ರಾಮಕೃಷ್ಣಾನಂದರು

ರಾಮಕೃಷ್ಣ ಪರಮಹಂಸರು ಬಹು ದೊಡ್ಡ ಜ್ಞಾನಿಗಳು. ಅವರಿದ್ದುದು ಹತ್ತೊಂಬತ್ತನೆಯ ಶತಮಾನದಲ್ಲಿ. ರಾಮಕೃಷ್ಣರಿಗೆ ಒಂದು ಗುರಿ ಇತ್ತು. ಧರ್ಮದ ಹೆಸರಿನಲ್ಲಿ ಕಾದಾಟ, ಯುದ್ಧ ಆಗಿದ್ದನ್ನೂ ಆಗುತ್ತಿದ್ದುದನ್ನೂ ಅವರು ನೋಡಿದ್ದರು. ಸರ್ವ ಧರ್ಮ ಸಮನ್ವಯವನ್ನು ಬೋಧಿಸುವುದಕ್ಕಾಗಿ ಅವರಿಗೆ ಕಲಿತ ಶಿಷ್ಯರ ಅಗತ್ಯವಿತ್ತು. ಆಗ ಅವರು ತಮ್ಮ ಹೃದಯದ ಅಳಲನ್ನು ತೋಡಿಕೊಳ್ಳುತ್ತಾ, ತಾವೊಬ್ಬರೇ ನಿಂತು ಗಟ್ಟಿಯಾಗಿ, ‘ಸದಾ ದೇವರ ವಿಷಯವನ್ನೇ ಮಾತನಾಡುತ್ತಾ ಜೀವನ ಸಾಗಿಸುವ ಮಕ್ಕಳನ್ನು ನನಗೆ ಕೊಡು ತಾಯಿ’ ಎಂದು ಕಾಳಿದೇವಿಯನ್ನು ಪ್ರಾರ್ಥಿಸುತ್ತಿದ್ದರು. ಅವರ ಪ್ರಾರ್ಥನೆಯ ಫಲವೋ ಎಂಬಂತೆ, ಅವರ ಸಾಧನೆ ಮುಗಿದನಂತರ ಅವರು ಬಯಸಿದ ವ್ಯಕ್ತಿಗಳು ಒಬ್ಬೊಬ್ಬರಾಗಿ ಅವರ ಬಳಿಗೆ ಬರತೊಡಗಿದರು.

ಅಂತಹ ಮಹಾವ್ಯಕ್ತಿಯ ಅನುಯಾಯಿ ಗಳಾಗಿದ್ದವರಲ್ಲಿ ನರೇಂದ್ರ, ಶಶಿ, ರಾಖಾಲ್, ಶರತ್ ಮುಂತಾದವರು ಇದ್ದರು.

ಬಾಲ್ಯ, ವಿದ್ಯಾಭ್ಯಾಸ

ಸ್ವಾಮಿ ರಾಮಕೃಷ್ಣಾನಂದರ ಸಂನ್ಯಾಸ ಪೂರ್ವದ ಹೆಸರು ಶಶಿಭೂಷಣ ಚಕ್ರವರ್ತಿ. ಹೂಗ್ಲಿ ಜಿಲ್ಲೆಯ ಇಚ್ಛಾಪುರದ ಈಶ್ವರಚಂದ್ರಚಕ್ರವರ್ತಿ ಮತ್ತು ಭಾವಸುಂದರೀದೇವಿ ಎಂಬುವರಿಗೆ ಮೊದಲನೆಯ ಮಗನಾಗಿ ೧೮೬೩ರ ಜುಲೈ ೧೩ ರಂದು ಹುಟ್ಟಿದ.

ತಂದೆ ದೇವಿಯ ಆರಾಧಕರು. ಮಹಾ ವಿದ್ವಾಂಸರು. ಆಚಾರಶೀಲರು. ದೇವರಲ್ಲಿ ಭಕ್ತಿಯುಳ್ಳವರು. ವಿನಯವಂತರು. ತಮ್ಮ ಧರ್ಮದಲ್ಲಿನ ಎಲ್ಲ ಕಟ್ಟು, ನಿಟ್ಟುಗಳನ್ನೂ ಚಾಚೂ ತಪ್ಪದೆ ಪಾಲಿಸುತ್ತಿದ್ದವರು. ವಿಶೇಷ ದಿನಗಳಲ್ಲಿ ಅವರು ತಮ್ಮ ಹಳ್ಳಿಯಲ್ಲೇ ಇರಲಿ, ಕಲ್ಕತ್ತದಲ್ಲೇ ಇರಲಿ, ಇಡೀ ರಾತ್ರಿಯನ್ನು ದೇವಿಯ ಪೂಜೆಯಲ್ಲಿ ಕಳೆಯುತ್ತಿದ್ದರು. ನೋಡಲು ಭೀಮ ಕಾಯರಾಗಿದ್ದರು. ಅವರ ಅಗಲವಾದ ಮುಖ ಯಾವುದೋ ದಿವ್ಯಪ್ರಭೆಯಿಂದ ಬೆಳಗುತ್ತಿತ್ತು. ಅವರ ಬೆನ್ನ ಮೇಲೆ ಹರಡಿದ ಉದ್ದವಾದ ತಲೆಗೂದಲು, ಗಾಳಿಗೆ ಹಾರಾಡುತ್ತಿದ್ದ ಉದ್ದನೆಯ ಗಡ್ಡ, ಹಣೆಯ ಮೇಲಿನ ಅಗಲವಾದ ಚಂದನ ಇವನ್ನು ನೋಡಿದರೆ ನಮ್ಮ ಪುರಾತನ ಋಷಿಗಳನ್ನು ನೋಡಿದಂತೆ ಆಗುತ್ತಿತ್ತು.

ಶಶಿಯೂ ಸಹ ಈ ವಾತಾವರಣದಲ್ಲಿ ಬೆಳೆದ. ಮನೆಯಲ್ಲಿ ಸದಾ ದೇವಿಯ ಕೀರ್ತನೆ, ದೇವಿಭಾಗವತ ಮುಂತಾದವುಗಳ ಪಾರಾಯಣ ಇವೆಲ್ಲವೂ ಇವನ ಎಳೆ ಮೆದುಳಿನ ಮೇಲೆ ಅಚ್ಚೊತ್ತಿ ಇವನೂ ದೇವರನ್ನು ಪ್ರೀತಿಸುವಂತೆ ಮಾಡಿದ್ದವು. ನವರಾತ್ರಿಯ ಸಮಯದಲ್ಲಿ ಒಂದು ದಿನ ತಾನು ಪೂಜೆಯಲ್ಲಿ ತೊಡಗಿ ಬೆಳಗ್ಗೆ ೬ರಿಂದ ಮರುದಿನ ಬೆಳಗ್ಗೆ ೬ ಗಂಟೆಯವರೆಗೂ ಏನನ್ನೂ ತಿನ್ನದೆ, ದೇವಿಯ ಆರಾಧನೆಯಲ್ಲಿ ತೊಡಗಿರುತ್ತಿದ್ದ. ಅದು ಕೇವಲ ಬಾಹ್ಯಾಡಂಬರವಾಗಿರಲಿಲ್ಲ.

ಶಶಿ ತನ್ನ ಪ್ರೌಢಶಾಲೆ ಮತ್ತು ಕಾಲೇಜು ವ್ಯಾಸಂಗಕ್ಕಾಗಿ ಕಲ್ಕತ್ತೆಯಲ್ಲಿ ತನ್ನ ತಂದೆಯ ದೊಡ್ಡಪ್ಪನ ಮಗ ಗಿರೀಶ್‌ಚಂದ್ರ ಎಂಬುವರ ಮನೆಯಲ್ಲಿ ಇರಬೇಕಾಯಿತು. ಗಿರೀಶ್‌ಚಂದ್ರ ನಿಗೂ ಶರತ್‌ಚಂದ್ರ ಎಂಬ ಮಗನಿದ್ದ. ಅವನು ಶಶಿಗೆ ಸ್ವಲ್ಪ ಕಿರಿಯ ಅಷ್ಟೆ. ಶಾಲೆ ಮತ್ತು ಕಾಲೇಜಿನಲ್ಲಿ ಶರತ್-ಶಶಿ ಸಹ ಪಾಠಿಗಳಾಗಿದ್ದರು. ಶರತ್ ಮುಂದೆ ರಾಮಕೃಷ್ಣ ಸಂಘದಲ್ಲಿ ಸ್ವಾಮಿ ಶಾರದಾನಂದ ಎಂದು ಪ್ರಸಿದ್ಧರಾದರು.

ಶಶಿ ಶಾಲೆಯಲ್ಲಿ ಬಹಳ ಚುರುಕಾದ ಹುಡುಗ, ಬುದ್ಧಿ ವಂತ, ಪ್ರತಿಭಾಶಾಲಿ ಎಂದೆಲ್ಲಾ ಹೆಸರು ಪಡೆದ. ಕಲ್ಕತ್ತಾ ವಿಶ್ವ ವಿದ್ಯಾಲಯದ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಅವನು ವಿದ್ಯಾರ್ಥಿ ವೇತನವನ್ನು ಕೂಡ ದೊರಕಿಸಿಕೊಂಡ. ಕಲ್ಕತ್ತೆಯ ಆಲ್ಬರ್ಟ್ ಕಾಲೇಜಿನಲ್ಲಿ ಎಫ್.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅನಂತರ ಈಗ ವಿದ್ಯಾಸಾಗರ್ ಕಾಲೇಜ್ ಎಂದು ಹೆಸರು ಪಡೆದಿರುವ ಮೆಟ್ರೋಪಾಲಿಟನ್ ಕಾಲೇಜಿನಲ್ಲಿ ಬಿ. ಎ. ಓದಿದ. ಅವನು ತನ್ನ ವಿಶೇಷ ಅಧ್ಯಯನಕ್ಕಾಗಿ ಆರಿಸಿಕೊಂಡದ್ದು- ಗಣಿತಶಾಸ್ತ್ರ, ಭಾರತೀಯ ತತ್ವಶಾಸ್ತ್ರ ಮತ್ತು ಇಂಗ್ಲಿಷ್. ಆದರೆ ಆ ಹೊತ್ತಿಗಾಗಲೇ ರಾಮಕೃಷ್ಣರು ಅನಾರೋಗ್ಯದಿಂದ ಹಾಸಿಗೆ ಹಿಡಿದು ನರಳುತ್ತಿದ್ದುದರಿಂದ, ಅವರನ್ನು ಶುಶ್ರೂಷೆ ಮಾಡುವ ಸಲುವಾಗಿ ಬಿ.ಎ. ಪರೀಕ್ಷೆಗೆ ಕುಳಿತುಕೊಳ್ಳಲೇ ಇಲ್ಲ.

ಬ್ರಹ್ಮ ಸಮಾಜ

ಶಶಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವಾಗ, ಕೇಶವಚಂದ್ರರ ಭಾಷಣಗಳನ್ನು ಕೇಳಿ, ಆಗಿನ ಅನೇಕ ವಿದ್ಯಾರ್ಥಿಗಳಂತೆ ತಾನೂ ಪ್ರಭಾವಿತನಾಗಿ ಬ್ರಹ್ಮ ಸಮಾಜವನ್ನು ಸೇರಿದ. ಬ್ರಹ್ಮ ಸಮಾಜ ಎನ್ನುವ ಸಂಸ್ಥೆ ಹಿಂದುಧರ್ಮವನ್ನು ಕುರಿತು ಸರಿಯಾದ ತಿಳುವಳಿಕೆಯನ್ನು ಜನಕ್ಕೆ ಕೊಡಲು ಸ್ಥಾಪಿತವಾಗಿತ್ತು.

ಬ್ರಹ್ಮ ಸಮಾಜ ಆಗ ಸುಧಾರಣೆಯ ಪಥದಲ್ಲಿತ್ತು. ಮೂರ್ತಿಪೂಜೆಯನ್ನು ಬಿಡಿಸುವುದು, ಬಾಲ್ಯ ವಿವಾಹ ಪದ್ಧತಿ ಯನ್ನು ಕೊನೆಗೊಳಿಸುವುದು, ಸ್ತ್ರೀ ಶಿಕ್ಷಣದ ಬಗ್ಗೆ ಪ್ರಚಾರ ಮಾಡುವುದು, ಭಾರತೀಯರ ಹೀನ ಅವಸ್ಥೆಯನ್ನು ತೋರಿಸಿ ಕೊಟ್ಟು ಅವರು ಎಲ್ಲ ರಂಗಗಳಲ್ಲಿಯೂ ಮುಂಬರುವಂತೆ ಮಾಡುವುದು, ಗೊಡ್ಡು ಕಂದಾಚಾರಗಳನ್ನು ಎತ್ತಿಹಿಡಿಯುತ್ತಾ ಅಜ್ಞಾನದಿಂದ ಅದೇ ತಮ್ಮ ಧರ್ಮವೆಂದು ತಿಳಿದಿರುವವರಿಗೆ ನಮ್ಮ ಧರ್ಮದ ಭವ್ಯ ತತ್ವಗಳನ್ನು ತಿಳಿಸುವುದು ಮುಂತಾದ ಕೆಲಸಗಳನ್ನು ಬ್ರಹ್ಮ ಸಮಾಜ ಕೈಗೊಂಡಿತ್ತು. ಕೇಶವ ಚಂದ್ರರೇ ಅದಕ್ಕೆ ಮುಂದಾಳು. ಶಶಿಯೂ ಬ್ರಹ್ಮ ಸಮಾಜದ ಸದಸ್ಯನಾದ. ಅಲ್ಲಿನ ಉದಾರಶೀಲತೆಯ ಮಧ್ಯೆಯೂ ತನ್ನ ಆಚಾರಶೀಲತೆ ಯನ್ನು ಬಿಡಲಿಲ್ಲ.

