ಅಮೆರಿಕದ ಬಾಲ್ಟಿಮೋರ್ ಕೌಂಟಿಯಲ್ಲಿನ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಕಾರ್ಬನಿಕ ರಸಾಯನ ವಿಜ್ಞಾನದ ಉನ್ನತ ಶ್ರೇಣಿಯ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿರುವವರು ರಾಮಚಂದ್ರ ಹೊಸಮನೆ. 150ಕ್ಕೂ ಮಿಕ್ಕಿ ಸಂಶೋಧನಾ ಲೇಖನಗಳನ್ನು ಖ್ಯಾತ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಈ ಲೇಖನಗಳು ಹಿರಿಯ ವಿಜ್ಞಾನಿಗಳಿಂದ ವಿಮರ್ಶಿತವಾಗಿ ಮೆಚ್ಚುಗೆ ಪಡೆದಿವೆ. ಇವರು ತಮ್ಮ ನಾಲ್ಕು ಸಂಶೋಧನೆಗಳಿಗೆ ಪೇಟೆಂಟ್ ಪಡೆದಿದ್ದಾರೆ. ಅವುಗಳಲ್ಲಿ ಮೂರನ್ನು ಉದ್ಯಮಗಳಿಗೆ ನೀಡಲಾಗಿದೆ. ರಾಮಚಂದ್ರರು ರಸಾಯನ ವಿಜ್ಞಾನ (organic chemistry) ಮತ್ತು ಔಷಧೀಯ ರಸಾಯನ ವಿಜ್ಞಾನ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ಪ್ರಯೋಗಶಾಲೆಗೆ ಭೇಟಿ ನೀಡಿದ ವಿಜ್ಞಾನಿಗಳಿಗೆ ಹೊಸ ಕ್ಷೇತ್ರಗಳನ್ನು ಪರಿಚಯಿಸಿದ್ದಾರೆ. ಸದ್ಯದಲ್ಲಿ ಅವರು HIV, HGV ಮತ್ತು ಶ್ವಾಸಕೋಶ, ಸ್ತನ, ಪ್ರಾಸ್ಟ್ರೇಟ್ ಕ್ಯಾನ್ಸರ್‌ಗಳ ದ್ವಿಮುಖ ನಿಷೇಧಗಳ (dual inhibition) ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ರಾಮಚಂದ್ರರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ. ಅಲ್ಲಿನ ಭದ್ರಕಾಳಿ ಪ್ರೌಢಶಾಲೆಯಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿದರು. ಧಾರವಾಡದ ಕರ್ಣಾಟಕ ವಿಶ್ವವಿದ್ಯಾನಿಲಯದಿಂದ 1966ರಲ್ಲಿ ಪದವಿಯನ್ನೂ, 1968ರಲ್ಲಿ ಕಾರ್ಬನಿಕ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು.

1970ರ ಸುಮಾರಿಗೆ ಅಮೆರಿಕಕ್ಕೆ ತೆರಳಿದರು. ದಕ್ಷಿಣ ಫ್ಲಾರಿಡಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಗಾಗಿ ಅಧ್ಯಯನ ಮಾಡುವುದು ಅವರ ಗುರಿಯಾಗಿದ್ದಿತು. ವಿಷಯ ಸಾವಯವ ಸಂಶ್ಲೇಷಣೆ ಮತ್ತು ಔಷಧೀಯ ರಸಾಯನ ವಿಜ್ಞಾನ. 1976ರಲ್ಲಿ ಎಂ.ಎಸ್. ಪದವಿಯನ್ನೂ 1978ರಲ್ಲಿ ಪಿ.ಎಚ್‌ಡಿ. ಯನ್ನೂ ಗಳಿಸಿದರು.1979-80ರ ಅವಧಿಯಲ್ಲಿ ಇಲಿನಾಯ್ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್ ಡಾಕ್ಟೊರಲ್ ಶಿಕ್ಷಣ ಪೂರೈಸಿದರು. ನಂತರ ಇವರ ವೃತ್ತಿಜೀವನ UMBCಯಲ್ಲಿ (University of Maryland, Baltimore County) ಪ್ರಾರಂಭವಾಯಿತು.

