ರಾಮದಾಸರುರಾಮಧ್ಯಾನದಿಂದ ಬಾಳಿನಲ್ಲಿ ಬೆಳಕು ಕಂಡುಕೊಂಡ ಸಂತರು. ಎಲ್ಲ ಜೀವಿಗಳಲ್ಲಿ ದೇವರನ್ನು ಕಂಡರು. ಮಾನವ ಸೇವೆಯೇ ದೇವರ ಸೇವೆ ಎಂಬ ತತ್ವವನ್ನು ಆಚರಿಸಿ ತೋರಿಸಿದರು. ಮನಸ್ಸಿಗೆ ಶಾಂತಿ ಇಲ್ಲದೆ ತೊಳಲುತ್ತಿದ್ದವರಿಗೆ ಶಾಂತಿಯ ದಾರಿ ತೋರಿಸಿದರು.

ರಾಮದಾಸರು

ಅನೇಕ ವರ್ಷಗಳ ಹಿಂದಿನ ಘಟನೆ. ದಕ್ಷಿಣೇಶ್ವರದ ರಾಮಕೃಷ್ಣಾಶ್ರಮದೆಡೆಗೆ ಹೋಗುತ್ತಿದ್ದ ರೈಲಿನಲ್ಲಿ ಒಬ್ಬ ಗೃಹಸ್ಥರು ಕುಳಿತಿದ್ದರು. ಅವರು ಕಾವಿಯ ಬಟ್ಟೆ ಧರಿಸಿದ್ದರು. ಅವರ ಕಂಕುಳಲ್ಲಿ ಒಂದು ಪುಟ್ಟ ಗಂಟು ಇತ್ತು. ಜೊತೆಗೊಬ್ಬ ಸಂನ್ಯಾಸಿ ‘ಸಾಧು ರಾಮ’ ಇದ್ದ. ಆ ಗೃಹಸ್ಥರ ಪಾಲಿಗೆ ದಾರಿಯಲ್ಲಿ ಸಿಕ್ಕ ಸಂನ್ಯಾಸಿಗಳೆಲ್ಲಾ ಸಾಧು ರಾಮರೇ. ಇಡೀ ವಿಶ್ವವೇ ನನ್ನ ಮನೆ, ವಿಶ್ವದ ಜನರೆಲ್ಲರೂ ನನ್ನ ಬಂಧು ಬಾಂಧವರು-ಈ ವಿಶಾಲ ಭಾವನೆ ಅವರದು.

ರೈಲು ಹೌರಾ ನಿಲ್ದಾಣ ತಲುಪಿತು. ಅವರಿದ್ದ ಡಬ್ಬಿಯೊಳಗೆ ಟಕ ಟಕ ಸದ್ದು. ಟಿಕೆಟ್ ಕಲೆಕ್ಟರ್ ಬಂದಿದ್ದ. ನಿಯಮಗಳನ್ನು ಶಿಸ್ತಿನಿಂದ ಪಾಲಿಸುವ ದೃಢ ಹೃದಯಿ ಆತ. ಅವನು ಗಡಸು ಧ್ವನಿಯಿಂದ ಅವರನ್ನು ‘‘ನಿಮ್ಮ ಟಿಕೆಟ್ ಕೊಡಿ’’ ಎಂದು ಕೇಳಿದ.

ಸಾಧುಗಳಾದ ತಾವು ಟಿಕೆಟ್ ಕೊಂಡಿಲ್ಲ ಎಂದು ವಿನಯಭಾವದಿಂದ ಹೇಳಿದರು ಕಾವಿ ಬಟ್ಟೆ ತೊಟ್ಟ ಗೃಹಸ್ಥರು.

ಬೆಳಗಿನ ಜಾವದ ದಟ್ಟ ಚಳಿ ಮೈನಡುಗಿಸುವಂತಿತ್ತು. ಆದರೆ ಟಿಕೆಟ್ ಕಲೆಕ್ಟರ್ ನಿರ್ದಯಿ. ಅವನು ಅವರಿಬ್ಬರನ್ನೂ ರೈಲಿನಿಂದ ಕೆಳಗಿಳಿಸಿದ. ಅವರು ಚಳಿಯಿಂದ ನಡಗುತ್ತಾ ಪ್ಲಾಟ್‌ಫಾರಮ್ಮಿನಲ್ಲಿ ನಿಂತರು.

ಟಿಕೆಟ್ ಕಲೆಕ್ಟರ್ ಅವರನ್ನು ಅಷ್ಟಕ್ಕೇ ಬಿಡಲಿಲ್ಲ. ನಿಂತಿದ್ದೇಕೆ, ಕುಳಿತುಕೊಳ್ಳಿ’’ ಎಂದು ಗರ್ಜಿಸಿದ.

ಇಬ್ಬರೂ ಕುಳಿತರು. ‘‘ಕುಳಿತಿರೇಕೆ, ನಿಲ್ಲಿ’’ ಅವನು ಮತ್ತೆ ಅಬ್ಬರಿಸಿದ. ಅವರು ಮತ್ತೆ ಎದ್ದರು.

ಅವರು ಎದ್ದಾಗ ‘ಕುಳಿತುಕೊಳ್ಳಿ’ ಎಂದ. ಕುಳಿತಾಗ ‘ಎದ್ದು ನಿಲ್ಲಿ’ ಎಂದ. ಹೀಗೆ ಹತ್ತಾರು ಸಲ ಮಾಡಿದ.

‘ಸಾಧು ರಾಮ’ ಆಯಾಸದಿಂದ ಸೋತು ಗೊಣಗಿಕೊಂಡ. ಕಾವಿ ಬಟ್ಟೆ ಧರಿಸಿದ ಗೃಹಸ್ಥರ ಮುಖದಲ್ಲಿ ಶಾಂತ ಭಾವ ಲಾಸ್ಯವಾಡುತ್ತಿತ್ತು. ‘‘ಏಕೋ ಗೊಣಗುತ್ತಿ? ನಾವು ಅಷ್ಟು ದೂರದಿಂದ ರೈಲಿನಲ್ಲಿ ಬಂದಿಲ್ಲವೆ? ನಮ್ಮ ಕಾಲುಗಳಿಗೆ ಜೋವು ಹಿಡಿದಿದೆ. ಆ ದಯಾನಿಧಿ ಶ್ರೀರಾಮ ಈ ಬಗೆಯಿಂದ ಅದನ್ನು ಪರಿಹರಿಸುತ್ತಿದ್ದಾನೆ’’ ಎಂದರು.

ಆ ಮಾತು ಕೇಳಿ ಟಿಕೆಟ್ ಕಲೆಕ್ಟರ್‌ಗೆ ಅವಮಾನ ವಾದಂತಾಯಿತು. ಪ್ರತೀಕಾರಕ್ಕೆ ಸಿದ್ಧನಾದ. ಸಾಧುರಾಮನ ಬಗಲಲ್ಲಿದ್ದ ಹಿತ್ತಾಳೆಯ ನೀರು ಕುಡಿಯುವ ಪಾತ್ರೆಯನ್ನು ಕಿತ್ತುಕೊಂಡ. ಅವನ ಎರಡನೆಯ ಭೇಟೆ-ಕಾವಿ ಬಟ್ಟೆ ಧರಿಸಿದ ಗೃಹಸ್ಥರು. ಅವರ ಕಂಕುಳಲ್ಲಿದ್ದ ಪುಟ್ಟ ಗಂಟನ್ನು ಸೆಳೆದುಕೊಂಡ. ‘‘ಅದರಲ್ಲಿ ಏನಿದ್ದರೂ ಅದು ನಿಮ್ಮದೇ; ತೆಗೆದುಕೊಳ್ಳಿ. ‘ತನ್ನದು’ ಎಂಬುದು ಈ ‘ರಾಮ ದಾಸ’ ನ ಬಳಿ ಏನೂ ಇಲ್ಲ. ಅದು ಯಾರು ಅಪೇಕ್ಷಿಸುತ್ತಾರೋ ಅವರಿಗೇ ಸೇರಿದ ವಸ್ತುಗಳು’’ ಎಂದರು ಅವರು.

ಟಿಕೆಟ್ ಕಲೆಕ್ಟರ್ ಗಂಟನ್ನು ಬಿಡಿಸಿದ. ಒಳಗೆ ನಾಲ್ಕು ಪುಸ್ತಕಗಳಿದ್ದುವು. ಎಲ್ಲಕ್ಕಿಂತ ಮೇಲೆ ಇತ್ತು ಬೈಬಲ್‌ನ ಒಂದು ಪ್ರತಿ. ಅವನು ಜಾತಿಯಲ್ಲಿ ಕೆಸ್ತ. ತಮ್ಮ ಪವಿತ್ರ ಗ್ರಂಥವನ್ನು ಅಲ್ಲಿ ಕಂಡು ಆತ ಚಕಿತನಾದ. ‘‘ಅರರೇ,ಈ ಪುಸ್ತಕದಿಂದ ನಿನಗೇನಾಗಬೇಕಾಗಿದೆ?’’ ಎಂದು ಪ್ರಶ್ನಿಸಿದ.

‘‘ಸಕಲವೂ ಅದರಿಂದ ಆಗಬೇಕಾಗಿದೆ’’ ಎಂದರು ಅವರು.

‘‘ನಿನಗೆ ಯೇಸುವಿನ ಮೇಲೆ ಭಕ್ತಿ ಇದೆಯೆ?’’ ಟಿಕೆಟ್ ಕಲೆಕ್ಟರ್ ಕೇಳಿದ. ಅವನೀಗ ಮೆತ್ತಗಾಗಿದ್ದ.

‘‘ಯಾಕೆ ಇರಬಾರದು? ಭಗವಾನ್ ಕ್ರಿಸ್ತ ಕೂಡ ದೇವರ ಮಗನಲ್ಲವೆ? ಈ ಮಾನವ ಕುಲದ ಉದ್ಧಾರಕರ್ತನಲ್ಲವೆ?’’ ಮುತ್ತಿನಂಥ ಮಾತು. ಗೃಹಸ್ಥರು ಸರಳವಾಗಿ ಕೇಳಿದರು.

ಈ ಮಾತಿನ ಇಂಪು ಟಿಕೆಟ್ ಕಲೆಕ್ಟರನ ಕಲ್ಲು ಹೃದಯವನ್ನೂ ಕರಗಿಸಿತು. ಮರುಕ್ಷಣವೇ ಆತ ಪರಿವರ್ತನೆ ಹೊಂದಿದ್ದ. ಅವರಿಬ್ಬರ ಕಾಲುಗಳನ್ನೂ ಹಿಡಿದುಕೊಂಡು ಕ್ಷಮೆ ಬೇಡಿದ. ಕೂಡಲೇ ಹಾಲು ಹಣ್ಣುಗಳನ್ನು ತರಿಸಿ ಅವರನ್ನು ಸತ್ಕರಿಸಿದ. ಅವರಿಗೆ ಮುಂದಿನ ಪ್ರಯಾಣಕ್ಕೆ ಟಿಕೆಟ್ ತೆಗೆಸಿಕೊಟ್ಟು ಗೌರವದಿಂದ ಬೀಳ್ಕೊಂಡ.

ಆ ಗೃಹಸ್ಥರು – ಮುಂದೆ ಪ್ರೇಮಯೋಗಿ ಎಂದು ಖ್ಯಾತರಾದ ಸ್ವಾಮಿ ರಾಮದಾಸರು.

ವಿಶ್ವಪ್ರೇಮವನ್ನು ಸಾಧಿಸಿ ವಿಶ್ವಸೇವೆಯನ್ನು ಅಖಂಡವಾಗಿ ಮಾಡಿದ ರಾಮದಾಸರು ಮಹಾನ್ ಪುಣ್ಯಪುರುಷರೇ ನಿಜ. ಆಧ್ಯಾತ್ಮಿಕ ಶಾಂತಿಯನ್ನರಸುತ್ತಾ ಸಂನ್ಯಾಸ ದೀಕ್ಷೆ ಪಡೆಯಲು ಹೊರಟಿದ್ದ ಅವರು ದಾರಿಯಲ್ಲಿ ಈ ಪವಾಡ ತೋರಿಸಿದರು.

