ಭಗೀರಥ ಗಂಗೆಯನ್ನು ಸ್ವರ್ಗದಿಂದ ಭೂಮಿಗೆ ತಂದ ರೀತಿಯಲ್ಲಿ ಚೋಳ ಕುಲತಿಲಕ, ಸೂರ್ಯವಂಶ ದೀಪ ಮೊದಲನೆಯ ರಾಜೇಂದ್ರ ಚೋಳ ಪವಿತ್ರ ಗಂಗೆಯನ್ನು ತನ್ನ ರಾಜ್ಯಕ್ಕೆ ತಂದು ಭವ್ಯ ರಾಜಧಾನಿಯಲ್ಲಿ ಹರಿಸಿ, ಕೆರೆ ಕಟ್ಟಿಸಿದನಂತೆ. ಈ ವಿಷಯವನ್ನು ರಾಜೇಂದ್ರನ ಕಾಲದ ಶಾಸನವೊಂದು ತಿಳಿಸುತ್ತದೆ. ಈ ವರ್ಣನೆಯಲ್ಲಿ ಉತ್ಪ್ರೇಕ್ಷೆಯೇನು ಇಲ್ಲ.ರಾಜೇಂದ್ರನ ಬಿರುದುಗಳೇ ಅದರ ಸತ್ಯಾಂಶವನ್ನು ಸಾರುತ್ತವೆ.  ಅವನ ಬಿರುದುಗಳು ಒಂದೇ ಎರಡೇ, ಹಲವಾರು- “ಗಂಗೆ ಕೊಂಡ ಚೋಳ, ಮುಡಿಕೊಂಡ, ಕಡಾರಂಗೊಂಡ, ಪಂಡಿತ ಚೊಳ”. ಪ್ರತಿಯೊಂದು ಬಿರುದೂ ರಾಜೇಂದ್ರನ ಸಾಧನೆಯ ಸಾಕ್ಷಿ: ಅವನ ಕೀರ್ತಿಯ ಸಂಕೇತ. ಬಂಗಾಳದ ರಾಜನನ್ನು ಸೋಲಿಸಿ, ಆ ದಿಗ್ವಿಜಯದ ಸ್ಮರಣಾರ್ಥವಾಗಿ ಗಂಗೈಕೊಂಡ ಚೋಳಪುರಂ ಎಂಬ ಹೊಸ ರಾಜಧಾನಿಯನ್ನೇ ನಿರ್ಮಿಸಿದ. ರಾಜೇಂದ್ರನ ಕಾಲದ ಅನೇಕ ದಂಡ ಯಾತ್ರೆಗಳಲ್ಲಿ ಇದು ಹೆಚ್ಚಿನ ಕೀರ್ತಿಯನ್ನು ತಂದಿತು. ಚೋಳ ಸಾಮ್ರಾಜ್ಯದ ಪ್ರತಿಷ್ಠೆಯನ್ನು ಹೆಚ್ಚಿಸಿತು.

ವೀರ, ದಕ್ಷ, ಆಡಳಿಗಾರ :

ಸಾಮಾನ್ಯವಾಗಿ ನಾವು ಭಾರತದ ಚರಿತ್ರೆಯನ್ನು ನೆನೆದಾಗ, ಎಷ್ಟು ಬಾರಿ ಹೊರಗಿನವರು ಬಂದು ಇಲ್ಲಿ ದಾಳಿ ಮಾಡಿದರು ಎಂಬುವುದೇ  ಎದ್ದು ಕಾಣುತ್ತದೆ. ಹೊರಗಿನವರು ಇಲ್ಲಿ ಸಾಮ್ರಾಜ್ಯಗಳನ್ನು ಸ್ಥಾಪಿಸಿದರು ಎಂಬುವುದೇ ಎದ್ದು ಕಾಣುತ್ತದೆ. ಭಾರತೀಯರ ಶೌರ್ಯಸಾಹಸಗಳು ಭಾರತದಾಚೆಯೂ ಪ್ರದರ್ಶಿತವಾದದ್ದು ಉಂಟು. ಈಗ ನಮಗೆ ಭೂಪಠದಲ್ಲಿ ಕಾಣುವ ಭಾರತದಾಚೆಯೂ ಇಲ್ಲಿನ ವೀರರಾಜರ ಸಾಮ್ರಾಜ್ಯ ಹಬ್ಬಿದುದು ಉಂಟು. ಈಗಿನ ಶ್ರೀಲಂಕಾ, ಮಲಯಾ, ಸುಮಾತ್ರಗಳಲ್ಲಿ ತನ್ನ ಧ್ವಜವನ್ನು ನೆಟ್ಟ ವೀರ ರಾಜೇಂದ್ರ ಚೋಳ.

ಭಾರತಕ್ಕೆ ಉದ್ಧವಾದ ಸಮುದ್ರ ತೀರವಿದೆ. ನೌಕಾಸೇನೆ ಭಾರತದಂತಹ ದೇಶಕ್ಕೆ ಅತ್ಯಗತ್ಯ. ಉತ್ತಮ ನೌಕಾದಳವನ್ನು ಕಟ್ಟಿ, ಸಮುದ್ರವನ್ನು ದಾಟಿ, ವಿಜಯಗಳನ್ನು ಸಾಧಿಸಿದ ಭಾರ‍ತ ವೀರ ರಾಜೇಂದ್ರ ಚೋಳ.

ಆದರೆ ನಮ್ಮ ಕಥಾನಾಯಕ-ರಾಜೇಂದ್ರನ ಜೀವನ ಬರಿ ಯುದ್ಧ, ದಂಡಯಾತ್ರೆಗಳ, ದಿಗ್ವಿಜಯಗಳ ಕಥೆಯಲ್ಲ. ಯುದ್ಧಗಳನ್ನು ಮಾಡಿ, ರಾಜರನ್ನು ಸೋಲಿಸಿ, ಕೊಂದು ರಾಜ್ಯಗಳನ್ನು ವಶಪಡಿಸಿಕೊಂಡು, ರಾಜೇಂದ್ರ ಇತಿಹಾಸದಲ್ಲಿ ಚಿರಸ್ಮರಣೀಯ ಸ್ಥಾನವನ್ನು ಪಡೆಯುತ್ತಲೇ ಇರಲಿಲ್ಲ.

ರಾಜೇಂದ್ರ ಅಪ್ರತಿಮ ವೀರನಷ್ಟೇ ಅಲ್ಲ. ಸಮರ್ಥ ಆಡಳಿತಗಾರ; ಉತ್ತಮ ರಾಜಕಾರಣಿ; ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಿ, ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾದ ಪ್ರಭು. ಆದುದರಿಂದಲೇ ರಾಜೇಂದ್ರ ಚೋಳ ದಕ್ಷಿಣ ಭಾರತದಲ್ಲಿ ರಾಜ್ಯವಾಳಿದ ಅರಸಲ್ಲಿಯೇ ಶ್ರೇಷ್ಠನೆನಿಸಿಕೊಂಡಿದ್ದಾನೆ.

ರಾಜೇಂದ್ರ ಬಹು ಪರಾಕ್ರಮಶಾಲಿಯಾದ. ಪ್ರಬಲನಾದ ರಾಜ. ಆದರೆ ಜನರಿಗೆ ಆಡಳಿತದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿದ್ದ. ಇಂದು ನಾವು ಪ್ರಜಾಪ್ರಭುತ್ವದ ಲಕ್ಷಣಗಳು ಎಂದುಕೊಳ್ಳುವ ಎಷ್ಟೋ ಅಂಶಗಳು ಅವನ ಆಡಳಿತದಲ್ಲಿ ಇದ್ದವು. ಚುನಾವಣೆಗಳಿದ್ದವು.: ಮತದಾರರಿಗೆ ಇಂತಹ ಅರ್ಹತೆಗಳಿದ್ದವು: ಮತದಾರರಿಗೆ ಇಂತಹ ಅರ್ಹತೆಗಳಿರಬೇಕು, ಚುನಾವಣೆಗೆ ನಿಲ್ಲುವವರೆಗೆ ಇಂತಹ ಅರ್ಹತೆಗಳಿರಬೇಕು ಎಂದು  ನಿಯಮಗಳಿದ್ದವು.

ಚೋಳರು :

ರಾಜೇಂದ್ರ ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಸಿದ್ಧಿ ಹೊಂದಿದ ಚೋಳವಂಶಕ್ಕೆ ಸೇರಿದವನು. ಈ ಚೋಳರು ಯಾರು? ಎಲ್ಲಿಂದ ಬಂದರು?  ಮತ್ತು ಎಲ್ಲಿ ಮೊದಲು ರಾಜ್ಯವನ್ನು ಪ್ರಾರಂಭಿಸಿದರು?- ಎಂಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ.  ರಾಜೇಂದ್ರನ ಹಿರಿಮೆಯನ್ನು ತಿಳಿಯಬೇಕಾದರೆ ಚೋಳರ ಚರಿತ್ರೆಯನ್ನು ಸ್ಥೂಳವಾಗಿ ತಿಳಿಯಬೇಕಾದುದು ಅತ್ಯವಶ್ಯಕ.

ಇತಿಹಾಸದ ಪ್ರಾರಂಭದಲ್ಲಿಯೇ ದಕ್ಷಿಣ ಭಾರತದಲ್ಲಿ ಮೂರು ಪ್ರಮುಖ ರಾಜ್ಯಗಳಿದ್ದವು. ಆವು ಚೇರ, ಚೋಳ, ಮತ್ತು ಪಾಂಡ್ಯ ರಾಜ್ಯಗಳು. ಇವು ಮೌರ್ಯರ ಸಾಮ್ರಾಟ ಅಶೋಕನ ಶಾಸನಗಳಲ್ಲಿ ಸೂಚಿತವಾಗಿವೆ. ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಅವನ ಸಾಮ್ರಾಜ್ಯಕ್ಕೆ ಸೇರದ ಸ್ವತಂತ್ರ ರಾಜ್ಯಗಳಾಗಿದ್ದವು. ಚೋಳರು ಮಣ್ಣಿನ ಮಕ್ಕಳು: ದಕ್ಷಿಣ ಭಾರತದ ವೆಲ್ಲಾರ ನದಿಯ ಮಧ್ಯೆ ಇದ್ದ ಪ್ರದೇಶದಲ್ಲಿಯೇ ಚೋಳರ ಪಾಳೆಯಗಾರಿಕೆ. ಕಾವೇರಿ ನದಿ ತೀರದಲ್ಲಿದ್ದ ಯರಯಕ್ ಪಟ್ಟಣವೇ ಚೋಳರ ರಾಜಧಾನಿ. ವ್ಯಾಘ್ರವೇ ಅವರ ಪತಾಕೆಯ ಲಾಂಛನ. ರಾಜ್ಯದ ವಿಸ್ತರಣೆಯೇ ಚೋಳರಸರ ಗುರಿಯಾಗಿತ್ತು.

ರಾಜರಾಜ :

ರಾಜೇಂದ್ರ ಚೋಳ ಒಂದು ರೀತಿಯಲ್ಲಿ ಅದೃಷ್ಟವಂತ. ಬಹು ಸಮರ್ಥನೂ ವಿವೇಕಿಯೂ ಆದ ತಂದೆಯನ್ನು ಪಡೆದಿದ್ದ. ರಾಜರಾಜ ಎಂಬ ಚೋಳ ರಾಜನ ಮಗ ಅವನು.

ಮೊದಲು ಚೋಳರಸರದಲ್ಲಿ ಪ್ರಮುಖನಾದವನು ಕರಿಕಾಲ ಚೋಳ. ಬಾಲ್ಯದಲ್ಲಿಯೇ ರಾಜ್ಯವನ್ನು ಕಳೆದುಕೊಂಡರೂ ತನ್ನ ಸಾಮರ್ಥ್ಯದಿಂದ ಸಿಂಹಾಸನವನ್ನು ಸಂಪಾದಿಸಿ, ಹನ್ನೊಂದು ಮಂದಿ ರಾಜರನ್ನು ಸೊಲಿಸಿ, ಪಾಂಡ್ಯ, ಚೇರರ ಪ್ರತಿಷ್ಟೆಯನ್ನು ಆಡಗಿಸಿ, ಚೋಳ ರಾಜ್ಯವನ್ನು ಸ್ಥಿರವಾಗಿ ಸ್ಥಾಪಿಸಿ ಕೀರ್ತಿ ಕರಿಕಾಲನದು.

ಮೊದಲನೇ ರಾಜ ರಾಜನೇ (ಕ್ರಿ.ಶ.೯೮೫- ೧೦೧೪) ಚೋಳ ಸಾಮ್ರಾಜ್ಯದ ಸ್ಥಾಪಕ. ಅವನ ಕಾಲದಲ್ಲಿಯೇ ಚೋಳರಾಜ್ಯ ಸಾಮ್ರಾಜ್ಯವಾದುದು ಆತನಕಾಲ ಚೋಳ ಸಾಮ್ರಾಜ್ಯದ ವೈಭವದ ಯುಗ. ರಾಜರಾಜ ತನ್ನ ಮಗ ರಾಜೇಂದ್ರನ ಅಸಮಾನ ಸಾಧನೆಗಳಿಗೆ ಅಡಿಗಲ್ಲಿಟ್ಟ: ಅವನ ಕೀರ್ತಿಗೆ ಕಾರಣನಾದ.

