ರಾಮಕೃಷ್ಣ ಗೋಪಾಲಭಂಡಾರ್‌ಕರ್ಭಾರತದ ಅತ್ಯಂತ ಹಿರಿಯ ವಿದ್ವಾಂಸರಲ್ಲಿ ಒಬ್ಬರು. ದಖನ್ ಪ್ರದೇಶದ ಇತಿಹಾಸವನ್ನು ಮೊಟ್ಟ ಮೊದಲ ಭಾರಿಗೆ ಆಳವಾಗಿ ಅಭ್ಯಾಸ ಮಾಡಿದ ಸಂಶೋಧಕರು. ಪ್ರಾಚೀನ ಸಂಸ್ಕೃತಿ, ಇತಿಹಾಸ ಎರಡೂ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿದರು. ಸಮಾಜ ಸುಧಾರಕರು.

 ರಾಮಕೃಷ್ಣ ಗೋಪಾಲಭಂಡಾರ್‌ಕರ್

 

೧೯೧೭ನೆಯ ಜುಲೈ ಆರರಂದು ಸಾಂಪ್ರದಾಯಕ ವಾದ ರೀತಿಯಲ್ಲಿ ಭಂಡಾರ್‌ಕರ್ ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆ (ಭಂಡಾರ್‌ಕರ್ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಪುಣೆಯಲ್ಲಿ ಪ್ರಾರಂಭ ವಾಯಿತು. ಈ ಪ್ರಾರಂಭೋತ್ಸವವನ್ನು ನೆರವೇರಿಸಲು ಆಗಿನ ಮುಂಬಯಿ ರಾಜ್ಯದ  ರಾಜಪಾಲರಾಗಿದ್ದ ಲಾರ್ಡ್ ವಿಲಿಂಗಡನ್ ಅವರು ಆಗಮಿಸಿದ್ದರು. ಪುಣೆಯ ವಿದ್ವಾಸರೆಲ್ಲರೂ ಆ ಸಭೆಗೆ ಬಂದಿದ್ದರು.

ಹೊಸ ಸಂಸ್ಥೆಗೆ ಆರ್.ಜಿ. ಭಂಡಾರ್‌ಕರ್‌ರ ಹೆಸರನ್ನಿಟ್ಟಿದ್ದರು. ಅವರಿಗೆ ಎಂಬತ್ತು ವರ್ಷ ತುಂಬಿದ ಹುಟ್ಟು ಹಬ್ಬದ ಸಮಾರಂಭವೂ ಅಂದೇ. ಭಂಡಾರ್‌ಕರ್ ಅವರ ಮಿತ್ರರು, ಶಿಷ್ಯರು, ಅಭಿಮಾನಿಗಳು ಎಲ್ಲರೂ ಆ ಸಭೆಯಲ್ಲಿದ್ದರು. ಭಂಡಾರ್‌ಕರ್ ಅವರ ಸವಿನೆನಪಿಗಾಗಿ ಅಭಿಮಾನಿಗಳು ಸಂಭಾವನಾ ಗ್ರಂಥವೊಂದನ್ನು ಪ್ರಕಟಿಸಿದ್ದರು. ಅದರಲ್ಲಿ ಭಾರತದ ಶ್ರೇಷ್ಠ ವಿದ್ವಾಂಸರಲ್ಲದೆ ಜಗತ್ತಿನ ಶ್ರೇಷ್ಠ ವಿದ್ವಾಂಸರು ಹಲವರು ಬರೆದ ಲೇಖನಗಳಿದ್ದವು. ಭಂಡಾರ್‌ಕರರ ವಿದ್ವತ್ತು, ಪ್ರತಿಭೆ ಇವುಗಳ ಖ್ಯಾತಿ ಭಾರತದಾಚೆ ಹಲವು ದೇಶಗಳಿಗೆ ಹಬ್ಬಿತ್ತು. ಆ ದೇಶಗಳ ವಿದ್ವಾಂಸರು ಭಂಡಾರ್‌ಕರ್‌ರಿಗೆ ಅರ್ಪಿಸುವ ಗ್ರಂಥಕ್ಕೆ ಲೇಖನ ಬರೆಯುವುದು, ತಮಗೆ ಒಂದು ಗೌರವ  ಎಂದು ಸಂತೋಷದಿಂದ ಲೇಖನಗಳನ್ನು ಬರೆದಿದ್ದರು. ಅದರಲ್ಲಿ ಸುಮಾರು ನಲ್ವತ್ತು ಪ್ರಬಂಧಗಳು ಇದ್ದವು. ಅಂದು ಆ ಸಭೆಯಲ್ಲಿ ಈ ಮಹಾಗ್ರಂಥವನ್ನು ಭಂಡಾರ್‌ಕರ್ ಅವರಿಗೆ ಅರ್ಪಿಸಿದರು.

ಆರ್.ಜಿ.ಭಂಡಾರ್‌ಕರ್ ತಮ್ಮ ಹತ್ತಿರವಿದ್ದ ಸುಮಾರು ಮೂರುಸಾವಿರ ಪುಸ್ತಕಗಳು ಹಾಗೂ  ಪತ್ರಿಕೆಗಳನ್ನು ಸಂತೋಷದಿಂದ ಸಂಸ್ಥೆಗೆ ದಾನಮಾಡಿದರು. ಬಹಳ ಅಮೂಲ್ಯವಾದ ಕೃತಿಗಳು ಇದರಲ್ಲಿ ಇದ್ದವು. ಸುಮಾರು ೨೫,೦೦೦ ರೂಪಾಯಿ ಬೆಲೆ ಬಾಳುವ ಗ್ರಂಥ ಭಂಡಾರವದು. ಸಂಶೋಧಕರಿಗೆ ಅವಶ್ಯಕವಾದ ಮಹತ್ವದ ಕೃತಿಗಳಿದ್ದವು. ಇಂಥ ಸಾಮಾಗ್ರಿ ಯಿಂದ ‘ಭಂಡಾರ್‌ಕರ್ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆ’ ಬೆಳೆಯಲಾರಂಭಿಸಿತು.

ಭಂಡಾರ್‌ಕರ್ ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆ ಬೇಗನೇ ಪುಣೆಯಲ್ಲಿ ಬೇರುಬಿಟ್ಟಿತು. ಮಹತ್ವಪೂರ್ಣ ವಾದ ಯೋಜನೆಗಳನ್ನು ಕೈಗೆತ್ತಿಕೊಂಡಿತು. ಪಾಂಡಿತ್ಯ ಪೂರ್ಣವಾದ ಮಹಾಭಾರತ ಸಂಪುಟಗಳನ್ನು ಸಂಪಾದಿಸ ತೊಡಗಿತು. ಆರ್. ಜಿ. ಭಂಡಾರ್‌ಕರ್ ಅವರೇ ಇದರ ಪ್ರಾರಂಭೋತ್ಸವವನ್ನು ನೆರವೇರಿಸಿದರು. ಕಾಗದದ ಮೇಲೆ ಮೊದಲನೆಯ ಶ್ಲೋಕವನ್ನು ಅವರೇ ಬರೆದರು.

ಅಖಿಲ ಭಾರತ ಪ್ರಾಚ್ಯ ವಿದ್ಯಾ ಅಧಿವೇಶನವನ್ನು ಇದೇ ಸಂಸ್ಥೆ ಪ್ರಾರಂಭಿಸಿತು. ಮೊದಲ ಅಧಿವೇಶನವು ಪುಣೆಯಲ್ಲಿ ೧೯೧೯ರ ನವೆಂಬರ್ ತಿಂಗಳಲ್ಲಿ ಜರುಗಿತು. ಮೊದಲ ಅಧಿವೇಶನದ ಅಧ್ಯಕ್ಷರು ಆರ್. ಜಿ. ಭಂಡಾರ್‌ಕರ್ ಅವರು! ಅಂದು ಭಂಡಾರ್‌ಕರ್ ಅವರಿಗೆ ಬಹಳ ಸಂತೋಷ; ಬಹಳ ಸಮಾಧಾನ; ಸಮಾಧಾನ. ತಮ್ಮ ಭಾಷಣದ ಕೊನೆಗೆ ಇದೇ ವಿಚಾರವನ್ನು ಅವರು ಹೇಳಿದರು.

‘ಇಂದಿನಿಂದ ನಾನು ನನ್ನ ಜೀವನದ ಎಲ್ಲ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವೆ. ನಾನು ನಿವೃತ್ತಿ ಹೊಂದುವೆ. ನಮ್ಮ ಸಂಶೋಧನೆಯಲ್ಲಿ ಸರಿಯಾದ, ಆಳವಾದ ಪಾಂಡಿತ್ಯ ಇರಬೇಕೆಂದು ನಾನು ಬಯಸಿದ್ದೆ. ಅಂಥ ಪಾಂಡಿತ್ಯ ಈಗ ಕಂಡು ಬರುತ್ತಿದೆ. ಈ ಪಾಂಡಿತ್ಯದಲ್ಲಿ ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ಅನೇಕ ಆತಂಕಗಳು ಎದುರಾಗಬಹುದು. ಆದರೆ ಅವೆಲ್ಲವುಗಳನ್ನು ಗೆಲ್ಲಬೇಕು.’

ಅನೇಕ ವರುಷಗಳ ಕಾಲ ಹೋರಾಡಿದ ಜೀವ ಭಂಡಾರ್‌ಕರ್ ಅವರದು. ಸರಸ್ವತಿಯ ಭಂಡಾರವೇ ಭಂಡಾರ್‌ಕರ್ ಆಗಿದ್ದರು.  ಅವರ ಸಾಧನೆ ಹಿರಿದಾದುದು.

ಬಾಲ್ಯ

ಭಂಡಾರ್‌ಕರ್ ಅವರ ಹೆಸರು ರಾಮಕೃಷ್ಣ; ಅವರ ತಂದೆಯ ಹೆಸರು ಗೋಪಾಲ. ಭಂಡಾರ್‌ಕರ್ ಮನೆತನ ಮೊದಲಿನಿಂದ ಪುಣೆಯಲ್ಲಿ ಇದ್ದುದಲ್ಲ. ಇವರು ಭಾರತದ ಪಶ್ಚಿಮದ ಕರಾವಳಿಯಲ್ಲಿರುವ ಮಾಳವಣದ ಕಡೆಯವರು. ಸಾರಸ್ವತ ಕಡೆಯುವರು. ಸಾರಸ್ವತ ಬ್ರಾಹ್ಮಣರು. ಮಾಳವಣದ ಕಡೆಗೆ ಪಲ್ಕೆ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು.

ರಾಮಕೃಷ್ಣ ಭಂಡಾರ್‌ಕರ್ ಜನಿಸಿದ್ದು ೧೮೩೭ರ ಜುಲೈ ಏಳರಂದು. ರತ್ನಾಗಿರಿ ಜಿಲ್ಲೆಯ ಮಾಳವಣದಲ್ಲಿ ಗೋಪಾಲ ವಾಡಕೊ ಭಂಡಾರ್‌ಕರ್ ಇವರ ತಂದೆ, ಗೋಪಾಲ ಅವರಿಗೆ ಮೂವರು ಗಂಡುಮಕ್ಕಳು ಹಾಗೂ ನಾಲ್ವರು ಹೆಣ್ಣುಮಕ್ಕಳು. ಈ ಏಳುಮಕ್ಕಳಲ್ಲಿ ರಾಮಕೃಷ್ಣ ಎರಡನೆಯವರು. ಗೋಪಾಲ ಅವರು ಕಂದಾಯ ಇಲಾಖೆಯಲ್ಲಿ ಗುಮಾಸ್ತರು ಬಡತನದಲ್ಲಿದ್ದ ಮನೆತನವದು.

ರಾಮಕೃಷ್ಣರ ಪ್ರಾಥಮಿಕ ಶಿಕ್ಷಣ ಮಾಳವಣ ದಲ್ಲಿಯೇ ಆಯಿತು. ಅವರು ಇಂಗ್ಲಿಷ್ ಕಲಿಯಲು ಪ್ರಾರಂಭಿಸಿದ್ದು ೧೮೪೭ ರಲ್ಲಿ. ರತ್ನಾಗಿರಿ ಹೈಸ್ಕೂಲಿನಲ್ಲಿ ಅವರ ಮಾಧ್ಯಮಿಕ ಶಿಕ್ಷಣ. ಶಾಲೆಯಲ್ಲಿ ರಾಮಕೃಷ್ಣರಿಗೆ ಪಾಠದಲ್ಲಿ ತುಂಬ ಆಸಕ್ತಿ. ನಿಯಮಿತವಾಗಿಯೂ, ಅಚ್ಚುಕಟ್ಟಾಗಿಯೂ ಅವರು ಕೆಲಸ ಮಾಡುತ್ತಿದ್ದರು. ಶ್ರೇಷ್ಠ ಗುಣಗಳಿಗಾಗಿ ಅವರಿಗೆ ಮಾಧ್ಯಮಿಕ ಶಾಲೆಯಲ್ಲಿ ಭದ್ರ ತಳಹದಿ ದೊರಕಿತು.