1982ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಆಮೇಲೆ  1986ರಲ್ಲಿ ಸಹ ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿ, 1994ರಿಂದ ಪೂರ್ಣಕಾಲಿಕ ಪ್ರಾಧ್ಯಾಪಕರಾದರು.

ರಾಮಚಂದ್ರರು ಸಂಶೋಧನಾ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಇವರ ಸಂಶೋಧನಾ ಕಾರ‍್ಯಕ್ಕೆ 50ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರೀಯ ಸಂಸ್ಥೆಗಳು ನೆರವು ನೀಡಿವೆ. ಇವುಗಳಲ್ಲಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್, ಮೇರಿಲ್ಯಾಂಡ್ ಇಂಡಸ್ಟ್ರಿಯಲ್ ಪಾರ್ಟನರ್‌ಶಿಫ್, ಅಮೆರಿಕನ್ ಹಾರ್ಟ್ ಅಸೋಸಿಯೇಶನ್, ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಮತ್ತು ಪೆಟ್ರೋಲಿಯಂ ರಿಸರ್ಚ್ ಫಂಡ್ ಮುಂತಾದವು ಪ್ರಮುಖವಾದುವು. ಇದರಿಂದಾಗಿ ಕಾರ್ಬನಿಕ ಮತ್ತು ಔಷಧೀಯ ರಸಾಯನ ವಿಜ್ಞಾನ ಕ್ಷೇತ್ರಗಳಿಗೆ ರಾಮಚಂದ್ರರು ಮಹತ್ವದ ಕೊಡುಗೆ ನೀಡಲು ಸಾಧ್ಯವಾಯಿತು.

ರಾಮಚಂದ್ರರಿಗೆ ಪ್ರಶಸ್ತಿಗಳು, ಉನ್ನತ ಸ್ಥಾನಗಳು ಲಭಿಸಿದುವು. UMBC ಯಿಂದ 2009-2012 ಅವಧಿಗೆ ಪ್ರೆಸಿಡೆಂಷಿಯಲ್ ಟೀಚಿಂಗ್ ಪ್ರೊಫೆಸರ್‌ಶಿಪ್ ದೊರೆತಿದೆ. 2002ರಲ್ಲಿ ಅಮೆರಿಕ ಕೆಮಿಕಲ್ ಸೊಸೈಟಿಯಿಂದ ವರ್ಷದ ರಸಾಯನ ವಿಜ್ಞಾನಿ ಎಂದು ಗುರುತಿಸಲ್ಪಟ್ಟರು. 2001ರಲ್ಲಿ ವರ್ಷದ ಶ್ರೇಷ್ಠಬೋಧಕ ಪ್ರಶಸ್ತಿಯನ್ನು ಮೇರಿಲ್ಯಾಂಡ್ ಹೈಯರ್ ಎಜುಕೇಶನ್ ಸಂಸ್ಥೆ ನೀಡಿತು. ವಿಶ್ವವಿದ್ಯಾಲಯ ಅಧ್ಯಕ್ಷೀಯ ಸಂಶೋಧನಾ ಪ್ರಾಧ್ಯಾಪಕ (1998-2001), ಅಮೆರಿಕನ್ ಕೆಮಿಕಲ್ ಸೊಸೈಟಿಯ ಯೋಜನೆ SEEDನ ಪ್ರಮುಖ ಸಲಹೆಗಾರ (1996), ಗೋಲ್ಡನ್ ಇಂಟರ್‌ನ್ಯಾಶನಲ್ ಆನರ್ ಸೊಸೈಟಿಯ ಗೌರವ ಸದಸ್ಯತ್ವ (1999) ಮೊದಲಾದ ಗೌರವಗಳು ರಾಮಚಂದ್ರರನ್ನು ಅರಸಿಕೊಂಡು ಬಂದುವು. ನ್ಯಾಷನ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ವಿಜ್ಞಾನ ಪುನವಿಮರ್ಶನ ತಂಡದ ಸದಸ್ಯರಾಗಿ ಹಲವಾರು ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಅನುದಾನ ಸಮಿತಿಯಲ್ಲಿ ಕೆಲಸ ಮಾಡಿದ್ದಾರೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ವ್ಯವಸ್ಥೆಯಲ್ಲಿ ವಿಜ್ಞಾನ ಕಾರ‍್ಯಕ್ರಮಗಳ ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ರಾಮಚಂದ್ರರ ಎರಡು ಪ್ರಮುಖ ಸಂಶೋಧನಾ ಕ್ಷೇತ್ರಗಳು ಹೀಗಿವೆ: ಹಿಮೊಗ್ಲೋಬಿನ್ ಆಧರಿತ ಬದಲಿ ರಕ್ತನಿರ್ಮಾಣ ಮತ್ತು ವಿಸ್ತೃತ ವಲಯ ನ್ಯೂಕ್ಲಿಯೊಸೈಡ್ ರಚನೆ ಆಧರಿತ ವೈರಸ್ ಮತ್ತು ಕ್ಯಾನ್ಸರ್ ನಿರೋಧಕಗಳ ಆವಿಷ್ಕಾರ.