ಬಾಲ್ಯ

ರಾಮದಾಸರ ಪೂರ್ವಾಶ್ರಮದ ಹೆಸರು ವಿಠಲರಾವ್. ತಂದೆ ಬಾಲಕೃಷ್ಣರಾವ್, ತಾಯಿ ಲಲಿತಾಬಾಯಿ. ತಾಯಿ ತಂದೆಗಳಿಬ್ಬರೂ ಸಂಪ್ರದಾಯವಾದಿಗಳೂ ದೈವಭಕ್ತರೂ ಆಗಿದ್ದರು. ಬಾಲಕೃಷ್ಣರಾಯರಿಗೆ ಹತ್ತು ಮಂದಿ ಗಂಡುಮಕ್ಕಳೂ ಮೂರು ಮಂದಿ ಹೆಣ್ಣು ಮಕ್ಕಳೂ ಇದ್ದರು. ಅವರಿಗೆ ತಿಂಗಳಿಗೆ ಇಪ್ಪತ್ತು ರೂಪಾಯಿ ವೇತನ ಮಾತ್ರ ಬರುತ್ತಿತ್ತು. ಆದರೆ ಸಾಲ ಮಾಡಿಯಾದರೂ ಅತಿಥಿ ಅಭ್ಯಾಗತರನ್ನು ಸತ್ಕರಿಸುವುದರಲ್ಲಿ ಎತ್ತಿದ ಕೈಯಾಗಿದ್ದರು. ಪ್ರತಿ ದಿನ ಸಂಜೆ ಕುಟುಂಬದ ಜನರೆಲ್ಲ ಒಟ್ಟಾಗಿ ಕುಳಿತು ಭಜನೆ ಮಾಡುತ್ತಿದ್ದರು.

ಬಾಲಕೃಷ್ಣರಾಯರಿಗೆ ವಿಠಲರಾಯರು ಆರನೆಯ ಮಗ. ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದು ಈಗ ಕೇರಳ ರಾಜ್ಯದಲ್ಲಿ ಸೇರ್ಪಡೆಯಾಗಿರುವ ಕಾಸರಗೋಡು ತಾಲೂಕಿನ ಹೊಸದುರ್ಗದಲ್ಲಿ ಅವರ ನಿವಾಸ. ಅವರು ೧೮೮೪ ನೆಯ ಇಸವಿ ಏಪ್ರಿಲ್ ತಿಂಗಳಲ್ಲಿ ಚೈತ್ರ ಪೌರ್ಣಮಿಯ ದಿನ ಜನಿಸಿದರು.

ವಿಠಲರಾವ್ ಜನಿಸಿದ ದಿನ – ನಿಸ್ಸೀಮ ರಾಮಭಕ್ತ ಹನುಮಂತ ಹುಟ್ಟಿದ ದಿನ. ಬಾಲ್ಯದಲ್ಲಿ ಸರಸರನೆ ಮರವೇರಿ ಮರದಿಂದ ಮರಕ್ಕೆ ಜಿಗಿದು ಆಟವಾಡುವುದೆಂದರೆ ಅವರಿಗೆ ಬಹಳ ಇಷ್ಟ. ಆದುದರಿಂದ ಅವರು ಸಾಕ್ಷಾತ್ ಮಾರುತಿಯ ಅವತಾರ ಎಂದೇ ಕೆಲವರು ಆಡಿಕೊಳ್ಳುತ್ತಿದ್ದರು.

ಚಿಕ್ಕಂದಿನಲ್ಲೇ ವಿಠಲರಾಯರಿಗೆ ಬಡವರನ್ನು, ಹಸಿದವರನ್ನು ಕಂಡರೆ ಅಂತಃಕರಣ ಉಕ್ಕುತ್ತಿತ್ತು. ಕೈಯಲ್ಲಿ ತಿಂಡಿ ತೀರ್ಥಗಳಿರಲಿ ಅಥವಾ ಬೆಲೆಬಾಳುವ ಪಾತ್ರೆ ಸಾಮಾನುಗಳಿರಲಿ ಅಂಥವರನ್ನು ಕಂಡರೆ ತಕ್ಷಣ ಕೊಟ್ಟು ಬಿಡುತ್ತಿದ್ದರು.

ಅಭಿನಯ ಮತ್ತು ಚಿತ್ರಕಲೆ ಎಂದರೆ ವಿಠಲ ರಾಯರಿಗೆ ಪಂಚಪ್ರಾಣ.

ಒಮ್ಮೆ ವಿಠಲರಾಯರು ಶಾಲೆಯಲ್ಲಿ ಜರುಗಿದ ಒಂದು ನಾಟಕದಲ್ಲಿ ಸಮರ್ಥ ರಾಮದಾಸರ ಪಾತ್ರವನ್ನು ಬಹು ಸಮರ್ಪಕವಾಗಿ ಅಭಿನಯಿಸಿದರು. ಆಗ ಅವರಿಗೆ ತಾನು ಶಿವಾಜಿಯ ಗುರು ಸಮರ್ಥರಂತೆಯೇ ಜಗತ್ತಿನ ಜನರನ್ನು ಉದ್ಧರಿಸುವಂತಾದರೆ? ತಾನೊಬ್ಬ ಸಾಧುವಾಗಿ ವಿಶ್ವಪೇಮವನ್ನು ಸಾಧಿಸಿದರೆ? ಅನಿಸಿತು. ಯಾಕಾಗಬಾರದು, ಸಾಧಿಸಬೇಕು ಎಂಬ ವಜ್ರಸಂಕಲ್ಪ ಮೂಡಿತು.

ಶ್ರೀರಾಮ ಭಕ್ತಿ ಅವರ ಹೃದಯದಲ್ಲಿ ಅಂಕುರಿಸಿತು.

ಶ್ರಮಿಕರ ಬಂಧು

ಮೆಟ್ರಿಕ್ಯುಲೇಷನ್ ಶಿಕ್ಷಣ ಮುಗಿಯಿತು. ಅನಂತರ ವಿಠಲರಾಯರು ಮದರಾಸಿನ ಚಿತ್ರಕಲಾ ಶಾಲೆಯಲ್ಲಿ ಆರು ತಿಂಗಳು ಕಲಾ ಶಿಕ್ಷಣ ಪಡೆದರು. ಆಮೇಲೆ ಮುಂಬಯಿಯ ವಿಕ್ಟೋರಿಯ ತಾಂತ್ರಿಕ ಶಾಲೆಯಲ್ಲಿ ಮೂರು ವರ್ಷ ಸ್ಪಿನಿಂಗ್ ಮತ್ತು ವೀವಿಂಗ್ ಕೋರ್ಸನ್ನು ಪೂರೈಸಿದರು.

ಇಂಗ್ಲಿಷ್ ಗ್ರಂಥಗಳನ್ನು ಓದುವುದೆಂದರೆ ಅವರಿಗೆ ಅಮಿತ ಆಸಕ್ತಿ ಇತ್ತು. ಷೇಕ್ಸ್‌ಪಿಯರನ ಕೃತಿಗಳೆಂದರಂತೂ ವಿಶೇಷ ಪ್ರೀತಿ. ಇದರಿಂದ ಅವರು ಅಖಂಡ ಜ್ಞಾನಭಂಡಾರವನ್ನು ಶೇಖರಿಸಿಕೊಂಡರು. ಆಂಗ್ಲ ಭಾಷೆಯಲ್ಲಿ ಶ್ರೇಷ್ಠ ಪ್ರಭುತ್ವ ಗಳಿಸಿದರು.

ಮುಂದೆ ವಿಠಲರಾಯರು ದಕ್ಷಿಣ ಭಾರತ ಮತ್ತು ಗುಜರಾತಿನ ಹಲವು ಪ್ರಸಿದ್ಧ ಗಿರಣಿಗಳಲ್ಲಿ ನೌಕರಿ ಮಾಡಿದರು. ಅವರ ಪ್ರತಿಭೆಯನ್ನು ಕಂಡು ಆಡಳಿತ ಮಂಡಳಿಯವರು ಅವರನ್ನು ಮ್ಯಾನೇಜರ್ ಹುದ್ದೆಗೆ ಏರಿಸಿದರು. ವಿಠಲರಾಯರ ನಿರ್ದೇಶನದಲ್ಲಿ ಗಿರಣಿಯಲ್ಲಿ ತಯಾರಾಗುತ್ತಿದ್ದ ಬಟ್ಟೆಗಳಿಗೆ ಹಲವು ಸಲ ಪ್ರಶಸ್ತಿ ಪತ್ರಗಳೂ ಚಿನ್ನದ ಪದಕಗಳೂ ಲಭಿಸಿದುವು. ಅವರ ಪ್ರಾವೀಣ್ಯಕ್ಕೆ ಸಾಕಷ್ಟು ಪುರಸ್ಕಾರವೂ ಲಭಿಸಿತು.

ಆದರೆ ವಿಠಲರಾಯರ ಒಲವು ಆ ಉದ್ಯಮ ಸಂಸ್ಥೆಗಳಲ್ಲಿ ಬೆವರು ಸುರಿಸಿ ಶ್ರಮಿಸುತ್ತಿದ್ದ ಕಾರ್ಮಿಕರ ಕಡೆಗಿತ್ತು. ಕಾರ್ಮಿಕರಿಗೆ ಸೌಕರ್ಯಗಳನ್ನು ಒದಗಿಸಬೇಕೆಂದು ಅವರು ಗಿರಣಿಯ ಒಡೆಯರೊಂದಿಗೆ ಹೋರಾಟ ನಡೆಸಿದರು. ಅದಕ್ಕೆ ಒಡೆಯರು ಸಿದ್ಧರಿಲ್ಲವೆಂದು ಗೊತ್ತಾದ ತಕ್ಷಣ ವಿಠಲರಾಯರು ಸಂಸ್ಥೆಯನ್ನು ತ್ಯಜಿಸಿ ಹೊರ ಬೀಳುತ್ತಿದ್ದರು.

ಗುಜರಾತಿನ ನೌಕರಿಯನ್ನು ತ್ಯಜಿಸಿ ವಿಠಲರಾಯರು ಮಂಗಳೂರಿಗೆ ಬಂದರು. ಅಲ್ಲಿ ಬಟ್ಟೆ ಮತ್ತು ನೂಲುಗಳಿಗೆ ಬಣ್ಣ ಕೊಡುವ ಉದ್ಯಮವನ್ನು ತಾವೇ ಸ್ವತಃ ಆರಂಭಿಸಿದರು.

ವಿರಕ್ತಿಯತ್ತ

ಆಗ ಅವರ ವಯಸ್ಸು ೨೫ ವರ್ಷ. ಅವರಿಗೆ ಮಂಗಳೂರಿನ ರುಕ್ಮಾಬಾಯಿ ಎಂಬ ಯುವತಿಯೊಡನೆ ವಿವಾಹ ಜರುಗಿತು. ವಿಶಿಷ್ಟ ಪದ್ಧತಿಯ ಹಳೆಯ ಪರಂಪರೆಯಲ್ಲಿ ಬೆಳೆದ ರುಕ್ಮಾಬಾಯಿಯ ಹೃದಯ ಮೃದುವಾಗಿತ್ತು. ಆದರೆ ನಡತೆ ಬಿಗುವಿನದು. ಆಧುನಿಕ ಸಂಪ್ರದಾಯಗಳಿಗೆ ಅವಳ ಮನಸ್ಸು ಒಡಂಬಡುತ್ತಿರಲಿಲ್ಲ. ಇದರಿಂದ ವಿಠಲರಾಯರ ಸಂಸಾರ ಸುಖಮಯವಾಗಲಿಲ್ಲ. ಈ ದಂಪತಿಗಳಿಗೆ ರಮಾಬಾಯಿ ಎಂಬ  ಮಗಳು ಹುಟ್ಟಿದಳು.

ಆಗಾಗ ಗಂಡ ಹೆಂಡತಿ ಮಾತಿನಲ್ಲಿ ವಿರಸ ಹುಟ್ಟುತ್ತಿದ್ದ ಕಾರಣ ರುಕ್ಮಾಬಾಯಿ ಮಗಳೊಂದಿಗೆ ಆಗಾಗ ತವರುಮನೆಗೆ ಹೊರಟುಹೋಗುತ್ತಿದ್ದಳು.

ಅದು ಮಹಾತ್ಮಾ ಗಾಂಧೀಜಿಯ ಅಸಹಕಾರ ಆಂದೋಳನದ ಸಮಯ. ಗಾಂಧೀಜಿಯ ತತ್ತ್ವಗಳಿಗೆ ಶರಣಾದ ವಿಠಲರಾಯರು ತಮ್ಮ ಕಾರ್ಖಾನೆಯಲ್ಲಿ ಅಗಾಧ ಪ್ರಮಾಣದಲ್ಲಿ ಖಾದಿಯ ಉತ್ಪಾದನೆಯನ್ನು ಆರಂಭಿಸಿದರು. ಆದರೆ ಈ ವ್ಯವಹಾರದಲ್ಲಿ ಅವರಿಗೆ ಭಾರೀ ಅಪಯಶಸ್ಸು ಸಂಭವಿಸಿತು.

