ಕರ್ನಾಟಕದಲ್ಲಿ ಗ್ವಾಲ್ಹೇರ ಘರಾಣೆಯ ಗಾಯಕಿಯನ್ನು ಪ್ರಚಾರಮಾಡಿ, ಅನೇಕ ಶಿಷ್ಯರನ್ನು ತಯಾರು ಮಾಡಿದ ಹಿರಿಮೆ ಪಂ.ರಾಮಕೃಷ್ಣಬುವಾ ವಝೆಯವರಿಗೆ ಸಲ್ಲುತ್ತದೆ. ಪಂ. ರಾಮಕೃಷ್ಣಬುವಾ ವಝೆ ಯವರಿಗೆ ಸಲ್ಲುತ್ತದೆ. ಪಂ. ರಾಮಕೃಷ್ಣಬುವಾ ವಝೆಯವರು ಮೂಲತಃ ಮಹಾರಾಷ್ಟ್ರದವರು. ಕರ್ನಾಟಕದ ಜನರ ಸರಳ ಸ್ವಭಾವ, ಪ್ರೇಮ, ಸರಳ ಜೀವನ, ಉದಾರತೆ ಇವೆಲ್ಲವೂ ಅವರ ಮನವನ್ನು ಸೂರೆಗೊಂಡವು. ಆದ್ದರಿಂದ ಅವರು ಕರ್ನಾಟಕದಲ್ಲಿಯೇ ವಾಸಿಸಲು ಇಚ್ಛಿಸಿ ಕರ್ನಾಟಕದಲ್ಲಿ ಗ್ವಾಲ್ಹೇರ ಘರಾಣೆಯ ಗಾಯಕಿಯನ್ನು ಬೆಳೆಸಲು ಸಹಕಾರಿಯಾದರು.

ಶ್ರೀ ರಾಮಕೃಷ್ಣಬುವಾ ನರಹರ ವಘೆ ಅವರು ೧೮೭೧ ರಲ್ಲಿ ಮಹಾರಾಷ್ಟ್ರದಲ್ಲಿಯ ಸಾವಂತವಾಡಿ, ಸಂಸ್ಥಾನದ ಓಝರೆ ಎಂಬ ಗ್ರಾಮದಲ್ಲಿ ಜನಿಸಿದರು. ಶ್ರೀ ನರಹರ ವಝೆಯವರು ಹೆಚ್ಚು ಕಲಿತಿರದಿದ್ದರೂ ಅವರಿಗೆ ಸಂಗೀತದಲ್ಲಿ ಬಹಳ ಒಲವು ಇತ್ತು. ಭಕ್ತಿ ಗೀತೆಗಳನ್ನು ಮನದುಂಬಿ ಹಾಡುತ್ತಿದ್ದರು. ನರಹರ ವಝೆಯವರ ಹೆಂಡತಿಗೂ ದೇವರಲ್ಲಿ ಬಹಳ ಶ್ರದ್ಧೆಯಿತ್ತು. ಬಡತನದಿಂದಿದ್ದರೂ ಗಂಡ-ಹೆಂಡರಿಬ್ಬರೂ ಅನ್ಯೂನ್ಯವಾಗಿದ್ದರು. ದೇವರ ಅನುಗ್ರಹದಿಂದ ಗಂಡು ಮಗು ಜನಿಸಿತು. ಮಗುವಿಗೆ ರಾಮಕೃಷ್ಣ ಎಂದು ನಾಮಕರಣ ಮಾಡಿದರು. ಮಗನು ಹಾಗೂ ಹೀಗೂ ನಾಲ್ಕನೆಯ ತರಗತಿಯವರೆಗೂ ಶಾಲೆಯ ಶಿಕ್ಷಣವಾಯಿತು. ಶಾಲೆಯ ಗುರುಗಳು ಇವನ ಸಂಗೀತದ ಒಲವನ್ನು ಕಂಡು “ಈ ಹುಡುಗನು ಶಾಲೆಯಲ್ಲಿ ಕಲಿಯಲಾರ”. ಎಲ್ಲಿಯಾದರೂ ಇವನಿಗೆ ಸಂಗೀತ-ಕಲಿಸಲು ಏರ್ಪಾಡು ಮಾಡಲು ಅವನ ತಾಯಿಗೆ ಸ್ಪಷ್ಟವಾಗಿ ಹೇಳಿದರು. ತಾಯಿಗೂ ಈ ಸಲಹೆ ಸೂಕ್ತವೆನಿಸಿತು.

