ರಾಮಚಂದ್ರ ದತ್ತಾತ್ರೇಯ ರಾನಡೆಯವರು ಒಂದು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ಅವರ ಹೆಸರನ್ನು ಇಂದಿಗೂ ಜನ ಸ್ಮರಿಸುವುದು, ಅವರು ಅಷ್ಟು ಹಿರಿಯ ಸ್ಥಾನದಲ್ಲಿದ್ದರು ಎಂದಲ್ಲ; ಅವರ ವ್ಯಕ್ತಿತ್ವ ಹಿರಿದಾದದ್ದು, ಘನವಾದದ್ದು ಎಂದು.

ಶಿಕ್ಷಣದಲ್ಲಿ ಅತ್ಯುಚ್ಚ ಪದವಿಯನ್ನು ಗಳಿಸಿ, ತತ್ವಜ್ಞಾನದ ಪ್ರಾಧ್ಯಾಪಕರಾಗಿ, ವಿಶ್ವವಿದ್ಯಾಲಯದ ಉಪಕುಲಪತಿಯಾದರೂ ಆಧ್ಯಾತ್ಮಿಕ ಸಾಧನೆಯನ್ನು ಅತ್ಯಂತ ದೃಢತೆಯಿಂದ ಮಾಡಿ ಸಮಾಜಕ್ಕೆ ಪರಮಾರ್ಥದ ಮಾರ್ಗದರ್ಶನ ನೀಡಿದ ಶ್ರೇಯಸ್ಸು ಗುರುದೇವ ರಾನಡೆ ಇವರಿಗೆ ಸಲ್ಲುತ್ತದೆ.

ಗುಡಿಸಲಿನಿಂದ ರಾಷ್ಟ್ರಪತಿ ಭವನದವರೆಗೆ ರಾನಡೆಯವರು ಭಾರತದ ಸಂತರ ಜೀವನದ ಪರಿಮಳವನ್ನು ಹಬ್ಬಿಸಿದರು. ಡಾ. ರಾಜೇಂದ್ರಪ್ರಸಾದರು ಭಾರತದ ರಾಷ್ಟ್ರಪತಿಗಳಾಗಿದ್ದಾಗ ೧೯೫೪ ರಲ್ಲಿ ರಾಷ್ಟ್ರಪತಿ ಭವನದಲ್ಲಿ ರಾನಡೆಯವರು ಎರಡು ಉಪನ್ಯಾಸಗಳನ್ನು ಮಾಡಿದರು.

ವರ ಬೇಡಿ ಪಡೆದ ಮಗು

ರಾಮಚಂದ್ರ ದತ್ತಾತ್ರೇಯ ರಾನಡೆಯವರ ಜನನ ೧೮೮೬ ರ ಜುಲೈ ೩ ರಂದು ಶನಿವಾರ (ಆಷಾಢ ಶುದ್ಧ ದ್ವೀತಿಯಾ) ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಜಮಖಂಡಿಯಲ್ಲಿ ಆಯಿತು. ರಾನಡೆಯವರ ತಂದೆಯವರು ಜಮಖಂಡಿ ಸಂಸ್ಥಾನದಲ್ಲಿ ನೌಕರಿ ಮಾಡುತ್ತಿದ್ದರು. ರಾನಡೆಯವರ ತಾಯಿ ಪಾರ್ವತೀಬಾಯಿ ಅವರಿಗೆ ಭಾಗು ಅಕ್ಕಾ ಎಂಬ ಮಗಳು ಹುಟ್ಟಿದ ನಂತರ ಹನ್ನೆರಡು ವರ್ಷದವರೆಗೆ ಸಂತತಿಯಾಗಿದ್ದಿಲ್ಲ. ಆದ್ದರಿಂದ ಅವರು ಸೋಮವಾರದ ವ್ರತವನ್ನು ಬಹಳ ನಿಷ್ಠೆಯಿಂದ ಆಚರಿಸಿದರು. ಅದರ ಫಲವೋ ಎಂಬಂತೆ ರಾನಡೆಯವರು ಹುಟ್ಟಿದರು. ಜಮಖಂಡಿಯ ರಾಮೇಶ್ವರನಲ್ಲಿ ರಾನಡೆಯವರ ತಂದೆ ತಾಯಿಯವರಿಗೆ ಬಹು ಭಕ್ತಿ. ರಾಮೇಶ್ವರನ ಕೃಪಾ ಪ್ರಸಾದದಿಂದ ಹುಟ್ಟಿದ್ದರಿಂದ ಮಗುವಿಗೆ ರಾಮಚಂದ್ರ ಎಂದು ಹೆಸರಿಟ್ಟರು. ರಾಮಭಾವು ಎಂಬ ಹೆಸರಿನಿಂದ ಅವರು ಜನರಿಗೆ ಪರಿಚಿತರಾದರು.

ಬುದ್ಧಿವಂತ ವಿದ್ಯಾರ್ಥಿ

ರಾನಡೆಯವರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವು ಜಮಖಂಡಿಯಲ್ಲಿ ಆಯಿತು. ಶಾಲೆಯಲ್ಲಿ ಕಲಿಯುವಾಗ ಅವರಿಗೆ ಶ್ರೀಮಂತ ಬಾಳಾಸಾಹೇಬ ಕುರುಂದವಾಡಕರ ಇವರಿಂದ ಪ್ರತಿ ತಿಂಗಳು ಐದು ರೂಪಾಯಿಯಂತೆ ಮೂರು ವರ್ಷ ವಿದ್ಯಾರ್ಥಿವೇತನ ಸಿಕ್ಕುತ್ತಿತ್ತು. ೧೮೯೫ರಲ್ಲಿ ಅವರು ಪರಶುರಾಮಭಾವು ಹೈಸ್ಕೂಲನ್ನು ಸೇರಿದರು. ತಮ್ಮ ತೀಕ್ಷ್ಣಬುದ್ಧಿ, ಅಸಾಧಾರಣ ಸ್ಮರಣಶಕ್ತಿ ಹಾಗೂ ನಮ್ರ ಸ್ವಭಾವದಿಂದ ಅವರು ಗುರುಗಳಿಗೆ ಬಹಳ ಪ್ರಿಯರಾಗಿದ್ದರು. ಮೆಟ್ರಿಕ್ಯುಲೇಷನ್ (ಈಗಿನ ಎಸ್.ಎಸ್.ಎಲ್.ಸಿ.) ಪರೀಕ್ಷೆಯಲ್ಲಿ ಅವರು ಸಂಸ್ಕೃತದಲ್ಲಿ ಅತಿ ಹೆಚ್ಚಿನ ಗುಣಗಳನ್ನು ಪಡೆದು ಜಗನ್ನಾಥ ಶಂಕರಸೇಟ್ ವಿದ್ಯಾರ್ಥಿವೇತನ ಗಳಿಸಿದರು.

 

ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ವ್ಯಾಖ್ಯಾನ.

ರಾನಡೆಯವರ ಮುಂದಿನ ಶಿಕ್ಷಣವು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಆಯಿತು. ಅನೇಕ ಆಂಗ್ಲ ಪ್ರಾಧ್ಯಾಪಕರು ಅಲ್ಲಿ ಕಲಿಸುತ್ತಿದ್ದರು. ಅವರ ಮೆಚ್ಚುಗೆಗೆ ರಾನಡೆಯವರು ಪಾತ್ರರಾದರು. ಮಹಾವಿದ್ಯಾಲಯದ ಮೊದಲನೆಯ ವರ್ಷದ ಪರೀಕ್ಷೆಯಲ್ಲಿ ರಾನಡೆಯವರು ಪ್ರಥಮ ಸ್ಥಾನ ಪಡೆದರು, ಎರಡನೆಯ ವರ್ಷದ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ಬಹು ಹೆಚ್ಚಿನ ಅಂಕಗಳನ್ನು ಗಳಿಸಿ ವರಜೀವನದಾಸ ವಿದ್ಯಾರ್ಥಿವೇತನವನ್ನು ಪಡೆದರು, ಅದೇ ವರ್ಷ ರಾನಡೆಯವರ ತಂದೆಯವರು ತೀರಿಕೊಂಡು. ಕಷ್ಟದಲ್ಲಿಯೇ ರಾನಡೆಯವರು ತಮ್ಮ ಶಿಕ್ಷಣ ಮುಂದುವರೆಸಿದರು. ಬಿ.ಎ. ಪರೀಕ್ಷೆಗೆ ಅವರು ಗಣಿತ ವಿಷಯವನ್ನು ತೆಗೆದುಕೊಂಡರು.

ಈ ಪರೀಕ್ಷೆಯಲ್ಲಿ ಅವರು ಮೊದಲನೆಯ ಶ್ರೇಣಿಯಲ್ಲಿ ಉತ್ತೀರ್ಣರಾಗುವರೆಂದು ಅವರ ಪ್ರಾಧ್ಯಾಪಕರು ನಿರೀಕ್ಷಿಸಿದ್ದರು. ಆದರೆ ರಾನಡೆ ಎರಡನೆಯ ವರ್ಗದಲ್ಲಿ ಉತ್ತೀರ್ಣರಾದರು. ರಾನಡೆಯವರಿಗೆ ತುಂಬ ನಿರಾಶೆಯಾಯಿತು. ಆದರೆ ಇದರಿಂದಲೂ ಒಟ್ಟಿನಲ್ಲಿ ಒಳ್ಳೆಯದೇ ಆಯಿತು ಎನ್ನಬೇಕು. ಏಕೆಂದರೆ ಮೊದಲನೆಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ ಅವರಿಗೆ ಸರ್ಕಾರ ವಿದ್ಯಾರ್ಥಿವೇತನವನ್ನು ಕೊಡುತ್ತಿತ್ತು. ಪ್ರಾಯಶಃ ಅವರು ಮುಂದಿನ ವಿದ್ಯಾಭ್ಯಾಸಕ್ಕೆ ಇಂಗ್ಲೇಂಡಿಗೆ ಹೋಗುತ್ತಿದ್ದರು. ಅವರು ತತ್ತ್ವಶಾಸ್ತ್ರವನ್ನು ಅಭ್ಯಾಸ ಮಾಡುತ್ತಿದ್ದರೋ ಇಲ್ಲವೋ, ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೋ ಯಾರು ಬಲ್ಲರು! ಬಿ.ಎ. ಪರೀಕ್ಷೆಯಲ್ಲಿ ಮೊದಲನೆಯ ತರಗತಿ ದೊರೆಯಲಿಲ್ಲ. ಇದರಿಂದ ಅವರ ಜೀವನ ಈಗ ನಾವು ಕಾಣುವಂತೆ ರೂಪುಗೊಂಡಿತು.

‘ಇನ್ನು ಮುಂದೆ

ಬಹು ಚಿಕ್ಕ ವಯಸ್ಸಿನಲ್ಲೆ ರಾನಡೆಯವರ ಮನಸ್ಸು ಜೀವನದ ಸುಖಗಳಿಂದ ಬೇರೆಡೆ ತಿರುಗಿತು. ಅಧಿಕಾರ, ಹಣ, ಕೀರ್ತಿ ಇವು ಯಾವುದನ್ನೂ ಬಯಸದೆ ದೇವರ ನಾಮಸ್ಮರಣೆ, ಗುರುಗಳ ಮಾರ್ಗದರ್ಶನ, ಸಜ್ಜನರ ಸಹವಾಸ ಇವಿಷ್ಟು ಬದುಕಿನಲ್ಲಿ ಸಾಕು ಎಂದು ನಿರ್ಧರಿಸಿದರು. ೧೯೦೬ ರಲ್ಲಿ ಅವರು ತಮ್ಮ ಗುರುಗಳಿಗೆ ಹೀಗೆ ಕಾಗದ ಬರೆದರು; ಇನ್ನು ಮುಂದೆ ಆಯಸ್ಸನ್ನೆಲ್ಲ ದೇವರ ನಾಮಸ್ಮರಣೆಯಲ್ಲಿಯೂ ಸಾಧು-ಸಂತರ ಸಹವಾಸದಲ್ಲಿಯೂ ಕಳೆಯಬೇಕು ಎನಿಸುತ್ತದೆ……. ಜ್ಞಾನಮಾರ್ಗದಲ್ಲಿ ನಡೆಸಿ, ಬರುಬರುತ್ತ ಹೆಚ್ಚಿನ ಸಹಾಯ ಮಾಡಿ ಬೆಳೆಸಬೇಕು. ಗುರುವಿನ ಕೃಪೆಯಲ್ಲದೆ ನನಗೆ ಬೇರೆ ಆಶ್ರಯವಿಲ್ಲ.

