರು ಅವನನ್ನು ಹಿಡಿದು ನ್ಯಾಯಾಲಯಕ್ಕೆ ಎಳೆದರು. ವೃತ್ತಪತ್ರಿಕೆಯಲ್ಲಿ ಇದನ್ನೋದಿದ ರಾಜಾಜಿ ಬಹಳವಾಗಿ ನೊಂದುಕೊಂಡರು. ರಾಜಾಜಿಯವರೇ ಅವನ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದರು. ಹರಿಜನರು ದೇವಾಲಯಕ್ಕೆ ಪ್ರವೇಶಿಸಲು ಅಡ್ಡಿ ಇರಬಾರದು ಎಂಬ ಮಸೂದೆ ಕೇಂದ್ರ ಶಾಸನ ಸಭೆಯಲ್ಲೂ ಮದರಾಸು ಶಾಸನ ಸಭೆಯಲ್ಲೂ ಒಪ್ಪಿಗೆಯಾಗುವಂತೆ ರಾಜಾಜಿ ಪ್ರಯತ್ನಿಸಿದದರು. ಸಾಧ್ಯವಾಗಲಿಲ್ಲ. ರಾಜಾಜಿ ಅಸ್ಪೃಶ್ಯತೆ ನಿವಾರಣೆ ಕಾರ್ಯದಲ್ಲಿ ಸಕ್ರಿಯವಾಗಿ ಮೊದಲಿಗರು. ಅವರಿಗೆ ಉಗ್ರವಾದ ವಿರೋಧ, ಅಡ್ಡಿಗಳು ಬಂದುವು. ಆದರೆ ಅವರು ಲಕ್ಷಿಸಲಿಲ್ಲ.

ರಾಜಕಾರಣದಲ್ಲಿ

ರಾಜಾಜಿಯವರ ರಾಜಕೀಯ ಜೀವನ ಬಹು ವಿಚಿತ್ರವಾಗಿ ಸಾಗಿತು. ಅವರು ೧೯೨೧-೨೨ರಲ್ಲಿ ಕಾಂಗ್ರೆಸಿನ ಮಹಾಕಾರ್ಯದರ್ಶಿಯಾಗಿದ್ದರು. ೧೯೨೨ರಿಂದ ಸುಮಾರು ಇಪ್ಪತ್ತು ವರ್ಷ ಕಾಂಗ್ರೆಸಿನ ಪ್ರಥಮ ಪಂಕ್ತಿಯ ನಾಯಕರಾಗಿದ್ದರು. ಗಾಂಧೀಜಿಯವರ ಆಪ್ತರಾಗಿದ್ದರು. ಅವರ ಅಸಾಧಾರಣ  ಪ್ರತಿಭೆಯನ್ನು ಎಲ್ಲರು ಗುರುತಿಸಿದ್ದರು. ಸತ್ಯಾಗ್ರಹದಲ್ಲಿ ಭಾಗವಹಿಸಿ ಐದು ಬಾರಿ ಸೆರೆಮನೆಗೆ ಹೋಗಿದ್ದರು. ಮಹಾತ್ಮರು ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ರಾಜಾಜಿ ತಿರುಚನಾ ಹಳ್ಳಿಯಿಂದ ವೇದಾರಣ್ಯಕ್ಕೆ ಮೆರವಣಿಗೆಯಲ್ಲಿ ಜನರನ್ನು ಕರೆದೊಯ್ದರು. ಸಮುದ್ರ ತೀರವನ್ನು ಸೇರಿ ಉಪ್ಪನ್ನು ತಯಾರಿಸಲು ಪ್ರಾರಂಭಿಸಿದರು. ಸರ್ಕಾರ ಅವರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿತು. ಕಾಂಗ್ರೆಸ್ ಮೊಟ್ಟ ಮೊದಲು ಚುನಾವಣೆಯಲ್ಲಿ ಭಾಗವಹಿಸಿದಾಗ, ರಾಜಾಜಿ ಆಗಿನ ಮದರಾಸ್ ಪ್ರಾಂತದ ಮುಖ್ಯಮಂತ್ರಿ ಆದರು. ಆದರೆ ೧೯೪೨ರಲ್ಲಿ ಅವರು ಕಾಂಗ್ರೆಸಿಗೆ ರಾಜೀನಾಮೆ ಕೊಟ್ಟರು. ಮುಸ್ಲಿಮ್ ಲೀಗ್ ನವರು ಜಿನ್ನಾರವರ ನಾಯಕತ್ವದಲ್ಲಿ ಪಾಕಿಸ್ಥಾನವನ್ನು ಬೇಡಿದರು. ಮುಸ್ಲಿಮರು ಅಧಿಕ ಸಂಖ್ಯಾತರಾಗಿರುವ ಪ್ರಾಂತಗಳನ್ನು ಒಂದು ಗೂಡಿಸಿ, ಭಾರತವನ್ನು ಎರಡಾಗಿ ಒಡೆದು, ಪ್ರತ್ಯೇಕ ದೇಶವನ್ನೇ ಸೃಷ್ಟಿಸಬೇಕೆಂದು ಅವರ ಹಟ. ಮೊದ ಮೊದಲು ಕಾಂಗ್ರೆಸ್ ಇದನ್ನು ವಿರೋಧಿಸಿತು. ರಾಜಾಜಿ, ಪಾಕಿಸ್ತಾನದ ಕೇಳಿಕೆಯನ್ನು ಒಪ್ಪುವುದೇ ಉತ್ತಮ ಎಂದರು. ಕಾಂಗ್ರೆಸಿನಲ್ಲಿ ಬಹುಮಂದಿ ರಾಜಾಜಿಯವರರನ್ನು ಉಗ್ರವಾಗಿ ಟೀಕಿಸಿದರು.  ರಾಜಾಜಿ ಕಾಂಗ್ರೆಸನ್ನು ಬಿಟ್ಟರು. (ಮುಂದೆ ಇದೇ ಕಾಂಗ್ರೆಸ್ ೧೯೪೬ರಲ್ಲಿ ಪಾಕಿಸ್ತಾನದ ಬೇಡಿಕೆಯನ್ನು ಒಪ್ಪಿತು!)

ಮತ್ತೆ ೧೯೪೫ರಲ್ಲಿ ರಾಜಾಜಿ ಕಾಂಗ್ರೆಸ್ ಸೇರಿದರು. ಸ್ವಾತಂತ್ರ‍್ಯ ಬರುವುದಕ್ಕೆ ಸ್ವಲ್ಪ ಮೊದಲು ಜವಾಹರಲಾಲರು ಪ್ರಧಾನಿಗಳಾಗಿ ರಚಿಸಿದ ಮಂತ್ರಿ ಮಂಡಲದಲ್ಲಿ ರಾಜಾಜಿ ಸಚಿವರಾದರು. ಪಶ್ಚಿಮ ಬಂಗಾಳ ರಾಜ್ಯಕ್ಕೆ ಹಲವು ಸಮಸ್ಯೆಗಳಿದ್ದವು. ೧೯೪೭ರಲ್ಲಿ ಆ ರಾಜ್ಯಕ್ಕೆ ಗವರ್ನರ‍್ ಆದರು. ಲಾರ್ಡ್ ಮೌಂಟ್ ಬೇಟನ್ನರು ಇಂಗ್ಲೆಂಡಿಗೆ ಹಿಂದಿರುಗಿದಾಗ ರಾಜಾಜಿ ಭಾರತದ ಅತ್ಯುನ್ನತ ಪದವಿಗೇರಿ, ಗವರ್ನರ‍್ ಜನರಲ್ ಆದರು. ಅನಂತರ ಕೇಂದ್ರ ಸರ್ಕಾರದಲ್ಲಿ ಗೃಹ ಮಂತ್ರಿಗಳಾದರು. ಆಗ ಅವರಿಗೆ ೭೨ ವರ್ಷ ವಯಸ್ಸು. ಅವರಿಗೂ ವಿಶ್ರಾಂತಿಯ ಅಗತ್ಯವಿತ್ತು. ಮಂತ್ರಿ ಪದವಿಯನ್ನು ಬಿಟ್ಟು ಮದರಾಸಿಗೆ ಬಂದು ಸಾಹಿತ್ಯ ಪ್ರಪಂಚಕ್ಕೆ ಹಿಂದಿರುಗಿದರು. ರಾಮಾಯಣದ ಅಧ್ಯಯನ ಪ್ರಾರಂಭಿಸಿದರು. ಮತ್ತೆ ಮದರಾಸಿನಲ್ಲಿ ಕಾಂಗ್ರೆಸ್ ಪಕ್ಷ ಅವರ ನಾಯಕತ್ವವನ್ನು ಬಯಸಿದಾಗ, ’ವಯಸ್ಸಾಗಿದೆ, ನನಗೆ ಅಧಿಕಾರ, ಹೊಣೆಗಳು ಬೇಡ’ ಎಂದರು. ಆದರೆ ಕಡೆಗೆ ಒಪ್ಪಿ ೧೯೫೨ರಲ್ಲಿ, ೭೫ ವರ್ಷಗಳಾಗಿದ್ದಾಗ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೇತನ ನೀಡಿ ನಿವೃತ್ತರಾದರು. ಆದರೆ ದೇಶ ನಡೆಯುತ್ತಿದ್ದ  ರೀತಿ ನೋಡಿ ಅವರು ತೀರ ಬೇಸರಗೊಂಡರು. ನಿಯಂತ್ರಣ – ಲೈಸೆನ್ಸ್ ಗಳ ಅವಾಂತರದಲ್ಲಿ ಭ್ರಷ್ಟಾಚಾರ ಹೆಚ್ಚಿ, ರಾಷ್ಟ್ರದ ಜೀವನ ಹಾಳಾಗುತ್ತಿದೆ ಎನಿಸಿತು. ಪ್ರಜಾಪ್ರಭುತ್ವದಲ್ಲಿ ಆಳುವ ಪಕ್ಷಕ್ಕೆ ಸಮರ್ಥ ವಿರೋಧವಿಲ್ಲದಿದ್ದರೆ ಪ್ರಜಾಪ್ರಭುತ್ವದ ಅಣಕವಾಗುತ್ತದೆ ಎನಿಸಿತು.  ೮೨ ವರ್ಷದ ಧೀರ ’ಸ್ವತಂತ್ರ ಪಕ್ಷ’ ಎಂಬುವ ಹೊಸ ಪಕ್ಷವನ್ನೇ ಸ್ಥಾಪಿಸಿದರು. ೧೯೬೯ರ ವರೆಗೆ ಭಾರತದ ಲೋಕ ಸಭೆಯಲ್ಲಿ ಈ ಪಕ್ಷವೇ ಪ್ರಮುಖ ವಿರೋಧಿ ಪಕ್ಷವಾಗಿತ್ತು.