ಮುಂಬಯಿಯಲ್ಲಿ ಉತ್ತಮ ಶಿಕ್ಷಣ ಪಡೆಯ ಬೇಕೆಂದು ರಾಮಕೃಷ್ಣರು ಸಂಕಲ್ಪ ಮಾಡಿದರು. ಆದ್ದರಿಂದ  ೧೮೫೩ ರಲ್ಲಿ ಅವರು ಮುಂಬಯಿಗೆ ಹೋಗಿ, ತಮ್ಮ ಸಹೋದರಿಯ ಮನೆಯಲ್ಲಿ ಉಳಿದುಕೊಂಡರು ಎಲ್‌ಫಿನ್‌ಸ್ಟನ್ ಮಾಧ್ಯಮಿಕ ಶಾಲೆಯನ್ನು ಸೇರಿದರು. ಅದೇ ಶಾಲೆಯಿಂದ ಕೊನೆಯ ಪರೀಕ್ಷೆಗೆ ಕಟ್ಟಿದರು. ಆ ಪರೀಕ್ಷೆ ಯಲ್ಲಿ ಅವರು ಮೊದಲದರ್ಜೆಯಲ್ಲಿ ತೇರ್ಗಡೆಯಾದರು; ಮೊದಲ ಸ್ಥಾನವನ್ನು ಪಡೆದರು.

ಉಚ್ಚ ಶಿಕ್ಷಣ

ಉಚ್ಚ ಶಿಕ್ಷಣಕ್ಕಾಗಿ ಎಲ್‌ಫಿನ್‌ಸ್ಟನ್‌ಸಂಸ್ಥೆ ಸೇರಿದಾಗ ಅವರಿಗೆ ಪ್ರತಿಭಾವಂತ ವಿದ್ಯಾರ್ಥಿಯಾದು ದರಿಂದ ಅನೇಕ ವಿದ್ಯಾರ್ಥಿವೇತನಗಳು ದೊರಕಿದವು. ರಾಮಕೃಷ್ಣ ಭಂಡಾರ್‌ಕರ್‌ರಿಗೆ ಆಗ ಗಣಿತಶಾಸ್ತ್ರದಲ್ಲಿ ವಿಶೇಷ ಆಸಕ್ತಿ. ಸುಪ್ರಸಿದ್ಧ ದಾದಾಭಾಯಿ ನವರೋಜಿ ಯವರು ಅಲ್ಲಿ ಗಣಿತಶಾಸ್ತ್ರವನ್ನು ಕಲಿಸುತ್ತಿದ್ದರು. ನವರೋಜಿ ಅವರು ತಮ್ಮ ಶಿಷ್ಯ ರಾಮಕೃಷ್ಣ ರನ್ನು ಬಹಳ ಮೆಚ್ಚಿಕೊಂಡರು. ರಾಮಕೃಷ್ಣರಿಗೆ ಆತ್ಮೀಯ ಗುರುವಾದರು. ಮುಂಬಯಿ ಯನ್ನು ಬಿಟ್ಟು ನವರೋಜಿ ಇಂಗ್ಲೆಂಡಿಗೆ ಹೋಗಬೇಕಾಯಿತು.

೧೮೫೮ರಲ್ಲಿ ರಾಮಕೃಷ್ಣರ ವಿದ್ಯಾಭ್ಯಾಸ ಮುಗಿಯಿತು. ಉತ್ತಮ ಶ್ರೇಣಿಯಲ್ಲಿ ಪಾಸಾದರು, ಅವರ ಮನೆತನದ ಇತಿಹಾಸದಲ್ಲಿ ರಾಮಕೃಷ್ಣ ಭಂಡಾರ್‌ಕರ್‌ರೇ ಮೊಟ್ಟ ಮೊದಲಾಗಿ ಉಚ್ಛ ಶಿಕ್ಷಣ  ಪಡೆದವರು. ಮುಂದೇ ಅದೇ ಸಂಸ್ಥೆಯಲ್ಲಿ ಮೊದಲು ಗುಮಾಸ್ತರಾಗಿ ಸೇರಿಕೊಂಡರು; ಅನಂತರ ಶಿಕ್ಷಕರಾದರು. ಅವರ ವಿದ್ವತ್ತಿಗೆ ಬಹುಬೇಗ ಮನ್ನಣೆ ದೊರಕಿತು. ೧೮೫೯ ರಿಂದ ಅವರು ಎಲ್‌ಫಿನ್ ಸ್ಟನ್ ಸಂಸ್ಥೆಯಲ್ಲಿ ಡೆಕನ್ ಫೆಲೊ’ ಅದರು.

‘ಡೆಕನ್ ಫೆಲೋ’ ಎಂಬ ಸ್ಥಾನ ಜಾಣರಿಗೆ ಮಾತ್ರ ಸಿಗುವುದಾಗಿತ್ತು. ಅಂಥ ಮಹತ್ವದ ಸ್ಥಾನವನ್ನು ರಾಮಕೃಷ್ಣ ಭಂಡಾರ್‌ಕರ್ ಗಿಟ್ಟಿಸಿದರು. ಇದೇ ಸಮಯದಲ್ಲಿ ಮುಂಬಯಿಯಲ್ಲಿ ರಾಮಕೃಷ್ಣ ಭಂಡಾರ್‌ಕರ್ ಅವರು ಸಂಸ್ಕೃತ ಭಾಷೆಯನ್ನು ಕಲಿಯಲು ಇಚ್ಛಿಸಿದರು. ಅದಕ್ಕಾಗಿ ಅವರು ಗೋವಿಂದಶಾಸ್ತ್ರೀ ಲೇಲೆ, ಅಪ್ಪಾಶಾಸ್ತ್ರೀ ಖಾಡಿಲಕರ್, ಅನಂತಶಾಸ್ತ್ರಿ ಪೆಂಡಾರಕರ್ ಇವರ ಹತ್ತಿರ ಸಂಸ್ಕೃತದ ಅಭ್ಯಾಸ ಮಾಡಿದರು.

ಡೆಕನ್ ಫೆಲೋ ಆಗಿ ರಾಮಕೃಷ್ಣರು ಮುಂಬಯಿ ಯಲ್ಲಿ ಸುಮಾರು ಒಂದೂವರೆ ವರುಷವಿದ್ದರು; ಆಮೇಲೆ ಪುಣೆ ಕಾಲೇಜಿನಲ್ಲಿ (ಅನಂತರ ಅದಕ್ಕೆ ಡೆಕನ್ ಕಾಲೇಜ್ ಎಂದು ಹೆಸರಿಡಲಾಯಿತು) ನಾಲ್ಕು ವರುಷವಿದ್ದರು. ಸಂಸ್ಕೃತದಲ್ಲಿ ವಿದ್ವಾಂಸರಾದ ಪ್ರಾಧ್ಯಾಪಕ ಮಾರ್ಟಿನ್ ಹಾಗ್ ಅವರ ಬಳಿಯೂ  ಭಂಡಾರ್‌ಕರ್ ಅವರು ಸಂಸ್ಕೃತ ಕಲಿತರು. ಇದರಿಂದ ಪಾಶ್ಚಾತ್ಯ ಅಭ್ಯಾಸದ ಪದ್ಧತಿಗಳು ರಾಮಕೃಷ್ಣ ಭಂಡಾರ್‌ಕರ್ ಅವರಿಗೆ ತಿಳಿದವು. ಅದರ ಲಾಭವನ್ನು  ಭಂಡಾರ್‌ಕರ್ ಅವರು ಸಂಪೂರ್ಣವಾಗಿ ಪಡೆದರು.

ಆ ಕಾಲಕ್ಕೆ ಮುಂಬಯಿ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಈ ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಕುಳಿತುಕೊಳ್ಳಬೇಕೆಂದು ರಾಮಕೃಷ್ಣ ಭಂಡಾರ್‌ಕರ್ ಮನಸ್ಸು ಮಾಡಿದರು. ಅವರು ಅಭ್ಯಾಸಕ್ಕೆ ಎಂದೂ ಹಿಂಜರಿದವರಲ್ಲ. ೧೮೬೭ರಲ್ಲಿ ಮುಂಬಯಿ ವಿಶ್ವವಿದ್ಯಾ ಲಯದ ಬಿ.ಎ. ಪದವಿಯನ್ನು ಪಡೆದರು. ೧೮೬೩ರಲ್ಲಿ ಅದೇ ವಿಶ್ವವಿದ್ಯಾಲಯದ ಎಂ.ಎ. ಪದವೀಧರರಾದರು.

ಪ್ರಾರಂಭದ ಉದ್ಯೋಗ

ಭಂಡಾರ್‌ಕರರು ಎಂ.ಎ. ಪದವೀಧರರಾದ ಮೇಲೆ, ತಮ್ಮ ಫೆಲೋಷಿಪ್‌ಗೆ ರಾಜೀನಾಮೆ ಕೊಟ್ಟರು. ಅನಂತರ ಸರ್ಕಾರಿ ಶಿಕ್ಷಣಖಾತೆಯನ್ನು ಸೇರಿದರು. ಮಾಧ್ಯಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿ ಅವರು ೧೮೬೫ರಲ್ಲಿ ಹೈದರಾಬಾದಿಗೆ ಹೋದರು. (ಸಿಂಧ್‌ನಲ್ಲಿಯ ಈ ಹೈದರಬಾದ್ ಈಗ ಪಾಕಿಸ್ತಾನದಲ್ಲಿ ಇದೆ).

ಭಂಡಾರ್‌ಕರ್‌ರ ತಂದೆ ಕಂದಾಯ ಇಲಾಖೆ ಯಲ್ಲಿ ಕೆಲಸಮಾಡಿದ್ದರು. ಅಂತೆಯೆ ರಾಮಕೃಷ್ಣ ಭಂಡಾರ್ ಕರ್‌ರಿಗೂ ಅದೇ ಇಲಾಖೆಯಲ್ಲಿ ಸೇರಬೇಕು ಎನಿಸಿತು. ಅದಕ್ಕಾಗಿ ಅವರು ಪ್ರಯತ್ನವನ್ನು ನಡೆಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಹಾವರ್ಡರಿಗೆ ಈ ಸುದ್ದಿ ತಿಳಿಯಿತು. ರಾಮಕೃಷ್ಣ ಭಂಡಾರ್‌ಕರ್‌ಕರರ ಸಂಸ್ಕೃತ ಪಾಂಡಿತ್ಯದಲ್ಲಿ ಅವರಿಗೆ ಅಪಾರ ವಿಶ್ವಾಸವಿದ್ದಿತು. ೧೮೬೪ರಲ್ಲಿಯೇ  ಭಂಡಾರ್ ಕರ್‌ರು ಸಂಸ್ಕೃತದ ಮೊದಲ ಪುಸ್ತಕ ಪ್ರಕಟಿಸಿದ್ದರು. ಶಾಲೆಗಳಲ್ಲಿ ಈ ಪಠ್ಯಪುಸ್ತಕವು ಪ್ರಸಿದ್ಧಿ ಪಡೆಯಿತು. ಭಂಡಾರ್‌ಕರ್‌ರು ಸಂಸ್ಕೃತದಲ್ಲಿ ಹೆಚ್ಚು ಕೆಲಸ ಮಾಡ ಬೇಕೆಂದು ಹಾವರ್ಡ್ ಬಯಸಿದರು. ಅದಕ್ಕಾಗಿ ಭಂಡಾರ್‌ಕರ್ ಅವರನ್ನು ರತ್ನಗಿರಿ ಮಾಧ್ಯಮಿಕ ಶಾಲೆಗೆ ವರ್ಗ ಮಾಡಿಸಿದರು.

