(ಕ್ರಿ. ಶ. ೧೮೪೩-೧೯೧೦) (ಪ್ರತಿಯೊಂದು ರೋಗಕ್ಕೂ ಒಂದು ನಿರ್ದಿಷ್ಟ ಸೂಕ್ಷ್ಮಜೀವಿ ಕಾರಣವೆಂಬ ನಿಯಮ)

ಪ್ರತಿಯೊಂದು ರೋಗಕ್ಕೂ ಒಂದು ನಿರ್ದಿಷ್ಟ ರೋಗಾಣು ಕಾರಣವಾಗಿರುತ್ತದೆ ಎಂಬ ನಿಯಮವನ್ನು ಕಂಡುಹಿಡಿದು ವೈದ್ಯವಿಜ್ಞಾನ ಕ್ಷೇತ್ರದಲ್ಲಿ ಅದ್ಭುತ ಪ್ರಗತಿಗೆ ಹುಟ್ಟು ಹಾಕಿದ ವಿಜ್ಞಾನಿ, ರಾಬರ್ಟ್ ಕೋಕ್.

ರಾಬರ್ಟ್ ಕೋಕ್ ೧೮೪೩ರಲ್ಲಿ ಜನಿಸಿದರು. ಜರ್ಮನಿಯ ಗೊಟಿಂಜೆನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿ ೧೮೬೬ರಲ್ಲಿ ಪದವೀಧರರಾದರು. ಸಮುದ್ರಯಾನ ಮಾಡಬೇಕು. ಜಾಗತಿಕ ಪ್ರವಾಸ ಕೈಕೊಂಡು ವಿವಿಧ ಸ್ಥಳಗಳ ಅನ್ವೇಷಣೆ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಆದರೆ ಅವರ ಹುಟ್ಟು ಹಬ್ಬದ ಸಂದರ್ಭವೊಂದರಲ್ಲಿ ಅವರ ಪತ್ನಿ ಎಮಿ ಅವರಿಗೆ ಕಾಣಿಕೆಯಾಗಿ ನೀಡಿದ ಸೂಕ್ಷ್ಮದರ್ಶಕವೊಂದು ಅವರ ಹವ್ಯಾಸವನ್ನೇ ಬದಲಿಸಿತು. ಆ ಸೂಕ್ಷ್ಮದರ್ಶಕದ ಸಹಾಯದಿಂದ ಅವರು ರೋಗಪೀಡಿತ ಮನುಷ್ಯರ, ಪ್ರಾಣಿಗಳ ರಕ್ತದಲ್ಲಿನ ಸೂಕ್ಷ್ಮಜೀವಿಗಳನ್ನು ಪರೀಕ್ಷಿಸಲು ಆರಂಭಿಸಿದರು. ರೋಗವುಂಟು ಮಾಡುವಂಥ ಸೂಕ್ಷ್ಮ ಜೀವಿಗಳ ಪ್ರಪಂಚವೇ ಅವರ ಕಣ್ಣಿಗೆ ಕಂಡಿತು.

ಆ ಕಾಲದಲ್ಲಿ ದನಗಳ ಸಾವಿಗೆ ಕಾರಣವಾಗುತ್ತಿದ್ದ ನೆರಡಿ ಎಂಬ ತೀವ್ರ ವ್ರಣ ರೋಗದ ಬಗ್ಗೆ ಸಂಶೋಧನೆ ಮಾಡಿದರು. ಅದಕ್ಕೆ ಕಾರಣವಾಗುವ ಸೂಕ್ಷ್ಮಜೀವಿಗಳನ್ನು ಗುರುತಿಸಿದರು. ಇವರು ಬರ್ಲಿನ್ ನಲ್ಲಿ ಇಂಪೀ ರಿಯಲ್ ಹೆಲ್ತ್ ಆಫೀಸ್ ನ ಎಕ್ಸ್ ಟ್ರಾ ಆರ್ಡಿನರಿ ಅಸೋಸಿಯೇಟ್ ಆಗಿ ಸೇವೆಗೆ ತೊಡಗಿದಾಗ ಸಂಶೋಧನೆಗಳನ್ನು ಮುಂದುವರಿಸಲು ಇನ್ನೂ ಹೆಚ್ಚು ಅನುಕೂಲವಾಯಿತು.

ಭಾರತಕ್ಕೆ ಭೇಟಿ ಕೊಟ್ಟಾಗ ರಾಬರ್ಟ್ ಕೋಕ್ ಮುಂಬೈ, ಕಲ್ಕತ್ತಾ ನಗರಗಳಲ್ಲಿ ಕಾಲರಾ ರೋಗಕ್ಕೆ ಕಾರಣವಾದ ಸೂಕ್ಷ್ಮಜೀವಿಗಳ ಕುರಿತು ಅಧ್ಯಯನ ಮಾಡಿದರು. ಆಫ್ರಿಕದಲ್ಲಿ ಸ್ಲೀಪಿಂಗ್ ಸಿಕ್ನೆಸ್ ರೋಗದ ಸೂಕ್ಷ್ಮ ಜೀವಿಗಳನ್ನು ಕುರಿತು ಸಂಶೋಧನೆ ಮಾಡಿದರು.

ಕ್ಷಯರೋಗದ ಸೂಕ್ಷ್ಮಜೀವಿಗಳನ್ನು ಕುರಿತು ಇವರು ಮಾಡಿದ ಸಂಶೋಧನೆ ಅತ್ಯಂತ ಮಹತ್ವದ್ದು. ಇದಕ್ಕಾಗಿ ೧೯೦೫ರಲ್ಲಿ ಇವರು ನೋಬೆಲ್ ಪಾರಿತೋಷಕ ಪಡೆದರು.

ಹೀಗೆ ದನ-ಕರುಗಳನ್ನು ಮತ್ತು ಮನುಷ್ಯರನ್ನು ಅನೇಕ ರೋಗಗಳಿಂದ ರಕ್ಷಿಸುವುದಕ್ಕೆ ನಾಂದಿಯಾದಂಥ ಸಂಶೋಧನೆಗಳನ್ನು ಮಾಡಿದ ರಾಬರ್ಟ್ ಕೋಹ್ ೧೯೧೦ರಲ್ಲಿ ನಿಧನ ಹೊಂದಿದರು.