ಕಾಗಲವು ಚಿಕ್ಕ ಸಂಸ್ಥಾನವಾದರೂ ಆಸ್ಥಾನದಲ್ಲಿ ಸಂಗೀತಕ್ಕೆ ಪ್ರೋತ್ಸಾಹವಿತ್ತು. ಶ್ರೀ ಭಲವಂತರಾವ ಪೊಹರೆಯವರು ಆಸ್ಥಾನದ ಸಂಗೀತ ವಿದ್ವಾಂಸರಾಗಿದ್ದರು. ರಾಮಕೃಷ್ಣನ ತಾಯಿಯು ಅವರನ್ನೆ ಶುಲ್ಕವಿಲ್ಲದೆ ರಾಮಕೃಷ್ಣನಿಗೆ ಕಲಿಸಲು ವಿನಂತಿಸಬೇಕೆಂದು ನಿರ್ಧರಿಸಿದರು. ಅದರಂತೆ ದೇಶಪಾಂಡೆಯವರೊಡನೆ ಪೊಹರೆ ಬುವಾ ಅವರ ಹತ್ತಿರ ರಾಮಕೃಷ್ಣನನ್ನು ಕರೆದುಕೊಂಡು ಹೋದಳು.

ಪೊಹರೇ ಬುವಾ ಅವರು ರಾಮಕೃಷ್ಣನ ಧ್ವನಿ ಮತ್ತು ಬುದ್ಧಿಯನ್ನು ಪರೀಕ್ಷಿಸಲು ಹಾಡಲು ಹೇಳಿದರು. ರಾಮಕೃಷ್ಣ ಭಯಪಡದೆ ಭಕ್ತಿಗೀತೆಗಳನ್ನು ಸುಂದರವಾಗಿ ಹಾಡಿದ್ದನ್ನು ಕೇಳಿ ಬುವಾ ಅವರಿಗೆ ಸಂತೋಷವಾಯಿತು. ಆದರೆ ಯಾವ ಪ್ರತಿಫಲವಿಲ್ಲದೇ ಸಂಗೀತ ಕಲಿಸಲು ಬುವಾ ಅವರಿಗೆ ಮನಸ್ಸಿಲ್ಲದಿದ್ದರೂ ಹಿರಿಯರ ಆಗ್ರಹಕ್ಕೆ ಸಮ್ಮತಿಸಿ ರಾಮಕೃಷ್ಣನಿಗೆ ಸಂಗೀತ ಕಲಿಸಲು ಪ್ರಾರಂಭಿಸಿದರು. ಎರಡು ವರ್ಷಕಾಲ ಸರಳಿಸ್ವರ, ಜಂಟಿಸ್ವರ ಇತ್ಯಾದಿಗಳನ್ನು ಕಲಿಸಿದರು. ಆದರೆ ಶುಲ್ಕವಿಲ್ಲದೆ ಮುಂದೆ ಕಲಿಸದೆ ಪುನಃ ಅವನ್ನೆ ಮಾಡಲು ಹೇಳಿದಾಗ, ಹಣಕೊಡದೆ ಗುರುಗಳು ಕಲಿಸುವುದಿಲ್ಲವೆಂದು ತಿಳಿದು ರಾಮಕೃಷ್ಣನಿಗೆ ವ್ಯಥೆಯಾಯಿತು… ವಿಠೋಬಾ ಅಣ್ಣಾ… ಎಂಬ ಸಂಗೀತಗಾರರು ಪೊಹರೇ ಬುವಾ ಅವರಿಗಿಂತ ಉತ್ತಮ ಗಾಯಕರು ಮತ್ತು ಬಿಚ್ಚು ಮನಸ್ಸಿನಿಂದ ಕಲಿಸುವವರು ಎಂದು ಕೆಲವರು ಹೇಳಿದರು. ಆದ್ದರಿಂದ ರಾಮಕೃಷ್ಣನು ಅವರಲ್ಲಿಗೇ ಹೋಗಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ನಿಶ್ಚಯಿಸಿದನು.