೧೯೧೦ ರಲ್ಲಿ ರಾನಡೆಯವರಿಗೆ ತತ್ತ್ವಶಾಸ್ತ್ರದಲ್ಲಿ ಆಸಕ್ತಿ ಪ್ರಾರಂಭವಾಯಿತು. ಮೊದಲು ಭಾರತೀಯ ತತ್ತ್ವಶಾಸ್ತ್ರದ ಅಭ್ಯಾಸ ಮಾಡತೊಡಗಿದರು. ಮೊದ ಮೊದಲು ಅರ್ಥವಾಗುವುದು ಕಷ್ಟವಾಯಿತು. ಅವರಿಗೆ ದೊರಕಿದ್ದ ಗ್ರಂಥಗಳಲ್ಲಿ ತಪ್ಪುಗಳಿದ್ದವು. ಮೊದಲು ವಿಷಯವೇ ಕಷ್ಟವಾದದ್ದು. ಜೊತೆಗೆ ಪುಸ್ತಕದಲ್ಲೇ ತಪ್ಪುಗಳು. ಈ ಕಷ್ಟಗಳಿಂದ ಅವರು ಪಾಶ್ಚಾತ್ಯ ತತ್ತ್ವಶಾಸ್ತ್ರದ ಅಭ್ಯಾಸ ಪ್ರಾರಂಭಿಸಿದರು. ಅದನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ಅದನ್ನು ಚೆನ್ನಾಗಿ ತಿಳಿದುಕೊಂಡ ಅನಂತರ ಭಾರತೀಯ ತತ್ತ್ವಶಾಸ್ತ್ರದ ಅಧ್ಯಯನವನ್ನು ಮುಂದುವರಿಸಿದರು. ಈಗ ಭಾರತೀಯ ತತ್ತ್ವಶಾಸ್ತ್ರ ಅವರಿಗೆ ಸುಲಭವಾಗಿ, ಚೆನ್ನಾಗಿ ಅರ್ಥವಾಯಿತು. ಪಾಶ್ಚಾತ್ಯ ತತ್ತ್ವಜ್ಞಾನಿಗಳನ್ನೂ ಭಾರತೀಯ ತತ್ತ್ವಜ್ಞಾನಿಗಳನ್ನೂ ಹೋಲಿಸಿ ನೋಡುವುದು ಸಾಧ್ಯವಾಯಿತು.

‘ಪರೀಕ್ಷಕರಿಗಿಂತ ಹೆಚ್ಚು ಬಲ್ಲ’

ಎಂ.ಎ. ಪರೀಕ್ಷೆಗೆ ರಾನಡೆಯವರು ತತ್ತ್ವಶಾಸ್ತ್ರ ವಿಷಯವನ್ನು ತೆಗೆದುಕೊಂಡು. ಆಗ ವೋಡ್ ಹೌಸ್ ಎಂಬ ಪ್ರಾಧ್ಯಾಪಕರು ತತ್ತ್ವಶಾಸ್ತ್ರವನ್ನು ಕಲಿಸುತ್ತಿದ್ದರು. ರಾನಡೆಯವರು ಅವರ ಪ್ರಿಯ ಶಿಷ್ಯರಾಗಿದ್ದರು. ಡೆಕ್ಕನ್ ಕಾಲೇಜಿನಲ್ಲಿ ರಾನಡೆಯವರು ದಕ್ಷಿಣ ಫೆಲೊ ಎಂದು ಕೆಲಸ ಮಾಡುತ್ತಾ ವಿದ್ಯಾರ್ಥಿಗಳಿಗೆ ಸಂಸ್ಕೃತ ನಾಟಕಗಳನ್ನು ಕಲಿಸುತ್ತಿದ್ದರು. ಕಾಲೇಜಿನ ಪ್ರಿನ್ಸಿಪಾಲರಾದ ಬೆಯ್ನ್ ಅವರು ರಾನಡೆಯವರನ್ನು ವಿದ್ಯಾರ್ಥಿಗಳ ವಸತಿಗೃಹದ ಮುಖ್ಯಸ್ಥರೆಂದು ನೇಮಿಸಿದರು. ರಾನಡೆಯವರು ವಿದ್ಯಾರ್ಥಿಗಳ ಜೊತೆಗಿದ್ದು ಅತ್ಯಂತ ಪ್ರೇಮದಿಂದ ಅವರನ್ನು ನೋಡಿಕೊಳ್ಳುತ್ತಿದ್ದರು. ಎಂ.ಎ. ಪರೀಕ್ಷೆಯಲ್ಲಿ ಅವರು ಮೊದಲನೆಯ ವರ್ಗದಲ್ಲಿ ಪ್ರಥಮರಾಗಿ ಉತ್ತೀರ್ಣರಾದರು. ಅವರಿಗೆ ಚಾನ್ಸೆಲರ ಸುವರ್ಣ ಪದಕ ಮತ್ತು ತೆಲಾಂಗ್ ಸುವರ್ಣ ಪದಕ – ಹೀಗೆ ಎರಡು ಸುವರ್ಣ ಪದಕಗಳು ದೊರೆತವು. ಅವರು ಪರೀಕ್ಷೆಯಲ್ಲಿ ಬರೆದ ಉತ್ತರಗಳು ಎಷ್ಟು ಉತ್ತಮವಾಗಿದ್ದವೆಂದರೆ ಪರೀಕ್ಷಕರು, ಈ ವಿದ್ಯಾರ್ಥಿ ಪರೀಕ್ಷಕರಿಗಿಂತ ಹೆಚ್ಚು ಬಲ್ಲವನು ಎಂದು ಅಭಿಪ್ರಾಯಪಟ್ಟು. ರಾನಡೆಯವರು ಆ ಎರಡು ಪದಕಗಳನ್ನು ಧರಿಸಿ ಭಾವಚಿತ್ರ ತೆಗೆಸಿಕೊಳ್ಳಬೇಕೆಂದು ಅವರು ಮಿತ್ರರು ಸೂಚಿಸಿದಾಗ ರಾನಡೆಯವರು ಒಪ್ಪಲಿಲ್ಲ.

ಪ್ರಾಧ್ಯಾಪಕ

೧೯೧೪ರಲ್ಲಿ ಪುಣೆಯಲ್ಲಿದ್ದ ಡೆಕ್ಕನ್ ಎಜ್ಯುಕೇಷನ್ ಸೊಸೈಟಿಯ ಫರ್ಗ್ಯುಸನ್ ಕಾಲೇಜಿನಲ್ಲಿ ರಾನಡೆಯವರು ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾದರು. ೧೯೨೦ ರಲ್ಲಿ ಅವರ ಪ್ರಕೃತಿಯು ಬಹಳ ಅಸ್ವಸ್ಥವಾಯಿತು. ಪುಣೆಯ ಹವೆಯು ಅವರಿಗೆ ತಡೆಯುವುದಿಲ್ಲವೆಂದು ತಿಳಿದು ಅವರನ್ನು ಸಾಂಗಲಿಯ ವಿಲಿಂಗ್ಟನ್ ಕಾಲೇಜಿಗೆ ವರ್ಗ ಮಾಡಲಾಯಿತು. ಅಲ್ಲಿಯೂ ಅವರಿಗೆ ಹೆಚ್ಚು ಕಾಲ ಇರಲು ಆಗಲಿಲ್ಲ.

ರಾನಡೆಯವರು ಗ್ರೀಕ್ ಭಾಷೆಯ ಅಭ್ಯಾಸ ಚೆನ್ನಾಗಿ ಮಾಡಿದ್ದರು. ಈ ಭಾಷೆಯ ಅಭ್ಯಾಸ ಸುಲಭವಲ್ಲ, ಇಂದಿನ ಗ್ರೀಕರು ಆಡುವ ಭಾಷೆಗೂ ಸಾಕ್ರೆಟೀಸ್, ಅವನ ಶಿಷ್ಯ ಪ್ಲೇಟೊ, ಅವನ ಶಿಷ್ಯ ಅರಿಸ್ಟಾಟಲ್ ಮೊದಲಾದ ತತ್ತ್ವಜ್ಞಾನಿಗಳು ಎರಡು ಸಾವಿರದ ನಾಲ್ಕು ನೂರು ವರ್ಷಗಳ ಹಿಂದೆ ಬಳಸುತ್ತಿದ್ದ ಗ್ರೀಕ್ ಭಾಷೆಗೂ ಬಹಳ ವ್ಯತ್ಯಾಸವಿದೆ. ಹಿಂದಿನ ಗ್ರೀಕ್ ಭಾಷೆಯ ಅಧ್ಯಯನ ಕಷ್ಟವೇ, ಆದರೆ ರಾನಡೆಯವರು ಇದನ್ನು ಸಾಧಿಸಿದ್ದರು. ಆದ್ದರಿಂದ ಅಗತ್ಯವಾದ ಗ್ರೀಕ್ ಪದಗಳನ್ನು ಬೋರ್ಡಿನ ಮೇಲೆ ಬರೆದು ಪಾಶ್ಚಾತ್ಯ ತತ್ತ್ವಜ್ಞಾನವನ್ನು ಕಲಿಸುವಾಗ ಪ್ಲೇಟೋ ಎಂಬ ತತ್ತ್ವಜ್ಞಾನಿಯ ವಿಚಾರಗಳನ್ನು ಕೂಲಂಕಷವಾಗಿ ವಿವರಿಸುತ್ತಿದ್ದರು. ಅನೇಕ ಸಂಸ್ಕೃತ ಅವತರಣಿಕೆಗಳು ಅವರ ನಾಲಿಗೆಯ ಮೇಲೆಯೇ ಇರುತ್ತಿದ್ದವು. ಅವರು ಪಾಠ ಹೇಳುವ ರೀತಿ ಆಕರ್ಷಕವಾಗಿತ್ತು. ಅದರಿಂದ ಪ್ರಭಾವಿತರಾದ ಅನೇಕ ವಿದ್ವಾಂಸರು ಈಗಲೂ ರಾನಡೆಯವರ ಪಾಠಗಳನ್ನು ಸ್ಮರಿಸುತ್ತಾರೆ.

ಹೊಗಳಿಕೆ ಶಾಪವೇ

ಅವರು ಡೆಕ್ಕನ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ನಡೆದ ಒಂದು ಸಂಗತಿ ಕುತೂಹಲಕರವಾಗಿದೆ. ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದರು. ಅವರ ಖಚಿತವಾದ ವಿದ್ವತ್ತು, ಪಾಠದ ನೀತಿ, ಶುದ್ಧಸರಳ ಸ್ವಭಾವ – ಎಲ್ಲ ವಿದ್ಯಾರ್ಥಿಗಳಿಗೆ ಅವರಲ್ಲಿ ಬಹು ಪೂಜ್ಯ ಭಾವನೆಯನ್ನು ಬೆಳೆಸಿದ್ದರು. ಅವರ ಕಾಲೇಜು ಮೂರು ತಿಂಗಳಿಗೊಂದು ಬಾರಿ ಒಂದು ಪತ್ರಿಕೆಯನ್ನು ಪ್ರಕಟಿಸುತ್ತಿತ್ತು. ಅವರ ವಿದ್ಯಾರ್ಥಿ ಶ್ರೀಖಂಡೆ ಎನ್ನುವವರು ರಾನಡೆಯವರ ಹಿರಿಮೆಯನ್ನು ವಿವರಿಸಿ ಒಂದು ಲೇಖನವನ್ನು ಬರೆದರು. ಅದನ್ನು ಪ್ರಿನ್ಸಿಪಾಲರಾಗಿದ್ದ ಬೆಯ್ನ್ ಅವರಿಗೂ ತೋರಿಸಿ ಕಾಲೇಜಿನ ಪತ್ರಿಕೆಯಲ್ಲಿ ಪ್ರಕಟಿಸಲು ಒಪ್ಪಿಗೆ ಬೇಡಿದರು. ಪ್ರಿನ್ಸಿಪಾಲರು ಸಂತೋಷದಿಂದ ಒಪ್ಪಿದರು.

