(ಕ್ರಿ. ಶ. ೧೮೭೮-೧೯೬೦) (ಗಳಗಂಡ ರೋಗ ನಿಯಂತ್ರಣ)

ಐರ್ಲೆಂಡಿನಲ್ಲಿ ಹುಟ್ಟಿ, ಭಾರತದಲ್ಲಿ ಸೇವೆ ಸಲ್ಲಿಸಿ “ನಿಜವಾದ ಭಾರತೀಯ ಸೇವಕ್” ನೆಂದು ಪ್ರಶಂಸೆಗೆ ಪಾತ್ರನಾದ ವೈದ್ಯ, ಮೇಜರ್ ಜನರಲ್ ಸರ್ ರಾಬರ್ಟ್ ಮೆಕ್ ಕಾರಿಸನ್ ರಾಬರ್ಟ್‌ ಮೆಕ್ ಕಾರಿಸನ್ ೧೮೭೮ರಲ್ಲಿ ಐರ್ಲೆಂಡಿನ ಪೋರ್ಟಾಡೌನ್ ನಲ್ಲಿ ಜನಿಸಿದರು. ಬೆಲ್ ಫಾಸ್ಟಿನ ಮಹಾರಾಣಿ ಕಾಲೇಜು ವ್ಯಾಸಂಗ ಮುಗಿಸಿಕೊಂಡು ವೈದ್ಯಶಾಸ್ತ್ರಾಧ್ಯಯನಕ್ಕೆ ತೊಡಗಿದ. ಇವರು ಡಬ್ಲಿನ್ ವಿಶ್ವವಿದ್ಯಾಲಯದಿಂದ ವೈದ್ಯ ಪದವಿ ಪಡೆದರು. ಆಗ ಬ್ರಿಟಿಷರೇ ಆಳುತ್ತಿದ್ದ ಭಾರತಕ್ಕೆ ಇವರು ಬಂದದ್ದು ಭಾರತೀಯ ವೈದ್ಯ ಸೇವೆಯಲ್ಲಿ ದೊರೆತ ಉದ್ಯೋಗದಿಂದಾಗಿ. ಈ ಸೇವೆಯಲ್ಲಿ ತೊಡಗಿದಾಗ ಅವರ ವಯಸ್ಸು ೨೩ ವರ್ಷವಷ್ಟೆ. ಹಿಮಾಲಯದ ತಪ್ಪಲು ಪ್ರದೇಶ ಅವರ ಸೇವಾ ಕ್ಷೇತ್ರವಾಗಿತ್ತು. ತನಗೆ ದೊರೆತ ಅವಕಾಶಗಳನ್ನು ಬಳಸಿಕೊಂಡು ರಾಬರ್ಟ್ ಮೆಕ್ ಕಾರಿಸನ್ ವೈದ್ಯಕೀಯ ರಂಗದಲ್ಲಿ ಅತ್ಯಂತ ಮಹತ್ವವೆಂದು ಪರಿಗಣಿಸಲ್ಪಡುವಂಥ ಸಂಶೋಧನೆಗಳನ್ನು ಮಾಡಿದರು.

