ದಕ್ಷಿಣೇಶ್ವರದ ಮಹಾಗುರು ಶ್ರೀರಾಮಕೃಷ್ಣ ಪರಮಹಂಸರ ಹೆಸರನ್ನು ಯಾರು ಕೇಳಿಲ್ಲ! ಅವರ ಅದ್ಭುತವೆನಿಸುವ ತಪಸ್ಸಿನ ಕತೆ ಯಾರನ್ನು ರೋಮಾಂಚನಗೊಳಿಸಿಲ್ಲ? ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಎಷ್ಟೆಲ್ಲ ವಿಧಗಳಿಂದ ಜನರು ದೇವರ ದಾರಿಯಲ್ಲಿ ನಡೆದರೋ ಆ ಎಲ್ಲ ಪಥಗಳಲ್ಲೂ ನಡೆದು ದೇವರನ್ನು ಕಂಡವರು ಅವರು. ಎಲ್ಲ ಪಥಗಳಿಂದಲೂ ನಡೆದು ದೇವರನ್ನು ಪಡೆಯಬಹುದು ಎಂದವರು, ಧರ್ಮ, ದೇವರುಗಳ ಹೆಸರಲ್ಲಿ ಜಗಳ ಸಲ್ಲದು ಎಂದು ಬೋದಿಸಿದವರು. ಅವರ ಬೋಧನೆ ಗ್ರಂಥಗಳನ್ನು ಓದಿ ಬಂದುದಲ್ಲ. ಅನುಭವದಿಂದ ಬಂದುದು. ಈ ಅನುಭವವನ್ನು ಪಡೆಯಲು ಮಾಡಿದ ಯತ್ನಕ್ಕೆ ಸಾಧನೆ ಅಥವಾ ತಪಸ್ಸು ಎನ್ನುತ್ತಾರೆ. ಪರಮಹಂಸರ ಅಪೂರ್ವ ತಪಸ್ಸಿಗೆ ಅನುಕೂಲವಾದ ತಾಣವನ್ನು, ದೇವಮಂದಿರವನ್ನು ಕಟ್ಟಿಸಿದವಳು ರಾಸಮಣಿ. ಅವಳು ದೇವಾಲಯವನ್ನು ಮಾತ್ರ ಕಟ್ಟಿಸಿದುದಲ್ಲ. ಸಮಾಜಕ್ಕೆ ಒಳಿತಾಗುವ ಕಾರ್ಯಗಳಿಗೆ ಸದಾ ಉದಾರ ರೀತಿಯಿಂದ ಸಹಾಯ ಮಾಡಿದವರು. ಬಡಬಗ್ಗರ, ದೀನರ ದುಃಖದಿಂದ ತಾನೂ ದುಃಖಿತಳಾಗಿ ಅವರ ಹಿತಕ್ಕಾಗಿ ತನ್ನ ಸಂಪತ್ತನ್ನು ಧಾರೆ ಎರೆದವಳು.

ಜನನ, ಬಾಲ್ಯ

ರಾಣಿ ಜನಿಸಿದ್ದು ೧೭೯೩ ರಲ್ಲಿ. ಕಲ್ಕತ್ತದ ಸಮೀಪದ “ಕೋನಾ” ಎಂಬ ಹಳ್ಳಿಯಲ್ಲಿ ತಂದೆಯ ಹೆಸರು ಹರೇಕೃಷ್ಣದಾಸ, ತಾಯಿ ರಾಮಪ್ರಿಯಾದಾಸೀ. ಅವಳು ಹುಟ್ಟಿದ್ದು ಬಡಕುಟುಂಬದಲ್ಲಿ. ತಂದೆ ಹರೇಕೃಷ್ಣ ಮನೆ ಕಟ್ಟುವ ಕೆಲಸ ಮತ್ತು ಕೃಷಿ ಕಾರ್ಯದಲ್ಲಿ ನಿಪುಣ. ಆ ಕೆಲಸದಿಂದ ಬಂದ ವರಮಾನದಿಂದಲೇ ಅವನ ಕುಟುಂಬದ ಖರ್ಚು ವೆಚ್ಚಗಳು ನಡೆಯುತ್ತಿದ್ದವು. ಅವರು ಬಡವರಾಗಿದ್ದರೂ ಮಮತೆಗೆ ಬಡತನವಿರಲಿಲ್ಲ. ತನ್ನ ಮುದ್ದು ಮಗಳಿಗೆ ತಾಯಿ “ರಾಣಿ: ಎಂದೇ ಹೆಸರನ್ನಿತ್ತಳು. ದೈವಯೋಗದಿಂದೆಂಬಂತೆ ರಾಣಿ ಆ ಹೆಸರನ್ನು ಮುಂದೆ ಸಾರ್ಥಕ ಪಡಿಸಿದಳು. ಆ ಬಳಿಕ ಅವಳ ಹೆಸರು ರಾಸಮಣಿ ಎಂದಾಯಿತು. ತಂದೆ ಹರೇಕೃಷ್ಣ ಓದು ಬರಹ ಕಲಿತವನು. ತನ್ನ ಮಗಳಿಗೂ ಕಲಿಸಿದ. ರಾಮಾಯಣ ಮಹಾಭಾರತ ಚೈತನ್ಯಚರಿತೆ ಮೊದಲಾದ ಧಾರ್ಮಿಕ ಗ್ರಂಥಗಳನ್ನು ಆತ ಪ್ರತಿ ನಿತ್ಯವೂ ಮನೆಯಲ್ಲಿ ಓದಿ ಹೇಳುತ್ತಿದ್ದ. ಅದನ್ನು ಕೇಳಲು ಊರಿನ ಜನರೂ ಸೇರುತ್ತಿದ್ದರು. ರಾಣಿಯ ಏಳನೇ ವಯಸ್ಸಿನಲ್ಲಿ ದುಃಖದ ಮೊದಲ ಆಘಾತವನ್ನು ಅವಳು ಸಹಿಸಬೇಕಾಯಿತು. ತಾಯಿ ರಾಮಪ್ರಿಯಾದಾಸೀ ಏಳೆಂಟು ದಿನಗಳ ಜ್ವರದಿಂದ ನರಳಿ ತೀರಿಕೊಂಡಳು. ತಂದೆ ಹೆಚ್ಚಿನ ವಾತ್ಸಲ್ಯದಿಂದಲೇ ಮಗಳನ್ನು ನೋಡಿಕೊಂಡ.

ವಿವಾಹ

ಈಗ ರಾಣಿಗೆ ವಯಸ್ಸು ಹನ್ನೊಂದು. ಆಕೆ ನೋಡಲು ಲಕ್ಷಣವಾಗಿದ್ದಳು. ಅವಳಿಗೆ ಮೊಣಕಾಲಿನವರೆಗೆ ಇಳಿ ಬಿದ್ದ ನೀಳ ತಲೆಗದಲು. ಬಿಳಿಯ ಮೈ ಬಣ್ಣ. ಒಟ್ಟಿನಲ್ಲಿ ಆಕೆ ಸುಂದರಿಯಾಗಿದ್ದಳು. ಒಂದು ದಿನ ಮನೆಯ ಸಮೀಪದಲ್ಲೇ ಹರಿಯುವ ಗಂಗಾನದಿಯ ಘಾಟಿನ ಮೆಟ್ಟಿಲುಗಳ ಮೇಲೆ ಆಕೆ ನಿಂತುಕೊಂಡಿದ್ದಳು. ಒಂದು ನೌಕೆ ಸಮೀಪದಲ್ಲೇ ಹೋಗುತ್ತಿತ್ತು. ಕಲ್ಕತ್ತದ ಜಾನ್ ಬಜಾರಿನ ಪ್ರಸಿದ್ಧ ಶ್ರೀಮಂತ ಜಮೀನುದಾರ ಪ್ರೀತಾರಾಮಾದಾಸನ ಮಗ ರಾಜಚಂದ್ರದಾಸ ದೋಣಿಯಲ್ಲಿ ಕುಳಿತುಕೊಂಡು ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಾ ಗಾಳಿಸೇವನೆಗಾಗಿ ಹೊರಟಿದ್ದ. ಎರಡು ಬಾರಿ ಪತ್ನಿಯನ್ನು ಕಳೆದುಕೊಂಡಿದ್ದ. ಈಗ ಯೋಗ್ಯ ವಧುವನ್ನು ತಂದುಕೊಳ್ಳಲು ಅನ್ವೇಷಣೆಯೂ ನಡೆದಿತ್ತು. ಅವನ ಸ್ನೇಹಿತರು ಅಕಸ್ಮಾತ್ತಾಗಿ ಘಾಟಿನ ಮೆಟ್ಟಿಲುಗಳ ಮೇಲೆ ನಿಂತುಕೊಂಡಿದ್ದ ರಾಸಮಣಿಯನ್ನು ಅವನಿಗೆ ತೋರಿಸಿದರು. ರಾಜಚಂದ್ರ ಅವಳನ್ನು ಕಂಡು ಅವಳಲ್ಲಿ ಅನುರಾಗವನ್ನು ಹೊಂದಿದ. ಒಂದು ಶುಭ ದಿನ ಮದುವೆಯೂ ನಡೆದು ಹೋಯಿತು.

ಗೃಹಲಕ್ಷ್ಮಿ

ಬಡ ಗುಡಿಸಲಿನಿಂದ ರಾಸಮಣಿ ಶ್ರೀಮಂತ ರಾಜಚಂದ್ರನ ಭವನವನ್ನು ಸೇರಿದಳು. ಥಟ್ಟನೆ ಆದ ಈ ಬದಲಾವಣೆ ಅವಳಲ್ಲಿ ಸ್ವಲ್ಪವೂ ಜಂಬವನ್ನುಂಟು ಮಾಡಲಿಲ್ಲ. ತಾನು ಹುಟ್ಟಿ ಬಂದ ಮನೆ ಆಸುಪಾಸಿನ ಜನರನ್ನು ಆಕೆ ಎಂದೂ ಮರೆತವಳಲ್ಲ. ಆಳುಕಾಳುಗಳಿದ್ದರೂ ಅತ್ತೆ ಮಾವಂದಿರು ಬೇಡವೆಂದರೂ ಆಕೆ ಗೃಹಕೃತ್ಯದ ಎಲ್ಲ ಕಾರ್ಯಗಳನ್ನೂ ಉತ್ಸಾಹದಿಂದ ಮಾಡುತ್ತಿದ್ದಳು. ಅವಳ ವಿನಯ ವಿಧೇಯತೆ ಸೇವಾ ಪರಾಯಣತೆ ದೈವಭಕ್ತಿಯೇ ಮೊದಲಾದ ಸದ್ಗುಣಗಳು ಹಿರಿಕಿರಿಯರೆಲ್ಲರ ಮನಸ್ಸನ್ನೂ ಆಕರ್ಷಿಸಿದವು. ಅವಳು ಪತಿಯ ಮನೆಯನ್ನು ಸೇರಿದ ಮೇಲೆ ಆ ಕುಟುಂಬದ ಸಂಪತ್ತು ವೃದ್ಧಿಯಾಯಿತಂತೆ. ಈ ಎಲ್ಲ ಕಾರಣಗಳಿಂದಾಗಿ ರಾಸಮಣಿ ಬಂಧು ಬಾಂಧವರ- ಆಳುಕಾಳುಗಳೆಲ್ಲರ ಪ್ರೀತ್ಯಾದರಗಳನ್ನು ಗಳಿಸಿದಳು. ೧೮೧೭ ರಲ್ಲಿ ರಾಣಿಯ ಮಾವ ಪ್ರೀತಾರಾಮ್ ತೀರಿಕೊಂಡ. ಆರು ಲಕ್ಷಕ್ಕೂ ಹೆಚ್ಚಿನ ನಗದು ಹಣ, ವಿಫುಲವಾದ ಆಸ್ತಿ ಪಾಸ್ತಿ, ಕಲ್ಕತ್ತ ಮಹಾನಗರದ ಬೇರೆ ಬೇರೆ ಕಡೆಗಳಲ್ಲಿದ್ದ ಹಲವಾರು ಕಟ್ಟಡಗಳು- ಇವೆಲ್ಲವುಗಳ ಒಡೆತನವೀಗ ರಾಣಿಯ ಪತಿ ರಾಜಚಂದ್ರನದಾಯಿತು. ರಾಜಚಂದ್ರ ಬರಿಯ ಶ್ರೀಮಂತನಲ್ಲ; ಸತ್ಯವಂತ, ಸುಂಸ್ಕೃತ, ದಾನಿ ಮತ್ತು ಉದಾರಿ. ಕಲ್ಕತ್ತದಲ್ಲಿ ಆ ಕಾಲದ ವಿದ್ಯಾವಂತ ಜನರಲ್ಲಿ ಗೌರವವನ್ನು ಗಳಿಸಿದ ಕೀರ್ತಿಶಾಲಿ. ಬುದ್ಧಿಮತಿಯೂ, ಪರೋಪಕಾರದಲ್ಲಿ ಸದಾ ಆಸಕ್ತಳೂ ಆದ ರಾಸಮಣಿಯ ಸಹಕಾರ ಅವನ ಬದುಕಿಗೆ ವಿಶೇಷ ಕಳೆ ನೀಡಿತು. ರಾಣಿಯ ಉತ್ಸಾಹ ಪೂರಿತ ಸಹಕಾರದಿಂದ ರಾಜಚಂದ್ರ ಹೆಚ್ಚು ಹೆಚ್ಚು ಜನಹಿತ ಕಾರ್ಯಗಳನ್ನು ಕೈಗೊಂಡ. ದಕ್ಷತೆ ವ್ಯವಹಾರ ಕುಶಲತೆಗಳಿಂದ ಆರ್ಥಿಕವಾಗಿಯೂ ಬಹಳ ಉನ್ನತಿಯನ್ನು ಹೊಂದಿದ್ದ. ಈ ದಂಪತಿಗಳು ಕೈಗೊಂಡ ಜನಹಿತ ಕಾರ್ಯಗಳು ಹಲವು.