ಸೆರೆಯಲ್ಲಿ ರಾಜಕೀಯದಲ್ಲಿ

ರಾಜಾಜಿ ಆಲಸ್ಯವನ್ನು ದ್ವೇಷಿಸುತ್ತಿದ್ದರು. ಸೆರೆಯಲ್ಲಿದ್ದಾಗ ಅದನ್ನೊಂದು ಶಾಲೆಯನ್ನಾಗಿ ಪರಿವರ್ತಿಸಿದರು. ತಮ್ಮ ಜ್ಞಾನವನ್ನು ಸಹಬಂಧಿಗಳೊಡನೆ ಹಂಚಿಕೊಳ್ಳುತ್ತಿದ್ದರು. ರಾಮಾಯಣ, ಮಹಾಭಾರತಗಳ ಕಥೆಗಳನ್ನು ಹೇಳುತ್ತಿದ್ದರು. ಸೆರೆಮನೆಯಲ್ಲೇ ಪುಸ್ತಕಗಳನ್ನು ಓದಿದ್ದು ಮಾತ್ರವಲ್ಲ, ಪುಸ್ತಕಗಳನ್ನು ಬರೆದರು ಸಹ. ಪ್ರಾಚೀನ ಗ್ರೀಸಿನ ತತ್ವಜ್ಞಾನಿ ಸಾಕ್ರೆಟೀಸನನ್ನು ಕುರಿತು ಅವರು ಪುಸ್ತಕ ಬರೆದದ್ದು ಸೆರೆಮನೆಯಲ್ಲೇ. ಅದು ಪ್ರಸಿದ್ಧ ಕೃತಿಯಾಯಿತು. ಅನೇಕ ಸಲ ಸೆರೆಮನೆ ಬಂಧಿಗಳಿಗೂ ಅಲ್ಲಿನ ಅಧಿಕಾರಿಗಳಿಗೂ ಜಗಳವಾಗಿ ಪರಿಸ್ಥಿತಿ ಹದಗೆಡುತ್ತಿದ್ದಾಗ ರಾಜಾಜಿಯವರು ಸಂಧಾನ ಮಾಡುತ್ತಿದ್ದರು. ಅಂತೆಯೇ ಸೆರೆಮನೆಯ ಅಧಿಕಾರಿಗಳಿಗೂ ಕೂಡ ರಾಜಾಜಿಯವರೆಂದರೆ ಗೌರವ, ಪ್ರೀತಿ.

ರಾಜಕೀಯ ಎಂದರೆ ಸ್ಪರ್ಧೆ, ದ್ವೇಷ ಎಂದೇ ಭಾವನೆ ಬೆಳೆದಿದೆ. ರಾಜಾಜಿ ರಾಜಕೀಯದಲ್ಲಿ ನಡೆದುಕೊಂಡ ರೀತಿ ಅಸಾಧಾರಣ, ಪ್ರಸಿದ್ಧ ನಾಯಕ ಸತ್ಯಮೂರ್ತಿ ಮತ್ತು ರಾಜಾಜಿಯವರದು ರಾಜಕೀಯದಲ್ಲಿ ಪರಸ್ಪರ ವಿರೋಧೀ ಗುಂಪು. ಆದರೂ ಕೂಡ ರಾಜಾಜಿಯವರು ಪ್ರಾಂತೀಯ ಕಾಂಗ್ರೆಸಿನ ಅಧ್ಯಕ್ಷ ಸ್ಥಾನವನ್ನು ತಾವು ಬಿಟ್ಟುಕೊಟ್ಟು ಹೊರಬರುತ್ತಿದ್ದಾಗ ಸತ್ಯಮೂರ್ತಿಯವರು ಅಧ್ಯಕ್ಷರಾಗುವುದಕ್ಕೆ ಬಹಳ ಪರಿಶ್ರಮಿಸಿದರು. ಇದರಿಂದ ಸತ್ಯಮೂರ್ತಿಯವರಿಗೆ ಆಶ್ಚರ್ಯವೋ ಆಶ್ಚರ್ಯ. ’ರಾಜಾಜಿಗೆ ಬಂಗಾರದ ಹೃದಯವಿದೆಯೆಂದು ನನಗೆ ತಿಳಿದಿರಲಿಲ್ಲ.’ ಎಂದು ಅವರು ಬಾಯಿ ಬಿಟ್ಟು ರಾಜಾಜಿಯವರನ್ನು ಪ್ರಶಂಶಿಸಿದರು.

೧೯೩೦ರಲ್ಲಿ ಗಾಂಧೀಜಿ ಅಸಹಕಾರ ಚಳುವಳಿ ಪ್ರಾರಂಭಿಸಿದಾಗ ಮದರಾಸಿನ ಮುಖಂಡರೆಲ್ಲರೂ ಜೈಲಿನಲ್ಲಿದ್ದರು. ಆದರೆ ಸತ್ಯಮೂರ್ತಿಯವರು ಮಾತ್ರ ಇದರಲ್ಲಿನ್ನೂ ಭಾಗವಹಿಸಿರಲಿಲ್ಲ. ಸತ್ಯಮೂರ್ತಿಯವರು ತಮ್ಮ ರಾಜಕೀಯ ವಿರೋಧಿಯಾಗಿದ್ದರೂ ಕೂಡ ರಾಜಾಜಿ ನೇರವಾಗಿ ಸತ್ಯಮೂರ್ತಿಯವರಲ್ಲಿ ಹೋದರು. ’ಮದರಾಸಿನ ಮುಖಂಡರೆಲ್ಲರೂ ಸೆರೆಮನೆಗೆ ಹೋಗಿದ್ದಾರೆ. ಈಗ ಮದರಾಸಿನ ಗೌರವಕ್ಕೆ ಧಕ್ಕೆ ಬಂದಿದೆ. ನೀವು ಕೂಡ ಈ ಆಂದೋಲನದಲ್ಲಿ ಭಾಗವಹಿಸಬೇಕು’ ಎಂದು ಕೇಳಿಕೊಂಡರು. ಅದಕ್ಕೆ ಅವರು ಒಪ್ಪಿ ಒಂದು ವಿದೇಶೀ ಅರಿವೆ ಅಂಗಡಿಯೆದುರು ’ಪಿಕೆಟಿಂಗ್’ ಮಾಡಿ ಇಬ್ಬರೂ ಸೆರೆಮನೆಗೆ ನಡೆದರು. ಇದೇ ಸತ್ಯಮೂರ್ತಿಯವರ ಪ್ರಥಮ ಸೆರೆಮನೆ ವಾಸವಾಯಿತು.

ವಿಶ್ವಶಾಂತಿಯ ಯಾತ್ರಿಕ

ಸರಳ ಜೀವನ

ರಾಜಾಜಿ ತಮ್ಮ ಜೀವನವಿಡೀ ಸರಳ ಜೀವನವನ್ನು ನಡೆಸಿದರು. ಅವರಿಗೆ ಪೂರ್ವಜರ ಆಸ್ತಿ ಇತ್ತು. ವಕೀಲರಾದ ಒಂದೆರೆಡು ವರ್ಷಗಳಲ್ಲಿ ತಿಂಗಳಿಗೆ ಎರಡು ಮೂರು ಸಾವಿರ ರೂಪಾಯಿ ಸಂಪಾದಿಸುತ್ತಿದ್ದರು. ಆದರೆ ಅವರದು ಬಹು ಸರಳ ಜೀವನ. ಅವರು ಧರ್ಮದಿಂದ ನಡೆದವರು. ಧರ್ಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಧರ್ಮದಲ್ಲಿ ಭೀಷ್ಮ, ರಾಜಕಾರಣದಲ್ಲಿ ಚಾಣಕ್ಯ ಅವರು.

