ಭಾರತೀಯ ಸಂಗೀತದ ಇತಿಹಾಸದಕ ದೃಷ್ಟಿಯಿಂದ ಕರ್ನಾಟಕ ಬಹು ಮಹತ್ವದ ಪ್ರದೇಶ. ಯಾಕೆಂದರೆ, ಈ ರಾಜ್ಯದಲ್ಲಿ ಭಾರತೀಯ ಸಂಗೀತದ ಎರಡು ಪ್ರಮುಖ ವಾಹಿನಿಗಳಾದ ಕರ್ನಾಟಕಿ (ದಕ್ಷಿಣಾದಿ) ಹಾಗೂ ಹಿಂದುಸ್ತಾನಿ(ಉತ್ತರಾದಿ) ಸಂಗೀತಗಳೆರಡೂ ಅಸ್ತಿತ್ವದಲ್ಲಿವೆ. ಕರ್ನಾಟಕದ ಉತ್ತರ ಭಾಗದಲ್ಲಿ ಹಿಂದುಸ್ತಾನಿ ಸಂಗೀತ ಕಳೆದ ಒಂದು ಶತಮಾನದಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದರೆ, ದಕ್ಷಿಣ ಭಾಗದಲ್ಲಿ ಕರ್ನಾಟಕಿ ಸಂಗೀತ ಪ್ರಮುಖವಾಗಿದೆ. ಆದರೆ, ಇಂದಿಗೂ ಎರಡೂ ಕಡೆಗಳಲ್ಲಿ ಎರಡೂ ಬಗೆಯ ಸಂಗೀತವನ್ನು ಆಸ್ವಾದಿಸುವ ರಸಿಕರು ನೆಲೆಗೊಂಡಿದ್ದಾರೆ.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಭಾಸ್ಕರಬುವಾ ಬಖಲೆ, ನತ್ವನಖಾನ್‌ ಹಾಗೂ ಉಸ್ತಾದ್‌ ಅಬ್ದುಲ್‌ ಕರೀಮಖಾನ್‌ ಮೊದಲಾದ ಪ್ರಬುದ್ಧ ಗಾಯಕರು ಧಾರವಾಡ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹಿಂದುಸ್ತಾನಿ ಸಂಗೀತ ಪ್ರಮುಖವಾಗಿ ನೆಲೆಗೊಳ್ಳುವಂತೆ ಶ್ರಮಿಸಿದ್ದಾರೆ. ತತ್ಪರಿಣಾಮವಾಗಿ ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಅನೇಕ ಶ್ರೇಷ್ಠ ಸಂಗೀತಗಾರರು ಈ ಭಾಗದಲ್ಲಿ ರೂಪುಗೊಂಡರು.

ಉತ್ತರ ಕರ್ನಾಟಕ ಭಾರತೀಯ ಸಂಗೀತಕ್ಕೆ ಅನೇಕ ಖ್ಯಾತ ಹಿಂದುಸ್ತಾನಿ ಸಂಗೀತಗಾರರನ್ನು ಕೊಡಮಾಡಿದೆ. ಸವಾಯಿ ಗಂಧರ್ವ, ಪಂಚಾಕ್ಷರಿ ಗವಾಯಿ, ಡಾ. ಗಂಗೂಬಾಯಿ ಹಾನಗಲ್‌, ಡಾ. ಮಲ್ಲಿಕಾರ್ಜುನ ಮನ್ಸೂರ, ಡಾ> ಪುಟ್ಟರಾಜ ಗವಾಯಿ, ಡಾ. ಬಸವರಜ ರಾಜಗುರು, ಕುಮಾರ ಗಂಧರ್ವ ಹಾಗೂ ಪಂ. ಭೀಮಸೇನ ಜೋಶಿ ಇವರೆಲ್ಲ ಆ ಸಾಲಿಗೆ ಸೇರುತ್ತಾರೆ. ಒಟ್ಟಾರೆಯಾಗಿ, ಇಡೀ ಉತ್ತರ ಕರ್ನಾಟಕದಿಂದ ಕರ್ನಾಟಕಿ ಸಂಗೀತದ ಪ್ರಭಾವ ಮರೆಯಾಗಿ ಹಿಂದುಸ್ತಾನಿ ಸಂಗೀತ ತನ್ನ ವರ್ಚಸ್ಸು ಸ್ಥಾಪಿಸಿಕೊಂಡಿತು.

ಈ ಎಲ್ಲ ಬೆಳವಣಿಗೆಯ ಹಿನ್ನಲೆಯಲ್ಲಿ ಕಾಗವಾಡದ ಕಲ್ಲೋಪಂತ ಬಿಜಾಪುರೆಯವರು ತಮ್ಮ ಮಗ ರಾಮಚಂದ್ರನಿಗೆ, ಆತನಲ್ಲಿರುವ ಜನ್ಮಜಾತ ಸಂಗೀತದ ಒಲವನ್ನು ಗುರುತಿಸಿ, ಹಿಂದುಸ್ತಾನಿ ಸಂಗೀತದ ಶಿಕ್ಷಣವನ್ನು ಕೊಡಿಸತೊಡಗಿದರು.

ಕಲ್ಲೋಪಂತ ವಿಜಾಪೂರರ ಮಜನೆತನದ ಮೂಲ ವಿಜಾಪುರ. ಇವರ ಪೂರ್ವಿಕರು ವಿಜಾಪುರದಿಂದ ಕಾಗವಾಡ ಸಂಸ್ಥಾನಕ್ಕೆ ಕಾರಭಾರಿ ಎಂಬ ಹುದ್ದೆಯಲ್ಲಿ ಬಂದು ಸೇರಿಕೊಂಡಿದ್ದರಿಂದ, ಕಾಗವಾಡದ ಜನ ಇವರನ್ನು ವಿಜಾಪೂರದವರು ಎಂದು ಗುರುತಿಸತೊಡಗಿದರು. ಕೊನೆಗೆ ಅದೇ ಇವರ ಮನೆತನದ ಹೆಸರೂ ಆಯಿತು.