೧೮೨೩ರಲ್ಲಿ ವಂಗದೇಶದಲ್ಲಿ ಭೀಕರ ಪ್ರವಾಹದಿಂದ ಅಸಂಖ್ಯ ಜನರು ಮನೆ ಮಾರುಗಳನ್ನು ಕಳೆದುಕೊಂಡು ನಿರ್ಗತಿಕರಾದರು. ಸಂಕಟಗ್ರಸ್ತ ಜನರ ಆಹಾರ ಮತ್ತು ಪುನರ್ವಸತಿ ವ್ಯವಸ್ಥೆಗಾಗಿ ತನ್ನ ಬೊಕ್ಕಸದಿಂದ ರಾಣಿ ಧಾರಾಳವಾಗಿ ಹಣವನ್ನು ಖರ್ಚು ಮಾಡಿದಳು. ಆ ವರುಷ ಅವಳ ತಂದೆ ತೀರಿಕೊಂಡಾಗ ತನ್ನ ಹುಟ್ಟೂರಿಗೆ ಆತನ ಉತ್ತರ ಕ್ರಿಯೆಗಾಗಿ ಹೋಗಿದ್ದಳು. ಅಲ್ಲಿ ನದೀ ತೀರದ ಸ್ನಾನಘಟ್ಟಗಳ ದುಃಖಸ್ಥಿತಿಯನ್ನು ಕಂಡು ಪತಿಯಿಂದ ಅನುಮತಿ ಪಡೆದು ಅದನ್ನು ಸರಿಪಡಿಸಲು ತನ್ನ ವ್ಯವಸ್ಥೆಯನ್ನು ಮಾಡಿದಳು. ಜನ ಸಂಚಾರಕ್ಕೆ ಅನುಕೂಲವಾಗುವಂತೆ ಅಲ್ಲಿ ರಸ್ತೆಗಳನ್ನು ಕಟ್ಟಿಸಿದಳು. ತನ್ನ ತಾಯಿಯ ನೆನಪಿಗಾಗಿ “ಅಹಿರಿತಲ” ಎಂಬಲ್ಲಿ ಸ್ನಾನಘಟ್ಟವನ್ನು ನಿರ್ಮಾಣ ಮಾಡಿದಳು. ಅಂದಿನ ಸರ್ಕಾರಿ ಪುಸ್ತಕಾಲಯದ ಅಭಿವೃದ್ಧಿಗಾಗಿ ಹತ್ತು ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ಕೊಟ್ಟಳು. ತನ್ನ ಸ್ವಂತ ಭೂಮಿಯನ್ನೇ ಸರ್ಕಾರಕ್ಕೆ ನೀಡಿ ಬೇಲಿಯಾಘಾಟ್ ಎಂಬಲ್ಲಿ ಕಾಲುವೆಯನ್ನು ತೋಡಿಸಿದಳು. ಕಾಲುವೆಯನ್ನು ದಾಟಲು ಜನರಿಂದ ಸುಂಕವನ್ನು ವಸೂಲು ಮಾಡಬಾರದೆಂದು ಸರ್ಕಾರಕ್ಕೆ ಶರತ್ತನ್ನೂ ಹಾಕಿದ್ದಳು. ದಾನ ಧರ್ಮ ದೈವೀಕಾರ್ಯವನ್ನು ಮಾಡುವ ಅವಕಾಶ ದೊರೆತಾಗ ಆಕೆ ಅದನ್ನು ಅತ್ಯಂತ ಉತ್ಸಾಹದಿಂದ ಮಾಡುತ್ತಿದ್ದಳು.

ಮಕ್ಕಳ ಮತ್ತು ಪತಿಯ ವಿಯೋಗ

ಧರ್ಮ ಪ್ರೇಮಿಗಳಾದ ಈ ದಂಪತಿಗಳಿಗೆ ೧೮೦೬ ರಲ್ಲಿ ಮೊದಲ ಮಗಳು ಜನಿಸಿದಳು. ಅವಳ ಹೆಸರು ಪದ್ಮಮಣಿ. ಎರಡನೆಯವಳು ಕುಮಾರಿ, ೧೮೧೧ ರಲ್ಲಿ ಅವಳು ಹುಟ್ಟಿದ್ದು. ಮೂರನೆಯವಳೇ ಕರುಣಾಮಯಿ ೧೮೧೬ ರಲ್ಲಿ ಅವಳ ಜನನ. ಕೊನೆಯವಳು ಜನದಂಬ ಆಕೆ ಹುಟ್ಟಿದ್ದು ೧೮೨೩ ರಲ್ಲಿ.

೧೮೨೧ನೇ ಇಸವಿಯವರೆಗೂ ರಾಜಚಂದ್ರನ ಪರಿವಾರದವರೆಲ್ಲ ಕಲ್ಕತ್ತದ ಫ್ರೀಸ್ಕೂಲ್ ಸ್ಟ್ರೀಟ್ ಸಮೀಪದ ತಮ್ಮ ಮನೆಯಲ್ಲಿದ್ದರು. ೧೮೧೩ ರಲ್ಲಿ ರಾಜಚಂದ್ರ ಈಗ ಇರುವ ದೊಡ್ಡ ಭವನವನ್ನು ಕಟ್ಟಿಸತೊಡಗಿದ. ಅದೊಂದು ರಾಜ ಭವನವೇ ಆಗಿತ್ತು. ಅದನ್ನು ನಿರ್ಮಿಸಲು ಹೆಚ್ಚು ಕಡಿಮೆ ಇಪ್ಪತ್ತೈದು ಲಕ್ಷ ರೂಪಾಯಿಗಳು ವೆಚ್ಚವಾದವು ಎನ್ನುತ್ತಾರೆ. ಏಳು ಭವನಗಳಿಂದ ಕೂಡಿದ ಆ ಕಟ್ಟಡದಲ್ಲಿ ಸುಮಾರು ಏಳುನೂರು ಕೋಣೆಗಳಿದ್ದವು. ಅದನ್ನು ಈಗ “ರಾಸಮಣೀ ಕುಠಿ” ಎಂದು ಕರೆಯುತ್ತಾರೆ. ಎಲ್ಲ ದೃಷ್ಟಿಯಿಂದಲೂ ರಾಜಚಂದ್ರ ಮತ್ತು ರಾಸಮಣೀ ದಂಪತಿಗಳ ಸಂತೋಷದ ದಿನಗಳು ಅವು. ಆದರೆ ವಿಧಿಯ ಕ್ರೂರ ಕೈವಾಡವನ್ನು ಅರಿತವರಾರು? ೧೮೩೬ ರಲ್ಲಿ ರಾಜಚಂದ್ರ ಆಕಸ್ಮಾತ್ ಮೆದುಳಿನ ರಕ್ತಸ್ರಾವದ ರೋಗದಿಂದ ತೀರಿಕೊಂಡ. ಆಗ ಆತನ ವಯಸ್ಸು ನಲವತ್ತೊಂಭತ್ತು. ರಾಣಿಯ ಪಾಲಿಗೆ ಎಂದೂ ಮರೆಯಲಾಗದ ದುರಂತ ಸಂಭವಿಸಿತು. ಮಾಸಲಾಗದ ನೋವು ಘಟಿಸಿತು. ಅವಳಿಗೆ ಜಗತ್ತೇ ಶೂನ್ಯವಾದಂತೆ ಕಂಡಿತು. ಆ ದುರಂತ ಘಟನೆಯ ಬಳಿಗೆ ಮೂರು ದಿನಗಳ ಕಾಲ ಆಕೆ ಅನ್ನ ನೀರನ್ನೂ ಸೇವಿಸದೇ ಏಕಾಂತದಲ್ಲಿದ್ದಳು. ಬಳಿಕ ಮೆಲ್ಲನೇ ಚೇತರಿಸಿಕೊಂಡು ಪತಿಯ ಉತ್ತರ ಕ್ರಿಯೆಯನ್ನು ಯಥಾ ಯೋಗ್ಯವಾಗಿ ನೆರವೇರಿಸಿದಳು. ರಾಜಚಂದ್ರನು ಬಿಟ್ಟು ಹೋದ ಸಂಪತ್ತಿನ ಮೌಲ್ಯ ಸುಮಾರು ಎಂಬತ್ತು ಲಕ್ಷ ರೂಪಾಯಿಯಷ್ಟು! ಆ ಹಣ ಅವನೇ ಸ್ವತಃ ಸಂಪಾದಿಸಿದ್ದು. ಜಮೀನು ಮನೆ ವ್ಯವಹಾರಗಳನ್ನು ನೋಡಿಕೊಳ್ಳಲು ಅವಳಿಂದ ಸಾಧ್ಯವಾಗುವುದೇ ಎಂದು ಶಂಕಿಸಿದವರುಂಟು. ಆದರೆ ರಾಣಿ ಎಂದೂ ಅಧೀರಳಾಗಲಿಲ್ಲ. ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿರ್ವಹಿಸುವುದರಲ್ಲಿ ಹಿಂಜರಿಯಲಿಲ್ಲ.

ಮಥುರಾನಾಥನ ಮೇಲ್ವಿಚಾರಣೆ

ರಾಸಮಣಿಯ ಮಕ್ಕಳೆಲ್ಲರಿಗೂ ವಿವಾಹವಾಗಿತ್ತು. ಅವಳ ಅಳಿಯಂದಿರಲ್ಲಿ ಮಥುರಾನಾಥ ವಿಶ್ವಾಸ ಅಥವಾ ಮಥುರಾಬಾಬು ನಿಪುಣ, ಪ್ರಮುಖ. ಮಥುರನು ತನ್ನ ಅತ್ತೆಯನ್ನು ಅತ್ಯಂತ ಗೌರವಾದರಗಳಿಂದ ಕಂಡು ಅವಳ ಮಾರ್ಗದರ್ಶನದಲ್ಲಿ ಎಲ್ಲ ಆಡಳಿತ ಕೆಲಸವನ್ನೂ ಮೇಲ್ವಿಚಾರಣೆಯನ್ನೂ ಚೆನ್ನಾಗಿ ನಿರ್ವಹಿಸುತ್ತಿದ್ದ. ಮುಂದೆ ದಕ್ಷಿಣೇಶ್ವರದಲ್ಲಿ ಶ್ರೀ ರಾಮಕೃಷ್ಣರು ತಪಸ್ಸಿನಲ್ಲಿ ಮುಳುಗಿದ್ದಾಗ ಅವರ‍ನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೋಡಿಕೊಳ್ಳುತ್ತ ಅವರಿಗೆ ನಾನಾ ರೀತಿಯಲ್ಲಿ ನೆರವಾಗಿದ್ದ.

ಪತಿಯ ನಿಧನಾನಂತರ ಹೆಚ್ಚಿನ ಜವಾಬ್ದಾರಿ ರಾಸಮಣಿಯ ಹೆಗಲ ಮೇಲೆ ಬಿದ್ದರೂ ಆಕೆಯ ಧಾರ್ಮಿಕ ಆಚರಣೆಗಳು ವ್ಯತ್ಯಾಸವಾಗಲಿಲ್ಲ. ತಾಪಸಿಯಂತೆ ಕಠೋರ ನಿಯಮಗಳನ್ನು ಅವಳು ಪಾಲಿಸುತ್ತಿದ್ದಳು. ಪ್ರಾತಃ ಕಾಲದಲ್ಲಯೇ ಸ್ನಾನಾದಿಗಳನ್ನು ತೀರಿಸಿ ಮನೆ ದೇವರಾದ ರಘುನಾಥ ಸ್ವಾಮಿಯನ್ನು ವಂದಿಸಿ ಸ್ಫಟಿಕದ ಜಪ ಮಾಲೆಯನ್ನು ಹಿಡಿದುಕೊಂಡು ಜಪ ಮಾಡುತ್ತಿದ್ದಳು. ಆಹಾರ ವಿಹಾರದಲ್ಲಿ ಸಂಯಮವನ್ನು ತಂದುಕೊಂಡು ಎರಡು ಹೊತ್ತೂ ಪೂಜೆಯನ್ನು ಮಾಡುತ್ತಿದ್ದಳು. ಶಾಸ್ತ್ರ ವ್ಯಾಖ್ಯಾನ ಪುರಾಣ ಪ್ರವಚನ ಹರಿಕಥಾ ಶ್ರವಣವೇ ಮೊದಲಾದ ಕಾರ್ಯಕ್ರಮಗಳಲ್ಲೂ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಳು. ಅವಶ್ಯಕವಾದಲ್ಲಿ ಮಾತ್ರ ಕಾಗದ ಪತ್ರಗಳಿಗೆ ತನ್ನ ಹಸ್ತಾಕ್ಷರವನ್ನು ಹಾಕುತ್ತಿದ್ದಳು. ರಾಸಮಣಿ ಕಾಳಿಕಾಮಾತೆಯ ಪರಮ ಭಕ್ತಳು. ಕಾಗದ ಪತ್ರಗಳ ಮೇಲೊತ್ತುವ ಮೊಹರಿನಲ್ಲಿ “ಕಾಳೀಪದ ಅಭಿಲಾಷಿಣೀ ಶ್ರೀಮತಿ ರಾಣೀ ರಾಸಮಣೀ ದಾಸೀ” ಎಂದು ಕೆತ್ತಲ್ಪಟ್ಟಿತ್ತು.ಪ್ರತಿ ವರ್ಷವೂ ಆಚರಿಸುವ ಹಬ್ಬ ಹರಿದಿನಗಳನ್ನು ಆಕೆ ವಿಜೃಂಭಣೆಯಿಂದ ನೆರವೇರಿಸುತ್ತಿದ್ದಳು. ಅಂತಹ ದಿನಗಳಲ್ಲಿ ಅನ್ನದಾನ, ವಸ್ತ್ರದಾನ ನಾಟಕ ಕೀರ್ತನೆಗಳೇ ಮೊದಲಾದ ಕಾರ್ಯಕ್ರಮಗಳಿಂದ ಆನಂದದ ಪ್ರವಾಹವನ್ನು ಹರಿಯಿಸುತ್ತಿದ್ದಳು. ೧೮೩೮ ರಲ್ಲಿ ಬೆಳ್ಳಿಯ ರಥವೊಂದರಲ್ಲಿ ಮನೆದೇವರಾದ ರಘುನಾಥ ಸ್ವಾಮಿಯ ಉತ್ಸವವನ್ನಾಚರಿಸಲು ಸಂಕಲ್ಪಿಸಿದಳು. ಅವಳ ಆಜ್ಞೆಯನ್ನು ಪಾಲಿಸಲು ಸದಾ ಸಿದ್ಧನಾಗಿದ್ದ ಮಥುರಾನಾಥ ರಥವನ್ನು ನಿರ್ಮಿಸಲು ವಿದೇಶಿ ಕಂಪೆನಿಯೊಂದಕ್ಕೆ ಅಪ್ಪಣೆ ನೀಡಲು ಯೋಚಿಸಿದ್ದ. ರಾಣಿ ರಾಸಮಣಿ ಅದನ್ನು ವಿರೋಧಿಸಿ ಸ್ವದೇಶಿ ಕೆಲಸಗಾರರಿಂದಲೇ ರಥವನ್ನು ಮಾಡಲಿಸಲು ಆದೇಶವಿತ್ತಳು. ಇದು ಅವಳ ಸ್ವಜನಾನುರಾಗ ಮತ್ತು ಸ್ವದೇಶ ಪ್ರೇಮದ ಒಂದು ಕುರುಹು. ರಥೋತ್ಸವದ ಸಮಯದಲ್ಲಿ ಎಲ್ಲ ಜನರಂತೆ ಮಥುರನು ರಥದ ಮುಂದೆ ಬರಿಗಾಲಿನಲ್ಲಿ ನಡೆದು ಬರುತ್ತಿದ್ದನು. ವಂಗ ದೇಶದ ಪ್ರಸಿದ್ಧ ಹಬ್ಬವಾದ ದುರ್ಗಾ ಪೂಜೆಯನ್ನು ರಾಣಿ ವಿಶೇಷ ಪೂಜಾ ದಾನ ಮೊದಲಾದ ಕಾರ್ಯಕ್ರಮಗಳಿಂದ ಆಚರಿಸುತ್ತಿದ್ದಳು.

