ರಾಮಮೋಹನ ರಾಯ್ದೇಶಕ್ಕಾಗಿಯೆ ಬದುಕಿ, ಅಗ್ನಿಯಂತೆ ಪರಿಶುದ್ಧವಾದ ಜೀವನ ನಡೆಸಿದ ಮಹಾತ್ಯಾಗಿ. ಮದುವೆಯಾಗಲಿಲ್ಲ, ತನಗಾಗಿ ತನ್ನವರಿಗಾಗಿ ಎಂದು ಏನನ್ನೂ ಬೇಡಲಿಲ್ಲ. ಶಕ್ತ ಸರ್ಕಾರಕ್ಕೆ ಹೆದರಲಿಲ್ಲ, ಜನರ ವಿರೋಧಕ್ಕೆ ಬಗ್ಗಲಿಲ್ಲ, ಸಾವಿಗೆ ಅಂಜಲಿಲ್ಲ. ‘‘ಅಂತರ ಭಾರತಿ’ ಯ ಸ್ಥಾಪಕ. ಭಾರತದ ಸ್ವಾತಂತ್ರ್ಯಕ್ಕಾಗಿ, ಬಡಬಗ್ಗರಿಗಾಗಿ, ಹಿಂದುಳಿದವರಿಗಾಗಿ ಬಾಳನ್ನು ತೆಯ್ದು, ಕಡೆಗೆ ತಾನೇ ಮರಣವನ್ನು ಸ್ವಾಗತಿಸಿದ ಹಿರಿಯ ಚೇತನ.

ರಾಮಮೋಹನ ರಾಯ್

ನಮ್ಮ ಹಿಂದುಸ್ಥಾನ್ ವಿಮಾನ ಕಾರ್ಖಾನೆ ತಯಾರಿಸಿದ ಪುಟ್ಟ ವಿಮಾನ ‘ನಾಟ್’. ಅಮೆರಿಕದವರು ಪಾಕಿಸ್ತಾನಕ್ಕೆ ಬಾಂಬ್ ಹಾಕುವ ಭಾರಿ ವಿಮಾನಗಳನ್ನು ಕೊಟ್ಟಿದ್ದರು. ೧೯೬೫ ರ ಯುದ್ಧದಲ್ಲಿ ‘ನಾಟ್’ ಈ ಅಮೆರಿಕದ ವಿಮಾನಗಳನ್ನು ಎದುರಿಸಿ ಓಡಿಸಿತು.

ಸರ್ ಸಿ.ವಿ.ರಾಮನರು ಭೌತ ವಿಜ್ಞಾನದಲ್ಲಿ ನೊಬೆಲ್ ಬಹುಮಾನ ಪಡೆದರು.

ನಮ್ಮ ವಿಜ್ಞಾನಿಗಳು, ತಂತ್ರಜ್ಞರು, ಉಪಾಧ್ಯಾಯರು ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಾರೆ.

ಯಂತ್ರಗಳನ್ನು ತಯಾರು ಮಾಡುವ ಯಂತ್ರಗಳನ್ನೇ ತಯಾರು ಮಾಡುವ ಹಿಂದುಸ್ಥಾನ್ ಯಂತ್ರ ಕಾರ್ಖಾನೆ ನಮ್ಮಲ್ಲಿದೆ.

ಇಂತಹ ಸಂಗತಿಗಳನ್ನು ನೆನೆಸಿಕೊಂಡಾಗ ಹೃದಯ ಹಿಗ್ಗುತ್ತದೆ. ಇಪ್ಪತ್ತನೆಯ ಶತಮಾನದಲ್ಲಿ ಪಾಶ್ಚಾತ್ಯ ರಾಷ್ಟ್ರಗಳನ್ನು ಸರಿಗಟ್ಟುತ್ತೇವೆ ಎಂಬ ವಿಶ್ವಾಸ ಮೂಡುತ್ತದೆ.

ಆದರೆ ನಮ್ಮ ದೇಶದವರು ಯಾರಿಗೂ ವಿಜ್ಞಾನ, ವೈದ್ಯ ವಿಜ್ಞಾನ, ಎಂಜಿನಿಯರಿಂಗ್ ಒಂದೂ ತಿಳಿಯದೆ ಇದ್ದಿದ್ದರೆ-!

ಈಗಲೂ ಜಪಾನ್, ರಷ್ಯ, ಜರ್ಮನಿ, ಅಮೆರಿಕ -ಇಂತಹ ದೇಶಗಳೊಂದಿಗೆ ಸ್ಪರ್ಧಿಸುವುದು ಎಷ್ಟು ಕಷ್ಟ!

ನಮ್ಮ ಕಾಲೇಜುಗಳಲ್ಲಿ ಸಂಸ್ಕೃತ, ಕನ್ನಡ ಮೊದಲಾದ ನಮ್ಮ ದೇಶದ ಭಾಷೆಗಳ ಪಾಠ ಬಿಟ್ಟು ಉಳಿದ ವಿಷಯಗಳನ್ನು-ಇಂಗ್ಲಿಷ್, ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ಎಂಜಿನಿಯರಿಂಗ್ ಎಲ್ಲ ಹೇಳಿಕೊಡಲು ಬೇರೆ ದೇಶದವರೇ ಬರಬೇಕಾಗಿದ್ದರೆ ಇನ್ನೂ ಎಷ್ಟು ಕಷ್ಟವಾಗುತ್ತಿತ್ತು!

ಸುಮಾರು ೧೫೦ ವರ್ಷಗಳ ಹಿಂದೆ, ನಮ್ಮ ದೇಶದ ಪಾಠಶಾಲೆಗಳಲ್ಲಿ ಹೇಳಿಕೊಡುತ್ತಿದ್ದುದು ಸಂಸ್ಕೃತ, ಪರ್ಷಿಯನ್ ಭಾಷೆಗಳನ್ನು ಮಾತ್ರ. ಪಾಶ್ಚಾತ್ಯ ದೇಶಗಳ ವಿಜ್ಞಾನವನ್ನು ತಿಳಿದುಕೊಳ್ಳಬೇಕೆಂದರೆ, ಸಿಕ್ಕುತ್ತಿದ್ದ ಪುಸ್ತಕಗಳೇ ಕಡಿಮೆ. ಅವೂ ಇಂಗ್ಲಿಷಿನಲ್ಲಿ ಇದ್ದವು. ನಮ್ಮವರಿಗೆ ಇಂಗ್ಲಿಷ್ ಬಾರದು.

ಹೀಗೇ ಆದರೆ ಭಾರತ ಹಿಂದುಳಿಯುತ್ತದೆ, ಭಾರತೀಯರು ಗಣಿತ, ವಿಜ್ಞಾನ ಮೊದಲಾದ ವಿಷಯಗಳನ್ನು ಕಲಿಯಬೇಕು ಎಂದು ವಾದಿಸಿ, ತಾನೇ ಕೈಯಿಂದ ಹಣ ಸುರಿದು ಇಂಗ್ಲಿಷ್, ವಿಜ್ಞಾನ ಮೊದಲಾದ ವಿಷಯಗಳನ್ನು ಹೇಳಿಕೊಡಲು ಕಾಲೇಜೇ ನಡೆಸಿದ ಮಹಾನುಭಾವ ರಾಜಾ ರಾಮಮೋಹನ ರಾಯ್.

ಇದರಿಂದಲೇ ಈತನನ್ನು ಹೊಸ ಭಾರತದ ನಿರ್ಮಾಪಕ ಎನ್ನುವುದು.

ಆದರೆ ಭಾರತ ಎಂದರೆ, ಹಿಂದು ಧರ್ಮ ಎಂದರೆ ಈತನಿಗೆ ತುಂಬ ಗೌರವ, ಅಭಿಮಾನ.

