“ಮಗೂ, ನೀನೇ ರಜಪೂತರ ಸ್ವಾತಂತ್ಯ್ರವನ್ನು ರಕ್ಷಿಸಬಲ್ಲೆ. ನಾಲ್ಕೂ ಕಡೆ ಶತ್ರುಗಳು ಮೇವಾಡದ ಮೇಲೆ ಯುದ್ಧ ಮಾಡಲು ಕಾದು ಕುಳಿತಿದ್ದಾರೆ. ನೀನು ವೀರಪುತ್ರ. ದೇಶವನ್ನು ರಕ್ಷಿಸುವುದರಲ್ಲಿ ಸಂದೇಹವಿಲ್ಲ.”

“ಅಮ್ಮಾ, ನಿನ್ ಪಾದದಾಣೆ. ನಾನು ದೇಶಕ್ಕಾಗಿ ಪ್ರಾಣವನ್ನೇ ಕೊಡುತ್ತೇನೆ.”

“ಪ್ರಾಣ ಕೊಡುವುದು ದೊಡ್ಡದಲ್ಲ; ಪ್ರಾಣ ಉಳಿಸಿಕೊಂಡು ಯುದ್ಧ ಮಾಡುವುದೇ ಜಾಣತನ”.

“ಆಗಲಿ ಅಮ್ಮಾ”

ಇನ್ನೂ ಹನ್ನೆರಡು ವರ್ಷ ಕೂಡ ತುಂಬಿರದ ಸಂಗ್ರಾಮಸಿಂಹ ತನ್ನ ತಾಯಿಗೆ ಮಾತು ಕೊಟ್ಟ. ದೇಶಕ್ಕಾಗಿ ಎಲ್ಲವನ್ನೂ ತ್ಯಾಗ  ಮಾಡುವ ಗಟ್ಟಿ ಮನಸ್ಸು ಮಾಡಿದ. ಆ ದಿನ ಸಂಜೆ ಅವನು ಕಾಳಿಕಾ ದೇವಾಲಯಕ್ಕೆ ಹೋದ. ಆ ಬಾಲಕ ಕಾಳಿಯ ಮುಂದೆಯೂ ತಾನು ನಾಡನ್ನು ಶತ್ರುಗಳಿಂದ ರಕ್ಷಿಸುವ ಪ್ರತಿಜ್ಞೆ ಮಾಡಿದ.

ವೀರರ ವಂಶ

ಸಂಗ್ರಾಮಸಿಂಹ ಮೇವಾಡದ ಪ್ರಸಿದ್ಧ ವೀರ ಅರಸ ರಾಣಾ ಬಂಧನ ಮೊಮ್ಮಗ. ಮಾಳವ ಮತ್ತು ಗುಜರಾತುಗಳ ಸುಲ್ತಾನರನ್ನು ಸೋಲಿಸಿ, ಹಲವು ಕೋಟೆಗಳನ್ನು ಕಟ್ಟಿಸಿ ಕೀರ್ತಿವಂತನಾಗಿದ್ದಚಾರ  ರಾಣಾ ಕುಂಭ. ರಾಣಾ ಕುಂಭನ ಮಗ. ರಾಯಮಲ್ಲನೇ ಸಂಗ್ರಾಮನ ತಂದೆ. ರಾಯಮಲ್ಲನ ರಾಣಿ ರತ್ನಕುಮಾರಿಯ ವೀರ ಗರ್ಭದಲ್ಲಿ ಹುಟ್ಟಿದ ವೀರಪುತ್ರ. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಬಾಲಕ ಚಿಕ್ಕಪ್ಪ ಸೂರಜ ಮಲ್ಲನಿಂದ ಯುದ್ಧದ ಶಿಕ್ಷಣ ಪಡೆದ.

ತಂದೆಯ ಮರಣದ ಬಳಿಕ ಸಹೋದರರಾದ ಜಯಮಲ್ಲ, ಪೃಥ್ವೀರಾಜರು ಕೆಲವು ಕಾಲ ರಾಜ್ಯಭಾರ ನಡೆಸಿದರು. ಆದರೆ ತಮ್ಮ ದುಷ್ಟ ಸ್ವಭಾವಗಳಿಂದಾಗಿ ಅವರು ತಮ್ಮ ಜೀವವನ್ನೇ ಕಳೆದುಕೊಂಡರು. ಸಂಗ್ರಾಮಸಿಂಹ ರಾಜ್ಯದ ಉತ್ತರಾಧಿಕಾರಿಯಾದ.

ಯುವಕ ನಾಯಕ

ಹೀಗೆ ದಿನಗಳು ಉರುಳಿದವು. ಸಂಗ್ರಾಮಸಿಂಹ  ಯುವಕನಾದ. ದೇಶದ ಪರಿಸ್ಥಿತಿ ಸ್ವಲ್ಪವೂ ಚೆನ್ನಾಗಿರಲಿಲ್ಲ. ಗುಜರಾತಿನ ಮುಜಫರ್ ಷಾ ಮತ್ತು ಮಾಳವರ ಸುಲ್ತಾನ ಮಹಮದ್ ಖಿಲ್ಜಿ ಇವರಿಬ್ರೂ ಪ್ರಬಲರಾಗುತ್ತಿದ್ದರು. ರಜಪೂತರ ಕೋಟೆಯಾದ ಚಿತ್ತೂರಿನ ಮೇಲೆಯೇ ಅವರಿಗೆ ಕಣ್ಣು!

ಸಂಗ್ರಾಮಸಿಂಹ ತನ್ನ ಗೆಳೆಯರನ್ನು ಸೇರಿಸಿದ, ಅವರಿಗೆ ಅವರ ಕರ್ತವ್ಯವೇನೆಂಬುದನ್ನು ತಿಳಿಸಿದ. ಗೆಳೆಯರೆಲ್ಲರೂ ತಮ್ಮ ದೇಶ, ಧರ್ಮಗಳನ್ನು ಪ್ರಾಣಕೊಟ್ಟು ಕಾಪಾಡುವ ಪ್ರತಿಜ್ಞೆ ಮಾಡಿದರು.

ಆಗಲೇ ಈ ವೀರನ ವಿವಾಹವು ನಾಗೂರ ರಾವುಲ ಕರಮಚಂದನ ಮಗಳು ರೂಪವತಿಯೊಂದಿಗಾಯಿತು.

ಬಹುಬೇಗ ಸಂಗ್ರಾಮಸಿಂಹ ಒಂದು ಸೈನ್ಯವನ್ನೇ ಕಟ್ಟಿದ. ತಾನೇ ನಾಯಕನಾಗಿ ಎಲ್ಲರಿಗೂ ಯುದ್ಧದ ಅಭ್ಯಾಸ ಮಾಡಿಸಿದ. ಸಂಗ್ರಾಮಸಿಂಹನ ಸೈನ್ಯ ದಿನ ದನಕ್ಕೆ ದೊಡ್ಡದಾಗುತ್ತ ಬಂತು. ಈ ಸಮಾಚಾರ ಗುಜರಾತ್ ಮತ್ತು ಮಾಳವದ ಸುಲ್ತಾನರಿಗೆ ತಿಳಿಯಿತು.

ಮೇದಿನಿರಾಯ

ಮಾಳವದ ಸುಲ್ತಾನ ಮಹಮದ್ ಖಿಲ್ಜಿಗೆ ಮೇದಿನಿರಾಯ ಎಂಬ ರಜಪೂತ ವೀರ ಬೆಂಬಲವಾಗಿದ್ದ. ಆದರೆ ಕಾಲಕ್ರಮದಲ್ಲಿ ಅವರಿಬ್ಬರಿಗೂ ಮನಸ್ತಾಪ ಉಂಟಾಯಿತು. ಖಿಲ್ಜಿಗೆ ರಾಜ್ಯದಲ್ಲಿ ಬೆಂಬಲ ಇರಲಿಲ್ಲ.

ಖಿಲ್ಜಿ ಮಾಳವದಿಂದ ಓಡಿಹೋಗಿ ಗುಜರಾತಿನ ನವಾಬ ಮುಜಫರ್ ಷಾನ ಆಶ್ರಯ ಪಡೆದ.

ಇದನ್ನು ಅರಿತ ಮೇದಿನಿರಾಯನು ಸಂಗ್ರಾಮಸಿಂಹನ ಸಹಾಯ ಬೇಡಿದ.

ಆ ಸಮಯದಲ್ಲಿ ಸಂಗ್ರಾಮಸಿಂಹನ ಸೈನ್ಯ ಇನ್ನೂ ಅಷ್ಟು ದೊಡ್ಡದಾಗಿರಲಿಲ್ಲ. ಮೇವಾಡ ರಾಜ್ಯದ ರಕ್ಷಣೆಗೆ ಎಷ್ಟೋ ಅಷ್ಟೇ ಸೈನ್ಯವಿದ್ದಿತು. ಅಂತಹ ವೇಳೆಯಲ್ಲಿಯೂ ಸಂಗ್ರಾಮಸಿಂಹ ಸಹಾಯ ಬೇಡಿದ ಮೇದಿನಿರಾಯನಿಗೆ ಇಲ್ಲ ಎನ್ನಲಿಲ್ಲ.

ಸಂಗ್ರಾಮಸಿಂಹ ತನ್ನಲ್ಲಿ ಇದ್ದಷ್ಟೇ ಸೈನ್ಯವನ್ನು ಕಲೆಹಾಕಿದ. ಮೇದಿನಿರಾಯನಿಗೆ ಧೈರ್ಯ ಹೇಳಿದ.

ಆದರೆ ಅಷ್ಟರಲ್ಲಿಯೇ ಮಜಫರ್ ಷಾ ತನ್ನ ದೊಡ್ಡ ಸೈನ್ಯದೊಂದಿಗೆ ಒಂದು ಮಾಂಡೊವನ್ನು ಆಕ್ರಮಿಸಿಕೊಂಡ. ಆಮೇಲೆ ಅವನು ರಾಣಾ ಸಂಗ್ರಾಮಸಿಂಹನ ಸೈನ್ಯವನ್ನು ಎದುರಿಸಲು ಸಿದ್ಧನಾದ.

ಸಂಗ್ರಾಮಸಿಂಹ ಯುದ್ಧ ಮಾಡುವುದರಿಂದ ಪ್ರಯೋಜನವಿರಲಿಲ್ಲ. ಶತ್ರುವಿನ ಸೈನ್ಯ ಬಹು ದೊಡ್ಡದಾಗಿತ್ತು. ಸಂಗ್ರಾಮಸಿಂಹ ಯುದ್ಧ ಮಾಡಿದರೆ ಸೋಲಿ ಕಟ್ಟಿಟ್ಟದ್ದೇ ಎಂಬುದು ಸ್ಪಷ್ಟವಾಗಿತ್ತು.

ಎಂದೇ ಆಗ ಸಂಗ್ರಾಮಸಿಂಹ ಉಪಾಯದಿಂದ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಂಡ. ಇನ್ನೂ ಬಲವಾದ ಸೈನ್ಯ ಸೇರಿಸಿ ಆಮೇಲೆ ಸುಲ್ತಾನನಿಗೆ ಬುದ್ಧಿ ಕಲಿಸುವುದಾಗಿ ಮೇದಿನಿರಾಯನಿಗೆ ಭರವಸೆ ನೀಡಿದ. ಮಹಮದ್ ಖಿಲ್ಜಿ ಮತ್ತೆ ಮಾಳವಾದ ಸುಲ್ತಾನನಾದ. ಮುಜಫರ್ ಷಾ ಅವನಿಗೆ ಬೆಂಬಲವಾಗಿರಲು ದೊಡ್ಡ ಅಶ್ವದಳವನ್ನು ಹಿಂದೆಯೇ ಬಿಟ್ಟು ಗುಜರಾತಿಗೆ ಹಿಂದಿರುಗಿದ.

ಶತ್ರುವಿನ ಮಗನಿಗೆ ಆಶ್ರಯ

ದಿನಗಳು ಉರುಳಿದವು. ಮುಜಫರ್ ಷಾ ಮೊದಲಾದವರು ಪ್ರಬಲರಾಗುತ್ತಿದ್ದರು. ಮೇದಿನಿರಾಯನಿಗೂ ಪ್ರಜೆಗಳಿಗೂ ಕಷ್ಟಗಳು ಹೆಚ್ಚುತ್ತಿದ್ದವು.

