ದೇವರಗುಡ್ಡ (ಗುಡ್ಡ ಗುಡ್ಡಾಪುರ)

ಜಿಲ್ಲಾ ಕೇಂದ್ರದಿಂದ ದೂರ : ೩೫ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೦ ಕಿ.ಮೀ.

ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನ, ದೇವರಗುಡ್ಡ

ಗುಡ್ಡ ಗುಡ್ಡಾಪುರ ಎಂಬ ಹೆಸರು ಬರಲು ಕಾರಣವೇನೆಂದರೆ ಗುಡ್ಡಗಳ ನಡುವೆ ಈ ಪುರ (ಊರು) ಇರುವುದು. ಇದರಂತೆ ಮಾಲತೇಶ ದೇವರಗುಡಿ ಗುಡ್ಡದ ಮೇಲೆ ಇರುವುದರಿಂದ ದೇವರಗುಡ್ಡ ಎಂದೂ ಕರೆಯುತ್ತಾರೆ. ಈ ಮಾಲತೇಶ ದೇವರಿಗೆ ಮಲ್ಲಯ್ಯ, ಮಲ್ಲಾರಿ, ಮೈಲಾರ, ಮಾರ್ತಾಂಡ, ಖಂಡೋಬ, ಖಂಡೇರಾಯ ಎಂಬ ನಾಮಗಳುಂಟು. ಈ ದೇವರು ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ದೇವತೆಯಾಗಿದ್ದು, ಶರದೃತು ಆಶ್ವೀಜಮಾಸದಲ್ಲಿ ಬರುವ ವಿಜಯದಶಮಿ ಕಾಲದಲ್ಲಿ ಲಿಂಗರೂಪಿಯಾಗಿ ಆವಿರ್ಭವಿಸಿದ ಶ್ರೀ ಮಾಲತೇಶ ಸ್ವಾಮಿ ಜಾತ್ರೆ ಬಹು ವಿಜೃಂಭಣೆಯಿಂದ ನಡೆಯುತ್ತದೆ ಹಾಗೂ ಪ್ರತಿ ರವಿವಾರ ಹಾಗೂ ಎಲ್ಲಾ ಹುಣ್ಣಿಮೆಗಳಂದು ಭಾರೀ ಜನಸಮೂಹದೊಂದಿಗೆ ಪಲ್ಲಕ್ಕಿ ಉತ್ಸವ ಜರುಗುತ್ತದೆ.  ಭರತ ಹುಣ್ಣಿಮೆ ದಿನದಂದು ದೇವಸ್ಥಾನದ ಆವರಣದಲ್ಲಿರುವ ದ್ಯಾಮವ್ವನ ಕಟ್ಟಿ ಬಳಿ ಮೂರು ಆಳೆತ್ತರದ ಬಿಲ್ಲಿನ ಮೇಲೆ ನಿಂತು ಕಾರ್ಣಿಕ ಹೇಳುವ ಬಗ್ಗಯ್ಯನ ಸಂದೇಶ ಕೇಳಲು ರಾಜ್ಯದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಜನ ಬಂದು ಸೇರುತ್ತಾರೆ.

ಪ್ರತಿವರ್ಷ ದಸರಾ ಸಮಯದಲ್ಲಿ ಒಂದು ತಿಂಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯದ ಹಾಗೂ ಅಂತರ್‌ರಾಜ್ಯಗಳಿಂದಲೂ ಕನಿಷ್ಟ ೫೦೦೦ ದಿಂದ ೨೦,೦೦೦ರ ವರೆಗೆ ಜಾನುವಾರುಗಳು ಬಂದು ಸೇರುತ್ತವೆ.

 

ಕೃಷ್ಣಮೃಗ ಅಭಯಾರಣ್ಯ

ಜಿಲ್ಲಾ ಕೇಂದ್ರದಿಂದ ದೂರ : ೪೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ:೪ ಕಿ.ಮೀ.


ರಾಣೇಬೆನ್ನೂರಿನ ಕಪ್ಪುಜಿಂಕೆ (ಕರಿಚಿಗರಿ) ಅಥವಾ ಕೃಷ್ಣಮೃಗಗಳ ಅಭಯಾರಣ್ಯವು ೧೯೭೪ ರಲ್ಲಿ ವನ್ಯಪ್ರಾಣಿ ಧಾಮವೆಂದು ಸಾರಲ್ಪಟ್ಟಿತು. ಈ ಅಭಯಾರಣ್ಯದ ಅರಣ್ಯಕ್ಷೇತ್ರವು ಉತ್ತರ ಅಕ್ಷಾಂಶ ೧೪ ೩೩’ ರಿಂದ ೧೪ ೪೭’ ರ  ವರೆಗೆ ಪೂರ್ವ ರೇಖಾಂಶ ೭೫ ೩೨’ ರಿಂದ ೭೫ ೫೧’ ರ ವರೆಗೆ ವಿಸ್ತರಿಸಿದ್ದು, ಒಟ್ಟು ೧೧೯.೮೯ ಚ.ಕಿ.ಮೀ. (೧೨೦೦೦ ಹೆ) ಪ್ರದೇಶ ಹೊಂದಿದೆ. ಈ “ವನ್ಯಪ್ರಾಣಿಧಾಮ” ವು ರಾಣೇಬೆನ್ನೂರಿನಿಂದ ೦೪ ಕಿ.ಮೀ. ದೂರದಲ್ಲಿದೆ. ಈ ಅಭಯಾರಣ್ಯ ಏರುತಗ್ಗುಗಳನ್ನೊಳಗೊಂಡ ಪ್ರದೇಶಗಳನ್ನು ಒಳಗೊಂಡಿದ್ದು, ಅತೀ ಎತ್ತರದ ಜಾಗವು ಸಮುದ್ರಮಟ್ಟದಿಂದ ಸುಮಾರು ೭೦೦ ಕಿ.ಮೀ.ಗಳಷ್ಟು ಎತ್ತರವಿದೆ. ಇಲ್ಲಿ ಕೆಲವು ಸಣ್ಣ ಹಳ್ಳಗಳು ಹರಿಯುತ್ತಲಿದ್ದು, ಅವುಗಳು ಬೇಸಿಗೆಯಲ್ಲಿ ಬತ್ತಿಹೋಗುತ್ತವೆ. ಸವೆತವು ಈ ಪ್ರದೇಶದಲ್ಲಿ ಹೆಚ್ಚಾಗಿದೆ. ಆದುದರಿಂದ ೧೯೫೬ ರಿಂದ ಬೋಳಾದ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಸ್ಥಳೀಯ ನೀಲಗಿರಿ ಸಸ್ಯಗಳ ಪ್ಲಾಂಟೇಶನ್ ಬೆಳೆಸಲು ಆಧ್ಯತೆ ನೀಡಲಾಗಿದೆ. ಇಲ್ಲಿ ಕೃಷ್ಣ ಮೃಗಗಳಲ್ಲದೆ ತೋಳಗಳು, ಕಾಡುಹಂದಿ ಮತ್ತು ನವಿಲುಗಳು ಹೇರಳವಾಗಿ ಕಾಣಸಿಗುತ್ತವೆ.