ಜನನ ಮತ್ತು ಬಾಲ್ಯ

ಹದಿನೆಂಟನೆಯ ಶತಮಾನದ ಕೊನೆಯ ಭಾಗ. ಭಾರತ ನೂರಾರು ವರ್ಷಗಳಿಂದ ಹೊರದೇಶದವರ ಆಕ್ರಮಣಕ್ಕೆ ಸಿಕ್ಕಿ ಸೊರಗಿತ್ತು. ಎಂಟು ನೂರು ವರ್ಷಗಳ ಮುಸ್ಲಿಮರ ಆಳ್ವಿಕೆ ಮುಗಿಯುತ್ತ ಬಂದಿತ್ತು. ಭಾರತದಲ್ಲಿ ಬಡತನ, ಅಜ್ಞಾನಗಳು ತುಂಬಿದ್ದುವು. ವ್ಯಾಪಾರಕ್ಕೆ ಎಂದು ಬಂದ ಇಂಗ್ಲಿಷರು ಕ್ರಮೇಣ ರಾಜ್ಯಗಳನ್ನು ವಶಮಾಡಿಕೊಂಡರು. ಭಾರತೀಯರಲ್ಲಿ ಬಹು ಮಂದಿಗೆ ತಮ್ಮ ಹಿರಿಯ ಧರ್ಮ ಮತ್ತು ಸಂಸ್ಕೃತಿಗಳೂ ಅರ್ಥವಾಗಿರಲಿಲ್ಲ. ಅನೇಕ ಜಾತಿ ಪಂಥಗಳು ಬೇರೆ. ವೇದಗಳ ಕಾಲದ ಭವ್ಯ ಪರಂಪರೆ ಧೂಳು ಮುಚ್ಚಿದ ಕನ್ನಡಿಯಂತಾಗಿದ್ದಿತು. ಸುತ್ತಲೂ ಅಜ್ಞಾನದ ಕತ್ತಲು. ಇಂತಹ ಸಮಯದಲ್ಲಿ ರಾಜಾ ರಾಮಮೋಹನ ರಾಯ್ ಅವರು ಹುಟ್ಟಿದರು.

ರಾಧಾನಗರ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಗೆ ಸೇರಿದ ಹಳ್ಳಿ. ಅಲ್ಲಿನ ರಮಾಕಾಂತ ರಾಯ್ ಎಂಬ ಆಚಾರಶೀಲ ಬ್ರಾಹ್ಮಣರ ಮನೆಯಲ್ಲಿ ೧೭೭೨ರ ಮೇ ತಿಂಗಳು ೨೨ ರಂದು ರಾಮಮೋಹನರು ಹುಟ್ಟಿದರು.

ರಾಮಮೋಹನರ ತಂದೆ-ತಾಯಿಯರು ದೈವಭಕ್ತರು. ಕುಲಾಚಾರವನ್ನೂ ಚಾಚೂ ತಪ್ಪದೆ ಆಚರಿಸುತ್ತಿದ್ದರು. ಧರ್ಮದಲ್ಲಿ ಅವರಿಗೆ ಅಪಾರ ಶ್ರದ್ಧೆ.

ಬಾಲಕ ರಾಮಮೋಹನನಿಗೆ ವಿಷ್ಣುವಿನಲ್ಲಿ ಅಚಲ ಭಕ್ತಿ, ಭಾಗವತದ ಒಂದು ಅಧ್ಯಾಯವನ್ನು ಪಠಿಸಿದಲ್ಲದೆ ಮೇಲಕ್ಕೆ ಏಳುತ್ತಿರಲಿಲ್ಲವಂತೆ. ಒಂದು ಸಾರಿ ವಾಲ್ಮೀಕಿ ರಾಮಾಯಣ ವನ್ನು ಮುಗಿಸಿದಲ್ಲದೆ ಊಟ ಮಾಡುವುದಿಲ್ಲವೆಂದು ಕುಳಿತಿದ್ದನಂತೆ. ತನ್ನ ಜೊತೆಗೆ ತಾಯಿಯೂ ಉಪವಾಸವಿರುವುದನ್ನು ತಿಳಿದು ಅವರಿಗಾಗಿ ಊಟಕ್ಕೆ ಎದ್ದನಂತೆ. ರಾಮಮೋಹನ ತನ್ನ ಹದಿನಾಲ್ಕನೆಯ ವಯಸ್ಸಿನಲ್ಲೇ ಸಂನ್ಯಾಸಿಯಾಗಿ ಹೋಗುವುದರಲ್ಲಿದ್ದ. ತಾಯಿಯ ಅದನ್ನು ತಡೆದರು.

ವಿದ್ಯಾಭ್ಯಾಸ

ಮುಸ್ಲಿಮರ ಕಾಲದಲ್ಲಿ ಆಡಳಿತಭಾಷೆ ಪರ್ಷಿಯನ್. ನೌಕರಿಗೆ, ಸರ್ಕಾರದೊಡನೆ ಪತ್ರವ್ಯವಹಾರಕ್ಕೆ ಅರಬ್ಬಿ, ಪರ್ಷಿಯನ್ ಭಾಷೆಗಳ ಅಗತ್ಯವಿದ್ದಿತು. ರಾಮಮೋಹನನಿಗೆ ತನ್ನ ಊರಿನಲ್ಲಿಯೇ ಸಂಸ್ಕೃತ, ಬಂಗಾಳಿ, ಅರಬ್ಬಿ, ಪರ್ಷಿಯನ್ ಭಾಷೆಗಳ ವಿದ್ಯಾಭ್ಯಾಸವಾಗಿದ್ದಿತು. ರಮಾಕಾಂತರು ನಿಷ್ಠಸಂಪ್ರದಾಯದವರೆ; ಆದರೂ ಮಗ ಮುಂದಕ್ಕೆ ಬರಬೇಕೆಂದು ಅವರಿಗೆ ಆಸೆ. ಕೇವಲ ಒಂಬತ್ತು ವರ್ಷದ ರಾಮಮೋಹನನನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಾಟ್ನಾಕ್ಕೆ ಕಳುಹಿಸಿದರು. ಹುಡುಗನಿಗೆ ಬಹು ಚುರುಕು ಬುದ್ಧಿ. ಪಾಟ್ನಾದಲ್ಲಿ ಖ್ಯಾತ ಮುಸಲ್ಮಾನ ವಿದ್ವಾಂಸರಲ್ಲಿ ಅವನಿಗೆ ಅರಬ್ಬಿ, ಪರ್ಷಿಯನ್ ಭಾಷೆಗಳ ಶಿಕ್ಷಣ ದೊರೆಯಿತು. ಅರಿಸ್ಟಾಟಲ್ ಮತ್ತು ಯೂಕ್ಲಿಡ್ ಎಂಬುವರು ಸಾವಿರಾರು ವರ್ಷಗಳ ಹಿಂದೆ ಗ್ರೀಸ್ ದೇಶದಲ್ಲಿದ್ದವರು. ಅವರ ಪುಸ್ತಕಗಳನ್ನು ರಾಮಮೋಹನ ಅರಬ್ಬಿ ಭಾಷೆಯಲ್ಲಿ ಓದಿದ. ಆ ಇಬ್ಬರೂ ವಿದ್ವಾಂಸರು ಸ್ಪಷ್ಟವಾಗಿ ಯೋಚಿಸುವ ಶಕ್ತಿಗೆ ಹೆಸರಾದವರು. ಅವರ ಪುಸ್ತಕಗಳನ್ನು ಓದಿದ್ದು ರಾಮಮೋಹನನ ಬುದ್ಧಿಗೆ ಒಳ್ಳೆಯ ಶಿಕ್ಷಣವಾಯಿತು. ತಾನೇ ಸ್ವತಂತ್ರವಾಗಿ ಯೋಚನೆ ಮಾಡುವ ಅಭ್ಯಾಸ ಅವನಿಗೆ ಬಂದಿತು.