ಶಶಿ ರಾಮಕೃಷ್ಣರನ್ನು ಕಂಡ

ಹೀಗಿರುವಾಗ ಅವನ ಜೀವನದಲ್ಲಿ ಮರೆಯಲಾಗದ ಅದ್ಭುತ ಘಟನೆಯೊಂದು ಜರುಗಿತು. ಅದರಿಂದ ಅವನ ಜೀವನದ ತಿರುವೇ ಬದಲಾಯಿತು. ಅವನ ಬದುಕಿಗೆ ಒಂದು ಸ್ಪಷ್ಟತೆ ಕಂಡಿತು. ಅದು, ಅವನು ರಾಮಕೃಷ್ಣರನ್ನು ಮೊಟ್ಟ ಮೊದಲು ಭೇಟಿಯಾದದ್ದು. ಕೇಶವಚಂದ್ರ ಪ್ರಕಟಿಸುತ್ತಿದ್ದ ‘ಇಂಡಿಯನ್ ಮಿರರ್’ (ಭಾರತೀಯ ದರ್ಪಣ) ಎಂಬ ಪತ್ರಿಕೆಯಲ್ಲಿ ರಾಮಕೃಷ್ಣರನ್ನು ಕುರಿತು ಕೇಶವಚಂದ್ರ

ಬರೆಯುತ್ತಿದ್ದ ಲೇಖನಗಳು ಅನೇಕರ ಮೇಲೆ ಪ್ರಭಾವ ಬೀರಿದವು. ಆ ಲೇಖನಗಳನ್ನೋದಿ ಜನರು ರಾಮಕೃಷ್ಣರೆಡೆಗೆ ಆಕರ್ಷಿತ ರಾದರು. ಊರ ಹೊರಗಿದ್ದ ಕಾಳಿ ಮಂದಿರದ ಪೂಜಾರಿ ಈಗ ಕೇಂದ್ರ ವ್ಯಕ್ತಿಯಾದ. ಧಾರ್ಮಿಕ, ಆಧ್ಯಾತ್ಮಿಕ, ವೈಯಕ್ತಿಕ ಸಮಸ್ಯೆಗಳನ್ನು ಜನ ತಂದು, ರಾಮಕೃಷ್ಣರ ಮುಂದಿಟ್ಟು, ಅವರ ಬಾಯಿಂದ ಅಮೃತಮಯವಾದ ಸಮಾಧಾನ ನುಡಿಗಳನ್ನು ಕೇಳಿ ಹೋಗುತ್ತಿದ್ದರು. ಬ್ರಹ್ಮ ಸಮಾಜಕ್ಕೆ ಬರುತ್ತಿದ್ದ ಶಶಿ ಮತ್ತು ಅವನ ತಮ್ಮ ಶರತ್ ಇಬ್ಬರಿಗೂ ರಾಮಕೃಷ್ಣರ ಮಹಿಮೆಯನ್ನು ಕೇಳಿ ತಾವೂ ಅವರನ್ನು ನೋಡಬೇಕು ಎನಿಸಿತು. ಆಗ ಶಶಿ ಎಫ್.ಎ. ಪರೀಕ್ಷಿಗೆ ಕುಳಿತಿದ್ದ. ಬ್ರಹ್ಮ ಸಮಾಜದ ವಾರ್ಷಿಕೋತ್ಸವವನ್ನು ದಕ್ಷಿಣೇಶ್ವರದಲ್ಲಿ ಆಚರಿಸಬೇಕೆಂದು ಯೋಚಿಸಿ ಶಶಿ ಮತ್ತು ಶರತ್ ಇತರ ಹದಿನೈದು ಜನ ಸದಸ್ಯರೊಂದಿಗೆ ೧೮೮೩ರ ಅಕ್ಟೋಬರ್‌ನಲ್ಲಿ ರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಹೋದರು. ಆ ಸಮಯದಲ್ಲಿ ರಾಮಕೃಷ್ಣರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತಿದ್ದರು. ರಾಮಕೃಷ್ಣರು ಹುಡುಗರನ್ನು ಆಹ್ವಾನಿಸಿ ಕುಳಿತುಕೊಳ್ಳಲು ಒಂದು ಚಾಪೆಯನ್ನು ಕೊಟ್ಟು ಮಾತನಾಡಲಾರಂಭಿಸಿದರು. “ಹೆಂಚುಗಳು, ಇಟ್ಟಿಗೆಗಳು ಸುಟ್ಟಾದ ಮೇಲೆ ಅವುಗಳ ಮೇಲಿರುವ ಮುದ್ರೆಯನ್ನು ಯಾರೂ ಅಳಿಸಲಾಗುವುದಿಲ್ಲ. ಹಾಗೆಯೇ ಪ್ರತಿಯೊಬ್ಬನೂ ಪ್ರಪಂಚವನ್ನು ಪ್ರವೇಶಿಸುವ ಮೊದಲು ಆಧ್ಯಾತ್ಮದ ಮುದ್ರೆಯನ್ನು ಪಡೆದಿರಬೇಕು, ಆಗ ಅವನು ಯಾವುದಕ್ಕೂ ಬಂಧಿತನಾಗುವುದಿಲ್ಲ. ಆದರೆ ಈ ಕಾಲದಲ್ಲಿ ತಂದೆತಾಯಿಗಳು ತಮ್ಮ ಮಕ್ಕಳಿನ್ನೂ ಚಿಕ್ಕವರಾಗಿರುವಾಗಲೇ ಮದುವೆ ಮಾಡಿಬಿಡುತ್ತಾರೆ. ಆ ಹುಡುಗರೋ ತಮ್ಮ ವಿದ್ಯಾಭ್ಯಾಸ ಮುಗಿಸುವುದರೊಳಗೆ ಮಕ್ಕಳ ತಂದೆಯರಾಗಿರುತ್ತಾರೆ. ಅವರು ಕೆಲಸ ಹುಡುಕಬೇಕಾಗುತ್ತದೆ. ಹಣಕ್ಕಾಗಿ ಪರದಾಡ ಬೇಕಾಗುತ್ತದೆ. ಆಗ ಅವರಿಗೆ ದೇವರ ಬಗ್ಗೆ ಯೋಚಿ ಸಲು ಸಮಯವಾಗಲೀ ಅನುಕೂಲವಾಗಲೀ ಎಲ್ಲಿ ದೊರ ಕೀತು?” ಎಂದು ಹೇಳಿದರು ರಾಮಕೃಷ್ಣರು.

 

‘ನನಗೆ ದೇವರು ಇದ್ದಾನೆ ಎಂದೇ ಸ್ಪಷ್ಟವಿಲ್ಲದಿರುವಾಗ ನಾನೇನು ತಾನೆ ಹೇಳಲಿ?’

ಅನಂತರ ಶಶಿಯನ್ನು ಕೇಳಿದರು, “ನೀನು ದೇವರಿಗೆ ಆಕಾರ ಇದೆ ಎಂದು ನಂಬುತ್ತೀಯೋ ಅಥವಾ ಆಕಾರ ಇಲ್ಲ ಎಂದೋ?” ಶಶಿ ಇವರ ಪ್ರಶ್ನೆಯಿಂದ ಸ್ವಲ್ಪವೂ ವಿಚಲಿತ ನಾಗದೆ ಧೈರ್ಯದಿಂದ ಉತ್ತರ ಕೊಟ್ಟ: “ನನಗೆ ದೇವರು ಇದ್ದಾನೆ ಎಂದೇ ಸ್ಪಷ್ಟವಿಲ್ಲದಿರುವಾಗ, ನಾನೇನು ತಾನೆ ಹೇಳಲಿ?” ಈ ಉತ್ತರ ರಾಮಕೃಷ್ೞರಿಗೆ ಬಹಳ ಹಿಡಿಸಿತು. ನಿಜವಾಗಿಯೂ ದೇವರನ್ನು ಕಾಣಲು ಹಾತೊರೆಯುವ ವ್ಯಕ್ತಿ ಆ ಹುಡುಗ; ಪುಸ್ತಕದಲ್ಲಿ ಹೇಳಿರುವುದರಿಂದ ನಂಬಿರುವೆ ನೆಂದಾಗಲೇ ಅಥವಾ ಹಿರಿಯರು ಹೇಳಿರುವುದರಿಂದ ನಂಬು ತ್ತೇನೆಂದಾಗಲೀ ಇವನು ಹೇಳುತ್ತಿಲ್ಲ ಎಂಬುದು ಅವರಿಗೆ ತಿಳಿಯಿತು.

ರಾಮಕೃಷ್ಣರ ಭಕ್ತ

ತಮ್ಮ ಮೊದಲ ಮತ್ತು ಅನಂತರದ ಭೇಟಿಗಳ ಬಗ್ಗೆ ರಾಮಕೃಷ್ಣಾನಂದರೇ ಈ ರೀತಿ ಹೇಳುತ್ತಾರೆ: “ಮೊದಲ ದಿನ ನಾನು ಬಹಳ ಮಾತನಾಡಿದೆ. ಅನಂತರದ ದಿನಗಳಲ್ಲಿ ಮತ್ತೆ ನಾನು ಮಾತನಾಡಲಿಲ್ಲ. ರಾಮಕೃಷ್ಣರು ಹೇಳಿದ್ದನ್ನು ಕೇಳಿದ್ದಾದ ಮೇಲೆ ನಾವು ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ. ಕೆಲವೊಮ್ಮೆ ತಲೆಯ ತುಂಬಾ ಸಮಸ್ಯೆಗಳನ್ನು ತುಂಬಿಕೊಂಡು, ರಾಮಕೃಷ್ೞರಿಂದ ಉತ್ತರ ಪಡೆಯಬೇಕೆಂದು ಹೋಗುತ್ತಿದ್ದೆ. ಆದರೆ ಅವರ ಕೋಣೆಗೆ ಪ್ರವೇಶಿಸು ತ್ತಿದ್ದಂತೆಯೇ ನನಗೆ ಅವಕಾಶವೇ ದೊರೆಯುತ್ತಿರಲಿಲ್ಲ. ಕೋಣೆಯ ತುಂಬಾ ಜನರಿರುತ್ತಿದ್ದರು. ರಾಮಕೃಷ್ಣರು ನನ್ನನ್ನು ನೋಡಿದ ಕೂಡಲೇ ‘ಬಾ ಕುಳಿತುಕೊ, ಚೆನ್ನಾಗಿದ್ದೀಯಾ?’ ಎಂದು ಕೇಳಿ ತಾವು ಮಾತನಾಡುತ್ತಿದ್ದ ವಿಷಯಕ್ಕೆ ಮರಳುತ್ತಿದ್ದರು. ಆದರೆ ತಮ್ಮ ಮಾತಿನಲ್ಲಿ ನನ್ನ ತಲೆಯೊಳಕ್ಕೆ ತುಂಬಿರುತ್ತಿದ್ದ ಸಮಸ್ಯೆಗಳೆಲ್ಲವನ್ನೂ ಹೇಳುತ್ತಾ ಅವೆಲ್ಲವುಗಳಿಗೂ ಸಮಾಧಾನ ನೀಡುತ್ತಿದ್ದರು. ನನ್ನ ಸಂದೇಹಗಳೆಲ್ಲವೂ ಅವರ ಉತ್ತರದಿಂದ ದೂರವಾಗುತ್ತಿದ್ದವು.”

ಇಂತಹ ಪರಮ ಪುರುಷ ರಾಮಕೃಷ್ಣರನ್ನು ಶಶಿ ಅಕ್ಟೋಬರ್ ೧೮೮೩ರಿಂದ ಆಗಸ್ಟ ೧೮೮೬ರ ವರೆಗೂ ಮೂರು ವರ್ಷಗಳ ಕಾಲ ಎಡೆಬಿಡದೆ ಸೇವೆ ಮಾಡಿದರು. ಉಪಚರಿಸಿದರು. ಅದರಲ್ಲೂ ಕೊನೆಯ ಎಂಟು ತಿಂಗಳ ಕಾಲ ಕಾಶೀಪುರದ ತೋಟದಲ್ಲಿ ರಾಮಕೃಷ್ಣರು ಗಂಟಲು ನೋವಿನಿಂದ ನರಳುತ್ತಿದ್ದಾಗ, ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಶಶಿ, ತನ್ನ ವ್ಯಾಸಂಗವನ್ನೇ ಬಿಟ್ಟು ರಾಮಕೃಷ್ಣರನ್ನು ಉಪಚರಿಸಲು ಮನೆ ಯನ್ನು ತೊರೆದು ಸೊಂಟ ಕಟ್ಟಿನಿಂತ.

ತಮ್ಮ ಅಂತರಂಗ ಭಕ್ತರಿಗೆ ದೇವರನ್ನು ಕಾಣುವ ದಾರಿ ಯಲ್ಲಿ ಸರಿಯದ ಮಾರ್ಗದರ್ಶನ ನೀಡಲು ರಾಮಕೃಷ್ಣರು ಸದಾ ಸಿದ್ಧ. ಮುಂದೆ ತಮ್ಮ ಶಿಷ್ಯರು ಮಾಡಬೇಕಾದ ಮಹತ್ತರವಾದ ಕಾರ್ಯಗಳಿಗೆ ಶಿಷ್ಯರನ್ನು ಅಣಿಗೊಳಿಸುವುದು ಬೇಡವೇ! ದಕ್ಷಿಣೇಶ್ವರದಲ್ಲಿ ನರೇಂದ್ರ, ಶರತ್, ಶಶಿ ಮುಂತಾದ ಹುಡುಗರು ಮಲಗಿದ್ದಾಗ ರಾಮಕೃಷ್ಣರು ಅವರನ್ನು ಕೆಲವೊಮ್ಮೆ ಮಧ್ಯರಾತ್ರಿಗೇ ಎಬ್ಬಿಸಿ, ‘ಏನು, ಗೊರಕೆ ಹೊಡೆಯುತ್ತಾ ಮಲಗಿಬಿಟ್ಟಿರಾ? ಏಳಿ, ಏಳಿ, ಎದ್ದು ಧ್ಯಾನ, ಜಪ ಮಾಡಿ’ ಎಂದು ಎಬ್ಬಿಸಿ, ರಾತ್ರಿಯೆಲ್ಲಾ ದೇವರ ವಿಷಯ, ದೇವರ ಸಂಕೀರ್ತನೆ ಮುಂತಾದವುಗಳಲ್ಲಿ ಕಾಲಕಳೆಯುವಂತೆ ಮಾಡುತ್ತಿದ್ದರು.