ಈ ಅಪಯಶಸ್ಸು ಮೊದಲಿನಿಂದಲೇ ಅವರ ಹೃದಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಹುದುಗಿದ್ದ ವಿರಕ್ತ ಪ್ರವೃತ್ತಿಯನ್ನು ಪ್ರಬಲಿಸಿತು. ಅದಕ್ಕನುಕೂಲವಾಗಿ ಅವರು ಓದಲಾರಂಭಿಸಿದ ಗ್ರಂಥಗಳೂ ಅವರ ದಾರಿಯನ್ನು ಬದಲಾಯಿಸಲಾರಂಭ ಮಾಡಿದವು. ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಬೋಧೆ, ವಿವೇಕಾನಂದರ ವೀರಘೋಷ, ಸ್ವಾಮಿ ರಾಮತೀರ್ಥರ ಉಪದೇಶಗಳಿಂದ ಅವರು ಪ್ರಭಾವಿತರಾದರು. ದಿನದಿಂದ ದಿನಕ್ಕೆ ವಿಠಲರಾಯರ ಮನಸ್ಸು ಗಾಂಧೀಜಿ, ಅರವಿಂದ ಮೊದಲಾದವರ ತತ್ತ್ವಗಳತ್ತ ವಾಲಹತ್ತಿತು.

ಮಂತ್ರೋಪದೇಶ

ಮನಸ್ಸಿನ ಶಾಂತಿಗಾಗಿ ವಿಠಲರಾಯರು ಹೊತ್ತು ಸಿಕ್ಕಿದಾಗಲೆಲ್ಲ ರಾಮನಾಮ ಜಪ ಮಾಡುತ್ತಿದ್ದರು. ಅವರ ಈ ಜಪ ಕಠೋರ ಸಾಧನೆಯ ರೂಪಕ್ಕೆ ತಿರುಗಿತು. ದಿನದಲ್ಲಿ ಅವರಿಗೆ ಒಂದೆರಡು ತಾಸುಗಳ ನಿದ್ರೆ, ಒಂದೆರಡು ಬಾಳೆಹಣ್ಣು ಅಥವಾ ಆಲೂಗಡ್ಡೆಗಳ ಮಿತ ಆಹಾರವೂ ಸಾಕಾಯಿತು. ಮೈತುಂಬ ಬಟ್ಟೆ ಧರಿಸುವುದನ್ನು ಬಿಟ್ಟರು. ಒಂದು ಪಂಚೆ, ಒಂದು ಜುಬ್ಬ ಮಾತ್ರ ತೊಡುತ್ತಿದ್ದರು. ಚಾಪೆಯ ಮೇಲೆ ಮಲಗುತ್ತಿದ್ದರು.

ವಿಠಲರಾಯರ ಮನಸ್ಸು ಅಸ್ತವ್ಯಸ್ತಗೊಂಡಿರುವುದು ಅವರ ತಂದೆಯವರ ಗಮನಕ್ಕೆ ಬಂತು. ಅವರು ಮಗನ ವೈರಾಗ್ಯಪಥದ ಭ್ರಮೆಯನ್ನು ಹರಿಸಲು ಮಗನಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂಬ ದಿವ್ಯ ಮಂತ್ರದ ಉಪದೇಶ ಮಾಡಿದರು. ಈ ಜಪದಿಂದ ಶಾಂತಿ ಲಭಿಸುವುದೆಂದು ಹೇಳಿದರು.

ಈ ಮಂತ್ರ ಜಪದಿಂದ ವಿಠಲರಾಯರ ಮನಸ್ಸಿಗೆ ಶಾಂತಿ  ಲಭ್ಯವಾಯಿತು.

ಜ್ಞಾನದ ಬೆಳಕು

ಅದೇ ವೇಳೆಗೆ ವಿಠಲರಾಯರು ಮಂಗಳೂರಿನಲ್ಲಿ ರದ್ದಿ ಪುಸ್ತಕಗಳನ್ನು ಮಾರುವ ಒಂದು ಅಂಗಡಿಗೊಮ್ಮೆ ಹೋಗಿದ್ದರು. ಅಲ್ಲಿ ಅವರಿಗೆ ಭಗವದ್ಗೀತೆಯ ೧೪ನೇ ಅಧ್ಯಾಯದ ಕನ್ನಡ ಅನುವಾದದ ಒಂದು ಪ್ರತಿ ಸಿಕ್ಕಿತು. ವಿಠಲರಾಯರು ಅದನ್ನು ಶ್ರದ್ಧೆಯಿಂದ ಓದಿದರು. ಅದು ಅವರ ಮೇಲೆ ಆಳವಾದ ಪ್ರಭಾವವನ್ನು ಬೀರಿತು.

ದಿನದಿಂದ ದಿನಕ್ಕೆ ವಿಠಲರಾಯರು ಗ್ರಂಥಗಳ ವಾಚನವನ್ನು ಹೆಚ್ಚಿಸಿದರು. ಒಮ್ಮೆ ಅವರಿಗೆ ‘ಲೈಟ್ ಆಫ್ ಏಷ್ಯ’ ಎಂಬ ಆಂಗ್ಲ ಗ್ರಂಥ ಸಿಕ್ಕಿತು. ಅದರ ಪುಟ ತೆರೆದ ಕೂಡಲೇ ಅವರ ಕಣ್ಣಿಗೆ ಬಿದ್ದದ್ದು ಭಗವಾನ್ ಬುದ್ಧನ ಗೃಹತ್ಯಾಗದ ಪ್ರಸಂಗ. ಹೆಂಡತಿಯನ್ನು, ಮಗುವನ್ನು, ರಾಜಭೋಗಗಳನ್ನು ತೊರೆದು ಸಿದ್ಧಾರ್ಥ ಸಂನ್ಯಾಸದ ದಾರಿಯಲ್ಲಿ ನಡೆದ ಪ್ರಸಂಗ ಅವರ ಮನಸ್ಸನ್ನು ಕಲಕಿತು. ಹಾಗೆಯೇ ಕಣ್ಣು ಮುಚ್ಚಿದಾಗ ಬುದ್ಧನು ಜೀವಂತವಾಗಿ ಬಂದು ತನ್ನೊಂದಿಗೆ ಸಂಭಾಷಿಸಿದ ಅನುಭವ ಅವರಿಗುಂಟಾಯಿತಂತೆ.

ವಿಠಲರಾಯರು ಬೈಬಲನ್ನೂ ಓದಿದರು. ‘ನನ್ನ ಸಲುವಾಗಿ ಎಲ್ಲರನ್ನೂ ಎಲ್ಲವನ್ನೂ ತ್ಯಜಿಸಿ ಬಾ. ನಿನಗೆ ಶತಾಧಿಕ ಫಲ ಸಿಗುತ್ತದೆ. ದೇವರ ಸಾನ್ನಿಧ್ಯ ಸಿಗುತ್ತದೆ’ ಎಂಬ ಯೇಸುಕ್ರಿಸ್ತನ ಆಶ್ವಾಸನೆ ಅವರ ಲಕ್ಷ್ಯ ಸೆಳೆಯಿತು. ಹಾಗೆಯೇ ಭಗವದ್ಗೀತೆಯಲ್ಲಿ ‘ಎಲ್ಲ ಧರ‍್ಮಗಳನ್ನೂ ಬಿಟ್ಟು ನನಗೆ ಶರಣು ಬಾ. ಎಲ್ಲಾ ಪಾಪಗಳಿಂದಲೂ ನಾನು ನಿನ್ನನ್ನು ಮುಕ್ತಗೊಳಿಸುತ್ತೇನೆ’ ಎಂಬ ಗೀತಾಚಾರ‍್ಯ ಶ್ರೀಕೃಷ್ಣನ ಮಾತು ಅವರ ಮನಸ್ಸಿಗೆ ತಟ್ಟಿತು. ಅದೇ ಸಂದರ್ಭದಲ್ಲಿ ಶ್ರೀಕೃಷ್ಣನು ಕೊಳಲೂದುತ್ತಾ ಕುಣಿಯುವ ದೃಶ್ಯವನ್ನು ಅವರು ಕಂಡರಂತೆ.

ಅಧ್ಯಾತ್ಮದ ಅಪೂರ್ವ ಶಕ್ತಿ ವಿಠಲರಾಯರನ್ನು ತನ್ನತ್ತ ಸೆಳೆಯಿತು. ಅವರಿಗೆ ದೇವರನ್ನು ಕಾಣಬೇಕೆಂಬ ಆಸೆ ಹುಟ್ಟಿತು.

ಸ್ವಾಮಿ ರಾಮದಾಸ

ವಿಠಲರಾಯರು ಬುದ್ಧನಂತೆಯೇ ಸರ್ವಸ್ವವನ್ನೂ ತೊರೆದು ಹೋಗಲು ನಿಶ್ಚಯಿಸಿದರು. ಎರಡು ಖಾದಿ ಬಟ್ಟೆಗಳಿಗೆ ಕಾವಿ ಬಣ್ಣ ಹಚ್ಚಿದರು. ಅಂದು ರಾತ್ರಿ ಎರಡು ಕಾಗದಗಳನ್ನು ಬರೆದಿಟ್ಟರು. ಒಂದು ಕಾಗದ ತವರು ಮನೆಯಲ್ಲಿದ್ದ ಹೆಂಡತಿಗೆ. ಇನ್ನೊಂದು ಕಾಗದ ತನಗೆ ಸುಗಮವಾದ ಹಾದಿ ತೋರಿಸಿಕೊಟ್ಟ ತಂದೆಯವರಿಗೆ. ಅಂದು ೧೯೨೨ನೆಯ ಇಸವಿ ಡಿಸೆಂಬರ್ ೨೭ನೆಯ ದಿನಾಂಕ. ಅವರು ಮನೆಯಿಂದ ಹೊರಟರು.

ದಾರಿ ಸಿಕ್ಕಿದತ್ತ ಅಲೆಯುತ್ತ ವಿಠಲರಾಯರು ರೈಲು ನಿಲ್ದಾಣಕ್ಕೆ ಬಂದರು. ಅಲ್ಲಿ ಯಾವುದೋ ಒಂದು ರೈಲು ನಿಂತಿತ್ತು. ಅದರಲ್ಲಿ ಕುಳಿತು ಈರೋಡಿಗೆ ಹೋದರು. ಅಲ್ಲಿಂದ ತಿರುಚಿನಾಪಲ್ಲಿಗೆ ತೆರಳಿದರು. ಆ ಮೇಲೆ ಹಲವು ಊರು ತಿರುಗಿ, ಕೊನೆಗೆ ಶ್ರೀರಂಗಪಟ್ಟಣಕ್ಕೆ ಹೋದರು. ಕಾವೇರಿನದಿಯಲ್ಲಿ ಮಿಂದರು. ಶ್ರೀರಾಮ ಮಂತ್ರ ಜಪ ಮಾಡುತ್ತ ಕಾವಿ ಬಟ್ಟೆಯನ್ನುಟ್ಟು ಸಂನ್ಯಾಸಧಾರಣೆ ಮಾಡಿದರು.

ಅಂದಿನಿಂದ ಅವರು ‘ರಾಮದಾಸ’ ರೆನಿಸಿದರು. ಇನ್ನು ಅವರಿಗೆ ಹೊಸ ಹುಟ್ಟು, ನವಜೀವನ.

ಹೀಗೆ ಪರಿವ್ರಾಜಕರಾದ ರಾಮದಾಸರು ತನ್ನಂತೆಯೇ ಅಲೆಯುತ್ತಿದ್ದ ಸಾಧುಗಳ ಮತ್ತು ಬೈರಾಗಿಗಳ ಜೊತೆಗೂಡಿದರು. ಅವರೂ ಇವರನ್ನು ಪ್ರೀತಿಯಿಂದ ನೋಡಿಕೊಂಡರು. ಅವರ ಸಂಗಡ ರಾಮದಾಸರು ರಾಮೇಶ್ವರ, ಮಧುರೆ ಮತ್ತು ಚಿದಂಬರ ಕ್ಷೇತ್ರಗಳಿಗೆ ಹೋದರು. ಅಲ್ಲಿಂದ ತಿರುವಣ್ಣಾಮಲೆಗೆ ಬಂದರು. ಅಲ್ಲಿ ಭಗವಾನ್ ರಮಣ ಮಹರ್ಷಿಗಳ ದರ್ಶನ ಪಡೆದು ಅವರ ಕೃಪಾಶೀರ್ವಾದ ಕೋರಿದರು. ರಮಣ ಮಹರ್ಷಿಗಳು ಮೌನವಾಗಿ ತನ್ನನ್ನೇ ದಿಟ್ಟಿಸಿದಾಗ ದಿವ್ಯಜ್ಯೋತಿಯೊಂದು ತನ್ನ ಕಣ್ಣುಗಳಲ್ಲಿ ಐಕ್ಯವಾದಂತೆ ರಾಮದಾಸರಿಗೆ ಅನಿಸಿತಂತೆ.