ನಮ್ಮಲ್ಲಿ ಅನೇಕರು ದೇವರುಗಳ ಚಿತ್ರಗಳಿಗೆ, ವಿಗ್ರಹಗಳಿಗೆ ಪೂಜೆ ಮಾಡುತ್ತಾರೆ. ದೇವರಿಗೆ ರೂಪ ಉಂಟೇ ಎನ್ನಿಸಿತು ರಾಮಮೋಹನನಿಗೆ. ತನ್ನ ಮನೆಯಲ್ಲಿ ನಡೆಯುತ್ತಿದ್ದ ಮೂರ್ತಿಪೂಜೆ, ಹಬ್ಬ-ಹರಿದಿನಗಳ ಆಚರಣೆ ಇವುಗಳಲ್ಲಿ ಅವನಿಗೆ ಉದಾಸೀನತೆ ಮೂಡಿತು. ಅವನು ಮೂರ್ತಿಪೂಜೆ ತಪ್ಪು ಎಂದ. ತಂದೆಯವರು ಇದನ್ನು ಅಪಚಾರವೆಂದು ತಿಳಿದರು. ಮಗನಿಗೆ ಬುದ್ಧಿ ಹೇಳಿದರು. ಮಗನ ಮನಸ್ಸು ಕದಲಲಿಲ್ಲ. ತಂದೆ-ತಾಯಿಯರಿಗೂ ಮಗನಿಗೂ ಅಸಮಾಧಾನ ಬೆಳೆದು ರಾಮಮೋಹನ ಮನೆಯನ್ನೇ ಬಿಟ್ಟು ಹೊರಟ.

ದೇಶಸಂಚಾರ

ರಾಮಮೋಹನ ಚಿಕ್ಕವನಾದರೂ ವಿವೇಕಿ. ಮನೆಬಿಟ್ಟುಹೋದ ಹುಡುಗ ಗೊತ್ತುಗುರಿ ಇಲ್ಲದೆ ಅಲೆದಾಡಲಿಲ್ಲ. ಸಾಧುಗಳ ಗುಂಪೊಂದನ್ನು ಸೇರಿದನು. ಅವರೆಲ್ಲ ಹಿಮಾಲಯದ ತಪ್ಪಲಿನಲ್ಲಿ ಅಲೆದರು. ಅಲ್ಲಿಂದ ಟಿಬೆಟ್‌ಗೆ ಹೋದರು. ಅಲ್ಲಿ ಎಲ್ಲರೂ ಬೌದ್ಧರು. ಅವರೆಲ್ಲರೂ ತಮ್ಮ ಗುರುವನ್ನು ಪೂಜೆ ಮಾಡುತ್ತಿದ್ದರು. ಅಲ್ಲಿ ರಾಮ ಮೋಹನ ಬೌದ್ಧಮತ ತತ್ವಗಳನ್ನು ತಿಳಿದುಕೊಂಡ. ಗುರುವನ್ನು ದೇವರಂತೆ ಪೂಜಿಸುವುದನ್ನು ಖಂಡಿಸಿದ. ಇದರಿಂದ ಗುರುವಿಗೂ, ಅವನ ಅನುಯಾಯಿಗಳಿಗೂ ಸಿಟ್ಟು ಬಂದಿತು. ಧೈರ್ಯವಂತ ಹುಡುಗನ ಕೊಲೆಗೂ ಸಂಚು ನಡೆಯಿತು. ಅಲ್ಲಿಯ ಹೆಂಗಸರು ಹುಡುಗನಲ್ಲಿ ಕನಿಕರಗೊಂಡು ಅವನನ್ನು ಉಳಿಸಿದರು, ಭಾರತಕ್ಕೆ ಉಪಾಯವಾಗಿ ಕಳುಹಿಸಿಕೊಟ್ಟರು.

 ಸಂಸ್ಕೃತ ವಿದ್ಯಾಭ್ಯಾಸ

ದೇಶಾಂತರ ಹೋಗಿಬಂದ ಮಗನನ್ನು ತಂದೆ-ತಾಯಿಗಳು ಬಹಳ ಪ್ರೀತಿಯಿಂದ ಬರಮಾಡಿಕೊಂಡರು. ಸ್ವಭಾವದಲ್ಲಿ ತಂದೆಮಕ್ಕಳಿಗೆ ಈಗಲೂ ಹೊಂದಲಿಲ್ಲ. ಬುದ್ಧಿ ಬಂದೀತೆಂದು ರಮಾಕಾಂತರು ಮಗನಿಗೆ ಮದುವೆ ಮಾಡಿದರು. ಮಗನ ಮನಸ್ಸು ಬದಲಾಗಲಿಲ್ಲ. ರಾಮಮೋಹನರು ಕಾಶಿಗೆ ಹೋಗಿ ವೇದ, ಉಪನಿಷತ್ತು, ಹಿಂದುದರ್ಶನ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಅವರ ತಂದೆ ೧೮೦೩ ರಲ್ಲಿ ತೀರಿಹೋಗಲು ಮುರ್ಷಿದಾಬಾದಿಗೆ ಹಿಂತಿರುಗಿದರು.

ರಾಮಮೋಹನರ ಧಾರ್ಮಿಕ ಭಾವನೆಗಳು

ಮೂರ್ತಿಪೂಜೆಯ ವಿಷಯದಲ್ಲಿ ತಂದೆಯೊಡನೆ ಅಸಮಾಧಾನ, ಟಿಬೆಟ್‌ನಲ್ಲಿ ಅವರು ನಡೆದ ರೀತಿ-ಇವು ಒಂದು ವಿಷಯವನ್ನು ಎತ್ತಿ ತೋರಿಸುತ್ತವೆ. ರಾಮ ಮೋಹನರು ಸ್ವತಂತ್ರವಾಗಿ ಅಲೋಚಿಸುವವರು. ವೇದ, ಉಪನಿಷತ್ತುಗಳಲ್ಲಿ ತೋರಿಬರುವ ವಿಚಾರ ಸ್ವಾತಂತ್ರ್ಯವನ್ನು ಬಹುವಾಗಿ ಮೆಚ್ಚಿಕೊಂಡರು. ಶ್ರೇಷ್ಠ ಭಾವನೆಗಳನ್ನು ಮನುಷ್ಯರು ಜೀವನದಲ್ಲಿ ಉಳಿಸಿಕೊಂಡು ಹುರುಳಿಲ್ಲದ ಆಡಂಬರಗಳನ್ನೆಲ್ಲ ಬಿಟ್ಟುಬಿಡಬೇಕೆಂದು ಸಾರಿದರು. ತಾವು ಹಾಗೆಯೇ ನಡೆದುಕೊಂಡರು.

ಒಂದು ಬಾರಿ ಒಬ್ಬನು ಐದು ನೂರು ರೂಪಾಯಿಗಳ ಒಂದು ಶಂಖವನ್ನು ಮಾರಲು ತಂದನು. ‘‘ಈ ಶಂಖಕ್ಕೆ ಏನು ಬೇಕಾದರೂ ಕೊಡುವ ಶಕ್ತಿ ಇದೆ. ಇದು ಹತ್ತಿರವಿದ್ದರೆ ಸಕಲ ಸೌಭಾಗ್ಯಗಳೂ ದೊರೆಯುತ್ತವೆ’’ ಎಂದು ಹೊಗಳಿದನು. ಇದನ್ನು ಕೇಳಿದ ರಾಮಮೋಹನರ ಸ್ನೇಹಿತ ಕಾಲೀನಾಥರೆಂಬವರಿಗೆ ಶಂಖವನ್ನು ಕೊಳ್ಳಲು ಆಸೆಯಾಯಿತು. ರಾಮಮೋಹನರ ಸಲಹೆ ಕೇಳಿದರು. ರಾಮಮೋಹನರು ನಕ್ಕು, ‘‘ಈ ಶಂಖದಿಂದ ಲೋಕದ ಐಶ್ವರ್ಯವೆಲ್ಲ ದೊರೆಯುವುದೆಂದ ಮೇಲೆ ಇದು ಸಾಕ್ಷಾತ್ ಲಕ್ಷ್ಮಿಯೇ ಸರಿ. ಪಾಪ, ಆ ಲಕ್ಷ್ಮಿಯನ್ನು ಇವನೇಕೆ ಮಾರುವನೋ ಕಾಣೆ!’’  ಎಂದರಂತೆ. ಮಾತು ಕಿವಿಗೆ ಬೀಳುತ್ತಿದ್ದಂತೆಯೇ ಶಂಖದವನು ಕಾಣೆಯಾದನು.