ಕಲ್ಲೋಪಂತ ವಿಜಾಪುರೆ ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾದರೂ, ಪ್ರವೃತಿಯಿಂದ ಸಾಹಿತಿಗಳು, ಸಂಗೀತ ಪ್ರಿಯರು, ರಸಿಕರು. ಸ್ವಂತ ನಾಟಕ ರಚನೆ ಮಾಡುವುದಲ್ಲದೆ, ಆಗಿನ ಜನಪ್ರಿಯ ಮರಾಠಿ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಎಂಬ ನಾಟಕ ಇವರ ಸ್ವತಂತ್ರ ಕೃತಿ. ಸಂಶಯಕಲ್ಲೋಳ, ಏಕಚ ಪ್ಯಾಲ್ ನಾಟಕಗಳನ್ನು ಅನುಕ್ರಮವಾಗಿ ಸಂಶಯ ಸಂಭ್ರಮ, ಇದೇ ಸಾರಾಯಿ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಶಿವಚಿದಂಬರ ಚರಿತ್ರೆ, ಶ್ರೀ ಕಡವಿಸಿದ್ಧೇಶ್ವರ ಚರಿತ್ರೆ ಎಂಬ ಕೃತಿಗಳನ್ನು ಇವರು ರಚಿಸಿದ್ದಾರೆ. ಬಾಲಗಂಗಾಧರ ತಿಲಕರ ಕುರಿತು ಕನ್ನಡದಲ್ಲಿ ಅನೇಕ ಲೇಖನಗಳನ್ನು ರಚಿಸಿದ್ದಾರೆ.

ಇವರ ಪತ್ನಿ ಶ್ರೀಮತಿ ಗೋದೂಬಾಯಿಯವರೂ ಅಷ್ಟೇ ಸಾಂಪ್ರದಾಯಿಕವಾದ ದಾಸರ ಪದಗಳನ್ನು, ಜಾನಪದ ಸಂಗೀತದ ಬೀಸುವ ಕಲ್ಲಿನ ಹಾಡುಗಳನ್ನು ಬಲು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು. ಆಗಿನ ಕಾಲದಲ್ಲಿ ಮುಲ್ಕೀ ಪರೀಕ್ಷೆಯನ್ನು ಪಾಸು ಮಾಡಿ ಸುಶಿಕ್ಷಿತ ಗೃಹಿಣಿ ಅವರಾಗಿದ್ದರು.

ಕಲ್ಲೋಪಂತರ ಹಿರಿಯ ಸಹೋದರ ಕೃಷ್ಣಪ್ಪ ವಿಜಾಪುರೆ ಆ ಭಾಗದ ಖ್ಯಾತ ತಬಲಾವದಕ ಎನಿಸಿಕೊಂಡಿದ್ದರು. ಹೀಗೆ ವಿಜಾಪುರೆಯವರ ಮನೆತನದಲ್ಲಿ ಸಂಗೀತದ ವಾತಾವರಣ ಹಾಸುಹೊಕ್ಕಾಗಿತ್ತು.

ಇದೇ ಸಂದರ್ಭದಲ್ಲಿ ಕಲ್ಲೋಪಂತ ವಿಜಾಪುರೆಯವರಿಗೆ ಗೋಕಾಕ ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮಕ್ಕೆ ವರ್ಗವಾಯಿತು. ಆ ಕಾಲದ ಖ್ಯಾತ ನಾಟಕ ಮಾಸ್ತರ ಅಣ್ಣಿಗೇರಿ ಮಲ್ಲಯ್ಯನವರು ಕಲ್ಲೋಪಂತರ ಅನೇಕ ನಾಟಕಗಳಿಗೆ ಸಂಗೀತ ಸಂಯೋಜಿಸಿದವರಾಗಿದ್ದರು. ಮಲ್ಲಯ್ಯನವರಿಗೆ ಊಟ ಉಪಚಾರದ ಜೊತೆಗೆ ತಿಂಗಳಿಗೆ ೩೦.೦೦ ರೂಪಾಯಿ ಸಂಬಳವನ್ನು ಗೊತ್ತುಮಾಡಿ ನಾಲ್ಕು ತಿಂಗಳು ಕಾಲ ಅವರನ್ನು ತಮ್ಮಲ್ಲಿ ಕಲ್ಲೋಪಂತರು ಉಳಿಸಿಕೊಂಡರು.

ಕಲ್ಲೋಪಂತ ವಿಜಾಪುರೆಯವರ ಹಿರಿಯ ಮಗ ರಾಮಚಂದ್ರನಿಗೆ ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿ. ಮಲ್ಲಯ್ಯನವರು ಹೇಳುತ್ತಿದ್ದ ಸ್ವರಗಳನ್ನು ರಾಮಚಂದ್ರ ಹಾರ್ಮೋನಿಯಂನಲ್ಲಿ ಸ್ವತಃ ಗುರುತಿಸಿ ಅವುಗಳನ್ನು ತಕ್ಷಣವೇ ನುಡಿಸಿಬಿಡುತ್ತಿದ್ದ. ಹೀಗಾಗಿ ಮಲ್ಲಯ್ಯನವರು ಬಾಲಕ ರಾಮಚಂದ್ರನಿಗೆ ಸಂಗೀತ ಹೇಳಿಕೊಡಲು ಉತ್ಸುಕರಾದರು. ಆಗ ಕಲ್ಲೋಪಂತರ ಮನೆಯಲ್ಲಿ ಇದ್ದದ್ದು ಕಾಲುಪೆಟ್ಟಿಗೆ. ಕಾಲಿನಿಂದ ‘ಭಾತೆ’ಯನ್ನು ಒತ್ತಿ ಗಾಳಿ ತುಂಬಿಸಿ, ಸ್ವರ ನುಡಿಸುವುದು ಪುಟ್ಟಬಾಲಕನಿಗೆ ಸಾಧ್ಯವಿರಲಿಲ್ಲ. ಹೀಗಾಗಿ ಮಲ್ಲಯ್ಯನವರು ಹಾಗೂ ತಂದೆ ಕಲ್ಲೋಪಂತರು ಬಾಲಕ ರಾಮಚಂದ್ರನನ್ನು ತಮ್ಮ ತೊಡೆಯ ಮೇಲೆ ಕೂಡ್ರಿಸಿಕೊಂಡು, ತಾವು ಕಾಲಿನಿಂದ ಭಾತೆ ಹಾಕಿ,ಬಾಲಕನಿಗೆ ಸ್ವರ ನುಡಿಸಲು ಅನುವು ಮಾಡಿಕೊಡುತ್ತಿದ್ದರು. ಹೀಗೆ ಬಾಲಕ ರಾಮಚಂದ್ರ ಕಾಲು ಪೆಟ್ಟಿಗೆಯನ್ನು ನುಡಿಸುವ ಮೂಲಕ ಸಂಗೀತ ಸೇವೆಗೆ ಶ್ರೀಕಾರ ಹಾಕಿದ.