ವಿಶ್ವದಲ್ಲಿ ಹೆಚ್ಚು ಕಾಣಸಿಗದೇ ಇರುವಂತಹ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಈ ಅಭಯಾರಣ್ಯದಲ್ಲಿ ಕಂಡು ಬರುವುದು.

 

ಐರಣಿ ಹೊಳೆಮಠ

ಜಿಲ್ಲಾ ಕೇಂದ್ರದಿಂದ ದೂರ : ೬೨ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೨೮ ಕಿ.ಮೀ.

ಐರಣಿ ಹೊಳೆಮಠ

ದ್ವಾಪರಯುಗದಲ್ಲಿ ಪಾಂಡವರ ತಾಯಿಯಾದ ಕುಂತಿದೇವಿಯು ತನ್ನ ಮಕ್ಕಳ ಶ್ರೇಯಸ್ಸಿಗಾಗಿ ಶ್ರೀ ಗಜಗೌರಿ ವ್ರತವನ್ನು ಆಚರಿಸಲು ಪಾರ್ಥನು ಇಂದ್ರಲೋಕದಿಂದ ಐರಾವತವನ್ನು ತಂದು ಭೂಸ್ಪರ್ಶ ಮಾಡಿದ ಕ್ಷೇತ್ರವಾಗಿರುವ ಐರಣಿ ಹೊಳೆಮಠವು ತ್ರಿವೇಣಿ ಸಂಗಮ ಕ್ಷೇತ್ರವೆನಿಸಿದೆ. ಈ ಹಿಂದೆ ಈ ಕ್ಷೇತ್ರ ದತ್ತಾತ್ರೇಯರ ಮೂಲ ಸ್ಥಾನವಾಗಿದ್ದರಿಂದ ಇದು ಅವಧೂತವಾಗಿದೆ. ಶ್ರೀ ಕೊಟ್ಟೂರೇಶ್ವರರು ಲಿಂಗಾನುಷ್ಠಾನ ಮಾಡಿದ ಕ್ಷೇತ್ರವಾಗಿದ್ದು, ಶ್ರೀ ಸಿದ್ದಾರೂಢರು ಇಲ್ಲಿ ನೆಲೆಸಿ ಆಧ್ಯಾತ್ಮಿಕದ ತವರುಮನೆ ಮಾಡಿದ್ದಾರೆ.

ಪವಾಡ ಪುರುಷ ಮುಪ್ಪಿನಾರ್ಯ ಸ್ವಾಮಿಗಳ ಜನ್ಮಸ್ಥಳವೂ ಇದಾಗಿದೆ. “ಅವಧೂತ”, “ಶರಣ”, “ಆರೂಢರ” ತ್ರಿವೇಣಿ ಸಂಗಮವಾಗಿದೆ. ಪ್ರಸ್ತುತ ಶ್ರೀ ಬಸವರಾಜ ಶ್ರೀಗಳು ಮಠವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಊರಿನಿಂದ ಹೊರಭಾಗದಲ್ಲಿ ಎತ್ತರವಾದ ನದಿಯ ದಂಡೆಯ ಮೇಲೆ ಪುರಾತನವಾದ ಕೋಟೆಯ ಅವಶೇಷಗಳಿವೆ.

ಸುಮಾರು ೨೫೦ x ೧೦೦ ಚ.ಅಡಿ ಗಳಷ್ಟು ಆವರಣವನ್ನು ಈ ಕೋಟೆ ಹೊಂದಿದೆ. ಇದರ ಹೊರಭಾಗದ ಗೋಡೆಗಳು ಬಿದ್ದುಹೋಗಿದ್ದರೂ, ಒಳಗೆ ವಿಶಾಲವಾದ ಒಳಭಾಗ ಹೊಂದಿದೆ. ಒಳಭಾಗದಲ್ಲಿ ನಾಲ್ಕು ವಿಶಾಲವಾದ ಗೋಡೆಗಳಿಂದ ಆವರಿಸಲ್ಪಟ್ಟಿರುವ ಅರಮನೆಯ ಅವಶೇಷ ಮಾತ್ರ ಉಳಿದಿದ್ದು, ಕೋಟೆಯಲ್ಲಿ ಏನೂ ಉಳಿದಿಲ್ಲ.

 

ಸಿಂಥೈಟ್ ಕಾರ್ಖಾನೆ ಕುಮಾರಪಟ್ಟಣಂ

ಜಿಲ್ಲಾ ಕೇಂದ್ರದಿಂದ ದೂರ : ೫೨ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೮ ಕಿ.ಮೀ.