ಗ್ವಾಲ್ಹೇರದಲ್ಲಿ ಸಂಗೀತ ಅಭ್ಯಾಸ ಮಾಡಿದ ವಿಠೋಬಾ ಅಣ್ಣಾ ಹಡಪ ಅವರು ಶ್ರೇಷ್ಠ ಸಂಗೀತ ವಿದ್ವಾಂಸರು. ರಾಮಕೃಷ್ಣನು ಇವರಲ್ಲಿ ಒಂದು ವರ್ಷ ಸಂಗೀತ ಅಭ್ಯಾಸ ಮಾಡಿದನು. ಕೇವಲ ಹನ್ನೆರಡು ವರುಷದವನಿರುವಾಗಲೇ ಅವನ ತಾಯಿಯು ಮದುವೆ ಮಾಡಲು ಕಾರಾಲಕ್ಕೆ ಕರೆಸಿಕೊಂಡಳು. ತಾಯಿಯ ಕಷ್ಟ ಜೀವನ ನೋಡಿ, ರಾಮಕೃಷ್ಣನು ನೊಂದುಕೊಂಡು ಹೇಗಾದರೂ ವಿದ್ಯಾರ್ಜನೆ ಮಾಡಿ ಜೀವನೋಪಾಯಕ್ಕೆಕ ದಾರಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಕಾಲು ನಡಿಗೆಯಿಂದಲೇ ಹೊರಟು ಪುಣೆ ಪಟ್ಟಣಸೇರಿದನು. ಅಲ್ಲಿ ಒಂದು ಮದುವೆ ಮನೆಯಲ್ಲಿ ಪ್ರಸಿದ್ಧ ಗಾಯಕಿಯೊಬ್ಬರ ಗಾಯನವಿತ್ತು. ಆಕೆ ಹಾಡಿದ ಮೀರಾಭಜನೆ ರಾಮಕೃಷ್ಣನ ಮೇಲೆ ಅತ್ಯಂತ ಪ್ರಭಾವ ಬೀರಿತು. ಅದೇ ಹಾಡನ್ನು ಅಲ್ಲಿ ಇಲ್ಲಿ ಹಾಡುತ್ತಾ ಅಷ್ಟಿಷ್ಟು ಸಂಪಾದನೆ ಮಾಡಿದನು. ಮುಂದೆ ಬನಾರಸಿಗೆ ಹೋದಾಗ ಅಲ್ಲಿ ಅವನಿಗೆ ನಿಸ್‌ಆರ ಹುಸೇನ ಖಾನರ ಮೊದಲ ಭೆಟ್ಟಿಯಾಯಿತು. ಬನಾರಸಿನಲ್ಲಿ ವಿಷ್ಣುವಂತ ಛತ್ರೆ ಅವರ ಸರ್ಕಸ್ಸಿನಲ್ಲಿ ಇಳಿದುಕೊಂಡನು. ಅವರ ಜೊತೆಗೆ ಹರಿಮತಖಾನರೂ ಇದ್ದರು. ಕೆಲವು ತಿಂಗಳ ನಂತರ ಅವರ ಜೊತೆಯಲ್ಲಿ ಗ್ವಾಲ್ಹೇರಿಗೆ ಬಂದು ಸೇರಿದನು.

ಸುಪ್ರಸಿದ್ಧ ಗ್ವಾಲ್ಹೇರ ಘರಾಣೆಯ ಗಾಯಕರಾದ ನಥ್ಥೆಖಾನರ ಮಗನೇ ನಿಸ್ಸಾರಹುಸೇನಖಾನರು. ಇವರಲ್ಲಿ ಅನೇಕ ರಾಗಗಳೂ, ಸಾವಿರಾರು ಅಸ್ತಾಯಿಗಳೂ ಇದ್ದವು. ರಾಮಕೃಷ್ಣ ಇವರ ಸಂಗೀತ, ಕೇಳಿದಾಗ ಸಂಗೀತವನ್ನು ಕಲಿತರೆ ಇವರಿಂದಲೇ ಕಲಿಯಬೇಕೆಂದು ನಿಶ್ಚಯಿಸಿ ತಾನೊಬ್ಬ ಬಡ ವಿದ್ಯಾರ್ಥಿ ಗುರು ದಕ್ಷಿಣೆ ಕೊಡಲು ತನ್ನಲ್ಲೇನೂ ಇಲ್ಲ. ಗುರುಸೇವೆಯನ್ನು ಮಾತ್ರ ನಿಷ್ಠೆಯಿಂದ ಮಾಡುವೆನೆಂದು ನಿಸ್ಸಾರ ಹುಸೇನ ಖಾನರಿಗೆ ಅಂಗಲಾಚಿ ಬೇಡಿಕೊಂಡನು. ನಿಸ್ಸಾರ ಹುಸೇನಖಾನರು ಉದಾರಿಗಳಾಗಿದ್ದರು. ನಾಳಿನಿಂದ ಪಾಠಕ್ಕೆ ಬಾ ಎಂದು ಹೇಳಿದರು. ಹೀಗೆ ರಾಮಕೃಷ್ಣನ ಸಂಗೀತ ಶಿಕ್ಷಣವು ಖಾನಸಾಹೇಬರಲ್ಲಿ ಪ್ರಾರಂಭವಾಯಿತು. ಖಾನಸಾಹೇಬರು ರಾಮಕೃಷ್ಣನಿಗೆ ತಮ್ಮ ಮನೆಯಲ್ಲಿಯೇ ಉಳಿದುಕೊಳ್ಳಲು ಹೇಳಿದರು. ರಾಮಕೃಷ್ಣನಿಗೆ ಗುರುಗಳ ಸೇವೆಯೊಂದಿಗೆ ಉಳಿದ ಶಿಷ್ಯರಿಗೆ ಪಾಠ ಹೇಳುವ ಸಮಯದಲ್ಲಿ ತಾನೂ ಅದರಿಂದ ಲಾಭ ಪಡೆಯುವಂತಾಯಿತು. ಖಾನಸಾಹೇಬರು ಪೂರ್ಣ ಮನಸ್ಸಿನಿಂದ ಸಂಗೀತ ವಿದ್ಯೆಯನ್ನು ಧಾರೆ ಎರೆದರು. ರಾಮಕೃಷ್ಣನಿಗೆ ಈ ತಾಲೀಮು ೮-೧೦ ವರ್ಷ ನಡೆಯಿತು.