ಮುಜಫರ್ ಷಾನನ್ನು ತಡೆಯಲು ಸಂಗ್ರಾಮ ಸಿಂಹನೂ ಸೈನ್ಯದ ಸಿದ್ಧತೆ ಮಾಡುತ್ತಿದ್ದನು.

ಒಂದು ದಿನ ಸಂಗ್ರಾಮಸಿಂಹನ ಆಸ್ಥಾನದಲ್ಲಿ ತನ್ನ ಆಪ್ತರೊಂದಿಗೆ ಮಂತ್ರಾಲೋಚನೆ ಮಾಡುತ್ತಿದ್ದಾನೆ. ಯುವಕನೊಬ್ಬ ಅವನನ್ನು ಕಾಣಲು ಬಂದ. ಒಳಕ್ಕೆ ಬಂದು ವಿನಯದಿಂದ, ಮರ್ಯಾದೆಯಿಂದ ಸಂಗ್ರಾಮ ಸಿಂಹನಿಗೆ ನಮಸ್ಕಾರ ಮಾಡಿದ.

ಸಂಗ್ರಾಮಸಿಂಹ ಅವನ ಮುಖವನ್ನು ಕ್ಷಣಕಾಲ ದಿಟ್ಟಿಸಿ ನೋಡಿದ. ಆಮೇಲೆ ನಗುತ್ತಾ, “ಶತ್ರುವಿನ ಮಗನಾದ ನಿನಗೆ ನಮ್ಮಲ್ಲಿ ಏನು ಕೆಲಸ? ನಮ್ಮ ಸಭೆಗೆ ಬರುವಷ್ಟು ಧೈರ್ಯ ಹೇಗೆ?” ಎಂದು ಕೇಳಿದ.

ಬಂದ ಯುವಕ ಮುಜಫರ್ ಷಾನ ಮಗ ಬಹದ್ದೂರ್ ಷಾ. ಅವನು ಮತ್ತೆ ನಮಸ್ಕಾರ ಮಾಡಿ, “ರಾಣಾಜಿ, ನಾನು ನಿಮ್ಮ ಆಶ್ರಯ ಬೇಡಿ ಬಂದಿದ್ದೇನೆ. ತಂದೆ ಓಡಿಸಿಬಿಟ್ಟ. ಬಂಧುಗಳು ತೊರೆದಿದ್ದಾರೆ” ಎಂದ.

ಸಂಗ್ರಾಮಸಿಂಹ ಗಂಭೀರವಾಣಿಯಿಂದ, “ಎಲ್ಲ ಸರಿ. ನಿನಗೆ ನಮ್ಮ ಆಶ್ರಯ ಇದೆ. ಹೆದರಬೇಡ. ನೀನು ನಮ್ಮ ಆಜ್ಞೆಯಂತೆ ನಡೆಯುತ್ತೀಯಾ?” ಎಂದು ಕೇಳಿದ.

“ಆಗಲಿ, ನಾನು ಎಲ್ಲಕ್ಕೂ ಸಿದ್ಧ”.

“ನಿನ್ನಲ್ಲಿ ಎಷ್ಟು ಸೈನ್ಯವಿದೆ?”

“ಹತ್ತು ಸಾವಿರ ಕುದುರೆ ಸವಾರರಿದ್ದಾರೆ”.

ಹಾಗಾದರೆ ಇಡಾರದ ಮೇಲೆ ಆಕ್ರಮಣ ಮಡಲು ಸಿದ್ಧರಾಗಿ”.

“ಅಪ್ಪಣೆ!”

ಸಂಗ್ರಾಮಸಿಂಹ ತನ್ನ ಶತ್ರುವಾದ ಮುಜಫರ್ ಷಾನ ಮಗನಿಗೇ ಆಶ್ರಯಕೊಟ್ಟ. ಅವನನ್ನೂ ಅತಿಥಿಯಂತೆ ಗೌರವದಿಂದ ಕಂಡು ಆದರದ ಸತ್ಕಾರ ಮಾಡಿದ.

ಖಿಲ್ಜಿಯ ಸೋಲು

ಬೆಳಗಾಯಿತು. ವೀರ ಸಂಗ್ರಾಮಸಿಂಹನ ಸೈನ್ಯ ಹೊರ ಹೊರಟಿತು. ರಣಕಹಳೆ ಮೊಳಗಿತು. ಸಂಗ್ರಾಮ ಸಿಂಹ ತನ್ನ ನೆಚ್ಚಿನ ಜೊತೆಗಾರರೊಂದಿಗೆ ಆಯುಧ ಸಮೇತನಾಗಿ ಹೊರಟ.

ಅತ್ತ ಮಹಮದ್ ಖಿಲ್ಜಿ ತನ್ನ ಸೇನೆಯೊಂದಿಗೆ ಮೇದಿನಿರಾಯನ ಕೋಟೆಗಳನ್ನು ಹಿಡಿಯಲು ಹೊರಟ. ಸಂಗ್ರಾಮಸಿಂಹ ತನ್ನ ಸೇನೆಯೊಂದಿಗೆ ಯುದ್ಧಕ್ಕೆಂದು ಹೊರಟಿದ್ದ ಸಮಾಚಾರವೂ ಅವನಿಗೆ ತಿಳಿದಿತ್ತು.

ಇಬ್ಬರ ಸೈನ್ಯಗಳೂ ಎದುರು ಬದುರಾದವು. ಖಿಲ್ಜಿಯ ಸೈನ್‌ಐ ಸಂಗ್ರಾಮನ ಸೈನ್ಯದ ಎದುರಿಗೆ ನಿಲ್ಲಲಾಗಲಿಲ್ಲ. ವಿಲಾಸ, ವೈಭೋಗದಲ್ಲೇ ಇರುತ್ತಿದ್ದ ಖಿಲ್ಜಿಯ ಸೈನಿಕರು ಬಲಹೀನರಾಗಿದ್ದರು.

ಎಂದೇ ಆ ಸೈನಿಕರು ಯುದ್ಧರಂಗದಲ್ಲಿ ಸರಿಯಾಗಿ ಯುದ್ಧ ಮಾಡಲಿಲ್ಲ. ಸಂಗ್ರಾಮಸಿಂಹನ ವೀರಾವೇಶದಿಂದ ಯುದ್ಧ ಮಾಡಿದರು.

ಯುದ್ಧರಿಂಗದಲ್ಲಿ ಖಿಲ್ಜಿಯ ಕುದುರೆಯ ಮೇಲೆ ಕುಳಿತು ಕತ್ತಿ ಬೀಸುತ್ತಾ ಸಂಗ್ರಂಸಿಂಹನ ಮೇಲೆ ದಾಳಿ ಮಾಡಿದ. ಸಂಗ್ರಾಮಸಿಂಹ ಭೀಕರವಾಗಿ ಕಾದಾಡಿದ. ಖಲ್ಜಿಯ ಆಟ ಸಂಗ್ರಾಮನ ಮುಂದೆ ಸಾಗಲಿಲ್ಲ. ಅವರ ಕುದುರೆಗೆ ಗಾಯವಾಗಿ ಕೆಳಕ್ಕುರುಳಿತು. ಅವನು ಕೆಳಕ್ಕೆ ಬಿದ್ದ. ಸಂಗ್ರಾಮಸಿಂಹ ಅವನನ್ನು ಕೂಡಲೇ ಬಂಧಿಸಿದ.

ಸಂಗ್ರಾಮಸಿಂಹ ಗೆದ್ದ.

ಗಾಯಗಳೆಲ್ಲ ವಾಸಿಯಾದ ಮೇಲೆ ನೀವು ಸ್ವತಂತ್ರರು

ಸಂಗ್ರಾಮಸಿಂಹ ಸಭೆಯಲ್ಲಿ ಸಿಂಹಾಸನದ ಮೇಲೆ ಕುಳಿತಿದ್ದಾನೆ. ಅವನ ಅಕ್ಕಪಕ್ಕಗಳಲ್ಲಿ ವೀರ ಸೈನಿಕರು, ಮಂತ್ರಿಗಳು ಕುಳಿತಿದ್ದಾರೆ. ನಾಲ್ಕು ಜನ ಭಟರು ಸಿಕ್ಕಿದ್ದ ಖಲ್ಜಿಯನ್ನು ಸಭಾಮಂದಿರಕ್ಕೆ ಕರೆದುಕೊಂಡು ಬಂದರು.

ಖಲ್ಜಿಗೆ ಗಾಯಗಳಾಗಿದ್ದವು. ಅವನು ತಲೆ ತಗ್ಗಿಸಿ ಸಂಗ್ರಾಮಸಿಂಹನ ಮುಂದೆ ನಿಂತಿದ್ದ.

ಸಭೆಯು ಮೌನವಾಗಿತ್ತು. ಸಂಗ್ರಾಮಸಿಂಹನು ಧೀರವಾಣಿಯಲ್ಲಿ ನುಡಿದ:

“ಪ್ರಜೆಗಳನ್ನು ಹಿಂಸಿಸುತ್ತ ಅವರನ್ನು ಅಪಮಾನಗೊಳಿಸುತ್ತಾ ಇದ್ದ ನೀವು ಈಗ ನಮ್ಮ ಬಂದಿ. ನಿಮ್ಮನ್ನು ನಾವು ಕೂಡ ಈಗ ಅಪಮಾನಗೊಳಿಸಬಹುದು. ಆದರೆ ರಾಜಪುತ್ರರಾದ ನಾವು ಅಂಥ ಹೀನವಾದ ಕೆಲಸ ಮಾಡುವುದಿಲ್ಲ. ನೀವು ಈಗ ಗಾಯಗೊಂಡಿದ್ದೀರಿ, ಅಲ್ಲವೆ?”

ಖಿಲ್ಜಿ ತಲೆಬಾಗಿಸಿಯೇ ಉತ್ತರ ಕೊಟ್ಟ:

“ಹೌದು”.

ಸಂಗ್ರಾಮಸಿಂಹನ ಮನಸ್ಸು ಅವನ ಸ್ಥಿತಿ ನೋಡಿ ಕರಗಿತು. ಅವನು ಅಷ್ಟೇ ಮೃದುವಾಗಿ ನುಡಿದ:

“ಗಾಯಗೊಂಡಿರುವ ನಿಮಗೆ ನಮ್ಮ ವೈದ್ಯರು ಔಷಧಿ ಕೊಡುತ್ತಾರೆ. ಗಾಯಗಳೆಲ್ಲ ವಾಸಿಯಾದ ಮೇಲೆ ನೀವು ಹಿಂದಿರುಗಬಹುದು. ನಿಮ್ಮನ್ನು ನಾವು ಬಿಡುಗಡೆ ಮಾಡಿದ್ದೇವೆ”.

ಖಲ್ಜಿ ಬೆರಗಾದ. ತಲೆ ಎತ್ತಿ ಸಂಗ್ರಾಮಸಿಂಹನ ಕಡೆ ನೋಡಿದ, ಬಾಯಿಯಲ್ಲಿ ಮಾತೇ ಹೊರಡಲಿಲ್ಲ.

ಸಂಗ್ರಾಮಸಿಂಹನ ಮಾತುಗಳನ್ನು ಕೇಳಿ ಸಭೆಗೆ ಸಭೆಯೇ “ಸಂಗ್ರಾಮಸಿಂಹನಿಗೆ ಜಯವಾಗಲಿ” ಎಂದು ಜೈಕಾರ ಮಾಡಿತು. 

ಗಾಯಗಳೆಲ್ಲ ವಾಸಿಯಾದ ಮೇಲೆ ನೀವು ಹಿಂತಿರುಗಬಹುದು

ಹಿರಿಯಣ್ಣ

 

ಖಲ್ಜಿಯನ್ನು ಗೌರವದಿಂದ ಕಂಡು ಅವನನ್ನು ಸಂಗ್ರಾಮಸಿಂಹನ ಖ್ಯಾತ ಎಲ್ಲ ಕಡೆ ಹರಡಿತು. ಸಂಗ್ರಾಮಸಿಂಹನು ಶೂರನು ಹೌದು, ದಯಾಳವೂ ಹೌದು ಎಂದು ಅನೇಕ ಶತ್ರುಗಳೇ ಹೊಗಳಿದರು. ಅನೇಕ ಹಿಂದು ರಾಜರಿಗೆ ಸಂಗ್ರಾಮ ಸಿಂಹ ಹಿರಿಯಣ್ಣನಂತಾದ. ಎಲ್ಲರೂ ತಮ್ಮ ಒಳಜಗಳಗಳನ್ನು ಬಿಟ್ಟು ಒಗ್ಗಟ್ಟಾಗಿ ನಿಂತರು. ಮೇವಾಡದ ಸಂಗ್ರಾಮಸಿಂಹನೊಂದಿಗೆ ಸೇರಿಕೊಂಡರು. ಅವನಿಗಾಗಿ ಪ್ರಾಣ ಕೊಡಲು ಸಿದ್ಧರಾದರು.

ಖಿಲ್ಜಿಯನ್ನು ಸೋಲಿಸಿದ ಮೇಲೆ ಸಂಗ್ರಾಮಸಿಂಹ ಚಿತ್ತೂರಿನ ಕೋಟೆಯನ್ನು ಎಚ್ಚರದಿಂದ ಪರೀಕ್ಷೆ ಮಾಡಿ, ಅಗತ್ಯವಾದ ಕಡೆ ಸರಿಪಡಿಸಿದ. ಶತ್ರುಗಳ ದಾಳಿಗೆ ಸಿಕ್ಕಿದ ಅನೇಕ ದೇವಾಲಯಗಳನ್ನು ಮತ್ತೆ ಕಟ್ಟಿಸಿ ಮೊದಲಿನಂತೆ ಮಾಡಿದ.

ಆದರೂ ಗುಜರಾತ್ ಮತ್ತು ಮಾಳವಾದ ಸುಲ್ತಾನರು ರಜಪೂತರಿಗೆ ಕಿರುಕುಳ ಕೊಡುತ್ತಲೇ ಇದ್ದರು.

ಹೊರಗಿನಿಂದ ವಿಪತ್ತು

ಹೀಗಿರುವಾಗ ಒಂದು ದಿನ ಸಂಗ್ರಾಮಸಿಂಹನ ಗುಪ್ತಚರನೊಬ್ಬ ದೆಹಲಿಯ ಸುದ್ದಿಯನ್ನು ತಂದ. ಸಂಗ್ರಾಮಸಿಂಹ ತನ್ನ ಕೋಣೆಗೇ ಗುಪ್ತಚರನನ್ನು ಬರಮಾಡಿಕೊಂಡ. ಗುಪ್ತಚರ ನಮಸ್ಕಾರ ಮಾಡಿ, “ರಾಣಾಜಿ! ಇಡಾರದ ಯುದ್ಧದಲ್ಲಿನೀವು ಗೆದ್ದ ಮೇಲೆ ಇಬ್ರಾಹಿಂ ಲೂದಿ ನಿಮ್ಮ ಮೇಲೆ ಕೋಪಗೊಂಡಿದ್ದಾನೆ. ನಿಮ್ಮ ಆಶ್ರಯಕ್ಕೆ ಬಂದಿದ್ದ ಬಹುದ್ದೂರ ಷಾ ಈಗ ಗುಜರಾತಿನ ಸಿಂಹಸನಕ್ಕಾಗಿ ಸೋದರರೊಡನೆ ಜಗಳ ಮಾಡಿಕೊಂಡು ಇಬ್ರಾಹಿಂ ಲೂದಿಯ ಸಹಾಯ ಪಡೆಯಲು ದೆಹಲಿಗೆ ಹೋಗಿದ್ದಾನೆ” ಎಂದ.

ಸಂಗ್ರಾಮಸಿಂಹನಿಗೆ ಇನ್ನೂ ಹೆಚ್ಚು ಸಮಾಚಾರಬೇಕಾಗಿತ್ತು. ಅವನು, “ಈಗ ಇಬ್ರಾಹಿಂ ಲೂದಿ ಮತ್ತೇನು ಹಂಚಿಕೆ ಹೂಡಿದ್ದಾನೆ? ಅದನ್ನು ತಿಳಿಸು” ಎಂದ.

ಗುಪ್ತಚರ ವಿನಯದಿಂದ, “ಇನ್ನೂ ಬಹಳ ವಿಷಯಗಳಿಗೆ. ಇಬ್ರಾಹಿಂ ಲೂದಿಯ ಮಾವ ಈಗೀಗ ಲೂದಿಯಿಂದ ದೂರವಾಗುತ್ತಿದ್ದಾನೆ, ಪ್ರಭು. ಅವನು ಗುಜರಾತಿನಲ್ಲಿ ತಳವೂರಿದ್ದಾನೆ. ಕಾಬೂಲಿನಲ್ಲಿರುವ ಬಾಬರನೊಡನೆ ಪತ್ರವ್ಯವಹಾರ ಸಂಪರ್ಕ ಇಟ್ಟುಕೊಂಡಿದ್ದಾಎ. ಗುಜರಾತಿನ ಸಿಂಹಾಸನವನ್ನು ಲೂದಿಯ ತಮ್ಮನಾದ ಸಿಕಂದರನಿಗೆ ಕೊಡಿಸಿ ಆಮೇಲೆ ತಾನೇ ಆಕ್ರಮಿಸುವುದು ಅವನ ಹಂಚಿಕೆ. ಅದಕ್ಕೆ ಬಾಬರನ ಸ್ನೇಹ ಬಯಸಿದ್ದಾನೆ. ಲೂದಿಯ ಆಡಳಿತ ಈಗ ಬಹಳ ಕ್ರೂರವಾಗಿದೆ” ಎಂದ.

ಕಾಬೂಲಿನ ಬಾಬರನ ಕಣ್ಣು ಹಿಂದೂಸ್ಥಾನದ ಮೇಲೆ ಇದೆ ಎಂಬುದು ಈಗ ಸ್ಪಷ್ಟವಾಗಿತ್ತು.

ಲೂದಿಯ ಸೈನ್ಯ ಬರುತ್ತಿದೆ

ಸಂಗ್ರಾಮಸಿಂಹನಿಗೆ ಹತ್ತು ಬಗೆಯ ಯೋಚನೆಗಳು.

ಇಬ್ರಾಹಿಂ ಲೂದಿಯ ಪುಂಡಾಟಹೆಚ್ಚುತ್ತಿತ್ತು. ಅವನ ಕ್ರೂರ ಆಡಳಿತದಿಂದ ಎಷ್ಟೋ ಜನ ಮುಸ್ಲೀಂರೇ ಅವನ ಮೇಲೆ ಕೋಪಗೊಂಡಿದ್ದರು. ಗ್ವಾಲಿಯರಿನ ರಾಜ ವಿಕ್ರಮಜಿತ ಜಲಾಲುದ್ದೀನನಿಗೆ ಆಶ್ರಯಕೊಟ್ಟ ನೆಪಮಾಡಿಕೊಂಡು ಇಬ್ರಾಹಿಂ ಲೂದಿ ಅವನನ್ನು ಸೋಲಿಸಿದ್ದ. ಈಗ ಮುಂದೆ ನುಗ್ಗಿ ನಮ್ಮ ಮೇಲೆಯೂ ದಾಳಿ ಮಾಡಬಹುದು.

ಈ ಯೋಚನೆಯಲ್ಲಿದ್ದಾಗಲೇ ಹೊಸ ಸುದ್ದಿ ಬಂದಿತು: “ಲೂದಿಯು ಚಾಂದೇರಿ ಕಡೆಗಿ ಸೈನ್ಯ ಕಳಿಸಿದ್ದಾನೆ

ಇನ್ನು ಯೋಚನೆಗೆ ಕಾಲವಿಲವಲ, ಕ್ರಿಯಾಶೀಲರಾಗುವ ಸಮಯ ಬಂದಿದೆ ಎಂದು ನಿರ್ಧರಿಸಿ ಸಂಗ್ರಾಮಸಿಂಹ.

ಕೂಡಲೇ ಸಂಗ್ರಾಮಸಿಂಹ ಯುದ್ಧದ ಉಡುಪು ಧರಿಸಿದ. ರಣಕಹಳೆ ಮೊಳಗಿಸಿದ.

ಕ್ಷಣಮಾತ್ರದಲ್ಲಿ ಅವನ ಸೈನ್ಯ ಕಟೋಲಿಯ ಕಣಿವೆಗಳತ್ತ ಸಾಗಿತು. ಅಲ್ಲಿ ಬೀಡುಬಿಟ್ಟಿತು.

ಕಟೋಲಿ ಕದನ

ಮಾರನೆಯ ದಿನ ಬೆಳಿಗ್ಗೆ ಕುದುರೆ ಸವಾರನೊಬ್ಬ ಸಂಗ್ರಾಮಸಿಂಹ ಡೇರೆಯೊಳಕ್ಕೆ ಬಂದು ನಮಸ್ಕರಿಸಿದ. ಆಗ ಸಂಗ್ರಾಮಸಿಂಹನ ಜೊತೆಯಲ್ಲಿ ಮೇದಿನಿರಾಯ, ಮಂತ್ರಿಗಳು, ಸೇನಾಧಿಪತೆಗಳೆಲ್ಲ ಮಾತನಾಡುತ್ತಿದ್ದರು.

ಕುದುರೆ ಸವಾರ ಸಮಾಚಾರ ಕೊಟ್ಟ:

“ಇಬ್ರಾಹಿಂ ಲೂದಿಯ ಸೈನ್ಯ ಇಲ್ಲಿಗೆ ಆರು ಮೈಲಿ ದೂರದಲ್ಲಿ ಬೀಡುಬಿಟ್ಟಿದೆ”.

ಸಂಗ್ರಾಮಸಿಂಹ ಸೈನ್ಯಕ್ಕೆ ಕೂಡಲೇ ಆಜ್ಞೆ ಇತ್ತು. ಅಸಂಖ್ಯಾತ ಸೈನಿಕರು ಮುನ್ನುಗ್ಗಿ ನಡೆದರುಲ ಕಣಿವೆಗಳಲ್ಲಿ ನಡೆಯುತ್ತಿದ್ದಾಗ ಮೇಲಿನಿಂದ ಬಂಡೆಗಳು ಉರುಳಿದವು. ಆದರೂ ಸಂಗ್ರಾಮಸಿಂಹನ ಸೈನಿಕರು ವೇಗವಾಗಿ ಕಣಿವೆಯನ್ನು ದಾಟಿ ದೊಡ್ಡ ಮೈದಾನಕ್ಕೆ ಬಂದರು.

ಅಲ್ಲಿ ಇಬ್ರಾಹಿಂ ಲೂದಿ ಆನೆಯ ಮೇಲೆ ಕುಳಿತು ದೊಡ್ಡ ಸೈನ್ಯದೊಂದಿಗೆ ಸಿದ್ಧನಾಗಿದ್ದ. ಸಂಗ್ರಾಮಿಸಿಂಹ ತನ್ನ ಕುದುರೆಯನ್ನು ವೇಗದಿಂದ ಓಡಿಸಿ ಲುದಿಯ ಆನೆಯ ಹತ್ತಿರಕ್ಕೆ ಬಂದ. ಲೂದಿಯೂ ಸಂಗ್ರಾಮಸಿಂಹನನ್ನು ಹಿಡಿದುಕೊಂಡು ಹೋಗಲು ಹೊಂಚು ಹಾಕುತ್ತಿದ್ದ.

ಯುದ್ಧವು ಬಹಳ ಹೊತ್ತು ನಡೆಯಿತು. ಲೂದಿಯು ವಿಷದ ಬಾಣಗಳನ್ನು ಬಿಡುತ್ತಿದ್ದ. ಸಂಗ್ರಾಮಸಿಂಹ ಅವುಗಳಿಂದ ತಪ್ಪಿಸಿಕೊಂಡು ಕತ್ತಿಯಿಂದ ಆಕ್ರಮಣ ಮಾಡುತ್ತಿದ್ದ.

ಎರಡು ಸೈನ್‌ಐಗಳ ನಡುವೆ ಘೋರಯುದ್ಧ ನಡೆಯಿತು.