ಸಿಂಥೈಟ್ ಕಾರ್ಖಾನೆ

ಸಿಂಥೈಟ್ ಉದ್ಯಮವಿಂದು ಹಾವೇರಿ ಜಿಲ್ಲೆಗೂ ಕಾಲಿಟ್ಟಿದೆ. ಸಂಬಾರಜಿನಸುಗಳ ಓಲಿಯೋರೆಸಿನ್ಸ್, ಅಗತ್ಯ ಎಣ್ಣೆಗಳು, ಪ್ರಾಕೃತಿಕ ಆಹಾರ ಬಣ್ಣ, ನ್ಯೂಟ್ರಾಸೂಟಿಕಲ್ಗಳು, ನೈಸರ್ಗಿಕ ಆಂಟಿ ಆಕ್ಸಿಡೆಂಟ್‌ಗಳು, ಹೂಗಳಿಂದ ತೆಗೆದ ದ್ರಾವಕಗಳು ಎಲ್ಲವೂ ಸಿಂಥೈಟ್‌ಗಳ ಕೆಳಗೆ ಬರುತ್ತವೆ.

ರಾಸಾಯನಿಕಗಳ ಬಳಕೆ ದೇಹಕ್ಕೆ ಮಾರಕವಿರುವುದರಿಂದ, ನೈಸರ್ಗಿಕವಾದ ಉತ್ಪನ್ನಗಳಿಗಿಂದು ಎಲ್ಲಕಡೆಯಿಂದ ಬೇಡಿಕೆ ಇದೆ. ಆಹಾರ ವಸ್ತುಗಳ ಸಂರಕ್ಷಣೆ, ಸೌಂದರ್ಯವರ್ಧಕಗಳು, ಸುವಾಸನಾ ದ್ರವ್ಯಗಳು, ಆಹಾರ ತಯಾರಿಸುವಲ್ಲಿ ಬಳಸುವ ವೈವಿಧ್ಯಮಯ ವಸ್ತುಗಳು – ಇವೆಲ್ಲಕ್ಕೂ ವಿಜ್ಞಾನದ ಉತ್ತರ “ಸಿಂಥೈಟ್”.

ಕುಮಾರಪಟ್ಟಣಂನ ಸಿಂಥೈಟ್ ಘಟಕದಲ್ಲಿ ಮೆಣಸಿನಕಾಯಿಯಿಂದ ಹೊರತೆಗೆದ ಓಯೋರೆಜಿನ್‌ಳನ್ನು ವಿದೇಶಕ್ಕೆ ಕಳುಹಿಸಲಾಗುತ್ತದೆ. ಬ್ಯಾಡಗಿ ತಾಲೂಕಿನ ತಡಸಾ ಹಾಗೂ ರಾಷ್ಟ್ರೀಯ ಹೆದ್ದಾರಿಯ ಮೇಲಿನ ಛತ್ರದ ಸಮೀಪ ನಿರ್ಮಿತಗೊಂಡ ಸುಗಂಧ ದ್ರವ್ಯಗಳ ಘಟಕಗಳು ಕೂಡ ತಮ್ಮ ಕಾರ್ಯ ಚಟುವಟಕೆಗಳ ಮೂಲಕ ಮೆಣಸಿನಕಾಯಿ ಉತ್ಪಾದನೆ ಮಾಡುತ್ತ ತನ್ಮೂಲಕ ರೈತರಿಗೆ ಭದ್ರತೆ ಒದಗಿಸುತ್ತವೆ.

 

ಬೀಜೋತ್ಪಾದನಾ ಕಂಪನಿಗಳು

ಜಿಲ್ಲಾ ಕೇಂದ್ರದಿಂದ ದೂರ : ೫೫ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೧ ಕಿ.ಮೀ.

ಮಹಿಕೋ ಕಂಪನಿ

ಪೂನಾ ಬೆಂಗಳೂರು ರಸ್ತೆಯ ಮೇಲೆ ಹೊಂದಿಕೊಂಡಿರುವ ಮಹಿಕೋ ಕಂಪನಿ ಹಾಗೂ ನಾಮಧಾರಿ ಸೀಡ್ಸ್‌ನವರು ತಯಾರಿಸಿದ ಬೀಜಗಳಿಂದ ಬಿತ್ತನೆ ಮಾಡುವಲ್ಲಿ ರಾಣೇಬೆನ್ನೂರು ಪ್ರಸಿದ್ಧಿಯಾಗಿದೆ. ಬೀಜ ಬೆಳೆವ ಭೂಮಿ ಎಂದೇ ಜಾಗತಿಕ ನಕ್ಷೆಯಲ್ಲಿ ಗುರುತಿಸಲಾಗಿರುವ ರಾಣೇಬೆನ್ನೂರು ರೈತನಿಗೆ ಸಹಾಯ ಹಸ್ತ ಚಾಚಿ ಬಂದ ಬೀಜ ನಿಗಮಗಳೆಂದರೆ ರಾಷ್ಟ್ರೀಯ ಬೀಜ ನಿಗಮ (ಎನ್.ಎಸ್.ಸಿ.) ಕರ್ನಾಟಕ ಬೀಜ ನಿಗಮಗಳು (ಕೆ.ಎಸ್.ಎಸ್.ಸಿ.) ಜಾರಿಗೆ ತಂದ ಹೈಬ್ರಿಡ್ ಜೋಳದ ಬೀಜಗಳು, ವಾಣಿಜ್ಯ ಬೆಳೆಗಳಾದ ಮೆಕ್ಕೆ ಜೋಳ, ಸಜ್ಜೆ, ಸೂರ್ಯಕಾಂತಿ, ಹೆಚ್-೪ ಹತ್ತಿ ಬೀಜಗಳು, ಮೊಟ್ಟಮೊದಲು ಸಂಕರ ತಳಿಗಳನ್ನು ಪರಿಚಯಿಸಿದವರು ರಾಣೇಬೆನ್ನೂರಿನ ಮಾಜಿ ಶಾಸಕ ದಿ|| ವ್ಹಿ.ಎಸ್. ಕರ್ಜಗಿಯವರು.

