೧೯೨೭ನೆಯ ಡಿಸೆಂಬರ್ ೧೮ನೆಯ ದಿನಾಂಕ.

ಗೋರಖಪುರದ ಸೆರೆಮನೆ.

ಹೊರಬಾಗಿಲಿನಲ್ಲಿ ಮಧ್ಯವಯಸ್ಕಳಾದ ತೇಜಸ್ವಿಯಾದ ಹೆಂಗಸೊಬ್ಬಳು ಕಾಯುತ್ತಿದ್ದಾಳೆ. ಕಾತರ ಆಕೆಯ ಮುಖದಲ್ಲಿ ಮನೆಮಾಡಿದೆ. ತನ್ನನ್ನು ಯಾವಾಗ ಒಳಕ್ಕೆ ಕರೆಯುವರೋ ಎಂದು ಆಕೆಯ ಕಾತರ.

ಅಷ್ಟು ಹೊತ್ತಿಗೆ ಆಕೆಯ ಗಂಡ ಅಲ್ಲಿಗೆ ಬಂದ. ಆತನಿಗೆ ಆಶ್ಚರ್ಯ-ತನಗಿಂತ ಮೊದಲೇ ಹೆಂಡತಿ ಹೇಗೆ ಬಂದಳು ಎಂದು. ಆತನೂ ಕರೆಗಾಗಿ ಕಾದು ಕುಳಿತ.

ಯುವಕನೊಬ್ಬ ಬಂದ. ಅವನು ಅವರ ನೆಂಟನಲ್ಲ. ಅವರಿಬ್ಬರನ್ನೂ ಸೆರೆಮನೆಯೊಳಕ್ಕೆ ಬಿಡುತ್ತಾರೆ, ಆದರೆ ತಾನು ಹೇಗೆ ಒಳಕ್ಕೆ ಹೋಗುವುದು? ಅದು ಅವನ ಯೋಚನೆ.

ಅಧಿಕಾರಿಗಳು ಗಂಡ-ಹೆಂಡತಿಯನ್ನು ಒಳಕ್ಕೆ ಕರೆದರು. ಯುವಕನೂ ಅವರ ಹಿಂದೆ ಹೆಜ್ಜೆ ಹಾಕಿದ. ಕಾವಲುಗಾರ ಯುವಕನನ್ನು ತಡೆದು, “ಯಾರು ನೀನು?” ಎಂದು ಗಡುಸಿನಿಂದ ಕೇಳಿದ.

“ನನ್ನ ತಂಗಿಯ ಮಗ, ಬಿಡಪ್ಪಾ” ಎಂದಳು ಆಕೆ. ಕಾವಲುಗಾರ ಕೈತೆಗೆದ.

ಮೂವರೂ ಸೆರೆಮನೆಯ ಒಳಹೊಕ್ಕರು-ಮರುದಿನ ಸಾವನ್ನೆದುರಿಸಲು ಸಿದ್ಧನಾಗಿದ್ದ ಸ್ವಾತಂತ್ರ್ಯ ವೀರನೊಬ್ಬನನ್ನು ಕಾಣಲು.

ಧೀರ ಸ್ವಾತಂತ್ರ್ಯ  ಯೋಧ

ಸಂಕೋಲೆಗಳಿಂದ ಅಲಂಕೃತನಾಗಿ ಬಂದ ಸ್ವಾತಂತ್ರ್ಯ ವೀರ. ತನ್ನ ಜೀವನದಲ್ಲಿ ತಾಯಿಯನ್ನು ಕಾಣುವುದು, “ಅಮ್ಮಾ” ಎಂದು ಕರೆಯುವುದು, ಅದೇ ಕೊನೆಯ ಸಲ. ಅವನಿಗೆ ಆ ಭಾವನೆ ಹೊಳೆದೊಡನೆ ದುಃಖ ಒತ್ತರಿಸಿ ಬಂತು. ಮಾತನಾಡಲಾರದೆ ನಿಂತ, ಕೆನ್ನೆಗಳ ಮೇಲೆ ಹನಿಗಳು ಉದುರಿದವು.

ದೃಢ ಧ್ವನಿಯಿಂದ ಕೇಳಿದಳು ತಾಯಿ, “ಮಗೂ, ನನ್ನ ಮಗ ದೊಡ್ಡ ಶೂರನೆಂದು ನಾನು ಎಣಿಸಿದ್ದೆ. ಅವನ ಹೆಸರು ಕೇಳಿದರೇನೇ ಬ್ರಿಟಿಷ್‌ಸರ್ಕಾರ ನಡುಗುತ್ತದೆ ಎಂದು ಭಾವಿಸಿದ್ದೆ. ಅವನು ಮರಣಕ್ಕೆ ಅಂಜುವನೆಂದು ನಾನು ಭಾವಿಸಿರಲಿಲ್ಲ. ಅಳುತ್ತಾ ಸಾಯುವುದಿದ್ದರೆ ಇಂತಹ ಕಾರ್ಯಗಳಿಗೆ ಏಕಪ್ಪಾ ಕೈ ಹಾಕಿದೆ?”

ಬಳಿ ಇದ್ದ ಜೈಲಿನ ಅಧಿಕಾರಿಗಳು ಆ ತಾಯಿಯ ಸ್ಥೈರ್ಯಕ್ಕೆ ಅವಕ್ಕಾದರು. ವೀರಪುತ್ರ ಹೇಳಿದ : “ಅಮ್ಮಾ, ಇದು ಸಾವಿಗೆ ಹೆದರಿ ಹರಿಸುತ್ತಿರುವ ಕಣ್ಣೀರಲ್ಲ. ವೀರಳಾದ ತಾಯಿಯ ಮೇಲಿನ ಪ್ರೇಮದಿಂದ ಬರುತ್ತಿರುವ ಸಂತೋಷದ ಕಂಬನಿ.”

ಆ ವೀರಮಾತೆಯ ವೀರಪುತ್ರನೇ ಪಂಡಿತ ರಾಮಪ್ರಸಾದ್‌ಬಿಸ್ಮಿಲ್‌. ಪ್ರಸಿದ್ಧವಾದ ಕಾಕೋರಿ ರೈಲು ಡಕಾಯಿತಿ ಪ್ರಕರಣದ ಪ್ರಮುಖ ವ್ಯಕ್ತಿ.

ಆ ಅಂತಿಮ ಭೇಟಿ ಮುಗಿಯಿತು.

ಮರುದಿನ ಬೆಳಗ್ಗೆ ರಾಮಪ್ರಸಾದ್‌ಮುಂದಾಗಿ ಎದ್ದು ಸ್ನಾನ, ಸಂಧ್ಯಾವಂದನಾದಿಗಳನ್ನು ಮಾಡಿದ. ತಾಯಿಗೆ ಕೊನೆಯ ಪತ್ರ ಬರೆದು ಮುಗಿಸಿದ. ಸಮಾಧಾನಚಿತ್ತನಾಗಿ ಮರಣಕ್ಕಾಗಿ ಕಾಯುತ್ತ ಕುಳಿತ.

ಸೆರೆಮನೆಯ ಅಧಿಕಾರಿಗಳು ಬಂದರು. ಅವನ ಸಂಕೋಲೆಯನ್ನು ತೆಗೆದು ಸೆರೆಮನೆಯ ಕೊಠಡಿಯಿಂದ ಸಾವಿನ-ಕಡೆಗೆ ಕರೆದೊಯ್ದರು.

ಅವನ ನಿಶ್ಚಿಂತ ಭಾವ, ಧೀರ ನಡಿಗೆ ಕಂಡು ಅವರೇ ಬೆರಗಾದರು. ನೇಣುಗಂಬದತ್ತ ನಡೆಯುತ್ತಾ, “ವಂದೇ ಮಾತರಂ” “ಭಾರತ ಮಾತಾ ಕೀ ಜೈ” ಎಂದು ಜಯಕಾರ ಮಾಡಿದ. “ಬ್ರಿಟಿಷ್‌ಸಾಮ್ರಾಜ್ಯ ನಾಶವಾಗಲಿ” ಎಂದು ಘೋಷಿಸಿದ. ಅನಂತರ ಉಚ್ಚ ಸ್ವರದಲ್ಲಿ “ವಿಶ್ವಾನಿ ದೇವ ಸವಿತಃ ದುರಿತಾನಿ….” ಮೊದಲಾದ ಪ್ರಾರ್ಥನಾ ಮಂತ್ರಗಳನ್ನು ಪಠಿಸುತ್ತಾ ಮರಣವನ್ನಪ್ಪಿದ.

ಅವನು ನೇಣುಗಂಬವನ್ನೇರುತ್ತಿರುವಾಗ ಸೆರೆಮನೆಯ ಸುತ್ತಲೂ ಬಲವಾದ ಕಾವಲಿತ್ತು. ಅವನ ಪ್ರಾಣ ಹೋದ ನಂತರ ಅಧಿಕಾರಿಗಳು ದೇಹವನ್ನು ಹೊರಕ್ಕೆ ತಂದರು. ತಂದೆ ತಾಯಿ ಮಾತ್ರವಲ್ಲ, ನೂರಾರು ಜನತೆ ಭಾರತದ ಆ ವೀರಪುತ್ರನ ಶವಕ್ಕೆ ವಿರೋಚಿತವಾಗಿ ಶೃಂಗಾರ ಮಾಡಿ ಹೂಮಳೆಗೆರೆಯುತ್ತಾ ಮೆರವಣಿಗೆ ಮಾಡಿ ಅಂತ್ಯಕ್ರಿಯೆಗಳನ್ನು ನಡೆಸಿತು.

ನಾಡು ಸ್ವತಂತ್ರವಾಗುವ ಕನಸನ್ನು ಕಂಡು, ಆ ಕನಸನ್ನು ನನಸು ಮಾಡಲು ಆತ್ಮಾರ್ಪಣೆ ಮಾಡಿದ ಹುತಾತ್ಮರ ಸಾಲಿನಲ್ಲಿ ಸೇರಿಹೋದ ರಾಮಪ್ರಸಾದ್‌ಬಿಸ್ಮಿಲ್‌.

ಬಾಲ್ಯ

ರಾಮಪ್ರಸಾದ್‌ 1897ರಲ್ಲಿ ಉತ್ತರ ಪ್ರದೇಶದ ಷಜಹಾನ್‌ಪುರದಲ್ಲಿ ಜನಿಸಿದ. ಅವನ ಪೂರ್ವಜರು ಗ್ವಾಲಿಯರ್ ರಾಜ್ಯದ ತೋಮರೇಘಾರ್ ಪ್ರದೇಶದವರು. ಚಂಬಲ್‌ನದಿಯ ತೀರದಲ್ಲಿ ಬ್ರಿಟಿಷ್‌ಅಧಿಪತ್ಯದ ಪ್ರದೇಶಕ್ಕೆ ಹೊಂದಿಕೊಂಡಿತ್ತು ಅವರ ಗ್ರಾಮ. ಚಂಬಲ್‌ಕಣಿವೆಯ ಜನ ಕಷ್ಟಸಹಿಷ್ಣುಗಳು. ವೀರರು. ತಲ ತಲಾಂತರಗಳಿಂದ ಹಲವು ರಾಜ್ಯ ಸಾಮ್ರಾಜ್ಯಗಳು ಅವರನ್ನು ಅಡಗಿಸಿ ಆಳಲು ಯತ್ನಿಸಿದ್ದವು. ಆದರೆ ಯಶಸ್ಸು ಕಂಡಿರಲಿಲ್ಲ.

ರಾಮಪ್ರಸಾದ ತಂದೆ ಮುರಳೀಧರ ಅಲ್ಪಸ್ವಲ್ಪ ವಿದ್ಯಾರ್ಜನೆ ಮಾಡಿ ಷಜಹಾನ್‌ಪುರದ ನಗರಸಭೆಯಲ್ಲಿ ಕೆಲಸದಲ್ಲಿದ್ದರು. ಆ ನೌಕರಿಯ ಜೀವನದಿಂದ ಬೇಸರಗೊಂಡು ಸ್ವತಂತ್ರ ಜೀವನ ನಡೆಸತೊಡಗಿದರು. ಲೇವಾದೇವಿ, ಗಾಡಿಗಳನ್ನು ಬಾಡಿಗೆಗೆ ಬಿಡುವುದು ಆತನ ಜೀವನದ ದಾರಿಯಾಯಿತು. ಅವನ ಮೊದಲನೆಯ ಮಗ ಹುಟ್ಟಿ ಕೆಲವೇ ದಿನಗಳಲ್ಲಿ ತೀರಿಕೊಂಡನು. ಅವನ ಎರಡನೆಯ ಮಗುವೇ ರಾಮಪ್ರಸಾದ್‌.

ಮಗುವಿಗೆ ಹುಟ್ಟಿದ ಕೆಲವು ದಿನಗಳಲ್ಲಿಯೇ ಮೊದಲ ಮಗುವಿಗೆ ತೋರಿಬಂದಿದ್ದ ಲಕ್ಷಣಗಳೇ ತೋರಿಬಂದವು. ಅಜ್ಜಿ ಬಹಳ ಕಳವಳದಿಂದ ಹಲವಾರು ಯಂತ್ರಗಳು, ಮಂತ್ರ ಕವಚಗಳನ್ನು ಮಾಡಿಸಿ ಕಟ್ಟಿದಳು. ಅಲ್ಲದೆ ಯಾರು ಏನು ಹೇಳಿದರೂ ಮಾಡಿದಳು. ಅಂತೂ ಮಗು ಆರೋಗ್ಯ ಹೊಂದಿತು.