ನಾಲ್ಕು ತಿಂಗಳ ತರುವಾಯ ಮಲ್ಲಯ್ಯನವರು ಅಣ್ಣಗೇರಿಗೆ ಹೊರಟು ಹೋಧಾಗ ತಂದೆ ಕಲ್ಲೋಪಂತರೇ ಮಗನಿಗೆ ಗುರುವಾದರು. ಕಲ್ಲೋಪಂತರಿಗೆ ಸ್ವರಜ್ಞಾನ, ತಾಲಜ್ಞಾನ ಅಪಾರವಾಗಿತ್ತು. ಅವರು ಒಂಬತ್ತೂಕಾಲು ಹಾಗೂ ಹತ್ತುಕಾಲು ಮಾತ್ರೆಗಳ ತಾಲಗಳನ್ನು ನಿರ್ಮಿಸಿ ಅಂಕಲಗಿಯ ಅಡವಿಸಿದ್ಧೇಶ್ವರರ ಜಾತ್ರೆಯಲ್ಲಿ ಪ್ರದರ್ಶಿಸುತ್ತಿದ್ದರು. ಕರಡಿಮಜಲಿನ ಮೇಳದವರಿಗೆ ಅವುಗಳನ್ನು ಕಲಿಸಿ ಪ್ರಯೋಗಿಸುತ್ತಿದ್ದರು.

ಅಕ್ಕತಂಗೇರಹಾಳದ ಶ್ರೀಮಂತ ಗಂಗಪ್ಪ ದೇಶಪಾಂಡೆ ೩೦೦ ಎಕರೆ ಭೂಮಿಯ ಒಡೆಯರಾದರೂ  ಸಂಗೀತ ಪ್ರೇಮಿ. ತಮ್ಮ ಮನೆಯ ಒಂದು ಸಣ್ಣ ಕಾರ್ಯಕ್ರಮಕ್ಕೂ ಕಲ್ಲೋಪಂತರ ಇಡೀ ಕುಟುಂಬವನ್ನೇ ಭೋಜನಕ್ಕೆ ಆಹ್ವಾನಿಸುತ್ತಿದ್ದರು. ಅವರು ತಮ್ಮ ಮನೆಯಲ್ಲಿದ್ದ  ಹಾರ್ಮೋನಿಯಂ ಅನ್ನು (ಕೈಪೆಟ್ಟಿಗೆ) ರಾಮಚಂದ್ರನಿಗೆ ಕೊಟ್ಟುಬಿಟ್ಟರು. ಈಗ ರಾಮಚಂದ್ರನ ಸಂಗೀತ ವಿದ್ಯಾಭ್ಯಾಸ ಇನ್ನೂ ಸುಗಮವಾಯಿತು. ದೇಶಪಾಂಡೆ ಗಂಗಪ್ಪನವರಲ್ಲಿಗೆ ಬರುವ ಪ್ರವಚನಕಾರರಿಗೆ ಹಾಗೂ ಕೀರ್ತನಕಾರರಿಗೆ ರಾಮಚಂದ್ರ ಹಾರ್ಮೋನಿಯಂ ಸಾಥಿ ಒದಗಿಸತೊಡಗಿದ.

೧೯೨೯ರಲ್ಲಿ ಕಲ್ಲೋಪಂತರ ಪತ್ನಿವಿಯೋಗ. ಹೀಗಾಗಿ ಕಲ್ಲೋಪಂತರಿಗೆ ಅಕ್ಕತಂಗೇರಹಾಳದ ವಾಸ ಬೇಡವೆನಿಸಿ ಬೆಳಗಾವಿಯ ಕನ್ನಡ ಶಾಲೆಗೆ ವರ್ಗಾವಣೆ ಮಾಡಿಸಿಕೊಂಡು ವಲಸೆ ಹೋದರು. ಆಗ ಇಡೀ ಬೆಳಗಾವಿ ಸಂಗೀತಮಯವಾಗಿತ್ತು. ಸಂಗೀತ ಕ್ಷೇತ್ರದ ದಿಗ್ಗಜರೆಲ್ಲ ಆಗ ಬೆಳಗಾವಿಯಲ್ಲಿ ನೆಲೆ ನಿಂತಿದ್ದರು. ರಾಮಕೃಷ್ಣಬುವಾ ವಝೆ, ಶಿವರಾಮ ಬುವಾ ವಝೆ, ಪಂ. ಕಾಗಲಕರ ಬುವ, ಪಂ. ಉತ್ತರಕರ ಬುವಾ, ಪಂ. ಉಮಾ ಮಹೇಶ್ವರ ಬುವಾ ಮೊದಲಾದ ಖ್ಯಾತ ಗಾಯಕರು ಬೆಳಗಾವಿಯಲ್ಲಿದ್ದರು. ಪಂ. ರಾಜವಾಡೆ ಹಾಗೂ ಪಂ. ಗೋವಿಂದರಾವ ಗಾಯಕವಾಡ, ವಿಠ್ಠಲರಾವ ಕೋರಗಾವಕರರಂಥ ಶ್ರೇಷ್ಠ ಹಾರ್ಮೋನಿಯಂ ವಾದಕರು ಬೆಳಗಾವಿಯಲ್ಲಿ ನೆಲೆ ನಿಂತಿದ್ದರು. ಮೊಹಬೂಬಸಾಬ, ಅಬ್ಬಾಸಾಹೇಬ, ನಾರಾಯಣರಾವ ಚಿಕ್ಕೋಡಿ ತಬಲಾವಾದನದಲ್ಲಿ ಹೆಸರು ಮಾಡಿದವರಾಗಿದ್ದರು. ಕೃಷ್ಣಶಾಸ್ತ್ರೀ ಎಂಬ ಪಿಟೀಲು ವಾದಕರೂ ಇಲ್ಲಿದ್ದರು. ಹೀಗೆ ಸಂಗೀತಗಾರರ ಒಂದು ದಂಡೇ ಬೆಳಗಾವಿಯಲ್ಲಿ ನೆಲೆನಿಂತಿತ್ತು.