ಟೊಮ್ಯಾಟೋ ಸಂಕರ ತಳಿಯ ಸೂಕ್ಷ್ಮ ಕಲೆಯ ಮಾಹಿತಿಯನ್ನು ತಿಳಿಸಿ, ಬೀಜೋತ್ಪಾದನೆಗೆ ರೈತರನ್ನು ತೊಡಗಿಸಿದವರು ಇಂಡೋ-ಅಮೇರಿಕನ್ ಕೃಷಿ ತಜ್ಞರು. ಸ್ಯಾಂಡೋಜ್, ಸಿಂಜೆಂಟಾ, ಮಹಿಕೋದಂತಹ ಹಲವಾರು ಬೀಜ ಕಂಪನಿಗಳು ರೈತರಿಗೆ ಸಂಜೀವಿನಿಯಾಗಿವೆ.

 

ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ

ಜಿಲ್ಲಾ ಕೇಂದ್ರದಿಂದ ದೂರ :೨೪ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ :೧೦ ಕಿ.ಮೀ

ಕೃಷಿ ವಿಜ್ಞಾನ ಪ್ರಯೋಗಾಲಯ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರವು ದಕ್ಷಿಣ ದೇಶದಲ್ಲಿಯೇ ಎರಡನೇಯದಾಗಿ ೧೯೭೭ರಲ್ಲಿ ಸ್ಥಾಪನೆಗೊಂಡು ಅಲ್ಲಿಂದ ಇಲ್ಲಿಯವರೆಗೂ ಕೃಷಿ ಸಮಸ್ಯೆಗಳ ನಿವಾರಣೆಗೆ ಹೊಸ ತಾಂತ್ರಿಕತೆಯ ವಿಧಾನ, ಮಾಹಿತಿಗಳನ್ನು ಕೃಷಿಕರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತ ಬಂದಿದೆ. ಬಹು ಬಗೆಯ ಕೃಷಿ ವಿಷಯಗಳನ್ನು ಕುರಿತು ತರಬೇತಿ ನೀಡಲಾಗುತ್ತಿದ್ದು, ಸ್ಥಳೀಯ ಸಮಸ್ಯೆ, ಸಮೀಕ್ಷೆ ಹಾಗೂ ಕೃಷಿಕರ ಅಗತ್ಯ ಆಧಾರಿತ ತರಬೇತಿ ಯೋಜನೆ ಮಾಡಲಾಗುವುದು. ಈ ಕೇಂದ್ರವು ಪ್ರಥಮ ಹಂತದ ಪ್ರಾತ್ಯಕ್ಷಿಕೆ, ಕೃಷಿ ಹಾಗೂ ಕೃಷಿ ಆಧಾರಿತ ಉಪಕಸುಬುಗಳ ತರಬೇತಿ, ಕ್ಷೇತ್ರೋತ್ಸವ, ವಸ್ತು ಪ್ರದರ್ಶನ, ಕ್ಷೇತ್ರ ಭೇಟಿ, ಗುಂಪು ಚರ್ಚೆಗಳಂತಹ ಪ್ರಮುಖ ಚಟುವಟಿಕೆಗಳಿಂದ ರೈತರಿಗೆ ಒಂದು ವರದಾನವಾಗಿದೆ.

ರೈತರು ವಿವಿಧ ಬೆಳೆಗಳಲ್ಲಿ ಕಂಡುಬರುವ ಕೀಟ ಹಾಗೂ ರೋಗಗಳ ನಿರ್ವಹಣೆಗೆ ಹೆಚ್ಚು ಖರ್ಚು ಮಾಡಿ ರಾಸಾಯನಿಕ ಪೀಡೆನಾಶಕಗಳನ್ನು ಬಳಕೆ ಮಾಡಿದರೂ ಕೂಡ ಹತೋಟಿಯಾಗದೆ ಹೆಚ್ಚಿನ ನಷ್ಟವನ್ನು ಅನುಭವಿಸುತ್ತಿದ್ದಾರೆ. ರೈತರನ್ನು ಈ ಸಂಕಷ್ಟದಿಂದ ಪಾರು ಮಾಡಲು ಕಡಿಮೆ ಖರ್ಚಿನಲ್ಲಿ ಜೈವಿಕ ಪೀಡೆನಾಶಕಗಳನ್ನು ಬಳಕೆ ಮಾಡಿ ಪರಿಸರದ ಮೇಲೆ ಕೆಡಕಾಗದಂತೆ ಹಾಗೂ ಪರಿಣಾಮಕಾರಿಯಾಗಿ ಕೀಟ ಮತ್ತು ರೋಗಗಳನ್ನು ನಿರ್ವಹಣೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರದಿಂದ ಹತ್ತಿ ಬೆಳೆ ಮಿನಿ ಮಿಷನ್-೨ ರಲ್ಲಿ ಜೈವಿಕ ಪೀಡೆನಾಶಕಗಳ ಪ್ರಯೋಗಾಲಯ ಪ್ರಾರಂಭಿಸಲು ಈ ಕೇಂದ್ರವು ೨೦ ಲಕ್ಷ ರೂಪಾಯಿಗಳ ಅನುದಾನವನ್ನು ಪಡೆದಿರುತ್ತದೆ.

 

ಕಲ್ಲೇಶ್ವರ ದೇವಸ್ಥಾನ, ಹಿರೇಮಾಗನೂರು

ಜಿಲ್ಲಾ ಕೇಂದ್ರದಿಂದ ದೂರ : ೫೪ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೮ ಕಿ.ಮೀ.