ಹಿಮಾಲಯದ ತಪ್ಪಲು ಪ್ರದೇಶದ ಅನೇಕ ಭಾಗಗಳಲ್ಲಿ ಜನರ ಕತ್ತಿನಲ್ಲಿ ಗುರಾಣಿ ಗ್ರಂಥಿ (ಥೈರಾಯ್ಡ್ ಗ್ಲಾಂಡ್) ದೊಡ್ಡದಾಗಿ ಬೆಳೆದು ಗಳಗಂಡವಾದದ್ದನ್ನು ಈತ ಗಮನಿಸಿದರು. ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ಕೂಡ ಗಳಗಂಡ ಇದ್ದುದನ್ನು ಆತ ಕಂಡರು. ಇನ್ನೂ ಆಗ ಹೆಚ್ಚು ವೈದ್ಯ ವಿಜ್ಞಾನಿಗಳ ಗಮನವನ್ನು ಸೆಳೆಯದಿದ್ದ ಗಳಗಂಡದ ಬಗ್ಗೆ ರಾಬರ್ಟ್ ಮೆಕ್ ಕಾರಿಸನ್ ಸಂಶೋಧನೆ ಮಾಡಲು ದೃಢ ನಿರ್ಧಾರ ಕೈಗೊಂಡರು. ಆಹಾರದಲ್ಲಿ ಐಯೊಡಿನ್ ಕೊರತೆ ಇದ್ದರೆ ಗುರಾಣಿ ಗ್ರಂಥಿಯ ಸ್ರವಿಕೆ ಕುಗ್ಗುತ್ತದೆ. ಪರಿಣಾಮವಾಗಿ, ಪಿಟ್ಯುಟರಿ ಗ್ರಂಥಿ ಹೊರಹಾಕುವ ಹಾರ್ಮೊನು ಗುರಾಣಿ ಗ್ರಂಥಿಯನ್ನು ಉತ್ತೇಜಿಸುವ ವಸ್ತುವಾಗಿ ಕಾರ್ಯಮಾಡುತ್ತದೆ. ಇಂಥ ಉತ್ತೇಜನ ದೊರಕಿದಾಗ ಗುರಾಣಿ ಗ್ರಂಥಿ ದಪ್ಪವಾಗಿ ಬೆಳೆದು ಗಳಗಂಡವಾಗುತ್ತದೆ ಎಂಬುದನ್ನು ಮೆಕ್ ಕಾರಿಸನ್ ಕಂಡು ಹಿಡಿದರು. ಸಂಶೋಧನೆಗಳನ್ನು ಮುಂದುವರಿಸಿದ ಆತ ಕುಡಿಯುವ ನೀರಿನಲ್ಲಿ ಸೇರ್ಪಡೆಯಾಗುವ ಕಲ್ಮಶವೂ ಸಮತೋಲನವಿಲ್ಲದ ಆಹಾರವೂ ಗಳಗಂಡದ ಬೆಳವಣಿಗೆ ಇತರ ಕಾರಣಗಳೆಂಬುದನ್ನು ಸಹ ಪತ್ತೆ ಹಚ್ಚಿದರು.

ದಕ್ಷಿಣ ಭಾರತದಲ್ಲೂ ಸೇವೆ ಸಲ್ಲಿಸಿದ ಮೆಕ್ ಕಾರಿಸನ್ ಅಲ್ಲಿ ಬೆರಿ ಬೆರಿ ರೋಗ, ಮೂತ್ರಕೋಶದ ಕಲ್ಲುಗಳು ಮೊದಲಾದವುಗಳ ಬಗ್ಗೆ ಸಂಶೋಧನೆ ಮಾಡಿದರು.

ಇವರು ಕೂನೂರಿನಲ್ಲಿ ಸ್ಥಾಪಿಸಿದ ಪೌಷ್ಟಿಕ ಆಹಾರ ಸಂಶೋಧನಾ ಕೇಂದ್ರ ಮುಂದೆ ಹೈದರಾಬಾದಿಗೆ ಸ್ಥಳಾಂತರಗೊಂಡು ಜಗತ್ಪ್ರಸಿದ್ಧ ಸಂಶೋಧನಾ ಕೇಂದ್ರವಾಗಿ ಬೆಳೆದಿದೆ.

ಲ್ಯಾನ್ಸೆಟ್ ಪತ್ರಿಕೆ ಇವರನ್ನು “ನಿಜವಾದ ಭಾರತೀಯ ಸೇವಕ” ಎಂದು ಕೊಂಡಾಡಿತು.

ರಾಬರ್ಟ್ ಮೆಕ್ ಕಾರಿಸನ್ ೧೯೬೦ರಲ್ಲಿ ಆಕ್ಸ್ ಫರ್ಡಿನಲ್ಲಿ ನಿಧನ ಹೊಂದಿದರು.