ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನತೆಗೆ ಉದ್ಯೋಗ ದೊರಕಿಸುವುದರೊಂದಿಗೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ರಾಜ್ಯದ ಅಭಿವೃದ್ಧಿಗಾಗಿ ಹಲವಾರು ಹೊಸ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಜೈವಿಕ ಇಂಧನ ಕಾರ್ಯಪಡೆಯೂ ಸಹ ಕೆಲವು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಯಡಿ ರೈತರ ಸ್ವಂತ ಜಮೀನುಗಳಲ್ಲಿ ಜೈವಿಕ ಇಂಧನ ಸಸಿಗಳಾದ ಹೊಂಗೆ, ಬೇವು, ಹಿಪ್ಪೆ, ಸೀಮಾರೂಬಾ, ಜಟ್ರೋಪಾ, ಇತ್ಯಾದಿ ಮರಗಳನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಅನುದಾನ ವಿನಿಯೋಗಿಸಿಕೊಂಡು ಬೆಳೆಸುವ, ಪರಿಸರ ಸ್ನೇಹಿ ಕಾರ್ಯಕ್ರಮ ಇದಾಗಿದೆ. ೨೦೧೦-೧೧ ನೇ ಸಾಲಿನಿಂದ ಈ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ .

೨೦೦೯-೧೦ನೇ ಸಾಲಿನಲ್ಲಿ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ದಾವಣಗೆರೆ ಜಿಲ್ಲೆಯ ಜಗಳೂರು, ಹರಪನಹಳ್ಳಿ ಮತ್ತು ದಾವಣಗೆರೆ ತಾಲೂಕಿನ ೧೫ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ೭೮ ಗ್ರಾಮಗಳಲ್ಲಿ  ಅನುಷ್ಠಾನಗೊಳಿಸಲಾಗಿದೆ.ಒಂದು ಗ್ರಾಮ ಪಂಚಾಯ್ತಿಗೆ ೨೦,೦೦೦ ಸಸಿಯಂತೆ ೩.೦೦ ಲಕ್ಷ ಸಸಿಗಳನ್ನು ನೆಡಲಾಗಿದೆ. ಈ ಕಾರ್ಯಕ್ರಮದಲ್ಲಿ ೩೨೦೦ ರೈತರನ್ನು ತೊಡಗಿಸಲಾಗಿದ್ದು, ಅವರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ೭೫.೦೦ ಲಕ್ಷ ರೂಗಳನ್ನು ಹಂಚಲಾಗಿದೆ. “ಹಸಿರು ಹೊನ್ನು” ಕಾರ್ಯಕ್ರಮದ ಲೋಕಾರ್ಪಣೆ ಮತ್ತು ಇಡೀ ರಾಜ್ಯಕ್ಕೆ ವಿಸ್ತರಿಸುವ ಘೋಷಣೆಯನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ, ಇವರು ಮಾಡಿದ್ದಾರೆ.

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ “ಹಸಿರು ಹೊನ್ನು” ಕಾರ್ಯಕ್ರಮದಡಿ ೨೦೧೦ ನೇ ಸಾಲಿನ ಮಳೆಗಾಲದಲ್ಲಿ ರೈತರ ಭೂಮಿಯಲ್ಲಿ ಜೈವಿಕ ಇಂಧನ ಸಸಿಗಳನ್ನು ನೆಡಲು ಅನುಬಂಧ-೧ ರಲ್ಲಿ ವಿವರಿಸಿದಂತೆ ೧೫೦.೦೦ ಲಕ್ಷ ಸಸಿಗಳನ್ನು ಆಯಾ ವಿಭಾಗಗಳಲ್ಲಿ ಅರಣ್ಯ ಇಲಾಖೆ ಸಿದ್ದತೆ ನಡೆಸಿದೆ. ನಿಗದಿ ಪಡಿಸಿದ ಗುರಿಯು ಕನಿಷ್ಠ ಗುರಿಯಾಗಿದ್ದು, ಇದಕ್ಕೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರೂ. ೫೦ ಕೋಟಿ ವಿನಿಯೋಗಿಸಬಹುದಾಗಿದ್ದು, ಹಸಿರು ಹೊನ್ನು” ಯೋಜನೆಯಡಿ ಇನ್ನೂ ಹೆಚ್ಚಿನ ಅನುದಾನ ವಿನಿಯೋಗಿಸುವ ಸಾಧ್ಯತೆ ಹಾಗೂ ಅವಕಾಶವಿರುತ್ತದೆ. ಮಾನ್ಯ ಮುಖ್ಯ ಮಂತ್ರಿಗಳು ಈ ಯೋಜನೆಯಡಿ ರೂ ೧೦೦ ಕೋಟಿ ಬಳಕೆ ಮಾಡಬೇಕೆಂದು ಅಪೇಕ್ಷಿಸಿರುತ್ತಾರೆ. ಆದುದರಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿನ ಅನುದಾನ  ಬಳಸಿಕೊಳ್ಳಲು ಜಿಲ್ಲಾ ಪಂಚಾಯತ್‌ಗಳು ಕ್ರಮ ಜರುಗಿಸುವುದು. ಸ್ವಯಂ ಸೇವಾ ಸಂಸ್ಥೆಗಳು, ಮಹಿಳಾ ಸ್ವಸಹಾಯ ಗುಂಪುಗಳು ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ, ಅಧಿಕ ಗುರಿ ಸಾಧಿಸುವುದು ಸಾಧ್ಯವಿದೆ. ಈ ರೀತಿ ಹೆಚ್ಚುವರಿ ಜೈವಿಕ ಇಂಧನ ಸಸಿಗಳನ್ನು ಬೆಳೆಸಲು ಇಚ್ಛಿಸುವ ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದ ಜಿಲ್ಲಾ ಪಂಚಾಯತ್‌ಗಳು ಅನುಮತಿ ನೀಡಬಹುದು.