ರಾಮಕೃಷ್ಣರೊಂದಿಗೆ ಶಶಿಯ ಬದುಕಿನಲ್ಲಿ ನಡೆದ ಘಟನೆಗಳು ಹೆಚ್ಚು ತಿಳಿದಿದಲ್ಲವಾದರೂ ಒಂದೆರಡು ಘಟನೆಗಳು ಈ ರೀತಿ ಇವೆ:

ರಾಮಕೃಷ್ೞರಿಗೆ ಮಂಜುಗಡ್ಡೆ ಎಂದರೆ ಬಹಳ ಪ್ರೀತಿ. ಒಂದು ದಿನ ಮಂಜುಗಡ್ಡೆ ಹತ್ತಿರ ಸಿಕ್ಕದಿದ್ದುದರಿಂದ ರಾಮ ಕೃಷ್ಣಾನಂದರು ಕಲ್ಕತ್ತೆಯಿಂದ ದಕ್ಷಿಣೇಶ್ವರಕ್ಕೆ ಆರು ಮೈಲಿಗಳ ದೂರದಿಂದ ಮಂಜುಗಡ್ಡೆಯನ್ನು ಕಾಗದದಲ್ಲಿ ಸುತ್ತಿಕೊಂಡು ಬಂದಿದ್ದಾರೆ. ಮಧ್ಯಾಹ್ನದ ಹೊತ್ತು ಬಿಸಿಲು ಎಷ್ಟು ಭಯಂಕರವಾಗಿತ್ತೆಂದರೆ, ರಾಮಕೃಷ್ಣಾನಂದರ ಮೈಯೆಲ್ಲಾ ಕಾದು ಒಲೆಯ ಮೇಲಿನ ಕಾವಲಿಯಂತಾಗಿತ್ತು. ರಾಮಕೃಷ್ಣರು ಇವರನ್ನು ನೋಡಿದ ಕೂಡಲೆ ‘ಅಯ್ಯೊ, ಅಯ್ಯೊ’ ಎನ್ನುತ್ತ ತಾವೇ ಆ ಬೇಗೆಯಲ್ಲಿ ಬೆಂದರೇನೋ ಎಂಬಂತೆ ನೋವಿನಿಂದ ಒದ್ದಾಡಿದರು. ಶಿಷ್ಯನ ಬಗ್ಗೆ ಗುರುವಿಗೆ ಅಂತಹ ವಾತ್ಸಲ್ಯ. ಆದರೆಷ್ಟು ವಿಚಿತ್ರವೆಂದರೆ-ದಾರಿಯಲ್ಲಿ ಅಷ್ಟು ಭಯಂಕರವಾದ ಬಿಸಿಲಿದ್ದರೂ ಮಂಜು ಮಾತ್ರ ಕರಗಿರಲಿಲ್ಲವಂತೆ.

ಶಶಿ ಭಕ್ತಿಯ ಸಾಕಾರ ಮೂರ್ತಿಯಾಗಿದ್ದ. ಒಂದು ದಿನ ಕಾಳೀಮಂದಿರದಲ್ಲಿ ಅವನು ಸೂಫಿ ಕವಿಗಳ ಕೃತಿಗಳನ್ನು  ಮೂಲದಲ್ಲಿಯೇ ಓದುವ ಸಲುವಾಗಿ ಪರ್ಷಿಯನ್ ಭಾಷೆ ಕಲಿಯುತ್ತಿದ್ದರು. ಅವನು ಕಲಿಯುವುದರಲ್ಲಿ ಮಗ್ನನಾಗಿದ್ದಾಗ ರಾಮಕೃಷ್ಣರು ಅವನನನ್ನು ಮೂರು ಬಾರಿ ಕರೆದರು. ಆದರೂ ಶಶಿಯ ಉತ್ತರವೇ ಇಲ್ಲ. ಕೊನೆಗೆ ಬಂದಾಗ ಏನು ಮಾಡು ತ್ತಿದ್ದೆಯೆಂದು ಕೇಳಲು ತಾವು ಕಲಿಯುತ್ತಿದ್ದ ಭಾಷೆಯ ಬಗ್ಗೆ ಶಶಿ ಹೇಳಿದ. ತತ್‌ಕ್ಷಣವೇ ರಾಮಕೃಷ್ಣರು ಉತ್ತರಿಸಿದರು: “ಓದುವುದರಲ್ಲಿ ನಿನ್ನ ಕರ್ತವ್ಯವನ್ನು ಮರೆತರೆ, ನೀನು ನಿನ್ನ ಭಕ್ತಿಯನ್ನು ಕಳೆದುಕೊಳ್ಳುವೆ.” ರಾಮಕೃಷ್ಣರು ಆಡಿದ್ದ ಮಾತಿನ ಒಳ ಅರ್ಥ ಶಶಿಗೆ ಅರಿವಾಯಿತು. ಇನ್ನೂ ಮಹತ್ತರವಾದ ವಿಷಯಗಳನ್ನು ಕಲಿಯುವುದಿದೆ ಎಂದೆನಿಸದ್ದರಿಂದ ಕೂಡಲೇ ತನ್ನ ಪರ್ಷಿಯನ್ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಗಂಗೆಗೆ ಎಸೆದ.

ಮೂವರು ಶಿಷ್ಯರು

ಮುಂದೆ ವಿವೇಕಾನಂದರಾಗಿ ಪ್ರಸಿದ್ಧರಾದ ನರೇಂದ್ರನೂ ಆಗ ದಕ್ಷಿಣೇಶ್ವರಕ್ಕೆ ಹೋಗಿಬಂದು ಮಾಡುತ್ತಿದ್ದ. ಶಶಿ, ಶರತ್, ನರೇಂದ್ರ-ಮೂವರಲ್ಲಿಯೂ ಸ್ನೇಹ ಬೆಳೆಯಿತು. ನರೇಂದ್ರ ನಂತೂ ಆಗಿನ ಪ್ರಸಿದ್ಧ ಪಾಶ್ಚಾತ್ಯ ವಿದ್ವಾಂಸರೆಲ್ಲರ ಪುಸ್ತಕಗಳನ್ನು ಓದಿದ್ದ. ಅವರ ಮಿತ್ರತ್ವ ಎಷ್ಟಿತ್ತು ಎಂಬುದಕ್ಕೆ ಈ ಉದಾಹರಣೆಯೊಂದೇ ಸಾಕು.

ನರೇಂದ್ರನಿಂದಲೇ ಸೂಫಿ ಕಾವ್ಯದ ಸೌಂದರ್ಯದ ಸವಿ ಯನ್ನು ಶಶಿ ಸವಿದಿದ್ದ. ಶಶಿ, ಶರತ್, ನರೇಂದ್ರ – ಸದಾ ಮಾತು, ಕತೆ, ಚರ್ಚೆ, ಸಂಭಾಷಣೆಗಳಲ್ಲಿ ಮಗ್ನ. ಒಂದು ರಾತ್ರಿ ಮೂವರೂ ದಕ್ಷಿಣೇಶ್ವರಿಂದ ಕಲ್ಕತ್ತೆಗೆ ಬಂದಿದ್ದಾರೆ. ಕಲ್ಕತ್ತೆಯಲ್ಲಿ ನರೇಂದ್ರ ಮನೆಗೆ ಹೋಗಬೇಕು. ಅದನ್ನು ಉಳಿದ ಇಬ್ಬರೂ ಹೇಗೆ ತಾನೆ ಸಹಿಸಿಯಾರು? ಸರಿ, ಕೊನೆಗೆ ನರೇಂದ್ರ ಶಶಿ-ಶರತ್‌ರ ಮನೆಗೆ ಬಂದ. ಮಾತನಾಡುತ್ತಾ ಶಶಿ-ಶರತ್ ನರೇಂದ್ರನೊಂದಿಗೆ ಅವನ ಮನೆಗೆ ಹೋದರು. ಹೀಗೆ ಹೋಗುವುದು-ಬರುವುದೇ ನಡೆಯುತ್ತಿದ್ದಂತೆ, ಮಧ್ಯರಾತ್ರಿಯಲ್ಲಿ ನೆರೆಯಲ್ಲಿ ಒಂದು ಹಳೆಯ ಮನೆ ಕುಸಿಯಿತು. ಕೂಡಲೇ ಆ ಮನೆಯಲ್ಲಿದ್ದವರನ್ನು ರಕ್ಷಿಸಲು ಇವರು ಅಲ್ಲಿಗೆ ಓಡಿದರು. ಅಕ್ಕ-ಪಕ್ಕದಲ್ಲಿದ್ದವರೂ ಶಬ್ದ ಕೇಳಿಬಂದದ್ದರಿಂದ, ಆ ಗೊಂದಲದಲ್ಲಿ ಇವರುಗಳು ಮನೆಗೆ ಯಾವಾಗ ಬಂದರೆಂಬುದೇ ಮಿಕ್ಕವರಿಗೆ ತಿಳಿಯಲಿಲ್ಲ. ಹೀಗಿತ್ತು ಇವರ ಗೆಳೆತನ.

ರಾಮನಿಗೆ ಹನುಮಂತನಂತೆ

ಮೊದಲೇ ಹೇಳಿದಂತೆ, ರಾಮಕೃಷ್ಣರನ್ನು ಕಾಶೀಪುರಕ್ಕೆ ಕರೆದುಕೊಂಡು ಬಂದಮೇಲೆ ಶಶಿಯೇ ಅವರ ಮೊದಲ ಸೇವಕನಾದ. ವ್ಯಾಸಂಗವನ್ನು ಬಿಟ್ಟು, ಕಾಯಾ ವಾಚಾ ಮನಸಾ ರಾಮಕೃಷ್ಣರನ್ನು ಉಪಚರಿಸುವುದೇ ಅವನ ಸಾಧನೆಯಾಯಿತು. ಅವನು ರಾಮಕೃಷ್ೞರಿಗೆ ಮಾಡುತ್ತಿದ್ದ ಸೇವೆ ಅಸಮಾನ. ಮಿಕ್ಕ ಶಿಷ್ಯರೆಲ್ಲರೂ ಜಪ, ಧ್ಯಾನ, ಭಜನೆ ಮುಂತಾದವುಗಳಲ್ಲಿ ತೊಡಗಿದ್ದರೆ ಇವನಿಗೆ ಯಾವುದಕ್ಕೂ ಸಮಯವೇ ಇಲ್ಲ.

ಇಪ್ಪತ್ತನಾಲ್ಕು ಗಂಟೆಯೂ ತನ್ನ ಗುರುವಿನ ಸೇವೆಯೇ ಇವನಿಗೆ. ಗುರುವನ್ನು ನೋಡಿಕೊಳ್ಳುವ ಭರದಲ್ಲಿ ತನ್ನ ಊಟ, ನಿದ್ರೆಯನ್ನೂ ಅವನು ಕಡೆಗಣಿಸಿದ. ಇವನ ಸೇವೆಯಿಂದಾಗಿ ಗುರುವಿನ ಅನುಗ್ರಹವೂ ಲಭಿಸಿ, ಅದರ ಮೂಲಕ ಭಕ್ತಿ, ಜ್ಞಾನ, ವೈರಾಗ್ಯವೂ ಶಶಿಗೆ ಸಿದ್ಧಿಸಿದ್ದವು.

ಶಶಿ ರಾಮಕೃಷ್ೞರಿಗೆ ಮಾಡುತ್ತಿದ್ದ ಸೇವೆಯನ್ನು ಪ್ರತಿದಿನವೂ ನೋಡುತ್ತಿದ್ದವರು ಹೇಳುತ್ತಾರೆ: ‘ಶಶಿ ಮಾಡುತ್ತಿದ್ದ ಸೇವೆ ಅನುಪಮವಾದದ್ದು, ಅನುಕರಿಸಲು ಸಾಧ್ಯವಿಲ್ಲ ದಂತಹದು. ಪ್ರಪಂಚದಲ್ಲಿ ಯಾವುದಾದರೂ ನಿಸ್ವಾರ್ಥ ಸೇವೆ ಇದೆ ಎಂಬುದಾದರೆ ಅವನದು. ಒಂದಿಷ್ಟೂ ಆಯಾಸಗೊಳ್ಳದೆ ಗುರುವಿನ ಸೇವೆಯಲ್ಲಿಯೇ ಮಗ್ನನಾದ ಒಬ್ಬ ವ್ಯಕ್ತಿ ಇದ್ದನೆಂದರೆ ಅವನು ಶಶಿ.

‘ಒಂದಿಷ್ಟೂ ಗೊಣಗುಟ್ಟದೆ, ತನ್ನ ವೈಯಕ್ತಿಕ ಅನು ಕೂಲತೆಯ ಬಗ್ಗೆ ಚಕಾರವೆತ್ತದೆ, ಹೃತ್ಪೂರ್ವಕವಾಗಿ ರಾಮ ಕೃಷ್ಣರನ್ನು ನೋಡಿಕೊಂಡವನು ಶಶಿ. ರಾಮನಿಗೆ ಹನುಮಂತ ಆ ರೀತಿ ಇದ್ದ ಎಂಬುದನ್ನು ಕೇಳಿದ್ದೇವೆ. ಆದರೆ ಶಶಿ ರಾಮಕೃಷ್ಣರನ್ನು ಈ ರೀತಿ ನೋಡಿಕೊಂಡಿದ್ದನ್ನು ನಮ್ಮ ಕಣ್ಣ ಮುಂದೆಯೇ ಕಂಡೆವು.’