ಸಂಸ್ಕೃತ ಅಧ್ಯಾಪಕರು

೧೮೬೫ ರಿಂದ ಮುಂದೆ  ಭಂಡಾರ್‌ಕರ್‌ರು ಸಂಸ್ಕೃತ ಕ್ಷೇತ್ರದಲ್ಲಿ ಮುನ್ನಡೆದರು. ಮುಂಬಯಿ ಎಲ್‌ಫಿನ್‌ಸ್ಟನ್ ಕಾಲೇಜಿನಲ್ಲಿ ಅವರು ಸಂಸ್ಕೃತ ಅಧ್ಯಾಪಕರಾದರು. ಅನಂತರ ೧೮೬೭ ರಿಂದ ೧೮೭೯ ರ ವರೆಗೆ ಅವರು ಅದೇ ಕಾಲೇಜಿನಲ್ಲಿ ಇದ್ದರು. ೧೮೬೮ ರಲ್ಲಿ ಸಂಸ್ಕೃತದ ಎರಡನೆಯ ಪುಸ್ತಕವನ್ನು ಇಲ್ಲಿ ಇರುವಾಗ ಪ್ರಕಟಿಸಿದರು. ಆರ್.ಜಿ. ಭಂಡಾರ್‌ಕರರು ಬರೆದ ಸಂಸ್ಕೃತದ ಮೊದಲನೆಯ ಹಾಗೂ ಎರಡನೆಯ ಪುಸ್ತಕಗಳು ಹತ್ತಾರು ಮುದ್ರಣಗಳನ್ನು ಕಂಡಿವೆ. ಇಂಗ್ಲಿಷ್, ಕನ್ನಡ, ಗುಜರಾತಿ ಹಾಗೂ ಮರಾಠಿಗಳಿಗೆ ಭಾಷಾಂತರವಾಗಿ, ಅನೇಕ ಮಾಧ್ಯಮಿಕ ಶಾಲೆಯಲ್ಲಿ ಪಠ್ಯಪುಸ್ತಕವಾಗಿದ್ದವು.

೧೮೮೧ ರಲ್ಲಿ  ಭಂಡಾರ್‌ಕರ್ ಅವರು ಪುಣೆಯ ಡೆಕನ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾದರು. ೧೮೯೩ ರವರೆಗೂ ಆ ಕಾಲೇಜಿನಲ್ಲಿ ಸಂಸ್ಕೃತದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೮೯೩ ರಲ್ಲಿ ಅವರು ಅಲ್ಲಿಂದಲೇ ನಿವೃತ್ತರಾದರು. ತಮ್ಮ ಸರ್ಕಾರಿ ಸೇವೆಯಲ್ಲಿ ಶ್ರೇಷ್ಠ ಆದರ್ಶ ಪ್ರಾಧ್ಯಾಪಕರೆಂದು ಹೆಸರುವಾಸಿ ಯಾಗಿದ್ದರು.

ರಾಮಕೃಷ್ಣ ಭಂಡಾರ್‌ಕರ್ ಅವರದು ಬಹುಮುಖ ಪ್ರತಿಭೆ. ತಾವು ಕೈಗೊಂಡ ಯಾವುದೇ ಕೆಲಸವನ್ನು ಅವರು ಶ್ರದ್ಧೆಯಿಂದ  ಮಾಡುತ್ತಿದ್ದರು. ಅಂತೆಯೇ ವಿವಿಧ ಕ್ಷೇತ್ರಗಳಲ್ಲಿ ಮೊದಲನೆಯ ಸ್ಥಾನ ರಾಮಕೃಷ್ಣ ಭಂಡಾರ್‌ಕರ್ ಅವರದೇ ಆಗಿತ್ತು.

ಮೊದಲ ಭಾಷಣ

ಮುಂಬಯಿ ವಿಶ್ವವಿದ್ಯಾಲಯದ ಮೊಟ್ಟ ಮೊದಲಿನ ಇಬ್ಬರು ಪದವೀಧರರಲ್ಲಿ ಆರ್.ಜಿ. ಭಂಡಾರ್ ಕರ್ ಅವರೊಬ್ಬರು. ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಿಲ್ಸನ್ ಭಾಷಾಶಾಸ್ತ್ರ ಉಪನ್ಯಾಸ ಮಾಲೆ ೧೮೭೭ ರಲ್ಲಿ ಪ್ರಾರಂಭವಾಯಿತು. ಈ ಉಪನ್ಯಾಸಗಳನ್ನು ಕೊಡಲು ಆರ್.ಜಿ.  ಭಂಡಾರ್‌ಕರ್ ಅವರನ್ನೇ  ಆರಿಸಲಾಯಿತು. ಇಂಥ ಸನ್ಮಾನವು ಮೊದಲಿಗೆ ದೊರೆತುದು ಭಂಡಾರ್‌ಕರ್ ಅವರಿಗೇನೆ, ಸಂಸ್ಕೃತ ಹಾಗೂ ಅದರ ಉಪಭಾಷೆಗಳನ್ನು ಕುರಿತು ಅವರು ಭಾಷಣ ಮಾಡಿದರು. ಮೊದಲನೆಯ ಈ ಭಾಷಣ ಮಾಲೆ ಕೇಳುವವರಿಗೆ ಗುಂಗು ಹಿಡಿಸಿತು. ಸಮಗ್ರವಾದ ಭಾಷೆಯ ಬೆಳವಣಿಗೆಯನ್ನು ಭಂಡಾರ್‌ಕರ್  ಅವರು ತಮ್ಮ  ಭಾಷಣದಲ್ಲಿ ವಿವರಿಸಿದರು. ಋಗ್ವೇದ ಕಾಲದಿಂದಲೂ ಇದ್ದ ಸಂಸ್ಕೃತ ಭಾಷೆಯ ಹಿರಿಮೆಯನ್ನು ತೋರಿಸಿದರು. ಉತ್ತರಭಾರತದ ಆಧುನಿಕ ಭಾಷೆಗಳ ಮಹತ್ವವನ್ನೂ ಬಣ್ಣಿಸಿದರು.

೧೮೭೬ ರಲ್ಲಿ ಭಂಡಾರ್‌ಕರರು ಸಂಪಾದಿಸಿದ ಮಾಲತಿ ಮಾಧವ ಸಂಸ್ಕೃತ ನಾಟಕ ಪ್ರಕಟವಾಯಿತು. ಇದರಿಂದ ರಾಮಕೃಷ್ಣ ಭಂಡಾರ್‌ಕರ್ ಅವರು ನುರಿತ ಸಂಪಾದಕ ಎಂಬ ಕೀರ್ತಿ ಪಡೆದರು.

ಸಂಶೋಧನೆ

ಆಗಿನ ಮುಂಬಯಿ ಸರ್ಕಾರದ ಹಸ್ತಲಿಖಿತ ಖಾತೆಯ ಸಂಪಾದಕರಾಗಿಯೂ ಭಂಡಾರ್‌ಕರ್‌ರು ಕೆಲಸ ಮಾಡಿದರು. ೧೮೭೯ರಿಂದ ೧೮೯೧ ರವರೆಗೆ ಅವರು ಇದೇ ಕೆಲಸದಲ್ಲಿ ಹೆಚ್ಚಾಗಿ ತೊಡಗಿದ್ದರು. ಮೊದಲು ಬುಲ್ಹರ್ ಹಾಗೂ ಕೀಲ್‌ಹಾರ್ನ್ ಇವರ ಸಹಾಯಕರಾಗಿ ಭಂಡಾರ್‌ಕರ್‌ರ ನೇಮಕವಾಯಿತು. ಅವರ ನಿವೃತ್ತಿಯ ಅನಂತರ ಭಂಡಾರ್‌ಕರ್ ಹಾಗೂ ಪೀಟರ್ ಸನ್ ಪ್ರಮುಖರಾದರು. ಸಂಸ್ಕೃತ ತಾಡೋಲೆಗಳನ್ನು ಭಂಡಾರ್ ಕರ್ ಅವರು ಶೋಧಿಸಿದರು. ಅಸಂಖ್ಯ ತಾಡೋಲೆಗಳ ವರದಿಯನ್ನು ಸಿದ್ಧಪಡಿಸಿದರು. ಆಗ ಅವರು ಪ್ರಕಟಿಸಿದ ಆರು ಸಂಪುಟಗಳ ವರದಿ ಬಹಳ ಮಹತ್ವದ್ದಾಗಿದೆ. ಈ ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲು.

ಭಾರತದ ಯೋಗವಿದ್ಯೆ ಪುರಾತನವಾದದ್ದು, ಈಗ ಜಗತ್ಪ್ರಸಿದ್ಧವಾದದ್ದು, ಇದರ ವಿಷಯವನ್ನೆಲ್ಲ ಸಂಗ್ರಹಿಸಿ ಪತಂಜಲಿ ಎಂಬ ಋಷಿಗಳು ಯೋಗಸೂತ್ರ ಗಳನ್ನು ರಚಿಸಿದರು. ಪತಂಜಲಿಯ ಕಾಲವನ್ನು ಕುರಿತು ಆರ್.ಜಿ. ಭಂಡಾರ್‌ಕರ್ ಅವರು ಸಂಶೋಧನೆ ನಡೆಸಿದರು. ಈ ಸಂಶೋಧನೆಯ ಲೇಖನವನ್ನು ಅವರು ಇಂಡಿಯನ್ ಆಂಟಿಕ್ಟೆರಿ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದರು. ಇದು ಭಂಡಾರ್‌ಕರ್‌ರ ಮೊದಲನೆಯ ಸಂಶೋಧನಾ ಲೇಖನ. ಈ ಲೇಖನದಲ್ಲಿ ಶ್ರೀಕೃಷ್ಣ ಹಾಗೂ ಭಗವದ್ಗೀತೆ ಇವುಗಳ ಪ್ರಾಚೀನತೆಯನ್ನು ಸ್ಥಿರಗೊಳಿಸಿದರು. ಕ್ರಿಸ್ತನೇ ಕೃಷ್ಣ; ಗೀತೆಯ ಉಗಮ ಬೈಬಲಿನಲ್ಲಿದೆ ಎಂದು ಹಲವು ವಿದೇಶಿ ಪಂಡಿತರು ಹೇಳಿದ್ದರು. ಅದನ್ನು ಭಂಡಾರ್‌ಕರ್‌ರು ಬಲವಾಗಿ ಖಂಡಿಸಿದರು. ಪತಂಜಲಿಯ ಮಹಾಭಾಷ್ಯದಲ್ಲಿ ಕೃಷ್ಣ ಹಾಗೂ ಭಗವದ್ಗೀತೆಗಳ ಭಾವನೆ ಇರುವುದಾಗಿ ಸ್ಪಷ್ಟಪಡಿಸಿದರು. ಪತಂಜಲಿ ಕ್ರಿಸ್ತಪೂರ್ವ ಎರಡನೆಯ ಶತಮಾನದವನು ಎಂದೂ ವಿವರಿಸಿದರು.

ಇನ್ನೊಂದು ಸಂಶೋಧನ ಲೇಖನ ೧೮೬೪ ರಲ್ಲಿ ‘ನೇಟಿವ್ ಒಪಿನಿಯನ್’ ಎಂಬ ಪತ್ರಿಕೆಯಲ್ಲಿ ಪ್ರಕಟ ವಾಯಿತು. ಭಂಡಾರ್‌ಕರ್‌ರರ ಮೊದಲಿನ ಸಂಶೋಧನ ಲೇಖನಗಳಲ್ಲಿ ಇದೂ ಸಹ ಪ್ರಸಿದ್ಧವಿದೆ ‘ಐತ್ತರೇಯ ಬ್ರಾಹ್ಮಣ’ವನ್ನು ಮಾರ್ಟಿನ್‌ಹಾಗ್‌ರು ಅನುವಾದಿಸಿ ಪ್ರಕಟಿಸಿದ್ದರು. ಈ ಗ್ರಂಥವನ್ನು ಕುರಿತು, ಭಂಡಾರ್‌ಕರ್ ಅವರು ತಮ್ಮ ಅಭಿಪ್ರಾಯವನ್ನು ಈ ಸಂಶೋಧನ ಲೇಖನದಲ್ಲಿ ಬರೆದರು. ಪಾಶ್ಚಾತ್ಯ ದೇಶಗಳ ಹಿರಿಯ ಹಾಗೂ ಪ್ರಸಿದ್ಧ ವಿದ್ವಾಂಸರಾದ ವೆಬರ್ ಅವರು ಈ ಲೇಖನವನ್ನು ಬಹಳ ಮೆಚ್ಚಿಕೊಂಡರು. ಇಷ್ಟೇ ಅಲ್ಲ, ಅದನ್ನು ತಮ್ಮ ಜರ್ಮನ್ ಭಾಷೆಯ ‘ಇಂಡಿಷ್ ಸ್ಟಡಿ’ ಎಂಬ ಪ್ರಸಿದ್ಧ ಪತ್ರಿಕೆಯಲ್ಲಿ ಪುನಃ ಪ್ರಕಟಿಸಿದರು.