ಉದ್ದೇಶ

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಠಿ.

 • ಗ್ರಾಮೀಣ ಜನತೆಯ ಆರ್ಥಿಕ ಅಭಿವೃದ್ಧಿ.
 • ಗ್ರಾಮಗಳ ಸಬಲೀಕರಣ.
 • ಅರಣ್ಯ ಪ್ರದೇಶದ ಹೆಚ್ಚಳ.
 • ಜೈವಿಕ ಇಂಧನ ಬೀಜಗಳ ಉತ್ಪಾದನೆ

ಲಾಭಗಳು

ರೈತರಿಗೆ ಆಗುವ ಪ್ರಯೊಜನಗಳು

 • ಜೈವಿಕ ಇಂಧನ ಬೀಜಗಳಿಂದ ನಿರಂತರ ಹೆಚ್ಚುವರಿ ಆದಾಯ
 • ಬೀಜ ಸಂಸ್ಕರಣದ ನಂತರ ದೊರಕುವ ಹಿಂಡಿಯಿಂದ ಮತ್ತು ಹಸಿರೆಲೆ ಗೊಬ್ಬರದಿಂದ ಕೃಷಿ ಜಮೀನಿಗೆ ಅಗತ್ಯವಿರುವ ಸಾವಯವ ಗೊಬ್ಬರದ ಲಭ್ಯತೆ.
 • ಔಷಧೀಯ ಗುಣ ಮತ್ತು ಬೆಳೆಗಳಿಗೆ ತಗಲುವ ರೋಗ ಮತ್ತು ಕೀಟ ನಿಯಂತ್ರಕ ಗುಣದ ಲಾಭ.
 • ಹೂ ಬಿಡುವ ಸಮಯದಲ್ಲಿ ಜೇನು ಕೃಷಿಗೆ ಸಹಾಯಕಾರಿ.
 • ಜಮೀನಿನ ಫಲವತ್ತಾದ ಮೇಲ್ಮಣ್ಣಿನ ಭೂ ಸವಕಳಿ ತಡೆಗಟ್ಟವುದು
 • ಈ ಸಸಿಗಳ ಬೇರುಗಳ ಮುಖಾಂತರ ಭೂಮಿಗೆ ಹೆಚ್ಚುವರಿ ಸಾರಜನಕವನ್ನು ಒದಗಸುವುದು.
 • ಕಸಿ ಮಾಡಿದ ಸಸಿ ನೆಡುವುದರಿಂದ ಮರವಾಗಿ ಹೆಚ್ಚು ಎತ್ತರಕ್ಕೆ ಬೆಳೆಯುವುದಿಲ್ಲ. ವಾರ್ಷಿಕ ರೆಂಬೆ, ಕೊಂಬೆಗಳನ್ನು ಕಡಿಯುವುದರಿಂದ ರೈತರ ಬೆಳೆಗಳಿಗೆ ನೆರಳು ಬೀಳುವುದಿಲ್ಲ.
 • ಜಮೀನಿನ ಬದುಗುಂಟ ಸಸಿ ನೆಡುವಿಕೆಯಿಂದ ಆಹಾರ ಉತ್ಪಾದನೆಯಲ್ಲಿ ಹೆಚ್ಚಳ.

ಸಮಾಜಕ್ಕೆ ಆಗುವ ಪ್ರಯೋಜನಗಳು

 • ಹೆಚ್ಚಿನ ಮರಗಳನ್ನು ಬೆಳೆಸುವಿಕೆಯಿಂದ ಗ್ರಾಮೀಣ ಸೌಂದರ್ಯ ಅಭಿವೃದ್ಧಿ.
 • ಹೆಚ್ಚಿನ ಮರಗಳಿದ್ದಲ್ಲಿ ಉತ್ತಮ ಮಳೆ ಮತ್ತು ಇದರಿಂದಾಗಿ ಉತ್ತಮ ಬೆಳೆ.
 • ಪಶು ಪಕ್ಷಿಗಳಿಗೆ  ಉತ್ತಮ ಆಸರೆ.
 • ಕಡಿದ ಸಣ್ಣ ಪುಟ್ಟ ರೆಂಬೆ ಕೊಂಬೆಗಳಿಂದ ಗ್ರಾಮೀಣ ಮಹಿಳೆಯರಿಗೆ ಉರುವಲಿನ ಆಸರೆ.