ದ್ರೋಹ

ಹೀಗೆ ಕದನ ನಡೆಯುತ್ತಿದ್ದಾಗಲೇ ಸಂಗ್ರಾಮನ ಕಡೆ ಯುದ್ಧ ಮಾಡುತ್ತಿದ್ದ ಹುಸೇನ್ ಖಾನನು ದ್ರೋಹ ಮಾಡಿದ. ತನ್ನ ಸ್‌ಐನಿಕ್ನರನು ಇಬ್ರಾಹಿಂ ಲೂದಿಯ ಕಡೆ ಸೇರಿಸಿಬಿಟ್ಟ. ಅನೇಕ ಹಿಂದು ಸೈನಿಕರು ಇಬ್ರಾಹಿಂ ಲೂದಿಯ ಕಡೆ ಸೇರಿಸಿಬಿಟ್ಟ. ಅನೇಕ ಹಿಂದು ಸೈನಿಕರು ಸತ್ತರು. ಒಂದು ಬಾಣವು ಸಂಗ್ರಾಮಸಿಂಹನ ಕಾಲಿಗೆ ತಗುಲಿತು. ಕೂಡಲೇ ಸಂಗ್ರಾಮನ ಜೊತೆಗಾರರು ಬಾಣವನ್ನು ಕಿತ್ತು ಔಷಧಿ ಹಾಕಿದರು.

ಕಾಲನ ನೋವನ್ನು ಲೆಕ್ಕಿಸದೆ ಸಂಗ್ರಾಮಸಿಂಹ ಕುದುರೆ ಏರದೆಯೇ ಕತ್ತಿ ಹಿರಿದು ಇಬ್ರಾಹಿಂ ಲೂದಿಯ ಮೇಲೆ ನುಗ್ಗಿ ಬಂದ. ಲೂದಿಯ ಆನೆಗೆ ಭಲ್ಲೆಯಿಂದ ಜೋರಾಗಿ ಹೊಡೆದ. ಅದು ನೋವಿನಿಂದ ಮನಸ್ಸು ಬಂದಂತೆ ಓಡಿತು. ಆಗ ಇಬ್ರಾಹಿಂ ಲೂದಯ ಸೈನಿಕರು ಬಹಳ ಕಷ್ಟಪಟ್ಟು ಅವನನ್ನು ಆನೆಯಿಂದ ಕೆಳಕ್ಕೆ ಇಳಿಸಿದರು.

ಗುರಾಣಿ ಹಿಡಿದ ಕೈ ಹೋಯಿತು

ಕೂಡಲೇ ಸಂಗ್ರಾಮಸಿಂಹ ಕತ್ತಿ ಹಿಡಿದು ಅವನ ಮುಂದೆ ಬೆಟ್ಟದಂತೆ ನಿಂತ. ಲೂದಿಯು ವೇಗದಿಂದ ಹಿಂದೆ ಬಂದು ಸಂಗ್ರಾಮಸಿಂಹನ ಭುಜಕ್ಕೆ ಗುರಿಯಿಟ್ಟು ಕತ್ತಿಯನ್ನು ಬೀಸಿದ.

ಸಂಗ್ರಾಮಸಿಂಹನ ಗುರಣಿ ಹಿಡಿದ ಕೈ ಕತ್ತಿರಿಸಿ ಬಿದ್ದಿತು.

ಆ ಸಮಯದಲ್ಲಯೇ ಮೇದಿನಿರಾಯ ತನ್ನ ಸಾಹಸದಿಂದ ಲೂದಿಯ ಸೈನ್ಯವನ್ನು ಸೋಲಿಸಿ ಓಡಿಸಿಬಿಟ್ಟಿದ್ದ. ಲೂದಿಗೆ ಆಗ ಅಲ್ಲಿಂದ ಓಡಿಹೋಗುವುದೇ ಕ್ಷೇಮವೆನಿಸಿ ಅವನು ಓಟಕಿತ್ತ.

ಸಂಗ್ರಾಮಸಿಂಹ ಗಾಯಗೊಂಡು ಬಿಡಾರಕ್ಕೆ ಮರಳಿದ.

ಯುದ್ಧದಲ್ಲಿ ಒಂದು ಕೈಯನ್ನು ಕಳೆದುಕೊಂಡು ಸಂಗ್ರಾಮಸಿಂ ಮಂಚದ ಮೇಲೆ ಮಲಗಿದ್ದ. ವೈದ್ಯರು ಅವನ ದೇಹಕ್ಕೆಲ್ಲಾ ಔಷಧ ಹಚ್ಚುತ್ತಿದ್ದರು. ಒಬ್ಬ ವೈದ್ಯ ವೀರ ಸಂಗ್ರಾಮಸಿಂಹನ ದೇಹದ ಮೇಲೆ ಮೂಡಿದ್ದ ಹಳೆಯ ಗಾಯಗಳ ಕಲೆಯನ್ನು ಎಣಿಸಿದ. ಒಟ್ಟು ೮೪ ಗಾಯಗಳ ಕಲೆ ಇದ್ದುದು ಕಂಡುಬಂತು!

ಸಂಗ್ರಾಮಸಿಂಹನ ರಾಣಿ ತಾನೇ ಸ್ವತಃ ಗಂಡನ ಉಪಚಾರ ಮಾಡಿದಳು. ತನ್ನ ಗಂಡ ದೇಶದ ಸ್ವಾತಂತ್ಯ್ರವನ್ನು ಕಾಪಾಡಲು ತನ್ನ ಕೈಯನ್ನೇ ಬಲಿಗೊಟ್ಟಿದ್ದು ಆಕೆಗೆ ಹೆಮ್ಮೆ ಎನಿಸಿತ್ತು.

ಸಭೆ

ಕೈ ಕತ್ತರಿಸಿತು; ದೇಹದ ತುಂಬಾ ಗಾಯ ಎಂದು ಚಿಕಿತ್ಸೆಗೆ, ಆರೈಕೆಗೆ ಗಮನ ಕೊಡುವಷ್ಟು ಸಮಯವೂ ಇರಲಿಲ್ಲ, ಮತ್ತೆ ಸಂಗ್ರಾಂಮಸಿಂಹ ಶತ್ರುಗಳನ್ನು ತಡೆಯುವ ಕಷ್ಟದ ಕೆಲಸಕ್ಕೆ ಧಾವಿಸಬೇಕಾಗಿತ್ತು. ಸ್ವಾತಂತ್ಯ್ರಕ್ಕೆ ಹೋರಾಡಲು ಸಿದ್ಧರಿದ್ಧ ರಜಪೂತ ವೀರರೆಲ್ಲ ಸೇರಿದರು. ಅವರ ನಾಯಕ – ವೀರ ಸಂಗ್ರಾಮಸಿಂಹನೇ.

ರಾಣಾ ಸಂಗ್ರಾಮಸಿಂಹ ಸಭೆಗೆ ಬಂದ ಕೂಡಲೆ ನೆರೆದ ಸಭಾಸದರೆಲ್ಲ ಗೌರವಾದರಗಳಿಂದ ಎದ್ದು ನಿಂತು ನಮಸ್ಕಾರ ಮಾಡಿದರು.

ಎಡಗೈಯನ್ನು ಕಳೆದುಕೊಂಡಿದ್ದ ತಮ್ಮ ನಾಯಕನ ಈ ಸ್ಥತಿಯನ್ನು ನೋಡಿ ಸಭೆಯಲ್ಲಿದ್ದ ವೀರರ ಕಣ್ಣುಗಳು ಕಂಬನಿಯಿಂದ ಮಂಜಾದವು.

ಸಂಗ್ರಾಮಸಿಂಹನು ಅಲ್ಲಿ ನೆರೆದಿದ್ದ ಸಾಮಂತ ರಾಜರನ್ನು ಒಮ್ಮೆ ನೋಡಿದ ಸಿಂಹದಂತೆ! ಅಜಮಿರ್, ನಾಡೋಲೆ, ಹಂಸಿ, ಹರಾವತಿ, ಜೈಪುರ, ಕಾಲ್ಪಿ, ರಾಂತಂ, ಬೋರ್, ಅಭೋ, ಚಿತ್ತೋರ್ ಗಢ್, ಕಾಲಂಜರ, ಝಾನ್ಸಿ, ಚಾಂದೇರಿ, ದುಂಗರಪುರ ಮೊದಲಾದ ರಾಜರೆಲ್ಲರೂ ಅಲ್ಲಿ ವಿಶೇಷವಾಗಿ ಸೇರಿದ್ದರು. ವಿಕ್ರಮದೇವ, ಮೇದಿನಿರಾಯರು ಮಂತ್ತಿಗಳ ಸ್ಥಾನದಲ್ಲಿ ಕುಳಿತಿದ್ದರು. 

ಗುರಾಣಿ ಹಿಡಿದಿದ್ದ ಕೈ ಕತ್ತರಿಸಿ ಕೆಳಕ್ಕೆ ಬಿತ್ತು

ಬಲಗೈ ಇದೆ, ಸಾವಿರಾರು ಕೈಗಲಿವೆ

ರಾಣಾ ಸಂಗ್ರಾಮಸಿಂಹ ಗಂಭೀರವಾಗಿ ಸುತ್ತಲೂ ನೋಡಿದ. ಸ್ವಲ್ಪ ಹೊತ್ತು ಮೌನ! ಆಮೇಲೆ ಎದ್ದು ನಿಂತು ಮಾತನಾಡಿದ.

“ನೀವೆಲ್ಲರೂ ದೇಶಭಕ್ತರು. ನಾನು ನಿಮ್ಮ ಬೆಂಬಲದಿಂದ ಮಾತ್ರ ನಮ್ಮ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ.

“ಈಗ ದೇಶವು ಅಪಾಯ ಸ್ಥಿತಿಯಲ್ಲಿದೆ. ಹೊರಗಿನಿಂದ ಶತ್ರುಗಳು ಬರುತ್ತಿದ್ದಾರೆ. ನಮ್ಮ ದೇಶಬಾಂಧವರನ್ನು ಕೊಲ್ಲುತ್ತಿದ್ದಾರೆ. ನಮ್ಮ ದೇಶದವರೇ ಹಲವು ಹೊರಗಿನ ಶತ್ರುಗಳಿಗೆ ನೆರವಾಗುತ್ತಿದ್ದಾರೆ.

“ಸ್ನೇಹಿತರೆ, ಈ ವಿಷಮ ಗಳಿಗೆಯಲ್ಲಿ ನಾವು ಒಗ್ಗಟ್ಟಾಗಿ ನಿಲ್ಲಬೇಕು. ಏನೇ ಕಷ್ಟ ಬಂದರೂ ಮಣಿಯಬಾರದು. ನನ್ನ ಒಂದು ಕೈ ಹೋಯಿತು. ನಿಜ. ಆದರೆ ಇನ್ನೂ ನನ್ನ ಬಲಗೈ ಉಳಿದೆದೆಯಲ್ಲ ಯುದ್ಧ ಮಾಡಲು? ಅಲ್ಲದೆ ನನ್ನ ಒಂದು ಎಡಗೈ ಹೋಗಿದೆ, ನಿಜ. ಆದರೆ ನನಗೆ ನಿಮ್ಮೆಲ್ಲರ ಸಾವಿರಾರು ಕೈಗಳು ಇವೆಯಲ್ಲ! ಅವುಗಳು ಬಲಯುತವಾಗಿದೆ. ನಾನು ಶತ್ರುಗಳೊಡನೆ ಇನ್ನೂ ಹೆಚ್ಚು ಆತ್ಮ ವಿಶ್ವಾಸದಿಂತ ಯುದ್ಧಮಾಡುತ್ತೇನೆ. ಕಾಳಿದೇವಿ ನಮಗೆಲ್ಲ ಸಹಾಯ ಮಾಡಲಿ”.

ಸಂಗ್ರಾಮಸಿಂಹ ಕುಳಿತುಕೊಂಡ. ಎಲ್ಲರೂ ಅವನ ದೇಶಭಕ್ತಿಯನ್ನು ಮೆಚ್ಚಿಕೊಂಡರು. ತಾವೂ ದೇಶವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದರು.