ಕಾಲಕ್ರಮೇಣ ರಾಮಕೃಷ್ಣನು ಸಂಗೀತದಲ್ಲಿ ಅಪೂರ್ವವಾದ ಪ್ರಗತಿಯನ್ನು ಸಾಧಿಸಿದನು. ಖಾನಸಾಹೇಬರ ಪ್ರೋತ್ಸಾಹದಿಂದ ಅನೇಕ ಸ್ವತಂತ್ರ ಕಚೇರಗಳನ್ನು ಮಾಡತೊಡಗಿದನು. ಖಾನಸಾಹೇಬರು ದೇಶ ಸಂಚಾರಕ್ಕೂ ಅನುಮತಿ ಇತ್ತರು.

ಗ್ವಾಲ್ಹೇರದಿಂದ, ಆಗ್ರಾ, ರೇವಾಗಳಲ್ಲಿ ಕಾರ್ಯಕ್ರಮ ಮಾಡುತ್ತಾ ಬರ್ಹನಾಪುರದಲ್ಲಿಯೂ ಕಾರ್ಯಕ್ರಮ ನಿರ್ವಹಿಸಿ ಬರೂಲಿ ನಗರಕ್ಕೆ ಬಂದರು. ಅಲ್ಲಿ ಸ್ವಾಮಿ ವಿವೇಕಾನಂದರ ಭೆಟ್ಟಿಯಾಯಿತು. ಇವರ ಸಂಗೀತವನ್ನು ಕೇಳಿ ಅವರು ತಮ್ಮಲ್ಲಿಯೇ ಇರಲು ಹೇಳಿದರು. ವಿವೇಕಾನಂದರು ಬುವಾ ಅವರಿಗೆ ಸಂಗೀತದ ಬಗ್ಗೆ ಅನೇಕ ಹೊಸ ವಿಷಯಗಳನ್ನು ತಿಳಿಸಿಕೊಟ್ಟರು. ಬುವಾ ಅವರು ಅವರ ಸಾನಿಧ್ಯದಲ್ಲಿ ೧೫-೨೦ ದಿವಸ ಇದ್ದರು. ರಾಮಕೃಷ್ಣರು ಅಲ್ಲಿಂದ ನೇಪಾಳಕ್ಕೆ ಹೋದರು. ಅಲ್ಲಿ ೫೦ ರೂಪಾಯಿಯ ಒಂದು ನೌಕರಿಯೂ ಸಿಕ್ಕಿತು. ಅಲ್ಲಿ ಒಂದು ವರ್ಷ ಕೆಲಸ ಮಾಡಿ ಸಂಗೀತ ಕಚೇರಿಗಳನ್ನು ಮಾಡಿ ಮುಂಬಯಿಗೆ ಬಂದರು. ಸಂಗೀತ ಪ್ರೇಮಿಗಳು ರಾಮಕೃಷ್ಣ ಬುವಾ ಹಾಗೂ ಭಾಸ್ಕರ ಬುವಾ ಅವರ ಕಚೇರಿ ಏರ್ಪಡಿಸಿದರು. ಇವರ ಸಂಗೀತ ಅಲ್ಲಿಯ ಶ್ರೋತೃಗಳ ಮೇಲೆ ಒಳ್ಳೇ ಪರಿಣಾಮ ಬೀರಿತು.