ರಾಮಕೃಷ್ಣರು ಇನ್ನಿಲ್ಲ!

೧೮೮೬ ನೇ ಆಗಸ್ಟ ೧೬ ರಂದು ರಾಮಕೃಷ್ಣರು ತಮ್ಮ ದೇಹವನ್ನಗಲಿದರು. ಅವರು ಮಹಾ ಸಮಾಧಿಯ ಮುನ್ನ ತಮ್ಮ ಆಪ್ತ ಶಿಷ್ಯರಿಗೆ ಸಂನ್ಯಾಸದ ಸಂಕೇತವಾಗಿ ಕಾವಿ ಬಟ್ಟೆ ಯನ್ನು ನೀಡಿದ್ದರು. ನರೇಂದ್ರನಿಗೆ ಮಿಕ್ಕವರೆಲ್ಲರ ಹೊಣೆ ಯನ್ನೂ ವಹಿಸಿದ್ದರು.

ರಾಮಕೃಷ್ಣರು ದೇಹ ಬಿಡುವ ದಿನ ಶಶಿಯೇ ಅವರನ್ನು ನೋಡಿಕೊಳ್ಳುತ್ತಿದ್ದವನು. ರಾತ್ರಿ ರಾಮಕೃಷ್ಣರು ಒಂದು ಬಟ್ಟಲು ಪಾಯಸವನ್ನು ಕುಡಿದರು. ಬಹಳ ಸೆಕೆಯಾಗುತ್ತಿದ್ದುದರಿಂದ ಗಾಳಿ ಬೀಸುವಂತೆ ಸೂಚಿಸಿದರು. ಅಲ್ಲಿ ಸುತ್ತಲೂ ಕುಳಿತಿದ್ದ ಶಿಷ್ಯರು ಹತ್ತು ಜನ ಒಟ್ಟಿಗೇ ಗಾಳಿ ಹಾಕಲಾರಂಭಿಸಿದರು. ರಾಮಕೃಷ್ಣರು ಶಶಿಯ ಬೆನ್ನಿಗೆ ಆಧಾರವಾಗಿ ಐದಾರು ತಲೆ ದಿಂಬುಗಳನ್ನು ಪೇರಿಸಿಕೊಂಡು ಅದಕ್ಕೆ ಒರಗಿ ಕುಳಿತಿದ್ದರು. ಕೊನೆಯ ಗಳಿಗೆಯಲ್ಲಿಯೂ, “ಇವರೆಲ್ಲರನ್ನೂ ನೋಡಿಕೊ” ಎಂದು ನರೇಂದ್ರನಿಗೆ ಹೇಳಿದರು. ರಾತ್ರಿ ಒಂದು ಗಂಟೆಯ ಹೊತ್ತಿಗೆ ದೇಹವನ್ನು ಬಿಟ್ಟರು. ರಾಮಕೃಷ್ಣರು ತೀರಿಕೊಂಡ ಸುದ್ದಿ ತಿಳಿದ ಕೂಡಲೇ ಶಶಿ ಜ್ಞಾನ ತಪ್ಪಿ ಬಿದ್ದ. ಎಚ್ಚರವಾದ ನಂತರ ಗೋಳಾಡಿದ ತಾನು ಸೇವೆ ಮಾಡಿದ ಗುರು ಇನ್ನಿಲ್ಲವಲ್ಲ ಎಂದು ಹಲುಬಿದ. ರಾಮಕೃಷ್ಣರ ಅಸ್ಥಿಗಳನ್ನು ಹಳ್ಳದಲ್ಲಿಟ್ಟು ಮಣ್ಣು ಮುಚ್ಚಿದಾಗ ಶಶಿ ದುಃಖದಿಂದ ಮತ್ತೆ ಜ್ಞಾನ ತಪ್ಪಿ ಬಿದ್ದ.

ರಾಮಕೃಷ್ಣಾನಂದ

ರಾಮಕೃಷ್ಣರ ದೇಹಾವಸಾನವಾದನಂತೆ, ಶಿಷ್ಯರೆಲ್ಲರೂ ಅವರವರ ಮನೆಗೆ ತೆರಳಿದರು. ಆದರೆ ನರೇಂದ್ರನ ಕಾರ್ಯ ಶ್ರದ್ಧೆಯಿಂದಾಗಿ ಬಾರಾನಗರ ಎಂಬಲ್ಲಿ ಒಂದು ಮುರುಕು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ಮಠವನ್ನು ಆರಂಭಿಸಿದರು. ಶಶಿಯ ತಂದೆ ಬಂದು ಅವರನ್ನು ಮನೆಗೆ ಬಾ ಎಂದು ಬೇಡಿದರು, ಕಾಡಿದರು. ಶಶಿ, “ಪ್ರಪಂಚ, ಸಂಸಾರ ಎಲ್ಲ ಹುಲಿಗಳು ತುಂಬಿದ ಕಾಡಿನಂತೆ ನನಗೆ” ಎಂದುಬಿಟ್ಟರು. ಅಲ್ಲಿಯೇ ಒಂದು ದಿನ ಸಂನ್ಯಾಸ ವಿಧಿ ಮುಗಿಯಿತು. ಶಶಿಗೆ ‘ಸ್ವಾಮಿ ರಾಮಕೃಷ್ಣಾನಂದ’ ಎಂಬ ಹೆಸರನ್ನು ನರೇಂದ್ರನೇ ನೀಡಿದ. ಮೊದಲು ನರೇಂದ್ರ ತಾನೇ ಆ ಹೆಸರನ್ನು ಸ್ವೀಕರಿಸಬೇಕು ಎಂದುಕೊಂಡಿದ್ದವನು, ಶಶಿ ತನ್ನ ಗುರುವನ್ನು ಸೇವಿಸಿದ ರೀತಿಯನ್ನು ಕಂಡು, ಆ ಹೆಸರಿಗೆ ಅವನೇ ಯೋಗ್ಯ ಎಂದು ನಿಶ್ಚಿಯಿಸಿದ.

ರಾಮಕೃಷ್ಣಾನಂದರು ಸಂಘಕ್ಕೆ ಮಾಡಿದ ಮಹತ್ಸೇವೆಯ ಬಗ್ಗೆ ವಿವೇಕಾನಂದರೇ ಹೇಳುತ್ತಾರೆ: “ಶಶಿಯೇ ನಮ್ಮ ಮಠದ ಆಧಾರಸ್ತಂಭವಾಗಿದ್ದ. ಅವನು ಇಲ್ಲದಿದ್ದರೆ ಮಠದ ಜೀವನ ಅಸಾಧ್ಯವಾಗುತ್ತಿತ್ತು. ಸಾಮಾನ್ಯವಾಗಿ, ನಾವೆಲ್ಲರೂ ಊಟದ ಯೋಚನೆಯೇ ಇಲ್ಲದೆ, ಪ್ರಪಂಚದ ಪರಿವೆಯೇ ಇಲ್ಲದೆ ಧ್ಯಾನ, ಜಪ, ಪ್ರಾರ್ಥನೆ ಮುಂತಾದುವುಗಳಲ್ಲಿ ಮುಳುಗಿರುತ್ತಿದ್ದೆವು. ಆದರೆ ಸ್ವಾಮಿ ರಾಮಕೃಷ್ಣಾನಂದರು ಮಾತ್ರ ನಮಗಾಗಿ ಅಡುಗೆ ಮಾಡಿ ಊಟಕ್ಕೆ ನಮ್ಮನ್ನು ಎಬ್ಬಿಸುತ್ತಿದ್ದರು. ಕೆಲವೊಮ್ಮೆ ನಾವು ಧ್ಯಾನದಲ್ಲಿ ಮುಳುಗಿದ್ದರೆ, ನಮ್ಮ ಬೆನ್ನಿಗೆ ಗುದ್ದಿ ನಮ್ಮನ್ನು ಎಬ್ಬಿಸಿ ಊಟ ಹಾಕುತ್ತಿದ್ದರು. ಅವರೇ ನಮ್ಮ ತಾಯಿಯಾಗಿದ್ದರು.” ಒಮ್ಮೆ ರಾಮಕೃಷ್ಣಾನಂದರು ಇತರ ಸಂನ್ಯಾಸಿಗಳಿಗೆ ಹೇಳಿದರು: “ನೀವು ಒಂದೇ ಮನಸ್ಸಿನಿಂದ ನಿಮ್ಮ ಧ್ಯಾನ, ಜಪಗಳನ್ನು ನಡೆಸಿ. ನಾನು ಭಿಕ್ಷೆ ಬೇಡಿ ಯಾದರೂ ಮಠವನ್ನು ನಡೆಸುತ್ತೇನೆ.”

 

ರಾಮಕೃಷ್ಣ ಪರಮಹಂಸರಿಗೆ ಕಾಯಿಲೆಯಾದಾಗ ಅವರ ಸೇವೆಯೇ ರಾಮಕೃಷ್ಣಾನಂದರ ಬದುಕಾಯಿತು.

ಸ್ವಾಮಿ ರಾಮಕೃಷ್ಣಾನಂದರು ಅಸ್ಥಿಕುಂಭದ ಮೇಲೆ ರಾಮಕೃಷ್ಣರ ಚಿತ್ರಪಟವನ್ನಿಟ್ಟು ಪೂಜೆ ಮಾಡಲಾರಂಭಿಸಿದರು. ಅವರ ಸಮಯವೆಲ್ಲವೂ ಸದಾ ಗುರುವಿನ ಸೇವೆ, ಪೂಜೆಯಲ್ಲಿಯೇ. ಹಗಲಿರಳೂ ಸದಾ ಗುರುವಿನದೇ ಮಾತು. ರಾಮಕೃಷ್ಣರ ಚಿತ್ರ ಅವರಿಗೆ ಕೇವಲ ಕಾಗದದ ಚೂರಾಗಿರಲಿಲ್ಲ. ತಮ್ಮ ಗುರುವನ್ನೇ ಜೀವಂತವಾಗಿ ಅದರಲ್ಲಿ ಕಂಡಿದ್ದರವರು. ಪೂಜೆಗಾಗಿ ಹೂ ವನ್ನು ಬಿಡಿಸಿಕೊಂಡು ಬರುವುದು, ಸ್ನಾನಕ್ಕಾಗಿ ಗಂಗೆಯಿಂದ ನೀರು ತರುವುದು, ನಿವೇದನಕ್ಕಾಗಿ ತಾವೇ ಅಡುಗೆ ಮಾಡುವುದು-ಎಲ್ಲವೂ ಇವರ ಪಾಲಿಗೆ. ಸಂಜೆಯ ಹೊತ್ತು ಆರತಿಯ ಸಮಯ ದಲ್ಲಂತೂ ರಾಮಕೃಷ್ಣಾನಂದರು ಚಾಮರವನ್ನು ಬೀಸುತ್ತಾ, ‘ಜಯ ಗುರುದೇವ! ಜಯ ಗುರುದೇವ!’ ಎಂದು ಹಾಡುತ್ತಾ ನರ್ತನ ಮಾಡಲಾರಂಭಿಸಿದರೆ ಅಲ್ಲಿದ್ದವರೆಲ್ಲಾ ಅದರಲ್ಲೇ ತನ್ಮಯರಾಗಿ ಬಿಡುತ್ತಿದ್ದರು.

ನರೇಂದ್ರ, ರಾಖಾಲ್, ತಾರಕ್ ಮುಂತಾದವರೆಲ್ಲರೂ ಯಾತ್ರೆಗೆಂದು ತೀರ್ಥಸ್ಥಳಗಳಿಗೆ ಹೊರಟರೂ ಶಶಿ ಮಾತ್ರ ಬಾರಾನಗರ ಮಠದಿಂದ ಎಂದೂ ಕದಲಲಿಲ್ಲ. ಅಷ್ಟೇಕೆ ತಮ್ಮ ಜೀವಮಾನದಲ್ಲಿ ಕಾಶಿಯನ್ನು ಕೂಡ ಅವರು ಕಾಣಲಿಲ್ಲ. ಅವರಿಗೆ ರಾಮಕೃಷ್ಣರೇ ಸರ್ವತೀರ್ಥ ಸಮಾಗಮ. ಅವರ ಪೂಜೆಯೇ ಅವರಿಗೆ ಸಮಸ್ತವೂ. ಈ ರೀತಿ ರಾಮಕೃಷ್ಣಾ ನಂದರು ಏಕಪ್ರಕಾರವಾಗಿ ೧೮೮೬ ರ ಆಗಸ್ಟ್ ನಿಂದ ೧೮೬೭ರ ಮಾರ್ಚ್‌ವರೆಗೂ ಮೊದಲು ಬಾರಾನಗರ ಮಠದಲ್ಲಿ, ಅನಂತರ ೧೮೯೨ರಲ್ಲಿ ಮಠ ಆಲಂ ಬಜಾರ್‌ಗೆ ವರ್ಗಾವಣೆಯಾದಾಗ ಅಲ್ಲಿ ವಾಸಮಾಡಿದರು, ಎಲ್ಲಿಯೂ ಕದಲದೆ ಇವರು ಕೇವಲ ಗೊಡ್ಡು ಸಂನ್ಯಾಸಿಯಾಗಿರಲಿಲ್ಲ. ರಾಮಕೃಷ್ಣರ ಉಪದೇಶಗಳನ್ನು ಬಂಗಾಳಿಯಿಂದ ಸಂಸ್ಕೃತಕ್ಕೆ ಅನುವಾದಿಸಿದರು. ಯಾವಾಗಲೂ ಹಾಸ್ಯಮಾಡುತ್ತಾ ಎಲ್ಲರನ್ನೂ ನಗಿಸುತ್ತಾ ಸಮಯ ಕಳೆಯುವುದಕ್ಕೆ ಬಹಳ ಕ್ಲಿಷ್ಟವಾದ ಗಣಿತದ ಸಮಸ್ಯೆಯನ್ನು ಬಿಡಿಸುತ್ತ, ಅಥವಾ ಭಾಗವತ, ಗೀತೆ, ಉಪನಿಷತ್ತು ಗಳನ್ನು ಓದುತ್ತಾ ಇರುತ್ತಿದ್ದರು.