ಮುದ್ದಾಗಿ ಬೆಳೆದ ರಾಮಪ್ರಸಾದನಿಗೆ ಏಳನೆಯ ವರ್ಷದಲ್ಲಿ ಮುರಳೀಧರ ತಾನೇ ಹಿಂದಿಯನ್ನು ಕಲಿಸತೊಡಗಿದ. ಉರ್ದುವನ್ನು ಕಲಿಯಲು ಮೌಲ್ವಿಯೊಬ್ಬನಲ್ಲಿಗೆ ಕಳುಹಿಸಿದ. ಅನಂತರ ಶಾಲೆಗೆ ಹಾಕಿದ.

ಉರ್ದು ನಾಲ್ಕನೆಯ ದರ್ಜೆಯನ್ನು ದಾಟುವ ವೇಳೆಗೆ ರಾಮಪ್ರಸಾದ್‌ಹದಿನಾಲ್ಕರ ಹರೆಯದವನಾದ. ಆ ವೇಳೆಗೆ ಅವನಲ್ಲಿ ಉರ್ದು ಕಾದಂಬರಿಗಳನ್ನು ಓದುವ ಗೀಳು ಬೇರು ಬಿಟ್ಟಿತ್ತು. ಕಾದಂಬರಿಗಳನ್ನು ಕೊಳ್ಳುವುದಕ್ಕೆ ದುಡ್ಡು ಬೇಕಲ್ಲವೇ? ಕಾದಂಬರಿಗೆ ಎಂದರೆ ತಂದೆ ಕೊಡುವುದಿಲ್ಲ. ತಂದೆಯ ಸಂದೂಕದಿಂದ ಹಣ ಕದಿಯುವ ಸುಲಭ ದಾರಿಯನ್ನು ಕಂಡುಕೊಂಡಿದ್ದ. ಸಿಗರೇಟ್‌ಚಟ, ಆಗಾಗ ಭಂಗಿ ಸೇದುವುದೂ ಮೈಗೂಡಿಕೊಂಡಿದ್ದವು. ಪರಿಣಾಮವಾಗಿ ಐದನೆಯ ದರ್ಜೆಯಲ್ಲಿ ಎರಡು ಬಾರಿ ಅನುತ್ತೀರ್ಣನಾದ.

ಈ ವೇಳೆಗೆ ಅವನ ಕಳ್ಳತನದ ಹವ್ಯಾಸ ಹೇಗೋ ತಂದೆಗೆ ತಿಳಿಯಿತು. ತಂದೆ ಸಂದೂಕದ ಬೀಗ ಬದಲಾಯಿತು. ರಾಮಪ್ರಸಾದ್‌ಉರ್ದು ಶಾಲೆಯನ್ನು ಬಿಟ್ಟು ಇಂಗ್ಲಿಷ್‌ಶಾಲೆಗೆ ಸೇರುವ ಇಚ್ಛೆ ತೋರಿದ. ತಂದೆಗೆ ಅದು ಒಮ್ಮೆಗೆ ಒಪ್ಪಿಗೆಯಾಗಲಿಲ್ಲ. ಆದರೆ ತಾಯಿಯ ಒತ್ತಾಸೆಯಿಂದಾಗಿ ಇಂಗ್ಲಿಷ್‌ಶಾಲೆಗೆ ಸೇರಲು ಸಾಧ್ಯವಾಯಿತು.

ಹೊಸ ಹಾದಿಯಲ್ಲಿ

ಅವನ ಮನೆಯ ಬದಿಯಲ್ಲಿದ್ದ ದೇವ ಮಂದಿರಕ್ಕೆ ಒಬ್ಬಾತ ಹೊಸ ಪೂಜಾರಿ ಬಂದ. ಆತನಿಗೂ ರಾಮಪ್ರಸಾದನಿಗೂ ಸ್ನೇಹ ಬೆಳೆಯಿತು. ಆತನ ಸತ್ಪ್ರಭಾವದಿಂದಾಗಿ ರಾಮಪ್ರಸಾದ್‌ತನ್ನ ದುಶ್ಚಟಗಳಿಂದ ದೂರವಾಗಡತೊಡಗಿದ. ಪೂಜಾಪಾಠವನ್ನು ಕಲಿತ. ಶಾಲೆಯಲ್ಲಿ ಸುಶೀಲಚಂದ್ರ ಸೇನನೆಂಬ ಬಾಲಕನ ಸ್ನೇಹ ಕುದುರಿ ಅವನ ಸಿಗರೇಟ್‌ಚಟವೂ ಮರೆಯಾಯಿತು.

ಯುವಕ ರಾಮಪ್ರಸಾದ್‌ಪೂಜೆ ಮಾಡುವುದನ್ನು ಕಂಡು ಹರ್ಷಗೊಂಡ ಮುನ್ಷೀ ಇಂದ್ರಿಜೀತ್‌ಎಂಬಾತ ಆತನಿಗೆ ಸಂಧ್ಯಾವಂದನೆಯನ್ನು ಹೇಳಿಕೊಟ್ಟ. ಆರ್ಯ ಸಮಾಜವನ್ನು ಕುರಿತು ಬಹಳಷ್ಟು ಹೇಳಿದ. ರಾಮಪ್ರಸಾದ್‌ಹಿರಿಯ ತತ್ವಜ್ಞಾನಿ ದಯಾನಂದರ “ಸತ್ಯಾರ್ಥ ಪ್ರಕಾಶ”ವನ್ನು ಓದಿದ. ಆ ಗ್ರಂಥ ಅವನ ಮೇಲೆ ಅಪಾರ ಪ್ರಭಾವ ಬೀರಿತು. ಅವನ ಧೀರ ಬಾಳಿಗೆ ದಾರಿ ತೋರಿಸಿತು. ಬ್ರಹ್ಮಚರ್ಯದ ಮಹತ್ವವನ್ನು ಅರಿತ ರಾಮಪ್ರಸಾದ್‌ಮಾತಿನಲ್ಲಿ, ಮನಸ್ಸಿನಲ್ಲಿ, ಆಚರಣೆಯಲ್ಲಿ ಬ್ರಹ್ಮಚರ್ಯ ವ್ರತವನ್ನು ಪಾಲಿಸತೊಡಗಿದ. ರಾತ್ರಿಯ ಊಟ ನಿಲ್ಲಿಸಿದ. ಉಪ್ಪು, ಹುಳಿ, ಖಾರವನ್ನು ತ್ಯಜಿಸಿದ. ಬ್ರಹ್ಮಚರ್ಯ ವ್ರತಪಾಲನೆ, ವ್ಯಾಯಾಮದಿಂದಾಗಿ ಅವನ ಮುಖ ತೇಜೋಪುಂಜವಾಯಿತು ; ದೇಹ ಉಕ್ಕಿನ ಉಂಡೆಯಾಯಿತು.

ಗುರು ಸೋಮದೇವಜೀ

ಆರ್ಯ ಸಮಾಜದ ತತ್ವಗಳಿಂದ ಪ್ರಭಾವಿತನಾದ ರಾಮಪ್ರಸಾದನಿಗೂ, ಅವನ ತಂದ ಮುರಳೀಧರನಿಗೂ ವಾದವಿವಾದಗಳೆದ್ದವು. ಕೋಪಗೊಂಡ ತಂದೆ ಮಗನನ್ನು ಉಟ್ಟ ಬಟ್ಟೆಯಲ್ಲಿ ಹೊರಕ್ಕೆ ಅಟ್ಟಿದ. ಎರಡು ದಿನಗಳ ಕಾಲ ಅರಣ್ಯದಲ್ಲಿ ಅಲೆದು ರಾಮಪ್ರಸಾದ್‌ಊರಿಗೆ ಹಿಂತಿರುಗಿ ಬಂದ. ಆರ್ಯ ಸಮಾಜದ ಸಭೆಯೊಂದರಲ್ಲಿ ಪ್ರವಚನ ಕೇಳುತ್ತಾ ನಿಂತಿದ್ದ. ಆ ಹೊತ್ತಿಗೆ ತಂದೆ ಕಳುಹಿಸಿದ್ದ ಇಬ್ಬರು ಅವನನ್ನು ಹಿಡಿದುಕೊಂಡು ಅವನು ಓದುತ್ತಿದ್ದ ಮಿಷನ್‌ಶಾಲೆಯ ಮುಖ್ಯೋಪಾಧ್ಯಾಯರ ಹತ್ತಿರ ಎಳೆದೊಯ್ದರು. ಆ ಕ್ರೈಸ್ತ ಸಜ್ಜನನು ತಂದೆಗೂ ಮಗನಿಗೂ ಬುದ್ಧಿ ಹೇಳಿ ಕಳುಹಿಸಿದ. ಹೊಡೆತ ಬಡಿತಗಳಿಂದ ಮಗನನ್ನು ತಿದ್ದಲು ಸಾಧ್ಯವಿಲ್ಲವೆಂದು ಮುರಳೀಧರನಿಗೆ ಮನವರಿಕೆಯಾಯಿತು.

ಆರ್ಯ ಸಮಾಜದ ಅನುಯಾಯಿಗಳಾಗಿದ್ದ ಯುವಕರೆಲ್ಲಾ ಒಂದಾಗಿ ಆರ್ಯಕುಮಾರ ಸಭೆ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಸಭೆಗಳನ್ನು, ಮೆರವಣಿಗೆಗಳನ್ನು ನಡೆಸಲು ಪ್ರಾರಂಭಿಸಿದರು. ಪೊಲೀಸರಿಗೆ ಎನ್ನಿಸಿತು – ಇದರಿಂದ ಹಿಂದೂ-ಮುಸ್ಲಿಂ ಗಲಭೆಗಳು ಆಗಬಹುದು ಎಂದು. ಸರಿ, ಸಭೆಗಳೂ ಮೆರವಣಿಗೆಗಳೂ ನಡೆಯಕೂಡದು ಎಂದು ಸರ್ಕಾರ ಆಜ್ಞೆ ಹೊರಡಿಸಿತು. ಆರ್ಯ ಸಮಾಜದ ಹಿರಿಯರಿಗೂ ಈ ಯುವಕರ ವಿಷಯ ಅಸಮಾಧಾನವಾಯಿತು. ಕುಮಾರ ಸಭೆಯನ್ನು ತಮ್ಮ ಮಂದಿರದಿಂದ ಹೊರದೂಡಿದರು. ಕೆಲವು ತಿಂಗಳುಗಳ ಕಾಲ ಹಾಗೂ ಹೀಗೂ ಕಾರ್ಯನಿರತವಾಗಿದ್ದು ಕುಮಾರ ಸಭೆ ಮಂಗಳ ಹಾಡಿತು. ಆದರೆ ಆ ಕೆಲವು ತಿಂಗಳುಗಳ ಉತ್ತಮ ಕಾರ್ಯದಿಂದ ಷಜಹಾನ್‌ಪುರದ ಆರ್ಯಕುಮಾರ ಸಭೆ ಒಳ್ಳೆಯ ಹೆಸರು ಗಳಿಸಿತು.

ಆ ವೇಳೆಗೆ ಆರ್ಯ ಸಮಾಜದ ಪ್ರಮುಖರಲ್ಲೊಬ್ಬರಾಗಿದ್ದ ಸ್ವಾಮಿ ಸೋಮದೇವಜೀ ಅವರು ತಮ್ಮ ಆರೋಗ್ಯ ಸುಧಾರಣೆಗಾಗಿ ಷಾಜಹಾನ್‌ಪುರಕ್ಕೆ ಬಂದು ಅಲ್ಲಿಯೇ ನಿಂತರು. ಅವರು ರಕ್ತಸ್ರಾವದಿಂದ ಬಹಳ ನಿಶ್ಯಕ್ತರಾಗಿದ್ದರು. ಯುವಕ ರಾಮಪ್ರಸಾದ್‌ಏಕಚಿತ್ತದಿಂದ ಅವರ ಸೇವೆ ಶುಶ್ರೂಷೆಗಳಲ್ಲಿ ನಿರತನಾದ.

ದೇಶಭಕ್ತರೂ, ವಿದ್ವಾಂಸರೂ, ಯೋಗಸಿದ್ಧರೂ ಆಗಿದ್ದ ಸ್ವಾಮಿ ಸೋಮದೇವಜೀ ಅವರು ಧಾರ್ಮಿಕ ಮತ್ತು ರಾಜಕೀಯ ವಿಷಯಗಳಲ್ಲಿ ರಾಮಪ್ರಸಾದನಿಗೆ ಬಹಳ ಉಪದೇಶ ನೀಡಿದರು. ಉತ್ತಮ ಗ್ರಂಥಗಳನ್ನು ಓದಲು ಸೂಚಿಸಿದರು. ರಾಮಪ್ರಸಾದನ ಧಾರ್ಮಿಕ ಹಾಗೂ ರಾಜಕೀಯ ಅಭಿಪ್ರಾಯಗಳು ಸ್ಪಷ್ಟಗೊಂಡವು.