ಅವರು ಯಾವಾಗಲೂ ಖಾದಿ ಧರಿಸುತ್ತಿದ್ದರು. ರಾಜಾಜಿಗೆ ಖಾದಿಯಲ್ಲಿ ನಂಬಿಕೆ. ಅವರು  ಜೈಲಿನಲ್ಲಿಯೂ ಪ್ರತಿದಿನ ತಪ್ಪದೇ ಕೆಲವು ತಾಸು ನೂಲುತ್ತಿದ್ದರು. ಒಂದು ಧೋತಿ, ಮೇಲೊಂದು ಜುಬ್ಬ, ಹೆಗಲ ಮೇಲೊಂದು ಶಾಲು ಆದರೆ ತೀರಿತು. ಕಣ್ಣಿಗೆ ಕಪ್ಪು ಕನ್ನಡಕ, ಕಣ್ಣಿನ ತೊಂದರೆಯಿದ್ದುದರಿಂದ ಅವರು ಯಾವಾಗಲೂ ತಮ್ಮ ಕಪ್ಪು ಕನ್ನಡಕವನ್ನು ಬಿಟ್ಟಿರುತ್ತಿರಲಿಲ್ಲ. ಯಾರೋ ಒಬ್ಬರು ಒಮ್ಮೆ ಈ ಬಗ್ಗೆ ಅವರನ್ನು ಕೇಳಿಯೇ ಬಿಟ್ಟರು. ರಾಜಾಜಿ ಹಾಸ್ಯವಾಗಿ ಹೇಳಿದರು : ’ಯಾರನ್ನಾದರೂ ಭೇಟಿ ಮಾಡಿದರೆ, ತಾನು ಅವರನ್ನು ಚೆನ್ನಾಗಿ ನೋಡಿ ಅವರ ವಿಷಯ ತಿಳಿಯಬೇಕು. ಅವರಿಗೆ ನನ್ನ ಅಭಿಪ್ರಾಯ ನನ್ನ ಕಣ್ಣಿನಲ್ಲಿ ಕಾಣಬಾರದು. ಅದಕ್ಕೋಸ್ಕರ ಈ ಕನ್ನಡಕ ಹಾಕಿಕೊಳ್ಳುತ್ತೇನೆ!’

ಭಯವರಿಯದ ಧೀರ

ರಾಜಾಜಿಯವರಲ್ಲಿ ಎದ್ದು ಕಾಣುತ್ತಿದ್ದುದು ಮೂರು ಗುಣಗಳು ಮೊದಲನೆಯದು ನಿರ್ಭಯತೆ, ಯಾರೊಬ್ಬರಿಗೆ ಅಸಮಾಧಾನವಾದೀತು ಎಂದಾಗಲಿ, ಜನರಿಗೆ ಅಪ್ರಿಯ, ಎಂದಾಗಲಿ, ಅಧಿಕಾರದಲ್ಲಿರುವವರಿಗೆ ಕೋಪ ಬರುತ್ತದೆ ಎಂದಾಗಲಿ, ಅವರು ತಮಗೆ ಸರಿ ಎಂದು ತೋರಿದುದನ್ನು ಹೇಳದೆ ಬಿಟ್ಟವರಲ್ಲ, ಮಾಡದೆ ಬಿಟ್ಟವರಲ್ಲ. ಅವರಿಗೆ ಇನ್ನೂ ಚಿಕ್ಕ ವಯಸ್ಸಿದ್ದಾಗಲೇ ಸ್ವಾಮಿ ಸಹಜಾನಂದ ಎಂಬುವರನ್ನು ಮೆಚ್ಚಿಕೊಂಡಿದ್ದರು. ಈ ಸ್ವಾಮೀಜಿ ಹರಿಜನರು. ಅವರು ಸೇಲಂಗೆ ಬಂದಾಗ ರಾಜಾಜಿಯವರೂ ಅವರ ಮಿತ್ರರೂ ಅವರನ್ನು ಸ್ವಾಗತಿಸಿ ಭೋಜನಕೂಟವನ್ನು ಏರ್ಪಡಿಸಿದರು. ಇದರಿಂದ ಆಚಾರವಂತರು ಹಲವರು ಕೋಪದಿಂದ ಸಿಡಿದೆದ್ದರು. ರಾಜಾಜಿಯವರಿಗೂ ಅವರ ಸ್ಮೇಹಿತರಿಗೂ ಬಹಿಷ್ಕಾರ ಹಾಕಿದರು. ಅವರ ಮನೆಗಳಲ್ಲಿ ಧಾರ್ಮಿಕ ಕಾರ್ಯಗಳಿಗೆ ಪುರೋಹಿತರು ಹಲವರು ಬರುವುದಿಲ್ಲ ಎಂದು ದೂರ ನಿಂತರು. ಆದರೆ ರಾಜಾಜಿ ಇದು ಯಾವುದಕ್ಕೂ ಹೆದರಲಿಲ್ಲ. ೧೯೪೧ರಲ್ಲಿ ಮುಂಬಯಿಗೆ ಹೋದಾಗ ಅವರಿಗೆ ಕಪ್ಪು ಬಾವುಟ ಪ್ರದರ್ಶನ ನಡೆಯಿತು. ಸಭೆಯಲ್ಲಿ ಜನ ಅವರಿಗೆ ಕಲ್ಲು ಹೊಡೆದರು. ರಾಜಾಜಿ ಭಾಷಣ ಮಾಡಿಯೇ ಮಾಡಿದರು. ಕೆಲವೇ ನಿಮಿಷಗಳಲ್ಲಿ ಸಭೆ ಶಾಂತವಾಯಿತು. ಜನ ಅವರ ಮಾತುಗಳನ್ನು ಕೇಳಿದರು. ರಾಜಾಜಿಯವರು ಮಹಾತ್ಮಾ ಗಾಂಧೀಜಿಯವರ ತತ್ವಗಳಲ್ಲಿ ಅಚಲವಾದ ಶ್ರದ್ಧೆಯುಳ್ಳವರು. ಅವಕ್ಕೇ ಅಂಟಿಕೊಂಡರು. ಅವರು ಗಾಂಧೀಜಿಯವರ ಸಮೀಪವರ್ತಿಗಳು ಕೂಡ. ಗಾಂಧೀಜಿಯವರ ಸತ್ಯಾಗ್ರಹ ತತ್ವವನ್ನು ಜನರಿಗೆ ವಿವರಿಸಲು ಮದರಾಸಿನಲ್ಲಿ ಒಂದು ಸಂಘ ಪ್ರಾರಂಭವಾದಾಗ, ಸದಸ್ಯರು ರಾಜಾಜಿಯನ್ನೇ ಅಧ್ಯಕ್ಷರನ್ನಾಗಿ ಆರಿಸಿದರು.  ಈ ಸಂಗತಿಯನ್ನು ಕೇಳಿ ಗಾಂಧೀಜಿಯೂ ಸಂತೋಷಪಟ್ಟರು. ಆದರೆ ಅವರೆಂದಿಗೂ ಇತರ ವಿಚಾರಗಳನ್ನು, ತತ್ವಗಳನ್ನೂ ವಿಚಾರಿಸದೆ ಒಪ್ಪಿಕೊಳ್ಳುವವರಲ್ಲ. ಗಾಂಧೀಜಿಯವರ ತತ್ವಗಳ  ವಿಷಯದಲ್ಲೂ ಹಾಗೆಯೇ.

ದೇಶವಿಭಜನೆಯ ಪ್ರಶ್ನೆ ಬಂದಾಗ ಕಾಂಗ್ರೆಸ್ ಮುಖಂಡರೆಲ್ಲ ಅದನ್ನು ವಿರೋಧಿಸಿದರು. ಆದರೂ ರಾಜಾಜಿ ಪಾಕಿಸ್ತಾನದ ಬೇಡಿಕೆಯನ್ನು ಬೆಂಬಲಿಸಿದರು. ೧೯೪೨ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ‍್ಯ ಗಳಿಸಲು ನಡೆದ ’ಭಾರತ ಬಿಟ್ಟು ತೊಲಗಿ’ ಚಳವಳಿಯಿಂದ ದೂರ ಸಿಡಿದು ನಿಂತರು. ಇಂಥ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸದೇ ಹೋದ ನಾಯಕರೆಂದರೆ ರಾಜಾಜಿಯವರೊಬ್ಬರೆ. ಹೀಗಾಗಿ ೧೯೪೨ರಲ್ಲಿ ಕಾಂಗ್ರೆಸಿಗೆ ರಾಜೀನಾಮೆ ಸಲ್ಲಿಸಿದರು. ಪಾಕಿಸ್ತಾನದ ಉದ್ಭವಕ್ಕೆ ರಾಜಾಜಿ ಕಾರಣ ಎಂದು ಕೆಲವರು ಆಪಾದಿಸುತ್ತಾರೆ. ಅವರು ಪಾಕಿಸ್ತಾನದ ಸೃಷ್ಟಿಗೆ ಬೆಂಬಲ ಕೊಟ್ಟರೆಂದು ಜನರ ವಿರೋಧವನ್ನು ಎದುರಿಸಬೇಕಾಯಿತು. ಅವರು ಸಭೆಗಳಲ್ಲಿ ಮಾತನಾಡುವುದು ಕಷ್ಟವಾಯಿತು. ಹಲವರು ನಾಯಕರೂ ಅವರನ್ನು ತೀವ್ರವಾಗಿ ಆಕ್ಷೇಪಿಸಿದರು. ಆದರೆ ರಾಜಾಜಿ ಮಾತುಗಳನ್ನು ಮಾತ್ರವಲ್ಲ ಕಲ್ಲುಗಳನ್ನೂ ಎದುರಿಸಿ ತಮ್ಮ ಅಭಿಪ್ರಾಯವನ್ನು ಸಮರ್ಥಿಸಿದರು.

ರಾಜಾಜಿ ಸ್ವತಂತ್ರ ಪಕ್ಷವನ್ನು ಪ್ರಾರಂಭಿಸಿದಾಗ ಕಾಂಗ್ರೆಸ್ ಪಕ್ಷ ಮತ್ತು ಜವಾಹರಲಾಲರ ಪ್ರಭಾವ ಅಸಾಧಾರಣವಾಗಿತ್ತು. ರಾಜಾಜಿ ವಿರೋಧ ಪಕ್ಷ ಕಟ್ಟಿದರು ಹಾಗೂ ತಾವು ಸಾಯುವವರೆಗೆ ಆಳುವ ಪಕ್ಷವಾಗಲಿ ನೆಹರು ಅಂತಹ ಜನತೆಯ ಕಣ್ಮಣಿ ನಾಯಕರಾಗಲಿ ತಪ್ಪು ಮಾಡಿದ್ದಾರೆ ಎಂದು ತೋರಿದರೆ ಸ್ಪಷ್ಟವಾಗಿ ವಿರೋಧಿಸುತ್ತಿದ್ದರು.