ವಿಜಾಪುರೆಯವರ ಮನೆತನ ಬೆಳಗಾವಿಗಎ ವಲಸೆ ಬಂದ ನಂತರ ಪಂ. ಕಾಗಲಕರ ಬುವಾರವರಲ್ಲೆ ಹಾಡುಗಾರಿಕೆಯನ್ನು ಬಾಲಕ ರಾಮಚಂದ್ರ ಅಧ್ಯಯನ ಮಾಡತೊಡಗಿದ. ಇದೇ ಸಂದರ್ಭದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಪಂ. ರಾಜವಾಡೆ ಹಾಗೂ ಪಂ. ಗೋವಿಂದರಾವ ಗಾಯಕವಾಡ ಇವರಲ್ಲಿ ಹಾರ್ಮೋನಿಯಂ ನುಡಿಸುವುದನ್ನು ಕಲಿಯತೊಡಗಿದರು. ರಾಮಚಂದ್ರ ಬಿಜಾಪುರೆ ಯೌವನಾವಸ್ಥೆಗೆ ಕಾಲಿಟ್ಟಾಗ ನಿಸರ್ಗದ ನಿಯಮದಂತೆ ದನಿಯಲ್ಲೂ ವ್ಯತ್ಯಾಸವಾಗತೊಡಗಿತು. ಹೀಗೆ ಎಳಸುದನಿ ಯೌವನದಲ್ಲಿ ಒಡೆದು ಗಡಸಾಗಿದ್ದರಿಂದ ಹಾಡುಗಾರಿಕೆಯನ್ನು ಕೈಬಿಟ್ಟು ಸಂಪೂರ್ಣವಾಗಿ ತಮ್ಮನ್ನು ಹಾಮೋನಿಯ ವಾದನದಲ್ಲಿ ತೊಡಗಿಸಿಕೊಂಡು. ಇದಾದನಂತರ ಧಾರವಾಡದಲ್ಲಿದ್ದ ಹಣಮಂತರಾವ ವಾಳವೇಕರ ಇವರಲ್ಲಿ ಹಾರ್ಮೋನಿಯಂ ವಾದನದ ಹೆಚ್ಚಿನ ಅಧ್ಯಯನವನ್ನು ಕೈಕೊಂಡರು.

ಪಂ. ರಾಮಭಾವು ವಿಜಾಪುರೆಯವರು ಸಂಪೂರ್ಣವಾಗಿ ಹಾರ್ಮೋನಿಯಂ ವಾದನಕ್ಕೆ ತಮ್ಮನ್ನು ತೊಡಗಿಸಿಕೊಂಢ ಹೊಸದರಲ್ಲಿ, ಬೆಳಗಾವಿಯಲ್ಲಿದ್ದ ಆಗಿನ ಸುಪ್ರಸಿದ್ಧ ಸಂಗೀತಗಾರ ಪಂ. ರಾಮಕೃಷ್ಣ ಬುವಾ ವಝೆ ಗುರ್ಲಹೊಸೂರಿನ ಚಿದಂಬರೇಶ್ವರರ ಸನ್ನಿಧಾನದಲ್ಲಿ ನಡೆಯುವ ಸಂಗೀತ ಸೇವೆಯ ಕಾರ್ಯಕ್ರಮಕ್ಕೆ ಜೊತೆ ವಾದ್ಯಕಾರರೆಂದು ಆಹ್ವಾನಿಸಿದರು. ಅದೊಂದು ವಿಶಿಷ್ಟವಾದ ಸಂದರ್ಭ. ಶ್ರೀಯುತ ಮಾಂಡ್ರೆ ಎಂಬುವವರು ೧೩ ಕೋಟಿ ಶಿವಚಿದಂಬರ ಜಪಯಜ್ಞದ ಏರ್ಪಾಡು ಮಾಡಿದ ಸಂದರ್ಭವದು. ಒಂದು ವಾರ ನಡೆದ ಈ ಜಪಯಜ್ಞ ಕಾಲಕ್ಕೆ ನಿತ್ಯ ಬೆಳಿಗ್ಗೆ ಪಂ. ರಾಮಕೃಷ್ಣಬುವ ವಝೆ ಬೆಳಗಿನ ೬ ರಿಂದ ೭ ರವರೆಗೆ ಗಾಯನ ಸೇವೆ ಮಾಡಿದ್ದು ಇವರಿಗೆ ಸಾಥಿದಾರರಾಗಿ ಪಂ. ರಾಮಭಾವು ವಿಜಾಪುರೆ ಒಂದು ವಾರ ಕಾರ್ಯಕ್ರಮ ಮುಗಿಸಿ ಹೊರಡುವಾಗ ಸಂಘಟಕರು ಕೇವಲ ವಝೆಬುವಾರಿಗೆ ಮಾತ್ರ ಸಂಭಾವನೆಯನ್ನು ನೀಡಿದರು. ಆಗ ವಝೆಬುವಾ ವಿಜಾಪುರೆಯವರಿಗೂ ಗೌರವ ಸಂಭಾವನೆ ಕೊಡುವಂತೆ ಹೇಳಿದಾಗ, ಸಂಘಟಕರು ೨೧ ರೂಪಾಯಿ ಹಾಗೂ ಆಶೀರ್ವಾದ ಕಾಯಿ ಕೊಟ್ಟರು. ಆ ದಿನ ಚಿದಂಬರೇಶ್ವರರ ಸನ್ನಿಧಾನದಲ್ಲಿ ದೊರೆತ ಮೊದಲ ಸಂಭಾವನೆಯನ್ನು ಬುವ ಈಗಲೂ ಕಾಯ್ದಿರಿಸಿದ್ದಾರೆ.