ಧೀರ ರಮಣಿ

ರಾಸಮಣಿ ಸ್ವಾಭಾವಿಕವಾಗಿ ಮೃದು ಸ್ವಭಾವದವಳಾಗಿದ್ದರೂ ಸಂದರ್ಭ ಒದಗಿ ಬಂದಾಳ ಅವಳ ಧೈರ್ಯ ಸಹಾಸಗಳು ಪ್ರಕಟವಾಗುತ್ತಿದ್ದವು. ರಾಸಮಣಿಯ ವಾಸದ ಮನೆಯ ಸಮೀಪ ಇಂಗ್ಲಿಷರ ಸೈನ್ಯದ ಒಂದು ಸಣ್ಣ ಠಾಣೆಯಿತ್ತು. ಒಂದು ದಿನ ಮದ್ಯಪಾನ ಮಾಡಿದ ಕೆಲಸ ಸೈನಿಕರು ರಾಣಿಯ ಭವನದ ದ್ವಾರಪಾಲಕರನ್ನು ಹೊಡೆದೋಡಿಸಿ ಮನೆಯನ್ನು ಪ್ರವೇಶಿಸಿ ಲೂಟಿ ಮಾಡತೊಡಗಿದರು. ಮಥುರನು ಹಾಗೂ ಮೊದಲಾದ ಮನೆಯ ಗಂಡಸರು ಯಾವುದೋ ಕಾರ್ಯಕ್ಕಾಗಿ ಹೊರಗೆ ಹೋಗಿದ್ದ ಸಮಯವದು. ಸೈನಿಕರು ತಡೆಯಿಲ್ಲದೇ ಗುಂಪು ಗುಂಪಾಗಿ ಒಳಗೆ ನುಗ್ಗುತ್ತಾ ಅಲ್ಲಿದ್ದ ವಸ್ತುಗಳನ್ನು ಹಾಳುಗೆಡಹುತ್ತಾ ಪ್ರಾಣಿ ಪಕ್ಷಿಗಳನ್ನು ಹಿಂಸಿಸತೊಡಗಿದರು. ಇದನ್ನು ಕಂಡ ರಾಣಿ ಸ್ವತಃ ಅಸ್ತ್ರಶಸ್ತ್ರಗಳಿಂದ ಸಜ್ಜಿತಳಾಗಿ ಅವರನ್ನು ತಡೆಗಟ್ಟಲು ಸಿದ್ಧಳಾದಳು. ಬಂಧು-ಬಾಂಧವರನ್ನು ಹಿಂದಿನ ಬಾಗಿಲುಗಳಿಂದ ಹೊರಗೆ ಕಳುಹಿಸಿ ತಾನೊಬ್ಬಳೇ ಖಡ್ಗಧಾರಿಣಿಯಾಗಿ ಸಿಂಹಿಣಿಯಂತೆ ನಿಂತಳು. ದೈವಯೋಗದಿಂದ  ಎಂಬಂತೆ ಆಂಗ್ಲ ಸೈನ್ಯದ ಹಿರಿಯ ಅಧಿಕಾರಿಗಳೂ ತಮ್ಮ ಸೈನಿಕರನ್ನು ಕೂಡಲೇ ಹಿಂದಿರುಗುವಂತೆ ಆಜ್ಞೆ ಮಾಡಿದುದರಿಂದ ಅವರೆಲ್ಲರೂ ಬೇಗನೇ ಅಲ್ಲಿಂದ ಹೊರಗೋಡಿದರು. ರಾಣಿಗೆ ಯಾವ ಅಪಾಯವೂ ಆಗಲಿಲ್ಲ.

ಬ್ರಿಟಿಷರಿಗೆ ಬುದ್ಧಿ ಕಲಿಸಿದಳು

ಆಗಿನ ಆಂಗ್ಲ ಸರ್ಕಾರ ಗಂಗಾನದಿಯಲ್ಲಿ ಮೀನು ಹಿಡಿಯುವ ಬೆಸ್ತರ ಮೇಲೆ ತೆರಿಗೆ ಹೊರಿಸಿತ್ತು ಶತಮಾನಗಳಿಂದ ಯಾವ ಕರಭಾರವೂ ಇಲ್ಲದೇ ತಮ್ಮ ಕುಲಕಸಬಾದ ಮೀನುಗಾರಿಕೆ ಮಾಡಿಕೊಂಡು ಬರುತ್ತಿದ್ದರು. ಈಗ ತೆರಿಗೆಯ ಹೊರೆಯಿಂದ ತಪ್ಪಿಸಿಕೊಳ್ಳಲು ಬೆಸ್ತರು ಬೇರೆ ಬೇರೆ ಕಡೆ ತಮ್ಮ ಮನವಿಯನ್ನು ಸಲ್ಲಿಸಿದ್ದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ರಾಸಮಣಿಯನ್ನು ಮೊರೆ ಹೊಕ್ಕರು. ರಾಣಿ ಅವರ ಕಷ್ಟವನ್ನು ತಿಳಿದುಕೊಂಡು ಅವರಿಗೆ “ಭಯವಿಲ್ಲ” ಎಂದು ಆಶ್ವಾಸನೆ ಇತ್ತಳು. ಹತ್ತು ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ನೀಡಿ ನದಿಯಲ್ಲಿ ಮೀನು ಹಿಡಿಯುವ ಹಕ್ಕನ್ನು ಮೊದಲು ಪಡೆದುಕೊಂಡಳು. ಆ ಬಳಿಕ ನದಿಯ ಕೆಲವು ಭಾಗಗಳಲ್ಲಿ ದಡದಿಂದ ದಡಕ್ಕೆ ಅಡ್ಡಲಾಗಿ ಕಬ್ಬಿಣದ ಸರಪಣಿಗಳನ್ನು ಹಾಕಿಸಿದಳು. ಹಡುಗುಗಳ ಸಂಚಾರಕ್ಕೆ ಅಡೆತಡೆಯಾಯಿತು. ಸರ್ಕಾರವು ರಾಣಿಯ ಈ ಕಾರ್ಯವನ್ನು ವಿರೋಧಿಸಿದಾಗ ಅವಳು ಸಂಬಂಧಿಸಿದ ಅಧಿಕಾರಿಗೆ ಹೀಗೆಂದು ತಿಳಿಸಿದಳು. “ನಾನು ಬಹಳ ಹಣ ವ್ಯಯ ಮಾಡಿ ನದಿಯಿಂದ ಮೀನು ಹಿಡಿಯುವ ಅಧಿಕಾರವನ್ನು ನಿಮ್ಮಿಂದ ಪಡೆದಿದ್ದೇನೆ. ನದಿಯಲ್ಲಿ ಹಡುಗುಗಳು ಸಂಚರಿಸುತ್ತಿದ್ದರೆ ಮೀನುಗಳು ಬೇರೆ ಕಡೆಗೆ ಓಡಿ ಹೋಗುತ್ತವೆ. ಇದರಿಂದ ನಮಗೆ ಬಹಳ ನಷ್ಟವಾಗುವುದು. ಆದುದರಿಂದ ಸರಪಣಿಗಳನ್ನು ತೆಗೆಯಲು ಸಾಧ್ಯವಿಲ್ಲ. ಆದರೆ ನದಿಯಿಂದ ಮೀನು ಹಿಡಿಯಲು ವಿಧಿಸಿದ ತೆರಿಗೆಯನ್ನು ರದ್ದುಪಡಿಸಿದರೆ ನಾನು ಕೂಡ ಸರಪಣಿಯನ್ನು ತೆಗೆಯಿಸಿ ನನ್ನ ಹಕ್ಕನ್ನೂ ಬಿಟ್ಟುಕೊಡುವೆ. ಇಲ್ಲವಾದರೆ ಈ ವಿಷಯದಲ್ಲಿ ಮೊಕದ್ದಮೆ ಹೂಡಲಾಗುವುದು, ಮಾತ್ರವಲ್ಲ ನನಗುಂಟಾಗುವ ನಷ್ಟಕ್ಕೆ ಸರ್ಕಾರವೇ ಹೊಣೆಯಾಗುವುದು”. ಬಡ ಬೆಸ್ತರ ರಕ್ಷಣೆಗಾಗಿ ರಾಣಿ ಹಾಗೆ ಮಾಡುತ್ತಿದ್ದಾಳೆಂಬುದನ್ನು ತಿಳಿದು ಸರ್ಕಾರ ತೆರಿಗೆಯನ್ನು ರದ್ದು ಪಡಿಸಿತು. ಮೀನುಗಾರರ ಸಂತೋಷಕ್ಕೆ ಪಾರವಿಲ್ಲ. ಅವರೆಲ್ಲ ರಾಣಿಯ ಕರುಣೆಯನ್ನು ಮನಸಾರೆ ಹಾಡಿ ಹೊಗಳಿದರು.

 

"ರಾಣಿ ಖಡ್ಗಧಾರಿಣಿಯಾಗಿ ನಿಂತಳು"

ದುರ್ಗಾಪೂಜೆಗೆ ಮೊದಲು ಒಂದು ದಿನ ಮುಂಜಾನೆ ಪುರೋಹಿತರು ಗಂಗೆಯ ತೀರಕ್ಕೆ ವಾದ್ಯ ಸಹಿತ ಭಜನೆ ಮಾಡುತ್ತ ಹೊರಟಿದ್ದರು. ಅವರು ಹೋಗುತ್ತಿದ್ದ ಮಾರ್ಗದ ಬದಿಯ ಮನೆಯೊಂದರಲ್ಲಿ ಮಲಗಿದ್ದ ಆಂಗ್ಲನೊಬ್ಬನಿಗೆ ನಿದ್ರಾಭಂಗವಾಯಿತು. ಆತ ಸಿಟ್ಟಿನಿಂದ ಪೂಜಾ ಮೆರವಣಿಗೆಯನ್ನು ಬೈದು ನಿಂದಿಸಿ “ಇನ್ನೊಮ್ಮೆ ಮೆರವಣಿಗೆ ಬಂದರೆ ನೋಡಿಕೊಳ್ಳುತ್ತೇನೆ” ಎಂದು ಗದರಿಸಿದ. ಮಾರನೆಯ ದಿನ ಮೆರವಣಿಗೆಯ ಗದ್ದಲ ಮುಗಿಲು ಮುಟ್ಟಿತು. ಆತ ರಾಸಮಣಿಯ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಿದ. ನ್ಯಾಯಾಲಯದಿಂದ ರಾಣಿಯು ಐವತ್ತು ರೂಪಾಯಿಗಳ ದಂಡ ತೆರಬೇಕೆಂದೂ ಇನ್ನು ಮುಂದೆ ಅಂತಹ ಮೆರವಣಿಗೆಯನ್ನು ನಡೆಸಬಾರದೆಂದೂ ತೀರ್ಪು ಹೊರಬಿತ್ತು. ರಾಸಮಣೀ ದಂಡವನ್ನು ಕೊಟ್ಟಳು. ಆದರೆ ರಸ್ತೆಯಲ್ಲಿ ಯಾವ ವಾಹನವೂ ಸಂಚರಿಸಿದಂತೆ ಮರದ ದಿಮ್ಮಿಗಳನ್ನು ನಿಲ್ಲಿಸಿ ದಾರಿಯನ್ನು ಮುಚ್ಚಿಸಿಬಿಟ್ಟಳು. ಸರ್ಕಾರ ಇದನ್ನು ವಿರೋಧಿಸಿದಾಗ ಆಕೆ ಆ ಜಾಗ ತನ್ನ ಸ್ವಂತ ಆಸ್ತಿಗೆ ಸೇರಿದುದೆಂದೂ ಅದನ್ನು ತನಗೆ ಬೇಕಾದಂತೆ ಉಪಯೋಗಿಸುವ ಹಕ್ಕು ತನಗಿದೆ ಎಂದೂ ಹೇಳಿ ಕಳುಹಿಸಿದಳು. ಸರ್ಕಾರ ರಾಣಿಗೆ ವಿಧಿಸಿದ ದಂಡವನ್ನು ಹಿಂದಿರುಗಿಸಿತು. ರಾಣಿಯೂ ರಸ್ತೆಯಲ್ಲಿ ಹಾಕಿಸಿದ ತಡೆಗಳನ್ನು ತೆಗೆಸಿಬಿಟ್ಟಳು.