ಮದರಾಸಿಗೆ

ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಪ್ರಸಿದ್ಧರಾದ ಮೇಲೆ, ದಕ್ಷಿಣ ಭಾರತದ ಮದರಾಸಿನಲ್ಲಿ ಅವರ ಶಿಷ್ಯರು ‘ರಾಮಕೃಷ್ಣ ಮಠ’ ಒಂದನ್ನು ಮದರಾಸಿನಲ್ಲಿಯೂ ಸ್ಥಾಪಿಸ ಬೇಕೆಂದು ದುಂಬಾಲು ಬಿದ್ದರು. “ನಿಮ್ಮ ದಾಕ್ಷಿಣಾತ್ಯಗಿಂತಲೂ ಹೆಚ್ಚು ಸಂಪ್ರದಾಯಸ್ಥರೂ ಮತ್ತು ಅಷ್ಟೇ ಉದಾರಮನಸ್ಕರೂ ಪೂಜೆಯಲ್ಲಿ-ದೇವರ ಧ್ಯಾನದಲ್ಲಿ ಎಣೆ ಯಿಲ್ಲದವರೂ ಆದ ಒಬ್ಬರನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ” ಎಂದರು ವಿವೇಕಾನಂದರು. ವಿವೇಕಾನಂದರ ಸೂಚನೆಯಂತೆ ರಾಮಕೃಷ್ಣಾನಂದರು ಸದಾನಂದ ಎಂಬುವರ ಜೊತೆಯಲ್ಲಿ ೧೮೬೭ ಮಾರ್ಚ್‌ನಲ್ಲಿ ತಮ್ಮ ವಿಶಾಲ ಕಾರ್ಯಕ್ಷೇತ್ರವಾದ ಮದರಾಸಿಗೆ ಬಂದರು.

ಸ್ವಾಮಿ ರಾಮಕೃಷ್ಣಾನಂದರು ವಿವೇಕಾನಂದರಂತೆ ಉತ್ತಮ ವಾಗ್ಮಿಯಲ್ಲ. ಆದರೆ ಮಾತಿನಲ್ಲಿ ಯಾರೂ ಅನುಕರಿಸಲಾಗದಂತಹ ಅವರದೇ ಆದ ರೀತಿಯನ್ನು ಅವರು ಕಂಡುಕೊಂಡಿದ್ದರು. ಆದುದರಿಂದಲೇ ರಾಮಕೃಷ್ಣರು ಹೇಳುತ್ತಿದ್ದರು: “ಇಲ್ಲಿ ಬರುವ ಹಲವು ರೀತಿಯ ಹೂವುಗಳ ಹಾರವನ್ನು ನಾನು ಕಟ್ಟುತ್ತಿದ್ದೇನೆ” ಎಂದು.

ಮದರಾಸಿಗೆ ಬಂದಾಗ ಅವರು ಸ್ವಾಮಿ ವಿವೇಕಾನಂದರ ಶಿಷ್ಯರಾದ ಬಿಳಿಗಿರಿ ಅಯ್ಯಂಗಾರ್ ಅವರ ‘ಕ್ಯಾಸಲ್ ಕರ್ನನ್’ ಎಂಬ ಮನೆಯಲ್ಲಿದ್ದರು. ಆದರೆ ಅದು ೧೯೦೭ ರಲ್ಲಿ ಹರಾಜಾದಾಗ ಮೈಲಾಪುರದಲ್ಲಿ ಕೊಂಡಯ್ಯ ಚೆಟ್ಟಿಯಾರ್ ಎಂಬ ರಾಮಕೃಷ್ಣಾನಂದರ ಶಿಷ್ಯರೊಬ್ಬರು ಸ್ಥಳವನ್ನು ದಾನ ಮಾಡಿದ ನಂತರ, ಅಲ್ಲಿ ಶಾಶ್ವತವಾಗಿ ರಾಮಕೃಷ್ಣ ಮಠವನ್ನು ಸ್ಥಾಪಿಸಿದರು.

ಎಲ್ಲ ರಾಮಕೃಷ್ಣರಿಗಾಗಿ

ಅವರು ಮದರಾಸಿಗೆ ಬಂದಾಗ ರಾಮಕೃಷ್ಣರ ಚಿತ್ರವಲ್ಲದೆ ಮತ್ತೇನನ್ನೂ ತಂದಿರಲಿಲ್ಲ. ಮದರಾಸಿನಲ್ಲಿ ಜೀವನ ಪ್ರಾರಂಭ ವಾದಾಗ ಅತ್ಯಂತ ಕಷ್ಟವಾಗಲಾರಂಭಿಸಿತು. ಆರ್ಥಿಕ ಪರಿಸ್ಥಿತಿಯಂತೂ ಬಹಳ ಬಿಕ್ಕಟ್ಟಾಯಿತು. ಆದರೂ ಅವರು ಶಾಂತವಾಗಿದ್ದರು. ರಾಮಕೃಷ್ಣರು ತನ್ನನ್ನು ಇಲ್ಲಿಗೆ ಕರೆಸಿ ಕೊಂಡಿದ್ದಾರೆ, ನನ್ನ ಜವಾಬ್ದಾರಿ ಇವರಿಗೆ ಸೇರಿದ್ದು ಎಂದು ಸಂಪೂರ್ಣ ಜವಾಬ್ದಾರಿಯೆಲ್ಲವನ್ನೂ ತನ್ನ ಗುರುವಿನ ಮೇಲೆ ಹೊರೆಸಿದ್ದರು. ಅವರು ವಾಸವಿದ್ದ ‘ಕ್ಯಾಸಲ್ ಕರ್ನನ್’ ಮನೆ ಹರಾಜಿಗೆ ಬಂದಿತ್ತು, ಅಲ್ಲವೆ? ಹರಾಜಿಗೆ ಜನ ತುಂಬಾ ಸೇರಿದ್ದಾರೆ, ಮನೆಯ ಹರಾಜಾಗುತ್ತಿದೆ. ಆದರೂ ರಾಮಕೃಷ್ಣಾನಂದರು ನಿಶ್ಚಲಚಿತ್ತರು! ಮನಸ್ಸಿನಲ್ಲಿ ಯಾವ ವಿಕಾರವೂ ಇಲ್ಲ.

ಅಲ್ಲಿಯೇ ಇದ್ದ ಭಕ್ತರೊಬ್ಬರು ಕೇಳಿದರು. “ಸ್ವಾಮೀಜಿ, ಮನೆ ಹರಾಜಾಗುತ್ತಿದೆ. ಏನು ಮಾಡುತ್ತೀರಿ?”

“ಅದರ ಬಗ್ಗೆ ಏಕೆ ಅಷ್ಟೊಂದು ಯೋಚನೆ?  ಕೊಳ್ಳು ವವರು-ಮಾರುವವರಿಂದ ನಮಗೆ ಆಗಬೇಕಾದದ್ದೇನು? ನನ್ನ ಅವಶ್ಯಕತೆಗಳು ಬಹಳ ಕಡಿಮೆ. ನನಗೆ ಬೇಕಾಗಿರುವುದು ರಾಮಕೃಷ್ಣರಿಗೆ ಒಂದು ಕೋಣೆಯಷ್ಟೆ. ನಾನು ಎಲ್ಲಿ ಬೇಕಾದರೂ ಇದ್ದು ಅವರ ವಿಷಯ ಮಾತನಾಡುತ್ತಾ ಜೀವನ ಕಳೆಯ ಬಲ್ಲೆ” ಎಂದು ಉತ್ತರಿಸಿದರು ರಾಮಕೃಷ್ಣಾನಂದರು.

ಮದರಾಸಿಗೆ ಬಂದ ಹೊಸದರಲ್ಲಿ ಎಲ್ಲಾ ಕೆಲಸಗಳಿಗೂ ಇವರೊಬ್ಬರೇ. ರಾಮಕೃಷ್ಣರ ಪೂಜೆ ಮಾಡುವುದು, ಅಡುಗೆ ಮಾಡಿಕೊಳ್ಳುವುದು, ಆಶ್ರಮಕ್ಕೆ ಬಂದವರ ಬಳಿ ಮಾತನಾಡುವುದು, ಜನ ಕರೆದ ಸ್ಥಳಕ್ಕೆ ಭಾಷಣ ಮಾಡಲು ಹೋಗುವುದು-ಇವರ ಕೆಲಸ. ಆದರೂ ಅವರು ಬಂದವರ ಬಳಿ ಒಂದಿಷ್ಟೂ ಗೊಣಗುಟ್ಟಿದವರಲ್ಲ. ತಮ್ಮ ವೈಯಕ್ತಿಕ ಕಷ್ಟಗಳನ್ನು ಹೇಳಿಕೊಂಡವರಲ್ಲ. ಅವರಿಗೆ ಸದಾ ರಾಮಕೃಷ್ಣರ ಚಿಂತನೆಯೇ. ಅವರು ಮದರಾಸಿನಲ್ಲಿ ಪ್ರಸಿದ್ಧರಾಗುತ್ತಿದ್ದಂತೆ, ನಾನಾ ಭಾಗಗಳಿಂದ ಜನ ಬಂದು ಭಾಷಣಗಳಿಗೆ ಅವರನ್ನು ಕರೆಯುತ್ತಿದ್ದರು. ಒಂದೇ ದಿನದಲ್ಲಿ ಬೇರೆಬೇರೆ ಸ್ಥಳಗಳಲ್ಲಿ ನಾಲ್ಕೈದು ಭಾಷಣಗಳನ್ನೂ ಮಾಡಬೇಕಾಗುತ್ತಿತ್ತು. ಆದರೂ ಇವರು ಎಲ್ಲಾ ಸ್ಥಳಗಳಿಗೂ ಹೋಗುತ್ತಿದ್ದರು. ಕೆಲವೊಮ್ಮೆ ಜಟಕಾದಲ್ಲಿ, ಕೆಲವೊಮ್ಮೆ ನಾಲ್ಕೈದು ಮೈಲಿಗಳ ದೂರ ನಡೆದು ಹೋಗುತ್ತಿದ್ದರು. ಕೆಲವೊಂದು ಸಮಯಗಳಲ್ಲಿ ನಿಗದಿಯಾದ ಸಮಯಕ್ಕೆ ಸರಿಯಾಗಿ ಭಾಷಣ ಕೇಳಲು ಜನರೇ ಬರುತ್ತಿರಲಿಲ್ಲ. ಆದರೂ ಆ ಸಮಯಕ್ಕೆ ಸರಿಯಾಗಿ ಸ್ವಾಮೀಜಿ ಹೋಗಿ ಅಲ್ಲಿಯೇ ಒಂದು ಗಂಟೆಯ ಕಾಲ ಧ್ಯಾನಮಾಡಿ ಬರುತ್ತಿದ್ದರು.

ನಮ್ಮ ದೇಶದ ಸಂತರನ್ನು, ಋಷಿಗಳನ್ನು ಯಾರಾದರೂ ಹೀನಾಯವಾಗಿ ಕಂಡರೆ ಅವರು ಸಹಿಸುತ್ತಿರಲಿಲ್ಲ. ಒಮ್ಮೆ, ಮದರಾಸಿನ ಒಂದು ಭಾಗದಲ್ಲಿ, ಗಣ್ಯ ವ್ಯಕ್ತಿಗಳೊಬ್ಬರು ಭಾಷಣದ ಮಧ್ಯದಲ್ಲಿ ಶಂಕರಾಚಾರ್ಯರ ಬಗ್ಗೆ ಸ್ವಲ್ಪ ಕೆಳ ಮಟ್ಟದಲ್ಲಿ ಮಾತನಾಡಿದರು. ಕೂಡಲೇ ಸ್ವಾಮಿಗಳು ಎದ್ದು, “ಎಲ್ಲಿ ಶಂಕರರಿಗೆ ಸ್ಥಾನವಿಲ್ಲವೋ ಅಲ್ಲಿ ನನಗೂ ಸ್ಥಾನವಿಲ್ಲ. ನಾನಿಲ್ಲಿ ಒಂದು ಕ್ಷಣವೂ ಇರಲಾರೆ” ಎಂದು ಹೇಳಿ ಹೊರಟು ಬಿಟ್ಟರು. ಆಗ ಅಲ್ಲಿದ್ದವರಲ್ಲಿ ಒಬ್ಬರು, “ಅವರು ಗಣ್ಯವ್ಯಕ್ತಿಗಳು, ಹಣದ ಸಹಾಯ ಮಾಡಬಲ್ಲವರು. ತಾವು ಸ್ವಲ್ಪಮಟ್ಟಿಗೆ ಸಹಿಸಿಕೊಳ್ಳಬೇಕಿತ್ತು” ಎಂದಾಗ, “ಆ ವ್ಯಕ್ತಿ ನನಗೆ ಹಣ ನೀಡದಿದ್ದರೆ ಬೇಡ. ಇಂತಹವರ ದಯೆಯಿಂದ, ದಾನದಿಂದ ದೇವರ ಕೆಲಸ ಜರುಗುತ್ತಿದೆ – ಎಂದು ಕೊಂಡಿರುವೆಯೇನು? ನನ್ನ ಕೆಲಸಕ್ಕೆ ಇಂತಹವರ ಅಗತ್ಯವಿಲ್ಲ” ಎಂದರು ಸ್ವಾಮೀಜಿ.