ಬೆಳಗಾವಿಯಲ್ಲಿ ಮೋಡಕ ಎಂಬ ಸಂಗೀತ ಪ್ರೇಮಿ ಪೋಸ್ಟ ಮಾಸ್ತರರಿದ್ದರು. ಅವರ ಹೆಂಡತಿಗೆ ಹಾಡು ಕಲಿಯುವ ಬಯಕೆ. ಅವರು ವಿಜಾಪುರೆಯವರನ್ನು ಒತ್ತಾಯಪೂರ್ವಕವಾಗಿ ತಮ್ಮ ಹೆಂಡತಿಗೆ ಹಾಡು ಹಾಗೂ ಹಾರ್ಮೋನಿಯಂ ಕಲಿಸುವಂತೆ ಕರೆದೊಯ್ದರು. ಅಲ್ಲಿಂದ ವಿಜಾಪುರೆಯವರ ಶಿಷ್ಯಪರಂಪರೆ ಮೊದಲ್ಗೊಂಡಿತು. ೧೯೩೪-೩೫ ರಿಂದ ಆರಂಭವಾದ ಸಂಗೀತ ಶಿಕ್ಷಕ ವೃತ್ತಿಯನ್ನು ಪಂ. ರಾಮಭಾವು ವಿಜಾಪುರೆಯವರು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಈ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅವರಿಂದ ಸಂಗೀತವನ್ನು ಕಲಿತಿದ್ದಾರೆ. ಸೈಕಲ್‌ ಮೇಲೆ ಪ್ರಯಾಣ ಮಾಡುತ್ತ ಬೆಳಗಾವಿಯ ವಿವಿಧ ಪ್ರದೇಶಗಳಿಗೆ ಹೋಗಿ ಸಂಗೀತ ಕಲಿಸಿ ಬರುವುದು ಈಗ ವಯಸ್ಸಿನ ಕಾರಣದಿಂದ ಸಾಧ್ಯವಿಲ್ಲದಿರಬಹುದು. ಆದರೆ ಮನೆಯಲ್ಲೇ ಕುಳಿತು ದಿನಾಲು ಹತ್ತಾರು ವಿದ್ಯಾರ್ಥಿಗಳಿಗೆ ಈಗಲೂ ಸಂಗೀತ ಕಲಿಸುತ್ತಿದ್ದಾರೆ. ಪಂ. ವಿಜಾಪುರೆಯವರು ಇತ್ತೀಚೆಗೆ ಪುಣೆಗೆ ಹೋದಾಗ, ಪಂ. ಭೀಮಸೇನ ಜೋಶಿಯವರಲ್ಲಿಗೆ ಸೌಜನ್ಯದ ಭೇಟಿಗಾಗಿ ಹೋಗಿದ್ದರು. ಆಗ ಜೋಶಿಯವರು ‘ಕಾ ಬುವಾ, ಸೈಕಲ್‌ವರನ ಆಲಾ ಕಾಯ್‌?’ (ಏನ್ರೀ ಬುವಾ ಸೈಕಲ್‌ ಮ್ಯಾಲ ಬಂದೀರೇನು?) ಎಂದು ಕೇಳಿದರಂಥೆ !! ಅದಕ್ಕೆ ಬಿಜಾಪುರೆಯವರು ‘ಹೌದ್ರಿ ನಿಮ್ಮ ಮನಿ ಕಂಪೌಂಡಿನ್ಯಾಗ ನಿಂದರಿಸಿ ಬಂದೀನಿ’ ಎಂದು ಪ್ರತಿ ಚೇಷ್ಟೆ ಮಾಡಿದರಂತೆ! ಹಾಗೆ ವಿಜಾಪುರೆಯವರ ಸೈಕಲ್‌ ಮೇಲಿನ ಸಂಗೀತಯಾತ್ರೆ ಬಹು ಪ್ರಖ್ಯಾತ.

ಬೆಳಗಾವಿಯ ಸಂಗೀತದ ಇತಿಹಾಸದಲ್ಲಿ ಶ್ರೀರಾಮ ಸಂಗೀತ ವಿದ್ಯಾಲಯದ ಪಾತ್ರ ಬಹು ಪ್ರಮುಖವಾದುದು. ೧೯೩೮ರಲ್ಲಿ ಪ್ರಾರಂಭವಾದ ಈ ಸಂಗೀತ ವಿದ್ಯಾಲಯ ೧೯೯೧ ರಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿತು. ಮೊದಲ ತಿಂಗಳು ಕೇವಲ ೧೧ ಹುಡುಗರಿಂದ ಪ್ರಾರಂಭವಾದ ಈ ಶಾಲೆಯಲ್ಲಿ ಲೀತನಕ ೫೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಗೀತಾಧ್ಯಯನ ಮಾಡಿದ್ದಾರೆ. ಈ ಶಾಲೆಯಲ್ಲಿದ್ದ ಅಂಧ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ವಿಜಾಪುರೆಯವರು ಉಚಿತ ಸಂಗೀತ ಶಿಕ್ಷಣ ನೀಡಿ, ಆ ಮೂಲಕ ಸಮಾಜ ಸೇವೆಯನ್ನು ಕೈಗೊಂಡಿದ್ದಾರೆ.

ಒಂದು ಸಂಗೀತ ಶಾಲೆಯನ್ನು ಯಶಸ್ವಿಯಾಗಿ ನಡೆಸುವ ಗುರು ಸ್ವತಃ ವಿದ್ವಾಂಸನಾಗಿರಬೇಕಾಗುತ್ತದೆ. ತನ್ನಲ್ಲಿರುವ ವಿದ್ವತ್ತನ್ನು ಶಿಷ್ಯಗಣಕ್ಕೆ ಅವರವರ ಕಲಾಭಿರುಚಿಗೆ ತಕ್ಕಂತೆ ಹಾಗೂ ಪ್ರತಿಭೆಗೆ ತಕ್ಕಂತೆ ಹಂಚುವುದೂ ಒಂದು ಕಲೆಯೇ. ಪಂ. ರಾಮಭಾವು ವಿಜಾಪುರೆಯವರು ಸಂಗೀತ ಅಲಂಕಾರ ಪರೀಕ್ಷೆ ಪಾಸಾಗಿರುವವರು. ಸಂಗೀಥ ಶಿಕ್ಷಕ ಸನದು ಕೂಡ ಅವರಿಗೆ ಪ್ರಾಪ್ತವಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ‘ಸರ್ವರೊಳಗೊಂದೊಂದು ನುಡಿಕಲಿತು’ ಎಂಬಂತೆ, ಒಳ್ಳೆಯ ಸಂಗೀತವನ್ನೆಲ್ಲ ತನ್ನಲ್ಲಿ ಅಳವಡಿಸಿಕೊಳ್ಳುತ್ತಲೇ ಪಂ. ರಾಮಭಾವು ವಿಜಾಪುರೆ ಓರ್ವ ಸಂಗೀತ ವಿದ್ವಾಂಸರಾಗಿ ರೂಪುಗೊಂಡಿದ್ದಾರೆ. ಹೀಗಾಗಿ ‘ಅಖಿಲಭಾರತ ಗಂಧರ್ವ ಮಹಾವಿದ್ಯಾಳಯ, ಹಾಗೂ ಕರ್ನಾಟಕ ಸರ್ಕಾರ ನಡೆಸುವ ಸಂಗೀತ ಪರೀಕ್ಷೆಗಳಿಗೆ ಅವರು ಪರೀಕ್ಷಕರಾಗಿಯೂ ನಿಯೋಜಿತರಾಗಿದ್ದಾರೆ.