1916ರಲ್ಲಿ ಲಾಹೋರಿನ ಪಿತೂರಿ ಮೊಕದ್ದಮೆಯಲ್ಲಿ ಭಾಯಿ ಪರಮಾನಂದಜೀ ಅವರಿಗೆ ಮರಣದಂಡನೆ ವಿಧಿಸಲಾಯಿತು. ಅವರು “ತವಾರೀಖ್‌ಹಿಂದ್‌” ಎಂಬ ಪುಸ್ತಕವನ್ನು ಬರೆದಿದ್ದರು. ರಾಮಪ್ರಸಾದ್‌ಆ ಪುಸ್ತಕವನ್ನು ಓದಿದ, ಬಹಳ ಮೆಚ್ಚಿಕೊಂಡ, ಪರಮಾನಂದಜೀ ಅವರಲ್ಲಿ ರಾಮಪ್ರಸಾದನಿಗೆ ಬಹಳ ಗೌರವ ಉಂಟಾಯಿತು. ಅವರಿಗೆ ಮರಣದಂಡನೆಯಾಯಿತು ಎಂಬ ಸುದ್ದಿ ಕೇಳಿ ರಾಮ ಪ್ರಸಾದನ ರಕ್ತ ಕುದಿಯಿತು. ಬ್ರಿಟಿಷ್‌ಸರ್ಕಾರ ನಡೆಸಿದ್ದ ಆ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಕೈಗೊಂಡ. ತನ್ನ ಪ್ರತಿಜ್ಞೆಯನ್ನು ಕುರಿತು ಗುರು ಸೋಮದೇವಜೀ ಅವರಲ್ಲಿ ಪ್ರಸ್ತಾಪ ಮಾಡಿದಾಗ ಅವರು, “ಪ್ರತಿಜ್ಞೆ ಮಾಡುವುದು ಸಲುಭ, ಅದನ್ನು ಪಾಲಿಸುವುದು ಕಠಿಣ” ಎಂದರು. ರಾಮಪ್ರಸಾದ್‌ಅವರ ಪಾದ ಮುಟ್ಟಿ, “ಈ ಶ್ರೀಚರಣಗಳ ಕೃಪೆ ಇದ್ದಲ್ಲಿ ಪ್ರತಿಜ್ಞೆ ಖಂಡಿತ ನೆರವೇರುತ್ತದೆ. ಯಾವ ಅಡ್ಡಿಯೂ ಆಗದು” ಎಂದು ವಚನವಿತ್ತ.

ರಾಮಪ್ರಸಾದನ ಕ್ರಾಂತಿಕಾರಿ ಜೀವನದ ಮೊದಲ ಹೆಜ್ಜೆಯಾಯಿತು ಇದು.

ತಿಲಕರ ದರ್ಶನ

ಕೆಲ ದಿನಗಳಲ್ಲಿ ಗುರು ಸೋಮದೇವಜೀ ತೀರಿಹೋದರು. ರಾಮಪ್ರಸಾದ್‌ಇಂಗ್ಲಿಷ್‌ಒಂಬತ್ತನೇ ದರ್ಜೆಗೆ ಬಂದಿದ್ದ. ಷಾಜಹಾನ್‌ಪುರದ ಸೇವಾಸಮಿತಿಯ ಮುಖ್ಯ ಸ್ವಯಂಸೇವಕರಲ್ಲಿ ಒಬ್ಬನಾಗಿ ಉತ್ಸಾಹದಿಂದ ದುಡಿಯತೊಡಗಿದ.

ಆ ವರ್ಷ ಲಖ್ನೋವಿನಲ್ಲಿ ಕಾಂಗ್ರೆಸ್‌ವಾರ್ಷಿಕಾಧಿವೇಶನ ನಡೆಯಿತು. ಆ ಹೊತ್ತಿಗೆ ಕಾಂಗ್ರೆಸಿನಲ್ಲಿ ಎರಡು ಪಕ್ಷಗಳಾಗಿದ್ದವು. ಬ್ರಿಟಿಷ್‌ಸರ್ಕಾರಕ್ಕೆ ವಿರುದ್ಧವಾಗಿ ಹೋಗದೆ ಭಾರತದ ಕಷ್ಟಗಳನ್ನು ಸರ್ಕಾರಕ್ಕೆ ವಿವರಿಸಿ ನ್ಯಾಯ ಪಡೆಯಬೇಕು ಎಂಬುದು ಅಭಿಪ್ರಾಯ ಕೆಲವರದು. ಇವರು ಮಂದಗಾಮಿಗಳು. ಬ್ರಿಟಿಷ್‌ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು, ಸಂಪೂರ್ಣ ಸ್ವಾತಂತ್ರ್ಯವನ್ನೇ ಪಡೆಯಬೇಕು ಎಂದವರು ತೀವ್ರಗಾಮಿಗಳು. ಅವರ ನಾಯಕರು ಲೋಕಮಾನ್ಯ ಬಾಲಗಂಗಾಧರ ತಿಲಕರು. ತಿಲಕರು ಅಧಿವೇಶನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದುದರಿಂದ ತೀವ್ರಗಾಮಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು. ರಾಮಪ್ರಸಾದನೂ ಅಧಿವೇಶನಕ್ಕೆ ಹೋದ. ಸ್ವಾಗತ ಸಮಿತಿಯಲ್ಲಿ ಮಂದಗಾಮಿಗಳ ಬಲ ಹೆಚ್ಚಿದ್ದು, ತಿಲಕರನ್ನು ಸ್ವಾಗತಿಸಲು ಸಂಭ್ರಮದ ಏರ್ಪಾಡುಗಳಿರಲಿಲ್ಲ. ರೈಲ್ವೆ ನಿಲ್ದಾಣದಲ್ಲಿ ಮಾತ್ರ ಸ್ವಾಗತಿಸುವ ಏರ್ಪಾಡಾಗಿತ್ತು.

ಈ ಶ್ರೀಚರಣಗಳ ಕೃಪೆ ಇದ್ದಲ್ಲಿ ಪ್ರತಿಜ್ಞೆ ಖಂಡಿತ ನೆರವೇರುತ್ತದೆ.

ಆದರೆ ನಗರದಲ್ಲಿ ಮೆರವಣಿಗೆ ನಡೆಸಬೇಕೆಂದು ಯುವಜನರು ಆಶಯವಾಗಿತ್ತು. ಎಂ.ಎ. ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಯೊಬ್ಬನ ನೇತೃತ್ವದಲ್ಲಿ ಯುವಕರೆಲ್ಲ ಒಂದುಗೂಡಿದರು. ತಿಲಕರು ರೈಲಿನಿಂದ ಇಳಿದ ಕೂಡಲೇ ಸ್ವಾಗತ ಸಮಿತಿಯ ಸ್ವಯಂಸೇವಕರು ಅವರನ್ನು ಸುತ್ತುವರಿದು ಕಾರಿಗೆ ಕರೆದೊಯ್ದರು. ರಾಮಪ್ರಸಾದನೂ, ಆ ಎಂ.ಎ. ವಿದ್ಯಾರ್ಥಿಯೂ ಮುಂದಕ್ಕೆ ಜಿಗಿದು ಕಾರಿನ ಮುಂದೆ ಕುಳಿತರು. “ಹೋಗುವುದಿದ್ದಲ್ಲಿ ಕಾರು ನಮ್ಮ ಮೇಲೆ ಹೋಗಲಿ” ಎಂದು ಘೋಷಿಸಿದರು. ಸ್ವಾಗತ ಸಮಿತಿಯವರೂ, ಸ್ವಯಂ ತಿಲಕರೂ ಸಮಾಧಾನ ಹೇಳಿದರೂ ಯುವಕರು ವಿಚಲಿತರಾಗಲಿಲ್ಲ. ಬಾಡಿಗೆಯ ಗಾಡಿಯೊಂದನ್ನು ಹಿಡಿದು ಕುದುರೆಗಳನ್ನು ಬಿಚ್ಚಿ ತಾವೇ ನೊಗಕ್ಕೆ ಹೆಗಲು ಕೊಟ್ಟರು. ತಿಲಕರನ್ನು ಎತ್ತಿ ಗಾಡಿಯಲ್ಲಿ ಕುಳ್ಳಿರಿಸಿ ಊರು ತುಂಬಾ ಮೆರವಣಿಗೆ ಮಾಡಿದರು. ದಾರಿಯಲ್ಲಿ ಜನ ಲೋಕಮಾನ್ಯರ ಮೇಲೆ ಹೂಮಳೆಗೆರೆದರು.

ಪುಸ್ತಕಗಳಿಂದ-ಮದ್ದುಗುಂಡು!

ಲಖ್ನೋ ಕಾಂಗ್ರೆಸ್‌ಅಧಿವೇಶನದ ಸಮಯದಲ್ಲಿ ರಾಮಪ್ರಸಾದನಿಗೆ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಗುಪ್ತ ಸಮಿತಿಯ ಸದಸ್ಯರ ಸಂಪರ್ಕ ಬೆಳೆಯಿತು. ಹಿಂದಿನ ವರ್ಷದಲ್ಲಿ ಅವನಲ್ಲಿ ಬೆಳೆದಿದ್ದ ಕ್ರಾಂತಿಕಾರಿ ಭಾವನೆಗಳು ಕಾರ್ಯರೂಪ ತಾಳಲು ಅವಕಾಶವಾಯಿತು. ಕೆಲವೇ ದಿನದಲ್ಲಿ ಅವನು ಕ್ರಾಂತಿಕಾರಿಗಳ ಕಾರ್ಯಕಾರಿ ಸಮಿತಿಗೂ ಸದಸ್ಯನಾದ.

ಸಮಿತಿಯ ಬಳಿ ಹಣ ಬಹಳ ಕಡಿಮೆ ಇತ್ತು. ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಹಣ ಬೇಕು-ಅದೂ ಸ್ವಲ್ಪ ಹಣ ಸಾಲದು. ಸಾವಿರಗಟ್ಟಲೆ ಹಣ ಬೇಕು. ಆಗ ರಾಮ ಪ್ರಸಾದನಿಗೆ ಒಂದು ಯೋಚನೆ ಹೊಳೆಯಿತು. ಕ್ರಾಂತಿಕಾರಿ ಭಾವನೆಗಳ ಪ್ರಚಾರವೂ ಆಗುವಂತೆ, ಶಸ್ತ್ರಾಸ್ತ್ರ ಕೊಳ್ಳಲು ಅನುಕೂಲವೂ ಆಗುವಂತೆ ಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದರೆ ಹೇಗೆ? ತನ್ನ ತಾಯಿಯಿಂದ ನಾಲ್ಕು ನೂರು ರೂಪಾಯಿಗಳನ್ನು ಪಡೆದು, “ಅಮೆರಿಕ ಸ್ವಾತಂತ್ರ್ಯವನ್ನು ಹೇಗೆ ಪಡೆಯಿತು?” ಎಂಬ ಪುಸ್ತಕವನ್ನು ಪ್ರಕಟಿಸಿದ. ಆಗ ಕ್ರಾಂತಿಕಾರಿ ಗೇಂದಾಲಾಲ್‌ದೀಕ್ಷಿತ್‌ಎಂಬುವರು ಗ್ವಾಲಿಯರ್‌ನಲ್ಲಿ ಸೆರೆಮನೆಯಲ್ಲಿದ್ದರು. ಜನರ ಕಣ್ಣು ಅವರತ್ತ ಹೊರಳಬೇಕು, ಜನರ ಸಹಾನುಭೂತಿ ಅವರಿಗೆ ಸಿಕ್ಕಬೇಕು ಎನ್ನಿಸಿತು ರಾಮಪ್ರಸಾದನಿಗೆ. “ದೇಶವಾಸಿಗಳಿಗೆ ಒಂದು ಸಂದೇಶ” ಎಂಬ ಮನವಿಯನ್ನು ಅಚ್ಚು ಮಾಡಿಸಿದ. ಈ ಪುಸ್ತಕದ ವ್ಯಾಪಾರದಲ್ಲಿ ತಾಯಿಯಿಂದ ಪಡೆದಿದ್ದ ಹಣವನ್ನು ಹಿಂತಿರುಗಿಸಿ ಇನ್ನೂರು ರೂಪಾಯಿಗಳು ಉಳಿದುವು. ಆಗಿನ ಸಂಯುಕ್ತ ಪ್ರಾಂತಗಳ ಸರ್ಕಾರ ಈ ಎರಡು ಕೃತಿಗಳನ್ನೂ ಪ್ರತಿಬಂಧಿಸಿತು.

ಪುಸ್ತಕ ಪ್ರಕಾಶನದಿಂದ ಸಂಗ್ರಹವಾದ ಹಣದಿಂದ ಶಸ್ತ್ರ ಸಂಗ್ರಹ ಆರಂಭವಾಯಿತು. ಹಿಂದೆಯೇ ಒಮ್ಮೆ ರಾಮಪ್ರಸಾದ್ ಗ್ವಾಲಿಯರ್ ನಗರದಲ್ಲಿ ಅಲೆದಾಡಿ ಒಂದು ರಿವಾಲ್ವರನ್ನು ತಂದು ಅನುಭವ ಗಳಿಸಿದ್ದ. ಈಗ ಮತ್ತೆ ಅಲ್ಲಿಗೇ ಹೋದ. ಆ ಕಾಲದಲ್ಲಿ ಶಸ್ತ್ರಸಂಗ್ರಹ ಕಾರ್ಯ ದೇಶೀಯ ರಾಜ್ಯಗಳಲ್ಲಿ ಹೆಚ್ಚು ಅನುಕೂಲಕರವಾಗಿತ್ತು.