ಇತಿಹಾಸದಲ್ಲಿ ಆಸಕ್ತಿ

ಆರ್ ಜಿ. ಭಂಡಾರ್‌ಕರ್ ಹೆಚ್ಚಾಗಿ ಸಂಸ್ಕೃತ ಭಾಷೆಯನ್ನು ಅದರಲ್ಲಿನ ಕೃತಿಗಳನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದರು. ಅದೇ ವಿಷಯದಲ್ಲಿ ಅವರ ಸಂಶೋಧನೆ ಸಾಗಿದ್ದಿತು. ಆದರೆ ಅವರು ಅಕಸ್ಮಾತ್ತಾಗಿ ಇತಿಹಾಸ ಕ್ಷೇತ್ರದಲ್ಲಿ ಕಾಲಿಟ್ಟರು. ಇತಿಹಾಸ ವಿಷಯವನ್ನು ಕುರಿತು ಅಭ್ಯಾಸ ಮಾಡುವ ಪ್ರಸಂಗವೂ ತಾನಾಗಿಯೇ ಒದಗಿತು.

ಇದು ೧೮೭೦ ರಲ್ಲಿ ನಡೆದ ಘಟನೆ. ಡಾಕ್ಟರ್ ಮಾಣಿಕಜಿ ಅದಲ್ಜಿ ಎಂಬ ಪಾರ್ಸಿ ಶ್ರೀಮಂತರ ಜಮೀನು ಸುರತ್ ಜಿಲ್ಲೆಯಲ್ಲಿ ಇತ್ತು. ಒಮ್ಮೆ ಭೂಮಿಯಲ್ಲಿ ಉಳುಮೆ ಮಾಡುವಾಗ ಒಬ್ಬ ರೈತನಿಗೆ ತಾಮ್ರಪಟವೊಂದು ದೊರಕಿತು. ಆ ತಾಮ್ರಪಟವು ಪುರಾತನ ನಾಗರಿ ಲಿಪಿಯಲ್ಲಿ ಇದ್ದಿತು. ಅದಲ್ಜಿ ಅವರು ಈ ತಾಮ್ರಪಟವನ್ನು ಭಂಡಾರ್ ಕರ್ ಅವರಿಗೆ ಒಪ್ಪಿಸಿದರು. ಅದನ್ನು ಓದಿ ವಿವರಿಸುವಂತೆ ಕೇಳಿಕೊಂಡರು. ಭಂಡಾರ್‌ಕರ್ ಅವರಿಗೂ ಅದನ್ನು ಓದಿ ಬೇಗನೇ ಅರ್ಥಮಾಡಿ ಕೊಳ್ಳುವುದು ಸಾಧ್ಯವಾಗಲಿಲ್ಲ. ಆದರೆ ಲಿಪಿಶಾಸ್ತ್ರವನ್ನು ಅವರು ನೋಡಿಕೊಂಡರು. ಆ ತಾಮ್ರಪಟವನ್ನು ಭಾಷಾಂತರಿಸಲು ಶ್ರಮಪಟ್ಟರು. ಕೊನೆಗೆ ಈ ತಾಮ್ರಪಟದ ಬಗ್ಗೆ ತಮ್ಮ ಅಭಿಪ್ರಾಯವನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು.

ಇಂಥ ಅಭ್ಯಾಸದಿಂದ ಭಂಡಾರ್‌ಕರ್‌ರ ಮನಸ್ಸು ಇತಿಹಾಸದತ್ತ ಹರಿಯಿತು. ಶಿಕ್ಷಣಾಧಿಕಾರಿಗಳಾಗಿದ್ದ ಹಾವರ್ಡರು ಭಂಡಾರ್‌ಕರರು ಸಂಸ್ಕೃತ ಅಭ್ಯಾಸ ಮಾಡುವಂತೆ ಪ್ರೋತ್ಸಾಹಿಸಿದ್ದರು. ಅದಲ್ಜಿ ಅವರು ಅಪ್ರತ್ಯಕ್ಷವಾಗಿ ಭಂಡಾರ್‌ಕರರು ಇತಿಹಾಸ ಓದುವಂತೆ ಮಾಡಿದರು.

ತಾಮ್ರಪಟ, ಶಿಲಾಶಾಸನ, ಮುಂತಾದವುಗಳ ಬಗ್ಗೆ ಭಂಡಾರ್‌ಕರರು ಇಪ್ಪತ್ತೈದಕ್ಕೂ  ಮೀರಿ ಸಂಶೋಧನ ಲೇಖನಗಳನ್ನು ಬರೆದರು. ಶಿಸ್ತು, ನಿಯಮಿತತನ, ಸತತಾಭ್ಯಾಸ ಇವು ಭಂಡಾರ್‌ಕರ್ ಅವರಿಗೆ ರಕ್ತಗತವಾಗಿ ದ್ದವು. ಇವುಗಳಿಂದ ಅವರು ಇತಿಹಾಸ ವಿಷಯದಲ್ಲಿಯೂ ಪ್ರಸಿದ್ಧ ವಿದ್ವಾಂಸರಾದರು.

ಇತಿಹಾಸ ವಿಷಯವನ್ನು ಕುರಿತು ಭಂಡಾರ್‌ಕರ್ ಅವರು ಬರೆದ ‘ದಖನ್ನಿನ ಪ್ರಾಚೀನ ಇತಿಹಾಸ’ ಎಂಬ ಲೇಖನವು ವಿಶೇಷ ಮನ್ನಣೆ ಪಡೆದಿದೆ. ‘ಮುಂಬಯಿ ದೇಶಕೋಶ (ಗೆಜೆಟಿಯರ್)’ಪ್ರಾರಂಭವಾದಾಗ ಅದಕ್ಕಾಗಿ ಭಂಡಾರ್‌ಕರರು ಈ ಲೇಖನ ಬರೆದರು.

ದಕ್ಷಿಣ ಭಾರತದ ಇತಿಹಾಸ

೧೮೮೪ ಕ್ಕಿಂತ ಮೊದಲು ದಕ್ಷಿಣ ಭಾರತದ ಸಮಗ್ರವಾದ ಇತಿಹಾಸವನ್ನು ಯಾರೂ ಬರೆದಿರಲಿಲ್ಲ. ಜನರಿಗೆ ಅದರ ಇತಿಹಾಸವೂ ಸರಿಯಾಗಿ ಗೊತ್ತಿರಲಿಲ್ಲ. ಭಂಡಾರ್‌ಕರರು ಹಲವು ವರ್ಷಗಳ ಕಾಲ ಸಾಮಾಗ್ರಿ ಯನ್ನು ಸಂಗ್ರಹಿಸಿದರು. ಯಾವುದನ್ನು ಒಪ್ಪಬಹುದು, ಯಾವುದನ್ನು ಒಪ್ಪುವಂತಿಲ್ಲ ಎಂದು ತೂಗಿ ನೋಡಿದರು, ಅದಕ್ಕೆ ತಮ್ಮ ಸಂಶೋಧನೆಯ ವಿಚಾರಗಳನ್ನು ಕೂಡಿಸಿ ದರು. ತಾಮ್ರಪಟ ಹಾಗೂ ಶಿಲಾಶಾಸನಗಳ ಆಧಾರ ಗಳನ್ನೂ ಕೊಟ್ಟರು. ಅವರು ದಖನ್ನಿನ ಇತಿಹಾಸವನ್ನು ಪ್ರಾಚೀನ ಕಾಲದಿಂದ ಪ್ರಾರಂಭಿಸಿದರು; ದಕ್ಷಿಣ ಭಾರತದ ಮೇಲೆ ಮುಸಲ್ಮಾನರ ದಾಳಿಯಾಗುವವರೆಗೂ ವಿವರಿಸಿದರು. ಇತಿಹಾಸದ ಜೊತೆಗೆ ದಖನ್ನಿನ ಭೂಗೋಲ ವನ್ನು ಚಿತ್ರಿಸಿದರು. ಅನೇಕ ರಾಜಮನೆತನಗಳ ವಂಶಾವಳಿ ಯನ್ನು ತಿಳಿಸಿದರು. ಇದಲ್ಲದೆ ಆಗಿನ ಕಾಲದ ಸಾಹಿತ್ಯ, ಕಲೆ ಮುಂತಾದವುಗಳ ಬಗ್ಗೆಯೂ ವಿವರ ನೀಡಿದರು. ಹೀಗೆ ದಖನ್ನಿನ ಇತಿಹಾಸವನ್ನು ಬರೆದು, ದಕ್ಷಿಣ ಭಾರತದ ಚಿತಣ್ರವನ್ನು ಸರಿಯಾಗಿ ಕೊಟ್ಟವರು ಆರ್.ಜಿ. ಭಂಡಾರ್‌ಕರ್ ಅವರು. ಈ ದಿಶೆಯಲ್ಲಿ ಅವರದೇ ಮೊಟ್ಟ ಮೊದಲನೆಯ ಪ್ರಯತ್ನ.

ಭಂಡಾರ್‌ಕರ್ ಅವರ ಈ ಪ್ರಬಂಧವು ಕನ್ನಡಿಗ ರಿಗೂ ಮಹತ್ವದಾಗಿದೆ. ಇದರಲ್ಲಿ ಚಾಲುಕ್ಯರು, ರಾಷ್ಟ್ರಕೂಟರು, ಕಲಚೂರ್ಯರು, ಯಾದವರು, ಶಿಲಾ ಹಾರರು ಈ ಎಲ್ಲ ರಾಜಮನೆತನಗಳ ಇತಿಹಾಸವು ದೊರೆಯುತ್ತದೆ. ಎಲ್ಲವನ್ನೂ ಅವರು ಬಹು ವಿವರವಾಗಿ ಆಧಾರಯುತವಾಗಿ ಕೊಟ್ಟಿರುವರು.

ಭಂಡಾರ್‌ಕರ್ ಅವರ ಅನಂತರ ಎಷ್ಟೋ ವಿದ್ವಾಂಸರು ಈ ವಿಷಯವನ್ನು ಕುರಿತು ಸಂಶೋಧಿಸಿದರು. ತಮ್ಮ ಸಂಶೋಧನೆಯ ಲೇಖನಗಳನ್ನು ಪ್ರಕಟಿಸಿದರು. ಆದರೂ ಭಂಡಾರ್‌ಕರ್ ಅಂದು ತಿಳಿಸಿದ ವಿಚಾರಗಳಲ್ಲಿ ವಿಶೇಷ ಬದಲಾವಣೆಗಳಾಗಿಲ್ಲ. ಇದು ಅವರ ಸಂಶೋಧನೆಯ ಮಹತ್ವವನ್ನು  ಎತ್ತಿ ತೋರಿಸುತ್ತದೆ.

ರಾಮಕೃಷ್ಣ ಭಂಡಾರ್‌ಕರರು ಇತಿಹಾಸ, ಶಿಲಾಶಾಸ್ತ್ರ, ಪುರಾತತ್ವಶಾಸ್ತ್ರ, ಭಾಷಾಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿದರು. ಆ ವಿಷಯಗಳಲ್ಲಿ  ಅವರು ಅಧಿಕಾರವಾಣಿಯನ್ನು ಸಂಪಾದಿಸಿದರು. ಈ ಶಾಸ್ತ್ರಗಳಲ್ಲಿ ಮೊದಲಿಗೆ ಪಾಶ್ಚಾತ್ಯ ವಿದ್ವಾಂಸರೇ ಪ್ರಮುಖರಾಗಿದ್ದರು. ಭಾರತೀಯ ವಿದ್ವಾಂಸರು ವಿರಳವಾಗಿದ್ದರು. ಆರ್.ಜಿ. ಭಂಡಾರ್‌ಕರ್ ಅವರು ಮೊಟ್ಟ ಮೊದಲು ಈ ವಿಷಯ ಗಳಲ್ಲಿ ಕೈ ಹಾಕಿದರು. ಶ್ರೇಷ್ಠ ಸಂಶೋಧನ ಕಾರರೆಂದು ಪ್ರಸಿದ್ಧರಾದರು. ಭಾರತೀಯ ಶಾಸ್ತ್ರವಿದ್ಯೆ (ಇಂಡಾಲಜಿ) ಅಭ್ಯಾಸದಲ್ಲಿ ಅವರಿಗೆ ಮೇಲ್ಮಟ್ಟದ ಸ್ಥಾನ ದೊರಕಿತು.