ರಂಗಪುರದಲ್ಲಿ

ರಾಮಮೋಹನರು ಈಸ್ಟ್ ಇಂಡಿಯಾ ಕಂಪನಿಯ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಜಾನ್ ಡಿಗ್ಬಿ ಎಂಬ ಆಂಗ್ಲ ಅಧಿಕಾರಿಯ ಸಹಾಯಕ ಅಧಿಕಾರಿಯಾಗಿ ನೇಮಕಗೊಂಡರು. ಅವರು ನೌಕರಿಯಲ್ಲಿ ೧೮೦೯ ರಿಂದ ೧೮೧೪ ರವರೆಗೆ ರಂಗಪುರದಲ್ಲಿದ್ದರು. ದಕ್ಷತೆಯಿಂದ ಕೆಲಸಮಾಡಿ ಜಾನ್ ಡಿಗ್ಬಿಯವರ ಮೆಚ್ಚಿಕೆಯನ್ನು ಪಡೆದರು.

ರಂಗಪುರದಲ್ಲಿದ್ದಷ್ಟು ದಿನಗಳು ಒಳ್ಳೆಯ ನೌಕರಿ, ಕೈತುಂಬ ಸಂಬಳ, ಹಳ್ಳಿಯ ಆಸ್ತಿ ಇಷ್ಟಿದ್ದರೂ ಅವರು ಸುಖಪಡಬೇಕೆಂದು ಹಂಬಲಿಸಲಿಲ್ಲ.

ರಾಮಮೋಹನರು ಆರಡಿ ಎತ್ತರದ ಆಳು; ಅವರದು ಸುಪುಷ್ಟ ದೇಹ; ಸುಂದರವಾದ, ತೇಜಸ್ಸಿನ ಮುಖ; ಗಂಭೀರ ಹಾಗೂ ಸುಸಂಸ್ಕೃತ ನಡೆನುಡಿ. ಅಸಾಧಾರಣ ವ್ಯಕ್ತಿತ್ವ ಅವರದು.

ರಾಮಮೋಹನರು ತಮ್ಮ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು. ಪುಸ್ತಕಗಳನ್ನು ಓದುತ್ತಿದ್ದರು; ಅಲ್ಲದೆ ಡಿಗ್ಬಿಯವರಿಗೆ ಇಂಗ್ಲೆಂಡಿನಿಂದ ಬರುತ್ತಿದ್ದ ಇಂಗ್ಲಿಷ್ ವೃತ್ತಪತ್ರಿಕೆಗಳನ್ನೆಲ್ಲ ಓದುತ್ತಿದ್ದರು. ಇದರಿಂದ ಅವರಿಗೆ, ಭಾರತದಲ್ಲಿ ಎಷ್ಟೋ ಜನಕ್ಕೆ ಸ್ವಲ್ಪವೂ ತಿಳಿಯದಿದ್ದ ವಿಷಯಗಳೆಲ್ಲ ಗೊತ್ತಿರುತ್ತಿದ್ದುವು. ಫ್ರಾನ್ಸಿನಲ್ಲಿ ಆಗತಾನೆ ಮುಗಿದಿದ್ದ (೧೭೮೯-೧೭೯೫) ಮಹಾಕ್ರಾಂತಿಯ ವಿಷಯವನ್ನು ತಿಳಿದಿದ್ದರು; ಯೂರೋಪಿನಲ್ಲಿ ಜ್ಞಾನಭಂಡಾರ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದನ್ನು ತಿಳಿದಿದ್ದರು. ಸ್ವಾತಂತ್ರ್ಯ, ಎಲ್ಲರ ಸಮಾನತೆ, ಪ್ರಜೆಗಳ ಆಡಳಿತ ಮೊದಲಾದ ವಿಷಯಗಳಲ್ಲಿ ಆ ದೇಶಗಳಲ್ಲಿ ಜನರೂ ವಿದ್ವಾಂಸರೂ ಏನು ಅಭಿಪ್ರಾಯ ಪಡುತ್ತಾರೆ ಎಂಬುದನ್ನು ತಿಳಿದಿದ್ದರು.

ಡಿಗ್ಬಿಯವರ ಮನೆಗೆ ಬೇರೆ ದೇಶಗಳಿಂದ ಹಲವರು ಬರುತ್ತಿದ್ದರು. ರಾಮಮೋಹನರು ಅವರೊಡನೆ ಬೆರೆತು ಇಂಗ್ಲಿಷಿನಲ್ಲಿ ಸರಾಗವಾಗಿ ಸಂಭಾಷಿಸುವುದನ್ನೂ, ಚೆನ್ನಾಗಿ ಬರೆಯುವುದನ್ನೂ ಕಲಿತರು. ಸುಂದರವೂ, ಬಿಗಿಯಿಂದ ಕೂಡಿದುದೂ ಆದ ಇಂಗ್ಲಿಷ್ ಭಾಷಾ ಶೈಲಿಯನ್ನು ಬೆಳೆಸಿಕೊಂಡರು.

ರಾಮಮೋಹನರಿಗೆ ವ್ಯಾಸಂಗದಲ್ಲಿ ಬಹು ಆಸಕ್ತಿ. ಎಷ್ಟೊಂದು ಕಲಿತರು ಅವರು! ಎಲ್ಲವನ್ನೂ ಆಳವಾಗಿ ಅಭ್ಯಾಸ ಮಾಡಿದರು. ಜೈನ ವಿದ್ವಾಂಸರ ಸಹಾಯದಿಂದ ಜೈನರ ಧರ್ಮಗ್ರಂಥಗಳನ್ನು ಓದಿದರು. ಮುಸಲ್ಮಾನ ವಿದ್ವಾಂಸರಿಂದ ಸೂಫಿ ತತ್ವವನ್ನು ತಿಳಿದರು. ಸಂಸ್ಕೃತದಲ್ಲಿ ವೇದಪಾಠ ಮೊದಲೇ ಆಗಿದ್ದಿತು. ತಮ್ಮ ಮನೆಯಲ್ಲಿ ವಿದ್ವಾಂಸರ ಸಭೆ ಏರ್ಪಡಿಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಇದರಿಂದ ಅವರ ಜ್ಞಾನ ಹೆಚ್ಚಿತು.

ರಾಮಮೋಹನರು ವಿರಾಮದ ವೇಳೆಯನ್ನೆಲ್ಲಹೊಸ ವಿಷಯಗಳನ್ನು ತಿಳಿಯುವುದಕ್ಕೆ ಮತ್ತು ಸಮಾಜದ ಸೇವೆಯಲ್ಲಿ ಕಳೆದರು. ಉಪನಿಷತ್ತು ಮುಂತಾದ ಪವಿತ್ರ ಗ್ರಂಥಗಳನ್ನು ಬಂಗಾಳಿ, ಇಂಗ್ಲಿಷ್‌ಗಳಿಗೆ ಭಾಷಾಂತರಿಸಿ ಅಚ್ಚು ಹಾಕಿಸಿದರು.

ವಿದೇಶಕ್ಕೂ ಹೋಗಿ ತಿಳುವಳಿಕೆ ಹೆಚ್ಚಿಸಿಕೊಳ್ಳಲು ಅವರಿಗೆ ಆಸೆ. ಆದರೆ, ನೆಂಟರೇ ನ್ಯಾಯಾಲಯದಲ್ಲಿ ದಾವೆ ಹಾಕಿದುದರಿಂದ ತೊಂದರೆಯಾಯಿತು. ಅವರು ವಿದೇಶಕ್ಕೆ ಹೋಗಲು ತಡೆಯಾಯಿತು.

ರಾಮಮೋಹನರ ವಿಶ್ವಾಸವನ್ನು ಪಡೆದಿದ್ದ ಡಿಗ್ಬಿಯವರು ೧೮೧೪ ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿದರು. ರಾಮಮೋಹನರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕಲ್ಕತ್ತದಲ್ಲಿ ಬಂದು ನೆಲಸಿದರು. ಅವರ ಮುಂದಿನ ಜೀವ ಮಾನವೆಲ್ಲ ಸಾರ್ವಜನಿಕ ಸೇವೆಗೆ ಮೀಸಲಾಯಿತು.