ತನ್ನ ಜಮೀನುಗಳಲ್ಲಿ ದುಡಿಯುತ್ತಿದ್ದ ಪ್ರಜೆಗಳ ಆರ್ತನಾದವನ್ನು ಅವಳು ಎಂದೂ ತಿರಸ್ಕರಿಸಲಿಲ್ಲ. ನೀಲಿ ವ್ಯವಸಾಯದ ಶ್ರೀಮಂತನೊಬ್ಬ ರಾಣಿಯ ಜಮೀನಿನಲ್ಲಿದ್ದ ಒಕ್ಕಲುಗಳನ್ನು ತೊಂದರೆಗೊಳಪಡಿಸಿ ಹಿಂಸಾಚಾರದಲ್ಲಿ ತೊಡಗಿದ್ದ. ರಾಣಿ ಬೇಗನೇ ಅವನ ದುಷ್ಟತನಕ್ಕೆ ಶಾಸ್ತಿ ಮಾಡಿ ಜನರನ್ನು ಸಂಕಟದಿಂದ ಪಾರು ಮಾಡಿದಳು. ಯಾವತ್ತೂ ಹಿಂಸೆಯನ್ನು ಆಕೆ ವಿರೋಧಿಸಿದಳು. ತಾನು ಶಕ್ತಳಾಗಿದ್ದರೂ ಯಾರ ಮೇಲೂ ತನ್ನಿಂದಾಗಲೀ ತನ್ನ ಅಧಿಕಾರಿಗಳಿಂದಾಗಲೀ ಬಲಾತ್ಕಾರ, ಜುಲುಮೆಗಳು ಆಗದಂತೆ ಜಾಗರೂಕಳಾಗಿದ್ದಳು.

ದಾನ ಪರಾಯಣೆ

ದಾನ ಮತ್ತು ಧಾರ್ಮಿಕ ಆಚರಣೆಗಳು ರಾಣಿಗೆ ಪ್ರಿಯವಾದ ಕೆಲಸಗಳು. ಅವಳ ಜಮೀನಿನಲ್ಲಿದ್ದ ಒಕ್ಕಲು ಮಕ್ಕಳ ಹಿತದೃಷ್ಟಿಯಿಂದ ಸುಮಾರು ಒಂದು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ ಮಧುಮತಿ ಮತ್ತು ಗಂಗಾ ನದಿಯನ್ನು ಜೋಡಿಸುವ ಕಾಲುವೆಯನ್ನು ತೋಡಿಸಿದಳು. ಭವಾನೀಪುರ, ಬೆಲಿಯಾಘಾಟ್, ಸೊನ್ಯಾ ಪ್ರದೇಶಗಳಲ್ಲಿ ಮಾರುವ ಕಟ್ಟೆಗಳನ್ನು ಸ್ಥಾಪಿಸಿ ರೈತರಿಗೆ ತಾವು ಬೆಳೆದ ವಸ್ತುಗಳನ್ನು ಯೋಗ್ಯ ಬೆಲೆಗೆ ಮಾರಲು ವ್ಯವಸ್ಥೆ ಮಾಡಿದಳು. ಪ್ರಸಿದ್ಧ ತೀರ್ಥಕ್ಷೇತ್ರವಾದ ಪುರಿಗೆ ಹೋಗಿದ್ದಾಗ ಸ್ವಂತ ಖರ್ಚಿನಿಂದಲೇ ಸಹಸ್ತಾರು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರಸ್ತೆಗಳನ್ನು ಸರಿಪಡಿಸಿದಳು. ಪುರಿಯ ಜಗನ್ನಾಥ ದೇವಾಲಯದಲ್ಲಿ ಪೂಜೆಗೊಳ್ಳುವ ಜಗನ್ನಾಥ ಬಲಭದ್ರ ಮತ್ತು ಸುಭದ್ರಾ ಮೂರ್ತಿಗಳಿಗೆ ಸುಂದರವಾದ ರತ್ನಖಚಿತ ಕಿರೀಟಗಳನ್ನು ಮಾಡಿಸಿ ಅರ್ಪಿಸಿದಳು. ನಾಲ್ಕು ವರ್ಷಗಳ ಕಾಲ ವಿವಿಧ ತೀರ್ಥ ಕ್ಷೇತ್ರಗಳಲ್ಲಿ ಸಂಚರಿಸಿ ದಾನ ಮತ್ತು ಜನಹಿತಕಾರ್ಯಕ್ಕಾಗಿ ಐದು ಲಕ್ಷಕ್ಕೂ ಹೆಚ್ಚಿನ ಹಣವನ್ನು ಖರ್ಚು ಮಾಡಿದಳು. ತನ್ನ ಹುಟ್ಟೂರಾದ ಕೋನಾ ಗ್ರಾಮಕ್ಕೆ ಹೋಗಿ ಅಲ್ಲಿನ ಬಡ ಜನರನ್ನು ಆತ್ಮೀಯತೆಯಿಂದ ಕಂಡು ಅವರ ಕಷ್ಟ ಸುಖಗಳನ್ನು ವಿಚಾರಿಸಿ ಅವರಿಗೆ ಧನ ಸಹಾಯವನ್ನು ಮಾಡಿ ಅವರನ್ನು ಸಂತೈಸಿದಳು. ಗ್ರಾಮವಾಸಿಗಳ ಪ್ರಾರ್ಥನೆಯ ಮೇರೆಗೆ ಮೂವತ್ತು ಸಾವಿರ ರೂಪಾಯಿಗಳ ಖರ್ಚಿನಿಂದ ಸ್ನಾನಘಟ್ಟಗಳನ್ನು ನಿರ್ಮಿಸಿದಳು. ಸದಾಕಾಲಾವೂ ಒಂದಲ್ಲ ಒಂದು ಕೆಲಸದಲ್ಲಿ ಮಗ್ನಳಾಗಿ ಎಂತಹ ಸ್ಫೂರ್ತಿಯ ಬದುಕನ್ನು ಬಾಳಿದವಳವಳು!

ದಕ್ಷಿಣೇಶ್ವರದ ದೇವಾಲಯ

ರಾಣಿಯ ಕೀರ್ತಿಯು ಚಿರಸ್ಥಾಯಿಯಾದುದು ಅವಳು ಕಟ್ಟಿಸಿದ ದಕ್ಷಿಣೇಶ್ವರ ದೇವಾಲಯದಿಂದ. ಅಲ್ಲಿಗೆ ಪೂಜಾರಿಗಾಗಿ ಆಗಮಿಸಿ ಅಪೂರ್ವ ತಪಸ್ಸನ್ನಾಚರಿಸಿ ದೇವಮಾನವರೆಂದು ಪ್ರಖ್ಯಾತರಾದ ಶ್ರೀರಾಮಕೃಷ್ಣರಿಂದ. ದಕ್ಷಿಣೇಶ್ವರ ಕಲ್ಕತ್ತದಿಂದ ನಾಲ್ಕು ಮೈಲು ಉತ್ತರಕ್ಕಿದೆ. ಈ ದೇವಾಲಯದ ಪಶ್ಚಿಮದಲ್ಲಿ ಗಂಗಾನದಿ ಹರಿಯುತ್ತದೆ. ಅಲ್ಲೇ ದೇವಾಲಯಕ್ಕೆ ಸಂಬಂಧಿಸಿದಸ ಒಂದು ಸ್ನಾನಘಟ್ಟವಿದೆ. ನದಿಯಿಂದ ಬರುವವರೆಗೆ ಮೊದಲು ಈ ಸ್ನಾನಘಟ್ಟ ಸಿಗುತ್ತದೆ. ಅದನ್ನು ದಾಟಿ ಬಂದರೆ ಒಂದು ವಿಶಾಲವಾದ ಪ್ರವೇಶದ್ವಾರ ಸಿಗುತ್ತದೆ. ಅದರ ಎರಡೂ ಕಡೆಯಲ್ಲೂ ಒಟ್ಟು ಹನ್ನೆರಡು ಶಿವಾಲಯಗಳಿವೆ. ಇನ್ನೂ ಪೂರ್ವಕ್ಕೆ ಮುಂದುವರಿದರೆ ಕಲ್ಲು ಹಾಸಿದ ದೊಡ್ಡ ಅಂಗಣ ಸಿಗುತ್ತದೆ. ಇದರ ಮಧ್ಯದಲ್ಲಿ ಎರಡು ದೊಡ್ಡ ದೇವಾಲಯಗಳಿವೆ. ಅವುಗಳಲ್ಲಿ ಉತ್ತರ ಕಡೆಗಿರುವ ಮಂದಿರದಲ್ಲಿ ರಾಧಾಕಾಂತ ವಿಗ್ರಹ ಪ್ರತಿಷ್ಠಿತವಾಗಿದೆ. ದಕ್ಷಿಣದಲ್ಲಿರುವ ದೇವಮಂದಿರವು ಕಾಳಿಯದು. ಗರ್ಭ ಗುಡಿಯಲ್ಲಿ ಬೆಳ್ಳಿಯ ಸಹಸ್ರದಳ ಕಮಲವೊಂದರ ಮೇಲೆ ಶಿವನು ವಿರಮಿಸಿದ್ದಾನೆ. ಅವನ ಎದೆಯ ಮೇಲೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಂತಿರುವ ಜಗನ್ಮಾತೆ ಭವತಾರಿಣಿ ಶಿಲಾವಿಗ್ರಹವಿದೆ. “ಶಿವನ ಎದೆಯ ಮೇಲೆ ನಿಂತ ಭವತಾರಿಣಿ”- ಕೆಲವರಿಗೆ ವಿಚಿತ್ರವಾಗಿ ಕಾಣಿಸುವುದು ಸಹಜ. ಆದರೆ ಆ ಮೂರ್ತಿ ಒಂದು ತತ್ವವನ್ನು ಪ್ರತಿಪಾದಿಸುತ್ತದೆ. ಅದನ್ನು ತಿಳಿದುಕೊಳ್ಳುವುದು ಅಷ್ಟೇನೂ ಕಠಣವಲ್ಲ. ಅದನ್ನು ಸುಲಭವಾಗಿ ಅರಿತುಕೊಳ್ಳಲು ಚಲನಚಿತ್ರ ಉದಾಹರಣೆ ನಮಗೆ ಸಹಾಯಕವಾಗುತ್ತದೆ. ಬಿಳಿ ಪರದೆ ಇಲ್ಲವೆ ನಾವು ಚಿತ್ರಗಳನ್ನು ಕಾಣಲಾರೆವು. ಪರದೆಯು ಅಲುಗಾಡದೆ ಶುಭ್ರವಾಗಿ ಸ್ಥಿರವಾಗಿ ಇದ್ದರೇನೇ ಪ್ರೊಜೆಕ್ಟರ್ ಮೂಲಕ ಹಾಯಿಸಿದ ಬೆಳಕಿನ ಕಿರಣಗಳು ಅಲ್ಲಿ ನಾನಾ ಚಿತ್ರಗಳನ್ನು ನಿರ್ಮಿಸುವುದು. ಅಷ್ಟೇ ಅಲ್ಲ. ಅಲ್ಲಿ ಒಂದು ಸಣ್ಣ ಜಗತ್ತನ್ನೇ ನಾವು ಕಾಣುತ್ತೇವೆ! ಅಲ್ಲಿ ಪರದೆ ಆಧಾರರೂಪವಾದುದು. ಬೆಳಕಿನ ಕಿರಣಗಳು ಬೀಳುವುದಕ್ಕೆ ಮೊದಲೂ ಬೀಳುವಾಗಲೂ ಚಲನಚಿತ್ರ ಮುಗಿದ ಮೇಲೂ ಆ ಪರದೆ ಒಂದೇ ರೀತಿ ಯಾವ ಬದಲಾವಣೆಗಳೂ ಇಲ್ಲವೇ ಸ್ಥಿರವಾಗಿಯೇ ಇರುವುದು. ಅದು ಹಾಗೆ ಸ್ಥಿರವಾಗಿದ್ದುದರಿಂದಲೇ ಚಂಚಲವಾದ ಕಿರಣಗಳು ಅದರ ಮೇಲೆ ನರ್ತಿಸಿ ನಾನಾ ರೂಪ ಆಕಾರಗಳನ್ನು ತಾಳಲು ಸಾಧ್ಯವಾಯಿತು. ಅದೇ ರೀತಿ ನಾವು ಕಾಣುವ ಈ ವಾಸ್ತವ್ಯ ಜಗತ್ತಿನ ಎರಡು ತತ್ತ್ವಗಳಿವೆ. ಒಂದು ನಿತ್ಯವೂ ಶುದ್ಧವೂ ಯಾವ ಬದಲಾವಣೆಯೂ ಇಲ್ಲದೇ ಸ್ಥಿರವಾಗಿದ್ದುಕೊಂಡು ಎಲ್ಲಕ್ಕೂ ಆಧಾರರೂಪವಾದುದು. ಶಿವನು ಅದರ ಪ್ರತೀಕ ಅಥವಾ ಶಿವನು ಆ ಭಾವನೆ ಅಥವಾ ತತ್ತ್ವವನ್ನು ಸೂಚಿಸುತ್ತಾನೆ. ಇನ್ನೊಂದು ಪ್ರಪಂಚದ ಸೃಷ್ಟಿಗೆ, ಇರುವಿಗೆ, ಕಡೆಗೆ ನಾಶಕ್ಕೆ ಕಾರಣವಾದ, ಸಕಲ ಜಗತ್ತನ್ನೂ ನಡೆಯಿಸುವ ಸಂಸಾರಕ್ಕೆ ಕಾರಣವಾದ ಸಾಮಾನ್ಯ ಬುದ್ಧಗೆ ಗೋಚರಿಸದ ಶಕ್ತಿ, ಇದರ ಪ್ರತೀಕವೇ ಜಗದಂಬೆ ಅಥವಾ ಭವತಾರಿಣಿ. ಸಂಸಾರಕ್ಕೆ ಕಾರಣಳಾದ ಆದಿಶಕ್ತಿಯೇ ಸಂಸಾರದಿಂದ ದಾಟಿಸಿ ನಮ್ಮನ್ನು ಶಿವನಿದ್ದಲ್ಲಿಗೆ ಕರೆದೊಯ್ಯಬಲ್ಲಳು. ಆದುದರಿಂದಲೇ ಆಕೆ ಭವತಾರಿಣಿ (ಭವ=ಸಂಸಾರ; ತಾರಿಣಿ= ದಾಟಿಸುವವಳು) ಶಿವನು ಆಧಾರ ಸ್ವರೂಪ. ಶಕ್ತಿಮಾತೆ ಆತನನ್ನು ಆಧರಿಸಿ ನಿಂತಿದ್ದಾಳೆ. ಒಂದು ಅರಿವು ಅಥವಾ ಪ್ರಜ್ಞೆ, ಇನ್ನೊಂದು ಚೈತನ್ಯ ಅಥವಾ ಶಕ್ತಿ. ಇವುಗಳ ಪರಸ್ಪರ ಸಹಕಾರವಿಲ್ಲದೇ ಸೃಷ್ಟಿ ಇಲ್ಲ- ಇದೇ ಆ ಮೂರ್ತಿಯ ತಾತ್ವಿಕ ರಹಸ್ಯ.