ಹೊರದೇಶಗಳಿಂದ ಆಹ್ವಾನ

೧೮೭೬ ರಲ್ಲಿ ಲಂಡನ್ನಿನಲ್ಲಿ ಸಮಾವೇಶಗೊಂಡ ಯುರೋಪಿನ ಪ್ರಾಚ್ಯ ವಿದ್ಯಾಭ್ಯಾಸ ಅಧಿವೇಶನಕ್ಕೆ ಭಂಡಾರ್‌ಕರ್ ಅವರಿಗೆ ಆಮಂತ್ರಣ ಬಂದಿತು. ಆಗ ಭಂಡಾರ್‌ಕರರು ಮುಂಬಯಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಅವರಿಗೆ ಲಂಡನ್‌ಗೆ ಹೋಗಲು ಸಾಧ್ಯವಾಗಲಿಲ್ಲ. ಅವರು ನಾಸಿಕ್ ಗುಹೆಗಳ ಶಿಲಾಶಾಸನ ಗಳ ಬಗ್ಗೆ ಸಂಶೋಧನಾತ್ಮಕ ಲೇಖನ ಬರೆದರು. ಅದನ್ನು ಅಧಿವೇಶನದಲ್ಲಿ ಓದಲು ಕಳಿಸಿಕೊಟ್ಟರು.

ಯುರೋಪಿನ ಪ್ರಾಚ್ಯ ವಿದ್ಯಾಭ್ಯಾಸದ ಅಧಿವೇಶನವು ೧೮೮೬ ರಲ್ಲಿ ವಿಯೆನ್ನದಲ್ಲಿ ಸೇರಿತು. ಆ ಅಧಿವೇಶನಕ್ಕೆ ಬರಲು ಭಂಡಾರ್‌ಕರರಿಗೆ ಮತ್ತೇ ಆಮಂತ್ರಣ ಬಂದಿತು. ಈ ಸಲ ಅವರು ತಪ್ಪಿಸಲಿಲ್ಲ. ವಿಯೆನ್ನಗೆ ಹೋದರು; ಯುರೋಪಿನ ವಿದ್ವಾಂಸರನ್ನು ಭೇಟಿಯಾದರು. ಯುರೋಪಿನ ವಿದ್ವಾಂಸರನ್ನು ಭೇಟಿಯಾದರು. ‘ರಾಮಾನುಜ ಹಾಗೂ ಭಾಗವತ’ಎಂಬ ತಮ್ಮ ಪ್ರಬಂಧವನ್ನು ಅಧಿವೇಶನದಲ್ಲಿ ಓದಿದರು.

ಭಾರತೀಯ ಶಾಸ್ತ್ರ ವಿದ್ಯೆಗಳ (ಇಂಡಾಲಜಿ) ಅಭ್ಯಾಸ ಮಾಡುತ್ತಿರುವ ಯುರೋಪಿನ ವಿದ್ವಾಂಸರನ್ನು ಅವರು ಬಹುವಾಗಿ ಮೆಚ್ಚಿಕೊಂಡರು. “ಯುರೋಪಿ ಯನ್ನರು ಸಂಸ್ಕೃತ ಅಭ್ಯಾಸ ಮಾಡಬೇಕಾದರೆ, ಅತಿ ಕಷ್ಟಪಡಬೇಕಾಗುತ್ತದೆ, ಆದರೂ ಅವರು, ಪ್ರಮುಖವಾಗಿ ಜರ್ಮನ್ನರು-ಸಂಸ್ಕೃತವನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಅದನ್ನು ಶಾಸ್ತ್ರೀಯವಾಗಿಯೂ ಕಂಡಿದ್ದಾರೆ. ಭಾರತದ  ಎಲ್ಲ ಭಾಗಗಳಿಂದಲೂ ನೇಪಾಳ, ಶ್ರೀಲಂಕಾ, ಬ್ರಹ್ಮದೇಶ ಹೀಗೆ ಎಲ್ಲೆಡೆಗಳಿಂದಲೂ ಯುರೋಪಿಯನ್ನರು ಸಂಸ್ಕೃತದ ಹಸ್ತಪ್ರತಿ ಸಂಗ್ರಹಿಸಿದ್ದಾರೆ. ಯುರೋಪಿನಲ್ಲಿ ರುವ ಈ ಕುತೂಹಲ ಬುದ್ಧಿಯನ್ನು ನಾವು ಹೊಗಳಲೇ ಬೇಕು” ಎಂದು ಭಂಡಾರ್‌ಕರರು ಅಧಿವೇಶನದಲ್ಲಿ ನುಡಿದರು.

ಸಂಸ್ಕೃತ ವಿದ್ವಾಂಸ ಬುಲ್ಹರ್ ಅವರು ವಿಯೆನ್ನದಲ್ಲಿ ಭಂಡಾರ್‌ಕರ್ ಅವರನ್ನು ಕಂಡರು. ‘ಮುಕ್ತಾಯ ಸಮಾರಂಭದ ದಿನ ವಿಶೇಷ ಭೋಜನ ಕೂಟವಿದೆ. ಭೋಜನವಾದ ಮೇಲೆ ನೀವು ಸಂಸ್ಕೃತ ಪದ್ಯದಲ್ಲಿ ಉತ್ತರಿಸಬೇಕು’ ಎಂದು ಕೇಳಿಕೊಂಡರು. ಭಂಡಾರ್‌ಕರರು ಬುಲ್ಹರ್ ಅವರ ಬಿನ್ನಹಕ್ಕೆ ಒಪ್ಪಿ ಕೊಂಡರು. ಅದೇ ರೀತಿ ಅವರು ಎಂಟು ಶ್ಲೋಕಗಳ ಸಂಸ್ಕೃತ ಪದ್ಯ ರಚಿಸಿದರು; ಅದನ್ನು ಮುಕ್ತಾಯದ ಅಧಿವೇಶನದಲ್ಲಿ ಓದಿದರು.

ವಿಯೆನ್ನದಲ್ಲಿ ಭಾರತೀಯ ಶಾಸ್ತ್ರ ವಿದ್ಯೆಗಳನ್ನು ಅಭ್ಯಾಸ ಮಾಡಿದ ಅನೇಕರು ಸೇರಿದ್ದರು. ಯುರೋಪಿನ ಆ ಜನರನ್ನು ಕಂಡಾಗ, ಭಂಡಾರ್‌ಕರ್ ಅವರಿಗೆ ಋಷಿಗಳನ್ನು ಕಂಡಂತೆ ಆಯಿತು. ಆದ್ದರಿಂದ ವಿಯೆನ್ನಿನ ಅಧಿವೇಶನವು ಭಾರತದ ಪ್ರಾಚೀನ ಋಷಿಗಳ ಸಮ್ಮೇಲನವಾಗಿದೆಯೆಂದು ಅವರು ತಮ್ಮ ಕಾವ್ಯದಲ್ಲಿ ತಿಳಿಸಿದರು. ಜನಕರಾಜನ ಆಸ್ಥಾನದಲ್ಲಿ ನಡೆಯುತ್ತಿದ್ದ ಹಿರಿಯ ಋಷಿಗಳ ನೆನಪು ಮಾಡಿಕೊಂಡರು.

ಪ್ರಾರ್ಥನಾ ಸಭೆ

ಆರ್.ಜಿ.ಭಂಡಾರ್‌ಕರ್ ಅವರು ತಮ್ಮ ಅಭ್ಯಾಸದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಆದರೆ ಅವರು ಸಮಾಜದಿಂದ ದೂರ ಉಳಿಯಲಿಲ್ಲ. ಏಕಾಕಿಯಾಗಿ ತಮ್ಮಷ್ಟಕ್ಕೆ ತಾವೇ ಇರಲಿಲ್ಲ. ಅವರು ಸಮಾಜಸುಧಾರಕರೂ ಆಗಿದ್ದರು.

ಭಂಡಾರ್‌ಕರರು ಪ್ರಾರ್ಥನಾ ಸಮಾಜದ ಸದಸ್ಯರಾಗಿದ್ದರು. ೧೮೫೧ ರಲ್ಲಿ ಬಂಗಾಲದಿಂದ ಕೇಶವ ಚಂದ್ರಸೇನ ಅವರು ಮುಂಬಯಿಗೆ ಬಂದರು.  ಬಂಗಾಲದಲ್ಲಿ ಬ್ರಹ್ಮಸಮಾಜ ಪ್ರಾರಂಭವಾಗಿತ್ತು. ಆ ಸಮಾಜವು ಹೊಸ ಹೊಸ ವಿಚಾರಗಳನ್ನು ರೂಢಿಯಲ್ಲಿ ತಂದಿದ್ದಿತು. ಅಂಥದೇ ಒಂದು ಸಮಾಜವನ್ನು ಕೇಶವ ಚಂದ್ರಸೇನರು ಮುಂಬಯಿಯಲ್ಲಿ ಪ್ರಾರಂಭಿಸಿದರು. ಅದಕ್ಕೆ ಪ್ರಾರ್ಥನಾ ಸಮಾಜ ಎಂದು ಕರೆದರು. ಆರ್. ಜಿ. ಭಂಡಾರ್‌ಕರ್, ರಾನಡೆ ಮೊದಲಾದವರು ಇದರ ಸದಸ್ಯರಾದರು.

ಪ್ರಾರ್ಥನಾ ಸಮಾಜದವರು ದೇವರುಗಳ ವಿಗ್ರಹಗಳನ್ನು ಪೂಜಿಸುವುದು ತಪ್ಪು ಎಂದರು. ಸರಳವಾದ ಪ್ರಾರ್ಥನೆ ಭಜನೆಗಳಿಂದ ಪರಮಾತ್ಮನನ್ನು ಆರಾಧಿಸಿದರು. ಧಾರ್ಮಿಕ ಶ್ರದ್ಧೆಗಳು ಬೇರೂರಿದ್ದ ಕಾಲವದು. ಹಿಂದುಗಳಲ್ಲಿ ವಿಗ್ರಹ ಪೂಜೆ ಎಲ್ಲೆಡೆಯೂ ಇದ್ದಿತು. ಹೀಗಾಗಿ ಆಚಾರವಂತ ಹಿಂದುಗಳು ಪ್ರಾರ್ಥನಾ ಸಮಾಜ ವನ್ನು ವಿರೋಧಿಸಿದರು. ಆದರೂ ಆರ್.ಜಿ. ಭಂಡಾರ್‌ಕರ್‌ರು ಅಳುಕಲಿಲ್ಲ. ಭಂಡಾರ್‌ಕರ್ ಅವರ ಜೊತೆಗೆ ನಾರಾಯಣ ಚಂದಾವರ್‌ಕರ್, ಗೋವಿಂದ ರಾನಡೆ ಮೊದಲಾದ ಪ್ರಮುಖರೂ ಪ್ರಾರ್ಥನಾ ಸಮಾಜದ ಕಾರ್ಯಗಳಲ್ಲಿ ಭಾಗವಹಿಸಿದರು. ‘ಒಬ್ಬ ಶ್ರೇಷ್ಠ ಸಂಸ್ಕೃತ ವಿದ್ವಾಂಸರು! ಶಾಸ್ತ್ರಗಳನ್ನೆಲ್ಲಾ ಆಳವಾಗಿ ಅಭ್ಯಾಸ ಮಾಡಿದವರು! ಅಂಥ ಭಂಡಾರ್‌ಕರರು ಅವರೇ ಮೂರ್ತಿಪೂಜೆ ಹೀಗಳೆಯುವದೆಂದರೇನು?’ ಹೀಗೆ ಆಗಿನ ಜನ ಯೋಚಿಸಿತು. ರಾಮಕೃಷ್ಣ ಭಂಡಾರ್‌ಕರರು ಮಾತ್ರ ಸಾಮೂಹಿಕ ಪ್ರಾರ್ಥನೆ, ದೇವರಲ್ಲಿ ಭಕ್ತಿ ಇವುಗಳನ್ನೇ ನಂಬಿಕೊಂಡರು, ಇಂಥ ಧಾರ್ಮಿಕ ಜೀವನ ಶ್ರೇಷ್ಠ ಎಂದು ಭಾವಿಸಿದರು. ಹೀಗಾಗಿ ಸಾಯುವವರೆಗೂ ಅವರು ಪ್ರಾರ್ಥನಾ ಸಮಾಜದ ಸಂಬಂಧವನ್ನು ಇಟ್ಟು ಕೊಂಡಿದ್ದರು.

ಪ್ರಾರ್ಥನಾ ಸಮಾಜವು ಸ್ತ್ರೀಯರಿಗೆ ಸಮಾನ ಸ್ವಾತಂತ್ರ್ಯವಿದೆಯೆಂದು ಸಾರಿತು; ಜಾತಿಪದ್ಧತಿಯನ್ನು ನಿರಾಕರಿಸಿತು; ವಿಧವಾ ವಿವಾಹವಾಗಬೇಕೆಂದಿತ್ತು; ಬಾಲ್ಯ ವಿವಾಹವನ್ನು ಖಂಡಿಸಿತು. ಈ ವಿಚಾರಗಳು ಆಗಿನ ಸಮಾಜಕ್ಕೆ ನುಂಗಲಾರದ ತುತ್ತಾಗಿದ್ದವು. ಆದರೆ ರಾಮಕೃಷ್ಣ ಭಂಡಾರ್‌ಕರರು ಇಂಥ ವಿಚಾರಗಳನ್ನೇ ಪ್ರತಿಪಾದಿಸಿದರು. ಇಷ್ಟೇ ಅಲ್ಲ ಅವುಗಳಿಗೆ ಶಾಸ್ತ್ರಗಳ ಆಧಾರಗಳನ್ನು ಕೊಟ್ಟರು.