ತಮ್ಮ ದೇಶ ಏಳಿಗೆ ಹೊಂದಬೇಕು ಎಂಬುದೇ ರಾಮಮೋಹನರ ಹಂಬಲ. ಅದಕ್ಕಾಗಿ ಜನರ ಅಜ್ಞಾನ ಹೋಗಬೇಕು, ವಿದ್ಯೆ ಬೆಳೆಯಬೇಕು. ಈ ಕಾರ್ಯಕ್ಕೆ ಮುಡುಪಾದರು ಅವರು.

ದೊಡ್ಡ ಕೆಲಸಕ್ಕೆ ಸಿದ್ಧತೆಯೂ ಶ್ರದ್ಧೆಯಿಂದ, ದೊಡ್ಡದಾಗಿ ನಡೆಯಬೇಕಲ್ಲವೆ? ಈ ಮಹಾಕಾರ್ಯಕ್ಕೆ ಬೇಕಾದ ಸಿದ್ಧತೆಯನ್ನೂ ಅವರು ಮಾಡಿಕೊಂಡಿದ್ದರು. ಎಲ್ಲ ಮತಗ್ರಂಥಗಳ ಸಾರವನ್ನೂ ತಿಳಿದಿದ್ದರು. ಮೂಢ ನಂಬಿಕೆಗಳೂ ದುಷ್ಟಪದ್ದತಿಗಳೂ ಭಾರತೀಯ ಸಂಸ್ಕೃತಿಯ ಉಜ್ವಲ ಪ್ರಕಾಶವನ್ನು ಮಂಕು ಮಾಡಿದ್ದುವು; ಆ ಎಲ್ಲ  ಕೊಳೆಯನ್ನು ತೊಳೆಯುವುದು ಮೊದಲ ಕೆಲಸ. ಅನಂತರ ಜಗತ್ತಿನ ಇತರ ದೇಶಗಳಲ್ಲಿ ವಿದ್ಯಾಭ್ಯಾಸ ಪದ್ಧತಿ ಹೇಗೆ ಬೆಳೆದಿದೆ, ಜನ ಹೇಗೆ ನಡೆಯುತ್ತಾರೆ, ಜನರ ಬಡತನವನ್ನು ಕಳೆಯಲು ಏನು ಪ್ರಯತ್ನಗಳು ನಡೆದಿವೆ ಎಂದು ತಿಳಿದುಕೊಳ್ಳುವುದು; ಆ ದೇಶಗಳಿಂದ ಒಳ್ಳೆಯದನ್ನು ನಮ್ಮ ದೇಶದಲ್ಲಿ ಆಚರಣೆಗೆ ತರುವುದು. ಹೀಗೆ ಅನೇಕ ಬದಲಾವಣೆಗಳನ್ನು ಮಾಡಲು ಹೊರಟರು ರಾಮಮೋಹನರು.

ಆದರೆ ಭಾರತದ ಹಳೆಯದನ್ನೆಲ್ಲ ಬಿಟ್ಟುಬಿಡಬೇಕು, ಇತರ ದೇಶಗಳವರನ್ನೆ ಅನುಸರಿಸಬೇಕು ಎಂದು ಅವರು ಭಾವಿಸಲಿಲ್ಲ. ತಮ್ಮ ಶಾಸ್ತ್ರಗಳನ್ನು ಅಲ್ಲಗಳೆಯದೆ ಅವನ್ನೇ ಆಧಾರವಾಗಿಟ್ಟುಕೊಂಡರು. ಆದರೆ ಅವನ್ನು ಅನುಸರಿಸುವಾಗ ಮಾತ್ರ ನಮ್ಮ ವಿವೇಚನೆ ತೋರಬೇಕೆಂದು ಹೇಳುತ್ತಿದ್ದರು. ಎಷ್ಟೊ ಬಾರಿ ಧರ್ಮಗ್ರಂಥಗಳಲ್ಲಿ ಏನು ಹೇಳಿದೆ ಎಂದು ತಿಳಿಯದೆ ಜನ ತಪ್ಪು ಪದ್ಧತಿಗಳನ್ನು ಆಚರಿಸುತ್ತಾರೆ. ಧರ್ಮಗ್ರಂಥಗಳು ಜನರಿಗೆ ತಿಳಿಯುವ ಭಾಷೆಯಲ್ಲಿದ್ದರೆ ಅವರೇ ಓದಿಕೊಳ್ಳಬಹುದು; ಇತರರು ‘ಧರ್ಮಗ್ರಂಥದಲ್ಲಿ ಹೀಗೆ ಹೇಳಿದೆ, ಹಾಗೆ ಹೇಳಿದೆ’ ಎಂದಾಗ ತಾವೇ ಓದಿ ನೋಡಬಹುದು. ಹಿಂದುಗಳ ಧರ್ಮಗ್ರಂಥಗಳು ಸಂಸ್ಕೃತದಲ್ಲಿದ್ದುವು. ರಾಮಮೋಹನರು ಹಲವು ಗ್ರಂಥಗಳನ್ನು ಬಂಗಾಳಿ ಭಾಷೆಗೆ ಭಾಷಾಂತರಿಸಿದರು. ಆ ಭಾಷಾಂತರದ ಪೀಠಿಕೆಯಲ್ಲಿ ಹೀಗೆಂದರು: ‘‘ನಾವು ಶಾಸ್ತ್ರಗಳಲ್ಲಿ ಹೇಳಿರುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅಲ್ಲದೆ ನಮ್ಮ ಕಾಲಕ್ಕೆ ಯಾವುದು ಹೊಂದುತ್ತದೆ ಎಂಬುದನ್ನು ಯೋಚಿಸಬೇಕು.’’

ರಾಮಮೋಹನರು ಸತ್ಯಪಕ್ಷಪಾತಿಗಳು. ತಮ್ಮಲ್ಲಿ ತಪ್ಪು ಕಂಡುಬಂದರೆ ಒಪ್ಪಿಕೊಂಡುಬಿಡುತ್ತಿದ್ದರು. ಅವರು ವಸಿಷ್ಠರ ಈ ಒಂದು ಮಾತನ್ನು ಉದಾಹರಿಸುತ್ತಿದ್ದರು: ‘‘ವಿವೇಕದ ಮಾತನ್ನು ಒಂದು ಮಗು ಹೇಳಿದರೂ ಅದನ್ನು ಒಪ್ಪಲೇಬೇಕು. ಆದರೆ ಅವಿವೇಕವಾದ ಮಾತು ಬ್ರಹ್ಮನ ಬಾಯಿಂದ ಬಂದರೂ ಅದನ್ನು ಹುಲ್ಲಿನಂತೆ ಎಸೆದು ಬಿಡಬೇಕು.’’

ಆತ್ಮೀಯ ಸಭೆ

ಐದು ಅಥವಾ ಆರು ವರ್ಷದ ಹುಡುಗಿಗೆ ಮದುವೆ.

ಗಂಡ ಸತ್ತರೆ, ಹೆಂಡತಿಗೆ ಇಷ್ಟವಿರಲಿ ಇಲ್ಲದಿರಲಿ, ಅವನೊಡನೆ ಸುಡುವುದು.

ಪೂಜೆ, ಹಬ್ಬ ಎಂದು ಅರ್ಥವಿಲ್ಲದ ಆಡಂಬರ, ಆಚಾರ.

ಹಲವು ದೇವರುಗಳ ಪೂಜೆ, ಈ ದೇವರು ಹೆಚ್ಚು ಆ ದೇವರು ಕಡಿಮೆ ಎಂಬ ಭಾವನೆ.

ಹಿಂದುಗಳಲ್ಲಿ ಇವೆಲ್ಲವನ್ನೂ ನೋಡಿ ರಾಮಮೋಹನರಿಗೆ ಬೇಸರವಾಗಿತ್ತು. ಹಿಂದು ಧರ್ಮದಲ್ಲಿ ಅವರಿಗೆ ತುಂಬ ಅಭಿಮಾನ. ಆದರೆ ಹಿಂದುಗಳು ತಮ್ಮ ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು, ಗಂಡಸು ಮತ್ತು ಹೆಂಗಸು ಸಮಾನ ಎಂದು ಕಾಣಬೇಕು, ಮೂಢನಂಬಿಕೆಗಳನ್ನು ಬಿಡಬೇಕು ಎಂದು ಅವರು ವಾದಿಸುತ್ತಿದ್ದರು.