ಬೀದಿಯಲ್ಲಿ ಹೋಗುವ ಮಾರಿಗೆ

ಆಗಲೇ ಕಾವಲುಗಾರನೊಬ್ಬ ಸಭೆಯನ್ನು ಪ್ರವೇಶಿಸಿದ. ಭಕ್ತಿಯಿಂದ ಸಿಂಹಾಸನಕ್ಕೆ ನಮಸ್ಕಾರಮಾಡಿ ಸಂಗ್ರಾಮಸಿಂಹನಿಗೆ ಪತ್ರವೊಂದನ್ನು ಕೊಟ್ಟ. ತಂದ ಪತ್ರದ ಸುದ್ದಿ ಇದು:

“ಆಫ್ಘಾನಿಸ್ತಾನದಲ್ಲಿ ಲೂಟಿ, ಕೊಲೆಗಳನ್ನು ನಡೆಸುತ್ತ ಇರುವ ಬಾಬರನಿಗೆ ಇಬ್ರಾಹಿಂ ಲೂದಿಯ ಮಾವ ಅಲಂಖಾನನು ಕಾಗದ ಬರೆದಿದ್ದಾನೆ. ಅದರಂತೆ ಬಾಬರನು ದೆಹಲಿಯ ಮೇಲೆ ದಂಡೆತ್ತಿ ಬರುತ್ತಾನೆ. ಇಬ್ರಾಹಿಂ ಲೂದಿಯನ್ನು ಸೋಲಿಸಿ ಆಲಂಖಾನನಿಗೆ ದೆಹಲಿಯ ಸಿಂಹಾಸನ ಕೊಡಿಸುತ್ತಾನೆ.

ಮುಂದೇನು?

ಮೇದಿನಿರಾಯ ಕಾಗದವನ್ನು ಓದಿದ ಮೇಲೆ ಸಭೆಯು ಸ್ವಲ್ಪ ಹೊತ್ತು ಮೌನವಾಗಿದ್ದತು. ಸಭೆಯಲ್ಲಿದ್ದವರೆಲ್ಲ ಈ ಹೊಸ ಸುದ್ದಿಯನ್ನು ಕುರಿತು ಯೋಚಿಸುತ್ತಿದ್ದರು. ಹೊರ ದೇಶದವನೊಬ್ಬನನ್ನು ಈ ದೇಶದಲ್ಲೇ ಇರುವವರು ಈಗ ನೆರವಿಗೆ ಕರೆತಂದಾಯಿತು. ಇದರ ಪರಿಣಾಮ ಏನಾದೀತು?

ಸ್ವಲ್ಪ ಹೊತ್ತು ಕಳೆದಮೇಲೆ ವಿಕ್ರಮಸಿಂಹನು ಎದ್ದು ನಿಂತು ಸಭೆಗೆ ಹೇಳಿದ: “ಬಾಬರನ್ನು ಹಿಂದೂಸ್ಥಾನಕ್ಕೆ ಕರೆಸಿಕೊಳ್ಳುವುದು ಹೊರಗಿನ ಮಾರಿಯನ್ನು ಮನೆಗೆ ಕರೆಸಿಕೊಂಡಂತೆ ಆಗುತ್ತದೆ. ನಾವು ಈಗ ಇನ್ನೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು”.

ಯುವರಾಜ ರತ್ನಸಿಂಹ ಹೇಳಿದ: “ಈಗ ನಾವು ನಮ್ಮ ಇಂದ್ರಪ್ರಸ್ಥವಾಗಿದ್ದ ದೆಹಲಿಯನ್ನು ಮತ್ತೆ ಹಿಂದಕ್ಕೆ ಪಡೆಯಬಹುದು. ಬಾಬರನ್ನು ತಡೆದು, ಇತ್ತ ಲೂದಿಯ ಮೇಲೆ ಆಕ್ರಮಣ ಮಾಡಿದರೆ ಕೆಲಸ ಸುಲಭವಾಗಬಹುದು”.

ಇಬ್ರಾಹಿಂ ಲೂದಿ ಮತ್ತು ಬಾಬರ – ಇವರಿಬ್ಬರ ಯುದ್ಧ ಆಗಿಯೇ ತೀರುತ್ತದೆ. ನಾವು ಆಗ ಬಾಬರನಿಗೆ ಸಹಾಯ ಮಾಡುವಂತೆ ನಟಿಸಬೇಕು. ಬಾಬರನು ನಮ್ಮ ಸಹಾಯಕ್ಕೆ ಕಾಯುತ್ತಿರುವಾಗ ಇತ್ತ ದೆಹಲಿಯ ಮೇಲೆ ದಾಳಿಮಾಡಿ ಅದನ್ನು ಆಕ್ರಮಿಸಿಕೊಳ್ಳಬೇಕು. ದೆಹಲಿ ನಮ್ಮ ಕೈಗೆ ಬಂದು ಬಿಟ್ಟರೆ ಬಾಬರನ್ನು ಹೊಡೆದು ಓಡಿಸುವುದು ಕಷ್ಟವೇನೂ ಆಗಲಾರದು”. ಈ ಮಾತನ್ನು ಝಾನ್ಸಿಯ ರಾಜ ಹೇಳಿದ.

ಸಂಗ್ರಾಮಸಿಂಹ ಎಲ್ಲರ ಸಲಹೆ ಸೂಚನೆಗಳನ್ನು ಕೇಳಿದ. ಅನಂತರ ಅವನು, “ನಾನು ನಿಮಗೆಲ್ಲರಿಗೂ ಸರಿಯಾದ ಸಮಯದಲ್ಲಿ ಬಾಬರನನ್ನು ಎದುರಿಸುವ ಯೋಜನೆಯನ್ನು ಹೇಳುತ್ತೇನೆ. ನೀವೆಲ್ಲರೂ ಕೂಡಲೇ ನಿಮ್ಮ ನಿಮ್ಮ ಸೈನ್ಯಗಳನ್ನು ಸಿದ್ಧವಾಗಿರಿಸಿಕೊಳ್ಳಿ” ಎಂದು ನುಡಿದು ಸಭೆಯನ್ನು ಮುಕ್ತಾಯಗೊಳಿಸಿದ.

ಬಾಬರ್

ಬಾಬರ್ ತಾರ್ತರ ಪಂಗಡದವನು. ಅವನ ತಂದೆ ಉಮರ್ ಶೇಖ್ ಎಂಬುವನು ಫರ್ಗಾನಾದಲ್ಲಿ ದೊಡ್ಡ ಜಮೀನ್ದಾರನಾಗಿದ್ದ. ಬಾಬರ್ ಹನ್ನೊಂದು ವರ್ಷದ ಹುಡುಗನಾಗಿದ್ದಾಗಲೇ ಅವನ ತಂದೆ ಸತ್ತು ಹೋದ.

ಯುವಕನಾದ ಮೇಲೆ ಬಾಬರ್ ಕಾಬೂಲಿನ ಆಸುಪಾಸಿನಲ್ಲಿ ತನ್ನ ಪುಂಡರ ಗುಂಪಿನೊಂದಿಗೆ ಕಳ್ಳತನ, ಲೂಟಿ, ಕೊಲೆಗಳನ್ನು ಮಾಡತೊಡಗಿದ.

ಹಾಗೆಯೇ ಅವನ ಪುಂಡರ ಗುಂಪು ಬೆಳೆದು ಅದರ ನಾಯಕನಾದ ಬಾಬರ್!

ಬಾಬರ್ ಹೀಗೆ ಪುಂಡಾಟದಲ್ಲಿದ್ದಾಗಲೇ ಅವನ ತಂದೆಯ ರಾಜ್ಯವನ್ನು ಶತ್ರುಗಲು ಆಕ್ರಮಿಸಿಕೊಂಡರು. ಬಾಬರ್ ಆಗ ಸುಮ್ಮನೆ ಕೊಡಲಿಲ್ಲ. ಅವನು ೧೪೯೯ ರ ಜೂನ್ ತಿಂಗಳಲ್ಲಿ ತನ್ನ ತಂದೆಯ ರಾಜ್ಯವನ್ನು ಮತ್ತೆ ಪಡೆದುಕೊಂಡ.

ಬಾಬರನ್ನು ಹಿಂದೂಸ್ಥಾನದ ಮೇಲೆ ಹಿಂದೆ ಮೂರು ಬಾರಿ ದಾಳಿಮಾಡಲು ಹೊರಟವನು ಮತ್ತೆ ಕಾಬೂಲಿಗೆ ಹಿಂದಿರುಗಿದ್ದ. ಈಗ ಅವನಿಗೆ ಎಲ್ಲ ರೀತಿಯಲ್ಲಿಯೂ ಕೆಲಸ ಅನುಕೂಲವಾಗಿತ್ತು. ಬಾಬರ್ ಹೊರಟ.

ಬಾಬರ್ ಬಂದ

ಸಂಗ್ರಾಮಸಿಂಹನ ಗೂಢಾಚಾರರು ಎಚ್ಚರವಾಗಿಯೇ ಇದ್ದರು. ಹತ್ತು ಕಡೆಯ ಸುದ್ದಿಯನ್ನು ತಂದು ಅವನಿಗೆ ಮುಟ್ಟಿಸುತ್ತಿದ್ದರು. ಬಾಬರನು ಹೊರಟ ಸಮಾಚಾರವನ್ನೂ ಸಂಗ್ರಾಂಸಿಂಹ ತನ್ನ ಗುಪ್ತಚರರಿಂದ ತಿಳಿದ. ಅವನನ್ನು ಎದುರಿಸಲು ತಕ್ಕ ಏರ್ಪಾಟುಗಳನ್ನು ಮಾಡಿಕೊಂಡ.

೧೫೨೬ರ ಜನೆವರಿ ೮ ರಂದು ಬಾಬರ್ ಮಲಾಟ್ ಕೋಟೆಯನ್ನು ಧ್ವಂಸ ಮಾಡಿ, ಪುಸ್ತಕ ಭಂಡಾರವನ್ನೆಲ್ಲಾ ಸುಟ್ಟುಹಾಕಿದ. ಚಿನ್ನ, ಬೆಳ್ಳಿ, ಮೊದಲಾದ ವಸ್ತುಗಳನ್ನು ಲೂಟಿ ಮಾಡಿದ.

ಈ ಎಲ್ಲಾ ಸಮಾಚಾರಗಳೂ ಭಾರತದ ಇತರ ರಾಜರಿಗೆ ತಿಳಿದು ಬಂದವು. ಒಬ್ಬೊಬ್ಬರ ಪ್ರತಿಕ್ರಿಯೆ ಒಂದೊಂದು ಬಗೆಯದು. ಹೊರಗಿನಿಂದ ಇಲ್ಲಿಗೆ ಮತ್ತೊಬ್ಬ ಸೈನ್ಯದೊಡನೆ ಬಂದ; ಇದೊಂದು ಹೊಸ ವಿಪತ್ತು ಎಂದು ಕೆಲವರಿಂದರು. ದೆಹಲಿಯ ಸುಲ್ತಾನರ ದಬ್ಬಾಳಿಕೆ, ಅನ್ಯಾಯ ಹೆಚ್ಚುತ್ತಿವೆ, ಬಾಬರನಾದರೂ ಅವರಿಗೆ ಬುದ್ಧಿ ಕಲಿಸಲಿ ಎಂದು ಕೆಲವರು ಯೋಚಿಸಿದರು.

ಆದರೆ ಸಂಗ್ರಾಮಸಿಂಹ ಬಾಬರನ ಆಗಮನ ದೊಡ್ಡ ವಿಪತ್ತು ಎಂದೇ ಗುರುತಿಸಿದ. ಹಿಂದೆ ಕರಲವರು ಭಾರತಕ್ಕೆ ಬಂದು ದಾಳಿ ಮಾಡಿ ಹಿಂದಕ್ಕೆ ಹೋಗಿದ್ದರು. ಬಾಬರ್ ಅಂತಹ ದಾಳಿಕಾರನಲ್ಲ, ಪ್ರಾಯಶಃ ಅವನು ಇಲ್ಲಿಯೇ ರಾಜ್ಯ ಕಟ್ಟಿ ನಿಲ್ಲುವವನು ಎಂಬ ಸಂದೇಶ ಸಿಂಹನಿಗಿತ್ತು. ಎಂದೇ ಅವನು ಮತ್ತೊಮ್ಮೆ ತನ್ನ ಸಾಮಂತ ರಾಜರೆಲ್ಲರನ್ನೂ ಕರೆಸಿ ಅವರನ್ನು ಯುದ್ಧಕ್ಕೆ ಅಣಿ ಮಾಡಿದ.