ರಾಮಭಾವು ವಿಜಾಪುರೆ ಜೀವನದುದ್ದಕ್ಕೂ ಸಂಗೀತದೊಂದಿಗೇ ಬದುಕಿದ್ದಾರೆ. ಸುಮಾರು ೭೦ ವರ್ಷಗಳಿಂದಲೂ ಸಂಗೀತ ಅವರಲ್ಲಿ ಬೆರೆತು ಹೋಗಿದೆ. ಹಾರ್ಮೋನಿಯಂ ವಾದನದಲ್ಲಿ ಅತ್ಯಂತ ನಿಷ್ಣಾತ ಕಲಾವಿದ ಎಂದು ಕೀರ್ತಿ ಸಂಪಾದಿಸಿದ್ದಾರೆ. ನಿರ್ಜೀವವಾದ ಕಟ್ಟಿಗೆಯ ಪೆಟ್ಟಿಗೆಯಿಂದ ಉಜ್ವಲವಾದ ಸ್ವರಗಳನ್ನು ಹೊಮ್ಮಿಸಿ, ಶೋತೃಗಳನ್ನು ಗಂಧರ್ವಲೋಕಕ್ಕೆ ಕರೆದೊಯ್ಯಬಲ್ಲ ಮಾಂತ್ರಿಕ ಅವರಾಗಿದ್ದಾರೆ. ದೇಶದಾದ್ಯಂತ ಅನೇಕ ಕಡೆಗಳಲ್ಲಿ ಹಾರ್ಮೋನಿಯಂ ಸೋಲೋ ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯರಾಗಿದ್ದಾರೆ. ಮುಂಬೈ, ಪುಣೆ, ಗೋವಾ, ಹೈದರಾಬಾದ ಹಾಗೂ ಧಾರವಾಡ ಕೇಂದ್ರಗಳಿಂದ ಇವರ ಹಾಮೋನಿಯಂ ಸೋಲೋ ಕಾರ್ಯಕ್ರಮಗಳು ೧೯೭೨-೭೫ರ ಅವಧಿಯಲ್ಲಿ ಬಿತ್ತರಗೊಂಡಿದೆ.

ಪಂ. ರಾಮಭಾವು ವಿಜಾಪುರೆ, ೧೯೭೨ ರಿಂದಲೂ ಆಕಾಶವಾಣಿಯೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದವರು. ಮೊನ್ನೆ ಮೊನ್ನಿನ-ತನಕವೂ ಅವರು ಧಾರವಾಡ ಆಕಾಶವಾಣಿಯ ಮಹತ್ವದ ಕಾರ್ಯಕ್ರಮಗಳಿಗೆ ಸಾಥಿದಾರರೆಂದು ಹೋಗುತ್ತಲೇ ಇದ್ದರು. ಸುಮಾರು ೩೦ ವರ್ಷಗಳ ಗಾಢ ಅನುಭವದಲ್ಲಿ ಅವರು ಹಿಂದುಸ್ತಾನಿ ಸಂಗೀತದ ಹೆಸರಾಂತ ಕಲಾವಿದರೊಂದಿಗೆ ಸಾಥಿ ಮಾಡಿದ್ದಾರೆ. ಡಾ. ಗಂಗೂಬಾಯಿ ಹಾನಗಲ್‌, ಡಾ. ಮನ್ಸೂರ, ಡಾ. ಮನ್ಸೂರ, ಡಾ. ಬಸವರಾಜ ರಾಜಗುರು ಅಂಥ ಅಂತರಾಷ್ಟ್ರೀಯ ಖ್ಯಾತಿಯ ಗಾಯಕ ಗಾಯಕಿಯರೊಂದಿಗೆ ಅವರು ಆಕಾಶವಾಣಿಯ ಕಾರ್ಯಕ್ರಮಗಳಿಗೆ ಸಾಥಿ ಮಾಡಿದ್ದಾರೆ. ಶ್ರೀಮತಿ ಜಯಶ್ರೀ ಪಾಟಣೀಕರ, ಶ್ರೀಮತಿ ಜಾನಕಿ ಅಯ್ಯರ, ಶ್ರೀಮತಿ ಮಾಲಿನಿ ರಾಜೂರಕರ, ಶ್ರೀಮತಿ ಕಲ್ಪನಾ ಉಮೇಶ, ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರಂಥ ಖ್ಯಾತ ಕಲಾವಿದರೊಂದಿಗೆ ಹಾರ್ಮೋನಿಯಂ ನುಡಿಸಿದ್ದಾರೆ ಶ್ರೀಮತಿ ಕಲ್ಪನಾ ಉಮೇಶ, ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರಂಥ ಖ್ಯಾತ ಕಲಾವಿದರೊಂದಿಗೆ ಹಾರ್ಮೋನಿಯಂ ನುಡಿಸಿದ್ದಾರೆ. ಶ್ರೀ ಗಣಪತಿ ಭಟ್‌ ಹಾಸಣಗಿ ಹಾಗೂ ಶ್ರೀ ಅನಂತ ತೇರದಾಳರಂಥ ಭರವಸೆಯ ಗಾಯಕರೊಂದಿಗೂ ಅವರು ಸಾಥಿ ಮಾಡಿದ್ದಾರೆ.

ಆಕಾಶವಾಣಿ ಧಾರವಾಡ ಕೇಂದ್ರವು ಆರು ವರ್ಷಗಳ ಕಾಲ ಅವರನ್ನು  ಧ್ವನಿ ಪರೀಕ್ಷಾ ಮಂಡಳಿಯ ಸದಸ್ಯರೆಂದು ನೇಮಿಸಿಕೊಂಡು ಗೌರವಿಸಿದೆ. ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮಗಳೂ ಅವರು ಸಾಥಿದಾರರಾಗಿ ಹಾರ್ಮೋನಿಯಂ ನುಡಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ರಷ್ಯದ ಸಾಂಸ್ಕೃತಿಕ ತಂಡವೊಂದು ಬೆಳಗಾವಿಗೆ ಭೇಟಿ ನೀಡಿದಾಗ ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಾಗಿದ್ದ ಖ್ಯಾತ ಸಾಹಿತಿ ಶ್ರೀ ಚಂದ್ರಕಾಂತ ಕುಸನೂರ್ ರವರು ಪಂ. ರಾಮಭಾವು ವಿಜಾಪುರೆಯವರ ಹಾರ್ಮೋನಿಯಂ ವಾದನವನ್ನು ಆಐಓಜಿಸಿದ್ದರು. ರಷ್ಯದ ಪ್ರತಿನಿಧಿಗಳು ವಿಜಾಪುರೆಯವರ ನಾದಲೀಲೆಯನ್ನು ಆಸ್ವಾದಿಸುತ್ತಲೇ ಹಾರ್ಮೋನಿಯಂ ಮೇಲೆ ಬೆರಳುಗಳ ಚಲನವಲನಗಳ ಲೀಲೆಯನ್ನು ಬೆರಗಿನಿಂದ ಗಮನಿಸಿ ಅದರ ವೀಡಿಯೋ ಚಿತ್ರೀಕರಣವನ್ನು ಒಂದು ದಾಖಲೆಯಾಗಿ ಕೊಂಡೊಯ್ದಿರುವುದು ಉಲ್ಲೇಖಾರ್ಹ ಸಂಗತಿಯಾಗಿದೆ.