ತಿಲಕರ ಅಸಮಾಧಾನ

ಲೋಕಮಾನ್ಯ ತಿಲಕರು ಹಾಗೂ ರಾಮಕೃಷ್ಣ ಭಂಡಾರ್‌ಕರರು ಪರಮ ಸ್ನೇಹಿತರು. ಆದರೆ ಲೋಕಮಾನ್ಯ ತಿಲಕರಿಗೆ ಭಂಡಾರ್‌ಕರ್ ಅವರ ವಿಚಾರಗಳು ಸರಿಯೆನಿಸಲಿಲ್ಲ. ತಿಲಕರಿಗೂ ಭಂಡಾರ್‌ಕರ್ ಅವರಿಗೂ ಪ್ರಚಂಡವಾದ ವಾದಗಳಾದವು. ಸಾರ್ವಜನಿಕವಾಗಿಯೂ ವಾದವಿವಾದ ನಡೆಯಿತು. ಸಂಪ್ರದಾಯವಾದಿ ಪಂಡಿತರೂ ಭಂಡಾರ್‌ಕರ್ ಅವರ ವಿರುದ್ಧ ಬಂಡೆದ್ದರು. ಲೋಕಮಾನ್ಯ ತಿಲಕರಂತೂ ಆರ್.ಜಿ. ಭಂಡಾರ್‌ಕರ್ ಅವರ ತೀವ್ರ ವಿರೋಧಿಗಳಾದರು.

ಒಮ್ಮೆಯಂತೂ ಲೋಕಮಾನ್ಯ ತಿಲಕರು ಭಂಡಾರ್‌ಕರ್ ಅವರನ್ನು ಕಟುವಾಗಿ ಟೀಕಿಸಿದರು. ರಾಮಕೃಷ್ಣ ಭಂಡಾರ್‌ಕರ್ ಅವರ ಸುಧಾರಣಾ ಶಾಸ್ತ್ರಕ್ಕೆ ಅರ್ಥವಿಲ್ಲವೆಂದು ನುಡಿದರು. ತಿಲಕರದು ಸ್ವಾಭಾವಿಕ ವಾಗಿಯೇ ಉಗ್ರವಾದ ಭಾಷೆ. ಆದರೆ ಇಂಥ ಮಾತುಗಳನ್ನು ಕೇಳಿ ಭಂಡಾರ್‌ಕರರು ವಿಚಲಿತರಾಗಲಿಲ್ಲ. ತಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳಲಿಲ್ಲ. ಏನಾದರೂ ಲೋಕಮಾನ್ಯ ತಿಲಕರು ಅವರ ಜೊತೆ ಅನೇಕ ವರುಷ ಕಾರ್ಯ ಮಾಡಿದವರು. ತಿಲಕರ ಕಟುವಾದ ನುಡಿಗಳನ್ನು ಸಮಾಧಾನದಿಂದ ನುಂಗಿಕೊಂಡರು. ಹಾಗೆ ನೋಡಿದರೆ ಲೋಕಮಾನ್ಯ ತಿಲಕರಿಗೂ ಹಾಗೂ ಭಂಡಾರ್‌ಕರ್‌ರವ ರಿಗೂ ತತ್ವಗಳಲ್ಲಿ ಮಾತ್ರ ಭಿನ್ನಾಭಿಪ್ರಾಯ ಇದ್ದಿತು. ಆದರೆ ಇದರಿಂದ ಅವರ ನಿಕಟ ಸ್ನೇಹಕ್ಕೆ ಕುಂದು ಬಂದಿರಲಿಲ್ಲ.

ರಾಮಕೃಷ್ಣ ಭಂಡಾರ್‌ಕರರು ಇತರರಿಗೆ ಉಪದೇಶ ಮಾಡುವವರಷ್ಟೇ ಆಗಿರಲಿಲ್ಲ. ನುಡಿದಂತೆ ನಡೆಯು ತ್ತಿದ್ದರು. ಅಂತೆಯೇ ಅವರು ಶ್ರೇಷ್ಠರಾಗಿದ್ದರು. ಪ್ರಾರ್ಥನಾ ಸಮಾಜದ ಧೋರಣೆಗಳು ಅವರಿಗೆ ಮಾನ್ಯವಾಗಿದ್ದವು.

ಪುಣೆಯಲ್ಲಿ ಮುಳಾ ಹಾಗೂ ಮುರಾ ನದಿಗಳ ಸಂಗಮವಿದೆ. ಈ ಸಂಗಮದ ಆಚೆಯ ದಂಡೆಯಲ್ಲಿ ರಾಮಕೃಷ್ಣ ಭಂಡಾರ್‌ಕರ್ ಅವರ ಮನೆ. ಆ ಮನೆಗೆ ಸಂಗಮಾಶ್ರಮ ಎಂದು ಹೆಸರು. ನಿಜವಾಗಿಯೂ ಅದು ವೇದಕಾಲದ ಋಷಿಗಳೊಬ್ಬರ ಆಶ್ರಮವೇ ಆಗಿದ್ದಿತು. ವಿವಿಧ ವಿದ್ವಾಂಸರ ಸಂಗಮ ಆ ಆಶ್ರಮದಲ್ಲಿ ನಡೆಯುತ್ತಿದ್ದಿತು.

ವಿಧವೆ ಮಗಳಿಗೆ ಮರುಮದುವೆ

ರಾಮಕೃಷ್ಣ ಭಂಡಾರ್‌ಕರ್  ಅವರಿಗೆ ಹನ್ನೆರಡು ವರ್ಷವಾಗಿದ್ದಾಗಲೇ ಮದುವೆಯಾಯಿತು. ಅವರಿಗೆ ನಾಲ್ವರು ಹೆಣ್ಣುಮಕ್ಕಳು ಹಾಗೂ ಮೂವರು ಗಂಡು ಮಕ್ಕಳು. ಭಂಡಾರ್‌ಕರ್ ಅವರ ಅಳಿಯನೊಬ್ಬ ತೀರಿಕೊಂಡ. ಅವರ ಮಗಳು ವಿಧವೆಯಾದಳು. ತಮ್ಮ ಮಗಳು ವಿಧವೆಯಾದುದಕ್ಕೆ ಅಪಾರದುಃಖವಾಯಿತು. ಆದರೆ ಅವರು ವಿಧವೆಯಾಗಿ ಕೊನೆಯವರೆಗೆ ಬಾಳುವುದು ಸರಿದೋರಲಿಲ್ಲ. ಹಿಂದಿನ ಸಂಪ್ರದಾಯದಂತೆ ಆಕೆ ಬದುಕಿರುವವರೆಗೆ ದುಃಖಪಡುತ್ತಾ ಇರಲು ಬಿಡಲಿಲ್ಲ. ಅವಳಿಗೆ ಮತ್ತೇ ವರನನ್ನು ಹುಡುಕಿದರು. ಅವಳು ಮತ್ತೇ ಮದುವೆಯಾಗಿ ಸುಖದಿಂದ ಬಾಳುವಂತೆ ಮಾಡಿದರು. ಆಗಿನ ಕಾಲದಲ್ಲಿ ಇದೊಂದು ಅದ್ಭುತ ಸಾಹಸದ ಕಾರ್ಯ! ತಮ್ಮ ಸಮಾಜವೆಲ್ಲ ವಿರೋಧಿಯಾಗಿದ್ದರೂ, ಅದಕ್ಕೆ ಭಂಡಾರ್‌ಕರ್ ಅವರು ಮಣಿಯಲಿಲ್ಲ. ಪ್ರಾರ್ಥನಾ ಸಮಾಜದ ತತ್ವಗಳನ್ನು ಆಚರಣೆಯಲ್ಲಿ ತಂದರು. ಸಮಾಜಕ್ಕೆ ಒಳ್ಳೆ ಪಾಠ ಹಾಕಿಕೊಟ್ಟರು.

ಸ್ವಲ್ಪ ವಿಚಿತ್ರ ಅಭಿಪ್ರಾಯ

ರಾಮಕೃಷ್ಣ ಭಂಡಾರ್‌ಕರರು ಸಕ್ರಿಯ ರಾಜಕಾರಣಿ ಗಳಾಗಿರಲಿಲ್ಲ. ಆದರೂ ಸಹ ಹಲವಾರು ರಾಜಕಾರಣಿಗಳ ಸ್ನೇಹವಿದ್ದಿತು. ಆಗಿನ ಕಾಲದ ಬ್ರಿಟಿಷ್ ಅರಸರ ಆಡಳಿತ ಬಗ್ಗೆ ಭಂಡಾರ್‌ಕರ್ ಅವರ ವಿಚಾರಗಳು ಈಗ ನಮಗೆ ವಿಚಿತ್ರವಾಗಿ ಕಾಣುತ್ತವೆ. ೧೮೮೬ ರಲ್ಲಿ ಅವರು ವಿಯೆನ್ನಗೆ ಹೋಗಿದ್ದರಷ್ಟೇ? ಅದರ ಮರುವರುಷ ಅವರು ಒಂದೆಡೆ ಭಾಷಣ ಮಾಡುವಾಗ ಹೀಗೆ ಹೇಳಿದರು, ‘ಬ್ರಿಟಿಷರು ಭಾರತದಿಂದ ಇಲ್ಲವಾದರೆ, ನಾವು ತಕ್ಷಣವೇ ಬದಲಾಗುವೆವು. ನಮ್ಮ ಪೂರ್ವಸ್ಥಿತಿಗೆ ಬರುವೆವು. ನಾವು ಸಾರ್ವಜನಿಕ ಸೇವೆ, ತ್ಯಾಗ, ರಾಷ್ಟ್ರೀಯತೆ, ಹೀಗೆ ಏನೇನೋ ಮಾತನಾಡುತ್ತೇವೆ. ಆದರೆ ಅವು ನಮ್ಮ ರಕ್ತಗತವಾಗಿಲ್ಲ. ಜಾತಿಮತಗಳ ಭೇದ ನಮ್ಮಲ್ಲಿ ತುಂಬಿತುಳುಕುತ್ತಿದೆ.’ ಭಂಡಾರ್‌ಕರ್ ಅವರ ಈ ವಿಚಾರಗಳನ್ನು ಒಪ್ಪುವಂತಿಲ್ಲ. ಆದರೆ ಅವರು ಹೀಗೆ ಹೇಳಿದುದಕ್ಕೆ ಕಾರಣಗಳನ್ನು ಗುರುತಿಸಬಹುದು. ಅವರು ಭಾರತದ ಇತಿಹಾಸವನ್ನು ಆಳವಾಗಿ ಅಭ್ಯಾಸ ಮಾಡಿದವರು. ಸಾವಿರಾರು ವರ್ಷಗಳಿಂದ ಭಾರತದ ರಾಜರುಗಳು, ಪಾಳೆಯಗಾರರು ತಮ್ಮ ತಮ್ಮಲ್ಲಿ ಜಗಳವಾಡಿ ಪ್ರಜೆಗಳಿಗೆ ಎಷ್ಟು ಕಷ್ಟವಾಯಿತು, ಹೊರಗಿನವರು ದೇಶವನ್ನು ಗೆಲ್ಲುವುದು ಸುಲಭವಾಯಿತು ಎಂದು ಅವರು ಕಂಡಿದ್ದರು.

ದೇಶಾಭಿಮಾನಿ

ಭಂಡಾರ್‌ಕರ್‌ರಿಗೆ ದೇಶಾಭಿಮಾನ ಇರಲಿಲ್ಲ ಎಂದಲ್ಲ. ‘ದೇಶಾಭಿಮಾನಿಯು ತನ್ನ ದೇಶಕ್ಕಾಗಿ  ತ್ಯಾಗ ಮಾಡಬೇಕು. ತನ್ನ ಸಂಪತ್ತು, ಬೇಡಿಕೆ ಎಲ್ಲವನ್ನೂ ದೇಶದ ಕಲ್ಯಾಣಕ್ಕಾಗಿ ಇಡಬೇಕು. ಸರ್ವಸ್ವ ತ್ಯಾಗವೇ ನಿಜವಾದ ದೇಶಾಭಿಮಾನ’ ಎಂದು ನುಡಿದರು.