ಪತ್ರಿಕೆಯ ಮುದ್ರಣ ನಡೆಯುತ್ತಿದ್ದಾಗ ರಾನಡೆಯವರು ಆಕಸ್ಮಾತ್ತಾಗಿ ಮುದ್ರಣಾಲಯಕ್ಕೆ ಹೋದರು. ಅಲ್ಲಿ ಅಚ್ಚಾಗಿದ್ದ ಲೇಖನದ ಹಾಳೆಗಳನ್ನು ಕಂಡರು. ಅವರಿಗೆ ಬಹಳ ಸಿಟ್ಟು ಬಂದಿತು. ಶ್ರೀಖಂಡೆಯವರ ಬಳಿಗೆ ಹೋಗಿ, ಯಾರ ಒಪ್ಪಿಗೆ ಪಡೆದು ಈ ಲೇಖನವನ್ನು ಪ್ರಕಟಿಸುತ್ತಿದ್ದೀರಿ? ಎಂದು ಕೇಳಿದರು. ಅವರು, ಪ್ರಿನ್ಸಿಪಾಲರ ಒಪ್ಪಿಗೆ ಪಡೆದಿದ್ದೇನೆ ಎಂದು. ರಾನಡೆಯವರು ಪ್ರಿನ್ಸಿಪಾಲರನ್ನೆ ಭೇಟಿಯಾದರು. ನನ್ನನ್ನು ಕುರಿತು ಅಂತಹ ಲೇಖವನ್ನು ಪ್ರಕಟಿಸುವುದಕ್ಕೆ ಹೇಗೆ ಒಪ್ಪಿಗೆ ಕೊಟ್ಟಿರಿ? ಬೆಳೆಯುತ್ತಿರುವ ವ್ಯಕ್ತಿಯನ್ನು ಹೊಗಳುವುದು ಎಂದರೆ ಶಪಿಸಿದ ಹಾಗೆಯೇ ಎಂದರು. ಆ ಲೇಖನವನ್ನು ಪತ್ರಿಕೆಯಲ್ಲಿ ಸೇರಿಸದಂತೆ ಶ್ರೀಖಂಡೆಯವರನ್ನೂ, ಬೆಯ್ನ್ ಅವರನ್ನೂ ಒಪ್ಪಿಸಿದರು.

ಗುರುವಿನ ಉಪದೇಶ

ರಾನಡೆಯವರ ಬುದ್ಧಿಯ ಶಿಕ್ಷಣ ಹೀಗೆ ಯಶಸ್ವಿಯಾಗಿ ಸಾಗಿತ್ತು. ಅವರ ಜ್ಞಾನ ಭಂಡಾರ ಬೆಳೆದಿತ್ತು. ಅವರು ಇತರರಿಗೆ ಪಾಠ ಹೇಳುವ ಘಟಕ್ಕೆ ಬಂದಿದ್ದರು. ಬುದ್ಧಿಯ ಶಿಕ್ಷಣ ಸಾಗುತ್ತಿದ್ದಾಗಲೇ ಮನಸ್ಸು ಹದವಾಗುವಂತೆ, ನಿರ್ಮಲವಾಗುವಂತೆ, ಸಂಸ್ಕಾರವಾಗುವಂತೆ ಶಿಕ್ಷಣ ದೊರೆಯುತ್ತಿತ್ತು. ರಾನಡೆಯವರ ಮನಸ್ಸಿನಲ್ಲಿ ದೈವಭಕ್ತಿಯ ಬೀಜವನ್ನು ಅವರ ತಾಯಿಯೇ ಬಿತ್ತಿದ್ದರು. ಅವರು ಪ್ರತಿನಿತ್ಯ ದೇವರ ನಾಮವನ್ನು ಜಪಿಸುತ್ತಿದ್ದರು ಮತ್ತು ಒಂದು ಸಾವಿರ ಜಪವಾದ ಕೂಡಲೆ ದೇವರ ಮನೆಯ ಗೋಡೆಯ ಮೇಲೆ ಬೆರಳಿನೀಂದ ಚಂದನದ ಒಂದು ಗುರುತು ಮಾಡುತ್ತಿದ್ದರು. ಇಂತಹ ಗುರುತುಗಳಿಂದ ಇಡೀ ಗೋಡೆ ತುಂಬಿಹೋಗಿತ್ತೆಂದು ರಾನಡೆಯವರು ಹೇಳುತ್ತಿದ್ದರು.

ರಾನಡೆಯವರು ಜಮಖಂಡಿಯಲ್ಲಿದ್ದಾಗ ಪ್ರತಿದಿನ ಮಾರುತಿಯ ಗುಡಿಗೆ ಹೋಗುತ್ತಿದ್ದರು. ಮನೆಯಿಂದ ಹೊರಟು ಗುಡಿಗೆ ಮುಟ್ಟುವವರೆಗೆ ಭೀಮ ರೂಪೀ ಮಹಾರುದ್ರಾ….’ ಎಂಬ ಮಾರುತಿ ಸ್ತೋತ್ರವನ್ನು ಜಪಿಸುತ್ತಿದ್ದರು. ಅವರು ಪ್ರತಿದಿನ ಸ್ನಾನ, ಸಂಧ್ಯಾವಂದನೆ ಮತ್ತು ಜಪವನ್ನು ನಿಯಮಿತವಾಗಿ ಮಾಡುತ್ತಿದ್ದರು. ಭಾವುರಾವ ಮಹಾರಾಜ ಎಂಬ ಸತ್ಪುರುಷರು ೧೯೦೧ರಲ್ಲಿ ಜಮಖಂಡಿಗೆ ಬಂದಾಗ ರಾನಡೆಯವರು ಅವರಿಂದ ಅನುಗ್ರಹ ಪಡೆದರು. ಮಹಾರಾಜರ ಉಪದೇಶದಿಂದ ರಾನಡೆಯವರ ಮನಸ್ಸಿನಲ್ಲಿದ್ದ ದೇವಭಕ್ತಿಯ ಬೀಜವು ಪರಮಾರ್ಥದ   ವೃಕ್ಷವಾಗಿ ಬೆಳೆಯಿತು.

ಕೆಲಸಕ್ಕೆ ರಾಜೀನಾಮೆ

ಭಾವುರಾವ ಮಹಾರಾಜರು ಬಿಜಾಪುರ ಜಿಲ್ಲೆಯ ಹಿಂಚಗೇರಿ ಎಂಬ ಹಳ್ಳಿಯಲ್ಲಿ ಇರುತ್ತಿದ್ದರು. ಅಲ್ಲಿಗೆ ಸಮೀಪದ ರೈಲ್ವೆ  ನಿಲ್ದಾಣ ಎಂದರೆ ನಿಂಬಾಳ. ಆದ್ದರಿಂದ ರಾನಡೆಯವರು ನಿಂಬಾಳ ನಿಲ್ದಾಣದ ಹತ್ತಿರ ಭೂಮಿಯನ್ನು ಕ್ರಯಕ್ಕೆ ತೆಗೆದುಕೊಂಡು ಒಂದು ಮನೆ ಕಟ್ಟಿಸಿದರು. ಸಾಂಗಲಿಗೆ ವರ್ಗ ಆದ ಮೇಲೆಯೂ ಅವರ ಆರೋಗ್ಯ ಚೆನ್ನಾಗಿರಲಿಲ್ಲ. ಆದ್ದರಿಂದ ಅವರು ಮೇಲಿಂದ ಮೇಲೆ ರಜೆಯನ್ನು ತೆಗೆದುಕೊಂಡು ನಿಂಬಾಳಕ್ಕೆ ಬರುತ್ತಿದ್ದರು. ಹಿಂಚಗೇರಿಗೆ ಹೋಗಿ ತಮ್ಮ ಗುರುಗಳನ್ನು ಭೇಟಿಯಾಗುತ್ತಿದ್ದರು. ಪ್ರಕೃತಿ ಸ್ವಲ್ಪ ಸ್ವಸ್ಥವಾದ ಕೂಡಲೆ ಸಾಂಗಲಿಗೆ ಹೋಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತತ್ತ್ವಶಾಸ್ತ್ರವನ್ನು  ಕಲಿಸಿ ಅವರು ಅಭ್ಯಾಸಕ್ರಮವನ್ನು ಪೂರ್ತಿಗೊಳಿಸುತ್ತಿದ್ದರು. ಆದರೂ ಇದರಿಂದ ತೊಂದರೆಯೇ ಆಗುತ್ತಿತ್ತು. ಆದ್ದರಿಂದ ರಾನಡೆಯವರು ೧೯೨೪ರಲ್ಲಿ ತಮ್ಮ ನೌಕರಿಗೆ ರಾಜೀನಾಮೆ ಕೊಟ್ಟರು.

ಉಪನಿಷತ್ತುಗಳ ಸಮೀಕ್ಷೆ

ರಾನಡೆಯವರು ಫರ್ಗ್ಯುಸನ್‌ಕಾಲೇಜಿನಲ್ಲಿ ಕಲಿಸುತ್ತಿದ್ದಾಗ ಅವರಿಗೆ ಬೆಂಗಳೂರಿನಿಂದ ಉಪನಿಷತ್ತುಗಳನ್ನು ಕುರಿತು ಉಪನ್ಯಾಸಗಳನ್ನು ಮಾಡಲು ಕರೆ ಬಂತು. ಈ ಆಹ್ವಾನ ಬಂದಾಗ ರಾನಡೆಯವರಿಗೆ ಮೂವತ್ತು ವರ್ಷ ಸಹ ವಯಸ್ಸಾಗಿರಲಿಲ್ಲ. ಈ ಉಪನ್ಯಾಸಗಳು ಬೆಂಗಳೂರಿನ ಶಂಕರ ಮಠದಲ್ಲಿ ಆದವು. ಬರೋಡದ ಮಹಾರಾಜರಾದ ಸಯಾಜಿರಾವ್‌ಗಾಯಕವಾಡರು ಅಧ್ಯಕ್ಷತೆ ವಹಿಸಿದ್ದರು. ರಾನಡೆಯವರ ಉಪನ್ಯಾಸಗಳನ್ನು ಗಾಯಕವಾಡರು ಬಹಳ ಮೆಚ್ಚಿಕೊಂಡರು. ಅವರು ಸೂಚಿಸಿದಂತೆ ನಿಂಬಾಳದಲ್ಲಿದ್ದು ರಾನಡೆಯವರು “ಉಪನಿಷತ್ತುಗಳ ತತ್ತ್ವಜ್ಞಾನದ ರಚನಾತ್ಮಕ ಸಮೀಕ್ಷೆ” ಎಂಬ ಗ್ರಂಥವನ್ನು ಬರೆದರು. ಈ ಗ್ರಂಥವು ೧೯೨೬ರಲ್ಲಿ ಪ್ರಕಟವಾಯಿತು. ಕೆಲವೇ ದಿನಗಳಲ್ಲಿ ರಾನಡೆಯವರ ಕೀರ್ತಿ ಸುಗಂಧವು ಎಲ್ಲೆಡೆ ಹಬ್ಬಿತು. ದೇಶವಿದೇಶದ ಅನೇಕ ವಿದ್ವಾಂಸರು ಈ ಉದ್ಗ್ರಂಥವನ್ನು ಬಹಳವಾಗಿ ಪ್ರಶಂಸೆ ಮಾಡಿದರು.

ಅಲಹಾಬಾದ್‌ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದ ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಗಂಗಾನಾಥ ಝಾ ಅರು ಈ ಗ್ರಂಥವನ್ನು  ಬಹಳ ಮೆಚ್ಚಿ ರಾನಡೆಯವರಿಗೆ ಅಲಹಾಬಾದ್‌ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಲು ಪ್ರಾರ್ಥಿಸಿದರು.

ಅಲಹಾಬಾದ್‌ವಿಶ್ವವಿದ್ಯಾನಿಲಯ

“ನಿಮ್ಮಂತಹ ಶ್ರೇಷ್ಠ ಪ್ರಾಧ್ಯಾಪಕರು ನಮ್ಮ ವಿಶ್ವವಿದ್ಯಾನಿಲಯದಲ್ಲಿ ಇರುವುದೇ ವಿಶ್ವವಿದ್ಯಾನಿಲಯಕ್ಕೆ ಗೌರವ. ನೀವು ಒಂದು ಉಪನ್ಯಾಸವನ್ನು ಮಾಡದಿದ್ದರೂ ಚಿಂತೆ ಇಲ್ಲ. ನಮ್ಮ ವಿಶ್ವವಿದ್ಯಾನಿಲಯದ ಪ್ರಧ್ಯಾಪಕರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಬೇಕು. ನನ್ನ ಆಹ್ವಾನವನ್ನು ದಯವಿಟ್ಟು ಒಪ್ಪಿಕೊಳ್ಳಿ, ನನಗೆ ನಿರಾಸೆ ಮಾಡಬೇಡಿ” ಎಂದು ಉಪಕುಲಪತಿಗಳು ಬರೆದರು. ಈ ಆಹ್ವಾನ ಬಂದಾಗ ರಾನಡೆಯವರಿಗೆ ಸುಮಾರು ನಲವತ್ತು ವರ್ಷ. ಈ ವಯಸ್ಸಿಗಾಗಲೆ ಇಂತಹ ಖ್ಯಾತಿಯನ್ನು ವಿದ್ವಾಂಸರ ಜಗತ್ತಿನಲ್ಲಿ ಪಡೆದಿದ್ದರು ಎಂದರೆ ಆಶ್ಚರ್ಯವಾಗುವ ಸಂಗತಿ.