ಅಲ್ಲಿನ ಅರುಣಾಚಲ ಬೆಟ್ಟದಲ್ಲಿ ರಾಮದಾಸರು ಮೂವತ್ತು ದಿನಗಳ ಕಾಲ ಧ್ಯಾನದಲ್ಲಿ ತಲ್ಲೀನರಾದರು. ಆ ಪ್ರದೇಶದಲ್ಲಿ ಹಾವು, ಚೇಳುಗಳು ಹರಿದಾಡಿ ಕೊಂಡಿದ್ದವು. ಕ್ರೂರ ಮೃಗಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದವು.

ಆದರೆ ಧ್ಯಾನಮಗ್ನರಾದ ರಾಮದಾಸರಿಗೆ ಭಯದ ಪರಿವೆಯಿರಲಿಲ್ಲ. ಸರ್ಪವೊಂದು ಕಾಲಿನಲ್ಲಿ ಸುತ್ತಿಕೊಂಡಿದ್ದರೂ ಅದರ ಅರಿವು ಇರಲಿಲ್ಲ. ಅವರ ದೃಷ್ಟಿಯಲ್ಲಿ ಯಾರೂ ದುಷ್ಟರಾಗಿರಲಿಲ್ಲ. ಎಲ್ಲರಲ್ಲಿಯೂ ಎಲ್ಲದರಲ್ಲಿಯೂ ದೇವರೊಬ್ಬನನ್ನೇ ಕಾಣುತ್ತಿದ್ದ ರಾಮದಾಸರಿಗೆ ಭೀತಿಯ ಲವಲೇಶವೂ ಇರಲಿಲ್ಲ.

ಮೂವತ್ತನೆಯ ದಿನ ರಾಮದಾಸರಿಗೆ ಜ್ಞಾನೋದಯ ವಾಯಿತು. ಆತ್ಮಸಾಕ್ಷಾತ್ಕಾರವಾಯಿತು. ಎದುರಿಗೆ ಕಾಣಿಸಿದ ಮರ, ಬಂಡೆ, ಮನುಷ್ಯ-ಎಲ್ಲ ವಸ್ತುಗಳಲ್ಲಿ, ವ್ಯಕ್ತಿಗಳಲ್ಲಿ ದೇವರೇ ಕಾಣಿಸಿದ. ವಸಿಷ್ಠಾಶ್ರಮದ   ಒಂದು ಗುಹೆಯಲ್ಲಿ ಅವರು ಏಸುಕ್ರಿಸ್ತನನ್ನೂ ಕಂಡೆ ಎಂದು ಹೇಳುತ್ತಿದ್ದರು.

ಗ್ರಂಥಗಳ ರಚನೆ

ಸಾಧುಗಳ ಜೊತೆಗೂಡಿ ರಾಮದಾಸರು ಒಂದು ವರ್ಷದ ಅವಧಿಯಲ್ಲಿ ತಿರುಪತಿ, ಜಗನ್ನಾಥ ಪುರಿ, ಗಯಾ, ಕಾಶಿ ಮೊದಲಾದೆಡೆಗಳಿಗೆ ಭೆಟ್ಟಿ ಕೊಟ್ಟು ಹುಬ್ಬಳ್ಳಿಗೆ ಬಂದರು.

ಹುಬ್ಬಳ್ಳಿಯಲ್ಲಿ ರಾಮದಾಸರು ಸಿದ್ಧಾರೂಢರನ್ನು ಭೆಟ್ಟಿಯಾಗಿ ಅವರ ಮಠದಲ್ಲಿ ನೆಲಸಿದರು.

ರಾಮದಾಸರು ಹುಬ್ಬಳ್ಳಿಯಲ್ಲಿರುವ ವಿಚಾರ ಊರಿನಲ್ಲಿದ್ದ ಸಂಬಂಧಿಕರಿಗೆ ತಿಳಿಯಿತು. ಅವರು ಹುಬ್ಬಳ್ಳಿಗೆ ಬಂದು ರಾಮದಾಸರನ್ನು ಕಳುಹಿಸಿಕೊಡುವಂತೆ ಸಿದ್ಧಾರೂಢರನ್ನು ಪ್ರಾರ್ಥಿಸಿದಾಗ ಸಿದ್ಧಾರೂಢರು ಅವರಿಗೆ ಊರಿಗೆ ತೆರಳಲು ಅನುಜ್ಞೆ ಕೊಟ್ಟರು. ರಾಮದಾಸರು ಮಂಗಳೂರಿಗೆ ಬಂದರು.

ರಾಮದಾಸರು ಮನೆಗೆ ಹೋಗಲಿಲ್ಲ. ಕದ್ರಿಯ ಒಂದು ಗುಹೆಯಲ್ಲಿ ಇರುತ್ತಿದ್ದರು. ಅಲ್ಲಿ ಅವರು ಆಂಗ್ಲ ಭಾಷೆಯಲ್ಲಿ ತಮ್ಮ ಮೊದಲ ಗ್ರಂಥ ‘ಭಗವದನ್ವೇಷಣೆ’ ಯನ್ನು ರಚಿಸಿದರು. ಸಾಂಸಾರಿಕ ಮೋಹದಿಂದ ವಿಮುಕ್ತನಾಗಿ ಸಾಧಕನಾಗಬಯಸುವ ವಿರಾಗಿಗೆ ಈ ಗ್ರಂಥ ಮಾರ್ಗದರ್ಶಕವಾಗಿದೆ. ಕದ್ರಿಯ ಗುಹೆಯಲ್ಲೇ ಅವರಿಗೆ ಸಂಪೂರ್ಣ ಜ್ಞಾನದ ಅರಿವು ಮೂಡಿತಂತೆ. ಅನಂತರ ಅವರು ‘ದೇವರ ಅಡಿಯಲ್ಲಿ’ ಎಂಬ ಇನ್ನೊಂದು ಆಂಗ್ಲ ಗ್ರಂಥವನ್ನೂ ಬರೆದರು.

ಕಾಲಕ್ಕೆ ತಕ್ಕ ಆಹಾರ, ನಿದ್ರೆಗಳಿಲ್ಲದೆ ಮಳೆ ಚಳಿಗಳನ್ನೂ ಲೆಕ್ಕಿಸದ ಫಲವಾಗಿ ಅವರ ದೇಹ ಸೊರಗಿ ಕಡ್ಡಿಯಾಗಿತ್ತು. ಆದರೆ ಕಣ್ಣಿನಲ್ಲಿ ಅಪೂರ್ವ ತೇಜಸ್ಸು ಮಿಂಚುತ್ತಿತ್ತು.

ಮೂರು ತಿಂಗಳ ತರುವಾಯ ರಾಮದಾಸರು ಉತ್ತರ ಪ್ರಾಂತದ ಹಲವಾರು ಕಡೆಗಳಿಗೂ ದಕ್ಷಿಣ ದೇಶದ ಊರುಗಳಿಗೂ ಎರಡು ಸಲ ಭೆಟ್ಟಿ ಕೊಟ್ಟರು. ಅವರ ಅಖಂಡ ಬೋಧನೆಯಿಂದ ಸಹಸ್ರಾರು ಜನ ಪ್ರಭಾವಿತರಾದರು.

ಆನಂದಾಶ್ರಮ

೧೯೨೮ರಲ್ಲಿ ರಾಮದಾಸರ ಅಣ್ಣ ಆನಂದರಾಯರು ಕಾಸರಗೋಡಿನ ಬಳಿ ಒಂದು ಗುಡ್ಡದಲ್ಲಿ ಅವರಿಗೆ ಆಶ್ರಮವೊಂದನ್ನು ಕಟ್ಟಿಸಿಕೊಟ್ಟರು. ಆ ಆಶ್ರಮದಲ್ಲಿ ಅವರು ಶ್ರೀರಾಮ ಧ್ಯಾನಮಗ್ನರಾಗಿದ್ದರು.

ಒಂದು ದಿನ ರಾಮದಾಸರ ಬಳಿಗೆ ಒಬ್ಬ ಮಹಿಳೆ ಬಂದಳು. ಅವಳು ಭಟ್ಕಳದವಳು, ಚಿಕ್ಕ ವಯಸ್ಸಿನಲ್ಲೇ ಆಕೆ ಪತಿಯನ್ನು ಕಳೆದುಕೊಂಡಿದ್ದಳು. ಮನಶ್ಶಾಂತಿಗಾಗಿ ಮಹಾತ್ಮರನ್ನು ಸಂದರ್ಶಿಸುತ್ತಾ ಸಂಚರಿಸುತ್ತಿದ್ದ ಅವಳು ರಾಮದಾಸರ ಆಶ್ರಮವನ್ನು ಹೊಕ್ಕಳು. ಆಗ ಅವಳ ಮನಸ್ಸಿನಲ್ಲಿ ಅನಿರೀಕ್ಷಿತವಾದ ಆನಂದ ಉದ್ಭವಿಸಿತಂತೆ. ತನಗೆ ಇಲ್ಲಿ ಪೂರ್ಣ ಶಾಂತಿ ದೊರಕಬಹುದೆಂದು ಅವಳಿಗೆ ಮನದಟ್ಟಾಯಿತು.

ಆ ಮಹಿಳೆಯ ಹೆಸರು ಕೃಷ್ಣಾಬಾಯಿ. ಅವಳು ರಾಮದಾಸರನ್ನು ಗುರುವನ್ನಾಗಿ ಸ್ವೀಕರಿಸಿದಳು. ಪ್ರತಿ ದಿನವೂ ಆಶ್ರಮಕ್ಕೆ ಹೋಗಿ ಬರುತ್ತಾ ಅವರ ನಿಷ್ಕಾಮ ಸೇವೆಯನ್ನು ಮಾಡುತ್ತಿದ್ದಳು. ಮುಂದೆ ರಾಮದಾಸರ ಜೀವನೋದ್ದೇಶವಾದ ವಿಶ್ವಪ್ರೇಮ-ವಿಶ್ವಸೇವೆಗಳ ಪ್ರಸಾರ ಕಾರ್ಯದಲ್ಲಿ ಸಹಾಯಕಳಾದಳು. ಆ ತ್ಯಾಗಮಯಿಯ ಬಗೆಗೆ ರಾಮದಾಸರೇ ‘‘ಮದರ್ ಕೃಷ್ಣಬಾಯಿ’ ಎಂಬ  ಪುಸ್ತಕವನ್ನೂ ಒಂದು ಕವಿತೆಯನ್ನೂ ಬರೆದಿದ್ದಾರೆ.

ಆದರೆ ಆ ಆಶ್ರಮದಲ್ಲಿ  ರಾಮದಾಸರು ಒಂದು ವರ್ಷ ಮಾತ್ರ ವಾಸವಾಗಿದ್ದರು. ಬಳಿಕ ಅವರು ತಮ್ಮ ಆಶ್ರಮವನ್ನು ತಾವೇ ಸ್ಥಾಪಿಸಿಕೊಂಡರು. ಮಂಗಳೂರಿನಿಂದ ನಲವತ್ತು ಮೈಲು ದೂರದಲ್ಲಿ ಕಾಂಞಂಗಾಡು ರೈಲು ನಿಲ್ದಾಣ ಸಿಗುತ್ತದೆ. ಅಲ್ಲಿಂದ ಎರಡೂವರೆ ಮೈಲು ದೂರದಲ್ಲಿದ್ದ ಬೆಟ್ಟದಲ್ಲಿ ಅವರು ಪ್ರಶಾಂತವಾದ ‘ಆನಂದಾಶ್ರಮ’ ವನ್ನು ನಿರ್ಮಿಸಿದರು. ಆ ಪ್ರದೇಶ ಅಂದು ದಟ್ಟ ಕಾಡಾಗಿತ್ತು. ಇಂದು ಅದು ಸ್ವಾಮಿಗಳ ಶ್ರಮದಿಂದ ತೆಂಗು, ಹಲಸು, ಮಾವು ಮುಂತಾದ ಫಲಭರಿತ ವೃಕ್ಷಗಳ ಬೀಡಾಗಿದೆ. ಬಗೆಬಗೆಯ ಹೂಗಿಡಗಳು, ತುಲಸೀ ವನಗಳಿಂದ ಆಶ್ರಮದ ವಾತಾವರಣ ಸಾಕಷ್ಟು ಸುಂದರವಾಗಿರುವಂತೆ ಸ್ವಾಮಿಗಳು ನೋಡಿಕೊಂಡಿದ್ದರು.

