ಕನ್ನಡ ಚಿತ್ರರಂಗದ ಅನುಪಮ ಕಲಾವಿದ. ನಿಜವಾದ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ (೧೯೨೯-೨೦೦೬). ಕನ್ನಡ ಚಿತ್ರರಂಗದ ಮೇರು ನಟ ಮತ್ತು ಗಾಯಕ ಎನಿಸಿದ ಸವ್ಯಸಾಚಿ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ, ಕಾಳಹಸ್ತಿ ಮಹಾತ್ಮೆ ಎಂಬ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸಿದ್ದು ಬಿಟ್ಟರೆ ಕೇವಲ ಕನ್ನಡಕ್ಕಾಗಿ ಮಾತ್ರ ತಮ್ಮ ಪ್ರತಿಭೆಯನ್ನು ಮೀಸಲಿಟ್ಟ ಅನನ್ಯ ಕಲಾವಿದ.

೧೯೨೯ ಏಪ್ರಿಲ್ ೨೪ರಂದು ಹಳೆಯ ಮೈಸೂರು ಪ್ರಾಂತ್ಯದ ಗಾಜನೂರಿನಲ್ಲಿ ಜನಿಸಿದರು. ಈಗ ಈ ಊರು ಕರ್ನಾಟಕದ ಗಡಿಭಾಗದಲ್ಲಿದ್ದು ಆಡಳಿತಾತ್ಮಕವಾಗಿ ತಮಿಳುನಾಡಿನ ಈರೋಡು ಜಿಲ್ಲೆಗೆ ಸೇರಿದೆ. ಮುತ್ತುರಾಜ್‌ರ ತಾಯಿನುಡಿ ಕನ್ನಡ. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅಪೂರ್ವ ರಂಗ ಕಲಾವಿದರು. ತಾಯಿ ಲಕ್ಷ್ಮಮ್ಮ.

ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ ರಂಗ ಕಲಾವಿದರಾಗಿ ರಾಜ್‌ಕುಮಾರ್ ವೃತ್ತಿ ಜೀವನ ಆರಂಭಿಸಿದರು. ನಟನೆ ಮತ್ತು ಗಾಯನವನ್ನು ಅವರು ಸರಿಯಾಗಿ ರೂಢಿಸಿಕೊಂಡಿದ್ದು ಇಲ್ಲೇ. ನಂತರ ಇವರು ತಮ್ಮ ತಂದೆಯವರೊಡನೆ ಸುಬ್ಬಯ್ಯ ನಾಯ್ಡು ಡ್ರಾಮಾ ಕಂಪನಿ ಸೇರಿದರು.

೧೯೫೪ರಲ್ಲಿ ಎಚ್‌ಎಲ್‌ಎನ್ ಸಿಂಹ ನಿರ್ದೇಶನದ ಬೇಡರ ಕಣ್ಣಪ್ಪ ಚಿತ್ರದಲ್ಲಿ ಮೊದಲು ಅಭಿನಯಿಸಿದರು. ಸಿಂಹ ಅವರೇ ರಾಜ್‌ಕುಮಾರ್ ಎಂದು ಹೆಸರು ಇಟ್ಟರು. ನಂತರ ಮುತ್ತುರಾಜ್ ಇದೇ ಹೆಸರಿನಿಂದ ಪ್ರಖ್ಯಾತರಾದರು. ಮೊದಲ ಚಿತ್ರದ ಶಿವಪ್ಪಾ ಕಾಯೋ ತಂದೆ ಎಂಬ ಹಾಡು ಇಂದಿಗೂ ಜನಪ್ರಿಯ.

ಪೋಷಕ ಪಾತ್ರಗಳನ್ನು ಹೊರತುಪಡಿಸಿ ೨೦೬ ಚಿತ್ರಗಳಲ್ಲಿ ಅಭಿನಯಿಸಿದ ರಾಜ್ ತಮ್ಮ ಅಭಿಮಾನಿಗಳನ್ನೇ ದೇವರು ಎಂದು ಕರೆಯುತ್ತಿದ್ದರು. ರಾಜಕೀಯ, ಪ್ರಚಾರದಿಂದ ಸದಾ ದೂರವಿದ್ದು, ಜೀವನವನ್ನು ವಿವಾದಾತೀತವಾಗಿ ಇಟ್ಟುಕೊಂಡ ರಾಜ್ ವೈಯಕ್ತಿಕವಾಗಿ ಅಪಾರ ದೈವಭೀರು, ಅಧ್ಯಾತ್ಮದತ್ತ ಒಲವಿದ್ದವರು. ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳಲ್ಲಿ ಅವರು ತೋರಿದ ಅಭಿನಯ ಮತ್ತು ತನ್ಮಯತೆ ಇನ್ಯಾವ ಕಲಾವಿದನಿಂದಲೂ ಸಾಧ್ಯವಿಲ್ಲ ಎಂಬುದು ಸಾಬೀತಾಗಿಹೋಗಿದೆ.