ಉಪಕುಲಪತಿಗಳ ವಿನಂತಿಯನ್ನು ಮಾನ್ಯ ಮಾಡಿ ರಾನಡೆಯವರು ಅಲಹಾಬಾದಿಗೆ ಹೋದರು. ಅಲ್ಲಿದ್ದು ಅವರು ತತ್ತ್ವಶಾಸ್ತ್ರ ವಿಭಾಗದ ಪ್ರಮುಖರಾಗಿ ಇಪ್ಪತ್ತು ವರ್ಷ ಸೇವೆ ಸಲ್ಲಿಸಿದರು. ಅಲ್ಲಿ ಅವರು ಪರತತ್ತ್ವಶಾಸ್ತ್ರ, ನೀತಿಶಾಸ್ತ್ರ, ಮಾನಸಶಾಸ್ತ್ರ, ಧರ್ಮಶಾಸ್ತ್ರ ಮುಂತಾದ ತತ್ವಶಾಸ್ತ್ರದ ಅನೇಕ ಭಾಗಗಳನ್ನು ಕಲಿಸಿದರು. ೧೯೪೫ರಲ್ಲಿ ರಾನಡೆಯವರೇ ಆ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು.

ರಾನಡೆಯವರಿಗೆ ಅರವತ್ತು ವರ್ಷ ವಯಸ್ಸಾದಾಗ ಅಧಿಕಾರದಿಂದ ನಿವೃತ್ತರಾದರು ಆದರೆ ಅವರ ಅಗಾಧ ಪಾಂಡಿತ್ಯದ ಪ್ರಯೋಜನ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಲಭ್ಯವಾಗಬೇಕು ಎಂದು ವಿಶ್ವವಿದ್ಯಾನಿಲಯ ಬಯಸಿತು. ಸನ್ಮಾನ್ಯ ಪ್ರಾಧ್ಯಾಪಕರು (ಎಮೆರಿಟಸ್ ಪ್ರೊಫೆಸರ್) ಎಂದು ವಿಶ್ವವಿದ್ಯಾನಿಲಯದಲ್ಲಿ ಸ್ಥಾನ ವಹಿಸಿಕೊಳ್ಳಬೇಕೆಂದು ಅವರನ್ನು ಪ್ರಾರ್ಥಿಸಿತು. ರಾನಡೆಯವರು ಒಪ್ಪಿದರು. ಇದರಿಂದ ಅನೇಕ ವರ್ಷಗಳ ಕಾಲ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಅವರ ಮಾರ್ಗದರ್ಶನ ಲಭಿಸಿತು. ಮಾರನೆಯ ವರ್ಷ ವಿಶ್ವವಿದ್ಯಾನಿಲಯವು ಅವರಿಗೆ ‘ಡಾಕ್ಟರ್ ಆಫ್ ಲಿಟರೇಚರ್ ’ ಎಂಬ ಗೌರವ ಪ್ರಶಸ್ತಿಯನ್ನು ನೀಡಿತು.

ಅಲಹಾಬಾದಿನಲ್ಲಿದ್ದಾಗ ರಾನಡೆಯವರು ಪ್ರತಿ ದಿನವೂ ಗಂಗಾನದಿಯ ದಡದಲ್ಲಿ ದ್ರೌಪದೀ ಘಾಟಿನ ಬಳಿ ಕುಳಿತು ಧ್ಯಾನ ಮಾಡುತ್ತಿದ್ದರು.

ಸತ್ವ ಪರೀಕ್ಷೆ

ರಾನಡೆಯವರ ಜೀವನದ ಈ ವೃತ್ತಾಂತವನ್ನು ಓದುವಾಗ ಅವರಿಗೆ ಅಡ್ಡಿತಡೆಗಳಿಲ್ಲದೆ ಸಾಗಿತು, ಉದ್ದಕ್ಕೂ ಯಶಸ್ಸು-ಗೌರವಗಳು ಲಭ್ಯವಾದವು, ಬಾಲ್ಯ ದಾಟಿದ ಮೇಲೆ ಕಷ್ಟನೋವುಗಳನ್ನು ಅವರು ಕಾಣಲಿಲ್ಲ ಎಂದು ತೋರಬಹುದು. ಆದರೆ ಅವರ ಓದು ಬರಹಗಳಿಗೆ ಬಂದ ಅಡ್ಡಿಗಳು ಒಂದೊಂದಲ್ಲ. ಜೀವನದುದ್ದಕ್ಕೂ ಅವರ ಸತ್ವ ಪರೀಕ್ಷೆ ಯಾಗುತ್ತಲೇ ಇತ್ತು. ಆದರೆ ಅವರು ಗುರುಗಳಲ್ಲಿ ದೃಢವಾದ ಭಕ್ತಿ ವಿಶ್ವಾಸಗಳನ್ನು ಇರಿಸಿಕೊಂಡಿದ್ದರು, ಬಂದ ಕಷ್ಟ ಪರಂಪರೆಯನ್ನೆಲ್ಲ ದೃಢಮನಸ್ಸಿನಿಂದ ಎದುರಿಸಿದರು ಬೆಂಕಿಯಿಂದ ಬಂದ ಚಿನ್ನದಂತೆ ಬೆಳಗಿದರು.

ಅವರು ಎಂ.ಎ. ಪರೀಕ್ಷೆಗೆ ಓದುತ್ತಿದ್ದಾಗ ಕಾಯಿಲೆಯಾಯಿತು. ಪರೀಕ್ಷೆ ಮಾಡಿದ ವೈದ್ಯರು ಅದು ಮೆದುಳಿನ ಕ್ಯಾನ್ಸರ್ ಎಂದರು. ಇದೊಂದು ಭಯಂಕರ ರೋಗ, ಗುಣವಾಗುವ ಸಾಧ್ಯತೆ ಇಲ್ಲವೆ ಎಲ್ಲ ಎನ್ನಬಹುದು. ಒಂದು ಒಂದು ರಾತ್ರಿಯಂತೂ ಅವರ ಸ್ಥಿತಿ ತೀರ ಕೆಟ್ಟಿತು. ರಾನಡೆಯವರು ದೇವರ ಧ್ಯಾನ ಮಾಡುತ್ತಾ ಎಲ್ಲವನ್ನೂ ಸಹಿಸಿದರು. ವ್ಯಾಧಿಯೂ ಗುಣವಾಯಿತು.

ಮದುವೆಯಾದ ಕೆಲವು ವರ್ಷಗಳ ನಂತರ ರಾನಡೆಯವರಿಗೆ ೧೯೧೬ರಲ್ಲಿ ಒಂದು ಗಂಡು ಮಗುವಾಯಿತು. ಆದರೆ ಆ ಮಗು ಹತ್ತನೇ ತಿಂಗಳಲ್ಲಿ ಆಕಸ್ಮಿಕವಾಗಿ ತೀರಿಕೊಂಡಿತು. ಈ ಸುದ್ದಿಯು ಅವರು ಜಮಖಂಡಿಯ ಪರಶುರಾಮಭಾವು ಹೈಸ್ಕೂಲಿನ ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಮುಖ ಅತಿಥಿಯೆಂದು ಹೋಗುವಾಗ ಅವರಿಗೆ ತಿಳಿಯಿತು. ದುಃಖದ ಆಘಾತವನ್ನು ಶಾಂತ ಮನಸ್ಸಿನಿಂದ ಸಹಿಸಿದರು, ಯಾರಿಗೂ ತಮ್ಮ ಸಂಕಟವನ್ನು ತೋರಿಸಲಿಲ್ಲ. ಆ ಸಮ್ಮೇಳನಕ್ಕೆ ಹೋಗಿ ತಮ್ಮ ಕಾರ್ಯವನ್ನು ಸಮರ್ಪಕವಾಗಿ ಪೂರ್ತಿಗೊಳಿಸಿದರು. ಎರಡು ವರ್ಷಗಳೊಳಗಾಗಿ ಅವರು ಇನ್ನೊಂದು ಸಂಕಟವನ್ನು ಎದುರಿಸಬೇಕಾಯಿತು. ಅವರ ಪತ್ನಿ ಎನ್ ಫ್ಲುಯೆಂಜಾದಿಂದ ತೀರಿಕೊಂಡರು.ಅದೇ ಸಮಯದಲ್ಲಿ ಅವರ ತಾಯಿ ಅಸ್ವಸ್ಥರಾಗಿದ್ದರು. ಮುಂದೆ ಒಂದೇ ತಿಂಗಳೊಳಗೆ ಅವರೂ ಮರಣ ಹೊಂದಿದರು.

ಹೀಗೆ ಮಗು, ಹೆಂಡತಿ ಮತ್ತು ತಾಯಿ ಇವರ ಸಾವಿನಿಂದ ಅವರ ಮನಸ್ಸು ಅತ್ಯಂತ ವ್ಯಗ್ರವಾಯಿತು. ಆದರೂ ಅವರು ಭಕ್ತಿಯನ್ನು ಬಿಡಲಿಲ್ಲ. ಪ್ರತಿದಿನ ಏಳು ಘಂಟೆಯ ಕಾಲ ಅವರು ದೇವರ ನಾಮಸ್ಮರಣೆಯಲ್ಲಿ ತಮ್ಮ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸುತ್ತಿದ್ದರು. ಸಂತರ ಜೀವನವನ್ನೂ ಅವರ ಉಪದೇಶವನ್ನೂ ಶ್ರದ್ಧೆಯಿಂದ ಅಭ್ಯಾಸ ಮಾಡಿದರು. ೧೯೧೯ ರಲ್ಲಿ ರಾನಡೆಯವರು ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡುವಾಗ ಮತ್ತೆ ಅವರ ಪ್ರಕೃತಿಯು ಬಹಳ ಅಸ್ವಸ್ಥವಾಯಿತು. ರಜ ತೆಗೆದುಕೊಂಡು ಜಮಖಂಡಿಗೆ ಬಂದರು. ದೇಹಸ್ಥಿತಿ ಸ್ವಲ್ಪ ಉತ್ತಮವಾಗುತ್ತಲೆ ಅವರು ಒಬ್ಬ ಸ್ನೇಹಿತರಿಗೆ ಬರೆದ ಕಾಗದ ಅವರ ಮನಸ್ಸು ಯಾವ ದಿಕ್ಕಿನಲ್ಲಿ ಹರಿಯುತ್ತಿತ್ತು. ಎಂಬುದನ್ನು ತೋರಿಸುತ್ತದೆ; “ಭಗವಂತನ ಕೃಪೆಯಿಂದ ಇತ್ತೀಚೆಗೆ ನನ್ನ ಪ್ರಕೃತಿಯು ಸ್ವಲ್ಪ ಗುಣಮುಖವಾಗುತ್ತಾ ಇದೆ. ಹೀಗೆಯೆ ಅದು ಉತ್ತರೋತ್ತರ ಉತ್ತಮವಾಗಿ ಭಗವಂತನ ಸೇವೆಯಲ್ಲಿ ಎಲ್ಲ ಶರೀರ, ಮನಸ್ಸು, ಸಂಪತ್ತು, ವಿದ್ಯೆ ಹಾಗೂ ವೈಭವವನ್ನು ವೆಚ್ಚ ಮಾಡುವ ಸಾಮರ್ಥ್ಯ ನನಗೆ ಬರಬೇಕು ಹಾಗೂ ಭಕ್ತಿಮಾರ್ಗವು ಬೆಳೆಯಬೇಕೆಂದು ನನ್ನಪ್ರಾರ್ಥನೆ ಇದೆ.” ಎರಡನೆಯ ಬಾರಿ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದಿತು. ಒಂದೂವರೆ ವರ್ಷಕಾಲ ತುಂಬ ನೋವನ್ನು ಅನುಭವಿಸಿದರು. ಅವರು ಉಳಿಯುವುದೇ ಅನುಮಾನವಾಗಿತ್ತು. ಮತ್ತೆ ಕಾಯಿಲೆ ಗುಣವಾಯಿತು, ಅವರು ಉಳಿದುಕೊಂಡರು.

‘ಗುರುದೇವ ರಾನಡೆ’

ಗುರುಗಳಾದ ಭಾವುರಾವ ಮಹಾರಾಜರು ಹೇಳಿಕೊಟ್ಟ ಹರಿನಾಮವನ್ನು ರಾನಡೆಯವರು ಅತ್ಯಂತ ದೃಢವಾದ ಶ್ರದ್ಧೆಯಿಂದ ಜಪಿಸುತ್ತಿದ್ದರು. ಆದ್ದರಿಂದ ಅವರಿಗೆ ಅನೇಕ ಆಧ್ಯಾತ್ಮಿಕ ಅನುಭವಗಳು ಆದವು. ೧೯೧೪ ರಲ್ಲಿ ಗುರುಗಳ ನಿರ್ಯಾಣದ ಅನಂತರ ಹಿರಿಯ ಶಿಷ್ಯರಾದ ಅಂಬುರಾವ ಮಹಾರಾಜರು ಆ ಪರಂಪರೆಯ ಧುರೀಣತ್ವವನ್ನು ವಹಿಸಿಕೊಂಡರು. ೧೯೩೩ ರಲ್ಲಿ ಅವರೂ ಕಾಲವಶರಾದನಂತರ ರಾನಡೆಯವರು ಆ ಹೊಣೆಯನ್ನು ವಹಿಸಿಕೊಳ್ಳಬೇಕಾಯಿತು. ಪ್ರೊಫೆಸರ್ ರಾನಡೆಯವರು ‘ಗುರುದೇವ ರಾನಡೆ’ ಆದರು.