 

"ದಕ್ಷಿಣೇಶ್ವರ ದೇವಾಲಯದಲ್ಲಿ ರಾಮಕೃಷ್ಣರು. ಕೈ ಮಿಗಿದು ಕುಳಿತ ರಾಸಮಣಿ"

ಕಾಳೀ ದೇವಿಯ ಮಂದಿರ

ಈ ಕಾಳೀ ದೇವಾಲಯಕ್ಕೆ ಒಂಬತ್ತು ಗೋಪುರಗಳೂ ಕಲಶಗಳೂ ಇವೆ. ಎದುರಿಗೆ ವಿಶಾಲವಾದ ಗಾನ ಭಜನೆಗಳನ್ನು ಮಾಡುವ ಜಾಗವಿದೆ. ಅದರ ಬೋಳು ಮಾಳಿಗೆಯನ್ನು ಭವ್ಯವಾದ ಸ್ತಂಭಗಳ ಮೇಲೆ ನಿಲ್ಲಿಸಿದ್ದಾರೆ. ದೇವಾಲಯ ಪ್ರಾಂಗಣದ ದಕ್ಷಿಣ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ದೇವಸ್ಥಾನದ ಕೆಲಸಗಾರರ ವಾಸ್ತವ್ಯದ ಕೋಣೆಗಳು, ಉಗ್ರಾಣ ಅಡಿಗೆಯ ಮನೆಗಳೆಲ್ಲ ಇವೆ. ಪ್ರಾಂಗಣದ ವಾಯುವ್ಯ ಭಾಗದಲ್ಲಿ  ಶಿವಾಲಯಗಳ ಸಾಲಿನ ಉತ್ತರದ ತುದಿಯಲ್ಲಿ ಒಂದು ದೊಡ್ಡ ಕೋಣೆಯಿದೆ. ಅಲ್ಲೇ ಶ್ರೀ ರಾಮಕೃಷ್ಣರು ಇದ್ದುದು. ಅಲ್ಲೇ ನೂರಾರು ಭಕ್ತರಿಗೆ ಧರ್ಮ ಬೋಧೆ ಮಾಡಿದುದು. ಈ ಕೋಣೆಗೆ ಪಶ್ಚಿಮದಲ್ಲಿ ಗಂಗೆಯ ಕಡೆಗೆ ತೆರೆದುಕೊಂಡ ಒಂದು ಮುಖ ಮಂಟವಿದೆ. ಅದರ ಎದುರಿಗೇ ದಕ್ಷಿಣೋತ್ತರವಾಗಿ ಇರುವ ಒಂದು ದಾರಿ ಇದೆ. ಅದರ ಮುಂದಕ್ಕೆ ಹೂದೋಡವಿದೆ. ಅಲ್ಲಿಂದ ಕೆಳಗೆ ಗಂಗಾನದಿ ಹರಿಯುತ್ತದೆ. ದೇವಾಲಯದ ಪ್ರಕಾರದ ಹೊರಗೆ ರಾಸಮಣಿಯವರ ಮನೆಯವರು ಬಂದರೆ ಉಳಿದುಕೊಳ್ಳುವುದಕ್ಕಾಗಿ ಒಂದು ಬಂಗಲೆ ಇದೆ. ದೇವಾಲಯದ ಉದ್ಯಾನದಲ್ಲಿ ಎರಡು ಕೊಳಗಳೂ ಅನೇಕ ಗಿಡಮರಗಳೂ ಇವೆ. ಇದನ್ನು ಪಂಚವಟಿ ಎಂದೂ ಕರೆಯುತ್ತಾರೆ. ಶ್ರೀ ರಾಮಕೃಷ್ಣರ ಸಾಧನೆಯ ತಾಣ ತಪಸ್ಸಿನ ಭೂಮಿ ಅದಾಗಿತ್ತು.

ಹಿನ್ನೆಲೆ

ರಾಣಿ ಈ ದೇವಾಲಯವನ್ನು ಕಟ್ಟಿಸಲು ಆಕಸ್ಮಾತ್ತಾಗಿ ನಿಶ್ಚಯಿಸಿಸುವ ಪ್ರಸಂಗ ಬಂದೊದಗಿತು. ೧೮೪೮ ನೇ ಇಸವಿಯಲ್ಲಿ ಆತ್ಮೀಯ ಸ್ವಜನರನ್ನು ಕರೆದುಕೊಂಡು ಪ್ರಸಿದ್ಧ ತೀರ್ಥಕ್ಷೇತ್ರವಾದ ಕಾಶಿಗೆ ಹೋಗಲು ಸಂಕಲ್ಪಿಸಿದಳು. ಅಂದಿನ ದಿನಗಳಲ್ಲಿ ಇನ್ನೂ ರೈಲು ರಸ್ತೆ ಹಾಕಿರಲಿಲ್ಲ. ನದಿಯಲ್ಲೇ ಪಯಣ ಬೆಳೆಸಲು ಸುಮಾರು ಇಪ್ಪತ್ತೈದು ನೌಕೆಗಳು ರಾಣಿಯ ಪರಿವಾರದವರನ್ನೂ, ಆಳುಕಾಳುಗಳನ್ನೂ ಕರೆದೊಯ್ಯಲು ಸಿದ್ಧವಾದವು. ಎಲ್ಲ ಸಿದ್ಧತೆಗಳೂ ನಡೆದು ನಾಳೆ ಹೊರಡಬೇಕೆನ್ನುವಷ್ಟರಲ್ಲಿ ಮುಂಚಿನ ದಿನ ರಾತ್ರಿ ರಾಣಿಗೆ ಸ್ವಪ್ನದಲ್ಲಿ ಜಗದಂಬೆಯ ಸ್ಪಷ್ಟ ಆದೇಶವಾಯಿತು. “ನೀನು ಕಾಶಿಯಾತ್ರೆಗೆ ಹೋಗಬೇಕಿಲ್ಲ. ಗಂಗೆಯ ಸಮೀಪದ ಮನೋಹರವಾದ ತಾಣದಲ್ಲಿ ನನಗಾಗಿ ಎಂದು ದೇವಾಲಯವನ್ನು ಕಟ್ಟಿಸಿ ಅಲ್ಲಿ ನನ್ನ ಮೂರ್ತಿಯನ್ನು ಸ್ಥಾಪಿಸು. ಆ ಮೂರ್ತಿಯಲ್ಲಿ ನೆಲಸಿ ನಿತ್ಯವೂ ನಿನ್ನ ಪೂಜೆಯನ್ನು ಸ್ವೀಕರಿಸುತ್ತೇನೆ” ಎಂಬ ವಾಣಿಯನ್ನು ಆಕೆ ಸ್ಪಷ್ಟವಾಗಿ ಕೇಳಿದಳು. ಭಕ್ತಿ ಪರಾಯಣೆಯಾಗಿದ್ದ ರಾಣಿಗೆ ಮೇಲಿನ ಅನುಭವವು ಆಶ್ವರ್ಯವನ್ನೂ ಆನಂದವನ್ನೂ ಉಂಟು ಮಾಡಿದವು. ಅವಳು ಕಾಶಿಗೆ ಹೋಗುವುದನ್ನು ನಿಲ್ಲಿಸಿ ತೀರ್ಥಯಾತ್ರೆಗಾಗಿ ಸಂಗ್ರಹಿಸಿದ ವಸ್ತುಗಳನ್ನು ಪಂಡಿತರಿಗೂ ಬಡಬಗ್ಗರಿಗೂ ಹಂಚಿದಳು ಬೇಗನೇ ದೇವಾಲಯವನ್ನು ಕಟ್ಟಿಸಲು ಯೋಗ್ಯವಾದ ಸ್ಥಳವನ್ನು ಹುಡುಕುವಂತೆ ಅಳಿಯನಾದ ಮಥುರಾನಾಥನಿಗೆ ಹೇಳಿದಳು. ಯಾತ್ರೆಯ ಖರ್ಚಿಗಾಗಿ ಸಂಗ್ರಹವಾದ ಹಣವನ್ನು ದೇವಾಲಯದ ಜಾಗವನ್ನು ಕೊಂಡುಕೊಳ್ಳಲು ಕಾದಿರಿಸಿದಳು. ಗಂಗಾನದಿಯ ಪೂರ್ವ ತಟದಲ್ಲಿ ಬಹಳ ಹುಡುಕಾಟ ನಡೆಯಿಸಿದ ಮೇಲೆ ಒಂದು ಜಾಗ ಅನುಕೂಲವೆಂದು ಕಂಡಿತು. ಆ ಸ್ಥಳ ಕಲ್ಕತ್ತಾ ನಗರದ ಮುಖ್ಯ ನ್ಯಾಯಾಲಯದ ವಕೀಲನಾಗಿದ್ದ ಹೇಸ್ಟೀ ಎಂಬ ಅಂಗ್ಲನಿಗೆ ಸೇರಿತ್ತು. ಇಪ್ಪತ್ತು ಎಕರೆಯಷ್ಟು ವಿಸ್ತೀರ್ಣದ ಆ ಜಾಗಕ್ಕೆ ಸುಮಾರು ಐವತ್ತು ಸಾವರ ರೂಪಾಯಿಗಳನ್ನು ಕೊಟ್ಟು ರಾಣಿ ಕೊಂಡುಕೊಂಡಳು. ನದೀ ತೀರದಲ್ಲಿ ನೆಲದ ಕೊರತೆಯನ್ನು ತಡೆಹಿಡಿಯಲು ನದಿಯ ಆಳ ಭಾಗದಿಂದಲೇ ಕಲ್ಲನ್ನು ಕಟ್ಟಿ ಮುಂದೆ ಯಾವ ಅಪಾಯವೂ ಸಂಭವಿಸದಂತೆ ವ್ಯವಸ್ಥೆ ಮಾಡಿಸಿದಳು. ಆ ಬಳಿಕ ಮಂದಿರ ನಿರ್ಮಾಣ ಕಾರ್ಯ ಆರಂಭವಾಯಿತು. ಆದರೆ ರಾಣಿ ಆಶಿಸಿದಂತೆ ದೇವಾಲಯದ ಕೆಲಸ ಬೇಗನೆ ಮುಗಿಯಲಿಲ್ಲ. ಕಾಳಿಕಾ ದೇವಿಯ ಮೂರ್ತಿಯೇನೋ ಸಿದ್ಧವಾಗಿತ್ತು. ಆದರೆ ದೇವಾಲಯ ಪೂರ್ಣಗೊಳ್ಳಲು ಹೆಚ್ಚು ಕಡಿಮೆ ಹತ್ತು ವರ್ಷಗಳೇ ಬೇಕಾದವು. ೧೮೫೪ ರವರೆಗೂ ತಾಳ್ಮೆಯಿಂದಿದ್ದಳು ರಾಣಿ. ಆ ಬಳಿಕ ದೇವಾಲಯವನ್ನು ಕೂಡಲೇ ಕಟ್ಟಿ ಪ್ರತಿಷ್ಠೆಯ ಕಾರ್ಯವನ್ನು ಮಾಡಿ ಮುಗಿಸದಿದ್ದರೆ ತನ್ನ ಜೀವನದಲ್ಲೇ ಅದನ್ನು ಮುಗಿಸಲು ಅಸಾಧ್ಯವಾಗಬಹುದೆಂಬ ಸಂದೇಹ ಆಕೆಗೆ ಬರತೊಡಗಿತು. ಆ ಕಾಲದಲ್ಲೇ ಒಂದು ದಿನ ಕನಸಿನಲ್ಲಿ ಕಾಳಿಕಾಮಾತೆ ರಾಣಿಗೆ ದರ್ಶನವಿತ್ತು “ಎಷ್ಟು ದಿನಗಳ ಕಾಲ ನನ್ನನ್ನು ಪೆಟ್ಟಿಗೆಯಲ್ಲಿ ಮುಚ್ಚಿಡುವೆ? ನನಗೆ ಬಹಳ ತೊಂದರೆಯಾಗುತ್ತಿದೆ. ಬೇಗನೆ ಮೂರ್ತಿಯನ್ನು ಪ್ರತಿಷ್ಠೆ ಮಾಡಲು ವ್ಯವಸ್ಥೆ ಮಾಡು” ಎಂದಳು. ರಾಣಿ ಸರ್ವ ಪ್ರಯತ್ನದಿಂದ ದೇವಾಲಯದ ಕೆಲಸಗಳನ್ನೆಲ್ಲ ಮುಗಿಸಿ ಬೇಗನೇ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯ ಕೈಗೊಳ್ಳಲು ದೃಢ ಸಹಕಾರಗಳಿಂದ ಒಂದು ವರ್ಷದೊಳಗೇ ಎಲ್ಲ ಕಾರ್ಯಗಳೂ ಮುಗಿಯುತ್ತ ಬಂದವು.