ಬೂವಾ ಅವರಿಗೆ ತಾಯಿಯ ನೆನಪು ಮೇಲಿಂದ ಮೇಲೆ ಆಗುತ್ತಿತ್ತು. ತಮ್ಮ ತಾಯಿ ಹಾಗೂ ಪತ್ನಿಯ ಜೀವನ ನಿರ್ವಹಣೆಯನ್ನು ಹೊರಲು ನಿಶ್ಚಯಿಸಿ ತಮ್ಮ ಮನೆಗೆ ಹಿಂದಿರುಗಿದರು. ಅವರ ತಾಯಿಗೆ, ಪತ್ನಿಗೆ, ಅತ್ಯಂತ ಸಂತೋಷವಾಯಿತು.

ಗೋವೆಯಲ್ಲಿ ರಾಮಕೃಷ್ಣ ಬುವಾ ಅವರು ಲಾಂಬಗಾಂವಕರ್ ಮತ್ತು ನಾನಾಸಾಹೇಬ ದೇಸಾಯಿ ಅವರ ಆಶ್ರಯದಲ್ಲಿ ಕೆಲವು ಕಾಲ ಕಳೆದರು. ಅಲ್ಲಿ ಸತತವಾಗಿ ತಮ್ಮ ಸಾಧನೆಯನ್ನು ಮಾಡಿದರು. ಅದೇ ಸಮಯದಲ್ಲಿ ಕೆಲವು ಶಿಷ್ಯರಿಗೆ ಸಂಗೀತಪಾಠ ಹೇಳಿಕೊಡಲು ಪ್ರಾರಂಭಿಸಿದರು. ಕೇಸರಬಾಯಿ ಕೇರಕರ, ತಾರಾಬಾಯಿ ದೇವಿ, ತಾನು ಬಾಯಿ, ಸಾಖಳಕರಿನಾ, ತುಂಗಾಸಾನೆ, ಪಾರ್ವತಿ ಮುಂತಾದವರಿಗೆ ಸಂಗೀತ ಹೇಳಿಕೊಡುತ್ತಿದ್ದರು. ಮುಂದೆ ಕೆಲದಿನ ಕಂಡಗೀಕರ ಅವರಲ್ಲಿ ನೌಕರಿ ಮಾಡಿದರು. ಅಲ್ಲಿ ದತ್ತಿಬಾಯಿಗೆ ಶಿಕ್ಷಣಕೊಟ್ಟರು.

ರಾಮಕೃಷ್ಣಬುವಾ ಅವರು ವರ್ಹಡದಲ್ಲಿದ್ದಾಗ ನಾಟ್ಯಕಲಾ ಕಂಪನಿಯ ಮೂಲಕರಾದ ಗೋಪಾಳರಾವ ಮರಾಠೆಯವರು ಇವರು ಶಿಷ್ಯತ್ತ ವಹಿಸಿದರು. ಮುಂದೆ ಲಲಿತಕಲಾ ಕಂಪನಿಯ ಮಾಲಿಕರದ ಕೇಶವರಾವ ಭೋಸಲೆಯವರು ಶಿಷ್ಯರಾದರು. ಬೆಳಗಾವಿಯಲ್ಲಿದ್ದಾಗ ಬಲವಂತ ಸಂಗೀತ ಮಂಡಳಿಯ ಮೂಲಕ ದೀನಾನಾಥ ಮಂಗೇಶಕರ ಅವರ ಶಿಷ್ಯರಾದರು. ಕೇಶವರಾವ ಭೋಸಲೆಯವರ ನಿಧನದ ನಂತರ ಪೆಂಢಾರಕರರು ಇವರ ಶಿಷ್ಯತ್ವವನ್ನು ಸ್ವೀಕರಿಸಿದರು. ಧಾರವಾಡದ ಗುರುರಾವ ದೇಶಪಾಂಡೆಯವರು ಇವರ ಶಿಷ್ಯರಾದರು. ನಂತರ ಲಕ್ಷ್ಮಣಸಿಂಗ್‌ ದೌಲತಾಬಾದ, ತುಕಾರಾಮ ನಾಗೇಶಕರ, ದಾಮಲೇ ಬುವಾ, ಹರಿಬುವಾ ಘಾಂಗ್ರೇಕರ, ದಿನಕರ ಪಂತ ಪಾಠಕ್‌, ನಾರಾಯಣರಾವಭಿಡೆ,ನಾರಾಯಣ ಮರಾಠೆ ಹಾಗೂ ಕಾಗಲಕರ ಬುವಾ ಅವರು ಇವರ ಶಿಷ್ಯರಾದರು. ಬೆಳಗಾವಿಯಲ್ಲಿದ್ದಾಗ ಬಲವಂತ ಸಂಗೀತ ಮಂಡಳಿಯ ಮೂಲಕ ದೀನಾನಾಥ ಮಂಗೇಶಕರ ಅವರು ಶಿಷ್ಯರಾದರು. ಕೇಶವರಾವ ಭೋಸಲೆಯವರ ನಿಧನದ ನಂತರ ಪೆಂಢಾರಕರರು ಇವರ ಶಿಷ್ಯತ್ವ್ನ್ನು ಸ್ವೀಕರಿಸಿದರು. ಧಾರವಾಡದ ಗುರುರಾವ ದೇಶಪಾಂಡೆಯವರು ಇವರ ಶಿಷ್ಯರಾದರು. ನಂತರ ಲಕ್ಷ್ಮಣಸಿಂಗ್‌ ದೌಲತಾಬಾದ, ತುಕರಾಮ ನಾಗೇಶಕರ, ದಾಮಲೇ ಬುವಾ, ಹರಿಬುವಾ ಘಾಂಗ್ರೇಕರ, ದಿನಕರ ಪಂತ ಪಾಠಕ್‌, ನಾರಾಯಣರಾವ ಭಿಡೆ, ನಾರಾಯಣ ಮರಾಠೆ ಹಾಗೂ ಕಾಗಲಕರ ಬುವಾ ಅವರು ಇವರ ಶಿಷ್ಯರಾದರು. ರಾಮಕೃಷ್ಣಬುವಾ ಅವರ ಮಗ ಶಿವರಾಮಬುವಾ ವಝೆ ಅವರೂ ಅವರ ಶಿಷ್ಯರಾಗಿದ್ದರು. ಎಲ್ಲರಿಗೂ ಪ್ರೀತಿಯಿಂದ ನಿರ್ವಂಚನೆಯಿಂದ ವಿದ್ಯಾದಾನ ಮಾಡುತ್ತಿದ್ದರು.