ಆಶ್ರಮದಲ್ಲಿ ದಿನವೂ ಅಖಂಡ ರಾಮನಾಮ ಭಜನೆ ನಡೆಯುತ್ತಿತ್ತು. ಆದರೆ ಮೂರ್ತಿಪೂಜೆಯನ್ನು ರಾಮದಾಸರು ನಿಷೇಧಿಸಿದ್ದರು. ಭಗವಂತನ ವ್ಯಕ್ತರೂಪಗಳಾದ ಮಾನವರಿಗೆ ಸೇವೆ ಮಾಡುವುದೇ ಭಗವಂತನ ನಿಜವಾದ ಸೇವೆ ಎಂದು ಅವರು ಹೇಳುತ್ತಿದ್ದರು. ಆಶ್ರಮವಾಸಿಗಳು ಬಿಡುವಿದ್ದಾಗ ರಾಮನಾಮ ಜಪ ಬರೆಯಲು ಅವರು ಪ್ರೇರೇಪಿಸುತ್ತಿದ್ದರು.

ಆನಂದಾಶ್ರಮಕ್ಕೆ ಬೈರಾಗಿಗಳು, ಬಡವರು, ದೀನದಲಿತರು, ಸಂತ್ರಸ್ತರು ಯಾರೇ ಬರಲಿ- ಅವರಿಗೆ ಉದಾರವಾಗಿ ಸಹಾಯ ಮಾಡಬೇಕೆಂದು ಸ್ವಾಮಿಗಳು ವ್ಯವಸ್ಥೆ ಮಾಡಿದ್ದರು. ಅದಕ್ಕೆ ತಕ್ಕಂತೆ ಕೃಷ್ಣಾಬಾಯಿ ಕೊಡುಗೈಯ ತಾಯಿ ಎನಿಸಿದಳು.

ತ್ಯಾಗದ ಸೀಮೆಯನ್ನು ದಾಟಿದ ಔದಾರ್ಯ ಆನಂದಾಶ್ರಮದಲ್ಲಿ ತಾನೇ ತಾನಾಗಿ ಮೆರೆಯುತ್ತಿತ್ತು.

ಒಮ್ಮೆ ಕಡುಬಡವನೊಬ್ಬ ಆನಂದಾಶ್ರಮಕ್ಕೆ ಬಂದ. ಅವನದು ದೊಡ್ಡ ಸಂಸಾರ. ಆದರೆ ಅವನಿಗೆ ಎಲ್ಲೂ ಕೆಲಸವಿರಲಿಲ್ಲ. ಹೆಂಡತಿ ಮಕ್ಕಳ ಹೊಟ್ಟೆ ತುಂಬಿಸುವುದೇ ಕಷ್ಟವಾಗಿತ್ತು. ಏನಾದರೂ ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳುವಂತೆ ಅವನು ಕೃಷ್ಣಾಬಾಯಿಯಲ್ಲಿ ಅಂಗಲಾಚಿ ಬೇಡಿಕೊಂಡ.

ಆಶ್ರಮದಲ್ಲಿ ದೊಡ್ಡ ಗೋಶಾಲೆ ಇತ್ತು. ಮಾತಾಜಿ ಮಾನವ ಸೇವೆಯಂತೆಯೇ ಗೋಸೇವೆಯನ್ನೂ ಮಾಡುತ್ತಿದ್ದಳು. ಗೋವುಗಳು ದಷ್ಟಪುಷ್ಟವಾಗಿದ್ದುವು.

ಕೃಷ್ಣಾಬಾಯಿ ಆ ಬಡವನಿಗೆ ಒಂದು ಹಾಲು ಕರೆಯುವ ಹಸುವನ್ನು ಕೊಡುವುದಾಗಿ ಹೇಳಿದಳು. ಹಾಲಿನ ಮಾರಾಟದಿಂದ ಅವನ ಕುಟುಂಬವನ್ನು ಪೋಷಿಸಬಹುದು  ಎಂದು ಸಲಹೆಯಿತ್ತಳು.

ಆದರೆ ಬಡವನಿಗೆ ಹಟ್ಟಿ ಇರಲಿಲ್ಲ. ಹಟ್ಟಿ ಕಟ್ಟಿಸುವ ಸಲಕರಣೆಗಳೂ ಇರಲಿಲ್ಲ. ಆಗ ಆಶ್ರಮದ ಕೆಲಸಗಾರರನ್ನು ಕಳುಹಿಸಿ ಹಟ್ಟಿ ಕಟ್ಟಿಸಿಕೊಡುವುದಾಗಿ ಆಕೆ ಹೇಳಿದಳು. ಆಶ್ರಮದಿಂದಲೇ ಬೇಕಾದಷ್ಟು ಹಿಂಡಿಯನ್ನೂ ಹುಲ್ಲನ್ನೂ ಒಯ್ಯಬಹುದು ಎಂದು ಕೃಷ್ಣಾಬಾಯಿ ಹೇಳಿದಳು.

ಈ ಏರ್ಪಾಟು ಕೇಳಿ ರಾಮದಾಸರಿಗಂತೂ ತುಂಬ ಹರ್ಷವಾಯಿತು. ಬಡವರಿಗೆ ಸಹಾಯವಾದರೆ ಅವರಿಗೆ ಸಂತೋಷವೇ.

ಕೆಲವೇ ದಿನಗಳಾದ ಮೇಲೆ ಬಡವ ಆಶ್ರಮಕ್ಕೆ ಮತ್ತೆ ಬಂದ. ಹಸುವೇನೋ ಚೆನ್ನಾಗಿ ಹಾಲು ಕೊಡುತ್ತಿತ್ತು. ಆದರೆ ಸರಿಯಾದ ಬೆಲೆಗೆ ಹಾಲನ್ನು ಕೊಳ್ಳುವ ಜನಗಳೇ ಇರಲಿಲ್ಲ.

ಇದನ್ನು ಕೇಳಿ ಕೃಷ್ಣಾಬಾಯಿ – ಅದಕ್ಕಾಗಿ ಏನೂ ಯೋಚಿಸಬೇಕಾಗಿಲ್ಲ. ಹಾಲನ್ನೆಲ್ಲಾ ಆಶ್ರಮಕ್ಕೆ ತಂದುಕೊಡು; ಒಳ್ಳೆಯ ಬೆಲೆಯನ್ನು ಕೊಡುತ್ತೇನೆ ಎಂದು ಆಶ್ವಾಸನೆಯಿತ್ತಳು.

ವಿದ್ಯಾದಾನ

ಆಶ್ರಮದ ಸುತ್ತಮುತ್ತಲೂ ಅನೇಕ ಹಳ್ಳಿಗಳಿದ್ದುವು. ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ಸೌಕರ್ಯಗಳಿರಲಿಲ್ಲ. ಅವರು ವಿದ್ಯಾರ್ಜನೆಗಾಗಿ ತುಂಬಾ ದೂರ ನಡೆಯಬೇಕಿತ್ತು.

ಇದನ್ನು ಮನಗಂಡು ಸ್ವಾಮಿ ರಾಮದಾಸರು ೧೯೪೦ ರಲ್ಲಿ ‘ಶ್ರೀ ಕೃಷ್ಣ ವಿದ್ಯಾಲಯ’ ಎಂಬ ಪ್ರಾಥಮಿಕ ಶಾಲೆಯನ್ನು ಕಟ್ಟಿಸಿದರು. ಅಲ್ಲಿ ಓದಲು ಬರುತ್ತಿದ್ದ ಮಕ್ಕಳಿಗೆ ಆಶ್ರಮದಿಂದಲೇ ಪುಸ್ತಕ ಮುಂತಾದ ಸಲಕರಣೆಗಳನ್ನೆಲ್ಲ ಒದಗಿಸುತ್ತಿದ್ದರು. ಎರಡು ಹೊತ್ತಿನ ಪುಷ್ಕಳವಾದ ಊಟ ಮತ್ತು ವರ್ಷದಲ್ಲಿ ಎರಡು ಸಲ ಉಡುಗೆ ತೊಡುಗೆಗಳನ್ನು ಆಶ್ರಮದಿಂದಲೇ ಮಕ್ಕಳಿಗೆ ಕೊಡುವ ಏರ್ಪಾಟು ಮಾಡಿದರು.

ಸ್ವಾಮಿ ರಾಮದಾಸರು ಆ ಮಕ್ಕಳಲ್ಲೇ ಭಗವಂತನ ವ್ಯಕ್ತರೂಪವನ್ನು ಕಂಡು ಆನಂದಿಸಲಾರಂಭಿಸಿದರು. ಆ ಮಕ್ಕಳ ಸ್ನಾನ ಮತ್ತು ಭೋಜನಕ್ಕಾಗಿ ಒಂದು ವಿಶಾಲವಾದ ಕಟ್ಟಡವನ್ನು ಕಟ್ಟಿಸಿದರು. ಹೀಗೆ ಹನ್ನೆರಡು ವರ್ಷ ಕಾಲ ಅನೂಚಾನವಾಗಿ ವಿದ್ಯಾಸೇವೆ ನಡೆಸಿದ ಅನಂತರ ಅವರು  ಶಾಲೆಯನ್ನು ಸರಕಾರಕ್ಕೆ ವಹಿಸಿಕೊಟ್ಟರು.

ಕಲಿತ ಮಕ್ಕಳಿಗೆ ಸರಿಯಾದ ಉದ್ಯೋಗ ದೊರಕುವುದು ಒಂದು ಸಮಸ್ಯೆಯೆನಿಸಿತು. ಸ್ವಾಮಿಗಳು ಹಿಂದೆಗೆಯಲಿಲ್ಲ. ಆಶ್ರಮದ ಶಾಲೆಯಲ್ಲಿ ಕಲಿತ ಮಕ್ಕಳಿಗೆಂದೇ ಅಲ್ಲ, ಉದ್ಯೋಗವಿಲ್ಲದ ಇತರ ಹುಡುಗರಿಗೂ ಸಹಾಯವಾಗಲಿ ಎಂದು ಒಂದು ಉದ್ಯೋಗಶಾಲೆಯನ್ನು ಕಟ್ಟಿಸಿದರು.

ಈ ಉದ್ಯೋಗಶಾಲೆಯಲ್ಲಿ ನೂಲುವುದು, ನೇಯುವುದು, ಹೊಲಿಗೆ, ಬಟ್ಟೆಗಳ ವಿನ್ಯಾಸ ಮುದ್ರಿಸುವುದು, ಪಾದರಕ್ಷೆ ಹೊಲಿಯುವುದು, ಕೊಂಬಿನಿಂದ ಬಾಚಣಿಗೆ, ಗುಂಡಿ ತಯಾರಿಸುವುದು ಮುಂತಾದ ಗೃಹ ಕೈಗಾರಿಕೆಗಳಲ್ಲಿ ಶಿಕ್ಷಣ ನೀಡಿ ನವಜೀವನಕ್ಕೆ ದಾರಿ ತೋರಿಸಿಕೊಟ್ಟರು.

ಒಮ್ಮೆ ಉದ್ಯೋಗಶಾಲೆಯಲ್ಲಿ ಬೆಂಕಿ ಅನಾಹುತವುಂಟಾಯಿತು. ಆಶ್ರಮದ ಹೊರಗಿದ್ದ ಸ್ವಾಮಿಗಳು ಅದನ್ನೇ ನೋಡುತ್ತಿದ್ದರು. ಅವರಿಗೆ ನಷ್ಟವಾಯಿತೆಂಬ ಯೋಚನೆ ಬರಲಿಲ್ಲ. ಉದ್ಯೋಗ ಶಾಲೆಯಿಂದ ಧಗಧಗನೆ ಏಳುತ್ತಿದ್ದ ಬೆಂಕಿಯ ಜ್ವಾಲೆಯಲ್ಲಿ ತಾನು ಶಿವನ ತಾಂಡವ ನೃತ್ಯವನ್ನು ಕಂಡು ಆನಂದಿಸಿದುದಾಗಿ ಆನಂತರ ಅವರು ಹೇಳಿದರು.

ಆ ಅನಾಹುತದಲ್ಲಿ ಕೆಲವು ಕೈಮಗ್ಗದ ಸಾಮಗ್ರಿಗಳು ನಾಶವಾದವು. ಆದರೆ ಮೂರೇ ತಿಂಗಳಲ್ಲಿ ಅಷ್ಟು ಮಗ್ಗಗಳನ್ನು ಮತ್ತೆ ಸ್ಥಾಪಿಸಲು ಸಾಧ್ಯವಾಯಿತಂತೆ.

ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಕಾಯಿಲೆಗಳು ಬಂದರೆ ಸನಿಹದಲ್ಲಿ ವೈದ್ಯಕೀಯ ಸೌಲಭ್ಯಗಳಿರಲಿಲ್ಲ. ಏನಾದರೂ ಆವಶ್ಯಕತೆಯಿದ್ದರೂ ಹೊಸದುರ್ಗದಲ್ಲಿದ್ದ ವೈದ್ಯರು ಅಷ್ಟು ದೂರಕ್ಕೆ ಬರಲು ಒಪ್ಪುತ್ತಿರಲಿಲ್ಲ.