ಮಾರ್ಗದರ್ಶನ

ತಮ್ಮ ಸುತ್ತಮುತ್ತ ಸಾಧಕರ ದೊಡ್ಡ ಗುಂಪನ್ನು ಕೂಡಿಸುವ ಇಚ್ಛೆ ಗುರುದೇವ ರಾನಡೆಯವರಿಗೆ ಇರಲಿಲ್ಲ. ಅವರೆಡೆಗೆ ಬಂದ ಮನುಷ್ಯನನ್ನು ಸರಿಯಾಗಿ ಪರೀಕ್ಷಿಸಿ ಆಮೇಲೇಯೇ ಅವನಿಗೆ ನಾಮವನ್ನು ಹೇಳಿಕೊಡುತ್ತಿದ್ದರು. ಕೆಲವರಿಗೆ ಒಂದು ವರ್ಷ ತಡೆಯಲು ಹೇಳುತ್ತಿದ್ದರು. ಕೆಲವರಿಗೆ ಮೊದಲು ಧರ್ಮಗ್ರಂಥವನ್ನು ಓದಲು ಹೇಳುತ್ತಿದ್ದರು. ಕೆಲವರಿಗೆ ತಮ್ಮ ಗುರುಗಳ ನಿವಾಸ ಸ್ಥಾನವಾದ ಹಿಂಚಗೇರಿಗೆ ಹೋಗಿಬರಲು ಹೇಳುತ್ತಿದ್ದರು. ವಾಹನ ಸೌಕರ್ಯ ಇಲ್ಲದ ಆ ಕಾಲದಲ್ಲಿ ಕಾಲನಡಿಗೆಯಿಂದ ಅಥವಾ ಎತ್ತಿನ ಬಂಡಿಯಲ್ಲಿ ಹನ್ನೆರಡು ಮೈಲು ಹೋಗಿ ಬರುವುದು ಒಂದು ಬಗೆಯ ಪರೀಕ್ಷೆಯೇ ಆಗಿತ್ತು. ಗುರುದೇವ ರಾನಡೆಯವರು ಸಾಧಕರಲ್ಲಿ ಯಾವ ಭೇದವನ್ನೂ ಮಾಡುತ್ತಿರಲಿಲ್ಲ. ಶ್ರೀಮಂತ, ಬಡವ, ಓದಿದವನು, ಓದು ಬಾರದವನು, ಮೇಲಿನ ಜಾತಿಯವರು, ಕೆಳಗಿನ ಜಾತಿಯವನು, ಮೇಲಿನ ಜಾತಿಯವನು, ಕೆಳಗಿನ ಜಾತಿಯವನು, ಅಸ್ಪೃಶ್ಯ – ಈ ಬಗೆಯ ಯಾವ ಲೇಖ್ಖವೂ ಅವರ ಮನಸ್ಸಿಗೆ ಬರುತ್ತಿರಲಿಲ್ಲ. ತಮ್ಮ ಬಳಿಗೆ ಉಪದೇಶಕ್ಕಾಗಿ ಬಂದ ಮನುಷ್ಯನ ಸ್ವಭಾವ ಎಂತಹುದು, ಮನಸ್ಸು ಎಷ್ಟು ಹದವಾಗಿದೆ, ಪಕ್ವವಾಗಿದೆ ಎಂದು ಪರೀಕ್ಷಿಸಿ ನೋಡುತ್ತಿದ್ದರು. ದೇವರ ಕಡೆ ಮನಸ್ಸು ತಕ್ಕಷ್ಟು ತಿರುಗಿದೆ ಎಂದು ಖಚಿತವಾದಾಗ ದೇವರ ನಾಮದ ಉಪದೇಶ ಮಾಡುತ್ತಿದ್ದರು. ಈ ನಾಮವನ್ನು ಅವನು ಸತತವಾಗಿ ಚಿಂತಿಸಬೇಕು. ನಾಮಸ್ಮರಣೆಯನ್ನು ಮಾಡುವವನು ಒಂದೇ ಒಂದು ನಿಯಮವನ್ನು ಪಾಲಿಸಬೇಕು. ಅದೆಂದರೆ – ಪರಸ್ತ್ರೀ ಮತ್ತು ಪರಧನಗಳ ವಿಷಯವನ್ನು ಯೋಚನೆ ಸಹಾ ಮಾಡಬಾರದು.

ಉತ್ಸಾಹ

ಜಾರ್ಜ್ ಬರ್ಚ್ ಎಂಬ ಅಮೆರಿಕದ ಪ್ರಾಧ್ಯಾಪಕರು ೧೯೫೩-೫೪ ರಲ್ಲಿ ಭಾರತಕ್ಕೆ ಬಂದಾಗ ಗುರುದೇವ ರಾನಡೆಯವರ ಭೇಟಿಗಾಗಿ ನಿಂಬಾಳಕ್ಕೆ ಹೋಗಿದ್ದರು. ಅಲ್ಲಿ ಕೆಲವು ದಿನಗಳವರೆಗೆ ಇದ್ದು ಅವರು ಗುರುದೇವ ರಾನಡೆಯವರ ಜೀವನವನ್ನು ಸೂಕ್ಷ್ಮವಾಗಿ ವೀಕ್ಷಿಸಿದರು. ತಮ್ಮ ದೇಶಕ್ಕೆ ತಿರುಗಿ ಹೋದನಂತರ ಜಾರ್ಜ್ ಬರ್ಚ್‌ಅವರು ಗುರುದೇವ ರಾನಡೆಯವರ ಬಗೆಗೆ ಒಂದು ಲೇಖನವನ್ನು ಬರೆದರು. ಅದರಲ್ಲಿ ಅವರು ಹೇಳುತ್ತಾರೆ;

“ಪ್ರೊಫೆಸರ್ ರಾನಡೆಯವರು ಹೇಗಿರಬಹುದೆಂದು ನನಗೆ ಅನಿಸಿತ್ತೋ ಸಂಪೂರ್ಣವಾಗಿ ಅದಕ್ಕಿಂತ ಭಿನ್ನವಾಗಿದ್ದರೆಂದು ನನಗೆ ಕಂಡುಬಂದಿತು. ಅವರ ದೇಹವು ಬಹಳ ಕೋಮಲ ಹಾಗೂ ತೆಳ್ಳಗಿತ್ತು. ಗಾಳಿಯಿಂದ ಅವರು ಹಾರಿ ಹೋಗುತ್ತಾರೇನೋ ಎಂದು ಅನಿಸಿದರೂ ಅವರ ಆಧ್ಯಾತ್ಮಿಕ ಹಾಗೂ ಬೌದ್ಧಿಕ ಉತ್ಸಾಹವಷ್ಟೇ ಅಲ್ಲ, ಶಾರೀರ ಉತ್ಸಾಹವೂ ಬಹಳ ಹೆಚ್ಚಾಗಿತ್ತು.

ಸುತ್ತಮುತ್ತಲಿರುವ ಸಾಧಕರಿಗೆ ಅವರು ದೇವರಂತಿದ್ದರೂ ಅವರ ವೃತ್ತಿಯೂ ವಿನೋದದಿಂದ ತುಂಬಿರುತ್ತಿತ್ತು. ಅವರ ಮಾತು ಸ್ಪಷ್ಟವಾಗಿತ್ತು. ಕಲಿಯಲು ಹಾಗೂ ಕಲಿಸಲು ಅವರು ಉತ್ಸುಕರಾಗಿದ್ದರು.”

ಸರಳತೆ

ಗುರುದೇವ ರಾನಡೆಯವರು ಸ್ವಲ್ಪ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಅದೂ ಬಹು ಸರಳವಾದ ಆಹಾರ. ಪಂಚೆ ಮತ್ತು ಬಿಳಿ ಶರ್ಟು – ಇಷ್ಟೇ ಅವರ ಉಡುಪು. ಹೊರಗೆ ಹೋಗುವಾಗ ಅವರು ಕುತ್ತಿಗೆಯ ತನಕ ಮುಚ್ಚುವ ಕೋಟನ್ನು ಮತ್ತು ತಲೆಯ ಮೇಲೆ ರುಮಾಲನ್ನು ಧರಿಸುತ್ತಿದ್ದರು. ವಿಶ್ವವಿದ್ಯಾಲಯದಲ್ಲಿ ಕಲಿಸುವಾಗ ಅವರ ತಲೆಯ ಮೇಲೆ ಪುಣೆಯ ಕೆಂಪು “ಪಗಡಿ” ಇರುತ್ತಿತ್ತು. ಸ್ವಚ್ಛತೆ ಮತ್ತು ಸರಳತೆ ಅವರಿಗೆ ಬಹು ಪ್ರಿಯ.

ನಿಂಬಾಳದ ಅವರ ಆಶ್ರಮಕ್ಕೆ ಬಂದ ಎಲ್ಲ ಜನರನ್ನು ಪ್ರತಿದಿನ ಅವರು ಒಂದು ಕಡೆಗೆ ಸೇರಿಸುತ್ತಿದ್ದರು ಮತ್ತು ಆಸ್ಥೆಯಿಂದ ಕುಶಲಪ್ರಶ್ನೆಗಳನ್ನು ಕೇಳುತ್ತಿದ್ದರು. ಒಬ್ಬನಿಗೆ ತತ್ತ್ವದ ಹಾಡನ್ನು ಹಾಡಲು ಹೇಳುತ್ತಿದ್ದರು; ಆ ಮೇಲೆ ಇನ್ನೊಬ್ಬನಿಂದ ಭಾವುರಾದ ಮಹಾರಾಜರ ಪತ್ರವನ್ನು ಓದಿಸುತ್ತಿದ್ದರು. ಅಥವಾ ಮತ್ತೊಬ್ಬನಿಗೆ ಸ್ವಾನುಭವವನ್ನು ವರ್ಣಿಸಲು ಹೇಳುತ್ತಿದ್ದರು. ಆ ಸಭೆಯಲ್ಲಿ ಯಾರಾದರೂ ವಿದ್ವಾಂಸರಿದ್ದರೆ ಅವರಿಗೆ ಉಪನ್ಯಾಸ ನೀಡಲು ವಿನಂತಿಸುತ್ತಿದ್ದರು. ಒಮ್ಮೆಮ್ಮೆ ಪಂಡಿತರು ತಾವು ಬರೆದ ಗ್ರಂಥದ ಮುಖ್ಯ ಭಾಗಗಳನ್ನು ಓದಿ ವಿವರಿಸುತ್ತಿದ್ದರು. ಹೀಗೆ ಅಲ್ಲಿ ಸತ್ಸಂಗವು ಮೇಲಿಂದ ಮೇಲೆ ನಡೆಯುತ್ತಿತ್ತು.