ವಜ್ರೇಶ್ವರಿ ಕಂಬೈನ್ಸ್ ಎಂಬ ಸ್ವಂತ ಚಿತ್ರ ನಿರ್ಮಾಣ ಕಂಪನಿಯೂ ಅವರದಿತ್ತು. ಅವರ ನೂರನೇ ಚಿತ್ರ ಭಾಗ್ಯದ ಬಾಗಿಲು, ೨೦೦ನೇ ಚಿತ್ರ ದೇವತಾ ಮನುಷ್ಯ. ಕನ್ನಡದ ಬಗ್ಗೆ ಅಪಾರ ಕಳಕಳಿ ಇದ್ದ ರಾಜ್‌ಕುಮಾರ್ ಗೋಕಾಕ್ ಚಳವಳಿಗೆ ಅಪಾರ ಶಕ್ತಿ ತುಂಬಿದರು.

ಸಾಮಾನ್ಯವಾಗಿ ಕನ್ನಡ ಕಾದಂಬರಿ ಆಧರಿಸಿದ ಚಿತ್ರಗಳಲ್ಲೇ ಅಭಿನಯಿಸುತ್ತಿದ್ದ ರಾಜ್ ಚಿತ್ರಗಳ ಅಭಿರುಚಿ ಮೇಲ್ಮಟ್ಟದ್ದು. ಎಂದೂ ದ್ವಂದ್ವಾರ್ಥದ, ಅಗ್ಗದ ಜನಪ್ರಿಯತೆಯ ಸಂಭಾಷಣೆಯಾಗಲೀ ಹಾಡುಗಳಾಗಲೀ ಅವರ ಚಿತ್ರಗಳಲ್ಲಿ ಇರುತ್ತಿರಲಿಲ್ಲ. ಕನ್ನಡ ಚಿತ್ರಗಳಿಗೆ ಗುಣಮಟ್ಟವನ್ನು ತಂದುಕೊಟ್ಟ ಶ್ರೇಯಸ್ಸು ಕೂಡ ರಾಜ್‌ರದು. ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ, ಅನ್ಯಾಯದ ವಿರುದ್ಧ ಸಿಡಿದೇಳುವುದು, ಪರೋಪಕಾರ, ಸ್ತ್ರೀಗೌರವ, ತ್ಯಾಗ-ಬಲಿದಾನ ಮೊದಲಾದ ಶ್ರೇಷ್ಠ ಆದರ್ಶಗಳು ಅವರ ಚಿತ್ರದಲ್ಲಿ ಸಾಮಾನ್ಯ.

ಸಂಪತ್ತಿಗೆ ಸವಾಲ್ ಚಿತ್ರದಿಂದ ಹಾಡುಗಾರರಾಗಿ ರಾಜ್ ರೂಪುಗೊಂಡರು. ಅದಕ್ಕೆ ಮುಂಚೆ ರಾಜ್ ಅಭಿನಯಕ್ಕೆ ೧೭ಕ್ಕೂ ಹೆಚ್ಚು ಹಾಡುಗಾರರು ಧ್ವನಿ ನೀಡಿದ್ದರು. ಹಾಡುಗಾರಿಕೆಗೆ ರಾಜ್ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದಾರೆ (ನಾದಮಯ ಈ ಲೋಕವೆಲ್ಲ-ಜೀವನ ಚೈತ್ರ). ಅಸಂಖ್ಯಾತ ಭಕ್ತಿಗೀತೆಗಳ ಸಂಕಲನವೂ ಅವರ ದನಿಯಲ್ಲಿದೆ. ಇತರ ಅನೇಕ ಕಲಾವಿದರ ಅಭಿನಯಕ್ಕೂ ರಾಜ್ ಹಾಡಿ ಉಪಕರಿಸಿದ್ದಾರೆ.

