ನಮ್ಮ ದೇಶದಲ್ಲಿ ಕ್ರಿಕೆಟ್ ಆಡುವವರ ಸಂಖ್ಯೆ ಕಡಿಮೆಯೇನಲ್ಲ. ಪ್ರತಿಯೊಂದು ಶಾಲೆ, ಕಾಲೇಜು, ಬ್ಯಾಂಕು, ಕಾರ್ಖಾನೆ, ಕಛೇರಿಯಲ್ಲೂ ಪ್ರತಿಯೊಂದು ಊರು, ಬಡಾವಣೆಯಲ್ಲೂ ಖಾಸಗಿ ಟೀಮುಗಳಿರುತ್ತವೆ. ಪರದೇಶಗಳಿಂದ ಟೀಮುಗಳು ಬಂದಾಗ ಜನ ಜಾತ್ರೆಗೆ ನೆರೆದ ಹಾಗೆ ನೆರೆಯುತ್ತಾರೆ. ನೋಡುವುದಕ್ಕೆ ಹೋಗಲಾಗದವರು ಮನೆಯಲ್ಲೇ ಕುರ್ಚಿಗಳಿಗೆ ಅಂಟಿಕೊಂಡು ಕುಳಿತು ರೇಡಿಯೋದಲ್ಲಿ ಬರುವ ವೀಕ್ಷಕ ವಿವರಣೆಯನ್ನು ಕೇಳುತ್ತಾರೆ. ಹೋಟೆಲುಗಳ ಮುಂದೆ, ಅಂಗಡಿಗಳ ಮುಂದೆ ಗುಂಪುಗೂಡಿ ಗಂಟೆಗಟ್ಟಲೆ ನಿಂತು ಕಿವಿಗೊಟ್ಟು ಕೇಳುತ್ತಾರೆ. ನಮ್ಮ ಟೀಮು ಬೇರೆ ದೇಶಕ್ಕೆ ಹೋದಾಗ ಇಷ್ಟೆ ಆಸಕ್ತಿ, ಉತ್ಸಾಹ, ಕಾತರ.

ನಮ್ಮ ಜನ ಕ್ರೀಡಾಪ್ರಿಯರು ಎನ್ನುವುದಕ್ಕೆ ಕ್ರಿಕೆಟ್ ಒಂದೇ ನಿದರ್ಶನವಲ್ಲ. ಹಾಕಿ, ಫುಟ್‌ಬಾಲ್, ಟೆನ್ನಿಸ್, ಬ್ಯಾಂಡ್ ಮಿಂಟನ್ ಮೊದಲಾದ ಆಟಗಳಲ್ಲೂ ನಮಗೆ ಇಷ್ಟೇ ಆಸಕ್ತಿ ಇದೆ. ಈ ಆಟಗಳ ಅನೇಕ ಪಟುಗಳು ಜಗದ್ವಿಖ್ಯಾತರಾಗಿದ್ದಾರೆ. ಇಂತ ನೂರಾರು ಜನರಲ್ಲಿ ಅತ್ಯಂತ ಹಿರಿಯ ವ್ಯಕ್ತಿ ಎಂದರೆ ರಾನ್‌ಜಿ, ಕಾಲಕ್ರಮದಲ್ಲಿ ಮೊದಲನೆಯವರು ಮಾತ್ರವಲ್ಲ, ಎಲ್ಲ ರೀತಿಯಲ್ಲೂ ಅಗ್ರಗಣ್ಯರು. ರಾನ್‌ಜಿ ಎಂಬ ಶಬ್ದ ಕೇಳಿದರೆ ಸಾಕು, ಜನ ಮಂತ್ರಮುಗ್ಧರಾಗುವಂಥ ಖ್ಯಾತಿಯನ್ನು ಪಡೆದ ಅವರು ನಮ್ಮ ಕಾಲಕ್ಕೆ ಹಲವು ಮೆಚ್ಚಿಕೆಯ ಕಥೆಗಳ ಕೇಂದ್ರವಾಗಿದ್ದಾರೆ. ಕಳೆದ ನೂರು ವರ್ಷಗಳಲ್ಲಿ ಭಾರತದಲ್ಲಿ ಅನೇಕರು ತಮಗೆ ಹೆಸರು ತಂದುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ತಮ್ಮ ದೇಶಕ್ಕೆ ಗೌರವವನ್ನು ಸಂಪಾದಿಸಬೇಕು ಎಂದು ಶ್ರಮಿಸಿದ್ದಾರೆ. ಹೀಗೆ ವಿಶಿಷ್ಟ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಕಣ್ಮರೆಯಾಗಿರುವವರ ಪಂಕ್ತಿಗೆ ರಾನ್‌ಜಿ ಸೇರಿದ್ದಾರೆ.

ಇವರೇ ಮೊದಲನೆಯವರು

ಇವತ್ತಿನ ದಿನ, ಕ್ರಿಕೆಟ್‌ನಲ್ಲಿ ದೊಡ್ಡ ಆಟಗಾರನಾಗಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸಬೇಕು ಎಂಬ ದೊಡ್ಡ ಆಸೆ ನಮ್ಮ ಯುವಕರಲ್ಲಿ ಅನೇಕರಿಗಿದೆ. ಅವರು ನಮ್ಮ ದೇಶದಲ್ಲೆ ಅಭ್ಯಾಸ ಮಾಡಿ ತಮ್ಮ ಆಸೆಯನ್ನು ಕೈಗೂಡಿಸಿಕೊಳ್ಳುವುದಕ್ಕೆ ಇಲ್ಲೇ ಬೇಕಾದಷ್ಟು ಅವಕಾಶಗಳಿವೆ. ಇಂಗ್ಲೆಂಡ್, ಆಸ್ಟ್ರೇಲಿಯ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಟೀಮುಗಳು ಇಲ್ಲಿಗೆ ಬರುತ್ತೆ. ಅವುಗಳ ಮೇಲೆ ಟೆಸ್ಟ್ ಪಂದ್ಯಗಳಲ್ಲಿ, ಇಲ್ಲವೆ ಇತರ ಪಂದ್ಯಗಳಲ್ಲಿ ಆಡಬಹುದು. ತುಂಬ ಒಳ್ಳೆಯ ಆಟಗಾರನಾದರೆ ಆ ದೇಶಗಳಿಗೆ ಹೋಗುವ ನಮ್ಮ ಟೀಮುಗಳಲ್ಲಿ ಹೋಗಬಹುದು. ಇಂಥ ಅವಕಾಶಗಳಿಗೆ ಈಗ ಸುಮಾರು ನಲವತ್ತು ವರ್ಷಗಳಿಂದ ಮಾತ್ರ ಸಾಧ್ಯವಾಗಿದೆ. ಅದಕ್ಕೆ ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬೇಕು. ವಿಶ್ವಮಾನ್ಯತೆಯನ್ನು ಪಡೆಯಬೇಕು ಎನ್ನುವವರು ಇಲ್ಲಿಂದ ಇಂಗ್ಲೆಂಡಿಗೆ ಹೋಗುತ್ತಿದ್ದರು. ಹೀಗೆ ಹೋಗಿ ಹೆಸರು ಮಾಡಿದ ಭಾರತೀಯರಲ್ಲಿ ರಾನ್‌ಜಿ ಮೊದಲನೆಯವರು.

ದೊಡ್ಡ ಕ್ರೀಡೆಯ ಸಾರ್ವಭೌಮ

ನಮ್ಮ ದೇಶದಲ್ಲಿ ಪ್ರತಿ ವರ್ಷವೂ ಅನೇಕ ಕ್ರಿಕೆಟ್ ಪಂದ್ಯಗಳೂ ನಡೆಯುತ್ತವೆ-ಕೂಚ್‌ಬಿಹಾರ್ ಪಾರಿತೋಷಕದ ಪಂದ್ಯಗಳು ರೋಹಿನ್‌ಟನ್-ಬಾರಿಯ ಪಾರಿತೋಷಕದ ಪಂದ್ಯಗಳು, ದುಲೀಪ್ ಪಾರಿತೋಷಕದ ಪಂದ್ಯಗಳು, ರಾನ್‌ಜಿ ಪಾರಿತೋಷಕದ ಪಂದ್ಯಗಳು-ಇತ್ಯಾದಿಯಾಗಿ. ಇವುಗಳಲ್ಲೆಲ್ಲ ಅತ್ಯಂತ ಮುಖ್ಯವಾದದ್ದು ರಾನ್‌ಜಿ ಪಾರಿತೋಷಕದ ಪಂದ್ಯಗಳ ಸರಣೆ. ಈ ಪಂದ್ಯಗಳು ಭಾರತದ ವಿವಿಧ ರಾಜ್ಯಗಳ ಮಧ್ಯೆ ನಡೆಯುತ್ತವೆ. ಈ ಪಾರಿತೋಷಕವನ್ನು ನಮ್ಮ ದೇಶದ ಪ್ರಥಮ ಮಹಾನ್ ಕ್ರಿಕೆಟ್ ಆಟಗಾರನ ಜ್ಞಾಪಕಾರ್ಥವಾಗಿ ಇಡಲಾಗಿದೆ. ಅವರ ಪೂರ್ಣ ಹೆಸರು ಕೆ.ಎಸ್.ರಣಜಿತ್‌ಸಿನ್ಹಜಿ. ಆದರೆ ಎಲ್ಲರೂ ಅವರನ್ನು ಪ್ರೀತಿಯಿಂದ ರಾನ್‌ಜಿ ಎಂದು ಕರೆಯುತ್ತಿದ್ದರು. ಹತ್ತಿರದ ಸ್ನೇಹಿತರಿಗೆ, ಪರಿಚಯವಿಲ್ಲದ ದೂರದ ಪ್ರೇಕ್ಷಕರಿಗೆ, ಎಲ್ಲರಿಗೂ ಅಚ್ಚುಮೆಚ್ಚಿನ ‘ರಾನ್‌ಜಿ’ ಆಗಿದ್ದರು. ಈಗಲೂ ಈ ಅಕ್ಕರೆಯ ಚಿಕ್ಕ ಹೆಸರೇ ರೂಢಿಯಲ್ಲಿರುವುದು.

ನಮ್ಮ ದೇಶ ಗಣರಾಜ್ಯವಾಗುವುದಕ್ಕೆ ಮೊದಲು, ಬ್ರಿಟಿಷರ ಕಾಲದಲ್ಲಿ ಇದ್ದ ನೂರಾರು ರಾಜ್ಯಗಳಲ್ಲಿ ನವಾನಗರ್ ಎನ್ನುವುದು ಒಂದು, ನವಾನಗರ್ ಗುಜರಾತ್ ಪ್ರಾಂತದ ಕಾಥಿಯಾವಾಡ ವಿಭಾಗದಲ್ಲಿದ್ದ ಒಂದು ಚಿಕ್ಕ ರಾಜ್ಯ. ಈ ರಾಜ್ಯದಲ್ಲಿ ಸಾರೋದಾರ್ ಎನ್ನುವ ಒಂದು ಸಣ್ಣ ಹಳ್ಳಿ. ನವಾನಗರ್ ರಾಜಮನೆತನದ ಒಂದು ಶಾಖೆ ಈ ಹಳ್ಳಿಯಲ್ಲಿ ನೆಲೆಸಿತ್ತು. ಈ ಶಾಖೆಯಲ್ಲಿ ೧೮೭೨ರಲ್ಲಿ ರಣಜಿತ್‌ಸಿನ್ಹಜಿಯ ಜನನವಾಯಿತು.

ರಣಜಿತ್‌ಸಿನ್ಹಜಿಯ ಬಾಲ್ಯ ಸಾರೋದಾರ್‌ನಲ್ಲಿ ಕಳೆಯಿತು. ಆಮೇಲೆ ವಿದ್ಯಾಭ್ಯಾಸಕ್ಕಾಗಿ ರಾಜಕೋಟ್ ಪಟ್ಟಣಕ್ಕೆ ಹೋದನು. ಅಲ್ಲಿ ರಾಜಕುಮಾರ್ ಕಾಲೇಜು ಎನ್ನುವ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವಾಗಲೇ ರಾನ್‌ಜಿ ಕ್ರಿಕೆಟ್‌ನ ಅಭ್ಯಾಸವನ್ನೂ ಪ್ರಾರಂಭಿಸಿದ. ಕಾಲಕ್ರಮದಲ್ಲಿ ಆ ಆಟವನ್ನು ರೂಢಿಸಿಕೊಂಡು, ಮುಂದೆ ಸಮಯದಲ್ಲಿ ಉಪಯುಕ್ತ ಬೋಲರ್ ಆದರೂ, ರಾನ್‌ಜಿ ಬ್ಯಾಟಿಂಗ್ ಮೇಲೆ ಪೂರ್ಣ ಪ್ರಭುತ್ವವನ್ನು ಸ್ಥಾಪಿಸಿಕೊಂಡ. ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿದ ರಾನ್‌ಜಿ, ಆಮೇಲೆ ಒಂದು ಪುಟ್ಟ ಸಂಸ್ಥಾನದ ಸಾಮಂತನಾದ, ಅಲ್ಲದೆ ಮಹಾಕ್ರೀಡೆಯೊಂದರ ಸಾರ್ವಭೌಮನಾದ.

ಶ್ರದ್ಧೆಯ ಅಭ್ಯಾಸ

ರಾನ್‌ಜಿ ಹೆಚ್ಚಿನ ಶಿಕ್ಷಣಗಾಗಿ ೧೮೯೨ರಲ್ಲಿ ಇಂಗ್ಲೆಂಡಿಗೆ ಹಡಗು ಹತ್ತಿ ಪ್ರಯಾಣ ಮಾಡಿದ. ಆಗ ಅವನಿಗೆ ಇಪ್ಪತ್ತು ವರ್ಷ ವಯಸ್ಸು ಇಂಗ್ಲೆಂಡಿನಲ್ಲಿ. ಅಲ್ಲಿಯ ನಿಬಂಧನೆಗಳ ಪ್ರಕಾರ, ಒಂದು ವರ್ಷ ಮಾಲ್‌ವೆರ್ನ್ ಕಾಲೇಜ್ ಎಂಬ ಶಾಲೆಯಲ್ಲಿ ಓದಿದ. ಮುಂದಿನ ವರ್ಷ ಕೇಂಬ್ರಿಜ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ. ರಾಜ್‌ಕೋಟ್‌ನಲ್ಲಿರುವಾಗಲೇ ಬ್ಯಾಟಿಂಗ್ ಕಲೆಯಲ್ಲಿ ಪರಿಣತನಾಗಬೇಕೆಂದು ನಿರ್ಧರಿಸಿದ್ದ ರಾನ್‌ಜಿ ಕೇಂಬ್ರಿಜ್ ವಿದ್ಯಾಭ್ಯಾಸ ಮುಗಿಯುವ ಹೊತ್ತಿಗೇ ಬ್ಯಾಟಿಂಗ್‌ನಲ್ಲಿ ನಿಪುಣನಾದ.

