ರಾತ್ರೋ ರಾತ್ರೆ,
ಮಾದೇಶ್ವರನ ಬೆಟ್ಟಕ್ಕೆ ಹೊರಟಿದೆ ಜಾತ್ರೆ !
ತಮಟೆಗಳ ಸದ್ದು,
ತನ್ನ ಪಾಡಿಗೆ ತಾನು ತೆಪ್ಪಗೆಯೆ ಮಲಗಿದ್ದ
ಇರುಳಿನೆದೆಗೊದ್ದು,
ಬಯಲಾಟದಟ್ಟಣೆಯ ಹಲಗೆ ಮುರಿಯುವ ತನಕ
ಕುಣಿವ ರಾಕ್ಷಸ ಪಾತ್ರ ;
ಇದರ ತಾಳವೊ ಲಯವೊ, ದೊಪ್ಪನೆಯೆ ಮಸಿಕುಡಿಕೆ
ಬಿದ್ದು ಚೆಲ್ಲಿದ ಚಿತ್ರ !
ರಾತ್ರೋ ರಾತ್ರೆ,
ಮಾದೇಶ್ವರನ ಬೆಟ್ಟಕ್ಕೆ ಹೊರಟಿದೆ ಜಾತ್ರೆ !
ಚಿಕ್ಕೆ ಚೆಲ್ಲಾಪಿಲ್ಲಿ, ಕೋಳಿ ಕೆದರಿದ ಕಾಳು.
ಕತ್ತಲಿನ ತಿಪ್ಪೆಯ ರಾಶಿಯಂಚಿನಲಿ
ತಿಂದೆಸೆದ ಮಾವಿನ ವಾಟೆ ಆ ಚಂದ್ರ !
ಮೋಂಬತ್ತಿ ಬೆಳಕಿನ ನೆಲದಿ, ಗಿಡಮರದ ನೆರಳು
ಈ ನಡುವೆ ತಲೆಗೆದರಿ ಹೊರಟಿಹುದು ಜಾತ್ರೆಯ ಮರುಳು,

ರಾತ್ರೋ ರಾತ್ರೆ,
ಮಾದೇಶ್ವರನ ಬೆಟ್ಟಕ್ಕೆ ಹೊರಟಿದೆ ಜಾತ್ರೆ !
ಇದ್ದಕಿದ್ದಂತೆ ಇದು ಎದ್ದುದೆಲ್ಲಿಂದ !
ಎಲ್ಲಿತ್ತೊ, ಈ ಕೊಪ್ಪಲಿನ ರೊಪ್ಪದಲಿ
ಹುದುಗಿದ್ದ ಭಕ್ತಿಯ ಭೂತ !
ಸದ್ಯ, ಇದು ತೊಲಗಿದರೆ ಸಾಕು, ಈ ಕಿರುಚು, ಕುಣಿತ,
ಎದೆಯಿರಿತ,
ತಾಳಬಲ್ಲನು ಅವನು ಆ ಮಾದೇಶ್ವರ;
ನಾವು ನರಮನುಷ್ಯರು, ಸದ್ಯ, ಇದು ಇಲ್ಲಿಂದ ತೊಲಗಿ
ಅಲ್ಲಾಗಲಿ ಸಮರ್ಪಿತ !