ಬಡವರ ಸೇವಕ

ಸ್ವಾಮೀಜಿ ಮದರಾಸಿಗೆ ಬಂದ ಮೇಲೆ ರಾಮಕೃಷ್ಣರ ಮತ್ತು ಸ್ವಾಮಿ ವಿವೇಕಾನಂದರ ಜಯಂತಿಗಳನ್ನು ಸಾರ್ವಜನಿಕವಾಗಿ ಆಚರಿಸಲು ನಿರ್ಧರಿಸಿದರು. ಆ ರೀತಿಯ ಮೊಟ್ಟಮೊದಲ ಉತ್ಸವ ೧೯೦೨ರಲ್ಲಿ ಜರುಗಿತು. ಪೂಜೆ, ಹೋಮ, ದರಿದ್ರ ನಾರಾಯಣ ಸೇವೆ. ಅನಂತರ ಧಾರ್ಮಿಕ ಉಪನ್ಯಾಸಗಳು-ಈ ರೀತಿ ಕಾರ್ಯಕ್ರಮ. ದರಿದ್ರನಾರಾಯಣ ಸೇವೆಯಲ್ಲಿ ಸುಮಾರು ಐದು ಸಾವಿರ ಬಡವರಿಗೆ ಊಟ ಹಾಕಲಾಗುತ್ತಿತ್ತು.

ಒಂದು ಬಾರಿ ಹೀಗೆ ಸಾರ್ವಜನಿಕ ಕಾರ್ಯಕ್ರಮ ಏರ್ಪಟ್ಟಿದೆ. ದರಿದ್ರನಾರಾಯಣ ಸೇವೆಗೂ ಸಿದ್ಧತೆ ಆಗುತ್ತಿದೆ. ಆದರೆ ಬೇಕಾದ ಹಣ ಮಾತ್ರ ಒದಗಿಲ್ಲ. ಸ್ವಾಮೀಜಿ ಯಾರನ್ನೂ ಹಣ ಕೇಳಿದವರಲ್ಲ. ಏನು ಮಾಡುವುದು? ಉತ್ಸವದ ಕೆಲವು ದಿನಗಳ ಮೊದಲು ಆಶ್ರಮದಲ್ಲಿಯೇ

ಮಲಗಿದ್ದ ಭಕ್ತರೊಬ್ಬರು ಹೇಳುತ್ತಾರೆ: ‘ಅವತ್ತು ಮಧ್ಯರಾತ್ರಿ, ನಾನು ಆಶ್ರಮದಲ್ಲಿ ಮಲಗಿದ್ದೆ. ಮಂದಿರದಲ್ಲಿ ವಿಚಿತ್ರವಾದ ಸದ್ದಾಗುತ್ತಿದ್ದುದನ್ನು ಕೇಳಿ ನಾನು ಜಗ್ಗನೆ ಎದ್ದೆ. ಸ್ವಾಮೀಜಿ ಯವರು ಬೋನಿನಲ್ಲಿ ಹಾಕಿದ ಸಿಂಹದಂತೆ, ಜೋರಾಗಿ ಉಸಿರುಬಿಡುತ್ತಾ ದಾಪುಗಾಲು ಹಾಕುತ್ತಾ ನಡೆಯುತ್ತಿದ್ದಾರೆ. ಮಧ್ಯೆ ಮಧ್ಯೆ ಪಿಟ ಪಿಟನೆ ಏನೋ ಮಾತನಾಡಿಕೊಳ್ಳುತ್ತಿದ್ದಾರೆ. ಆ ಸಮಯದಲ್ಲಿ ಅವರ ಮುಂದೆ ನಿಲ್ಲುವುದಕ್ಕೆ ನನಗೆ ಭಯವಾಯಿತು. ಅನಂತರ ಗೊತ್ತಾಯಿತು ಅವರು ಪ್ರಾರ್ಥನೆ ಮಾಡುತ್ತಿದ್ದಾರೆಂದು. ಅದಾದ ಮಾರನೆಯ ದಿನವೇ ಮೈಸೂರಿನ ಯುವರಾಜರಿಂದ ಧನಸಹಾಯ ಒದಗಿತು. ಸ್ವಾಮೀಜಿ ಬರೆದಿದ್ದ, ಆಗತಾನೆ ಪ್ರಕಟವಾಗಿದ್ದ ‘ವಿಶ್ವ ಮತ್ತು ಮಾನವ’ ಎಂಬ ಪುಸ್ತಕವನ್ನು ಓದಿ ಸುಪ್ರೀತರಾಗಿ ಯುವರಾಜರು ಹಣವನ್ನು ಕಳುಹಿಸಿದ್ದರು.’

ಒಮ್ಮೆ ಪ್ಲೇಗು ಹಾವಳಿಯಿಂದ ತಂದೆ-ತಾಯಿಯವರನ್ನೂ ಸಂಬಂಧದವರನ್ನೂ ಕಳೆದುಕೊಂಡು ನಿರ್ಗತಿಕರಾದ ಹುಡುಗರನ್ನು ಸ್ವಾಮೀಜಿ ಕಂಡರು. ಅವರ ಹೃದಯ ಕರಗಿತು.

ಈ ಅನಾಥ ಮಕ್ಕಳಿಗೆ ಏನಾದರೂ ಮಾಡಬೇಕೆಂಬ ಹಂಬಲ ಮೂಡಿತು. ಕೂಡಲೇ ತಮ್ಮ ಸುತ್ತಮುತ್ತ ಇದ್ದ ಭಕ್ತರನ್ನು ಕೂಡಿಸಿಕೊಂಡು ೧೯೦೫ ರ ಫೆಬ್ರವರಿ ೧೭ ರಂದು ಒಂದು ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿದರು. ಇದರಲ್ಲಿ ಪ್ರಾರಂಭದಲ್ಲಿ ಇದ್ದವರು ಏಳು ಅನಾಥ ಮಕ್ಕಳು. ಇಂದು ಅದು ಬಹಳ ದೊಡ್ಡ ಸಂಸ್ಥೆಯಾಗಿದೆ. ಅದರೊಂದಿಗೆ ಶಾಲೆ ಕಾಲೇಜುಗಳು ಕೂಡ ಈಗ ಆರಂಭವಾಗಿವೆ.

ಬೆಂಗಳೂರಿನಲ್ಲಿ ರಾಮಕೃಷ್ಣಾಶ್ರಮ

ಇವರು ಮದರಾಸಿನಲ್ಲಿ ಪ್ರಸಿದ್ಧವಾದ ಮೇಲೆ ನಾನಾ ಪ್ರಾಂತಗಳಿಂದ ಇವರಿಗೆ ರಾಮಕೃಷ್ಣರ ಬಗ್ಗೆ, ವೇದಾಂತದ ಬಗ್ಗೆ ಭಾಷಣ ಮಾಡಲು ಕರೆ ಬಂದಿತು. ಹಲವು ಸ್ಥಳಗಳಿಗೆ ಅವರು ಭೇಟಿ ಕೊಟ್ಟರು. ಇದರಲ್ಲಿ ಅತಿ ಮುಖ್ಯವಾದದ್ದೆಂದರೆ ಬೆಂಗಳೂರಿನಲ್ಲಿ ಅವರು ಆಶ್ರಮ ಸ್ಥಾಪಿಸಿದ್ದು.

ಸ್ವಾಮಿ ವಿವೇಕಾನಂದರು ಷಿಕಾಗೊ ಭಾಷಣ ಮಾಡಿದ್ದನ್ನು ಕೇಳಿ ಮೈಸೂರಿನ ಜನ ಅವರನ್ನು ಮೆಚ್ಚಿದ್ದರು. ಆದರೆ ೧೯೦೩ರವರೆಗೂ ಬೇರೇನು ಕಾರ್ಯವೂ ನಡೆದಿರಲಿಲ್ಲ. ಕೊನೆಗೆ ಬೆಂಗಳೂರಿನ ಅಲಸೂರು ವೇದಾಂತ ಸಂಘದವರು ಮದರಾಸಿನಿಂದ ರಾಮಕೃಷ್ಣಾನಂದರನ್ನು ೧೯೦೩ರ ಜುಲೈ ೧೯ರಂದು ಬೆಂಗಳೂರಿಗೆ ಕರೆಸಿದಾಗ ಅವರನ್ನು ಎದುರುಗೊಳ್ಳಲು ರೈಲ್ವೆ ಸ್ಟೇಷನ್‌ನಲ್ಲಿ ಸುಮಾರು ಐದು ಸಾವಿರ ಜನ ನೆರೆದಿದ್ದರು.

ಸ್ವಾಮೀಜಿ ಆಗ ನಾನಾ ಕಡೆಗಳಲ್ಲಿ ಭಾಷಣ ಮಾಡಿ ಮೈಸೂರಿನ ಮಹಾರಾಜರಾಗಿದ್ದ ಕೃಷ್ಣರಾಜೇಂದ್ರ ಒಡೆಯರ್ ಅವರನ್ನೂ ಕಂಡರು. ಅನಂತರ ಮೈಸೂರಿಗೆ ಹೋಗಿ ರಂಗಾ ಚಾರ್ಲು ಭವನದಲ್ಲಿ ನಾಲ್ಕು ಉಪನ್ಯಾಸಗಳನ್ನು ಇಂಗ್ಲಿಷ್ ನಲ್ಲಿಯೂ ಸಂಸ್ಕೃತದಲ್ಲಿಯೂ ಮಾಡಿದರು. ಜನ ಅವರ ಪಾಂಡಿತ್ಯಕ್ಕೆ ಬೆರಗಾದರು. ರಾಮಕೃಷ್ಣಾನಂದರಿಗೆ ಸಂಸ್ಕೃತ ಭಾಷೆಯಲ್ಲಿ, ವೇದಾಂತ ಗ್ರಂಥಗಳಲ್ಲಿ ಅಸಾಧಾರಣ ಪಾಂಡಿತ್ಯ. ಬೈಬಲನ್ನು ತುಂಬಾ ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದರು. ಇಸ್ಲಾಂ ಮತವನ್ನು ಅವರು ವಿವರಿಸುತ್ತಿದ್ದ ರೀತಿಗೆ ಮುಸ್ಲಿಮರೇ ಬೆರಗಾಗುತ್ತಿದ್ದರು. ಬೆಂಗಳೂರಿನಲ್ಲಿ ಅವರು ಪ್ರಸಿದ್ಧರಾದ ಮೇಲೆ ೧೯೦೪ ರ ಆಗಸ್ಟ್‌ನಲ್ಲಿ ಜನ ಅವರನ್ನು ಮತ್ತೆ ಬೆಂಗಳೂರಿಗೆ ಕರೆಸಿಕೊಂಡರು. ಮತ್ತೆ ೧೯೦೬ರಲ್ಲಿ, ಆಗ ಮೈಸೂರು ದಿವಾನರಾಗಿದ್ದ ವಿ.ಪಿ.ಮಾಧವರಾಯರ ಪ್ರಭಾವದಿಂದ ಬೆಂಗಳೂರಿನಲ್ಲೂ ರಾಮಕೃಷ್ಣಾಶ್ರಮ ಒಂದನ್ನು ಸ್ಥಾಪಿಸಬೇಕೆಂಬ ಉತ್ಸಾಹ ಬೆಂಗಳೂರಿನ ಜನ ತೋರಿದರು. ಆಗ ಸರ್ಕಾರ ಈಗ ಇರುವ ರಾಮಕೃಷ್ಣ ಆಶ್ರಮದ ಪ್ರದೇಶದಲ್ಲಿ ಎರಡು ಎಕರೆ ಜಾಗ ಕೊಟ್ಟಿತು. ಆಶ್ರಮ ಕಟ್ಟಲು ಹಣಕ್ಕಾಗಿ ರಾಮಕೃಷ್ಣಾನಂದರು ತಾವೇ ಮನೆ ಮನೆಗೆ ಭಿಕ್ಷಾಟನೆಗೆ ಹೊರಟರು. ಅದರ ಫಲವಾಗಿ ೧೯೦೯ರ ಜನವರಿ ೧೯ರಂದು ಸ್ವಾಮಿ ಬ್ರಹ್ಮಾನಂದರ ಅಮೃತ ಹಸ್ತದಿಂದ ಆಶ್ರಮ ಆರಂಭವಾಯಿತು.

ರಾಮಕೃಷ್ಣಾನಂದರಿಗೆ ಎರಡು ಆಸೆಗಳಿದ್ದವು. ರಾಮಕೃಷ್ಣರ ಧರ್ಮಪತ್ನಿಯಾದ ಶ್ರೀಮಾತೆ ಶಾರದಾದೇವಿ ಯವರನ್ನು ದಕ್ಷಿಣಕ್ಕೆ ಕರೆಸಿಕೊಂಡು ಅವರಿಗೆ ತೀರ್ಥಯಾತ್ರೆ ಮಾಡಿಸಬೇಕೆಂಬುದು. ಎರಡನೆಯದಾಗಿ ದಕ್ಷಿಣದವರು ರಾಮಕೃಷ್ಣರನ್ನು ನೋಡಿರಲಿಲ್ಲ. ಆದ್ದರಿಂದ ಅವರು ಕೊನೆಯ ಪಕ್ಷ ರಾಮಕೃಷ್ಣರ ಬಹುಹಿರಿಯ ಶಿಷ್ಯರಾದ ಸ್ವಾಮಿ ಬ್ರಹ್ಮಾನಂದರನ್ನಾದರೂ ನೋಡಲಿ ಎಂಬುದು. ಅವೆರಡೂ ಅವರ ಜೀವಿತ ಕಾಲದಲ್ಲಿಯೇ ಮುಗಿದಿದ್ದು ಅವರಿಗೆ ಸಮಾಧಾನವನ್ನು ತಂದವು.