೧೯೪೨ರಲ್ಲಿ ಮದರಾಸಿನ ಮೇಲೆ ಜಪಾನಿನ ದಾಳಿ ಆಗುವುದೆಂದು ಮದರಾಸಿನ ಗವರ್ನರ‍್ ಮದರಾಸು ಬಿಟ್ಟು ಓಡಿದ. ಜನರೂ ಮದರಾಸನ್ನು ತ್ಯಜಿಸತೊಡಗಿದ್ದಾಗ ರಾಜಾಜಿ ಜನರನ್ನು ಭೇಟಿಯಾಗಿ, ’ಮದರಾಸನ್ನು ತ್ಯಜಿಸಬೇಡಿ. ಇದು ನಮ್ಮ ದೇಶ, ಬ್ರಿಟಿಷರದಲ್ಲ. ಅವರು ಓಡಿಹೋಗಬಹುದು.ನಾವು ಹಾಗೆ ಮಾಡುವುದು ಸರಿಯಲ್ಲ’ ಎಂದು ತಿಳಿ ಹೇಳಿದರು. ಹಿಂದಿ ಪ್ರಚಾರ ಸಭಾ ಭವನದಲ್ಲಿ ಒಂದು ಚಹದಂಗಡಿಯನ್ನು ನಡೆಸಲು ಆಗ ಅವರು ಪ್ರಯತ್ನಿಸಿದರು.

ಅಸಮಾನ ಮೇಧಾವಿ

ಎರಡನೆಯದಾಗಿ, ರಾಜಾಜಿ ಅಸಾಧಾರಣಾ ಪ್ರತಿಭಾವಂತರು. ತೀಕ್ಷ್ಣಮತಿ ಎಂದರೆ ಅವರು. ಯಾವ ವಿಷಯವನ್ನೇ ಆಗಲಿ ಸುಲಭವಾಗಿ ಗ್ರಹಿಸುವರು. ಸಮಸ್ಯೆ ಸನ್ನಿವೇಶಗಳಲ್ಲಿ ಮುಖ್ಯ ಅಂಶ ಯಾವುದು ಎಂದು ಕ್ಷಣದಲ್ಲಿ ತಿಳಿಯುವರು. ಇಷ್ಟು ಸ್ಪಷ್ಟ ಯೋಚನೆ, ತೀಕ್ಷ್ಣ ಮೇಧಾಶಕ್ತಿ ಇದ್ದುದರಿಂದಲೇ ಮಾತು ಮಿತ, ಸ್ಪಷ್ಟ ಹರಿತ.

ಆಡಳಿತಗಾರರಾಗಿ ಅವರು ದಿಟ್ಟತನವನ್ನೂ ತೀಕ್ಷ್ಣ ಬುದ್ಧಿಯನ್ನೂ ತೋರಿದರು.

೧೯೩೭ರಲ್ಲಿ ಅವರು ಮದರಾಸಿನ ಮುಖ್ಯಮಂತ್ರಿಗಳಾಗಿದ್ದರು. ಪಾನನಿರೋಧವನ್ನಾವರು ಆಗ ಜಾರಿಗೆ ತಂದರು. ಭಾರತದಲ್ಲೇ ಇದು ಪ್ರಪ್ರಥಮವಾಗಿತ್ತು. ಇಷ್ಟೇ ಅಲ್ಲದೆ ಪಾನನಿರೋಧದಿಂದ ಸರ್ಕಾರಕ್ಕೆ ಆಗುವ ಹಾನಿಯನ್ನು ತುಂಬಲು ಮಾರಾಟ ತೆರಿಗೆಯನ್ನು ಬಳಕೆಯಲ್ಲಿ ಪ್ರಥಮ ಸಲ ತಂದರು. ಅನೇಕ ಅರ್ಥಶಾಸ್ತ್ರಜ್ಞರು ಕೂಡ ಇದನ್ನು ಸ್ವಾಗತಿಸಿದರು.

ನಮ್ಮ ದೇಶದ ಬಡರೈತರು ಸಾಲದ ಹೊರೆಯಿಂದ ಬೆನ್ನುಮೂಳೆಯನ್ನೇ ಮುರಿದುಕೊಂಡಿದ್ದರು. ಪ್ರತಿ ಸಂಸಾರಕ್ಕೂ ಸಾಲ, ಸಾಲಕ್ಕೆ ಮನೆ ನಾಶ ಮಾಡುವಷ್ಟು ಬಡ್ಡಿ. ಹುಟ್ಟುವಾಗಲೂ ರೈತ ಸಾಲಗಾರ, ಸಾಯುವಾಗಲೂ ಸಾಲಗಾರ. ಈ ಹೊರೆಯನ್ನಿಳಿಸಲು ರಾಜಾಜಿ ಒಂದು ಹೊಸ ನಿಯಮವನ್ನು ಮಾಡಿದರು. ಅನ್ಯಾಯದ ಬಡ್ಡಿಯನ್ನು ಸಾಲ ಕೊಟ್ಟವರು ವಸೂಲು ಮಾಡದಂತೆ ಮಾಡಿದರು.

ರಾಜಾಜಿ ಮದರಾಸಿನ ಮುಖ್ಯಮಂತ್ರಿಯಾಗಿದ್ದಾಗ ಸಾಮಾನ್ಯ ಜನರಿಗೆ ಅನುಸರಿಸಲು ಅಸಾಧ್ಯವೆನಿಸುವಷ್ಟು ಉನ್ನತ ಆಚಾರಮಟ್ಟವನ್ನು ಹಾಕಿಕೊಂಡಿದ್ದರು. ಭ್ರಷ್ಟಾಚಾರದ ಸೋಂಕು ತಮಗೂ ತಮ್ಮ ಮಂತ್ರಿಮಂಡಲಕ್ಕೂ ಇರಬಾರದೆಂದು ಬಹು ಎಚ್ಚರಿಕೆ ವಹಿಸಿದರು. ರಾಜ್ಯದ ವಿಧಾನ ಸಭೆಗೆ ತಾವು ಯಾವ ಪ್ರಶ್ನೆಗಾದರೂ ಉಪಪ್ರಶ್ನೆಗಾದರೂ ಉತ್ತರ ಹೇಳಲು ಸಿದ್ಧರಾಗಿ ಬರುವರು. ಇತರ ಮಂತ್ರಿಗಳೂ ಹಾಗೆಯೇ ಬರಬೇಕೆಂದು ಅವರ ಸ್ಪಷ್ಟ ಸೂಚನೆ.

೧೯೫೩ರಲ್ಲಿ ರಾಜಾಜಿ ಮತ್ತೆ ಮದರಾಸಿನ ಮುಖ್ಯಮಂತ್ರಿ ಆದರು. ಆಗ ಅವರು ಆಹಾರ ಧಾನ್ಯಗಳ ನಿಯಂತ್ರಣವನ್ನು ತೆಗೆದುಬಿಟ್ಟರು. ಇದರಿಂದ ಕೇಂದ್ರ ಸರ್ಕಾರದ ಕೆಲವು ಮಂತ್ರಿಗಳೂ ಮತ್ತಿತರರೂ ರಾಜಾಜಿ ಬಹು ಅವಸರವಾಗಿ ತಪ್ಪು ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಭಾವಿಸಿದರು. ಆದರೆ ರಾಜಾಜಿ ಮಾಡಿದ್ದು ಸರಿ ಎಂದು ಬೇಗನೆ ಎಲ್ಲರಿಗೂ ತಿಳಿಯಿತು. ಆಹಾರ ಧಾನ್ಯಗಳ ನಿಯಂತ್ರಣವನ್ನು ದೇಶದಾದ್ಯಂತ ತೆಗೆದೊಗೆಯಲಾಯಿತು.  ಮುಂದೆ ಎರಡೇ ವರ್ಷಗಳಲ್ಲಿ ರಾಜ್ಯದಲ್ಲಿ ಶಿಕ್ಷಣ ಪದ್ಧತಿಯನ್ನು ಬದಲಿಸಿ ಸುಧಾರಿಸಬೇಕೆಂದರು. ಇದಕ್ಕೆ ಪ್ರಲಲವಾದ ವಿರೋಧ ಬಂದಿತು. ಆದ್ದರಿಂದ ಅವರು ರಾಜೀನಾಮೆ ಇತ್ತರು.