ಕೆಲವರಿಗೆ ಯಾವುದಾದರೊಂದು ಕಲೆಯಲ್ಲಿ ಸಹಜ ಶಕ್ತಿ ಇರುತ್ತದೆ. ಆದರೆ ಆ ಶಕ್ತಿ ಬೆಳೆಯಬೇಕಾದರೆ ಅಭ್ಯಾಸ ಮಾಡಬೇಕು. ಕಷ್ಟಪಟ್ಟು ಶಿಕ್ಷಣವನ್ನು ಪಡೆಯಬೇಕು. ಇಲ್ಲದಿದ್ದರೆ ಆ ಶಕ್ತಿ ಬರಬರುತ್ತ ಕ್ಷೀಣವಾಗಿ ನಶಿಸಿ ಹೋಗುತ್ತದೆ. ರಾನ್‌ಜಿ ಹುಟ್ಟು ಕ್ರಿಕೆಟ್ ಆಟಗಾರ. ಆದರೆ ಶ್ರದ್ಧೆಯಿಂದ ಅಭ್ಯಾಸ ಮಾಡುವುದರ ಅಗತ್ಯವನ್ನು ಚೆನ್ನಾಗಿ ತಿಳಿದುಕೊಂಡಿದ್ದ. ಆದುದರಿಂದ ಕೇಂಬ್ರಿಜ್‌ನಲ್ಲಿರವಾಗಲೂ ಆಮೇಲೆ ಕೆಲವು ವರ್ಷಗಳೂ ನಿಷ್ಠ್ಠೆಯಿಂದ, ಶ್ರಮವಹಿಸಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ.

ಇಂಗ್ಲೆಂಡಿನಲ್ಲಿ ಕ್ರಿಕೆಟನ್ನು ಬೇಸಿಗೆಯಲ್ಲಿ ಜೂನ್ ತಿಂಗಳಿಂದ ಸೆಪ್ಟಂಬರ್‌ವರೆಗೂ ಆಡುತ್ತಾರೆ. ಅಷ್ಟುಹೊತ್ತಿಗೆ ಹಿಮಗಾಲ ಮುಗಿದು, ಹಿತವಾದ ಬಿಸಿಲು ಬೆಳಗುತ್ತಿರುತ್ತದೆ. ಆದಷ್ಟು ಹೊತ್ತು ಬಿಸಿಲು ಕಾಯಿಸಿಕೊಳ್ಳುವುದಕ್ಕೆ ಜನ ಹಾತೊರೆಯುತ್ತಾರೆ. ಕ್ರಿಕೆಟ್ ಇದಕ್ಕೆ ಅನುಕೂಲವಾಗಿದೆ.

ಕ್ರಿಕೆಟ್ ಆಟದ ಬೇಸಿಗೆ ಪ್ರಾರಂಭವಾಗುವುದಕ್ಕೆ ಮುಂಚೆಯೇ, ಅಂದರೆ ವಸಂತ ಕಾಲದಲ್ಲಿಯೆ, ರಾನ್‌ಜಿ ಅತ್ಯಂತ ಶ್ರೇಷ್ಠರಾದ ಬೋಲರುಗಳನ್ನು ಸಂಬಳಕ್ಕೆ ಗೊತ್ತು ಮಾಡಿಕೊಂಡು ಪ್ರತಿ ದಿನವೂ ಗಂಟೆಗಟ್ಟಲೆ ಬ್ಯಾಟ್ ಮಾಡುತ್ತಿದ್ದ ರಾನ್‌ಜಿಗೆ ಕೆಲವು ಗುಣಗಳು ಸ್ವಾಭಾವಿಕವಾಗಿ ಬಂದಿದವು. ಎಂತ ಬಾಲ್ ಅನ್ನು ಹೇಗೆ ಆಡಬೇಕು ಎಂದು ತಕ್ಷಣ ನಿರ್ಧರಿಸುವ ಬುದ್ಧಿಶಕ್ತಿ. ಲಘುವಾದ ಬಲವಾದ ಮೈಕಟ್ಟು ತೀಕ್ಷ್ಣವಾದ ದೃಷ್ಟಿ – ಇಂಥ ಗುಣಗಳಿದ್ದುದರಿಂದ  ರಾನ್‌ಜಿ ಮಿಂಚಿನಂತೆ ಆಡುತ್ತಿದ್ದ ಸತತವಾಗಿ ಅಭ್ಯಾಸ ಮಾಡಿ, ಈ ಸಹಜ ಶಕ್ತಿಗಳನ್ನು ಸಿದ್ಧಿಸಿಕೊಂಡು, ಪ್ರವೀಣನಾದ, ಚುರುಕು ದೃಷ್ಟಿ, ಚೆಂಡನ್ನು ಯಾವ ರೀತಿ ಆಡಬೇಕು ಎಂದು ತಕ್ಷಣ ನಿರ್ಧರಿಸುವ ಬುದ್ಧಿಶಕ್ತಿ. ಉತ್ತಮ ಪಾದಕ್ರಿಯೆ, ಕೈಮಣಿಕಟ್ಟಿನ ಆಟ ಇವು ರಾನ್‌ಜಿಯ ಆಟದ ಆಕರ್ಷಕ ಗುಣಗಳು.

ಇಂಗ್ಲಿಷರನ್ನು ಬೆರಗುಗೊಳಿಸಿದ ಕಂದುಬಣ್ಣದ ಆಟಗಾರ

ಆ ಕಾಲದಲ್ಲಿ ಬ್ರಿಟಿಷರು ತಿಳಿದಿದ್ದಕ್ಕಿಂತಲೂ ಹೆಚ್ಚು ಜನ ಭಾರತದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆದರೆ ದೊಡ್ಡ ಪಂದ್ಯಗಳಿಗೆ ಅವಕಾಶ ಇರಲಿಲ್ಲ. ಅಗತ್ಯವಾದ ತರಬೇತಿ ಕೇಂದ್ರಗಳಿರಲಿಲ್ಲ. ಇಂಗ್ಲೆಂಡಿಗೆ ಹೋದ ಮೇಲೆಯೇ ರಾನ್‌ಜಿಗೆ ಅವಕಾಶವೂ ತರಬೇತಿಯೂ ಸಿಕ್ಕಿದ್ದು. ಅವನು ಆ ದೇಶದಲ್ಲಿ ಕ್ರಿಕೆಟ್ ಆಡುವುದಕ್ಕೆ ಪ್ರಾರಂಭಿಸಿದ ಕಾಲದಲ್ಲಿ ಅವನಿಗೆ ಒಂದು ಅನುಕೂಲವಿತ್ತು. ಕಂದು ಬಣ್ಣದ ಭಾರತೀಯನೊಬ್ಬ ಕ್ರಿಕೆಟ್ ಆಟಗಾರ ಎಂಬ ಕಲ್ಪನೆ ಬರುವುದೇ ಅಲ್ಲಿಯ ಜನರಿಗೆ ತೀರ ಕಷ್ಟವಾಗಿತ್ತು. ಶಾಲೆಯಲ್ಲಿ ಮತ್ತು ವಿಶ್ವವಿದ್ಯಾಲಯದಲ್ಲಿ ಸಹಪಾಠಿಗಳ ವರ್ತನೆ ನಿಷ್ಪಕ್ಷಪಾತ್ರವಾಗಿಯಾಗಲಿ ನಯವಾಗಿಯಾಗಲಿ ಇರಲಿಲ್ಲ, ರಾನ್‌ಜಿ ಇದೆಲ್ಲ ಪ್ರತಿಕೂಲಗಳನ್ನು ಎದುರಿಸಿ ಬಹುಬೇಗ ಜನರ ಮೆಚ್ಚಿಗೆಯನ್ನು ಪಡೆದ. ಅನೇಕ ಆಂಗ್ಲರು ಇವನಿಗೆ ಪ್ರಾಣಪ್ರ್ರಿಯ ಮಿತ್ರರಾದರು. ಅಲ್ಲಿಯ ಕ್ರಿಕೆಟ್ ಪ್ರಪಂಚಕ್ಕೆ ರಾನ್‌ಜಿ ಅಚ್ಚುಮೆಚ್ಚಾದ.

ರಾನ್‌ಜಿ ಇಂಗ್ಲೆಂಡಿನಲ್ಲಿ ಪ್ರಥಮ ದರ್ಜೆಯ ಕ್ರಿಕೆಟ್ ಆಡಿದರು. ಅದು ೧೮೯೩ರಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಮುಂದೆ ೧೯೧೨ರವರೆಗೂ ಹೆಚ್ಚು ಕಡಿಮೆ ಪ್ರತಿವರ್ಷವೂ ಅಲ್ಲಿ ಕ್ರಿಕೆಟ್ ಆಡುತ್ತಿದ್ದ ಎಂಟು ವರ್ಷಗಳ ವಿರಾಮದ ನಂತರ ಕಡೆಯ ಸಲ ಆಡಿದ್ದು ೧೯೨೦ರಲ್ಲಿ.

ರಾನ್‌ಜಿಗೆ ಕ್ರಿಕೆಟ್‌ನಲ್ಲಿ ಅಪಾರ ಪ್ರೀತಿ, ಆಸಕ್ತಿ ಇದ್ದವು. ಆಟಗಾರರ ಅಗ್ರಶ್ರೇಣಿಯಲ್ಲಿ ಇರಬೇಕೆಂಬ ಹೆಬ್ಬಯಕೆ ಇತ್ತು. ಅಲ್ಲಿಯ ಜನತೆಗಂತೂ ರಾನ್‌ಜಿ ಪ್ರಿಯವಾಗಿಬಿಟ್ಟಿದ್ದ. ಈ ಕಾರಣಗಳಿಂದ ರಾನ್‌ಜಿ ಇಂಗ್ಲೆಂಡಿನಲ್ಲಿ ಮನೆ ಮಾಡಿ ಕೊಂಡಿದ್ದ. ಚಳಿಗಾಲದಲ್ಲಿ ನಾಲ್ಕು ತಿಂಗಳು ಭಾರತಕ್ಕೆ ಬಂದು ತೌರೂರಾದ ಸಾರೋದಾರ್‌ನಲ್ಲಿ ಕಳೆಯುತ್ತಿದ್ದ. ಹಣಕ್ಕೆ ಯಾವ ಕೊರತೆಯೂ ಇರಲಿಲ್ಲ. ಯಾವ ತರಹದ ಚಿಂತೆಯೂ ಇರಲಿಲ್ಲ. ಆದ್ದರಿಂದ ಕ್ರಿಕೆಟ್‌ಗೆ ತನ್ನ ಪೂರ್ಣ ಗಮನವನ್ನು ಕೊಡುವುದು ಸಾಧ್ಯವಾಗಿತ್ತು. ರಾನ್‌ಜಿಯ ಯೌವನ ಹೀಗೆ ಕಳೆಯಿತು.

ನವಾನಗರದ ಮಹಾರಾಜ

೧೯೦೭ರಲ್ಲಿ ರಾನ್‌ಜಿಯ ಜೀವನದಲ್ಲಿ ದೊಡ್ಡ ಘಟನೆಯಾಯಿತು. ಆ ವರ್ಷ ನವಾನಗರದ ಮಹಾರಾಜನಾಗಿ ಅಧಿಕಾರವನ್ನು ವಹಿಸಿಕೊಂಡ. ನವಾನಗರದ ಮಹಾರಾಜನಿಗೆ ಜಾಮ್‌ಸಾಹೇಬ್ ಎಂಬ ಬಿರುದು. ರಾನ್‌ಜಿ ನವಾನಗರದ ಜಾಮ್‌ಸಾಹೇಬನಾದ.

ಅಧಿಕಾರ ಬಂದಿತು. ಅದರ ಜೊತೆಗೆ ಭಾರವೂ ಹೆಗಲ ಮೇಲೆ ಬಿತ್ತು. ಆದರೆ ಇದು ಯಾವುದೂ ತಮ್ಮ ಕ್ರಿಕೆಟ್‌ಗೆ ಅಡಚಣೆಯಾಗುವುದಕ್ಕೆ ರಾನ್‌ಜಿ ಬಿಡಲಿಲ್ಲ. ಬೇಸಿಗೆ ಬಂದಾಗಲೆಲ್ಲ ಎಂದಿನಂತೆ ಇಂಗ್ಲೆಂಡಿಗೆ ಹೋಗಿ ಆಡುತ್ತಿದ್ದರು. ಚಳಿಗಾಲದಲ್ಲಿ ಭಾರತಕ್ಕೆ ಬಂದು ತಮ್ಮ ರಾಜ್ಯದ ಸ್ಥಿತಿ-ಗತಿಗಳನ್ನು ಪ್ರತ್ಯಕ್ಷವಾಗಿ ವಿಚಾರಿಸಿಕೊಳ್ಳುತ್ತಿದ್ದರು.