ಪೇಟೆ ಬೀದಿಯಲ್ಲಿ ಒಂದು ಅಂಗಡಿಯಲ್ಲಿ ಕತ್ತಿ, ಗುರಾಣಿ, ಕಠಾರಿ ಇವುಗಳೊಂದಿಗೆ ನಾಲ್ಕಾರು ನಳಿಕೆ ಬಂದೂಕುಗಳನ್ನು ಗಮನಿಸಿದ. ಹೇಗೋ ಸಾಹಸ ಮಾಡಿ ಅಂಗಡಿಯವನೊಂದಿಗೆ ಮಾತು ತೆಗೆದು ಬೆಲೆ ವಿಚಾರಿಸಿದ.

“ಸರಿ, ನೀವು ಗುಂಡು ಹೊಡೆಯುವ ಬಂದೂಕು, ಪಿಸ್ತೂಲುಗಳನ್ನು ಮಾರುವುದಿಲ್ಲವೊ?” ಎಂದು ಕೇಳಿದ. ಅಂಗಡಿಯವ ತನ್ನಲ್ಲಿದ್ದ ಸಣ್ಣ ನಳಿಕೆ ಪಿಸ್ತೂಲುಗಳನ್ನು ತೋರಿಸಿದ. “ಇನ್ನೊಂದು ಸಲ ಬನ್ನಿ, ಹೇಗಾದರೂ ಒಂದೆರಡು ಗುಂಡು ಹೊಡೆಯುವ ಬಂದೂಕು, ಪಿಸ್ತೂಲುಗಳನ್ನು ತೋರಿಸುತ್ತೇನೆ” ಎಂದ. ಆ ಸಲಕ್ಕೆ ದೊರೆತ ಒಂದೆರಡು ನಳಿಕೆ ಪಿಸ್ತೂಲುಗಳು, ಕಠಾರಿಗಳನ್ನು ಕೊಂಡು ರಾಮಪ್ರಸಾದ್‌ಹಿಂತಿರುಗಿದ.

ಹೀಗೆಯೇ ಮತ್ತೆರಡು ಬಾರಿ ಹೋಗಿ ಬಂದು ಶಸ್ತ್ರಗಳ ಪರಿಚಯವಾಯಿತು. ಹೊಸದು ಯಾವುದು, ಹಳೆಯದು ಯಾವುದು, ಯಾವುದರ ಬೆಲೆ ಎಷ್ಟು-ಹೀಗೆ ವಿಷಯಗಳು ತಿಳಿಯುತ್ತಾ ಹೋದವು.

ಒಂದು ಸಲ ಪೊಲೀಸರ ಕೈಗೆ ಸಿಕ್ಕಿ ಬೀಳವುದರಲ್ಲಿದ್ದ. ಇವರು ಶಸ್ತ್ರಸಂಗ್ರಹ ಮಾಡುತ್ತಲಿದ್ದ ಸುದ್ದಿ ಗ್ವಾಲಿಯರ್ ರಾಜ್ಯದ ಪೊಲೀಸರಿಗೆ ಮುಟ್ಟಿತು. ಒಬ್ಬ ರಹಸ್ಯ ಪೊಲೀಸ್‌ಪೇದೆಯು ರಾಮಪ್ರಸಾದನನ್ನು ಭೇಟಿಯಾಗಿ ತಾನೂ ಒಂದಷ್ಟು ಶಸ್ತ್ರಗಳನ್ನು ಕೊಡಿಸುವುದಾಗಿ ಮಾತು ಕೊಟ್ಟ. ತನ್ನೊಂದಿಗೆ ಕರೆದೊಯ್ದ. ಎಲ್ಲಿಗೆ?

ಪೊಲೀಸ್‌ಇನ್‌ಸ್ಪಕ್ಟರ‍್ನ ಮನೆಗೆ!

ಅದೃಷ್ಟವಶಾತ್‌ಇನ್‌ಸ್ಪೆಕ್ಟರ್ ಮನೆಯಲ್ಲಿರಲಿಲ್ಲ. ಮನೆಯ ಮುಂದೆ ಒಬ್ಬ ಸಿಪಾಯಿ ಕಾವಲಿದ್ದ. ರಾಮಪ್ರಸಾದನಿಗೆ ಅವರ ಪರಿಚಯವೂ ಇತ್ತು. ರಹಸ್ಯ ಪೊಲೀಸನ ಕಣ್ಣು ತಪ್ಪಿಸಿ ವಿಚಾರಿಸಿದಾಗ ಅದು ಇನ್‌ಸ್ಪಕ್ಟರನ ಮನೆಯೆಂಬುದು ಖಚಿತವಾಯಿತು. ಸರಸರನೆ ಅಲ್ಲಿಂದ ಮಾಯವಾದ. ಹೇಗೋ ಆ ಪೊಲೀಸನಿಗೆ ಇವರು ಶಸ್ತ್ರ ಸಂಗ್ರಹಿಸಿದ್ದು, ಆ ದಿನವೇ ಸಾಗಿಸಲಿದ್ದಾರೆಂಬ ಸುದ್ದಿಯು ತಿಳಿದಿತ್ತು. ಎಚ್ಚರಗೊಂಡ ರಾಮಪ್ರಸಾದ್ ರಾತ್ರಿಯೇ ಕಾಲ್ನಡಿಗೆಯಲ್ಲಿ ಕೆಲವು ಸ್ಟೇಷನ್‌ಗಳನ್ನು ದಾಟಿ, ಶಸ್ತ್ರಗಳೊಂದಿಗೆ ರೈಲು ಹತ್ತಿ ಷಾಜಹಾನ್‌ಪುರಕ್ಕೆ ಹಿಂತಿರುಗಿದ.

"ವೀರಳಾದ ತಾಯಿಯ ಮೇಲಿನ ಪ್ರೇಮದಿಂದ ಬರುತ್ತಿರುವ ಸಂತೋಷದ ಕಂಬನಿ ಇದು".

ಇನ್ನೊಮ್ಮೆ ವಿಶ್ರಾಂತನಾಗಲಿದ್ದ ಒಬ್ಬ ಪೊಲೀಸ್‌ಸೂಪರಿಂಟೆಂಡೆಂಟನಿಂದ ಒಂದು ರಿವಾಲ್ವರನ್ನು ಕೊಳ್ಳಬೇಕಾಗಿ ಬಂತು. ಸಂಶಯಗೊಂಡ ಅವನನ್ನು ತೃಪ್ತಿಗೊಳಿಸಲು ತಾನು ಒಬ್ಬ ಜಮೀನ್ದಾರನ ಮಗನೆಂದು ಪ್ರಮಾಣ ಪತ್ರ ಬರೆಸಿ, ಅದರ ಮೇಲೆ ಇಬ್ಬರು ಜಮೀನ್ದಾರರ ಸಹಿಯನ್ನು ಹಿಂದಿಯಲ್ಲೂ, ಪೊಲೀಸ್‌ಇನ್‌ಸ್ಪೆಕ್ಟರ ರುಜುವನ್ನು ಇಂಗ್ಲಿಷಿನಲ್ಲೂ ಮಾಡಿ ತೋರಿಸಿ ಅದನ್ನು ಕೊಂಡದ್ದಾಯಿತು.

ಅಂತೂ ರೈಫಲ್ಲುಗಳು, ಬಂದೂಕುಗಳು, ರಿವಾಲ್ವಾರುಗಳು, ಗುಂಡುಗಳು ಎಲ್ಲ ಸಂಗ್ರಹವಾದವು. ಹಲವಾರು ಕತ್ತಿ ಕಠಾರಿಗಳೂ ಸೇರಿದವು.

ಮಾರಕೂಡದೆಂದ ಪುಸ್ತಕದ ಮಾರಾಟ

ದೆಹಲಿಯಲ್ಲಿ ಕಾಂಗ್ರೆಸ್‌ಅಧಿವೇಶನ ನಡೆಯುವುದಿತ್ತು. ಅಲ್ಲಿ “ಅಮೆರಿಕ ಸ್ವಾತಂತ್ರ್ಯವನ್ನು ಹೇಗೆ ಪಡೆಯಿತು?” ಪುಸ್ತಕದ ಉಳಿದಿದ್ದ ಪ್ರತಿಗಳನ್ನು ಮಾರಬಹುದೆಂಬ ಯೋಚನೆ ಹೊಳೆಯಿತು. ರಾಮಪ್ರಸಾದನಿಗೆ. ಷಾಜಹಾನ್‌ಪುರದ ಸೇವಾಸಮಿತಿ ಪರವಾಗಿ ಒಂದು ಆಂಬುಲೆನ್ಸ್‌ತಂಡವನ್ನು ದೆಹಲಿಗೆ ಕಳುಹಿಸಲಾಯಿತು. ಆಂಬುಲೆನ್ಸ್‌ಸ್ವಯಂಸೇವಕರು ಯಾವ ತಡೆಯೂ ಇಲ್ಲದೆ ಓಡಿಯಾಡುವ ಅವಕಾಶವಿತ್ತು. “ಅಮೆರಿಕ ಸ್ವಾತಂತ್ರ್ಯವನ್ನು ಹೇಗೆ ಪಡೆಯಿತು?” ಎಂಬ ಪುಸ್ತಕವನ್ನು ಯಾರೂ ಓದಕೂಡದೆಂದು ಸಂಯುಕ್ತ ಪ್ರಾಂತಗಳ ಸರ್ಕಾರ ಆಜ್ಞೆ ಮಾಡಿತ್ತಲ್ಲವೆ? ಸರಿ, ಷಾಜಹಾನ್‌ಪುರದಿಂದ ಯುವಕರು ಅದನ್ನೇ ಜಾಹೀರಾತಿಗೆ ಬಳಸಿದರು. “ಸಂಯುಕ್ತ ಪ್ರಾಂತಗಳಲ್ಲಿ ಪ್ರತಿಬಂಧಿತವಾಗಿರುವ ಪುಸ್ತಕ – “ಅಮೆರಿಕ ಸ್ವಾತಂತ್ರ್ಯವನ್ನು ಹೇಗೆ ಪಡೆಯಿತು?” ಎಂದು ಕೂಗುತ್ತಾ ಪುಸ್ತಕವನ್ನು ಮಾರತೊಡಗಿದರು.

ರಹಸ್ಯ ಪೊಲೀಸ್‌ಪಡೆ ಕಾಂಗ್ರೆಸ್‌ಶಿಬಿರವನ್ನು ಸುತ್ತುವರಿಯಿತು. ಪುಸ್ತಕ ಮಾರುತ್ತಿದ್ದ ಯುವಕರಿಗಾಗಿ ಹುಡುಕಾಟ ಆರಂಭವಾಯಿತು. ರಾಮಪ್ರಸಾದ್‌ಸರಸರನೆ ಪುಸ್ತಕಗಳ ಸಂಗ್ರಹವಿದ್ದ ಬಿಡಾರಕ್ಕೆ ಹೋದ.ತನ್ನ ದೊಡ್ಡ ಓವರ್‌ಕೋಟಿನಲ್ಲಿ ಪುಸ್ತಕಗಳನ್ನು ಸುತ್ತಿ ಹೊತ್ತುಕೊಂಡು, ಆಂಬುಲೆನ್ಸ್‌ನ ಕೆಂಪು ಬಿಲ್ಲೆಯನ್ನು ತೋರುತ್ತಾ ಹೊರಟ. ಆಂಬುಲೆನ್ಸ್‌ಸ್ವಯಂಸೇವಕನ ಉಡುಪಿನಲ್ಲಿದ್ದ ಅವನು ಪೊಲೀಸರ ಎದುರಿಗೇ ಹಾದು ಕಾಂಗ್ರೆಸ್‌ಶಿಬಿರಕ್ಕೆ ಹೋದ. ಕಾಂಗ್ರೆಸ್‌ಶಿಬಿರದಲ್ಲಿ ಸ್ವಾಗತ ಸಮಿತಿಯ ಅನುಮತಿಯಿಲ್ಲದೆ ಪೊಲೀಸರು ಪ್ರವೇಶಿಸುತ್ತಿರಲಿಲ್ಲ. ಪುಸ್ತಕದ ಪ್ರತಿಗಳೆಲ್ಲಾ ಸುರಕ್ಷಿತವಾದವು. ಕ್ರಮೇಣ ಮಾರಾಟವಾದವು.

ಸಾವಿನ ಉಡಿಯಲ್ಲಿ

ದೆಹಲಿಯಿಂದ ಷಜಹಾನ್‌ಪುರಕ್ಕೆ ಹಿಂತಿರುಗುವ ವೇಳೆಗೆ ಅಲ್ಲಿ ರಾಮಪ್ರಸಾದನನ್ನೂ, ಮಿತ್ರರನ್ನೂ ಪೊಲೀಸರು ಹುಡುಕುತ್ತಿದ್ದ ಸುದ್ದಿ ತಿಳಿಯಿತು. ಕ್ರಾಂತಿಕಾರಿ ಸಂಸ್ಥೆಯ ಇಬ್ಬರು ಸದಸ್ಯರಲ್ಲಿ ವೈಮನಸ್ಶವುಂಟಾಗಿ ಪೊಲೀಸರಿಗೆ ಶಸ್ತ್ರ ಸಂಗ್ರಹದ ವಿವರಗಳು ತಿಳಿದು ಹೋದವು. ಆ ಅಂತಃಕಲಹ ಮೈನ್‌ಪುರಿಯಲ್ಲಿ ಉಂಟಾಗಿದ್ದರಿಂದ ಅಲ್ಲಿಯೇ ಮೊಕದ್ದಮೆ ನಡೆಯಿತು. ಆದ್ದರಿಂದ ಇದನ್ನು ಮೈನ್‌ಪುರಿ ಪಿತೂರಿ ಎಂದು ಕರೆದರು.