ರಾಮಮೋಹನರ ಮನೆಗೆ ಬರುತ್ತಿದ್ದ ಸ್ನೇಹಿತರಲ್ಲಿ ಅನೇಕರು ಅವರ ವಿಚಾರಧಾರೆಯನ್ನು ಸರಿ ಎಂದು ಒಪ್ಪಿದ್ದರು. ಅಂತಹ ಆತ್ಮೀಯ ಗೆಳೆಯರ ಕೂಟವೊಂದನ್ನು ರಾಮಮೋಹನರು ರಚಿಸಿದರು. ಅದಕ್ಕೆ ‘‘ಆತ್ಮೀಯ ಸಭೆ’ ಎಂದೇ ಹೆಸರಾಯಿತು. ಅಲ್ಲಿ ಧಾರ್ಮಿಕ ಚರ್ಚೆ ನಡೆಯುತ್ತಿದ್ದಿತು. ಸಭೆಯ ಧಾರ್ಮಿಕ ಭಾವನೆಗಳನ್ನು ಜನರಲ್ಲಿ ಪ್ರಸಾರ ಮಾಡಬೇಕಾಗಿದ್ದಿತು.

ಅನೇಕ ವಿದ್ವಾಂಸರೇ ರಾಮಮೋಹನರನ್ನು ವಿರೋಧಿಸಿದರು. ರಾಮಮೋಹನರು ಉತ್ತರ ಕೊಟ್ಟು ಲೇಖನಗಳನ್ನು ಬರೆದರು. ಇದರಿಂದ ಸಾಮಾನ್ಯ ಜನರಿಗೂ ಧರ್ಮಗ್ರಂಥಗಳಲ್ಲಿ ಏನು ಹೇಳಿದೆ ಎಂಬುದು ತಿಳಿಯುವ ಹಾಗಾಯಿತು.

ಹಿಂದು ಧರ್ಮದಲ್ಲಿ ಅಭಿಮಾನ

ಕೆಸ್ತಮತ ಸಿದ್ಧಾಂತಗಳಲ್ಲಿ ರಾಮಮೋಹನರು ತೋರುತ್ತಿದ್ದ ಉತ್ಸಾಹ ಹಾಗೂ ಆಸಕ್ತಿಗಳನ್ನು ಕಂಡು ಕೆಲವರು ಕೆಸ್ತಪಾದ್ರಿಗಳು ಹಿಗ್ಗಿದರು. ಕೆಸ್ತರಾಗಬೇಕೆಂದು ಅವರಿಗೆ ಸೂಚಿಸಿದರು. ಈ ಪಾದ್ರಿಗಳಿಗೆ ರಾಮಮೋಹನರ ಅಂತರಂಗವೇ ಅರ್ಥವಾಗಲಿಲ್ಲ. ರಾಮಮೋಹನರು ಮನಃಪೂರ್ತಿಯಾಗಿ ಹಿಂದು ಧರ್ಮದಲ್ಲಿ ನಿಷ್ಠೆಯುಳ್ಳವರು. ವೇದ ಉಪನಿಷತ್ತುಗಳನ್ನು ಆಳವಾಗಿ  ಅಭ್ಯಾಸ ಮಾಡಿ ಅವುಗಳಲ್ಲಿ ಪೂಜ್ಯಭಾವನೆ ಇದ್ದವರು.

ಒಬ್ಬರು ವೇದ, ಉಪನಿಷತ್ತುಗಳನ್ನು ಹಳಿದರಂತೆ. ಅದಕ್ಕೆ ರಾಮಮೋಹನರು, ‘‘ವಿಶ್ವಕ್ಕೆಲ್ಲ ಒಬ್ಬನೇ ದೇವರು, ಅವನಿಗೆ ಆಕಾರವಿಲ್ಲ, ಮನುಷ್ಯರು ವರ್ಣಿಸಲು ಸಾಧ್ಯವಾಗುವ ಗುಣಗಳಿಲ್ಲ, ಅವನು ಆನಂದಮಯನು, ಸಕಲ ಪ್ರಾಣಿಗಳಲ್ಲಿಯೂ ಪರಮಾತ್ಮನ ಅಂಶವಿದ್ದೇ ಇದೆ ಎಂಬ ಉದಾತ್ತ ತತ್ವಗಳು ನಮ್ಮ ಉಪನಿಷತ್ತುಗಳಲ್ಲಿ ಬೆಳಗುತ್ತಿವೆ; ಇಷ್ಟು ಸ್ಪಷ್ಟವಾಗಿ ಇವು ಪ್ರಪಂಚದ ಮತ್ತಾವ ಮತಗ್ರಂಥಗಳಲ್ಲಿಯೂ ಕಂಡುಬಂದಿಲ್ಲ. ಅಲ್ಲದೆ, ಈ ಧರ್ಮಗ್ರಂಥಗಳು ಮನುಷ್ಯನು ತಾನೇ ಯೋಚಿಸುವಂತೆ ಪ್ರೋತ್ಸಾಹ ಕೊಡುತ್ತವೆ, ಹೊಸ ಹೊಸ ರೀತಿಗಳಲ್ಲಿ ಆಲೋಚಿಸಲು ದಾರಿ ತೋರಿಸುತ್ತವೆ; ಮನುಷ್ಯನ ಬುದ್ಧಿಶಕ್ತಿಯನ್ನು ಕಟ್ಟಿಹಾಕುವುದಿಲ್ಲ’’ ಎಂದು ಬಹುಸ್ಪಷ್ಟವಾಗಿ ಉತ್ತರ ಕೊಟ್ಟರಂತೆ! ಅವರು ಹಿಂದುಗಳ ಕೆಟ್ಟ ಪದ್ಧತಿಯನ್ನು ಖಂಡಿಸಿದರು, ಹಾಗೆಯೇ ಇತರ ಮತಗಳವರ ಮೂಢನಂಬಿಕೆಗಳನ್ನೂ ಅಲ್ಲಗಳೆದರು.

ದೇಶವನ್ನು ಮುಂದಕ್ಕೆ ನಡೆಸುವ ವಿದ್ಯೆ

ದೇಶದ ಜನ ಸುಖವಾಗಿರಬೇಕಾದರೆ ಚೆನ್ನಾಗಿ ಬೆಳೆ ಬೆಳೆಯುವುದನ್ನು ಕಲಿಯಬೇಕು, ಇದಕ್ಕೆ ಯಂತ್ರಗಳನ್ನೂ ಒಳ್ಳೆಯ ಗೊಬ್ಬರವನ್ನೂ ಉಪಯೋಗಿಸಲು ಕಲಿಯಬೇಕು, ಅಣೆಕಟ್ಟುಗಳನ್ನು ನಿರ್ಮಿಸಲು ಕಲಿಯಬೇಕು, ಕಾಲುವೆಗಳನ್ನು ತೋಡಲು ಕಲಿಯಬೇಕು, ಒಳ್ಳೆಯ ರಸ್ತೆಗಳು ಬೇಕು, ಸೇತುವೆಗಳು ಬೇಕು, ಆಸ್ಪತ್ರೆಗಳು ಬೇಕು, ಔಷಧಗಳನ್ನು ತಯಾರು ಮಾಡಬೇಕು….ಹೀಗೆ ‘ಬೇಕು’ಗಳ ಪಟ್ಟಿ ಬಹು ದೊಡ್ಡದು.

ಇವೆಲ್ಲ ‘ಬೇಕು’ ಗಳು ಸಾಧ್ಯವಾಗಬೇಕಾದರೆ, ಜನಕ್ಕೆ ವಿದ್ಯೆ ಬೇಕು, ಅಲ್ಲವೆ? ಹಲವು ಶಾಸ್ತ್ರಗಳನ್ನೂ, ವಿಜ್ಞಾನಗಳನ್ನೂ ಕಲಿತವರು ಬೇಕು, ಹೊರಗಿನ ದೇಶಗಳಲ್ಲಿ ಜ್ಞಾನ ಹೇಗೆ ಬೆಳೆಯುತ್ತಿದೆ ಎಂಬುದನ್ನು ತಿಳಿಯಬೇಕು.