ರಾಣಿ ರಾಸಮಣಿಗೆ ತಾನು ಕಟ್ಟಿಸಿದ ದೇವಾಲಯದಲ್ಲಿ ಎಲ್ಲ ಜಾತಿಮತ ಪಂಥಗಳವರೂ ದೇವಿಯ ಸೇವೆಯಲ್ಲಿ ಭಾಗಿಗಳಾಗಬೇಕೆಂದು ಆಸೆ. ಅವಳ ಆಸೆಗೆ ತಕ್ಕಂತಹ ಅರ್ಚಕರೇ ದೊರೆತರು. ಅವರು ರಾಮಕುಮಾರ ಚಟರ್ಜಿಯವರು. ಅವರು ಕಲ್ಕತ್ತೆಯಲ್ಲಿ ಒಂದು ಸಂಸ್ಕೃತ ಪಾಠಶಾಲೆಯ ಮುಖ್ಯ ಆಚಾರ್ಯರು, ವಿದ್ವಾಂಸರು, ಸಜ್ಜನರು. ಮುಂದೆ ಜಗದಂಬೆಯ ಪೂಜಾರಿಯಾಗಿ, ಜಗತ್ತಿನಲ್ಲೇ ಪ್ರಸಿದ್ಧರಾದ ರಾಮಕೃಷ್ಣ ಪರಮಹಂಸರು ರಾಮಕುಮಾರರ ತಮ್ಮ.

ಮೂರ್ತಿ ಪ್ರತಿಷ್ಠಾಪನೆ ನಡೆದುದು ೧೮೫೫ ನೇ ಇಸವಿ ಮೇ ತಿಂಗಳು ೩೧ ನೇ ತಾರಿಖಿನಂದು. ರಾಮಕುಮಾರರೇ ಜನದಂಬೆಯ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗಿಯಾದುದಲ್ಲವೇ ಕಾಳೀ ದೇವಾಲಯದ ಪ್ರಥಮ ಪೂಜಾರಿಯಾದರು.

ರಾಣಿಯ ನಿಷ್ಠೆ ಮತ್ತು ಉತ್ಸವ

ದೇವಾಲಯದಲ್ಲಿ ಪ್ರತಿಷ್ಠೆಗೊಳ್ಳುವ ಜಗದಂಬೆಯ ಮೂರ್ತಿ ನಿರ್ಮಾಣವಾದಂದಿನಿಂದಲೂ ರಾಣಿಯ ವಿಶೇಷ ನಿಯಮ ನಿಷ್ಠೆಗಳನ್ನು ಆಚರಿಸಿದಳು. ಮೂರು ಹೊತ್ತೂ ಸ್ನಾನ ಮಾಡಿ ಶುದ್ಧ ವಸ್ತ್ರಗಳನ್ನು ಧರಿಸಿ ಉಪ್ಪು ಖಾರ ಹಾಕದೇ ಬೇಯಿಸಿದ ತರಕಾರಿ ಮತ್ತು ಅನ್ನವನ್ನು ಮಾತ್ರ ಸೇವಿಸುತ್ತಿದ್ದಳು. ನೆಲದ ಮೇಲೆ ಮಲಗುತ್ತಿದ್ದಳು. ಮೌನ ವ್ರತವನ್ನು ಆಚರಿಸುತ್ತಿದ್ದಳು. ಪೂಜೆ ಪ್ರಾರ್ಥನೆ ಜಪ ಇವುಗಳಲ್ಲಿ ದಿನದ ಬಹುಭಾಗವನ್ನು ಕಳೆಯುತ್ತಿದ್ದಳು. ಅಂತಹ ಶ್ರದ್ಧಾ ಭಕ್ತಿ ಅವಳದು!

ಪ್ರತಿಷ್ಠೆಯ ಪವಿತ್ರ ಕಾರ್ಯವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಬಡಬಗ್ಗರಿಗೆ ಅನ್ನದಾನ-ವಸ್ತ್ರದಾನ ಮಾಡಿದರು. ನೂರಾರು ವಿದ್ವಾಂಸರನ್ನು ಬರಮಾಡಿಕೊಂಡು ಅವರನ್ನು ಯೋಗ್ಯ ರೀತಿಯಿಂದ ಸನ್ಮಾನಿಸಿದರು. ದೇವಾಲಯದ ನಿರ್ಮಾಣಕ್ಕೂ ಪ್ರತಿಷ್ಠಾ ಮಹೋತ್ಸವಕ್ಕೂ ಸೇರಿ ಸುಮಾರು ಒಂಬತ್ತು ಲಕ್ಷ ರೂಪಾಯಿಗಳನ್ನು ಆಕೆ ಖರ್ಚು ಮಾಡಿದಳೆಂದು ಹೇಳುತ್ತಾರೆ. ಅಷ್ಟೇ ಅಲ್ಲದೇ ಎರಡು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳನ್ನಿತ್ತು ಒಂದು ದೊಡ್ಡ ಜಮೀನನ್ನು ಕೊಂಡಳು. ತನ್ನ ಅಂತ್ಯಕ್ಕೆ ಮೊದಲೇ ದೇವಾಲಯದ ವೆಚ್ಚಕ್ಕಾಗಿ ಅದನ್ನು ದಾನ ಶಾಸನ ಮಾಡಿಸಿ ಕೊಟ್ಟಳು.

ಶಾಂತಿಧಾಮ

ದೇವಾಲಯವನ್ನು ಪ್ರತಿಷ್ಠಾಪಿಸಿದ ದಿನ ಆ ಮೂರ್ತಿಯಲ್ಲಿ ಜಗದಂಬೆ ಶಾಶ್ವತವಾಗಿ ನೆಲಸಿ ಎಲ್ಲರಿಗೂ ಶುಭವನ್ನುಂಟು ಮಾಡಬೇಕೆಂದು ರಾಣಿ ಕಂಬನಿದುಂಬಿ ಹೃತ್ಪೂರ್ವಕ ಪ್ರಾರ್ಥನೆ ಸಲ್ಲಿಸಿದಳು. ತಾನು ಹಿಂದೆ ಹಂಡ ಸ್ವಪ್ನ ಸತ್ಯವಾಯಿತು. ಮಾಡಬೇಕೆಂದು ಸಂಕಲ್ಪಿಸಿದ ಕಾರ್ಯಗಳೆಲ್ಲ ಉತ್ತಮ ರೀತಿಯಿಂದ ನೆರವೇರಿದವು ಎಂದು ಅವಳ ಹೃದಯ ಆನಂದ ಮತ್ತು ಧನ್ಯತೆಯ ಭಾವನೆಗಳಿಂದ ತುಂಬಿದವು. ಅವಳ ಪರಿಶುದ್ಧ ಭಕ್ತಿಯಿಂದಲೂ ಆ ದೇವಾಲಯಕ್ಕೆ ಅರ್ಚಕರಾಗಿ ಬಂದ ಮಹಾನುಭಾವರು ಇದುವರೆಗೆ ಕಂಡು ಕೇಳಿರದ ತಪಸ್ಸಿನಿಂದಲೂ ಅಲ್ಲಿನ ಪ್ರತಿಮೆಯು ಸಜೀವವೂ ಸಚೇತವೂ ಆಗುವಂತಾಯಿತು. ಅಂದಿನಿಂದ ದಕ್ಷಿಣೇಶ್ವರವು ಅನೇಕರ ಶಾಂತಿಧಾಮವಾಯಿತು. ಪೂಜೆ, ಪ್ರಾರ್ಥನೆ, ಸಂಕೀರ್ತನೆ, ಉದಾತ್ತ ವಿಚಾರಗಳ ಚರ್ಚೆ, ಮನನ ಧ್ಯಾನ, ಸಮಾಧಿ ಧರ್ಮಬೋಧೆ ಅನ್ನದಾನವೇ ಮೊದಲಾದವುಗಳ ಮೂಲಕ ಬಹಳ ಪವಿತ್ರ ವಾತಾವರಣ ಸೃಷ್ಟಿಯಾಯಿತು. ದೇವಸ್ಥಾನವು ಕೊಡು, ಕೊಳ್ಳು ಎನ್ನುವಂತಹ ವ್ಯಾಪಾರದ ಕೇಂದ್ರವಲ್ಲ, ಧ್ಯಾನ ಪ್ರಾರ್ಥನೆಗಳಿಂದ ಪರಿಶುದ್ಧತೆಯನ್ನೂ ಶಾಂತಿಯನ್ನೂ ಪಡೆಯುವ ಕೇಂದ್ರ ಎಂಬುದನ್ನು ಸಾರುವಂತಾಯಿತು. ಇಂದಿಗೂ ನೌಕೆಯಲ್ಲಿ ಕುಳಿತು ನದಿಯಲ್ಲಿ ಪಯಣಿಸುವವರಿಗೆ ದೋಣಿ ನಡೆಸುವವರು ತಟದಲ್ಲಿರುವ ದೇವಾಲಯದ ಕಲಶಗಳನ್ನೂ ಉದ್ಯಾನದಲ್ಲಿ ಎತ್ತರವಾಗಿ ಬೆಳೆದ ಮರಗಳನ್ನೂ ತೋರಿಸುತ್ತಾರೆ. ರಾಸಮಣಿಯ ಅಪಾರ ಭಕ್ತಿಯನ್ನು ನೆನಪಿಗೆ ತರುತ್ತಾರೆ. ಜಗದಂಬೆಗೂ ಅವಳ ಪವಿತ್ರ ಮಂದಿರಕ್ಕೂ ಅಲ್ಲಿಂದ ಸಮನ್ವಯ ಸಂದೇಶವನ್ನು ಜಗತ್ತಿಗೆ ಸಾರಿದ ಶ್ರೀ ರಾಮಕೃಷ್ಣರಿಗೂ ತಲೆಬಾಗುವಂತೆ ಮಾಡುತ್ತಾರೆ.

ಯಾರಿವನು ಸೌಮ್ಯ ಮೂರ್ತಿ?

ಮಥುರಬಾಬು ಕಾಳೀ ದೇವಾಲಯದ ಆಡಳಿತದ ಮೇಲ್ವಿಚಾರಣೆಗಾಗಿ ಆಗಾಗ ದಕ್ಷಿಣೇಶ್ವರಕ್ಕೆ ಬಂದು ಹೋಗುತ್ತಿದ್ದ. ಬಂದಾಗಲೆಲ್ಲ ವಿಶೇಷ ಭಕ್ತಿಯ, ಸರಳ ಸುಂದರ ಸೌಮ್ಯ ಸ್ವಭಾವದ ಯುವಕನೊಬ್ಬ ಅಲ್ಲಿ ಓಡಾಡುತ್ತಿದ್ದುದನ್ನು ಕಾಣುತ್ತಿದ್ದ. ಆತನನ್ನು ಕಂಡಂತೆಲ್ಲ ಯಾವುದೋ ಅರಿವಿಗೆ ನಿಲುಕದ ಬಾಂಧವ್ಯದ ಆಕರ್ಷಣೆ ಮಥುರನಲ್ಲಿ ಮೂಡುತ್ತಿತ್ತು. ವಿಚಾರಿಸಿದಾಗ ತಿಳಿದು ಬಂತು. ಅವನು ಕಾಮಕುಮಾರರ ಸಹೋದರ ಗದಾಧರ ಎಂದು. (ಅವನೆ ಮುಂದೆ ರಾಮಕೃಷ್ಣರೆಂಬ ಹೆಸರಿನಿಂದ ಜಗದ್ವಿಖ್ಯಾತನಾದದು) ಅವನನ್ನೇಕೆ ಕಾಳಿಯ ದೇವಾಲಯದಲ್ಲಿ ಒಂದಲ್ಲ ಒಂದು ಕೆಲಸಕ್ಕೆ ನೇಮಿಸಿಕೊಳ್ಳಬಾರದು ಎಂದು ಮಥುರನ ಯೋಚನೆ. ಈ ಬಗ್ಗೆ ಮುಖ್ಯ ಅರ್ಚಕ ರಾಮಕುಮಾರರನ್ನು ಆತ ಕೇಳಿಯೂ ಕೇಳಿದ. ಏಕಾಂತಪ್ರಿಯನೂ ಹಣ ಮತ್ತು ಸ್ವಂತ ಸುಖದ ಕಡೆಗೆ ಗಮನೀಯದವನೂ ಆದ ತನ್ನ ತಮ್ಮನು ಒಪ್ಪಿಕೊಳ್ಳುವುದು ಕಷ್ಟವೆಂದರು ರಾಮಕುಮಾರರು. ಮಥುರನಿಗೆ ಸ್ವಲ್ಪ ನಿರಾಸೆ, ಆದರೆ ತನ್ನ ಆಸೆಯನ್ನು ಆತ ಬಿಡಲಿಲ್ಲ.