ನನಗೆ ಪಕ್ಷದ ನಾಯಕತ್ವ, ಮುಖ್ಯಮಂತ್ರಿ ಪದವಿ ಬೇಡವೇ ಬೇಡ’

ಸೇವಾಮನೋಭಾವ

ಮೂರನೆಯದಾಗಿ, ಅವರ ಸೇವಾಮನೋಭಾವ, ಬಹು ಚಿಕ್ಕ ವಯಸ್ಸಿನಲ್ಲೇ ಶ್ರಿಮಂತರಾದ ಅವರು ವಕೀಲಿ ವೃತ್ತಿಯಲ್ಲೇ ಮುಂದುವರಿದು ರಾಜಕೀಯಕ್ಕೆ ಕಾಲಿಡದೆ ಇದ್ದಿದ್ದರೆ ಅತ್ಯಂತ ಶ್ರೀಮಂತರಾಗಿ ಸುಖ ವೈಭವಗಳಲ್ಲಿ ಮುಳುಗಬಹುದಾಗಿತ್ತು. ದೇಶ ಸೇವೆಗಾಗಿ ಅಂತಹ ಸಂಪಾದನೆಯನ್ನು ಬಿಟ್ಟರು. ಐದು ಬಾರಿ ಸೆರೆಯಾದರು. ರಾಜಾಜಿ ಮದರಾಸಿನಲ್ಲಿ ಮುಖ್ಯಮಂತ್ರಿಯಾದ ಕಥೆಯನ್ನು ಮತ್ತೊಬ್ಬ ಕಾಂಗ್ರೆಸ್ ನಾಯಕ ಕಾಳೇಶ್ವರ ರಾಯರು ಹೇಳಿದ್ದಾರೆ. ರಾಜಾಜಿಗೆ ಪದವಿ ಬೇಕೇ ಇರಲಿಲ್ಲ. ವಲ್ಲಭಭಾಯಿ ಪಟೇಲರೇ ರಾಜಾಜಿಗೆ ಪಕ್ಷದ ನಾಯಕರಾಗುವಂತೆ ಕೇಳಿದರು. ’ನನಗೆ ಅದೆಲ್ಲ ಬೇಡವೇ ಬೇಡ’ ಎಂದು ಬಿಟ್ಟರು. ರಾಜಾಜಿ, ಎಷ್ಟು ಹೇಳಿದರೂ ಕೇಳಲೊಲ್ಲರು. ಕಾಳೇಶ್ವರ ರಾಯನಿಗೆ ಕೋಪ ಬಂದು, ’ನಾಯಕತ್ವ ವಹಿಸುವುದು ನಿಮ್ಮ ಕರ್ತವ್ಯ. ಕರ್ತವ್ಯ ಮಾಡಲು ಇಷ್ಟವಿಲ್ಲದಿದ್ದರೆ ಇಲ್ಲೇಕೆ ಇದ್ದೀರಿ? ಎಲ್ಲಿಯಾದರೂ ಹೊರಟು ಹೋಗಿ. ಹಿಮಾಲಯಕ್ಕೆ ಹೋಗಿ, ಇಲ್ಲಿ ಮಾತ್ರ ಇರಬೇಡಿ. ಹೂಂ, ಹೊರಟುಹೋಗಿ’ ಎಂದು ಕೂಗಾಡಿದರಂತೆ. ಪಟೇಲರು ಎಷ್ಟೋ ಪ್ರಯತ್ನಪಟ್ಟು ರಾಜಾಜಿಯನ್ನು ಒಪ್ಪಿಸಬೇಕಾಯಿತು! ಗವರ್ನರ‍್ ಜನರಲ್ ಆಗಿ, ದೇಶದ ಅತ್ಯುನ್ನತ ಸ್ಥಾನದಲ್ಲಿದ್ದವರು ಬೇರೆ ಸ್ಥಾನ ಒಪ್ಪಿಕೊಳ್ಳುವುದು ಹೇಗೆ ಎಂದು ಪ್ರತಿಷ್ಠೆಯ ಯೋಚನೆ ಮಾಡಲಿಲ್ಲ. ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾದರು. ಒಂದು ರಾಜ್ಯದ ಮುಖ್ಯ ಮಂತ್ರಿ ಆದರು. ತಮ್ಮ ಕಲಸ ಮುಗಿಯಿತು ಎಂದು ತೋರುತ್ತಲೇ ಪದವಿಯನ್ನು ಬಿಟ್ಟುಕೊಟ್ಟರು. ತೀರ ಮುಪ್ಪು ಎನ್ನುವ ವಯಸ್ಸಿನಲ್ಲಿ, ತಮಗೆ ಯಾವ ಪದವಿ ಬೇಕಿಲ್ಲದಿದ್ದರೂ ವೈಯಕ್ತಿಕವಾಗಿ ತಮಗೆ ಯಾವ ಲಾಭ ಇಲ್ಲದಿದ್ದರೂ ಪ್ರಜಾಪ್ರಭುತ್ವದಲ್ಲಿ ಸಮರ್ಥ ವಿರೋಧ ಪಕ್ಷ ಇಲ್ಲದಿದ್ದರೆ ಆಡಳಿತ ಕೆಡುತ್ತದೆ ಎಂಬ ಭಾವನೆಯಿಂದ ಹೊಸ ಪಕ್ಷ ಕಟ್ಟಿದರು, ಬೆಳೆಸಿದರು.

ರಾಜಾಜಿ ಪರದೇಶಗಳಿಗೆ ಹೋದದ್ದು ಒಮ್ಮೆ ಮಾತ್ರ. ಗಾಂಧಿ ಶಾಂತಿ ಪ್ರತಿಷ್ಠಾನವನ್ನು ಪ್ರತಿನಿಧಿಸಿ ೧೯೬೧ರಲ್ಲಿ ಇಂಗ್ಲೆಂಡ್ ಹಾಗೂ ಅಮೆರಿಕಗಳಿಗೆ ಭೇಟಿಕೊಟ್ಟರು. ಆಗ ಅವರ ವಯಸ್ಸು ೮೩ ವರ್ಷ. ಜಗತ್ತಿನ ಪ್ರಬಲ ರಾಷ್ಟ್ರಗಳು ತಮ್ಮ ತಮ್ಮ ಸ್ಪರ್ಧೆಗಾಗಿ ಅಣು ಬಾಂಬಿನಂತಹ, ಅದನ್ನೂ ಮೀರಿಸುವ ವಿನಾಶದ ಅಸ್ತ್ರಗಳನ್ನು ಸೃಷ್ಟಿಮಾಡುತ್ತವೆ. ಹೀಗಾದರೆ ಇಡೀ  ಮಾನವ ಕೋಟಿಯ ವಿನಾಶ ಖಂಡಿತ ಎನಿಸಿತು ಅವರಿಗೆ. ಅತ್ಯಂತ ಶಕ್ತಿಯುತ ರಾಷ್ಟ್ರಗಳೂ ಇಡೀ ಮನುಷ್ಯಕುಲದ ಯೋಗಕ್ಷೇಮವನ್ನು ಗಮನಿಸಬೇಕು ಎಂಬ ವಿವೇಕದ  ಮಾತುಗಳನ್ನು ಹೇಳಲು ಈ ತೀರ ಮುಪ್ಪಿನ ಜ್ಞಾನಿ ವಿದೇಶಗಳಿಗೆ ಹೋದದ್ದು. ಅಣ್ವಸ್ತ್ರಗಳ ವಿನಾಶಕಾರೀ ಪ್ರಯೋಗಗಳನ್ನು ಪ್ರತಿಬಂಧಿಸುವಂತೆ ಮನವಿ ಮಾಡಿಕೊಳ್ಳಲು ತೆರಳಿದ ನಿಯೋಗದ ಧುರೀಣರಾಗಿದ್ದರು. ಅಮೆರಿಕದ ಆಗಿನ ಅಧ್ಯಕ್ಷ ಜಾನ್ ಎಫ್. ಕೆನೆಡಿಯವರೊಂದಿಗೆ ೪೫ ನಿಮಿಷಗಳ ಕಾಲ ಚರ್ಚಿಸಿದರು. ಈ ಚರ್ಚೆಯು ಒಂದು ಮಹಾ ಸಾತ್ವಿಕ ಸಂಸ್ಕಾರದ ಪ್ರಭಾವವನ್ನು ಮೂಡಿಸುವಂಥಾದಾಗಿತ್ತು’ ಎಂದು ಕೆನಡಿ ಅನಂತರ ಹೇಳಿದರು.

ಲೋಕಪ್ರಿಯ ಸಾಹಿತಿ

ರಾಜಾಜಿಯವರು ಜನಪ್ರಿಯ ತಮಿಳು, ಇಂಗ್ಲಿಷ್ ಸಾಹಿತಿ. ಅವರು ಕೆಲವು ಕೃತಿಗಳು ಸಾಹಿತ್ಯಲೋಕದಲ್ಲಿ ವಿಶಿಷ್ಟ ಸ್ಥಾನವನ್ನಲಂಕರಿಸಿವೆ. ಕನ್ನಡದ ಕೆಲವು ಕಥೆಗಳನ್ನು ಅವರು ತಮಿಳಿಗೆ ಭಾಷಾಂತರಿಸಿದ್ದಾರೆ.