ಇವತ್ತಿನ ಜಗತ್ತಿನಲ್ಲಿ ಒಂದು ದೇಶ ಬದುಕಬೇಕಾದರೆ, ತನ್ನ ಹಿಂದಿನ ಚರಿತ್ರೆ ಮತ್ತು ಸಂಸ್ಕೃತಿಗಳನ್ನೆ ಜ್ಞಾಪಿಸಿಕೊಂಡ ಮಾತ್ರಕ್ಕೆ ಸಾಲದು. ಅವನ್ನು ಮರೆಯದೆ, ಇಂದಿನ ಜಗತ್ತಿಗೆ ಅಗತ್ಯವಾದ ಜ್ಞಾನವನ್ನೂ ಶಕ್ತಿಯನ್ನೂ ಬೆಳೆಸಿಕೊಳ್ಳಬೇಕು.

ರಾಮಮೋಹನರ ಕಾಲಕ್ಕೂ ಶಾಲೆಗಳಿದ್ದವು. ಅವುಗಳಲ್ಲಿ ಆಡಳಿತ ಸೌಕರ್ಯಕ್ಕೆ ಬೇಕಾದ ಪರ್ಷಿಯನ್, ಅರಬ್ಬಿ ಭಾಷೆಗಳನ್ನು ಕಲಿಸುತ್ತಿದ್ದರು. ಹಿಂದುಗಳಿಗಾಗಿ ಸಂಸ್ಕೃತ ಪಾಠಶಾಲೆಗಳೂ ಇದ್ದವು. ಆದರೆ ಭಾರತದಲ್ಲಿ ಬಂಗಾಳಿ, ಮರಾಠಿ, ಕನ್ನಡ, ತೆಲುಗು-ಇಂತಹ ಅನೇಕ ಭಾಷೆಗಳನ್ನು ಉಪಯೋಗಿಸುವವರೂ ಇದ್ದಾರೆ. ಆ ಭಾಷೆಗಳೂ ಬೆಳೆಯಬೇಕಲ್ಲವೆ? ಇದಕ್ಕೆ ಅವಕಾಶ ಇರಲಿಲ್ಲ. ಪಾಠ ಹೇಳುತ್ತಿದ್ದ ರೀತಿ ಹಳೆಯ ಕಾಲದ್ದು. ಬಾಯಿಪಾಠ ಮಾಡುವುದೇ ಹೆಚ್ಚಾಗಿತ್ತು. ಮಕ್ಕಳು ಪಾಠ ಕಲಿಯದಿದ್ದರೆ ತುಂಬ ಕ್ರೂರ ಶಿಕ್ಷೆ. ಹೀಗೆ ಶಾಲೆಗಳಲ್ಲಿ ಕಲಿಸುತ್ತಿದ್ದ ವಿಷಯಗಳೂ ಸಾಲದು; ಗಣಿತ, ಚರಿತ್ರೆ, ಭೂಗೋಳ, ಭೌತವಿಜ್ಞಾನ, ಸಸ್ಯವಿಜ್ಞಾನ ಮೊದಲಾದವು ಇಲ್ಲವೇ ಇಲ್ಲ. ಜೊತೆಗೆ, ಕಲಿಸುತ್ತಿದ್ದ ರೀತಿಯೂ ಸರಿಯಾಗಿರಲಿಲ್ಲ.

ಕೆಲವರು ಇಂಗ್ಲಿಷ್ ಶಾಲೆಗಳನ್ನು ನಡೆಸುತ್ತಿದ್ದರು. ಅಲ್ಲಿಯೂ ಪಾಠಕ್ರಮ ಸರಿಯಾಗಿರಲಿಲ್ಲ. ಮಕ್ಕಳಿಗೆ ಇಂಗ್ಲಿಷ್ ಪದಗಳನ್ನು ಕಲಿಸುತ್ತಿದ್ದರು. ಅವನ್ನು ಉರು ಹಚ್ಚಿ ನೆನಪಿಟ್ಟುಕೊಂಡವರು ತಾವು ಬಹಳ ಕಲಿತಿದ್ದೇವೆ ಎಂದು ಹೆಮ್ಮೆಪಡುತ್ತಿದ್ದರಂತೆ.

೧೮೧೫ ರಲ್ಲಿ ರಾಮಮೋಹನರು ಕಲ್ಕತ್ತಕ್ಕೆ ಬಂದರು. ಇಂಗ್ಲಿಷ್ ವಿದ್ವಾಂಸರನ್ನೂ ಹಿಂದು ವಿದ್ವಾಂಸರನ್ನೂ ಸೇರಿಸಿ ಒಂದು ಸಂಘವನ್ನು ಮಾಡಿದರು. ಒಂದು ಕಾಲೇಜನ್ನೂ ತೆರೆದರು. ಅಲ್ಲಿ ಹುಡುಗರಿಗೆ ವಿಜ್ಞಾನ, ರಾಜ್ಯಶಾಸ್ತ್ರ, ಇಂಗ್ಲಿಷ್, ಗಣಿತ ಮುಂತಾದ ಆಧುನಿಕ ವಿಷಯಗಳನ್ನು ಪಾಠ ಹೇಳಲು ಏರ್ಪಾಡು ಮಾಡಿದರು.

ಸಂಘದ ಸದಸ್ಯರಲ್ಲಿ ಒಬ್ಬ ರಾಧಾಕಾಂತ ದೇವ್ ಎಂಬಾತ. ವಿದ್ಯಾವಂತ, ಹಣವಂತ. ಅವನ ಮಾತನ್ನು ಅನೇಕರು ಕೇಳುತ್ತಿದ್ದರು. ಅವನಿಗೆ ಮೊದಲಿನಿಂದ ರಾಮಮೋಹನರನ್ನು ಕಂಡರಾಗದು. ರಾಮಮೋಹನರು ಸಂಘದ ಸದಸ್ಯರಾದರೆ ತಾನು ಸಂಸ್ಥೆಗೆ ಸಹಾಯ ಮಾಡುವುದಿಲ್ಲ ಎಂದು ಹಟ ಹಿಡಿದನು. ರಾಮಮೋಹನರಿಗೆ ಸಂಸ್ಥೆಯ ಏಳಿಗೆ ಮುಖ್ಯವಾಗಿದ್ದಿತೇ ಹೊರತು, ತಮ್ಮ ಸ್ಥಾನಮಾನಗಳಲ್ಲ. ಅವರೇ ಸಂಘವನ್ನು ಸ್ಥಾಪಿಸಿದವರು! ಆದರೂ, ಅವರು ಸದಸ್ಯರಾಗದೆ ಹಿಂದೆ ಸರಿದರು.

೧೮೧೬-೧೭ರಲ್ಲಿ ರಾಮಮೋಹನರು ತಮ್ಮ ಸ್ವಂತ ಖರ್ಚಿನಲ್ಲಿ ಇಂಗ್ಲಿಷ್ ಕಾಲೇಜೊಂದನ್ನು ತೆರೆದರು. ವಿದ್ಯಾ ಪ್ರಸಾರಕ್ಕೆ ಅವರು ಅಷ್ಟು ಹಣ ಖರ್ಚುಮಾಡಿದರೆಂದರೆ ಇಂದು ನಂಬುವುದೂ ಕಷ್ಟ. ದೇಶದ ಅಂದಿನ ಸ್ಥಿತಿಯಲ್ಲಿ ಇಂಗ್ಲಿಷ್ ಭಾಷೆಯನ್ನೂ ವಿಜ್ಞಾನದ ವಿಷಯಗಳನ್ನೂ ಹುಡುಗರು ಕಲಿಯಬೇಕು ಎಂದು ಅವರು ಅರ್ಥಮಾಡಿಕೊಂಡರು. ಆದರೆ ತಮ್ಮ ಕಾಲೇಜಿನಲ್ಲಿ ವಿಜ್ಞಾನ, ಇಂಗ್ಲಿಷ್ ಮುಂತಾದವುಗಳ ಜೊತೆಗೆ ಬಂಗಾಳಿ, ಸಂಸ್ಕೃತಗಳನ್ನೂ ಕಲಿಸುತ್ತಿದ್ದರು.