ರಾನ್‌ಜಿ ತಮ್ಮ ಯೌವನವನ್ನು ಬರಿ ಕ್ರಿಕೆಟ್ ಆಡುವುದರಲ್ಲೇ ಕಳೆದರು ಎಂದು ಹೇಳಿದರೆ ತಪ್ಪಾಗುತ್ತದೆ. ರಾಜಕುಮಾರ ರಾನ್‌ಜಿ ಜನಸಾಮಾನ್ಯರ ಪರಿಚಯವನ್ನು ಮಾಡಿಕೊಳ್ಳುವುದಕ್ಕೆ ಕ್ರಿಕೆಟ್ ಒಂದು ಸಾಧನವಾಯಿತು. ಕ್ರಿಕೆಟ್ ಮೂಲಕ ಬೇರೆ ಬೇರೆ ದೇಶಗಳ ಸಾಧಾರಣ ಜನರ ಮತ್ತು ಗಣ್ಯ ವ್ಯಕ್ತಿಗಳ ಸ್ನೇಹವಾಯಿತು. ಇದರಿಂದಾಗಿ ಸಾಮಾನ್ಯರ ಆಸೆ, ಆಕಾಂಕ್ಷೆ ಸಮಸ್ಯೆಗಳನ್ನೂ ಬೇರೆ ಬೇರೆ ರಾಷ್ಟ್ರಗಳ, ಸರ್ಕಾರಗಳ ರೀತಿ ನೀತಿಗಳನ್ನೂ ತಿಳಿದುಕೊಳ್ಳುವುದು ಸಾಧ್ಯವಾಯಿತು. ಹೀಗೆ ರಾನ್‌ಜಿ ವ್ಯವಹಾರ ಜ್ಞಾನವನ್ನು ಬೆಳೆಸಿಕೊಂಡರು.

೧೯೧೪ರ ಆಗಸ್ಟ್ ತಿಂಗಳಲ್ಲಿ ಮೊದಲನೆಯ ಮಹಾಯುದ್ಧ ಪ್ರಾರಂಭವಾಯಿತು. ಮುಂದಿನ ಐದು ವರ್ಷ ಇಂಗ್ಲೆಂಡ್‌ನಲ್ಲಿ ಕೌಂಟಿ (ಕೌಂಟಿ ಎಂದರೆ ನಮ್ಮ ದೇಶದ ಜಿಲ್ಲೆಯಂತೆ) ಕ್ರಿಕೆಟ್ ಪಂದ್ಯಗಳೂ ಟೆಸ್ಟ್ ಪಂದ್ಯಗಳೂ ನಿಂತು ಹೋದವು. ನಮ್ಮ ದೇಶದಿಂದಲೂ ಸೈನ್ಯಗಳು ಹೋಗಿ ಹೋರಾಟದಲ್ಲಿ ಭಾಗವಹಿಸಿದವು. ರಾನ್‌ಜಿ ಕಸುಬಿನಲ್ಲಿ  ಸೈನಿಕರಲ್ಲ. ಆದರೆ ತಾವೇ ಮುಂದೆ ಬಂದು ಯುದ್ಧರಂಗದಲ್ಲಿ ಸೇವೆ ಸಲ್ಲಿಸಿದರು.

ಮೊದಲನೆಯ ಮಹಾಯುದ್ದ ಭೀಕರವಾಗಿತ್ತು. ಇಂಥ ಯುದ್ಧದ ಮತ್ತೆ ಆಗಕೂಡದು; ಅಲ್ಲದೆ, ಮಾನವನ ಕ್ಷೇಮಕ್ಕೆ, ಮಾನವನ ಏಳಿಗೆಗೆ ಶಾಂತಿ ಅತ್ಯಗತ್ಯ ಎಂಬ ತತ್ವವನ್ನು ಯುದ್ಧದಲ್ಲಿ ನೆರೆದಿದ್ದ ರಾಷ್ಟ್ರಗಳ ನಾಯಕರು ಮನಗಂಡರು. ಆದ್ದರಿಂದ ಅವರೆಲ್ಲ ಸೇರಿ ‘ಲೀಗ್ ಆಫ್ ನೇಷನ್ಸ್’ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಿದರು. ವಿಶ್ವಶಾಂತಿಯನ್ನು ಕಾಪಾಡಿಸಿಕೊಂಡು ಬರುವುದು ಈ ಸಂಸ್ಥೆಯ ಜವಾಬ್ದಾರಿಯಾಗಿತ್ತು. ಈ ಸಂಸ್ಥೆಯ ಕಾರ್ಯಕಲಾಪಗಳಲ್ಲಿ ಭಾರತದ ಪ್ರತಿನಿಧಿಗಳೂ ಭಾಗವಹಿಸುತ್ತಿದ್ದರು. ಆದರೆ ೧೯೨೦ನೇ ಇಸವಿಯ ಸಭೆಯಲ್ಲಿ ಭಾರತದ ದೇಶೀಯ ಸಂಸ್ಥಾನಗಳನ್ನು ಪ್ರತಿನಿಧಿಸುವ ಗೌರವ ರಾನ್‌ಜಿಯದಾಗಿತ್ತು.

ರಾಜ ಮಹಾರಾಜರ ಸಂಘದಲ್ಲಿ

ಹದಿನೆಂಟನೆಯ ಶತಮಾನದಿಂದ ನಮ್ಮ ದೇಶದಲ್ಲಿ ಬ್ರಿಟಿಷರ ಆಡಳಿತದ ವಿರುದ್ಧವಾಗಿ ಒಂದಲ್ಲ ಒಂದು ರೀತಿಯ ಚಳವಳಿ ನಡೆಯುತ್ತಲೇ ಇದ್ದಿತು. ಮೊದಲನೆಯ ಮಹಾಯುದ್ಧ ಮುಗಿದ ಮೇಲೆ ಚಳವಳಿಗಳು ಇನ್ನೂ ತೀವ್ರವಾದವು. ಮಹಾತ್ಮಾ ಗಾಂಧಿಯವರು ಜನತೆಯನ್ನು ಒಟ್ಟು ಗೂಡಿಸಿ, ಹುರಿದುಂಬಿಸಿದರು. ರಾನ ಒಗ್ಗಟ್ಟಿನಿಂದಲೂ ದೃಢ ನಿಶ್ಚಯದಿಂದಲೂ ಸತ್ಯಾಗ್ರಹಗಳಲ್ಲಿ ಲಕ್ಷಗಟ್ಟಲೆ ಭಾಗವಹಿಸಿದರು. ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡಬೇಕಾದುದು ಅನಿವಾರ್ಯ ಎನ್ನುವುದು ಬ್ರಿಟಿಷ್ ಸರ್ಕಾರಕ್ಕೂ ಮನವರಿಕೆಯಾಯಿತು.

ಭಾರತವು ಗಣರಾಜ್ಯವಾಗುವುದಕ್ಕೆ ಮುಂಚೆ ಇಲ್ಲಿ ನೂರಾರು ದೊಡ್ಡ-ಸಣ್ಣ ಸಂಸ್ಥಾನಗಳಿದ್ದವು ಎಂದು ಹಿಂದೆಯೇ ಹೇಳಿದೆ. ಈ ಸಂಸ್ಥಾನಗಳ ಅರಸರು ಅನೇಕ ವಿಧದಲ್ಲಿ ಭ್ರಿಟಿಷ್ ಸರ್ಕಾರಕ್ಕೆ ಸಹಾಯ ಮಾಡಿದ್ದರು. ಆದ್ದರಿಂದ ಬ್ರಿಟಿಷರು ಈ ಸಂಸ್ಥಾನಿಕರ ವಿಚಾರದಲ್ಲಿ ತಮ್ಮ ಹೊಣೆಗಾರಿಕೆ ಇದೆ ಎಂದು ನಂಬಿದ್ದರು. ಭಾರತಕ್ಕೆ ಎಷ್ಟು ಪ್ರಮಾಣದ ಸ್ವತಂತ್ರ್ಯವನ್ನು ಕೊಡಬೇಕು? ಯಾವಾಗ ಕೊಡಬೇಕು? ಸ್ವತಂತ್ರ ಭಾರತದಲ್ಲಿ ದೇಶೀಯ ಸಂಸ್ಥಾನಗಳ ಸ್ಥಾನ ಏನಿರಬೇಕು? ರಾಜ ಮಹಾರಾಜರುಗಳ ಸ್ಥಾನಮಾನ, ಹಕ್ಕು ಬಾಧ್ಯತೆಗಳು ಏನಿರಬೇಕು? ಇವೇ ಮೊದಲಾದ ದೊಡ್ಡ ಪ್ರಶ್ನೆಗಳನ್ನು ಇತ್ಯರ್ಥ ಮಾಡಬೇಕಾಗಿತ್ತು. ಇಂಥ ಸಂದಿಗ್ಧ ಸಮಯದಲ್ಲಿ ಅರಸರು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ತಮ್ಮದೇ ಒಂದು ಸಂಘವನ್ನು ರಚಿಸಿಕೊಂಡರು. ಆದಕ್ಕೆ ‘ಇಂಡಿಯನ್ ಚೇಂಬರ್ ಆಫ್ ಪ್ರಿನ್‌ಸಸ್’ ಎಂಬ ಹೆಸರನ್ನಿಟ್ಟರು. ಸದಸ್ಯರು ಒಮ್ಮತದಿಂದ ರಾನ್‌ಜಿಯನ್ನು ಸಂಘದ ವೈಸ್-ಚಾನ್ಸಲರ್ ಆಗಿ ಚುನಾಯಿಸಿ, ಅವರಲ್ಲಿ ತಮಗಿದ್ದ ಭರವಸೆಯನ್ನು ವ್ಯಕ್ತಪಡಿಸಿದರು.

ಹೀಗೆ ರಾನ್‌ಜಿ ಕ್ರಿಕೆಟ್ ಪ್ರಪಂಚದಲ್ಲಿ ಎಂಥ ಮರ್ಯಾದೆ, ವಿಶ್ವಾಸಗಳನ್ನು ಸಂಪಾದಿಸಿದ್ದರೋ, ಅಂಥ ಮರ್ಯಾದೆ ವಿಶ್ವಾಸಗಳನ್ನು ರಾಜಕೀಯ ಪ್ರಪಂಚದಲ್ಲೂ ಸಂಪಾದಿಸಿದ್ದರು. ತಾವು ಕ್ರಿಕೆಟ್ ಆಡುವ ವಯಸ್ಸು ಮೀರಿದ ಮೇಲೆ ರಾನ್‌ಜಿ ಕಿರಿಯ ಕ್ರಿಕೆಟ್ ಆಟಗಾರರ, ಅದರಲ್ಲೂ ಮುಖ್ಯವಾಗಿ ಅವರ ತಮ್ಮನ ಮಗನಾದ ದುಲೀಪ್ ಸಿನ್ಹಜಿಯ, ಪ್ರಗತಿಯಲ್ಲಿ ತುಂಬ ಆಸಕ್ತಿ ವಹಿಸಿದರು. ಅವರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಿಕೊಡುತ್ತಿದ್ದರು. ಉತ್ತೇಜನವನ್ನು ಕೊಡುತ್ತಿದ್ದರು.

ರಾನ್‌ಜಿ ೧೮೩೩ನೇ ಇಸವಿಯ ಏಪ್ರಿಲ್ ತಿಂಗಳ ಎರಡನೇ ತಾರೀಖು ಜಾಮ್‌ನಗರದಲ್ಲಿ ದೈವಾಧೀನರಾದರು. ಆಗ ಇವರಿಗೆ ಅರವತ್ತೊಂದು ವರ್ಷ. ಅವರ ಮರಣದಿಂದ ಭಾರತ ದೇಶದ ರಾಜಕಾರಣಕ್ಕೆ ದೊಡ್ಡ ನಷ್ಟವುಂಟಾಯಿತು. ಅವರ ಸಾವಿನ ವಾರ್ತೆ ಒಟ್ಟು ಕ್ರಿಕೆಟ್ ಪ್ರಪಂಚಕ್ಕೇ ದೊಡ್ಡ ಆಘಾತದಂತೆ ಎರಗಿತು.

ದಾಖಲೆಗಳ ಮಾಲೆ

೧೮೯೩, ೧೮೯೪ನೇ ವರ್ಷಗಳಲ್ಲಿ ರಾನ್‌ಜಿ ಕೇಂಬ್ರಿಜ್‌ನಲ್ಲಿ ಓದುತ್ತಿದ್ದಾಗ, ಆ ವಿಶ್ವವಿದ್ಯಾಲಯದ ಕ್ರಿಕೆಟ್ ಟೀಮಿನ ಆಟಗಾರರಾಗಿ, ಕೇಂಬ್ರಿಜ್ ಮತ್ತು ಆಕ್ಸ್‌ಫರ್ಡ್‌ಗಳ ನಡುವೆ ನಡೆಯುವ ಪಂದ್ಯದಲ್ಲಿ ಆಡಿದರು. ಪ್ರತಿ ವರ್ಷವೂ ಈ ಎರಡು ಪುರಾತನ ವಿಶ್ವವಿದ್ಯಾಲಯಗಳಿಗೆ ಪಂದ್ಯ ನಡೆಯುತ್ತದೆ. ಈ ಪಂದ್ಯಕ್ಕೆ ಇಂಗ್ಲೆಂಡಿನಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆ ಇದೆ. ಇಂಗ್ಲೆಂಡಿನ ಎಲ್ಲ ಪತ್ರಿಕೆಗಳೂ ಈ ಪಂದ್ಯವನ್ನು ತುಂಬ ವಿವರವಾಗಿ ವರದಿ ಮಾಡುತ್ತವೆ. ಇಂಗ್ಲಿಷ್ ವಿಶ್ವವಿದ್ಯಾಲಯವೊಂದರ ಆಟಗಾರರಾಗಿ ಬ್ರಿಟಿಷ್ ಬುಡಕಟ್ಟಿಗೆ ಸೇರದಿದ್ದವರಲ್ಲಿ ಆಡಿದವರ ಪೈಕಿ ರಾನ್‌ಜಿಯೇ ಮೊದಲನೆಯವರು. ಕಂದು ಬಣ್ಣದ ಮನುಷ್ಯನೊಬ್ಬ ಹೇಗೆ ಆಡಬಹುದು ಎಂದು ಕುತೂಹಲದಿಂದ ನೋಡುವುದಕ್ಕೆ ಬಂದಿದ್ದ ಪ್ರೇಕ್ಷಕರೆಲ್ಲರ ಅಂತರಂಗವನ್ನು ರಾನ್‌ಜಿ ತಕ್ಷಣ ವಶಪಡಿಸಿಕೊಂಡರು.