ಒಮ್ಮೆ ಮಥುರ ದೇವಾಲಯಕ್ಕೆ ಬಂದಾಗ ಸುಂದರವಾದ ಶಿವಮೂರ್ತಿಯ ಎದುರು ಧ್ಯಾನಮಗ್ನಾದ ತರುಣನನ್ನು ಕಂಡ. ಹತ್ತಿರ ಬಂದಾಗ ತಾನು ಹಿಂದೆ ಕಂಡಿದ್ದ ರಾಮಕುಮಾರರ ಸಹೋದರನೇ ಎಂಬುದು ತಿಳಿಯಿತು. ಆ ಮುದ್ದಾದ ಮೂರ್ತಿಯನ್ನು ಮಣ್ಣಿನಿಂದ ನಿರ್ಮಿಸಿದವನೂ ಆತನೇ ಎಂದು ತಿಳಿದು ಮಥುರ ಅಚ್ಚರಿಗೊಂಡ. ಮೂರ್ತಿಯನ್ನು ಗದಾಧರನಿಂದ ತೆಗೆದುಕೊಂಡು ರಾಸಮಣಿಗೂ ತೋರಿಸಿದ. ಅವಳೂ ಅದನ್ನು ಕಂಡು ಆನಂದಿತಳಾದಳು.

ದೇವಾಲಯದಲ್ಲಿ ಪೂಜೆಯ ಕೆಲಸ ರಾಮಕೃಷ್ಣರಿಗೆ ಪ್ರಿಯವಾದದ್ದೇ. ಆದರೆ ದೇವ ಮೂರ್ತಿಯ ಮೇಲಿರುವ  ಆಭರಣಗಳನ್ನು ಕಾಯುತ್ತ ಕುಳಿತಿರುವುದು ಇಷ್ಟವಿರಲಿಲ್ಲ. ಏಕಾಂತಪ್ರಿಯರೂ ಧ್ಯಾನಾಸಕ್ತರೂ ಆದ ಅವರಿಗೆ ಹೊರಗಿನ ಜನರೊಡನೆ ಹೆಚ್ಚಾಗಿ ವ್ಯವಹರಿಸುವ ಇಚ್ಚೆ ಇರಲಿಲ್ಲ. ಆದರೆ ಅವರ ಸೋದರತ್ತೆಯ ಮಗಳ ಮಗ ಹೃದಯರಾಮನು ಆ ಎಲ್ಲ ಭಾರವನ್ನು ತಾನು ವಹಿಸುತ್ತೇನೆಂದ ಮೇಲೆ ಶ್ರೀ ರಾಮಕೃಷ್ಣರು ಮುಖ್ಯ ಅರ್ಚರಿಗೆ ಸಹಾಯಕರಾಗಲು ಒಪ್ಪಿಕೊಂಡರು.

ರಾಧಾಕಾಂತ ದೇವಾಲಯದಲ್ಲಿ

ಕಾಳೀ ದೇವಾಲಯದ ಉತ್ತರ ದಿಕ್ಕಿಗೆ ರಾಧಾಕಾಂತ ಮಂದಿರವಿದೆಯಷ್ಟೆ. ರಾತ್ರಿಯ ಪೂಜೆಯ ನಂತರ ರಾಧಾಕಾಂತ ಮೂರ್ತಿಯನ್ನು ಬೇರೊಂದು ಕೋಣೆಯಲ್ಲಿ ತೆಗೆದಿರಿಸುತ್ತಿದ್ದರು. ಜನ್ಮಾಷ್ಟಮಿಯ ಮರುದಿನ ವಿಗ್ರಹವನ್ನು ಕಾಲುಜಾರಿ ಕೆಡವಿಬಿಟ್ಟ- ಕ್ಷೇತ್ರನಾಥನೆಂಬ ಪೂಜಾರಿ. ವಿಗ್ರಹದ ಕಾಲೊಂದು ಬಿರುಕುಗೊಂಡಿತು. ಕ್ಷೇತ್ರನಾಥನ ಕೆಲಸ ಹೋಯಿತು. ಬಿಡುಕುಬಿದ್ದ ಮೂರ್ತಿಯನ್ನು ಪೂಜಿಸುವುದು ತರವಲ್ಲ. ರಾಣಿಗೆ ಗಾಬರಿಯಾಯಿತು ಪಂಡಿತರು ಆ ಮೂರ್ತಿಯನ್ನು ಮಾಡಿಸಬೇಕೆಂದರು. ಇಷ್ಟು ದಿನ ಪೂಜಿಸಿದ ಮೂರ್ತಿಯನ್ನು ಎಸೆಯಲು ರಾಣಿಗೆ ಸಂಕಟವಾಯಿತು. ಮಥುರನ ಒತ್ತಾಯದಿಂದ ಆಕೆ ರಾಮಕೃಷ್ಣರನ್ನು “ಏನು ಮಾಡಲಿ?” ಎಂದು ಕೇಳಿದಳು. ಎಲ್ಲ ವಿವರಗಳನ್ನು ತಿಳಿದುಕೊಂಡು ಭಾವತುಂಬಿ ಅವರು ಹೀಗೆಂದರು: “ಹಾಗೆ ಗಂಗೆಗೆ ಆ ಮೂರ್ತಿಯನ್ನು ಎಸೆಯುವುದು ಮೂರ್ಖತನವಲ್ಲವೇ? ರಾಣಿಯ ಅಳಿಯನೊಬ್ಬನಿದ್ದಾನೆ ಎಂದು ತಿಳಿದುಕೊಳ್ಳಿ. ಆತನ ಕಾಲು ಆಕಸ್ಮಾತ್ ಮುದಿರೆ ಅವನನ್ನು ತ್ಯಜಿಸಿ ಇನ್ನೊಬ್ಬ ಅಳಿಯನನ್ನು ಹುಡುಕುವರೆ? ಅಥವಾ ಆತನಿಗೆ ಚಿಕಿತ್ಸೆ ಮಾಡಿಸುವರೇ? ಇಲ್ಲೂ ಹಾಗೆ ಮಾಡಬಾರದೇಕೆ? ವಿಗ್ರಹವನ್ನು ಸರಿಗೊಳಿಸಿ ಮುಂಚಿನಂತೆ ಪೂಜಿಸಿದರೇನು ತಪ್ಪು?” ಪಂಡಿತರು ಮೊದಲು ಇದನ್ನು ಒಪ್ಪದಿದ್ದರೂ ಕೊನೆಗೊಂದು ದಿನ ಮೇಲಿನ ತೀರ್ಮಾನಕ್ಕೆ ತಲೆಬಾಗಿದರು. ಶ್ರೀ ರಾಮಕೃಷ್ಣರೇ ಆ ಪ್ರತಿಮೆಯನ್ನು ಸರಿಪಡಿಸಿಕೊಟ್ಟರು. ಹಿಂದಿನ ಪೂಜಾರಿಯು ಕೆಲಸವನ್ನು ಕಳೆದುಕೊಂಡದ್ದರಿಂದ ಕೆಲವು ತಿಂಗಳುಗಳ ಕಾಲ ಶ್ರೀ ರಾಮಕೃಷ್ಣರೇ ರಾಧಾಗೋವಿಂದ ದೇವಾಲಯದ ಪೂಜಾರಿಯಾದರು. ರಾಣಿಗೂ ಮಥುರಬಾಬುವಿಗೂ ಇದರಿಂದ ಸಂತೋಷವಾಯಿತು. ಒಮ್ಮೆ ಅಣ್ಣ ರಾಮಕುಮಾರರು ಊರಿಗೆ ಹೋಗಿಬರುತ್ತೇನೆಂದು ಹೊರಟರು. ಆದರೆ ದುರದೃಷ್ಟವಶದಿಂದ ಅವರು ಹಿಂದಿರುಗಿ ದಕ್ಷಿಣೇಶ್ವರಕ್ಕೆ ಬರಲೇ ಇಲ್ಲ. ಅನಾರೋಗ್ಯ ಉಲ್ಬಣಿಸಿ ಅವರು ತೀರಿಕೊಂಡ ವಾರ್ತೆ ರಾಮಕೃಷ್ಣರಿಗೆ ತಲುಪಿತು. ತಮ್ಮ ಗೌರವಾದರಗಳಿಗೆ ಪಾತ್ರರಾದ ಹಿರಿಯಣ್ಣನ ನಿಧನ ಅವರಿಗೆ ತೀವ್ರ ಆಘಾತವನ್ನೇ ಉಂಟು ಮಾಡಿತು. ಅವರು ಹೆಚ್ಚು ಏಕಾಂತಶೀಲರೂ, ಪ್ರಾರ್ಥನಾಪರಾಯಣರೂ, ಧ್ಯಾನಮಗ್ನರೂ ಆಗತೊಡಗಿದ್ದರು. ಆದರೆ ಮಥುರ ಬಾಬುವಿನ ಪ್ರೀತಿಯ ಒತ್ತಾಯಕ್ಕೆ ಮಣಿದು ಜಗದಂಬೆ ಕಾಳಿಕಾ ಮಾತೆಯ ಪೂಜೆಯನ್ನು ಮಾಡಲು ಒಪ್ಪಿಕೊಂಡರು. ಅಲ್ಲಿ ಅವರ ಜೀವನದಲ್ಲಿ ಒಂದು ಹೊಸ ಅಧ್ಯಾಯವೇ ಪ್ರಾರಂಭವಾಯಿತು.