ಪರಿಸರಕ್ಕಾಗುವ ಲಾಭಗಳು

 • ಪರಿಸರ ಮಾಲಿನ್ಯ ತಡೆಗಟ್ಟುವುದು
 • ಜಾಗತಿಕ ತಾಪಮಾನ ನಿಯಂತ್ರಿಸುವಲ್ಲಿ ಮಹತ್ತರ ಪಾತ್ರ ವಹಿಸುವಿಕೆ.
 • ಅಂತರ್ಜಲ ಪುನಶ್ಚೇತನಕ್ಕೆ ಸಹಕಾರಿ
 • ರಾಸಾಯನಿಕ ಗೊಬ್ಬರಗಳಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟವುದು.

ಅನುಷ್ಠಾನಾಧಿಕಾರಿಗಳು

 • ಹಸಿರು ಹೊನ್ನು ಯೋಜನೆಯ ಅನುಷ್ಠಾನದ ಸಂಪೂರ್ಣ ಜವಾಬ್ದಾರಿ ಹೊತ್ತು, ನೋಡಲ್ ಏಜನ್ಸಿಯಾಗಿ ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸತಕ್ಕದ್ದು.
 • ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾರ್ಗ ಸೂಚಿಗಳಡಿ ಸೂಚಿಸಲಾದ ಎಲ್ಲಾ ಮಟ್ಟದ ಅಧಿಕಾರಿಗಳು ಸಹ ಅನುಷ್ಠಾನಕ್ಕೆ ಸಹಕರಿಸತಕ್ಕದ್ದು.

ಕಾರ್ಯಕ್ರಮ ಅನುಷ್ಠಾನ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅರಣ್ಯೀಕರಣ ಚಟುವಟಿಕೆಗೆ ಶೇ. ೨೦ಕ್ಕೆ ಕಡಿಮೆಯಿಲ್ಲದಂತೆ ಅನುದಾನ ವೆಚ್ಚ ಭರಸಿ ಅರಣ್ಯೀಕರಣ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶಗಳಿವೆ. ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿಗಳು, ತಾಲೂಕು ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು ಹಾಗೂ ಅರಣ್ಯ ಇಲಾಖೆ ನಿರ್ವಹಿಸಬೇಕಿರುವ ಕರ್ತವ್ಯಗಳು ಇಂತಿವೆ:

ಗ್ರಾಮ ಪಂಚಾಯಿತಿ ನಿರ್ವಹಿಸಬೇಕಾದ ಕರ್ತವ್ಯಗಳು

೧. ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಿಂದ ಗ್ರಾಮ ಪಂಚಾಯಿತಿ ಗ್ರಾಮದ ವ್ಯಾಪ್ತಿಯಲ್ಲಿ ಪ್ರಚಾರಾಂದೋಲನ ಕೈಗೊಳ್ಳಲು ಕಾರ್ಯಕ್ರಮ ರೂಪಿಸುವುದು ಹಾಗೂ ಪ್ರಚಾರಾಂದೋಲನ ಕೈಗೊಳ್ಳವುದು.

 • ರೈತರಿಗೆ ಅರಿವು ಮೂಡಿಸಲು ಎಲ್ ಸಿಡಿ ಪ್ರೊಜೆಕ್ಟರ್ ಮೂಲಕ ಡಿವಿಡಿ ಸಿನಿಮಾ, ನೃತ್ಯ ರೂಪಕ, ಬೀದಿ ನಾಟಕ, ಕಲಾ ಜಾಥಾ ಇತ್ಯಾದಿಗಳನ್ನು ಏರ್ಪಡಿಸುವುದು.
 • ಈ ಸಂಬಂಧ ಪ್ರತಿ ಪಂಚಾಯ್ತಿಯಿಂದ ಕರಪತ್ರ ಸಿದ್ದಪಡಿಸಿ ಹಂಚುವುದು.
 • ಯಾವುದೇ ದೂರುಗಳಿಗೆ ಅವಕಾಶವಿಲ್ಲದಂತೆ ಈ ಕಾರ್ಯಕ್ರಮಗಳನ್ನು ಮಳೆಗಾಲ ಮುಗಿಯುವದರೊಳಗಾಗಿ ಪೂರ್ಣಗೊಳಿಸುವುದು.
 • ಈ ಸಂಬಂಧ ಆಯಾ ಹಣಕಾಸಿನ ವರ್ಷದ ಷೆಲ್ಫ್ ಆಫ್ ಪ್ರಾಜೆಕ್ಟ್‌ನಲ್ಲಿ ಕಾರ್ಯಕ್ರಮ ಸೇರಿಸುವುದು, ಅಲ್ಲದೇ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬೇಕಿರುವ ಜೈವಿಕ ಇಂಧನ ಕಾರ್ಯಕ್ರಮಗಳ ಬಗ್ಗೆ ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮತಿ ಕೋರುವುದು.