ಶ್ರೀ ಕಲ್ಲೇಶ್ವರ ದೇವಸ್ಥಾನ

ರಾಣೇಬೆನ್ನೂರಿನಿಂದ ದಕ್ಷಿಣಕ್ಕೆ ೧೮ ಕಿ.ಮೀ. ದೂರದಲ್ಲಿರುವ ರಾಷ್ಟಕೂಟರ ಶೈಲಿಯ ಕಲ್ಲೇಶ್ವರ ದೇವಸ್ಥಾನವನ್ನು ನೋಡಬೇಕಾದರೆ ಹಿರೇಮಾಗನೂರಿನತ್ತ ಸಾಗಬೇಕು. ಕ್ರಿ.ಶ. ೯೧೮ರ ಶಾಸನವೊಂದರಿಂದ ರಾಷ್ಟ್ರಕೂಟರ ಶೈಲಿ ಎಂದು ಕಾಣಬಹುದಾಗಿದೆ. “ಮಾಗಂದೂರು” ಗೌಡನು “ಕೆರೆಯೂರು” ಹಾಗೂ “ತಾಣನ್ದುರು” (ತಾಳಗುಂದ) ಮಹಾಜನರ ಹರಕೆಯಂತೆ ಎರಡು ಕೆರೆಗಳನ್ನು ಕಟ್ಟಿಸಿ, ಲಿಂಗ ಪ್ರತಿಷ್ಠಾಪನೆ ಮಾಡಿ, ದೇವಾಲಯ ಕಟ್ಟಿಸಿದನೆಂದೂ ತಿಳಿಯುತ್ತದೆ. ಈ ಶಾಸನವನ್ನು ಗೋಸಾಸ ಕಲ್ಲು ಸಮೂಹದ ಮೇಲೆ ಕೆತ್ತಲಾಗಿದೆ. ಈ ಗೋಸಾಸ ಕಲ್ಲುಗಳನ್ನು ನವಗ್ರಹಗಳೆಂದೂ ಪೂಜಿಸುತ್ತಾರೆ.

ಕಲ್ಲೇಶ್ವರ ಗುಡಿಯು ಗರ್ಭಗೃಹ, ಅಂತರಾಳ ಹಾಗೂ ನವರಂಗ ಹೊಂದಿದ್ದು, ನವರಂಗದ ಉತ್ತರದಲ್ಲೂ ಒಂದು ಚಿಕ್ಕ ಗರ್ಭಗೃಹವಿದೆ. ಎರಡೂ ಗರ್ಭಗೃಹಗಳಲ್ಲಿ ಶಿವಲಿಂಗಗಳಿವೆ. ನವರಂಗದ ನಡುವೆ ನಂದಿಮೂರ್ತಿ, ಸಪ್ತಮಾತೃಕ ಹಾಗೂ ಭೈರವನ ಶಿಲ್ಪಗಳಿವೆ. ನವರಂಗದ ಚಿತ್ತಿನಲ್ಲಿ ಗಜಚರ್ಮಾಂಭರದಾರಿ ನಟರಾಜನ ಸುಂದರ ಶಿಲ್ಪ ಕೆತ್ತನೆಯಿದ್ದು, ಸುತ್ತ ಅಷ್ಟ ದಿಕ್ಪಾಲಕರನ್ನು ಕೆತ್ತಲಾಗಿದೆ.

ಶಿಥಿಲಗೊಂಡ ದೇವಸ್ಥಾನವನ್ನು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಧರ್ಮೋಷ್ಠಾನ ಟ್ರಸ್ಟಿನ ಅಧ್ಯಕ್ಷರಾದ ರಾಜಶ್ರೀ ಡಾ. ಡಿ.ವೀರೇಂದ್ರ ಹೆಗಡೆಯವರು ಕರ್ನಾಟಕ ಸರಕಾರ ಪ್ರಾಜ್ಯ ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯದ ಸಹಭಾಗಿತ್ವದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯು ರೂ. ೭.೫೦ ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ಮಾಡಿ ೨-೧೨-೨೦೦೬ರಂದು ೧೦೦೮ ಶ್ರೀ ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯರ ಬೃಹನ್ಮಠ ಸಿರಿಗೆರೆ ಇವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನೆ ಮಾಡಲಾಯಿತು.

 

ಕೈಮಗ್ಗದ ಬೀಡು, ತುಮ್ಮಿನಕಟ್ಟಿ

ಜಿಲ್ಲಾ ಕೇಂದ್ರದಿಂದ ದೂರ : ೫೪ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ:೨೪ ಕಿ.ಮೀ.

ಕೈಮಗ್ಗದಲ್ಲಿ ನೇಯುತಿರುವ ಮಹಿಳೆ

ಸೀರೆ ಮತ್ತು ಪಂಚೆ ತಯಾರಿಕೆಗೆ ಪ್ರಸಿದ್ಧಿ ಪಡೆದ ತುಮ್ಮಿನಕಟ್ಟಿ ರಾಣೇಬೆನ್ನೂರಿನಿಂದ ೨೫ ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ನೇಕಾರರು ಇತರೆ ಜನಾಂಗದವರು ಕೂಡ ನೇಕಾರಿಕೆಯನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ತುಮ್ಮಿನಕಟ್ಟೆಯಲ್ಲಿ ನೇಕಾರರ ಕಾಲೋನಿ ಎಂಬ ಜನವಸತಿ ಪ್ರದೇಶಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಮುಂದಾಳತ್ವದಲ್ಲಿ ೧೦೦ ಜನರಿಗೆ ವಸತಿಯನ್ನು ಕಲ್ಪಿಸಲಾಗಿದೆ. ಸುಮಾರು ೪೦೦ ಮಗ್ಗಗಳ ಮೂಲಕ ಇಲ್ಲಿರುವ ಜನರು ನೇಯ್ಗೆಯನ್ನು ಮಾಡುತ್ತಿದ್ದಾರೆ.