ಚೋಳರ ಇತಿಹಾಸದಲ್ಲಿ ರಾಜರಾಜನ ಆಳ್ವಿಕೆಯ ಮೂವತ್ತು ವರ್ಷಗಳು ಮಹತ್ವದ ಅದ್ಯಾಯ. ಆಡಳಿತವನ್ನು ಸುಧಾರಿಸುವುದರಲ್ಲಿ, ಸೇನೆಯನ್ನೂ ಸಜ್ಜುಗೊಳಿಸುವುದರಲ್ಲಿ ಕಲೆ ಮತ್ತು ವಾಸ್ತುಶಿಲ್ಪದಲ್ಲಿ, ಧರ್ಮ ಮತ್ತು ಸಾಹಿತ್ಯದಲ್ಲಿ ಆ ಮೂವತ್ತು ವರ್ಷಗಳ ಆಡಳಿತ ಉನ್ನತಿಯ ಶಿಖರವನ್ನು ಮುಟ್ಟಿತು. ರಾಷ್ಟ್ರಕೂಟರ ದಾಳಿಗೆ ತುತ್ತಾಗಿ ನಶಿಸಿ ಹೋಗಿದ್ದ ರಾಜ್ಯವನ್ನು ಬಲಯುತವನ್ನಾಗಿ ಮಾಡಿ, ಚೋಳರ ಪ್ರತಿಷ್ಠೆಯನ್ನು ಹೆಚ್ಚಿಸಿ, ತಮಿಳು ಪ್ರದೇಶಗಳನ್ನು ಒಂದುಗೂಡಿಸಿ ರಾಜಕೀಯ ಸಂಘಟನೆಯನ್ನು ಸಾಧಿಸಿದ ರಾಜ ರಾಜ. ಸಂಪದ್ಯುಕ್ತವಾದ ಸುವಿಸ್ತಾರವಾದ ಸಾಮ್ರಾಜ್ಯಕ್ಕೆ ಸೂಕ್ತವಾದ, ಸಮರ್ಪಕವಾದ, ದಕ್ಷತೆಯುಳ್ಳ ಆಡಳಿತ ಯಂತ್ರವನ್ನು ರೂಪಿಸಿದ. ಸಾಮ್ರಾಜ್ಯದ ರಕ್ಷಣೆಗೆ ಬೇಕಾದ ಸೇನೆಯನ್ನು ಸೇರಿಸಿ, ತನ್ನ ನಾಯಕತ್ವದಲ್ಲಿ ರಾಜ್ಯ ವಿಸ್ತರಣೆಯನ್ನೂ ಮಾಡಿದ.

ದೂರದೃಷ್ಟಿಯುಳ್ಳ ದೊರೆಯು ಉತ್ತಮ ರಾಜಕಾರಣಿಯೂ ಆದ ರಾಜರಾಜನ ಬಹುಮುಖ ವ್ಯಕ್ತಿತ್ವವನ್ನು ತೋರಿಸುವ ಚಿತ್ರವಾಗಲಿ, ವಿಗ್ರಹವಾಗಲೀ ಪ್ರವಾಸಿಯ ಬರಹವಾಗಲೀ ಸಿಕ್ಕದೆ ಇರುವುದು ದುರದೃಷ್ಟವೇ ಸರಿ.

ರಣವೀರ :

ರಾಜರಾಜನಿಗೆ “ರಾಜಕೆಸರಿ”, ಮುಮ್ಮಡಿ ಚೋಳ” ಎಂಬ ಬಿರುದುಗಳು ಇದ್ದವು. ಅವನು ರಾಜರಲ್ಲಿ ರಾಜ. ಅವನ ಕಾಲದ ತಂಜಾವೂರು ಶಾಸನ ರಾಜರಾಜರು ಕೈಗೊಂಡ ದಂಡ ಯಾತ್ರೆಗಳನ್ನು ವರ್ಣಿಸುತ್ತದೆ.  ದಕ್ಷಿಣ ದಿಕ್ಕಿಗೆ ದೃಷ್ಟಿ ಹಾಯಯಿಸಿ, ಪಾಂಡ್ಯ, ಕೇರಳ ಮತ್ತು ಸಿಂಹಳ ರಾಜರ ಒಕ್ಕೂಟವನ್ನು ಮುರಿಯುವ ಯತ್ನದಲ್ಲಿ ಯಶಸ್ವಿಯಾದ. ಶತ್ರುಗಳ ಹಡಗುಪಡೆಯನ್ನು ನಾಶಗೊಳಿಸಿದ. ಯುವರಾಜನಾದ ರಾಜೇಂದ್ರ ಚೋಳ ನೌಕಾಪಡೆಯ ನಾಯಕನನ್ನಾಗಿ ಮಾಡಿ ಲಂಕೆಯಲ್ಲಿ ರಾಜ್ಯವಾಡುತ್ತಿದ್ದ ಐದನೇ ಮಹಿಂದನ ಮೇಲೆ ಯುದ್ಧ ಮಾಡಲು ಕಳೂಃಇಸಿದ. ಯುದ್ಧದಲ್ಲಿ ಸೋತುಹೋದ ಮಹಿಂದನಿಂದ ಲಂಕೆಯ ಉತ್ತರ ಭಾಗವನ್ನು ಕಸಿದುಕೊಂಡು ಆ ಪ್ರದೇಶವನ್ನು ಚೋಳ ಸಾಮ್ರಾಜ್ಯದ ಒಂದು ಮಂಡಲವಾಗಿ ಮಾಢಿದ. ಸಿಂಹಳದ (ಈಗಿನ ಶ್ರೀಲಂಕಾ) ರಾಜಧಾನಿಯಾದ ಅನುರಾದಾಪುರವನ್ನು ಚೋಳ ಸೇನೆ ನಾಶ ಮಾಡಿದ.  ಸಿಂಹಳದ ಶಾಸನಗಳೂ, ದೇವಾಲಯಗಳು ರಾಜ ರಾಜನ ದಿಗ್ವಿಜಯದ ಸಂಕೇತವಾಗಿದೆ.  ಸಿಂಹಳದ ವಿಜಯಯಾತ್ರೆಯಿಂದ ಸ್ಪೂರ್ತಿ ಒಂದಿದ ರಾಜರಾಜ ಸುತ್ತಮುತ್ತಲಿನ ರಾಜ್ಯಗಳನ್ನು ಕಬಳಿಸುವುದಕ್ಕೆ  ಪ್ರಯತ್ನಿಸಿದ. ಅವನು ಆಕ್ರಮಿಸಿದ ಪ್ರದೇಶಗಳು-ಗಂಗಾಪಾಡಿ, ನೊಳಂಬಪಾಡಿ ಮತ್ತು ತಡಿಗೈಪಾಡಿ-ಇವೆಲ್ಲಾ ನಮ್ಮ ಕರ್ನಾಟಕಕ್ಕೆ ಸೇರಿದ ಭಾಗಗಳು. ಈಗಿನ ತುಮಕೂರು, ಚಿತ್ರದುರ್ಗ, ಬೆಂಗಳೂರು, ಕೋಲಾರ, ಮತ್ತು ಬಳ್ಳಾರಿ ಜಿಲ್ಲೆಗಳು ಚೋಳರ ವಶವಾದವು. ಹಲವರು  ರಾಜರನ್ನು ಸೋಲಿಸಿ ರಾಜರಾಜ ಬಹುವಿಸ್ತಾರವಾದ ಸಾಮ್ರಾಜ್ಯದ ಪ್ರಭುವಾದ.

ರಾಜರಾಜನ ಸಾಮ್ರಾಜ್ಯವು ಉತ್ತರದಲ್ಲಿ ತುಂಗಭದ್ರೆಯವರೆಗೆ ದಕ್ಷಿಣ ಭಾರತವನ್ನೂ, ಮಾಲ್ಡಿವ್ ದ್ವೀಪಗಳು ಮತ್ತು ಸಿಂಹಳದ ಉತ್ತರ ಭಾಗವನ್ನೂ ಒಳಗೊಂಡಿತ್ತು. ಆಂದ್ರರು ಅವನ ಸಾಮಂತರಾಗಿದ್ದರು. “ಚೋಳ ಮಾರ್ತಾಂಡ”, “ಪಾಂಡ್ಯ ಕುಲಾಸಿನಿ”, ಕೇರಳಾಂಕ”, “ಸಿಂಗಳಾಂತಕ” ಮತ್ತು “ತೆಲಿಂಗಕುಲಕಾಲ” ಮುಂತಾದ ಬಿರುದುಗಳು ರಾಜರಾಜನ ಸಾಧನೆಗಳಿಗೆ ಸಾಕ್ಷಿ.

ಸುವ್ಯವಸ್ಥೆ ಆಡಳಿತ :

ರಾಜ್ಯಗಳ ಮೇಲೆ ಆಕ್ರಮಣ ನಡೆಸಿ ಅವುಗಳನ್ನು ಗೆಲ್ಲುವುದು ರಾಜರಾಜನಿಗೆ ಮುಖ್ಯವಾಗಿರಲಿಲ್ಲ ವಶಪಡಿಸಿಕೊಂಡ ಪ್ರದೇಶಗಳಲ್ಲಿ ಆಡಳಿತವನ್ನು ವ್ಯವಸ್ಥಿತಗೊಳಿಸುವುದು, ಶಾಂತಿಯನ್ನು ಸ್ಥಾಪಿಸಿ ರಾಜ್ಯದ ಅಭಿವೃದ್ಧಿಯನ್ನು ಸಾಧಿಸುವುದು ಅವನ ಧ್ಯೇಯಗಳಾಗಿದ್ದು, ಆ ಕಾರ್ಯದಲ್ಲಿ ಯಶಸ್ವಿಯಾದ. ಅವನ ಸಾಮರ್ಥ್ಯ, ಕಾರ್ಯಶಕ್ತಿಗಳಿಗೆ ಅನೇಕ ಉದಾಹರಣೆಗಳನ್ನು ಕೊಡಬಹುದು.  ಅವುಗಳಲ್ಲಿ ಒಂದು ಇದು. ರಾಜ್ಯದಲ್ಲಿ ಭೂಮಿ ಇರುವವರಿಂದ ಕಂದಾಯ ವಸೂಲಿ  ಮಾಡುತ್ತಾರೆ.  ಅಲ್ಲವೆ? ಯಾರು ಎಷ್ಟು ಕಂದಾಯ ಕೊಡಬೇಕು ಎಂದು ನ್ಯಾಯವಾಗಿ ತೀರ್ಮಾನಿಸಲು ಯಾರಿಗೆ ಎಟು, ಎಂತಹ ಭೂಮಿ ಇದೆ ಎಂದು ತಿಳಿಯಬೇಕು. ಇಡೀ ರಾಜ್ಯದಲ್ಲಿ ಇಂತಹ ವಿಷಯ ಸಂಗ್ರಹಣೆ ನಡೆಯಬೇಕು. ಈ ರೀತಿಯ ಭೂಸಮೀಕ್ಷೆಯನ್ನು ಮೊಟ್ಟ ಮೊದಲು ನಡೆಸಲು ವ್ಯವಸ್ಥೆ ಮಾಡಿದವನು ರಾಜರಾಜ. ಭೂಕಂದಾಯವನ್ನು ಸರಿಯಾದ ರೀತಿಯಲ್ಲಿ ನಿರ್ಧರಿಸಿ, ಅದೂ ರಾಜ್ಯಕೋಶಕ್ಕೆ ಸರಿಯಾಗಿ ಸಂದಾಯವಾಗುವಂತೆ ಮಾಡಿದ. ಗ್ರಾಮ ಪಂಚಾಯಿತಿಗಳಿಗೆ  ಹೆಚ್ಚಿನ ಸ್ವಾತಂತ್ರ್ಯವನ್ನು ಕೊಟ್ಟು, ಪ್ರಜಾಸತ್ತೆಯ ತತ್ವಗಳಿಗೆ ಪುರಸ್ಕಾರ ದೊರೆಯುವಂತೆ ಮಾಡಿದ.

 

ರಾಜೇಂದ್ರ ಚಿಕ್ಕವಯಸ್ಸಿನಿಂದಲೂ ರಾಜ್ಯದ ಆಡಳಿತದಲ್ಲಿ ಭಾಗವಹಿಸುವಂತೆ ರಾಜರಾಜ ಮಾಡಿದ.