ಓರ್ವ ಹಾರ್ಮೋನಿಯಂ ವಾದಕ ತಾನೆಷ್ಟು ಪರಿಪಕ್ವ ಎಂಬುದನ್ನು ಗಮನಿಸಬೇಕಾದರೆ, ಆತ ಸಾಥಿ ನೀಡಿದ ಕಲಾವಿದರ ಪಟ್ಟಿಯನ್ನು ಗಮನಿಸಬೇಕಾಗುತ್ತದೆ. ಗಾಯ ಕರ ಮನೋಭಾವ ಪ್ರೌಢಿಮೆ ಅನುಭವಗಳನ್ನು ಅನುಸರಿಸಿ ಅವರ ಗಾಯನದೊಂದಿಗೆ ಸಾಮರಸ್ಯವನ್ನು ಸಾಧಿಸುತ್ತ ಕಾರ್ಯಕ್ರಮಕ್ಕೆ ಮೆರಗು ತರುವಂಥ ಸಾಥಿದಾರರನ್ನು ಮಾತ್ರ ಪ್ರಬುದ್ಧ ಗಾಯಕರು ಆಯ್ದುಕೊಳ್ಳುತ್ತಾರೆ. ಪಂ. ರಾಮಾವು ವಿಜಾಪುರೆಯವರು ಸಾಥಿ ಮಾಡಿದ ಗಾಯಕ ಗಾಯಕಿಯರ ಪಟ್ಟಿ ಬೆರಗುಗೊಳಿಸುವಂಥದ್ದು.

ಪಂ. ರಾಮಕೃಷ್ಣಬುವಾ ವಝೆ, ಉಸ್ತಾದ್‌ ಬಡೆಗುಲಾಂ ಅಲಿಖಾನ್‌, ಎ ಕಾನನ್‌, ಮಾಲವಿಕಾ ಕಾನನ್, ಉಸ್ತಾದ್‌ ವಿಲಾಯತಖಾನ, ಉಸ್ತಾದ್‌, ಅಮೀರಖಾನ್‌, ಉಸ್ತಾದ ಫಯ್ಯಾಜ್‌ಖಾನ್‌, ಉಸ್ತಾದ್‌ ನಿಸ್‌ಆರ ಹುಸೇನಖಾನ್‌, ಡಾ. ಗಂಗೂಬಾಯಿ ಹಾನಗಲ್‌, ಡಾ. ಮಲ್ಲಿಕಾರ್ಜುನ ಮನ್ಸೂರ, ಪಂ. ಭೀಮಸೇನ ಜೋಶಿ, ಡಾ. ಬಸವರಾಜ ರಾಜಗುರು, ಪಂ. ಕುಮಾರ ಗಂಧರ್ವ, ಹೀರಾಬಾಯಿ ಬಡೋದೆಕರ, ಕಿಶೋರಿ ಅಮಕೋಣಕರ, ಪರ್ವೀನ ಸುಲ್ತಾನಾ, ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ಡಾ. ಪ್ರೆಭಾ ಅತ್ರೆ, ಪಂ. ಜಸರಾಜ್‌, ದಿ. ವಸಂತರಾವ್‌ ದೇಶಾಪಾಂಡೆ ಹೀಗೆ ಹಿಂದುಸ್ತಾನಿ ಸಂಗೀತದ ದೇದೀಪ್ಯಮಾನವಾದ ರತ್ನಗಳೊಂದಿಗೆ ಸ್ವರ-ಸರಸವಾಡಿದ ಭಾಗ್ಯ ಇವರದಾಗಿದೆ.

ಪಂ. ರಾಮಭಾವು ವಿಜಾಪುರೆಯವರ ಪಾಂಡಿತ್ಯಕ್ಕೆ ತಕ್ಕುದಾದ ಹಲವಾರು ಮಾನ ಸಮ್ಮಾನಗಳು ಅವರನ್ನು ಅರಸಿಕೊಂಡು ಬಂದಿರುತ್ತವೆ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯು ಅವರನ್ನು ೧೯೮೨ ರಲ್ಲಿ ಪುರಸ್ಕರಿಸಿ ಗೌರವಿಸಿದ್ದೇ ಅಲ್ಲದೆ, ೧೯೮೫ ರಲ್ಲಿ ಕರ್ನಾಟಕ ಕಲಾತಿಲಕ ಪ್ರಶಸ್ತಿಯು ಅವರನ್ನು ಆರಸಿಕೊಂಡು ಬಂದಿದೆ. ಬೆಂಗಳೂರಿನ ಹಿಂದುಸ್ತಾನಿ ಕಲಾಕಾರ ಮಂಡಳಿ ೧೯೯೨ರಲ್ಲಿ ನಾದಶ್ರೀ ಎಂಬ ಬಿರುದು ನೀಡಿ ಗೌರವಿಸಿದೆ. ೧೯೯೯ ರಲ್ಲಿ ಅವರು ಪುಣೆಯಲ್ಲಿ ಸಂಗತಕಾರ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಕರ್ನಾಟಕ ಸರಕಾರವು ೨೦೦೧ ರಲ್ಲಿ ‘ರಾಜ್ಯ ಸಂಗೀತ ವಿದ್ವಾನ್‌’ ಗೌರವ ನೀಡಿ ಸನ್ಮಾನಿಸಿದೆ. ನಾಡಿನಾದ್ಯಂತ ಹಾಗೂ ನೆರೆಯ ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಅನೇಕ ಸಂಸ್ಥೆಗಳು ಅವರನ್ನು ಸನ್ಮಾನಿಸಿದೆ.