ರಾಮಕೃಷ್ಣ ಬುವಾ ಅವರು ಸುಮರು ೧೯೧೮ರ ಸುಮಾರಿಗೆ ಬೆಳಗಾವಿಗೆ ಬಂದರು. ಕರ್ನಾಟಕದ ಜನರ ಸಹೃದಯತೆ, ಇವರನ್ನು ಇಲ್ಲಿಯೇ ಕಟ್ಟಿಹಾಕಿದಾಗ ಬೆಳಗಾವಿಯಲ್ಲಿಯೇ ವಾಸಿಸಲು ಬಯಸಿದರು. ಮನೆಯವರನ್ನು ಕರೆತಂದು ಬೆಳಗಾವಿಯಲ್ಲಿಯೇ ವಾಸಿಸತೊಡಗಿದರು. ಇಲ್ಲಿ ಆರ್ಥಿಕ ಸ್ಥಿತಿಯೂ ಉತ್ತಮಗೊಂಡಿತು. ಕರ್ನಾಟಕದ ಅನೇಕ ಊರುಗಳಲ್ಲಿ ಮೇಲಿಂದ ಮೇಲೆ ಸಂಗೀತ ಕಚೇರಿಗಳಾಗತೊಡಗಿದವು. ಬೆಳಗಾವಿಯಲ್ಲಿ ಸುಮಾರು ಇಪ್ಪತ್ತೈದು ವರ್ಷ ವಾಸಿಸಿದರು.

ರಾಮಕೃಷ್ಣ ಬುವಾ ಅವರದು ಅಪ್ರಚಲಿತ ಕಠಿಣ ರಾಗಗಳನ್ನು ಹಾಡುವುದರಲ್ಲಿ ಎತ್ತಿದ ಕೈ. ಈ ವೇಳೆಗೆ ಜನರು ಇವರನ್ನು ಗಾಯನಾಚಾರ್ಯ ಎಂದು ಸಂಬೋಧಿಸತೊಡಗಿದರು. ಇದೇ ವೇಳೆಯಲ್ಲಿ ತಾಯಿಯು ಮುಂಬಯಿಯಲ್ಲಿ ತೀರಿಕೊಂಡರು. ಬುವಾ ಅವರು ತಮ್ಮ ವಿದ್ವತ್ತು ಸಂಪತ್ತಿನ ಶ್ರೇಯಸ್ಸನ್ನು ತಮ್ಮ ತಾಯಿಗೇ ಸಲ್ಲಿಸುತ್ತಿದ್ದರು. ಮುಂದೆ ಕೆಲವು ದಿನ ಪುಣೆಗೆ ಹೋಗಿ ನಿಂತರು. ಅಲ್ಲ. ಸಂಗೀತ ಕಲಾಪ್ರಕಾಶ ಎಂಬ ಹೆಸರಿನ ಎರಡು ಗ್ರಂಥಗಳನ್ನು ಬರೆದು ಪ್ರಕಟಿಸಿದರು. ಇವುಗಳಲ್ಲಿ ಅನೇಕ ಹೊಸ ರಾಗಗಳ ಚೀಜುಗಳನ್ನು ಸ್ವರ ಲಿಪಿ ಸಹಿತ ಬರೆದಿದ್ದಾರೆ.