ಯುದ್ಧ ಸಿದ್ಧತೆ

ಮೇವಾಡದ ದಿತ್ತೂರಿನಲ್ಲಿ ಕ್ಷತ್ರಿಯ ವೀರರೆಲ್ಲ ಸೇರಿದರು. ಸಂಗ್ರಾಮಸಿಂಹ ಸಭೆಗೆ ಆಗಮಿಸಿದ. ಎಲ್ಲರೂ ಜೈಕಾರ ಮಾಡಿ ವೀರನನ್ನು ಸ್ವಾಗತಿಸಿದರು. ಸಂಗ್ರಾಮಸಿಂಹ ಎದ್ದು ನಿಂತು ನುಡಿದ:

“ಬಾಂಧವರೆ! ಹಿಂದೂಸ್ಥಾನದ ಮೇಲೆ ಈಗ ಬಾಬರನು ದೊಡ್ಡ ಬಿರುಗಾಳಿಯಂತೆ ಬರುತ್ತಿದ್ದಾನೆ. ದೆಹಲಿಯ ಇಬ್ರಾಹಿಂ ಲೂದಿ ಗುಡುಗುಡಿ ಸೇದುತ್ತ ಕುಳಿತಿದ್ದಾನೆ. ಇದು ನಾವು ಎಚ್ಚರಿಕೆಯಿಂದ ಮುನ್ನುಗ್ಗುವ ಕಾಲ. ಶಸ್ತ್ರಗಳನ್ನು ಸಜ್ಜಾಗಿ ಇಡಿ. ಸೈನಿಕರನ್ನು ಸೇರಿಸಿ. ಬಾಬರ್ ಹೆಚ್ಚು ಮುಂದುವರಿಯದಂತೆ ತಡೆಯುವ ಕಾಲ ಹತ್ತಿರವಾಗುತ್ತಿದೆ. ನಾನು ಸೂಚನೆ ಕೊಟ್ಟ ಕೂಡಲೇ ಎಲ್ಲರೂ ಬರಬೇಕೆಂದು ಪ್ರಾರ್ಥಿಸುತ್ತೇನೆ”.

ಪಾಣಿಪಟ್ ಕದನ

ಪೂರ್ವದಲ್ಲಿ ಸೂರ್ಯೋದಯವಾಗಿದೆ. ಹಕ್ಕಿಗಳು ಕೂಗುವ ಶಬ್ದ ಇಂಪಾಗಿದೆ. ಗಾಳಿ ತಂಪಾಗಿ ಬೀಸುತ್ತಿದೆ. ಪಾಣಿಪಟ್ಟಿನ ಕಡೆಗೆ ಇದ್ದ ರಸ್ತೆಯಲ್ಲಿ ಅಷ್ಟಾಗಿ ಹೆಚ್ಚು ಜನ ಸಂಚಾರವಿಲ್ಲ.

ಆಗ ಇದ್ದಕಿದ್ದಂತೆ ಧೂಳು ಎದ್ದಿತು. ಕುದುರೆಗಳ ಗೊರಸಿನ ಶಬ್ದ ತುಂಬಿತು.

ಬಾಬರನ ಸೈನ್ಯ ಕತ್ತಿ ಗುರಣಿಗಳನ್ನು ಝಳಪಿ ಸುತ್ತಾ ಪಾಣಿಪಟ್ಟಿನ ಕಡೆಗೆ ನುಗ್ಗುತ್ತಿದೆ. ಆನೆಗಳ ಮೇಲೆ ಮದ್ದುಗುಂಡುಗಳನ್ನು ಹೇರಲಾಗಿದೆ. ಬಾಬರ್ ತನ್ನ ಮಗ ಹುಮಾನೂನನ ಸಂಗಡ ಕುದುರೆಯ ಮೇಲೆ ಸವಾರನಾಗಿ ಬರುತ್ತಿದ್ದಾನೆ.

ಇತ್ತ ಸಂಗ್ರಾಮಸಿಂಹ ತನ್ನ ಸೈನಿಕರಿಗೆ ಶತ್ರುವನ್ನು ಎದುರಿಸುವ ಉಪಾಯಗಳನ್ನು ಹೇಳಿದ. ಬಾಬರನ ಕಡೆಯವರಿಗೆ ಅನ್ನ ನೀರು ಸಿಕ್ಕದಂತೆ ಮಾಡಿದ.

ಪಾಣಿಪಟ್ ಭೂಮಿಯಲ್ಲಿ ಮೊಗಲರ ಸೈನ್ಯವೂ ಇಬ್ರಾಹಿಂ ಲೂದಿಯ ಸೈನ್ಯವೂ ಎದುರಾದವು. ೧೫೨೬ ರ ಎಪ್ರಿಲ್ ೧೨ ರಂದು ಕದನ ಪ್ರಾರಂಭವಾಯಿಯು. ಬಾಬರನಿಗಿದ್ದ ಅಸಾಧಾರಣ ಅನುಕೂಲ ಎಂದರೆ ತೋಪು, ಮದ್ದುಗುಂಡುಗಳ ಬಳಕೆ. ಲೂದಿಯ ಸೈನಿಕರಿಗೆ ಬಿಲ್ಲು ಬಾಣ, ಕತ್ತಿ ಗುರಾಣಿಗಳೇ ಗತಿ.

ಯುದ್ಧವು ಆರಂಭವಾದ ಹತ್ತನೇ ದಿನ, ಅಂದರೆ ೧೫೨೬ ರ ಎಪ್ರಿಲ್ ೨೧ ರಂದು ಇಬ್ರಾಹಿಂ ಲೂದಿ ರಣರಂಗದಲ್ಲಿ ಸತ್ತುಬಿದ್ದ.

ಬಾಬರನಿಗೆ ಜನರ ಸ್ವಾಗತ!

ಇಬ್ರಾಹಿಂ ಲೂದಿಯ ತಲೆಯನ್ನು ಕತ್ತಿರಿಸಿದ ಕೂಡಲೇ ಬಾಬರ್ ತನ್ನ ಮಗ ಹುಮಾಯೂನನ್ನು ಕರೆದು, “ಮಗು! ನೀನು ಕೂಡಲೇ ನಿನ್ನ ಸೈನ್ಯದೊಂದಿಗೆ ಆಗ್ರಾದ ಕಡೆಗೆ ನುಗ್ಗು,. ಇತರರೊಂದಿಗೆ ಆಗಾಮಿರ್ಜಾ ದೆಹಲಿಗೆ ಹೋಗಲಿ” ಎಂದು ಆಜ್ಞಾಪಿಸಿದ.

ಅದರಂತೆ ದೆಹಲಿಯನ್ನು ಅವನ ಸೇನೆ ಆಕ್ರಮಿಸಿಕೊಂಡಿತು. ಮತ್ತೊಂದು ಗುಂಪು ಆಗ್ರಾ ಕೋಟೆಯ ಕಡೆ ನಡೆಯಿತು. ಅಷ್ಟರಲ್ಲಿ ಸಂಗ್ರಾಮಸಿಂಹನ ಕಡೆಯವರು ಆಗ್ರಾದ ಸಿತ್ತಮುತ್ತಲಿನ ಜನರನ್ನು ಎಚ್ಚರಿಸಿದರು. ಬಾಬರನ ಕಡೆಯವರಿಗೆ ಒಂದು ತೊಟ್ಟು ನೀರು ಕೂಡಾ ಸಿಕ್ಕದಂತೆ ಮಾಡಬೇಕೆಂದು ಪ್ರಚಾರ ಮಾಡಿದ್ದರು.

ಜನರು ಸಂಗ್ರಾಮಸಿಂಹನ ಸೈನಿಕರು ಹೇಳಿ ಕೊಟ್ಟಂತೆಯೇ ಮಾಡಿದರು. ಬಾಬರನಿಗೆ ಹಳ್ಳಿಗಳಲ್ಲಿ ಅಕ್ಕಿ, ಗೋಧಿ, ಬೇಳೆ, ಮೇವು ಯಾವುದೂ ಸಿಕ್ಕಲಿಲ್ಲ. ಜನರು ಅವನಿಗೆ ಏನನ್ನೂ ಕೊಡಲಿಲ್ಲ. ಎಷ್ಟೋ ಹಳ್ಳಿಗಳು ಖಾಲಿಯಾಗಿದ್ದವು.

ಹೀಗೆ ತನಗೆ ದೊರೆತ ಸ್ವಾಗತದಿಂದ ಬಾಬರ್ ಇನ್ನೂ ಹುಚ್ಚನಂತಾದ. ಅಂಥ ಹಳ್ಳಿಗಳಿಗೆ ಬೆಂಕಿ ಇಡುವಂತೆ ಸೈನಿಕರಿಗೆ ಹೇಳಿದ. ಸೈನಿಕರು ಅದರಂತೆಯೇ ಮಾಡಿದರು.

ಸಂಗ್ರಾಮಸಿಂಹನು ಬರುತ್ತಿದ್ದ ವಿಪತ್ತನ್ನು ಎದುರಿಸಲು ಸಿದ್ಧಮಾಡಿಕೊಳ್ಳುತ್ತಿದ್ದ. ರಾಜನೀತಿಯನ್ನು ಬಳಸಿದ, ಸೈನ್ಯವನ್ನೂ ಬಲಗೊಳಿಸಿದ. ಇಬ್ರಾಹಿಂ ಲೂದಿಯ ಸಹೋದರ ಮಹಮದ್ ಲೂದಿಯನ್ನು ಸುಲ್ತಾನ ಎಂದು ಮನ್ನಿಸಿದ.ಇತರ ರಜಪೂತ ವೀರರನ್ನು ತನ್ನ ಜೊತೆಗೆ ಕರೆದುಕೊಂಡ. ಬಾಬರನನ್ನು ಎದುರಿಸಲು ಹೊರಟ.

ಕಾನ್ ವಾಹ್ ಕಣಿವೆಯಲ್ಲಿ

ಸಂಗ್ರಾಮಸಿಂಹನ ಸೈನ್ಯ ಬಿರುಸಾಗಿ ಮುಂದೆ ಮುಂದೆ ಸಾಗುತ್ತಿತ್ತು. ಮಧ್ಯೆ ಅಡ್ಡಬಂದ ಮುಸ್ಲಿಂ ಸುಲ್ತಾನರನ್ನು ಸದೆಬಡೆಯುತ್ತಾ ಸ್ವಲ್ಪ ದಿನಗಳಲ್ಲೇ ಸಂಗ್ರಾಮಸಿಂಹ ಫತೇಬರ್ ಸಿಕ್ರಿಯ ಕೋಟೆಯೊಳಕ್ಕೆ ಬಂದ. ಕಾನ್ ವಾಹದ ಕಣಿವೆಯಲ್ಲಿ ತನ್ನ ಅಪಾರ ಸೈನ್ಯವನ್ನು ಇಟ್ಟು ಅರ್ಧದಷ್ಟು ಸೇನೆಯನ್ನು ಫತೇಪುರದಲ್ಲಿಟ್ಟ.

ಬಾಬರ್ ಕಾನ್ ವಾಹದ ಕಣಿವೆಯಲ್ಲಿ ಮೊದಲು ಸಂಗ್ರಾಮಸಿಂಹನನ್ನು ಎದುರಿಸಿದ. ಸಂಗ್ರಾಮಸಿಂಹನ ಸೈನ್ಯಕ್ಕೂ ಬಾಬರನ ಸೈನ್ಯಕ್ಕೂ ಭಯಂಕರವಾದ ಯುದ್ಧವಾಯಿತು. ಕಣಿವೆ ಯುದ್ಧದಲ್ಲಿ ಪ್ರವೀಣರಾದ ಸಂಗ್ರಾಮನ ಸೈನಿಕರು ಈಟಿ, ಭರ್ಚಿ, ಕತ್ತಿ, ಗುರಾಣಿಗಳಿಂದಲೇ ಮದ್ದು ಗುಂಡುಗಳಿದ್ದ ಬಾಬರನ ಸೈನ್ಯವನ್ನು ಕೊಲ್ಲತೊಡಗಿದರು. ಕಾನ್ ವಾಹದ ಕಣಿವೆಯಲ್ಲಿಯೇ ಬಾಬರನ ಹನ್ನೆರಡು ಸಾವಿರ ತಾರ್ತರ ಸೈನಿಕರು ಹತರಾದರು!