ಎಪ್ಪತ್ತರ ಸಮಾರಂಭ

ದಿನಾಂಕ ೧೯೫೬ ರ ಜುಲೈ ೩ ರಂದು ಗುರುದೇವ ರಾನಡೆಯವರಿಗೆ ೭೦ ವರ್ಷಗಳು ತುಂಬಿದವು. ಆದ್ದರಿಂದ ಅವರ ಜನ್ಮಸ್ಥಾನವಾದ ಜಮಖಂಡಿಯ ಜನರು ಅವರಿಗೆ ಸನ್ಮಾನ ಮಾಡಬೇಕೆಂದು ಯೋಚಿಸಿದರು. ಆದರೆ ಗುರುದೇವ ರಾನಡೆಯವರು ಈ ಸಮಾರಂಭಕ್ಕೆ ಒಪ್ಪುತ್ತಾರೋ ಇಲ್ಲವೋ ಎಂಬ ಸಂಶಯ ಅವರಿಗೆ; ಏಕೆಂದರೆ ಹತ್ತು ವರ್ಷಗಳ ಹಿಂದೆ ಅವರಿಗೆ ಅರವತ್ತು ವರ್ಷಗಳು ತುಂಬಿದಾಗ ಅವರು ಇಂತಹ ಸಮಾರಂಭ ಮಾಡುವುದಕ್ಕೆ ಮನ್ನಣೆ ಕೊಟ್ಟಿದ್ದಿಲ್ಲ. ಅವರಿಗೆ ಸತ್ಕಾರ ಸಮಾರಂಭಗಳು ಬೇಕಿರಲಿಲ್ಲ. ಅವರಿಗೆ ಸತ್ಕಾರ ಸಮಾರಂಭಗಳು ಬೇಕಿರಲಿಲ್ಲ. ಅದರಿಂದ ಮನುಷ್ಯನ ಅಹಂಕಾರವು ಬೆಳೆಯುತ್ತದೆಂದು ಅವರು ಭಾವಿಸುತ್ತಿದ್ದರು. ಆದರೆ ಈ ಬಾರಿ ಮಾತ್ರ ಅವರು ತಮ್ಮ ಒಪ್ಪಿಗೆಯನ್ನು ತಿಳಿಸಿದರು. ತಮ್ಮ ಆಯುಷ್ಯದ ಕೊನೆಯು ಹತ್ತಿರ ಬರುತ್ತಾ ಇದೆ ಎಂಬುದರ ಕಲ್ಪನೆಯು ಅವರಿಗೆ ಆಗಿರಬೇಕು. ಸಮಾರಂಭದ ನಿಮಿತ್ತದಿಂದ ಅನೇಕ ಸಾಧಕರು ಒಂದೆಡೆ ಬಂದು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದೆಂದು ಅವರಿಗೆ ಅನಿಸಿರಬೇಕು. ಅವರ ಒಪ್ಪಿಗೆಯು ಬಂದಕೂಡಲೆ ಜಮಖಂಡಿಯ ಜನರು ಅತ್ಯಂತ ಉತ್ಸಾಹದಿಂದ ಸಮಾರಂಭದ ಸಿದ್ಧತೆಯನ್ನು ಮಾಡಿದರು. ಜುಲೈ ೨ ರಂದು ಗುರುದೇವ ರಾನಡೆಯವರ ತೈಲಚಿತ್ರದ ಅನಾವರಣವನ್ನು ಸುಪ್ರಸಿದ್ಧ ಸ್ವಾತಂತ್ರ್ಯ ಚಳುವಳಿಗಾರನಾದ ದೇಶಪಾಂಡೆಯವರು ಮಾಡಿದರು.

ಮರುದಿನ ಅಮೃತ ಮಹೋತ್ಸವದ ಮುಖ್ಯ ಸಮಾರಂಭವಿತ್ತು. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಈ ಸಮಾರಂಭದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ದೇಶದ ವಿವಿಧ ಭಾಗಗಳಿಂದ ಶಿಷ್ಯರು ಬಂದಿದ್ದರು.

ಆಘಾತ

ಸೇವಾನಿವೃತ್ತರಾದ ಮೇಲೆ ಗುರುದೇವರು ಪ್ರತಿ ವರ್ಷ ಜನೆವರಿ ತಿಂಗಳಲ್ಲಿ ಅಲಹಾಬಾದಿಗೆ ಹೋಗಿ ಮೇ ತಿಂಗಳಲ್ಲಿ ತಿರುಗಿ ಬರುತ್ತಿದ್ದರು. ಆದರೆ ೧೯೫೭ ರಲ್ಲಿ ಬೇರೆ ಬೇರೆ ಕಾರಣಗಳಿಂದ ಅವರಿಗೆ ನಿಂಬಾಳದಿಂದ ಹೊರಡಲು ವಿಳಂಬವಾಯಿತು. ಮಾರ್ಚ್ ತಿಂಗಳ ಮಧ್ಯದಲ್ಲಿ ಅವರು ಅಲಹಾಬಾದ್ ತಲುಪಿದರು. ಒಂದು ವಾರದವರೆಗೆ ಅವರ ಪ್ರಕೃತಿ ಸಾಧಾರಣವಾಗಿತ್ತು. ದಿನಾಂಕ ೨೨ ರಂದು ಬಿರುಸಿನ ಬಿರುಗಾಳಿ ಬೀಸಿ ಆಲಿಕಲ್ಲುಗಳ ಮಳೆ ಸುರಿಯಿತು. ಅವರ ಮನೆಯ ಹತ್ತಿರ ಇದ್ದ ಬಂಗಲೆಯ ಮೇಲೆ ಸಿಡಿಲು ಬಿದ್ದು ಆ ಬಂಗಲೆಯ ಮಾಲೀಕನ ಮಗನಿಗೆ ಗಾಯವಾಯಿತು. ಈ ಎಲ್ಲದರ ಅನಿಷ್ಟ ಪರಿಣಾಮವು ಗುರುದೇವರ ಶರೀರದ ಮೇಲೆಯೂ ಮನಸ್ಸಿನ ಮೇಲೆಯೂ ಆಗಿ ಅವರ ಕೆಮ್ಮಿನ ವ್ಯಾಧಿ ಬೆಳೆಯಿತು.

ಮೃತ್ಯುವಿನ ನಗಾರಿ ಬಾರಿಸಿದೆ

ತಮ್ಮ ಅಂತ್ಯಕಾಲ ಸಮೀಪಿಸುತ್ತಿದೆ ಎಂಬುದನ್ನು ತಿಳಿದು ಅವರು ಅಲಹಾಬಾದನ್ನು ಏಪ್ರಿಲ್ ತಿಂಗಳ ಕೊನೆಯಲ್ಲಿಯೇ ಬಿಟ್ಟರು. ಪುಣೆಯಲ್ಲಿ ಅವರು ಹನ್ನೆರಡು ಗಂಟೆಗಳ ಕಾಲ ಮಾತ್ರ ಇದ್ದರು. ಅಷ್ಟರಲ್ಲಿ ಅನೇಕರು ಗುರುದೇವರ ದರ್ಶನಕ್ಕೆ ಬಂದು ಹೋದರು. ಪ್ರತಿಯೊಬ್ಬನೊಡನೆ ಅವರು ಮಾತನಾಡಿದರು ಮತ್ತು ಅಲ್ಲಿ ಕುಡಿದ ಸಾಧಕರಲ್ಲಿ ಒಬ್ಬನಿಗೆ “ಮೌತಕಾ ದಂಕಾ ಬಜೇ” (ಮೃತ್ಯುವಿನ ನಗಾರಿ ಬಾರಿಸಿದೆ) ಎಂಬ ಪದ್ಯವನ್ನು ಹಾಡಲು ಹೇಳಿದರು. ಈ ಸಂಗತಿಯ ಅರ್ಥವನ್ನು ಸಾಧಕರು ಒಮ್ಮೆಲೆ ತಿಳಿದುಕೊಂಡು ವ್ಯಥಿತರಾದರು.

 

"ಮೃತ್ಯುವಿನ ನಗಾರಿ ಬಾರಿಸಿದೆ ಎಂಬ ಹಾಡನ್ನು ಹೇಳು."

ಪರಮಾತ್ಮನೆಡೆಗೆ

 

ಮಹಾಪ್ರಯಾಣದ ಐದು ದಿವಸ ಮುಂಚಿತವಾಗಿ ಗುರುದೇವ ರಾನಡೆಯವರು ಆಹಾರ ಬಿಟ್ಟರು; ಮಾತನಾಡುವುದನ್ನೂ ನಿಲ್ಲಿಸಿದರು. ಕೇವಲ ಹರಿ ಚಿಂತನೆಯಲ್ಲಿ ಮಗ್ನರಾದರು. ೧೯೫೭ ರಲ್ಲಿ ಜೂನ್ ೬ ರಂದು ಗುರುವಾರ ರಾತ್ರಿ ಭಜನೆ ಪ್ರಾರಂಭಿಸಲು ಅವರು ಸೂಚನೆ ಮಾಡಿದರು. ಧ್ಯಾನಮಂದಿರದಲ್ಲಿ ಭಜನೆ ಪ್ರಾರಂಭವಾಯಿತು. ಭಜನೆಯ ಕೊನೆಯಲ್ಲಿ ಸಾಧಕರು ಕರ್ಪೂರ ಬೆಳಗಿಸಿ ವಿಠ್ಠಲನಾಮದ ಉದ್ಘೋಷವನ್ನು ಮಾಡುತ್ತಿರುವಾಗ ಗುರುದೇವರ ಜೀವನಜ್ಯೋತಿ ಪರಮಾತ್ಮನಲ್ಲಿ ವಿಲೀನವಾಯಿತು.

‘ಪರಮಾರ್ಥ ಸೋಪಾನ

ಅಲಹಾಬಾದ್ ವಿಶ್ವವಿದ್ಯಾಲಯದಿಂದ ನಿವೃತ್ತರಾದ ಮೇಲೆ ರಾನಡೆಯವರು “ಆಧ್ಯಾತ್ಮ ವಿದ್ಯಾ ಮಂದಿರ” ಎಂಬ ಸಂಸ್ಥೆ ಪ್ರಾರಂಭಿಸಿದರು ಮತ್ತು ಅದರ ಪರವಾಗಿ ಬೇರೆ ಬೇರೆ ಸ್ಥಾನಗಳಲ್ಲಿ ಅನೇಕ ಉಪನ್ಯಾಸಗಳನ್ನು ಕೊಟ್ಟರು. ಆಗಲೇ ಹೇಳಿದಂತೆ ೧೯೫೪ ರ ಏಪ್ರಿಲ್ ನಲ್ಲಿ ಎರಡು ಉಪನ್ಯಾಸಗಳು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆದವು. ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಅಧ್ಯಕ್ಷ ಭಾಷಣದಲ್ಲಿ ಹೇಳಿದ ಮಾತು ಗಮನಾರ್ಹ: “ಪ್ರಾಧ್ಯಾಪಕ ರಾನಡೆಯವರು ವಿವಿಧ ಭಾರತೀಯ ಭಾಷೆಗಳ ಸಂತವಾಙ್ಞಯದ ಅಭ್ಯಾಸವನ್ನು ಅನೇಕ ವರ್ಷಗಳಿಂದ ಮಾಡಿದ್ದಾರೆ. ಪ್ರಾಚೀನ ಕಾಲದಿಂದ ಪರಂಪರಾಗತರಾಗಿ ಬಂದ ತತ್ತ್ವಜ್ಞಾನವು ಅವರಲ್ಲಿ ಮೂರ್ತಿವೆತ್ತಾಗಿ ನಿಂತಿದೆ.”

ರಾನಡೆಯವರು ಹಿಂದಿ ಸಂತರ ಸಾಹಿತ್ಯನ್ನೊಳಗೊಂಡ “ಪರಮಾರ್ಥ ಸೋಪಾನ” ಎಂಬ ಗ್ರಂಥವನ್ನು ರಚಿಸಿದರು.

ಅನುಭಾವ ಮತ್ತು ಸಾಕ್ಷಾತ್ಕಾರ ಮಾರ್ಗಗಳು

ರಾನಡೆಯವರ ಇನ್ನೊಂದು ಶ್ರೇಷ್ಠ ಗ್ರಂಥವೆಂದರೆ ‘ಮಹಾರಾಷ್ಟ್ರದಲ್ಲಿ ಅನುಭಾವಮಾರ್ಗ’ (ಅನುಭಾವ ಎಂದರೆ ಧ್ಯಾನದಿಂದ, ಭಕ್ತಿಯಿಂದ ದೇವರ ಸಾಕ್ಷಾತ್ಕಾರ ಪಡೆಯುವುದು. ಇತರರಿಗೆ ಸುತ್ತಲಿನ ಗಿಡ ಮರಗಳು, ಕಲ್ಲು ಮಣ್ಣು ಎಷ್ಟು ವಾಸ್ತವಿಕವೊ ಅನುಭಾವಿಗೆ ದೇವರು ಅಷ್ಟೇ ವಾಸ್ತವಿಕ. ದೇವರು ಇರುವುದು ಅವನಿಗೆ ಸಹಜವಾದ, ಸತ್ಯವಾದ ಅನುಭವ.) ಉಪನಿಷತ್ತುಗಳ ಕಾಲದಿಂದ ಹನ್ನೆರಡನೆಯ ಶತಮಾನದವರೆಗೆ ಸಾಕ್ಷಾತ್ಕಾರ ಮಾರ್ಗದಲ್ಲಿ ಆದ ಭಾರತೀಯ ತತ್ತ್ವಜ್ಞಾನದ ಪ್ರಗತಿ ಹಾಗೂ ಸಂತ ಜ್ಞಾನೇಶ್ವರರಿಂದ ರಾಮದಾಸರವರೆಗೆ ಆಗಿಹೋದ ಮಹಾರಾಷ್ಟ್ರದ ಸಂತರ ಪರಮಾರ್ಥ ಮಾರ್ಗದ ವಿವೇಚನೆ ವಿಸ್ತಾರವಾಗಿ ಈ ಗ್ರಂಥದಲ್ಲಿ ಬಂದಿದೆ. ನಿವೃತ್ತಿನಾಥ, ಸೋಪಾನ, ಮುಕ್ತಾಬಾಯಿ, ಚಾಂಗದೇವ, ಗೋರಾ, ವಿಸೋಬಾ, ನರಹರಿ, ಚೋಖಾ, ಜನಾಬಾಯಿ, ಸೇನಾ, ಕಾನ್ಹೋಪಾತ್ರ, ಭಾನುದಾಸ, ಜನಾರ್ಧನಸ್ವಾಮಿ, ಏಕನಾಥ ಮತ್ತು ತುಕಾರಾಮ – ಈ ಸಂತರ ವಚನಗಳ ವೈಶಿಷ್ಟವನ್ನು ರಾನಡೆಯವರು ಸ್ಪಷ್ಟಪಡಿಸಿದ್ದಾರೆ.