ಸುದ್ದಿ ತಿಳಿದ ಒಡನೆಯೇ ರಾಮಪ್ರಸಾದ್‌ಮೂವರು ಮಿತ್ರರೊಂದಿಗೆ ಪರಾರಿಯಾದ. ಅವರೆಲ್ಲ ಅಲ್ಲಿ ಇಲ್ಲಿ ಅಲೆದು ಪ್ರಯಾಗಕ್ಕೆ ಬಂದರು. ಪ್ರಯಾಗದ ಧರ್ಮಶಾಲೆಯೊಂದರಲ್ಲಿ ತಂಗಿದರು. ಮುಂದೆ ಏನು ಮಾಡಬೇಕು ಎಂಬುದನ್ನು ಕುರಿತು ಅವರವರಲ್ಲಿ ವಾದವಿವಾದವೆದ್ದು ಜಗಳ ಹುಟ್ಟಿತು. ತಮ್ಮ ಗುಂಪಿನ ಸದಸ್ಯರಲ್ಲಿ ಒಬ್ಬ ಅಂಜುಕುಳಿ ಇರುವನೆಂದೂ, ಅವನು ಬಂಧಿತನಾದರೆ ಇಡೀ ಸಂಸ್ಥೆಯ ರಹಸ್ಯ ಹೊರಬೀಳುವುದೆಂದೂ, ಆದ್ದರಿಂದ ಅವನನ್ನು ಕೊಂದುಬಿಡಬೇಕೆಂದೂ ಮಿತ್ರರು ಅಭಿಪ್ರಾಯ ಪಟ್ಟರು. ರಾಮಪ್ರಸಾದ್‌ಒಪ್ಪಲಿಲ್ಲ. ಆಗ ಕೋಪ ಇವನ ಮೇಲೆ ತಿರುಗಿತು.

ಗುಂಡೊಂದು ಅವನ ಕಿವಿಯ ಬಳಿ ಹಾದು ಹೋಯಿತು.

ನಾಲ್ವರೂ ಒಂದು ಸಂಜೆ ಯಮುನಾ ನದಿಯ ದಂಡೆಯಲ್ಲಿ ತಿರುಗಾಡಲು ಹೋದರು. ರಾಮಪ್ರಸಾದ್‌ಹಾಗೇ ಸ್ನಾನ ಮಾಡಿ ಸಂಧ್ಯಾವಂದನೆಗೆ ಕುಳಿತ. “ರಾಮಪ್ರಸಾದ್‌, ನದಿಯ ಹತ್ತಿರ ಕುಳಿತುಕೋ” ಎಂದ ಒಬ್ಬ ಮಿತ್ರ. ರಾಮಪ್ರಸಾದ್‌ತಾನು ಕುಳಿತಲ್ಲೇ ಉಪಾಸನೆಗೆ ತೊಡಗಿದ. ಅವನು ಎತ್ತರವಾದ ಸ್ಥಾನದಲ್ಲಿದ್ದ. ಮಿತ್ರರೂ ಅವನ ಬಳಿ ಬಂದು ಕುಳಿತರು. ಕಣ್ಣು ಮುಚ್ಚಿ ಧ್ಯಾನಮಗ್ನನಾಗಿದ್ದ ರಾಮಪ್ರಸಾದ್‌”ಖಟ್‌” ಶಬ್ದ ಕೇಳಿ ಬೆಚ್ಚುವುದರಲ್ಲಿ ಗುಂಡೊಂದು ಅವನ ಕಿವಿಯ ಬಳಿ ಹಾದು ಹೋಯಿತು. ಕಣ್ತೆರೆದ ರಾಮಪ್ರಸಾದ್‌ರಿವಾಲ್ವರನ್ನು ತೆಗೆಯಲು ಪ್ರಯತ್ನಿಸುತ್ತಾ ಹಿಂತಿರುಗಿ ನೋಡಿದ. ಅಲ್ಲಿ ಅವನ ಇನ್ನೊಬ್ಬ ಮಿತ್ರ ರಿವಾಲ್ವರಿನಿಂದ ಗುಂಡು ಹಾರಿಸುವುದರಲ್ಲಿದ್ದ. ರಾಮಪ್ರಸಾದ್‌ತನ್ನ ರಿವಾಲ್ವರನ್ನು ತೆಗೆಯುವುದರಲ್ಲಿ ಇನ್ನೆರಡು ಗುಂಡುಗಳು ಹಾರಿದವು. ರಾಮಪ್ರಸಾದ್‌ಎದ್ದು ನಿಲ್ಲುವುದರಲ್ಲಿ ಅವರು ಓಡಿದರು. ಅವನ ರಿವಾಲ್ವರ್ ಚರ್ಮದ ಚೀಲದಲ್ಲಿದ್ದುದರಿಂದ ಕೈಗೆತ್ತಿಕೊಳ್ಳುವುದರಲ್ಲಿ ವೇಳೆಯಾಯಿತು.

ತನ್ನನ್ನು ಕೊಲ್ಲಲು ಯತ್ನ ನಡೆಯಿತೆಂಬ ಅರಿವು ಮೂಡಿದಾಗ ರಾಮಪ್ರಸಾದ್‌ಅವಕ್ಕಾದ. ನಿರಾಶನಾದ. ಅವನು ಕುಳಿತಲ್ಲಿಂದ ಒಂದು ಅಡಿ ದೂರದಲ್ಲಿ ಗುಂಡು ಹಾದು ಹೋಗಿತ್ತು. ಅವರನ್ನು ಅಟ್ಟಿಕೊಂಡು ಹೋದರೆ ರಕ್ತಪಾತ ಖಂಡಿತ. ಅಲ್ಲದೇ ತಾನೊಬ್ಬ, ಅವರು ಮೂವರು. ತಾನೂ ತನ್ನ ಅನುಯಾಯಿಗಳನ್ನು ಕೂಡಿಕೊಂಡು ಆ ಕಾರ್ಯಕ್ಕೆ ಕೈ ಹಚ್ಚಬೇಕು.

ದನಕಾಯುವ ಲೇಖಕ

ಅವನು ಆ ರಾತ್ರಿಯನ್ನು ಪರಿಚಯದವನೊಬ್ಬನಲ್ಲಿ ಕಳೆದು ಲಖ್ನೋವಿಗೆ ಹೋದ. ಕ್ರಾಂತಿಕಾರಿ ಸಂಸ್ಥೆಯ ಇತರ ಸದಸ್ಯರಿಗೆ ದುರ್ಘಟನೆಯ ವಿವರ ನೀಡಿದ. ಉದ್ವಿಗ್ನನಾಗಿ ಕೆಲ ದಿನ ಕಾಡಿನಲ್ಲಿ ಅಲೆದಾಡಿ, ತನ್ನ ತಾಯಿಯನ್ನು ಕಾಣಲು ಹೋದ. ತಾಯಿ ಮಗನ ಕಥೆಯನ್ನು ಕೇಳಿ ಗ್ವಾಲಿಯರ್ ರಾಜ್ಯದಲ್ಲಿರುವ ತಮ್ಮ ನೆಂಟರಲ್ಲಿ ಹೋಗಿರುವಂತೆ ಹೇಳಿದರು.

ಈ ನಡುವೆ ಪೊಲೀಸರು ರಾಮಪ್ರಸಾದನ ಮೇಲೆ ಮೊಕದ್ದಮೆ ಹೂಡಿದ್ದರು. ಅವನನ್ನು ತಂದು ಒಪ್ಪಿಸದಿದ್ದರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಮುರಳೀಧರನನ್ನು ಹೆದರಿಸಿದ್ದರು. ಅವನು ತನ್ನ ಆಸ್ತಿಯನ್ನು ಬಂದಷ್ಟಕ್ಕೆ ಮಾರಿ, ಸಂಸಾರದೊಂದಿಗೆ ಮಗನಿದ್ದಲ್ಲಿಗೇ ಹೋದ.

ರಾಮಪ್ರಸಾದ್‌ಈ ಅಜ್ಞಾತವಾಸದಲ್ಲಿ ರೈತನಾದ. ವ್ಯವಸಾಯ, ಪಶುಪಾಲನೆಯಲ್ಲಿ ತೊಡಗಿದ. ಆದರೆ ಕ್ರಾಂತಿ ಭಾವನೆಗಳನ್ನು ಸಾಹಿತ್ಯ ರೂಪದಲ್ಲಿ ವ್ಯಕ್ತಗೊಳಿಸುವ ಮಾರ್ಗವನ್ನು ಕಂಡುಕೊಂಡ. ಬಂಗಾಳಿ ಪುಸ್ತಕಗಳನ್ನು ಹಿಂದಿಗೆ ಅನುವಾದ ಮಾಡಿದ. ಸ್ವತಂತ್ರವಾಗಿಯೂ ಬರೆದ. ದನಕರುಗಳನ್ನು ಮೇಯಿಸಲು ಹೋಗಬೇಕಾಗಿ ಬರುತ್ತಿತ್ತು. ಆಗ ಜೊತೆಯಲ್ಲಿ ಪುಸ್ತಕ ಇತರ ಲೇಖನ ಸಾಮಗ್ರಿಗಳನ್ನೂ ಒಯ್ಯುತ್ತಿದ್ದ. ದನಗಳನ್ನು ಮೇಯಲು ಬಿಟ್ಟು ನೆರಳಲ್ಲಿ ಕುಳಿತು ಬರವಣಿಗೆ ಮಾಡುತ್ತಿದ್ದ. ಹೀಗೆ ಅವನು “ಬಾಲ್ಶೆವಿಕರ ಕಾರ್ಯನೀತಿ”, “ಮನೋಲಹರಿ”, “ಕ್ಯಾಥರಿನ್‌”, “ಸ್ವದೇಶಿ ರಂಗು” ಮತ್ತೆ ಎರಡು ಅನುವಾದ ಕೃತಿಗಳನ್ನು ಬರೆದ. ಮಹರ್ಷಿ ಅರವಿಂದರ “ಯೋಗಿಕ ಸಾಧನೆ”ಯ ಅನುವಾದ ಮಾಡಿದ. ಇವನ್ನೆಲ್ಲಾ ಸುಶೀಲಾಮಾಲಾ ಎಂಬ ಹೆಸರಿನಲ್ಲಿ ಪ್ರಕಾಶನ ಮಾಡಿಸಿದ. ಅವನು ಬರೆದ ಹಲವು ಬಿಡಿ ಲೇಖನಗಳನ್ನು ಗಣೇಶ ಶಂಕರ ವಿದ್ಯಾರ್ಥಿ ನಡೆಸುತ್ತಿದ್ದ “ಪ್ರಭಾ” ಪತ್ರಿಕೆ ಪ್ರಕಟಿಸುತ್ತಿತ್ತು.

ಮೊದಲ ಮಹಾಯುದ್ಧ ಮುಗಿದು, 1919ರಲ್ಲಿ ಭಾರತ ಸರ್ಕಾರ ಕ್ರಾಂತಿಕಾರಿ ನೀತಿಯನ್ನು ಬದಲಿಸಿತು. ಮೊಕದ್ದಮೆಗಳನ್ನು ಹಿಂದಕ್ಕೆ ತೆಗೆಯಿತು. ಶಿಕ್ಷಿತರನ್ನು ಬಿಡುಗಡೆ ಮಾಡಿತು. ಆಗ ರಾಮಪ್ರಸಾದ್‌ಮತ್ತೆ ಷಜಹಾನ್‌ಪುರಕ್ಕೆ ಹಿಂತಿರುಗಿದ.

ಸ್ವತಂತ್ರ ಜೀವನ

ರಾಮಪ್ರಸಾದನ ಕುಟುಂಬದ ಆರ್ಥಿಕ ಸ್ಥಿತಿ ಬಹಳ ಚಿಂತಾಜನಕವಾಗಿತ್ತು. ಮದುವೆಗೆ ಒಬ್ಬಳು ತಂಗಿ ಸಿದ್ಧಳಾಗಿ ನಿಂತಿದ್ದಳು. ದಿನನಿತ್ಯದ ಅನ್ನಬಟ್ಟೆಯದೂ ದೊಡ್ಡ ಸಮಸ್ಯೆಯಾಗಿತ್ತು.

ಆದ್ದರಿಂದ ರಾಮಪ್ರಸಾದ್‌ತನ್ನ ಸಂಸಾರ ನಿರ್ವಹಣೆಯ ಕಡೆಗೆ ಗಮನ ಹರಿಸಿದ. ಮೊದಲು ತನ್ನ ಪುಸ್ತಕ ಮಾಲೆಯ ವ್ಯವಸ್ಥೆ ಮಾಡಿ ಹಣಗಳಿಸುವ ಯೋಚನೆ ಮಾಡಿದ. ಅದು ಯಶಸ್ವಿಯಾಗಲಿಲ್ಲ.