೨. ಗ್ರಾಮ ಪಂಚಾಯಿತಿವಾರು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಜಲಾನಯನ ಇಲಾಖೆ, ತೋಟಗಾರಿಕಾ ಇಲಾಖೆಗಳನ್ನೊಳಗೊಂಡಂತೆ ನೋಡಲ್ ಅಧಿಕಾರಿಗಳನ್ನೊಳ ತಂಡ ರಚಿಸಿ, ಸದರಿ ತಂಡದೊಡನೆ ಉತ್ತಮ ಬಾಂಧವ್ಯ ಇರಿಸಿಕೊಂಡು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು.

೩. ರೈತರ ಜಮೀನಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಸಿ ನೆಟ್ಟುಕೊಳ್ಳಲು ಇಚ್ಛಿಸುವ ರೈತರಿಂದ ಮುಂಚಿತವಾಗಿ ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿಯನ್ನು ಪಡೆಯುವುದು. ಅರ್ಜಿಯನ್ನು ಗ್ರಾಮ ಪಂಚಾಯಿತಿವತಿಯಿಂದಲೇ ವಿತರಿಸುವುದು. ಸ್ವೀಕೃತ ಅರ್ಜಿಗಳನ್ನು ಅನುಕ್ರಮವಾಗಿ ವಹಿಯಲ್ಲಿ ದಾಖಲಿಸುವುದು. ಮೊದಲು ನೊಂದಾಯಿಸಿದವರಿಗೆ ಪ್ರಥಮ ಆದ್ಯತೆ ನೀಡುವುದು.

೪. ಒಬ್ಬ ರೈತನಿಗೆ ಎರಡೂವರೆ ಎಕರೆ ಪ್ರದೇಶದಲ್ಲಿ ಗರಿಷ್ಠ ೧೦೦ ಗಿಡಗಳನ್ನು ಬೆಳೆಸಲು ಅವಕಾಶ ನೀಡುವುದು. ಅಂದರೆ ಎಕರೆ ಒಂದಕ್ಕೆ ೪೦ ಗಿಡಗಳಂತೆ ನೀಡುವುದು.

೫. ರೈತರು ತಮ್ಮ ಜಮೀನಿನ ಬದುವಿನಲ್ಲಿ 2 X 2 X 2  ಅಡಿ ಅಳತೆಯ ಗುಂಡಿಗಳನ್ನು ತಗೆದುಕೊಂಡಿದ್ದಾರೆಯೇ? ಎಂಬುದನ್ನು ಪರಿಶೀಲಿಸುವುದು.

೬. ಜಾಬ್ ಕಾರ್ಡ್(ಗ್ರಾಮ ಪಂಚಾಯಿತಿಯಲ್ಲಿ ನೊಂದಾಯಿಸಿದ ಬಗ್ಗೆ ನೀಡುವ ಗುರುತಿನ ಚೀಟಿ) ಹೊಂದಿಲ್ಲದ ರೈತರು ತಮ್ಮ ಹೆಸರಿನಲ್ಲಿ ನೊಂದಾಯಿಸಿದರೆ ಅವರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನೊಂದಾಯಿಸಿಕೊಂಡು ಜಾಬ್ ಕಾರ್ಡ್ ನೀಡುವುದು ಮತ್ತು ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ  ತೆರೆಯುವುದು.

೭. 2 X 2 X 2 ಅಡಿ ಗುಂಡಿ ತಗೆದುಕೊಂಡು ಗಿಡ ನೆಟ್ಟ ಕೂಡಲೇ ಸಂಬಂಧಿಸಿದ ರೈತರ ಖಾತೆಗೆ ಗಿಡ ಒಂದಕ್ಕೆ ರೂ ೨೫.೦೦ ರಂತೆ ಜಮಾ ಮಾಡುವುದು ಹಾಗೂ ಗ್ರಾಮ ಪಂಚಾಯತ್/ತಾಲೂಕು ಪಂಚಾಯತ್ ನಲ್ಲಿ ಎಂಇಎಸ್ ಮಂಡಿಸುವುದು. ಎಂಇಎಸ್ ಆದೇಶದ ಪ್ರತಿಯನ್ನು ಸಂಬಂಧಿಸಿದ ರೈತರಿಗೆ ನೀಡುವುದು.

೮. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಬೇಕಾದ ಎಲ್ಲಾ ದಾಖಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ದೃಡೀಕರಿಸುವುದು.

೯. ರೈತರಿಗೆ ಅರಿವು ಮೂಡಿಸಲು ಎಲ್‌ಸಿಡಿ ಪ್ರೊಜೆಕ್ಟರ್ ಮೂಲಕ ಡಿವಿಡಿ ಸಿನಿಮಾ, ನೃತ್ಯ ರೂಪಕ, ಬೀದಿ ನಾಟಕ, ಕಲಾ ಜಾಥಾ ಇತ್ಯಾದಿಗಳನ್ನು ಏರ್ಪಡಿಸುವುದು.

೧೦. ಈ ಸಂಬಂಧ ಪ್ರತಿ ಪಂಚಾಯಿತಿಯಿಂದ ಕರಪತ್ರ ಸಿದ್ದಪಡಿಸಿ ಹಂಚುವುದು.