೧೮೯೫ರಲ್ಲಿ ರಾನ್‌ಜಿ ಸಸೆಕ್ಸ್ ಕೌಂಟಿಗೆ ಆಡುವುದಕ್ಕೆ ಪ್ರಾರಂಭಿಸಿದರು. ಕೆಲವೇ ವರ್ಷಗಳ ನಂತರ, ಅಂದರೆ ೧೮೯೯ರಲ್ಲಿ ಸಸೆಕ್ಸ್ ಟೀಮಿನ ಕ್ಯಾಪ್ಟನ್ ಆದರು. ೧೮೯೯ ರಿಂದ ೧೯೦೪ರ ಪೂರ್ತಿ ಆ ಕೌಂಟಿ ಟೀಮಿನ ಕ್ಯಾಪ್ಟನ್ ಆಗಿದ್ದರು. ಇಂಗ್ಲೆಂಡಿನವನಲ್ಲದ ಆಟಗಾರನೊಬ್ಬ ಇಂಗ್ಲಿಷ್ ಕೌಂಟಿ ಟೀಮೊಂದರ ಕ್ಯಾಪ್ಟನ್ ಆಗುವುದರಲ್ಲೂ ರಾನ್‌ಜಿಯವರದೇ ಮೊದಲನೆಯ ದಾಖಲೆ(ರೆಕಾರ್ಡ್).

‘ಬ್ಯಾಟ್ಸ್‌ಮನ್’ ಆಗಿ ರಾನ್‌ಜಿಯ ಪ್ರಗತಿ ಎಷ್ಟು ತ್ವರಿತವಾಗಿತ್ತು. ಎಂದರೆ, ೧೮೯೬ರಲ್ಲಿ ಇಂಗ್ಲೆಂಡಿನಲ್ಲಿ ಪ್ರವಾಸ ಮಾಡುತ್ತಿದ್ದ ಆಸ್ಟ್ರೇಲಿಯ ಟೀಮಿನ ಮೇಲೆ ಆಡುವ ಇಂಗ್ಲೆಂಡಿನ ಟೆಸ್ಟ್ ಟೀಮಿಗೆ ರಾನ್‌ಜಿ ಆಯ್ಕೆಯಾದರು. ಇದು ಆಂಗ್ಲರಲ್ಲದ ರಾನ್‌ಜಿ ಸ್ಥಾಪಿಸಿದ ಇನ್ನೊಂದು ದಾಖಲೆ. ಆಡೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟೀಮು ಮೊದಲನೆಯ ಇನ್ನಿಂಗ್ಸ್‌ನಲ್ಲಿ ಒಟ್ಟು ೨೩೧ರನ್‌ಗಳನ್ನು ಮಾಡಿತು. ಅದರಲ್ಲಿ ರಾನ್‌ಜಿಯವದು ೬೨. ಎರಡನೆಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡಿನವರು ಎಲ್ಲರೂ ಔಟಾಗಿ ೩೦೫ ರನ್‌ಗಳನ್ನು ಮಾಡಿದರು. ರಾನ್‌ಜಿ ಔಟಾಗದೆ ೧೫೪ ರನ್‌ಗಳನ್ನು ಮಾಡಿ, ತಮ್ಮ ಮೊದಲನೆಯ ಟೆಸ್ಟ್ ನಲ್ಲೇ ಸೆಂಚುರಿ ಹೊಡೆದರವರ ಶ್ರೇಣಿಗೆ ಸೇರಿದರು. ಆ ಕಾಲದಲ್ಲಿ ಬ್ಯಾಟಿಂಗ್ ಮಟ್ಟ ಚೆನ್ನಾಗಿತ್ತು. ಅಂತಹುದರಲ್ಲಿ ರಾನ್‌ಜಿ ಬ್ಯಾಟ್ಸ್‌ಮನ್ ಆಗಿ ಅಗ್ರಪಂಕ್ತಿಗೆ ಸೇರಿದರು. ಕ್ರಿಕೆಟ್ ಜನಪ್ರಿಯ ಕ್ರೀಡೆಯಾಗುವುದಕ್ಕೆ ನೆರವಾದವರಲ್ಲಿ ರಾನ್‌ಜಿ ಒಬ್ಬರಾಗಿದ್ದರು. ೧೮೯೫ರಲ್ಲೇ ನಡೆದ ಇನ್ನೊಂದು ಬಹುಮುಖ್ಯವಾದ ಪಂದ್ಯದಲ್ಲಿ ಸಸೆಕ್ಸ್‌ಗೂ ಎಂ.ಸಿ.ಸಿ.ಗೂ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾನ್‌ಜಿ ಸಸೆಕ್ಸ್ ಪರವಾಗಿ ಮೊದಲನೆಯ ಇನ್ನಿಂಗ್ಸ್‌ನಲ್ಲಿ ಔಟಾಗದೇ ೭೭ ರನ್‌ಗಳನ್ನೂ ಎರಡನೆಯ ಇನ್ನಿಂಗ್ಸ್‌ನಲ್ಲಿ ೧೫೦ ರನ್‌ಗಳನ್ನೂ ಮಾಡಿದರು.

ರಾನ್‌ಜಿ ಹೆಸರು ಗಳಿಸಿದ್ದು ಜನರ ಮನಸ್ಸನ್ನು ಸೂರೆಗೊಂಡಿದ್ದು ಬ್ಯಾಟ್ಸ್‌ಮನ್ನಾಗಿ, ಆದರೆ ಅವರು ಬರೀ ಬ್ಯಾಟ್ಸ್‌ಮನ್ನಾಗಿರಲಿಲ್ಲ. ಅವಶ್ಯ ಬಿದ್ದಾಗ ಕೆಲವು ಓವರ್ ಬೋಲ್ ಮಾಡುತ್ತಿದ್ದರು. ಆದರೆ ಇವರ ವೈಶಿಷ್ಟ್ಯ ಬ್ಯಾಟಿಂಗ್.

೧೮೯೬ರ ನಾಲ್ಕು ತಿಂಗಳ ‘ಸೀಸನ್’ನಲ್ಲಿ ಸರಾಸರಿ ೫೦ ರಂತೆ ೨೭೮೦ ರನ್‌ಗಳನ್ನು ಮಾಡಿ ದಾಖಲೆ ಸ್ಥಾಪಿಸಿದರು. ಇಂಗ್ಲೆಂಡಿನಲ್ಲಿ  ‘ಪಂಚ್’ ಎಂಬ ವಾರಪತ್ರಿಕೆ ಆಗಿನ ಕಾಲದಿಂದಲೂ ಇದೆ. ಇದು ವಿನೋದಕ್ಕೆ ಮೀಸಲಾದ ಪತ್ರಿಕೆ. ಆ ವರ್ಷದಲ್ಲಿ ರಣಜಿತ್ ಸಿನ್ಹಜಿಯ ಬ್ಯಾಟಿಂಗ್ ಬಗ್ಗೆ ತನ್ನ ಮೆಚ್ಚಿಕೆಯನ್ನು ತೋರಿಸುವುದಕ್ಕಾಗಿ ಅವರು ಬ್ಯಾಟ್ ಮಾಡುತ್ತಿರುವ ನಿಲುವಿನ  ವ್ಯಂಗ್ಯಚಿತ್ರವೊಂದನ್ನು ಅಚ್ಚುಹಾಕಿ, ಅದರ ಅಡಿಯಲ್ಲಿ ಅವರ ಹೆಸರನ್ನು ‘ರನ್‌ಗೆಟ್‌ಸಿನ್ಹಜಿ’ (ರನ್‌ಗಳನ್ನು ಗಿಟ್ಟಿಸಿರುವ ಸಿನ್ಹಜಿ) ಎಂದು ಬರೆದಿತ್ತು. ವಿಸ್‌ಡೆನ್‌ರ ‘ಕ್ರಿಕೆಟ್ ಅಲ್ಮನಾಕ್’ ಪುಸ್ತಕದ ೧೮೯೭ನೇ ಇಸವಿಯ ಸಂಚಿಕೆಯಲ್ಲಿ ಹಿಂದಿನ ವರ್ಷದ ಐವರು ಮುಖ್ಯ ಕ್ರಿಕೆಟ್ ಆಟಗಾರರಲ್ಲಿ ರಾನ್‌ಜಿಯ ಚಿತ್ರಕ್ಕೇ ಮೊದಲನೆಯ ಸ್ಥಾನ ದೊರಕಿತು. ೧೮೯೭ರಲ್ಲಿ ರಾನ್‌ಜಿ, ಸರಾಸರಿ ೪೫.೧೧ರಂತೆ ೧೯೪೦ ರನ್‌ಗಳನ್ನು ಮಾತ್ರ ಮಾಡಿದರು. ಆದರೆ ಆ ಸೀಸನ್‌ನಲ್ಲಿ ಬಹುಭಾಗ ಅವರ ಆರೋಗ್ಯ ಕೆಟ್ಟಿದ್ದು, ಅನೇಕ ಪಂದ್ಯಗಳಲ್ಲಿ ಅವರು ಆಡಲು ಸಾಧ್ಯವಾಗಲಿಲ್ಲ. ಆ ವರ್ಷ ವಿಕ್ಟೋರಿಯ ಮಹಾರಾಣಿಯ ಆಳ್ವಿಕೆಯ ವಜ್ರ ಮಹೋತ್ಸವದ ವರ್ಷ. ರಾನ್‌ಜಿ ‘ದಿ ಜ್ಯೂಬಿಲಿ ಬುಕ್ ಆಫ್ ಕ್ರಿಕೆಟ್’ ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದರು. ಈ ಪುಸ್ತಕದಲ್ಲಿ ಅವರು ಬ್ಯಾಂಟಿಂಗ್ ಕಲೆಯ ವಿಚಾರವಾಗಿ ಪ್ರಸ್ತಾಪ ಮಾಡಿದ್ದಾರೆ.

‘ನೋಡು, ಹೀಗೆ ಚೆಂಡನ್ನು ಬಾರಿಸಬೇಕು’ ರಾನ್‌ಜಿ ದುಲೀಪ್‌ಗೆ ಶಿಕ್ಷಣ ಕೊಡುತ್ತಿರುವುದು

ಆಸ್ಟ್ರೇಲಿಯದಲ್ಲಿ ದುರದೃಷ್ಟ

೧೮೯೭ರ ಕೊನೆಯಲ್ಲಿ ೧೮೯೮ರ ಮೊದಲಲ್ಲಿ ಒಟ್ಟು ನಾಲ್ಕು ತಿಂಗಳ ಕಾಲ, ಎ.ಇ ಸ್ಟಾಡರ್ಟ್ ಎಂಬಾತನ ನೇತೃತ್ವದಲ್ಲಿ ಇಂಗ್ಲಿಷ್ ಕ್ರಿಕೆಟ್ ಟೀಮೊಂದು ಆಸ್ಟ್ರೇಲಿಯದಲ್ಲಿ ಪ್ರವಾಸ ಮಾಡಿತು. ರಾನ್‌ಜಿ ಈ ಟೀಮಿನ ಆಟಗಾರರಲ್ಲೊಬ್ಬರಾಗಿದ್ದರು. ಪಾಪ! ಪ್ರವಾಸದುದ್ದಕ್ಕೂ ಅನಾರೋಗ್ಯವು ರಾನ್‌ಜಿಯ ಬೆನ್ನು ಹತ್ತಿ ಕಾಡಿತು. ಆದರೂ ಅವರು ಆಡಿದ ಪಂದ್ಯಗಳಲ್ಲಿ ಧೈರ್ಯಗೆಡದೆ ಪಟ್ಟು ಹಿಡಿದು ಆಡಿದರು. ಕಾಯಿಲೆಯಾಗಿದ್ದರೂ ಕೂಡ ರಾನ್‌ಜಿ ಮತ್ತು ಅವರ ಸ್ನೇಹಿತ ಮ್ಯಾಕ್‌ಲಾರೆನ್ ಇಬ್ಬರೂ ಅದ್ಭುತವಾಗಿ ಬ್ಯಾಟ್ ಮಾಡಿದರು. ಟೆಸ್ಟ್ ಪಂದ್ಯಗಳೂ ಸೇರಿದಂತೆ ಪ್ರವಾಸದ ಎಲ್ಲ ಪಂದ್ಯಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ, ಸರಾಸರಿ ೬೦-೮೯ ರನ್‌ಗಳನ್ನು ಮಾಡಿದ ರಾನ್‌ಜಿ ಬ್ಯಾಟಿಂಗ್‌ನಲ್ಲಿ ಮೊದಲನೆಯವರಾಗಿದ್ದರು. ಟೆಸ್ಟ್ ಪಂದ್ಯಗಳಲ್ಲಿ ಸರಾಸರಿ ೫೦.೭೭ ರನ್‌ಗಳನ್ನು ಮಾಡಿ, ೫೪.೨೨ ರನ್‌ಗಳಂತೆ ಮಾಡಿದ್ದ ಮ್ಯಾಕ್‌ಲಾರೆನ್‌ಗೆ ಎರಡನೆಯವರಾಗಿದ್ದರು.

ಮಹತ್ತರ ಸಾಧನೆ

೧೮೯೯, ೧೯೦೦ ಮತ್ತು ೧೯೦೧ನೇ ವರ್ಷಗಳು ರಾನ್‌ಜಿಯ ಕ್ರಿಕೆಟ್ ಜೀವನದಲ್ಲಿ ಮಹತ್ತರ ಕಾಲ. ೧೮೯೯ ರಲ್ಲಿ ೫೦ ಇನ್ನಿಂಗ್ಸ್ ಆಡಿ. ಒಟ್ಟು ೩೧೫೯ ರನ್‌ಗಳನ್ನು ಮಾಡಿದರು. ಸರಾಸರಿ ೬೩.೧೮ರಂತೆ ಮಾಡಿ ಬ್ಯಾಟಿಂಗ್‌ನಲ್ಲಿ ದೇಶಕ್ಕೆ ಮೂರನೆಯವರಾದರು. ಆ ವರ್ಷ ಆಸ್ಟ್ರೇಲಿಯ ಟೀಮು ಇಂಗ್ಲೆಂಡಿನಲ್ಲಿ ಪ್ರವಾಸ ಮಾಡಿತು. ೫ ಟೆಸ್ಟ್‌ಗಳಲ್ಲೂ ರಾನ್‌ಜಿ ಆಡಿದರು. ಸರಾಸರಿ ೪೬.೨೨ ರಂತೆ ರನ್‌ಮಾಡಿ, ಬ್ಯಾಟಿಂಗ್‌ನಲ್ಲಿ ಎರಡನೆಯ ಸ್ಥಾನದಲ್ಲಿದ್ದರು.