೧೯೭೭ ರಲ್ಲಿ ಸ್ಥಾಪನೆಯಾದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಈ ಮೊದಲು ಮಾಲೀಕತ್ವದ ಅಡಿಯಲ್ಲಿ ದುಡಿಯುತ್ತಿದ್ದ ಜನರಿಗೆ ಆಶಾಕಿರಣವಾಗಿದೆ. ಈ ನಿಗಮದ ಮೂಲಕ ಸುಮಾರು ೫೦೦ ಜನರು ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಇಲ್ಲಿ ನೇಯ್ದ ಬಟ್ಟೆಗಳನ್ನು ವಿದ್ಯಾ ವಿಕಾಸ ಯೋಜನೆಗೆ, ಪ್ರಿಯದರ್ಶಿನಿ ಮಾರಾಟ ಮಳಿಗೆಗೆ, ಬೇರೆ ಬೇರೆ ಇಲಾಖೆಯ ಸಮವಸ್ತ್ರಗಳಿಗೆ, ಆಸ್ಪತ್ರೆಯ ಬ್ಯಾಂಡೇಜ್ ಬಟ್ಟೆಗಳಿಗಾಗಿ, ಬೆಡ್‌ಶೀಟ್ ಹಾಗೂ ಪಂಚೆ ಮತ್ತು ಸೀರೆಗಳಿಗಾಗಿ ಬಳಸುತ್ತಿದ್ದಾರೆ. ನೇಕಾರರ ಮಕ್ಕಳಿಗೆ ಮಹತ್ಮಾಗಾಂಧಿ ಬುನ್‌ಕಲ್ ಭೀಮಾ ಯೋಜನೆಯಡಿಯಲ್ಲಿ ರೂ. ೧೨೦೦.೦೦ ವಾರ್ಷಿಕ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಹಾಗೂ ಆರೋಗ್ಯ ವಿಮಾ ಯೋಜನೆಯು ಜಾರಿಯಲ್ಲಿದೆ.

 

ಮುಕ್ತೇಶ್ವರ ದೇವಾಲಯ, ಚೌಡಯ್ಯದಾನಪುರ

ಜಿಲ್ಲಾ ಕೇಂದ್ರದಿಂದ ದೂರ : ೪೮ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ:೨೦ ಕಿ.ಮೀ.

ಶ್ರೀ ಮುಕ್ತೇಶ್ವರ ದೇವಸ್ಥಾನ

ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿರುವ ಮುಕ್ತೇಶ್ವರ ದೇವಾಲಯವನ್ನು ರಾಣೇಬೆನ್ನೂರು ತಾಲೂಕಿನಿಂದ ೨೦ ಕಿ.ಮೀ. ದೂರದಲ್ಲಿರುವ ತುಂಗಭದ್ರಾ ನದಿಯ ದಂಡೆಯ ಮೇಲಿರುವ ಚೌಡಯ್ಯದಾನಪುರದಲ್ಲಿ ಕಾಣಬಹುದಾಗಿದೆ. ಈ ದೇವಾಲಯವನ್ನು ಕ್ರಿ.ಶ. ೧೧೧೫ ರಿಂದ ೧೧೨೦ರ ನಡುವಿನ ಕಾಲದಲ್ಲಿ ಚಟಾಚೋಳ ವಂಶದ ಗುಪ್ತರ ಮಾಂಡಲೀಕನಾಗಿದ್ದ ‘ಮಲ್ಲುಗಿ’ ಎಂಬುವನು ನಿರ್ಮಿಸಿದನೆಂದು ಇಲ್ಲಿಯ ಶಿಲಾ ಶಾಸನಗಳಿಂದ ತಿಳಿಯುತ್ತದೆ.

ಈ ದೇವಾಲಯವು ಅಪರೂಪದ ಶಿಲ್ಪಕಲೆಗಳ ಏಕಕೂಟಾಚಲದ ಕಟ್ಟಡವಾಗಿದೆ. ಅಂಬಿಗರ ಚೌಡಯ್ಯ ಶಿವಶರಣರ ಹೆಸರು ಈ ಗ್ರಾಮಕ್ಕೆ ಬೆಸೆದುಕೊಂಡಿದೆ. ಇತಿಹಾಸದಲ್ಲಿ ಈ ಗ್ರಾಮವನ್ನು ಶಿವಪುರ ಎಂದು ಕರೆಯಲ್ಪಡುತ್ತಿದ್ದು ಓರ್ವ ಮುನಿಶ್ರೇಷ್ಠರಿಗೆ ಈ ಭಾಗದ ಭೂಮಿಯನ್ನು ಗುಪ್ತರ ಅರಸರಿಂದ ದಾನ ಮಾಡಿಸಿದ ಶಿವಶರಣ ಅಂಬಿಗರ ಚೌಡಯ್ಯನ ಹೆಸರನ್ನು ಶಿವಪುರಕ್ಕೆ ಮರುನಾಮಕರಣ ಮಾಡಲಾಗಿದೆ ಎಂಬ ಪ್ರತೀತಿ ಇದೆ.

 

ಮಹಾವೀರ ಜೈನ ಮಂದಿರ, ರಾಣೇಬೆನ್ನೂರು

ಜಿಲ್ಲಾ ಕೇಂದ್ರದಿಂದ ದೂರ :೩೪ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ:೦ ಕಿ.ಮೀ.