೧೧. ಯಾವುದೇ ದೂರುಗಳಿಗೆ ಅವಕಾಶವಿಲ್ಲದಂತೆ ಈ ಕಾರ್ಯಕ್ರಮವನ್ನು ಮಳೆಗಾಲ ಮುಗಿಯುವದರೊಳಗಾಗಿ ಪೂರ್ಣಗೊಳಿಸುವುದು.

೧೨. ಈ ಸಂಬಂಧ ಆಯಾ ಹಣಕಾಸಿನ ವರ್ಷದ ಷೆಲ್ಫ್ ಆಫ್ ಪ್ರಾಜೆಕ್ಟ್‌ನಲ್ಲಿ ಕಾರ್ಯಕ್ರಮ ಸೇರಿಸುವುದು.

೧೩. ಪ್ರತಿ ಹಂತದಲ್ಲಿ ದಾಖಲೀಕರಣ ಸಲುವಾಗಿ ಡಿಜಿಟಲ್ ಫೋಟೋ ತಗೆದು ನಿರ್ವಹಿಸುವುದು.  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಂತಹ ಕಾರ್ಯಕ್ರಮಗಳನ್ನು ನಿರ್ವಹಿಸಲು ಚಾಲ್ತಿಯಲ್ಲಿರುವ ಮಾರ್ಗ ಸೂಚಿಗಳನ್ವಯ ಮೇಟ್ (Mate) ಗಳನ್ನು ವರ್ಷ ಪೂರ್ತಿ ಅವಧಿಗೆ ನಿಯೋಜಿಸತಕ್ಕದ್ದು.

೧೪. ಅರಣ್ಯ ಇಲಾಖೆಯವರು/ಅಥವ ಜಿಲ್ಲಾಡಳಿತ ಮೂಲಕ ಬೆಳೆಸಿ ಒದಗಿಸಿದ ಹೊಂಗೆ ಸಸಿಗಳನ್ನು ಗ್ರಾಮವಾರು, ರೈತವಾರು ವಿತರಿಸಿದ ಬಗ್ಗೆ ವಹಿಯಲ್ಲಿ ದಾಖಲಿಸಿ ನೋಡಲ್ ಅಧಿಕಾರಿಗಳಿಂದ ದೃಡೀಕರಿಸುವುದು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರು ನಿರ್ವಹಿಸಬೇಕಾದ ಕರ್ತವ್ಯಗಳು

೧. ಗ್ರಾಮ ಪಂಚಾಯ್ತಿಗಳು ಜೈವಿಕ ಇಂಧನ ಸಸಿಗಳ ಬೇಡಿಕೆ ಅರಣ್ಯ ಇಲಾಖೆಗೆ ಸಲ್ಲಿಸಿವೆಯೇ? ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳವುದು.

೨. ಗ್ರಾಮ ಪಂಚಾಯ್ತಿ ಕಾರ್ಯಯೋಜನೆಯಲ್ಲಿ ಜೈವಿಕ ಇಂಧನ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಖಚಿತಪಡಿಸಿ ಕೊಳ್ಳತಕ್ಕದ್ದು.

೩. ಪ್ರತಿ ಪಂಚಾಯಿತಿಗೆ ಸ್ವಯಂ ಸೇವಾ ಸಂಸ್ಥೆಗಳನ್ನು ಗುರುತಿಸಿ, ಅವರಿಂದ ಕರಾರು ಪತ್ರ/ಒಡಂಬಡಿಕೆ ಮಾಡಿಸಿಕೊಂಡು, ಅದರಂತೆ ಕೆಲಸ ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿವುದು. ಪ್ರತಿ ಪಂಚಾಯ್ತಿಗೆ ಪ್ರಚಾರಾಂದೋಲನಕ್ಕಾಗಿ ಸಲುವಾಗಿ ಒಂದು ವಾಹನ, ಒಂದು ಎಲ್‌ಸಿಡಿ ಪ್ರೋಜೆಕ್ಟರ್  ಹಾಗೂ ಸ್ಕ್ರೀನ್ ಒದಗಿಸುವುದು. ಗ್ರಾಮವಾರು ಪ್ರಚಾರಾಂದೋಲನ ಕಾರ್ಯಕ್ರಮ ರೂಪಿಸಿ ಅದರಂತೆ ಪ್ರಚಾರಾಂದೋಲನ ನಡೆಯುತ್ತಿದೆಯೇ? ಎಂಬ ಬಗ್ಗೆ ನಿಗವಹಿಸುವುದು.

೪. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ರಚಿಸಲಾದ ಅಧಿಕಾರಿಗಳ ತಂಡ ಪ್ರಚಾರಾಂದೋಲನ ಕೆಲಸ ನಿರ್ವಹಿಸುತ್ತಿದ್ದಾರೆಯೇ? ಎಂಬ ಬಗ್ಗೆ ಪರಿಶೀಲಿಸುವುದು.

೫. ನೊಂದಣಿ ಮಾಡಿದ ಎಲ್ಲಾ ರೈತರಿಗೆ ಸಮಯಾನುಸಾರ ಸಸಿಗಳ ವಿತರಣೆ ಮಾಡುವುದು.

 • ಅರಣ್ಯ ಇಲಾಖೆಯಿಂದ ಗ್ರಾಮವಾರು ಸಸಿ ಒದಗಿಸುವ ಕಾರ್ಯ ಮತ್ತು ಸಮರ್ಪಕವಾಗಿ ವಿತರಣೆಯಾಗುವ ಬಗ್ಗೆ ನಿಗಾವಹಿಸುವುದು.
 • ಸಮಯನುಸಾರ ಆಯ್ಕೆಯಾದ ಗ್ರಾಮ ಪಂಚಾಯ್ತಿಗಳಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ  ಅನುದಾನ ಬಿಡುಗಡೆ ಮಾಡುವುದು.

೬. ಗುಂಡಿ ತಗೆದು ಸಸಿಗಳನ್ನು ನೆಟ್ಟಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸುವುದು.

೭. ಕಾರ್ಯಪೂರ್ಣಗೊಳಿಸಿದ ರೈತರಿಗೆ ನಿಗದಿ ಪಡಿಸಿದ ಕೂಲಿ(ಅನುದಾನ) ದೊರೆತಿದೆಯೇ ಎಂಬ ಬಗ್ಗೆ  ಪರಿಶೀಲನೆ ನಡೆಸಿ ಖಚಿತ ಪಡಿಸಿಕೊಳ್ಳುವುದು.

೮. ನೊಂದಣಿಯಾದ ಎಲ್ಲಾ ರೈತರಿಗೂ ಜಾಬ್ ಕಾರ್ಡ್  ವಿತರಣೆಯಾದ ಬಗ್ಗೆ ಪರಿಶೀಲನೆ ನಡೆಸಿ, ಎಲ್ಲರಿಗೂ ಜಾಬ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳವುದು.

ಜಿಲ್ಲಾ ಪಂಚಾಯತ್ಗಳ ಕರ್ತವ್ಯಗಳು

೧. ವಿವಿಧ ಇಲಾಖೆಗಳಿಂದಾಯ್ದ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅದಿಕಾರಿಯಾಗಿ ಪ್ರತಿ ತಾಲ್ಲೂಕಿಗೆ ಒಬ್ಬರಂತೆ ನಿಯೋಜಿಸುವುದು ಉದಾಹರಣೆಗೆ, ಮಹಿಳಾ ಅಭಿವೃದ್ಧಿ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿ ಇತ್ಯಾದಿ.

೨. ಕಾರ್ಯಕ್ರಮದಡಿ ಪಾಲ್ಗೊಳ್ಳುವ ಸ್ವಯಂ ಸೇವಾ ಸಂಸ್ಥೆಯು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಕೈಗೊಳ್ಳಬೇಕಿರುತ್ತದೆ. ಈ ಸಂಬಂಧ ಸ್ವಯಂ ಸೇವಾ ಸಂಸ್ಥೆ ಹಾಗೂ ಸಂಬಂಧಿಸಿದ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳು ಅನುಬಂಧ – ೩ ರಲ್ಲಿ ತೋರಿಸಿರುವಂತೆ ಒಡಂಬಡಿಕೆ ಮಾಡಿಕೊಳ್ಳಬೇಕಿರುತ್ತದೆ. ಈ ಬಗ್ಗೆ ಪರಿಶೀಲಿಸಿ ಒಡಂಬಡಿಕೆ ಮಾಡಿಕೊಳ್ಳುವಂತೆ ಕ್ರಮ ಜರುಗಿಸುವುದು.

೩. ತಾಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೈಗೊಂಡ ಕಾರ್ಯಕ್ರಮದ ಉಸ್ತುವಾರಿ, ನೋಡಲ್ ಅಧಿಕಾರಿಗಳು ಕೈಗೊಂಡ ಕ್ರಮ, ಅರಣ್ಯ ಇಲಾಖೆ ಕೈಗೊಳ್ಳಬೇಕಿರುವ ಕ್ರಮಗಳ ಪ್ರಗತಿ ಪರೀಶೀಲನೆ ಹಾಗೂ ಸಮಯನುಸಾರ ಅನುದಾನ ವಿನಿಯೋಗದ ಬಗ್ಗೆ ಖಚಿತಪಡಿಸಿಕೊಳ್ಳುವುದು.

೪. ಗ್ರಾಮ ಪಂಚಾಯ್ತಿಗಳ ಬೇಡಿಕೆ ಪರಿಗಣಿಸಿ ಹೆಚ್ಚುವರಿ ಜೈವಿಕ ಇಂಧನ ಸಸಿಗಳನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಳೆಸಲು (under material component) ಪರವಾನಿಗೆ ನೀಡುವುದು.