ರಾಮಕೃಷ್ಣರ ಸಾಧನೆ, ಸಿದ್ಧಿ

ಸಾಮಾನ್ಯ ಅರ್ಚಕರು ನಿತ್ಯದ ಪೂಜೆಯನ್ನು ನಿಯಮದಂತೆ ಮಾಡುತ್ತಾರೆ. ಆದರೆ ಶ್ರೀ ರಾಮಕೃಷ್ಣರು ಯಾಂತ್ರಿಕವಾಗಿ ಮಂತ್ರಗಳನ್ನು ಹೇಳಿ ಅಭಿಷೇಕ ನೈವೇದ್ಯಗಳನ್ನು ಮಾಡಿ ತೃಪ್ತರಾಗುವವರಾಗಿರಲಿಲ್ಲ. ಅವರೇನೋ ಶಾಸ್ತ್ರ ಹೇಳುವಂತೆ ನಿಯಮ ಪ್ರಕಾರವಾಗಿಯೇ ಬಹುದಿನ ಪೂಜೆ ಸಲ್ಲಿಸಿದರು. ಆದರೆ ಅವರೊಬ್ಬ ಅಪೂರ್ವ ಪೂಜಾರಿಯಾಗಿದ್ದರು. ಆದರ್ಶ ಅನ್ವೇಷಕರಾಗಿದ್ದರು. ಪೂಜೆಯ ಅರ್ಥವೇನು? ಭಕ್ತಿಯಿಂದ ಮಾಡುವ ಪೂಜೆಯಿಂದ ಭಗವಂತನು ಮೂರ್ತಿಯಲ್ಲಿ ವ್ಯಕ್ತವಾಗುವುದು ಹೌದೇ? ನಿಜವಾಗಿಯೇ ದೇವರು ಮನುಷ್ಯನ ಪೂಜೆಯನ್ನು ಸ್ವೀಕರಿಸುವನೇ? ಜನರು ದೇವರನ್ನು ಕಂಡವರು, ದೇವರ ಕೃಪೆಯನ್ನು ಪಡೆದವರು ಎಂದು ಹೇಳುತ್ತಾರಲ್ಲ. ಅದಕ್ಕೇನು ಅರ್ಥ? ಹಿಂದಿನ ಯುಗಗಳಲ್ಲಿ ಯೋಗಿಗಳು, ಮಹಾತ್ಮರು. ದೇವರ ನಿಜವಾದ ದರ್ಶನ ಮಾಡಿದ್ದಾರಂತಲ್ಲ; ಅದು ಈಗ ಸಾಧ್ಯವಿಲ್ಲವೇ? ಅಥವಾ ಆ ವಿಚಾರಗಳೆಲ್ಲ ಮೂಢನಂಬಿಕೆಗಳೇ? ಕಟ್ಟು ಕತೆಗಳೇ?- ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಬೇಕಿತ್ತು. ಕೆಲವೊಮ್ಮೆ ಸಂದೇಹಗಳು ಬರುತ್ತಿದ್ದರೂ ವಿಶ್ವನಿಯಾಮಕ ಶಕ್ತಿ ಇದೆ. ಭಗವಂತನಿದ್ದಾನೆ ಎಂಬ ವಿಚಾರದಲ್ಲಿ ಅವರು ವಿಶ್ವಾಸ ಅಚಲವಾಗಿಯೇ ಇತ್ತು. ಆದರೆ ಬರಿಯ ವಿಶ್ವಾಸದಿಂದಲೇ ತೃಪ್ತರಾಗುವ ವ್ಯಕ್ತಿ ಅವರಾಗಿರಲಿಲ್ಲ. ಸತ್ಯವನ್ನು ತಿಳಿಯಲು, ನಿಜವಾದ ಅನುಭವವನ್ನು ಪಡೆಯಲು ಅವರು ತೀವ್ರವಾಗಿ ಹಂಬಲಿಸಿದರು. “ಓ ತಾಯೇ ಎಲ್ಲಿದ್ದೀಯಾ? ನನಗೆ ನಿನ್ನ ದರ್ಶನ ಕೊಡಲಾರೆಯಾ? ರಾಮಪ್ರಸಾದನು ನಿನ್ನನ್ನು ಕಂಡನಂತೆ. ನೀನು ನನ್ನ ಬಳಿಗೆ ಬಾರದಷ್ಟು ಪಾಪಿಯೇ ನಾನು? ನನಗೆ ಜನರು ಹಂಬಲಿಸುವ ಸುಖ ಬೇಡ, ಸಂಪತ್ತು ಬೇಡ, ಸ್ನೇಹ ಬೇಡ, ಭೋಗ ಬೇಡ. ನಿನ್ನನ್ನು ಕಾಣಬೇಕೆಂಬ ಒಂದೇ ಬಯಕೆ ನನಗೆ” ಎಂದು ಪ್ರಾರ್ಥಿಸುತ್ತಿದ್ದರು. ಚಿಕ್ಕ ಶಿಶುವು ತಾಯಿಯನ್ನು ಕಾಣುವುದಕ್ಕಾಗಿ ವ್ಯಾಕುಲವಾದಂತೆ ಅವರು ಜಗದಂಬೆಯ ದರ್ಶನಕ್ಕಾಗಿ ಹಂಬಲಿಸಿದರು. ನೀರಿನಲ್ಲಿ ಮುಳುಗಿಸಿ ಮೇಲೇಳಲು ಬಿಡದೇ ಗಟ್ಟಿಯಾಗಿ ಹಿಡಿದುಕೊಂಡರೆ ವ್ಯಕ್ತಿಯೊಬ್ಬನು ಒಂದು ಉಸಿರಿಗಾಗಿ ಚಡಪಡಿಸುವಂತೆ ಜಗದಾಂಬೆಯ ದರ್ಶನಕ್ಕಾಗಿ ಅವರು ಹಂಬಲಿಸಿದರು. ಒಂದು ದಿನ ತಡೆಯಲಾರದ ಸಂಕಟದಿಂದ “ಇಷ್ಟು ಕರೆದರೂ ನಿನಗೆ ಕೇಳಿಸದೇ? ಬದುಕಿ ಪ್ರಯೋಜನವೇನು?” ಎಂದು ದೇವಾಲಯದಲ್ಲಿ ನೇತು ಹಾಕಿದ್ದ ಖಡ್ಗವನ್ನು ಕೈಗೆ ತೆಗೆದುಕೊಂಡು ಈ ಬಾಳನ್ನು ಮುಗಿಸಿಬಿಡುತ್ತೇನೆಂದು ತಮ್ಮ ಕತ್ತನ್ನು ಕತ್ತರಿಸಲು ಹೊರಟಿದ್ದರು. ಆ ವೇಳೆ ಅವರಿಗೆ ಅಪೂರ್ವ ಅನುಭವವಾಯಿತು. ಅವರೊಂದು ಆನಂದದ ಜ್ಯೋತಿ ಸಮುದ್ರದಲ್ಲಿ ಮುಳುಗಿದರು. ಎಚ್ಚೆತ್ತ ಮೇಲೆ ಜಗದಂಬೆ ಅವರಿಗೆ ನಾನಾ ರೀತಿಯಿಂದ ಕಾಣಿಸುತ್ತಿದ್ದಳು. ಮಾತನಾಡುತ್ತಿದ್ದಳು. ಸಮಾಧಾನ ಮಾಡುತ್ತಿದ್ದಳು. ಈ ಮಹಾ ಅನುಭವದ ನಂತರ ಶ್ರೀ ರಾಮಕೃಷ್ಣರ ಪೂಜೆಯ ವಿಧಾನವೇ ಬದಲಾಯಿತು. ಅವರು ಪೂಜೆಯ ಕಾಲದಲ್ಲಿ ಕೆಲವೊಮ್ಮೆ ಕಲ್ಲಿನ ಮೂರ್ತಿಯಂತೆ ಸ್ತಬ್ಧರು. ಕೆಲವೊಮ್ಮೆ ಮೂರ್ತಿಯನ್ನು ಮಾತನಾಡಿಸುವರು, ನಗುವರು. ಇದನ್ನು ಕಂಡು ದೇವಾಲಯದ ಆಫೀಸಿನಲ್ಲಿ ಕೆಲಸ ಮಾಡುವವರು ಮಥುರಬಾಬುವಿಗೆ ದೂರಿತ್ತರು “ಪೂಜಾರಿಗೆ ಹುಚ್ಚು ಹಿಡಿದಿದೆ” ಎಂದು. ಮಥುರರು ಒಂದು ದಿನ ಯಾರಿಗೂ ತಿಳಿಸದೇ ಬಂದು ರಾಮಕೃಷ್ಣರ ಪೂಜೆಯನ್ನು ಕಂಡು “ಅದು ಹುಚ್ಚಲ್ಲ, ಅಪೂರ್ವ ಶ್ರದ್ಧಾ ಭಕ್ತಿಯ ಪೂಜೆ, ಜಗದಂಬೆ ಜಾಗ್ರತಳಾಗಿದ್ದಾಳೆ” ಎಂದು ತಿಳಿದುಕೊಂಡರು. ತಮ್ಮ ಅತ್ತೆ ದೇವಸ್ಥಾನ ಕಟ್ಟಿಸಿದ್ದು ಸಾರ್ಥಕವಾಯಿತೆಂದುಕೊಂಡು ಆನಂದದಿಂದ ಕಂಬಿದುಂಬಿದರು.

ರಾಸಮಣಿಗೆ ಶಿಕ್ಷೆ

ಒಂದು ದಿನ ರಾಣಿ ದೇವಸ್ಥಾನಕ್ಕೆ ಬಂದು ಪೂಜೆಯನ್ನು ನೋಡಲು ಕುಳಿತುಕೊಂಡಳು. ಶಿಶುವಿನಂತಹ ಸರಳವಾದ ರಾಮಕೃಷ್ಣರ ಮೇಲೆ ಆಕೆಗೆ ಹೆಚ್ಚಿನ ಮಮತೆ. ಅವರು ಭಕ್ತಿಭಾವದಿಂದ ತನ್ಮಯರಾಗಿ ಹಾಡುವುದನ್ನು ಕೇಳಲು ಆಸೆ. ಆ ದಿನವೂ ರಾಮಕೃಷ್ಣರನ್ನು “ಒಂದು ಹಾಡು ಹೇಳಿ” ಎಂದು ಕೇಳಿಕೊಂಡಳು. ಅವರು ತನ್ಮಯರಾಗಿ ಹಾಡತೊಡಗಿದರು. ರಾಸಮಣಿ ಮೊದಮೊದಲು ಹಾಡನ್ನು ಮನಸಿಟ್ಟು ಕೇಳುತ್ತಿದ್ದಳು. ಕೊಂಚ ಹೊತ್ತಿನಲ್ಲೇ ಅವಳ ಮನಸ್ಸು ಕೋರ್ಟು ವ್ಯವಹಾರದ ವಿಚಾರ ಮಾಡಲು ತೊಡಗಿತ್ತು. ಥಟ್ಟನೇ ರಾಮಕೃಷ್ಣರು ಭಾವತನ್ಮಯರಾಗಿ ಎದ್ದು ಬಂದು “ಛೀ ಇಲ್ಲಿಯೂ ಆ ಚಿಂತೆಯೇ?!” ಎಂದು ರಾಣಿಯ ಕೆನ್ನೆಗೆ ಎರಡೇಟು ಕೊಟ್ಟರು.

ರಾಣಿಯ ಅಂಗರಕ್ಷಕರು, ಆಳುಗಳು ಗಲಿಬಿಲಿಗೊಂಡು “ಪೂಜಾರಿಯನ್ನು ಹಿಡಿಯಿರಿ, ಹೊಡೆಯಿರಿ, ಬಡಿಯಿರಿ” ಎನ್ನತೊಡಗಿದರು. ಅವರಲ್ಲಿ ಕೆಲವರು “ಸ್ವಲ್ಪ ತಡೆಯಿರಿ, ರಾಣಿ ಏನು ಹೇಳುತ್ತಾಳೋ ಹಾಗೆ ಮಾಡೋಣ” ಎಂದರು. ರಾಣಿಯು ಎಲ್ಲರನ್ನೂ ಸುಮ್ಮನಿರುವಂತೆ ಸಂಜ್ಞೆ ಮಾಡಿ ಪೂಜಾರಿಗೆ ಯಾರೂ ತೊಂದರೆ ಕೊಡಬೇಡಿ” ಎಂದು ಆಜ್ಞೆ ಮಾಡಿದಳು. ತನ್ನ ಕೋಣೆಗೆ ಹಿಂದಿರುಗಿದ ಬಳಿಕ ಹೇಳಿದಳು, “ಹೌದು, ತಪ್ಪು ನನ್ನದು. ಜಗದಂಬೆಯನ್ನು ಚಿಂತಿಸುವುದಕ್ಕೆ ಬದಲು ಪ್ರಾಪಂಚಿಕ ವಿಚಾರ ಮಾಡುತ್ತಿದ್ದೆ- ಇಂತಹ ದೈವೀಸಾನಿಧ್ಯದಲ್ಲಿ ಜಗದಂಬೆಯೇ ಶಿಕ್ಷೆಯನ್ನು ನೀಡಿ ಹೃದಯವನ್ನು ಬೆಳಗಿದಳು” ಜಗದಂಬೆಯ ದರ್ಶನವನ್ನು ಪಡೆದವರು ರಾಮಕೃಷ್ಣರು ಎಂಬುದು ಆಕೆಗೆ ತಿಳಿದಿತ್ತು.

 

"ಹೌದು ತಪ್ಪು ನನ್ನದು"

ರಾಣಿಯ ಕೊನೆಯ ದಿನಗಳು

ತಾನು ಮಾಡಬೇಕೆಂದು ಯೋಚಿಸಿಕೊಂಡಿದ್ದ ಕೆಲಸಗಳೆಲ್ಲವೂ ಸಫಲವಾದುದು ರಾಣಿಗೆ ತೃಪ್ತಿಯನ್ನು ನೀಡಿತ್ತು. ದೇವಾಲಯದಲ್ಲಿ ಶ್ರೀ ರಾಮಕೃಷ್ಣರ ಪೂಜೆ ಪ್ರಾರ್ಥನೆಗಳಿಂದ ಜಗದಂಬೆ ಜಾಗ್ರತಳಾಗಿದ್ದಳೆಂದು ತಿಳಿದ ಅವಳಲ್ಲಿ ಧನ್ಯತೆಯ ಭಾವನೆ ಮೂಡಿತ್ತು. ತನ್ನ ಜಮೀನು ಮತ್ತು ಮನೆಯ ವ್ಯವಹಾರಗಳನ್ನು ನೋಡಿಕೊಳ್ಳಲು ಸಮರ್ಥನಾದ ಮಥುರನಿದ್ದಾನೆ, ತನ್ನಗಿನ್ನೇನು ಬೇಕು? ರಾಸಮಣಿ ಕೊನೆಯ ಯಾತ್ರಗೆ ಮನಸ್ಸಿನಲ್ಲೇ ಸಿದ್ಧಳಾಗುತ್ತಿದ್ದಳು. ಆದರೆ ಮಗಳು ಪದ್ಮಮಣಿ ದೇವಾಲಯದ ಉಂಬಳಿಗೆ ಸಹಿ ಹಾಕಲು ಒಪ್ಪಲಿಲ್ಲವಲ್ಲ ಎಂಬ ಕೊರಗು ಅವಳ ಮನಸ್ಸಿನಲ್ಲಿತ್ತು. ರಾಣಿಗೆ ಜ್ಚರವೂ ಆಮಶಂಕೆಯೂ ಕಾಣಿಸಿಕೊಂಡವು. ವೈದ್ಯಕೀಯ ಉಪಚಾರಗಳಿಂದ ಹೆಚ್ಚು ಉಪಯೋಗವಾಗಲಿಲ್ಲ. ಸಾಯುವುದಕ್ಕೆ ಕೆಲ ಹೊತ್ತಿನ ಮೊದಲು ಸಂಪ್ರದಾಯದಂತೆ ಅವಳನ್ನು ಗಂಗಾನದಿಯ ತೀರಕ್ಕೆ ಕರೆತಂದು ಮಲಗಿಸಿದ್ದರು. ಅವಳ ಸಮೀಪದಲ್ಲಿ ದೀಪಗಳನ್ನು ಹೊತ್ತಿಸಿಟ್ಟಿದ್ದರು. ಅವನ್ನು ಕಂಡು ರಾಣಿ “ಆ ದೀಪಗಳನ್ನು ತೆಗೆದು ಬಿಡಿ, ಅವುಗಳಿಗೇನು ಕಾಂತಿ ಇದೆ? ಅದೋ ನನ್ನ ತಾಯಿ ಜಗದಂಬೆ ಬರುತ್ತಿದ್ದಾಳೆ. ಅವಳ ದಿವ್ಯ ಪ್ರಭೆಯಿಂದ ಸುತ್ತಮುತ್ತಲಿನ ಸ್ಥಾನವೆಲ್ಲ ಬೆಳಗಿದೆ” ಎಂದಳು. ಸ್ವಲ್ಪ ಹೊತ್ತಿನ ಬಳಿಕ “ಅಮ್ಮಾ ಬಂದೆಯಾ… ಪದ್ಮ ಸಹಿ ಹಾಕಲಿಲ್ಲ. ಅದರಿಂದ ಕೆಡುಕಾಗುವುದೇ?….” ಎನ್ನುತ್ತಾ ಜಗದಂಬೆಯ ಮಡಿಲನ್ನು ಸೇರಿದಳು. ಆಕೆ ಈ ಜಗತ್ತಿನಿಂದ ಕಣ್ಮರೆಯಾದ ದಿನ ೧೮೬೧ ನೇ ಫೆಬ್ರವರಿ ೧೯ನೇ ದಿನ.

ರಾಣಿಯು ಮಾಡಿದ ಲೋಕಹಿತ ಕಾರ್ಯಗಳೆಲ್ಲವೂ ದೈವಭಕ್ತಿಯಿಂದ ಪ್ರೇರಿತವಾದುವು ಎಂದು ಶ್ರೀ ರಾಮಕೃಷ್ಣರು ಹೇಳಿದ್ದರು. ಜಗದಂಬೆಯ ಕೆಲಸಕ್ಕಾಗಿ ಬಂದವಳವಳು ಎಂದೂ ಎಂದಿದ್ದರು.