ಜೈನ ಮಂದಿರ

ರಾಣೇಬೆನ್ನೂರಿನಲ್ಲಿ ಇತ್ತೀಚಿಗೆ ಜೈನ ಧರ್ಮವನ್ನು ಪ್ರತಿನಿಧಿಸುವ ಶ್ರೀ ಸುಮತಿನಾಥ ಜೈನ ಶ್ವೇತಾಂಬರ ಮಂದಿರವು ೨೦೦೭ನೇ ಇಸವಿಯಲ್ಲಿ ನಿರ್ಮಾಣವಾಗಿದೆ. ಈ ಮಂದಿರವನ್ನು ಒಟ್ಟು ೧೧೦೦೦ ಸಾವಿರ ಚದರ ಅಡಿ ಜಾಗದಲ್ಲಿ ರಾಜಸ್ಥಾನದ ಉದಯಪುರದ ಹತ್ತಿರವಿರುವ ರಾಜಸಾಗರ ಜಿಲ್ಲೆಯಿಂದ ತರಿಸಿದ ಅಪ್ಪಟ ಬಿಳಿ ಸಾಗಮೋರಿ ಕಲ್ಲಿನಿಂದ ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿ ಮೂಲ ನಾಯಕ ಶ್ರೀ ಸುಮತಿನಾಥ, ಬಲಗಡೆಯಲ್ಲಿ ಸಂಕೇಶ್ವರ ಪಾರ್ಶ್ವನಾಥ ವಿಗ್ರಹಗಳು ಹೊರಗಡೆ ಮಹಾವೀರ, ಆದಿನಾಥ, ಶಾಂತಿನಾಥ, ನೇಮಿನಾಥ ಹಾಗೂ ಅಷ್ಟದೇವತೆಗಳ ವಿಗ್ರಹಗಳು ಪ್ರವಾಸಿಗರನ್ನು ಕೈಮಾಡಿ ಕರೆಯುತ್ತವೆ. ರಾಜಸ್ಥಾನದ ಶಿಲ್ಪಿಗಳಿಂದ ನಿರ್ಮಿಸಿದ ಮಂದಿರ, ಜೈಪುರದಿಂದ ತರಿಸಿದ ವಿಗ್ರಹಗಳು ನಾಡಿನ ಸಾಸ್ಕೃತಿಕ ಪರಂಪರೆಯನ್ನು ಉಜ್ವಲಗೊಳಿಸಿವೆ.

 

ಗ್ರಾಸಿಂ ಇಂಡಸ್ಟ್ರೀಸ್, ಕುಮಾರಪಟ್ಟಣಂ

ಜಿಲ್ಲಾ ಕೇಂದ್ರದಿಂದ ದೂರ :೫೪ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೨೦ ಕಿ.ಮೀ.

ಗ್ರಾಸಿಂ ಇಂಡಸ್ಟ್ರೀಸ್

ಹಾವೇರಿ ಜಿಲ್ಲೆಗೆ ಮಹಾತ್ಮ ಗಾಂಧೀಜಿಯವರ ಸಹವರ್ತಿಗಳಲ್ಲಿ ಒಬ್ಬರಾಗಿದ್ದ ಗಣ್ಯ ಉದ್ಯಮಿ ಶ್ರೀ ಜಿ.ಡಿ. ಬಿರ್ಲಾರವರ ಕೊಡುಗೆ ಅಗಣಿತ. ತುಂಗಾಭದ್ರ ನದಿದಡದಲ್ಲಿರುವ ಕುಮಾರ ಪಟ್ಟಣಂನಲ್ಲಿ ಇವರು ಸ್ಥಾಪಿಸಿರುವ ರೇಯಾನ್ ಕಾರ್ಖಾನೆಯಾದ ಗ್ರಾಸಿಂ ಇಂಡಸ್ಟ್ರೀಸ್ ಅಂತರ್‌ರಾಷ್ಟ್ರೀಯ ಖ್ಯಾತಿ ಪಡೆದಿದೆ. ದೇಶದ ಹೆಸರಾಂತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಬಿಟ್ಸ್, ಪಿಲಾನಿ ಇವರ ಕನಸಿನ ಕೂಸು.

ಬ್ರಿಟಿಷರ ಧೋರಣೆಯೊಂದಿಗೆ ಸಂಘರ್ಷ ನಡೆಸುತ್ತಾ ದೇಶವನ್ನು ಕೈಗಾರಿಕಾ ಕ್ಷೇತ್ರದತ್ತ ಮುನ್ನಡೆಸುವಲ್ಲಿ ಬಿರ್ಲಾರವರ ಪಾತ್ರ ವೈಶಿಷ್ಟ್ಯಪೂರ್ಣ. ರಾಣೇಬೆನ್ನೂರು ತಾಲೂಕಿನ ಈ ಕಂಪನಿಯು ನಮ್ಮ ಜಿಲ್ಲೆಯ ಜನರಿಗೆ ಅನುಕೂಲಕ್ಕಿಂತ ಅನಾನುಕೂಲ ಮಾಡಿರುವುದೇ ಹೆಚ್ಚು. ಈ ಕಾರ್ಖಾನೆಯು ಹೊರಬಿಡುವ ಅಶುದ್ಧ ನೀರು ತುಂಗಭದ್ರಾ ನದಿಗೆ ಸೇರಿ ಜಲಮಾಲಿನ್ಯಕ್ಕೆ ಕಾರಣವಾದರೆ, ಹೊರಬರುವ ಹೊಗೆಯಿಂದ ವಾಯುಮಾಲಿನ್ಯ  ಉಂಟಾಗುತ್ತದೆಂದು ಹಲವು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

ಸಂಗಮೇಶ್ವರ ದೇವಾಲಯ, ಹೊಳೆ ಆನವೇರಿ

ಜಿಲ್ಲಾ ಕೇಂದ್ರದಿಂದ ದೂರ : ೫೨ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ : ೨೦ ಕಿ.ಮೀ