ರಾನಡೆಯವರು ಅನೇಕ ವರ್ಷಗಳವರೆಗೆ ಅಲಹಾಬಾದಿನಲ್ಲಿದ್ದರು. ಆದ್ದರಿಂದ ಹಿಂದೀ ಭಾಷೆಯನ್ನು ಮಾತನಾಡುವವರ ಆತ್ಮೀಯ ಸಂಬಂಧ ಅವರಿಗೆ ಲಭಿಸಿತು. ಸಂತರ ಮಾತುಗಳು ಮತ್ತು ಬರಹಗಳ ಕಡೆಗೆ ಅವರ ಮನಸ್ಸಿನ ಒಲವು ಯಾವಾಗಲೂ ಇದ್ದುದರಿಂದ ಅವರು ಹಿಂದೀ ಸಂತರ ಪದಗಳನ್ನು ಸಂಗ್ರಹಿಸಿದರು. ಮತ್ತು ಅವುಗಳ ಸರಿಯಾದ ವಿಂಗಡನೆಯನ್ನು ಮಾಡಿ “ಹಿಂದೀ ವಾಙ್ಞಯದಲ್ಲಿ ಸಕ್ಷಾತ್ಕಾರ ಮಾರ್ಗ” ಎಂಬ ಗ್ರಂಥ ಬರೆದರು. ಈ ಗ್ರಂಥದಲ್ಲಿ ಅವರು ಕಬೀರ, ತುಳಸೀದಾಸ, ಸೂರದಾಸ, ಮೀರಾಬಾಯಿ, ರಾಮಾನಂದ, ನಾನಕ್, ಧರಮದಾಸ, ಚರಣದಾಸ, ದಾದು, ಮತ್ಸ್ಯೇಂದ್ರ, ಗೋರಖನಾಥ, ಮನ್ಸೂರ, ರಹೀಮ, ಗುಲಾಲ ಮತ್ತು ಬಹಿರೋ – ಈ ಸಂತರ ವಚನಗಳ ವೈಶಿಷ್ಟ್ಯಗಳನ್ನು ವಿವರಿಸಿದ್ದಾರೆ.

ಕರ್ನಾಟಕದ ಸಂತರು

ರಾನಡೆಯವರು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಅವರು ಅಲ್ಲಿ ಕರ್ನಾಟಕ ಸಂಘದ ಸ್ಥಾಪನೆ ಮಾಡುವುದರಲ್ಲಿ ಸಹಾಯಕರಾಗಿದ್ದರು. ಅವರ ಆಧ್ಯಾತ್ಮಿಕ ಗುರುಗಳಾದ ಭಾವುರಾವ ಮಹಾರಾಜರೂ ಕರ್ನಾಟಕದವರಾಗಿದ್ದು ತಮ್ಮ ಪ್ರವಚನಗಳಲ್ಲಿ ಅನೇಕ ಕನ್ನಡ ಪದ್ಯಗಳನ್ನು ಉಪಯೋಗಿಸುತ್ತಿದ್ದರು. ಆದ್ದರಿಂದ ರಾನಡೆಯವರು ಕನ್ನಡ ಪದ್ಯಗಳ ಸಂಗ್ರಹವನ್ನು ಮಾಡಿದರು. ಸಾಕ್ಷಾತ್ಕಾರದ ಅನುಭವದಿಂದ ತುಂಬಿದ ಪದ್ಯಗಳನ್ನು ಸಂಗ್ರಹಿಸುವಾಗ ಅವರು ಆ ಪದ್ಯ ರಚಿಸಿದ ಕವಿ ಸುಪ್ರಸಿದ್ಧನೋ ಅಪ್ರಸಿದ್ಧನೋ, ಸುಶಿಕ್ಷಿತನೋ ಅಶಿಕ್ಷಿತನೋ ಮತ್ತು ಅವನು ಯಾವ ಪಂಥದವನು ಎಂಬುದನ್ನು ವಿಚಾರಿಸದೆ ಪದ್ಯದಲ್ಲಿರುವ ಆಶಯದ ಮತ್ತು ಅನುಭವದ ಗಂಭೀರತೆಯನ್ನು ಮಾತ್ರ ಗಮನಿಸಿ ಪದ್ಯಗಳನ್ನು ಆರಿಸಿದರು. ಅವರು ರಚಿಸಿದ “ಕನ್ನಡ ಪರಮಾರ್ಥ ಸೋಪಾನ”ದಲ್ಲಿ ಐವತ್ತೆರಡು ಸಂತಕವಿಗಳ ೧೩೯ ಕನ್ನಡ ಪದ್ಯಗಳಿವೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಧಿಕಾರಿಗಳು ರಾನಡೆಯವರಿಗೆ ಕರ್ನಾಟಕದ ಸಂತರನ್ನು ಕುರಿತು ಉಪನ್ಯಾಸಮಾಲೆಯನ್ನು ಕೊಡಲು ಬಿನ್ನವಿಸಿದರು. ಅದನ್ನು ಮನ್ನಿಸಿ ರಾನಡೆಯವರು ಧಾರವಾಡದಲ್ಲಿ ಹನ್ನೆರಡು ಉಪನ್ಯಾಸಗಳನ್ನು ಕೊಟ್ಟರು. “ಕನ್ನಡ ವಾಙ್ಞಯದಲ್ಲಿ ಸಾಕ್ಷಾತ್ಕಾರ ಮಾರ್ಗ” ಎಂಬ ಹೆಸರಿನಿಂದ ಪ್ರಸಿದ್ಧವಾದ ಈ ಗ್ರಂಥದಲ್ಲಿ ಪುರಂದರದಾಸ, ಗುರುಸಿದ್ಧ, ನಿಜಗುಣ ಶಿವಯೋಗಿ, ಕಲಮೇಶ್ವರ, ರೇವಣಸಿದ್ಧ, ಮಡಿವಾಳಯೋಗಿ, ಚಿದಾನಂದ, ಕನಕದಾಸ, ವಿಜಯದಾಸ, ಗೋಪಾಲದಾಸ, ಮಹಲಿಂಗರಂಗ, ಸರ್ಪಭೂಷಣ, ಅಲ್ಲಮಪ್ರಭು, ವ್ಯಾಸರಾಯ, ಜಗನ್ನಾಥದಾಸ, ಆನಂದಗುಹೇಶ್ವರ, ಮಹೀಪತಿ, ಅಖಂಡೇಶ್ವರ, ಬಸವೇಶ್ವರ, ಭವತಾರಕ, ಸಿದ್ಧೇಶ್ವರ, ಗಿರಿಮಲ್ಲೇಶ, ಶಿಶುನಾಳದೀಶ ಮತ್ತು ನಿಂಬರಗಿ ಮಹಾರಾಜ ಮುಂತಾದ ಸಂತರ ವೈಶಿಷ್ಟ್ಯಗಳನ್ನು ರಾನಡೆಯವರು ವಿವರಿಸಿದ್ದಾರೆ.

ಈ ಗ್ರಂಥದ ಮೊದಲನೆಯ ಪ್ರಕರಣದಲ್ಲಿ ರಾನಡೆಯವರು ಬರೆಯುತ್ತಾರೆ; “ಕನ್ನಡ ಸಂತರಲ್ಲಿ ಶೈವ ಮತ್ತು ವೈಷ್ಣವ ಹೀಗೆ ಎರಡು ಪ್ರಕಾರಗಳು ಕಂಡು ಬರುತ್ತವೆ. ಆದರೆ ನಿಜವಾದ ಸಂತನು ಶೈವನೂ ಇರುವುದಿಲ್ಲ, ವೈಷ್ಣವನೂ ಇರುವುದಿಲ್ಲವೆಂಬುದು ಈ ಉಪನ್ಯಾಸಗಳಲ್ಲಿ ಉಪಯೋಗಿಸಿದ ಪದ್ಯಗಳಿಂದ ಕಂಡು ಬರುವುದು….. ಅವರಲ್ಲಿದ್ದ ವೈಚಾರಿಕ ವ್ಯತ್ಯಾಸವನ್ನು ತೋರಿಸುವುದು ನನ್ನ ಉದ್ದೇಶವಲ್ಲ. ಅವರಿಗಾದ ಸಮಾನ ಆಧ್ಯಾತ್ಮಿಕ ಅನುಭವಗಳು ಮತ್ತು ಅವುಗಳ ಸಹಾಯದಿಂದ ಅವರು ಮಾಡಿದ ಆಧ್ಯಾತ್ಮಿಕ ವಿಚಾರದ ಬೆಳವಣಿಗೆ – ಇವುಗಳನ್ನು ಸ್ಪಷ್ಟ ಮಾಡುವುದರ ಸಲುವಾಗಿ ನನ್ನ ಈ ಪ್ರಯತ್ನವಿದೆ. ಜಗತ್ತಿನ ಅನುಭಾವಿ ಸಂತರಲ್ಲಿ ಕರ್ನಾಟಕದ ಸಂತರ ಸ್ಥಾನವು ಉಚ್ಚವಾಗಿದ್ದು ಅವರು ಜಗತ್ತಿಗೆ ಬಹಳ ಅನುಭಾವಿ ವಿಚಾರಗಳನ್ನು ನೀಡಿದ್ದಾರೆ.” ಈ ಗ್ರಂಥದಲ್ಲಿ ರಾನಡೆಯವರು ಕನ್ನಡ ಸಂತರ ತುಲನೆಯನ್ನು ಪಾಶ್ಚಾತ್ಯ ತತ್ತ್ವಜ್ಞಾನಿಗಳ ಜೊತೆಗೆ ಮಾಡಿದ್ದಾರೆ. ಪ್ರಭುದೇವ, ಬಸವೇಶ್ವರ, ಚನ್ನಬಸವೇಶ್ವರ ಮತ್ತು ಸರ್ವಜ್ಞ ಇವರನ್ನು ಅನುಕ್ರಮವಾಗಿ ಸಾಕ್ರೆಟಿಸ್, ಪ್ಲೇಟೊ, ಫಿಡೊ ಮತ್ತು ಹೆರಾಕ್ಲಿಟಿಸ್ ಇವರ ಜೊತೆಗೆ ಹೋಲಿಸಿದ್ದಾರೆ. ಹಾಗೆಯೇ ಕನ್ನಡ, ಮರಾಠಿ ಮತ್ತು ಹಿಂದೀ ಸಂತರನ್ನು ಹೋಲಿಸಿ ನೋಡಿದ್ದಾರೆ.

ಇವನ್ನಲ್ಲದೆ ರಾನಡೆಯವರು ಅನೇಕ ಗ್ರಂಥಗಳನ್ನು ಬರೆದರು.

ಭಾರತದ ತತ್ತ್ವಜ್ಞಾನ ಜಗತ್ತಿಗೆ

ಭಾರತದಲ್ಲಿ ಅನೇಕ ಮಂದಿ ಪುಣ್ಯಚೇತನರು ಜನ ಜೀವನದ ಮೇಲೆ ಪ್ರಭಾವ ಬೀರಿದ್ದಾರೆ. ತಮ್ಮ ಆಚರಣೆಯ ಮೇಲ್ಪಂಕ್ತಿಯನ್ನು ಹಾಕಿಕೊಟ್ಟು, ಜನರಿಗೆ ನೀತಿಯ ಪಾಠ ಕಲಿಸಿ, ಸಮಾಜ ಜೀವನವನ್ನು ಶುದ್ಧಗೊಳಿಸಿ, ಅವರಿಗೆ ಧರ್ಮ ಮಾರ್ಗದಲ್ಲಿ ಪ್ರಗತಿ ಸಾಧಿಸಲು ನೆರವಾಗಿದ್ದಾರೆ. ಇಂತಹ ಸತ್ಪುರುಷರ ಮಾಲಿಕೆಯಲ್ಲಿ ಗುರುದೇವ ರಾನಡೆಯವರ ಸ್ಥಾನವು ಮಹತ್ವಪೂರ್ಣವಾಗಿದೆ. ಪರಕೀಯ ಶಾಸನವು ಇಲ್ಲಿದ್ದಾಗ ರಾನಡೆಯವರು ಇಂಗ್ಲೀಷ್ ಭಾಷೆ ಕಲಿತರು; ಆ ಭಾಷೆಯಲ್ಲಿ ಬರೆದ ಅನೇಕ ಗ್ರಂಥಗಳನ್ನು ಓದಿದರು; ಆದರೆ ಪಾಶ್ಚಾತ್ಯರ ವಿಚಾರ ಸರಣಿಯ ಪ್ರಭಾವ ಅವರ ಮೇಲೆ ಆಗಲಿಲ್ಲ. ಭಾರತೀಯ ತತ್ತ್ವಜ್ಞಾನದಲ್ಲಿದ್ದ ಸತ್ತ್ವವನ್ನು ಇಂಗ್ಲೀಷ್ ಭಾಷೆಯ ಮುಖಾಂತರ ಅವರು ಇಡೀ ಜಗತ್ತಿಗೆ ಸಾರಿ ಹೇಳಿದರು.