ಯುವರಾಜ ರಾಜೇಂದ್ರ:

ರಾಜೇಂದ್ರ ರಾಜನ ಒಬ್ಬನೆ ಮಗ. ರಾಜರಾಜನು ರಾಜೇಂದ್ರನ   ಯೌವನದಲ್ಲಿಯೇ ಅವರನ್ನು ಯುವರಾಜನನ್ನಾಗಿ ಮಾಡಿದ. ಚೋಳ ಸಾಮ್ರಾಜ್ಯದ ವಿಸ್ತರಣೆಯಲ್ಲಿ, ಆಡಳಿತದಲ್ಲಿ ಅವನೂ ಭಾಗವಹಿಸುವಂತೆ ಮಾಡಿದ. ಇದರಿಂದ ರಾಜೇಂದ್ರನಿಗೆ ಚಿಕ್ಕ ವಯಸ್ಸಿನಿಂದಲೂ  ಒಳ್ಳೆಯ ಅನುಭವ ಬಂದಿತು. ಇದು ಒಂದು ಸತ್ ಸಂಪ್ರದಾಯವೆಂದೇ ಹೆಳಬಹುದು.  ಈ ಪದ್ಧತಿಯಿಂದ ರಾಜಕುಮಾರನಿಗೆ ಆಡಳಿತದಲ್ಲಿ ಶಿಕ್ಷಣ ದೊರೆಯುವಂತಾಗುತ್ತಿತ್ತು.  ಯೌವ್ವನದಲ್ಲಿಯೇ ತನಗೆ ತಕ್ಕ ಅಧಿಕಾರವಿಲ್ಲ, ಕೆಲಸವಿಲ್ಲೆಂದು ಅವನಿಗೆ ಅತೃಪ್ತಿಯಾಗಲು ಅವಕಾಶವಿರುತ್ತಿರಲಿಲ್ಲ. ಯುವರಾಜನಿಗೆ ಸಾಮ್ರಾಜ್ಯದ ವಿಷಯಗಳಲ್ಲಿ ಆಸಕ್ತಿ ಹೊಂದುವಂತೆ ಆಗುತ್ತಿತ್ತು.  ಈ ಪದ್ಧತಿಯಿಂದ ರಾಜೆಂದ್ರನ ಮುಂದೆ ಚಕ್ರವರ್ತಿಯಾಗಲು, ಆಡಳಿತವನ್ನು ಸೂಸೂತ್ರವಾಗಿ , ಸುಲಭವಾಗಿ ನಡೆಸಲು ಸಾಧ್ಯವಾಯಿತು. ಮುಂದೆ ರಾಜೆಂದ್ರ ಚೋಳರು ಈ ಒಳ್ಳೆಯ ಪದ್ಧತಿಯನ್ನು ಅನುಸರಿಸಿದ. ತಾನು ರಾಜನಾಗಿ ಆರು ವರ್ಷಗಳಲ್ಲಿಯೇ ತನ್ನ ಮಗನಿಗೆ ಆಡಳಿದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಿಕೊಟ್ಟ.

ಧಾರ್ಮಿಕ ವಿಚಾರಗಳಲ್ಲಿ ರಾಜರಾಜ ಹೆಚ್ಚಿನ ಆಸಕ್ತಿಯನ್ನು ವಹಿಸಿದ್ದ. ಶಿವನ ಆರಾಧನೆಯಲ್ಲಿ ಶ್ರದ್ಧೆವಹಿಸಿ “ಶಿವ ಪಾದಶೇಖರ” ಎನೆನಿಸಿಕೊಂಡ. ೧೦೧೦ರಲ್ಲಿ ತಂಜಾವೂರಿನಲ್ಲಿ ಕಟ್ಟಿಸಿದ ರಾಜರಾಜೇಶ್ವರ ದೇವಾಲಯ ತಮಿಳುನಾಡಿನ ದೇವಾಲಯಗಳಲ್ಲೆಲ್ಲಾ ವೈಭವಯುತ ಸುಂದರ ಪೂರ್ಣವೆಂದು ಪರಿಗಣಿಲಸ್ಪಟ್ಟಿದೆ.  ಶಿವಭಕ್ತನಾದರೂ ರಾಜರಾಜ ಪರಮತ ಸಹಿಷ್ಣುವಾಗಿದ್ದ. ಬೃಹದೇಶ್ವರ ದೇವಾಲಯದಲ್ಲಿಯೇ ಬೌದ್ಧ ಶಿಲ್ಪಗಳನ್ನು ಕಾಣುತ್ತೇವೆ. ಅವನ ಕಾಲದಲ್ಲಿ ವಿಷ್ಣುದೇವಾಲಯಗಳು ಕಟ್ಟಲ್ಪಟ್ಟವು. ಮಲಯದ ಸೈಲೇಂದ್ರ ರಾಜರು ಚೋಳ ರಾಜ್ಯದ ನಾಗಪಟ್ಟಣದಲ್ಲಿ ಚೂಡಾಮಣಿ ವಿಹಾರವೆಂಬ ಬೌದ್ಧ ಸಂಘವನ್ನು ಸ್ಥಾಪಿಸಿದರು. ರಾಜರಾಜ ಅದರ ಖರ್ಚಿಗಾಗಿ ಒಂದು ಗ್ರಾಮದ ಆದಾಯವನ್ನೇ ಕೊಟ್ಟಿದನಂತೆ.

ತಂದೆ ತಕ್ಕ ಮಗ-ರಾಜೇಂದ್ರ. ರಾಜರಾಜನ ಏಕೈಕ ಪುತ್ರನಾದ ಮೊದಲನೆ ರಾಜೇಂದ್ರ ತಂದೆಯೆಂತೆ ಅಪ್ರತಿಮ ವೀರಾಗ್ರಣಿ: ಆಡಳಿತಗಾರ. ತನ್ನ ಆಳ್ವಿಕೆಯ ಮೂವತ್ತಮೂರು ವರ್ಷಗಳಲ್ಲಿ ರಾಜೇಂದ್ರ ಚೋಳ ಸಾಮ್ರಾಜ್ಯದ ವಿಸ್ತರಣೆಗೆ, ಆಡಳಿತ ಸುಧಾರಣೆಗೆ, ರಾಜ್ಯದ ಪ್ರಗತಿ ಎಡೆಬಿಡದೆ ದುಡಿದ.  ತನ್ನ ಜೀವನವನ್ನೇ ಮುಡಿಪಾಗಿಟ್ಟ. ಚಿರವಾದ, ಸ್ಥಿರವಾದ ಆಸ್ತಿ ಭಾರವನ್ನು ಹಾಕಿದ್ದ- ತಂದೆ ರಾಜರಾಜ. ಆ ಅಡಿಪಾಯದ ಮೇಲೆ ಭವ್ಯವಾದ ಸೌಧವನ್ನು ಕಟ್ಟಿದ ರಾಜೇಂದ್ರ.

ಮೊದಲನೆಯ ರಾಜೇಂದ್ರನ ಆಳ್ವಿಕೆಯ ಕಾಲ ೧೦೧೨ರಿಂದ ೧೦೪೪ರವರೆಗೆ. ಅವನ ತಂದೆ ರಾಜರಾಜ ತನ್ನ ಕೊನೆಯ ಕಾಲದಲ್ಲಿ ೧೦೧೨ರಲ್ಲಿಯೇ ರಾಜೇಂದ್ರನನ್ನು ತನ್ನ ಉತ್ತರಾಧಿಕಾರಿಯೆಂದು ಘೊಷಿಸಿ, ಸಾಮ್ರಾಜ್ಯದ ಆಡಳಿತದಲ್ಲಿ ಪಾಲುಗೊಳ್ಳುವಂತೆ ಮಾಡಿ, ಎಳೆಯ ವಯಸ್ಸಿನಲ್ಲಿಯೇ ರಾಜೇಂದ್ರ ತನ್ನ ಜವಾಬ್ದಾರಿಯನ್ನು ಅರಿಯುವಂತೆ ಮಾಡಿದ. ಇದನ್ನೇ ಅನುಸರಿಸಿ, ರಾಜೇಂದ್ರ ತನ್ನ ಮಗ ರಾಜಾಧಿರಾಜನನ್ನು ೧೦೧೮ರಲ್ಲಿಯೇ ತನ್ನ ಜೊತೆಗೆ ಸಾಮ್ರಾಜ್ಯದ ಆಡಳಿತದ ಜವಾಬ್ದಾರಿ ಹೊಂದುವಂತೆ ಮಾಡಿದ.

ತಂದೆಗೆ ತಕ್ಕ ಮಗ :

ರಾಜೇಂದ್ರನ ಸಾಹಸಮಯ ಸಾಧನೆಯನ್ನೂ ಆಡಳಿತ ವೀಚಕ್ಷಣೆಯನ್ನೂ ಅವನ ಕಾಲದ ಶಾಸನಗಳಿಂದ ತಿಳಿಯಬಹುದು. ಅಷ್ಟೇ ಅಲ್ಲ, ರಾಜೇಂದ್ರನ ಸಮಕಾಲಿನ ದೊರೆಯಾದ ಪಶ್ಚಿಮ ಚಾಲುಕ್ಯೆ ಎರಡನೆಯ ಜಯಸಿಂಹನ ಕಾಲದ ಶಾಸನಗಳಿಂದ ಚೋಳ- ಚಾಲುಕ್ಯರ ಯುದ್ಧಗಳ ವಿವರಣೆಯನ್ನು ತಿಳಿಯಬಹುದು. ರಾಜೇಂದ್ರ ಕಟ್ಟಿಸಿದ ಗಂಗೈಕೊಂಡಚೋಳಪುರಂ, ಮತ್ತು ಗಂಗೈಕೊಂಡ ಚೋಳೇಶ್ವರ ದೇವಾಲಯ, ನಿರ್ಮಿಸಿ, ಅವನ ಶಾಂತಿಕಾಲದ ಸಾಧನೆಗಳನ್ನು  ಸೂಚಿಸುತ್ತವೆ. ಅವನ ಕಾಲದ ನಾಣ್ಯಗಳು ಮತ್ತು ಸಾಹಿತ್ಯ ಸಾಮ್ರಾಜ್ಯದ  ಆರ್ಥಿಕ ಸಾಮಾಜಿಕ  ಮತ್ತು ಧಾರ್ಮಿಕ ಸ್ಥಿತಿಗತಿಗಳ ಬಗ್ಗೆ ವಿವರವನ್ನ ಒದಗಿಸುತ್ತವೆ.

ತಂದೆ ಕಷ್ಟಪಟ್ಟು ಕಟ್ಟಿದ ವಿಸ್ತಾರವಾದ ಸಾಮ್ರಾಜ್ಯದ ಆಡಳಿತವನ್ನು ತಾರುಣ್ಯದಲ್ಲಿಯೇ ವಹಿಸಿಕೊಂಡ ರಾಜೇಂದ್ರ. ಪಟ್ಟಾಭಿಷೀಕ್ತನಾದಾಗ, ಸಾಮ್ರಾಜ್ಯದಲ್ಲಿ ದಕ್ಷ ಆಡಳಿತವಿತ್ತು ಸುಖ, ಸಂಪತ್ತು ಮತ್ತು ಶಾಂತಿ ನೆಲೆಸಿತ್ತು. ವ್ಯಾಪಾರ, ವಾಣೀಜ್ಯ ವೃದ್ಧಿ ಹೊಂದಿದ್ದವು. ಚೊಳ ಸಾಮ್ರಾಜ್ಯದ ಗಡಿಗಳನ್ನು ನೋಡಿಕೊಳ್ಳಲು ಚೋಳರ ಸೇನೆ ಸದಾ ಸಿದ್ಧವಿತ್ತು. ಶ್ರೀಲಂಕಾ ಮತ್ತು ಇತರೆ ದ್ವೀಪಗಳ ಮೇಲೆ ಹತೋಟಿ ಇಡಲು ಬಲವಾದ ನೌಕಾಪಡೆಯಿತ್ತು. ಪ್ರಜೆಗಳಿಗೆ ನಾಗರಿಕ ಹಕ್ಕುಗಳಿದ್ದವು.

ಇಂತಹ ಸುಭದ್ರ ಹಾಗೂ ಸಂಘಟಿತವಾದ ಸಾಮ್ರಾಜ್ಯವನ್ನು ಇಮ್ಮಡಿಗೊಳಿಸಿ, ಅತ್ಯುತ್ತಮ ಹಿಂದೂ ರಾಜ್ಯವನ್ನಾಗಿ ಪರಿವರ್ತಿಸಿದ ಕೀರ್ತಿ ರಾಜೇಂದ್ರನದು.  ಅಳ್ವಿಕೆಯ ಆರಂಭದಲ್ಲಿಯೇ ತನ್ನ ಮಗ ರಾಜಧಿರಾಜನನ್ನು ತನ್ನ ಸಾಧನೆಯಲ್ಲಿ ಸಮಭಾಗಿಯನ್ನಾಗಿ ಮಾಡಿ, ಅವನ ಶೌರ್ಯ ಸಾಹಸಗಳ ಬೆಂಬಲದಿಂದ ಅನೇಕ ರಾಜ್ಯಗಳನ್ನು ಗೆದ್ದು ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಸುಮಾರು ಇಪ್ಪತ್ತೈದು ವರ್ಷಗಳ ಕಾಲ ತಂದೆಯ ಜೊತೆಯಲ್ಲಿ ಯುವರಾಜ ರಾಜಾಧಿರಾಜ ರಾಜ್ಯಗಳನ್ನು ಮಾತ್ರವಲ್ಲದೆ, ಆಡಳಿತದಲ್ಲಿಯೂ ಸಹ ಹೆಚ್ಚಿನ ಪರಿಶ್ರಮ ಪಡೆಯಲು ಸಾಧ್ಯವಾಯಿತು. ಚೋಳ ರಾಜಪುತ್ರರಿಗೆ ಸಾಮ್ರಾಜ್ಯದ ವಿವಿಧ ಪ್ರಾಂತಗಳಲ್ಲಿ ಪ್ರತಿನಿಧಿಗಳಾಗಿ ಅಧಿಕಾರ ಕೊಟ್ಟು ಅವರು ದೇಶಾಭಿವೃದ್ಧಿಗೆ ಸಹಕಾರಿಯಾಗುವ ಹೊಸ ಪ್ರಯೋಗ ಮಾಡಿ, ಆ ಕ್ಷೇತ್ರದಲ್ಲಿ ರಾಜೇಂದ್ರ ಯಶಸ್ವಿಯಾದ.