೫. ಮಾಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ವಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೈವಿಕ ಇಂಧನ ಸಸಿಗಳ ಪರಿವೀಕ್ಷಣೆ, ದಾಖಲಾತಿ ನಿರ್ವಹಣೆ ಹಾಗು ಇತರ ಚಟುವಟಿಕೆಗಳಿಗಾಗಿ ವರ್ಷವಿಡೀ ಮೇಟ್ (Mate) ಗಳನ್ನು ನಿಯೋಜಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸತಕ್ಕದ್ದು.

ಅರಣ್ಯ ಇಲಾಖೆಯವರು ನಿರ್ವಹಸಬೇಕಾದ ಕ್ರಮಗಳು

೧. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರಾಂದೋಲನ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬ ಬಗ್ಗೆ ನಿಗಾವಹಿಸುವುದು.

೨. ರೈತರ ನೊಂದಣಿ ಮತ್ತು ಸಸಿಗಳ ಕೋರಿಕೆಯ ಬಗ್ಗೆ ಗ್ರಾಮ ಪಂಚಾಯ್ತಿಗಳಿಂದ ಮಾಹಿತಿ ಸಂಗ್ರಹಿಸುವುದು.

೩. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮವಾರು ಹೊಂಗೆ ಸಸಿಗಳ ಬೇಡಿಕೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯ್ತಿಯಿಂದ ಪಡೆದು ಅದರಂತೆ ಗ್ರಾಮವಾರು ಸಸಿಗಳನ್ನು ಆಯಾ ಗ್ರಾಮಗಳಿಗೆ ಪೂರೈಸಿ, ಸಂಬಂಧಿಸಿದ ಗ್ರಾಮ ಪಂಚಾಯ್ತಿ ನೋಡಲ್ ಅಧಿಕಾರಿ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯಿಂದ ಸಹಿ ಪಡೆಯುವುದು.

೪. ರೈತರು ಗುಂಡಿಗಳನ್ನು ನಿಯಮಾನುಸಾರ ತೋಡಿಕೊಂಡಿದ್ದಾರೆಯೇ? ಹಾಗೂ ಸಸಿಗಳನ್ನು ನಿಗದಿಪಡಿಸಿದಂತೆ ನೆಟ್ಟಿದ್ದಾರೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯವಿರುವಲ್ಲಿ ಸೂಕ್ತ ತಾಂತ್ರಿಕ ಸಲಹೆ ನೀಡುವುದು.

೫. ಸಸಿಗಳು ಹಾಳಾಗದಂತೆ ಎಚ್ಚರವಹಿಸುವುದು.

ನೋಡಲ್ ಅಧಿಕಾರಿಯ ಕರ್ತವ್ಯಗಳು

೧. ರೈತರು ಸಲ್ಲಿಸಿರುವ ಅರ್ಜಿಗಳನ್ನು ಗ್ರಾಮ ಪಂಚಾಯ್ತಿಗಳು ಸ್ವೀಕರಿಸಿವೆಯೇ,ಸ್ವೀಕರಿಸಲಾದ ಅರ್ಜಿಗಳನ್ನು ಆದ್ಯತಾನುಸಾರ ಅನುಕ್ರಮವಾಗಿ ದಾಖಲಿಸಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸುವುದು.

೨. ಸಸಿ ನೆಡುವ ಕಾರ್ಯಕ್ರಮಕ್ಕೆ ನೇಮಿಸಲಾದ ತಂಡ ಕರ್ತವ್ಯ ನಿರ್ವಹಿಸುತ್ತಿದೆಯೇ? ರೈತರಿಗೆ ಸಸಿಗಳು ಸಕಾಲದಲ್ಲಿ ಪೂರೈಕೆ ಆಗಿವೆಯೇ? ಎಂಬ ಬಗ್ಗೆ ಪರಿಶೀಲಿಸಿ ಮಾರ್ಗದರ್ಶನ ನೀಡುವುದು ಹಾಗೂ ವಿವಿಧ ಇಲಾಖೆಗಳ ಸಮನ್ವಯ ಕಾರ್ಯಕೈಗೊಳ್ಳವುದು.

೩. ರೈತರು ಗುಂಡಿ ತೋಡಿ ಸಸಿಗಳನ್ನು ನೆಟ್ಟಿದ್ದಾರೆಯೇ? ಸಮಯಾನುಸಾರ ನಿಗದಿತ ಅನುದಾನ ರೈತರಿಗೆ ಸಂದಾಯವಾಗಿದೆಯೇ? ಎಂಬಿಇತ್ಯಾದಿ ವಿವರಗಳನ್ನು ಪಡಯುವುದು.

೪. ಗ್ರಾಮ ಪಂಚಾಯ್ತಿಗಳು ತಮ್ಮ ಕಾರ್ಯಯೋಜನೆಗಳಲ್ಲಿ ಜೈವಿಕ ಇಂಧನ ಕಾರ್ಯ ಹಮ್ಮಿಕೊಂಡಿರುವ ಬಗ್ಗೆ ಖಚಿತ ಪಡಿಸಿಕೊಂಡು ಸಸಿಗಳ ಬೇಡಿಕೆಯನ್ನು ಅರಣ್ಯ ಇಲಾಖೆಗೆ ಸಲ್ಲಿಸುವಂತೆ ಮಾಡುವುದು.