ಮಿತ್ರನ ಸಹಾಯದಿಂದ ಒಂದು ಕಾರ್ಖಾನೆಯ ಮ್ಯಾನೇಜರನಾಗಿ ಕೆಲಸಕ್ಕೆ ಸೇರಿದ. ಖಚಿತವಾದ ಆದಾಯ ಬರುತ್ತಾ ಆರ್ಥಿಕ ಸ್ಥಿತಿ ಸುಧಾಸಿತು.

ಕ್ರಮೇಣ ಕ್ರಾಂತಿಕಾರಿ ಸಂಸ್ಥೆಯ ಪುನರ್ ಸಂಘಟನೆಯ ಕಡೆಗೂ ಗಮನ ಹರಿಸಿದ. ಆದರೆ ದೇಶದಾದ್ಯಂತ ಅಸಹಕಾರಿ ಚಳುವಳಿಯ ಗಾಳಿ ಬೀಸಿತ್ತು. ಮೇಲಾಗಿ ಕ್ರಾಂತಿಕಾರಿ ಚಳುವಳಿಗೆ ನೇತೃತ್ವ ನೀಡುವವೆಂದು ಮುಂದೆ ಬಂದವರಲ್ಲಿ ಯೋಗ್ಯತೆಯ ಅಭಾವವಿತ್ತು. ಒಟ್ಟಿನಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ನಿಂತಂತೆಯೇ.

ರಾಮಪ್ರಸಾದ್‌ಸ್ವಲ್ಪ ಹಣ ಕೂಡಿಸಿಕೊಂಡು ತನ್ನದೇ ಆದ ರೇಷ್ಮೆ ಮಗ್ಗದ ಕಾರ್ಖಾನೆಯೊಂದನ್ನು ತೆರೆದ. ಹಗಲು ರಾತ್ರಿ ಎನ್ನದೆ ಏಕಚಿತ್ತದಿಂದ ದುಡಿದ. ಒಂದೂವರೆ ವರ್ಷದಲ್ಲಿ ಅವನ ಕಾರ್ಖಾನೆ ತಲೆಯೆತ್ತಿನಿಂತಿತು. ಮೂರು ನಾಲ್ಕು ಸಾವಿರದ ಬಂಡವಾಳವು ಖರ್ಚು ಕಳೆದು ಎರಡು ಸಾವಿರದ ಲಾಭ ನೀಡಿತು. ಆ ಕಾಲದಲ್ಲೇ ತನ್ನ ಕೊನೆಯ ತಂಗಿಗೆ ಒಬ್ಬ ಜಮೀನ್ದಾರ ವರನನ್ನು ಹುಡುಕಿ ಮದುವೆ ಮಾಡಿದ. ಅವನಿಗೂ ಮದುವೆ ಮಾಡಬೇಕು ಎಂದು ತಾಯಿಯ ಹಂಬಲ. ಆದರೆ ಸ್ವತಂತ್ರ ಜೀವನದಲ್ಲಿ ಭದ್ರವಾಗಿ ಬೇರೂರುವ ತನಕ ವಿವಾಹ ಬಂಧನಕ್ಕೆ ರಾಮಪ್ರಸಾದ್‌ಒಪ್ಪಲಿಲ್ಲ.

ಪುನರ್ ಸಂಘಟನೆ

1921ರ ಅಸಹಕಾರಿ ಚಳುವಳಿಯನ್ನು ಮಹಾತ್ಮಾಗಾಂಧಿಯವರು ಹಿಂತೆಗೆದುಕೊಂಡ ನಂತರ ದೇಶದ ಕ್ರಾಂತಿಕಾರಿ ಗುರಿ ಕೂಡಿಕೊಂಡಿತು. “ಹಿಂದೂಸ್ಥಾನ್‌ರಿಪಬ್ಲಿಕನ್‌ಅಸೋಸಿಯೇಷನ್‌” ಎಂಬ ಹೆಸರಿನಲ್ಲಿ ಒಂದು ಅಖಿಲ ಭಾರತ ಕ್ರಾಂತಿಕಾರಿ ಪಕ್ಷ ರೂಪ ತಳೆಯಿತು.

ಸಂಯುಕ್ತ ಪ್ರಾಂತಗಳಲ್ಲಿ (ಈಗಿನ ಉತ್ತರ ಪ್ರದೇಶ) ಕ್ರಾಂತಿಕಾರಿಗಳು ಮತ್ತೆ ಸಂಘಟಿತರಾದರು. ರಾಮಪ್ರಸಾದನಿಗೂ ಕರೆ ಹೋಯಿತು. ಅವನು ತನ್ನ ವ್ಯಾಪಾರವನ್ನು ಭದ್ರ ತಳಹದಿಯ ಮೇಲೆ ನಿಲ್ಲಿಸಿ ಜವಾಬ್ದಾರಿಯನ್ನು ನಂಬಿಕಸ್ತರಿಗೆ ವಹಿಸಿ ಬರಲು ಆರು ತಿಂಗಳ ಕಾಲ ಅವಕಾಶ ಕೇಳಿದ. ಆ ಕಾಲದಲ್ಲಿ ತನ್ನ ಮಿತ್ರನೊಬ್ಬನಿಗೆ ತನ್ನ ವ್ಯವಹಾರವನ್ನು ಒ‌ಪ್ಪಿಸಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಪುನಃ ಮನಹರಿಸಿದ.

ಕ್ರಾಂತಿಕಾರಿ ಸಂಸ್ಥೆಗೆ ಜನಬಲವಿತ್ತು. ಕಾರ್ಯಕರ್ತರ ಕೊರತೆ ಇರಲಿಲ್ಲ. ಆದರೆ ಹಣದ ಅಭಾವ ಅವರನ್ನು ಕಾಡಿತು. ಸಂಸ್ಥೆಯ ಕಾರ್ಯಗಳಿಗಾಗಿಯೇ ಜೀವ ಸವೆಸುತ್ತಿದ್ದ ಸದಸ್ಯರಿಗೆ ಅನ್ನ ಬಟ್ಟೆಗಳ ವ್ಯವಸ್ಥೆ ಮಾಡುವುದೇ ದುಸ್ತರವಾಗುತ್ತಿತ್ತು. ಅಸ್ತ್ರ-ಶಸ್ತ್ರಗಳ ಸಂಗ್ರಹವಂತೂ ದೂರವೇ ಉಳಿಯುತ್ತಿತ್ತು.

ನಿರಾಶರಾದ ಯುವಕ ಸದಸ್ಯರು ರಾಮಪ್ರಸಾದನಲ್ಲಿಗೆ ಬಂದು, “ಪಂಡಿತಜೀ, ಮುಂದೇನು?” ಎಂದು ಕೇಳಿದರು. ಅವರ ಅಸಹಾಯಕ ಸ್ಥಿತಿಯನ್ನು ಕಂಡು ಅವನಿಗೆ ವಿಷಾದ. ಆದರೆ ಹಣ ಸೇರದೆ ಏನು ಮಾಡಬಲ್ಲ? ಕ್ರಾಂತಿಗೆ ಹಣ ಕೂಡಿಸುವತ್ತ ಅವನ ಮನಸ್ಸು ಕೇಂದ್ರೀಕೃತವಾಯಿತು.

ಒಂದೆರಡು ಗ್ರಾಮಗಳಲ್ಲಿ ಡಕಾಯಿತಿ ನಡೆಸಿಯೂ ಆಯಿತು. ಸಿಕ್ಕ ಹಣ ನೂರಿನ್ನೂರು ರೂಪಾಯಿ ಯಾವುದಕ್ಕೂ ಸಾಲದು. ಮತ್ತೊಂದು ಯೋಚನೆ ರಾಮಪ್ರಸಾದನಿಗೆ ಬೇಸರವನ್ನುಂಟು ಮಾಡಿತು. ಈ ಡಕಾಯಿತಿಗಳಲ್ಲಿ ತೊಂದರೆಗೆ ಸಿಕ್ಕವರು ಯಾರು? ಭಾರತೀಯರೇ ಆದ ಹಳ್ಳಿಗರು. ಡಕಾಯಿತಿ ಮಾಡಿದವರ ಉದ್ದೇಶ ಉಳ್ಳೆಯದಿರಬಹುದು. ಆದರೆ ತಮ್ಮ ಅಣ್ಣ ತಮ್ಮಂದಿರಿಗೇ ತೊಂದರೆ ಕೊಟ್ಟು ಹಣ ಸಂಪಾದಿಸಿದರೆ ಏನು ಮಾಡಿದ ಹಾಗಾಯಿತು?

ಒಂದು ದಿನ ಅದೇ ಯೋಚನೆಯಲ್ಲಿ ಷಜಹಾನ್‌ಪುರದಿಂದ ಲಖ್ನೋವಿಗೆ ಹೋಗುತ್ತಿದ್ದ ರೈಲು ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರತಿ ನಿಲ್ದಾಣದಲ್ಲಿಯೂ ರೈಲು ನಿಂತಾಗ ಕೆಳಗಿಳಿದು ನಿಲ್ಲುತ್ತಿದ್ದ. ಪ್ರತಿ ನಿಲ್ದಾಣದಲ್ಲಿಯೂ ಸ್ಟೇಷನ್‌ಮಾಸ್ಟರ್ ಹಣದ ಚೀಲಗಳನ್ನು ತಂದು ಗಾರ್ಡ್‌‌ನ ಡಬ್ಬಿಯಲ್ಲಿ ಇಟ್ಟು ಹೋಗುತ್ತಿದ್ದುದನ್ನು ಗಮನಿಸಿದ. ಆ ಹಣವನ್ನು ಕಾಪಾಡಲು ಯಾವ ವಿಶೇಷ ಕಾವಲೂ ಇರಲಿಲ್ಲ. ಅದು ಎಂಟನೆಯ ನಂಬರು ಡೌನ್ ಗಾಡಿ ಎಂಬುದನ್ನು ತಿಳಿದುಕೊಂಡ.

ಕ್ರಾಂತಿಗಾಗಿ ಹಣ ಗಳಿಸುವ ಒಂದು ಯೋಜನೆ ಅವನ ಮನಸ್ಸಿನಲ್ಲಿ ಮೂಡಿತು.

ಕಾಕೋರಿ ರೈಲು ಡಕಾಯತಿ

ಕಾಕೋರಿ ಲಖ್ನೋವಿಗೆ ಸಮೀಪದಲ್ಲಿರುವ ಒಂದು ಗ್ರಾಮ. ಅಲ್ಲಿ ರೈಲು ಡಕಾಯಿತಿ ನಡೆದುದರಿಂದ ಅದರ ಹೆಸರು ಲೋಕಪ್ರಸಿದ್ಧವಾಯಿತು.

1925ನೆಯ ಆಗಸ್ಟ್ ತಿಂಗಳ ಒಂಬತ್ತನೆಯ ದಿನ ಸಂಜೆ ಎಂಟನೆಯ ನಂಬರ್ ಡೌನ್‌ಗಾಡಿ ಕಾಕೋರಿಯ ಬಳಿ ಸಾಗಿತ್ತು. ಆಗ ರಾಮಪ್ರಸಾದನೂ, ಅವನ ಒಂಬತ್ತು ಮಂದಿ ಅನುಯಾಯಿಗಳ ಕ್ರಾಂತಿದಳವೂ ಸರಪಳಿಯೆಳೆದು ಅದನ್ನು ನಿಲ್ಲಿಸಿದರು. ಆ ಗಾಡಿಯಲ್ಲಿ ಸಂಗ್ರಹವಾಗಿದ್ದ ಸರ್ಕಾರಿ ಹಣವನ್ನು ಲೂಟಿ ಮಾಡಿದರು. ಅನಿರೀಕ್ಷಿತವಾಗಿ ಒಂದು ಗುಂಡು ತಗುಲಿ ಪ್ರಯಾಣಿಕನೊಬ್ಬ ಸತ್ತದ್ದು ಹೊರತು ಬೇರೆ ಯಾವ ಬಗೆಯಲ್ಲೂ ರಕ್ತಪಾತವಾಗಲಿಲ್ಲ.

ವಿವೇಚನೆಯಿಂದ ಯೋಜಿತವಾಗಿದ್ದ ಈ ಡಕಾಯಿತಿ ಪ್ರಕರಣ ಭಾರತ ಸರ್ಕಾರದ ಕಣ್ಣು ತೆರೆಸಿತು. ಒಂದು ತಿಂಗಳ ಕಾಲ ಪೂರ್ವವಿಚಾರಣೆ, ಸಿದ್ಧತೆಗಳನ್ನು ನಡೆಸಿ, ಬಳಿಕ ಕ್ರಾಂತಿವೀರರ ಮೇಲೆ ಸರ್ಕಾರ ತನ್ನ ಬಲೆ ಬೀಸಿತು. ಭಾಗವಹಿಸಿದ್ದ ಹತ್ತು ಮಂದಿಯಲ್ಲದೆ ಹಿಂದೂಸ್ಥಾನ್‌ರಿಪಬ್ಲಿಕನ್‌ಅಸೋಸಿಯೇಷನ್ನಿನ ಇತರ ಮುಖಂಡರ ಮೇಲೂ ವಾರೆಂಟುಗಳು ಹೊರಟವು. ಕ್ರಾಂತಿ ದಳದಲ್ಲಿ ಸೇರಿದ್ದ ಚಂದ್ರಶೇಖರ ಆಜಾದನ ಹೊರತು ಇತರರೆಲ್ಲಾ ಸಿಕ್ಕಿಬಿದ್ದರು.