ದಿಗ್ವಿಜಯ :

ರಾಜೇಂದ್ರನಿದ್ದ ಕಾಲದಲ್ಲಿ ಯುದ್ಧವು ಅನಿವಾರ್ಯವಾಗಿತ್ತು. ಏಕೆಂದರೆ ವಶಪಡಿಸಿಕೊಂಡ ಪ್ರದೇಶದಲ್ಲಿ ರಾಜ್ಯವನ್ನು ಕಳೆದುಕೊಂಡ ರಾಜರು ಸ್ವಾತಂತ್ರ್ಯವನ್ನು ಹೊಂದಲು ಹವಣಿಸುತ್ತಿದ್ದರು. ಅಲ್ಲದೇಸುತ್ತುಮುತ್ತಲಿನ ರಾಜರು – ಅದರಲ್ಲಿಯೂ ಪಶ್ಚಿಮ ಚಾಲುಕ್ಯರು – ತಮ್ಮ ಹಳೆಯ ಹಗೆತನವನ್ನು ಮುಂದುವರೆಸಲು ಕಾತರರಾಗಿದ್ದರು. ಅನೇಕ ಪಾಳೆಯಗಾರರಿಗೆ ಚೋಳರ ಸಾಮಂತರಾಅಗಿರಲು ಇಷ್ಠವಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ರಾಜೇಂದ್ರ ಯುದ್ಧ ಮಾಡಲೇಬೇಕಾಯಿತು. ಇದರೊಂದಿಗೆ ರಾಜೇಂದ್ರ, ಚೋಳರ ಸಾಮ್ರಾಜ್ಯ ನೀತಿಯನ್ನು ಅದರಲ್ಲಿಯೂ ತಂದೆ ರಾಜರಾಜ ಕೈಗೊಂಡ ದಿಗ್ವಿಜಯ ಧೋರಣೆಯನ್ನು ಮುಂದುವರೆಸುವ ಉದ್ದೇಶವನ್ನು ಹೊಂದಿದ್ದ. ಆದ್ದರಿಂದ ನೆಮ್ಮದಿಯ ಸಾಮ್ರಾಜ್ಯವನ್ನು ಪಡೆದಿದ್ದರೂ ದಂಡ ಯಾತ್ರೆಯನ್ನೂ ಕೈಗೊಳ್ಳಲೇಬೇಕಾಯಿತು.

ರಾಜೇಂದ್ರನ ಕಾಲದ ಶಾಸನಗಳೂ ದಂಡಯಾತ್ರೆಯ ಪಟ್ಟಿಯನ್ನೇ ಕೊಡುತ್ತವೆ. ರಾಜೇಂದ್ರ ಕೈಗೊಂಡ ದಂಡಯಾತ್ರೆ, ದಿಗ್ವಿಜಯ, ನಡೆಸಿದ ಕದನಗಳು, ಗಳಿಸಿದ ವಿಜಯದ ವಿವರ, ರಾಜ್ಯಗಳನ್ನು ವಶಪಡಿಸಿಕೊಂಡ ರೀತಿಯನ್ನು ವರ್ಣಿಸುತ್ತವೆ. ಈ ವಿವರಣೆಯಲ್ಲಿ ಉತ್ಪ್ರೇಕ್ಷಯ ಶ್ರೂತಿಯಿದ್ದರೂ ಬಹುಪಾಲು ಸತ್ಯಾಂಶವಿದೆ.

ರಾಜೇಂದ್ರನ ಶಾಸನವೊಂದು ಸಾರುತ್ತದೆ- ಪರಾಕೇಸರಿವರ್ಮನಾದ ಶ್ರೀರಾಜೇಂದ್ರ ಚೋಳದೇವನು ತನ್ನ ಶೂರ ಸೇನೆಯ ಸಹಾಯದಿಂದ ಇಡು ತೋರೈನಾಡು, ಬನವಾಸಿ ಕೊಲ್ಲಿಪಾಕೈ, ಮಾಸೈಕಡಕಂ, ಇಲಾಂ ದೊರೆಯ ಬಳಿ ಒತ್ತೆ ಇಟ್ಟಿದ ಸುಂದರ ಕಿರಿಟ, ಮತ್ತು ಕಂಠಹಾರ, ಪೂರ್ಣ ಇಲಾಮಂಡಲ, ಅನೇಕ ದ್ವೀಪಗಳು, ಇರರಠಪಾಡಿ, ಚಂದ್ರವಂಶಕ್ಕೆ ಸೇರಿದ ಇಂದ್ರ ರಥ, ಒಡ್ಡ ವಿಷಯ, ವಂಗಾಲ ದೇಶಗಳನ್ನು ಗೆದ್ದನಂತೆ.  ಈ ಪಟ್ಟಿಯ ಸಾರಾಂಶವಿಷ್ಟು. ನಮ್ಮ ಕರ್ನಾಟಕದ ಪ್ರದೇಶಗಳಾದ ರಾಯಚೂರು, ಬನವಾಸಿ, ಆಂದ್ರಪ್ರದೇಶ ಕೆಲವು ಭಾಗಗಳು (ಈಗಿನ) ಶ್ರೀಲಂಕಾ, ಮಾಲ್ಡೀವ್ ದ್ವೀಪಗಳು, ಎರಡನೇ ಜಯಸಿಂಹನಿಗೆ ಸೇರಿದ ಪಶ್ಚಿಮ ಚಾಲುಕ್ಯರ ದೇಶ, ಒರಿಸ್ಸಾ ಮಹಾನದಿ ತೀರದ ಕೋಸಲನಾಡು, ಬಂಗಾಳ ಮತ್ತು ಬಿಹಾರ ರಾಜ್ಯಗಳನ್ನು ಸೋಲಿಸಿ, ಆ ಪ್ರದೇಶಗಳನ್ನು ವಶಪಡಿಸಿಕೊಂಡ.

 

ದೇಶದ ಪ್ರಗತಿ ಹಾಗೂ ಸಾಮ್ರಾಜ್ಯದ ವಿಸ್ತರಣೆ ಮಾಡಿದ ರಾಜೇಂದ್ರ ಚೋಳ

ರಾಜೇಂದ್ರನ ಶಾಸನಗಳು ಕರ್ನಾಟಕದ ಹಲವಾರು ಸ್ಥಳಗಳಲ್ಲಿ ಸಿಕ್ಕಿವೆ. ತಲಕಾಡು, ನಂಜನಗೂಡು, ಸುತ್ತೂರು, ನೆಲಮಂಗಲ, ಕೋಲಾರ ಇವುಗಳಲ್ಲಿ ಅವರ ಶಾಸನಗಳು ದೊರೆತಿರುವುದರಿಂದ ಈ ಪ್ರದೇಶ ರಾಜೇಂದ್ರನ ವಶದಲ್ಲಿತ್ತೆಂದು ಊಹಿಸಬಹುದು.

ರಾಜರಾಜನ ಕಾಲದಲ್ಲಿ ಈಗಿನ ಶ್ರೀಲಂಕಾದ ಉತ್ತರ ಭಾಗ ಚೋಳ ಸಾಮ್ರಜ್ಯದ ಪ್ರಾಂತವಾಗಿತ್ತು. ರಾಜೇಂದ್ರ ಸಿಂಹಳ (ಶ್ರೀಲಂಕಾ)ದ ದಂಡಯಾತ್ರೆಯನ್ನು ಮುಂದುವರೆಸಿ ೧೦೧೮ರಲ್ಲಿ, ಅಲ್ಲಿನ ದೊರೆ ಮಹೇಂದ್ರನನ್ನು ಭೀಕರ ಯುದ್ಧದಲ್ಲಿ ಸೋಲಿಸಿದ. ಮಹೇಂದ್ರ ತನ್ನರಾಣಿ, ಐಶ್ವರ್ಯ ಮತ್ತು ಕಿರೀಟಗಳನ್ನುಕಳೆದುಕೊಂಡು ರಾಜೇಂದ್ರನಿಗೆ ಶರಣಾಗತನಾದ.ಸಿಂಹಳ ಚೋಳಸಾಮ್ರಾಜ್ಯದಲ್ಲಿ ವಿಲೀನವಾಯಿತು. ಅದೊಂದು ಸಾಮ್ರಾಜ್ಯದ ಪ್ರಾಂತವಾಯಿತು. ಚೋಳರು ಅಲ್ಲಿ ನೆಲೆಸಿದರು. ಶಿವ ಮತ್ತ ವಿಷ್ಣು ದೇವಾಲಯಗಳು ನಿರ್ಮಿತವಾದವು. ಅದೇ ವರ್ಷದಲ್ಲಿಕ ಪಾಂಡ್ಯ ರಾಜನ ಮೇಲೆ ಯುದ್ಧ . ಸೂರ್ಯವಂಶ ಲಲಾಮ ರಾಜೇಂದ್ರ ಪಾಂಡ್ಯ ರಾಜನನನ್ನು ಸೋಲಿಸಿದನೆಂದು ಅಲ್ಲಿನ ರಾಜ ಅಗಸ್ತ್ಯರ ವಾಸಸ್ತಳವಾದ  ಮಲಯ ಪರ್ವತಕ್ಕೆ ಓಡಿಹೋದನೆಂದೂ ಶಾಸನ ತಿಳಿಸುತ್ತದೆ. ತನ್ನ ಮಗನನ್ನು ಮಧುರೆಯಲ್ಲಿ ರಾಜಪ್ರತಿನಿಧಿಯಾಗಿ ನೇಮಿಸಿದನು ರಾಜೇಂದ್ರ. ಕೇರಳ ರಾಜ್ಯ ರಾಜೇಂದ್ರನ ವಶವಾಯಿತು.

ಮುಂದಿನ ದಂಡಯಾತ್ರೆಯ ಪಶ್ಚಿಮ ಚಾಲುಕ್ಯರ ಮೇಲೆ ೧೦೨೧-೨೨ರಲ್ಲಿ , ಚೋಳ-ಚಾಲುಕ್ಯರ ಸಂಬಂಧ ಎಣ್ಣೆ-ಸೀಗಿಕಾಯಿ ಸಂಬಂಧ ಇದ್ದ ಹಗೆ ಹಳೆಯ ಹಗೆತನ. ರಾಜರಾಜನ ಕಾಲದಿಂದ ಬಂದಿದ್ದು. ಚೋಳ ರ ಲಾಂಛನ ವ್ಯಾಘ್ರ: ಹುಲಿಯ ಗುಣಗಳನ್ನೇ ಕಾಣುತ್ತೇವೆ;  ಚೋಳರ ಸೇನೆಯಲ್ಲಿ. ಪಶ್ಚಿಮ ಚಾಲುಕ್ಯರ ದೊರೆ ಎರಡನೇ ಜಯಸಿಂಹ ರಾಜೇಂದ್ರ ನ ಸಮಕಾಲೀನ, ಸರಿಸಮಾನ ದೊರೆ. ಕಳೆದುಕೊಂಡ ಪ್ರದೇಶಗಳನ್ನು ಸಂಪಾದಿಸಲು ಸಿದ್ಧನಾದ ಧೀರ. ೧೦೧೫ರಿಂದ ೧೦೪೩ರ ವರೆಗೆ ಚಾಲುಕ್ಯರ ಪ್ರಭುವಾಗಿದ್ದ. ಇವನಿಗೆ ಅನೇಕ ಬಿರುದುಗಳು- ಜಗದೇಕಮಲ್ಲ, ತ್ರೈಲೋಕಮಲ್ಲ, ವಿಕ್ರಮಸಿಂಹ ಮುಂತಾದವುಗಳಿದ್ದವು. ೧೦೧೯ರಲ್ಲಿ ರಾಜೇಂದ್ರ ಕಾಲಚೂರಿ ದೊರೆ ಮತ್ತು ಪರಮಾರರ ಭೋಜ-ಇವರನ್ನು ಒಕ್ಕೂಟದಲ್ಲಿ ಸೇರಿಸಿಕೊಂಡು ಚಾಲುಕ್ಯರ ರಾಜ್ಯದ ಮೇಲೆ ನುಗ್ಗಿದ. ಆದರೆ ರಾಜೆಂದ್ರ ಸೋಲನ್ನು ಅನುಭವಿಸಬೇಕಾಯಿತು-ಜಯಸಿಂಹನಿಂದ. ಸೇಡನ್ನು ತೀರಿಸಿಕೊಳ್ಳಬೇಕೆಂದು ಹವಣಿಸುತ್ತಿದ್ದ ರಾಜೆಂದ್ರ ಮುಸಂಗಿ (ಆಂಧ್ರಪ್ರದೇಶದ ಮಾಸ್ಕಿ) ಯುದ್ಧದಲ್ಲಿ ಜಯಸಿಂಹನನ್ನು ಸೋಲಿಸಿದ  ಎಂದು ಒಂದುಶಾಸನ ಹೇಳುತದೆ. ಆದರೆ ಇದನ್ನು ಒಪ್ಪುವಂತಿಲ್ಲ.