೧೯೦೮ ರಲ್ಲಿ ಬೆಂಗಳೂರಿನ ಆಶ್ರಮದ ಪ್ರಾರಂಭೋತ್ಸವ ಸಮಯದಲ್ಲಿ ಸ್ವಾಮಿ ಬ್ರಹ್ಮಾನಂದರನ್ನು ಕರೆಸಿ, ಉಪಚರಿಸಿದರು. ೧೯೧೦ರ ಜನವರಿಯಲ್ಲಿ ಶಾರದಾದೇವಿ ಯವರು ಎಂಟುಮಂದಿಯನ್ನು ಕರೆದುಕೊಂಡು ದಕ್ಷಿಣ ಭಾರತದ ಯಾತ್ರಾಸ್ಥಳಗಳನ್ನು ನೋಡಲು ಮದರಾಸಿಗೆ ಬಂದರು. ಶಾರದಾದೇವಿಯವರು ಕಲ್ಕತ್ತೆಗೆ ತೆರಳುವವರೆಗೂ ರಾಮ ಕೃಷ್ಣಾನಂದರು ತಾವೇ ನಿಂತು ಅವರ ಪ್ರಯಾಣ, ಊಟ-ಉಪಚಾರಗಳ ಮೇಲ್ವಿಚಾರಣೆಯನ್ನು ನೋಡಿಕೊಂಡರು. ಶಾರದಾದೇವಿಯವರು ಆ ಸಮಯದಲ್ಲಿ ಬೆಂಗಳೂರಿಗೂ ಬಂದಿದ್ದರು.

ವಿವೇಕಾನಂದರ ಸ್ನೇಹಿತ

ರಾಮಕೃಷ್ಣಾನಂದರು ಮದರಾಸಿಗೆ ಬಂದ ಮೇಲೆ ಸ್ವಾಮಿ ವಿವೇಕಾನಂದರನ್ನು ಕಂಡದ್ದು ಒಂದೇ ಒಂದು ಬಾರಿ. ೧೮೯೯ರಲ್ಲಿ ಎರಡನೇ ಬಾರಿ ವಿವೇಕಾನಂದರು ತುರಿಯಾನಂದ ಮತ್ತು ಸೋದರಿ ನಿವೇದಿತಾ ಅವರೊಂದಿಗೆ ಹಡಗಿನಲ್ಲಿ ಪಶ್ಚಿಮಕ್ಕೆ ತೆರಳುತ್ತಿದ್ದಾಗ ಮದರಾಸಿನಲ್ಲಿ ಕಾಣಿಸಿಕೊಂಡರು. ಆದರೇನು? ಕಲ್ಕತ್ತೆಯಲ್ಲಿ ಪ್ಲೇಗಿನ ಹಾವಳಿ ಹೆಚ್ಚಾಗಿದ್ದಿದ್ದರಿಂದ ಹಡಗಿನಲ್ಲಿದ್ದ ಜನರನ್ನು ಊರಿನೊಳಕ್ಕೆ ಬಿಡಲಿಲ್ಲ. ಆದರೂ ರಾಮಕೃಷ್ಣಾನಂದರು ಸಣ್ಣ ದೋಣಿಯಲ್ಲಿ ಹೋಗಿ ಸ್ವಾಮೀಜಿಯವರನ್ನು ಮಾತನಾಡಿಸಿದರು. ಕಲ್ಕತ್ತೆಯಿಂದ ತಂದಿದ್ದ ಗಂಗೆಯ ನೀರಿನ ಬಿಂದಿಗೆಯನ್ನು ಸ್ವಾಮೀಜಿ ರಾಮ ಕೃಷ್ಣಾನಂದರಿಗೆ ಕೊಟ್ಟರು. ಅದು ಈಗಲೂ ಮದರಾಸಿನ ಆಶ್ರಮದಲ್ಲಿದೆ. ಹಡಗು ಚಲಿಸುವ ಮುನ್ನ ರಾಮಕೃಷ್ಣಾನಂದರು ತಮ್ಮ ಅಂಬಿಗನಿಗೆ, “ಅಯ್ಯಾ, ಈ ಹಡಗನ್ನು ಮೂರು ಪ್ರದಕ್ಷಿಣೆ ಹಾಕು, ಇಬ್ಬರು ಮಹಾತ್ಮರನ್ನೂ ಪ್ರದಕ್ಷಿಣೆ ಹಾಕಿದಂತಾಗುತ್ತದೆ” ಎಂದು ಹೇಳಿದರು. ಸ್ವಾಮಿ ವಿವೇಕಾನಂದರಲ್ಲಿ ಅವರಿಗೆ ಅಂತಹ ಗೌರವವಿತ್ತು.

ಮದರಾಸಿನಲ್ಲಿ ಒಮ್ಮೆ ರಾಮಕೃಷ್ಣಾನಂದರು ಆಗ ತಾನೇ ಭಾಷಣ ಮಾಡಿ ಬಂದು ಆಯಾಸಗೊಂಡು ಕುಳಿತಿದ್ದಾರೆ. ವಿಪರೀತ ಸೆಕೆ. ತಾವೇ ಬೀಸಣಿಗೆಯಿಂದ ಗಾಳಿ ಬೀಸಿ ಕೊಳ್ಳುತ್ತಿದ್ದರು. ಮರುಕ್ಷಣದಲ್ಲಿಯೇ ಏನಾಯಿತೋ, ಬೀಸಣಿಗೆಯನ್ನು ಬಿಸುಟು, ಜಗ್ಗನೆ ನಿಂತು ಹೇಳಲಾರಂ ಭಿಸಿದರು: “ನೋಡು ನೋಡು, ನಿನಗಾಗಿಯೇ ನಾನು ಇಷ್ಟೆಲ್ಲಾ ತೊಂದರೆಗೆ ಒಳಗಾಗುತ್ತಿರುವುದು. ನೋಡು, ನಾನು ಎಷ್ಟು ಸಂಕಟಪಡುತ್ತಿದ್ದೇನೆ’ ಎಂದು ಹೇಳುತ್ತಿದ್ದವರು ಮುಂದಿನ ಕ್ಷಣದಲ್ಲೇ ನೆಲದ ಮೇಲೆ ನಮಸ್ಕಾರ ಮಾಡುತ್ತಾ, ‘ಇಲ್ಲಾ ಸೋದರ! ಇಲ್ಲ….ಇಲ್ಲ…..ನನ್ನನ್ನು ಕ್ಷಮಿಸು. ನೀನು ಮಾಡಿರುವುದು ಸಂಪೂರ್ಣವಾಗಿ ಒಳ್ಳೆಯದೇ.’ ಅವರು ಅದೃಶ್ಯರಾಗಿ ನಿಂತಿದ್ದ ಸ್ವಾಮಿ ವಿವೇಕಾನಂದರೊಡನೆ ಮಾತ ನಾಡುತ್ತಿದ್ದರಂತೆ.

ಮತ್ತೊಂದು ದಿನ ಸ್ವಾಮಿ ರಾಮಕೃಷ್ಣಾನಂದರು ಮಂದಿರದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಅವರಿಗೆ ಒಂದು ಅಶರೀರವಾಣಿ ಕೇಳಿಸಿತು ಎಂದು ಹೇಳುತ್ತಾರೆ. ‘ಶಶಿ, ನಾನು ನನ್ನ ದೇಹವನ್ನು ಕಿತ್ತೊಗೆದೆ’ ಎಂದು ಹೇಳಿತಂತೆ ಅದು. ಕೇಳಿಸಿದ ಸ್ವಲ್ಪ ಹೊತ್ತಿನಲ್ಲೇ ಸ್ವಾಮಿ ವಿವೇಕಾನಂದರು ಕಾಲವಾದ ಸುದ್ದಿ ಬಂದಿತು.

ರಾಮಕೃಷ್ಣಮಯ!

ರಾಮಕೃಷ್ಣಾನಂದ ರಾಮಕೃಷ್ಣಮಯರಾಗಿದ್ದರು ಎಂಬುದಕ್ಕೂ ಅವರ ಜೀವನದಲ್ಲಿ ನಡೆದ ಕೆಲವಾರು ಘಟನೆಗಳನ್ನು ಉದಾಹರಿಸಬಹುದು.

ಮೈಲಾಪುರಕ್ಕೆ ಬಂದನಂತರ ಮಠದಲ್ಲಿ ಒಂದು ರಾತ್ರಿ ಕುಳಿತಿದ್ದಾರೆ. ವಿಪರೀತ ಸೆಕೆ. ಗಾಳಿ ಬೀಸಿಕೊಳ್ಳುತ್ತಿದ್ದಾರೆ. ಕೂಡಲೇ ರಾಮಕೃಷ್ಣರ ನೆನಪು ಬಂದಿತು. ಸದ್ದುಮಾಡದೆ ಎದ್ದು ಬೀಸಣಿಗೆಯನ್ನು ತೆಗೆದುಕೊಂಡು ಮಂದಿರದೊಳಕ್ಕೆ ಹೋಗಿ ರಾಮಕೃಷ್ಣರ ಚಿತ್ರಪಟಕ್ಕೆ ಗಾಳಿ ಹಾಕಲಾರಂಭಿಸಿದರು. ಅದು ಅವರಿಗೆ ಕೇವಲ ಚಿತ್ರವಾಗಿರಲಿಲ್ಲ. ಜೀವಂತ ಮೂರ್ತಿ ಯಾಗಿತ್ತು.

 

ವಿವೇಕಾನಂದರು, ರಾಮಕೃಷ್ಣಾನಂದರು

 

ಮತ್ತೊಂದು ಘಟನೆ. ಒಂದು ರಾತ್ರಿ ಜೋರಾಗಿ ಮಳೆ ಬರುತ್ತಿದೆ. ಮಂದಿರದ ಮೇಲ್ಛಾವಣಿ ಸೋರಲಾರಂಭಿಸಿತು. ರಾಮಕೃಷ್ಣರ ಚಿತ್ರವಿದ್ದ ಸ್ಥಳದಲ್ಲಿ ಹನಿಯಲಾರಂಭಿಸಿತು. ಆಗ ಏನು ಮಾಡುವುದು? ಇತರರಾಗಿದ್ದಿದ್ದರೆ ಚಿತ್ರವನ್ನು ಬೇರೆಯ ಕಡೆ ತೆಗೆದುಕೊಂಡು ಹೋಗಿ ಇಡುತ್ತಿದ್ದರು. ಆದರೆ ಸ್ವಾಮಿಗಳು ಹಾಗೆ ಮಾಡಲಿಲ್ಲ. ಛತ್ರಿಯನ್ನು ಬಿಚ್ಚಿ ಚಿತ್ರದ ಮೇಲೆ ಹಿಡಿದು ನಿಂತರು-ಮಳೆ ನಿಲ್ಲುವವರೆಗೂ. ಕಾರಣ ರಾಮಕೃಷ್ಣರು ಆ ಸಮಯದಲ್ಲಿ ನಿದ್ರೆ ಮಾಡುತ್ತಿದ್ದಾರೆ ಎಂಬ ಭಾವನೆ ಸ್ವಾಮೀಜಿಯವರದು. ನಿದ್ರೆ ಮಾಡುತ್ತಿರುವ ತನ್ನ ಇಷ್ಟದೈವ ವನ್ನು ಎಬ್ಬಿಸುವುದಾದರೂ ಹೇಗೆ?

ರಾಮಕೃಷ್ಣ ಪರಮಹಂಸರಲ್ಲಿ ಸ್ವಾಮಿಗಳಿಗೆ ಎಂತಹ ದೃಢ ವಿಶ್ವಾಸವಿತ್ತು ಎಂಬುದಕ್ಕೆ ಇದೊಂದು ಘಟನೆಯನ್ನು ಹೇಳಬಹುದು. ಒಂದು ದಿನ ಮಧ್ಯಾಹ್ನ ಆಶ್ರಮದಲ್ಲಿ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಾಗಿತ್ತು. ಅವತ್ತು ದೇವರಿಗೆ ನಿವೇದನೆಗಾಗಲೀ ತನಗೆ ಊಟಕ್ಕಾಗಲೇ ಏನೂ ಇಲ್ಲ. ಸ್ವಾಮೀಜಿ ನೇರವಾಗಿ ಮಂದಿರದೊಳಕ್ಕೆ ಹೋಗಿ ರಾಮಕೃಷ್ಣರನ್ನು ಉದ್ದೇಶಿಸಿ

ನುಡಿದರು: ‘ಏಯ್ ಮುದುಕ, ನನ್ನನ್ನು ನನ್ನ ಮನೆ-ಮಠ, ವ್ಯಾಸಂಗ ಎಲ್ಲಾ ಬಿಡಿಸಿ, ನೀನು ಇಲ್ಲಿಗೆ ಕರೆದುಕೊಂಡು ಬಂದು ಈ ರೀತಿ ಕಷ್ಟ ಕೊಡುತ್ತಿದ್ದೀಯಾ? ನೀನೇನು ಕಷ್ಟ ಕೊಟ್ಟರೂ ನಾನು ನಿನ್ನನ್ನು ಬಿಡುವವನಲ್ಲ. ನನಗೆ ತಿನ್ನುವುದಕ್ಕೆ ಇಲ್ಲದಿದ್ದರೆ ಸಮುದ್ರದ ದಂಡೆಯ ಮರಳನ್ನೇ ತಂದು ಅದನ್ನೇ ನಿನಗೂ ನಿವೇದನೆ ಮಾಡಿ ತಿನ್ನುತ್ತೇನೆ-ಗೊತ್ತೇನು, ನಾನು ಸೋಲುವವನಲ್ಲ ನೀನು ಕೊಡುವ ಕಷ್ಟಗಳಿಂದ’ ಎಂದು ಕೂಗಾಡುತ್ತಿದ್ದಾರೆ. ಆ ಹೊತ್ತಿಗೆ ಕಲ್ಕತ್ತದಿಂದ ಬಂದಿದ್ದ ಯಾರೋ ಭಕ್ತರೊಬ್ಬರು ಹಣ್ಣು, ಸಿಹಿ ಮುಂತಾದುವನ್ನು ತಂದುಕೊಟ್ಟರು. ಆದರೆ ಎಷ್ಟೇ ಕಷ್ಟವಿದ್ದರೂ ಯಾರನ್ನೂ ತನಗಾಗಿ ಯಾಚಿಸಿದವರಲ್ಲ ಸ್ವಾಮೀಜಿ. ಅವರೇ, ‘ನಿನಗೆ ಏನಾದರೂ ಕಷ್ಟವಿದ್ದರೆ, ಇತರರನ್ನು ಯಾಚಿಸುವ ಬದಲು, ಎಲ್ಲವನ್ನೂ ನೀಡುವ ದೇವರನ್ನೆ ಯಾಚಿಸು’ ಎನ್ನುತ್ತಿದ್ದರು.