ಅದರಿಂದಾಗಿ ಸ್ವಾಮಿ ರಾಮದಾಸರು ಒಂದು ವೈದ್ಯಶಾಲೆಯನ್ನು ಸ್ಥಾಪಿಸಲು ಸಹಾಯ ಮಾಡಬೇಕೆಂದು ತನ್ನ ಭಕ್ತರಲ್ಲಿ ಕೇಳಿಕೊಂಡರು.

ಸಾಕಷ್ಟು ಸಹಾಯ ಸಿಕ್ಕಿತು. ಸ್ವಾಮಿಗಳು ಒಂದು ಉಚಿತ ವೈದ್ಯಶಾಲೆಯನ್ನು ಕಟ್ಟಿಸಿದರು. ರೋಗಿಗಳು ಆಸ್ಪತ್ರೆಯಲ್ಲೇ ಕೆಲವು ದಿನ ತಂಗುವುದು ಅಗತ್ಯವಿದ್ದರೆ ಅನುಕೂಲವಾಗ ಲೆಂದು ಒಂದು ವಾರ್ಡನ್ನು ಕಟ್ಟಿಸಿದರು. ಮುಂದೆ ಇದನ್ನು ಸರಕಾರವೇ ವಹಿಸಿಕೊಂಡಿತು.

ಬಡವರು-ಬಡತನ ಎಂದರೆ ಸಾಕು, ಸ್ವಾಮಿಗಳ ಹೃದಯದಲ್ಲಿ ಕರುಣೆ ಉಕ್ಕುತ್ತಿತ್ತು. ದೀನದಲಿತರಿಗೆ ಯಾವ ವಿಧವಾಗಿ ಸಹಾಯ ಮಾಡಬೇಕಾದರೂ ಅವರು ಮುನ್ನುಗ್ಗುತ್ತಿದ್ದರು. ಕಷ್ಟದಲ್ಲಿರುವವರನ್ನು ಕಂಡರೆ ಸ್ವಾಮಿಗಳು ಅತ್ತುಬಿಡುತ್ತಿದ್ದರು. ರಾಮದಾಸರು ದರಿದ್ರನಲ್ಲೇ ದೇವರನ್ನು ಕಾಣಲು ಸಾಧ್ಯ ಎನ್ನುತ್ತಿದ್ದರು.

ಅನೇಕ ಭಕ್ತರು ಆನಂದಾಶ್ರಮಕ್ಕೆ ಹಲವಾರು ಎಕರೆ ಭೂಮಿಯನ್ನು ದತ್ತಿಯಾಗಿ ಕೊಟ್ಟಿದ್ದರು. ಸ್ವಾಮಿಗಳು ಆ ಭೂಮಿಗಳಲ್ಲಿ ಸ್ವತಃ ಮನೆಗಳನ್ನು ಕಟ್ಟಿಸಿದರು. ಆಶ್ರಮವನ್ನೇ ನಂಬಿಕೊಂಡು ಕೆಲಸ ಮಾಡುತ್ತಿದ್ದ ಆಶ್ರಮವಾಸಿಗಳು ಅನೇಕರಿದ್ದರು. ಅವರಿಗೂ ಮತ್ತು ಅರ್ಹರಾದ ಕೆಲವು ಬಡವರಿಗೂ ಅವರು ಆ ವ್ಯವಸಾಯ ಭೂಮಿಯನ್ನು ಹಂಚಿ ಕೊಟ್ಟರು. ಸ್ವಾಮಿಗಳ ಉದಾರ ನೀತಿ ಎಷ್ಟಿತ್ತೆಂದರೆ ಆಶ್ರಮದಲ್ಲಿ ದೀರ್ಘ ಕಾಲದಿಂದ ಕೆಲಸ ಮಾಡಿಕೊಂಡಿ ದ್ದವರಿಗೆ ವಿಶ್ರಾಂತಿ ವೇತನವನ್ನು ಕೂಡ ಅವರು ಕೊಡಮಾಡಿದ್ದರು.

ವಿಶ್ವಸೇವೆ-ವಿಶ್ವಪ್ರೇಮ

ಆಶ್ರಮದ ಮುಖ್ಯ ಧ್ಯೇಯ ವಿಶ್ವಸೇವೆಯ ಕಾರ್ಯ ಮತ್ತು ವಿಶ್ವಪ್ರೇಮವಾಗಿತ್ತು. ಆಶ್ರಮಕ್ಕೆ ಬಂದವರಲ್ಲಿ ಜಾತಿ -ಮತ, ಸ್ವಕೀಯ-ಪರಕೀಯ, ಬಡವ-ಬಲ್ಲಿದ ಎಂಬ ಭೇದಭಾವವಿರಲಿಲ್ಲ. ಎಲ್ಲರಲ್ಲೂ ರಾಮನನ್ನೇ ಕಾಣುತ್ತಾ ಸ್ವಾಮಿಗಳು ಭಕ್ತಿಪೂರ್ವಕವಾದ ಆದರಾತಿಥ್ಯ ವೀಯುತ್ತಿದ್ದರು.

ಒಬ್ಬ ಹರಿಜನ ಬಾಲಕ ಅನಾಥನಾಗಿ ತಿರುಗುತ್ತಿದ್ದ. ಸ್ವಾಮಿಗಳು ಅವನನ್ನು ಆಶ್ರಮಕ್ಕೆ ಕರೆತಂದು ಪೋಷಣೆ ನೀಡಿದರು. ಮುಂದೆ ಅವನ ಸ್ವತಂತ್ರ ಜೀವನಕ್ಕೂ ಸಹಾಯಕರಾದರು.

ಉತ್ತರದೇಶದ ಒಬ್ಬ ಗರ್ಭಿಣಿಯೂ ನಿರಾಶ್ರಿತಳಾಗಿ ಅಲ್ಲಿಗೆ ಬಂದಾಗ ತುಂಬು ಹೃದಯದಿಂದ ಸ್ವಾಮಿಗಳು ಆಕೆಯನ್ನು ಆಶ್ರಮಕ್ಕೆ ಸ್ವಾಗತಿಸಿದರು. ಅವಳಿಗೆ ಆಶ್ರಯಕೊಟ್ಟಿದ್ದಷ್ಟೇ ಅಲ್ಲ, ಅವಳ ಮಗುವನ್ನು ವಾತ್ಸಲ್ಯಪೂರ್ವಕವಾಗಿ ಬೆಳೆಸಿದರು.

ಹೀಗೆ ಸ್ವಾಮಿಗಳ ಸರಳ ಸಜ್ಜನಿಕೆಗಳಿಗೆ ಅನೇಕ ಪ್ರಸಂಗಗಳು ಉದಾಹರಣೆಯಾಗಿವೆ. ಕಷ್ಟ ನಿಷ್ಠುರಗಳಿಂದ ಬಳಲುತ್ತಿದ್ದ ನೂರಾರು ಮಂದಿಗೆ ಅವರು ಉಚಿತವಾಗಿ ಸಹಾಯ ಮಾಡಿದ್ದಾರೆ.

ಸ್ವಾಮಿಗಳಿಗೆ ಲೌಕಿಕ ರೀತಿಯಲ್ಲಿ ಅಪರಾಧ ಮಾಡಿದವರೂ ಕೆಲವರಿದ್ದರು. ಆದರೆ ಅದನ್ನು ಅವರು ಗಮನಿಸುತ್ತಿರಲಿಲ್ಲ. ಅಂಥ ಅಪರಾಧಿಗಳು ಪಶ್ಚಾತ್ತಾಪ ಹೊಂದಿ ತನ್ನಲ್ಲಿಗೆ ಮರಳಿ ಬಂದರೆ ಅವರು ಸಂತೋಷದಿಂದ ಸ್ವೀಕರಿಸಿದ್ದಾರೆ. ತಾನು ದೊಡ್ಡವ ಎಂಬ ಭಾವನೆ ಲವಲೇಶವೂ ಅವರಲ್ಲಿ ಇರಲಿಲ್ಲ. ಭಕ್ತರೊಂದಿಗೆ ತಾಯಿಯಂತೆ, ತಂದೆಯಂತೆ, ಸ್ನೇಹಿತನಂತೆ ಬೆರೆಯುತ್ತಿದ್ದರು. ಆಶ್ರಮದೊಳಗೆ ಯಾರೂ ಯಾವ ಹೊತ್ತಿನಲ್ಲೂ ಬರಲು ಮುಕ್ತ ಅವಕಾಶವಿತ್ತು.

ಪ್ರಪಂಚದಲ್ಲಿ ಉಂಟಾಗುವ ಕಷ್ಟಗಳು ಸ್ವಲ್ಪ ಕಾಲದವು ಎಂದು ಸ್ವಾಮಿಗಳು ಹೇಳುತ್ತಿದ್ದರೂ ಭಕ್ತರಿಗೆ ಒದಗಿದ ಸಂಕಷ್ಟಗಳಲ್ಲಿ ಸಹಾನುಭೂತಿ ತೋರಿಸುತ್ತಿದ್ದರು.

ನಿಮ್ಮ ದೇವರು ಯಾರು ಎಂದು ಯಾರಾದರೂ ಸ್ವಾಮಿಗಳೊಂದಿಗೆ ಕೇಳಿದರೆ, ನೀವೇ ನನ್ನ ದೇವರೆಂದು ಅವರೆಡೆಗೆ ಸ್ವಾಮಿಗಳು ಬೆರಳಿಟ್ಟು ತೋರಿಸುತ್ತಿದ್ದರು.

ವಿದೇಶ ಪ್ರಯಾಣ

ಸ್ವಾಮಿಗಳ ಪ್ರವಚನವನ್ನು ಆಲಿಸಲು ಅವರ ಭಕ್ತರು ಅವರಿಗೆ ವಿದೇಶ ಪ್ರಯಾಣವನ್ನು ಏರ್ಪಡಿಸಿದರು.

೧೯೫೪ ರ ಆಗಸ್ಟ್ ೧೮ ರಂದು ಸ್ವಾಮಿಗಳು ಪರದೇಶಗಳ ಪ್ರವಾಸಕ್ಕೆ ಹೊರಟರು.

ಇಟಲಿ, ಜರ್ಮನಿ, ಸ್ವಿಟ್‌ಜರ್ಲೆಂಡ್, ಫ್ಸಾನ್ಸ್, ಬೆಲ್ಜಿಯಂ, ಹಾಲೆಂಡ್, ಜಪಾನ್, ಹಾಂಕಾಂಗ್, ಅಮೆರಿಕ, ಮಲಯಾ, ಶ್ರೀಲಂಕಾ ಮೊದಲಾದೆಡೆಗಳಲ್ಲೆಲ್ಲ ಸ್ವಾಮಿಗಳು ಸಂಚಾರ ಕೈಗೊಂಡು ೧೯೫೫ ಜನವರಿ ೩ ರಂದು ಆಶ್ರಮಕ್ಕೆ ಹಿಂತಿರುಗಿದರು.

ವಿದೇಶಗಳಲ್ಲಿ ಸ್ವಾಮಿಗಳ ಬೋಧಾಮೃತವನ್ನು ಆಲಿಸಲು ಅಪಾರ ಸಂಖ್ಯೆಯಲ್ಲಿ ವಿದೇಶೀ ಗಣ್ಯರೂ ವಿವಿಧ ರಂಗಗಳ ಮುಖಂಡರೂ ಸೇರಿದ್ದರು. ಅವರ ಈ ಪ್ರವಚನಗಳು ಹತ್ತು ಸಂಪುಟಗಳಲ್ಲಿ ಪ್ರಕಟಗೊಂಡಿವೆ.

ವಿದೇಶಗಳಲ್ಲಿ ಹಲವರು ಬಂದು ಸ್ವಾಮಿಗಳಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಅವರ ಎಲ್ಲ ತೊಂದರೆಗಳಿಗೂ ಸ್ವಾಮಿಗಳು ನೀಡಿದ ಸಿದ್ಧೌಷಧವೆಂದರೆ ಭಗವನ್ನಾಮ ಜಪ. ಪಾಶ್ಚಾತ್ಯರಿಗೆ ಅವರು ಯೇಸುಕ್ರಿಸ್ತನ ನಾಮಜಪವನ್ನು ಬೋಧಿಸಿದರು. ದೇವರೊಬ್ಬನೇ, ಎಲ್ಲರೂ ಅವನ ಮಕ್ಕಳೇ, ಯಾರು ಬೇಕಾದರೂ ಅವನ ಯಾವ ನಾಮವನ್ನಾದರೂ ಜಪಿಸಿ ಉದ್ಧಾರವಾಗಬಹುದೆಂದು ಅವರು ಸಾರಿದರು.

ವಿಶ್ವ ಪರ್ಯಟನೆಯ ಕಾಲದಲ್ಲಿ ಸ್ವಾಮಿಗಳು ಹಲವು ಅನಿರೀಕ್ಷಿತ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪ್ರಮೇಯವೊದಗಿತ್ತು. ಆದರೆ ಅವರ ಬಾಯಿಂದ ನಿರರ್ಗಳವಾಗಿ ಉತ್ತರವೂ ಹೊರಬೀಳುತ್ತಿತ್ತು.