೧೯೦೦ನೇ ಇಸವಿ ರಾನ್‌ಜಿಯು ಅದ್ಭುತ ವರ್ಷ. ಆ ಸೀಸನ್‌ನಲ್ಲಿ ಒಟ್ಟು ೪೦ ಇನ್ನಿಂಗ್ಸ್ ಆಡಿದರು. ಐದು ಸಲ ಔಟಾಗದೆ ಇದ್ದರು. ಸರಾಸರಿ ೮೭.೫೭ರಂತೆ ಒಟ್ಟು ೪೦ ಇನ್ನಿಂಗ್ಸ್ ಆಡಿದರು. ಐದು ಸಲ ಔಟಾಗದೆ ಇದ್ದರು. ಸರಾಸರಿ ೮೭.೫೭ ರಂತೆ ಒಟ್ಟು ೩೦೬೫ ರನ್‌ಗಳನ್ನು ಮಾಡಿದರು. ಬ್ಯಾಟಿಂಗ್ ಸರಾಸರಿಯಲ್ಲಿ ಮೊದಲನೆಯವರಾದರು. ಐದು ಸಲ ಇನ್ನೂರು ರನ್‌ಗಳಿಗೂ  ಹೆಚ್ಚಾಗಿ ಹೊಡೆದರು. ಒಂದಾದ ಮೇಲೊಂದರಂತೆ ಎರಡು ಇನ್ನಿಂಗ್ಸ್‌ಗಳಲ್ಲಿ ಮುನ್ನೂರು ಮುನ್ನೂರು ರನ್‌ಗಳನ್ನು ಮಾಡಿದರು. ಮಿಡ್ಲ್‌ಸೆಕ್ಸ್ ಕೌಂಟಿಯ ಮೇಲೆ ಆಡಿದ ಪಂದ್ಯದಲ್ಲಿ ೧೮೦ ನಿಮಿಷದಲ್ಲಿ ೨೦೨ ರನ್ ಬಾರಿಸಿದರು.

೧೯೦೧ರಲ್ಲಿ ನಲವತ್ತು ಇನ್ನಿಂಗ್ಸ್‌ನಲ್ಲಿ ಐದು ಸಲ ಔಟಾಗದೆ, ಸರಾಸರಿ ೭೦.೫೧ರಂತೆ ಒಟ್ಟು ೨೪೬೮ ರನ್‌ಗಳನ್ನು ಮಾಡಿದರು. ಬ್ಯಾಟಿಂಗ್ ಸರಾಸರಿಯಲ್ಲಿ ಮೂರನೆಯವರಾದರು. ಸಸೆಕ್ಸ್ ಗೂ ಸಾಮರ್‌ಸೆಟ್ ಕೌಂಟಿಗೂ ನಡೆದ ಪಂದ್ಯದಲ್ಲಿ ಔಟಾಗದೆ ೨೮೫ ರನ್‌ಗಳನ್ನು ಮಾಡಿ, ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲೆಲ್ಲ ಅತ್ಯಂತ ಹೆಚ್ಚಾದ ಸ್ಕೋರ್ ಮಾಡಿದರು.

ಏರಳಿತಗಳು

೧೯೦೨ರಲ್ಲಿ ಕಾರಣಾಂತರದಿಂದ ರಾನ್‌ಜಿ ಒಟ್ಟು ೨೬ ಇನ್ನಿಂಗ್ಸ್ ಮಾತ್ರ ಆಡಲು ಸಾಧ್ಯವಾಯಿತು. ಇವರ ವರ್ಷದ ಒಟ್ಟು ರನ್‌ಗಳ ಸಂಖ್ಯೆ ೧೧೦೬ಕ್ಕೂ, ಸರಾಸರಿ ೪೬.೦೮ಕ್ಕೂ ಇಳಿಯಿತು. ಆದರೂ ಬ್ಯಾಟಿಂಗ್ ಸರಾಸರಿಯಲ್ಲಿ ದೇಶಕ್ಕೆ ಎರಡನೆಯ ಸ್ಥಾನದಲ್ಲಿದ್ದರು. ಕಾರಣ, ಆ ವರ್ಷದ ಬೇಸಿಗೆಯಲ್ಲಿ ವಿಪರೀತ ಮಳೆ ಹುಯ್ದು, ಬ್ಯಾಟ್ ಮಾಡುವುದು ಎಲ್ಲರಿಗೂ ತೀರ ಕಷ್ಟವಾಗಿತ್ತು.  ಎಷ್ಟೋ ಪಂದ್ಯಗಳು ನಡೆಯಲೇ ಇಲ್ಲ. ದುಃಖದ ಸಂಗತಿ ಎಂದರೆ, ಆ ವರ್ಷ ಇಂಗ್ಲೆಂಡಿನಲ್ಲಿ ಪ್ರವಾಸ ಮಾಡುತ್ತಿದ್ದ ಆಸ್ಟ್ರೇಲಿಯನ್ನರ ಮೇಲೆ ರಾನ್‌ಜಿಯ ಬ್ಯಾಟಿಂಗ್ ಪೂರ್ಣವಾಗಿ ಕುಸಿದು ಬಿದ್ದಿತು. ಮೊದಲನೇ ಟೆಸ್ಟ್‌ನಲ್ಲಿ ನಡೆದ ಒಂದನೇ ಇನ್ನಿಂಗ್ಸ್‌ನಲ್ಲಿ ರಾನ್‌ಜಿಯದು ೧೩ ರನ್‌ಗಳು; ಎರಡನೆ ಟೆಸ್ಟ್‌ನಲ್ಲಿ ನಡೆದ ಒಂದನೆ ಇನ್ನಿಂಗ್ಸ್‌ನಲ್ಲಿ ಸೊನ್ನೆ; ಮೂರನೆಯ ಟೆಸ್ಟ್‌ನಲ್ಲಿ ಕಾಲು ಉಳುಕಿದ್ದರಿಂದ ಆಡಲೇ ಇಲ್ಲ; ನಾಲ್ಕನೇ ಟೆಸ್ಟ್‌ನಲ್ಲಿ ೪ ಮತ್ತು ೦ ; ಐದನೆ ಟೆಸ್ಟ್‌ಗೆ ಇವರನ್ನು ಆರಿಸಲೇ ಇಲ್ಲ. ಬಿಟ್ಟಿದ್ದು ನ್ಯಾಯವೇ ಆಗಿತ್ತು.

೧೯೦೩ನೇ ಇಸವಿ ಕೂಡ ಅತಿವೃಷ್ಟಿಯ ಕಾಲವಾಗಿತ್ತು. ರಾನ್‌ಜಿ ೪೧ ಇನ್ನಿಂಗ್ಸ್‌ನಲ್ಲಿ. ಏಳು ಸಲ  ಔಟಾಗದೆ, ಒಟ್ಟು ೧೯೨೪ ರನ್‌ಗಳನ್ನು ಮಾಡಿದರು. ೫೬.೫೮ ರಂತೆ ಬ್ಯಾಟಿಂಗ್ ಸರಾಸರಿಯಲ್ಲಿ ಎರಡನೆಯ ಸ್ಥಾನವನ್ನು ಪಡೆದರು. ೧೯೦೪ರಲ್ಲಿ ೭.೪ ಇನ್ನಿಂಗ್ಸ್ ಆಡಿ, ಆರು ಸಲ ಔಟಾಗದೆ ಇದ್ದು, ಸರಾಸರಿ ೭೪.೧೭ರಂತೆ ಒಟ್ಟು ೨೦೭೭ ರನ್‌ಗಳನ್ನು ಮಾಡಿ, ಬ್ಯಾಟಿಂಗ್‌ನಲ್ಲಿ ಮೊದಲನೆಯ ಸ್ಥಾನವನ್ನು ರಾನ್‌ಜಿ ಗಳಿಸಿದರು.

ಇಲ್ಲಿಂದ ಮುಂದೆ ರಾನ್‌ಜಿಯು ಪ್ರತಿ ವರ್ಷವೂ ವ್ಯವಸ್ಥಿತವಾಗಿ ಕ್ರಿಕೆಟ್ ಆಡುವುದು ಸಾಧ್ಯವಾಗಲಿಲ್ಲ. ಆಗಾಗ ಅನಾರೋಗ್ಯ ತಲೆ ಹಾಕುತ್ತಿತ್ತು. ಅದಲ್ಲದೆ ರಾಜ್ಯಕಾರ್ಯದ ಭಾರವೂ ಹೆಗಲ ಮೇಲೆ ಬಿದ್ದಿತು. ೧೯೦೫, ೧೯೦೬ ಮತ್ತು ೧೯೦೭ನೇ ವರ್ಷಗಳಲ್ಲಿ ಮೂರು ವರ್ಷಗಳ ಕಾಲವೂ ಭಾರತದಲ್ಲೇ ಇರಬೇಕಾಗಿ ಬಂದಿತು. ೧೯೦೮ರಲ್ಲಿ ಇಂಗ್ಲಿಷ್ ಕ್ರಿಕೆಟ್ ಆಟಕ್ಕೆ ಹಿಂದಿರುಗಿದರು. ಈ ಅಂತರದಲ್ಲಿ ರಾನ್‌ಜಿಯ ಮೈಕಟ್ಟು ಹಿಂದಿನ ಲಘುತ್ವವನ್ನು ಸ್ವಲ್ಪ ಕಳೆದುಕೊಂಡು, ಸ್ಥೂಲವಾಗಿತ್ತು. ದೇಹದ ತೂಕ ಹೆಚ್ಚಾಗಿತ್ತು. ಆದ ಕಾರಣ ಆಟದ ರೀತಿಯೂ ಬದಲಾಯಿಸಿ, ಸಂಪ್ರದಾಯಕ್ಕೆ ಹೊಂದಿಕೊಂಡಿತ್ತು. ಹೊಡೆತಗಳು ಮೊದಲಿನಷ್ಟು ವಿಸ್ಮಯಕಾರಕವಾಗಿರಲಿಲ್ಲ. ಆದರೆ ರಕ್ಷಣೆಯ ಆಟ ನಿರ್ದಿಷ್ಟವಾಗಿತ್ತು. ಆ ವರ್ಷ ಇಪ್ಪತ್ತೆಂಟು ಇನ್ನಿಂಗ್ಸ್ ಆಡಿ, ಮೂರು ಸಲ ಔಟಾಗದೆ ಉಳಿದು, ಸರಾಸರಿ ೪೫.೫೨ರಂತೆ ೧೧೩೮ ರನ್‌ಗಳನ್ನು ಮಾಡಿ, ಬ್ಯಾಟಿಂಗ್‌ನಲ್ಲಿ ಏಳನೆಯ ಸ್ಥಾನದಲ್ಲಿದ್ದರು.

ಮತ್ತೆ ಮೂರು ವರ್ಷಗಳ ಕಾಲ, ೧೯೦೯, ೧೯೧೦ ಮತ್ತು ೧೯೧೧ರಲ್ಲಿ ರಾನ್‌ಜಿ ಭಾರತದಲ್ಲೇ ಇದ್ದು ರಾಜ್ಯಭಾರದ ಕಡೆಗೆ ಗಮನ ಕೊಡಬೇಕಾಗಿ ಬಂದಿತ್ತು. ೧೯೧೨ರಲ್ಲಿ ಕ್ರಿಕೆಟ್ ಆಡುವುದಕ್ಕೆ ಪುನಃ ಇಂಗ್ಲೆಂಡಿಗೆ ಹೋದರು. ಇಪ್ಪತ್ತೈದು ಇನ್ನಿಂಗ್ಸ್ ಆಡಿ, ಎರಡು ಸಲ ಔಟಾಗದೆ ಉಳಿದು, ಸರಾಸರಿ ೪೨.೮೦ ರಂತೆ ಒಟ್ಟು ೧೧೧೩ ರನ್‌ಗಳನ್ನು ಮಾಡಿ, ಬ್ಯಾಟಿಂಗ್ ಸಾಲಿನಲ್ಲಿ ಆರನೆಯವರಾದರು.

ವಿಷಾದದ ಅಧ್ಯಾಯ

ಇನ್ನು ಮುಂದೆ ಕ್ರಿಕೆಟ್‌ನಲ್ಲಿ ರಾನ್‌ಜಿ ಗಣನೀಯವಾಗಿ ಏನನ್ನೂ ಸಾಧಿಸಲಿಲ್ಲ. ಸ್ವಲ್ಪ ಕಾಲದ ನಂತರ ಮಹಾಯುದ್ಧದ ಕಾಲದಲ್ಲಿ, ಇಂಗ್ಲೆಂಡಿನಲ್ಲಿ ಕ್ರಿಕೆಟ್ ನಿಂತುಹೋಯಿತು. ರಾನ್‌ಜಿ ಮತ್ತೆ ಆಡಿದ್ದು ೧೯೨೦ರಲ್ಲಿ ದೊಡ್ಡ ಆಟಗಾರನೊಬ್ಬನ ಜೀವನದಲ್ಲಿ ಅದೊಂದು ವಿಷಾದದ ಅಧ್ಯಾಯ. ಆ ವರ್ಷದ ಕ್ರಿಕೆಟ್ ಸೀಸನ್‌ನಲ್ಲಿ ರಾನ್‌ಜಿ ಮಾಡಿದ ಒಟ್ಟು ರನ್ನುಗಳು ೩೯. ರಾನ್‌ಜಿಗೆ ಆಗ ನಲವತ್ತೆಂಟು ವರ್ಷ ವಯಸ್ಸು ಶರೀರ ಸ್ಥೂಲವಾಗಿ, ಮೈ ಕಟ್ಟು ಬಿಗಿ ಕಳೆದುಕೊಂಡಿತ್ತು. ಪ್ರಥಮ ದರ್ಜೆ ಕ್ರಿಕೆಟ್ ಆಡುವುದನ್ನು ರಾನ್‌ಜಿ ಬಿಟ್ಟು ಏಳೆಂಟು ವರ್ಷಗಳಾಗಿದ್ದವು. ಈ ಮಧ್ಯೆ ಅವರ ಒಂದು ಕಣ್ಣು ಹೋಗಿಬಿಟ್ಟಿತ್ತು. ಇಷ್ಟಾದರೂ ತಾವು ಪುನಃ ಆಡುವುದನ್ನು ಪ್ರಾರಂಭಿಸಿದ್ದಕ್ಕೆ ರಾನ್‌ಜಿ ಇದ್ದ ಕಾರಣ ಕ್ರಿಕೆಟ್‌ನಲ್ಲಿ ಅವರಿಗಿದ್ದ ಪ್ರೀತಿ. ಆದರೆ ಅವರೇ ಹೇಳಿದ ಕಾರಣವೇನೆಂದರೆ: ತಾವು ಕ್ರಿಕೆಟ್ ಮೇಲೆ ಇನ್ನೊಂದು ಪುಸ್ತಕವನ್ನು ಬರೆಯಬೇಕು, ಅದರಲ್ಲಿ ಒಂಟಿಗಣ್ಣಿನಿಂದ ಬ್ಯಾಟ್ ಮಾಡುವ ಕಲೆಯನ್ನು ಪ್ರಸ್ತಾಪಿಸಬೇಕು ಎಂದು ಕೊಂಡಿದ್ದರು ಎಂದು. ತಮ್ಮ ಅಪಜಯವನ್ನು ಹಾಸ್ಯದಲ್ಲಿ ತೇಲಿಸಬಿಡುವುದಕ್ಕಾಗಿ ಹಾಗೆ ಹೇಳಿದ್ದರೂ ಇರಬಹುದು.

