ನಮ್ಮ ಭಾರತ ದೇಶ ೧೯೪೭ರಲ್ಲಿ ಸ್ವತಂತ್ರ ಆಯಿತು. ಪ್ರತಿ ವರ್ಷ ಆಗಸ್ಟ್ ೧೫ ರಂದು ನೀವೆಲ್ಲ ಶಾಲೆಯಲ್ಲಿ ಸೇರಿ ಬಾವುಟ ಹಾರಿಸಿ ನಮಿಸಿ ’ಜನಗಣಮನ’ ಹಾಡುತ್ತೀರಲ್ಲ. ಅದೇ ಸ್ವಾತಂತ್ರ‍್ಯ ದಿನ.

ಸ್ವಾತಂತ್ರ‍್ಯ ಸುಮ್ಮನೆ ಸುಲಭವಾಗಿ ಸಿಕ್ಕಿಬಿಟ್ಟಿತೆ? ಊಹೂಂ. ಅದನ್ನು ಪಡೆಯಲು ನೂರು ವರ್ಷ ನಮ್ಮ ಜನ ಹೆಣಗಿದರು. ಬ್ರಿಟಿಷರೊಡನೆ ಹೋರಾಡಿದರು. ಈ ಹೋರಾಟವೂ ಮಹಾಭಾರತದ ಹಾಗೆಯೇ ದೊಡ್ಡ ಕತೆ. ಅಲ್ಲಿನ ಹಾಗೆ ಇಲ್ಲೂ ಮಹಾನಾಯಕರು, ವೀರರು ಹೋರಾಡಿದರು. ತ್ಯಾಗ ಮಾಡಿದರು. ಜೈಲಿಗೆ ಹೋದರು. ಪ್ರಾಣ ತೆತ್ತರು. ಇದೆಲ್ಲ ತುಂಬ ದೊಡ್ಡ ಕತೆ. ಪೂರಾ ಕೇಳಿದರೆ ಮೈ ಜುಂ ಅನ್ನಿಸುತ್ತೆ.

ಮಹಾಭಾರತದಲ್ಲಿ ಯುಧಿಷ್ಠಿರನನ್ನು ’ಅಜಾತ ಶತ್ರು’ ಎಂದೂ ಕರೆಯುತ್ತಾರೆ. ಅವನಿಗೆ ಶತ್ರುಗಳೇ ಇರಲಿಲ್ಲ. ಎಂದು ಅವರ ಅರ್ಥ. ಈ ಸ್ವಾತಂತ್ರ‍್ಯದ ಮಹಾಭಾರತ ಯುದ್ಧದಲ್ಲೂ ಹಾಗೇ ಧರ್ಮನಿಷ್ಠರು, ದೈವಭಕ್ತರು, ತ್ಯಾಗಿಗಳು, ಬುದ್ಧಿಶಾಲಿಗಳು. ಅವರಿಗೆ ಯಾರೂ ವೈರಿಗಳೇ ಇರಲಿಲ್ಲ. ಅಂಥ ಪ್ರೀತಿಯ ಮನುಷ್ಯ. ಅವರೇ ಡಾಕ್ಟರ್ ರಾಜೇಂದ್ರ ಪ್ರಸಾದ್, ರಾಜೇನು ಬಾಬು, ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ.

ಹಳ್ಳಿಯ ಹುಡುಗ

ಉತ್ತರ ಭಾರತದಲ್ಲಿ ಬಿಹಾರ ರಾಜ್ಯ ಇದೆ. ಅಲ್ಲಿ ಸಾರನ್ ಎಂಬ ಜಿಲ್ಲೆಯಲ್ಲಿ ಜೀರಾದೇಯಿ ಒಂದು ಹಳ್ಳಿ. ಅಲ್ಲಿ ಮಹಾದೇವ ಸಹಾಯ್ ಒಬ್ಬ ರೈತ. ಕಾಯಸ್ಥರ ಮನೆತನ. ಮಹಾದೇವರಿಗೆ ಮೂವರು ಹೆಣ್ಣು, ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ಮಹೇಂದ್ರ ಪ್ರಸಾದ್. ಕಿರಿಯುವ ರಾಜೇಂದ್ರ ಪ್ರಸಾದ್, ಪ್ರಸಾದರ ತಾಯಿ ಕಮಲೇಶ್ವರಿ, ರಾಜೇಂದ್ರರು ಹುಟ್ಟಿದ್ದು ೧೮೮೪ರ ಡಿಸೆಂಬರ್ ನಲ್ಲಿ.

ಮಹಾದೇವ ಸಹಾಯ್ ಸಂಸ್ಕೃತ, ಪರ್ಷಿಯನ್ ಭಾಷೆಗಳಲ್ಲಿ ಪಂಡಿತ. ಕುಸ್ತಿ, ತೋಟದ ಕೆಲಸಗಳಲ್ಲಿ ಗಟ್ಟಿಗ. ಹಳ್ಳಿವೈದ್ಯ ಸಹ ತಿಳಿದಿದ್ದ. ಕಮಲೇಶ್ವರಿಗೆ ವ್ರತ, ಆಚಾರ, ಪೂಜೆ ಅಂದರೆ ಪ್ರಾಣ. ಮಕ್ಕಳಿಗೆ ರಾಮಾಯಣ, ಮಹಾಭಾರತ ಹೇಳುವರು – ಶಿವಾಜಿಗೆ ಜೀಜಾಬಾಯಿ, ಹೇಳುತ್ತಿರಲಿಲ್ಲವೇ, ಹಾಗೆ. ಹಳ್ಳಿಯಲ್ಲಿ ರಾಮಲೀಲಾ, ದೀಪಾವಳಿ, ಹೋಳೀ, ಕೃಷ್ಣಜನ್ಮಾಷ್ಟಮಿ, ಅನಂತನ ಹಬ್ಬ,  ದಸರಾ ಇವನ್ನೆಲ್ಲ ಸಂಭ್ರಮದಿಂದ ಜನ ಆಚರಿಸುತ್ತಾರೆ. ರಾಮಾಯಣ, ಪುರಾಣ, ಪುಣ್ಯಕಥೆ ಬೇರೆ. ಇವೆಲ್ಲದರಿಂದ  ರಾಜೇಂದ್ರನಿಗೆ ಎಳೆತನದಿಂದಲೇ ನಮ್ಮ ಹಿಂದಿನ ಪುರಾಣ, ಇತಿಹಾಸ, ಸಂಸ್ಕತಿ ಅಂದರೆ ಶ್ರದ್ಧೆ – ಗೌರವ ಬೆಳೆಯಿತು.

ರಾಜೇಂದ್ರರ ತಾಯಿ ತೀರಿಕೊಂಡ ನಂತರ ಗಂಡನನ್ನು ಕಳೆದುಕೊಂಡು ಮನೆ ಸೇರಿದ್ದ. ಅಕ್ಕ ಭಗವತೀ ದೇವಿಯೇ ಅಲ್ಲಿಂದಾಚೆಗೆ ರಾಜೇಂದ್ರನಿಗೆ ತಾಯಿ ಅನಿಸಿಕೊಂಡರು. ಮನೆತನದ ವ್ಯವಹಾರವೆಲ್ಲ ಆಕೆಯದೇ. ಅಣ್ಣ ಮಹೇಂದ್ರನಂತೂ ರಾಜೇಂದ್ರನಿಗೆ ಕೊಂಚವೂ ತೊಂದರೆ ಆಗದಂತೆ ಎಲ್ಲ ವ್ಯವಹಾರ ತಾನೇ ನೋಡಿಕೊಳ್ಳುತ್ತಿದ್ದ. ತಂದೆ ಹೋದ ಮೇಲಂತೂ ಅವನೇ ತಂದೆ ಆಗಿದ್ದ.

ರಾಜೇಂದ್ರನಿಗೆ ಅಕ್ಷರ ಹೇಳಿಕೊಟ್ಟದ್ದು ಹಳ್ಳಿಯ ಮುಸ್ಲಿಮ್ ಮೌಲ್ವಿ. ಪರ್ಶಿಯನ್ ಮತ್ತು ಉರ್ದು ಭಾಷೆ ಪಾಠ. ಆಮೇಲೆ ಪ್ರಸಾದರು ಸಂಸ್ಕೃತ, ಹಿಂದಿ, ಬಂಗಾಳಿ, ಇಂಗ್ಲಿಷ್ ಎಲ್ಲ ಕಲಿತರು. ಹಿಂದಿಯಲ್ಲಂತೂ ದೊಡ್ಡ ಪಂಡಿತರೇ ಆದರು.

ಧರ್ಮದಲ್ಲಿ ಶ್ರದ್ಧೆ, ಒಳ್ಳೆ ನಡತೆ, ಸತ್ಯನಿಷ್ಠೆ, ಇನ್ನೊಬ್ಬರಿಗೆ ತೊಂದರೆ ಕೊಡದೆ ಇರುವುದು, ಸಹನೆ ಇವೆಲ್ಲ ಪ್ರಸಾದರಿಗೆ ಎಳೆತನದಿಂದಿಲೇ ಬಂದು ಬಿಟ್ಟಿದ್ದವು.

ಹುಡುಗ ಬುದ್ಧಿಶಾಲಿ. ಚೆನ್ನಾಗಿ ಓದುತ್ತಿದ್ದ. ಶಾಲೆಯಲ್ಲಿ ಒಂದು ತರಗತಿ ಹಾರಿಸಿ ಮೇಲಿನ ತರಗತಿಗೆ ಕಳುಹಿಸಿದರು. ಅಷ್ಟು ಬುದ್ಧಿವಂತ. ೧೯೦೨ರಲ್ಲಿ ಮೆಟ್ರಿಕ್ ಅಂದರೆ ಈಗಿನ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣನಾದ. ಮೊದಲನೇ ಸ್ಥಾನ ಪಡೆದ! ಇಡೀ ಕಲ್ಕತ್ತ ವಿಶ್ವವಿದ್ಯಾನಿಲಯಕ್ಕೆ ಮೊದಲನೆಯವನಾದ!

ಹುಡುಗ ರಾಜೇಂದ್ರನಿಗೆ ಒಂದು ತರಗತಿ ಹಾರಿಸಿ ಮೇಲಿನ ತರಗತಿಗೆ ಕಳುಹಿಸಿದಾಗ, ಮುಖ್ಯೋಪಾಧ್ಯಾಯರು ಹುಡುಗನನ್ನು ಕರೆಸಿ, ’ನೀನು ಪರೀಕ್ಷೆಯಲ್ಲಿ ಮೊದಲನೆಯವನಾಗಿದ್ದಿ, ನಿನಗೆ ಡಬ್ಬಲ್ ಪ್ರಮೋಷನ್ !’ ಎಂದರು!

ಹುಡುಗನಿಗೆ ಸಂತೋಷವೇನೋ ಆಯಿತು. ಆದರೆ, ’ನಮ್ಮ ಅಣ್ಣನನ್ನು ಕೇಳಬೇಕು ಸರ್, ಅವರನ್ನು ಕೇಳಿ ನಿಮಗೆ ಹೇಳುತ್ತೇನೆ ಎಂದ!’

ಮುಖ್ಯೋಪಾಧ್ಯಾಯರು ನಕ್ಕು ಅವನನ್ನು ಮೇಲಿನ ಎರಡನೆಯ ತರಗತಿಗೆ ಕಳುಹಿಸಿದರು.

ನಡುವೆ ಹದಿಮೂರು ವರ್ಷಕ್ಕೆ ಮದುವೆಯೂ ಆಗಿ ಹೋಯಿತು. ರಾಜಬನ್ಸಿದೇವಿ ಅಂತ ಹುಡುಗಿ. ಹೆಣ್ಣಿನ ಮನೆಗೆ ದಿಬ್ಬಣ ಜೋರಾಗಿ ಹೋಗಿತ್ತು. ಆನೆ ಕುದುರೆ ಸವಾರಿ ಬೇರೆ!

ರೈತ ಹುಡುಗ,
ಪಟ್ಟಣದಲ್ಲಿಯೂ ಮೊದಲನೆಯವನು

ಮುಂದೆ ರಾಜೇಂದ್ರನ ವಿದ್ಯಾಭ್ಯಾಸ ಕಲ್ಕತ್ತೆಯಲ್ಲೆ. ನಾಚಿಕೆಯ ಹಳ್ಳಿ ಹುಡುಗ ಈ ದೊಡ್ಡ ಪಟ್ಟಣದಲ್ಲಿ ಮೊದಲು ತಬ್ಬಿಬ್ಬಾದ. ಹಳೆಯ ಮೇಷ್ಟ್ರು ರಸಿಕಲಾಲರು ಹೇಳಿದ್ದರು. ’ದೊಡ್ಡ ಊರು ಜೋಕೆ. ಹಣ ಭದ್ರ, ಕಷ್ಟಪಟ್ಟು ಓದು’ ಎಂದು. ಶಿಷ್ಯ ಹಾಗೇ ಮಾಡಿದ. ಚೆನ್ನಾಗಿ ಓದಿದ. ಒಳ್ಳೊಳ್ಳೆ ಗುರುಗಳು ಬೇರೆ ಇದ್ದರು. ಓದಿಗೆ ಹಣ ಎಲ್ಲಿತ್ತು? ಅಣ್ಣನೂ ಓದುತ್ತಿದ್ದ. ಊರಿನಿಂದ ಬರುತ್ತಿದ್ದ ಹಣ ಇಬ್ಬರಿಗೂ ಸಾಲುತ್ತಿರಲಿಲ್ಲ. ಆಗ ಕಾಲೇಜಿನವರೇ ವಿದ್ಯಾರ್ಥಿವೇತನ ಕೊಟ್ಟರು. ಅದರಲ್ಲಿ ಅಣ್ಣ ತಮ್ಮ ಇಬ್ಬರೂ ಒಂದು ಕೊಠಡಿ ಬಾಡಿಗೆಗೆ ತೆಗೆದು ಕೊಂಡು ಕಷ್ಟಪಟ್ಟು ಓದಿದರು. ಪ್ರಸಾದ್ ಎಲ್ಲದರಲ್ಲೂ ಮೊದಲನೆಯದವನಾಗಿ ಬಿ.ಎ. ಮುಗಿಸಿದ.

ಆ ವೇಳೆಗೆ ಬಂಗಾಳದಲ್ಲಿ ಸ್ವಾತಂತ್ರ‍್ಯದ ಗಾಳಿ ಎದ್ದಿತ್ತು. ಅರವಿಂದರೇ ಮೊದಲಾದ ದೊಡ್ಡ ದೊಡ್ಡ ನಾಯಕರ ಭಾಷಣ, ಸ್ವದೇಶಿ ಚಳುವಳಿ ನಡೆಯುತ್ತಿತ್ತು. ವಿದ್ಯಾರ್ಥಿಗಳು ಸೇರುತ್ತಿದ್ದರು. ಇದೆಲ್ಲ ರಾಜೇಂದ್ರನ ಮನಸ್ಸನ್ನೂ ಮುಟ್ಟುತ್ತಾ ಇತ್ತು. ದೇಶಪ್ರೇಮ ಚಿಗುರುತ್ತಿತ್ತು. ಆಗಿನ ಬುದ್ಧಿವಂತ ವಿದ್ಯಾರ್ಥಿಗಳಿಗೆಲ್ಲ ಆಸೆ, ಐ.ಸಿ.ಎಸ್. ಪಾಸು ಮಾಡಬೇಕು ಅಂತ. ಈ ಪರೀಕ್ಷೆಯಲ್ಲಿ ಗೆದ್ದರೆ ಬ್ರಿಟಿಷ್ ಸರ್ಕಾರದಲ್ಲಿ ದೊಡ್ಡ ಸಾಹೇಬ ಆಗಬಹುದಾಗಿತ್ತು. ರಾಜೇಂದ್ರನಿಗೂ ಹಾಗೇ ಅನ್ನಿಸಿತು. ಅದಕ್ಕೆ ಓದಲು ಲಂಡನ್ನಿಗೆ ಹೋಗಬೇಕು. ಅಣ್ಣ ಒಪ್ಪಿದ, ಉಪಾಧ್ಯಾಯರೂ ಸ್ನೇಹಿತರೂ ಹೋಗು ಅಂದರು, ಹಣಾನೂ ಸೇರಿಸಿದರು. ಆದರೆ ತಂದೆ ತಾಯಿ ಒಪ್ಪುತ್ತಾರೆಯೆ ಎಂದು ಅನುಮಾನ. ಗುಟ್ಟಾಗಿ ಸಿದ್ಧತೆ ನಡೆಸಿದ. ಆದರೆ ಗುಟ್ಟು ರಟ್ಟಾಯಿತು. ತಂದೆಗೆ ಖಾಯಿಲೆ ಬೇರೆ. ಎಲ್ಲರೂ ಅತ್ತುಬಿಟ್ಟರು. ’ಬಿಟ್ಟುದೂರ ಹೋಗಬೇಡ’ ಅಂತ ಸರಿ, ರಾಜೇಂದ್ರ ಪ್ರಯಾಣ ನಿಲ್ಲಿಸಿಬಿಟ್ಟ. ಇನ್ನೊಬ್ಬರಿಗೆ ಸಂಕಟ ಕೊಡೋದು ಅಂದರೆ ಪ್ರಸಾದರಿಗೆ ತುಂಬ ಕಷ್ಟ.

ಸರಿ, ಹುಡುಗ ಮತ್ತೆ ಕಲ್ಕತ್ತೆಗೆ ಬಂದ. ಎಂ.ಎ. ಪಾಸು ಮಾಡಿದ. ನಡುವೆ ಮಲೇರಿಯಾ ಜ್ವರ ಬಡಿಯಿತು. ಆಗಲಿಂದಲೇ ಅವರ ಆರೋಗ್ಯ ಕೆಡೋದಕ್ಕೆ ಪ್ರಾರಂಭ. ಎಂ.ಎ. ಆದ ಮೇಲೆ ಕಾನೂನು ಓದು ಅಂದ ಅಣ್ಣ. ಅದೂ ಆಯಿತು. ಓದು ಅಂದರೆ ಪ್ರಸಾದ್ ಗೆ ನೀರು ಕುಡಿದ ಹಾಗೆ. ಎಲ್ಲದರಲ್ಲೂ ಮೊದಲನೆಯವನೇ. ಕಲ್ಕತ್ತೆಯಲ್ಲಿ ಆವರೆಗೆ ಬಂಗಾಳಿಗಳೇ ಓದಿನಲ್ಲಿ ಮುಂದು. ಬಿಹಾರದ ಈ ರೈತಹುಡುಗ ಅವರನ್ನೂ ಮೀರಿಸಿಬಿಟ್ಟ!

ವಕೀಲರು, ಪ್ರೊಫೆಸರು

ಎಂ.ಎ., ಬಿ.ಎಲ್., ಎಂ.ಎಲ್., ಎಲ್ಲ ಆಯಿತು. ನಡುವೆ ತಂದೆ ತೀರಿಕೊಂಡಿದ್ದರು. ಗೋಪಾಲಕೃಷ್ಣ ಗೋಖಲೆ ಎಂಬ ಹಿರಿಯ ನಾಯಕರು ಕಲ್ಕತ್ತೆಗೆ ಬಂದರು. ಅವರು ದೊಡ್ಡ ದೇಶಭಕ್ತರು. ಮಹಾತ್ಮಗಾಂಧೀಯವರ ಗುರು. ದೇಶಸೇವೆಗೆ ಒಳ್ಳೆ ಬುದ್ಧಿಶಾಲಿ ಯುವಕರನ್ನು ಸೇರಿಸಬೇಕು ಅಂತ ಬಂದಿದ್ದರು.  ರಾಜೇಂದ್ರನ ಕೀರ್ತಿಯನ್ನು ಕೇಳಿ ಕರೆಸಿದರು. ’ನಮ್ಮ ಭಾರತ ಸೇವಕರ ತಂಡ ಸೇರು, ನಿನ್ನಂಥವರು ನನಗೆ ಬೇಕು’ ಅಂದರು. ರಾಜೇಂದ್ರರಿಗೆ ಸೇರಲು ಆಸೆ. ಆದರೆ ಮನೆಯಲ್ಲಿ ಕೇಳಬೇಕಲ್ಲ! ’ಕೇಳಿ ಹೇಳುತ್ತೇನೆ’ ಅಂದರು. ಊರಿನಲ್ಲಿ ಕೇಳಿದರು. ಮನೆಯ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅಣ್ಣ, ಅಕ್ಕ ’ಬೇಡಪ್ಪ’ ಅಂದರು. ಅವರ ದುಃಖ ನೋಡಿ ರಾಜೇಂದ್ರರು ತಮ್ಮ ಆಸೆ ಬಿಟ್ಟರು.

ಕಾನೂನು ಓದಲು ಮೊದಲು ಸ್ವಲ್ಪ ದಿನ ಕಾಲೇಜಿನಲ್ಲಿ ಪಾಠ ಹೇಳಿದರು. ವಕೀಲ ಆದರೆ ಒಳ್ಳೆ ಸಂಪಾದನೆ ಸರಿ, ಓದಿ ವಕೀಲರಾದರು.

ಕಲ್ಕತ್ತೆಯಲ್ಲಿ ಖಾನ್ ಬಹಾದುರ್ ಷಮಸುಲ್ ಹುದಾ ಎಂಬ ದೊಡ್ಡ ವಕೀಲರು. ಬಹಳ ಹೆಸರುವಾಸಿ. ಅವರ ಹತ್ತಿರ ವಕೀಲಿಗೆ ಸೇರಿದರು ರಾಜೇಂದ್ರರು. ದಿನವೆಲ್ಲ ದುಡಿತ, ಜೊತೆಗೆ ಎಂ.ಎಲ್. ಪರೀಕ್ಷೆಗೆ ಓದುವುದು. ಅವರ ಕೆಲಸ ನೋಡಿ ಷಮಸುಲ್ ಹುದಾಗೆ ತುಂಬ ಮೆಚ್ಚಿಗೆ.

ರಾಜೇಂದ್ರರ ಹತ್ತಿರ ದುಡ್ಡಿಲ್ಲ, ಕಾಸಿಲ್ಲ, ದೊಡ್ಡವರ ಸಹಾಯವೂ ಇಲ್ಲ. ಇದ್ದದ್ದೆಲ್ಲ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಬುದ್ಧಿವಂತಿಕೆ, ಹಾಗೇ ದುಡಿದರು. ನ್ಯಾಯಾಲಯದಲ್ಲಿ ಒಳ್ಳೆ ಹೆಸರು ಬಂತು. ಹಣ ಒಂದನ್ನೇ ನೋಡುತ್ತಿರಲಿಲ್ಲ ಅವರು. ಪ್ರಾಮಾಣಿಕರಾದ ಜನರ ಮೊಕದ್ದಮೆಯನ್ನೇ ತೆಗೆದುಕೊಳ್ಳುತ್ತಿದ್ದರು. ಕಲ್ಕತ್ತ ವಿಶ್ವ ವಿದ್ಯಾನಿಲಯದ ಮುಖ್ಯಸ್ಥರು ಸರ್. ಅಸುತೋ ಮುಖರ್ಜಿ ಇದನ್ನು ಕಂಡು ಮೆಚ್ಚಿಕೊಂಡರು. ಕಾಲೇಜ್ ಪ್ರೊಫೆಸರ್ ಕೆಲಸ ಕೊಟ್ಟರು.

ಅಷ್ಟರಲ್ಲಿ ಬಿಹಾರವೇ ಬೇರೆ ಪ್ರಾಂತ ಆಯಿತು. ರಾಜಧಾನಿ ಪಾಟ್ನ, ಅಲ್ಲಿಗೇ ಕೋರ್ಟು, ಕಛೇರಿ ಎಲ್ಲ ಬಂದವು. ರಾಜೇಂದ್ರರೂ ಬಂದರು, ಮನೆ ಹೂಡಿದರು. ಒಳ್ಳೆ ಸಂಪಾದನೆ, ಆದರೆ ಮನಸ್ಸು ಧಾರಾಳ. ಬಡಬಗ್ಗರಿಗೆ ಬೇಕಾದಷ್ಟು ಸಹಾಯ ಮಾಡುತ್ತಿದ್ದರು.

ಹೀಗೆ ಸ್ವಲ್ಪ ಕಾಲ ನೆಮ್ಮದಿ ಇತ್ತು. ಅಷ್ಟರಲ್ಲೇ ದೇಶ ಸೇವೆಯ ಕರೆ ಬಂತು. ಸತ್ಯಾಗ್ರಹದ ಗಾಳಿ ಬೀಸಿತು. ರಾಜೇಂದ್ರರನ್ನು ಸೆಳೆದುಕೊಂಡುಹೋಯಿತು. ಮುಂದೆ ಬದುಕೆಲ್ಲ ಅದೇ ಕೆಲಸವೇ!

ಸೇವೆಯ ಮಾರ್ಗದಲ್ಲಿ

೧೯೦೬ನೆಯ ಇಸವಿ. ಕಲ್ಕತ್ತೆಯಲ್ಲಿ ಕಾಂಗ್ರೆಸ್ ಮಹಾಸಭೆ ಸೇರಿತ್ತು. ಅಧ್ಯಕ್ಷರು ದಾದಾಭಾಯಿ ನವರೋಜಿ, ದೊಡ್ಡ ಮುಖಂಡರು. ಅಲ್ಲಿ ರಾಜೇಂದ್ರರು ಒಬ್ಬ ಸ್ವಯಂ ಸೇವಕರು, ಸಮವಸ್ತ್ರ ಹಾಕಿಕೊಂಡು ನಿಂತಿದ್ದರು. ಚಪ್ಪರದ ಬಾಗಿಲಲ್ಲಿ. ಅಲ್ಲಾಡಲಿಲ್ಲ. ಅದೇ ಅವರ ಕೆಲಸ. ಮುಂದೆ ಹಾಗೇ ಆಸಕ್ತಿ ಬೆಳೆಯಿತು. ೧೯೧೧ಕ್ಕೆ ಕಾಂಗ್ರೆಸ್ ಸೇರಿಯೇ ಬಿಟ್ಟರು.

ಒಂದು ಸಲ, ಪಾಟ್ನಾದಲ್ಲಿ ವಿಶ್ವವಿದ್ಯಾನಿಲಯ ಆಗಬೇಕು ಎಂದು ಸರ್ಕಾರ ಒಂದು ಕಾನೂನು ಮಾಡಿತು. ಆ ಕಾನೂನಿಂದ ಜನಕ್ಕೆ ಅನಾನುಕೂಲವೇ, ವಿದ್ಯಾರ್ಥಿಗಳಿಗೂ ತೊಂದರೆಯೇ. ರಾಜೇಂದ್ರರು ಇದು ತಪ್ಪು, ಬೇಡ ಎಂದು ವಿರೋಧಿಸಿದರು. ಇತರರೂ ಜೊತೆಗೂಡಿದರು. ಚಳುವಳೀನೇ ಆಗಿಹೋಯಿತು. ಸರ್ಕಾರ ಸೋತು ತಿದ್ದಿಕೊಳ್ಳಬೇಕಾಯಿತು. ಅದೇ ರಾಜೇಂದ್ರರ ಮೊಟ್ಟ ಮೊದಲನೆಯ ಸಾರ್ವಜನಿಕ ಕಾರ್ಯ. ಅದರಲ್ಲೇ ಗೆಲುವು!

ಬಿಹಾರದಲ್ಲಿ ಗಂಗೆ, ಸರಯೂ ಮೊದಲಾದ ನದಿಗಳಿವೆ. ಅವು ಆಗಾಗ ದಡಮೀರಿ ಹರಿದು ಊರುಕೇರಿ ಎಲ್ಲವನ್ನೂ ಕೊಚ್ಚಿಬಿಡುತ್ತವೆ. ೧೯೧೪ರಲ್ಲಿ ಹೀಗೆ ಆಯಿತು. ಎಲ್ಲೆಲ್ಲೂ ನೀರೇ, ದವಸ, ಧಾನ್ಯ, ದನಕರು ಎಲ್ಲ ನೀರುಪಾಲು.ಜನರಿಗೆ ಗೋಳೊ ಗೋಳು. ರಾಜೇಂದ್ರರಿಗೆ ಇದು ತಿಳಿಯಿತೊ ಇಲ್ಲವೊ ಎಲ್ಲ ಕೆಲಸ ಬಿಟ್ಟು ಓಡಿದರು. ವಿದ್ಯಾರ್ಥಿಗಳ ದಳ ಕಟ್ಟಿದರು. ದವಸ ಧಾನ್ಯ, ಬಟ್ಟೆಬರೆ ಕೂಡಿಹಾಕಿ ದೋಣಿಯಲ್ಲಿ ತುಂಬಿ ಕೊಂಡು ಹಳ್ಳಿಹಳ್ಳಿಗೆ ಹೋಗಿ ಹಂಚಿದರು. ಜನರನ್ನು ಉಳಿಸಿದರು. ಹೀಗೆ ಸೇವೆಯ ಕೆಲಸ ಮೊದಲಾಯಿತು.

ರಾಜಕೀಯದ ಮಾತೇ ಮಾತು ಆಗ ಎಲ್ಲೆಲ್ಲೂ ಲೋಕಮಾನ್ಯ ತಿಲಕರು, ಗೋಖಲೆಯವರು, ಲಾಲಾ ಲಜಪತರಾಯ್ ಮೊದಲಾದ ದೊಡ್ಡ ದೊಡ್ಡ ನಾಯಕರ ಒಡಾಟವೇ ಒಡಾಟ, ಮಾತೇ ಮಾತು. ಸರ್ಕಾರಕ್ಕೆ ಗಾಬರಿ. ಕಾಂಗ್ರೆಸ್ ಇಡೀ ದೇಶದ ಸಂಸ್ಥೆ. ದೇಶದ ಎಲ್ಲ ದೊ‌ಡ್ಡ ನಾಯಕರೂ ಬುದ್ಧಿವಂತರೂ ಅದರಲ್ಲಿ ಇದ್ದರು.

೧೯೧೬ರಲ್ಲಿ ಲಖ್ನೋದಲ್ಲಿ ಕಾಂಗ್ರೆಸ್ ಸಭೆ. ರಾಜೇಂದ್ರರೂ ಹೋಗಿದ್ದರು. ಬಿಹಾರದ ಪರವಾಗಿ. ಅಲ್ಲಿಗೆ ಮಹಾತ್ಮಗಾಂಧಿ ಬಂದಿದ್ದರು. ದಕ್ಷಿಣ ಆಫ್ರಿಕದಲ್ಲಿ ಬಿಳಿಯರ ವಿರುದ್ಧ ಹೋರಾಡಿ ಗೆದ್ದು ಬಂದಿದ್ದರು. ರಾಜೇಂದ್ರರಿಗೆ ಆಗಲೇ ಮೊದಲು ಅವರ ದರ್ಶನ, ಅದೂ ದೂರದಿಂದ.

ಬಂದರು ಗಾಂಧೀಜಿ

ಬಿಹಾರದಲ್ಲಿ ಚಂಪಾರಣ್ಯ ಎನ್ನುವುದು ಇನ್ನೊಂದು ಜಿಲ್ಲೆ. ಹಿಮಾಲಯದ ಬುಡದಲ್ಲಿದೆ. ಬಟ್ಟೆಗೆ ಹಾಕುತ್ತಾರಲ್ಲ ನೀಲಿ, ಅದನ್ನು ಮೊದಲು ಒಂದು ಗಿಡದಿಂದ ತೆಗೆಯುತ್ತಿದ್ದರು. (ಈಗ ಕಾರ್ಖಾನೆಯಲ್ಲಿ ತಯಾರಿಸುತ್ತಾರೆ). ಆ ನೀಲಿ ಬೆಳೆ ಚಂಪಾರಣ್ಯದಲ್ಲಿ ಜಾಸ್ತಿ. ಒಳ್ಳೆ ಲಾಭದ ಬೆಳೆ. ಸರಿ, ಬ್ರಿಟಿಷ್ ಸಾಹುಕಾರರು ಬಿಡುತ್ತಾರೆಯೇ? ಬಂದು ಜಮೀನು ಕೊಂಡರು. ಸಾಹುಕಾರರಾದರು. ಬಿಹಾರಿಗಳು ಅವರ ಜಮೀನಿನಲ್ಲಿ ದುಡಿದು ದುಡಿದು ಬಡವಾದರು. ಈ ನಡುವೆ ನೀಲಿ ತಯಾರಿಕೆ ಶುರು ಆಗಿತ್ತು. ಬೆಳೆದ ನೀಲಿಗೆ ಗಿರಾಕಿ ಕಡಿಮೆ ಆಗಿ ಲಾಭ ಕುಗ್ಗಿತು. ಜಮೀನುದಾರರು ರೈತರನ್ನು ಓಡಿಸಲು ಪ್ರಾರಂಭಿಸಿದರು. ಬಡಜನರ ಸಂಕಟ – ಕೋಪ ಹೆಚ್ಚಿತು.  ಇಬ್ಬರ ನಡುವೆ ಸೆಣಸಾಟ! ಈ ಸಮಾಚಾರ ಗಾಂಧೀಜಿಗೆ ತಿಳಿಯಿತು. ಕೂಡಲೇ ಹೊರಟು ಬಂದರು.

ಚಂಪಾರಣ್ಯದ ಮುಖ್ಯಪಟ್ಟಣ ಮೋತೀಹಾರಿ. ದಾರಿಯಲ್ಲಿ ಪಾಟ್ನದಲ್ಲಿ ರಾಜೇಂದ್ರಪ್ರಸಾದ್ ರ ಮನೆಗೆ ಹೋಗಿದ್ದರು. ಪ್ರಸಾದರು ಮನೆಯಲ್ಲಿ ಇರಲಿಲ್ಲ. ಮನೆಯ ಆಳು ಗಾಂಧೀಜಿಯನ್ನು ಗುರುತಿಸಲಿಲ್ಲ. ಯಾರೋ ಹಳ್ಳೀ ಕ್ಷಿಗಾರ ಎಂದುಕೊಂಡ. ಅಸಡ್ಡೆಯಾಗಿ ಮಾತನಾಡಿಸಿದ. ಮುಂದೆ ಪ್ರಸಾದರಿಗೆ ಇದು ತಿಳಿಯಿತು. ಬಹಳ ಪೇಚಾಡಿಕೊಂಡರು. ಗಾಂಧೀಜಿಯನ್ನು ಕಂಡಾಗ, ’ತಪ್ಪಾಯಿತು, ಕ್ಷಮಿಸಿ’ ಎಂದು ಕೇಳಿಕೊಂಡರು. ’ನನಗೇನೂ ತೊಂದರೆಯಾಗಲಿಲ್ಲ, ಮನಸ್ಸಿಗೆ ಹಚ್ಚಿಕೊಳ್ಳಬೇಡ” ಎಂದು ಗಾಂಧೀಜಿ ಸಮಾಧಾನ ಮಾಡಿದರು.

ಗಾಂಧೀಜಿ ಮೋತೋಹಾರಿಯಲ್ಲಿ ರೈತರ ಗೋಳನ್ನು ವಿಚಾರಿಸಲು ಆರಂಭಿಸಿದರು. ತಮ್ಮ ಹುಳುಕು ಹೊರ ಬೀಳುತ್ತಲ್ಲ ಎಂದು ಬಿಳಿಯ ಜಮೀನುದಾರರಿಗೆ ಕೋಪ, ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಅಲ್ಲವೆ! ಸರ್ಕಾರಕ್ಕೆ ದೂರಿಟ್ಟರು. ಬಿಳಿಯರ ಸರ್ಕಾರ ಅವರ ಪರ ತಾನೆ! ಜಿಲ್ಲೆ ಬಿಟ್ಟು ಹೊರಡಿ ಎಂದು ಜಿಲ್ಲಾಧಿಕಾರಿ ಅಪ್ಪಣೆ ಮಾಡಿದ ಗಾಂಧೀಜಿಗೆ. ಗಾಂಧೀಜಿ ಕೇಳಿಯಾರೆ! ’ನನ್ನ ಕೆಲಸ ಅದಲ್ಲದೆ ಹೋಗಲಾರೆ’ ಎಂದರು. ಅವರನ್ನು ಜೈಲಿಗೆ ಹಾಕುತ್ತಾರೆ ಎಂಬ ಸುದ್ದಿ ಎದ್ದಿತು. ರಾಜೇಂದ್ರರಿಗೆ ಎಲ್ಲ ತಿಳಿಯಿತು. ಗೆಳೆಯರೊಂದಿಗೆ ಓಡಿದರು. ಆ ವೇಳೆಗೆ ನ್ಯಾಯಾಲಯದಲ್ಲಿ ಗಾಂಧೀಜಿಯ ವಿಚಾರಣೆ ನಡೆದಿತ್ತು. ಅದೇ ಮೊದಲು ಪ್ರಸಾದರು ಗಾಂಧೀಜಿಯನ್ನು ಮಾತನಾಡಿಸಿದ್ದು, ’ಏನೋ ಎಲ್ಲರ ಹಾಗೇ, ವಿಶೇಷ ಏನೂ ಇಲ್ಲ’ ಅನ್ನಿಸಿತು.

ಗಾಂಧೀಜಿಗೆ ಶಿಕ್ಷೆ ಆದರೆ ಮುಂದೇನು? ಅಲ್ಲಿದ್ದವರೆಲ್ಲ ನಾವು ಸಿದ್ಧ ಚಳುವಳಿಗೆ, ಜೈಲಿಗೆ ಹೋಗೋದಕ್ಕೂ ಸಿದ್ಧ ಎಂದರು.

ಬಡವರ ಜೀವನ ಕಂಡರು

ಎಲ್ಲರೂ ಹಳ್ಳಿಹಳ್ಳಿ ತಿರುಗಿ ರೈತರನ್ನು ಕಂಡು ಅವರ ಗೋಳನ್ನು ಕೇಳಿದರು, ಬರೆದುಕೊಂಡರು. ಭಾರತದ ಹಳ್ಳಿಗಳಲ್ಲಿ ಎಷ್ಟು ಬಡತನ ಏ‌ಟು ಅಜ್ಞಾನ ಇದೆ ಎನ್ನುವುದು ಗಾಂಧೀಜಿಗೆ ತಿಳಿಯಿತು. ಇಪ್ಪತ್ತು ಸಾವಿರ ಜನ ಹೇಳಿದ್ದನ್ನೆಲ್ಲ ಬರೆದಿಟ್ಟಾಯಿತು. ಸರ್ಕಾರಕ್ಕೆ ಗಾಬರಿಯೋ ಗಾಬರಿ. ಗಾಂಧೀಜಿಯವರ ವಿಚಾರಣೆ ತೀರ್ಪಿನ ದಿನ ಬಂತು. ಜೈಲುಶಿಕ್ಷೆ ಖಂಡಿತ ಎಂದೂ ಎಲ್ಲರೂ ತುದಿಗಾಲಲ್ಲಿ ನಿಂತಿದ್ದರು. ಆದರೆ, ಮೇಲು ಸರ್ಕಾರದಿಂದ ಆಜ್ಞೆ ಬಂದಿತ್ತು. ಮೊಕದ್ದಮೆ ನಿಲ್ಲಿಸಿದೆ ಎಂದು. ಗಾಂಧೀಜಿ ಗೆದ್ದರು. ರಾಜೇಂದ್ರರಿಗೆ ಅವರ ಮೇಲೆ ಶ್ರದ್ಧೆ – ಗೌರವ ಹೆಚ್ಚಿತು.

ರಾಜೇಂದ್ರ ಪ್ರಸಾದರು ಚಂಪಾರಣ್ಯದ ಜನರ ಕಷ್ಟಗಳ ಕಥೆಗಳನ್ನು ಬರೆದುಕೊಂಡರು.

ಗಾಂಧೀಜಿ ಹೋದ ಕಡೆಯಲ್ಲೆಲ್ಲ ಬಡಜನಕ್ಕೆ ಏನೋ ಧೈರ್ಯ ಮೂಡಿತು. ’ನಮ್ಮ ಮೊರೆ ಕೇಳುವವ ಬಂದಿದ್ದಾನೆ, ನಮ್ಮನ್ನು ಉದ್ಧರಿಸುತ್ತಾನೆ’ ಎನ್ನಿಸಿತು. ಸಾವಿರಗಟ್ಟಲೆ ಜನ ಬಿಳಿಯ ಜಮೀನುದಾರರ ಯಾವ ಬೆದರಿಕೆಯನ್ನೂ ಲೆಕ್ಕಿಸದೆ ಬಂದು ತಮ್ಮ ಕಷ್ಟವನ್ನೆಲ್ಲ ಅಂಜದೆ ಹೇಳುತ್ತಿದ್ದರು. ದಿನವೆಲ್ಲ ಹೀಗೇ. ರಾಜೇಂದ್ರ ಪ್ರಸಾದರೂ ಅವರ ಕಷ್ಟಗಳ ಕಥೆಗಳನ್ನು ಕೇಳುತ್ತಿದ್ದರು. ಬಡರೈತರ ಜೀವನದ ಕಷ್ಟ ಸಮಸ್ಯೆಗಳು ಅವರ ಕಣ್ಣಿಗೆ ಕಟ್ಟಿದುವು.

ಗಾಂಧೀಜಿಯ ತಂದೆ, ತಾಯಿ, ಗುರು ಎಲ್ಲ

ಗಾಂಧೀಜಿಯ ತಂಡದವರು ತಮ್ಮ ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕು. ಇವನು ಬೇರೆ ಅವನು ಬೇರೆ ಎಂಬುದಿಲ್ಲ. ಎಲ್ಲ ಒಂದೇ ಮನೆಯ ಹಾಗೆ. ಅಡುಗೆಯೆಲ್ಲ ಗಾಂಧಿಯವರ ಹೆಂಡತಿ ಕಸ್ತೂರಿಬಾ ಅವರದು. ಗಾಂಧೀಜಿ ಹಳ್ಳಿಯ ಬಡರೈತರ ಜೊತೆಯಲ್ಲಿ ಅವರ ಹಾಗೆಯೇ ಇರುತ್ತಿದ್ದರು. ರಾಜೇಂದ್ರರಿಗೆ ಮತ್ತು ಅವರ ಸ್ನೇಹಿತರಿಗೆ ಇವೆಲ್ಲ ಹೊಸದು. ಕೆಲಸದಲ್ಲಿ ಗಾಂಧೀಜಿ ಎಷ್ಟು ಗಟ್ಟಿಗರು, ಎಷ್ಟು ಸರಳರು, ಜನರನ್ನು ಹೇಗೆ ಕಾಣುತ್ತಾರೆ, ಎಷ್ಟು ಕರುಣೆ ಅವರಿಗೆ ಇವೆಲ್ಲ ವಿಚಾರಗಳು ರಾಜೇಂದ್ರರ ಮನಸ್ಸನ್ನು ತುಂಬಿದವು. ಆಗಲೇ ಅವರು ಗಾಂಧೀ ಶಿಷ್ಯರಾಗಿಬಿಟ್ಟರು. ಮುಂದೆ ಗಾಂಧೀಜಿಯವರಿಗೆ ತಂದೆ, ತಾಯಿ ಗುರು ಎಲ್ಲ.

ಗಾಂಧೀಜಿ ತಯಾರಿಸಿದ ವರದಿ ಸರ್ಕಾರಕ್ಕೆ ಹೋಯಿತು. ಸರ್ಕಾರ ಅದನ್ನು ಒಪ್ಪಿ ಸಂಧಾನ ಮಾಡಿ ಒಂದು ಒಪ್ಪಂದ ಏರ್ಪಡಿಸಿತು. ಸಾವಿರಾರು ಬಡರೈತರು ಉಳಿದುಕೊಂಡರು. ಜಮೀನುದಾರರೂ ಮನಸ್ಸು ಬದಲಾಯಿಸಿ ರೈತರ ಹಿಂಸೆಯನ್ನು ಬಿಟ್ಟರು. ಹಳ್ಳಿಯವರಿಗೂ ಧೈರ್ಯ ಬಂತು. ಒಗ್ಗಟ್ಟು ಬಂತು. ಸತ್ಯಾಗ್ರಹದ ರೀತಿಯೇ ಹೀಗೆ. ಎರಡು ಕಡೆಗೂ ಒಳ್ಳೆಯದೇ ಆಗುತ್ತದೆ.

ಸ್ವತಂತ್ರ ಭಾರತ ಗಣರಾಜ್ಯದ ಮೊದಲನೆಯ ರಾಷ್ಟ್ರಪತಿಯಾಗಿ ರಾಜೇಂದ್ರಪ್ರಸಾದರು ಅಧಿಕಾರಿ ಸ್ವೀಕರಿಸಿದರು.

ಬ್ರಿಟಿಷರ ರಕ್ತಪಾತ

ದೇಶದಲ್ಲೆಲ್ಲ ಗಾಂಧೀಜಿಯ ಪ್ರಭಾವ ಬೆಳೆಯಿತು. ಅನೇಕರು ಅವರನ್ನು ಮೆಚ್ಚಿಕೊಂಡು ಅವರ ಹಿಂದೆ ಹೆಜ್ಜೆ ಹಾಕಿದರು.

ಸ್ವರಾಜ್ಯದ ಚಳುವಳಿ ಬಲವಾಗುತ್ತಾ ಇತ್ತು. ’ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು. ಯಾರೂ ಅದನ್ನು ಕಸಿದುಕೊಳ್ಳುವ ಹಾಗಿಲ್ಲ’ ಎಂದು ಲೋಕಮಾನ್ಯ ತಿಲಕರು ಸಿಂಹದಂತೆ ಗರ್ಜಿಸಿದರು. ಅವರಿಗೆ ದೂರದ ಬರ್ಮಾದಲ್ಲಿ ಆರು ವರ್ಷ ಜೈಲುವಾಸ ಆಯಿತು. ಮೊದಲನೆಯ ಮಹಾಯುದ್ಧ ಬೇರೆ. ಅದರಲ್ಲಿ ಭಾರತೀಯರು ಬ್ರಿಟಿಷ್ ದೊರೆಗಳಿಗೆ ಸಹಾಯ ಮಾಡಿದರು. ಮುಂದೆ ಅವರು ಸ್ವಾತಂತ್ರ‍್ಯ ಕೊಟ್ಟಾರು ಎಂಬ ಆಸೆ.

ಆದರೆ ಜನ ಬಯಸಿದ್ದು ರೊಟ್ಟಿ. ಸರ್ಕಾರ ಕೊಟ್ಟದ್ದು ಕಲ್ಲು. ಹೊಸದೊಂದು ಕಾನೂನು ಬಂತು. ಜನರಿಗೆ ಇದ್ದ ಸಣ್ಣಪುಟ್ಟ ಹಕ್ಕೂ ಹೋಯಿತು. ನಿರಾಶೇ ಕೋಪ ಜನಕ್ಕೆ. ಸರ್ಕಾರದ ವಿರುದ್ಧ ಉಗ್ರ ಚಳುವಳಿ ಆಯಿತು. ಪಂಜಾಬಿನ ಅಮೃತಸರದ ಸಿಖ್ಖರ ಪವಿತ್ರ ಸ್ಥಳ. ಅಲ್ಲಿ ಜಲಿಯನ್ ವಾಲಾಬಾಗ್ ಎಂಬ ಒಂದು ಬಯಲಿನಲ್ಲಿ ದೊಡ್ಡ ಸಭೆ ಸೇರಿತ್ತು. ಡಯರ್ ಎನ್ನುವ ಪೊಲೀಸ್ ಅಧಿಕಾರಿ ಗುಂಡು ಹಾರಿಸಿ ನೂರಾರು ಜನರನ್ನು ಕೊಂದು ಹಾಕಿದ. ನೂರಾರು ಜನಕ್ಕೆ ಗಾಯವಾಯಿತು.

ದೇಶಸೇವೆಯ ಮಾರ್ಗ

ಇದಕ್ಕೆ ದೇಶಕ್ಕೆ ದೇಶವೇ ತಿರುಗಿಬಿತ್ತು. ಎಲ್ಲೆಲ್ಲೂ ಚಳುವಳಿ, ಸಭೆ, ಮೆರವಣಿಗೆ, ಹರತಾಳ, ಭಾರಿ ಗೊಂದಲ, ನೂರಾರು ಸರ್ಕಾರಿ ಕೆಲಸ ಬಿಟ್ಟರು. ಶಾಲೆ ಕಾಲೇಜು ಬಿಟ್ಟರು. ಚಳುವಳಿಗೆ ನಿಂತರು.

ಗಾಂಧೀಜಿ ತಮ್ಮ ಹೊಸ ಕಾರ್ಯಕ್ರಮ ಇಟ್ಟರು ದೇಶದ ಮುಂದೆ. ’ಅಪ್ಪಾ, ಬೇಡ, ಸುಮ್ಮನೆ ಒಬ್ಬಿಬ್ಬರನ್ನು ಕೊಂದರೆ ಏನು? ನಮ್ಮ ಬಳಿ ಸೇನೆ, ಗುಂಡು ಇಲ್ಲ. ಬ್ರಿಟಿಷರ ಹತ್ತಿರ ಇವೆ. ನಾವು ಸಹಕರಿಸಿದರೆ ತಾನೇ ಅವರು ಆಳುವುದು! ಅವರು ಹೇಳಿದಂತೆ ಮಾಡುವುದೇ ಬೇಡ. ಅವರಿಗೆ ಕಂದಾಯ ಕೊಡುವುದೇ ಬೇಡ. ಆಗ ಹೇಗೆ ಸರ್ಕಾರ ನಡೆಯುತ್ತೆ? ಅದರಿಂದ ನಮಗೆ ಕಷ್ಟ ತೊಂದರೆ ಆಗಬಹುದು. ಸರ್ಕಾರ ಬಲಾತ್ಕಾರ ಮಾಡಬಹುದು.ಮಾಡಲಿ, ಸಹಿಸೋಣ. ಕಷ್ಟಪಡಲೇಬೇಕು. ನಮ್ಮ ರಕ್ತ ಚೆಲ್ಲೋಣ, ಸ್ವಾತಂತ್ರ‍್ಯ ಪಡೆಯೋಣ’ ಎಂದು ಹೊಸ ದಾರಿ ತೋರಿಸಿದರು.

ಜನಕ್ಕೆ ಇದು ಹಿಡಿಸಿತು. ಬಡವರು, ಮುದುಕರು, ಹೆಂಗಸರು, ಮಕ್ಕಳು ಎಲ್ಲರೂ ಸೇರಬಹುದಾದ ಕಾರ್ಯಕ್ರಮ ಇದು. ಎಲ್ಲರೂ ಸೇರಿದರು. ಅಲ್ಲಿಂದ ಸತ್ಯಾಗ್ರಹ ಆರಂಭ.

ಬದುಕು ದೇಶಕ್ಕಾಗಿ

ರಾಜೇಂದ್ರಪ್ರಸಾದರಿಗೆ ಗಾಂಧೀಜಿಯ ಮಾರ್ಗ ಹಿಡಿಸಿತು. ದೇಶಕ್ಕಾಗಿ ದುಡಿದರು. ಮನೆಯವರ ವಿಷಯ, ತಮ್ಮ ಕಾಯಿಲೆ ಯಾವುದನ್ನೂ ಯೋಚಿಸದೆ ಊರೂರು ಅಲೆದರು, ಜನರಲ್ಲಿ ದೇಶಪ್ರೇಮವನ್ನು ಉಕ್ಕಿಸಿದರು. ’ವಕೀಲಿ ಕೆಲಸ ಬಿಡ” ಎಂದು ನಾಯಕರು ಹೇಳಿದರೊ ಇಲ್ಲವೋ ಬಿಟ್ಟೇಬಿಟ್ಟರು. ಸಾವಿರಾರು ರೂಪಾಯಿ ಬರುತ್ತಿದ್ದ ಕೆಲಸ. ಹಿಂದೆಮುಂದೆ ನೋಡಲಿಲ್ಲ. ಬಿಟ್ಟರು. ಕೈಯಲ್ಲಿದ್ದ ಕೇಸುಗಳನ್ನೆಲ್ಲ ತೆಗೆದುಕೊಂಡಿದ್ದ ಹಣದ ಸಮೇತ ವಾಪಸು ಮಾಡಿಬಿಟ್ಟರು. ಮೊದಲೇ ಧಾರಾಳಿ. ವಕೀಲಿ ಬಿಟ್ಟಾಗ ಅವರ ಲೆಕ್ಕದಲ್ಲಿ ಬ್ಯಾಂಕಿನಲ್ಲಿ ಇದ್ದದ್ದು ಹದಿನೈದೇ ರೂಪಾಯಿ! ಆಸ್ತಿ-ಪಾಸ್ತಿ ಏನೂ ಇರಲಿಲ್ಲ.

ಚಂಪಾರಣ್ಯದ ಹಳ್ಳಿಗಾಡಿನಲ್ಲಿ ತಿರುಗಾಡಿದವರಲ್ಲ, ಆಗಲೇ ಪ್ರಸಾದರಿಗೆ ಅನ್ನಿಸಿತು. ಈ ಬಡಜನರ ಉದ್ಧಾರಕ್ಕೆ ಏನಾದರೂ ಮಾಡಬೇಕು ಎಂದು. ವಿಚಾರ ಹೊಳೆದದ್ದೇ ತಡ, ಕೆಲಸ ಪ್ರಾರಂಭ. ಸ್ನೇಹಿತರನ್ನು ಕಟ್ಟಿಕೊಂಡರು. ಅಲ್ಲಲ್ಲಿ ಶಾಲೆಗಳನ್ನು ತೆರೆದರು. ಆ ವೇಳೆಗೆ ಹಳ್ಳಿಜನಕ್ಕೆ ಉದ್ಯೋಗ ಒದಗಿಸಬೇಕು, ಕೈಕಸಬು ಮಾಡಿಸಬೇಕು ಎಂದು ಗಾಂಧೀಜಿ ನೂಲುವುದು, ನೇಯುವುದು, ಇವನ್ನೆಲ್ಲ ಹೇಳಿದ್ದರಲ್ಲ. ಸರಿ, ರಾಜೇಂದ್ರರೂ ಈ ಎಲ್ಲ ಕೆಲಸಗಳನ್ನೂ ವಹಿಸಿಕೊಂಡರು.

ನಮ್ಮ ದೇಶದಲ್ಲಿ ಹಿಂದಿನಿಂದ ಇವೆಲ್ಲ ಕಸಬೂ ಇದ್ದೇ ಇದ್ದವು. ಬ್ರಿಟಿಷರು ಇವನ್ನು ತುಳಿದು ಹಾಕಿ ತಮ್ಮ ಗಿರಣಿ ಮಾಲಿಗೆ ಗಿರಾಕಿ ಹೆಚ್ಚಿಸಿಕೊಂಡಿದ್ದರು. ಜನರ ಬಡತನ ಹೆಚ್ಚಿತ್ತು. ಬಿಹಾರವಂತೂ ಹಿಂದೆ ಸೊಗಸಾದ ನೇಯ್ಗೆಗೆ ಹೆಸರುವಾಸಿ. ಈಗ ಎಲ್ಲ ಹಾಳಾಗಿತ್ತು. ಇದನ್ನೆಲ್ಲ ನೋಡಿಯೇ ಗಾಂಧೀಜಿಯವರು ಕೈಕಸಬಿನ ಪ್ರಚಾರ ಮಾಡಿದರು. ಇದಕ್ಕಾಗಿಯೇ ಅವರು ಹದಿನೆಂಟು ರೀತಿಯ ಕಾರ್ಯಕ್ರಮ ಹಾಕಿಕೊಟ್ಟರು ರಚನಾತ್ಮಕ ಕಾರ್ಯ ಎಂದು.

ರಾಜೇಂದ್ರಪ್ರಸಾದರಿಗೆ ಇವೆಲ್ಲ ತುಂಬ ಹಿಡಿಸಿದವು. ದೇಶದ ಉದ್ಧಾರಕ್ಕೆ ಇದೇ ದಾರಿ ಅನ್ನಿಸಿತು, ನಿಷ್ಠೆಯಿಂದ ಎಲ್ಲವನ್ನೂ ನಡೆಸಿದರು. ಖಾದಿ ಕೆಲಸ, ಚರಕಾ ಪ್ರಚಾರ, ಹೆಂಡದ ವಿರುದ್ಧ ಹೋರಾಟ ಎಲ್ಲ ನಡೆಸಿದರು. ನಮ್ಮ ಕರ್ನಾಟಕದ ಬೆಳಗಾವಿಯಲ್ಲಿ ಕಾಂಗ್ರೆಸ್ ಸಭೆ ನಡೆಯಿತು. ಗಾಂಧೀಜಿಯೇ ಅಧ್ಯಕ್ಷರು. ಆಗ ಖಾದಿ ಪ್ರದರ್ಶನ ಆರಂಭ ಮಾಡಿದ್ದು ರಾಜೇಂದ್ರಪ್ರಸಾದರೇ!

ಸರ್ಕಾರಿ ಶಾಲೆ ಬೇಡ ಎಂದರೆ ಮಕ್ಕಳಿಗೆ ಏನು ದಾರಿ? ಜನರೇ ಶಾಲೆ ತೆರೆದರು ಎಲ್ಲೆಲ್ಲೂ, ಬಿಹಾರದಲ್ಲೂ ಪ್ರಸಾದರು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಎಂಬ ಸಂಸ್ಥೆಯನ್ನು ಕಟ್ಟಿದರು. ತಾವೇ ಪಾಠ ಹೇಳಿದರು. ಮಜರುಲ್ ಹಕ್ ಸಾಹೇಬ್ ಎಂಬ ದೊಡ್ಡ ಮನುಷ್ಯರು ಪಾಟ್ನ ಬಳಿ ತಮ್ಮ ಸದಾಖತ್ ಮಂಜಿಲ್ ಬಂಗಲೆಯನ್ನೇ ಈ ಕೆಲಸಕ್ಕೆ ದಾನ ಕೊಟ್ಟರು. ಅದನ್ನೇ ರಾಜೇಂದ್ರರು ಸದಾಖಲತ್ ಆಶ್ರಮ ಎಂದು ಮಾಡಿದರು. ಕಾಂಗ್ರೆಸ್ ಕೆಲಸ, ಖಾದಿ ಕೆಲಸ ಎಲ್ಲಕ್ಕೂ ಅದೇ ಕೇಂದ್ರ. ರಾಜೇಂದ್ರಪ್ರಸಾದರು ದೆಹಲಿಗೆ ಮಂತ್ರಿಯಾಗಿ ಹೋಗುವವರೆಗೂ ಇದ್ದದ್ದು ಅಲ್ಲೆ ಒಂದು ಗುಡಿಸಲಿನಲ್ಲಿ.

ಸೆರೆಮನೆಯ ಬಂದಿ – ಕಾಂಗ್ರೆಸ್ಸಿನ ಸಾರಥಿ

ಕಾಂಗ್ರೆಸ್ ಕೆಲಸ ಅಂದರೆ ಆಗ ತುಂಬ ಕಷ್ಟದ ಕೆಲಸ. ಭಾರತ ಮಾತಾ ಕೀ ಜೈ ಅಂದರೆ ಜೈಲಿಗೆ ಕಳಿಸುತ್ತಿದ್ರು. ಕಾಂಗ್ರೆಸ್ಸಿಗೆ ಸೇರುವುದು ಅಂದರೆ ಜೈಲಿಗೆ ಸಿದ್ಧವಾಗಬೇಕು ಎಂತಲೇ.

ಇಷ್ಟು ದೊಡ್ಡ ಚಳುವಳಿ ನಡೆಸಿದ ರಾಜೇಂದ್ರ ಪ್ರಸಾದರಿಗೆ ಜೈಲು ತಪ್ಪೀತೇ? ೧೯೩೦ರಲ್ಲಿ ಪಾಟ್ನಾದಲ್ಲಿ ಚಳುವಳಿ. ರಾಜೇಂದ್ರರಿಗೆ ಲಾಠಿ ಏಟು ಬಿತ್ತು. ಗೆಳೆಯ ಕಾಪಾಡದೆ ಇದ್ದರೆ ಏನು ಆಗುತ್ತಿತ್ತೋ?! ಆಮೇಲೆ ದಸ್ತಗಿರಿ. ಹಜಾರಿಬಾಗ್ ಜೈಲಿಗೆ ಗುಟ್ಟಾಗಿ ಕರೆದುಕೊಂಡು ಹೋಗಿ ಇಟ್ಟರು. ಆರು ತಿಂಗಳ ಸಜಾ.

ಜೈಲಿನಲ್ಲಿ ಮುಖಂಡರಿಗೆ ಒಳ್ಳೆ ಊಟ, ಹಾಸಿಗೆ, ಅನುಕೂಲ ಇದ್ದವು. ಆದರೆ ಬಡವರೊಂದಿಗೇ ಬೆಳೆದ ಪ್ರಸಾದರು, ಇವೆಲ್ಲ ಬೇಡ. ಎಲ್ಲ ಖೈದಿಗಳ ಹಾಗೇ ನನಗೂ ಇರಲಿ ಎಂದುಬಿಟ್ಟರು. ಓದು, ಬರೆಹ, ರಾಮಾಯಣ ಉಪನಿಷತ್ತುಗಳ ಅಭ್ಯಾಸ, ನೂಲುವುದು, ನೇಯುವುದು ಹೀಗೆ ಜೈಲುವಾಸ ಕಳೆದದ್ದೇ ಗೊತ್ತಾಗಲಿಲ್ಲ.

ಮುಂದಿನ ಸಲ ೧೯೩೩ರಲ್ಲಿ ಹದಿನೈದು ತಿಂಗಳ ಸಜಾ ಆಯಿತು, ಅದೇ ಜೈಲಿನಲ್ಲಿ ಆಗ ಪ್ರಸಾದರಿಗೆ ತುಂಬ ಕಾಯಿಲೆ ಆಯಿತು. ಪಾಟ್ನ ಆಸ್ಪತ್ರೆಗೆ ಸಾಗಿಸಿದರು. ಬದುಕಿದ್ದೇ ಹೆಚ್ಚು.

ಕೊನೆಯ ಸಲ ಜೈಲು ಕಂಡದ್ದು ೧೯೪೨ರ ಚಳುವಳಿಯಲ್ಲಿ, ಆ ವರ್ಷ ಆಗಸ್ಟ್ ೯ ರಂದು ಪ್ರಸಾದರನ್ನು ಪೊಲೀಸರು ಸೆರೆ ಹಿಡಿದರು. ಆಗ ಜಿಲ್ಲಾಧಿಕಾರಿ ಜೊತೆಗೆ ವೈದ್ಯಾಧಿಕಾರಿಯೂ ಇರುತ್ತಿದ್ದ. ಮೊದಲು ಇವರ ದೇಹ ಸ್ಥಿತಿ ನೋಡಿ ಆಮೇಲೆ ದಸ್ತಗಿರಿ! ಮತ್ತೆ ಸೆರೆಮನೆ ವಾಸ ಮೂರು ವರ್ಷ. ಆಗ ಕಾಲ ಹೇಗೆ ಕಳೆಯಿತು ಎನ್ನುವುದನ್ನು ಅವರೇ ಹೇಳಿದ್ದಾರೆ:

’ಓದುತ್ತ, ಬರೆಯುತ್ತ, ನೂಲುತ್ತ, ನೇಯುತ್ತ, ಕಾಯಿಲೆ ಬೀಳುತ್ತ, ಜನರಿಂದ ಚಳುವಳಿಯ ಸುದ್ದಿ ಕೇಳುತ್ತ : ವಾಲ್ಮೀಕಿ ರಾಮಾಯಣ, ಆಧ್ಯಾತ್ಮ ರಾಮಾಯಣ, ಮಹಾಭಾರತ, ಭಾಗವತ, ಚೈತನ್ಯಚರಿತ ಮುಂತಾಆದವುಗಳನ್ನು ಕೇಳುತ್ತ ಕಾಲ ಕಳೆದೇ ಹೋಯಿತು’.

ಜೈಲಿಗೆ ಹೋದಷ್ಟೆ ಸಲ ಪ್ರಸಾದರು ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು. ಕಾಂಗ್ರೆಸ್ ಅಧ್ಯಕ್ಷ ಅಂದರೆ ಆಗ ರಾಷ್ಟ್ರಪತಿ ಅಂತಲೆ, ತುಂಬ ಗೌರವ.

೧೯೩೪ರಲ್ಲಿ ಬೊಂಬಾಯಿಯಲ್ಲಿ ಕಾಂಗ್ರೆಸ್ ಸೇರಿತು. ರಾಜೇಂದ್ರ ಪ್ರಸಾದರೇ ಅಧ್ಯಕ್ಷರು ಆಗಬೇಕು ಎಂದರು ಎಲ್ಲರೂ. ಪ್ರಸಾದರಿಗೆ ಸಂಕೋಚ ಒಲ್ಲೆ ಎಂದರು. ಕೊನೆಗೆ ಗಾಂಧೀಜಿ ಹೇಳಿದ ಮೇಲೆ ಒಪ್ಪಿಕೊಂಡರು. ಬೊಂಬಾಯಿಗೆ ಅವರು ಬಂದಾಗ ಭಾರಿ ಸ್ವಾಗತ, ಮೆರವಣಿಗೆ. ಪ್ರಸಾದರೂ ವಕೀಲರು ತಾನೇ, ಒಳ್ಳೆ ನ್ಯಾಯವಾದಿ ಕಟ್ಟುನಿಟ್ಟಾಗಿ ಸಭೆ ನಡೆಸಿದರು. ಆಮೇಲೆ ಅಧ್ಯಕ್ಷರಾಗಿ ದೇಶವನ್ನೆಲ್ಲ ಸುತ್ತಿ ಜನರನ್ನು ಜಾಗೃತ ಗೊಳಿಸಿದರು. ಆಗ ಚುನಾವಣೆ ಬಂತು. ಕಾಂಗ್ರೆಸ್ ಗೆದ್ದು ಸರ್ಕಾರ ನಡೆಸಬೇಕಾಯಿತು. ಎಲ್ಲ ತುಂಬ ದೊಡ್ಡ ಕೆಲಸ. ಪ್ರಸಾದರು ನಿರ್ವಹಿಸಿದರು. ಅವರೇ ಬಿಹಾರದ ಮಂತ್ರಿ ಆಗಬಹುದಿತ್ತು, ಬೇಡ ಎಂದುಬಿಟ್ಟರು.

ಎರಡನೆಯ ಸಲ ತುಂಬ ಕಷ್ಟದ ಕಾಲದಲ್ಲಿ ಅಧ್ಯಕ್ಷರಾದರು. ೧೯೩೯ರಲ್ಲಿ ತ್ರಿಪುರಿ ಊರಿನಲ್ಲಿ ಕಾಂಗ್ರೆಸ್ ಸಭೆ. ಸುಭಾಷ್ ಚಂದ್ರ ಬೋಸರು ಎರಡನೆಯ ಬಾರಿ ಅಧ್ಯಕ್ಷರಾಗಿದ್ದರು. ಆದರೆ ಅವರಿಗೂ ಉಳಿದವರಿಗೂ ಹೊಂದಾಣಿಕೆ  ಆಗಲಿಲ್ಲ. ಸುಭಾಷರು ರಾಜೀನಾಮೆ ಕೊಟ್ಟರು. ಕಾಂಗ್ರೆಸ್ಸಿನಲ್ಲಿ ಭಾರಿ ಒಡಕು, ಬಿಕ್ಕಟ್ಟು. ಸರಿ ಪಡಿಸುವವರು ಯಾರು? ಆ ಕೆಲಸ ಅಜಾತಶತ್ರು ಪ್ರಸಾದರಿಗೇ ಬಂತು. ಅವರು ಹಿಮ್ಮೆಟ್ಟಲಿಲ್ಲ. ವಹಿಸಿಕೊಂಡರು. ಮೃದು ಆದರೂ ತಾವು ಹೇಗೆ ಕಟ್ಟುನಿಟ್ಟಾಗಿ ಇರಬಲ್ಲರು ಎಂದು ತೋರಿಸಿಕೊಂಡರು.

ಮೂರನೆಯ ಸಲ ಅಧ್ಯಕ್ಷರಾದಾಗ ಭಾರತ ಸ್ವಾತಂತ್ರ‍್ಯ ಆಗಿತ್ತು. ಪ್ರಸಾದರು ಆಗ ಮಂತ್ರಿ ಸಹ ಆಗಿದ್ದರೂ. ಆಗಲೂ ಅವರು ಸಂಸ್ಥೆಗೆ ಕಷ್ಟ ಬಂದದ್ದನ್ನು ಸರಿಪಡಿಸಬೇಕಾಯಿತು.

ಜನಸೇವೆ ಮೊದಲು, ಉಳಿದೆಲ್ಲ ಆಮೇಲೆ

ಜನಸೇವೆಯೇ ಜನಾರ್ಧನ ಸೇವೆ ಅಂತ ಕೇಳಿದೀರಲ್ಲ. ಪ್ರಸಾದರಿಗೆ ಜನಾರ್ಧನನಲ್ಲಿ ಎಷ್ಟು ಭಕ್ತಿಯೋ ಜನ ಸೇವೆಯಲ್ಲೂ ಅಷ್ಟ  ಭಕ್ತಿ. ಯಾರಿಗೆ ಕಷ್ಟ ಬರಲಿ, ಅವರಿಗೆ ಕಣ್ಣೀರು. ತಮ್ಮ ಮನೆ, ಮಠ, ಕೆಲಸ ಎಲ್ಲ ಮರೆತು ಸೇವೆಗೆ ನಿಲ್ಲುತ್ತಿದ್ದರು.

ಬಿಹಾರದಲ್ಲಿ ಪ್ರವಾಹ ಬಂದಾಗ ಸೇವೆ ಮಾಡಿದರು, ಅಲ್ಲವೆ? ಎರಡನೆಯ ಸಲ ಜೈಲಿನಲ್ಲಿ ಕಾಯಿಲೆ ಆದಾಗ ಆಸ್ಪತ್ರೆಯಲ್ಲಿ ಇದ್ದಾಗ ಒಂದು ದಿನ ನೆಲ ಗಡಗಡ ನಡುಗಿತು. ಆಸ್ಪತ್ರೆ ಅಲ್ಲಾಡಿತು. ಭೂಕಂಪವಾಯಿತು. ಭೂಕಂಪ ಎಂದರೆ ನೆಲ ಇದ್ದಕ್ಕಿದ್ದ ಹಾಗೇ ನಡುಗಿ ಬಿರುಕು ಬಿಟ್ಟುಬಿಡುತ್ತದೆ  ಮನೆ ಮಠ ಬಿದ್ದು ಹೋಗುತ್ತವೆ. ಸಾವು, ನೋವು, ತುಂಬ. ಹಾಗಾಯಿತು ಆಗ ಪಾಟ್ನಾದಲ್ಲೇ ಅಲ್ಲ, ಹಳ್ಳಿಹಳ್ಳಿಯಲ್ಲೂ ತುಂಬ ಹಾನಿ. ರಸ್ತೆಯಲ್ಲೆಲ್ಲ ಸೀಳು – ಸೀಳು, ಗುಂಡಿ,ಮನೆ ಮಠ ನೆಲಸಮ. ದನಕರುಗಳ ಸಾವು, ಜನಗಳ ಸಾವು, ನದಿಗಳಲ್ಲಿ ಪ್ರವಾಹ. ಹೊಸ ಗದ್ದೆಯಲ್ಲೆಲ್ಲ ಮರಳು. ಗಂಗಾನದಿಯ ಉತ್ತರಕ್ಕೆ ಹನ್ನೆರಡು ಜಿಲ್ಲೆಗಳಲ್ಲಿ ಹೀಗೆ ವಿನಾಶ ಆಗಿತ್ತು. ಲಕ್ಷಾಂತರ ಮನೆಗಳು ಬಿದ್ದು ಹೋಗಿದ್ದುವು. ಭಾವಿಗಳಲ್ಲಿ ಮರಳು ತುಂಬಿತ್ತು.

’ನನ್ನ ಜೀವ ಮುಖ್ಯ ಅಲ್ಲ, ಈ ಜನರಿಗೆ ಸಹಾಯವಾಗಬೇಕು’ ಎಂದರು ರಾಜೇಂದ್ರರು

ಪ್ರಸಾದರಿಗೆ ವಿಷಯ ತಿಳಿಯತು. ಎರಡು ದಿನಗಳ ನಂತರ ಸೆರೆಮನೆಯಿಂದ ಬಿಡುಗಡೆ ಆಯಿತು. ಬಿಹಾರಕ್ಕೆ ಓಡಿದರು. ಲಕ್ಷಾಂತರ ರೂಪಾಯಿಗಳ ಆಸ್ತಿ ನಷ್ಟವಾಗಿತ್ತು. ನೂರಾರು ಜನ ಸತ್ತಿದ್ರು. ಮನೆಗಳು ಉರುಳಿದ್ದವು. ಜನರಿಗೆ ಸಹಾಯ ಮಾಡಬೇಕು. ಇದಕ್ಕೆ ಜನರನ್ನ, ಹಣವನ್ನ, ದವಸ – ಧಾನ್ಯಗಳನ್ನೆಲ್ಲ ಸೇರಿಸಬೇಕು ಎಂದು ಕೆಲಸ ಪ್ರಾರಂಭಿಸಿದರು ಪ್ರಸಾದರು.

’ನಿಮಗೆ ಆರೋಗ್ಯ ತೀರ ಕೆ‌ಟ್ಟಿದೆ, ಮೈಯಲ್ಲಿ ತ್ರಾಣವಿಲ್ಲ, ವಿಶ್ರಾಂತಿ ತೆಗೆದುಕೊಳ್ಳಿ. ಹೀಗೆ ದುಡಿದರೆ ನಿಮಗೇ ತುಂಬ ಕಷ್ಟ’ ಎಂದರು ವೈದ್ಯರು.

ನನ್ನ ಆರೋಗ್ಯ ನನ್ನ ಜೀವ ಮುಖ್ಯ ಅಲ್ಲ. ಈ ಜನರಿಗೆ ಸಹಾಯವಾಗಬೇಕು ಎಂದರು ರಾಜೇಂದ್ರರು.

ಸ್ನೇಹಿತರನ್ನು ಕರೆಸಿದರು. ಪರಿಹಾರ ಸಮಿತಿ ರಚಿಸಿದರು. ಹಣ, ಬಟ್ಟೆ  ಬರೆ, ಕಂಬಳಿ, ದವಸ ಧಾನ್ಯ ಬೇಕು ಬಡಜನಕ್ಕೆ ಎಂದು ದೇಶಕ್ಕೆಲ್ಲ ಕೇಳಿದರು. ಸರ್ಕಾರಕ್ಕೆ ಬರೆದರು. ಹಣ ಕೊಡಿಸುವುದಕ್ಕೆ, ಜನರಿಗೆ ಸಮಾಧಾನ ಹೇಳುವುದಕ್ಕೆ, ಸಹಾಯ ಹಂಚುವುದಕ್ಕೆ ಓಡಾಡಿದರು.

ಮಕ್ಕಳೇ, ನಮ್ಮ ಭಾರತದೇಶ ಒಂದು. ಎಲ್ಲಿ ಸಂಕಟ ಬರಲಿ ಎಲ್ಲರೂ ಸೇರಬೇಕು. ಸಹಾಯಕ್ಕೆ, ಅಲ್ಲವೆ! ಹಾಗೆ ಆಯಿತು. ಎಲ್ಲ ಕಡೆಯಿಂದ ಸಹಾಯ ಬಂತು. ರಾಶಿರಾಶಿ ಹಣ, ಧಾನ್ಯ, ಬಟ್ಟೆ, ಔಷಧ ಎಲ್ಲ ಬಂತು. ಗಾಂಧೀಜಿ, ನೆಹರು, ಸುಭಾಷ್ ಎಲ್ಲರೂ ಓಡಿ ಬಂದರು. ಊರೂರು ತಿರುಗಿದರು. ಜನರಿಗೆ ಧೈರ್ಯ ಕೊಟ್ಟರು. ಪ್ರಸಾದರಂತೂ ತಮ್ಮ ರೋಗ ಲೆಕ್ಕಿಸದೆ ದುಡಿದರು. ಊರೂರಿನಲ್ಲೂ ಮನೆ, ಭಾವಿ, ಶಾಲೆ ಎಲ್ಲ ಹೊಸದಾಗಿ ಕಟ್ಟಿಸುವುದು; ಹೊಲಗದ್ದೆ ಸರಿ ಮಾಆಡುವುದು. ಒಟ್ಟಿನಲ್ಲಿ ಹೊಸ ಊರನ್ನೇ ಕಟ್ಟಿದ್ದಂತೆ. ದೊಡ್ಡ ಕಥೆ ಅದೇ.

ಇನ್ನೊಂದು ಸಲ ಊರಿನಲ್ಲಿ ಸೊಸೆ ತೀರಿಕೊಂಡರು. ಪ್ರಸಾದರು ಅಲ್ಲಿಗೆ ಹೊರಟರು. ಅಷ್ಟರಲ್ಲಿ ಪಾಟ್ನದಲ್ಲಿ ದೊಂಬಿ, ಗಲಾಟೆ, ಸಾವು ನೋವು ಆಯಿತು. ಇಷ್ಟು ಜನರ ಸಂಕಟದ ಮುಂದೆ ನನ್ನ ದುಃಖ ದೊಡ್ಡದೇ? ಎಂದು ಪ್ರಸಾದರು ಪಾಟ್ನದಲ್ಲೇ ನಿಂತರು, ಜಗಳ ಆದ ಕಡೆ ಹೋದರು. ಶಾಂತಿ ಸಮಾಧಾನ ತಂದರು.

ಇಂಥವು ಎಷ್ಟೋ ಅವರ ಬದುಕಿನಲ್ಲಿ.

ಕರ್ತವ್ಯದಲ್ಲೂ ಅಷ್ಟೆ. ತುಂಬ ಶಿಸ್ತು. ಮುಂದೆ ರಾಷ್ಟ್ರಾಧ್ಯಕ್ಷ ಆದರಲ್ಲ. ಆಗ ಒಂದು ಸಲ ಜನವರಿ ೨೫ ರಂದು ಅಕ್ಕ ಭಗವತೀದೇವಿ ತೀರಿಕೊಂಡರು. ತಾಯಿ ಸಮಾನ ಆಕೆ. ಪ್ರಸಾದರಿಗೆ ತುಂಬಾ ದುಃಖ. ಆದರೆ ಮಾರನೆಯ ದಿನ ಗಣರಾಜ್ಯ ದಿನ ! ಉತ್ಸವದಲ್ಲಿ ತಾವು ಇರಬೇಕು. ಅದು ಕರ್ತವ್ಯ ಸರಿ, ತಮ್ಮ ದುಃಖ ಮರೆತರು. ಯಾರಿಗೂ ತೋರಿಸಿಕೊಳ್ಳಲಿಲ್ಲ. ಉತ್ಸವಕ್ಕೆ ಹೋಗಿ ಮುಗಿಸಿ ಬಂದು ಅಕ್ಕನ ದೇಹಕ್ಕೆ ಯಮುನಾ ನದಿ ಬಳಿ ಸಂಸ್ಕಾರ ಮಾಡಿ ಬಂದರು ಸಂಜೆಗೆ. ಆಗಲೇ ಬಾಯಿಗೆ ನೀರು ಬಿಟ್ಟಿದ್ದು!

೧೯೪೦ರಲ್ಲಿ ಢಾಕಾದಲ್ಲಿ (ಈಗಿನ ಬಾಂಗ್ಲಾದೇಶದಲ್ಲಿದೆ) ದೊಂಬಿಯಾಯಿತು. ಕೊಲೆ, ಲೂಟಿ, ಎಲ್ಲ ಆಯಿತು. ಪುಂಡರು ಹಳ್ಳಿಹಳ್ಳೀನೇ ಸುಟ್ಟುಬಿಟ್ಟರು. ಪ್ರಸಾದರು ಅಲ್ಲಿಗೆ ಹೋದರು. ಜನರ ಮುಖಂಡರನ್ನು ಕಂಡು ಬುದ್ಧಿ ಹೇಳಿದರು. ಕಷ್ಟಪಟ್ಟವರಿಗೆ  ಸಮಾಧಾನ ಹೇಳಿದರು. ಒಗ್ಗಟ್ಟು, ಶಾಂತಿ ಏರ್ಪಡಿಸಿದರು. ಬಿಹಾರದಲ್ಲಿ ದೊಂಬಿಯಾದಾಗಲೂ ಹೀಗೆಯೇ.

ಹೀಗೆ ಜನಸೇವೆ ಅಂದರೆ ಪ್ರಸಾದರಿಗೆ ಜೀವ.

ಸಂಸಾರದ ಯೋಚನೆಗೆ ಹೊತ್ತೆಲ್ಲಿ?

ಇದರ ಮಧ್ಯೆ ಮನೆಮಠದ ಯೋಚನೇನೆ? ಮಕ್ಕಳು ಊರಲ್ಲೇ ಬೆಳೆದರು. ಅಣ್ಣ ಮಹೇಂದ್ರರೇ ಎಲ್ಲರನ್ನೂ ನೋಡಿಕೊಂಡರು. ಆದರೆ ೧೯೩೪ರಲ್ಲಿ ಅವರು ಜ್ವರ ಬಂದು ಸತ್ತುಹೋದರು. ರಾಜೇಂದ್ರರಿಗೆ ತುಂಬ ದೊಡ್ಡ ಪೆಟ್ಟು ಬಿತ್ತು. ಸಂಕಟದ ಜೊತೆಗೆ ಜವಾಬ್ದಾರಿ. ಸೇವಾ ಕಾರ್ಯದಲ್ಲಿ  ಮನೆ ಕಡೆ ಸರಿಯಾಗಿ ನೋಡಿಕೊಂಡಿರಲಿಲ್ಲ. ಭಾರಿ ಸಾಲ ಆಗಿತ್ತು. ಅರವತ್ತು – ಎಪ್ಪತ್ತು ಸಾವಿರ ರೂಪಾಯಿ ಸಾಲ. ಈಗ ಬೆಟ್ಟವೇ ಮೇಲೆ ಬಿದ್ದ ಹಾಗಾಯಿತು. ಆಗಲೇ ಬೊಂಬಾಯಿ ಕಾಂಗ್ರೆಸ್ ಅಧಿವೇಶನ. ಮನೆ ಪರಿಸ್ಥಿತಿ ಸರಿಮಾಡಬೇಕು, ’ನನಗೆ ಅಧ್ಯಕ್ಷತೆ ಬೇಡ’ ಎಂದರು. ಆದರೆ ಗಾಂಧೀಜಿ ತಮ್ಮ ಶಿಷ್ಯ ಜಮನಾಲಾಲ ಬಜಾಜ್ ಎನ್ನುವ ಶ್ರೀಮಂತರನ್ನು ಸಹಾಯಕ್ಕೆ ಕಳಿಸಿದರು. ಅವರು ಇವರ ಸಾಲಸೋಲ ಎಲ್ಲಾ ತಾವೇ ವಹಿಸಿ ಕೊಂಡರು. ಪ್ರಸಾದರಿಗೆ ಸ್ವಲ್ಪ ಉಸಿರು ಬಂತು. ಅಧ್ಯಕ್ಷತೆಗೆ ಒಪ್ಪಿದರು.

ಅವರಿಗೆ ರಾಜಕೀಯ ಒಂದೇ ಕೆಲಸವೆ? ಖಾದಿ ಪ್ರಚಾರ, ಹಿಂದೀ ಪ್ರಚಾರ, ರೈತರ ಸಮಸ್ಯೆ, ಕೂಲಿಗಾರರ ಸಮಸ್ಯೆ, ವಿಶ್ವವಿದ್ಯಾಲಯದ ಕೆಲಸ, ಪಾಟ್ನ ನಗರಸಭೆ ಅಧ್ಯಕ್ಷತೆ, ಶಾಲೆ ಕೆಲಸ ಹೀಗೆ ನೂರೆಂಟು! ಏನೂ ಬೇಸರ ಪಡದೆ ಎಲ್ಲವನ್ನೂ ನಿರ್ವಹಿಸಿದರು.

ಲಂಡನ್ ಪ್ರವಾಸ

ವಕೀಲಿ ಬಿಟ್ಟರಲ್ಲ. ಆಗ ಒಂದು ಕೇಸು ಮಾತ್ರ ಉಳಿದುಕೊಂಡಿತ್ತು. ಅದರ ಕೆಲಸಕ್ಕೆ ಲಂಡನಿಗೆ ಹೋಗಬೇಕಾಯಿತು. ಅದೇ ಮೊದಲು ಅವರು ವಿದೇಶಕ್ಕೆ ಹೋಗಿದ್ದು. ಅಲ್ಲೂ ಇಲ್ಲಿನ ಹಾಗೆ ದುಡಿತ, ಇಲ್ಲಿನ  ಹಾಗೇ ಊಟ, ತಿಂಡಿ ಬಟ್ಟೆ ಬರೆ !

ಕೇಸು ಮುಗಿಸಿ ಬರುವಾಗ ಯೂರೋಪಿನಲ್ಲಿ ಸುತ್ತಾಡಿ ಬಂದರು.  ಆಗ ವಿಯಾಟ್ನಾ ಪಟ್ಟಣದಲ್ಲಿ ಯುದ್ಧ ಬೇಡ ಎನ್ನುವವರ ಸಭೆ ಇತ್ತು. ಪ್ರಸಾದರು ಅಲ್ಲಿಗೆ ಹೋದರು. ಪಕ್ಕದ ಊರಿನಲ್ಲೂ ಒಂದು ಸಭೆ ಒಂದು ಹೋಟೆಲಿನಲ್ಲಿ ಏರ್ಪಾಟಾಗಿತ್ತು.  ಪ್ರಸಾದರು ಸ್ನೇಹಿತರ ಜೊತೆಯಲ್ಲಿ ಅಲ್ಲಿಗೆ ಹೋದರು. ಆಗ ಕೆಲವರು ಬಂದು ಇವರನ್ನೆಲ್ಲ ಚೆನ್ನಾಗಿ ಹೊಡೆದುಬಿಟ್ಟರು. ಯುದ್ಧಬೇಡ, ಶಾಂತಿ ಇರಲಿ ಎನ್ನುವುದು ಈ ಜನಕ್ಕೆ ಹಿಡಿಸಿಲಿಲ್ಲವಂತೆ. ಪ್ರಸಾದರ ಜೊತೆಯವರು ಬದುಕಿ ಬರುವುದೇ ಕಷ್ಟವಾಯಿತು.

ಸ್ವತಂತ್ರ ಭಾರತದಲ್ಲಿ

೧೯೪೭ರಲ್ಲಿ ಸ್ವಾತಂತ್ರ‍್ಯ ಬಂತಲ್ಲ, ಆಗ ಪ್ರಸಾದರನ್ನು ನೆಹರು ಮಂತ್ರಿಯಾಗಿ ಸೇರಿಸಿಕೊಂಡರು, ಕೇಂದ್ರ ಸರ್ಕಾರದಲ್ಲಿ. ಅದೂ ಗಾಂಧೀಜಿ ಹೇಳಿದ ಮೇಲೆಯೇ ಪ್ರಸಾದರು ಒಪ್ಪಿದ್ದು. ಆಹಾರ ವ್ಯವಸಾಯ ಇಲಾಖೆ ಮಂತ್ರಿ.  ಪ್ರಸಾದರಿಗೆ ಇಷ್ಟವಾದದ್ದೇ. ಯುದ್ಧದ ಪ್ರಭಾವ, ಕ್ಷಾಮ, ಗಲಭೆ ಇವೆಲ್ಲದರಿಂದ ಆಗ ಆಹಾರದ ಪರಿಸ್ಥಿತಿ ತುಂಬ ಕಷ್ಟವಾಗಿತ್ತು. ಅದನ್ನೆಲ್ಲ ಅವರು ಧೈರ್ಯದಿಂದ ನಿರ್ವಹಿಸಿದರು. ಹೊಟ್ಟೆಗಿಲ್ಲದೆ ಯಾರೂ ಸಾಯಬಾರದು ಎಂದು ತುಂಬ ಹೆಣಗಿದರು.

ಒಂದೆರಡು ವರ್ಷದಲ್ಲಿ ಇನ್ನೊಂದು ಕೆಲಸ ಬಂತು. ದೇಶ ನಡೆಸುವುದಕ್ಕೆ ನೀತಿ, ನಿಯಮ, ಕಾನೂನು ಬೇಕಲ್ಲವೆ? ಇದಕ್ಕೆಲ್ಲ ರಾಜ್ಯಾಂಗ ಅಥವಾ ಸಂವಿಧಾನ ಎಂದು ಹೆಸರು. ಇದನ್ನು ಸಿದ್ಧಮಾಡುವುದು ತುಂಬ ಕಷ್ಟದ ಕೆಲಸ, ಬುದ್ಧಿವಂತರು, ಅನುಭವಿಗಳು ಎಲ್ಲ ಸೇರಿ ವರ್ಷಗಟ್ಟಲೆ ಯೋಚಿಸಿ ಮಾಡಬೇಕು.

ನಮ್ಮ ದೇಶದ ಹೊಸ ರಾಜ್ಯಾಂಗ ರಚಿಸಬೇಕಾಯಿತು. ಜನರು ಮುಖಂಡರನ್ನು ಈ ಕೆಲಸಕ್ಕೋಸ್ಕರ ಆರಿಸಿದರು. ಇವರ ಸಭೆಯೇ ರಾಜ್ಯಾಂಗ ರಚನಾ ಸಭೆ. ದೊಡ್ಡ ನಾಯಕರು, ಬುದ್ಧಿಶಾಲಿಗಳು, ವಿದ್ವಾಂಸರು, ಆಡಳಿತಗಾರರೂ ಎಲ್ಲರೂ ಇದ್ದರು.

ಸಭೆಗೆ ಒಬ್ಬ ಅಧ್ಯಕ್ಷರೂ ಬೇಕಲ್ಲ! ಎಲ್ಲರೂ ಹೇಳಿದರು ’ರಾಜೇಂದ್ರ ಪ್ರಸಾದರೇ ಅಧ್ಯಕ್ಷರಾಗಬೇಕು ’ ಎಂದರು. ಇವರಂತಹ ದೊಡ್ಡ ಪಂಡಿತರು, ತ್ಯಾಗಿಗಳು, ದೇಶಭಕ್ತರು, ಬುದ್ಧಿವಂತರು, ಗುಣವಂತರು ಎಷ್ಟು ಮಂದಿ ಇದ್ದಾರು?

೧೯೪೯ರ ನವೆಂಬರ್ ವರೆಗೂ ಆ ಸಭೇಗೆ ಕೆಲಸವೇ. ನಮ್ಮ ರಾಜ್ಯಾಂಗ ಪ್ರಪಂಚದಲ್ಲಿ ದೊಡ್ಡದು. ನಮ್ಮ ದೇಶದ ಆಡಳಿತಕ್ಕೆ ಅದೇ ಆಧಾರ. ಕಾನೂನು ಪಂಡಿತರಿಗೇ ಕಬ್ಬಿಣದ ಕಡಲೆ. ಆದರೆ ಸೇರಿದ್ದವರೆಲ್ಲ ವಿದ್ವಾಂಸರು, ದೇಶಭಕ್ತರು, ಜೊತೆಗೆ ಪ್ರಸಾದರ ಮುಂದಾಳುತನ. ಕೆಲಸ ಆಯಿತು.

೧೯೫೦ರ ಜನವರಿ ೨೬ ರಂದು ಹೊಸ ರಾಜ್ಯಾಂಗ ಜಾರಿಗೆ ಬಂದಿತು. ಅಂದೇ ಗಣರಾಜ್ಯ ದಿನ.

ಮೊಟ್ಟಮೊದಲ ರಾಷ್ಟ್ರಪತಿ

ಹೊಸ ರಾಜ್ಯಾಂಗದಂತೆ ದೇಶಕ್ಕೆ ಒಬ್ಬ ರಾಷ್ಟ್ರಪತಿ ಅಥವಾ ಅಧ್ಯಕ್ಷ ಇರಬೇಕು. ಸರಿ, ಮತ್ತೆ ಎಲ್ಲರೂ ಹೇಳಿದರು ’ಪ್ರಸಾದರೇ ಆಗಬೇಕು’ ಎಂದು. ರಾಜೇಂದ್ರ ಪ್ರಸಾದ್ ನಮ್ಮ ಸ್ವಾತಂತ್ರ‍್ಯ ಭಾರತ ಗಣರಾಜ್ಯದ ಮೊಟ್ಟ ಮೊದಲಿನ ಅಧ್ಯಕ್ಷರಾದರು. ಮುಂದೆ ೧೯೫೨ರಲ್ಲಿ ಆಮೇಲೆ ೧೯೫೭ರಲ್ಲಿ ಕೂಡ ಅವರೇ ಆರಿಸಿ ಬಂದರು. ಹೀಗೆ ಹನ್ನೆರಡು ವರ್ಷ ಅರ್ಧಯಕ್ಷರಾಗಿದ್ದು ದೇಶಕ್ಕೆ ಕೀರ್ತಿ ತಂದರು.

ರಾಷ್ಟ್ರಾಧ್ಯಕ್ಷ ಅಂದರೆ ಕಡಿಮೆ ಪದವಿಯೇ? ಈ ದೊಡ್ಡ ದೇಶಕ್ಕೆಲ್ಲ ಮುಖ್ಯಸ್ಥರು. ದೆಹಲಿಯ ರಾಷ್ಟ್ರಪತಿ ಭವನ ಭಾರಿ ಕಟ್ಟಡ. ನಮ್ಮ ಬೆಂಗಳೂರಿನ ವಿಧಾನಸೌಧ ಇಲ್ಲವೇ, ಅದಕ್ಕಿಂತ ಎಷ್ಟೋ ಪಾಲು ದೊಡ್ಡದು. ಅದರಲ್ಲಿ ಮುನ್ನೂರು ಕೋಣೆಗಳು, ಸುತ್ತ ಸೊಗಸಾದ ತೋಟ. ಆಳುಕಾಳು, ಕಾರು, ಕುದುರೆ ಸಾರೋಟು, ಇಪಾಯಿ ಸಿಬ್ಬಂಧಿ! ಬೇಕಾದಷ್ಟು ವೈಭವ.

ಬಡತನದಲ್ಲಿ ಆಶ್ರಮದಲ್ಲಿ ಬೆಳೆದಿದ್ದ ಪ್ರಸಾದರಿಗೆ ಈ ವೈಭವ ಅಟ್ಟಹಾಸ ಹಿಡಿಸಿತೇ? ಎರಡು ಮೂರು ಕೋಣೆ ತಾವು ಇಟ್ಟುಕೊಂಡು, ಉಳಿದ ಸ್ಥಳವನ್ನೆಲ್ಲ ಕಛೇರಿಗೆ ಕೊಟ್ಟುಬಿಟ್ಟರು. ಕಾನೂರು ಪ್ರಕಾರ ಅವರಿಗೆ ತಿಂಗಳಿಗೆ ಹತ್ತು ಸಾವಿರ ಸಂಬಳ. ಆದರೆ ಪ್ರಸಾದರು ಅದರಲ್ಲಿ ಕಾಲುಭಾಗ ಮಾತ್ರ ಸಾಕು ಎಂದರು. ಆಶ್ರಮವೋ ಅರಮನೆಯೋ ಒಂದೇ ರೀತಿ ಅವರ ಜೀವನ!

ರಾಷ್ಟ್ರಾಧ್ಯಕ್ಷರ ಕೆಲಸ, ಹೊಣೆ ಕಡಿಮೆಯೇ? ಆಜ್ಞೆಗಳನ್ನು ಮಾಡಬೇಕು, ಪ್ರಧಾನ ಮಂತ್ರಿಗಳ ಜೊತೆಗೆ ಸಮಾಲೋಚನೆ ಮಾಡಬೇಕು, ದೇಶದಲ್ಲಿ ಓಡಾಡಿ ಜನಗಳ ಕಷ್ಟ  – ಸುಖ ನೋಡಿಕೊಳ್ಳಬೇಕು. ಹೊರದೇಶಗಳಿಗೆ ಹೋಗಿ ಬರಬೇಕು, ಸ್ನೇಹ ಏರ್ಪಡಿಸಬೇಕು? ಹೀಗೆ  ಬೇಕಾದಷ್ಟು. ರಾಜೇಂದ್ರಪ್ರಸಾದರಿಗೆ ಆಗಲೇ ೬೬ ವರ್ಷವಾಗಿತ್ತು. ದುಡಿಮೆ, ಕಾಯಿಲೆಗಳಿಂದಾಗಿ ಹಣ್ಣಾಗಿದ್ದರು. ಆದರೂ ಎಲ್ಲಾ ಕೆಲಸಗಳನ್ನು ನಗುನಗುತ್ತ ಮಾಡಿದರು.

ದೇಶದ ಎಲ್ಲ ಕಡೆ ಹೋಗಿ ಬಂದರು. ಜನರನ್ನು ವಿಚಾರಿಸಿದರು. ಯಾರು ಬೇಕಾದರೂ ಅವರ ಹತ್ತಿರ ಸರಾಗವಾಗಿ ಹೋಗಬಹುದಾಗಿತ್ತು. ಸರ್ಕಾರದ ಕೆಲಸವನ್ನು ಎಚ್ಚರಿಕೆಯಿಂದ ಪರಿಶೀಲಿಸಿದರು. ಏನಾದರೂ ತಿಳಿಸಬೇಕಾಗಿದ್ದರೆ ಖಂಡಿತವಾಗಿ ತಿಳಿಸುತ್ತಿದ್ದರು.

ನೇಪಾಳ, ಜಪಾನ್, ಇಂಡೋನೇಷ್ಯ, ರಷ್ಯ ಮುಂತಾದ ದೇಶಗಳಿಗೆಲ್ಲ ಹೋಗಿ ಬಂದರು. ಅಲ್ಲೆಲ್ಲ ಅವರಿಗೆ ಅದ್ಭುತ ಗೌರವ! ಬುದ್ಧದೇವನ ದೇಶದವರು ಗಾಂಧೀ ಶಿಷ್ಯರು, ತ್ಯಾಗಿಗಳು, ದೇಶಪ್ರೇಮಿಗಳು ಎಂದು ಎಲ್ಲರೂ ಕೊಂಡಾಡಿದರು. ಹೀಗೆ ದೇಶಕ್ಕೆ ಕೀರ್ತಿ ತಂದರು.

ಹಿಂದಿನ ಕಾಲದಲ್ಲಿ ರಾಜರ್ಷಿಗಳು ಇದ್ದರಂತೆ, ಕೇಳಿದ್ದೀರಾ? ಜನಕನ ಹಾಗೆ. ಅವರು ರಾಜ್ಯ ಆಳಿದರೂ ಋಷಿಗಳ ಹಾಗೆ ಸಾಧು ಸಂತರ ಹಾಗೆ ಇದ್ದರು. ಸರಳರು, ಜ್ಞಾನಿಗಳು, ಭಕ್ತರು. ಹಾಗೇ ರಾಜೇನ್ ಬಾಬು, ಶ್ರೀರಾಮನ ಕತೆ ಕೇಳಿ ಕೇಳಿ ಅವನ ಹಾಗೇ ಕರ್ತವ್ಯನಿಷ್ಠರು, ಸತ್ಯವಂತರು, ಧರ್ಮರಾಯನ ಹಾಗೆ ಧರ್ಮಪ್ರಿಯರು. ಗಾಂಧೀಜಿಯ ಮಾತು ಅಂದರೆ ಅವರಿಗೆ ಆಜ್ಞೆ.

ಮೂವತ್ತುವರ್ಷ ಗಾಂಧೀಜಿಯವರ ಜೊತೆ ಪ್ರಸಾದರಿಗೆ ಏನು ಸಮಸ್ಯೆ ಬಂದರೂ ಅವರನ್ನು ಕೇಳುತ್ತಿದ್ದರು. ಗಾಂಧೀಜಿ ಹೇಳಿದ್ದನ್ನು ಇವರು ಮತ್ತೆ ಯೋಚನೆ ಮಾಡುತ್ತಿದ್ದರು. ಸರಿ ಅನ್ನಿಸುತ್ತಿತ್ತು. ಚಾಚೂ ತಪ್ಪದೆ ನಡೆಸುತ್ತಿದ್ದರು. ಒಂದು ಸಲ ಗಾಂಧೀಜಿ ’ನಾನು ವಿಷ ಕುಡಿ ಅಂದರೂ ಕುಡಿದುಬಿಡುತ್ತಾರೆ ರಾಜೇನ್ ಬಾಬು’ ಅಂದಿದ್ದರು. ಅಷ್ಟು ವಿಶ್ವಾಸ, ಶ್ರದ್ಧೆ ಪ್ರಸಾದರಿಗೆ. ರಾಜೇಂದ್ರರು ೧೯೫೦ರಲ್ಲಿ ರಾಷ್ಟ್ರಪತಿ ಆದದ್ದನ್ನು ನೋಡಲು ಗಾಂಧೀಜಿ ಇರಲಿಲ್ಲ. ೧೯೪೮ರಲ್ಲಿಯೇ ಅವರು ಗುಂಡೇಟಿಗೆ ಬಲಿಯಾಗಿದ್ದರು.

೧೯೬೨ನೆಯ ಇಸವಿ ಮೇ ಹನ್ನೊಂದನೆಯ ತಾರೀಖೂ, ರಾಜೇನ್ ಬಾಬು ಅಧ್ಯಕ್ಷತೆ ಮುಗಿಯಿತು. ಡಾಕ್ಟರ್ ರಾಧಾಕೃಷ್ಣನ್ ಅಧ್ಯಕ್ಷರಾದರು. ದೆಹಲಿ ಜನರಿಗೆ ತಂದೆಯಂತಿದ್ದ ಬಾಬೂಜಿ ಇನ್ನು ದೂರ ಆಗುತ್ತಾರಲ್ಲಾ ಎಂದು ಬಹು ದುಃಖ! ಪ್ರಸಾದರೂ ಎಲ್ಲಿಗೆ ಹೋದರು, ಗೊತ್ತೇ? ಬೇರೆ ಬಂಗಲೆಗಲ್ಲ, ಪಟ್ಟಣಕ್ಕಲ್ಲ! ಪಾಟ್ನ ಬಳಿಯ ತಮ್ಮ ಹಳೆಯ ಅದಾಖತ್ ಆಶ್ರಮ ಇತ್ತಲ್ಲ, ಅಲ್ಲಿಗೆ ಹೋದರು. ಅಲ್ಲಿಂದಲೇ ದೇಶ ಸೇವೆ ಮಾಡಬೇಕು ಎಂದು. ಆದರೆ ಅವರಿಗೆ ಆಗಲೇ ವಯಸ್ಸಾಗಿತ್ತು. ಮುಂದೆ ಬದುಕಿದ್ದು ಒಂದೇ ವರ್ಷ. ೧೯೬೩ರ ಫೆಬ್ರವರಿ ೨೮ರಂದು ತೀರಿಕೊಂಡರು. ತಮ್ಮ ಪವಿತ್ರ ಜೀವನ ಮುಗಿಸಿದರು.

ತ್ಯಾಗಧೀರರು

ರಾಜೇಂದ್ರ ಬಾಬುಗಳ ಜೀವನವೆಲ್ಲ ತ್ಯಾಗವೇ. ಬದುಕೇ ಇತರರಿಗಾಗಿ. ಅವರು ನಾಲ್ಕೈದು ಪುಸ್ತಕ ಬರೆದಿದ್ದಾರೆ. ಹಿಂದಿಯಲ್ಲಿ, ಇಂಗ್ಲಿಷ್ನಲ್ಲಿ. ಅವರು ಹಿಂದಿ ಆತ್ಮಕತೆ ತುಂಬ ಚೆನ್ನಾಗಿದ್ದು. ಅದಕ್ಕೆ ಸಾವಿರ ರೂಪಾಯಿ ಬಹುಮಾನ ಬಂದಿತು. ಪ್ರಸಾದರು ಏನು ಮಾಡಿದರು ಗೊತ್ತೇ? ಅದನ್ನು ಬಡ ಲೇಖಕರ ಸಹಾಯಕ್ಕೆ ಎಂದು ನಿಧಿ ಮಾಡಿಟ್ಟರು. ಉಳಿದ ಪುಸ್ತಕದಿಂದ ಬಂದ ಹಣವನ್ನೂ ಅದಕ್ಕೇ ಸೇರಿಸಿಬಿಟ್ಟರು. ತಾವು ಮುಟ್ಟಲಿಲ್ಲ!

ನಮ್ಮ ದೇಶ ದೊಡ್ಡದು, ನಮ್ಮ ಜನ ದೊಡ್ಡವರು. ತ್ಯಾಗ, ಶೌರ್ಯ, ಸೇವೆ, ವಿದ್ಯೆ, ಎಲ್ಲದರಲ್ಲೂ ದೊಡ್ಡದಾಗಿ ಬಾಳಿದರು ಹಿಂದಿನಿಂದಲೂ ಹಾಗೇನೇ ನಮ್ಮ ರಾಜೇನ್ ಬಾಬು! ನಮ್ಮ ಸ್ವಾಂತ್ರಂತ್ಯಕ್ಕೋಸ್ಕರ ಹೋರಾಡಿದರು. ಮೇಲು ಪಂಕ್ತಿ ಹಾಕಿಕೊಟ್ಟರು. ಇಂಥವರ ಕಥೆ ಕೇಳಿದ ಮೇಲೆ, ಇಂಥವರು ಇದ್ದ ದೇಶದಲ್ಲಿ ಇದ್ದ ಮೇಲೆ, ನಾವೆಲ್ಲ ನೀವೆಲ್ಲ ಅವರ ಹಾಗೆ ಆಗಿ ಸೇವೆ ಮಾಡೋಣ ಎಂದು ಪಣ ತೊಡಬೇಕು, ಅಲ್ಲವೆ?