ಮೂವತ್ತಕ್ಕಿಂತ ಹೆಚ್ಚು ಕೃತಿಗಳನ್ನವರು ಬರೆದಿದ್ದಾರೆ. ಮಾರ್ಕಸ್ ಅರೀಲಿಯಸ್ ಎಂಬ ಪ್ರಾಚೀನ ರೋಮಿನ ದೊರೆ. ಭಗದ್ಗೀತೆ, ರಾಮಾಯಣ, ಮಹಾಭಾರತ ಹಾಗೂ ಉಪನಿಷತ್ತುಗಳ  ಬಗೆಗೆ ಬರೆದ ಪುಸ್ತಕ ಬಹಳ ಪ್ರಸಿದ್ಧವಾಗಿವೆ. ಸಾಮಾನ್ಯ ಜನರೂ ಇವುಗಳನ್ನೂ ಓದಿ ತಿಳಿದುಕೊಳ್ಳಲು ಸಾಧ್ಯವಾಗಿದೆ. ’ನಾನು ಬರೆದ ರಾಮಾಯಣ ಹಾಗೂ ಮಹಾಭಾರತಗಳು ನನ್ನ ಜನರಿಗೆ ನಾನು ಸಲ್ಲಿಸಿದ ಅತ್ಯಂತ ದೊಡ್ಡ ಸೇವೆಯೆಂದು ಭಾವಿಸಿದ್ದೇನೆ’ ಎಂದು ರಾಜಾಜಿ ಹೇಳಿದುದರಲ್ಲಿ ಅತಿಶಯೋಕ್ತಿಯೇನಿಲ್ಲ. ಅವುಗಳ ಸರಳ ಶೈಲಿ ಆಕರ್ಷಕವಾಗಿದೆ. ಪ್ರತಿಯೊಬ್ಬ ಭಾರತೀಯನೂ ಓದಿ ಆನಂದಿಸಬೇಕಾದ ಕೃತಿಗಳು ಅವು. ಅವರು ರಾಮಾಯಣವನ್ನೂ ಮಹಾಭಾರತವನ್ನೂ ಸರಳವಾದ, ಸುಂದರವಾದ ಶೈಲಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆದು, ಭಾರತದ ಈ ಮಹಾಕಾವ್ಯಗಳನ್ನು ಪಾಶ್ಚಾತ್ಯ ದೇಶಗಳವರು ಓದಿ ಸವಿದು ಅರ್ಥ ಮಾಡಿಕೊಳ್ಳಲು ಸಾಧ್ಯ ಮಾಡಿದರು. ರಾಜಾಜಿಯವರು ಬರೆದ ಇಂಗ್ಲಿಷ್ ಮಹಾಭಾರತವು ಅಮೆರಿಕದ ಐದು ವಿಶ್ವವಿದ್ಯಾನಿಲಯಗಳಲ್ಲಿ ಪೌರ್ವಾತ್ಯ ಅಭ್ಯಾಸದ ಪಠ್ಯಪುಸ್ತಕವಾಗಿದ್ದು ಮೂರು ಲಕ್ಷಕ್ಕಿಂತ ಹೆಚ್ಚು ಅದರ ಪ್ರತಿಗಳು ಈಗಾಗಲೇ ಮಾರಾಟವಾಗಿವೆ. ರಾಮಾಯಣದ ಎರಡು ಲಕ್ಷ ಪ್ರತಿಗಳು ಖರ್ಚಾಗಿವೆ. ಬರಹದಲ್ಲಾಗಲಿ, ಭಾಷಣದ್ಲಾಗಲೀ ರಾಜಾಜಿಯವರ ಭಾಷೆ ಬಹು ಸರಳ. ಅವರು ಉದ್ದಾಮ ಪಂಡಿತರಾಗಿದ್ದರು. ಆದರೆ ಅವರ ಭಾಷೆ ಪಾಂಡಿತ್ಯ ಪೂರ್ಣವಾಗಿರಲಿಲ್ಲ. ಅವರ ಭಾಷಣಗಳನ್ನು ಕೇಳುವಾಗ, ಇಷ್ಟು ಸರಳವಾದ ಮಾತುಗಳಲ್ಲಿ ಇಷ್ಟು ಕಷ್ಟವಾದ ವಿಷಯಗಳನ್ನು, ಗಹನವಾದ ವಿಷಯಗಳನ್ನು ತಿಳಿಸಲು ಸಾಧ್ಯವೇ? ಎಂದು ಬೆರಗಾಗುತ್ತಿದ್ದರು ಜನ. ಅವರ ಪುಸ್ತಕಗಳನ್ನೂ ಓದುವಾಗಲೂ ಅದೇ ಭಾವನೆ ಬರುತ್ತದೆ. ರಾಜಾಜಿಯವರ ಕಥೆಗಳೆಂದರೇ ಒಂದು ಸೊಗಸು. ಅವರದು ಸೊಗಸಾದ ಹಾಸ್ಯ. ಶಾಸನ ಸಭೆಯಲ್ಲಿ ಮಾತನಾಡುವಾಗಲೂ ಅವರು ಕಥೆಗಳನ್ನು ಬಳಸುತ್ತಿದ್ದರು. ’ಸ್ವರಾಜ್ಯ’ ಎಂಬ ಪತ್ರಿಕೆಯಲ್ಲಿ ಅವರು ಲೇಖನಗಳನ್ನು ಬರೆಯುತ್ತಿದ್ದರು. ದೇಶದ ಆಗು ಹೋಗುಗಳಲ್ಲಿ ಪ್ರತಿಯೊಂದು ವಿಷಯವನ್ನೂ ಪ್ರಸ್ತಾಪಿಸುತ್ತಿದ್ದರು. ಯಾವ ವಿಷಯವನ್ನು ಕುರಿತೇ ಆಗಲಿ ಅವರ ಲೇಖನದಲ್ಲಿ ಹೊಚ್ಚ ಹೊಸತಾದ ದೃಷ್ಟಿ, ವಿಷಯವನ್ನು ಮತ್ತೆ ಆಲೋಚಿಸುವಂತೆ ಪ್ರಚೋದಿಸುವ ದೃಷ್ಟಿ ಇರುತ್ತಿತ್ತು. ಆದರೆ ಮಾತು ಬಹು ಸರಳ.

ಮದರಾಸಿನಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಕಲಿಸುವುದಕ್ಕೆ ನಾಂದಿ ಹಾಕಿದವರು ರಾಜಾಜಿ. ಆದರೆ ಇಪ್ಪತ್ತು ವರ್ಷಗಳ ಅನಂತರ ಅವರೇ ಹಿಂದಿ ವಿರೋಧಿ ಚಳವಳಿಗೆ ನಾಯಕರಾದರು ಕೂಡ. ರಾಷ್ಟ ಭಾಷೆಯ ಪ್ರಚಾರದ ಭರದಲ್ಲಿ ಪ್ರಾದೇಶಿಕ ಭಾಷೆಯ ಬೆಳವಣಿಗೆ ಕುಂಠಿತವಾಗಬಾರದು. ಅದಕ್ಕೆ ಧಕ್ಕೆ ಬರಬಾರದು ಎಂಬುದು ಅವರ ಮತ.

ರಾಜಾಜಿ ವಾಣಿ

ಅನೇಕ ಮಹಾವ್ಯಕ್ತಿಗಳ ಹಾಗೆ ರಾಜಾಜಿಯವರೂ ಭವಿಷ್ಯದ ದ್ರಷ್ಟಾರರಾಗಿದ್ದರು. ೧೯೨೧ರಲ್ಲಿ ಅವರು ಸೆರೆಮನೆಯಲ್ಲಿದ್ದಾಗಲೇ ತಮ್ಮ ದಿನಚರಿಯಲ್ಲಿ ಹೀಗೆ ಬರೆದಿದ್ದರು ’ಸ್ವರಾಜ್ಯ  ದೊರಕಿದ ಕೂಡಲೇ ಅಥವಾ ದೊರಕಿದ ನಂತರ ಸುದೀರ್ಘ ಅವಧಿಯವರೆಗೆ ಅದು ಜನರಿಗೆ ಸುಖವನ್ನಾಗಲೀ ಒಳ್ಳೆಯ ಸರ್ಕಾರವನ್ನಾಗಲೀ ತಂದುಕೊಡಲಾರದು. ಸ್ವಾತಂತ್ರ‍್ಯ ದೊರೆಯುವುದೇ ತಡ, ಚುನಾವಣೆಗೆ ಹಾತೊರೆಯುವುದರಿಂದ ಹಾಗೂ ಅದರೊಂದಿಗೆ  ಭ್ರಷ್ಟಾಚಾರ, ಅನ್ಯಾಯ, ಹಣದಿಂದೊದಗುವ ದೌರ್ಜನ್ಯ ಹಾಗೂ ಅಸಮರ್ಥ ಆಡಳಿತದಿಂದಾಗಿ ಜನರ ಜೀವನ ನರಕಮಯವಾಗುವುದು. ತುಲನಾತ್ಮಕವಾಗಿ ಹೆಚ್ಚು ನ್ಯಾಯಭೀರುತ್ವವೂ ಸಮರ್ಥವೂ ಪ್ರಾಮಾಣಿಕವೂ ಆದ ಹಳೆಯ ಆಳ್ವಿಕೆಯೇ ಚೆನ್ನಾಗಿತ್ತು ಎಂದು ಅನೇಕ ಜನ ಅಂದುಕೊಳ್ಳುವರು. ನಮಗೆ ಸ್ವಾತಂತ್ರ‍್ಯದಿಂದ ದೊರೆಯುವುದೇನೆಂದರೆ ಅವಮರ್ಯಾದೆ ಮತ್ತು ಪರಾಧೀನತೆಯಿಂದ ಮುಕ್ತಿ. ಸಚ್ಚಾರಿತ್ರ‍್ಯ, ಪಾಪಭೀರುತ್ವ ಹಾಗೂ ಪರಸ್ಪರರಲ್ಲಿ ಪ್ರೇಮಭಾವನೆ ಉದಿಸಲು ಪ್ರೇರಕವಾಗುವಂತಹ ಸಾರ್ವತ್ರಿಕ ಶಿಕ್ಷಣವನ್ನು ಚಿಕ್ಕಂದಿನಿಂದಲೇ ಕೊಟ್ಟು ಅವರನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡುವುದರಲ್ಲೇ ಒಳ್ಳೆಯ ಭವಿಷ್ಯ ಅಡಗಿದೆ. ಇದಾಗದಿದ್ದರೆ ಅವರು ಅನ್ಯಾಯ ಹಾಗೂ ಸಂಪತ್ತಿನ ದೌರ್ಜನ್ಯಗಳ ಅಡಿಯಲ್ಲಿ ಸಿಕ್ಕು ಹೋಗುತ್ತಾರೆಂಬುದು ನಿಶ್ಚಯ.’

ರಾಜಾಜಿಯವರ ಹಲವು ಅಭಿಪ್ರಾಯಗಳು ನಾವು ಶ್ರದ್ಧೆಯಿಂದ ತೂಗಿ ನೋಡಬೇಕಾದಂತಹವು.

