ರಾಷ್ಟ್ರದ ಹೆಸರಾಂತ ಸರೋದ್‌ ವಾದಕಲ್ಲೊಬ್ಬರಾಗಿರುವ ಪಂ. ರಾಜೀವ ತಾರಾನಾಥರವರು ರಾಯಚೂರಿನಲ್ಲಿ ಜನಿಸಿ, ದೇಶ-ವಿದೇಶದೆಲ್ಲೆಡೆ ಸರೋದ್‌ ನುಡಿಸಿ ಬೆಂಗಳೂರಿನಲ್ಲಿ ನೆಲೆಸಿದ ಕರ್ನಾಟಕದ ಪ್ರಪ್ರಥಮ ಸರೋದ್‌ ವಾದಕರು.

೧೯೩೨ರಲ್ಲಿ ಜನಿಸಿದ ಡಾ. ರಾಜೀವ ತಾರಾನಾಥ ಅವರ ತಂದೆ ಪಂಡಿತ ತಾರಾನಾಥರು ಶಿಕ್ಷಣ ತಜ್ಞ, ಆಯುರ್ವೇದ ವೈದ್ಯ ಹಾಗೂ ಸ್ವಾತಂತ್ರ ಯೋಧರು. ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಹಾಗೂ ಡಾಕ್ಟರೇಟ್‌ ಪದವಿ ಪಡೆದು ಬೆಂಗಳೂರು ಸೆಂಟ್ರಲ್‌ ಕಾಲೇಜಿನಲ್ಲಿ ಇಂಗ್ಲೀಷ್‌ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಖ್ಯಾತ ಸರೋದ್‌ ವಾದಕ ಉಸ್ತಾದ್‌ ಅಲಿ ಅಕ್ಬರ್ ಖಾನ್‌ರ ಸರೋದ್‌ ವಾದನಕ್ಕೆ ಪ್ರಭಾವಿತರಾಗಿ ವೃತ್ತಿಗೆ ರಾಜೀನಾಮೆ ನೀಡಿ ಅವರ ಶಿಷ್ಯತ್ವ ವಹಿಸಿ ಸರೋದ್‌ ವಾದನದಲ್ಲಿ ತರಬೇತಿ ಪಡೆದು ದೇಶದ ಮಹಾನ್‌ ಸರೋದ್‌ ವಾದಕರಲ್ಲೊಬ್ಬರೆನಿಸಿದರು. ವಿಖ್ಯಾತ ಸಿತಾರ ವಾದಕ ‘ಭಾರತ ರತ್ನ’ ಪಂ. ರವಿಶಂಕರ ಅವರ ಸಿತಾರ ವಾದನ ರಾಜೀವ ತಾರಾನಾಥರ ಮೇಲೆ ಅಪಾರ ಪ್ರಭಾವ ಬೀರಿದೆ. ವಿಖ್ಯಾತ ಸೂರ್ ಬಹಾರ ವಾದಕಿ ಶ್ರೀಮತಿ ಅನ್ನಪೂರ್ಣಾದೇವಿ ಅವರ ಬಳಿಯೂ ಸಹ ಕೆಲವು ವರ್ಷ ಡಾ. ರಾಜೀವ ತಾರಾನಾಥರು ಸಂಗೀತದ ತಾಲೀಮು ಪಡೆದಿದ್ದಾರೆ. ಆಸ್ಟ್ರೇಲಿಯಾ, ನ್ಯೂಯಾರ್ಕ್ ಮತ್ತು ಅಮೆರಿಕಾ ಮುಂತಾದ ದೇಶಗಳಲ್ಲಿ ಅವರು ಸರೋದ್‌ ವಾದನ ಕಛೇರಿ ನೀಡಿದ್ದಾರೆ. ಬಂಗಾಳಿ, ಕನ್ನಡ, ಇಂಗ್ಲೀಷ್‌ ಹಾಗೂ ಮಲಯಾಳಿ ಭಾಷೆಯ ಚಲನಚಿತ್ರಗಳಿಗೆ ಅವರು ಸಂಗೀತ ನಿರ್ದೇಶಿಸಿದ್ದಾರೆ. ಆಗ ಸಂಗೀತ ನಿರ್ದೇಶನದ ಚಿತ್ರಗಳಿಗೆ ಪ್ರಶಸ್ತಿ ಕೂಡಾ ಸಂದಿವೆ. ಅಡೆನ್‌ ಟೆಲಿವಿಷನ್‌ ಇವರ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿದೆ.

ಅವರ ಗರಡಿಯಲ್ಲಿ ಕೆಲವು ಜನ ಶಿಷ್ಯರು ತಯಾರಾಗಿದ್ದಾರೆ. ಅಂಥವರಲ್ಲಿ ಸೋಹನ ಭಾಯಿ ನೀಲಕಂಠ ಅಹಮದಾಬಾದ್, ಪ್ರೊ. ಎಂ.ಎನ್‌. ಕೃಷ್ಣಕುಮಾರಿ ಹಾಗೂ ಮಗ ಚೇತನ ತಾರಾನಾಥ ಉಲ್ಲೇಖನೀಯರಾಗಿದ್ದಾರೆ.

ಸರೋದ್‌ ಮಾಂತ್ರಿಕ ಪಂ. ರಾಜೀವ ತಾರಾನಾಥ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕನಾಟಕ ಕಲಾ ತಿಲಕ’ (೧೯೯೧-೯೨), ಕರ್ನಾಟಕ ಸರ್ಕಾರದ ರಾಷ್ಟ್ರೀಯ ಟಿ. ಚೌಡಯ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಬಂದಿವೆ.