ರಾಮಕೃಷ್ಣ ಬುವಾ ವಝೆಕಡುಬಡತನವನ್ನು ಎದುರಿಸಿ, ಗುರು ಗಳನ್ನು ಬೇಡಿ ಸಂಗೀತ ಕಲಿತರು. ತಮ್ಮ ಕಾಲದ ಶ್ರೇಷ್ಠ ಸಂಗೀತಗಾರರಲ್ಲಿ ಒಬ್ಬರೆನಿಸಿ ದರು. ದ್ವೇಷ, ಅಸೂಯೆಗಳು ಅವರ ಬಳಿ ಸುಳಿಯಲಿಲ್ಲ.

ರಾಮಕೃಷ್ಣ ಬುವಾ ವಝೆ

‘‘ತಾಯಿ! ಈ ಹುಡುಗ ಶಾಲೆಗೆ ಬಂದು ಏನೂ ಪ್ರಯೋಜನವಿಲ್ಲ. ಕಲಿಯುವಿಕೆಯಲ್ಲಿ ಈತನಿಗೆ ಏನೇನೂ ಮನಸ್ಸಿಲ್ಲ. ಶಾಲೆಗೂ ಸರಿಯಾಗಿ ಬರುತ್ತಿಲ್ಲ. ಆದುದರಿಂದ ಇವನನ್ನು ಏನಾದರೂ ಸಣ್ಣ ಕೆಲಸ ಮಾಡಲು ಕಳುಹಿಸಿದರೆ ವಾಸಿ’’ ಎಂದರು ಶಾಲೆಯ ಮಾಸ್ತರರು.

‘‘ಹೌದು ಮಾಸ್ತರರೇ! ಶಾಲೆ ತಪ್ಪಿಸುತ್ತಿದ್ದಾನೆ ಎಂದು ನನಗೂ ತಿಳಿಯಿತು. ಈ ಊರಲ್ಲಿ ಯಾವ ಮೂಲೆಯಲ್ಲಿ ಸಂಗೀತವಿದ್ದರೂ ಅವನು ಅದನ್ನು ಬಿಡುವುದಿಲ್ಲ. ಅಲ್ಲಿ ಕೇಳಿದ ಹಾಡುಗಳನ್ನು ರಾತ್ರಿ ಹಗಲು ಹಾಡಿಕೊಳ್ಳುತ್ತಿರುತ್ತಾನೆ. ನಾನು ಇಷ್ಟು ಕಷ್ಟಪಡುತ್ತಿದ್ದರೂ ಇವನಿಗೆ ಇನ್ನೂ ಸ್ವಲ್ಪವೂ ಬುದ್ಧಿ ಬರಲಿಲ್ಲ. ಏನು ಮಾಡಲಿ ಹೇಳಿ! ನನ್ನ ಗ್ರಹಚಾರ’’ ಎಂದು ಕಣ್ಣೀರು ತುಂಬಿ ನುಡಿದಳು ತಾಯಿ.

‘‘ಸುಮ್ಮನೆ ಅವನಿಗೆ ಈ ಶಾಲೆಯ ಓದುಬರಹದ ಗೊಡವೆ ಏಕೆ? ಸಂಗೀತವನ್ನೇ ಕಲಿಸಿ. ನಾಲ್ಕು ಹಾಡು ಹೇಳಿಕೊಂಡು ಬೇಡಲಿ! ಅವನು ಇನ್ನು ಮುಂದೆ ಶಾಲೆಗೆ ಬರುವುದೂ ಬೇಡ; ಅವನ ಸಹವಾಸದಿಂದ ಇತರ ಮಕ್ಕಳು ಹಾಳಾಗುವುದೂ ಬೇಡ’’ ಎಂದು ಹೇಳಿ ಮಾಸ್ತರರು ಸಿಟ್ಟಿನಿಂದ ಹೊರಟುಹೋದರು.

ಐದು ವರ್ಷದ ಕಿರಿಯ ರಾಮಕೃಷ್ಣ ಈ ಮಾತುಗಳನ್ನೆಲ್ಲ ಕೇಳುತ್ತ ಕಲ್ಲಿನ ಮೂರ್ತಿಯಂತೆ ನಿಂತಿದ್ದ. ಆತನ ತಾಯಿ ನಿಟ್ಟುಸಿರು ಬಿಟ್ಟಳು. ತನ್ನ ಪತಿ ತೀರಿಕೊಂಡ ಬಳಿಕ ಆ ತಾಯಿ ಒಂದಿಷ್ಟೂ ಸುಖ ಕಂಡವಳಲ್ಲ. ನಿಲ್ಲಲು ನೆಲೆಯಿಲ್ಲದೆ ಊರೂರು ತಿರುಗಿದುದು, ಹಿಡಿ ಅನ್ನಕ್ಕೆ ಗತಿಯಿಲ್ಲದೆ ಬಡತನದ ಬವಣೆಯಲ್ಲಿ ಬೆಂದುದು, ಕೊನೆಗೆ ಈಗ ಅನಾಥರಂತೆ ದೇಶಪಾಂಡೆಯವರಲ್ಲಿ ಮನೆಗೆಲಸಕ್ಕೆ ನಿಂತುದು, ಎಲ್ಲವನ್ನೂ ನೆನೆದಳು. ದುಃಖ ಉಕ್ಕಿ ಬಂತು. ಕಣ್ಣೀರು ಕೋಡಿ ಹರಿಯಿತು.

ಬಾಲ್ಯ

ಮಹಾರಾಷ್ಟ್ರದ ಸಾವಂತವಾಡಿಯಲ್ಲಿ ಓಝರೆ ಎಂಬ ಒಂದು ಚಿಕ್ಕ ಹಳ್ಳಿ. ಅಲ್ಲಿ ನರಹರಿ ವರೆs ಎಂಬ ಸಾತ್ವಿಕರೊಬ್ಬರಿದ್ದರು. ಅವರು ಭಜನಗೀತ, ಅಭಂಗಗಳನ್ನು ಹಾಡುವುದರಲ್ಲಿ ನಿಪುಣರು. ಊರವರೆಲ್ಲ ಅವರ ಗಾನವನ್ನು ಬಹುವಾಗಿ ಮೆಚ್ಚಿದ್ದರು. ನರಹರಿ ವರೆsಯವರಿಗೆ ಬಹಳ ಕಾಲ ಸಂತಾನ ಪ್ರಾಪ್ತಿಯಾಗಲಿಲ್ಲ. ಕೊನೆಗೊಮ್ಮೆ ಅವರಿಗೊಂದು ಗಂಡುಮಗು ಜನಿಸಿತು. ಇದರಿಂದ ಸ್ವರ್ಗವೇ ಕೈಗೆ ಲಭಿಸಿದಂತಹ ಸಂತಸ ತಾಳಿದರು ಆ ದಂಪತಿಗಳು. ಹುಡುಗನಿಗೆ ರಾಮಕೃಷ್ಣ ಎಂದು ಹೆಸರಿಟ್ಟರು. ಬಾಲಕನ ಗ್ರಹಕುಂಡಲಿ ಮಾಡಿದ ಪುರೋಹಿತರು ‘‘ಹುಡುಗ ಮುಂದೆ ದೇಶದಲ್ಲೆಲ್ಲ ಖ್ಯಾತಿ ಪಡೆಯುವ ವಿದ್ವಾಂಸನಾಗುತ್ತಾನೆ’’ ಎಂದರಂತೆ. ತಂದೆತಾಯಿಗಳ ಸಂಭ್ರಮ ಹೇಳತೀರದು. ಆದರೆ ಮಗನ ಉನ್ನತಿಯನ್ನು ಕಂಡು ಸಂತೋಷಪಡುವ ಭಾಗ್ಯ ತಂದೆಗೆ ಇರಲಿಲ್ಲ. ಮಗುವಿಗೆ ಹತ್ತು ತಿಂಗಳಾಗುವಾಗಲೇ ತಂದೆ ಪರಂಧಾಮವನ್ನೆ ದಿದರು.

ಇಲ್ಲಿಂದ ತೊಡಗಿತು ತಾಯಿಗೆ ಮಗನ ಚಿಂತೆ. ಓಝರೆ ಕಿರುಹಳ್ಳಿ. ಮನೆಯಲ್ಲಿ ಉಣ್ಣಲು ಕಾಳಿಲ್ಲ. ಉಡಲು ಬಟ್ಟೆಯಿಲ್ಲ. ಮಗುವಿನ ವಿದ್ಯಾಭ್ಯಾಸಕ್ಕೆ ಅನುಕೂಲವಿಲ್ಲ; ದುಡಿಯಲೂ ಅವಕಾಶವಿಲ್ಲ. ಆಗ ಕೆಲವು ಮಂದಿ ಆಪ್ತರು ಆ ಬಡತಾಯಿಗೆ ಕಾಗಲಕ್ಕೆ ಹೋಗುವಂತೆ ಹೇಳಿದರು. ಕಾಗಲದ ಶೀಮಂತ ಅಣ್ಣಾ ಸಾಹೇಬ ದೇಶಪಾಂಡೆಯವರ ಹೆಸರು ಆಗ ಆ ಕಡೆಗೆಲ್ಲ ಪ್ರಸಿದ್ಧವಾಗಿತ್ತು. ಉದಾರಿಗಳು ದಾನಿಗಳೂ ಆದ ಅವರು ಯಾವಾಗಲೂ ಬಡವರಿಗೆ ಆಶ್ರಯದಾತರು ಎನಿಸಿದ್ದರು. ತಾಯಿ ಮಗ ಅವರಲ್ಲಿಗೆ ತೆರಳಿದರು. ತಮ್ಮ ಬವಣೆಯನ್ನು ಹೇಳಿ ಶ್ರೀಮಂತರ ಆಶ್ರಯ ಬೇಡಿದರು. ತಿಂಗಳಿಗೆ ಮೂರು ರೂಪಾಯಿ ಸಂಬಳದ ಮೇಲೆ ತಾಯಿಗೆ ಅಲ್ಲಿ ಮನೆಗೆಲಸದ ಅವಕಾಶ ದೊರೆಯಿತು.

ಸಂಗೀತ ಶಿಕ್ಷಣಾರಂಭ

ರಾಮಕೃಷ್ಟ ಜನಿಸಿದುದು ೧೮೭೧ ರಲ್ಲಿ. ಆತನಿಗೆ ಐದು ವರ್ಷಗಳು ತುಂಬಿದಾಗ ಅವನು ಊರಿನ ಶಾಲೆಗೆಹೋಗಲು ತೊಡಗಿದನು. ಆದರೆ ಅವನಿಗೆ ವಿದ್ಯೆ ಬೇಡವಾಗಿತ್ತು. ಭಜನೆ, ಹಾಡು, ಸಂಗೀತಗಳೇ ಬಾಲಕನಿಗೆ ಸರ್ವಸ್ವವಾದುವು. ಶಾಲೆಯ ಮಾಸ್ತರರು ಹುಡುಗನನ್ನು ತಿದ್ದಲು, ಪಾಠಗಳಲ್ಲಿ ಆಸಕ್ತಿ ಉಂಟಾಗುವಂತೆ ಮಾಡಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೇಸತ್ತ ಉಪಾಧ್ಯಾಯರು ಬೇರೆ ದಾರಿ ಕಾಣದೆ ರಾಮಕೃಷ್ಣನ ತಾಯಿಯಲ್ಲಿ ಆಕ್ಷೇಪಿಸಿದರು. ಆಕೆಗೆ ಬೇರೆ ದಾರಿಕಾಣಲಿಲ್ಲ. ಕೊನೆಗೆ ಯಜಮಾನರಲ್ಲೇ ಈ ವಿಷಯವನ್ನು ಹೇಳಿದಳು. ಅಣ್ಣಾ ಸಾಹೇಬರು ಅಷ್ಟರಲ್ಲೇ ರಾಮಕೃಷ್ಣನ ಸಂಗೀತದ ಕಡೆಗಿನ ಒಲವನ್ನು ಗಮನಿಸಿದ್ದರು.  ಗಾನದಲ್ಲಿ ಆಸಕ್ತಿ ಇರುವ ಹುಡುಗನನ್ನು ಅದರಲ್ಲೇ ತೊಡಗಿಸಿದರೆ ಮುಂದೊಂದು ದಿನ ಯಶಸ್ವಿಯಾದ ಗಾಯಕನಾದನು ಎಂದು ಅವರಿಗನ್ನಿಸಿತು.

ಗುರುವಿನ ಬಳಿಗೆ

ಊರಿನಲ್ಲಿ ಆಗ ಬಳವಂತರಾವ್ ಪೊಹರೆ ಎಂಬ ಗಾಯಕರಿದ್ದರು. ಅವರು ದರ್ಬಾರೀ ಗವಾಯಿಗಳಾಗಿ ಪ್ರಸಿದ್ಧರಾಗಿದ್ದರು. ಅಣ್ಣಾ ಸಾಹೇಬರು ಹುಡುಗನನ್ನು ಅವರಲ್ಲಿಗೆ ಕರೆದುಕೊಂಡು ಹೋದರು.

‘‘ರಾಮಕೃಷ್ಣನಿಗೆ ಸಂಗೀತದಲ್ಲಿ ಬಹು ಪ್ರೀತಿ. ಆದರೆ ಈತ ಕಡು ಬಡವ; ತಮಗೆ ಗುರುದಕ್ಷಿಣೆ ಕೊಡಲಾರ. ಇವನಿಗೆ ನೀವು ಉಚಿತವಾಗಿ ವಿದ್ಯಾದಾನ ಮಾಡಬೇಕು. ತಮ್ಮ ಶ್ರಮ ನಿರರ್ಥಕವಾಗಲಾರದು. ಮುಂದೆ ತಮ್ಮ ಹೆಸರು ಹೇಳಿ ಈತ ಜೀವನ ಮಾಡುವಂತಾಗಲಿ’’ ಎಂದು ಶ್ರೀಮಂತ ದೇಶಪಾಂಡೆ ಪೊಹರೆ ಬುವಾರಲ್ಲಿ ವಿನಂತಿಸಿದರು.

ಬಳವಂತರಾವ್ ಪೊಹರೆಯವರು ಪೊಹರೆಬುವಾ ಎಂದೇ ಪ್ರಸಿದ್ಧರಾಗಿದ್ದರು. ವಿದ್ವಾಂಸರಾದ ಅವರಲ್ಲಿ ಅನೇಕರು ಶಿಷ್ಯವೃತ್ತಿ ಕೈಗೊಂಡಿದ್ದರು. ಹಣಕಾಸಿನ ವಿಚಾರದಲ್ಲಿ ಅವರಿಗೇನೂ ಕೊರತೆ ಇರಲಿಲ್ಲ. ಆದರೆ ಧರ್ಮಾರ್ಥವಾಗಿ ಪಾಠ ಹೇಳಲು ಅವರಿಗೆ ಮನಸ್ಸಿರಲಿಲ್ಲ. ಶ್ರೀಮಂತ ದೇಶಪಾಂಡೆಯವರ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ರಾಮಕೃಷ್ಣನಿಗೆ ಪಾಠ ಹೇಳಲು ಒಪ್ಪಬೇಕಾಯಿತು.

ಹುಡುಗನ ಯೋಗ್ಯತೆ ಪರೀಕ್ಷಿಸೋಣ ಎಂದುಕೊಂಡು ‘‘ಮಗೂ ನಿನಗೆ ಬರುವಂತಹ ಯಾವುದಾದರೂ ಒಂದೆರಡು ಹಾಡು ಹೇಳು’’ ಎಂದರು. ರಾಮಕೃಷ್ಣ ಸ್ವಲ್ಪವೂ ಅಳುಕಲಿಲ್ಲ. ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ತಾನು ಕೇಳಿ ಕಲಿತಿದ್ದ ಭಜನ ಅಭಂಗಗಳನ್ನು ಹಾಡು ಆರಂಭಿಸಿದನು. ಬಾಲಕನ ಸುಮಧುರ ಕಂಠಧ್ವನಿ, ಶ್ರುತಿಲಯಶುದ್ಧಿ, ಹಾಡುವಾಗಿನ ತನ್ಮಯತೆಗಳು ಬುವಾರನ್ನು ತೃಪ್ತಿಪಡಿಸಿದವು.

ರಾಮಕೃಷ್ಣನ ಗುರುಕುಲವಾಸ ಆರಂಭವಾಯಿತು. ವರ್ಷಗಳೆರಡು ಕಳೆದುವು. ಆದರೆ ಪಾಠ ಮಾತ್ರ ಪ್ರಾರಂಭಿಕ ಶಿಕ್ಷಣದ ಹಂತವನ್ನು ದಾಟಲಿಲ್ಲ. ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದ ಹುಡುಗ ಮುಂದಿನ ಪಾಠಗಳಿಗಾಗಿ ಕಾತರಿಸುತ್ತಿದ್ದರೂ ಫಲವಾಗಲಿಲ್ಲ. ಹಣವನ್ನೀಯದೆ ಗುರುಗಳು ಪಾಠವನ್ನು ಮುಂದುವರಿಸಲಾರರು ಎಂದು ಅರಿತ ರಾಮಕೃಷ್ಣ ತನ್ನ ಬಡತನಕ್ಕಾಗಿ ಕೊರಗಿದನು. ಕೊನೆಗೆ ಅವನು ತನ್ನ ಹಿತಚಿಂತಕರ ಸಲಹೆಯ ಮೇರೆಗೆ ಮಾಲವಣಕ್ಕೆ ತೆರಳಿದನು. ಅಲ್ಲಿ ವಿಠೋಬಾ ಅಣ್ಣಾಹಡಪ ಎಂಬ ಗಾಯಕರಿದ್ದರು. ರಾಮಕೃಷ್ಣನು ತನ್ನ ಸಂಗೀತ ಅಭ್ಯಾಸದ ಬಯಕೆಯನ್ನು ಅವರಲ್ಲಿ ಹೇಳಿದಾಗ ಅವರು ಪಾಠ ಹೇಳಲು ಸಮ್ಮತಿಸಿದರು. ಹಡಪ ಅವರು ಗ್ವಾಲಿಯರ್‌ನಲ್ಲಿ ಸಂಗೀತ ಅಭ್ಯಾಸ ಮಾಡಿ ದಕ್ಷಿಣಕ್ಕೆ ಬಂದ ವಿದ್ವಾಂಸರು. ದ್ರುಪದ್, ಖ್ಯಾಲ್, ಠುಮ್ರಿ ಮೊದಲಾದ ಸಂಗೀತ ಪ್ರಕಾರಗಳಲ್ಲಿ ಪಾಂಡಿತ್ಯ ಪಡೆದವರು. ರಾಮಕೃಷ್ಣ ಇವರಲ್ಲಿ ಒಂದು ವರ್ಷ ಸತತವಾಗಿ ಪರಿಶ್ರಮಿಸಿ ಸಂಗೀತ ಅಭ್ಯಾಸ ಮಾಡಿದನು. ಆಗ ಆತನು ಪ್ರಾಯ ಕೇವಲ ಹನ್ನೆರಡು ವರ್ಷಗಳು.

ವಿವಾಹ

‘‘ಕಾಗಲಕ್ಕೆ ಕೂಡಲೇ ಹೊರಟು ಬರಬೇಕು’’ ಎಂದು ರಾಮಕೃಷ್ಣನಿಗೆ ತಾಯಿಂದ ಕರೆ ಬಂತು. ಏಕೆ ಎಂಬುದು ತಿಳಿಯದೆ ಅವನು ಕಾಗಲಕ್ಕೆ ಧಾವಿಸಿದನು. ಅಲ್ಲಿ ಅವನಿಗೆ ಒಂದು ಆಶ್ಚರ್ಯ ಕಾದಿತ್ತು. ತಾಯಿ ಅವನಿಗೆ ಮದುವೆ ಮಾಡಲು ಹವಣಿಸಿ, ಹೆಣ್ಣು ಗೊತ್ತು ಮಾಡಿದ್ದಳು. ತನಗೆ ಈಗ ಮದುವೆ ಬೇಡ ಎಂದು ರಾಮಕೃಷ್ಣ ಎಷ್ಟೊಂದು ಹೇಳಿದರೂ ಆಕೆ ಒಡಂಬಡಲಿಲ್ಲ. ‘‘ವಧು ನಿಶ್ಚಯಮಾಡಿ ಆಗಿದೆ; ಅವರೆಲ್ಲರೂ ಒಪ್ಪಿ ಆಗಿದೆ! ಈಗ ನೀನು ಬೇಡ ಎಂದರೆ ನನ್ನ ಮಾನ ಎಲ್ಲಿ ಉಳಿಯಿತು?’’ ಎಂದಳು.

‘‘ಅವ್ವಾ ನಾನಿನ್ನೂ ಹುಡುಗ! ಸಂಪಾದನೆ ಮಾಡುವ ಕೆಲಸ ಏನೂ ಇಲ್ಲದೆ ಊರಿಂದೂರಿಗೆ ಅಲೆಯುತ್ತಿದ್ದೇನೆ! ಮದುವೆ ಮಾಡಿಕೊಂಡರೆ ಉಣ್ಣುವುದು ಏನನ್ನು? ಈಗ ಮದುವೆ ಬೇಡ’’ ಎಂದು ಬಹು ವಿಧಾಗಿ ಬೇಡಿದರೂ ತಾಯಿ  ಒಪ್ಪಲಿಲ್ಲ. ‘‘ನಮ್ಮ ವಂಶ ಮುಂದುವರಿಯಲೇ ಬೇಕು. ನೀನೀಗ ಮದುವೆಯಾಗಲೇಬೇಕು; ಸೊಸೆಯನ್ನು ಸಾಕುವುದು ನನಗೊಂದು ಭಾರವಲ್ಲ’’ ಎಂದು ಒತ್ತಾಯಿಸಿ ಮದುವೆ ಮಾಡಿ ಮುಗಿಸಿದಳು.

ವಿವಾಹದ ಬಳಿಕ ರಾಮಕೃಷ್ಣನಿಗೆ ಯೋಚನೆ ತೊಡಗಿತು. ತನ್ನ ತಾಯಿ, ಹೆರವರ ಮನೆಗೆಲಸ ಮಾಡಿ ಕಷ್ಟಪಟ್ಟು ಸಂಪಾದಿಸುವ ಹಣದಲ್ಲಿ ತಾವೆಲ್ಲ ಜೀವನ ನಡೆಸುವುದೇ? ಒಂದು ವೇಳೆ ಹಾಗೆ ಮಾಡಿದರೂ ಅದು ಎಷ್ಟು ದಿನ ಚಂದವಾದೀತು! ತನ್ನ ಮುಂದಿನ ದಾರಿಯನ್ನು ತಾನು ನೋಡಿಕೊಳ್ಳಲೇ ಬೇಕು. ಕಷ್ಟಪಟ್ಟು ವಿದ್ಯೆ ಕಲಿಯಬೇಕು. ತಾನು ದುಡಿದು ತನ್ನ ಸಂಸಾರವನ್ನು ನಡೆಸಬೇಕು ಎಂದು ನಿರ್ಧರಿಸಿದನು. ಒಂದು ದಿನ ಮನೆಬಿಟ್ಟು ಹೊರಟನು. ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರಟ ರಾಮಕೃಷ್ಣನ ಜೇಬಿನಲ್ಲಿ ಒಂದು ಬಿಡಿಗಾಸೂ ಇರಲಿಲ್ಲ! ನಡೆದುಕೊಂಡೇ ಮುಂದೆ ಮುಂದೆ ಸಾಗಿದನು.

ತಿರುಗಾಟ

ಊರು ಬಿಟ್ಟ ರಾಮಕೃಷ್ಣನಿಗೆ ಹೊತ್ತು ಹೊತ್ತಿಗೆ ಉಟಕ್ಕೇನು ಎಂಬ ಚಿಂತೆ! ದಾರಿಯಲ್ಲಿ ಹಳ್ಳಿಗಳು ಸಿಗುತ್ತಿದ್ದುವು. ಅಲ್ಲಿ ಮನೆಗಳ ಮುಂದೆ ನಿಂತು ಹಾಡಿದಾಗ ಒಂದೆರಡು ಬಿಡಿಗಾಸು ಸಿಗುತ್ತಿತ್ತು. ಇನ್ನು ಕೆಲವರು ಊಟವನ್ನು ಹಾಕುತ್ತಿದ್ದರು. ಹಾಗೂ ಹೀಗೂ ಭಿಕ್ಷಾನ್ನದಿಂದ ಕಾಲಕ್ಷೇಪ ಮಾಡುತ್ತ ಯಾತ್ರೆ ಮುಂದುವರಿಸಿದ. ಸೋಲಬಾರದು ಎಂಬ ದೃಢ ನಿರ್ಧಾರವೇ ಆತನನ್ನು ಮುನ್ನಡೆಸಿತೆಂದು ಹೇಳಬೇಕು. ನಡೆದೇ ಪುಣೆ, ಹಾಗೆಯೇ ಅಲ್ಲಿಂದ ಮುಂದೆ ಮುಂಬಯಿ ತಲಪಿದನು.

ಮುಂಬಯಿ ಹೊಸಬರಿಗೆ ದಂಗು ಬಡಿಸುವಂತಹ ಮಹಾನಗರ. ಅಷ್ಟರವರೆಗೆ ದೊಡ್ಡ ಪಟ್ಟಣವನ್ನೇ ಕಾಣದಿದ್ದ ರಾಮಕೃಷ್ಣನ ಪಾಡೇನು? ಬೀದಿಯಲ್ಲಿ ಒಂದು ಭವ್ಯವಾದ ದೊಡ್ಡಮನೆ. ತಳಿರುತೋರಣಗಳಿಂದ ಅಲಂಕೃತವಾಗಿದೆ. ರಾಮಕೃಷ್ಣ ಕುತೂಹಲದಿಂದ ಅಲ್ಲಿಗೆ ಹೋಗಿ ಇಣುಕಿದ. ಮದುವೆ ನಡೆಯುತ್ತಿತ್ತು. ಯಾರೋ ಕರೆದು ಊಟ ಹಾಕಿದರು. ಹಲವು ದಿನಗಳಿಂದ ಅರೆ ಹೊಟ್ಟೆಕೂಳನ್ನೂ ಕಾಣದಿದ್ದವನಿಗೆ ಅಪೂರ್ವ ಮೃಷ್ಟಾನ್ನ ಭೋಜನ ಲಭಿಸಿತು. ಸಂಜೆ ಅಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಕಾದು ಕುಳಿತನು. ಬಂದೇ ಆಲೀಖಾನರ ಶಿಷ್ಯೆ ಚುನ್ನಾಬಾಯಿಯ ಹಾಡುಗಾರಿಕೆ ಹುಡುಗನನ್ನು ಮೈ ಮರೆಸಿತು. ಆಕೆ ಹಾಡಿದ ಮೀರಾ ಭಜನೆಗಳು ಅಪೂರ್ವವಾಗಿದ್ದವು.

ರಾಮಕೃಷ್ಣ ಮುಂಬಯಿ ಸುತ್ತುತ್ತ ಕಾಲು ಕೊಂಡು ಹೋದಲ್ಲಿ ಹೋಗುತ್ತ, ಕೈಗೆ ಸಿಕ್ಕಿದುದನ್ನು ತಿನ್ನುತ್ತ, ಸಂಗೀತ ನಡೆಯುವಲ್ಲಿ ನುಗ್ಗುತ್ತ, ಕೆಲವು ದಿನ ಕಳೆದನು. ಮನೆಮನೆ ತಿರುಗಾಡಿ ಭಜನ ಗೀತಗಳನ್ನು ಹಾಡಲಾರಂಭಿಸಿದನು. ಹುಡುಗನ ಕಂಠಮಾಧುರ್ಯ ಮೆಚ್ಚಿದ ಕೆಲವರು ಹಣ ವನ್ನಿತ್ತರು, ಊಟ ಹಾಕಿದರು. ಹನ್ನೆರಡು ರೂಪಾಯಿಗಳು ಕೂಡಿದವು. ಕೆಲವರ ಗುರುತು ಪರಿಚಯವು ಆಯಿತು. ಮುಂದೆ ಕೆಲವು ದಿನಗಳ ಬಳಿಕ ಇಂದೂರಿಗೆ ಹೋಗುವವ ಒಂದು ಗುಂಪನ್ನು ಸೇರಿಕೊಂಡು ತಾನೂ ಅಲ್ಲಿಗೆ ಹೊರಟನು.

ಇಂದೂರಿನಲ್ಲಿ

ಇಂದೂರು ಸೇರಿದಾಗ ಅಲ್ಲಿ ನಾನಾ ಸಾಹೇಬ ಪಾನಸೆ ಒಂಬ ಒಬ್ಬ ದೊಡ್ಡ ಸಂಗೀತಗಾರರಿರುವುದು ತಿಳಿಯಿತು. ರಾಮಕೃಷ್ಣ ಅವರ ಮನೆಗೆ ಹೋಗಿ ಕಾದು ನಿಂತು ತನ್ನ ಸಂಗೀತ ಕಲಿಯುವ ಹಂಬಲವನ್ನು ತೋಡಿ ಕೊಂಡನು. ಬಾಲಕನು ಹಾಡುವುದನ್ನು ಕೇಳಿ, ಅವನ ಸಂಗೀತದಲ್ಲಿನ ಆಸಕ್ತಿಯನ್ನು ಗಮನಿಸಿ, ಪಾನಸೆಯವರಿಗೆ ತುಂಬಾ ಸಂತೋಷವಾಯಿತು. ‘‘ಮಗೂ, ನಿನಗೆ ತಬಲಾ ಅಥವಾ ಪಖಾವಸ್ ಕಲಿಯಲು ಮನಸ್ಸಿದ್ದರೆ ನಾನು ಕಲಿಸುತ್ತೇನೆ. ಗಾಯಕನಾಗಬೇಕು ಎಂಬ ಬಯಕೆಯಾದರೆ ಗ್ವಾಲಿಯರಿಗೆ ಹೋಗು. ಅಲ್ಲಿ ಹಲವು ಸಮರ್ಥ ಗವಾಯಿಗಳಿದ್ದಾರೆ. ಅವರನ್ನು ಆಶ್ರಯಿಸು’’ ಎಂದರು.

ಇಂದೂರಿನಲ್ಲಿ ಇದ್ದ ನಾಲ್ಕು ತಿಂಗಳಲ್ಲಿ ರಾಮಕೃಷ್ಣನಿಗೆ ನಾನಾಸಾಹೇಬರದೇ ಆಶ್ರಯ. ಅವನಿಗೆ ಅಲ್ಲಿ ಹಲವಾರು ಸಂಗೀತ ಕಚೇರಿಗಳನ್ನು ಕೇಳುವ ಅವಕಾಶ ದೊರೆಯಿತು. ಮುಂದೆ ಅವನು ಉಜ್ಜೆ ನಿಗೆ, ಅಲ್ಲಿಂದ ಕಾಶಿಗೆ ತಲಪಿದನು.

ಕಾಶಿಯಲ್ಲಿ ನಿಸ್ಸಾರ್ ಹುಸೇನ್ ಖಾನ್, ರಹಿಮತ್ ಖಾನ್ ಮೊದಲಾದ ಹಲವು ಮಂದಿ ಮಹಾವಿದ್ವಾಂಸರ ಸಂಗೀತ ಕೇಳುವ ಸುಯೋಗವು ರಾಮಕೃಷ್ಣನಿಗೆ ಲಭಿಸಿತು. ಅಲ್ಲಿಂದ ಮುಂದೆ ಸಾಗಿ ಅವನು ಗ್ವಾಲಿಯರ್ ತಲಪಿದನು.

ಎಷ್ಟು ಗುರುದಕ್ಷಿಣೆ ಕೊಡುವೆ?

ಹಿಂದುಸ್ತಾನೀ ಸಂಗೀತ ಪದ್ಧತಿಯಲ್ಲಿ ಕೆಲವು ಪ್ರಸಿದ್ಧವಾದ ಶೈಲಿಗಳು ಇವೆ. ಇವುಗಳನ್ನು ‘ಘರಾನಾ’ ಗಳು ಎನ್ನುತ್ತಾರೆ. ದೇಶದ ಬೇರೆಬೇರೆ ಪ್ರದೇಶಗಳಲ್ಲಿ ಪ್ರಚಲಿತವಾಗಿದ್ದು ಪರಂಪರಾಗತವಾಗಿ ಗುರುವಿನಿಂದ ಶಿಷ್ಯನಿಗೆ ಅಥವಾ ತಂದೆಯಿಂದ ಮಗನಿಗೆ ದಾಟುತ್ತ ಬಂದ ಗಾಯನ ಶೈಲಿಯೇ ಘರಾನಾ. ಇವುಗಳಲ್ಲಿ ಗ್ವಾಲಿಯರ್, ಆಗ್ರಾ, ಕಿರಾಣಾ, ಜಯಪುರೀ ಹಾಗೂ ಪಾಟಿಯಾಲಾ ಘರಾನಾಗಳು ಮುಖ್ಯವಾದವುಗಳು.

ಗ್ವಾಲಿಯರ್ ಸಂಗೀತದ ತವರು. ಹಲವರು ಶ್ರೇಷ್ಠ ಸಂಗೀತಗಾರರಿರುವ ಸ್ಥಳ.

ಗ್ವಾಲಿಯರ್ ತಲಪಿದ ರಾಮಕೃಷ್ಣ ನಿಸ್ಸಾರ್ ಹುಸೇನ್ ಖಾನ್ ಸಾಹೇಬರನ್ನೇ ತನ್ನ ಗುರುಗಳೆಂದು ನಿರ್ಧರಿಸಿದನು. ಒಂದು ದಿನ ಪ್ರಾತಃಕಾಲ ಅವರ ಮನೆಗೆ ಹೋಗಿ ಸಾಷ್ಟಾಂಗವೆರಗಿದನು.

‘‘ನಾನು ಕಡು ಬಡವ, ಆದರೆ ಸಂಗೀತ ಕಲಿಯಬೇಕು ಎಂಬ ಅಪೇಕ್ಷೆ ಮಾತ್ರ ಬಲವಾಗಿದೆ. ನನಗೆ ಸಂಗೀತ ವಿದ್ಯಾದಾನ ಮಾಡಿ ಉದ್ಧಾರ ಮಾಡಬೇಕು’’ ಎಂದನು.

‘‘ಸಂಗೀತ ಕಲಿಯಬೇಕೇನು? ಏನಾದರೂ ಪಾಠವಾಗಿದೆಯೇ? ಹಾಡಲು ಬರುತ್ತದೆಯೇ?’’ ಎಂದು ಪ್ರಶ್ನಿಸಿದರು ಖಾನ್‌ಸಾಹೇಬರು.

ರಾಮಕೃಷ್ಣ ವಿನೀತನಾಗಿ ನುಡಿದನು, ‘‘ನನಗೆ ಹೇಳಿಕೊಳ್ಳುವಷ್ಟು ಸಂಗೀತ ಬರುವುದಿಲ್ಲ. ಪೊಹರೆ ಬುವಾ ಮತ್ತು ಮಾಲವಣದ ಹಡಪಬುವಾರವರಲ್ಲಿ ಕೆಲವು ಕಾಲ ಅಭ್ಯಾಸ ಮಾಡಿದ್ದೇನೆ. ನೀವು ಹಾಡೆಂದರೆ ತಿಳಿದುದನ್ನು ಹಾಡುತ್ತೇನೆ.’’

‘‘ಒಳ್ಳೆಯದು, ಹಾಡು ನೋಡೋಣ’’ ಎಂದರು ಖಾನ್‌ಸಾಹೇಬರು. ರಾಮಕೃಷ್ಣ ಸ್ವಲ್ಪವೂ ಅಳುಕದೆ ತಾನು ಅಭ್ಯಾಸ ಮಾಡಿದುದನ್ನು ಹಾಡಿ ತೋರಿಸಿದನು. ಹುಡುಗನ ಕಂಠಸ್ವರ, ಶ್ರುತಿ, ಲಯ, ಭಾವಶುದ್ಧಿಗಳು ಖಾನರಿಗೆ ಹಿಡಿಸಿದುವು. ಚೆನ್ನಾದ ಅಭ್ಯಾಸ ದೊರೆತಲ್ಲಿ ಈ ಹುಡುಗ ಉತ್ತಮ ಶ್ರೇಣಿಯ ಗಾಯಕನಾದಾನು, ತಮ್ಮ ಘರಾನವನ್ನು ಬೆಳೆಸಿ ಮುಂದುವರಿಸಿಯಾನು ಎಂದೆನಿಸಿ ‘‘ಸರಿ, ನಿನಗೆ ಪಾಠ ಹೇಳುತ್ತೇನೆ; ಎಷ್ಟು ಗುರುದಕ್ಷಿಣೆ ಕೊಡಲು ಸಾಧ್ಯ?’’

ಎಂದು ಕೇಳಿದರು.

ಗುರು ದೊರೆತರು

ಈ ಮಾತುಗಳನ್ನು ಕೇಳಿದ ರಾಮಕೃಷ್ಣನಿಗೆ ಶಕ್ತಿಯೇ ಇಂಗಿಹೋದಂತೆ ಕಂಡಿತು. ಪುನಃ ಖಾನ್ ಸಾಹೇಬರಿಗೆ ಸಾಷ್ಟಾಂಗವೆರಗಿದನು. ತೊದಲು ನುಡಿಯಿಂದ ಮಾತಾಡಿದನು. ‘‘ಗುರೂಜೀ, ನಾನು ಕಾಸಿಲ್ಲದ ದರಿದ್ರ, ತಂದೆ ಇಲ್ಲ, ತಾಯಿ ಊರಿನಲ್ಲಿ ಮನೆಗೆಲಸ ಮಾಡಿ ಬದುಕುತ್ತಿದ್ದಾರೆ. ನಾನು ತಮಗೇನು ಸಂಭಾವನೆ ಕೊಡಬಲ್ಲೆ? ನನಗೆ ಪಾಠ ಹೇಳಲು ಒಲ್ಲೆ ಎನ್ನಬೇಡಿ; ತಾವು ಹೇಳುವಷ್ಟು ಕಾಲ ತಮ್ಮ ಸೇವೆಯನ್ನು ನಿರ್ವಂಚನೆಯಿಂದ ಮಾಡುತ್ತೇನೆ. ಇದನ್ನೇ ನನ್ನ ಗುರುದಕ್ಷಿಣೆ ಎಂದು ತಿಳಿಯಬೇಕು’’ ಎಂದು ಕಣ್ಣೀರು ತುಂಬಿ ಹೇಳಿದನು.

ಖಾನ್‌ಸಾಹೇಬರು ಸ್ವಲ್ಪ ಹೊತ್ತು ಮೌನವಾಗಿದ್ದರು. ಬಳಿಕ ಏನು ತೋಚಿತೋ ‘‘ಆಗಲಿ, ನಾಳೆ ಬೆಳಿಗ್ಗೆ ಬಾ; ಪಾಠ ಆರಂಭಿಸುತ್ತೇನೆ’’ ಎಂದರು.

ರಾಮಕೃಷ್ಣನ ಆನಂದಕ್ಕೆ ಮೇರೆಯೇ ಉಳಿಯಲಿಲ್ಲ. ಅವರ ಪಾದಗಳ ಮೇಲೆ ಉರುಳಿದನು. ಸಂತೋಷಾಶ್ರುಗಳು ಗುರುಪಾದ ತೊಳೆದವು. ಅವರು ಪ್ರೀತಿಯಿಂದ ಹುಡುಗನನ್ನು ಮೇಲಕ್ಕೆತ್ತಿದರು. ಬಾಲಕನ ಮುಖವು ಅಪೂರ್ವ ತೇಜಸ್ಸಿನಿಂದ ಮಿನುಗುತ್ತಿತ್ತು.

ವಜ್ರಸಂಕಲ್ಪ

ಸಂಗೀತ ಪಾಠವೇನೋ ಆರಂಭವಾಯಿತು, ಆದರೆ ಉಣ್ಣುವುದೆಲ್ಲಿ? ಉಳಿಯುವುದೆಲ್ಲಿ? ಎಂಬ ಪ್ರಶ್ನೆ. ಕೈಯಲ್ಲಿ ಬಿಡಿಗಾಸೂ ಇಲ್ಲ. ಮನೆಮನೆ ತಿರುಗಿ ಭಿಕ್ಷಾನ್ನ ಬೇಡಿದನು ರಾಮಕೃಷ್ಣ. ಭಿಕ್ಷೆ ದೊರೆಯದ ದಿನ ಉಪವಾಸವೇ ಗತಿ ಚಳಿಗಾಲದಲ್ಲಿ ಮೈ ಮುಚ್ಚುವಷ್ಟು ಬಟ್ಟೆಯಿಲ್ಲ! ಗುರುಗಳು ಮುಸಲ್ಮಾನರು. ಅವರಲ್ಲಿ ಉಣ್ಣುವಂತಿಲ್ಲ; ಕಷ್ಟಸಹಿಸಲು ಅಸಾಧ್ಯಾದಾಗ ಅಳುವುದೊಂದೇ ದಾರಿ. ಇವನ ಪಾಡನ್ನು ನೋಡಿ ಹಲವರು ‘‘ಈ ಹುಡುಗನಿಗೆ ಹುಚ್ಚೇ ಹಿಡಿದಿದೆ; ಬರಿಯ ಲಂಗೋಟಿಯಲ್ಲಿ ಬೀದಿ ಬೀದಿ ಅಲೆಯುತ್ತಾನೆ ಹಾಡುತ್ತಾನೆ’’ ಎಂದರು. ಇನ್ನು ಕೆಲವರು ‘‘ನೀನು ಏಕೆ ಈ ಊರಲ್ಲಿ ಒದ್ದಾಡುತ್ತಿ? ನಿನಗೆ ಸಂಗೀತ ಈ ಜನ್ಮದಲ್ಲಿ ಬರಲಾರದು; ಮುಖ ಅಂದವಾಗಿದೆ, ನಾಟಕ ಕಂಪನಿಗಾದರೂ ಸೇರು’ ಎಂದರು. ಕೆಲವು ಪುಂಡ ಕಿಲಾಡಿಗಳಂತೂ ಈತನನ್ನು ಕಂಡೊಡನೆ ‘‘ಹೋ! ತಾನ್‌ಸೇನ್ ಬಂದ; ದಾರಿಬಿಡಿ, ದಾರಿಬಿಡಿ’’ ಎಂದು ಗೇಲಿ ಮಾಡಲು ಆರಂಭಿಸಿದರು.

ರಾಮಕೃಷ್ಣನದು ತೀರ ಹಟಮಾರಿ ಸ್ವಭಾವ. ಯಾವುದಕ್ಕೂ ಅವನು ಜಗ್ಗಲಿಲ್ಲ. ತನ್ನನ್ನು ಗೇಲಿ ಮಾಡುವವರನ್ನು ಕಂಡು ‘‘ತಾನ್‌ಸೇನ್‌ನೇನೂ ಹಾಡುತ್ತಲೇ ಹುಟ್ಟಿಬರಲಿಲ್ಲ; ಸಂಗೀತಗಾರರೆಲ್ಲರೂ ಪ್ರಯತ್ನದಿಂದಲೇ ವಿದ್ವಾಂಸರೆನ್ನಿಸಿದರುದು. ಇಲ್ಲಿ ಈಗ ಸಂಗೀತ ಕಲಿಯುತ್ತಿರುವವರನ್ನೆಲ್ಲ ಮೀರಿಸುವ ಗಾಯಕನು ನಾನಾಗುತ್ತೇನೆ. ನೆನಪಿರಲಿ’’ ಎಂದನು. ಈ ಮಾತಿಗೆ ದೊರೆತುದು ಅವಹೇಳನದ ನಗೆ ಮಾತ್ರ.

ಇದೇ ಹೊತ್ತಿಗೆ ಸರಿಯಾಗಿ ವಯೋಧರ್ಮಕ್ಕೆ ಅನುಸಾರವಾಗಿ ರಾಮಕೃಷ್ಣನ ಸ್ವರವೂ ಒಡೆಯಿತು. ಕೆಲವು ಕಾಲ ಆತನಿಗೆ ಮಾತಾಡಲು ಕಷ್ಟವಾಯಿತು. ಆಗಲಂತೂ ಎಲ್ಲರೂ ‘‘ಅಯ್ಯೋ ಹುಚ್ಚೇ, ನೀನು ಖಂಡಿತವಾಗಿಯೂ ಗಾಯಕನಾಗುವುದಿಲ್ಲ. ಇಲ್ಲಿ ಅನ್ನವಿಲ್ಲದೆ ಸಾಯಬೇಡ! ಊರಿಗೆ ಹೋಗು’’ ಎಂದರು.

ಹುಡುಗ ಮಾತ್ರ ಹಟ ಬಿಡಲಿಲ್ಲ. ರಾತ್ರಿ ಹಗಲೆನ್ನದೆ ಸತತವಾಗಿ ತನ್ನ ಅಭ್ಯಾಸ ಮುಂದುವರಿಸಿದನು. ಒಡೆದ ಸ್ವರ ಕೂಡಿ ಬಂತು. ‘ನನ್ನನ್ನು ಅವಹೇಳನ ಮಾಡಿದವರಿಂದಲೇ ನಾನು ಗಾಯಕ ಎಂದು ಒಪ್ಪಿಸುತ್ತೇನೆ. ಅದಾಗದಿದ್ದಲ್ಲಿ ಹಾಗೆಯೇ ಸತ್ತರೂ ಚಿಂತಿಲ್ಲ’ ಎಂದು ನಿರ್ಧರಿಸಿದನು.

ಗುರುವಿನ ಅನುಗ್ರಹ

ಗುರುಗಳಾದ ನಿಸ್ಸಾರ್ ಹುಸೇನ್‌ಖಾನರು ಸ್ವಲ್ಪ ಸಿಡುಕಿನ ಸ್ವಭಾವದವರು. ಕೆಲವೊಮ್ಮೆ ಕೋಪವೇರಿದಾಗ ‘‘ನಡೆ ಇಲ್ಲಿಂದ; ನಿನಗೆ ಬಿಟ್ಟಿ ಪಾಠಹೇಳಲು ನಾನೇನೂ ನಿನ್ನ ಅಪ್ಪನ ನೌಕರನಲ್ಲ’’ ಎಂದುದೂ ಉಂಟು. ಆದರೆ ಇಂತಹ ಕಟುಮಾತುಗಳನ್ನೆಲ್ಲ ಮಹಾಪ್ರಸಾದವೆಂದು ರಾಮಕೃಷ್ಣನು ದೈನ್ಯದಿಂದ ತಲೆಬಾಗಿ ಕೈಮುಗಿದು ಸ್ವೀಕರಿಸಿದನು. ಶಿಷ್ಯನ ಪ್ರಶಾಂತ ಸ್ವಭಾವವು ಗುರುಗಳಿಗೇ ಆಶ್ಚರ್ಯವನ್ನು ಉಂಟುಮಾಡಿತು. ಗುರುಗಳನ್ನು ತೃಪ್ತಿಪಡಿಸಲು ಆತ ಅನನ್ಯಭಾವದಿಂದ ಅವರ ಸೇವೆ ಮಾಡಿದನು. ಮನೆಯ ಕಸ ಗುಡಿಸಿದನು; ಬಚ್ಚಲು ಮನೆಗೆ ನೀರು ಹೊತ್ತನು; ಬಟ್ಟೆ ಒಗೆದನು; ಪೇಟೆಯಿಂದ ಮಾಂಸವನ್ನೂ ಕೊಂಡುತಂದನು.

ಹೊರಗಿನಿಂದ ಕಠೋರತೆ ತೋರುತ್ತಿದ್ದರೂ ಖಾನ್ ಸಾಹೇಬರದ್ದು ಬಹು ಕೋಮಲ ಅಂತಃಕರಣ. ಶಿಷ್ಯನನ್ನು ತಮ್ಮ ಮನೆಯಲ್ಲಿಯೇ ಉಳಿಸಿಕೊಂಡರು. ಇದರಿಂದ ಗುರುಗಳು ಹೇಳುವ ಪಾಠವನ್ನೆಲ್ಲ ಗಮನವಿರಿಸಿ ಕೇಳುವ ಅನುಕೂಲತೆ ರಾಮಕೃಷ್ಣನಿಗೆ ಒದಗಿತು. ಅಲ್ಲದೆ ಗುರುಗಳೂ ಸಮಯ ದೊರೆತಾಗಲೆಲ್ಲ ಶಿಷ್ಯನಿಗೆ ಪಾಠ ಹೇಳಿದರು; ಸಾಧನೆ ಮಾಡಿಸಿದರು. ವಿವಿಧ ರಾಗಗಳ ಆಲಾಪ, ಅಸ್ತಾಯಿ, ತಾನಗಳನ್ನು ಕ್ರಮಬದ್ಧವಾಗಿ, ಸಂಪ್ರದಾಯಶುದ್ಧವಾಗಿ ಹೇಳಿಕೊಟ್ಟರು. ಅಡಿಗಡಿಗೆ ಅವನನ್ನು ತಿದ್ದಿದರು. ಕ್ರಮೇಣ ಗುರುಗಳ ಸಂಗೀತ ಕಚೇರಿಯ ಅವಕಾಶದಲ್ಲಿ ಹಿಂದಿನಿಂದ ಕುಳಿತು ತಂಬೂರಿ ಹಿಡಿದು ಹಾಡುವ ಭಾಗ್ಯವು ರಾಮಕೃಷ್ಣನಿಗೆ ಲಭಿಸಿದಾಗ ಆತನ ಆನಂದಕ್ಕೆ ಪಾರವಿರಲಿಲ್ಲ. ಶಿಷ್ಯನ ಪ್ರಗತಿ ಖಾನ್ ಸಾಹೇಬರಿಗೂ ಮೆಚ್ಚುಗೆಯಾಯಿತು. ತಮ್ಮ ಮನೆತನದ ಸಂಗೀತ ಸಂಪ್ರದಾಯವನ್ನು ಮುಂದಕ್ಕೆ ತರುವ ಸಮರ್ಥ ಶಿಷ್ಯ ಈತ ಎಂಬುದನ್ನು ಮನಗಂಡರು.

ಸಂಗೀತ ಸರಸ್ವತಿ ಒಲಿದಳು

ಎಂಟು ಹತ್ತು ವರ್ಷಗಳ ಸತತ ಪರಿಶ್ರಮದಿಂದ ರಾಮಕೃಷ್ಣ ನಿಪುಣಗಾಯಕ ಎನಿಸಿದರು. ಆತನ ಶ್ರೇಯಸ್ಸನ್ನು ಕಂಡು ಅಸೂಯೆ ಪಡುವವರು ಸಾಕಷ್ಟು ಮಂದಿ ಇದ್ದರೂ ಸಂಗೀತ ಕೇಳಿದಾಗ ಮಾತ್ರ ಅವರಿಂದಲೂ ‘ಶಹಬಾಸ್’ ಎನ್ನದಿರಲು ಆಗಲಿಲ್ಲ. ರಾಮಕೃಷ್ಣನಿಗೆ ಸಂಗೀತಕ್ಕೆ ಕರೆಗಳು ಬರಲು ಆರಂಭವಾಯಿತು. ಗುರುಗಳಾದ ನಿಸ್ಸಾರ್ ಹುಸೇನ್ ಖಾನರು ಮನದುಂಬಿ ಆಶೀರ್ವದಿಸಿ ಶಿಷ್ಯನ ಕಛೇರಿಯನ್ನು ಮುಂದೆ ಕುಳಿತು ಕೇಳಿ ಆನಂದಿಸುತ್ತಿದ್ದರು; ಮೆಚ್ಚುತ್ತಿದ್ದರು. ಗಾಯನದ ಅನಂತರ ಶಿಷ್ಯನಿಂದ ಆಗಿರಬಹುದಾದ ಲೋಪ ದೋಷಗಳನ್ನು ವಿವರಿಸಿ ತಿದ್ದುತ್ತಿದ್ದರು.

ಜನ ರಾಮಕೃಷ್ಣನನ್ನು ಈಗ ರಾಮಕೃಷ್ಣ ಬುವಾ ಎನ್ನತೊಡಗಿದರು.

ಸಂಗೀತ ಕಚೇರಿಗಳಿಂದ ಸಂಪಾದನೆಯೂ ಆಗತೊಡಗಿತು. ರಾಮಕೃಷ್ಣನು ತನ್ನ ಸಂಪಾದನೆಯಲ್ಲಿ ಕಾಲಂಶವನ್ನು ಮಾತ್ರ ತನ್ನ ಖರ್ಚಿಗಾಗಿ ಇರಿಸಿಕೊಂಡನು. ಉಳಿದ ಹಣವನ್ನೆಲ್ಲ ಸಂಗ್ರಹಿಸಿ ಗುರುಗಳಿಗೆ ಸಮರ್ಪಿಸಿದನು.

ಭಿಕ್ಷಾನ್ನದಿಂದ ಜೀವಿಸುತ್ತಿದ್ದ ಬಡ ಹುಡುಗ, ತಮ್ಮ ಶಿಷ್ಯ, ರಾಮಕೃಷ್ಣ ಬುವಾ ಎನಿಸಿದುದನ್ನು ಕಂಡು ಖಾನ್ ಸಾಹೇಬರಿಗೆ ಮಹದಾನಂದ. ತಮ್ಮ ವಿದ್ವತ್ತನ್ನೆಲ್ಲ ನಿರ್ವಂಚನೆಯಿಂದ ಶಿಷ್ಯನಿಗೆ ಧಾರೆಯೆರೆದರು. ಶಿಷ್ಯನಿಗೆ ಸಂಗೀತವು ಒಲಿಯಿತೆಂದು ಸಂತಸ ತಾಳಿದರು.

ರಾಮಕೃಷ್ಣಬುವಾರಿಗೆ ಚೀಜು (ಹಾಡು)ಗಳನ್ನು ಸಂಗ್ರಹಿಸುವ ಹವ್ಯಾಸ ಬಹಳ. ಗುರುಗಳಿಂದ ನೂರುಗಟ್ಟಲೆ ಚೀಜುಗಳ ಪಾಠವಾಗಿದ್ದರೂ ತಾನು ಸಂಧಿಸಿದ ಸಂಗೀತಗಾರರಿಂದ, ಅವರು ಗಾಯಕರೇ ಆಗಿರಲಿ ಅಥವಾ ತಬಲಜೀ ಸಾರಂಗಿವಾಲರೇ ಆಗಿರಲಿ, ಅವರಿಂದ ಚೀಜುಗಳನ್ನು ಸಂಗ್ರಹಿಸಿದರು. ಹೀಗಾಗಿ ರಾಮಕೃಷ್ಣ ಬವಾರೊಡನೆ ಸಾವಿರಾರು ಚೀಚುಗಳ ಸಂಗ್ರಹವಾಯಿತು. ಅಪೂರ್ವರಾಗ ತಾಳಗಳಲ್ಲಿ ಚೀಜು ಬೇಕಾದರೆ ರಾಮಕೃಷ್ಣಬುವಾರನ್ನು ಕೇಳಬೇಕು ಎಂಬಲ್ಲಿಯವರೆಗೆ ಅವರ ಖ್ಯಾತಿ ಹಬ್ಬಿತು.

ಶಿಷ್ಯ ವೃತ್ತಿ ಪೂರೈಸಿತು.

ವಿದ್ಯೆಯಲ್ಲಿ ಪಾರಂಗತರಾದಾಗ ತಾವು ಕಲಿತುದನ್ನು ಪ್ರದರ್ಶಿಸಬೇಕು, ಬೇರೆಬೇರೆ ಪ್ರಾಂತಗಳಿಗೆ, ರಾಜಾಸ್ಥಾನಗಳಿಗೆ, ಪಟ್ಟಣಗಳಿಗೆ ಹೋಗಿ ಹೆಸರು ಗಳಿಸಬೇ ಎಂಬ ಆಸೆ ಮೂಡುವುದು ಸ್ವಾಭಾವಿಕ. ತಾನೂ ಒಬ್ಬ ಸಮರ್ಥಗಾಯಕ ಎಂಬ ಅರಿವು ರಾಮಕೃಷ್ಣ ಬುವಾರಿಗೆ ಆದಾಗ ತಾನೂ ನಾಲ್ಕು ಊರುಗಳನ್ನು ಸುತ್ತಬೇಕು, ಅಲ್ಲಲ್ಲಿ ಸಂಗೀತ ಕಚೇರಿಗಳನ್ನು ಮಾಡಿ ಜನಮನ್ನಣೆ ಪಡೆಯಬೇಕು, ಕೀರ್ತಿಗಳಿಸಬೇಕು ಎಂಬ ಅಭಿಲಾಷೆ ಮೂಡಿತು. ಗುರುಗಳ ಅಪ್ಪಣೆ ಪಡೆದೇ ತಾನು ಹೊರಡಬೇಕು ಎಂದು ನಿಶ್ಚಯಿಸಿದರು.

ಒಂದು ದಿನ ಸಮಯ ಕಾದು, ಗುರುಗಳು ಸಂತೃಪ್ತರಾಗಿದ್ದಾಗ ಅವರೆದುರಿಗೆ ಹೋಗಿ ಕೈ ಕಟ್ಟಿ ನಿಂತರು. ಹೆದರಿ ಹೆದರಿ ತೊದಲು ಮಾತುಗಳಿಂದ ತಮ್ಮ ಮನದಾಸೆಯನ್ನು ನಿವೇದಿಸಿಕೊಂಡರು. ಶಿಷ್ಯನ ಮಾತುಗಳನ್ನು ಕೇಳಿದ ಗುರುಗಳು ಎವೆಯಿಕ್ಕದೆ ಸ್ವಲ್ಪ ಹೊತ್ತು ಅವನನ್ನೇ ನೋಡಿದರು. ಪ್ರಿಯ ಶಿಷ್ಯನ ಅಗಲುವಿಕೆಯನ್ನು ಅವರಿಂದ ಊಹಿಸಲೂ ಅಸಾಧ್ಯವಾಯಿತು.

ರಾಮಕೃಷ್ಣ‘‘! ನನ್ನನ್ನು ಬಿಟ್ಟು ಹೋಗುವೆಯಾ?’’ ಎಂದು ಒಂದೇ ಮಾತಿನಿಂದ ತಮ್ಮ ಮನದ ದುಗುಡವನ್ನೆಲ್ಲ ತೋಡಿಕೊಂಡರು. ರಾಮಕೃಷ್ಣರಿಗೆ ಮುಂದೆ ಮಾತನಾಡಲು ಸಾಧ್ಯವಾಗಲಿಲ್ಲ. ಕಣ್ಣೀರು ತುಂಬಿತು. ‘‘ಇಲ್ಲ ಗುರುಗಳೇ! ನನ್ನ ಅಪರಾಧವನ್ನು ಮನ್ನಿಸಿ; ತಮಗೆ ಬೇಸರ ಬರಿಸುವ ಯಾವ ಕೆಲಸವನ್ನೂ ಮಾಡುವುದಿಲ್ಲ. ತಮ್ಮೊಂದಿಗೇ ಇರುತ್ತೇನೆ’’ ಎಂದರು.

ಖಾನ್‌ಸಾಹೇಬರು ತುಸುಹೊತ್ತು ಯೋಚಿಸಿದರು. ‘‘ಇಲ್ಲ ಮಗು. ನಿನ್ನ ಮೇಲಿನ ಪ್ರೇಮವು ನನಗೆ ನಿನ್ನನ್ನು ಅಗಲಿರಲು ಅಸಾಧ್ಯ ಎನಿಸಿತು. ಆದುದರಿಂದ ಹಾಗೆಂದೆ. ಆದರೆ ಅದು ಸರಿಯಲ್ಲ. ನೀನು ಇಷ್ಟು ವರ್ಷ ಕಷ್ಟಪಟ್ಟು ಸಂಪಾದಿಸಿದ ವಿದ್ಯೆಯನ್ನು ಹಾಗೆಯೇ ಮುಚ್ಚಿಟ್ಟುಕೊಂಡರೆ ಫಲವೇನು? ನಮ್ಮ ಮನೆತನದ ಈ ಗಂಧರ್ವಗಾನದ ಸಂಪ್ರದಾಯದ ನಿನ್ನಿಂದ ಭಾರತದಲ್ಲೆಲ್ಲ ಪ್ರಚಾರವಾಗಬೇಕು ಎಂಬುದೇ ದೇವರ ಇಚ್ಛೆ ಎಂದು ನಾನು ತಿಳಿಯುತ್ತೇನೆ. ಹೊರಡು, ದೇಶವನ್ನೆಲ್ಲ ಸುತ್ತಿ ಸಂಗೀತದ ಜಯಭೇರಿ ಮೊಳಗಿಸು. ನಿನಗೆ ಕೀರ್ತಿ ಲಭಿಸಿದರೆ ಅದು ನನಗೆ ಬಂದಂತೆಯೇ ಅಲ್ಲವೆ? ಅಲ್ಲಾನ ಕೃಪೆಯೂ ನನ್ನ ಆಶೀರ್ವಾದವೂ ಎಂದೆಂದಿಗೂ ನಿನ್ನ ಮೇಲೆ ಪರಿಪೂರ್ಣವಾಗಿ ಇರುತ್ತದೆ. ನನ್ನನ್ನು ಮಾತ್ರ ಮರೆಯಬೇಡ. ಆಗಾಗ ಬಂದು ಕಂಡು ಸಂತೋಷಪಡಿಸುತ್ತಿರು. ನಿನಗೆ ಒಳ್ಳೆಯದಾಗಲಿ’’ ಎಂದು ಅಪ್ಪಿಕೊಂಡು ತಲೆ ಸವರಿದರು.

ರಾಮಕೃಷ್ಣಬುವಾ ಗುರುಚರಣಗಳಿಗೆ ಸಾಷ್ಟಾಂಗ ವೆರಗಿದರು. ಕಣ್ಣೀರಿನಿಂದ ಪಾದಗಳನ್ನು ತೊಳೆದರು. ನಾನಿಂದು ಧನ್ಯ ಎಂದು ತೊದಲಿದರು.

ದೇಶ ಪರ್ಯಟನ

ಗುರುಗಳನ್ನು ಬೀಳ್ಕೊಂಡು ರಾಮಕೃಷ್ಣ ಬುವಾ ಅವರು ಸಂಗೀತ ಕಚೇರಿಗಳಿಗೆ ಅವಕಾಶ ಅರಸುತ್ತಾ ಹೊರಟರು. ನಿಸ್ಸಾರ್ ಹುಸೇನ್‌ಖಾನರ ಶಿಷ್ಯರೆಂದಾಗ ಅವರ ಸಂಗೀತ ಕೇಳಲು ಪ್ರತಿ ಊರಿನಲ್ಲೂ ಸಾಕಷ್ಟು ರಸಿಕ ಜನ ಉತ್ಸುಕರಾಗಿ ಮುಂದೆ ಬಂದರು. ಅಲ್ಲಲ್ಲಿ ಸಂಗೀತ ಕಚೇರಿಗಳನ್ನು ಮಾಡುತ್ತ ಬುವಾ ಅವರು ಆಗ್ರಾ ತಲಪಿದರು. ಹಿಂದೂಸ್ತಾನೀ ಸಂಗೀತಕ್ಕೆ ಹೆಸರುವಾಸಿಯಾದ ಮತ್ತೊಂದು ಊರು ಆಗ್ರಾ ಪಟ್ಟಣ. ಅಲ್ಲಿನ ಸಂಗೀತ ಸಂಪ್ರದಾಯ ‘ಆಗ್ರಾಘರಾನಾ’ ಎಂದು ಪ್ರಸಿದ್ಧವಾಗಿದೆ. ಆಗ್ರಾದಲ್ಲಿ ಆರೆಂಟು ಸಂಗೀತ ಕಚೇರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬುವಾ ಅವರು ಸಂಗೀತ ವಿದ್ವಾಂಸರ ಹಾಗೂ ರಸಿಕ ಜನರ ಪ್ರೇಮಾದರಗಳಿಗೆ ಪಾತ್ರರಾದರು. ಅಲ್ಲಿಂದ ಮುಂದೆ ಅವರು ಉದಯಪುರ, ಜಯಪುರ, ರಾಮಪುರ ಮೊದಲಾದ ಸಂಗೀತಕ್ಕೆ ಹೆಸರಾದ ಪಟ್ಟಣಗಳಿಗೆಲ್ಲ ಹೋದರು. ಹೋದೆಡೆಗಳಲ್ಲೆಲ್ಲ ಬುವಾ ಅವರಿಗೆ ಸಂಗೀತ ಕಚೇರಿ ನಡೆಸಲು ಏನೂ ಕಷ್ಟವಾಗಲಿಲ್ಲ. ಊರಿಂದೂರಿಗೆ ಅವರ ಕೀರ್ತಿ ಸಾಕಷ್ಟು ಹಬ್ಬಿತ್ತು. ಗುರು ಅನುಗ್ರಹ ಅವರಿಗೆ ಸದಾ ಇತ್ತು. ಬುವಾ ಅವರ ಗಂಭೀರ ಕಂಠ, ರಾಗ ವಿನ್ಯಾಸದ ವೈಖರಿ, ಖ್ಯಾಲ್‌ಗಳನ್ನು ಹಾಡುವ ಉತ್ತಮ ಪದ್ಧತಿ ಅಸಾಧಾರಣ ಕಲ್ಪನೆಗಳೆಲ್ಲ ಶ್ರೋತೃಗಳ ಮನದ ಮೇಲೆ ಗಾಢವಾದ ಪರಿಣಾಮವನ್ನು ಮೂಡಿಸಿದುವು.

ಅಷ್ಟರಲ್ಲಿ ರಾಮಕೃಷ್ಣ ಬುವಾ ಅವರಿಗೆ ತಮ್ಮ ಗುರುಗಳನ್ನು ಕಾಣಬೇಕು ಎಂಬ ಬಯಕೆ ಮೂಡಿತು. ತಡಮಾಡದೆ ಗ್ವಾಲಿಯರ್‌ಗೆ ಬಂದು ಸೇರಿದರು. ಗುರು ಶಿಷ್ಯರ ಪುನರ್ಮಿಲನ ಇಬ್ಬರಿಗೂ ಅಪಾರ ಸಂತೋಷವನ್ನಿಸುತ್ತಿತ್ತು. ತಾವು ನಡೆಸಿದ ಸಂಗೀತ ಕಚೇರಿಗಳ ವಿವರಗಳನ್ನೆಲ್ಲ ಶಿಷ್ಯ ಗುರುಗಳಿಗೆ ವರದಿ ಒಪ್ಪಿಸಿದರು. ತನಗೆ ದೊರೆತ ಮಾನ, ಮರ್ಯಾದೆಗಳೆಲ್ಲ ಗುರುಕೃಪೆ ಎಂದರು. ತಾನು ಆತನಕ ಸಂಪಾದಿಸಿದ ಹಣವನ್ನೆಲ್ಲ ಗುರುಗಳಿಗೆ ಸಮರ್ಪಿಸಿ ಆಶೀರ್ವಾದ ಬೇಡಿದರು. ವಿನಯ ಸಂಪನ್ನನಾದ ಶಿಷ್ಯನ ಕೀರ್ತಿಯನ್ನು ಗುರುಗಳು ತನ್ನದೇ ಕೀರ್ತಿಯೆಂದು ತಿಳಿದರು. ಕೆಲವು ಕಾಲ ಗ್ವಾಲಿಯರ್‌ನಲ್ಲಿ ಕಳೆದ ಬಳಿಕ ಬುವಾ ಅವರು ಪುನಃ ಸಂಚಾರಕಕ್ಕೆ ಹೊರಟರು.

ಪರಮಾತ್ನನೆಡೆಗೆ ಸಂಗೀತ ಸೋಪಾನ

ರಾಮಕೃಷ್ಣ ಬುವಾ ಅವರು ಬರೇಲಿಗೆ ಬಂದಾಗ ಅಲ್ಲಿ ಅವರಿಗೆ ಸ್ವಾಮಿ ವಿವೇಕಾನಂದರ ದರ್ಶನಭಾಗ್ಯ ಲಭಿಸಿತು. ವಿವೇಕಾನಂದರು ಬುವಾ ಅವರ ಸಂಗೀತ ಕೇಳಿ ಸಂತೋಷಗೊಂಡರು. ‘ಸಂಗೀತದಿಂದ ಲೌಕಿಕ ಸುಖ ಸಂತೋಷಗಳನ್ನು ಮಾತ್ರ ಪಡೆದರೆ ಸಾಲದು. ಮಾನವನ ಪಾರಮಾರ್ಥಿಕ ಜೀವನಕ್ಕೆ ಸಂಗೀತ ಸೋಪಾನವಾಗಬೇಕು. ಪರಮಾತ್ಮ ಗಾನಲೋಲ. ಅವನನ್ನು ಸಂಗೀತಪ್ರಿಯ ಎಂದೂ ಸಂಬೋಧಿಸಿದ್ದಾರೆ ನಮ್ಮ ಪೂರ್ವಿಕರು. ಗಾನಾರಾಧನೆ ಯಿಂದ ಪರಮಾತ್ಮನು ಸಂತುಷ್ಟನಾಗುತ್ತಾನೆ ಎಂದಿದ್ದಾರೆ ಋಷಿಮುನಿಗಳು. ಗಾನಬಲ್ಲವನಿಗೆ ಪರಮಾತ್ಮನ ಆರಾಧನೆಗೆ ಬೇರೆ ಮಾರ್ಗಗಳ ಅವಶ್ಯವಿಲ್ಲ. ವಿಶ್ವವೇ ನಾದಮಯ ವಾದುದು. ಆ ನಾದಬ್ರಹ್ಮನನ್ನೂ ಸಂಗೀತ ಮಾಧ್ಯಮದ ಮೂಲಕ ಆರಾಧಿಸಲು, ಅರಿಯಲು ಸಾಧ್ಯವಾದವನಿಗೆ ಈಶ್ವರ ಸಾಕ್ಷಾತ್ಕಾರ ಸುಲಭ. ಗಾನಾರಾಧನೆಯಲ್ಲಿ, ಗಾನೋಪದೇಶದಲ್ಲಿ ಗಾನ ತಲ್ಲೀನತೆಯಲ್ಲಿ ಜೀವನ ಸಾರ್ಥಕವಾಗಬೇಕು’’ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತುಗಳು ರಾಮಕೃಷ್ಣ ಬುವಾ ಅವರಿಗೆ ನವದೃಷ್ಟಿಯನ್ನೇ ನೀಡಿದಂತಾಯಿತು. ಸಂಗೀತವನ್ನು ಪಾರಮಾರ್ಥ ಮಾರ್ಗಕ್ಕೆ ಸೋಪಾನವಾಗಿಸಬೇಕು; ಗಾನೋಪಾಸನೆಯಿಂದ ಜಗದೀಶ್ವರನ ಪಾದಾರವಿಂದವನ್ನು ಅರ್ಚಿಸಿ ಜನ್ಮಸಾರ್ಥಕ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸಿದರು.

ಬುವಾ ಅವರು ಬರೇಲಿಯಿಂದ ನೇಪಾಳಕ್ಕೆ ಹೋದರು. ಅಲ್ಲಿ ಕೆಲವು ಕಾಲವಿದ್ದು ಹಣ ಕೀರ್ತಿ ಎರಡನ್ನೂ ಗಳಿಸಿ ಅಲ್ಲಿಂದ ಹೊರಟು ಪುನಃ ಒಮ್ಮೆ ಉತ್ತರ ಭಾರತವನ್ನೆಲ್ಲ ಸುತ್ತಿ ಮುಂಬಯಿಗೆ ಬಂದರು.

ಮರಳಿ ಮನೆಗೆ

ಮಹಾರಾಷ್ಟ್ರದಿಂದ ಹೊರಟು ಹೋದ ಸುಮಾರು ಇಪ್ಪತ್ತು ವರ್ಷಗಳ ಅನಂತರ ರಾಮಕೃಷ್ಣವರೆs ಪುನಃ ಮುಂಬಯಿಗೆ ಬಂದರು. ಅವರು ಬರುವಮುನ್ನವೇ ಅವರಕೀರ್ತಿ ಮುಂಬಯಿಯಲ್ಲಿ ಸಾಕಷ್ಟು ಪಸರಿಸಿತ್ತು. ಹಾಗಾಗಿ ನಗರದ ರಸಿಕರೂ ಸಂಗೀತಗಾರರೂ ಅವರನ್ನು ಗೌರವದಿಂದ ಬರಮಾಡಿಕೊಂಡರು. ಹಲವಾರು ಸಂಗೀತ ಕಚೇರಿಗಳನ್ನು ಏರ್ಪಡಿಸಿದರು. ಪ್ರತಿಯೊಂದು ಕಚೇರಿಯೂ ಯಶಸ್ವಿಯಾಯಿತು. ವರೆsಬುವಾ ಉನ್ನತ ಶ್ರೇಣಿಯ ಸಂಗೀತಗಾರರು ಎಂದು ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟರು.