ಒಂದೂವರೆ ವರ್ಷಗಳ ಕಾಲ ಮೊಕದ್ದಮೆ ನಡೆದು ರಾಮಪ್ರಸಾ‌ದ್‌, ಆಶ್ಫಾಕ್‌ಉಲ್ಲಾ, ರೋಶನಸಿಂಹ, ರಾಜೇಂದ್ರ ಲಾಹಿರಿ-ಈ ನಾಲ್ವರಿಗೆ ಮರಣದಂಡನೆಯ ಶಿಕ್ಷ ವಿಧಿಸಲ್ಪಟ್ಟಿತು. ದೇಶಾದ್ಯಂತವೂ ಭಾರತದ ಈ ವೀರಪುತ್ರರ ಜೀವವನ್ನುಳಿಸಲು ಚಳುವಳಿಯೆದ್ದಿತು. ಸಾರ್ವಜನಿಕ ಜೀವನದ ಪ್ರಮುಖರೆಲ್ಲಾ ಈ ವೀರರ ಜೀವ ರಕ್ಷಣೆಗಾಗಿ ಬ್ರಿಟಿಷ್‌ಸರ್ಕಾರಕ್ಕೆ ಮನವಿ ಮಾಡಿದರು. ಆದರೆ ಯಾವುದೂ ಸರ್ಕಾರದ ನಿರ್ಧಾರದ ಮುಂದೆ ಪ್ರಯೋಜನಕ್ಕೆ ಬರಲಿಲ್ಲ.

1927ರ ಡಿಸೆಂಬರ್ 18ರಂದು ರಾಜೇಂದ್ರ ಲಾಹಿರಿ, 19ರಂದು ರಾಮಪ್ರಸಾದ್‌ಮತ್ತು ಅಶ್ಫಾಕ್‌ಉಲ್ಲಾ,  20ರಂದು ರೋಶನ್‌ಸಿಂಹ – ಹೀಗೆ ನಾಲ್ವರು ಕ್ರಾಂತಿವೀರರೂ ನಗುನಗುತ್ತಾ ಆತ್ಮಾರ್ಪಣೆ ಮಾಡಿದರು. ಭಾರತದ ಸ್ವಾತಂತ್ರ್ಯ ಸಮರದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಉಲ್ಲೇಖಿತರಾದರು.

ಆತ್ಮಚರಿತ್ರೆ

ರಾಮಪ್ರಸಾದ್‌ಸೆರೆಮನೆಯಲ್ಲಿ ಮರಣದಂಡನೆಯನ್ನು ಎದುರು ನೋಡುತ್ತಲಿದ್ದಾಗ ತನ್ನ ಆತ್ಮಚರಿತ್ರೆಯನ್ನು ಬರೆದನು. ಹಿಂದಿ ಸಾಹಿತ್ಯದ ಅಪೂರ್ವ ಕೃತಿಗಳಲ್ಲಿ ಒಂದಾಗಿ ಪರಿಗಣಿತವಾಗಿದೆ ಈ ಪುಸ್ತಕ.

ಏಕಾಂತದಲ್ಲಿ, ಸದಾ ಕಾವಲಿರುತ್ತಿದ್ದ ಕಾವಲುಗಾರರಿಗೆ ಸಿಕ್ಕಿ ಬೀಳದಂತೆ ಇದನ್ನು ಬರೆದು ಸುರಕ್ಷಿತವಾಗಿ ಹೊರಸಾಗಿಸಿದುದು ಕೂಡ ಸಾಹಸದ ಒಂದುಕಥೆ.

ರಾಮಪ್ರಸಾದ್‌ರಿಜಸ್ಟರಿನಂತಹ ಪುಸ್ತಕಗಳನ್ನು ತರಿಸಿಕೊಂಡು, ಮೂರು ಭಾಗಗಳಲ್ಲಿ ಬರೆದು ಹೊರಕ್ಕೆ ಕಳುಹಿಸಿದನಂತೆ. ಕೊನೆಯ ಭಾಗವನ್ನು ಡಿಸೆಂಬರ್ 17ರಂದು ಬರೆದು ಮುಗಿಸಿ, ಮರುದಿನ ತನ್ನ ಭೇಟಿಗೆಂದು ಬಂದ ಮಿತ್ರ ಶಿವವರ್ಮನ ಮೂಲಕ ಹೊರ ಸಾಗಿಸಿದ. ಅದು 1929ರಲ್ಲಿ ಪ್ರಕಟವಾದ ಕೂಡಲೆ ಆಗಿನ ಸರ್ಕಾರ ಪ್ರತಿಬಂಧನ ಜಾರಿ ಮಾಡಿತು. ಮತ್ತೆ ಅದು ಬೆಳಕು ಕಂಡುದು ಸ್ವತಂತ್ರ ಭಾರತದಲ್ಲಿ.

ತನ್ನ ಪೂರ್ವಜರು, ಕುತೂಹಲಕಾರಿ ಬಾಲ್ಯ, ಆರ್ಯ ಸಮಾಜದೊಂದಿಗೆ ಸೇರ್ಪಡೆ, ಪಲಾಯನ ಜೀವನ, ಕ್ರಾಂತಿಕಾರಿ ಚಳುವಳಿಯ ಅನುಭವಗಳು, ಒಳ ಜಗಳಗಳು-ಹೀಗೆ ವಿಶಾಲವಾದ ಹರಹಿನಲ್ಲಿದೆ ಈ ಆತ್ಮಕಥೆ.

ರಾಮಪ್ರಸಾದನ ತಾಯಿ, ಅಜ್ಜಿ, ಗುರುಗಳು, ನಿಕಟ ಮಿತ್ರರು-ಎಲ್ಲರ ಸ್ಮೃತಿಚಿತ್ರಗಳಿವೆ. ಶೈಲಿ ಮೋಡಿಯಂತೆ ಇದ್ದು ಕೆಲವಡೆಯಂತೂ ಕಣ್ಣೀರು ಮಿಡಿಸುತ್ತದೆ.

“ಜನ್ಮಕೊಟ್ಟ ತಾಯಿ! ಕೊನೆಯ ಸಮಯದಲ್ಲಿಯೂ ನನ್ನ ಹೃದಯ ಯಾವ ರೀತಿಯಲ್ಲಿಯೂ ವಿಚಲಿತವಾಗದಂತೆ, ನಿನ್ನ ಚರಣಕಮಲಗಳಿಗೆ ಪ್ರಣಾಮ ಮಾಡುತ್ತಾ, ಪರಮಾತ್ಮನ ಸ್ಮರಣೆ ಮಾಡುತ್ತಾ ಶರೀರ ತ್ಯಾಗ ಮಾಡಲಿ ಎಂದು ವರ ನೀಡು”-ಹೀಗೆ ರಾಮಪ್ರಸಾದ್‌ತನ್ನ ತಾಯಿಯನ್ನು ಕೇಳಿಕೊಂಡಿದ್ದಾನೆ.

ಮೈನ್‌ಪುರಿ ಪಿತೂರಿಯಲ್ಲಿ ಪ್ರಮುಖ ಆಪಾದಿತರಾಗಿದ್ದು, ಪರಾರಿಯಾಗಿ ದೆಹಲಿಯಲ್ಲಿ ಕರುಣಾಜನಕ ಪರಿಸ್ಥಿತಿಯಲ್ಲಿ ಕ್ಷಯಪೀಡಿತರಾಗಿ ಕಾಲವಾದರು ಪಂಡಿತ ಗೇಂದಲಾಲ್‌ದೀಕ್ಷಿತ್‌. ಅವರನ್ನು ಕುರಿತು, “ಸ್ವದೇಶ ಕಾರ್ಯದಲ್ಲಿ ನಿರತನಾಗಿ ಅಂತಹ ನಿಸ್ಸಹಾಯ ಪರಿಸ್ಥಿತಿಯಲ್ಲಿ ಬಲಿದಾನ ಮಾಡಬೇಕಾಗುತ್ತದೆ ಎಂದು ಆತನಿಗೆ ಸ್ವಪ್ನದಲ್ಲಿಯೂ ಅನುಮಾನ ಬಂದಿರಲಿಲ್ಲ. ಗುಂಡು ತಗುಲಿ ಸಾಯಬೇಕೆಂಬುದು ಆತನ ಪ್ರಬಲ ಇಚ್ಛೆಯಾಗಿತ್ತು. ಭಾರತ ವರ್ಷದ ಒಂದು ಮಹಾನ್‌ಆತ್ಮ ವಿಲೀನವಾಗಿ ಹೋಯಿತು. ಆದರೆ ದೇಶದಲ್ಲಿ ಯಾರಿಗೂ ಅದರ ಸುದ್ದಿ ಸಹ ತಿಳಿಯಲಿಲ್ಲ” ಎಂದಿದ್ದಾನೆ.

ತಾನು ನಿರತನಾಗಿದ್ದ ಕ್ರಾಂತಿಕಾರಿ ಚಳುವಳಿಯ ಭವಿಷ್ಯವನ್ನು ಕುರಿತು ಆಳವಾಗಿ ವಿಚಾರ ಮಾಡಿ, “ಐತಿಹಾಸಿಕ ದೃಷ್ಟಿಯಿಂದ ನಮ್ಮ ಕಾರ್ಯಕ್ಕೆ ಬಹಳ ಬೆಲೆಯಿದೆ. ಯಾರೇ ಆದರೂ ಇಷ್ಟನ್ನು ಒಪ್ಪಿಕೊಳ್ಳಲೇಬೇಕು. ಕೆಳಗೆ ಬಿದ್ದಿದ್ದಾಗ ಸಹ ಭಾರತದ ಯುವಕರಲ್ಲಿ ಸ್ವತಂತ್ರವಾಗಬೇಕೆಂಬ ಇಚ್ಛೆ ಪ್ರಬಲವಾಗಿತ್ತು ಎಂಬುದನ್ನೂ, ಸ್ವತಂತ್ರವಾಗಲು ಅವರು ಯಥಾಶಕ್ತಿ ಕಾರ್ಯನಿರತರಾದರೆಂಬುದನ್ನೂ ಇದು ಎತ್ತಿ ಹಿಡಿಯುತ್ತದೆ” ಎಂದು ಬರೆದಿದ್ದಾನೆ. ಭಾರತದ ಅಂದಿನ ಸ್ಥಿತಿಯನ್ನು ಗಮನಿಸಿ, “ನನ್ನ ಮನಸ್ಸಿನಲ್ಲಿ ಇದು ನಿರ್ಧಾರವಾಗಿ ಹೋಗಿದೆ. ಇನ್ನು ಐವತ್ತು ವರ್ಷಗಳ ಕಾಲ ಭಾರತದಲ್ಲಿ ಕ್ರಾಂತಿಕಾರಿ ದಳಕ್ಕೆ ಸಾಫಲ್ಯ ದೊರೆಯುವುದಿಲ್ಲ. ಏಕೆಂದರೆ ಇಲ್ಲಿನ ಸ್ಥಿತಿ ಅದಕ್ಕೆ ಅನುಕೂಲವಾಗಿಲ್ಲ…. ನವ ಯುವಕರಲ್ಲಿ ನನ್ನ ಅಂತಿಮ ಸಂದೇಶವೆಂದರೆ – ಪಿಸ್ತೂಲು, ರಿವಾಲ್ವರನ್ನು ಹಿಡಿಯುವ ಇಚ್ಛೆಯನ್ನು ಬಿಟ್ಟು ನಿಜವಾದ ದೇಶಸೇವಕರಾಗಿ” ಎಂದು ಉಪದೇಶ ನೀಡಿದ್ದಾನೆ.

ಕವಿ “ಬಿಸ್ಮಿಲ್‌”

“ಬಿಸ್ಮಿಲ್” ಎಂಬುದು ರಾಮಪ್ರಸಾದನ ಕಾವ್ಯನಾಮ. ಈ ಕಾವ್ಯನಾಮದಲ್ಲಿ ಅವನು ಹಿಂದಿ ಭಾಷೆಯ ಉತ್ತಮ ಕ್ರಾಂತಿಕಾರಿ ಕವಿಯೆಂದು ಹೆಸರಾಗಿದ್ದಾನೆ. ಅವನ ಆತ್ಮಚರಿತ್ರೆಯ ಕೊನೆಯ ಭಾಗದಲ್ಲಿ ಆಯ್ದ ಕವಿತೆಗಳನ್ನು ಉದ್ಧರಿಸಿದ್ದಾನೆ. ಅವನ ಕವಿತೆಗಳ ಪ್ರತಿ ಪಂಕ್ತಿಯಲ್ಲೂ ಉತ್ಕಟ ದೇಶಪ್ರೇಮ ವ್ಯಕ್ತವಾಗಿದೆ.