ರಾನ್‌ಜಿಯ ಕ್ರಿಕೆಟ್ ಜೀವನದ ಅಂಕಿ-ಅಂಶಗಳು ಹೀಗಿವೆ:

ಇಂಗ್ಲೆಂಡ್ – ಆಸ್ಟ್ರೇಲಿಯ ಟೆಸ್ಟ್ ಸರಣಿಗಳು- ಆಸ್ಟ್ರೇಲಿಯಕ್ಕೆ ಒಂದು ಸಲ ಪ್ರವಾಸ ಹೋಗಿದ್ದರು. ಅಲ್ಲಿ ಐದು ಪಂದ್ಯಗಳಲ್ಲೂ ಆಡಿದರು. ಇವರು ಆಡಿದ ಟೆಸ್ಟ್ ಪಂದ್ಯಗಳು ಒಟ್ಟು ಹದಿನೈದು. ಇವುಗಳಲ್ಲಿ ಇಪ್ಪತ್ತಾರು ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದರು.. ನಾಲ್ಕು ಸಲ ಔಟಾಗದೆ ಇದ್ದರು. ಒಟ್ಟು ರನ್‌ಗಳು ೯೮೫, ಸರಾಸರಿ ೪೪.೭೭.

ಟೆಸ್ಟ್ ಪಂದ್ಯಗಳನ್ನೂ ಸೇರಿಸಿಕೊಂಡು ರಾನ್‌ಜಿ ಆಡಿದ ಎಲ್ಲ ಪಂದ್ಯಗಳನ್ನೂ ತೆಗೆದುಕೊಂಡರೆ ಅಂಕಿ-ಅಂಶಗಳು ಹೀಗಿರುತ್ತವೆ:

ಒಟ್ಟು ರನ್‌ಗಳು- ೨೪,೮೧೭. ಸರಾಸರಿ ೫೬.೪೦. ಹಿಡಿದ ಕ್ಯಾಚ್‌ಗಳು ೨೩.೨. ಬೋಲರ್  ಆಗಿ, ವಿಕೆಟ್‌ಗೆ ೩೪.೦೬ ರನ್‌ಗಳಂತೆ ತೆಗೆದುಕೊಂಡ ವಿಕೆಟ್‌ಗಳು ೧೩೦.

ದುಲೀಪ್‌ಸಿನ್ಹಜಿಯ ಗುರು

ಕ್ರಿಕೆಟ್ ಅಂದರೆ ರಾನ್‌ಜಿಗೆ ಪ್ರಾಣ. ಆವೇಶ ಹಿಡಿದಿದೆಯೇನೋ ಎನ್ನುವಷ್ಟು ಅದರ ವಿಚಾರವಾಗಿ ಉತ್ಸಾಹವಿತ್ತು. ತಾವು ಆಡುವುದೇ ಅಲ್ಲದೆ, ನವಾನಗರದ ಅನೇಕ ರಾಜಕುಮಾರರು ಕ್ರಿಕೆಟ್ ಕಲಿಯುವುದಕ್ಕೆ, ಆಡುವುದಕ್ಕೆ ಸಹಾಯ ಮಾಡಿದರು. ಉತ್ತೇಜನ ಕೊಟ್ಟರು. ಅವರಲ್ಲಿ ಮುಖ್ಯವಾಗಿ ದುಲೀಪ್‌ಸಿನ್ಹಜಿಗೆ ಸಹಾಯ, ಉತ್ತೇಜನಗಳನ್ನು ಕೊಟ್ಟಿದ್ದಲ್ಲದೆ, ತಾವೇ ಸ್ವತಃ ಅವನಿಗೆ ಬ್ಯಾಟಿಂಗ್ ತರಬೇತಿಯನ್ನು ನೀಡಿ ಕೆಲವು ಸೂಕ್ಷ್ಮವಾದ ಅಂಶಗಳನ್ನು ತೋರಿಸಿಕೊಟ್ಟು, ದುಲೀಪ್ ಕೂಡ ಪ್ರಪಂಚದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬನಾಗುವುದಕ್ಕೆ ಕಾರಣರಾದರು.

ಕ್ರಿಕೆಟ್ ಗ್ರಾಮ

ಪ್ರತಿ ವರ್ಷವೂ ಚಳಿಗಾಲದಲ್ಲಿ ರಾನ್‌ಜಿ ಭಾರತಕ್ಕೆ ಬಂದು ಮೂರು ನಾಲ್ಕು ತಿಂಗಳು ತಂಗಿರುತ್ತಿದ್ದರು. ಆದರೆ ಒಬ್ಬರೇ ಬರುತ್ತಿರಲಿಲ್ಲ. ತಮ್ಮ ಸಂಗಡ ಲಾರ್ಡ್ ಹಾಕ್, ಅರ್ಚಿ ಮ್ಯಾಕ್‌ಲಾರೆನ್, ಸಿ.ಬಿ.ಫ್ರೈ. ವಿಲ್‌ಫ್ರೆಡ್  ರೋಡ್ಸ್, ವೈನ್, ಕಿಲ್ಲಿಕ್ ಮೊದಲಾದ ಹೆಸರಾಂತ ಶ್ರೇಷ್ಠ ಕ್ರಿಕೆಟ್ ಆಟಗಾರರನ್ನು ಇಂಗ್ಲೆಂಡಿನಿಂದ ಕರೆದುಕೊಂಡು ಬರುತ್ತಿದ್ದರು. ಬಂದ ಈ ಆಟಗಾರರ ವಸತಿಗಾಗಿ ಸಾರೋದಾರ್ ಹಳ್ಳಿಯಲ್ಲಿ ದೊಡ್ಡದೊಂದು ಶಿಬಿರ ನಿರ್ಮಾಣವಾಗುತ್ತಿತ್ತು. ಸಾರೋದಾರ್‌ನ ವಾತಾವರಣವೇ ಕ್ರಿಕೆಟ್‌ಮಯ ಆಗಿ ಬಿಡುತ್ತಿತ್ತು.

ಮೊದಲನೆಯ ಟೆಸ್ಟ್ ಪಂದ್ಯದಲ್ಲೆ ಸೆಂಚುರಿ

ಕ್ಯಾಪ್ಟನ್ ಆಗಿ

ರಾನ್‌ಜಿ ಕ್ಯಾಪ್ಟನ್ ಆಗುವುದಕ್ಕೆ ಮುಂಚೆ ಸಸೆಕ್ಸ್ ಕೌಂಟಿ ಟೀಮು, ಕೌಂಟಿ ಟೀಮುಗಳ ಪಟ್ಟಿಯ ತುದಿಯಲ್ಲಿತ್ತು. ರಾನ್‌ಜಿ ಕ್ಯಾಪ್ಟನ್ ಆದ ಮೇಲೆ, ಅವರ ನಾಯಕತ್ವದಲ್ಲಿ ಪಂದ್ಯದ ಮೇಲೆ ಪಂದ್ಯವನ್ನು ಗೆಲ್ಲುತ್ತ ಮೇಲೆ ಮೇಲಕ್ಕೇರಿತು. ನಾಯಕರಾಗಿ ರಾನ್‌ಜಿ ರನ್‌ಗಳನ್ನು ಮಾಡಿದ್ದು ಮಾತ್ರವಲ್ಲ, ಎದುರಾಳಿಗಳ ಯಾವುದೇ ಬ್ಯಾಟ್ಸ್‌ಮನ್‌ಗಾಗಲಿ ತಕ್ಕ ಹಾಗೆ ಫೀಲ್ಡಿಂಗ್ ಏರ್ಪಡಿಸುತ್ತಿದ್ದರು. ಎಂತಹ ಸಂದರ್ಭದಲ್ಲೂ ಜಾಗೃತರಾಗಿದ್ದು ನಾಯಕರಾಗಿ ತಮ್ಮ ಕರ್ತವ್ಯವನ್ನು ಧೈರ್ಯದಿಂದ, ಕುಶಲತೆಯಿಂದ, ಚಾಕಚಕ್ಯತೆಯಿಂದ ನಿರ್ವಹಿಸುತ್ತಿದ್ದರು.

ಆರಾಧ್ಯ ಆಟಗಾರ

ರಾನ್‌ಜಿ ಐದು ಆಡಿ ಹತ್ತೂವರೆ ಅಂಗುಲ ಎತ್ತರವಿದ್ದರು. ನಡು ಯೌವನದಲ್ಲಿ ತೆಳ್ಳಗಿದ್ದರು. ಬಿಗಿಯಾದ ಮೈಕಟ್ಟು, ಗಟ್ಟಿಯಾದ, ದೃಢವಾದ ಮಾಂಸಖಂಡಗಳು, ತೀಕ್ಷ್ಣವಾದ ಕಣ್ಣುಗಳು, ಮಾಸಲು ಕಪ್ಪು ಬಣ್ಣ, ಬಾಹುಶಕ್ತಿಗಿಂತಲೂ ಹೆಚ್ಚಾಗಿ ಅಸಾಧಾರಣವಾದ ಕೈಚಳಕ, ಚೆಂಡನ್ನು ಹೊಡೆದದ್ದೇ ಕಾಣುತ್ತಿರಲಿಲ್ಲ. ಚೆಂಡು ಮಾತ್ರ ಬೌಂಡರಿಯನ್ನು ತಲುಪಿರುತ್ತಿತ್ತು. ಇವರ ಆಟಗಾರಿಕೆಯ ಸೊಗಸಿಗೆ ಜನ ಮುಗ್ಧರಾಗಿದ್ದರು. ರಾನ್‌ಜಿ ಯಾವಾಗಲೂ ಪ್ರೇಕ್ಷಕ ವರ್ಗಕ್ಕೆ ಅಚ್ಚುಮೆಚ್ಚಾಗಿದ್ದರು, ಆರಾಧ್ಯ ವ್ಯಕ್ತಿಯಾಗಿದ್ದರು.

ತಮ್ಮ ಸರದಿ ಬಂದಾಗ ಬ್ಯಾಟ್ ಮಾಡುವುದಕ್ಕೆ ರಾನ್‌ಜಿ ಹೋಗುತ್ತಿದ್ದುದೇ ಒಂದು ವಿಶೇಷ ಸಂದರ್ಭವಾಗಿ ಬಿಡುತ್ತಿತ್ತು. ಒಬ್ಬ ಆಟಗಾರ ಸೋತು, ಔಟಾಗಿ, ಪೆವಿಲಿಯನ್ ಸೇರಿದಾಗ, ಕ್ಷಣಕಾಲ ಮೈದಾನವೆಲ್ಲ ಉಸಿರು ಕಟ್ಟಿಕೊಂಡಂತೆ ಮೌನವಾಗಿರುತ್ತಿತ್ತು. ಮುಂದಿನ ಆಟಗಾರ ಯಾವಾತ ಬರುತ್ತಾನೆ? ರಾನ್‌ಜಿ ಬರಬಹುದೇ? ಎಂದು ಜನಸಮೂಹ ತವಕದಿಂದ ಸೆಟೆದುಕೊಂಡು ಪೆವಿಲಿಯನ್ ಕಡೆ ನೋಡುತ್ತಿತ್ತು. ಕೇಂಬ್ರಿಜ್ ವಿಶ್ವವಿದ್ಯಾಲಯದ ತಿಳಿನೀಲಿಯ ಕ್ರಿಕೆಟ್ ಟೋಪಿಯನ್ನು ಧರಿಸಿದ ಬಳಕುವ ಮೈಯುಳ್ಳ ಒಂದು ವ್ಯಕ್ತಿ ಹೊರಬರುತ್ತಿರುವುದು ಕಂಡಾಗ, ಚಪ್ಪಾಳೆಯ ಅಲೆ ಕ್ಷೀಣವಾಗಿ ಆರಂಭವಾದದ್ದು ಬರಬರುತ್ತ ಸಂತೋಷದ ಅಬ್ಬರವಾಗಿ ಮೈದಾನವನ್ನೆಲ್ಲ ತುಂಬಿಬಿಡುತ್ತಿತ್ತು. ರಾನ್‌ಜಿಯನ್ನು  ಜನತೆ ಹೀಗೆ ಜಯಕಾರ  ಮಾಡಿ ಆಡುವುದಕ್ಕೆ ಸ್ವಾಗತಿಸುತ್ತಿತ್ತು.