೫. ಕಾರ್ಯಕ್ರಮ ಅನುಷ್ಠಾನದಲ್ಲಿ ಯವುದಾದರೂ ನ್ಯೂನತೆ ಅಥವಾ ಅಸಹಕಾರ ಕಂಡು ಬಂದಲ್ಲಿ, ಕೂಡಲೇ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿತಕ್ಕದ್ದು.

ಸ್ವಯಂ ಸೇವಾ ಸಂಸ್ಥೆಗಳ ಕರ್ತವ್ಯಗಳು

೧. ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರಾಂದೋಲನ ಕೈಗೊಳ್ಳಲು ಕಾರ್ಯಕಮ್ರ ರೂಪಿಸಿ ಅದರಂತೆ ಈಗಾಗಲೇ ರಚಿಸಲಾದ ನೋಡಲ್ ಅಧಿಕಾರಿಗಳ ತಂಡದೊಂದಿಗೆ ಎಲ್.ಸಿ.ಡಿ. ಪ್ರೊಜೆಕ್ಟರ್‌ನೊಂದಿಗೆ ಸಾಯಂಕಾಲ ಹಾಗೂ ಹೆಚ್ಚು ಜನ ಸೇರುವಲ್ಲಿ ಪ್ರಚಾರಾಂದೋಲನ ಕಾರ್ಯ ಕೈಗೊಳ್ಳವುದು.

೨. ಪ್ರಚಾರಾಂದೋಲನದಲ್ಲಿ ಹೊಂಗೆ ಹಾಗೂ ಇತರೆ ಜೈವಿಕ ಇಂಧನ ಸಸಿಗಳನ್ನು ನೆಡುವುದರ ಜೊತೆಯಲ್ಲಿ ನೆಟ್ಟ ಸಸಿಗಳ ಮಧ್ಯದಲ್ಲಿ, ಬದುಗಳ ಮೇಲೆ ಹಿತ್ತಲ ಔಡಲ(castor) ಬೀಜಗಳನ್ನು ಬಿತ್ತಲು ರೈತರಿಗೆ ತಿಳುವಳಿಕೆ ನೀಡುವುದು ಹಾಗೂ ಮನವೊಲಿಸುವುದು.

೩. ರೈತರಿಂದ ಸಸಿ ನೆಡುವ ಸಲುವಾಗಿ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಪಡೆದು ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ನೀಡುವುದು.

೪. ರೈತರು ತಮ್ಮ ಜಮೀನಿನಲ್ಲಿ ಗುಂಡಿ ತೋಡಿಕೊಳ್ಳುವಂತೆ ಪ್ರೇರೆಪಿಸುವುದು.

2 X 2 X 2 ಅಡಿ ಗುಂಡಿ ತಗೆದುಕೊಂಡ ಕೂಡಲೇ ನೋಡಲ್ ಅಧಿಕಾರಿ/ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗೆಯೊಂದಿಗೆ ಪರಿಶೀಲಿಸಿ ದೃಡೀಕರಿಸುವುದು.

೫. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಹೊಂಗೆ ಸಸಿಗಳು/ಇತರೆ ಜೈವಿಕ ಇಂಧನ ಸಸಿಗಳು ಪೂರೈಕೆಯಾಗಿವೆಯೇ ಎಂಬುದನ್ನು ಪರಿಶೀಲಿಸಿವುದು.

೬. ರೈತರಿಗೆ ನಿಗದಿಪಡಿಸಿದಂತೆ ಸಸಿಗಳು ಪೂರೈಕೆಯಾಗಿವೆಯೇ? ಎಂಬ ಖಚಿತ ಮಾಡಿಕೊಳ್ಳುವುದು.

೭. ರೈತರು ತೋಡಿದ ಗುಂಡಿಗಳಲ್ಲಿ ಗಿಡ ನೆಟ್ಟ ಕೂಡಲೇ ದೃಢೀಕರಿಸಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗೆ ನೀಡುವುದು.

೮. ಸಸಿ ನೆಟ್ಟ ದಿನದಿಂದ ಮೊದಲ ಬೇಸಿಗೆ ಕಳೆಯುವವರೆಗೆ ಗಿಡಗಳ ನಿರ್ವಹಣೆ ಬಗ್ಗೆ ಉಸ್ತುವಾರಿ ನಡೆಸುವುದು.

೯. ಪ್ರತಿ ಹಂತದಲ್ಲಿಯೂ ಫೋಟೋ ಹಾಗೂ ದಾಖಲೆಗಳನ್ನು ನಿರ್ವಹಿಸುವುದು.

೧೦. ಸ್ವಯಂ ಸೇವಾ ಸಂಸ್ಥೆಗೆ ನಿರ್ಧರಿಸಿದ ಸಂಭಾವನೆಯನ್ನು ಪಡೆಯಲು ವೋಚರ್ ತಯಾರಿಸಿ ಪಾವತಿಗಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸಲ್ಲಿಸುವುದು.