ಇದೇ ಸಮಯದಲ್ಲಿ ಬಾಬರ್ ತನ್ನ ಅಧಿಕಾರಿಗಳ ಸಭೆ ಕೊಡಿಸಿದ.

“ಸಂಗ್ರಾಮಸಿಂಹ ಈ ಕಣಿವೆಯಲ್ಲಿ ನಮ್ಮನ್ನು ಎದುರಿಸುತ್ತಿದ್ದಾನೆ. ನಾವು ನಮ್ಮ ಸೈನಿಕರಿಗೆ ಒಂದೆರಡು ದಿನ ಬಿಡುವು ಕೊಟ್ಟಿದ್ದೇ ತಪ್ಪು. ಎಲ್ಲರೂ ಕುಡಿದು ಸೋಮಾರಿಗಳಾದರು”. – ಬಾಬರನ ಈ ಮಾತಿಗೆ ಅವನ ಮಗ ಹುಮಾಯೂನನು,

“ಇರಬಹುದು. ಆದರೆ ಈಗ ಒಂದೆರಡು ದಿನಗಳಲ್ಲಿ ಅವರನ್ನು ತಯಾರು ಮಾಡುವ ಭಾರ ನನ್ನದು” ಎಂದ.

ಬಾಬರನು ನಗುತ್ತಾ, “ಅದು ಸರಿ. ಆದರೆ ಈಗ ಸಂಗ್ರಾಮಸಿಂಹನೊಡನೆ ಸಂಧಿಮಾಡಿಕೊಂಡು ಹಿಂದಿರುಗುವುದೂ ನಮ್ಮ ಯೋಚನೆಯಾಗಿದೆ. ಈಗಾಗಲೇ ಹನ್ನೆರಡು ಸಾವಿರ ತಾರ್ತರ ಸೈನಿಕರು ಸತ್ತಿದ್ದಾರೆ. ಆದ್ದರಿಂದ ತಡಮಾಡದೆ ಒಪ್ಪಂದ ಮಾಡಿಕೊಳ್ಳೋಣ” ಎಂದ.

ಅದಕ್ಕೆ ಬಾಬರನ ಸೈನ್ಯಾಧಿಕಾರಿ ಒಪ್ಪದೆ, “ನಾನು ಸೈನಿಕರಿಗೆ ಈಗಲೇ ಆಜ್ಞೆ ಮಾಡುತ್ತೇನೆ. ಸ್ವಲ್ಪ ದಿನ ನನಗೆ ಬಿಡುವು ಕೊಡಿ ಹುಜೂರ್! ಫತೇಪುರ್ ಸಿಕ್ರಿಯನ್ನು ನಾಶಮಾಡಿ ಬಿಡುತ್ತೇನೆ” ಎಂದ.

ಬಾಬರ್ ಒಪ್ಪಿದ.

ಕೆಲವು ವಾರಗಳು ಯುದ್ಧ ನಿಂತಿತು.

ಅಪಾಯವಾದ ನಿಧಾನ

ರಾಣಾ ಸಂಗ್ರಾಮಸಿಂಹನೂ ತನ್ನ ಸೈನ್ಯಕ್ಕೆ ವಿರಾಮ ಕೊಟ್ಟ. ಎಚ್ಚರಿಕೆಯಿಂದಿರಬೇಕೆಂದು ಹೇಳಿಯೂ ಇದ್ದ. ಸಂಗ್ರಾಮಸಿಂಹ ಬಾಬರನಿಗೆ ವಿಶ್ರಾಂತಿಗೆ ಎಡೆ ಕೊಡದೆ ಕಾನ್ ವಾಹದ ಕಣಿವೆಯಲ್ಲಿಯೇ ಎದುರಿಸ ಸೋಲಿಸಿದ್ದರೆ ಚೆನ್ನಾಗಿತ್ತು. ಆದರೆ ಸಂಗ್ರಾಂಸಿಂಹ ಬಾಬರನಿಂದ ವರ್ತಮಾನವೇನಾದರೂ ಬರಬಹುದೆಂದು ಸುಮ್ಮನಿದ್ದ.

ಅದರಂತೆಯೇ ಬಾಬರನು ಸಂಧಿಗಾಗಿ ರೈಸೇನಿನ ರಾಯನೆಂಬ ದ್ರೋಹಿಯನ್ನು ಸಂಗ್ರಾಮಸಿಂಹನಲ್ಲಿಗೆ ಕಳಿಸಿದ.

ರಾಯನ ಸಂಗ್ರಾಮಸಿಂಹನನ್ನು ಕಂಡು ಸಂಧಿಯ ಅಯೋಗ್ಯವಾದ ಮಾತುಗಳನ್ನಾಡಿದ. ಸಂಗ್ರಾಮಸಿಂಹ ಅವನಿಗೆ ಛೀಮಾರಿ ಮಾಡಿ ಕಳಿಸಿದ.

ನಾವು ಯುದ್ಧ ಮಾಡುವುದಿಲ್ಲ

೧೫೨೭ ರ ಮಾರ್ಚ ೨೬.

ಯುದ್ಧ ಅನಿವಾರ್ಯ ಎಂದು ಎರಡು ಕಡೆಯವರೆಗೂ ಸ್ಪಷ್ಟವಾಗಿತ್ತು.

ಬಾಬರನ ಸೈನಿಕರಿಗೆ ಹೋರಾಟದಲ್ಲಿ ಉತ್ಸಾಹವೇ ಇರಲಿಲ್ಲ. ಸಂಗ್ರಾಮಸಿಂಹನ ಹೆಸರು ಕೇಳಿದರೇ ನಡುಕ ಅವರಿಗೆ. ತಾವು ಯುದ್ಧ ಮಾಡುವುದಿಲ್ಲ, ಕಾಬೂಲಿಗೆ ಹಿಂದಿರುಗುವುದೇ ಉತ್ತಮ ಎನ್ನಲು ಪ್ರಾರಂಭಿಸಿದರು ಅವರು.

ಬಾಬರನಿಗೆ ವಿಷಯ ತಿಳಿಯಿತು. ಅವರನ್ನೆಲ್ಲ ಸಭೆ ಸೇರಿಸಿದ. ಮುಸ್ಲಿಮರ ಮೇಲಿದ್ದ ತೆರಿಗೆಯನ್ನು ಕಿತ್ತು ಹಾಕಿದ. “ಇನ್ನು ಮೇಲೆ ನಾನು ಮದೈವನ್ನು ಮುಟ್ಟುವುದಿಲ್ಲ” ಎಂದು ಅವರೆಲ್ಲರ ಮುಂದೆ ಪ್ರತಿಜ್ಞೆ ಮಾಡಿದ. ತಾವು ನಿಂತು ಯುದ್ಧ ಮಾಡುತ್ತೇವೆ, ಓಡಿ ಹೋಗುವುದಿಲ್ಲ ಎಂದು ಅವರ ಧರ್ಮಗ್ರಂಥ ಖುರಾನ್ ಮುಟ್ಟಿ ಪ್ರಮಾಣ ಮಾಡುವಂತೆ ಅವರಿಗೆ ಆಜ್ಞಾಪಿಸಿದ.

ಬಾಬರ್ ತನ್ನ ಸೈನಿಕರು ಯುದ್ಧ ಮಾಡುವಂತೆ ಮಾಡಲು ಇಷ್ಟೆಲ್ಲ ಕಷ್ಟಪಡಬೇಕಾಯಿತು.

ಈ ವಿಷಯ ಅರಿತ ಸಂಗ್ರಾಮಸಿಂಹ ಫತೇಪುರ್ ಸಿಕ್ರಿಯಲ್ಲಿ ತನ್ನ ದೇಶಪ್ರೇಮಿ ಸ್ನೇಹಿತರೊಡನೆ ಸಿಂಹದಂತೆ ಸಜ್ಜಾಗಿ ನಿಂತ.

ಹೊರಗೆ ಕೋಟೆಯ ಗೋಡೆಯ ಹತ್ತಿರ ಬಾಬರನ ಸೈನ್ಯ ನಿಂತಿತು.

ಕಟ್ಟಕಡೆಯ ಹೋರಾಟ

ಮರುದಿನ, ೧೫೨೭ ರ ಮಾರ್ಚ್ ೨೭.

ಸಂಗ್ರಾಮಸಿಂಹನ ಸೈನ್ಯದ ಸಮರದ ಘೋಷ ಮುಗಿಲು ಮುಟ್ಟಿತು. ಸಂಗ್ರಾಮಸಿಂಹನ ಸೈನ್ಯದಲ್ಲಿ ರಜಪೂತ ವೀರರಲ್ಲದೆ ಅನೇಕ ಮುಸ್ಲಿಂ ಸುಲ್ತಾನರೂ ಇದ್ದರು. ದೊಂಗರಪುರದ ರಾವಲ. ಉದಯಸಿಂಹ, ಮೇದಿನಿರಾಯ, ಹಸನ್ ಖಾನ್ ಮೆವಾಟಿ, ಇದರ್ ನ ಭಾರಮಲ್ಲ, ಧರ್ಮದೇವ, ಸಿಕಂದರ್ ಲೂದಿ ಮೊದಲಾದವರೆಲ್ಲ ಒಗ್ಗೂಡಿ ಸಂಗ್ರಾಮಸಿಂಹನ ಭುಜಕ್ಕೆ ಭುಜಕೊಟ್ಟು ಯುದ್ಧಕ್ಕೆ ಹೊರಟರು.

ಇವರೇ ಅಲ್ಲದೆ ಸಂಗ್ರಾಮನ ಸೈನ್ಯದಲ್ಲಿ ಬಾಗೂರಿನ ರಾವುಲದೇವ, ಕರ್ಣಸಿಂಹ, ಮಣಿಕ್ ಚಂದ್, ಚಂದ್ರಭಾನು ಮೊದಲಾದ ವೀರರಾಜರೂ ಇದ್ದರು.

ಹೊರಗೆ ಇದ್ದ ಬಾಬರನು ಫತೇಪುರ್ ಸಿಕ್ರಿಗೆ ನೀರಿನ ಆಸರೆಯಾಗಿದ್ದ ಅನುಪ್ ಸರೋವರಕ್ಕೆ ವಿಷ ಹಾಕಿಸಿದ. ರಾಜಪುತ್ರರು ಕಟ್ಟಿಸಿದ ಆ ಸರೋವರವನ್ನು ಬಾಬರ್ ನಾಶ ಮಾಡಿದ. 

ಸಂಗ್ರಾಮಸಿಂಹ ಯುದ್ಧರಂಗದಲ್ಲಿ ಬಂಡೆಯಂತೆ ನಿಂತು ಯುದ್ಧ ಮಾಡಿದ

ಮದ್ದುಗುಂಡುಗಳ ಎದುರಿಗೆ ಬಿಲ್ಲುಬಾಣಗಳೇ?

ಇಷ್ಟೆಲ್ಲ ಆದಂತೆ ಬಾಬರನ ತೋಪುಗಳು ಹಾರಿದವು. ಸಂಗ್ರಾಮಸಿಂಹ ಕೋಟೆಯೊಳಿಗಿನಿಂದ ಹೊರಬಂದ. ಬಾಬರನ ಅಪಾರ ಸೈನ್ಯಕ್ಕೆ ಎದುರಾಗಿ ಸಿಂಹದಂತೆ ಹೋರಾಡಿದ. ಬಾಬರನ ತೋಪುಗಳು ಹಾರಿಸಿದ ಗುಂಡುಗಳು ಫತೇಪುರ್ ಸಿಕ್ರಿಯ ಕೋಟೆಯ ಗೋಡೆಗಳಿಗೆ ತಾಕಿದವು.

ಈ ಕದನದಲ್ಲಿಯೂ ಮೊಗಲರ ಸೈನ್ಯದ ಮದ್ದು ಗುಂಡುಗಳೇ ವಿಜಯವ್ನು ನಿರ್ಧರಿಸಿದವು.