ರಾಜೇಂದ್ರ ತನ್ನ ದೃಷ್ಟಿಯನ್ನು ಪೂರ್ವ ಚಾಲುಕ್ಯರ ರಾಜ್ಯದ ಕಡೆಗೆ ತಿರುಗಿಸಿದ. ಚೋಳ ಸೇನೆಯು ದಂಡನಾಯಕನ ನೇತೃತ್ವದಲ್ಲಿ ಪೂರ್ವ ದಿಕ್ಕಿನ ದಂಡಯಾತ್ರೆಯನ್ನು ಕೈಗೊಂಡಿತು. ಅಲ್ಲಿನ ಚಾಲುಕ್ಯರನ್ನುಸೋಲಿಸಿ, ಚೋಳ ಸೇನೆ ಒರಿಸ್ಸಾ ಮತ್ತು ಬಂಗಾಳದ ಕಡೆ ನುಗ್ಗಿತು. ರಾಜೇಂದ್ರನ ದಂಡಯಾತ್ರೆಗಳಲ್ಲಿ ಇದು ಮುಖ್ಯ ಹಂತವೆನ್ನಬಹುದು.  ವಿಜಯೋತ್ಸಾಹದಿಂದ ಚೋಳರ ಸೇನೆ ಕಳಿಂಗ ರಾಜ್ಯದ ಮೂಲಕ ಪಶ್ಚಿಮ ಬಂಗಾಳವನ್ನು ಸೇರಿ, ಅಲ್ಲಿನ ಇಬ್ಬರು ರಾಜರನ್ನು ಸೋಳಿಸಿ, ಗಂಗಾನದಿಯನ್ನು ದಾಟಿ, ದಡದಾಚೆಯ ರಾಜರನ್ನು ಸೋಲಿಸಿತು. ಹಿಂತಿರುಗಿಬರುವಾಗ ಮಹಿಪಾಲನನ್ನು ಪರಾಜಿತಗೊಳಿಸಿ. ಜಯಪ್ರದವಾಗಿ ಸ್ವದೆಶಕ್ಕೆ ನಡೆಯಿತು.

ಈ ಗಂಗಾ ದಂಡಯಾತ್ರೆಯಿಂದ ಚೋಳ ಸಾಮ್ರಾಜ್ಯದ ವಿಸ್ತರಣೆಯೇ ಆಗಲಿಲ್ಲ. ಹಾಗಾದರೆ ಇದರಿಂದ ರಾಜೇಂದ್ರ ಸಾಧಿಸಿದ್ದೇನು? ಆ ಪ್ರಶ್ನೆಗೆ ಉತ್ತರವಿಷ್ಟು:  ಉತ್ತರ ಭಾರತದ ದೊರೆಗಳಲ್ಲಿ ತನ್ನ ಸಾಮ್ರಾಜ್ಯದ ಪ್ರತಿಷ್ಠೆಯ ಮತ್ತು ತನ್ನ ಶಕ್ತಿ, ಪರಾಕ್ರಮದ ಅರಿವುಂಟು ಮಾಡಿದ; ಅಲ್ಲದೇ ಕರ್ನಾಟಕದ ಕೆಲವು ಪಾಳೆಯಗಾರರು ಬಂಗಾಳಕ್ಕೆ ಹೋಗಿ ಅಲ್ಲಿ ನೆಲೆಸಿದ್ದರು. ಇವರೇ ಬಂಗಾಳದ ಸೇನ ರಾಜಸಂತತಿಯ ಮೂಲಸ್ಥರಾದರು. ರಾಜೇಂದ್ರ ಬಂಗಾಳದ ಶೈವ ಪ್ರಮುಖರನ್ನು ತನ್ನ ರಾಜ್ಯಕ್ಕೆ ಬರಮಾಡಿಕೊಂಡು ಅವನ ಕಾಂಚಿಪುರದಲ್ಲಿ ವಾಸಿಸುವುದಕ್ಕೆ ಸೌಕರ್ಯಗಳನ್ನು ಕಲ್ಪಿಸಿದನಂತೆ.

ಉತ್ತರ ಭಾರತದ ದಿಗ್ವಿಜಯ ಯಾತ್ರೆಯ ಸಂಕೇತವಗಿ, ಗಂಗೈ ಕೊಂಡಚೋಳನಾದ ರಾಜೇಂದ್ರ. ಈ ವಿಜಯ ಯಾತರೆಯ ಸ್ಮಾರಕವಾಗಿ ಗಂಗೈ ಕೊಂಡಚೋಳಪುರಂ ಎಂಬ ಹೊಸ ರಾಜಧಾನಿಯನ್ನು ಕಟ್ಟಿಸಿದ. ತಂಜಾವೂರಿನಿಂದ ಈ ಹೊಸ ಪಟ್ಟಣಕ್ಕೆ ರಾಜಧಾನಿಯನ್ನು ವರ್ಗಾಯಿಸಿದ. ಸಾಮ್ರಾಜ್ಯದ ಆಡಳಿತವನ್ನು ನೂತನ ರಾಜಧಾನಿಯಿಂದ ಪ್ರಾರಂಭಿಸಿದ -ರಾಜೇಂದ್ರ.

ಕಡಲಾಚೆಗೆ :

ರಾಜೇಂದ್ರ ದೀರ್ಘ ದಂಡಯಾತ್ರೆಯ ಕೊನೆಯ ಅಂಕ ದಂಡಯಾತ್ರೆ. ರಾಜೇಂದ್ರನ ಸಾಧನೆಗೆ ಕಲಶಪ್ರಾಯವಾಯಿತು ಈ ಯಾತ್ರೆ. ಭಾರತದಲ್ಲಿ ಚೋಳ ಸಾಮ್ರಾಜ್ಯ ಸ್ಥಾನಮಾನವನ್ನು ಹೆಚ್ಚಿಸಿ, ಉತ್ತರ ಭಾರತದ ರಾಜರಿಂದ ಮನ್ನಣೆ ಪಡೆದು, ತನ್ನ ಸಾರ್ವಭೌಮತ್ವವನ್ನು ದಕ್ಷಿಣ  ಭಾರತದಲ್ಲಿ ಸ್ಥಾಪಿಸಿ ಕಡಲಾಚೆಯ ದೇಶದ ಕಡೆ ದೃಷ್ಟಿ ಹಾಯಿಸಿದ ರಾಜೇಂಧ್ರ, ಚೋಳರ ಕೀರ್ತಿಪತಾಕೆಯನ್ನು ಹಾರಿಸಲು, ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಲು, ಸಮುದ್ರದಾಚೆಯ ದಂಡಯಾತ್ರೆಯನ್ನು ಕೈಗೊಂಡ. ಚೋಳ ನೌಕಾಬಲದ ಬೆಂಬಲದಿಂದ ಸಮುದ್ರವನ್ನು ದಾಟಿ, ಕಡಾರಂ (ಮಲಯ ಪಯಾರ್ಯಯ ದ್ವೀಪ) ದೊರೆ ಸಂಗ್ರಾಮ ವಿಜಯೋತ್ತುಂಗವರ್ಮನನ್ನು ಸೋಲಿಸಿ ಸರೆಹಿಡಿದು, ಆ ರಾಜ್ಯದ ಸಂಪತ್ತನ್ನು ಸೊರೆಗೊಂಡನೆಂದು ತಮಿಳೂ ಶಾಸನವೊಂದು ತಿಳಿಸುತ್ತದೆ.  ರಾಜೇಂದ್ರನ ದಂಡನಾಯಕರು ಮೊದಲು ಶ್ರೀವಿಜಯ ರಾಜ್ಯವನ್ನೂ (ಸುಮಾತ್ರದಲ್ಲಿನರಾಜ್ಯ) ಅನಂತರ ಕಡಾರಂ (ಸಂಸ್ಕೃತ ಸಾಹಿತ್ಯದ ಕಟಾಹ) – ಈಗಿನ ಮಲಯಂ ರಾಜ್ಯಗಳನ್ನು ಗೆದ್ದರು.

ಶ್ರೀವಿಜಯದ ಸೈಲೇಂದ್ರ ರಾಜರು ಚೋಳಸಾಮ್ರಾಜ್ಯದೊಡನೆ ಸ್ನೇಹ ಸಂಬಂಧವನ್ನು ಹೊಂದಿದ್ದರು. ರಾಜರಾಜನ ಕಾಲದಲ್ಲಿ ಬೌದ್ಧ ವಿಹಾರವನ್ನು ಚೋಳ ರಾಜ್ಯದ ನಾಗಪಟ್ಟಣದಲ್ಲಿ ಕಟ್ಟಿಸಿದನು. ಅವನೊಡನೆ ನಿಟಕ ಸಂಪರ್ಕವನ್ನು ಹೊಂದಿದ್ದರು. ಇಷ್ಟಾದರೂ ರಾಜೇಂದ್ರ ಈ ವಿದೇಶಿ ದಂಡಯಾತ್ರೆಯನ್ನು ಏಕೆ ಕೈಗೊಂಡನೆಂಬುವುದು ಬಿಡಿಸಲಾರದ ಸಮಸ್ಯೆಯಾಗಿಯೇ ಉಳಿದಿದೆ. ಶಾಸನಗಳಲ್ಲಿ ಹೆಸರಿಸಿರುವ ರಾಜ್ಯಗಳನ್ನು ತನ್ನ ಸಾಮ್ರಾಜ್ಯದ ಪ್ರಾಂತ್ಯಗಳನ್ನಾಗಿ ಪರಿವರ್ತಿಸುವ ಉದ್ದೇಶವೇನೂ ಇರಲಿಲ್ಲ ರಾಜೇಂದ್ರನಿಗೆ. ಪ್ರಾಯಶಃ  ಈ ಕಡಾರಂ ದಂಡಯಾತ್ರೆಯ ಕೊನೆಯ ಹಂತ. ಸೈಲೇಂದ್ರ ಸಾಮ್ರಾಜ್ಯಕ್ಕೆ ತನ್ನ ಸಾಮ್ರಾಜ್ಯದ ನೌಕಾಬಲದ ಪ್ರತಿಷ್ಠೆಯನ್ನು ಪ್ರದರ್ಶಿಸುವುದು ರಾಜೇಂದ್ರನ ಗುರಿಯಾಗಿರಬಹುದು.  ಈ ದಂಡಯಾತ್ರೆಯಿಂದ ಬಂಗಾಳ ಕೊಲ್ಲಿ ಚೋಳ ಸರೋವರವಾಯಿತು. ಅದೂ ಅಲ್ಲದೇ ಭಾರತ ಮತ್ತು ಪೂರ್ವ ರಾಜ್ಯಗಳಲ್ಲಿನ ವ್ಯಾಪಾರ-ವಾಣೀಜ್ಯ ತನ್ನ ಹತೋಟಿಯಲ್ಲಿಟ್ಟುಕೊಂಡಿರುವುದೇ ಈ ದಂಡಯಾತ್ರೆಯ ಉದ್ದೇಶವಾಗಿರಬಹುದು. ಈ ದಂಡಯಾತ್ರೆಯ  ಪರಿಣಾಮವೇನೇ ಆದರೂ, ಇಷ್ಟು ಮಾತ್ರ ನಿಜ: ಇದರಿಂದ ಚೋಳ ಸಾಮ್ರಾಜ್ಯದ ಗೌರವ, ಪ್ರತಿಷ್ಠೆಗಳು ಹೆಚ್ಚಿದವು. ರಾಜೇಂದ್ರನ ಕೀರ್ತಿ ವಿದೇಶಗಳಲ್ಲಿಯೂ ಹಬ್ಬಿತು. ಈ ವಿದೆಶಿ ದಂಡಯಾತ್ರೆ ರಾಜೇಂದ್ರನ ಕೀರ್ತಿ ವಿದೇಶಗಳಲ್ಲಿಯೂ ಹಬ್ಬಿತು. ಈ ವಿದೆಶಿ ದಂಡಯಾತ್ರೆ ರಾಜೇಂದ್ರನ ದೀರ್ಘ ದಿಗ್ವಿಜಯ ಯಾತ್ರೆಗಳ ಪರಿಸಮಾಪ್ತಿ.

ಆಳ್ವಿಕೆಯ ಪ್ರಾರಂಭದಿಂದಲೂ  ಆರಂಭಿಸಿದ ಸತತವಾದ ಯುದ್ಧಗಳ ಸರಣಿ ಸುಮಾರು ೧೫ ವರ್ಷಗಳ ಕಾಲ  ನಡೆಯಿತು. ೧೦೨೫ರ ವೇಳೆಗೆ ಯುದ್ಧ ಯಾತ್ರೆ ಕೊನೆಗೊಂಡಿತು.