ಅಮೆರಿಕದಲ್ಲಿ ಸ್ವಾಮಿಗಳನ್ನು ಒಬ್ಬರು ಸಭೆಗೆ ಪರಿಚಯ ಮಾಡಿಕೊಡುತ್ತ ‘‘ನಮ್ಮ ಸಭೆಗೆ ದೇವರು ಆಗಮಿಸಿದ್ದಾರೆ’’ ಎಂದರು.

ಆಗ ಸ್ವಾಮಿಗಳು ತಟ್ಟನೆ, ‘‘ಹೌದು, ದೇವರನ್ನು ನೋಡಲು ದೇವರು ಬಂದಿದ್ದಾನೆ. ನೀವೆಲ್ಲರೂ ದೇವರ ಪ್ರತಿರೂಪಗಳಲ್ಲವೆ?’’ ಎಂದು ಹೇಳಿದರು.

‘‘ಮನುಷ್ಯ ಸದಾ ಸುಖವನ್ನೇ ಹಂಬಲಿಸುತ್ತಾನೆ. ಜನನ ಮರಣದ ಚಕ್ರದಲ್ಲಿ ಸುತ್ತುತ್ತಿರುತ್ತಾನೆ. ಅವನಿಗೆ ಶಾಶ್ವತ ಸುಖ ಸಿಗಬೇಕಾದರೆ ಭಗವಂತನನ್ನು ಹೊಂದಬೇಕು. ಅದೇ ಮಾನವಜನ್ಮದ ಗುರಿ. ಅದನ್ನು ಪಡೆಯಲು ಜಾತಿ-ಮತ, ವಯಸ್ಸು ಯಾವುದರ ಭೇದವೂ ಇಲ್ಲ. ಮನಸ್ಸು ಹೋದೆಡೆಯಲ್ಲೆಲ್ಲಾ ಭಗವಂತನೇ ಇದ್ದಾನೆಂದು ಭಾವಿಸಿಕೊಂಡರೆ ಪ್ರಾಪಂಚಿಕ ಮೋಹದಿಂದ ಮುಕ್ತನಾಗಬಹುದು’’ ಎಂದು ಸ್ವಾಮಿಗಳು ಅಮೆರಿಕದಲ್ಲಿ ಸಹಸ್ರಾರು ಜನರು ತುಂಬಿದ ಸಭೆಯಲ್ಲಿ ಘೋಷಿಸಿದರು.

ಸ್ವಾಮಿಗಳ ಪ್ರವಚನವನ್ನಾಲಿಸಲು ವಿದ್ಯಾರ್ಥಿಗಳೂ ಸೇರಿದ್ದರು. ಅವರಿಗೆ ಸ್ವಾಮಿಗಳು ‘‘ಗುರು ಹೇಳಿದಂತೆ ಸಾಧನೆ ಮಾಡಿ. ಅದರಲ್ಲಿ ಎಷ್ಟೇ ವಿಫಲರಾದರೂ ಹಿಂದೆಗೆಯಬೇಡಿ. ಅಹಂಭಾವವನ್ನು ತ್ಯಜಿಸಿರಿ’’ ಎಂಬ ಸಂದೇಶವಿತ್ತರು.

ರಾಮನಾಮ ಸಂಕೀರ್ತನೆ

ಸಂಸಾರದಲ್ಲಿ ವಿರಕ್ತರಾಗಿ ಸ್ವಾಮಿಗಳ ಬಳಿಗೆ ಆತ್ಮ ಶಾಂತಿಗಾಗಿ ಬರುತ್ತಿದ್ದ ಭಕ್ತ ಸಮುದಾಯಕ್ಕೆ ಲೆಕ್ಕವೇ ಇರಲಿಲ್ಲ. ಅದೇ ರೀತಿ ಎಲ್ಲೆಡೆಯಿಂದ ವಿಪುಲವಾಗಿ ಸಹಾಯಧನವೂ ಬರುತ್ತಿತ್ತು.

ಬಂದ ಎಲ್ಲರಿಗೂ ಶಾಶ್ವತವಾದ ಶಾಂತಿ ಸಿಕ್ಕಲಿ ಎಂಬ ಉದ್ದೇಶದಿಂದ ಸ್ವಾಮಿ ರಾಮದಾಸರು ಒಂದು ಸುಂದರವಾದ ಭಜನೆಯ ಮಂದಿರವನ್ನು ಕಟ್ಟಿಸಿದರು. ಅಲ್ಲಿ ದಿನಂಪ್ರತಿ ಒಟ್ಟು ಎಂಟು ತಾಸುಗಳವರೆಗೆ ‘ರಘು ಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ’ ಭಜನೆಯಿಂದ ಆರಂಭಿಸಿ ರಾಮನಾಮ ಪ್ರತಿಧ್ವನಿಸುತ್ತಿತ್ತು.

ಭಜನೆಯ ಮಂದಿರದ ಪಕ್ಕದಲ್ಲೇ ಸ್ವಾಮಿಗಳು ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿ. ಆಶ್ರಮದ ಮುಂಭಾಗದಲ್ಲಿ ಪಂಚವಟಿ. ಒಂದು ಪಾರ್ಶ್ವದಲ್ಲಿ ವಿಶಾಲವಾದ ವಟವೃಕ್ಷ, ಅಶ್ವತ್ಥ, ಬೇವಿನ ಮರಗಳಿದ್ದುವು. ಆ ವಾತಾವರಣದಲ್ಲಿ ನೆಲೆಸಿದ ಅನೇಕರಿಗೆ ಹಲವು ಔಷಧಗಳಿಂದಲೂ ಗುಣವಾಗದ ಕಾಯಿಲೆಗಳು ಪರಿಹಾರವಾಗಿರುವ ಉದಾಹರಣೆಗಳಿವೆ.

ಇದಲ್ಲದೆ ಅತಿಥಿಗಳಿಗಾಗಿ ಭೋಜನಶಾಲೆ, ಸಾಧುಗಳ ವಿಶ್ರಾಂತಿಗಾಗಿ ಧರ್ಮಶಾಲೆ, ಗ್ರಂಥಾಲಯ, ವಿದ್ಯುದ್ಯಂತ್ರಾಗಾರ ಇತ್ಯಾದಿಗಳನ್ನೂ ಸ್ವಾಮಿಗಳು ನಿರ್ಮಾಣ ಮಾಡಿದ್ದರು. ಆಶ್ರಮದಿಂದ ಒಂದು ಆಂಗ್ಲ ಮಾಸಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು.

ಮಾರ್ಗದರ್ಶನ

ಒಮ್ಮೆ ಆಶ್ರಮಕ್ಕೆ ಸೇರಿದ ಒಂದು ವಸ್ತು ಕಳವಾಯಿತು. ಅದನ್ನು ಸ್ವಾಮಿಗಳ ಗಮನಕ್ಕೆ ತಂದಾಗ ಅವರಿಗೆ ತಳಮಳವಾಗಲಿಲ್ಲ. ಒಂದು ವಸ್ತು ಕಳವಾಗಿ ಇನ್ನೊಬ್ಬರಿಗೆ ಸೇರಿದರೆ ಅದರಿಂದ ಯಾರಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ. ಅಂಗಿಯ ಒಂದು ಕಿಸೆಯಿಂದ ತೆಗೆದು ಇನ್ನೊಂದು ಕಿಸೆಗೆ ಇಟ್ಟಂತಾಗುತ್ತದೆಯಷ್ಟೆ. ಎಲ್ಲೆಡೆಯೂ ಆ ಶ್ರೀರಾಮನೇ ತುಂಬಿರುವಾಗ ನಷ್ಟವಾಯಿತೆಂಬ ವ್ಯಥೆ ಬರಲಾರದು ಎಂದು ಅವರು ನಿರ್ಲಿಪ್ತ ಭಾವದಿಂದ ಹೇಳಿದರು.

ಸಿರಿವಂತನೊಬ್ಬ ಸ್ವಾಮಿ ರಾಮದಾಸರ ಬಳಿಗೆ ಬಂದ. ಅವನಲ್ಲಿ ಅಪಾರವಾದ ದ್ರವ್ಯರಾಶಿ ಇತ್ತು. ಆದರೆ ಮಾನಸಿಕ ಶಾಂತಿ ಇರಲಿಲ್ಲ. ಮಕ್ಕಳೆಲ್ಲಾ ಉನ್ನತ ಉದ್ಯೋಗಗಳಲ್ಲಿ ಇದ್ದರು. ಆದರೂ ಹೃದಯಕ್ಕೆ ನೆಮ್ಮದಿ ಇರಲಿಲ್ಲ. ಅದರೊಂದಿಗೆ ತಾನು ದೇವರ ಮಹಾಭಕ್ತನೆಂದೂ ಆತ ಹೇಳಿಕೊಳ್ಳುತ್ತಿದ್ದಾನೆ. ಬೆಳಿಗ್ಗೆ ಲಲಿತಾ ಸಹಸ್ರನಾಮ ಪಾರಾಯಣ, ಬೃಂದಾವನ ಪ್ರದಕ್ಷಿಣೆ, ಮಧ್ಯಾಹ್ನ ಶಿವ ಸಹಸ್ರನಾಮ, ಸಂಧ್ಯಾಕಾಲ ದೇವಿ ಮಹಾತ್ಮೆ ಪಾರಾಯಣ ಎಲ್ಲವನ್ನೂ ಆತ ಮಾಡುತ್ತಿದ್ದನಂತೆ.

ಆದರೂ ಅವನು ಸುಖಿಯಾಗಿರಲಿಲ್ಲ.

ಮನಸ್ಸಿಗೆ ಶಾಂತಿಯನ್ನು ತಂದುಕೊಡಬೇಕೆಂದು ಅವನ ಬೇಡಿಕೆ. ಅವನ ಮಾತನ್ನು ಸ್ವಾಮಿಗಳು ಸಾವಧಾನದಿಂದ ಕೇಳಿದರು.

ಸಕಲ ಚರಾಚರಗಳಲ್ಲಿಯೂ ಭಗವಂತ ತುಂಬಿಕೊಂಡು ತಾಂಡವವಾಡುತ್ತಿದ್ದಾನೆ ಎಂದರು ಸ್ವಾಮಿಗಳು. ಎಲ್ಲರನ್ನೂ ಪ್ರೀತಿಸುವುದೇ ಭಗವಂತನ ನಿಷ್ಕಾಮ ಸೇವೆ. ತಬ್ಬಲಿ ಗಳಾದವರಿಗೆ ಆಶ್ರಯ ನೀಡು. ವಿದ್ಯೆಯಲ್ಲಿ ಆಸಕ್ತಿಯಿರುವವರಿಗೆ ಕಲಿಯಲು ಸಹಾಯ ಮಾಡು. ನಿನ್ನ ಮನೆಯಲ್ಲಿ ಸರಳವಾದ ಉದ್ಯೋಗಗಳನ್ನು ಕಲ್ಪಿಸಿಕೊಡು. ಇಂತಹ ಕಾರ್ಯದಲ್ಲಿ ಪ್ರೀತಿ ಬೆಳೆಸಿಕೊಂಡರೆ ಸುಖ ಸಿಗುತ್ತದೆ, ಶಾಂತಿ ಲಭಿಸುತ್ತದೆ ಎಂದರು ಅವರು.

ಅವನು ಅದೇ ದಾರಿಯಲ್ಲಿ ನಡೆದ. ಹಲವಾರು ಅನಾಥರಿಗೆ ಸಹಾಯ ನೀಡಿದ. ರಾಮನಾಮವನ್ನೆ ಧ್ಯಾನ ಮಾಡಿದ. ಆತ ಬಯಸುತ್ತಿದ್ದ ಸುಖಶಾಂತಿ ಅವನಿಗೆ ಸಿಕ್ಕಿತಂತೆ.