ರಾಮಕೃಷ್ಣಾನಂದರಿಗೆ ರಾಮಾನುಜಾಚಾರ್ಯರ ಮೇಲೆ ವಿಶೇಷ ಪ್ರೇಮ. ಬಂಗಾಳದ ಜನರಿಗೆ ಆಚಾರ್ಯರ ಜೀವನದ ಬಗ್ಗೆ ಏನೂ ತಿಳಿಯದಿದ್ದುದನ್ನು ಮನಗಂಡು ತಾವು ಆಚಾರ್ಯರಿದ್ದ ಸ್ಥಳಗಳನ್ನು ಸುತ್ತಿ, ಪಂಡಿತರೊಂದಿಗೆ ಸಂಸ್ಕೃತದಲ್ಲಿ ಚರ್ಚೆಮಾಡಿ ಬಂಗಾಳಿ ಭಾಷೆಯಲ್ಲಿ ‘ಶ್ರೀ  ರಾಮಾನುಜ ಚರಿತ’ ಎಂಬ ಪುಸ್ತಕವನ್ನು ಬರೆದರು. ಇಂದಿಗೂ ಆ ಪುಸ್ತಕ ಆಚಾರ್ಯರ ಬಗ್ಗೆ ಬರೆದ ಶ್ರೇಷ್ಠ ಗ್ರಂಥವಾಗಿದೆ. ಅವರ ಉಪನ್ಯಾಸಗಳೆಲ್ಲವೂ ಹಲವು ಪುಸ್ತಕಗಳಲ್ಲಿ ಕಾಣಸಿಗುತ್ತವೆ. ಅವುಗಳಲ್ಲಿ ‘ವಿಶ್ವ ಮತ್ತು ಮಾನವ’, ’ಭಗವಂತ ಮತ್ತು ಭಗವದಾವತಾರಗಳು’, ‘ನೊಂದ ಜೀವಕ್ಕೆ ಭರವಸೆ’, ‘ಶ್ರೀಕೃಷ್ಣ-ಗೋಪಾಲಕ ಮತ್ತು ರಾಜಸೃಷ್ಟಾರ’ ಈ ಪುಸ್ತಕಗಳು ಬಹಳ ಪ್ರಸಿದ್ಧವಾಗಿವೆ.

ರಾಮಕೃಷ್ಣಾನಂದರ ಜೀವನದಿಂದ, ಅವರ ಉಪದೇಶ ದಿಂದ ಮದರಾಸಿನ ಹಲವಾರು ವ್ಯಕ್ತಿಗಳ ಜೀವನದಲ್ಲಿ ಒಳಿತಾ ಗಿದೆ. ಸ್ವಾಮೀಜಿಯವರದು ಸರಳ ಬದುಕು, ಸರಳ ನಡೆ-ನುಡಿ, ನಿರ್ಮಲವಾದ ಮನಸ್ಸು, ಗುರುವಿನಲ್ಲಿ ಏಕನಿಷ್ಠೆ. ಇವೆಲ್ಲವೂ ಹಲವಾರು ಮಂದಿಯ ಮೇಲೆ ಪ್ರಭಾವ ಬೀರಿದವು.

ಅಸಾಧಾರಣ ವಿದ್ವಾಂಸರೂ ಜ್ಞಾನಿಗಳೂ ಆದ ರಾಮ ಕೃಷ್ಣಾನಂದರಿಗೆ ತುಂಬಾ ವಿನಯ. ರಾಮಕೃಷ್ಣ ಪರಮ ಹಂಸರು ತಮ್ಮ ಮೂಲಕ ಕೆಲಸ ಮಾಡಿಸುತ್ತಾರೆ ಎಂದು ಅವರ ಭಾವನೆ. ಅಹಂಕಾರವನ್ನು ಕಂಡರೆ ಆಗದು ಅವರಿಗೆ. ಒಮ್ಮೆ ಜಂಬದ ಪಂಡಿತರೊಬ್ಬರು ತಾವು ಸಮಾಜವನ್ನು ಹೇಗೆ ಸುಧಾರಣೆ ಮಾಡಿ ಉದ್ಧಾರ ಮಾಡಲು ಹೊರಟಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಕೇಳುವಷ್ಟು ಹೊತ್ತು ಕೇಳಿ ಕಡೆಗೆ ರಾಮಕೃಷ್ಣಾನಂದರು ಎಂದರು: “ನೀವು ಹುಟ್ಟುವ ಮೊದಲು ಪಾಪ, ದೇವರು ಏನು ಮಾಡುತ್ತಿದ್ದನೋ!”

ದೇಹ ಸೋತಿತು

ಸ್ವಾಮೀಜಿಯವರು ಹಗಲು-ರಾತ್ರಿ ದುಡಿದು ಹಣ್ಣಾದರು. ಬೆಂಗಳೂರು, ಮದರಾಸಿನಲ್ಲಿ ಆಶ್ರಮಗಳನ್ನು ಭದ್ರ ಬುನಾದಿಯ ಮೇಲೆ ಸ್ಥಾಪಿಸಿದರು. ತಮ್ಮ ಬದುಕಿನಲ್ಲಿ ಶಾರದಾದೇವಿ ಯವರನ್ನು ಮತ್ತು ಬ್ರಹ್ಮಾನಂದರನ್ನು ದಕ್ಷಿಣಕ್ಕೆ ಬರಮಾಡಿಕೊಳ್ಳಬೇಕು ಎಂಬ ಆಸೆಯನ್ನೂ ಸಹ ಈಡೇರಿಸಿ ಕೊಂಡರು. ಮಿತಿಯಿಲ್ಲದೆ ದುಡಿದಿದ್ದರ ಫಲವಾಗಿ ಮತ್ತು ಕಾಲಕಾಲಕ್ಕೆ ಆಹಾರ, ನಿದ್ರೆ ಇಲ್ಲದಿದ್ದುದರ ಫಲವಾಗಿ ಅವರಿಗೆ ಮಧು ಮೇಹ ರೋಗ ಕಾಣಿಸಿಕೊಂಡಿತು. ೧೯೧೦ರ ಮಧ್ಯದಲ್ಲಿ ಕಾಯಿಲೆ ವಿಪರೀತಕ್ಕಿಟ್ಟುಕೊಂಡಿತು. ವಿಶ್ರಾಂತಿಗಾಗಿ ಅವರು ಬೆಂಗಳೂರಿಗೆ ಬಂದರು. ಬೆಂಗಳೂರಿನ ವೈದ್ಯರು ಅವರನ್ನು ಸಂಪೂರ್ಣವಾಗಿ ಪರೀಕ್ಷಿಸಿ, ಸಾಕಷ್ಟು ವೈದ್ಯಕೀಯ ಸಲಹೆಗಳನ್ನಿತ್ತರೂ ಅದರಿಂದ ಏನೂ ಪ್ರಯೋಜನವಾಗಲಿಲ್ಲ.

ಕೊನೆಗೆ ರಾಮಕೃಷ್ಣಾನಂದ ಇತರ ಸೋದರ ಶಿಷ್ಯರು ಅವರನ್ನು ಕಲ್ಕತ್ತೆಗೆ ಬರುವಂತೆ ಒತ್ತಾಯಪಡಿಸಿದರು. ಅದೇ ಪ್ರಕಾರ ಸ್ವಾಮೀಜಿಯವರು ೧೯೧೧ರ ಜೂನ್‌ನಲ್ಲಿ ದಕ್ಷಿಣ ಭಾರತವನ್ನು ಬಿಟ್ಟು ಕಲ್ಕತ್ತೆಗೆ ನಡೆದರು.

ಕಲ್ಕತ್ತೆಗೆ ಬಂದನಂತರ ಬಾಗ್‌ಬಜಾರ್‌ನಲ್ಲಿದ್ದ ‘ಉದ್ಯೋಧನ’ದಲ್ಲಿ ರಾಮಕೃಷ್ಣಾನಂದರಿಗೆ ಸ್ಥಳ ನೀಡ ಲಾಯಿತು. ಕಲ್ಕತ್ತೆಯ ಪ್ರಸಿದ್ಧ ವೈದ್ಯರು ಅವರಿಗೆ ಶುಶ್ರೂಷೆ ಮಾಡಿದರೂ ಯಾವ ಪ್ರಯೋಜನವೂ ಆಗಲಿಲ್ಲ. ಸ್ವಾಮಿ ರಾಮಕೃಷ್ಣಾನಂದರಿಗೆ ತಿನ್ನುವುದಕ್ಕೆ ಆಗುತ್ತಿರಲಿಲ್ಲ. ನಿದ್ರೆಯೇ ಇಲ್ಲದೆ ಹಗಲು ರಾತ್ರಿಗಳನ್ನು ಕಳೆಯಬೇಕಾಯಿತು. ಬಹಳ ನೋವುಪಟ್ಟರು. ಅವರನ್ನು ಉಪಚರಿಸುತ್ತಿದ್ದ ಸ್ವಾಮಿ ಶಾರದಾನಂದ(ಶರತ್)ರಿಗೆ : “ನನ್ನ ತಿನ್ನುವಿಕೆ ಮುಗಿಯುತ್ತಾ ಬಂದಿದೆ, ಮಹಾಮಾಯೆ ನನ್ನನ್ನು ತಿನ್ನಲು ಬಿಡುತ್ತಿಲ್ಲ” ಎನ್ನುತ್ತಿದ್ದರು. ಇದರಿಂದಾಗಿ ಅವರ ಭವ್ಯ ದೇಹ ಒಣಗಿ ಕೃಶವಾಯಿತು. ಆದರೂ ಅವರ ಮನಸ್ಸು ಸದಾ ಭಗವಂತನಲ್ಲೆ ನೆಲೆಸಿತ್ತು. ಅವರು ಜ್ಞಾನ ತಪ್ಪಿದಾಗಲೂ ಕೂಡ ಅವರ ಬಾಯಲ್ಲಿ ದುರ್ಗೆ, ಶಿವ, ರಾಮಕೃಷ್ಣರ ನಾಮಸ್ಮರಣೆಯೇ!

ಒಂದು ದಿನ ಅವರು ಮಲಗಿದ್ದಾಗ ಅವರನ್ನು ಉಪಚರಿಸುತ್ತಿದ್ದ ಬ್ರಹ್ಮಚಾರಿಯನ್ನು ಕರೆದು, “ರಾಮಕೃಷ್ಣರು, ಶ್ರೀಮಾತೆಯವರು, ಸ್ವಾಮಿ ವಿವೇಕಾನಂದರು ಬಂದಿದ್ದಾರೆ. ಅವರಿಗೆ ಕುಳಿತುಕೊಳ್ಳುವುದಕ್ಕೆ ಒಂದು ಚಾಪೆಯನ್ನು ಹಾಸು” ಎಂದರು. ಬ್ರಹ್ಮಚಾರಿಗೆ ದಿಕ್ಕು ತೋಚದೆ ಸುಮ್ಮನೆ ನಿಂತಿರಲು ಮತ್ತೆ ಅವನನ್ನು ಗದರಿಸಿದರು: “ನಿನಗೆ ಕಾಣಿಸುತ್ತಿಲ್ಲವೇನು? ಅವರೆಲ್ಲಾ ಬಂದು ನಿಂತಿದ್ದಾರೆ. ಬೇಗ ಚಾಪೆ ಹಾಸು.” ಆಗ ವಿಧಿಯಿಲ್ಲದೆ ಬ್ರಹ್ಮಚಾರಿ ಚಾಪೆ ಹಾಸಿದ. ಸ್ವಾಮೀಜಿ ಕೈ ಮುಗಿದು ಆ ಚಾಪೆಯತ್ತ ನಮಿಸಿ ಸ್ವಲ್ಪ ಹೊತ್ತಿನ ಅನಂತರ ಬ್ರಹ್ಮಚಾರಿಗೆ, “ಅವರೆಲ್ಲಾ ಹೊರಟು ಹೋದರು. ಚಾಪೆಯನ್ನು ಸುತ್ತಿಡು” ಎಂದರು.

೧೯೧೧ರ ಆಗಸ್ಟ ೨೧ ರಂದು ಸ್ವಾಮೀಜಿಯವರು ಮತ್ತೆಮತ್ತೆ ಸಮಾಧಿಗೆ ಹೋಗುತ್ತಿದ್ದರು. ಸ್ವಾಮಿ

ವಿವೇಕಾನಂದರು ‘ಸಮಾಧಿ’ಯ ಮೇಲೆ ರಚಿಸಿದ ‘ಅಲ್ಲಿ ಶಶಿ-ಸೂರ್ಯರಿಲ್ಲ’ ಎಂಬ ಕೀರ್ತನೆಯನ್ನು ಮತ್ತೆಮತ್ತೆ ಹಾಡಿಸಿ ದರು. ದೇಹ ಬಿಡುವ ಮುನ್ನ ಮೂರು ಗಂಟೆಗಳ ಕಾಲ ಸಂಪೂರ್ಣವಾಗಿ ಸಮಾಧಿ ಸ್ಥಿತಿಯಲ್ಲಿದ್ದರು. ಕೊನೆಗೆ ಅಪರಾಹ್ನ ಒಂದು ಗಂಟೆಗೆ ಅವರು ದಿವ್ಯ ಚೇತನದಲ್ಲಿ ಲೀನರಾದರು.