ಗಾಯನಾಚಾರ್ಯ ರಾಮಕೃಷ್ಣ ಬುವಾ ವಝೆ ಅವರಿಗೆ ಶಿವರಾಮ ಬೂವಾ ಹಾಗೂ ಲಕ್ಷಣರಾವ ಎಂಬ ಇಬ್ಬರು ಮಕ್ಕಳಿದ್ದರು. ಲಕ್ಷ್ಮಣರಾವ್‌ ಅವರ ಮಗನೂ ಸಿತಾರವಾದಕನು. ರಾಮಕೃಷ್ಣಬುವಾ ವಝೆ ಅವರು ಪುಣೆಯಲ್ಲಿ ಮಧುಮೇಹದಿಂದ ೧೯೪೫ರಲ್ಲಿ ಮೇ ೫ನೆಯ ದಿನಾಂಕದಂದು ಸ್ವರ್ಗವಾಸಿಗಳಾದರು.

ರಾಮಕೃಷ್ಣಬುವಾ ಅವರು ೨೫ ವರ್ಷಕಾಲ ಕರ್ನಾಟಕದಲ್ಲಿದ್ದು ಗ್ವಾಲ್ಹೇರ ಪರಂಪರೆಯ ಅನೇಕ ಹೆಸರಾಂತ ಶಿಷ್ಯರನ್ನು ತಯಾರಿಸಿರುವರು. ಕರ್ನಾಟಕದಲ್ಲಿ ಎಲ್ಲೆಡೆಗಳಲ್ಲಿ ಸಂಚರಿಸಿ ಎಲ್ಲರಿಗೂ ತಮ್ಮ ಅಮೋಘವಾದ ಸಂಗೀತದ ಸವಿಯನ್ನು ನೀಡಿದರು. ಶ್ರೋತೃಗಳಲ್ಲಿ ಶಾಸ್ತ್ರೀಯ ಸಂಗೀತದ ಅಭಿರುಚಿಯನ್ನು ಬೆಳೆಸಿದರು.ರಾಮಕೃಷ್ಣಬುವಾ ಅವರು ಹೇಳಿ ಕೊಡುವ ಸಂಗೀತ ಶಿಕ್ಷಣ ಪದ್ಧತಿ ಸರಳವೆನಿಸಿದರೂ ಅವರು ಕಲಿಸುವಾಗಿನ ನಿಯಮಗಳು ಅತಿ ಕಠಿಣವಾಗಿದ್ದವು. ಖ್ಯಾಲದ ಅಸ್ತಾಯಿ ಅಂತರಾಗಳನ್ನು ಕಲಿಸುವಾಗ ಸ್ವರ-ತಾಲ-ಲಯಗಳಿಗೆ ಬಹಳ ಮಹತ್ವವನ್ನು ಕೊಡುತ್ತಿದ್ದರು. ಮೊದಲು ಅಸ್ತಾಮಿಯನ್ನು ಪೂರ್ತಿಯಾಗಿ ಸ್ವರದಲ್ಲಿ ಕಲಿಸುತ್ತಿದ್ದರು. ಲಯದ ಜೊತೆಯಲ್ಲಿಯೇ ಇದನ್ನು ಕಲಿಸುತ್ತಿದ್ದರು. ಸ್ವರ ಲಯಗಳಲ್ಲಿ ಅಸ್ತಾಮಿ ಅಂತರಾಗಗಳು ಬಂದ ನಂತರ ಬಂದಿಶನ್ನು ತಾಳದಲ್ಲಿ ಕೂಡಿಸುತ್ತಿದ್ದರು. ಇದು ಸರಿಯಾಗಿ ಬರದ ಹೊರತು ಮುಂದಕ್ಕೆ ಪಾಠ ಹೇಳಿಕೊಡುತ್ತಿರಲಿಲ್ಲ. ಅಸ್ತಾಮಿ ಅಂತರಾ ಬರದ ಹೊರತು ರಾಗದ ಕಲ್ಪನೆಯು ಆಗುವುದಿಲ್ಲವೆಂದೂ ರಾಗಗಳ ಆರೋಹ ಅವರೋಹಗಳಿಗೂ ಆಲಾಪ ತಾನ, ಇವೆಲ್ಲವುಗಳಿಗೆ ಅಸ್ತಾಮಿ ಅಂತರಾಗಳೇ ಆಧಾರವೆಂದು ಹೇಳುತ್ತಿದ್ದರು. ಇದರ ನಂತರ ಆಲಾಪ ತಾನುಗಳನ್ನು ಹೇಳಿ ಕೊಡುತ್ತಿದ್ದರು. ಬುವಾ ಅವರು ಶಬ್ದಗಳ ಉಚ್ಚಾರಕ್ಕೆ, ಸಾಹಿತ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರು. ತಾನುಗಳು ಸ್ಪಷ್ಟವಿರಬೇಕೆಂದು ತಾನು ಕಲಿಸಿ ಅವುಗಳನ್ನು ಸರಿಯಾಗಿ ಹಾಡುವವರೆಗೆ ಪದೇ ಪದೇ ಅದನ್ನೆ ಮಾಡಿಸುತ್ತಿದ್ದರು. ಅಸ್ಪಷ್ಟ ತಾನುಗಳಿಂದ ಪರಿಣಾಮವು ಸರಿಯಾಗಿ ಆಗುವುದಿಲ್ಲವೆಂದು ಹೇಳುತ್ತಿದ್ದರು. ಬೋಲ ತಾನು ಅರ್ಥವಾಗುವಂತೆ ಇರಬೇಕು. ಲಯಕ್ಕೆ ಅನುಗುಣವಾಗಿರಬೇಕೆಂದು ಹೇಳುತ್ತಿದ್ದರು. ಮನಃಪೂರ್ವಕವಾಗಿ ಕಲಿಸುವ ರಾಮಕೃಷ್ಣಬುವಾ ಅವರ ಈ ವಿಧಾನ ಶಿಷ್ಯಂದಿರೆಇಗೆ ಅಮೂಲ್ಯ ವರದಾನವಾಗಿತ್ತು.