ಆದರೂ, ರಾಜೇಂದ್ರ ಯುದ್ಧದಿಂದ ವಿಮುಕ್ತನಾಗಲು ಸಾಧ್ಯವಾಗಲಿಲ್ಲ. ೧೦೨೯ರಲ್ಲಿ ಸಿಂಹಳದಲ್ಲಿಸ್ವಾತಂತ್ರ್ಯ ಯುದ್ಧ ಪ್ರಾರಂಭವಾಯಿತು. ಅಲ್ಲದೇ ಪಾಂಡ್ಯ ಮತ್ತು ಚೇರ ಪ್ರದೇಶಗಳಲ್ಲಿ ಜನ ದಂಗೆಯೆದ್ದರು. ಯುವರಾಜ ರಾಜಧಿರಾಜ ದಂಗೆಗಳನ್ನು ಅಡಗಿಸಿದ.ತನ್ನ ಕೊನೆಯ ಕಾಲದಲ್ಲಿ ರಾಜೇಂಧ್ರ ಮತ್ತೊಂದು ಪಿಡುಗನ್ನು ಎದುರಿಸಬೇಕಾಯಿತು. ಪಶ್ಚಿಮ ಚಾಲುಕ್ಯರ ದೊರೆ ಸೋಮೇಶ್ವರ ಅಹವಮಲ್ಲ ಚೋಳ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ. ರಾಜೇಂದ್ರ ಮಗ ರಾಜಾಧಿರಾಜ ಚಾಲುಕ್ಯರನ್ನು ಎದುರಿಸಿ, ಅವನರನ್ನು ಸೋಲಿಸಿ, ಕಲ್ಯಾಣವನ್ನು ಸೂರೆ ಮಾಢಿ, ಚಾಲುಕ್ಯರನ್ನು ಅಪಮಾನಗೊಳಿಸಿದ. ಕರ್ನಾಟಕದ ಜನತೆ ಚೊಳ ಸೇನೆಯ ದಾಳಿ, ಕಿರುಕುಳವನ್ನು ಅನುಭವಿಸಬೇಕಾಯಿತು. ಇದೊಂದು ಕನ್ನಡಿಗರಿಗೆ ಅಪ್ರೀಯವಾದ ಪ್ರಕರಣ.

ಯುದ್ಧಗಳ ಕಥೆಯೆಷ್ಟೆ ಅಲ್ಲ:

ರಾಜೇಂದ್ರನ ಜೀವನ ಬರಿ ಯುದ್ಧಗಳ ಕಥೆಯೇ? ದಂಡಯಾತ್ರೆಗಳ ಪರಂಪರೆಯೇ? ಚೋಳ ಸಾಮ್ರಾಜ್ಯದಲ್ಲಿ ಪ್ರಜೆಗಳು ಸುಖಿಯಾಗಿದ್ದರೆ? ದೇಶಧಲ್ಲಿ ಶಾಂತಿ, ನೆಮ್ಮದಿ, ಸುಖ, ಸಂಪತ್ತು, ಇದ್ದುವೇ? ಸಾಮ್ರಾಜ್ಯದ ಸಂಪತ್ತೆಲ್ಲಾ ಯುದ್ಧಕ್ಕಾಗಿ, ದಂಡಯಾತ್ರೆಗಾಗಿ ವೆಚ್ಚವಾಯಿತೇ? ಸಾಮ್ರಾಜ್ಯದ ಪ್ರಗತಿಗೆ, ಸರ್ವತೋಮುಖ ಅಭಿವೃದ್ದಿಗೆ ರಾಜೇಂದ್ರ ಎಷ್ಟರ ಮಟ್ಟಿಗೆ ಗಮನಕೊಟ್ಟಿದ್ದ? ಇವೆಲ್ಲಾ ಸಮಂಜಸವಾದ ಪ್ರಶ್ನೆಗಳೇ.

ರಾಜೇಂದ್ರ ಚೋಳ ಶ್ರೇಷ್ಠ ದೊರೆಯೆನಿಸಿಕೊಂಡಿದ್ದಾನೆ. ಇತಿಹಾಸಕಾರರು ರಾಜೇಂರ್ಧರನನ್ನು, ಅವನ ಆಡಳಿತ ವೈಖರಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ದಕ್ಷಿಣ ಭಾರತದ ಚರಿತ್ರೆಯಲ್ಲಿ ಒಂದು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾನೆ. ಅಂದಮೇಲೆ ರಾಜೇಂದ್ರನ ಶ್ರೇಷ್ಠತೆಗೆ ಅಳತೆಗೋಲು ಯಾವುದು?

ತಂದೆಯಿಂದ ಬಂದ ಸಾಮ್ರಾಜ್ಯವನ್ನು ಕಾಪಾಡಿಕೊಂಡು, ಅದನ್ನು ವಿಸ್ತರಿಸಿದ ಕೆಲಸ ಒಂದು ಸಾಧನೆಯೇ. ಆದರೆ ಬರೀ ಯೋಧನಾಗಿ, ದಂಡಯಾತ್ರೆಗಳಲ್ಲಿಯೇ ಕಾಲ ಕಳೆದಿದ್ದರೂ ರಾಜೇಂದ್ರ ಶ್ರೇಷ್ಠ ದೊರೆಯೆನಿಸಿಕೊಳ್ಳುತ್ತಿರಲಿಲ್ಲ. ಸಾಮ್ರಾಜ್ಯದ ವಿಸ್ತರಣೆಯೆ ಕೆಲಸ ಮುಗಿದ ಮೇಲೆ , ಸುಮಾರು ಇಪ್ಪತ್ತು ವರ್ಷಗಳ ಶಾಂತಿ ಸ್ಥಾಪನೆ, ಆಡಳಿತ ಸುಧಾರಣೆ, ಸಾಹಿತ್ಯ ಕಲೆಯ ಬೆಳವಣಿಗೆ- ಹೀಗೆ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಗಮನಕೊಟ್ಟು, ಅಸಾಧಾರಣ ಹಿರಿಮೆಯನ್ನು ಸಾಧಿಸಿ ದಕ್ಷಿಣ ಭಾರತದ ರಾಜರಲ್ಲಿ ಅಗ್ರಗಣ್ಯನಾಗಿದ್ದಾನೆ-ರಾಜೇಂದ್ರ.

ರಾಜೇಂದ್ರನ ಸಾಧನೆಯನ್ನು ತಿಳಿಯಬೇಕಾದರೆ, ಆವನ ಆಡಳಿತ ಕ್ರಮ, ಅವನ ಕಾಲದ ಅರ್ಥಿಕ ಸಾಮಾಜಿಕ ಮತ್ತು ಧಾರ್ಮಿಕ ಸ್ಥಿತಿಗತಿಗಳು, ಕಲೆ, ವಾಸ್ತು ಶಿಲ್ಪದ ಪ್ರಗತಿ-ಇವುಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಳ್ಳುವುದು ಅವಶ್ಯಕ.

ಆಡಳಿತ ಕ್ರಮ :

ರಾಜೇಂದ್ರನ ಕಾಲದಲ್ಲಿ ಚೋಳ ಸಾಮ್ರಾಜ್ಯ ಉನ್ನತಿಯ ಶಿಖರವನ್ನು ಮುಟ್ಟಿತ್ತು. ಅವನ ಶಾಸನಗಳು ದಕ್ಷಿಣದಲ್ಲಿ ಕನ್ಯಾಕುಮಾರಿ, ಪೂರ್ವ ತೀರದ ಮಹೇಂದ್ರ ಗಿರಿ, ಕರ್ನಾಟಕದ ನಂಜನಗೂಡು, ಸುತ್ತೂರು ಮತ್ತು ಸಿಂಹಗಳಲ್ಲಿ ಸಿಕ್ಕಿವೆ. ಇದರಿಂದ ಅವನ ಸಾಮ್ರಾಜ್ಯದ ಗಡಿಗಳನ್ನು ಗುರುತಿಸಬಹುದು. ಒಂದೇ ಕೇಂದ್ರದಿಂದ ಆಡಳಿತವನ್ನು ನಡೆಸುವುದು ಅಸಾಧ್ಯವೆಂದುಅರಿತ ರಾಜೇಂದ್ರ ಹಲವಾರು ರಾಜಧಾನಿಗಳನ್ನು ಸ್ಥಾಪಿಸಿದ.  ತಲೆಮಾರಿನಿಂದ ಬಂಧ ರಾಜಧಾನಿ ತಂಜಾವೂರು. ತಾನು ಗಂಗಾ ದಂಡಯಾತ್ರೆಯ ಸಂಕೇತವಾಗಿ ಕಟ್ಟಿಸಿರುವ ರಾಜಧಾನಿ ಗಂಗೈಕೊಂಡ ಚೋಳಪುರಂ. ಅಲ್ಲಿ ತಕ್ಕ ಅರಮನೆ, ಭವ್ಯವಾದ ದೇವಾಲಯ ಮತ್ತು ಉಪಯುಕ್ತವಾದ ಕೆರೆಯನ್ನು ನಿರ್ಮಿಸಿ, ಅಲ್ಲಿಯೇ ನೆಲೆಸಿ ತನ್ನ ಸಾಮ್ರಾಜ್ಯದ ಕೇಂದ್ರವನ್ನಾಗಿ ಮಾಡಿಕೊಂಡ ರಾಜೇಂದ್ರ, ಕೈವಾರ ನಾಡಿನ (ಈಗಿನ ಕರ್ನಾಟಕ ರಾಜ್ಯದ  ಚಿಂತಾಮಣಿ ತಾಲ್ಲೂಕು) ವಿಕ್ರಮಚೋಳಪುರಂ ಮೂರನೇ ರಾಜಧಾನಿ. ಕಾಂಚಿ ಮತ್ತು ತಲಕಾಡು ಪ್ರಾಂತೀಯ ರಾಜಧಾನಿಗಳಾಗಿ ಮುಂದುವರೆದವು. ತಂದೆ ರಾಜರಾಜ ರೂಪಿಸಿದ ಆಡಳಿದ ಅನುಕೂಲಗೋಸ್ಕರ ಸಾಮ್ರಾಜ್ಯವನ್ನು ಪ್ರಾಂತ(ಮಂಡಲ)ಗಳಾಗಿ ವಿಂಗಡಿಸಿದ. ಗೆದ್ದ ರಾಜ್ಯಗಳನ್ನು  ಪ್ರಾಂತಗಳಾಗಿ ಮಾಡಿ, ಅಲ್ಲಿ ರಾಜಕುಮಾರರನ್ನು ಪ್ರತಿನಿಧಿಗಳಾಗಿ ನೇಮಿಸುತ್ತಿದ್ದ. ರಾಜೇಂದ್ರನ ಕಾಲದಲ್ಲಿ ಮಂತ್ರಿಮಂಡಲವಿರಲಿಲ್ಲ. ಶಾಸನಗಳಲ್ಲಿ ಅನೇಕ ಕೇಂದ್ರದಾಧಿಕಾರಿಗಳ ಹೆಸರುಗಳು ಸೂಚಿತವಾಗಿವೆ. ಉದ್ಧಾನ್ ಕುಟ್ಟಮ್ ಎಂಬ ಅಧಿಕಾರಿಗಳು ಚಕ್ರವರ್ತಿ ಮತ್ತು ಅಧಿಕಾರಿಗಳ ಮಧ್ಯೆ ಸಂಪರ್ಕವನ್ನು ಉಂಟುಮಾಡುವ ಕಾರ್ಯವನ್ನು ಹೊಂದಿದ್ದರು.

ಪ್ರಾಂತಗಳ ಆಡಳಿತವು ಕೇಂದ್ರ ಸರಕಾರದ ಮಾದರಿಯಲ್ಲಿ ರೂಪಿತವಾಗಿದ್ದು, ಕೇಂದ್ರ ಮತ್ತು ಪ್ರಾಂತೀಯ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದರು.

ಸಾಮ್ರಾಜ್ಯವನ್ನು ಕಟ್ಟಿದ ಚೋಳ ಸೇನೆಗೆ ರಾಜೇಂದ್ರನೇ ಪ್ರಧಾನ ದಂಡನಾಯಕ. ನೌಕಾದಳಾಧಿಪತಿಯೂ ಅವನೇ. ಹೆಸರಾಂತ ದಳಪತಿಗಳಾದ ನಾಲ್ಮಡಿ ಭೀಮ, ಜಯಸಿಂಗ ಕುಲಕಾಲರು ರಾಜೇಂದ್ರನ ದಿಗ್ವಿಜಯ ಯಾತ್ರೆಯ ಯಶಸ್ವಿಗೆ ಕಾರಣರದರು. ಭೂಸಮೀಕ್ಷೆಯನ್ನು ನಡೆಸಿ, ಸಮರ್ಪಕ ರೀತಿಯಲ್ಲಿ ಕಂದಾಯವನ್ನು ನಿಗದಿ ಮಾಡಿ, ವಸೂಲಿ ಮಾಡುವ ಕ್ರಮವು ಚೋಳರಿಂದಲೇ ಪ್ರಾರಂಭವಾಯಿತೆನ್ನಬಹುದು. ರಾಜೇಂದ್ರ ಯುದ್ಧಗಳ ನಡುವೆ ಬಿಡುವು ಮಾಡಿಕೊಂಡು ರಾಜ್ಯದಲ್ಲಿ  ಆಗಿಂದಾಗ ಪ್ರವಾಶ ಮಾಡಿ ಪ್ರಜೆಗಳ ಜೊತೆಗೆ ನಿಕಟ ಸಂಬಂಧವನ್ನು ಹೊಂದಿದ್ದ. ಕಾಂಚಿ, ಚಿದಂಬರಂ, ಮತ್ತು ತಿರುವಾವೂರುಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಜಾತ್ರೆಗಳಲ್ಲಿ ಭಾಗವಹಿಸಿ ಜನರಿಗೆ ಪ್ರೋತ್ಸಾಹ ನೀಡುತ್ತಿದ್ದ ರಾಜೇಂದ್ರ.

ಹಳ್ಳಿಗಳೇ ಆಡಳಿತದ ಆಧಾರ. ರೈತರೇ ರಾಜ್ಯದ ಬೆನ್ನೆಲುಬು ಎಂಬುವುದನ್ನು ತಿಳಿದಿದ್ದ ಚೊಳ ಚಕ್ರವರ್ತಿಗಳು ಗ್ರಾಮಾಡಳಿತಕ್ಕೆ ವಿಶೇಷ ಪ್ರಧಾನ್ಯತೆ ಕೊಟ್ಟಿದ್ದರು.  ಅದು ಅವರ ಕಾಲದ ವೈಶಿಷ್ಟ್ಯವೆಂದೇ ಹೇಳಬಹುದು. ಹತ್ತನೆಯ ಶತಮಾನದಲ್ಲಿ ರಾಜ್ಯವಳಿದ ಪರಾಂತಕನ ಕಾಲದ ಉತ್ತರ ಮೇರೂರು ಶಾಸನಗ್ರಾಮಾಡಳಿತ ರೂಪರೇಖೆಯನ್ನು ತಿಳಿಸುತ್ತದೆ. ರಾಜೇಂದ್ರನ ಕಾಲದಲ್ಲಿ ಅದಕ್ಕೆ ಹೆಚ್ಚಿನ ಮಹತ್ವವಿತ್ತು. ವ್ಯಾಪಕವಾದ, ಸಮರ್ಪಕವಾದ ವ್ಯವಸ್ಥಿತವಾದ ಆಡಳಿತವಿತ್ತು.  ಗ್ರಾಮಗಳಲ್ಲಿ, ಉಲ್, ಸಭ ಮತ್ತು ನಗರಗಳೆಂಬ ಮೂರು ತರಹ ಸಭೆಗಳಿರುತ್ತದ್ದವು. ಪ್ರತಿಯೊಂದು ಹಳ್ಳಿಯಲ್ಲಿಯೂ ಮಹಾಸಭೆ, ಅಲ್ಲಿ ಆಡಳಿತದ ಹೊಣೆಯನ್ನು ಹೊತ್ತಿತ್ತು. ಅದರ ಹತೋಟಿಯಲ್ಲಿ ಹಲವಾರು ವಾರಿಯಂ (ಸಮೀತಿ)ಗಳು ಕೆಲಸ ಮಾಡುತ್ತಿದ್ದವು,. ಕೆರೆಗಳನ್ನು ನೋಡಿಕೊಳ್ಳುವುದಕ್ಕೆ ಒಂದು ವಾರಿಯಂ, ದೇವಸ್ಥಾನದ ಆಡಳೀತಕ್ಕೆ ಮತ್ತೊಂದು ವಾರಿಯಂ- ಹೀಗೆ ನಾನಾ ಸಣ್ಣ ಸಮಿತಿಗಳು ಹಳ್ಳಿಗಳಿಗೆ ಅಗತ್ಯವಾದ ಕಾರ್ಯಗಳನ್ನು ಪೂರೈಸುತ್ತಿದ್ದವು.

ಹಳ್ಳಿಗಳ ಆಡಳಿತ ಕ್ರಮದಲ್ಲಿ ಒಂದು ಆಶ್ಚರ್ಯಕರವಾದ ಸಂಗತಿಯೆಂದರೆ ಈ ಸಭೆ, ಸಮಿತಿಗಳಿಗೆ ಸದಸ್ಯರನ್ನು ಚುನಾವಣೆಯ ಮೂಲಕ ಆರಿಸುತ್ತಿದ್ದು, ಉತ್ತರ  ಮೇರೂರು ಶಾಸನದಲ್ಲಿ ಮತದಾರರಿಗೆ ಇರಬೇಕಾದ ಅರ್ಹತೆ, ಪ್ರತಿನಿಧಿಗಳಿಗೆ ಇರಬೇಕಾದ ಅರ್ಹತೆಗಳ ಕುರಿತು ವಿವರಗಳಿವೆ. ಕೇಂದ್ರ ಸರಕಾರಕ್ಕೆ ಸಂದಾಯವಾಗಬೇಕಾದ ಹಣವನ್ನು ಗೊತ್ತಾದ ಕಾಲದಲ್ಲಿ ಸಲ್ಲಿಸುತ್ತಿರುವದರಿಂದ ಅದರ ಅಧಿಕಾರಿಗಳು ಗ್ರಾಮಾಡಳಿತದಲ್ಲಿ ಕೈ ಹಾಕುತ್ತಿರಲಿಲ್ಲ. ಹಳ್ಳೀಗರ ಪ್ರಾರ್ಥನೆಗಳನ್ನು ಅಧಿಕಾರಿಗಳು ಸ್ಥಳದಲ್ಲಿಯೇ ಪರಿಶೀಲಿಸಿ, ನಿರ್ಧಾರಗಳನ್ನು ತಕ್ಷಣವೇ ಆಚರಣೆಗೆ ತರುತ್ತಿದ್ದುದರಿಂದ ರೈತರು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು.

ರಾಜೇಂದ್ರನ ಕಾಲದಲ್ಲಿ ನ್ಯಾಯ ನಿರ್ವಹಣೆ ವ್ಯವಸ್ಥಿತ ರೀತಿಯಲ್ಲಿ ನ್ಯಾಯಾಲಯಗಳ ಮೂಲಕ ನಡೆಯುತ್ತಿತು.  ಕೊಲೆ ಮುಂತಾದ ಹೀನ ಕೃತ್ಯಗಳಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು. ಕಳ್ಳತನ, ಮೋಸ, ಮುಂತಾದ ಕೆಟ್ಟ ಕೆಲಸಗಳಿಗೆ ತೀವ್ರವಾದ ಶಿಕ್ಷೆ ವಿಧಿಸುತ್ತಿದ್ದರು.

 

ರಾಜೇಂದ್ರ ಪಲಯಾರದ ದೇವಸ್ಥಾನದ ಆಡಳಿತಕ್ಕೆ ಪ್ರಜೆಗಳ ಸಮಿತಿಯನ್ನು ನೇಮಿಸಿದನು.

ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ :

ರಾಜೇಂದ್ರನ ಕಾಲದಲ್ಲಿ ಚೋಳ ಸಮಾಜವನ್ನು ವರ್ಗಗಳಾಗಿ ವಿಂಗಡಿಸಲಾಗಿತ್ತು. ಪಂಗಡಗಳ ನಡುವೆ ಸ್ನೇಹಪೂರ್ಣ ಸಂಬಂಧವಿತ್ತು. ಸಮಾಜದಲ್ಲಿ ಬೇರೆ ಬೇರೆ ಜಾತಿಗಳವರಿದ್ದರು.  ಆದರೆ ಇದು ಜನರ ಸಹಕರಕ್ಕೆ ಅಡ್ಡಿಯಾಗಿರಲಿಲ್ಲ. ಒಂದು ಸಮಾಜ ಎಷ್ಟು ಮುಂದುವರೆದಿದೆ ಎಂಬುವುದಕ್ಕೆ ಸಾಕ್ಷಿ ಅದು ಹೆಂಗಸರಿಗೆ ಕೊಡುವ ಸ್ಥಾನ ಮತ್ತು ಹಕ್ಕುಳು. ಅನೇಕ ವಿಧಗಳಲ್ಲಿ ಮುಂದುವರೆದಿವೆ ಎನ್ನಿಸಿಕೊಂಡ ದೇಶಗಳಲ್ಲಿ ಹೆಂಗಸರು ಹಿಂದುಳಿದಿರಬಹುದು.  ಹತ್ತೊಂಬತ್ತನೆಯ ಶತಮಾನದಲ್ಲಿ ಸಹ ಯೂರೋಪಿನ ಬಹು ದೇಶಗಳಲ್ಲಿ ಹೆಂಗಸರಿಗೆ ಆಸ್ತಿ ಪಡೆಯುವ ಮತ್ತು ಹಣಕಾಸಿನ ವ್ಯವಹಾರ ನಡೆಸುವ ಹಕ್ಕು ಇರಲಿಲ್ಲ. ಹೆಂಗಸಿಗೆ ಹಣಕಾಸಿದ್ದರೆ ಅದರ ವ್ಯವಹಾರವನ್ನೆಲ್ಲಾ ಗಂಡನಿಗೆ ಸೇರಿದ್ದು. ಸಾಲ ಕೊಡುವ-ಸಾಲ ತೆಗೆದುಕೊಳ್ಳುವ ಹಕ್ಕು ಹೆಂಗಸಿಗಿರಲಿಲ್ಲ. ಈ ದೃಷ್ಟಿಯಿಂದ ನೋಡಿದಾಗ ರಾಜೇಂದ್ರನ ಕಾಲದ ಸಮಾಜ ತುಂಬ ಮುಂದುವರೆದಿತ್ತು ಎಂದೇ ಹೇಳಬೇಕು. ಸಮಾಜದಲ್ಲಿ ಸ್ತ್ರೀಯರಿಗೆ ಗೌರವಸ್ಥಾನವಿತ್ತು. ಹೆಚ್ಚಿನ ಸ್ವಾತಂತ್ರ್ಯವಿತ್ತು. ಅಲ್ಲದೆ ಆಸ್ತಿಯನ್ನು ಹೊಂದುವ ಹಕ್ಕನ್ನು ಅವರು ಪಡೆದಿದ್ದರು.  ಹೆಂಗಸರು ನೂಲುವುದು, ನೇಯುವುದು ಪಶುಪಾಲನೆ ಮುಂತಾದ ಕೆಲಸಗಳನ್ನು ಮಾಡಬಹುದಾಗಿತ್ತು.

ರಾಜೇಂದ್ರನ ಕಾಲದಲ್ಲಿ ಸಾಮ್ರಾಜ್ಯದ ಆರ್ಥಿಕ ಸ್ಥಿತಿ ಪ್ರಗತಿಯ ಪಥದಲ್ಲಿತ್ತು. ರಾಜ್ಯ ವಿಸ್ತಾರವಾದಂತೆ ವ್ಯಾಪಾರ, ವಾಣೀಜ್ಯಗಳು ವೃದ್ಧಿಗೊಂಡವು. ಪದಾರ್ಥಗಳ ಉತ್ಪನ್ನ, ಅವುಗಳ ಬೆಲೆ ಮತ್ತು ಪದಾರ್ಥಗಳ ರಫ್ತನ್ನು ವರ್ತಕರು ಶ್ರೇಣಿಗಳ ಮೂಲಕ ಶಿಸ್ತಿಗೆ ಒಳಪಡಿಸಿದ್ದರು. ರಾಜೇಂದ್ರನ ವಿದೇಶ ದಂಡಯಾತ್ರೆಯ ಫಲವಾಗಿ ದೂರ ದೇಶಗಳೊಡನೆ ವ್ಯಾಪಾರ ಸಂಬಂಧ ಕುದಿರಿತು. ರಾಜೇಂದ್ರನ ವಿದೇಶ ದಂಡಯಾತ್ರೆಯ ಫಲವಾಗಿ ದೂರ ದೇಶಗಳೊಡನೆ ವ್ಯಾಪಾರ ಸಂಬಂಧ ಕುದುರಿತು. ರಾಜೇಂದ್ರ ಚೀನಾ ದೇಶಕ್ಕೆ ವ್ಯಾಪಾರ ನಿಯೋಗವನ್ನುಕಳೂಹಿಸಿದನೆಂದು  ಶಾಸನವೊಂದು ತಿಳಿಸುತ್ತದೆ.

