ಆಷಾಢ ಮಾಸ. ಆರು ವರ್ಷದಬಾಲಕ. ಹುರಿಗಡಲೆ ತಿನ್ನುತ್ತಾ ಬತ್ತದ ಗದ್ದೆಗಳ  ನಡುವೆ ಕಾಲುದಾರಿಯಲ್ಲಿ ಹೋಗುತ್ತಿದ್ದ. ತಲೆಯೆತ್ತಿ ಆಕಾಶದ ಕಡೆ ನೋಡಿದ. ಕಪ್ಪು ಮೋಡವೊಂದು ಕಣ್ಣಿಗೆ ಬಿತ್ತು. ನೋಡುತ್ತಿರುವಷ್ಟರಲ್ಲೇ ಅದು ಆಕಾಶವನ್ನೇ ಕವಿದುಬಿಟ್ಟಿತು. ಅದೇವೇಳೆಗೆ ಪಕ್ಕದ ಗದ್ದೆಯಿಂದ ಬೆಳ್ಳಕ್ಕಿಗಳ ಗುಂಪೊಂದು ಮೇಲೆ ಹಾರಿತು.  ಕಪ್ಪು  ಮೋಡದ ಹಿನ್ನಲೆಯಲ್ಲಿ ಬೆಳ್ಳಕ್ಕಿಗಳ ಸಾಲು ನೋಡಿದ ಬಾಲಕನ ಮನಸ್ಸು ಆನಂದದಲ್ಲಿ ಲೀನವಾಯಿತು. ಸೃಷ್ಟಿ ಆಷಾಢ ಮಾಸ. ಆರು ವರ್ಷದಬಾಲಕ. ಹುರಿಗಡಲೆ ತಿನ್ನುತ್ತಾ ಬತ್ತದ ಗದ್ದೆಗಳ  ನಡುವೆ ಕಾಲುದಾರಿಯಲ್ಲಿ ಸೌಂಧರ್ಯದಲ್ಲೇ ಸಂಪೂರ್ಣವಾಗಿ ತನ್ಮಯನಾಗಿದ್ದ ಬಾಲಕ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ.  ಸೆರಗಿನಲ್ಲಿದ್ದ ಹುರಿಗಡಲೆ ಚೆಲ್ಲಿತು. ದಾರಿಯಲ್ಲಿ ಹೋಗುತ್ತಿದ್ದವರೊಬ್ಬರು ಆ ಬಾಲಕನನ್ನು ಹೊತ್ತುಕೊಂಡು ಮನೆಗೆ ಬಿಟ್ಟರು.  ಎಚ್ಚರವಾದ ಮೇಲೆ ಅವನ ಎದೆಯಲ್ಲಿ ಮಾತುಗಳಲ್ಲಿ ಸಾಧ್ಯವಾಗದ ಆನಂದ ತುಳುಕಾಡುತ್ತಿತ್ತು.

ಹಸರು ಗದ್ದೆ, ನೀಲ ಗಗನ, ಪಕ್ಷಿಗಳ ಗಾನ ಕಂಡು ಹಿಗ್ಗಿ ಬಾಹ್ಯ ಪ್ರಪಂಚವನ್ನೇ ಮರೆತಿದ್ದ ಈ ಬಾಲಕನೇ ಮುಂದೆ ರಾಮಕೃಷ್ಣ ಪರಮಹಂಸ ಎನ್ನಿಸಿಕೊಂಡ.

ಬಾಲ್ಯ :

ರಾಮಕೃಷ್ಣ ರ ಜನನ ೧೮೩೬ನೇ ಫೆಬ್ರವರಿ ೧೮ರಂದು. ಬಂಗಾಳ ಪ್ರಾಂತದ ಹೂಗ್ಲಿ ಜಿಲ್ಲೆಯಲ್ಲಿನ ಕಾಮಾಪುಕುರ ಗ್ರಾಮದಲ್ಲಿ. ಅವರ ತಂದೆ ಖೂದಿರಾಮ ಚಟ್ಟೋಪಾಧ್ಯಾಯ. ತಾಯಿ ಚಂದ್ರಮಣೀದೇವಿ. ಅವರು ಬಡವರಾದರೂ ಮಹಾ ದೈವಭಕ್ತರು: ಪರೋಪಕಾರಿಗಳು, ರಾಮಕೃಷ್ಣ ಅವರ ನಾಲ್ಕನೆಯ ಮಗ. ಹುಟ್ಟಿದ ಮಗನಿಗೆ ಗದಾಧರನೆಂದು ಹೆಸರಿಟ್ಟರು.

ಗದಾಧರ ಊರಿನ ಜನರ ಸ್ನೇಹದಲ್ಲಿ ಬೆಳೆದ. ಆರು ವರ್ಷ ತುಂಬುವ ಹೊತ್ತಿಗೆ ನೆರೆಹೊರೆಯವರು ಹೇಳೀಕೊಡುತ್ತಿದ್ದ ಪುರಾಣ ಪುಣ್ಯ ಕಥೆಗಳನ್ನು ಕಲಿತುಕೊಂಡ. ಹಳ್ಳಿಯ ಪಾಠಶಾಲೆಯೊಳಗೆ ಕುಳಿತು ಓದುವುದಕ್ಕಿಂತ ಹತ್ತಿರವಿದ್ದ  ಮಾವಿನ ತೋಪಿನಲ್ಲಿ  ಬಯಲಾಟವಾಡುವುದು ಅವನಿಗೆ ಇಷ್ಟವಾಯಿತು. ದೇವ-ದೇವಿಯರ ಮಣ್ಣುಗೊಂಬೆಗಳನ್ನು ಮಾಡುವುದರಲ್ಲಿ ಆಸಕ್ತಿ ಬೆಳೆಯಿತು. ಅಭಿನಯ ಕಲೆಯಲ್ಲಿಯೂ ಗದಾಧರನಿಗೆ ಆಸಕ್ತಿ. ಅವನ ಧರ್ಯವಂತೂ ಇತರೆ ಹುಡುಗರಿಗೆಲ್ಲಾ ಆಶ್ಚರ್ಯವನ್ನುಂಟು ಮಾಡುತ್ತಿತ್ತು.  ಸ್ಮಶಾನ  ಮುಂತಾದ ಅಂಜಿಕೆ ತರುವ ಸ್ಥಳಗಳಿಗೆಲ್ಲಾ ಗಧಾಧರ ಒಬ್ಬನೇ ಹೆದರಿಕೆ ಇಲ್ಲದೆ ಹೋಗುತ್ತಿದ್ದ.

ಚುರುಕು ಬುದ್ಧಿಯ ಹುಡುಗ :

ಹಳ್ಳಿಯಲ್ಲಿ ಹಬ್ಬ ಹುಣ್ಣಿಮೆಗಳಲ್ಲಿ ನಡೆಯುವ ಕಥೆ ಪ್ರಸಂಗಗಳನ್ನು ಗಧಾಧರ ಆನಂದದಿಂದ ಕೇಳುತ್ತಿದ್ದ. ಪಂಡಿತರು ಯಾವಾಗಲಾದರೂ ಕುಳಿತು ತತ್ವ ವಿಚಾರಗಳನ್ನು ಚರ್ಚೆ ಮಾಡಿದಾಗ ಅದನ್ನು ಗಮನವಿಟ್ಟು ಕೇಳುತ್ತಿದ್ದ. ಒಮ್ಮೆ ಗ್ರಾಮದ ಜಮೀನ್ದಾರರ ಮನೆಯಲ್ಲಿ ಪಂಡಿತ ಸಭೆ ಸೇರಿತ್ತು. ಇಬ್ಬರು ಪಂಡಿತರು ವಾದ ಮಾಡುತ್ತಿರುವಗ ಈ ಬಾಲಕನು ಮಧ್ಯೆ ಪ್ರವೇಶಿಸಿ ಒಂದು ತೊಡಕನ್ನು ಬಿಡಿಸಿದ.

ಒಂದು ದಿನ ಶಿವರಾತ್ರಿ. ಊರಿನಲ್ಲಿ ಜಾಗರಣೆಗೆಂದು ಬಯಲು ನಾಟಕ ಆಡಲು ಕೆಲವರು ಸಿದ್ಧತೆ ಮಾಡಿದ್ದರು.  ರಾತ್ರಿಯಾಯಿತು. ನಾಟಕ ಆರಂಭವಾಗುವ ಸಮಯ ಬಂದರೂ ಶಿವನ ಪಾತ್ರ ಹಾಕಬೇಕಾಗಿದ್ದವನು ಬರಲಿಲ್ಲ. ವಿಚಾರಿಸಿದಾಗ ಅವನಿಗೆ ಅನಾರೋಗ್ಯ ಎಂದು ತಿಳಿಯಿತು.  ನಾಟಕ ಏರ್ಪಡಿಸಿದ್ದವರಿಗೆ ದಿಕ್ಕು ತೋಚದಾಯಿತು.  ಶಿವನದು ಮುಖ್ಯ ಪಾತ್ರ: ಆ ಪಾತ್ರ ಹಾಕುವನೇ ಬರದಿದ್ದರೆ ಹೇಗೆ ?ಆಗೆ ಕೆಲವು ಸ್ನೇಹಿತರು ಗದಾಧರನನ್ನು ಶಿವನ ಪಾತ್ರ ವಹಿಸಬೇಕೆಂದು ಕೇಳಿಕೊಂಡರು. ಗದಾಧರ  ಮೊದಲು ಒಪ್ಪಲಿಲ್ಲ.  ಸ್ನೇಹಿತರು ಬಲಾತ್ಕರಿಸಿದರು. ಪಾತ್ರ ಮಾಡಿದರೂ ಶಿವನ ಧ್ಯಾನವನ್ನೇ ಮಾಡಿದಂತಾಗುವುದೆಂದು ಸ್ನೇಹಿತರು ಸಮಾಧಾನ ಹೇಳಿದ ಮೇಲೆ ಗದಾಧರ ಒಪ್ಪಿಕೊಂಡ. ಶಿವನಂತೆ ಭಸ್ಮ ಬಳಿದುಕೊಂಡು, ಜಟಾಧಾರಿಯಾಗಿ ರಂಗ ಭೂಮಿಯ ಮೇಲೆ ಬಂದು ನಿಂತ. ತಾನು ನಟನೆಂಬುವುದನ್ನು ಮರೆತ.  ಶಿವನ ಧ್ಯಾನದಲ್ಲಿ ತಲ್ಲೀನನಾದ. ಕಣ್ಣನಿನಿಂದ ಆನಂದಭಾಷ್ಪ ಸುರಿಯತೊಡಗಿತು. ಬಾಹ್ಯ  ಪ್ರಜ್ಞೆ ಇರಲಿಲ್ಲ. ಆಟವು ನಿಂತು ಹೋಯಿತು. ಸ್ನೇಹಿತರು ಗದಾಧರನನ್ನು ಮನೆಗೆ ಕರೆದುಕೊಂಡು ಹೋದರು.   ಮಾರನೆಯ ದಿನ ಅವನಿಗೆ ಧ್ಯಾನದಿಂದ ಎಚ್ಚರವಾಯಿತು.

ಸಾಧುಗಳ ಜೊತೆಯಲ್ಲಿ :

ಏಳು ವರ್ಷದವನಿದ್ದಾಗಲೇ ಅವನ ತಂದೆ ಕಾಲವಾದರು. ಈ ಘಟನೆ ಅವನನ್ನು ಯೋಚನಾ ಮಗ್ನನ್ನಾಗಿ ಮಾಡಿತು.  ಹುಟ್ಟು ಎಂದರೇನು, ಸಾವು ಎಂದರೇನು ಎಂಬ ಸಮಸ್ಯೆ ಅವನನ್ನು ಪೀಡಿಸಿತು. ಜೀವನವನ್ನು ನೆಚ್ಚುವಂತಿಲ್ಲ, ಯಾವಾಗ ಸಾವು ಬರುವುದೋ ಎಂದು ಹಿರಿಯರು ಹೇಳೂತ್ತಿದ್ದುದನ್ನು ಕೇಳಿದ್ದ :ಅವನ ಮಾತು ಈಗ ಮನದಟ್ಟಾಯಿತು. ತಾಯಿಯ ದುಃಖದಿಂದ ಬಹಳ ನೊಂದು ಕೊಂಡ ಗದಾಧರ ಸಾಧ್ಯವಾದಷ್ಟು ಹೆಚ್ಚು ಹೊತ್ತು ತಾಯಿಯ ಹತ್ತಿರವೇ ಇರುತ್ತ ಮನೆಗೆಲಸದಲ್ಲಿ ಪೂಜೆಯಲ್ಲಿ ಅವರಿಗೆ ನೆರವಾಗುತ್ತಿದ್ದ.

ಕಾಮಾರಪುಕುರ ಕಲ್ಕತ್ತೆಯಿಂದ ಪುರಿಗೆ ಹೋಗುವ ದಾರಿಯಲ್ಲಿತ್ತು. ಪುರಿಗೆ ಹೋಗುತ್ತಿದ್ದ ಅನೇಕ ಯಾತ್ರಿಕರು ಅಲ್ಲಿ ತಂಗುತ್ತಿದ್ದರು. ಗದಾಧರನ ಮನೆಯ ಹತ್ತಿರವೇ ಸಾಧುಸಂತರು ಇಳಿದುಕೊಳ್ಳುತ್ತಿದ್ದ ಧರ್ಮಶಾಲೆ ಇತ್ತು. ಗದಾಧರ ಸಾಧುಗಳೊಂದಿಗೆ ಮಾತನಾಡುತ್ತಿದ್ದ.  ಅವರು ಹೇಳುವುದನ್ನು ಭಕ್ತಿಯಿಂದ ಕೇಳುತ್ತಿದ್ದ. ಅವರಿಗೆ ಸಣ್ಣ ಪುಟ್ಟ ಕೆಲಸಗಳಲ್ಲಿ ನೆರವಾಗುತ್ತಿದ್ದ. ಯಾವುದಕ್ಕೂ ಆಸೆಪಡದ ಸಾಧುಗಳ ಜೀವನ, ಅವರ ಜ್ಞಾನ, ಭಕ್ತಿ , ವೈರಾಗ್ಯ ಬಾಲಕನಿಗೆ ಪ್ರೀಯವಾದುವು. ಒಂದು ದಿನ ಗದಾಧರ  ಸಾಧುಗಳಂತೆ ಮೈತುಂಬ ಬೂದಿ ಬಳಿದುಕೊಂಡು; ನಾಮ ಹಾಕಿಕೊಂಡ; ಉಟ್ಟ ಪಂಚೆಯನ್ನೇ ಹರಿದು ಕೌಪೀನ ಕಟ್ಟಿಕೊಂಡ. ಮನೆಗೆ ಬಂದು, “ನೋಡಮ್ಮ ,ನಾನು ಸಾಧುವಾಗಿದ್ದೇನೆ” ಎಂದು ತಾಯಿಗೆ ಹೇಳೀದ. ಚಂದ್ರಮಣೀದೇವಿಯ ಹೃದಯ ತಲ್ಲಣಿಸಿತು. ತಾಯಿ ದುಃಖಿತಳಾದುದನ್ನು  ನೋಡಿ ಗದಾಧರ ತನ್ನ ಭೈರಾಗಿ ವೇಷವನ್ನು ತೆಗೆದು ಹಾಕಿದ.

ಪ್ರೀತಿ ದೊಡ್ಡದು :

ಒಂಬತ್ತನೆಯ ವಯಸ್ಸಿನಲ್ಲಿ ಗದಾಧರನಿಗೆ ಉಪನಯನವಾಯಿತು. ಧನಿ ಎಂಬುವಳೂ ಗದಾಧರನನ್ನು ಬಾಲ್ಯದಿಂದಲೂ ಪ್ರೀತಿಸುತ್ತಿದ್ದಳು. ಉಪನಯನವಾದ ಸಮಯದಲ್ಲಿ ಆಕೆಯಿಂದ ಭಿಕ್ಷೆಯನ್ನು ತೆಗೆದುಕೊಳ್ಳುವುದಾಗಿ ಗದಾಧರನಿಗೆ ಧನಿಗೆ ಮಾತುಕೊಟಿದ್ದ. ಚಂದ್ರಮಣಿ ದೇವಿಗೆ ಮನೆ ಕೆಲಸ ಮಾಡಿಕೊಡುತ್ತಿದ್ದ ಧನಿ ಬಡವಳು, ಶೂದ್ರ ಜಾತಿಯವಳು. ಉಪನಯನದ ದಿನ ಮೊದಲು ಭಿಕ್ಷೆ ಹಾಕುವುದು ಒಂದು ಮರ್ಯಾದೆ ಕೆಲಸ., ಕುಲವಂತ ಮನೆಯವರಿಂದ ಭಿಕ್ಷೆ ತೆಗೆದುಕೊಳ್ಳಬೇಕೆಂದು ಗದಾಧರನ ಅಣ್ಣಾ ಒತ್ತಾಯಪಡಿಸಿದ. ತಾನು ಮಗುವಾಗಿದ್ದ ದಿನಗಳಿಂದಲೂ ಎತ್ತಿ ಆಡಿಸಿದ ಧನಿಯಿಂದಲೇ ಭಿಕ್ಷೆ ತೆಗೆದುಕೊಳ್ಳುವುದಾಗಿ ಗದಾಧರ ಹಟ ಹಿಡಿದ. ಇದರಿಂದ ಅಣ್ಣನಿಗೆ ಅಸಮಾಧಾನವಾಯಿತು. ಕೊನೆಗೆ ಗದಾಧರನ ಹಟವೇ ಗೆದ್ದಿತು. ಜಾತಿ, ಸಮಾಜದ ರೀತಿ ನೀತಿ, ಸಂಪ್ರದಾಯ- ಯಾವುದೂ ಗದಾಧರನು ದನಿ ಮೇಲಿಟ್ಟಿದ್ದ ಪ್ರೀತಿಗೆ ಅಡ್ಡಿ ಬರಲಿಲ್ಲ.

ಹೊಟ್ಟೆಪಾಡಿದ ವಿದ್ಯೆ ಬೇಡ“:

ತಂದೆಯು ಕಾಲವಾದ ಕೆಲವು ದಿನಗಳ ನಂತರ ಕಲ್ಕತ್ತೆಯಲ್ಲಿದ್ದ ಅಣ್ಣ ರಾಮಕುಮಾರನು ಗದಾಧರನನ್ನು ಸಹಾಯಕ್ಕಾಗಿ ಕರೆಸಿಕೊಂಡನು. ಆಗ ಗದಾಧರನಿಗೆ ಹದಿನಾರು ವರ್ಷ ವಯಸ್ಸು.

ಒಂದು ದಿನ ಶಾಲೆಯ ಹೊರ ಆವರಣದಲ್ಲಿಗದಾಧರ ಕುಳಿತ್ತಿದ್ದ. ಬ್ರಾಹ್ಮಣ ವಟು ಒಬ್ಬ ಕೈಯಲ್ಲಿ ಹಣ್ಣು ಮತ್ತು ಸ್ವಲ್ಪ ಹಣದೊಂದಿಗೆ ಶಾಲೆ ಆವರಣಕ್ಕೆ ಬಂದ. “ಅದು ನಿನಗೆ ಹೇಗೆ ದೊರಕಿತು?” ಎಂದು ವಟುವನ್ನು ಗದಾಧರ ಪ್ರಶ್ನಿಸಿದ. “ನಾನು ಕೆಲವು ಮನೆಗಳಲ್ಲಿ  ದೇವರ ಪೂಜೆ ಮಾಡುತ್ತೇನೆ. ಆ ಮನೆಗಳವರು ಇವನ್ನು ಕೊಟ್ಟರು” ಎಂದ ವಟು.

“ಶಾಲೆಯಲ್ಲಿ ಓದಿದದ್ದುದರ ಪ್ರತಿಫಲ ಇಷ್ಟೇ! ಒಂದಿಷ್ಟು ಜೀವನೋಪಾಯಕ್ಕಾಗಿ ಮಾರ್ಗವಾಯಿತು. ಆದರೆ ಹೇಗೆ ಬದುಕಬೇಕು ಎಂಬ ಜ್ಞಾನ ಬಂದಿತೆ?” ಎಂದು ಗದಾಧರ ವಿಸ್ಮಯಗೊಂಡ.

ಈ ಆಲೋಚನೆ ಅವನ ಮನಸ್ಸನ್ನೇ ಬದಲಿಸಿತು. ಶಾಲೆಗೆ ಹೋಗುವುದು ವಿರಳವಾಯಿತು. ಓದಿನ ಕಡೆ ಮನಸ್ಸಾಗಲಿಲ್ಲ. ಇದನ್ನು ಮಗನಿಸಷಿದ ರಾಮಕುಮಾರನು ತಮ್ಮನನ್ನು ಕರೆದು, “ಹೀಗಾದರೆ ಹೇಗೆ? ನಿನ್ನ ಭವಿಷ್ಯವೇನು?” ಎಂದು ಕೇಳೀದನು. ಗದಾಧರನು “ಬಟ್ಟೆ,  ಹಿಟ್ಟು ಕೊಡುವ ವಿದ್ಯೆ ಬೇಡ. ಯಾವುದು ನನ್ನ ಹೃದಯಕ್ಕೆ ಬೆಳಕನ್ನು ಕೊಡಬಲ್ಲದೋ ಆ ವಿದ್ಯೆಯನ್ನು ಪಡೆಯಲು ನಾನು ಯತ್ನಿಸುತ್ತೇನೆ” ಎಂದು ಉತ್ತರ ಕೊಟ್ಟ. ತಮ್ಮನು ಸುಲಭವಾಗಿ ದಾರಿಗೆ ಬರುವಂತೆ ಅಣ್ಣನಿಗೆ ಕಾಣಲಿಲ್ಲ. ತಾನು ಹೋಗುತ್ತಿದ್ದ ಕೆಲವು ಮನೆಗಳೀಗೆ ಪೂಜೆಗಾದರೂ ಹೋಗು ಎಂದು ಹೇಳೀದನು. ಗದಾಧರನು ಇದನ್ನು ಬಹಳ ಸಂತೋಷದಿಂದ ಒಪ್ಪಿಕೊಂಡ.

ದಕ್ಷೀಣೇಶ್ವರದಲ್ಲಿ :

ಕಲ್ಕತ್ತಾದಲ್ಲಿ ರಾಸಮಣಿ ಎಂಬ ಜಮೀನದ್ದಾರಿಣಿ ಇದ್ದಳು. ಬೇಸ್ತರ ಕುಲದವಳಾದ ಆಕೆ ಮಹಾ ದೈವಭಕ್ತೆ . ಗಂಗಾನದಿಯ ತೀರದಲ್ಲಿ ದಕ್ಷಿಣೇಶ್ವರ ಎಂಬಲ್ಲಿ ದೊಡ್ಡದೊಂದು ಕಾಳಿಕಾ ದೇವಾಲಯವನ್ನು ಕಟ್ಟಿಸಿದಳು.

ರಾಮಕುಮಾರನು ಆದೇವಾಲಯದಲ್ಲಿ ಅರ್ಚಕನಾಗಿ ಜನ್ಮಾತೆಯ ಪೂಜೆ ನಿರ್ವಹಿಸತೊಡಗಿದನು. ಗದಾಧರ ಕೆಲವು ವೇಳೆಗೆ ಅಣ್ಣನ ಪೂಜೆಗೆ ಅಣಿ ಮಾಡಿಕೊಡುತ್ತಿದ್ದ.

ರಾಮಣಿಯ ಅಳಿಯ ಮಥುರನಾಥ ಎಂಬಾತ ಅವಳ ಆಸ್ತಿಯನ್ನು ನೋಡಿಕೊಳ್ಳುವುದಕ್ಕೆ ನೆರವಾಗುತ್ತಿದ್ದ.  ಮಥುರನಾಥ ದೇವಾಲಯಕ್ಕೆ ಬರುತ್ತಿದ್ದ ಗದಾಧರನನ್ನು ಕಂಡು ಆಕರ್ಷಿತನಾದ. ಆ ತರುಣನು ರಾಮಕುಮಾರನ ತಮ್ಮನೆಂದು ತಿಳಿದ ಮೇಲಂತೂ ಅತನ ಮೇಲೆ ಮಥುರನಾಥನಿಗೆ ಪ್ರೀತಿ ಹೆಚ್ಚಿತ್ತು. ಹೇಗಾದರೂ ಮಾಡಿ ತೇಜಸ್ವಿಯಾದ ತರುಣನನ್ನು ಜಗನ್ಮಾತೆಯ ಪೂಜೆಗೆ ನಿಯಮಿಸಬೇಕೆಂದು ಮಥುರನಾಥ ಅಪೇಕ್ಷೆ ಪಟ್ಟ.  ರಾಮಕುಮಾರನೂ ತಮ್ಮನ್ನನ್ನು ಯಾವುದಾದರೂ ಒಂದು ಕೆಲಸದಲ್ಲಿ ನಿಲ್ಲಿಸಬೇಕೆಂದು ಬಯಸಿದ್ದನು.ಅಣ್ಣನ ಅಣತಿಯನ್ನು ಮೀರಲಾರದೆ ಗದಾಧರ ರಾಧಾಗೋವಿಂದ ಮಂದಿರದ ಪೂಜೆಯ ಕೆಲಸಕ್ಕೆ ಒಪ್ಪಿಕೊಂಡ. ತಮ್ಮನ ಶ್ರದ್ದೇಯನ್ನು ಕಂಡು ರಾಮಕುಮಾರನು  ಆಗ್ಗಾಗ್ಗೆ ಜಗನ್ಮಾತೆಯ ಪೂಜೆಯನ್ನು ತಮ್ಮನಿಗೆ ವಹಿಸಿ ತಾನು ರಾಧಾಗೋವಿಂದನ ಪೂಜೆಗೆ ಹೋಗುತ್ತಿದ್ದನು. ಕೆಲವು ಕಾಲದ ನಂತರ ರಾಮಕುಮಾರನಿಗೆ ಆರೋಗ್ಯ ಕೆಟ್ಟಿತು.  ಗದಾಧರನೇ ಕಾಳಿಕಾ ಮಂದಿರದಲ್ಲಿಯೂ ಪೂಜಾ ಕಾರ್ಯವನ್ನು ಕೈಗೊಳ್ಳಬೇಕಾಯಿತು. ಇದರಿಂದ ಮಥುರನಾಥನಿಗೂ ಸಂತೋಷವಾಯಿತು.

ಬಾಲಕನ ಮನಸ್ಸು ಆನಂದದಲ್ಲಿ ತಲ್ಲೀನವಾಯಿತು.

ವಿಶ್ರಾಂತಿಗಾಗಿ ರಾಮಕುಮಾರನು ತನ್ನ ಹಳ್ಳಿಗೆ ಹೋದವನು ಅಸ್ವಸ್ಥತೆಯಿಂದ ಅಲ್ಲಿಯೇ ಕಾಲವಾದನು.

ಈ ಸಮಯಕ್ಕೆ ಸರಿಯಾಗಿ ಗದಾಧರನ ನೆಂಟನೊಬ್ಬ ದಕ್ಷೀಣೇಶ್ವರಕ್ಕೆ ಜೀವನೋಪಾಯಕ್ಕೆ ಬಂದ. ಅವನ ಹೆಸರು ಹೃದಯರಾಮ. ವಯಸ್ಸಿನಲ್ಲಿ ಗದಾಧರನಿಗಿಂತ ಕೆಲವು ವರ್ಷ ಚಿಕ್ಕವನು. ಜಗನ್ಮಾತೆಯ ಪೂಜೆಯ ಹ ಒಣೆ ಗದಾಧರನ ಮೇಲೆ ಬಿತ್ತು. ಮಾತೆಯನ್ನು ಅಲಂಕರಿಸುವ ಕೆಲಸ ಹೃದಯನಿಗಾಯಿತು.

ಗದಾಧರನ ಜಗನ್ಮಾತೆಯ ಅರ್ಚಕನಾಗಿ ನಿಂತಂದಿನಿಂದ ಅವನ ಜೀವನದಲ್ಲಿ ರಾಸಮಣಿಯ ಅಳಿಯ ಮಥುರನಾಥ ಅತಿ ಮುಖ್ಯವಾದ ಪಾತರ ವಹಿಸಿದ. ಗದಾಧರನಿಗೆ ಸಾಧನೆ ಸಮಯದಲ್ಲಿ ಬೇಕಾಗುವ ಸೌಕರ್ಯಗಳನ್ನೆಲ್ಲ ಒದಗಿಸಿದ. ಗದಾಧರನನ್ನು ತನ್ನ ಇಷ್ಟದೈವದಂತೆ ಭಾವಿಸಿದ.

ಜಗನ್ಮಾತೆಯ ಅರ್ಚಕ :

ರಾಮಕೃಷ್ಣ ಜಗಜ್ಜನನಿಯ ಅರ್ಚಕರಾದ ಮೇಲೆ ಬೆಳಕು ಹರಿಯುವ ಮುನ್ನವೇ ಮಾತೆಗಾಗಿ ಹೂವು ತರಲು ತೋಟಕ್ಕೆ ಹೋಗುವರು. ಸುಗಂಧ ದ್ರವ್ಯಗಳಲ್ಲಿ ಸ್ನಾನ ಮಾಡುವರು. ಭಕ್ತಿಯಿಂದ ಗುಡಿಗೆ ಹೋಗುವರು. ಗಂಧ ತೇದು, ದೀಪ ಹೊತ್ತಿಸಿ ಪೂಜೆ ಮಾಡುವರು: ನೈವೇದ್ಯ ಮಾಡುವರು. ಪೂಜೆ ಮುಗಿದ ಮೇಲೆ ತಾಯಿಯ ವಿಗ್ರಹದ ಎದುರು ಕುಳಿತು ಧ್ಯಾನ ಮಾಡುವರು. ಗುಡಿಯಿಂದ ಹೊರಗೆ ಬಂದ ನಂತರ ಕಾಡಿನಲ್ಲಿನ ಮರಗಳ ಕೆಳಗೆ ಕುಳಿತು ಧ್ಯಾನ ಮಾಡುವರು.

ರಾಮಕೃಷ್ಣರು ದಿನವೂ ತಮ್ಮಲ್ಲಿಯೇ ಪ್ರಶ್ನೆ ಮಾಡಿಕೊಳ್ಳತೊಡಗಿದರು. ಉಚ್ಛ ವೇದಿಕೆಯ ಮೇಲೆ ಬೆಳ್ಳಿಯಿಂದ ಮಾಡಿದ ಸಾವಿರಾರು ಎಸಳಿನ ತಾವರೆ. ಅದರ ಮೇಲೆ ಗಾಢನಿದ್ರೆಯಲ್ಲಿ ಮಲಗಿರುವ ಹಾಲುಗಲ್ಲಿನ ಶಿವನ ಮೂರ್ತಿ. ವಿಶಾಲ ವೃಕ್ಷದ ಮೇಲೆ ಜಗನ್ಮಾತೆಯಾದ ಭವತಾರಿಣಿ ನಿಂತಿದ್ದಾಳೆ. ವಿವಿಧ ವಸ್ತ್ರಭೂಷಿತೆಯಾಗಿ, ರುಂಡಮಾಲಿನಿಯಾಗಿ, ಅಭಯಹಸ್ತೆಯಾಗಿ, ನಾಟ್ಯ ಭಂಗಿಯಲ್ಲಿ ನಿಂತಿದ್ದಾಳೆ. ಮಾತೆಯ ಈ ಕೆತ್ತನೆಯ ವಿಗ್ರಹವು ಏನು? ಇದರಲ್ಲೇನು ಅಡಗಿದೆ? ಇದು ಜೀವಂತ ವಾಗಿದೆಯೇ? ಮಾತೆ ಎಲ್ಲಿದ್ದಾಳೆ? ಮರದ ಕೆಳಗೆ ಕುಳಿತು ಈ ಪ್ರಶ್ನೆಗಳ ಮಾಲಿಕೆಗೆ  ಉತ್ತರ ಯೋಚಿಸುತ್ತಿದ್ದರು.  ದಿನಗಳು ಕಳೆದಂತೆ ರಾಮಕೃಷ್ಣರ ಮನಸ್ಸೆಲ್ಲ ಈ ಪ್ರಶ್ನೆಗಳಲ್ಲೆ ನೆಟ್ಟಿತು. ದೇಹದ ಅಗತ್ಯಗಳ ನೆನಪೇ ಇಲ್ಲ. ಸರಿಯಾಗಿ ನಿದ್ರೆಯಿಲ್ಲ, ಊಟವಿಲ್ಲ. ತಾಯಿಯ ವಿಗ್ರಹದ ಎದುರು ಅಲುಗಾಡದೆ ಬಹುಕಾಲ. ಧ್ಯಾನಾಸಕ್ತರಾಗಿ ಕುಳಿತು ಬಿಡುವರು.

ಇದೇನಿದು !”:

ರಾಮಕೃಷ್ಣನ ಹೊಸ ಜೀವನಕ್ಕೆ ದಕ್ಷೀಣೇಶ್ವರದ ಸನ್ನಿವೇಶ ಅತಿ ಮುಖ್ಯವಾದ ಹಿನ್ನೆಲೆಯಾಯಿತು. ಭವ್ಯವಾದ ಕಾಳಿಕಾ ಮಂದಿರ- ಅದರ ಮುಂದುಗಡೆ ವಿಶಾಲವಾದ ನಾಟ್ಯ ಮಂದಿರ: ಮತ್ತೊಂದು ಕಡೆ ರಾಧಾಗೋವಿಂದನ ದೇವಸ್ಥಾನ, ಶಿಶು ಮಂದಿರಗಳ ಸಾಲು,ವಿಸ್ತಾರವಾದ ಅಂಗಳ: ಪ್ರಾಕಾರವನ್ನು ದಾಟಿದೊಡನೆ ಗಂಗಾನದಿಯ ತೀರದಲ್ಲಿ ದಟ್ಟವಾದ ಕಾಡು, ನಿರ್ಜನ ಪ್ರದೇಶ- ಆಧ್ಯಾತ್ಮಿಕ ಸಾಧನೆಗೆ ಯೋಗ್ಯ ಸ್ಥಳ. ಅಲ್ಲಿ ರಾಮಕೃಷ್ಣರು ಪೂಜಾಕಾರ್ಯ ಆರಂಭಿಸಿದರು.

ಹಗಲಾಗಲಿ, ನಡುರಾತ್ರಿಯಾಗಲಿ ಸಮಯವನ್ನು ಲೆಕ್ಕಿಸದೇ ರಾಮಕೃಷ್ಣರು ಮಂದಿರವನ್ನು ಬಿಟ್ಟು ಧ್ಯಾನಕ್ಕಾಗಿ ಸಮೀಪದ ಅರಣ್ಯಕ್ಕೆ ಹೋಗುತ್ತಿದ್ದರು. ಅವರು ಎಲ್ಲಿ ಹೋಗುತ್ತಾರೆ, ಗಂಟೆ ಗಟ್ಟಲೆ ಏನು ಮಾಡುತ್ತಾರೆ ಎಂವಬುವುದು ಹೃದಯರಾಮನಿಗೆ ಒಗಟಾಯಿತು. ಒಂದು ರಾತ್ರಿ ಪರಮಹಂಸರು ಹೊರ ಬೀಳುವುದನ್ನೇ ನಿರೀಕ್ಷಿಸುತ್ತಾ ಕಾದು ನಿಂತಿದ್ದ ಹೃದಯರಾಮ ಅವರನ್ನು ಗುಟ್ಟಾಗಿ ಹಿಂಬಾಲಿಸಿದ. ಆದರೆ ಕಣ್ಣಿಗೆ ಕಂಡ ನೋಟದಿಂದ ದಿಗ್ಬ್ರಾಂತನಾದ. ನೆಲ್ಲಿಯ ಮರದ ಬುಡದಲ್ಲಿ ಧ್ಯಾನಾಸಕ್ತರಾಗಿ ಕುಳಿತಿದ್ದ ರಾಮಕೃಷ್ಣರು ಸಂಪೂರ್ಣವಾಗಿ ನಗ್ನರಾಗಿದ್ದರು. ಬಟ್ಟೆಗಳೆಲ್ಲ ದೂರದಲ್ಲಿ ಬಿದ್ದಿದ್ದವು.  ಜನಿವಾರವೂ ದೂರ ಬಿದ್ದಿತು. ಹೃದಯನು ಮಾವನಿಗೆ ಹುಚ್ಚು ಹಿಡಿದಿರಬೇಕೆಂದು ನಿರ್ಧರಿಸಿದ. ಅವರ ಬಳಿಗೆ ಹೋಗಿ ಗಟ್ಟಿಯಾಗಿ ಕೂಗಿದ: “ಇದೇನಿದು ಏಕೆ ಬೆತ್ತಲೆಯಾಗಿದ್ದೀಯೆ?” ರಾಮಕೃಷ್ಣರು ಮೊದಲು ಮಾತನಾಡಲೇ ಇಲ್ಲ. ಕೊನೆಗೆ ಕಣ್ದರೆದು ನೋಡಿ, “ಧ್ಯಾನ ಮಾಡುವಾಗ ಬಂಧನಗಳೊಂದು ಇರಬಾರದು. ಲಜ್ಜೆ, ಕುಲ, ಜಾತಿ ಅಭಿಮಾನ- ಈ ಬಂಧನಗಳನ್ನೆಲ್ಲ ತೆಗೆದೊಗೆಯಬೇಕು. ನಾನು ಬ್ರಾಹ್ಮಣ, ಎಲ್ಲರಿಗಿಂತ ಹೆಚ್ಚಿನವನು ಎಂಬ ಅಹಂಕಾರ ಜನಿವಾರದಿಂದ  ಬಂದೀತು. ಆದ್ದರಿಂದಲೇ ಜನಿವಾರ, ಬಟ್ಟೆ ಎಲ್ಲವನ್ನು ತಗೆದು ಧ್ಯಾನ ಮಾಡುತ್ತಿದ್ದೆನೆ. ಹಿಂದಿರುಗುವಾಗ ಅವುಗಳನ್ನೆಲ್ಲಾ ಮತ್ತೇ ಹಾಕಿಕೊಂಡು ಬರುತ್ತೇನೆ” ಎಂದು ಗಂಭೀರವಾಣಿಯಿಂದ  ಹೇಳಿದರು. ಹೃದಯ ಮರುಮಾತನಾಡದೆ ಹಿಂದಿರುಗಿದ.

ಜಗನ್ಮಾತೆಯ ದರ್ಶನ :

ರಾಮಕೃಷ್ಣರು ಜಗನ್ಮಾತೆಯ ಪೂಜೆ ಮಾಡುತ್ತಿದ್ದರಲ್ಲವೇ? ಅವಳ ವಿಗ್ರಹವನ್ನು ಪೂಜಿಸಿ ಅವರಿಗೆ ಸಮಾಧಾನವಾಗಲಿಲ್ಲ. ಜಗನ್ಮಾತೆಯನ್ನು ನೋಡಬೇಕೆಂಬ ಆಸೆ ಅವರ ಜೀವನವೆಲ್ಲಾ ವ್ಯಾಪಿಸಿತು. ಕಂಬನಿ ತುಂಬಿ ಜಗನ್ಮಾತೆಗಾಗಿ ಅಳುವರು. “ಹೇ ಜಗನ್ಮಾತೆ, ನೀನು ಎಲ್ಲಿರುವೆ? ಮೈದೋರು, ನನಗೆ ಸುಖ ಬೇಡ, ಐಶ್ವರ್ಯ ಬೇಡ, ಸ್ನೇಹಿತರು ಬೇಡ. ತಾಯೇ, ನಿನ್ನನ್ನು ನೋಡುವುದೊಂದೇ ನನ್ನಗುರಿ” ಎಂದು ಉದ್ವಿಗ್ನರಾಗಿ ಅಳತೊಡಗುವರು.

ಕಡೆಗೂ ರಾಮಕೃಷ್ಣರು ಜಗನ್ಮಾತೆಯ ದರ್ಶನ ಮಾಡಿದರು ಎಂದು ಭಕ್ತರು ಒಂದು ಸುಂದರವಾದ ವಿವರಣೆಯನ್ನು ಕೊಡುತ್ತಾರೆ.

ಬಹುದಿನಗಳಾದರೂ ರಾಮಕೃಷ್ಣರಿಗೆ ದೇವಿ ಮೈದೋರಲಿಲ್ಲ. ಒಂದು ದಿನ ಗರ್ಭಗುಡಿಯೊಳಗೆ ಇರುವಾಗ :”ದೇವಿಯ ದರ್ಶನ ಪಡೆಯದೇ ಬಾಳು  ನಿರರ್ಥಕ. ಇದು ಕೊನೆಗಾಳಲಿ” ಎನಿಸಿತು. ಕೂಡಲೇ ಬಲಿ ಕೊಡುವ ಕತ್ತಿಯನ್ನು ತೆಗೆದುಕೊಂಡರು. ತಮ್ಮನ್ನೇ ಇರಿದುಕೊಳ್ಳಬೇಕೆಂದು ಪ್ರಯತ್ನಿಸಿದರು.

ಕ್ಷಣದಲ್ಲಿ ರಾಮಕೃಷ್ಣರಿಗೆ ಪ್ರಜ್ಞೆ ತಪ್ಪಿತು. ಬಹಳ ಹೊತ್ತಿನ  ಮೇಲೆ ಎಚ್ಚೆತ್ತರು.

ಈ ಅವಸ್ಥೆಯಲ್ಲಿ ಅವರಿಗೆ ತಾಯಿಯ ದರ್ಶನವಾಯಿತು. ದೇವಾಲಯವೇ ಮಾಯವಾಯಿತಂತೆ. ಎಲ್ಲೆಲ್ಲೂ ಮೇರೆ ಇಲ್ಲದ ಬೆಳಕು ಕಂಡಿಂತಂತೆ. ಅವರನ್ನು ನುಂಗಿ ಬಿಡುವಂತೆ, ಭಯಂಕರ ಶಬ್ದ ಮಾಡುತ್ತ ಬೆಳಕಿನ ಅಲೆಗಳು ಅವರತ್ತ ನುಗ್ಗಿ ಬಂದಂತೆ ಅವರಿಗೆ ಅನುಭವ ವಾಯಿತಂತೆ. ಪ್ರಜ್ಞೇ ಬಂದಾಗ “ತಾಯೆ ತಾಯೆ ’ ಎಂದು ದೇವಿಯನ್ನು ಕೂಗಲಾರಂಭಿಸಿದರು.

ಬಾಹ್ಯ ಪ್ರಪಂಚಕ್ಕೆ ಬಂದ ಮೇಲೆ ಅವರ ನಡತೆ ಸಂಪೂರ್ಣವಾಗಿ ಬದಲಾಯಿಸಿತು. ಅವರ ಪಾಲಿಗೆ ಕಲ್ಲಿನ ವಿಗ್ರಹ ಚೈತನ್ಯಮೂರ್ತಿಯಾಯಿತು. ತಾಯಿಯೊಡನೆ ಸಲಿಗೆಯಿಂದ ವರ್ತಿಸುವ ಮಗುವಿನಂತೆ ಅವರು ಜಗನ್ಮಾತೆಯೊಡನೆ ವರ್ತಿಸುತ್ತಿದ್ದರು. ಆಗಾಗ ತಾಯಿಯನ್ನು  ಜೀವಂತವಾಗಿ ಕಂಡಂತೆ ಭಾಸವಾಗುತ್ತಿತ್ತು. ಒಂದು ಸಲ ಮಾತೆಯು ತನ್ನ ಮಂದಿರದ ಮೆಟ್ಟಿಲನ್ನೇರಿ ಗಂಗೆಯ ಮೇಲೆ ಬೀಸಿ ಬರುವ ತಂಗಾಳಿಗೆ ಮೈಗೊಟ್ಟು ಹೆರಳನ್ನು ಬಿಡಿಸಿಕೊಳ್ಳುವಂತೆ ಕಂಡಳು.

ಹುಚ್ಚನೆ ? ಮಹಾಪುರುಷನೇ?

ಜಗನ್ಮಾತೆ ಪ್ರತ್ಯೇಕ್ಷಳಾದ ನಂತರ ರಾಮಕೃಷ್ಣರ ಪೂಜಾವಿಧಾನ ಬದಲಾಯಿತು. ಜಗನ್ಮಾತೆ ತಮ್ಮಲ್ಲಿಯೂ ಇದ್ದಾಳೆ ಎನ್ನಿಸುತ್ತಿತ್ತು ಅವರಿಗೆ. ನೈವೇದ್ಯಕ್ಕೆ ಮಾಡಿದುದನ್ನು ಕೆಲವು ವೇಳೆ ತಾವು ಮೊದಲು ರುಚಿ ನೋಡುವರು.  ಅನಂತರ ದೇವಿಗೆ ಅರ್ಪಣೆ ಮಾಡುವರು. ಹೂವು, ಗಂಧ ದೇವಿಗೆ ಅರ್ಪಣೆ ಮಾಡುವುದಕ್ಕೆ ಮುಂಚೆ, ಅವುಗಳಿಂದ ತಮ್ಮನ್ನೇ ಅಲಂಕರಿಸಿಕೊಳ್ಳುತ್ತಿದ್ದರು.

ಇದನ್ನೆಲ್ಲ ಕಂಡು ಅನೇಕರಿಗೆ ಆಶ್ಚರ್ಯ, ಹಾಸ್ಯ, “ಈತನಿಗೆ ಹುಚ್ಚು” ಎಂದೇ ಅವರ ತೀರ್ಮಾನ.

ದೇವಸ್ಥಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಮಥುರನಾಥನಿಗೂ ಈ ಸುದ್ಧಿ ತಿಳಿಯಿತು. ಆತನಿಗೆ ಮೊದಲಿನಿಂದಲೂ ರಾಮಕೃಷ್ಣರ ವಿಷಯದಲ್ಲಿ ಪ್ರೀತಿ, ಗೌರವ. ಒಂದು ದಿನ ಅವನೇ ಬಂದು ಅವರ ಪೂಜಾ ವಿಧಾನವನ್ನು ನೋಡಿದರು. ಇದು ಹುಚ್ಚಲ್ಲ, ದೈವೋನ್ಮಾದವೆಂದು ತಿಳಿದು , ಯಾರೂ ಅವರಿಗೆ ತೊಂದರೆ ಕೊಡದಂತೆ ಎಚ್ಚರಿಸಿ ಹೋದನು.

ರಾಮಕೃಷ್ಣರು ಶಿಷ್ಯರಿಗೆ ಉಪದೇಶ ಮಾಡುತ್ತಿರುವುದು.

ಒಮ್ಮೆ ರಾಮಕೃಷ್ಣರು ಪೂಜೆ ಮಾಡುತ್ತಿದ್ದಾಗ ರಾಣಿ ರಾಸಮಣಿ ಬಂದಳು. ಪೂಜೆಯಾದ ಮೇಲೆ ರಾಮಕೃಷ್ಣರನ್ನು ಒಂದೆರಡು ಭಕ್ತಿಗೀತೆ ಹಾಡುವಂತೆ ಕೇಳಿಕೊಂಡಳೂ. ರಾಮಕೃಷ್ಣರು ಹಾಡಲು ಪ್ರಾರಂಭಿಸಿದರು. ರಾಸಮಣಿಗೆ ಸಂಬಂಧಿಸಿದ ವಿಷಯವೊಂದು ಕೆಲವು ದಿನಗಳಲ್ಲಿ ನ್ಯಾಲಯದ ಮುಂದೆ ಬರುವುದರಲ್ಲಿತ್ತು. ರಾಮಕೃಷ್ಣರು ಹಾಡುತ್ತಿದ್ದಂತೆ ಅವಳ ಮನಸ್ಸು ಆ ವಿಷಯಕ್ಕೆ ಸರಿಯಿತು. ಹಾಡಿನ ಮೇಲೆ ಗಮನವಿರಲಿಲ್ಲ.

ರಾಮಕೃಷ್ಣರಿಗೆ ಇದು ಅರ್ಥವಾಯಿತು. ಆಕೆಯ ಹತ್ತಿರ ಹೋಗಿ, ಇಲ್ಲಿಯೂ ಪ್ರಾಪಂಚಿತ ಚಿಂತನೆಯೇ?” ಎಂದು ಕೆನ್ನೆಗೆ ಒಂದು ಏಟು ಕೊಟ್ಟರು.

ಅಲ್ಲಿದ್ದವರಿಗೆ ದಿಗ್ಭ್ರಮೆ. ರಾಣಿ ರಾಸಮಣಿಗೆ ಈ ಅರ್ಚಕ ಕೆನ್ನೆಗೆ ಹೊಡೆಯುವುದೇ? ಆದರೆ ರಾಸಮಣಿ ತನ್ನ ತಪ್ಪನ್ನು ಅರಿತುಕೊಂಡಳು, ಜಗನ್ಮಾತೆಯೇ ತನಗೆ ಈ ರೀತಿ ಶಿಕ್ಷಕಿಸಿದಳೆಂದು ಭಾವಿಸಿದಳು. ಇಂತಹ ಕೆಲವು ದೃಶ್ಯಗಳನ್ನು ಕಂಡ ಇತರರು ರಾಮಕೃಷ್ಣರು ನಿಜವಾಗಿ ಹುಚ್ಚರೆಂದು ಭಾವಿಸಿದರು. ಆದರೆ ರಾಸಮಣಿಗೆ ಮತ್ತು ಮಥುರನಾಥನಿಗೆ ರಾಮಕೃಷ್ಣರು ಮಹಾಭಕ್ತರೆಂದು ಗೊತ್ತಾಯಿತು.

ಮದುವೆ :

ರಾಮಕೃಷ್ಣರು ಹುಚ್ಚರಾಗಿ ಹೋಗಿರುವರೆಂಬ ಸುದ್ಧಿ ಚಂದ್ರಮಣಿ ದೇವಿಗೆ ತಲುಪಿತು. ಆಕೆ ಮಗನನ್ನು ಊರಿಗೆ ಕರೆದುಕೊಂಡು ಬಂದರು. ಔಷದೋಪಚಾರ, ಯಂತ್ರ, ಮಂತ್ರಗಳೆಲ್ಲವನ್ನೂ ಮಾಡಿಸಿದರು.  ಆದರೆ ಆವರ ಹುಚ್ಚು ಬಿಡುವಂತೆ ಕಾಣಲಿಲ್ಲ. ರಾಮಕೃಷ್ಣರು ಒಂದು ಸಲ ವಿನೋದವಾಗಿ, “ನನಗೆ ರೋಗವಿದ್ದರೆ ಗುಣ ಮಾಡಿ: ಆದರೆ ದೇವರ ಹುಚ್ಚನ್ನು ಮಾತ್ರ ಬಿಡಿಸಬೇಡಿ” ಎಂದರು.

ಮಗನಿಗೆ ಮದುವೆ ಮಾಡಿದರೆ ಹುಚ್ಚ ಬುದ್ಧಿ ಸ್ಥಿಮಿತಕ್ಕೆ ಬರುವುದೆನೋ ಎಂದು ಚಂದ್ರಮಣಿದೇವಿ ಅಲೋಚಿಸಿದರು. ಸುಮಾರು ಮೂರು ಮೈಲಿ ದೂರದ ಜಯರಾಮವಟಿಯ ಎಂಬ ಗ್ರಾಮದಲ್ಲಿ ರಾಮಚಂದ್ರ ಮುಖ್ಯೋಪದ್ಯಾಯರ ಮನೆಯಲ್ಲಿ ಶಾರದಾದೇವಿ ಎಂಬ ಹುಡುಗಿ ಇದ್ದಳು. ಆಕೆಯೊಂದಿಗೆ ರಾಮಕೃಷ್ಣರ ಮದುವೆಯಾಯಿತು.  ಆಗ ರಾಮಕೃಷ್ಣರಿಗೆ ೨೩ ವರ್ಷ ವಯಸ್ಸು. ಶಾರದಾದೇವಿಗೆ ೫ ವರ್ಷ.

ಸಾಧಕ :

ಮದುವೆಯಾದ ಕೆಲವು ತಿಂಗಳ ಮೇಲೆ ರಾಮಕೃಷ್ಣರು ದಕ್ಷೀಣೇಶ್ವರಕ್ಕೆ  ಹಿಂದಿರುಗಿದರು. ಅವರು ದೇವಿಯ ದರ್ಶನವನ್ನೇನೊ ಪಡೆದಿದ್ದರು. ಆದರೆ ಅವರಿಗೆ ಅದರಿಂದ ತೃಪ್ತಿಯಾಗಲಿಲ್ಲ. ದೇವರನ್ನು ಎಷ್ಟೆಷ್ಟು ರೂಪಿನಲ್ಲಿ ನೋಡಲು ಸಾಧ್ಯವೋ ಅಷ್ಟು ರೂಪಿನಲ್ಲೆಲ್ಲಾ ನೋಡಲು ಬಯಸಿದರು. ಕೆಲವು ಭಾವಗಳ ಮೂಲಕ ದೇವರನ್ನು ಪ್ರೀತಿಸಿದರು. ಹಲವು ಸಾಧನೆಗಳನ್ನು ಮಾಡಿದರು.  ಹಲವು ಧರ್ಮಗಳನ್ನು ಅನುಷ್ಠಾನ ಮಾಡಿದರು. ಹಲವು  ದಾರಿಗಳಲ್ಲಿ ನಡೆದು ಒಂದೇ ಸತ್ಯದೆಡೆಗೆ ಬಂದರು. ಇವರಿಗೆ ಎಲ್ಲ ಧರ್ಮಗಳಲ್ಲಿರುವ ಒಂದೇ ಸತ್ಯದ ಅನುಭವವಾಯಿತು.

ರಾಮಕೃಷ್ಣರು ಗುರುಗಳನ್ನು ಹುಡುಕಿಕೊಂಡು ಹೋಗಲಿಲ್ಲ. ಗುರುಗಳೇ ಇವರಿದ್ದೆಡೆಗೆ ಬಂದರು. ಪೂರ್ವ ಬಂಗಾಳದಿಂದ ಭೈರವಿ ಬ್ರಾಹ್ಮಣಿ ಎಂಬಾಕೆ ಅವರಿದ್ದ ಸ್ಥಳಕ್ಕೆ ಬಂದಳು. ಭಕ್ತಿ ಮಾರ್ಗದಲ್ಲಿ ಹೆಚ್ಚು ವಿಶ್ವಾಸವಿದ್ದ ಅವಳ ಆಗಮನದಿಂದ ರಾಮಕೃಷ್ಣರ ಸಾಧನೆಗೆ ಸಹಾಯವಾಯಿತು. ಭೈರವಿಯ ನೇತೃತ್ವದಲ್ಲಿ ತಮ್ಮ ಸಾಧನೆಗಳನ್ನು ಮುಂದುವರೆಸಿದರು. ರಾಮಕೃಷ್ಣರು ಮಹಾಭಕ್ತರು, ಅಲ್ಲದೇ ಅವತಾರ ಪುರುಷರು ಎಂದು ಭೈರವಿಯು  ಹೇಳತೊಡಗಿದಳೂ. ಇದನ್ನು ಕೇಳೀ ರಾಮಕೃಷ್ಣರು ಮುಗುಳ್ನಗೆಯಿಂದ, ಸಧ್ಯಕ್ಕೆ ನಾನು ಅವತಾರವೋ ಅಲ್ಲವೋ  ಅದು ಹೇಗಾದರೂ, ಇರಲಿ, ಹುಚ್ಚನಲ್ಲ ಎಂದು ಗೊತ್ತಾಯಿತಲ್ಲ, ಅಷ್ಟೇ ಸಾಕು” ಎಂದರು.

ಎಲ್ಲ ಮತಗಳ ಮಾರ್ಗ :

೧೮೬೪ರಲ್ಲಿ ತೋತಾಪುರಿ ಎಂಬಾತ ಬಂದ. ಆತ ಚಿಕ್ಕ ವಯಸ್ಸಿನಿಂದ ಆಧ್ಯಾತ್ಮಿಕ ಸಾಧನೆಗಳನ್ನು ಮಾಡಿದವನು. ಅಧ್ವೈತವನ್ನು ಅಭ್ಯಾಸ ಮಾಡಿದವನು.

ರಾಮಕೃಷ್ಣರು ಅವನಿಂದ ಸಂನ್ಯಾಸವನ್ನು ಸ್ವೀಕರಿಸಿರು. ಅದ್ವೈತ ಸಾಧನೆಯಲ್ಲಿಯೂ ಸಿದ್ಧ ಪಡೆದರು. ಸಂನ್ಯಾಸ ಸ್ವೀಕರಿಸಿದ ನಂತರ ರಾಮಕೃಷ್ಣರು ಮೂರು ದಿನಗಳ ಕಾಲ ಸಮಾಧಿಯಲ್ಲಿದ್ದರಂತೆ. ಇದನ್ನು ಕಂಡು ತೋತಾಪುರಿಯೆ ಬೆರಗಾಗಿ, ನಾನು ನಲವತ್ತು ವರ್ಷಗಳ ಕಾಲ ಕಷ್ಟಪಟ್ಟು ಸಾಧಿಸಿದುದನ್ನು ಈತ ಒಂದೇ ದಿನದಲ್ಲಿ ಸಾಧಿಸಿದನೇ!” ಎಂದನಂತೆ. ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಉತ್ತಮ ಪ್ರತಿನಿಧಿಗಳ ನೆರವೂ ದೊರಕಿತು. ದೊಡ್ಡ ವಿಧ್ವಾಂಸರು, ಮುಂದುವರಿದು ಸಾಧಕರು ರಾಮಕೃಷ್ಣರ ಸಮೀಪಕ್ಕೆ ಬಂದರು. ಎಲ್ಲರಿಂದಲೂ ರಾಮಕೃಷ್ಣರು ನಾನಾ ವಿಷಯಗಳನ್ನು ಕಲಿತರು. ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಮೂಲಕವೂ ದೇವರನ್ನು ಕಂಡರು.

ರಾಮಕೃಷ್ಣರು ತಮ್ಮದೇ ಆದ ಸರಳ ರೀತಿಯಲ್ಲಿ ಭಗವಂತನಿಗೂ ಭಕ್ತನಿಗೂ ಮಧ್ಯೆ ಇರುವ ತೊಡರುಗಳನ್ನು ನಿವಾರಿಸಲು ಮೊದಲು ಮಾಡಿದರು. ಹಣದ ಮೇಲಿನ  ಆಸೆ ಸಂಪೂರ್ಣವಾಗಿ ತೊಲಗುವಂತೆ ಒಂದು ಕೈಯಲ್ಲಿ ರೂಪಾಯಿಯನ್ನು ಇನ್ನೊಂದು ಕೈಯಲ್ಲಿ ಮಣ್ಣನ್ನು ತೆಗೆದುಕೊಂಡು ಗಂಗಾನದಿ ತೀರದ ಮೇಲೆ ಕುಳಿತು ಎರಡನ್ನೂ ನೀರಿಗೆ ಬಿಸಾಡಿದರು. ಇಡೀ ಸ್ತ್ರೀ ಕುಲವನ್ನೇ ಪೂಜ್ಯ ದೃಷ್ಟಿಯಿಂದ ನೋಡುತ್ತಿದ್ದರು. ಉಚ್ಛ ಬ್ರಾಹ್ಮಣನ ಕುಲದಿಂದ ಬಂದವನು ತಾನೆಂಬ ಅಹಂಕಾರವನ್ನು ಅಳಿಸುವುದಕ್ಕಾಗಿ ಚಂಡಾಲನ ಮನೆಯನ್ನು ಕೂಡ ಗುಡಿಸಿದರು.

ರಾಮಕೃಷ್ಣರು ಭಗವಂತನನ್ನು ಕೆಲವು ವೇಳೆ ತಂದೆಯಂತೆ ಕರೆರದರು. ಮಗುವಿನಂತೆ ಜಗನ್ಮಾತೆಯನ್ನು ನೆಚ್ಚಿಕೊಂಡರು. ಹನುಮಂತನೆಂಬ ದಾಸ್ಯಭಾವವನ್ನು ಅಭ್ಯಾಸ ಮಾಡಿದರು. ಭಗವಂತನನ್ನು ಸ್ನೇಹಿತನಂತೆ ತಿಳಿದು ಈ ಭಾವದಲ್ಲಿಯೂ ಕೆಲವು ಕಾಲ ತಲ್ಲೀನರದರು. ಯಶೋಧೆ ಶ್ರೀಕೃಷ್ಣನನ್ನು ಪ್ರೀತಿಸಿದ  ರೀತಿ ಭಗವಂತನನ್ನು ತನ್ನ ಮಗುವೆಂದು ತಿಳಿದರು. ಗೋಪಿಯರು ಶ್ರೀಕೃಷ್ಣನ್ನು ಪ್ರೀತಿಸಿದ ರೀತಿಯಲ್ಲಿ ರಾಮಕೃಷ್ಣರು ರಾಧಾರಮಣನನ್ನು ಪ್ರೀತಿಯಿಂದ ಸೇವಿಸಿದರು.

ಉಪಕಾರ ಎನ್ನುವುದು ಗರ್ವದ ಮಾತು :

ರಾಮಕೃಷ್ಣರು ದುಃಖಿಗಳನ್ನು ಕಂಡರೆ ಮರಗುತ್ತಿದ್ದರು.  ಒಮ್ಮೆ ಮಥುರಾನಾಥ ತನ್ನ ಜಮೀನುದಾರಿಯ ಕಂದಾಯ ವಸೂಲಿ ಮಾಡಲು ಹೋಗುವಾಗ ರಾಮಕೃಷ್ಣರನ್ನೂ ಜೊತೆಯಲ್ಲಿ ಕರೆದುಕೊಂಡು ಹೋದ. ಮಳೆಯಾಗದೆ ಬೆಳೆ ಸರಿಯಾಗಿ ಬಂದಿರಲಿಲ್ಲ. ರೈತರು ಬಹಳ ಕಷ್ಟದಲ್ಲಿದ್ದರು. ಅದನ್ನು ಕಂಡುರಾಮಕೃಷ್ಣರು ರೈತರಿಗೆ ಕಂದಾಯವನ್ನು ಬಿಟ್ಟು ಬಿಡುವಂತ, ಧನ ಧಾನ್ಯ ಹಂಚುವಂತೆ ಮಥುರನಿಗೆ ತಿಳಿಸಿದರು. ಮಥುರಾ ಮೊದಲು ಒಪ್ಪಲಿಲ್ಲ. ಆದರೆ ರಾಮಕೃಷ್ಣರು ರೈತರ ಪರವಾಗಿ ಬಹಳ ವಾದಿಸಿದ ನಂತರ ಮಥುರನು ರಾಮಕೃಷ್ಣರು ಹೇಳಿದಂತೆ ಮಾಡಬೇಕಾಯಿತು.

ಒಮ್ಮೆ ಶಿಷ್ಯನೊಬ್ಬ “ಬಡವರಿಗೆ ಉಪಕಾರ ಮಾಡಬೇಕು:” ಎಂದು ಹೇಳಿದ. ರಾಮಕೃಷ್ಣರು ಅವನನ್ನು ತರಾಟೆಗೆ ತೆಗೆದುಕೊಂಡು ಹೀಗೆಂದರು, ಎಲ್ಲ ಜೀವ ದಲ್ಲಿಯೂ ಈಶ್ವರನಿದ್ದಾನೆ. ಹೀಗಿರಲು “ಉಪಕಾರ” ಎನ್ನುವುದು  ಎಂತಹ ಗರ್ವದ ಮಾತು! ಉಪಕಾರ ಎನ್ನಬಾರದು, ಸೇವೇ ಎನ್ನಬೇಕು.  ನರನನ್ನು ನಾರಾಯಣ ಎಂದು ಭಾವಿಸಬೇಕು!”

ಮಹಾತ್ಮರ ಹೆಂಡತಿ ಮಹಾ ಮಾತೆ :

ರಾಮಕೃಷ್ಣರ ಹೆಂಡತಿ ಶಾರದಾದೇವಿಯವರು ಗಂಡನ ಜೊತೆಗಿರಲು ದಕ್ಷೀಣೇಶ್ವರಕ್ಕೆ ಬಂದರು. ಆಗ ಅವರಿಗೆ ಹದಿನೆಂಟು ವರ್ಷ. ರಾಮಕೃಷ್ಣರು ಅವರನ್ನು ಆದರದಿಂದ ಬರಮಾಡಿಕೊಂಡರು. ರಾಮಕೃಷ್ಣರು ಶಾರದಾದೇವಿಯನ್ನು ಧರ್ಮಪತ್ನಿಯಾಗಿ ಸ್ವೀಕರಿಸಿದ್ದರು.  ಆದಕಾರಣ ತಾವು ಯಾವುದನ್ನು ಮಾಡಬೇಕಾದರೂ ಶಾರದಾದೇವಿಯವರ ಒಪ್ಪಿಗೆ ಇಲ್ಲದೆ ಮಾಡಬಯಸಲಿಲ್ಲ. ರಾಮಕೃಷ್ಣರು ಶಾರದಾದೇವಿಯವರಿಗೆ, “ನನಗೆ ಎಲ್ಲ ಸ್ತ್ರೀಯರು ಜಗನ್ಮಾತೆಯ ಪ್ರತಿಬಿಂಬದಂತೆ ಕಾಣುವರು. ನಾನು ನಿನ್ನಲ್ಲಿಯೂ ಜಗನ್ಮಾತೆಯನ್ನೇ ನೋಡುತ್ತೇನೆ. ಆದರೆ ನೀನು ಸುಖಪಡಬೇಕು ಎಂದು ಆಸೆಪಟ್ಟರೆ ಅದಕ್ಕೂ ಸಿದ್ಧ ನಾಗಿದ್ದೇನೆ” ಎಂದು ಹೇಳಿದರು. ಆದರೆ ಶಾರದಾದೇವಿಯವರು ರಾಮಕೃಷ್ಣರಿಗೆ ತಕ್ಕ ಸತಿ.ತಾವೂ ಪತಿಯಂತೆಯೇ ಇರಲು ಬಯಸಿದರು. ಇದನ್ನು ಕೇಳಿ ರಾಮಕೃಷ್ಣರಿಗೆ ಅತ್ಯಾನಂದ ವಾಯಿತು. ಆಜನ್ಮ ಬ್ರಹ್ಮಚರ್ಯ ವ್ರತಧಾರಿಗಳಾಗಿ ಇಬ್ಬರು ಜಗನ್ಮಾತೆಯ ಕೆಲಸಕ್ಕೆ ಟೊಂಕಕಟ್ಟಿ ನಿಂತರು.

ರಾಮಕೃಷ್ಣರು ಸತಿಯ ಜೀವನದ ಜವಾಬ್ದಾರಿಯನ್ನೆಲ್ಲ ತೆಗೆದುಕೊಂಡರು. ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು: ಪೂಜೆ, ಜಪ, ಸಾಧನೆಗಳನ್ನು ಹೇಗೆ ಮಾಡಬೇಕು ಎಂಬುವುದರಿಂದ ಹಿಡಿದು ಯಾವ ಭಾವವಿಲ್ಲದೇ ಸಮಾಧಿಯವರೆವಿಗೆ ಅವರನ್ನು ಕರೆದುಕೊಂಡು ಹೋದರು. ಇದು ಅವರ ಜೀವನದ ವೈಶಿಷ್ಟ್ಯ.

ಗುರು :

ರಾಮಕೃಷ್ಣರು ಪರಿಪಕ್ವವಾದರು. ಪರಮಹಂಸರಾದರು. ಸರ್ವ ಧರ್ಮ ಸಾಧನೆಗಳಲ್ಲಿ ಸಿದ್ಧ ಹೊಂದಿ ಸರ್ವ ಧರ್ಮ ಸಮನ್ವಯಾಚಾರ್ಯರಾದರು.  ಅವರ ತಪೋಶಕ್ತಿ ಹಲವು ಸಾಧಕರನ್ನು ತನ್ನೆಡೆಗೆ ಸೆಳೆಯಿತು.  ರಾಮಕೃಷ್ಣರು ಜಗನ್ಮಾತೆಯನ್ನು ಕಾಣಲು ಎಷ್ಟು ತವಕಪಟ್ಟರೋ ಶಿಷ್ಯರನ್ನು ಬರಮಾಡಿಕೊಳ್ಳಲು ಅಷ್ಟೇ ತವಕಪಟ್ಟರು.

ಇಷ್ಟು ದಿನ ನನ್ನನ್ನೇಕೆ ಕಾಯಿಸಿದೆ?

೧೮೮೦ರ ನವೆಂಬರಿನಲ್ಲಿ ರಾಮಕೃಷ್ಣರು ಸುರೇಂದ್ರನಾಥ ಮಿತ್ರ ಎಂಬಾತನ ಮನೆಗೆ ಹೋಗಿದ್ದರು. ಅಲ್ಲೊಬ್ಬ ವರ್ಚಸ್ವೀ ತರುಣ ಒಂದು ಪ್ರಾರ್ಥನಾ ಗೀತೆಯನ್ನು ಹಾಡಿದ. ರಾಮಕೃಷ್ಣರಿಗೆ ಕೂಡಲೇ ಅರ್ಥವಾಯಿತು. ಇವನೊಬ್ಬ ಅಸಾಧಾರಣ ವ್ಯಕ್ತಿ. ಇವನಲ್ಲಿ ಒಂದು ವಿಶೇಷ ಶಕ್ತಿ ಪ್ರಜ್ವಲಿಸುತ್ತಿದೆ ಎಂದು. ತಮ್ಮನ್ನು ದಕ್ಷಿಣೇಶ್ವರದಲ್ಲಿ ಕಾಣುವಂತೆ ಹೇಳಿದರು. ಕೆಲವು ದಿನಗಳ ನಂತರ ಯುವಕ ಬಂದ. ಅವನ ಜೊತೆಗೆ ಮನಸ್ಸು ಬಂದಂತೆ ನಡೆಯುವ ಕೆಲವರು ಗೆಳೆಯರು,. ಅದರೆ ಯುವಕ ತನ್ನ ಯೋಚನೆಗಳಲ್ಲೆ ಮುಳುಗಿದ್ದ. ಒಂದು ಹಾಡು ಹೇಳುವಂತೆ ರಾಮಕೃಷ್ಣರು ಹೇಳಿದರು.  ಯುವಕ ಹಾಡಿದ ರಾಮಕೃಷ್ಣರು ಆವನ ಕೈ ಹಿಡಿದುಕೊಂಡು, “ಇಷ್ಟು ದಿನ ನನ್ನನ್ನೇಕೆ ಕಾಯಿಸಿದೆ? ಇಷ್ಟುತಡವಾಗಿ  ಬಂದೆಯಲ್ಲ”? ಎಂದು ಮರುಗಿದರು. “ಮತ್ತೇ ಬರುತ್ತೇನೆ. ಬೇಗ ಬರುತ್ತೇನೆ ಎಂದು ಮಾತುಕೊಡು” ಎಂದರು. ಯುವಕನಿಗೆ, “ಇದೇನು , ಇವರಿಗೆ ಹುಚ್ಚೇ!” ಎನ್ನಿಸಿತು. ಬಿಡಿಸಿಕೊಂಡರೆ ಸಾಕು ಎಂದು “ಮತ್ತೇ ಬರುತ್ತೇನೆ” ಎಂದ.

ಮತ್ತೇ ಬರುವುದಿಲ್ಲವೆಂದೇ ತೀರ್ಮಾನಿಸಿದ ಯುವಕನಿಗೆ ಬಾರದೆ ಇರಲು ಆಗಲಿಲ್ಲ. ಮತ್ತೇ-ಮತ್ತೇ- ಮತ್ತೇ-ಬಂದ.

ಈತನೇ ನರೇಂದ್ರ. ಮುಂದೆ ಸ್ವಾಮಿವಿವೇಕಾನಂದ ಎಂಬ ಹೆಸರಿನಿಂದ ಪೂರ್ವ -ಪಶ್ಚಿಮ ದೇಶಗಳನ್ನು ಬೆಳಗಿದ ಚೇತನ.

ರಾಮಕೃಷ್ಣರು ಒಬ್ಬ ನುರಿತ ಗುರುಗಳು. ಜಗತ್ತಿನ ರಹಸ್ಯವನ್ನು ಅರಿತವರು. ಶಿಷ್ಯರ ಲೋಪದೋಷಗಳನ್ನು ತಿದ್ದಿ ಅವರೆಲ್ಲರನ್ನೂ ಭಗವಂತನ ಪೂಜೆಗೆ ಯೋಗ್ಯವಾದ ಪುಷ್ಪಗಳನ್ನಾಗಿ ಮಾಡಿದರು.

ರಾಮಕೃಷ್ಣರು ಒಮ್ಮೆ ಹಾಸಿಗೆಯ ಮೇಲೆ ಕುಳಿತೊಡನೆಯೇ ಚೇಳು ಕುಟುಕಿದಂತಾಯಿತು. ಹಾಸಿಗೆಯನ್ನು ಹುಡುಕಿ ನೋಡಿದಾಗ ಒಂದು ರೂಪಾಯಿ ಇತ್ತು.  ಹಣದಿಂದ ದೂರವಿರಬೇಕು, ಹಣವನ್ನು ಮುಟ್ಟಬಾರದು ಎಂಬ ರಾಮಕೃಷ್ಣರ ಅರಿವು ಅವರ ದೇಹವನ್ನೆಲ್ಲ ಹೀಗೆ ಅವರಿಸಿತ್ತು. ಎಲ್ಲಿಯೂ ಹಾಸಿಗೆಯಲ್ಲಿ ರೂಪಾಯಿ ಇದ್ದರೆ ಮೈಗೆ ಚೇಳು ಕುಟುಕಿದಂತಾಯಿತು. ರಾಮಕೃಷ್ಣರ ತ್ಯಾಗ ಬುದ್ಧಿ ಅಷ್ಟು ಆಳಕ್ಕೆ  ಹೋಗಿತ್ತು.

ಒಬ್ಬ ಶಿಷ್ಯನ ಸ್ವಭಾವ ಉಗ್ರ. ಆ ಶಿಷ್ಯನು ದೋಣಿಯಲ್ಲಿ ಬರುತ್ತಿದ್ದಾಗ ಕೆಲವರು ರಾಮಕೃಷ್ಣರನ್ನು ದೂರುತ್ತಿದ್ದರು. ಇದನ್ನು ಕೇಳೀ ಕೋಪಗೊಂಡ ಶಿಷ್ಯನು ದೋಣಿಯ ಒಂದು ಕಡೆಗೆ ಹೋಗಿ, “ನೀವು ನನ್ನ ಗುರು  ನಿಂದನೆಯನ್ನು ನಿಲ್ಲಿಸದೆ ಇದ್ದರೆ ದೋಣಿಯನ್ನು ಮುಳುಗಿಸುತ್ತೇನೆ” ಎಂದು ದೋಣಿಯನ್ನು ಅಲುಗಾಡಿಸತೊಡಗಿದನು. ದೋಣಿಯಲ್ಲಿದ್ದವರು ಹೆದರು ಸುಮ್ಮನಾದರು. ಈ ಸಮಾಚಾರವನ್ನು ಕೇಳಿದ ರಾಮಕೃಷ್ಣರು “ನೀನು ಎಂತಹ ಅನಾಹುತ ಮಾಡುತ್ತಿದ್ದೆ ! ಅವರು ಬೈದರೆ ನನಗೇನಾಯಿತು?” ಎಂದರು.

ರಾಮಕೃಷ್ಣರ ಕೀರ್ತಿ ಹಬ್ಬುತ್ತಾ ಬಂದಿತು. ಕಲ್ಕತ್ತ ದಿಂದ ಅನೇಕ ಪ್ರಮುಖ ವ್ಯಕ್ತಿಗಳು ಇವರನ್ನು ನೋಡಲು ಬರುತ್ತಿದ್ದರು. ಬ್ರಹ್ಮ ಸಮಾಜದ ಮುಂದಾಳು ಕೇಶವಚಂದ್ರ ಸೇನ್ ಹತ್ತಿರದ ಭಕ್ತನಾದ. ಈಶ್ವರಚಂದ್ರ ವಿದ್ಯಾಸಾಗರ ಮತ್ತು ಮಹರ್ಷಿ ದೇವೇಂದ್ರನಾಥ ಠಾಕೂರರನ್ನು ನೋಡಲು ರಾಮಕೃಷ್ಣರೇ ಹೋದರು. ದಯಾನಂದ ಸರಸ್ವತಿ ಅವರು ರಾಮಕೃಷ್ಣರನ್ನು ನೋಡುವುದಕ್ಕೆ ದಕ್ಷೀಣೇಶ್ವರಕ್ಕೆ ಬಂದಿದ್ದರು.

ಶಿಷ್ಯರ ಅಗಮನ ಆರಂಭವಾಯಿತು. ತನ್ನ ಬಳೀಗೆ ಬಂದ ಜನಕ್ಕೆ ರಾಮಕೃಷ್ಣರು ಆಗಾಗ ಅವಶ್ಯಕವಾದ ಮಾತನ್ನು ಹೇಳುವರು. ಅವರ ಮಾತು, ಅನುಭವದಿಂದ ಬಂದದ್ದು, ಕಷ್ಟವಾದ ವಿಷಯವನ್ನು ಸುಲಭವಾಗಿ ವಿವರಿಸುವರು. ಆದು ಮನಸ್ಸಿಗೆ ನಾಟುವಂತೆ ಕತೆ ಹೇಳುವರು. ಅನೇಕ ಸಂದರ್ಭಗಳಲ್ಲಿ ಅದರಲ್ಲಿ ಹಾಸ್ಯ ಬೆರೆಸುವರು.

ಉಪದೇಶದ ವಿಧಾನ :

ನೂರಾರು ಉಪಮಾನ ಉಪಮೇಯಗಳಿಂದ, ಕತೆಗಳಿಂದ ಅನೇಕ ಗಹನ ವಿಷಯಗಳನ್ನು ಕುರಿತು ರಾಮಕೃಷ್ಣರು ಉಪದೇಶ ಮಾಡಿದರು.

ಒಮ್ಮೆ ಅವರು ಒಂದು ಕಡೆ ಹೇಳಿದರು ”

ಒಂದು ಕಡೆ ಮೀನುಗಾರರು ಮೀನುಗಳ ಹಿಡಿಯುತ್ತಿದ್ದರು. ಒಂದು ಹದ್ದು ಎರಗಿ ಒಂದು ಮೀನನ್ನು ಕಚ್ಚಿಕೊಂಡು ಹಾರಿತು. ಅಲ್ಲಿಯೇಕಾಗೆಗಳು ಹಾರಾಡುತ್ತಿದ್ದರು.  ಮೀನಿಗಾಗಿ ಅವು ಹದ್ದನ್ನು ಅಟ್ಟಿಸಿಕೊಂಡು ಹೋದವು. ಹದ್ದು ದಕ್ಷಿಣಕ್ಕೆ ಹಾರಿತು. ಕಾಗೆಗಳೂ ಬಿಡಲಿಲ್ಲ: ಉತ್ತರಕ್ಕೆ ಹರಿತು, ಕಾಗೆಗಳೂ ಬಿಡಲಿಲ್ಲ: ಪೂರ್ವಕ್ಕೆ  ಹೋಯಿತು. ಪಶ್ಚಿಮಕ್ಕೆ  ಸಾಗಿತು. ಏನಾದರೂ ಕಾಗೆಗಳೂ ಬಿಡಲಿಲ್ಲ. ಏನು ಮಾಡಬೇಕೆಂದು ತೋರದೆ ಹದ್ದು ದಿಕ್ಕುಗೆಟ್ಟು  ಹಾರಾಡಿತು. ಈ ಗೊಂದಲದಲ್ಲಿ ಮೀನು ಅದರ ಬಾಯಿಯಿಂದ ಕೆಳಗೆ ಬಿದ್ದಿತು. ಕೂಡಲೇ ಕಾಗೆಗಳು ಹದ್ದನ್ನು ಬಿಟ್ಟು ಮೀನನ್ನು ಹುಡುಕಲು ಹೊರಟವು. ಹದ್ದು ಒಂದು ಮರದ ಮೇಲೆ ಕುಳಿತು ಯೋಚಿಸಿತು : “ಆ ಸುಡುಗಾಡು ಮೀಣೇ ಎಲ್ಲ ದೂಃಖದ ಕಾರಣ. ಈಗ ಅದರ ಕಾಟ ತಪ್ಪಿತು. ಸಂತೋಷವಾಗಿದ್ದೇನೆ”.

ರಾಮಕೃಷ್ಣ ಪರಮಹಂಸರು ವಿವರಿಸಿದರು :ನನಗೆ ಹಣ ಬೇಕು, ಅಧಿಕಾರ ಬೇಕು, ಇದು ಬೇಕು, ಅದು ಬೇಕು ಎಂಬ ಆಸೆ ಹದ್ದಿನ ಬಾಯಿಯ ಮೀನಿನಂತೆ. ಅದಕ್ಕಾಗಿ ಏನೇನೋ ಮಾಡುತ್ತೇವೆ. ಕಷ್ಟ ಅನುಭವಿಸುತ್ತೆವೆ, ದಿಕ್ಕುಗೆಡುತ್ತೇವೆ. ಆಸೆ ಬಿಟ್ಟು ಹೋದರೆ ಶಾಂತಿ.

ದೇವರು :

ರಾಮಕೃಷ್ಣರ ಬಳಿ ಬಂದ ಶಿಷ್ಯರನೇಕರಿಗೆ ದೇವರಿದ್ದಾನೆಯೇ ಎಂಬುವುದನ್ನು ತಿಳಿಯುವ ಆಪೇಕ್ಷೆ. ಅವರಿಗೆಲ್ಲಾ ರಾಮಕೃಷ್ಣರು ಹೀಗೆ ಉಪದೇಶ ಮಾಡುವರು:

ದೇವರಿದ್ದಾನೆ, ರಾತ್ರಿ ಹೊತ್ತು ಆಕಾಶದಲ್ಲಿ ಹಲವು ನಕ್ಷತ್ಕರಗಳನ್ನು  ನೋಡುತ್ತೀರಿ. ಹಗಲಿನಲ್ಲಿ ಅವು ಕಾಣುವುದಿಲ್ಲ. ಆದರೆ ಹಗಲು ನಕ್ಷತ್ರಗಳಿಲ್ಲವೆಂದು ಹೇಳುವಿರೇನು? ಅದರಂತೆಯೇ ನೀವು ಆಜ್ಞಾನದಲ್ಲಿರುವಾಗ ದೇವರು ಕಾಣದೇ ಹೋದರೆ ದೇವರೇ ಇಲ್ಲರೆನ್ನಬೇಡಿ. ಮಧ್ಯೆ ತೆರೆದ ಹಾಕಿದರೆ ನಾವು ಒಬ್ಬರಿಗೊಬ್ಬರು ಕಾಣುವುದಿಲ್ಲ. ಆದರೆ ನಾವು  ಕಾಣದ ಮಾತ್ರಕ್ಕೆ ಒಬ್ಬರಿಗೊಬ್ಬರು ಇಲ್ಲವೆನ್ನಬಹುದೇ ! ದೇವರು ಹೀಗೆ ನಮ್ಮ ಅಹಂಕಾರದ ತೆರೆಯ ಮರೆಯಲ್ಲಿದ್ದಾನೆ. ನಾನು ಎನ್ನುವುದು ಅಜ್ಞಾನ. ನಾನಲ್ಲ ನೀನು ಎನ್ನುವುದೇ ಜ್ಞಾನ. ಒಳ್ಳೆಯದನ್ನು ಮಾಡಿದಾಗ ನಾನು ಮಾಡಿದೆನೆಂದು ಹೆಮ್ಮೆ ಪಡುವುದು, ಕೆಟ್ಟದನ್ನು ಮಾಡಿದಾಗ ದೇವರು ಮಾಡಿಸಿದರು ಎನ್ನುವುದು ಸರಿಯಾದುದಲ್ಲ.

“ಮನುಷ್ಯನಾಗಿ ಹುಟ್ಟಿದ ಮೇಲೆ ದೇವರನ್ನು ಕಾಣದೆ ಇದ್ದರೆ ಜನ್ಮ ವ್ಯರ್ಥ. ದೇವರನ್ನು ಕಾಣುವುದಕ್ಕೆ ಎಲ್ಲಿಯೂ ಹೋಗಬೇಕಾಗಿಲ್ಲ. ಒಬ್ಬನಿಗೆ ಅರ್ಧ ರಾತ್ರಿಯಲ್ಲಿ ಗುಡಿ ಗುಡಿ ಸೇದಬೇಕೆಂದು ಆಸೆಯಾಯಿತು. ಲಾಂದ್ರ ಹಿಡಿದುಕೊಂಡು ಹೋಗಿ ಪಕ್ಕದ ಮನೆಯವರನ್ನು ಎಬ್ಬಿಸಿ “ಸ್ವಲ್ಪ ಕೆಂಡ ಕೊಡಿ” ಎಂದು ಕೇಳಿದ. “ಕೈಯಲ್ಲಿ ಲಾಂದ್ರ ಹಿಡಿದಿದ್ದೀಯೆ. ಕೆಂಡ ಮಾಡಿಕೊಳ್ಳಲಾಗದೆ” ಎಂದು ಅವರು ನಕ್ಕರಂತೆ. ಮನುಷ್ಯನು ದೇವರನ್ನು ಹುಡುಕೊಂಡು ಹೋಗುವುದು ಇದರಂತೆಯೇ. ಅವನು ಹತ್ತಿರವೇ ಇದ್ದಾನೆ. ದೇಹ, ಮನಸ್ಸು, ಐಶ್ವರ್ಯ ಎಲ್ಲವನ್ನು ಅವನಿಗೆ ಅರ್ಪಿಸಬೇಕು.

“ದೇವರು ಎಲ್ಲರಲ್ಲಿಯೂ ಇರುವನು. ಹಾಲಿನಲ್ಲಿ ಬೆಣ್ಣೆ ಇದೆ ಎಂದು ಅರಚಿಕೊಂಡರೆ ಬೆಣ್ಣೆ ಸಿಗುವುದಿಲ್ಲ. ನಿಮಗೆ ಬೆಣ್ಣೆ ಬೇಕಾದರೆ ಹಾಲನ್ನು ಮೊಸರು ಮಾಡಿ ಕಡೆಯಬೇಕು. ಆಗ ಮಾತ್ರ ಬೆಣ್ಣೆ ಸಿಗುವುದಿಲ್ಲ. ನಿಮಗೆ ಬೆಣ್ಣೆ ಬೇಕಾಧರೆ ಹಾಲನ್ನು ಮೊಸರು ಮಾಡಿ ಕಡೆಯಬೇಕು. ಆಗ ಮಾತ್ರ ಬೆಣ್ಣೆ ಸಿಕ್ಕುವುದು. ಅದರಂತೆಯೇ ದೇವರನ್ನು ನೋಡಬೇಕೆಂದು ಇಚ್ಛೆ ಇದ್ದರೆ ಸಾಧನೆ ಮಾಡಬೇಕು “.

“ನಿಮಗೆ ಅನುಕೂಲ ತೋರಿದ ರೀತಿಯಲ್ಲಿ ಅವನನ್ನು ಪ್ರಾರ್ಥಿಸಿ. ಮನಃಪೂರ್ವಕವಾಗಿ ಪ್ರಾರ್ಥನೆ ಮಾಡಿದರೆ ಪ್ರಯೋಜನವುಂಟು. ಬಾಯಿ ಮಾತ್ರದಿಂದ ಮಾಢಿದ ಪ್ರಾರ್ಥನೆ ಫಲಿಸುವುದಿಲ್ಲ. ದೇವರನ್ನು ಕುರಿತ ನಂಬಿಕೆಯೂ ನಿಜವಾಗಬೇಕು”.

“ಒಮ್ಮೆ ಉಪ್ಪಿನ ಗೊಂಬೆಯೊಂದು ಸಮುದ್ರದ ಅಳವನ್ನು ಅಳೆಯಲು ಹೊರಟಿತು. ಸಮುದ್ರದಿಂದ  ಬಂದ ಮೇಲೆ ತನ್ನ ಅನುಭವವನ್ನು ಜನಕ್ಕೆ ಹೇಳಬೇಕೆಂಬುದು ಅದರ ಬಯಕೆ. ಸಮುದ್ರ ತೀರಕ್ಕೆ ಹೋಗುವುದೇ ತಡ, ಅದು ಕರಗಿ ಹೋಯಿತು. ಆಮೇಲೆ ಅದರ ಕತೆ ಏನಾಯಿತೆಂಬುವುದನ್ನು  ಹೇಳುವವರೇ ಇಲ್ಲದಂತಾಯಿತು. ದೇವರ  ಸಾಕ್ಷಾತ್ಕಾರ ಪಡೆದು ಅದರ ಅನುಭವವನ್ನು ವಿವರಿಸಬೇಕೆಂಬುವವನ ಪ್ರಯತ್ನವೂ ಉಪ್ಪಿನ ಗೊಂಬೆಯ ಪ್ರಯತ್ನದಂತೆ . ದೇವರ ಸಾಕ್ಷತ್ಕಾರ ಪಡೆವಾಗ ಆ ಅನುಭವದಲ್ಲಿ ಮೈಮರೆಯುತ್ತಾನೆ. ಇತರರಿಗೆ ಏನನ್ನೂ ಹೇಳಲು ಸಾಧ್ಯವೇ ಆಗುವುದಿಲ್ಲ”.

ದೇವರನ್ನು ಕುರಿತು ರಾಮಕೃಷ್ಣರು ಮತ್ತೇ ಮತ್ತೆ ಮಾತನಾಡುತ್ತಿದ್ದರು.  ದೇವರಿಗೆ ಆಕಾರವುಂಟು, ಹಾಗೆಯೇ ಅವನು ನಿರಾಕಾರನೂ ಹೌದು. ಈ ವಿಷಯವನ್ನು ರಾಮಕೃಷ್ಣರು ತಮ್ಮ ಅನುಭವ ದೃಷ್ಟಿಯಿಂದ ಹೀಗೆ ವಿವರಿಸುವರು: ಸಾಗರದ ನೀರಿಗೆ ಯಾವ ಬಣ್ಣವೂ ಇಲ್ಲ. ಯಾವ ಆಕಾರವೂ ಇಲ್ಲ. ಆದರೆ ಉತ್ತರ, ದಕ್ಷಿಣ ಧ್ರುವದ ತೀರದಲ್ಲಿ ಶೈತ್ಯಾಧಿಕ್ಯದಿಂದ ನೀರು ದೊಡ್ಡ ದೊಡ್ಡ ನೀರ್ಗಲ್ಲಿನಂತೆ ತೋರುತ್ತದೆ.  ಆಗ ಅದು ಆಕಾರ ಧರಿಸುವುದು. ಸೂರ್ಯನ ಕಿರಣ ಅದರ ಮೇಲೆ ತಾಗಿದರೆ ಅದು ಕರಗಿ ಪುನಃ ನೀರೇ ಆಗುವುದು./

ಗುರುಶಿಷ್ಯರು

ಒಬ್ಬ ಶಿಷ್ಯನಿಗೆ ಯೋಗ್ಯವಾದ ಗುರುವಿನ ಆಸರೆ ಸಿಕ್ಕಿದರೆ ಅವನು ಅಜ್ಞಾನದಿಂದ ಪಾರಾಗುವುದರಲ್ಲಿ ಸಂದೇಹವಿಲ್ಲ. ನಿಜವಾದ ಗುರುವಿನ ಸ್ವಭಾವ ಎಂತಹುದು ಎಂಬುವುದನ್ನು ಈ ಕಥೆಯ ಮೂಲಕ ರಾಮಕೃಷ್ಣರು ಹೇಳುವರು: ಗರ್ಭಿಣಿಯಾದ ಹೆಣ್ಣು ಹುಲಿಯೊಂದು ಕುರಿಯ ಮಂದೆಯ ಮೇಲೆ ಬಿತ್ತು. ಅದನ್ನು ಕಂಡು ಬೇಡನೊಬ್ಬ ಹುಲಿಯನ್ನು ಕೊಂದು ಹಾಕಿದ. ಸಾಯುವ ಸಮಯದಲ್ಲಿ ಹುಲಿಯು ಮರಿಯನ್ನು ಹಾಕಿತು. ಆ ಹುಲಿಮರಿಯು ಕುರಿಮರಿಗಳೊಡನೆ ಬೆಳೆಯಲಾರಂಭಿಸಿತು. ಕುರಿಗಳೇ ಅದಕ್ಕೆ ತಮ್ಮ ಹಾಲನ್ನು ಕೊಟ್ಟವು. ಹುಲಿ ಮರಿಯು ಕುರಿಯಂತೆ ಅರಚುವುದನ್ನು, ಹುಲ್ಲು ತಿನ್ನುವುದನ್ನು ಕಲಿಯಿತು. ಆ ಮರಿ ಕ್ರಮೇಣ ದೊಡ್ಡ ಹುಲಿಯಾಯಿತು. ಒಂದು ದಿನ ಬೇರೋಂದು ಹುಲಿ ಕುರಿಯ ಮಂದೆಯ ಮೇಲೆ ಬಿತ್ತು. ಇತರ ಕುರಿಗಳೊಡನೆ ಹುಲಿಯೊಂದು ಇದ್ದುದನ್ನು ಕಂಡಿತು. ಹೊರಗಿನಿಂದ ಬಂದ ಹುಲಿ ಕುರಿಗಳ ತಂಟೆಗೆ ಹೋಗದೆ ಕುರಿಗಳ ಮಂದೆಯಲ್ಲಿದ್ದ ಹುಲಿಯನ್ನು ಹಿಡಿಯಿತು. ಇತರ ಕುರಿಗಳಂತೆ ಇದು “ಬ್ಯಾ ಬ್ಯಾ” ಎಂದು ಅರಚಲು ಮೊದಲು ಮಾಡಿತು. ಕಾಡಿನ ಹುಲಿ  ಕುರಿಗಳ ಮಂದೆಯ ಹುಲಿಯನ್ನು ನೀರಿನ ಹತ್ತಿರ ಎಳೆದುಕೊಂಡು ಹೋಯಿತು.  ನೀರಿನಲ್ಲಿ ತನ್ನ ಮತ್ತು “ಕುರಿ ಹುಲಿ”ಯ ರೂಪವನ್ನು ತೋರಿಸಿ, “ನೀನು ಕೂಡ ಹುಲಿ ಜಾತಿಗೆ ಸೇರಿದವ : ಎಂದು ಹೇಳೀತು. ಅದರ ಬಾಯಿಗೆ ಒಂದು ಮಾಂಸದ ಚೂರನ್ನು ತುರುಕಿತು. ಮಂದೆಯ ಹುಲಿಗೆ ಮಾಂಸದ ರುಚಿ ಗೊತ್ತಾಗಿ ತಿನ್ನಲು ಆರಂಭಿಸಿತು. ತನ್ನ ಸ್ವಭಾವವನ್ನು ತಿಳಿದುಕೊಂಡಿತು. ನಿಜವಾದ ಗುರು ಶಿಷ್ಯನಿಗೆ ತನ್ನ ಸ್ವರೂಪವನ್ನು ತೋರಿಸಿಕೊಂಡುವು.

ಒಮ್ಮೆ ರಾಧಾಕೃಷ್ಣನ ದೇವಸ್ಥಾನದಲ್ಲಿ ಪೂಜಾರಿಯ ಆಜಾಗರೂಕತೆಯಿಂದ ಶ್ರೀಕೃಷ್ಣನ ವಿಗ್ರಹದ ಕಾಲು ಮುರಿದು ಹೋಯಿತು. ಶಾಸ್ತ್ರಗಳ ಪ್ರಕಾರ, ಮುರಿದು ಹೋದ ವಿಗ್ರಹವನ್ನು ಪೂಜಿಸಬಾರದು ಎಂದು ಪಂಡಿತರು ಸಾರಿದರು. ಇಷ್ಟು ದಿನವೂ ಪೂಜಿಸುತ್ತಿದ್ದ ಆ ವಿಗ್ರಹವನ್ನು ತೆಗೆದಿಡಲು ರಾಣಿಯ ಮನಸ್ಸು ಒಪ್ಪಲಿಲ್ಲ. ಆಗ ರಾಮಕೃಷ್ಣರು, “ನಿನ್ನ ಅಳಿಯ ಮಥುರನಾಥನಿಗೆ ಕಾಲು ಮುರಿದುಹೋದರೆ ಅವನನ್ನುಜ ನೀನು ಹೊರಕ್ಕೆ ಕಳುಹಿಸುವೆಯ ? ಅದರಂತೆಯ ವಿಗ್ರಹವನ್ನು ಸರಿಮಾಡಿ ಉಪ ಉಪಯೋಗಿಸಬಹುದು” ಎಂದರು. ಶಾಸ್ತ್ರವೂ ಬಗೆಹರಿಸದ ಸಮಸ್ಯೆಯನ್ನು ರಾಮಕೃಷ್ಣರು ಉಪಮಾನದಲ್ಲಿ ಬಗೆಹರಿಸಿದರು.

ಮಹಾ ಸಮಾಧಿ:

ಹೀಗೆ ವಿಶ್ರಾಂತಿ ಇಲ್ಲದೆ ಉಪದೇಶ  ಮಾಡುವುದರಲ್ಲಿ ರಾಮಕೃಷ್ಣರ ದೇಹ ಕ್ಷೀಣಿಸಿತು. ಮಾತನಾಡಿ, ಮಾತನಾಡಿ,  ಗಂಟಲಿನಲ್ಲಿ ಹುಣ್ಣಾಯಿತು. ವಿರಾಮ ತೆಗೆದುಕೊಳ್ಳಬೇಕೆಂದು ವೈದ್ಯರು ಸಲಹೆ ಮಾಡಿದರು. “ತಾಯಿಯ ಇಷ್ಟದಂತಾಗಲಿ. ಮಾಡುವ ಉಪದೇಶ ನಾನು ಮಾಡುತ್ತೇನೆ” ಎಂದರು. ಸುಮಾರು ಒಂದು ವರ್ಷ ಹೀಗೆಯೇ ಕಳೆಯಿತು. ರೋಗ ವಾಸಿಯಾಗಲಿಲ್ಲ. ರಾಮಕೃಷ್ಣರಿಗೆ ಬರುಬರುತ್ತ ಶಕ್ತಿ ಕುಗ್ಗಿತು. ಗಂಟಲೊಳಗೆ ಆಹಾರ ಇಳಿಯಲಿಲ್ಲ. ಔಷಧಿ ಸೇರಲಿಲ್ಲ. ಗುರುವು ದೇಹವನ್ನು  ಬಿಡುವರೆಂಬ ಭಯ ಶಿಷ್ಯರನ್ನೆಲ್ಲ ಒಟ್ಟು ಗೂಡಿಸಿತು.

ರಾಮಕೃಷ್ಣರು ೧೮೮೬ನೇ ಇಸವಿ ಆಗರ್ಸ್ಟ ೧೬ ರಂದು ದೇಹತ್ಯಾಗ ಮಾಡಿದರು. ಗಂಗಾನದಿ ದಡದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.

ರಾಮಕೃಷ್ಣರ ಶಿಷ್ಯರಲ್ಲಿ ಮುಖ್ಯರಾದ ಸ್ವಾಮಿ ವಿವೇಕಾನಂದರು ತಮ್ಮ ಗುರುವನ್ನು ಕುರಿತು ಹೀಗೆಂದಿದ್ದಾರೆ : “ನವ ಯುಗ ಪ್ರವರ್ತರಾಗಿ ಭಗವಾನ್ ಶ್ರೀ ರಾಮಕೃಷ್ಣರು ಅವತರಿಸಿದರು.  ಆರ್ಯ ಋಷಿಗಳು ಏನನ್ನು ಬೋಧಿಸಿದರೋ ಅದನ್ನೇ ಶ್ರೀರಾಮಕೃಷ್ಣರು ತಮ್ಮಜೀವನದಲ್ಲಿ ಬಾಳಿ ತೋರಿದರು”.

ಅಮರ ಜ್ಯೋತಿ :

ರಾಮಕೃಷ್ಣರ ಅನಂತರ ಅವರ ಸಂನ್ಯಾಸಿ ಶಿಷ್ಯರು ೧೮೮೬ರಲ್ಲಿ ಸ್ವಾಮಿ ವಿವೇಕಾನಂದರ ನಾಯಕತ್ವದಲ್ಲಿ ಸ್ಥಾಪಿಸಿದ “ರಾಮಕೃಷ್ಣ ಮಿಷನ್ ” ಇಂದು ಬೃಹದಾಕಾರ ತಾಳಿದೆ. ಅದರ ಕೇಂದ್ರಗಳು ಭಾರತ ಮತ್ತು ವಿದೇಶಘಳಲ್ಲಿ ಆರಂಭವಾಗಿವೆ. ಅಮೇರಿಕ, ಇಂಗ್ಲೇಂಡ್, ಜರ್ಮನಿ, ಸ್ವಟ್ಜರ್ಲೆಂಡ್, ಮೊದಲದ ದೇಶಗಳಲ್ಲಿ ರಾಮಕೃಷ್ಣಾಶ್ರಮಗಳಿವೆ. ಕಲ್ಕತ್ತ ಬಳಿ ಇರುವ ಬೇಲೂರು ಮಠ ಪ್ರಧಾನ ವಾಗಿದೆ.  ಈ ಕೇಂದ್ರಗಳ ಮೂಲಕ ರಾಮಕೃಷ್ಣರ ಉಪದೇಶ ವಿಶ್ವದ ಅದ್ಯಂತ ಹರಡುತ್ತಿದೆ. “ಭಕ್ತವೃಂದವೂ ಬೆಳೆಯುತ್ತಿದೆ.

“ಭವಬಂಧನ ನೀಗುವ ನಾಯಕ, ಜಗದ್ವಂದ್ಯ, ನಿರ್ಮಲ, ಗುಣಾತೀತ, ನರರೂಫಧರನಾದ ನಿನಗೆ ವಂದಿಸುತ್ತೇನೆ” ಎಂದು ಆರಂಭವಾಗುವ ರಾಮಕೃಷ್ಣರನ್ನು ಕುರಿತು ಸ್ತ್ರೋತ್ರವು ದೇಶ, ವಿದೇಶಗಳಲ್ಲಿರುವ ಎಲ್ಲ ರಾಮಕೃಷ್ಣರನ್ನು ಕುರಿತು ಸ್ತ್ರೋತ್ರವು ದೇಶ, ವಿದೇಶಗಳಲ್ಲಿರುವ ಎಲ್ಲ ರಾಮಕೃಷ್ಣ ಆಶ್ರಮಗಳಲ್ಲಿ ಇಂದು ಪ್ರತಿ ದಿನವೂ ಆರತಿ, ಭಜನೆ ಸಮಯದಲ್ಲಿ ಕೇಳೀ ಬರುತ್ತದೆ :

ಖಂಡನ ಭವ- ಬಂಧನ, ಜಗ-ವಂದನ
ವಂದಿತೋ ಮಾಯಾ
ನಿರಂಜನ, ನರ ರೂಪ-ಧರ-ನಿರ್ಗುಣ
ಗುಣಮಯ ||