ರಾಜಾಜಿಯವರ ಅಭಿಪ್ರಾಯದಲ್ಲಿ ವಯಸ್ಸಾದವರ ವರ್ಧಂತಿಗಳನ್ನು ಆಚರಿಸುವುದರಲ್ಲಿ ನಾವು ಅತಿರೇಕಕ್ಕಿಳಿಯುತ್ತಿದ್ದೇವೆ. ನಮ್ಮ ಆರಾಧ್ಯವ್ಯಕ್ತಿಯ ೫೨ , ೫೩, ೫೪ನೆಯ ಇತ್ಯಾದಿ ಎಲ್ಲ ವರ್ಧಂತಿಗಳನ್ನು ಆಚರಿಸಲೇಬೇಕೆ? ೫೦, ೬೦, ೭೦ನೇ ಮತ್ತು ಇತರ ದಶಕ ವರ್ಧಂತಿಗಳನ್ನು ಆಚರಿಸಿದರೆ ಸಾಲದೇ? ಚಿಕ್ಕಮಕ್ಕಳ ಮಾತು ಬೇರೆ. ಅವರಿಗಾಗಿ ವರ್ಷೇವರ್ಷೇ ಹುಟ್ಟಿದ ಹಬ್ಬ ಆಚರಿಸುವುದರಲ್ಲಿ ತಪ್ಪಿಲ್ಲ. ಆದರೆ ಅವರಿಗೆ ಮಾಡಿದಂತೆಯೇ ನಮ್ಮ ಪ್ರಬುದ್ಧ ಪ್ರಮುಖರ ಜನ್ಮೋತ್ಸವನ್ನು ಆಚರಿಸುವುರಲ್ಲಿ ಔಚಿತ್ಯವಿಲ್ಲ. ನಾವು ಖಂಡಿತವಾಗಿಯೂ ರಜೆ ಸಾರುವುದರಲ್ಲಿ ಮಿತಿ ಮೀರುತ್ತಿದ್ದೇವೆ ಯಾರೊದರೊಬ್ಬ ಮಹಾ ಪುರುಷನಿಗಾಗಲಿ ಒಂದು ಮಹಾ ಘಟನೆಗಾಗಲಿ ಗೌರವ ಸೂಚಿಸಲು ಆ ದಿನ ಕೆಲಸ ಬಿಟ್ಟುಕೊಡುವುದೇ ಉತ್ತಮ ಉಪಾಯವೆಂದು ಪರಿಗಣಿಸಿದಂತಿದೆ. ಇದರ ಮೌಢ್ಯ ಸ್ವಯಂವೇದ್ಯವಾದುದು.

ರಾಜಾಜಿ ಪ್ರಸಿದ್ಧಿಯ ಬೆನ್ನುಹತ್ತಿ ಹೋದವರಲ್ಲ. ಅದಕ್ಕಾಗಿ ಮಹತ್ವವನ್ನು ಕೊಡಲಿಲ್ಲ. ತಮಗೆ ಅಸಾಧಾರಣ ಜನಪ್ರಿಯತೆ ಇಲ್ಲ. ಬಹುಬಾರಿ ತಮ್ಮ ಅಭಿಪ್ರಾಯವನ್ನು ಒಪ್ಪುವವರ ಸಂಖ್ಯೆ  ಕಡಿಮೆ ಎಂದು ಅವರಿಗೆ ತಿಳಿದಿತ್ತು. ಈ ಬಗ್ಗೆ  ಒಬ್ಬರು ಅವರನ್ನು ಕೇಳಿದಾಗ ಅವರು ಕೂಡಲೇ ಹೇಳಿದರು : ’ ಪ್ರಾಚೀನ ಕಾಲದಲ್ಲಿ ನಮ್ಮ ದೇಶದಲ್ಲಿನ ಋಷಿಗಳು ತಮಗೆ ಬಹಳ ಜನ ಅನುಯಾಯಿಗಳಿರಲಿಲ್ಲವೆಂಬ ಮಾತ್ರಕ್ಕೆ ತಮ್ಮ ತತ್ವಗಳಲ್ಲಿನ ಅಚಲವಾದ ನಂಬಿಕೆಯನ್ನು ಬಿಡಲಿಲ್ಲ’.

ಗಾಂಧಿ ಜನ್ಮಶತಾಬ್ದಿಯನ್ನು ಆಚರಿಸುವ ಬಗ್ಗೆ ಚರ್ಚೆ ಮಾಡಲು ಒಬ್ಬರು ರಾಜಾಜಿಯವರ ಬಳಿಗೆ ಹೋಗಿದ್ದರು. ಆಗ ರಾಜಾಜಿ, ’ದೇಶದಲ್ಲಿ ನಡೆದ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಹಾರಗಳಲ್ಲಿ ಗಾಂಧೀಜಿ ಎಲ್ಲಿಯೂ ಕಾಣುವುದಿಲ್ಲವಲ್ಲ! ಈ ಸ್ಥಿತಿಯಲ್ಲಿ ನೀವು ಗಾಂಧಿ ಶತಾಬ್ದಿಯನ್ನು ಆಚರಿಸಲು ಹೊರಟಿರುವಿರಿ. ನೀವು ಬಹಳ ಧೈರ್ಯಸ್ಥರು’ ಎಂದು ಹಾಸ್ಯ ಮಾಡಿದರು. ಮನಸ್ಸಿನಲ್ಲಿದ್ದ ನೋವನ್ನು ಅವರು ಈ ರೀತಿ ವ್ಯಕ್ತ ಮಾಡಿದ್ದರು.

ಜನಪ್ರಿಯತೆ ಸುಖ ಬಯಸಲಿಲ್ಲ

ತಮ್ಮ ಸುದೀರ್ಘ ಬಾಳಿನ ಕಟ್ಟಕಡೆಯವರೆಗೆ ರಾಜಾಜಿಯವರಿಗೆ ದೇಶದ ಆಗು ಹೋಗುಗಳಲ್ಲಿ ಆಸಕ್ತಿ, ಭವಿಷ್ಯದ ಚಿಂತೆ ಎಳ್ಳಷ್ಟೂ ಕಡಿಮೆಯಾಗಲಿಲ್ಲ. ದೇಶದ ಜನ ಸುಖವಾಗಿಲ್ಲ, ಸಾರ್ವಜನಿಕ ಜೀವನದಲ್ಲಿ ನೀತಿಯ ಮಟ್ಟ ಕಡಿಮೆಯಾಗುತ್ತಿದೆ, ಒಟ್ಟಿನಲ್ಲಿ ಸಾರ್ವಜನಿಕ ಜೀವನದಲ್ಲಿ ಇರುವವರು ಎಷ್ಟು ಪ್ರಾಮಾಣಿಕತೆಯನ್ನು ಹೊಂದಿರಬೇಕೋ ಅಷ್ಟನ್ನು ಹೊಂದಿಲ್ಲ ಎಂಬ ಆತಂಕ ಅವರಿಗೆ ತೀವ್ರವಾಗಿತ್ತು.

೧೯೭೨ರ ಡಿಸೆಂಬರ‍್ ೨೫ ರಂದು ಈ ಅಸಮಾನ ಮೇಧಾವಿ ನಿಧನರಾದರು. ಆಗ ಅವರಿಗೆ ೯೪ ವರ್ಷ ವಯಸ್ಸು.

ಬಾಳಿನಲ್ಲಿ ತುಂಬ ಆಕ್ಷೇಪಣೆಯನ್ನೂ ಕಂಡಿದ್ದರು, ಗೌರವವನ್ನೂ ಕಂಡಿದ್ದರು ರಾಜಾಜಿ. ಸಹೋದ್ಯೋಗಿಗಳಿಂದ ಕಟು ಟೀಕೆಯ ಮಾತುಗಳನ್ನು ಕೇಳಿದ್ದರು. ಅವರನ್ನು ಅರ್ಥಮಾಡಿಕೊಳ್ಳಲಾರದ ಜನರ ಕಲ್ಲಿನೇಟುಗಳನ್ನೂ ಸಹಿಸಿದ್ದರು. ಭಾರತದ ಗವರ್ನರ‍್ ಜನರಲ್ ಆಗಿದ್ದರು. ’ಭಾರತರತ್ನ’ ಎಂಬ ಪ್ರಶಸ್ತಿಯೂ ಅವರಿಗೆ ಬಂದಿತ್ತು. ಆದರೆ ಭಗವದ್ಗೀತೆಯ ಅರ್ಥವನ್ನೂ ಪುಸ್ತಕಗಳಲ್ಲಿ ವಿವರಿಸಿದ ರಾಜಾಜಿ ಅದನ್ನು ಜೀರ್ಣಿಸಿಕೊಂಡೂ ಇದ್ದರು. ತೆಗಳಿಕೆಗೆ ಕೋಪ ಮಾಡಿಕೊಳ್ಳಲಿಲ್ಲ. ಹೊಗಳಿಕೆಗೆ ಹಿಗ್ಗಲಿಲ್ಲ. ಪಾಕಿಸ್ತಾನದ ಸೃಷ್ಟಿಗೆ ಅವರು ಪ್ರೋತ್ಸಾಹ ಕೊಟ್ಟರು ಎಂದು ಎಷ್ಟೋ ಮಂದಿ ಅವರನ್ನು ಜರಿದರು. ಅಖಂಡ ಭಾರತವನ್ನೇ ರಾಜಾಜಿಯೂ ಬಯಸಿದರು. ಆದರೆ ಮುಸ್ಲಿಮರಿಗೆ ಪಾಕಿಸ್ತಾನ ಬೇಕೆನ್ನುವವರನ್ನು ಬಲಾತ್ಕಾರವಾಗಿ ಉಳಿಸಿಕೊಳ್ಳುವುದಕ್ಕಿಂತ ಅವರ ಬೇಡಿಕೆಯನ್ನು ಸಲ್ಲಿಸಿ ಅದರ ಕಷ್ಟ ಸುಖಗಳನ್ನು ಅವರೇ ತಿಳಿಯುವಂತೆ ಮಾಡುವುದು ರಾಜಕೀಯ ಜಾಣ್ಮೆ ಎಂದು ಭಾವಿಸಿದ್ದರು ಅವರು. ಗಾಂಧೀಜಿ ಒಮ್ಮೆ ಹೇಳಿದರು : ’ರಾಜಾಜಿಗೆ ಮುಖಂಡತ್ವವನ್ನು ಕೊಟ್ಟುಬಿಟ್ಟಿದ್ದರೆ ಭಾರತದ ವಿಭಜನೆಗಾಗಿ ಆದ ರಕ್ತಪಾತವನ್ನು ನಾನು ನೋಡಬೇಕಾಗಿರಲಿಲ್ಲ.  ನನಗಿಂತ ಆರು ತಿಂಗಳು ಮುಂದಿನದನ್ನು ಅವರು ಕಾಣಬಲ್ಲರು”