ಸಮಾಜದಿಂದ ದೂರವಲ್ಲ

ಆತ್ಮಸಾಕ್ಷಾತ್ಕಾರವೆಂಬ ಹುಲ್ಲುಗಾವಲಿನಲ್ಲಿ ಅಂಧಶ್ರದ್ಧೆಗಳೆಂಬ ದನಗಳ ಪ್ರವೇಶವಾಗಬಾರದೆಂದು ಅವರು ತತ್ತ್ವಜ್ಞಾನದ ಬೇಲಿಯನ್ನು ಸುತ್ತ ಕಟ್ಟಿದರು. ಸಾಕ್ಷಾತ್ಕಾರದ ಶಾಸ್ತ್ರೀಯ ಪ್ರಕ್ರಿಯೆಯನ್ನು ಅವರು ತೋರಿಸಿಕೊಟ್ಟರು. ಭಾರತದ ವಿವಿಧ ಪ್ರಾಂತಗಳಲ್ಲಿ ಹುಟ್ಟಿ ವಿವಿಧ ಭಾಷೆಗಳಲ್ಲಿ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದ ಸಾಕ್ಷಾತ್ಕಾರಿ ಸತ್ಪುರುಷರ ವಿಚಾರಗಳಲ್ಲಿ ಎಷ್ಟು ಸಾಮ್ಯವಿದೆ ಎಂಬುದನ್ನು ಅವರು ಸಾಧಾರಣವಾಗಿ ಸಿದ್ಧಪಡಿಸಿದರು. ಪವಿತ್ರ ಚೇತನರಲ್ಲಿ ಭಾಷೆ – ಜಾತಿಗಳ ಭೇದಭಾವವಿಲ್ಲ ಎಂಬುದನ್ನು ಅವರು ತೋರಿಸಿಕೊಟ್ಟರು. ಅವರು ತಮ್ಮ ಗ್ರಂಥಗಳಲ್ಲಿ ಸಂತರ ಮತ್ತು ಅನುಭಾವಿಗಳ ಜೀವನವನ್ನೂ ಅನುಭವವನ್ನೂ ಮಾರ್ಗವನ್ನೂ ವಿವರಿಸಿದರು. ಇವರಲ್ಲಿ ಭಾರತದ ಎಲ್ಲ ಭಾಷೆಗಳ, ಎಲ್ಲ ಫಂಥಗಳ ಪುಣ್ಯಜೀವರು ಸೇರಿದ್ದಾರೆ. ಡಾ. ಮಾರ್ಕೆಟ್ ಎಂದು ಕ್ರೈಸ್ತರು ರಾನಡೆಯವರಲ್ಲಿಗೆ ಬಂದರು. ರಾನಡೆಯವರಿಂದ ಉಪದೇಶ ಪಡೆಯಬೇಕು ಎಂದು ಅವರಿಗೆ ಹಂಬಲವಾಯಿತು. ರಾನಡೆಯವರು ಅವರಿಗೆ ಕ್ರೈಸ್ತಧರ್ಮದ ನಾಮವನ್ನೆ ಅನುಗ್ರಹಿಸಿದರು.

ಪರಮಾರ್ಥ ಮತ್ತು ಸಮಾಜಜೀವನ ಪರಸ್ಪರ ವಿರುದ್ಧವಾಗಿವೆಯೆಂದು ಕೆಲವರು ತಿಳಿಯುತ್ತಾರೆ. ರಾನಡೆ ಅವರು ಅಧ್ಯಾಪಕರಾಗಿದ್ದಾಗ ಕೆಲವರು, ಇವರು ಸದಾ ದೇವರು, ಗುರು ಎಂದು ಕಟ್ಟಿಕೊಂಡಿರುತ್ತಾರೆ. ಕ್ರಮವಾಗಿ, ನಿಯಮಿತ ಕಾಲಕ್ಕೆ ಸರಿಯಾಗಿ ಪಾಠ ಮಾಡಬಲ್ಲರೇ? ಎಂದರು. ಇನ್ನು ಕೆಲವರು, ಇವರು ಅಧ್ಯಾಪಕರು, ಅಧಿಕಾರಿಗಳು. ಇವರು ದೇವರಲ್ಲಿ, ಗುರುಗಳಲ್ಲಿ ಮನಸ್ಸನ್ನು ನಿಲ್ಲಿಸಬಲ್ಲರೆ? ಎಂದರು. ರಾನಡೆ ಅವರು ಪರಮಾರ್ಥವನ್ನೂ ಈ ಲೋಕದ ಕರ್ತವ್ಯವನ್ನೂ ಶ್ರದ್ಧೆಯಿಂದ ಸಾಧಿಸಿ ಮೇಲ್ಪಂಕ್ತಿಯಾದರು. ಪಾರಮಾರ್ಥಿಕ ವೃತ್ತಿಯು ನಿರ್ಮಾಣವಾಗುವುದೇ ಎಲ್ಲ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಉಪಾಯವಾಗಿ ಎಂದು ಗುರುದೇವ ರಾನಡೆಯವರ ಸ್ಪಷ್ಟ ಮತವಾಗಿತ್ತು. ಅಂತಹ ಪ್ರವೃತ್ತಿ ಉಂಟಾದರೆ ಪರಸ್ಪರರೊಳಗಿನ ದ್ವೇಷ, ಅಸೂಯೆ, ಸ್ಪರ್ಧೆ, ಜಗಳ ಮುಂತಾದವು ಕಡಿಮೆಯಾಗುವುವು ಎಂದು ಅವರು ಹೇಳುತ್ತಿದ್ದರು.

ಶಾಂತಿ ಕಂಡ ಗುರು

ರಾನಡೆಯವರದು ವಿಶಿಷ್ಟವಾದ ವ್ಯಕ್ತಿತ್ವ, ವಿಶಿಷ್ಟವಾದ ಸ್ವಭಾವ. ಬಾಲ್ಯದಲ್ಲಿಯೆ ಅವರು ಅಸಾಧಾರಣ ಬುದ್ಧಿಶಕ್ತಿ ಪ್ರಕಟವಾಯಿತು. ಆದರೆ ಚಿಕ್ಕ ವಯಸ್ಸಿನಿಂದಲೆ ಅವರಿಗೆ ಸುಖ-ಪದವಿಗಳು ಬೇಡವಾದವು. ದೇವರತ್ತ ಮನಸ್ಸು ತಿರುಗಿತು. ಧ್ಯಾನ ಅವರ ನಿತ್ಯ ಜೀವನದ ಮುಖ್ಯ ಭಾಗವಾಯಿತು. ಆದರೆ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು – ಮೊದಲನೆಯದು, ದೇವರತ್ತ ಮನಸ್ಸು ತಿರುಗಿತೆಂದು, ದೇವರನ್ನು ಸೇರುವ ಮಾರ್ಗಬೇಕೆಂದು ಅವರು ಜನಸಾಮಾನ್ಯರಿಂದ ದೂರವಾಗಲಿಲ್ಲ. ತಮ್ಮ ಕರ್ತವ್ಯವನ್ನೂ ಬಿಡಲಿಲ್ಲ. ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡರು, ಅವರ ಸೇವೆ ಮಾಡಿದರು. ಅಧ್ಯಾಪಕರಾಗಿ, ಕೈಬರಹದ ಗ್ರಂಥಾಲಯದ ಅಧಿಕಾರಿಯಾಗಿ, ಪ್ರಾಧ್ಯಾಪಕರಾಗಿ, ಒಂದು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿ ಕೆಲಸ ಮಾಡಿದರು, ಪ್ರಾಮಾಣಿಕವಾಗಿ ದುಡಿದರು. ಇತರರಿಗೂ ಮನಸ್ಸಿನ ಶಾಂತಿಯ ಮಾರ್ಗವನ್ನು ತೋರಿಸಿದರು. ಎರಡನೆಯದಾಗಿ, ಅವರು ಜೀವನದುದ್ದಕ್ಕೂ ವಿದ್ಯಾರ್ಥಿಯಾಗಿಯೇ ಇದ್ದರು. ಹೊಸದಾಗಿ ಜ್ಞಾನಸಂಗ್ರಹ ಮಾಡಿದರು. ತಮ್ಮ ಅನಾರೋಗ್ಯವನ್ನು ಶ್ರಮವನ್ನೂ ಲೆಕ್ಕಿಸದೆ ಪ್ರಯಾಣ ಮಾಡಿ ಉಪನ್ಯಾಸಗಳನ್ನು ಮಾಡಿದರು; ಪುಸ್ತಕಗಳನ್ನು ಬರೆದರು. ಮೂರನೆಯದಾಗಿ, ದೇವರಲ್ಲಿ ಮನಸ್ಸು ನಿಲ್ಲಿಸಿ ನಿರ್ಮಲವಾದ ಜೀವನ ನಡೆಸಿದರ ಮನಸ್ಸಿಗೆ ಎಂತಹ ಶಾಂತಿ ಸಿಕ್ಕುತ್ತದೆ ಎಂಬುದಕ್ಕೆ ಅವರೇ ಸಾಕ್ಷಿಯಾಗಿ ಬೆಳಗಿದರು. ನಿರಾಡಂಬರವೂ, ಸ್ನೇಹಮಯವೂ ಆದ ಅವರ ವ್ಯಕ್ತಿತ್ವವೇ ನೂರಾರು ಜನರನ್ನು ಆಕರ್ಷಿಸಿತು. ಜಗತ್ತಿನ ಕಷ್ಟನಿಷ್ಠುರಗಳಲ್ಲಿ ಬೇಸತ್ತು ಮನಸ್ಸಿಗೆ ಶಾಂತಿ ಬೇಕು ಎಂದು ಹಂಬಲಿಸುವವರು ತಾನೇ ಶಾಂತಿಯನ್ನು ಕಂಡುಕೊಂಡ ಗುರುವಿನ ಬಳಿಯೇ ಹೋಗುತ್ತಾರೆ, ಅಲ್ಲವೆ? ಗುರುವು ಜ್ಞಾನಿಯಾಗಿರಬೇಕು, ನಿಜ; ಆದರೆ ಅದಕ್ಕಿಂತ ಮುಖ್ಯವಾಗಿ, ಆತ ಮನಸ್ಸಿಗೆ ಶಾಂತಿಯನ್ನು ಕಂಡುಕೊಂಡಿರಬೇಕು. ರಾನಡೆಯವರು ಅಂತಹ ಗುರುಗಳು, ಜ್ಞಾನಿಗಳು, ಕರುಣೆ ತುಂಬಿದ ಹೃದಯದವರು, ಜೊತೆಗೆ ಏನೇ ಆಗಲಿ ಮನಸ್ಸಿನ ಶಾಂತಿಯನ್ನು ಕಳೆದು ಕೊಳ್ಳದ ದೈವಭಕ್ತರು. ಎಲ್ಲರನ್ನೂ ಒಂದೇ ಸಮನಾಗಿ, ಕಾರುಣ್ಯ ದೃಷ್ಟಿಯಿಂದ ಕಾಣಬಲ್ಲ ಪುಣ್ಯ ಚೇತನರು.

ಗುರುದೇವ ರಾನಡೆಯವರು ಕಣ್ಮರೆಯಾದರೂ ಅವರ ಉಪದೇಶ ಅನೇಕ ಶಿಷ್ಯರ ಹೃದಯದಲ್ಲಿ ಸ್ಥಿರವಾಗಿ ನಿಂತಿದೆ. ಅವರು ಪ್ರಾರಂಭಿಸಿದ ಕಾರ್ಯವು ನಿಂಬಾಳ, ಜಮಖಂಡಿ, ಬೆಳಗಾಂ, ಧಾರವಾಡ ಮುಂತಾದ ಕೇಂದ್ರಗಳಲ್ಲಿ ನಡೆಯುತ್ತಿದೆ ಮತ್ತು ಅವರು ಬರೆದ ಶ್ರೇಷ್ಠಗ್ರಂಥಗಳು ಸಾಧಕರಿಗೆ ಯಾವಾಗಲೂ ಸ್ಫೂರ್ತಿದಾಯಕವಾಗಿವೆ.