ಇದೇ ರೀತಿ ಸುಖಶಾಂತಿ ಸಿಗದೆ ತೊಳಲುತ್ತಿದ್ದ ಮಧುಮೇಹ ರೋಗಿಯೊಬ್ಬನಿಗೆ ಸ್ವಾಮಿಗಳು ಹೀಗೆ ಹೇಳಿದರಂತೆ.:

‘‘ನಿನಗೆ ತುಂಬಾ ಜಮೀನು ಇದೆಯಲ್ಲ. ಅಲ್ಲಿಗೆ ನೀನೇ ಹಾರೆ ಗುದ್ದಲಿ ತೆಗೆದುಕೊಂಡು ಹೋಗು. ದಿನಕ್ಕೆ ಒಂದರಂತೆ ಒಂದಾಳು ಎತ್ತರದ ಹೊಂಡ ತೆಗೆ. ಅದರಲ್ಲಿ ತೆಂಗಿನ ಗಿಡವೋ ಸಪೋಟಾ ಸಸಿಯೋ ಏನಾದರೊಂದನ್ನು ನೆಡು. ಅದಕ್ಕೆ ಗೊಬ್ಬರ ಹಾಕು, ನೀರೆರೆದು ಪೋಷಿಸು. ಗಿಡ ಬೆಳೆದು ದೊಡ್ಡದಾಗಿ ಹೂವುಕಾಯಿ ಬಿಡುವಾಗ ನಿನಗೊಂದು ಆತ್ಮಾನೂಭೂತಿ ಸಿಗುತ್ತದೆ. ಅದಕ್ಕಿಂತ ಹೆಚ್ಚಿನ ಸುಖ ಸಿಗಬೇಕಾದರೆ ನೀನು ಕೇವಲ ಅಲ್ಪನೆಂದು ಭಾವಿಸಿಕೊಂಡು ದೇವರ ಕಲ್ಯಾಣಗುಣಗಳನ್ನು ಸ್ಮರಣೆ ಮಾಡಿಕೊಂಡಿರು.’’

ಬಡ ತಂದೆಯೊಬ್ಬ ಸ್ವಾಮಿ ರಾಮದಾಸರ ಸನ್ನಿಧಿಗೆ ಬಂದು ತನ್ನ ಕಷ್ಟಗಳನ್ನು ನಿವೇದಿಸಿಕೊಂಡ.

ಅವನದೊಂದು ಗೋಳಿನ ಕತೆ. ಒಬ್ಬನೇ ಮಗ ಅವನಿಗೆ. ಬಾಲ್ಯದಲ್ಲೇ ತಾಯಿಯನ್ನು ಕಳಕೊಂಡ ಮಗನನ್ನು ತಂದೆಯೇ ಪ್ರೀತಿಯಿಂದ ಸಾಕಿ ದೊಡ್ಡವನನ್ನಾಗಿ ಮಾಡಿದ. ಉನ್ನತ ಶಿಕ್ಷಣವನ್ನು ಕೊಡಿಸಿದ. ಧಾರಾಳ ವರದಕ್ಷಿಣೆ ಸಿಗುವೆಡೆಯಿಂದ ಒಬ್ಬ ಹುಡುಗಿಯನ್ನು ತಂದು ಮಗನಿಗೆ ಮದುವೆ ಮಾಡಿಸಿದ.

ಮಗನಿಗೆ ಉದ್ಯೋಗವೂ ಸಿಕ್ಕಿತು.

ಆದರೆ ಈಗ-ಮಗನಿಗೆ ತಂದೆಯೆಂದರೆ ಆದರವೇ ಇರಲಿಲ್ಲ. ತಂದೆಯ ಬಳಿಗೇ ಆತ ಬರುತ್ತಿರಲಿಲ್ಲ.

ಮಗ ತನ್ನ ಬಳಿಗೆ ಬಂದು ತನಗೆ ಆಸರೆಯಾಗಬೇಕು, ತನ್ನನ್ನು ಪ್ರೀತಿಸಬೇಕೆಂಬ ಮಹದಾಶೆ ಯಾವ ತಂದೆಗೆ ತಾನೇ ಇರುವುದಿಲ್ಲ? ಅದಕ್ಕಾಗಿ ‘ಏನಾದರೂ ಮಾಡುವಂತೆ’  ಆ ಬಡತಂದೆ ಸ್ವಾಮಿಗಳಲ್ಲಿ ಯಾಚಿಸಿದ.

ಸ್ವಾಮಿಗಳು ನಕ್ಕರು. ‘ಪ್ರೀತಿ ಎಂದರೆ ಅದು ಸಹಜವಾಗಿ ಹರಿಯುವ ನೀರಿನಂತೆ. ಒಂದು ಹಳ್ಳದಲ್ಲಿ ಮೇಲಿನಿಂದ ಕೆಳಗೆ ಹರಿಯುತ್ತಿರುವ ನೀರನ್ನು ಕೆಳಗಿನಿಂದ ಮೇಲೆ ಬಲವಂತವಾಗಿ ದೂಡಲು ಸಾಧ್ಯವಿದೆಯೆ? ಅದೇ ರೀತಿ ಪ್ರೀತಿಯ ಸೆಲೆ ಸಹಜವಾಗಿ ಹೃದಯದಲ್ಲಿ ಉಕ್ಕಬೇಕು. ಸತತ ಭಗವನ್ನಾಮ ಜಪದಿಂದ ಮನಸ್ಸನ್ನು ಶಾಂತಗೊಳಿಸಿಕೋ’ ಎಂದು ಉಪದೇಶ ನೀಡಿದರು.

ಮೂಲ ಶಿಕ್ಷಣ ತತ್ವ

ಸ್ವಾಮಿಗಳು ಕೇವಲ ಮಂತ್ರಧ್ಯಾನವೊಂದಕ್ಕೇ ಪ್ರಾಮುಖ್ಯತೆ ಕೊಟ್ಟಿರಲಿಲ್ಲ. ದೇಶ ಸಂಪದ್ಭರಿತವಾಗ ಬೇಕಾದರೆ ಹಳ್ಳಿಗಳ ಉದ್ಧಾರವಾಗಬೇಕು ಎಂಬ ಗಾಂಧೀಜಿಯ ತತ್ವವನ್ನು ಅವರು ತುಂಬ ಮೆಚ್ಚಿ ಕೊಂಡಿದ್ದರು. ಅವರು ಹಲವಾರು ಜನರಿಗೆ ಶಿಕ್ಷಣವನ್ನೂ ಉದ್ಯೋಗವನ್ನೂ ಕೊಟ್ಟರಲ್ಲದೆ ಸ್ವಂತ ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ಧನಸಹಾಯ ಮಾಡಿದರು. ಅಂಥವರ ಯೋಗಕ್ಷೇಮ ಚಿಂತನೆಯೇ ವಿದ್ಯಾವಂತರಲ್ಲಿ, ಧನವಂತರಲ್ಲಿ ಜಾಗೃತವಾಗಿರಬೇಕೆಂದು ಒತ್ತಿ ಹೇಳಿದರು. ಗಾಂಧೀಜಿಯ ಮೂಲಶಿಕ್ಷಣ ತತ್ವವನ್ನು ಅವರು ಆಳವಾಗಿ ಅರ್ಥ ಮಾಡಿಕೊಂಡಿದ್ದರು. ಹೊಟ್ಟೆ ತುಂಬಿಸಲು ಸಹಾಯ ಮಾಡದ ವಿದ್ಯೆಯನ್ನು ವಿದ್ಯಾರ್ಥಿಗಳು ಗಳಿಸಿದರೆ ಅದು ನಿರುಪಯುಕ್ತ ಎಂಬ ದೃಷ್ಟಿ ಅವರದಾಗಿತ್ತು. ಹಾಗಾಗಿ ಅವರ ಶಿಕ್ಷಣ ಶಾಲೆಗಳಲ್ಲಿ ವೃತ್ತಿ ಶಿಕ್ಷಣಕ್ಕೆ ಪ್ರಾಧಾನ್ಯ ನೀಡಿದ್ದರು. ಅದರಿಂದ ಸ್ವಾಮಿಗಳ ಆಶ್ರಮಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿತ್ತು. ವಿದ್ಯಾಭ್ಯಾಸ ದೊಂದಿಗೇ ನುರಿತ ಶಿಕ್ಷಕರಿಂದ ಉದ್ಯೋಗಗಳಲ್ಲಿ ತರಬೇತಿ ಸಿಗುತ್ತಿತ್ತು.

ಸ್ವಾಮಿಗಳ ಶಾಲೆಯಿಂದ ಹೊರಬರುವಾಗ ವಿದ್ಯಾರ್ಥಿಗೆ ಉದ್ಯೋಗದ ಬೇಟೆ ಮಾಡುವ ಅಗತ್ಯವಿರಲಿಲ್ಲ. ಸ್ವಂತ ಪರಿಶ್ರಮದಿಂದ ಬದುಕುವಂಥ ಸಾಮರ್ಥ್ಯ ಅವನ ನರನಾಡಿಗಳಲ್ಲಿ ಅದ್ಭುತವಾಗಿ ಹರಿಯುತ್ತಿತ್ತು.

ತನಗೆ ಯಾರಿಂದ ಯಾವ ವಸ್ತು ಬಂದರೂ ಸ್ವಾಮಿಗಳು ಅದರ ಆವಶ್ಯಕತೆ ಯಾರಿಗೆ ಇದೆ ಎಂದು ಪರೀಕ್ಷಿಸುತ್ತಿದ್ದರು. ಅಂಥವರಿಗೆ ಅದನ್ನು ಕೊಟ್ಟು ಬಿಡುತ್ತಿದ್ದರು. ಅವರಿಗೆ ಜಾತಿ ಮತಗಳ ಭೇದವಿರಲಿಲ್ಲ. ಎಲ್ಲರೊಂದಿಗೆ ಅವರು ಬಾಲಕನಂತೆ ಓಡಾಡುತ್ತಿದ್ದರು.

ತಮ್ಮ ಕಾಲಾನಂತರವೂ ತಾವು ಮಾಡಿದ ವ್ಯವಸ್ಥೆಗಳು ಸಮರ್ಪಕವಾಗಿ ನಡೆಯಬೇಕು. ಈ ಉದ್ದೇಶದಿಂದ ಅವರು ತಮ್ಮ ಉದ್ಯೋಗಶಾಲೆಯನ್ನು ನೀಲೇಶ್ವರದ ಸಹಾಯಕ ಸಂಘಕ್ಕೆ ಉಚಿತವಾಗಿ ವಹಿಸಿಕೊಟ್ಟರು.

ಹಲವಾರು ಪಾಪಗಳನ್ನು ಆಚರಿಸಿ, ಪ್ರಾಯಶ್ಚಿತ್ತಕ್ಕಾಗಿ ತನ್ನ ಬಳಿಗೆ ಬಂದವರಿಗೆ ಸ್ವಾಮಿ ರಾಮದಾಸರು ಹೇಳುತ್ತಿದ್ದ ಭಗವದ್ಗೀತೆಯ ಅಮರವಾಣಿ:

ಸರ್ವಧರ್ಮಾನ್ ಪರಿತ್ಯಜ್ಯ
ಮಾಮೇಕಂ ಶರಣಂ ವ್ರಜ
ಅಹಂ ತ್ವಾ ಸರ್ವ ಪಾಪೇಭ್ಯೊ
ಮೋಕ್ಷಯಿಷ್ಯಾಮಿ ಮಾ ಶುಚಃ

(ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನಗೊಬ್ಬನಿಗೇ ಶರಣು ಬಾ. ನಾನು ನಿನ್ನನ್ನು ಎಲ್ಲಾ ಪಾತಕಗಳಿಂದಲೂ ವಿಮುಕ್ತಗೊಳಿಸಿ ಮೋಕ್ಷವನ್ನು ಅನುಗ್ರಹಿಸುತ್ತೇನೆ).

ಮಹಾ ಸಮಾಧಿ

ಸ್ವಾಮಿ ರಾಮದಾಸರು ಶ್ರಾವಣ ಶುಕ್ಲ ಪಂಚಮಿ, ಗುರುವಾರ, ೧೯೬೩ ರ ಜುಲೈ ೨೫ ರಂದು ಸಂಜೆ ಮಹಾ ಸಮಾಧಿಯನ್ನೆ ದಿದರು.

‘ಹರಿ ಹರಿ’  ‘ಹರೇ ರಾಮ’ ಎಂದು ಕೊನೆಯವರೆಗೂ ಸ್ವಾಮಿಗಳು ಉಚ್ಚಸ್ವರದಲ್ಲಿ ಸ್ಮರಣೆ ಮಾಡುತ್ತಿದ್ದರು.

ಅವರ ಅಂತಿಮದರ್ಶನಕ್ಕೆ ದೂರದೂರದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ರಾಮನಾಮ ಘೋಷ ಮಾಡುತ್ತಾ ಸ್ವಾಮಿಗಳ ಪವಿತ್ರ ಕಳೇಬರವನ್ನು ಸುಗಂಧದ್ರವ್ಯಗಳಿಂದ ಕೂಡಿದ ಚಿತೆಯಲ್ಲಿಟ್ಟು ಅಗ್ನಿಸಂಸ್ಕಾರ ಮಾಡಿದರು.

ಜಗತ್ತಿಗೆ ಸಾಕ್ಷಾತ್ಕಾರವೀಯಲು ಬಂದ ಪುಣ್ಯಜೀವ ಶಾಶ್ವತ ಸ್ವರೂಪದಲ್ಲಿ ಲಯವಾಯಿತು.