ಸಂಗ್ರಾಮಸಿಂಹ ಯುದ್ಧರಂಗದಲ್ಲಿ ಬಂಡೆಯಂತೆ ನಿಂತು ಶತ್ರುಗಳ ಆಕ್ರಮಣವನ್ನು ತಡೆಯುತ್ತಿದ್ದ. ಬಾಬರನ ಸೈನಿಕರು ಗುಂಡುಗಳನ್ನು ಹಾರಿಸಿದರು. ರಾಜಪುತ್ರ ವೀರರ ಕತ್ತಿ, ಬಾಣ, ಭರ್ಚಿಗಳಿಂದ ಹೋರಾಡಿದರು. ಸಂಗ್ರಾಮಸಿಂಹನ ಸೈನ್ಯಕ್ಕೆ ಮುಖ್ಯ ಆಸರೆಯೇ ಆನೆಗಳು. ಆದರೆ ಫಿರಂಗಿಗಳ ಶಬ್ದಕ್ಕೆ ಬೆದರಿ ಆನೆಗಳು ಹುಚ್ಚಾಗಿ ಓಡಿದವು. ಅನೇಕ ಸೈನಿಕರು ಆನೆಗಲ ಕಾಲುಗಳಿಗೇ ಅಹುತಿಯಾದರು.

ಆಗಲೂ ಸಂಗ್ರಾಮಸಿಂಹನ ದೇಶಭಕ್ತ ಸೈನಿಕರು ಹೆದರಲಿಲ್ಲ. “ಹರಹರ ಮಹಾದೇವ”, “ಜೈ ಮಹಾಕಾಳಿ” ಎನ್ನುತ್ತ ಹೋರಾಡಿದರು; ಪ್ರಾಣ ಕೊಟ್ಟರು. ಮಾತೃ ಭೂಮಿಯನ್ನು ಶತ್ರುಗಳಿಂದ ರಕ್ಷಿಸಲು ರಣರಂಗದಲ್ಲಿ ಬಿದ್ದರು; ರಕ್ತ ಹರಿಸಿದರು. ಮಣಿಕ್ ಚಂದ್ ಚೌಹಾನ ಕೆಳಕ್ಕೆ ಬಿದ್ದ. ಕರ್ಣಸಿಂಹ ಹತನಾದ. ಹುಸೇನ್ ಖಾನ್ ಮೆವಾಟಿ ಹಿಂದೂಸ್ಥಾನದ ವೀರಪುತ್ರನೆಂದು ಪ್ರಸಿದ್ಧನಾಗಿ ತನ್ನ ಪ್ರಾಣವನ್ನು ತೆತ್ತ.

ಸಂಗ್ರಾಮಸಿಂಹ ಯುದ್ಧಭೂಮಿ ಬಿಟ್ಟ

ವೀರವರ ಸಂಗ್ರಾಮಸಿಂಹನ ಮೈಯೆಲ್ಲ ಗಾಯಗಳೇ! ಮೊದಲೇ ಅವನ ದೇಹದಲ್ಲಿ ಒಟ್ಟು ಎಂಬತ್ತನಾಲ್ಕು ಗಾಯದ ಗುರುತುಗಳಿದ್ದವು. ಈಗಂತೂ ಅಸಂಖ್ಯಾತ ಗಾಯಗಳಾದವು. ಅತ್ಯಂತ ದುಃಖದಿಂದ ಸಂಗ್ರಾಮಸಿಂಹ ದೇವಿ ಕಾಳಿಯನ್ನು ನೆನೆದ. ರೈಸೇನಿನ ರಾಯ ಸಂಗ್ರಾಮಸಿಂಹನ ಸೈನ್ಯದ ಗುಟ್ಟನ್ನೆಲ್ಲಾ ಬಾಬರನಿಗೆ ಹಣಕ್ಕಾಗಿ ಮಾರಿಕೊಂಡಿದ್ದ. “ಮಾತೃಭೂಮಿಗಾಗಿ ಎಷ್ಟೆಲ್ಲ ಮಾಡಿದರೂ ದೇಶದ್ರೋಹಿಗಳಿಂದ ಆಕೆಗೆ ಸೋಲೇ!” ಎಂದು ಸಂಗ್ರಾಮಸಿಂಹ ಮರುಗಿದ. ಇದನ್ನು ನೆನೆದೇ ಸಂಗ್ರಾಮಸಿಂಹ ನೊಂದ. ಅವನ ಮೈಯಿಂದ ತುಂಬಾ ರಕ್ತ ಹರಿಯಿತು.

ಮೇದಿನಿರಾಯ ಸಂಗ್ರಾಮಸಿಂಹ ಕೆಳಕ್ಕೆ ಕುಸಿಯುತ್ತಿದುದನ್ನು ನೋಡಿ ಓಡಿಬಂದ. ಅವನ ಜೊತೆಗೆ ಅಸಂಖ್ಯಾತ ರಜಪೂತ ವೀರರು ಬಂದರು. ಮೇದಿನಿರಾಯ ಸಂಗ್ರಾಮಸಿಂಹನಿಗೆ ಆಸರೆ ಕೊಟ್ಟು, “ರಾಣಾಜಿ, ಈಗ ಸದ್ಯಕ್ಕೆ ನಾವು ಹಿಂದಿರುಗೋಣ. ನಿಮ್ಮ ಗಾಯಗಳೆಲ್ಲ ಹುಣವಾದ ಮೇಲೆ ಮತ್ತೆ ಆಗ್ರಾ ನಗರವನ್ನು ಮುತ್ತಿ ಜಯಶೀಲರಾಗೋಣ, ಬನ್ನಿ” ಎಂದ.

ಸಂಗ್ರಾಮಸಿಂಹ ಒಪ್ಪಲಿಲ್ಲ. ಕೆರಳಿದ ಸಿಂಹದಂತಾದ. “ಏನು? ನನ್ನ ಪ್ರಾಣ ರಕ್ಷಿಸಿಕೊಳ್ಳಲು ಹೇಡಿಯಂತೆ ಓಡಿಹೋಗಲೆ? ಎಂದಿಗೂ ಸಾಧ್ಯವಿಲ್ಲ!” ಎಂದ.

ಆಗ ರತ್ನಸಿಂಹ ಮುಂದೆ ಬಂದು, “ಅಪ್ಪಾಜಿ! ನೀವು ಹೇಳಿದ ಮಾತೇ ಸರಿ. ನಾವು ಹಿಂದಿರುಗುವುದು ಸರಿಯಲ್ಲ. ಮಾತೃಭೂಮಿಗಾಗಿ ನೀವು ಪ್ರಾಣಕೊಡುವುದು ಸರಿಯೇ. ನಾನೂ ನಿಮ್ಮ ಹಾದಿಯಲ್ಲಿಯೇ ನಡೆಯುತ್ತೇನೆ” ಎಂದ.

ಆದರೆ ಸಂಗ್ರಾಮಸಿಂಹನಿಗೆ ವಿಪರೀತ ಗಾಯಗಳಾಗಿದ್ದವು. ರಕ್ತ ಸುರಿಯುತ್ತಿತ್ತು. ಅವನಿಗೆ ಎಚ್ಚರ ತಪ್ಪಿತು. ಆಗ ಮೇದಿನಿರಾಯನು ರತ್ನಸಿಂಹನನ್ನು ಸಮಾಧಾನ ಮಾಡಿ ಒಪ್ಪಿಸಿ ಸಂಗ್ರಾಮಸಿಂಹನನ್ನು ಬೇಗನೆ ರಾಣಾತಂ ಬೋರ್ ದುರ್ಗಕ್ಕೆ ಕಳಿಸಿಕೊಟ್ಟ. ಬಾಬರನ ಸೈನಿಕರು ಜಯದ ಕಹಳೆ ಮೊಳಗಿಸಿದರು. ಅದಕ್ಕೆ ಲಕ್ಷ್ಯಕೊಡದೆ ವೀರವರನಾದ ಮೇದಿನಿರಾಯನೂ ದುರ್ಗ ಸೇರಿದ. ತನ್ನ ನೆಚ್ಚಿನ ನಾಯಕನ ಶುಶ್ರೂಷೆಗಾಗಿ ನಿಂತ.

ಕಾನ್ವಾಹದ ಕದನ ಮುಗಿಯಿತು. ಮೊಗಲ್ ಸೈನ್ಯ ಗೆದ್ದಿತು. ಅವರ ತೋಪು, ಮದ್ದು ಗುಂಡುಗಳ ಮುಂದೆ ಸ್ವಾತಂತ್ಯ್ರವೀರರ ಕತ್ತಿ, ಗುರಾಣಿ, ಬಿಲ್ಲುಬಾಣಗಳು ನಿಷ್ಪ್ರಯೋಜಕವಾದವು. ನರಕೇಸರಿ ಸಂಗ್ರಾಮಸಿಂಹನ ದೇಹ ಬಳಲಿತ್ತು.

ವೀರನ ಕಥೆ ಮುಗಿಯಿತು

ಅತ್ತ ಬಾಬರ್ ತನ್ನ ಮಗ ಹುಮಾಯೂನನ ಜೊತೆಯಲ್ಲಿ ದೊಡ್ಡ ಸೈನ್ಯವನ್ನು ಕಳಿಸಿ ಚಿತ್ತೂರನ್ನು ಮುತ್ತುವ ಸನ್ನಾಹ ಮಾಡುತ್ತಿದ್ದ.

ಇತ್ತ ರಾಣಾತಂಬೋರಿನ ದುರ್ಗದಲ್ಲಿ ಹಿಂದೂಸ್ಥಾನದ ವೀರಸಿಂಹನಾದ ಸಂಗ್ರಾಮಸಿಂಹನಿಗೆ ಚಿಕಿತ್ಸೆಯಾಗುತ್ತಿತ್ತು. ಪ್ರಸಿದ್ಧ ವೈದ್ಯರು ಅವನ ಗಾಯಗಳಿಗೆ ಔಷಧಿ ಮಾಡಿದ್ದರು.

ಅದರೇನು?

ಒಂದು ದಿನ ಯಾವನೋ ದೇಶದ್ರೋಹಿ ರಾಣಾ ಸಂಗ್ರಾಮಸಿಂಹ ಕುಡಿಯಲ್ಲಿದ್ದ ಔಷಧಿಗೆ ವಿಷ ಬೆರೆಸಿ ಹೋದ!

ರಾಣಾ ಅದನ್ನು ಕುಡಿದ!

ವೀರ ರಾಣಾ ಸಂಗ್ರಾಮಸಿಂಹ ಮೃತ್ಯುವನಾದ.

ಮೇದಿನಿರಾಯ ಮೊದಲಾದವರು ದೇಶದ್ರೋಹಿಗಾಗಿ ಹುಡುಕಿದರು.

ಆದರೆ ಅವನಾರು ಎಂಬುದೇ ತಿಳಿಯಲಿಲ್ಲ.

೧೫೨೮ ರ ಜನವರಿ ತಿಂಗಳಿನಲ್ಲಿ ರಾಣಾ ಸಂಗ್ರಾಮಸಿಂಹ ಈ ಲೋಕವನ್ನು ಬಿಟ್ಟ.

ಅದೇ ಸಂಜೆ ರಾಣಾತಂಬೋರಿನ ಸಮೀಪದ ಬಾಸುವ ಗ್ರಾಮದ ಬಳಿ ರಾಣಾ ಸಂಗ್ರಾಮಸಿಂಹನ ಚಿತೆ ಸಿದ್ಧವಾಯಿತು. ರೂಪವತಿ ಸರ್ವಾಲಂಕಾರ ಭೂಷಿತೆಯಾಗಿ ನಿಂತಳು. ರತ್ನ ಸಿಂಹ ದುಃಖದಿಂದ ಚಿತೆಗೆ ಅಗ್ನಿ ಇಟ್ಟ.

ಧೋ…. ಎಂದು ಚಿತೆ ಉರಿಯತೊಡಗಿತು. ರೂಪವತಿ ಆ ಚೆತೆಯೊಳಕ್ಕೆ ಹಾರಿಕೊಂಡು ಸಹಗಮನ ಮಾಡಿದಳು.

ಸ್ವಾತಂತ್ಯ್ರ ವೀರನಾದ ಸಂಗ್ರಾಮಸಿಂಹನ ಚರಿತ್ರೆ ಅಮರವಾಯಿತು.