ರಾನ್‌ಜಿ ವಿಕೆಟ್ಟನ್ನು ತಲುಪಿ ಆಡುವುದಕ್ಕೆ ಸಿದ್ಧವಾಗಿ ನಿಂತಾಗ, ಅದೆಷ್ಟು ಆರಾಮವಾದ ಧೈರ್ಯ! ಅದೆಂಥ ಸೂಕ್ಷ್ಮವಾದ ಕಲಾಕೌಶಲ; ಎಂಥ ನಿರಾಯಾಸವಾದ ಕೈಚಳಕ! ಬೋಲರ್‌ನನ್ನು ಎದುರಿಸಿ ನಿಂತಾಗ ಯಾವಾಗಲೂ ತುಟಿಯ ಮೇಲೆ ನಸುನಗೆ. ಅವರ ಹೊಡೆತಗಳೋ, ವಿದ್ಯುತ್ತಿನ ಹಾಗೆ ಮೈನವಿರೇಳಿಸುವಂಥವು, ಸಾಹಸಮಯವಾದಂಥವು. ಬೋಲರ್ ಚೆಂಡನ್ನು ಎಷ್ಟೇ ಚಮತ್ಕಾರದಿಂದ ಹಾಕಿರಲಿ, ಎಷ್ಟೇ ವೇಗವಾಗಿ ಬೋಲ್ ಮಾಡಿರಲಿ, ಚೆಂಡು ಮಾತ್ರ, ಗಾರುಡಿನ  ಇಚ್ಛೆಗೆ ಒಳಪಟ್ಟು ಅವನು ಮಂತ್ರಿಸಿ ಕಳುಹಿಸಿದ ಕಡೆ ಹಾರುತ್ತಿತ್ತೇನೋ ಎನ್ನುವಂತಿತ್ತು. ರಾನ್‌ಜಿಯ ಕಂದು ಬಣ್ಣದ ಕೈಗಳಲ್ಲಿ ಬ್ಯಾಟ್ ಮಾಂತ್ರಿಕನ ದಂಡವಾಗಿರುತ್ತಿತ್ತು.

ರಾನ್‌ಜಿಯ ಆಟ ಶಾಸ್ತ್ರಬದ್ಧವಾಗಿರಲಿಲ್ಲ; ಸಾಂಪ್ರದಾಯಿಕವಾಗಿರಲಿಲ್ಲ. ತಮಗೇ ಮೀಸಲಾದ ರೀತಿಯಲ್ಲಿ ಅವರು ಆಡುತ್ತಿದ್ದರು. ಬುದ್ಧಿ ಅಸಾಧಾರಣವಾಗಿ ತೀಕ್ಷ್ಣವಾಗಿದ್ದುದರಿಂದಲೂ, ಕಣ್ಣೂ ಅಷ್ಟೇ ತೀಕ್ಷ್ಣವಾಗಿದ್ದುದರಿಂದಲು, ಇತರರಿಗೆ ಅಸಾಧ್ಯವಾದ ಆಟವನ್ನು ರಾನ್‌ಜಿ ಆಡುತ್ತಿದ್ದರು. ತೀರ ಗಟ್ಟಿಯಾದ ವಿಕೆಟ್ಟಿನ ಮೇಲೆ ತೀರ ವೇಗವಾದ ಬೋಲರ್‌ಗಳನ್ನು ಹಿಂಗಾಲ ಮೇಲೆ ನಿಂತು ಆಡುತ್ತಿದ್ದರು. ಹಾಗೆ ಆಡುವಾಗ ಅವಸರದಲ್ಲಿ ಬ್ಯಾಟನ್ನು ನೂಕುತ್ತಿರಲಿಲ್ಲ. ರಾನ್‌ಜಿ ಚೆಂಡನ್ನು ‘ಪಾಯಿಂಟ್’ ಕಡೆಗೋ, ‘ಗಲ್ಲಿ’ ಕಡೆಗೋ’ ‘ಕಟ್’ ಮಾಡುತ್ತಿದ್ದುದೇ ಒಂದು ಮೋಜು. ಅವರು ಚೆಂಡನ್ನು ‘ಲೆಗ್’ ಕಡೆಗೆ ಆಡುತ್ತಿದ್ದ ರೀತಿಯನ್ನು ಇವತ್ತಿನವರೆಗೆ ಯಾರೂ  ಅನುಕರಿಸಲಾಗಿಲ್ಲ. ಎಷ್ಟೇ ವೇಗವಾಗಿ ಹಾಕಿದ ‘ಇನ್‌ಸ್ವಿಂಗ್’ಗಳನ್ನೂ ‘ಆಫ್ ಬ್ರೇಕ್’ಗಳನ್ನೂ ರಾನ್‌ಜಿ ಮಿಂಚಿನಂತೆ ‘ಲೆಗ್‌ಬೌಂಡರಿ’ಗೆ ಕಳುಹಿಸಿ, ಬೋಲರುಗಳ ಎದೆಯೊಡೆಯುವಂತೆ ಮಾಡುತ್ತಿದ್ದರು. ಅವರು ಹೊಡಯುತ್ತಿದ್ದ ‘ಡ್ರೈವ್’ಗಳೂ ಅದ್ಭುತವಾಗಿದ್ದವು.

ರಾನ್‌ಜಿ ಕ್ರಿಕೆಟ್ ರಂಗವನ್ನು ಪ್ರವೇಶಿಸುವುದಕ್ಕೆ ಮುಂಚೆ, ಕೆಲವೇ ಜನ ‘ಹಿಂಗಾಲಿನ ಆಟ’ (ಬ್ಯಾಕ್‌ಪ್ಲೇ) ವನ್ನು ರಕ್ಷಣೆಗೆ ಮಾತ್ರ ಆಡುತ್ತಿದ್ದರು. ರನ್ ಮಾಡುವುದಕ್ಕಲ್ಲ. ಹಿಂದೆ  ಆಡುವಾಗಲೆಲ್ಲ ಬಂದ ಚೆಂಡನ್ನು ತಡೆದು ನಿಲ್ಲಿಸುತ್ತಿದ್ದರು. ರನ್ ಮಾಡಬೇಕಾದಾಗ ಮುಂದೆ ಆಡುತ್ತಿದ್ದರು. ಎಡಗಾಲು ಮುಂದೆ ಹಾಕಿ ಆಡುವುದೇ (ಫಾರ್ವರ್ಡ್ ಪ್ಲೇ) ಸರ್ವ ಸಾಮಾನ್ಯವಾಗಿತ್ತು. ರಾನ್‌ಜಿ ಈ ವಿಧಾನವನ್ನು ಬದಲಾಯಿಸಿದರು. ಮುಂದೆ ಆಡುವುದನ್ನು ಎಲ್ಲರ ಹಾಗೆ ರನ್ ಮಾಡುವುದಕ್ಕೆ ಉಪಯೋಗಿಸಿಕೊಂಡು. ಹಿಂದೆ ಆಡುವುದನ್ನು ರಕ್ಷಣೆಗೆ, ರನ್ ಮಾಡುವುದಕ್ಕೆ ಎರಡಕ್ಕೂ ಉಪಯೋಗಿಸಿಕೊಂಡರು.

ರಾನ್‌ಜಿಗೆ ಹಿಂದಿನ ಆಟಗಾರರು ‘ಲೆಗ್‌ಸ್ಟಂಪ್’ ಮೇಲೆ ಹಾಕಿದ ‘ಗುಡ್‌ಲೆಂಗ್ತ್’ ಚೆಂಡನ್ನು ಹಾಗೇ ತಡೆದು ನಿಲ್ಲಿಸಿ ಬಿಡುತ್ತಿದ್ದರು. ಹೊಡೆದು ರನ್ ಮಾಡುವುದಕ್ಕೆ ಪ್ರಯತ್ನಿಸುತ್ತಲೇ ಇರಲಿಲ್ಲ. ಇಲ್ಲಿಯೂ ರಾನ್‌ಜಿ ಒಂದು ಮಹತ್ವದ ಬದಲಾವಣೆ ಮಾಡಿದರು. ಲೆಗ್ ಸ್ಟಂಪ್ ಮೇಲೆ ಬಿದ್ದ ಚೆಂಡನ್ನು ನಿಂತಲ್ಲೆ ನಿಂತು, ಚೆಂಡು ಬ್ಯಾಟನ್ನು ತಗಲುವ ಸಮಯಕ್ಕೆ ಸರಿಯಾಗಿ ಕೈ ಮಣಿಕಟ್ಟಿನಿಂದ ಬ್ಯಾಟನ್ನು ತಿರುಗಿಸಿ, ಚೆಂಡನ್ನು ‘ಫೈನ್ ಲೆಗ್’ ಕಡೆಗೆ ಕಳುಹಿಸುತ್ತಿದ್ದರು. ಹೀಗೆ ಆಡಿ ರಾನ್‌ಜಿ ‘ಲೆಗ್ ಗ್ಲಾನ್ಸ್’  ಎಂಬ ಹೊಸ ‘ಏಟ’ (ಸ್ಟ್ರೋಕ್) ನ್ನು ಕ್ರಿಕೆಟ್ ಆಟಗಾರರಿಗೆ ತೋರಿಸಿಕೊಟ್ಟರು.

ರಾನ್‌ಜಿ ತಮ್ಮ ಕೌಶಲದ ಬಗ್ಗೆಯಾಗಲಿ, ತಮ್ಮ ಪರಾಕ್ರಮದ ಬಗ್ಗೆಯಾಗಲಿ, ತಮ್ಮ ಸಾಧನೆಗಳ ಬಗ್ಗೆಯಾಗಲಿ ಯಾವತ್ತೂ ಜಂಬ ಕೊಚ್ಚಿಕೊಳ್ಳಲಿಲ್ಲ. ಫೈ, ಮ್ಯಾಕ್‌ಲಾರೆನ್ ಮೊದಲಾದ ಇತರರನ್ನು ಪ್ರಶಂಸಿಸುತ್ತಿದ್ದರು. ಪ್ರಪಂಚದ ಶ್ರೇಷ್ಠತಮ ಆಟಗಾರರಲ್ಲೊಬ್ಬರಾದ ರಾಜಕುಮಾರ ರಣಜಿತ್‌ಸಿನ್ಹಜಿ ವಿನಯವನ್ನಾಗಲಿ ಮರ್ಯಾದೆಯನ್ನಾಗಲಿ ಎಂದೂ ಮೀರಲಿಲ್ಲ.

ಹರ್ಷದ ಚಿಲುಮೆ

ಖಾಸಗಿ ಜೀವನದಲ್ಲಿಯೂ ತಮ್ಮ ಕ್ರಿಕೆಟ್ ಜೀವನದಲ್ಲಿಯಂತೆಯೇ ರಾನ್‌ಜಿ ನಿಗರ್ವಿಯಾಗಿದ್ದರು. ನಿಸ್ವಾರ್ಥಿಯಾಗಿದ್ದರು. ಅವರ ಬ್ಯಾಟಿಂಗ್‌ನ ಹಾಗೆ ಅವರ ಚಾರಿತ್ರ್ಯ ಕೂಡ ಸುಂದರವಾಗಿತ್ತು. ಸಂತೋಷವನ್ನು ಹರಡುತ್ತಿತ್ತು. ಅವರು ಇದ್ದ ಕಡೆ, ಹೋದ ಕಡೆಯಲ್ಲೆಲ್ಲ ಜನರನ್ನು ನಗುಮುಖರನ್ನಾಗಿ ಮಾಡಿ ಹರ್ಷವನ್ನೂ ಆನಂದವನ್ನೂ ಚೆಲ್ಲುತ್ತಿದ್ದರು.

ತಮ್ಮ ತಮ್ಮಂದಿರ ಹೆಣ್ಣುಮಕ್ಕಳು, ಗಂಡುಮಕ್ಕಳು ಎಲ್ಲರ ವಿದ್ಯಾಭ್ಯಾಸಕ್ಕೂ ರಾನ್‌ಜಿ ತಾವೇ ಹೊಣೆಯಾಗಿ ನಿಂತು, ಅವರಿಗೆ ಬೇಕಾಗಿದ್ದ ಎಲ್ಲ ಧನಸಹಾಯವನ್ನೂ ಮಾರ್ಗದರ್ಶನವನ್ನೂ ಕೊಟ್ಟರು. ಜಾಮ್‌ನಗರದ ತಮ್ಮ ಅರಮನೆಯಲ್ಲಿ ಇಂಗ್ಲೆಂಡಿನಲ್ಲೂ ಐರ್‌ಲೆಂಡಿನಲ್ಲೂ ಇದ್ದ ತಮ್ಮ ಬಂಗಲೆಗಳಲ್ಲಿ, ತಮ್ಮ ಸೋದರ ಮಕ್ಕಳು ತಮ್ಮ ತಮ್ಮ ಮನೆಗಳಲ್ಲೇ ಇರುವಷ್ಟು ಸ್ವತಂತ್ರವಾಗಿರಲು ಅವಕಾಶ ಮಾಡಿಕೊಟ್ಟರು. ಜಾಮ್‌ನಗರದ ಅನೇಕ ರಾಜಕುಮಾರರು ಓದುವುದಕ್ಕೆ ಇಂಗ್ಲೆಂಡಿಗೆ ಹೋಗುತ್ತಿದ್ದರು. ಹಾಗೆಯೇ ಸಾಮಾನ್ಯ ವರ್ಗದ ಹುಡುಗರೂ ಹೋಗುತ್ತಿದ್ದರು. ಅವರಲ್ಲಿ ಸ್ವಲ್ಪವೂ ತಾರತಮ್ಯ ತೋರಿಸದೆ ರಾನ್‌ಜಿ ಎಲ್ಲರಿಗೂ ಒಂದೇ ಪರಿಮಾಣದ ಭತ್ಯವನ್ನು ಕೊಡುತ್ತಿದ್ದರು. ಸಹಾಯ ಬೇಡಿದವರಿಗೆ  ಧಾರಾಳವಾಗಿ ಹಣವನ್ನು ಕೊಟ್ಟು ಬಿಡುತ್ತಿದ್ದರು.

ಎಲ್ಲರ ಸ್ನೇಹಿತ

ಯಾರೂ ತಮ್ಮ ಶತ್ರುಗಳಾಗಿರಬಾರದು, ಎಲ್ಲರೂ ತಮ್ಮ ಸ್ನೇಹಿತರಾಗಿರಬೇಕು ಎಂಬುದು ರಾನ್‌ಜಿಯ ದೊಡ್ಡ ಆಸೆ. ಯಾರಾದರೂ ತಿಳಿದೋ, ತಿಳಿಯದೆಯೋ, ಉದ್ದೇಶ ಪೂರ್ವಕವಾಗಿಯೋ, ಆಕಸ್ಮಾತ್ತಾಗಿಯೋ, ತಮಗೆ ಕೇಡು ಮಾಡಿದರೆ, ರಾನ್‌ಜಿ ಅವರನ್ನು ಕ್ಷಮಿಸಿ ಬಿಡುತ್ತಿದ್ದರು. ಮನುಷ್ಯನಲ್ಲಿ ಒಳ್ಳೆಯ ಗುಣಗಳನ್ನು ಮಾತ್ರ ಕಾಣುವುದೇ ಅವರ ಇಷ್ಟ.