ಇವರ ಪ್ರಯೋಗಶಾಲೆಯಲ್ಲಿ ಸಂಶ್ಲೇಷಿತವಾದ ಸಂಯುಕ್ತಗಳು ಅನೇಕ ಬಗೆಯ ವೈರಸ್ ಮತ್ತು ಕ್ಯಾನ್ಸರ್‌ಗಳ ವಿರುದ್ಧ ತೀವ್ರ ಪರಿಣಾಮ ಬೀರಿವೆ. ಹೆಪಟೈಟಿಸ್ B, ಹೆಪಟೈಟಿಸ್ C, HIV, ವೆಸ್ಟ್ ನೈಲ್ ವೈರಸ್, ಜಪನೀಸ್ ಎನ್ಸಿಫಲೈಟಿಸ್ ವೈರಸ್, ದಡಾರದ ವೈರಸ್, ಗೇಂಡಾಮೃಗ ವೈರಸ್, ಇನ್‌ಫ್ಲೂಯೆಂಜ ವೈರಸ್ ಮತ್ತು ಪ್ರಾಸ್ಟ್ರೇಟ್, ಶ್ವಾಸಕೋಶ, ಸ್ತನ, ಕರುಳು ಇವುಗಳ ಕ್ಯಾನ್ಸರ್ ಚಿಕಿತ್ಸೆಗಳಿಗೆ ಅಗತ್ಯವಾದ ಔಷಧಗಳ ಸಂಶೋಧನೆ ನಡೆಯುತ್ತಿದೆ.

ಹತ್ತಕ್ಕೂ ಹೆಚ್ಚು ಔಷಧೀಯ ವಿಜ್ಞಾನ ಪತ್ರಿಕೆಗಳಲ್ಲಿ ಸಂಪಾದಕರಾಗಿ ಇವರು ಕೆಲಸ ಮಾಡಿದ್ದಾರೆ. ಅಂತಾರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳ ಸದಸ್ಯರೂ ಆಗಿದ್ದಾರೆ.

ಭಾರತದಲ್ಲಿ ಜನಿಸಿ, ಅಮೆರಿಕದಲ್ಲಿ ಶ್ರೇಷ್ಠ ವಿಜ್ಞಾನಿಯಾಗಿ ರೂಪುಗೊಂಡು ಸಂಶೋಧನಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿ, ಬಹು ಜನೋಪಯೋಗಿ ಔಷಧಗಳ ಸಂಶೋಧನೆಯಲ್ಲಿ ನಿರತರಾಗಿರುವ ರಾಮಚಂದ್ರರ ಸಾಧನೆ ನಿಜಕ್ಕೂ ಪ್ರಶಂಸನೀಯ.