ಇವರ ಶಿಷ್ಯವೃಂದದವರಿಂದ ಸಂಗೀತವು ಕರ್ನಾಟಕದಲ್ಲಿ ಉಳಿದು ಗ್ವಾಲ್ಹೇರ ಪರಂಪರೆ ಬೆಳೆಯಿತು. ಇವರ ಮಗ ಶಿವರಾಮ ಬುವಾ ಅವರು ಕೊನೆಯವರೆಗೂ ಬೆಳಗಾವಿಯಲ್ಲಿಯೇ ಉಳಿದರು. ರಾಮಕೃಷ್ಣ ಬುವಾ ಅವರ ಅಳಿಯಂದಿರಾದ ದಾಮಲೆಬುವಾ ಅವರೂ ಕೂಡ ಬೆಳಗಾವಿಯಲ್ಲಿಯೇ ಸ್ಥಾಯಿಯಾಗಿ ನಿಂತರು. ಗುರುರಾವ್‌ ದೇಶಪಾಂಡೆ, ತುಂಗಾಬಾಯಿ ಹಾನಗಲ್‌, ತಾನೂಬಾಯಿ ಸಾಖಳಕರೀನಾ, ಪಾರ್ವತಿ ಹಾನಗಲ್‌ ಇವರೆಲ್ಲರೂ ರಾಮಕೃಷ್ಣ ಬುವಾ ಅವರಿಂದ ಪಡೆದ ಸಂಗೀತ ಶಿಕ್ಷಣವನ್ನು ಮುಂದುವರೆಸಿ ಗ್ವಾಲ್ಹೇರ ಪರಂಪರೆಯ ಸಂಗೀತವನ್ನು ಮುಂದುವರೆಸಿ ಮುಂದಿನ ಪೀಳಿಗೆಗೆ ಸಂಗೀತ ಕಲಿಸುವುದರೊಂದಿಗೆ ಈ ಪರಂಪರೆಯ ಸಂಗೀತ ಇಂದಿಗೂ ಸಮೃದ್ಧವಾಗಿ ಬೆಳೆಯುತ್ತಿದೆ. ಇದರ ಶ್ರೇಯಸ್ಸು ಗಾಯನಾಚಾರ್ಯ ರಾಮಕೃಷ್ಣ ಬವಾ ವಝೆ ಅವರಿಗೆ ಸಲ್ಲುತ್ತಿದೆ.