ರಾಮಕೃಷ್ಣರಿಗೆ ಆಗಾಗ ತಮ್ಮ ತಾಯಿಯ ನೆನಪಾಗುತ್ತಿತ್ತು. ಅಂತೆಯೇ ಎಳೆವಯಸ್ಸಿನಲ್ಲಿ ಮದುವೆಯಾಗಿ ಊರಲ್ಲಿ ಬಿಟ್ಟು ಬಂದಿದ್ದ ಪತ್ನಿಯ ಬಗೆಗೂ ಚಿಂತಿಸುತ್ತಿದ್ದರು. ಪಂಡಿತನಾಗದೆ ಊರಿಗೆ ಹಿಂದಿರುಗಲಾರೆ ಎಂಬ ಒಂದು ಛಲ ಮಾತ್ರ ಅವರನ್ನು ಇಷ್ಟು ವರ್ಷಗಳ ಕಾಲ ಹುಟ್ಟಿದ ನೆಲ, ಕುಟುಂಬಗಳನ್ನು ದೂರವಿರಿಸುವಂತೆ ಮಾಡಿತ್ತು. ಕೊನೆಗೊಮ್ಮೆ ಅವರು ಊರಿಗೆ ಮರಳಿದಾಗ ತಾಯಿಗಾದ ಸಂತೋಷ ಹೇಳತೀರದು. ವಿದ್ವಾಂಸನಾಗಿ ಸಾಕಷ್ಟು ಕೀರ್ತಿ ಹಣಗಳನ್ನು ಸಂಪಾದಿಸಿ ಮನೆಗೆ ಮರಳಿ ತನ್ನಡಿಗೆರಗಿನ ಮಗನನ್ನು ಚಿಕ್ಕಮಗುವಿನಂತೆಯೇ ಭಾವಿಸಿ, ಮೇಲೆತ್ತಿ ಅಪ್ಪಿಕೊಂಡಳು; ಆನಂದಾಶ್ರುಗಳನ್ನು ಸುರಿಸುತ್ತ ತಲೆ ನೇವರಿಸಿದಳು; ಅಡಿಗಡಿಗೆ ಒಳ್ಳೆಯದಾಗಲೆಂದು ಹರಿಸಿದಳು. ಪಂಡಿತನಾಗಿ ಮನೆಗೆ ಮರಳಿದ ಪತಿಯನ್ನು ಕಂಡು ಪತ್ನಿ ಹೆಮ್ಮೆಯಿಂದ ಉಬ್ಬಿದಳು; ಸಡಗರದಿಂದ ನಲಿದಳು ‘‘ನನ್ನ ಶ್ರೇಯಸ್ಸೆಲ್ಲವೂ ತಾಯಿಯಕೃಪೆ, ಗುರುಗಳ ಆಶೀರ್ವಾದ ನಮ ಮತ್ತು ಪತ್ನಿಯ ನಿರ್ಮಲ ಪ್ರೇಮದ ಫಲ’’ ಎಂದರು ವರೆs.

ಮುಂದೆ ಕೆಲವು ಕಾಲ ವರೆs ಗೋವೆಯಲ್ಲಿ ನೆಲಸಿದರು. ಅಲ್ಲಿ ಕೆಲವು ಶಿಷ್ಯರಿಗೆ ಪಾಠ ಹೇಳಿದರು. ಸಂಗೀತ ಕಚೇರಿಗಳಿಗೆ ಕರೆ ಬಂದಾಗಲೆಲ್ಲ ಅಲ್ಲಿಂದಲೇ ಸಂಚಾರ ಕೈಗೊಳ್ಳುತ್ತಿದ್ದರು. ಪಂಜಾಬು, ಕಾಶ್ಮೀರಗಳಲ್ಲೂ ಅವರ ಹಲವಾರು ಸಂಗೀತ ಕಚೇರಿಗಳು ನಡೆದವು. ಉತ್ತರ ಭಾರತ ಸಂಚಾರದಿಂದ ಮರಳುವಾಗಲೆಲ್ಲ ಅವರು ತಪ್ಪದೆ ಗ್ವಾಲಿಯರ್‌ಗೆ ಹೋಗಿ ತಮ್ಮ ಗುರುಗಳನ್ನು ಕಂಡು ಅವರನ್ನು ವಂದಿಸಿ ಹಿಂದಿರುಗುತ್ತಿದ್ದುದು ಅವರ ಎಣೆಯಿಲ್ಲದ ಗುರುಪ್ರೇಮವನ್ನು ಕಾಣಿಸುತ್ತದೆ.

ಕರ್ನಾಟಕದ ಕರೆ

೧೯೧೮ರ ಸುಮಾರಿಗೆ ಒಂದು ಸಂಗೀತ ಕಚೇರಿಯ ಆಹ್ವಾನದ ಮೇರೆಗೆ ಬೆಳಗಾವಿಗೆ ಬಂದರು. ಬೆಳಗಾವಿಯ ರಸಿಕರು ಅವರ ಗಾಯನ ಕೇಳಿ ಮೆಚ್ಚಿ ಹಲವು ಕಚೇರಿ ಹಲವು ಕಚೇರಿಗಳನ್ನು ಏರ್ಪಡಿಸಿದರು. ಸುತ್ತಮುತ್ತಲಿನ ಪ್ರದೇಶಗಲಾದ ಧಾರವಾಡ, ಗದಗ, ಹುಬ್ಬಳ್ಳಿ, ಬಾಗಲಕೋಟೆ, ಬಿಜಾಪುರಗಳಲ್ಲಿ ಅವರ ಅಸಂಖ್ಯಾತ ಗಾಯನಕೂಟಗಳು ನಡೆದುವು. ಕರ್ನಾಟಕದ ಜನರ ಪ್ರೇಮಾದರ ವಿಶ್ವಾಸಗಳಿಗೆ ವರೆs ಬುವಾ ಮಾರುಹೋದರು. ಬೆಳಗಾವಿಯ ಕೆಲವು ಸ್ನೇಹಿತರ ಒತ್ತಾಯಕ್ಕೆ ಕಟ್ಟುಬಿದ್ದು ಅಲ್ಲಿಯೇ ನೆಲೆಸುವ ನಿರ್ಧಾರ ಮಾಡಿದರು. ಬೆಳಗಾವಿಯ ಮಾರುತಿಗಲ್ಲಿಯಲ್ಲಿ ಒಂದು ಬಾಡಿಗೆ ಮನೆ ನಿಶ್ಚಯಿಸಿಕೊಂಡು ಬುವಾ ಅವರು ತಮ್ಮ ಹೆಂಡತಿಮಕ್ಕಳನ್ನು ಅಲ್ಲಿಗೆ ಕರೆಸಿಕೊಂಡರು.

ಬುವಾ ಅವರು ಕರ್ನಾಟಕಕ್ಕೆ ಬಂದು ನೆಲಸಿದ ಬಳಿಕ ಅವರ ಸಾಂಪತ್ತಿಕಸ್ಥಿತಿಯೂ ಬಹಳವಾಗಿ ಸುಧಾರಿಸಿತು. ಹಿಂದುಸ್ತಾನಿ ಸಂಗೀತದ ಆಸಕ್ತಿಯು ಉತ್ತರ ಕರ್ನಾಟಕದಲ್ಲಿ ಬಹಳವಾಗಿ ಹೆಚ್ಚುವಂತೆ ಮಾಡಿದ ಯಶಸ್ಸು ರಾಮಕೃಷ್ಣ ಬುವಾ ವರೆs ಅವರಿಗೆ ಸಲ್ಲುತ್ತದೆ. ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಬೆಳಗಾವಿಯಲ್ಲಿ ನೆಲಸಿದ ಪರಿಣಾಮವಾಗಿ ಹಲವು ಮಂದಿ ಅವರ ಶಿಷ್ಯವೃತ್ತಿ ವಹಿಸಿ ಸಂಗೀತಾಭ್ಯಾಸ ಮಾಡಿದರು. ಅವರ ಶಿಷ್ಯರುಗಳಲ್ಲಿ ಮಗ ಶಿವರಾಂ ಬುವಾ, ಅಳಿಯ ದಾಮಲೆ ಬುವಾ, ಗುರುರಾವ್ ದೇಶಪಾಂಡೆ, ತುಂಗಾಬಾಯಿ, ಪಾರ್ವತಿ ಹಾನಗಲ್, ತಾನೂಬಾಯಿ ಮೊದಲಾದವರು ಮುಖ್ಯರು. ಬುವಾ ಅವರ ಸಂಗೀತ ಪರಂಪರೆಯನ್ನು ಕರ್ನಾಟಕದಲ್ಲಿ ಮುಂದುವರಿಸಿದ ಯಶಸ್ಸು ಇವರಿಗೆ ಸಲ್ಲಬೇಕು.

ಗಾಯಕ ಜೀವನ

ಚಿಕ್ಕಂದಿನಿಂದಲೂ ಕಷ್ಟ ಪರಂಪರೆಯಲ್ಲೇ ಬೆಳೆದು ಬಂದ ಪರಿಣಾಮವಾಗಿ ರಾಮಕೃಷ್ಣ ಬುವಾ ಅವರು ಭಾವಜೀವಿ ಗಳಾಗಿದ್ದರು. ಗಾಯನಕ್ಕೂ ಮನಸ್ಸಿಗೂ ನಿಕಟ ಸಂಬಂಧ. ಹಾಗಾಗಿ ಅವರ ಗಾಯನವು ಯಾವಾಗಲೂ ಒಂದೇ ಮಟ್ಟದಲ್ಲಿ ಇರುತ್ತಿರಲಿಲ್ಲ. ಗಾನಾವಕಾಶದಲ್ಲಿ ಭಾವತನ್ಮಯತೆಗೊಂಡ ದಿನ ಅವರ ಸಂಗೀತವು ಶ್ರೋತೃಗಳಲ್ಲಿ ಅದ್ಭುತ ಪರಿಣಾಮ ಮೂಡಿಸುತ್ತಿತ್ತು. ಸಂಗೀತದಲ್ಲಿ ತಾದಾತ್ಮ್ಯ ಹೊಂದಬಲ್ಲ ರಸಿಕರು ಮುಂದಿದ್ದ ದಿನ ಅವರ ಗಾಯನ ಪರಾಕಾಷ್ಠೆಗೆ ಮುಟ್ಟುತ್ತಿತ್ತು. ಅಸಾಧಾರಣವಾದ ಕಲ್ಪನಾ ಸಾಮಾರ್ಥ್ಯ ಅವರದು. ಆದುದರಿಂದ ಅವರ ಸಂಗೀತ ಇಂದು ಕೇಳಿದಂತೆ ನಾಳೆ ಇರುತ್ತಿರಲಿಲ್ಲ. ಒಂದೇ ರಾಗ, ಚೀಸ್ ಅವರ ಹತ್ತುಕಡೆಗಳಲ್ಲಿ ಹಾಡಿದಾಗ ಹತ್ತು ವಿಧವಾಗಿ ಹೊಸಹೊಸ ರೂಪಲಾವಣ್ಯಗಳಿಂದ ಕಂಗೊಳಿಸುತ್ತಿತ್ತು. ವಿವಿಧ ಘರಾನಾ ಗಳ ಸಂಪರ್ಕ ಹಾಗೂ ವಿವಿಧ ಮೂಲಗಳಿಂದ ಒದಗಿದ ಹಲವು ಚೀಸ್‌ಗಳನ್ನು ಸಂಗ್ರಹಿಸಿ ಅಭ್ಯಾಸ ಮಾಡಿದುದರ ಪರಿಣಾಮವಾಗಿ ಅವರ ಶೈಲಿ ಶುದ್ಧವಾದ ಗ್ವಾಲಿಯರ್ ಘರಾನಾ ಶೈಲಿಯಾಗಿ ಉಳಿಯಲಿಲ್ಲ. ಹಾಗಾಗಿ ಬುವಾ ಅವರು ಮನೋಧರ್ಮಪ್ರಧಾನವಾದ ಸೃಜನಶೀಲ ಕಲಾವಿದರೆಂದು ಖ್ಯಾತಿ ಪಡೆದರು.

ಕೆಲವೊಮ್ಮೆ ಇಡಿಯ ಸಂಗೀತ ಕಚೇರಿಯಲ್ಲಿ ಸಂಪೂರ್ಣವಾಗಿ ಅಪೂರ್ವರಾಗಗಳನ್ನೇ ಹಾಡಿ ಅವುಗಳ ಮೇಲಿನ ತಮ್ಮ ಪ್ರಭುತ್ವವನ್ನು ತೋರಿಸುತ್ತಿದ್ದುದೂ ಉಂಟು. ಹಾಗೆ ಮಾಡುವುದರಿಂದ ಜನಸಾಮಾನ್ಯರಿಗೆ ಸಂಗೀತಕಚೇರಿ ರಂಜನೆಯಾಗದು ಎಂಬ ಗೊಡವೆಯೇ ಅವರಿಗಿರುತ್ತಿರಲಿಲ್ಲ. ಅದರಿಂದ ಬಳಕೆಗೆ ಬಂದ ಅಪೂರ್ವ ರಾಗಗಳೂ ಚೀಸ್‌ಗಳೂ ಬಹಳ. ತಾವೂ ದೃತಲಯದ ಹಲವು ಸುಂದರವಾದ ಚೀಸ್‌ಗಳನ್ನು ರಚಿಸಿದರು.

ಬುವಾ ಅವರದು ಅಂತರ್ಮುಖೀ ಸ್ವಭಾವ. ಯಾರ ಬಗ್ಗೆಯೂ ಅವರಿಗೆ ದ್ವೇಷವಿಲ್ಲ. ಇನ್ನೊಬ್ಬ ಕಲಾವಿದನ ಗುಣಗಳನ್ನು ಮನಸಾರೆ ಮೆಚ್ಚುವ ಪ್ರವೃತ್ತಿ; ಆದರೆ ತಾವು ಕಂಡ ಲೋಪದೋಷಗಳನ್ನು ಎದುರಿಗೇ ನಿರ್ದಾಕ್ಷಿಣ್ಯವಾಗಿ ಟೀಕಿಸುವ ಪ್ರವೃತ್ತಿ; ಕಷ್ಟ ಪಡದೆ ವಿದ್ಯೆ ದೊರೆಯಲಾರದು, ಸುಲಭವಾಗಿ ದೊರಕಿದ ವಿದ್ಯೆಗೆ ಬೆಲೆಯಿಲ್ಲ ಎಂಬ ಮನೋಭಾವ. ಸಿತಾರ್, ವಯೋಲಿನ್‌ಗಳನ್ನು ಅವರು ಚೆನ್ನಾಗಿಯೇ ನುಡಿಸುತ್ತಿದ್ದರು. ಜೀವನವೇ ಸಂಗೀತ-ಸಂಗೀತವೇ ಜೀವನ ಎಂಬ ಸಮೀಕರಣ ಅವರದು.

ಸಂಗೀತ ವ್ಯವಹಾರಗಳಲ್ಲಿ ಅವರು ಅನುಸರಿಸುತ್ತಿದ್ದುದು ಹಿಂದಿನ ಕಾಲದ ಉಸ್ತಾದರ ಕಟ್ಟುನಿಟ್ಟಿನ ಸಾಂಪ್ರದಾಯಿಕ ಧೋರಣೆ. ಸಂಗೀತ ಅಭ್ಯಾಸಕ್ಕೆ ಸತತವಾದ ಗುರುಸೇವೆ, ಹಗಲಿರುಳು ನಿರಂತರವಾಗ ಶ್ರಮಪೂರಿತ ಅಭ್ಯಾಸ ಅವಶ್ಯ ಎನ್ನುತ್ತಿದ್ದು ಸಾಮಾನ್ಯವಾಗಿ ಪಾಠ ಹೇಳಲು ಅವರು ಒಪ್ಪುತ್ತಿರಲಿಲ್ಲ. ಆದರೆ ಕೊನೆಕೊನೆಗೆ ಅವರ ದೃಷ್ಟಿಕೋನ ಬದಲಾಯಿತು. ತನಗೆ ಗೊತ್ತಿದ್ದುದನ್ನು ಆಸಕ್ತರಿಗೆ ಹೇಳಿಕೊಡುವುದೇ ಪಂಡಿತ ಕರ್ತವ್ಯ ಎಂದು ಭಾವಿಸಿದರು. ಆದರೆ ಪಾಠದ ಅವಕಾಶದಲ್ಲಿ ಶಿಷ್ಯನನ್ನು ತಿದ್ದಿ, ಕ್ರಮಬದ್ಧವಾಗಿ ಪಾಠ ಹೇಳುವ ತಾಳ್ಮೆ ಅವರಿಗೆ ಇರಲಿಲ್ಲ. ಹಾಗಾಗಿ ಅವರಿಗೆ ಅವರಿಗೆ ಶಿಷ್ಯಸಂಪತ್ತು ಹೆಚ್ಚಾಗಲಿಲ್ಲ. ‘‘ಶ್ರದ್ಧೆಯಿಂದ ಕಲಿಯಬೇಕು ಎನ್ನುವ, ಕಲಿಯಲು ಅರ್ಹತೆ ಪಡೆದಿರುವ, ಶಿಷ್ಯರೇ ಈ ಕಾಲದಲ್ಲಿ ಇಲ್ಲ’’ ಎಂದುಬಿಡುತ್ತಿದ್ದರು. ದಿವಂಗತ ಹರಿಭಾವೂ ಧಾಂಗ್ರೇಕರ್ ಮತ್ತು ಮಗ ಶಿವರಾಂ ಇವರಿಗೆ ಮಾತ್ರ ಬುವಾ ಅವರಿಂದ ಚೆನ್ನಾದ ವಿದ್ಯಾದಾನ ಲಭಿಸಿತು.

ಕೊನೆಯ ದಿನಗಳು

ವಝೆ ಬುವಾ ಅವರಿಗೆ ಹಣ ಸಂಪಾದನೆ ಚೆನ್ನಾಗಿಯೇ ಇತ್ತು. ದೇಶದ ವಿವಿದ ಕಡೆಗಳಲ್ಲಿ ಅವರ ಕಚೇರಿಗಳು ನಡೆಯುತ್ತಿದ್ದವು. ಶಿಸ್ತಿನ ಸ್ವಭಾವ ಹಾಗೂ ಕಷ್ಟಜೀವನದ ಅಭ್ಯಾಸದ ಫಲವಾಗಿ ಬಂದ ಖರ್ಚು ವೆಚ್ಚಗಳ ಮೇಲಿನ ಹಿಡಿತದ ಪರಿಣಾಮವಾಗಿ ಅವರಿಗೆ ಕೊನೆಯವರೆಗೂ ಹಣಕಾಸಿನ ವಿಚಾರದಲ್ಲಿ ತಾಪತ್ರಯ ಒದಗಲಿಲ್ಲ. ತಮ್ಮ ಕಡೆಗಾಲದವರೆಗೂ ನೆಮ್ಮದಿಯ ಜೀವನವನ್ನೇ ನಡೆಸಿದರು ಎನ್ನಬಹುದು.

ತಿನ್ನುಣ್ಣುವ ಚಪಲ ಮಾತ್ರ ಬುವಾ ಅವರಿಗೆ ಬಹಳವಾಗಿತ್ತು. ಮಧುಮೇಹ ಕಾಯಿಲೆ ಆರಂಭವಾದ ಅನಂತರವೂ ಅವರು ತಮ್ಮ ಊಟ ತಿನಿಸುಗಳಲ್ಲಿ, ಆಹಾರದ ಆಯ್ಕೆಯಲ್ಲಿ, ಹಿಡಿತವಿರಿಸಿಕೊಳ್ಳಲಿಲ್ಲ.

ಸುಮಾರು ಇಪ್ಪತ್ತೆ ದು ವರ್ಷ ಬೆಳಗಾವಿಯ್ಲಲಿ ವಾಸಿಸಿದ ಬಳಿಕ ಅವರಿಗೆ ಪುಣೆಗೆ ಹೋಗುವ ಬಯಕೆಯಾಯಿತು. ಅಂತೆಯೇ ಮುಂದೆ ಪುಣೆಗೆ ಹೋಗಿ ನೆಲಸಿದರು. ಅಲ್ಲಿಯೂ ಅವರಿಗೆ ವಿಶೇಷವಾದ ಗೌರವ ಆದರಗಳು ಲಭಿಸಿದವು. ‘ಸಂಗೀತಕಲಾ ಪ್ರಕಾಶ’ ಎಂಬ ಹೆಸರಿನ ಎರಡು ಪುಸ್ತಕಗಳನನು ಬರೆದು ಪ್ರಕಟಿಸಿದರು. ಹಲವು ಅಪೂರ್ವರಾಗಗಳಾದ ಸಾವನೀ ಕಲ್ಯಾಣ, ಪಂಚಕಲ್ಯಾಣ, ಗೌರಕಲ್ಯಾಣ್,ಸಂಗಮ ಕೇದಾರ್, ಮಲುಹಾಕೇದಾರ್, ವಂಗೇಶ್ರೀ, ತಿರ್‌ಬನ್, ಮಾಲೀಗೌರಾ ಮೊದಲಾದವುಗಳಿಗೆ ಚೀಸ್‌ಗಳನ್ನು ರಚಿಸಿದರು.

ಕೊನೆಕೊನೆಗೆ ಬುವಾ ಅವರ ಆರೋಗ್ಯ ತೀರ ಹದಗೆಟ್ಟಿತು. ಔಷಧ ಉಪಚಾರಗಳು ಫಲಕಾರಿಯಾಗಲಿಲ್ಲ. ಹಾಡುವುದೂ ಕಷ್ಟವಾಗಿ ಪರಿಣಮಿಸಿತು. ೧೯೪೫ರ ಮೇ ಐದರಂದು ತಮ್ಮ ಎಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಪುಣೆಯಲ್ಲಿ ವಿಧಿವಶರಾದರು. ಭಾರತದ ಸಂಗೀತ ಪ್ರಪಂಚದ ಉಜ್ವಲ ತಾರೆಯೊಂದು ಅಂದು ಅಸ್ತಂಗತವಾಯಿತು.

ಸಂಗೀತ ಕಲೆ

ಸಂಗೀತವು ಲಲಿತ ಕಲೆಗಳಲ್ಲಿ ಪ್ರಾಮುಖ್ಯವಾದುದು. ಶಿಲ್ಪ, ಚಿತ್ರ ಮೊದಲಾದ ಕಲೆಗಳು ಸ್ಥಿರಸ್ವಭಾವದವುಗಳು; ಎಂದರೆ ಕಲಾವಿದರ ಕೃತಿಗಳನ್ನು ನಾವು ಕಣ್ಣಿಂದ ಕಾಣಬಹುದು. ತನ್ನ ಕೃತಿರಚನೆಗೆ ಅವರು ತಮ್ಮ ಸುತ್ತಮುತ್ತಲಿನ ವಿಷಯಗಳನ್ನು ಆರಿಸಿಕೊಳ್ಳಲು ಸಾಧ್ಯ. ಸಂಗೀತ ಹೀಗಲ್ಲ. ಇದನ್ನು ಕೇಳಬಹುದಲ್ಲದೆ ಕಾಣಲು ಸಾಧ್ಯವಿಲ್ಲ. ಧ್ವನಿಯ ಮೂಲಕ ಕೇಳಿದುದರ ಪರಿಣಾಮವನ್ನು ಮನಸ್ಸು ತಿಳಿಯಬೇಕಾಗುತ್ತದೆ. ಕೇಳಿದುದನ್ನು ಉಳಿಸಿಕೊಳ್ಳಲು ನೆನಪೇ ಆಧಾರ. ಆದುದರಿಂದ ಸಂಗೀತವು ಮನಸ್ಸನ್ನು ಸುಸಂಸ್ಕೃತಗೊಳಿಸುವ ಗುಣವುಳ್ಳದ್ದು ಎನ್ನುತ್ತಾರೆ.

ಭಾರತೀಯ ಸಂಗೀತವು ಪ್ರಪಂಚದ ಇತರ ಸಂಗೀತ ಪದ್ಧತಿಗಳಿಗಿಂತ ಭಿನ್ನವಾಗಿದೆ. ವಾಗ್ಗೇಯಕಾರರ, ಸಂಗೀತಗಾರರ ಜೀವನವನ್ನು ತಿಳಿದು ಸಾಧನೆಗಳನನು ಅರಿತು, ಒಳ್ಳೆಯ ಸಂಗೀತ ಕೇಳಿ, ಪ್ರತಿಯೋರ್ವನೂ ತನ್ನ ಕಲಾಭಿರುಚಿಯನ್ನು ಬೆಳೆಸಿಕೊಳ್ಳುವುದು ಅವಶ್ಯ.

ಉತ್ತಮ ಸಂಗೀತ ಕೇಳಲು, ಅರಿಯಲು, ಮೆಚ್ಚಲು ಸ್ವಲ್ಪ ಅಭ್ಯಾಸ ಬೇಕಾಗುತ್ತದೆ. ಇದನ್ನು ಸಂಗೀತ ಕೇಳಿಯೇ ರೂಢಿಸಿಕೊಳ್ಳಬೇಕಾಗುತ್ತದೆ. ಎಲ್ಲರೂ ಕಲಾವಿದರಾಗಲು ಸಾಧ್ಯವಿಲ್ಲದಿದ್ದರೂ ಉತ್ತಮ ಕಲೆಯನ್ನು ಮೆಚ್ಚಲು ಸಾಧ್ಯ. ಸಂಗೀತವನ್ನು ಮೆಚ್ಚಲು ಉತ್ತಮ ಸಂಗೀತ ಕೇಳುವುದೊಂದೇ ದಾರಿ. ನಾಗರಿಕ ಜನಾಂಗ ಕಲಾಭಿರುಚಿಯನ್ನು ಹೊಂದುವುದು ಅವಶ್ಯ.