ಶ್ರೀ ಸಂಗಮೇಶ್ವರ ದೇವಸ್ಥಾನ

ಕುಮಧ್ವತಿ ಹಾಗೂ ತುಂಗಭದ್ರಾ ನದಿಗಳ ಸಂಗಮ ಸ್ಥಳವಾದ ಹೊಳೆ ಅನವೇರಿಯು ರಾಣೇಬೆನ್ನೂರಿನ ಆಗ್ನೇಯಕ್ಕೆ ೧೮ ಕಿ.ಮೀ. ದೂರದಲ್ಲಿದ್ದು, ಶಾಸನಗಳಲ್ಲಿ ‘ಆನೆವರಿ’ ಎಂದು ಉಲ್ಲೇಖಗೊಂಡಿದೆ. ಇಲ್ಲಿ ಸಂಗಮೇಶ್ವರ ದೇವಾಲಯವಿದ್ದು, ಗರ್ಭಗೃಹ, ಅಂತರಾಳ ಮತ್ತು ತೆರೆದ ನವರಂಗಗಳಿವೆ. ಗರ್ಭಗೃಹದ ಬಾಗಿಲುವಾಡಗಳಲ್ಲಿ ದ್ವಾರ ಪಾಲಕರ ಉಬ್ಬು ಶಿಲ್ಪಗಳಿದ್ದು ಅರ್ಧ ಕಂಬಗಳನ್ನು ಬಿಡಿಸಲಾಗಿದೆ. ಅಂತರಾಳ ದ್ವಾರದಲ್ಲಿ ಸೂಕ್ಷ್ಮ ಶಿಲ್ಪಗಳಿರುವ ಜಾಲಂದ್ರಗಳಿವೆ. ಇವುಗಳ ತಳದಲ್ಲಿ ದ್ವಾರ ಪಾಲಕರ ಮತ್ತು ಪರಿವಾರ ದೇವತೆಗಳ ಉಬ್ಬು ಶಿಲ್ಪಗಳನ್ನು ಬಿಡಿಸಲಾಗಿದೆ. ನವರಂಗದಲ್ಲಿರುವ ಕಂಬಗಳು ಹೊಯ್ಸಳ ಶೈಲಿಯನ್ನು ನೆನಪಿಸುತ್ತವೆ. ಅಧಿಷ್ಠಾನದ ಮೇಲಿರುವ ಗರ್ಭಗೃಹ ಮತ್ತು ಅಂತರಾಳಗಳ ಹೊರಬಿತ್ತಿಯಲ್ಲಿ ಅರ್ಧ ಕಂಬಗಳ ಮತ್ತು ದೇವ ಕೋಷ್ಟಕಗಳ ರಚನೆಯುಂಟು. ಅಲ್ಲಲ್ಲಿ ಸಂಗೀತ ವಾದ್ಯ ನುಡಿಸುವ ಸ್ತ್ರೀಯರ ಉಬ್ಬು ಶಿಲ್ಪಗಳಿದ್ದು ಬೇಲೂರಿನ ಶಿಲಾಬಾಲಕಿಯರನ್ನು ಹೋಲುತ್ತವೆ. ಇನ್ನೂ ಕೆಲವು ರಚನೆಗಳು ಅಪೂರ್ಣವಾಗಿರುವುದನ್ನು ಗಮನಿಸಬಹುದು. ಈ ದೇವಾಲಯದಲ್ಲಿ ಲಿಂಗ ಮತ್ತು ನಂದಿ ಶಿಲ್ಪಗಳಿವೆ.

 

ಹೊನ್ನತ್ತೆಮ್ಮ ದೇವಾಲಯ, ಹೊನ್ನತ್ತಿ

ಜಿಲ್ಲಾ ಕೇಂದ್ರದಿಂದ ದೂರ : ೪೮ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೪ ಕಿ.ಮೀ.

ಶ್ರೀ ಹೊನ್ನತ್ತೆಮ್ಮ ದೇವಸ್ಥಾನ

ರಾಣೇಬೆನ್ನೂರಿನಿಂದ ೧೪ ಕಿ.ಮೀ. ದೂರದಲ್ಲಿರುವ ಹೊನ್ನತ್ತಿಯು ರಾಷ್ಟ್ರಕೂಟರ ಕಾಲದ್ದಾಗಿದ್ದು, ಶಾಸನಗಳಲ್ಲಿ ಪುನ್ನವತ್ತಿ, ಅಗ್ರಹಾರ ಹೊನ್ನವರ್ತಿ, ಪೊನ್ನವತ್ತಿ, ಹೊನ್ನವತ್ತಿ ಎಂದೆಲ್ಲ ಉಲ್ಲೇಖಗೊಂಡಿದೆ. ಹೊನ್ನತ್ತಿ ಎಂದರೆ ಹೊನ್ನಿನ ಚೆಲುವು ಎಂದು ಅರ್ಥೈಸಬಹುದಾಗಿದೆ. ಈ ದೇವಾಲಯವು ೧೧-೧೨ನೇ ಶತಮಾನದ್ದಾಗಿದ್ದು ಗರ್ಭಗೃಹ, ಅಂತರಾಳ ಮತ್ತು ನವರಂಗಗಳನ್ನು ಒಳಗೊಂಡಿದೆ. ಅಂತರಾಳ ದ್ವಾರದ ಇಕ್ಕೆಲಗಳಲ್ಲಿ ಜಾಲಂದ್ರಗಳಿವೆ. ನವರಂಗದ ಕಂಬಗಳು ಚತುರಸ್ರಾಕಾರದಲ್ಲಿವೆ. ಗರ್ಭಗೃಹದ ಹೊರಬಿತ್ತಿ ಸರಳ ರಚನೆ ಹೊಂದಿದೆ. ಮಧ್ಯಭಾಗದಲ್ಲಿ ಸುತ್ತಲೂ ಪಟ್ಟಿಕೆಯ ಅಲಂಕರಣ ಉಂಟು ಮೇಲ್ಭಾಗದಲ್ಲಿ ಕದಂಬನಾಗರ ಶೈಲಿಯ ಶಿಖರವಿದ್ದು, ಮೇಲಿನ ಅರ್ಧಭಾಗವು ಜೀರ್ಣೋದ್ಧಾರಗೊಂಡಿದೆ.

ದೇವಾಲಯದಲ್ಲಿ ಲಿಂಗ, ವೀರಭದ್ರ, ನಂದಿ ಮತ್ತು ನಾಗಶಿಲ್ಪಗಳಿವೆ.  ಹೊರಗೆ ನಾಗ ಮತ್ತಿತರ ಶಿಲ್ಪಾವಶೇಷಗಳನ್ನು ಕಾಣಬಹುದು. ಈ ದೇವಾಲಯವು ಮೂಲತಃ ಶಿವಾಲಯವಾಗಿದ್ದು, ಇಲ್ಲಿರುವ ಸುಂದರವಾದ ವೀರಭದ್ರನ ಶಿಲ್ಪದಿಂದಾಗಿ ವೀರಭದ್ರೇಶ್ವರ ದೇವಾಲಯ ಎಂದೂ ಸ್ಥಳೀಯರು ಕರೆಯುತ್ತಾರೆ.