ರಾಜ್ ಅಭಿನಯಕ್ಕೆ ಸಂದ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಪದ್ಮಭೂಷಣ(೧೯೮೩), ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ(೧೯೯೫), ಕರ್ನಾಟಕ ರತ್ನ(೧೯೯೩)ದಂಥ ಪ್ರತಿಷ್ಠಿತ ೧೦ಕ್ಕೂ ಹೆಚ್ಚು ಪ್ರಶಸ್ತಿಗಳ ಜೊತೆಗೆ ಜನತೆಯೇ ನೀಡಿದ ನಟಸಾರ್ವಭೌಮ, ಕನ್ನಡದ ಕಣ್ಮಣಿ ಅಣ್ಣಾವ್ರು ಮೊದಲಾದ ಪ್ರಶಸ್ತಿಗಳೂ ಇವೆ. ಸಿನಿಮಾ ನಟನಾಗಿ ದೇಶದಲ್ಲೇ ಮೊದಲ ಗೌರವ ಡಾಕ್ಟೊರೇಟ್ (೧೯೭೬-ಮೈಸೂರು ವಿವಿ) ಲಭ್ಯವಾದುದು ರಾಜ್‌ಕುಮಾರ್‌ಗೆ. ಕೆಂಟುಕಿ ರಾಜ್ಯದ ಗೌರವ ಎನಿಸಿದ ಕೆಂಟುಕಿ ಕರ್ನಲ್ ಪ್ರಶಸ್ತಿ ಪಡೆದ ಏಕೈಕ ಭಾರತೀಯ ನಟ. ಹಾಡುಗಾರಿಕೆ ಮತ್ತು ನಟನೆಗೆ ರಾಷ್ಟ್ರಪ್ರಶಸ್ತಿಪಡೆದ ಏಕೈಕ ನಟ.

ರಾಜ್ ಅಭಿನಯದ ಬಂಗಾರದ ಮನುಷ್ಯ ಚಿತ್ರ ಬೆಂಗಳೂರಿನ ಚಿತ್ರಮಂದಿರದಲ್ಲಿ ಎರಡು ವರ್ಷ ಹಾಗೂ ಐದು ಕೇಂದ್ರಗಳಲ್ಲಿ ಒಂದು ವರ್ಷ ಕಾಲ ಪ್ರದರ್ಶನ ಕಂಡು ದಾಖಲೆ ಸ್ಥಾಪಿಸಿತ್ತು. ಇವರ ಅಭಿನಯದ ಶೇ.೯೫ ಚಿತ್ರಗಳು ಸಂಪೂರ್ಣ ಯಶಸ್ಸು ಕಂಡಿದ್ದು ಕೂಡ ದೇಶದ ಯಾವುದೇ ನಟನ ಹೆಸರಿನಲ್ಲಿ ಇಲ್ಲದ ದಾಖಲೆ.

ರಾಜ್‌ಕುಮಾರರ ಸಹೋದರ ಎಸ್ ಪಿ ವರದರಾಜು ಚಿತ್ರ ನಿರ್ಮಾಣದಲ್ಲಿ ನೆರವು ನೀಡುತ್ತಿದ್ದರು. ರಾಜ್‌ರಿಗೆ ಶಾರದಮ್ಮ ಮತ್ತು ನಾಗಮ್ಮ ಎಂಬ ಇಬ್ಬರು ಸಹೋದರಿಯರು.

ರಾಜ್‌ರ ಪತ್ನಿ ಪಾರ್ವತಮ್ಮ. ಇವರು ಕನ್ನಡ ಚಿತ್ರ ನಿರ್ಮಾಣದಲ್ಲಿ ದೊಡ್ಡ ಹೆಸರು. ರಾಜ್ ದಂಪತಿಗೆ ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳಾದ ಶಿವರಾಜ್, ರಾಘವೇಂದ್ರ ಮತ್ತು ಪುನೀತ್ ಕೂಡ ಅಭಿನಯದಲ್ಲಿ ಹೆಸರು ಮಾಡಿದ್ದಾರೆ.

೨೦೦೦ ಜುಲೈ ೩೦ರಂದು ೭೨ ವಯಸ್ಸಿನ ರಾಜ್ ತಮ್ಮ ಊರು ಗಾಜನೂರಿನಲ್ಲಿ ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣಕ್ಕೊಳಗಾದರು. ೧೦೯ ದಿನಗಳ ನಂತರ ಏನೂ ಅಪಾಯವಿಲ್ಲದೇ ೨೦೦೦ ನವೆಂಬರ್ ೧೫ರಂದು ಬಿಡುಗಡೆಯಾದರು.

೨೦೦೬ ಏಪ್ರಿಲ್ ೧೨ ರಂದು ಬೆಂಗಳೂರಿನ ಸದಾಶಿವ ನಗರದ ಸ್ವಗೃಹದಲ್ಲಿ ಹೃದಯಾಘಾತದಿಂದ ರಾಜ್ ನಿಧನವಾದರು.