ಪಂ. ರಾಮಭಾವು ವಿಜಾಪುರೆಯವರ ಗರಡಿಯಲ್ಲಿ ಭರವಸೆದಾಯಕ ಶಿಷ್ಯಗಣ ರೂಪುಗೊಂಡಿದೆ. ಕುಂದಾ ವೇಲಿಂಗ್‌, ಮಾಣಿಕ್ಯ ಪಂಡಿತರಾವ್, ನೀಲಾ ಖಂಡಕರ, ಆಶಾ ಮೂರ್ತಿ (ಜೋಶಿ), ರೋಹಿಣಿ ಕುಲಕರ್ಣಿ, ಮಾಲಾ ಭಿಳಗುಂಡಿ, ಅಪರ್ಣಾ ಚಿಟ್ನೀಸ್‌, ನಂದಿನಿ ದಾಮಲೆ, ಅಪರ್ಣಾ ಚಿಟ್ನೀಸ್‌, ನಂದಿನಿ ದಾಮಲೆ, ಅಪರ್ಣಾ ಹುನಗುಂದ, ಮಂಜುಳಾ ಜೋಶಿ, ಶ್ರೀಧರ ಕುಲಕರ್ಣಿ ಹಾಗೂ ಕಿರಣ ಮೇಘ ಇವರೆಲ್ಲ ಹಾಡುಗಾರಿಕೆಯಲ್ಲಿ ಸಾಕಷ್ಟು ಹೆಸರುಗಳಿಸಿದ್ದಾರೆ. ಬಾನುಲಿ, ದೂರದರ್ಶನ ಕೇಂದ್ರಗಳು ಇವರಲ್ಲಿ ಕೆಲವರ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿವೆ. ಡಾ. ಸುಧಾಂಶು ಕುಲಕರ್ಣಿ, ರವೀಂದ್ರ ಮಾನೆ, ರವೀಂದ್ರ ಕಾಟೋಟಿ, ವಾಮನ ನಾಗೂಕರ, ನಿರ್ಮಲಾ ಪೈ ಕಾಕೋಡ ಮೊದಲಾದವರು ಹಾರ್ಮೋನಿಯಂ ವಾದನದಲ್ಲಿ ಹೆಸರು ಗಳಿಸಿದ್ದಾರೆ.

ಹೀಗೆ ಪಂ. ರಾಮಭಾವು ವಿಜಾಪುರೆ ಕಳೆದ ಏಳು ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ಬೆಟ್ಟದಷ್ಟು ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆಯಲ್ಲಿ ಸಂಗೀತ ಶಿಕ್ಷಕರಿರುವಾಗ ಪ್ರಾಥಮಿಕ ಶಾಲಾ ಸಂಗೀತ ಶಿಕ್ಷಕ ಎಂದು ಸಂಗೀತಕ್ಕೆ ಸಂಬಂಧಿಸಿದ ಗ್ರಂಥ ರಚನೆಯನ್ನು ಇವರು ಮಾಡಿದ್ದಾರೆ.ಈ ಎಲ್ಲ ಸಾಧನೆಗಳು ಸಾರ್ಥಕವೆನಿಸಿಕೊಂಡಿದ್ದು, ಹಿಂದುಸ್ತಾನಿ ಸಂಗೀತ ದಿಗ್ಗಜರೆನಿಸಿದ ಪಂ.ಭೀಮಸೇನ ಜೋಶಿ, ಡಾ. ಮಲ್ಲಿಕಾರ್ಜುನ ಮನ್ಸೂರ ಹಾಗೂ ಡಾ. ಗಂಗೂಬಾಯಿ ಹಾನಗಲ್‌ರವರು ವಿಶಿಷ್ಟ ಸಂದರ್ಭಗಳಲ್ಲಿ ಇವರನ್ನು ಸತ್ಕರಿಸಿದ್ದಾರೆ. ಡಾ. ಗಂಗೂಬಾಯಿ ಹಾನಗಲ್‌ರವರು ಒಮ್ಮೆ ಕುಂದಗೋಳದಲ್ಲಿ ಸವಾಇ ಗಂಧರ್ವ ಪುಣ್ಯತಿಥಿ ಸಂದರ್ಭದಲ್ಲಿ ಸಂಸ್ಥೆಯಿಂದ ಸತ್ಕರಿಸಿದ್ದಾರೆ. ಹಾಗೂ ಒಮ್ಮೆ ಬೆಳಗಾವಿಯಲ್ಲಿ ಶ್ರೀರಾಮ ಸಂಗೀತ ವಿದ್ಯಾಲಯದ ಸುವರ್ಣಮಹೋತ್ಸವದಲ್ಲಿ ಸತ್ಕರಿಸಿದ್ದಾರೆ. ಪಂ. ಭೀಮಸೇನ ಜೋಶಿಯವರು ವಿಜಾಪುರೆಯವರಿಗೆ ೭೫ನೇ ವರ್ಷಕ್ಕೆ ಪದಾರ್ಪಣ ಮಾಡಿದ್‌ಆಗ ಇವರ ಮನೆಗೆ ಬಂದು ಸತ್ಕರಿಸಿ ತಮ್ಮ ಹೃದಯ ವೈಶಾಲ್ಯವನ್ನು ಮೆರೆದಿದ್ದಾರೆ. ಡಾ. ಮಲ್ಲಿಕಾರ್ಜುನ ಮನ್ಸೂರರವರು ಅಲ್ಲಾದಿಯಾ ಖಾನ್‌ನರವರ ಪುಣ್ಯತಿಥಿಯಲ್ಲಿ ಸತ್ಕರಿಸಿದ್ದಾರೆ.

ಒಂದು ಮಾತು. ಪಂ. ರಾಮಭಾವು ವಿಜಾಪುರೆಯವರ ಈ ಸಾಧನೆಯ ಹಿಂದೆ ಅವರ ಧರ್ಮಪತ್ನಿ ಸೀತಾಬಾಯಿ, ಮಗಳು ಮಾಧವಿ ಕುಲಕರ್ಣಿ, ಅಳಿಯಂದಿರಾದ ಮೋಹನರಾವ್‌ ಕುಲಕರ್ಣಿ ಇವರ ಸಹಕಾರ ಹಾಗೂ ಹಾರೈಕೆಗಳು ಸೇರಿಕೊಂಡಿವೆ ಎಂಬುದನ್ನು ಮರೆಯುವಂತಿಲ್ಲ. ಮೊಮ್ಮಗ ಗಜಾನನ ಕುಲಕರ್ಣಿ ತಬಲಾ ವಾದನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಮ್ಮ ಬದುಕಿನುದ್ದಕ್ಕೂ ಸಂಗೀತ ಲೋಕದಲ್ಲೇ ವಿಹರಿಸುತ್ತ, ಸ್ವರಗಳ, ನಾದದ ಜೊತೆಗೆ ಒಡನಾಡುತ್ತ, ಅದನ್ನು ಆರಾಧಿಸಿ ಒಲಿಸಿಕೊಳ್ಳುತ್ತ ನಾದೋಪಾಸನೆ ಮಾಡಿದ ಪಂ.ರಾಮಭಾವು ವಿಜಾಪುರೆ ತಮ್ಮ ೮೬ರ ಇಳಿವಯಸ್ಸಿನಲ್ಲೂ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಯುವಕರಿಗೂ ಮಾದರಿಯಾಗಿದೆ. ಅನುಕರಣಾಹ್ವಾಗಿದೆ.