ರೈತರ ಹಿತಾಸಕ್ತಿಗಳಿಗೆ ವಿಶೇಷ ಗಮನ ಕೊಟ್ಟಿದ್ದ ರಾಜೇಂದ್ರ, ರಾಜ ರಾಜ ನಡೆಸಿದ ಭೂ ಸಮೀಕ್ಷೆ, ರಾಜೇಂರ್ಧರ ಕಟ್ಟಿಸಿದ ಕೆರೆಗಳು ಇವುಗಳಿಂದ ರೈತರ ಬಗ್ಗೆ ಅವರಿಗಿದ್ದ ಆಸಕ್ತಿಯನ್ನು ತಿಳೀಯಬಹುದು. ಪಟ್ಟಣದಲ್ಲಾಗಲೀ, ಗ್ರಾಮಗಳಲ್ಲಿಯಾಗಲಿ ಜೀವನವು ಸುಖಮಯವಾಗಿತ್ತು. ನೆಮ್ಮದಿಯಿತ್ತು. ಮೇಲಾಗಿ ಸಮಾಜದಲ್ಲಿ ಸಾಮರಸ್ಯವಿತ್ತು.

ಜನರ ಜೀವನದಲ್ಲಿ ದೇವಸ್ಥಾನಕ್ಕೆ ವಿಶಿಷ್ಟ ಸ್ಥಾನವಿತ್ತು. ಅದು ಕೇವಲ ಪ್ರಾರ್ಥನಾ ಮಂದಿರವಾಗಿರದೆ, ಜನರ ಸಾಂಸ್ಕೃತಿಕ ಮತ್ತು ಆರ್ಥಿಕ ಜೀವನದಲ್ಲಿಯೂ ಪ್ರಮುಖ ಪಾತ್ರವಿತ್ತು.  ವಾಸ್ತು ಶಿಲ್ಪದ, ಕುಶಲ ಕಲೆಗಳ ಬೀಡು ದೇವಸ್ಥಾನ. ದೇವಾಲಯ ವಿದ್ಯಾಮಂದಿರವೂ ಆಗಿತ್ತು. ಅದೇ ಹಳ್ಳಿಯ ವೈದ್ಯಶಾಲೆ: ಸಂತೋಷಕೂಟಗಳ ಕೇಂದ್ರ; ಸಭೆ ಸೇರುವ ಸ್ಥಳ. ಎಲ್ಲಾ ಹಳ್ಳಿಗಳಲ್ಲಿಯೂ ದೇವಸ್ಥಾನದ ಆಡಳಿತ ಪ್ರತ್ಯೇಕವಾಗಿ ಒಂದು ಸಮಿತಿಯಿತ್ತು. ಒಟ್ಟಿನಲ್ಲಿ ದೇವಾಲಯವು ಜನರ ಜೀವಾಳವಾಗಿತ್ತೆಂದು ಹೇಳಬಹುದು.

ದೇವಾಲಯಗಳನ್ನು ಕಟ್ಟಿಸುವುದರಲ್ಲಿ, ಅವುಗಳ ಆಡಳೀತದಲ್ಲಿ ಮತ್ತು ಅದನ್ನುಸುದಾರಿಸುವುದರಲ್ಲಿ ರಾಜೇಂದ್ರ ಚೋಳ ಹೆಚ್ಚಿನ ಆಸಕ್ತಿ ವಹಿಸಿದ್ದನು. ರ ಅವನ ಆಳ್ವಿಕೆಯ ಮೂರನೆಯ ವರ್ಷದಲ್ಲಿ, ರಾಜೇಂದ್ರ ತಂಜಾವೂರು ಜಿಲ್ಲೆಯ ಪಲಯಾರದ ದೇವಸ್ಥಾನಕ್ಕೆ ಭೇಟಿಕೊಟ್ಟಾಗ, ಅದರ ಆದಾಯ, ಅದರ ವಿತರಣೆಯ ಕುರಿತು ಒಂದು ಸೂತ್ರವನ್ನು ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಅಲ್ಲಿನ  ಜನರ ಪ್ರತಿನಿಧಿಗಳ ಸಮಿತಿಯೊಂದನ್ನು ಏರ್ಪಡಿಸಿದನಂತೆ.  ಅಲ್ಲದೆ ಸಾಮ್ರಾಜ್ಯದ ದೇವಾಲಯಗಳಿಗೆ ಸೇರಿದ ಜಮೀನುಗಳ ಬಗ್ಗೆ ಅಂಕಿ ಅಂಶಗಳನ್ನು ಶೇಖರಿಸಲು ಸಮೀಕ್ಷೆಯೊಂದನ್ನು ಸಹ ನಡೆಸಿದನೆಂದು ಶಾಸನಗಳು ಸಾರುತ್ತವೆ.

ಶಿವಭಕ್ತನಾಧರೂ ಶಿವಾಲಯಗಳನ್ನು ಕಟ್ಟಿಸಿದರೂ ರಾಜೇಂದ್ರ ಪರಮತ ದ್ವೇಷಿಯಾಗಿರಲಿಲ್ಲ. ಅವನ ಕಾಲದಲ್ಲಿ ಅನೇಕ ವಿಷ್ಣು ದೇವಾಲಯಗಳು ನಿರ್ಮಿತವಾದವು. ಕಾಂಚಿಪುರವು ಶ್ರೀ ವೈಷ್ಣವ ಮತದ ಕೇಂದ್ರವಾಗಿತ್ತು. ಶ್ರೀ ವಿಜಯರಾಜರೊಡನೆ ಯುದ್ಧ ನಡೆಸಿದರೂ, ಬೌದ್ಧ ಧರ್ಮವನ್ನು ಅಲ್ಲಗಳೆಯಲಿಲ್ಲ.

ಸಾಹಿತ್ಯ ಮತ್ತು ಕಲೆ:

ಒಂದು ಸಮಾಜ ಎಷ್ಟು ಮುಂದುವರೆದಿದೆ ಎಂಬುವುದಕ್ಕೆ ಮತ್ತೊಂದು ಸಾಕ್ಷಿ ಸಾಹಿತ್ಯ ಮತ್ತು ಕಲೆಗಳಲ್ಲಿ ಅದರ ಪ್ರಗತಿ. ಮನಸ್ಸಿಗೆ ಸಂತೋಷ ಕೊಡುವವು, ಮನಸ್ಸನ್ನು ಮೃದು ಮಾಡುವುದು ಸಾಹಿತ್ಯ ಮತ್ತು ಕಲೆಗಳು. ಜನರ ಅಭಿರುಚಿ, ಸೌಂಧರ್ಯ ಪ್ರೇಮ, ಸಂಸ್ಕೃತಿ ಪ್ರಕಟವಾಗುವುದು ಸಾಹಿತ್ಯದ ಕೃತಿಗಳಲ್ಲಿ, ಚಿತ್ರಗಳಲ್ಲಿ ಕಟ್ಟಡಗಳಲ್ಲಿ, ವಿಗ್ರಹಗಳಲ್ಲಿ, ಸಂಗೀತದಲ್ಲಿ. ಹೂವಿನ ಸುವಾಸನೆಗೆ ಇದ್ದಂತೆ ಬಣ್ಣಗಳಿದ್ದಂತೆ ಸಮಾಜಕ್ಕೆ ಸಾಹಿತ್ಯದ ಕೃತಿಗಳು, ಕಲೆಗಳ ಸೃಷ್ಟಿಗಳು.

ಚೋಳ ಸಾಮ್ರಾಜ್ಯದ ಕಾಲದಲ್ಲಿ (೮೫೦-೧೨೦೦) ತಮಿಳು ಸಾಹಿತ್ಯ ಅತ್ಯುನ್ನತ ಸ್ಥಾನವನ್ನು ಹೊಂದಿತ್ತೆಂದು ವಿಧ್ವಾಂಸರ ಅಭಿಪ್ರಾಯ. ಶಿವಭಕ್ತನಾದ ನಂಬಿ ಎಂಬಾತ ಹಲವಾರು ಭಕ್ತಿಗೀತೆಗಳನ್ನು ರಚಿಸಿದ. ಇವಕ್ಕೆ “ತಿರುಮುರೈ” ಎಂದು ಹೆಸರು. ವೈಷ್ಣವ ಪಂಥದ ನಾಥಮುನಿ ಎಂಬಾತ ನಾಲಾಯರ ದಿವ್ಯ ಪ್ರಬಂಧವನ್ನು ರಚಿಸಿದ. ಇವೆರಡು ಕೃತಿಗಳೂ ಪ್ರಸಿದ್ಧವಾದವು. ಜನಪ್ರೀಯವಾದವು. ರಾಜೇಂದ್ರನ ಶಾಸನಗಳಲ್ಲಿಯೇ ಕಾವ್ಯದ ಗುಣ ಇದೆ. ರಾಜೇಂದ್ರ ಕಟ್ಟಿಸಿದ ದೇವಾಲಯ ಭಕ್ತಿ ಪ್ರಧಾನ ಸಾಹಿತ್ಯ ರಚನೆಗೆ ಪ್ರೇರಕವಾಯಿತು. ಗಂಗೈ ಕೊಂಡ ಚೊಳೇಶ್ವರ ದೇವಾಲಯ ರಾಜೇಂದ್ರನ ಮಹಾಸಾಧನೆಯೆ ಪ್ರತೀಕ. ಕಲೆಗೆ, ವಾಸ್ತುಶಿಲ್ಪಕ್ಕೆ ಉತ್ತಮ ಕಾಣಿಕೆ: ಚೋಳ ವಾಸ್ತುಶಿಲ್ಪದ ಉತ್ತುಂಗ ಉದಾಹರಣೆ. ಅವನ ಕಾಲದ ಹಿತ್ತಾಳೆಯ ವಿಗ್ರಹಗಳೂ- ನಟರಾಜ, ಶಿವ, ರಾಮ ಸೀತೆ, ಲಕ್ಷ್ಮೀ, ಕೃಷ್ಣ ಮುಂತಾದವು ಚೋಳ ಕುಶಲ ಕೆಲಸಗಾರರ ನೈಪುಣ್ಯದ ಕೆಲಸವಾಗಿದೆ. ರಾಜೇಂದ್ರನಿಗೆ “ಪಂಡಿತಚೋಳ:ನೆಂಬ ಬಿರುದಿತ್ತು. ೧೦೨೫ರ ಶಾಸನವೊಂದು ಶ್ರೀ ವೈಷ್ಣವ ಧರ್ಮದ ಕೇಂದ್ರಕ್ಕೆ ವೇದದ ವ್ಯಾಕರಣ, ಮೀಮಾಂಸ ವಿಷಯಗಳನ್ನು ಬೋಧಿಸುವುದಕ್ಕೆ ಹದಿನಾಲ್ಕು ಮಂದಿ ಪ್ರಾಧ್ಯಾಪಕರಿದ್ದರು.  ಅವರಿಗೆ ಹೆಚ್ಚಿನ ಸಂಬಳವಿತ್ತು. ರಾಜೇಂಧ್ರನ ಪ್ರಗತಿಪರ ವಿದ್ಯಾಭ್ಯಾಸ ನೀತಿಯನ್ನೇ ಅವನ ಅನಂತರ ಬಂದ ರಾಅಜರು ಮುಂದುವರೆಸಿದರು.

ಕೇವಲ ಮೂವತ್ತಮೂರು ವರ್ಷಗಳ ಆಳ್ವಿಕೆಯಲ್ಲಿ ರಾಜೇಂಧ್ರ ಚೋಳನ ಸಾಧನೆ ಚಿರಸ್ಮರಣೀಯವದುದು. ರಾಜ್ಯವನ್ನು ಸಾಮ್ರಾಜ್ಯವನ್ನಾಗಿ ಮಾಡಿದ್ದು ಅವನ ಶೌರ್ಯಕ್ಕೆ ಸಾಕ್ಷಿ. ಆದರೆ ದಂಡಯಾತ್ರೆಯಲ್ಲಿಯೇ ಕಾಲ ಕಳೆಯದೇ ತನ್ನ ಜೀವನದ ಬಹುಭಾಗವನ್ನು ದೇಶದ ಪ್ರಗತಿಗೆ ಮುಡಿಪಾಗಿಟ್ಟ. ಸುಮಾರು ಇಪ್ಪತ್ತು ವರ್ಷಗಳ ಕಾಲ ವಿಚಕ್ಷಣೆಯಿಂದ, ದಕ್ಷತೆಯಿಂದ ಆಡಳಿತ  ನಡೆಸಿ ಪ್ರಜೆಗಳ ಪ್ರೀತಿಗೆ ಪಾತ್ರನಾದ. ಸಾಮ್ರಾಜ್ಯದಲ್ಲಿ ಶಾಂತಿ ಸ್ಥಾಪಿಸಿ, ಜನಜೀವನ ಸುಗಮವಾಗುವಂತೆ ಮಾಡಿದ ಕೀರ್ತಿ ರಾಜೇಂದ್ರನದು. ರಾಜೇಂದ್ರ ನೂತನವಾಗಿ ನಿರ್ಮಿಸಿದ ಗಂಗೈ ಕೊಂಡ ಚೋಳಪುಂ, ಕಟ್ಟಿಸಿದ ಗಂಗೈ ಕೊಂಡಚೋಳಕೆರೆ, ರೂಪಿಸಿದ ಭವ್ಯ ಗಂಗೈಕೊಂಡ ಚೋಳೇಶ್ವರ ದೇವಾಲಯ-ಇವು ರಾಜೇಂದ್ರನ ಸಾಧನೆಗಳಿಗೆ ಸಾಕ್ಷಿಯಾಗಿವೆ.