“ಸಹಸ್ರ ಬಾರಿ ದೇಶಹಿತಕ್ಕಾಗಿ ಸಾವನ್ನು ಅಪ್ಪಬೇಕಾಗಿ ಬಂದರೂ ನಾನು ಅದನ್ನು ಲಕ್ಷಿಸೆನು. ಹೇ ದೇವ, ನೂರು ಬಾರಿ ಭಾರತದಲ್ಲಿ ಜನ್ಮ ನೀಡು, ಆದರೆ ಪ್ರತಿ ಬಾರಿಯೂ ದೇಶಸೇವೆ ಮಾಡುತ್ತಾ ಪ್ರಾಣವನ್ನು ಒಪ್ಪಿಸುವಂತೆ ಕರುಣಿಸು” ಎಂದು ಪ್ರಾರ್ಥನೆ ಸಲ್ಲಿಸುತ್ತದೆ ಒಂದು ಕವಿತೆ.

ನೇಣುಗಂಬವನ್ನೇರುವ ಮುನ್ನ ಒಂದು ಕವಿತೆಯಲ್ಲಿ, “ದೇವ ನಿನ್ನ ಇಚ್ಛೆ ನೆರವೇರಲಿ. ನೀನು ನೀನೇ. ನನಾಗಲಿ, ನನ್ನ ಕಣ್ಣೀರಾಗಲಿ ಉಳಿಯುವುದಿಲ್ಲ. ದೇಹದಲ್ಲಿ ಉಸಿರು, ಧಮನಿಯಲ್ಲಿ ರಕ್ತ ಇರುವ ತನಕ ನಿನ್ನ ಸ್ಮರಣೆ ಮಾಡುತ್ತಾ ನಿನ್ನ ಕಾರ್ಯದಲ್ಲಿಯೇ ನಿರತನಾಗುವಂತೆ ಕರುಣಿಸು” ಎಂದು ಬೇಡಿದ್ದಾನೆ.

ವಜ್ರದಂತೆ ಕಠೋರ, ಆದರೆ ಹೂವಿನಂತೆ ಮೃದು

ರಾಮಪ್ರಸಾದ್‌ಬಿಸ್ಮಿಲ್‌ಧೀರನಾಗಿ ಬಾಳಿ, ಧೀರನಾಗಿ ಮಡಿದ ಆದರ್ಶ ಪುರುಷ. ಭಾರತೀಯ ಸಂಸ್ಕೃತಿಯು ಯಾವ ಉತ್ತಮ ಗುಣಗಳನ್ನು ಆದರ್ಶವೆಂದೆಣಿಸಿ ಗೌರವಿಸಿದೆಯೋ ಅವುಗಳ ಸಂಗಮ ಅವನು.

ಪರರ ಪಾದಘಾತಕ್ಕೆ ಈಡಾಗಿದ್ದ ದೇಶ ಮರಳಿ ಸ್ವತಂತ್ರವಾಗಬೇಕು ; ಅದನ್ನು ಸಾಧಿಸಲು ಸಶಸ್ತ್ರ ಕ್ರಾಂತಿ ಸರಿಯಾದ ದಾರಿ. ತಾನು ನಡೆಯುವ ದಾರಿಯಲ್ಲಿ ಎಡರು-ತೊಡರು, ಕಲ್ಲು-ಮುಳ್ಳುಗಳನ್ನೆಣಿಸದೆ ಕತ್ತೆತ್ತಿ ನಡೆದ. ಆ ದಾರಿಯಲ್ಲಿ ಮರಣ ಹೊಂಚು ಹಾಕಿತ್ತು. ಆಗಲೂ ಅವನು ವಿಚಲಿತನಾಗಲಿಲ್ಲ.

ಅವನು ಎಂದೂ ಯಾರಿಗೂ ವಿಶ್ವಾಸಘಾತ ಮಾಡಲಿಲ್ಲ. ತನಗೆ ವಿಶ್ವಾಸಘಾತ ಮಾಡುತ್ತಿದ್ದಾರೆ ಎಂದು ತೋರಿತೆಂದರೆ ಅವನ ಸ್ಥಾನಮಾನಗಳನ್ನೆಣಿಸದೆ ನಿರ್ಧಾಕ್ಷಿಣ್ಯದಿಂದ ಖಂಡಿಸಿದ್ದಾನೆ. ಒಂದು ರೀತಿಯಲ್ಲಿ ನೋಡಿದರೆ ಇವನು ಸತ್ತಿದ್ದೇ ಅವನು ವಿಶ್ವಾಸಘಾತ ಮಾಡಲು ಸಿದ್ಧನಿಲ್ಲದ್ದರಿಂದ.

ಕಾಕೋರಿ ಮೊಕದ್ದಮೆಗೆ ಸಂಬಂಧಪಟ್ಟ ಹಾಗೆ ಅವನನ್ನು ಬಂಧಿಸಿ ಪೊಲೀಸ್‌ಠಾಣೆಗೆ ಒಯ್ದಿದ್ದನ್ನು ಕುರಿತು ತನ್ನ ಆತ್ಮ ಚರಿತ್ರೆಯಲ್ಲಿ ಹೀಗೆ ಬರೆದಿದ್ದಾನೆ ; ರಾತ್ರಿಯೆಲ್ಲಾ ಪೊಲೀಸ್‌ಅಧಿಕಾರಿಗಳು ದಸ್ತಗಿರಿಯಲ್ಲಿ ತೊಡಗಿದ್ದುದರಿಂದ ನಿದ್ರಿಸಿರಲಿಲ್ಲ. ಎಲ್ಲರೂ ಆರಾಮದಿಂದ ಹೊರಟು ಹೋದರು. ಕಾವಲಿನ ಸಿಪಾಯಿಯೂ ಆಳವಾದ ನಿದ್ರೆಯಲ್ಲಿದ್ದ. ಕಚೇರಿಯಲ್ಲಿ ಒಬ್ಬನೇ ಒಬ್ಬ ಗುಮಾಸ್ತ ಬರೆಯುತ್ತಾ ಕುಳಿತಿದ್ದ. ಆತ ರೋಶನ್‌ಸಿಂಹ್ನ ಚಿಕ್ಕಮ್ಮನ ಮಗ. ಬೇಕೆನಿಸಿದ್ದರಿಂದ ಎದ್ದು ಹೋಗಿ ಬಿಡಬಹುದಾಗಿತ್ತು. ಆದರೆ ಗುಮಾಸ್ತ ಬಹಳ ತೊಡಕಿನಲ್ಲಿ ಸಿಕ್ಕಿ ಬೀಳುತ್ತಿದ್ದ. ನಾನು ಆತನನು ಕರೆದು ಮುಂದೆ ಒದಗಲಿರುವ ಆಪತ್ತನು ಆತ ಎದುರಿಸಲು ಸಿದ್ಧನಿದ್ದಲ್ಲಿ ನಾನು ಹೊರಟು ಹೋಗುವುದಾಗಿ ಹೇಳಿದೆ. ಆತ ನನ್ನನ್ನು ಅರಿತಿದ್ದ. ಕೂಡಲೇ ಪಾದಗಳ ಮೇಲೆ ಬಿದ್ದು ತನ್ನನ್ನು ಬಂಧಿಸುವುದಾಗಿಯೂ, ತನ್ನ ಹೆಂಡತಿ ಮಕ್ಕಳು ಹೊಟ್ಟೆಗಿಲ್ಲದೆ ಸತ್ತು ಹೋಗುವುದಾಗಿಯೂ ಹೇಳಿದ. ನನಗೆ ದಯೆ ಹುಟ್ಟಿತು. ಸ್ವಲ್ಪ ವೇಳೆಯ ನಂತರ ಅವನು ಹೊರಕ್ಕೆ ಹೋಗಿದ್ದಾಗಲೇ ಕಾವಲಿನ ಸಿಪಾಯಿಯೂ ಹೊರಟು. ಇತರ ಸಿಪಾಯಿಗಳು ಹೋಗುವ ಮೊದಲು “ಈ ಸೆರೆಯಾಳಿಗೆ ಬೇಡಿ ಹಾಕು” ಎಂದು ಹೇಳಿದರು. ಅವನು “ಈತ ಓಡಿ ಹೋಗುವುದಿಲ್ಲ ಎಂಬ ವಿಶ್ವಾಸ ನನಗಿದೆ” ಎಂದು ಹೇಳಿದ. ನಾವು ಒಂದು ನಿರ್ಜನ ಪ್ರದೇಶಕ್ಕೆ ಹೋದೆವು… ನಾನು ಗೋಡೆಯ ಮೇಲೆ ಕೈ ಊರಿ ಹಿಂತಿರುಗಿ ನೋಡಿದೆ. ಸಿಪಾಯಿ ಕುಸ್ತಿ ನೋಡುವುದರಲ್ಲಿ ಮಗ್ನನಾಗಿದ್ದ. ಕೈಗೆ ಒಂದು ತಳ್ಳು ತಳ್ಳಿದ್ದರೆ ಗೋಡೆಯ ಮೇಲೆ ಇರುತ್ತಿದ್ದ. ಆ ಮೇಲೆ ನನ್ನನ್ನು ಹಿಡಿಯಬಲ್ಲವರು ಯಾರು? ಆದರೆ ಹಿಂದೆಯೇ ಮನಸ್ಸು ಹೇಳಿತು : “ಯಾವ ಸಿಪಾಯಿ ನಿನ್ನಲ್ಲಿ ವಿಶ್ವಾಸವಿಟ್ಟು ಇಷ್ಟು ಸ್ವಾತಂತ್ರ್ಯ ಕೊಟ್ಟಿದ್ದಾನೋ, ಅವನಿಗೆ ಮೋಸ ಮಾಡಿ ಓಡಿ ಹೋಗಿ ಅವನನ್ನು ಜೈಲಿಗೆ ಹಾಕಿಸುವೆಯಾ? ಅದು ಒಳ್ಳೆಯದೆ? ಅವನ ಹೆಂಡತಿ ಮಕ್ಕಳು ಏನೆಂದಾರು?” ಈ ಭಾವ ಎದ್ದು ಹೃದಯವನ್ನು ಆವರಿಸಿತು. ಒಂದು ಸಲ ಬಲವಾಗಿ ಉಸಿರೆಳೆದುಕೊಂಡು, ಸಿಪಾಯಿಯನ್ನು ಕರೆದು ಪೊಲೀಸ್‌ಠಾಣೆಗೆ ಹಿಂದುರುಗಿದೆ.”

ಗುಮಾಸ್ತ, ಸಿಪಾಯಿ, ಯಾರೇ ಆಗಲಿ ತನ್ನಲ್ಲಿ ವಿಶ್ವಾಸ ತೋರಿದವರಿಗೆ ದ್ರೋಹ ಮಾಡಬಾರದು. ಅವನ ಈ ನಡತೆಯಿಂದ ಜೈಲಿನಲ್ಲಿ ಸಹ ಕಾವಲಿನ ಸಿಪಾಯಿಗಳಿಗೆ ಅವನಲ್ಲಿ ಅಪಾರ ವಿಶ್ವಾಸ ಬೆಳೆಯಿತು. ಮರಣದಂಡನೆ ಆದ ಮೇಲೂ ಅವನ ವಿಚಾರ ಹೀಗೇ ಉಳಿದು ತನ್ನನ್ನು ನಂಬಿದವರನ್ನು ಕಷ್ಟಕ್ಕೆ ಸಿಲುಕಿಸಿ, ಓಡಿ ಹೋಗಲು ಅವನು ಸಿದ್ಧನಿರಲಿಲ್ಲ.

ಕಾಕೋರಿ ರೈಲು ಡಕಾಯಿತಿ ದೇಶದ ಕ್ರಾಂತಿಕಾರಿ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟ. ಅದನ್ನು ನಿಯೋಜಿಸಿ, ಕರಾರುವಕ್ಕಾಗಿ ಸಾಧಿಸಿದ ಮಹಾವೀರ ರಾಮಪ್ರಸಾದ್‌ಬಿಸ್ಮಿಲ್‌.

ಕ್ರಾಂತಿಕಾರಿಯಾಗಿ, ಕ್ರಾಂತಿ ಸಾಹಿತಿಯಾಗಿ, ಅದಕ್ಕಿಂತ ಮಿಗಿಲಾಗಿ ಆದರ್ಶ ಪುರುಷನಾಗಿ ಪಂಡಿತ ರಾಮಪ್ರಸಾದ್‌ಬಿಸ್ಮಿಲ್‌ಚಿರಸ್ಮರಣೀಯ.

“ಸಹಸ್ರ ಬಾರಿ ದೇಶದ ಹಿತಕ್ಕಾಗಿ ಸಾವನ್ನು ಅಪ್ಪಬೇಕಾಗಿ ಬಂದರೂ ನಾನು ಅದನ್ನು ಲಕ್ಷಿಸೆನು. ಹೇ ದೇವ, ನೂರು ಬಾರಿ ಭಾರತದಲ್ಲಿ ಜನ್ಮ ನೀಡು, ಆದರೆ ಪ್ರತಿ ಬಾರಿಯೂ ದೇಶಸೇವೆ ಮಾಡುತ್ತ ಪ್ರಾಣ ಅರ್ಪಿಸುವಂತೆ ಕರುಣಿಸು.”

ಸ್ವತಂತ್ರ ಭಾರತದಲ್ಲಿ ಪ್ರತಿ ಹೃದಯದಿಂದ ಕೇಳಿ ಬರಬೇಕಾದ ಪ್ರಾರ್ಥನೆ ಇದು.