ದಕ್ಷಿಣ ಆಫ್ರಿಕದಲ್ಲಿ ಬಿಳಿಯ ಜನರು ಭಾರತೀಯರನ್ನು ಕಾಲಿನ ಕಸದಂತೆ ಕಾಣುತ್ತಿದ್ದರು. ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ ಪ್ರಾರಂಭಿಸಿದರು. ಆಗ ಭಾರತೀಯರ ಸಹಾನುಭೂತಿ ಅವರಿಗೆ ಬೇಕಾಗಿದ್ದಿತು. ಈ ಕಾರಣಕ್ಕಾಗಿ ಅವರು ಪುಣೆಗೆ ಬಂದರು. ಭಾರತದ ರಾಜಕೀಯ ಕ್ಷೇತ್ರದಲ್ಲಿ ಆಗ ಎರಡು ಗುಂಪುಗಳಿದ್ದವು, ಒಂದು ಉಗ್ರವಾದಿಗಳದು, ಇನ್ನೊಂದು ಸೌಮ್ಯವಾದಿಗಳದು. ಉಗ್ರವಾದಿ ಪಕ್ಷಕ್ಕೆ ಲೋಕಮಾನ್ಯ ತಿಲಕರು ಮುಖಂಡರು. ಗೋಖಲೆಯವರು ಇನ್ನೊಂದು ಪಕ್ಷದ ಧುರೀಣರು. ಇವರಿಬ್ಬರೂ ಇರುತ್ತಿದ್ದುದು ಪುಣೆಯಲ್ಲಿ. ಮಹಾತ್ಮಾಗಾಂಧಿಯವರು ಕರೆಯುವ ಸಭೆಗೆ ಯಾರು ಅಧ್ಯಕ್ಷರಾಗಬೇಕು? ಈ ಸಮಸ್ಯೆಗೆ ಬೇಗ ಪರಿಹಾರ ದೊರೆಯಲಿಲ್ಲ.

ಗೋಖಲೆಯರು ಆರ್.ಜಿ. ಭಂಡಾರ್‌ಕರ್ ಅವರ ಹೆಸರನ್ನು ಸೂಚಿಸಿದರು. ಭಂಡಾರ್‌ಕರ್ ಅವರನ್ನು ಕಟುವಾಗಿ ಟೀಕಿಸುತ್ತಿದ್ದ ಲೋಕಮಾನ್ಯ ತಿಲಕರೂ ಅವರ ಹೆಸರನ್ನೇ ಸೂಚಿಸಿದರು. ಗಾಂಧಿಯವರು ಸಂಗಮಾ ಶ್ರಮಕ್ಕೆ ಹೋದರು. ಆರ್.ಜಿ. ಭಂಡಾರ್‌ಕರ್ ಅವರನ್ನು ಅಧ್ಯಕ್ಷರಾಗಲು ಕೇಳಿಕೊಂಡರು. ಭಂಡಾರ್‌ಕರ್ ಅವರು ಒಪ್ಪಿಕೊಂಡು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಅಂದಿನ  ಸಭೆಗೆ ಎರಡೂ ಪಕ್ಷದ ಅನೇಕರು ಬಂದರು. ಸಭೆಯು ಜನರಿಂದ ಕಿಕ್ಕಿರಿದು ತುಂಬಿತ್ತು.

ಮುಂದೆ ಮಹಾತ್ಮ ಗಾಂಧಿಯವರು ಭಾರತದಲ್ಲಿ ಸತ್ಯಾಗ್ರಹ ಪ್ರಾರಂಭಿಸಿದರು. ೧೯೦೮ರ ಏಪ್ರಿಲ್ ೨೩ರಂದು ಪುಣೆಯಲ್ಲಿ ಜನರು ಸತ್ಯಾಗ್ರಹ ನಡೆಸಿದರು. ಸರ್ಕಾರವು ಸ್ವಯಂಸೇವಕರಿಗೆ ದಂಡಿಸಹತ್ತಿತು. ಕೂಡಲೇ ಅಂದು ಸರ್ಕಾರದ ನೀತಿಯನ್ನು ವಿರೋಧಿಸುವ ಸಭೆ ಜರುಗಿತು. ಅದಕ್ಕೆ ಭಂಡಾರ್‌ಕರ್ ಅವರೇ ಅಧ್ಯಕ್ಷರಾದರು.

ನಿವೃತ್ತರಾದರೂ ಬಿಡಲಿಲ್ಲ

ಭಂಡಾರ್‌ಕರರು ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಯಿಂದ ದುಡಿದರು. ಎಲ್ಲರ ಗೌರವಕ್ಕೂ ಪಾತ್ರರಾಗಿದ್ದರು. ೧೮೯೩ ರಲ್ಲಿ ಅವರು ತಮ್ಮ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾದರೆಂಬುದು ನಿಜ. ಆದರೆ ಅವರು (ಸುಮಾರು ೮೨ ವರ್ಷಗಳು ಆಗುವವರೆಗೂ) ಯಾವಾಗಲೂ ಚಟುವಟಿಕೆಗಳಿಂದ ಕೂಡಿದ್ದರು. ವಿಶ್ರಾಂತಿಯೆಂಬುದು ಅವರ ಸಮೀಪ ಹಾಯಲಿಲ್ಲ. ೧೮೯೩ ರ ಅನಂತರ ಅವರು ಅನೇಕ ಹುದ್ದೆಗಳನ್ನು ಸ್ವೀಕರಿಸಿದರು. ಮಹತ್ವದ ಅನೇಕ ಸಮ್ಮೇಳನಗಳಿಗೆ ಅಧ್ಯಕ್ಷರಾದರು.

ನಿವೃತ್ತಿಯಾದ  ವರ್ಷವೇ ಅವರು ಮುಂಬೈ ವಿಶ್ವವಿದ್ಯಾಲಯದ ಉಪಕುಲಪತಿಗಳಾದರು. ಭಂಡಾರ್ ಕರ್ ಅವರು ಮುಂಬೈ ವಿಶ್ವವಿದ್ಯಾಲಯದ ಹದಿನೆಂಟನೆಯ ಉಪಕುಲಪತಿಗಳು. ಇಂಥ ಉನ್ನತ ಪದವಿಗೇರಿದ ಭಾರತೀಯರಲ್ಲಿ ಎರಡನೆಯವರು. ಬಹು ದಕ್ಷತೆಯಿಂದ ಅವರು ವಿಶ್ವವಿದ್ಯಾಲಯದ ಕಾರ್ಯಕಲಾಪಗಳನ್ನು ನಡೆಸಿದರು. ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪ್ರತ್ಯಕ್ಷ ಭಾಷಣ ಮಾಡಿದ ಭಾರತೀಯರಲ್ಲಿ ಆರ್. ಜಿ. ಭಂಡಾರ್‌ಕರ್ ಅವರೇ ಮೊದಲಿಗರು.

೧೯೦೩ ರಲ್ಲಿ ವೈಸ್‌ರಾಯರ ಲೆಜಿಸ್‌ಲೆಟಿವ್ ಕೌನ್ಸಿಲಿನ ಸದಸ್ಯರಾದರು. ೧೯೦೪ ರಿಂದ ೧೯೦೮ ರವರೆಗೆ ಮುಂಬೈ ಲೆಜಿಸ್ ಲೆಟಿವ್ ಕೌನ್ಸಿಲಿನ ಸಭಾಸದರಾದರು. ಭಂಡಾರ್‌ಕರ್ ಅವರ ವಿದ್ವತ್ತನ್ನೂ, ಶಿಕ್ಷಕರಾಗಿ ಅವರು ಮಾಡಿದ ಕೆಲಸವನ್ನೂ ಬ್ರಿಟಿಷ್ ಸರ್ಕಾರವೂ ಮೆಚ್ಚಿ ಹಲವು ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿತು.

ಗೌರವ

ಭಂಡಾರ್‌ಕರ್ ಅವರು ಸರ್ಕಾರದ ಶಿಕ್ಷಣ ಖಾತೆಯಲ್ಲಿ ನೌಕರಿ ಮಾಡುತ್ತಿರುವಾಗಲೇ, ಅನೇಕ ಸಂಸ್ಥೆಗಳಿಂದ ಗೌರವ ಪಡೆದಿದ್ದರು. ೧೮೮೫ ರಲ್ಲಿ ಲಂಡನ್ನಿನ ಏಷ್ಯಾಟೆಕ್ ಸೊಸೈಟಿಯವರು ಭಂಡಾರ್‌ಕರ್ ಅವರನ್ನು ಗೌರವ ಸದಸ್ಯರನ್ನಾಗಿ ತೆಗೆದುಕೊಂಡರು. ೧೮೮೭ ರಲ್ಲಿ ಜರ್ಮನ್ ಓರಿಯೆಂಟಲ್ ಸೊಸೈಟಿ ಯವರು, ಅದೇ ವರುಷ ಅಮೇರಿಕನ್ ಓರಿಯೆಂಟಲ್ ಸೊಸೈಟಿಯವರು ಇವರನ್ನು ಗೌರವ ಸದಸ್ಯರನ್ನಾಗಿ ಆಯ್ಕೆ ಮಾಡಿದರು. ೧೮೯೦ ರಲ್ಲಿ ಫ್ರೆಂಚ್ ಇನ್‌ಸ್ಟಿಟ್ಯೂಟಿನವರೂ ಇವರನ್ನು ಹೀಗೆಯೇ ಗೌರವಿಸಿದರು. ಆರ್.ಜಿ. ಭಂಡಾರ್‌ಕರ್ ಅವರು ಅನೇಕ ಮಹತ್ವದ ಅಧಿವೇಶನ ಗಳಿಗೆ ಅಧ್ಯಕ್ಷರಾದರು.

ಆರ್. ಜಿ. ಭಂಡಾರ್‌ಕರ್ ಅವರ ಅಪೂರ್ವ ಸಾಧನೆಯನ್ನು ಕಂಡು, ಭಾರತವು ಅಭಿಮಾನ ಪಟ್ಟಿತು. ಗೌರವದ ಸ್ಥಾನಗಳು ತಾವಾಗಿಯೇ ಇವರನ್ನು ಹುಡುಕಿಕೊಂಡು ಬಂದವು. ‘ಹಿತ್ತಲಗಿಡ ಮದ್ದಲ್ಲ’ ಎಂದು ನಾಣ್ನುಡಿಯಿದೆ! ಇದನ್ನು ಭಂಡಾರ್‌ಕರ್ ಅವರ ಬಗ್ಗೆಯೂ ನೆನೆಯಬಹುದು. ಭಾರತೀಯರಿಗಿಂತ ಮೊದಲು ಜರ್ಮನರು ಭಂಡಾರ್‌ಕರ್ ಅವರಿಗೆ ಗೌರವ ಪದವಿಯನ್ನು ನೀಡಿದರು. ೧೮೮೫ ರಲ್ಲಿ ಗೊಟೆಂಜೆನ್ ವಿಶ್ವವಿದ್ಯಾಲಯವು ಇವರಿಗೆ ಗೌರವ ಪಿ. ಎಚ್. ಡಿ.ಪದವಿ ನೀಡಿ ಸನ್ಮಾನಿಸಿತು. ಭಾರತೀಯರೊಬ್ಬರ ವಿದ್ವತ್ತಿನ ಮಹತ್ವ ಅವರಿಗೆ ಮೊದಲು ತಿಳಿಯಿತು. ಅವರ ಅನಂತರವೇ ಮುಂಬಯಿ ವಿಶ್ವವಿದ್ಯಾಲಯ ೧೯೦೪ ರಲ್ಲಿ ಗೌರವ ಎಲ್ ಎಲ್.ಡಿ. ಪದವಿಯನ್ನು ನೀಡಿತು. ೧೯೦೮ ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದವರೂ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟರು.

ಮಹತ್ವದ ಗ್ರಂಥಗಳು

೧೯೦೮ ರ ನಂತರ ಭಂಡಾರ್‌ಕರ್ ಅವರ ಆರೋಗ್ಯ ಕೆಡತೊಡಗಿತು. ಅವರಿಗೆ ಸತತವಾಗಿ ಓದಬೇಕು, ಬರೆಯಬೇಕು ಎಂಬಾಶೆ! ಆದರೆ ಅವರ ಕಣ್ಣಿನ ಶಕ್ತಿ ಕಡಿಮೆಯಾಯಿತು. ಎರಡನೆಯವರಿಂದ ಅವರು ಓದಿಸಿ ಕೇಳತೊಡಗಿದರು, ಎರಡನೆಯವರಿಂದ ಹೇಳಿ ಬರೆಯಿಸ ತೊಡಗಿದರು. ಇಂಥ ತೊಂದರೆಗಳಿದ್ದರೂ ಅವರು ಧರ್ಮದ ವಿಷಯವನ್ನು ಕುರಿತ ಗ್ರಂಥವನ್ನು ರಚಿಸಿದರು, “ವೈಷ್ಣವ, ಶೈವ ಹಾಗೂ ಇತರ ಧಾರ್ಮಿಕ ಪಂಥಗಳು’ ಎಂಬುದೇ ಆ ಗ್ರಂಥದ ಹೆಸರು. ಇದನ್ನು ಅವರು ೧೯೧೧ ರಲ್ಲಿ ಮುಗಿಸಿದರು.