ಇಂಗ್ಲೆಂಡಿನಲ್ಲಿ ಸ್ಪೇನ್ಸ್ ಎಂಬ ಕಡೆ ರಾನ್‌ಜಿ ದೊಡ್ಡ ಜಮೀನು ಮಾಡಿ, ಅಲ್ಲಿ ಒಂದು ಬಂಗಲೆಯನ್ನು ಕಟ್ಟಿ ಕೊಂಡಿದ್ದರು. ೧೯೧೫ರಲ್ಲಿ ಈ ಜಮೀನಿನಲ್ಲಿ ಸ್ನೇಹಿತರೊಡನೆ ಬೇಟೆಯಾಡುತ್ತಿದ್ದಾಗ ಪಕ್ಕದವನೊಬ್ಬನ ಬಂದೂಕಿನ ಗುಂಡು ಆಕಸ್ಮಾತ್ತಾಗಿ ಹಾರಿ ರಾನ್‌ಜಿಯ ಕಣ್ಣಿಗೆ ಗಾಯವಾಯಿತು. ರಾನ್‌ಜಿ ಗಾಯ ಮಾಡಿದವನನ್ನು ದೂಷಿಸಲಿಲ್ಲ. ಅವನ ಮೇಲೆ ಕೂಗಾಡಲಿಲ್ಲ. ಹತ್ತಿರದಲ್ಲಿದ್ದ ಡಾಕ್ಟರೊಬ್ಬರನ್ನು ಕರೆದುಕೊಂಡು, ಐದು ಮೈಲಿ ನಡೆದು, ಅಲ್ಲಿಂದ ಕುದುರೆಯೇರಿ ಆಸ್ಪತ್ರೆಯನ್ನು ಸೇರಿದರು. ಚಿಕಿತ್ಸೆಯೇನೋ ಆಯಿತು. ಆದರೆ ಆ ಒಂದು ಕಣ್ಣು ಹೋಯಿತು. ತಮ್ಮ ಕಣ್ಣನ್ನು ಇಂಗಿಸಿದವನು ಯಾರು ಎಂಬುದನ್ನು ರಾನ್‌ಜಿ ಕಡೆಯವರೆಗೂ ಯಾರಿಗೂ ತಿಳಿಸಲಿಲ್ಲ. ಆತನ ಮೇಲೆ ತಮಗೆ ಹಗೆತನವಿಲ್ಲ ಎಂದು ತೋರಿಸುವುದಕ್ಕಾಗಿ ರಾನ್‌ಜಿ ಆತನನ್ನು ಪುನಃ ತಮ್ಮ ಮನೆಗೆ ಬರಮಾಡಿಕೊಂಡರು.

ಮಾತಿನ ಘನತೆ

ರಾನ್‌ಜಿ ಯಾವತ್ತೂ ಕೊಟ್ಟ ಮಾತನ್ನು ಮುರಿಯಲಿಲ್ಲ, ಮರೆಯಲಿಲ್ಲ. ಪೂರ್ತಿ ನಂಬಿಕಸ್ತರಾಗಿದ್ದರು. ದೊಡ್ಡ ವಿಚಾರದಲ್ಲಾಗಲಿ, ಸಣ್ಣ ವಿಚಾರದಲ್ಲಾಗಲಿ ಅವರು ಇತ್ತ ಮಾತು ಬರೆದುಕೊಟ್ಟ ಪತ್ರದ ಹಾಗೆ. ಕೇಂಬ್ರಿಜ್ ನಗರದ ವರ್ತಕರಿಗೆ ರಾನ್‌ಜಿಯ ಈ ಗುಣ ಚೆನ್ನಾಗಿ ತಿಳಿದಿತ್ತು .ಅಲ್ಲಿ ವಿದ್ಯಾರ್ಥಿಯಾಗಿದ್ದಾಗ ರಾನ್‌ಜಿಗೆ ವರ್ಷದ ಭತ್ಯವಾಗಿ ಹನ್ನೆರಡು ಸಾವಿರ ರೂಪಾಯಿ ಊರಿನಿಂದ ಬರುತ್ತಿತ್ತು. ಆದರೆ ರಾನ್‌ಜಿ ಇದನ್ನು ಮೀರಿ ಖರ್ಚು ಮಾಡುತ್ತಿದ್ದರು. ಅದರಲ್ಲಿ ಬಹುಭಾಗ ಸ್ನೇಹಿತರನ್ನು ಸತ್ಕರಿಸುವುದರಲ್ಲಿ ಖರ್ಚಾದಷ್ಟು. ಅಂತೂ ಕೇಂಬ್ರಿಜ್ ವರ್ತಕರಲ್ಲಿ ಸಾಲ ಕೇಳಬೇಕಾಗಿ ಬಂತು. ಅಲ್ಲಿಯ ವಿದ್ಯಾಭ್ಯಾಸ ಮುಗಿದು, ಊರು ಬಿಡುವಾಗ ರಾನ್‌ಜಿ ರೈಲ್ವೆ ಸ್ಟೇಷನ್ನಿಗೆ ಹೋಗುವುದಕ್ಕಾಗಿ ಸಾರೋಟನ್ನು ತರಿಸಿ, ಅದರೊಳಗೆ ಕಂಬಳಿಯನ್ನು ಮುಚ್ಚಿಕೊಂಡು ಅವಿತುಕೊಂಡು ಹೋದರು ಎಂದು ಒಂದು ಆಧಾರವಿಲ್ಲದ ಕಥೆ ಸ್ವಲ್ಪ ಕಾಲ ಚಲಾವಣೆಯಲ್ಲಿತ್ತು. ವರ್ತಕರಂತೂ ಏನೂ ತಗಾದೆ ಮಾಡಲಿಲ್ಲ. ಈ ಮನುಷ್ಯನ ಗುಣ ಅವರಿಗೆ ಗೊತ್ತಿತ್ತು. ಹಣಕ್ಕೆ ಮಾತ್ರ ಅವರು ಬಹಳ ವರ್ಷಗಳು ಕಾಯಬೇಕಾಯಿತು. ಕಡೆಗೆ ರಾನ್‌ಜಿ ಕೇಂಬ್ರಿಜ್‌ನ ಪ್ರತಿಯೊಬ್ಬ ವರ್ತಕನಿಗೂ ಅವನ ಹಣವನ್ನು ಶೇಕಡ ಐದರ ಬಡ್ಡಿ ಸಮೇತ ಹಿಂದಿರುಗಿಸಿದರು.

ಭಾರತದ ಬಗ್ಗೆ ಅಭಿಮಾನ

ಭಾರತ, ಭಾರತೀಯರು ಎಂದರೆ ರಾನ್‌ಜಿಗೆ ಬಹಳ ಗೌರವ, ತಮ್ಮ ದೇಶದ ವಿಚಾರವಾಗಿ ಯಾರಾದರೂ ನಿಕೃಷ್ಟವಾಗಿ ಮಾತಾಡಿದರೆ ಅವರು ಸಹಿಸುತ್ತಿರಲಿಲ್ಲ. ಇಂಗ್ಲೆಂಡಿನಲ್ಲಿದ್ದ ಯಾವ ಭಾರತೀಯನೂ ತನ್ನ ಜನರ, ತನ್ನ ದೇಶದ ಹೆಸರಿಗೆ ಕಳಂಕ ತರುವಂತೆ ನುಡಿಯಕೂಡದು, ನಡೆಯಕೂಡದು ಎಂಬುದು ಅವರ ಮಹದಿಚ್ಛೆ. ಇಂಗ್ಲೆಂಡಿನಲ್ಲಿ ತಂಗಿದ ಭಾರತೀಯರ ನಡೆ-ನುಡಿಗಳ ವಿಷಯದಲ್ಲಿ ರಾನ್‌ಜಿ ತುಂಬ ಕಟ್ಟುನಿಟ್ಟಾಗಿದ್ದರು. ರಾನ್‌ಜಿಯ ಸೋದರನ ಮಗ ದುಲೀಪ್, ಇಂದಿಗೆ ನಲವತ್ತು ವರ್ಷಗಳ ಹಿಂದೆ, ಕೇಂಬ್ರಿಜ್‌ನಲ್ಲಿ ವಿದ್ಯಾರ್ಥಿಯಾಗಿದ್ದ ಒಂದು ಸಲ ಆ ನಗರದ ವಪತ್ರಕೆಯೊಂದು ತನ್ನ ಸೈಕಲ್‌ಗೆ ದೀಪವಿಲ್ಲದೆ ಸವಾರಿ ಮಾಡಿದ್ದಕ್ಕಾಗಿ ನ್ಯಾಯಾಲಯದಲ್ಲಿ ರಾಜಕುಮಾರ ದುಲೀಪ್‌ಗೆ ದಂಡ ವಿಧಿಸಲಾಯಿತು ಎಂದು ದೊಡ್ಡದಾಗಿ ವರದಿ ಮಾಡಿತು. ಇದನ್ನು ನೋಡಿದ ರಾನ್‌ಜಿ ದುಲೀಪ್ ಗೆ “ನಮ್ಮ ವಿಚಾರವಾಗಿ ಇಲ್ಲಿಯ ಜನ ಮಾತಾಡುತ್ತಿರುವುದು ಸಾಲದು ಅಂತ ನೀನೂ ಹೀಗೆ ಮಾಡಬೇಕು?” ಎಂದು ಟೆಲಿಗ್ರಾಂ ಕಳುಹಿಸಿದರು.

ದೇಶಕ್ಕಾಗಿ ಆಡುತ್ತಿದ್ದೀಯೆ

ಇಂಗ್ಲೆಂಡಿನಲ್ಲಿ ದುಲೀಪ್ ತನ್ನ ಪ್ರಾರಂಭದ ಪಂದ್ಯವೊಂದರಲ್ಲಿ ತುಂಬ ಚೆನ್ನಾಗಿ ಆಡಿದ. ಇದರಿಂದ ದುಲೀಪ್ ಸೊಕ್ಕಬಹುದು ಎಂದು ರಾನ್‌ಜಿಗೆ ಅನ್ನಿಸಿತು.

“ನಿನ್ನ ದೇಶಕ್ಕೆ ಗೌರವ ತರಬೇಕು, ನೆನಪಿಟ್ಟುಕೊ.”

ಪಂದ್ಯ ಮುಗಿದ ಮೇಲೆ ರಾನ್‌ಜಿ ದುಲೀಪ್‌ನನ್ನು ಕರೆದು ಹೀಗೆ ಬುದ್ಧಿವಾದ ಹೇಳಿದರು: “ದೇವರು ಕೆಲವೇ ಜನಕ್ಕೆ ಕೊಡುವ ಶಕ್ತಿಗಳನ್ನು ನಿನಗೆ ಕೊಟ್ಟಿದ್ದಾನೆ. ನಿನಗೆ ಕ್ರಿಕೆಟ್ ಆಡುತ್ತಿರಬೇಕು ಎನ್ನುವ ಇಚ್ಛೆ ಇದ್ದರೆ, ನಿನಗೆ ಬೇಕಾದ ಎಲ್ಲ ಸಹಾಯವನ್ನೂ ನಾನು ಕೊಡುತ್ತೇನೆ. ಆದರೆ ಇದನ್ನು ನೀನು ಯಾವಾಗಲೂ ಜ್ಞಾಪಕದಲ್ಲಿಟ್ಟುಕೊಂಡಿರಬೇಕು; ನೀನು ಆಡುತ್ತಿರುವಾಗ ನಿನಗೊಬ್ಬನಿಗಾಗಿ ಮಾತ್ರ ಆಡುತ್ತಿಲ್ಲ . ನಿನ್ನ ದೇಶಕ್ಕಾಗಿ ಆಡುತ್ತಿದ್ದೀಯ; ಇದನ್ನು ಮರೆಯಕೂಡದು. ಸಾವಿರಾರು ಇಂಗ್ಲಿಷ್ ಜನರು ನೀನು ಆಡುವುದನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುತ್ತಾರೆ. ಲಕ್ಷಾಂತರ ಜನ ಪತ್ರಿಕೆಗಳಲ್ಲಿ ಓದುತ್ತಿರುತ್ತಾರೆ. ಅವರೆಲ್ಲರ ದೃಷ್ಟಿಯಲ್ಲಿ ನೀನು ಭಾರತೀಯ; ಭಾರತದ ಪ್ರಜೆಯ ಒಂದು ಪ್ರತೀಕ, ಭಾರತದ ಪ್ರತಿನಿಧಿ, ನನ್ನ ಇಚ್ಛೆ ಇಷ್ಟು- ಮುಂದೆ ನೀನು ಪಶ್ಚಾತ್ತಾಪ ಪಡಬಹುದಾದಂಥ ಯಾವ ಕೆಲಸವನ್ನೂ ಈಗ ಮಾಡಬೇಡ. ನಿನ್ನ ದೇಶಕ್ಕೆ ಕೇಡು ತರುವಂತಹದೇನನ್ನೂ ಮಾಡಬೇಡ. ಭಾರತದ ಹಿತಕ್ಕಾಗಿ ಉಪಯೋಗಿಸಬೇಕಾದಂಥ ಶಕ್ತಿಯನ್ನು ದೇವರು ನಿನಗೆ ಕೊಟ್ಟಿದ್ದಾನೆಂಬುದನ್ನು ಜ್ಞಾಪಕದಲ್ಲಿಡು.”

ರಾನ್‌ಜಿಯದು ತುಂಬು ಜೀವನ, ಪರಿಪೂರ್ಣ ಚಾರಿತ್ರ್ಯ. ಪರದೇಶಗಳಲ್ಲಿ ಭಾರತದ ಕೀರ್ತಿ ಧ್ವಜವನ್ನು ಎತ್ತಿ ಹಿಡಿದು ಗೌರವ ತಂದ ಮಹಾನ್ ವ್ಯಕ್ತಿಗಳ ಪಂಕ್ತಿಯಲ್ಲಿ ರಾನ್‌ಜಿಯದು ಮರ್ಯಾದೆಯ ಸ್ಥಾನ.