ಸಂಸಾರದಲ್ಲಿ ಹೆಚ್ಚಿನ ಸುಖವನ್ನು ರಾಜಾಜಿ ಕಾಣಲಿಲ್ಲ. ಅವರಿಗೆ ಮೂವತ್ತೈದು ವರ್ಷವಾಗಿದ್ದಾಗಲೇ ಅವರ ಹೆಂಡತಿ ತೀರಿಕೊಂಡರು. ಚಿಕ್ಕ ವಯಸ್ಸು, ಕೈತುಂಬ ಸಂಪಾದನೆ. ಮತ್ತೆ ಮದುವೆ ಮಾಡಿಕೊಳ್ಳಿ ಎಂದು ನೆಂಟರ ಮತ್ತು ಸ್ನೇಹಿತರ ಒತ್ತಾಯ. ರಾಜಾಜಿಯವರಿಗೆ ಐದು ಜನ ಮಕ್ಕಳು. ಮತ್ತೆ ಮದುವೆಯಾದರೆ ಐವರು ಮಕ್ಕಳೊಡನೆ ಆರನೆಯ ಮಗುವನ್ನು ನೋಡಿಕೊಳ್ಳಬೇಕಾದೀತು’ ಎಂದು ಹಾಸ್ಯವಾಗಿ ಉತ್ತರಿಸಿದರು. ರಾಜಾಜಿ. ಮತ್ತೆ ಮದುವೆ ಯಾಗಲಿಲ್ಲ.

ರಚನಾತ್ಮಕ ಸೇವೆ

ರಾಜಾಜಿಯವರಿಗೆ ಭಾರತ ಎಂದರೆ ತುಂಬಾ ಅಭಿಮಾನ. ಈ ದೇಶದ ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ದೇಶದ ಬಗ್ಗೆ ಅವರ ಹೆಮ್ಮೆ ಈ ತಿಳವಳಿಕೆಯಿಂದ ಬಂದದ್ದು. ದೇಶದ ಕಲ್ಯಾಣಕ್ಕಾಗಿಯೇ ಸದಾ ಅವರ ಚಿಂತೆ. ಅದಕ್ಕಾಗಿ ಅವರು ಹಲವು ರೀತಿಗಳಲ್ಲಿ ದುಡಿದರು, ಗಾಂಧೀಜಿಯ ಉಪದೇಶಗಳನ್ನು ಅನುಷ್ಠಾನಕ್ಕೆ ತಂದರು. ಬಾಪೂ ತಮ್ಮ ಹಿಂಬಾಲಕರಿಗೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸುವುದು ಮಾತ್ರವಲ್ಲ, ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವುದೂ ಪವಿತ್ರ ಕರ್ತವ್ಯ ಎಂದು ಹೇಳಿದರು. ರಾಜಾಜಿ ಯಾವಾಗಲೂ ಖಾದಿ ಧರಿಸುತ್ತಿದ್ದರು. ಸೆರೆ ಮನೆಯಲ್ಲೂ  ನೂಲುತ್ತಿದ್ದರು ಎಂದು ಆಗಲೇ ಹೇಳಿದೆ. ಅವರು ಪುದುಪಾಳೆಯಂ ಎಂಬ ಗ್ರಾಮದಲ್ಲಿ ಒಂದು ಗಾಂಧೀ ಆಶ್ರಮವನ್ನೇ ಸ್ಥಾಪಿಸಿ ನಡೆಸಿದರು. ಆಶ್ರಮದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹ ನೂಲುವ ಕೆಲಸ ನಡೆಯಲು ಹತ್ತಿಯನ್ನೂ, ರಾಟೆಯನ್ನೂ ಒದಗಿಸುತ್ತಿದ್ದರು. ಜನ ನೂತನ ನೂಲಿನ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರು. ಆಶ್ರಮದಲ್ಲಿ ಒಂದು ಶಾಲೆ ಇತ್ತು. ಎಷ್ಟೋ ಬಾರಿ ರಾಜಾಜಿಯವರೇ ಅಲ್ಲಿ ಪಾಠ ಹೇಳುತ್ತಿದ್ದರು. ಅವರ ಮಗನೇ ವೈದ್ಯರಾಗಿ ಆಶ್ರಯದವರನ್ನೂ ಸುತ್ತಮುತ್ತಲಿನ ಗ್ರಾಮಗಳವರನ್ನೂ ನೋಡಿಕೊಳ್ಳುತ್ತಿದ್ದರು. ರಾಜಾಜಿ ಹಳ್ಳಿಗಳನ್ನು ಸುತ್ತಿದರು, ಬಾವಿಗಳನ್ನು ತೋಡಿಸಲು ಏರ್ಪಾಡು ಮಾಡಿದರು. ಮಧ್ಯ ಪಾನ ಮಾಡದಂತೆ ಜನರಿಗೆ ಉಪದೇಶಿಸಿದರು. ಆಶ್ರಮದಲ್ಲಿ ಜೇನು ಸಾಕುವುದಕ್ಕೆ ವ್ಯವಸ್ಥೆ ಮಾಡಿ, ಜನರಿಗೆ ಮತ್ತೊಂದು ವೃತ್ತಿಯ ತಿಳಿವಳಿಕೆ  ಮಾಡಿಕೊಟ್ಟರು. ಭಾರತದ ಸಮಾಜದ ಎರಡು ಪಿಡಗುಗಳೆಂದರೆ ಕುಡಿತ ಮತ್ತು ಅಸ್ಪೃಶ್ಯತೆ ಎಂದು ಭಾವಿಸಿದ್ದ ಅವರು ಅಧಿಕಾರದಲ್ಲಿದ್ದಾಗ, ಅಧಿಕಾರದಲ್ಲಿ ಇಲ್ಲದೆ ಇದ್ದಾಗ ನಿರಂತರವಾಗಿ ಇವುಗಳ ವಿರುದ್ಧ ಹೋರಾಟ ನಡೆಸಿದರು. ಇನ್ನೂರಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳನ್ನು ಅವರು ಪ್ರಾರಂಭಿಸಿದರು.

ಭಾರತ ಸಂಸ್ಕೃತಿಯ ಶಿಶು

ಲೋಕಮಾನವ

ಭಾರತ ಸಂಸ್ಕೃತಿಯ ಶಿಶುವಾದ ಅವರಿಗೆ ಇಡೀ ಮಾನವ ಸಮಾಜದ ಒಂದಾಗಿ ಕಂಡಿತು. ಪ್ರಪಂಚದ ಪ್ರಬಲ ರಾಷ್ಟ್ರಗಳು ಪ್ರತಿಷ್ಠೆ-ಸ್ವಾರ್ಥಗಳಿಂದ ಹೊಸ ಹೊಸ ಆಯುಧಗಳನ್ನು ಮಾಡಿ ತಮ್ಮನ್ನೂ ಇಡೀ ಮಾನವ ಕುಲವನ್ನೂ ದುಃಖಕ್ಕೆ ನೂಕದಂತೆ ತಡೆಯಲು ಮುಪ್ಪಿನಲ್ಲೂ ಶ್ರಮಿಸಿದರು.

ಸ್ವಾತಂತ್ರ‍್ಯವು ಭಾರತದ ಜನಕ್ಕೆ ಸುಖ, ಸಂತೋಷಗಳನ್ನು ತರಲಿಲ್ಲ. ಅಧಿಕಾರ ಮತ್ತು ಹಣಗಳ ಮೋಹ ದೇಶದ ಜೀವನವನ್ನು ಹಾಳು ಮಾಡಿವೆ ಎಂದು ಅವರು ತುಂಬ ವಿಷಾದಗೊಂಡಿದ್ದರು. ನೂರು ವಾದ ವಿವಾದಗಳಿಗೆ ಸಿಕ್ಕ ವ್ಯಕ್ತಿ ರಾಜಾಜಿ. ಅವರ ಬೇರೆ ಬೇರೆ ಅಭಿಪ್ರಾಯಗಳು ಬೇರೆ ಬೇರೆ ಜನರಿಗೆ ಹಿಡಿಸದೇ ಹೋಗಬಹುದು. ಆದರೆ ಇಪ್ಪತ್ತನೆಯ ಶತಮಾನದಲ್ಲಿ ಭಾರತದ ಅತ್ಯಂತ ಮೇಧಾವಿ ನಾಯಕ ರಾಜಾಜಿ, ಭಾರತ ಮತ್ತು ಜಗತ್ತಿನ ಕಲ್ಯಾಣಕ್ಕಾಗಿ ನಿರ್ಭಯವಾಗಿ ಮಾತನಾಡಿದರು – ದುಡಿದರು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯ ಇಲ್ಲ.