ಇದೊಂದು ಆರ್. ಜಿ. ಭಂಡಾರ್‌ಕರ್ ಅವರ ಅತ್ಯಂತ ಮಹತ್ವಪೂರ್ಣ ಕೃತಿ. ಈ ಗ್ರಂಥದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ವೈಷ್ಣವ ಪಂಥದ ಇತಿಹಾಸವಿದೆ; ಎರಡನೆಯದರಲ್ಲಿ ಶೈವಪಂಥದ ಬಗ್ಗೆ ವಿವರಿಸಿದೆ. ’ಶೈವ, ವೈಷ್ಣವ, ಇವು ಭಕ್ತಿಮಾರ್ಗದ ಎರಡು ಶಾಖೆ. ಇವು ಉಪನಿಷತ್ತಿನಿಂದಲೇ ಬಂದಿವೆ’ ಎಂದು ಇವುಗಳ ಪ್ರಾಚೀನತೆಯನ್ನು ತಿಳಿಸಿರುವರು.

ಈ ಕೃತಿಯು ಮೂಲತಃ ಜರ್ಮನ್ ಭಾಷೆಯಲ್ಲಿಯೇ ಪ್ರಕಟವಾಯಿತು. ೧೯೧೩ ರಲ್ಲಿ ಕಾರ್ಲ್ ಜೆ ಟ್ರುಬ್ನರ್ ಅವರು ಜರ್ಮನ್ ಪ್ರಾಚ್ಯವಿದ್ಯೆ ಅಭ್ಯಾಸಿಗಳ ಪರವಾಗಿ ಪ್ರಕಟಿಸಿದರು. ಜಗತ್ತಿನ ಹಲವು ದೇಶಗಳ ವಿದ್ವಾಂಸರು ಇದನ್ನು ಮೆಚ್ಚಿಕೊಂಡರು. ಭಾರತೀಯ ವಿದ್ಯಾರ್ಥಿಗಳಿಗೆ ಇದು ಸುಲಭವಾಗಿ ಸಿಕ್ಕುತ್ತಿರಲಿಲ್ಲ. ಆದ್ದರಿಂದ ೧೯೨೮ ರಲ್ಲಿ ಭಾರತೀಯ ಆವೃತ್ತಿಯನ್ನು ಮುದ್ರಿಸಲಾಯಿತು. ಭಂಡಾರ್‌ಕರ್ ಪ್ರಾಚ್ಯ ಸಂಶೋಧನ ಸಂಸ್ಥೆಯವರೇ ಈ ಗ್ರಂಥವನ್ನು ಪ್ರಕಟಿಸುವ ಹಕ್ಕುಗಳನ್ನು ಪಡೆದರು.

ಆರ್. ಜಿ. ಭಂಡಾರ್‌ಕರ್ ಅವರ ಎಲ್ಲ ಲೇಖನಗಳನ್ನು ಇದೇ ಸಂಸ್ಥೆಯವರೆ ಪ್ರಕಟಿಸಿರುವರು. ಅವರ ಲೇಖನಗಳು ‘ಆರ್. ಜಿ. ಭಂಡಾರ್‌ಕರ್‌ರ ಕೃತಿಗಳು’ ಎಂದು ನಾಲ್ಕು ಸಂಪುಟಗಳಲ್ಲಿ ಮುದ್ರಿತವಾಗಿವೆ. ಈ ಸಂಪುಟಗಳು ಭಂಡಾರ್‌ಕರ್ ಅವರ ಎಲ್ಲ ಗ್ರಂಥಗಳು, ಸಂಶೋಧನ ಲೇಖನಗಳು ಹಾಗೂ ಭಾಷಣಗಳನ್ನು ಒಳಗೊಂಡಿವೆ. ನಾಲ್ಕು ಸಂಪುಟಗಳು ಕೂಡಿ ೨೪೮೨ ಪುಟಗಳಾಗಿವೆ.

ತಮ್ಮ ಜೀವಮಾನದಲ್ಲಿ ಭಂಡಾರ್‌ಕರ್ ಅವರು ಹೆಚ್ಚಾಗಿ ಬರೆಯಲಿಲ್ಲ. ಕೆಲವೇ ಲೇಖನ ಬರೆದರೂ, ಅವುಗಳನ್ನು ಚೊಕ್ಕಟವಾಗಿ ಬರೆದರು. ಆಳವಾಗಿ ಅಭ್ಯಾಸಮಾಡದೇ, ಸರಿಯಾದ ಆಧಾರಗಳು ಇರದೆ ಅವರು ಎಂದೂ ಬರೆಯಲಿಲ್ಲ. ‘ವಿದ್ವಾಂಸನು ಒಬ್ಬ ನ್ಯಾಯಾಧೀಶನ ಹಾಗೇ ಇರಬೇಕು’ ಎಂದು ಅವರು ಯಾವಾಗಲೂ ಹೇಳುತ್ತಿದ್ದರು.

ರಾಮಕೃಷ್ಣ ಭಂಡಾರ್‌ಕರ್ ಅವರಿಗೆ ಶ್ರೀಧರ, ಪ್ರಭಾಕರ ಹಾಗೂ ದೇವದತ್ತ ಎಂದು ಮೂವರು ಗಂಡು ಮಕ್ಕಳು. ಇವರಲ್ಲಿ ಕಿರಿಯವರಾದ ದೇವದತ್ತರು ತಂದೆಯ ಹಾಗೆ ವಿದ್ವಾಂಸರಾದರು. ಸಂಸ್ಕೃತ, ಪ್ರಾಕೃತಗಳ ಮೇಲೆ ಪ್ರಭುತ್ವ ಸಂಪಾದಿಸಿದರು. ಇತಿಹಾಸಕಾರರಲ್ಲಿ ಒಳ್ಳೇ ಹೆಸರನ್ನು ಪಡೆದರು. ಹಿರಿಯವರಾದ ಶ್ರೀಧರ ಸಂಸ್ಕೃತದ ಪ್ರಾಧ್ಯಾಪಕರಾಗಿದ್ದರು. ಪ್ರಭಾಕರ ಅವರು ವೈದ್ಯಕೀಯ ವೃತ್ತಿಯಲ್ಲಿದ್ದರು.

ತಮ್ಮ ೮೨ನೆಯ ವರುಷದಲ್ಲಿ ಭಂಡಾರ್‌ಕರ್ ಅವರು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ  ಸರಿದರು. ಆ ಹೊತ್ತಿಗೆ  ಅವರು ದೇಶ ವಿದೇಶಗಳಿಂದ ಮಾನ್ಯತೆ ಪಡೆದಿದ್ದರು. “ದಖನ್ನಿನ ಪ್ರಾಚೀನ ಇತಿಹಾಸ’ವು ಅವರಿಗೆ ಭಾರತದಲ್ಲಿ ಕೀರ್ತಿಯನ್ನು ತಂದುಕೊಟ್ಟಿತು. ವೈಷ್ಣವ, ಶೈವ ಧರ್ಮಗಳ ಮೇಲೆ ಬರೆದ ಅವರ ಗ್ರಂಥವು, ಅವರಿಗೆ ಅಂತರರಾಷ್ಟ್ರೀಯ ಕೀರ್ತಿಯನ್ನು ಒದಗಿಸಿತು. ಫ್ರೆಂಚ್ ವಿದ್ವಾಂಸರಾದ ಡಾಕ್ಟರ್ ಸೆಲ್ಬನ್ ಲಿವಿಯವರೂ ಸಹ ಭಂಡಾರ್‌ಕರ್ ಅವರ ಸಂಗಮಾಶ್ರಮಕ್ಕೆ ಬಂದು ಹೋದರು. ಲೋಕಮಾನ್ಯ ತಿಲಕರು, ಹರಿನಾರಾಯಣ ಅಪ್ಟೆ ಇಂತಹ ಮಹಾ ವಿದ್ವಾಂಸರೂ ಸಹ ಭಂಡಾರ್‌ಕರ್ ಅವರ ಮನೆಗೆ ಬರುತ್ತಿದ್ದರು. ಅವರ ಗ್ರಂಥ ಭಂಡಾರದ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.

ಕಷ್ಟಗಳು ಜೀವನ ಯಾತ್ರೆ ಮುಗಿಯಿತು

ಮನುಷ್ಯ ಬಹಳ ವರ್ಷ ಬದುಕಿರಬಹುದು. ಆದರೆ ಅದರ ಜೊತೆಗೆ ವಿಪತ್ತುಗಳು ಹೆಚ್ಚಾಗಿರುತ್ತವೆ. ರಾಮಕೃಷ್ಣ ಭಂಡಾರ್‌ಕರ್ ಅವರು ಕೊನೆಕೊನೆಗೆ ಬಹಳ ಕಷ್ಟಗಳನ್ನು ಎದುರಿಸಬೇಕಾಯಿತು. ಮೊದಲು ಅವರು ಧರ್ಮಪತ್ನಿ ತೀರಿಕೊಂಡರು. ಅನಂತರ ಅವರ ಅಳಿಯ ನೊಬ್ಬ ತೀರಿಕೊಂಡ. ಮುಂದೆ ಒಬ್ಬ ಮಗಳೂ ಸ್ವರ್ಗಸ್ಥ ಳಾದರು. ಇಷ್ಟೇ ಅಲ್ಲದೇ ಅವರ ಕಣ್ಣೆದುರಿಗೆ ಅವರ ಹಿರಿಯ ಮಗ ಶ್ರೀಧರ ಸಹ ಸತ್ತರು. ಈ ಸಂಕಟಗಳು ಒಂದರ ಮೇಲೊಂದು ಬಂದವು. ರಾಮಕೃಷ್ಣ ಭಂಡಾರ್‌ಕರ್ ಅವರು ಎಲ್ಲವನ್ನು ಸಹಿಸಿಕೊಂಡರು. ಶಾಂತಚಿತ್ತದಿಂದ ತಮ್ಮ ನಿಯಮಿತ ಜೀವನವನ್ನು ಸಾಗಿಸಿದರು.

ಎಷ್ಟೇ ದುಃಖ ಕವಿದರೂ ಆರೋಗ್ಯ ಕೆಟ್ಟರೂ ಅವರು ಭಾನುವಾರ ತಪ್ಪದೇ ಪ್ರಾರ್ಥನಾ ಸಮಾಜ ಮಂದಿರಕ್ಕೆ ಹೋಗುತ್ತಿದ್ದರು. ಅದು ಪಾಲಿಸಬೇಕಾದ ಕರ್ತವ್ಯ ಎನ್ನು ತ್ತಿದ್ದರು. ಪ್ರತಿಯೊಬ್ಬರ ಜೀವನದಲ್ಲಿ ಧರ್ಮಕ್ಕೆ ಮೊದಲ ಸ್ಥಾನವಿರಬೇಕು ಎಂದು ಅವರು ಹೇಳುತ್ತಿದ್ದರು. ಇದು ಅವರ ನಂಬಿಕೆ.

೧೯೨೫ ರಲ್ಲಿ ಭಂಡಾರ್‌ಕರ್ ಅವರ ಆರೋಗ್ಯ ಬಹಳ ಕ್ಷೀಣವಾಯಿತು. ಆಗ ಅವರಿಗೆ ೮೮ ವರ್ಷ. ಆಗಸ್ಟ್ ೨೪ ರಂದು ಮಧ್ಯಾಹ್ನ ಅವರು ತಮ್ಮ ಆಶ್ರಮದಲ್ಲಿ ನಿಧನರಾದರು.

ಆರ್. ಜಿ. ಭಂಡಾರ್‌ಕರ್ ಅವರು ಇಹಲೋಕ ಯಾತ್ರೆ ಮುಗಿಸಿದ್ದು, ಋಷಿ ಪಂಚಮಿ ದಿನ. ಅವರೊಬ್ಬ ಭಾರತದ ಆಧುನಿಕ ಋಷಿ. ಸತತವಾದ ತಪಸ್ಸು ಅವರ ಜೀವನದ ಮೂಲಮಂತ್ರ. ಅವರ ನೆನಪು ಸದಾ ಹಸಿರು!