ಸರ್ಕಾರದವರು ಕೇವಲ ಸಂಸ್ಕೃತ ಶಾಲೆಗಳನ್ನೇ ತೆರೆಯುತ್ತಿದ್ದುದನ್ನು ರಾಮಮೋಹನರು ಖಂಡಿಸಿದರು. ಇದರಿಂದ ಭಾರತೀಯರಿಗೆ ಪಾಶ್ಚಾತ್ಯ ನಾಗರಿಕತೆಯ ಸಂಪರ್ಕವಿಲ್ಲದಂತಾಗುತ್ತದೆ. ಆಧುನಿಕ ವಿಷಯಗಳಾದ ಗಣಿತ, ಭೂಗೋಳ, ವಿಜ್ಞಾನ ಮುಂತಾದುವನ್ನು ಕಲಿಯದೆ ಅವರು ಹಿಂದೆ ಉಳಿಯುತ್ತಾರೆ. ಒಂದು ಕಾಲದಲ್ಲಿ ಯೂರೋಪಿನಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಿಗೆ ತುಂಬ ಗೌರವವಿತ್ತು. ಆದರೆ ಇಂಗ್ಲೆಂಡಿನಲ್ಲಿ ಹುಡುಗರು ಲ್ಯಾಟಿನ್, ಗ್ರೀಕ್ ಮತ್ತು ಬೈಬಲ್‌ಗಳನ್ನು ಮಾತ್ರ ಕಲಿಯುತ್ತಿದ್ದಾರೆಯೇ? ಅವರಿಗೆ ವಿಜ್ಞಾನ, ಗಣಿತ ಬೇಕಾದರೆ ನಮಗೇಕೆ ಬೇಡ? ಇದನ್ನು ಸರ್ಕಾರದವರು ಪರಿಶೀಲಿಸಬೇಕು ಎಂದು ವಾದಿಸಿದರು.

ರಾಮಮೋಹನರು ಕಾಲವಾದ ನಂತರ ಅವರ ಈ ನೀತಿಯನ್ನು ಸರ್ಕಾರದವರು ಒಪ್ಪಿ ಜಾರಿಗೆ ತಂದರು.

ಬಡವರೊಡನೆ

ಕಲ್ಕತ್ತೆಯಲ್ಲಿದ್ದಾಗ ರಾಮಮೋಹನರು ರಾತ್ರಿ ಒಬ್ಬರೇ ಸಂಚಾರ ಹೊರಡುತ್ತಿದ್ದರು. ಬಡವರ ಕಷ್ಟ ಕಾರ್ಪಣ್ಯಗಳನ್ನು ತಾವೇ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಒಂದು ರಾತ್ರಿ ಕಗ್ಗತ್ತಲೆ. ವಿಪರೀತ ಚಳಿ. ಕಲ್ಕತ್ತೆಯ ಒಂದು ಕೊಳಚೆ ಪ್ರದೇಶ ಒಂದು. ಸೊಳ್ಳೆ ತುಂಬಿದೆ. ಮೈಯೆಲ್ಲ ಬೆವರಿನಿಂದ ನೆಂದಿದೆ. ಸುತ್ತ ಹೊಲಸು ತುಂಬಿ ಕೆಟ್ಟ ವಾಸನೆ. ಕೊಳಕು ನೀರು ಹರಿಯುತ್ತಿದೆ. ಕೆಲಸ ಮುಗಿಸಿ ಕೂಲಿಗಾರರು ಹಿಂದಿರುಗುತ್ತಿದ್ದಾರೆ.

ಅವರ ಹಿಂದೆಯೇ ಒಂದು ವ್ಯಕ್ತಿ ಬರುತ್ತಿದೆ.

‘‘ತಮ್ಮಂದಿರೇ!’’

ಕೂಲಿಗಾರರು ಆಶ್ಚರ್ಯದಿಂದ ತಿರುಗಿನೋಡಿದರು.

‘‘ಇಲ್ಲಿ ಎಷ್ಟು ಜನ ವಾಸವಾಗಿದ್ದೀರಿ?’’

ಕೂಲಿಗಾರರಿಗೆ ಇನ್ನೂ ಆಶ್ಚರ್ಯ. ಯಾರು ಈತ? ಇಲ್ಲಿಗೇಕೆ ಬಂದ?

‘‘ನಿಮಗೆ ದಿನಕ್ಕೆ ಸಂಪಾದನೆ ಎಷ್ಟು? ದಿನದಲ್ಲಿ ಎಷ್ಟು ಗಂಟೆ ಕೆಲಸ ಮಾಡುತ್ತೀರಿ? ಇಲ್ಲಿ ಎಷ್ಟು ಸಂಸಾರಗಳಿವೆ?’’ ಪ್ರಶ್ನೆಗಳು ಒಂದಾದ ಮೇಲೊಂದು ಬಂದವು.

‘‘ಇವನಿಗೆ ಏಕೆ ಇವೆಲ್ಲ? ಹುಚ್ಚನೋ ಏನೋ! ಯಾವನೋ ಹೊತ್ತು ಹೋಗದ ದಡ್ಡ’’ ಹೀಗೆಲ್ಲ ಎಂದರು ಕೂಲಿಯವರು ಪ್ರಶ್ನೆ ಕೇಳುತ್ತಿದ್ದ ರಾಮಮೋಹನರನ್ನು ಕುರಿತು. ‘‘ನಮಗೆ ಬೇರೆ ಕೆಲಸ ಇಲ್ಲವೆ? ಮನೆಗೆ ಹೋಗೋಣ’’ ಎಂದರು.

ಅವರ ಹಾಸ್ಯ-ತಿರಸ್ಕಾರ ಎಲ್ಲವನ್ನೂ ತಡೆದುಕೊಂಡರು ರಾಮಮೋಹನರು. ಅವರ ಹಿಂದೆ ಹೋದರು. ಅವರ ಜೀವನದ ವಿಷಯ ತಿಳಿದುಕೊಂಡರು.

ಸಾಹಿತ್ಯ ಸೇವೆ

ಮಾತೃಭಾಷೆಯ ಬೆಳವಣಿಗೆಗೆ ಪ್ರಾಮುಖ್ಯತೆ ಕೊಟ್ಟವರಲ್ಲಿ ರಾಮಮೋಹನರು ಮೊದಲಿಗರು. ಅವರ ‘ಗೌಡೀಯ ವ್ಯಾಕರಣ’ ಎಂಬ ಬಂಗಾಳೀ ವ್ಯಾಕರಣವು ಗದ್ಯಸಾಹಿತ್ಯದಲ್ಲಿ ಅತ್ಯುತ್ತಮವಾದುದು.

ರಾಮಮೋಹನರ ಬಂಗಾಳಿ ಭಾಷೆ ಬಿಗಿ, ಸರಳ ಹಾಗೂ ಸುಲಲಿತವಾದುದು. ಅವರು ಹಿಂದುಗಳ ಧರ್ಮಗ್ರಂಥಗಳನ್ನು ಬಂಗಾಳಿಯಲ್ಲಿ ಬರೆದುದರಿಂದ ಬಂಗಾಳಿಯ ಗೌರವ ಹೆಚ್ಚಿತು. ಕವಿ ರವೀಂದ್ರನಾಥ ಠಾಕೂರರೂ ಬಂಕಿಮಚಂದ್ರರೂ ಇವರ ಮೇಲ್ಪಂಕ್ತಿಯನ್ನೇ ಅನುಸರಿಸಿದರು. ರಾಮಮೋಹನರು ಭಾವಗೀತೆಗಳನ್ನೂ ರಚಿಸಿದ್ದರು.

ಸತಿ ಅಥವಾ ಸಹಗಮನ

ರಾಮಮೋಹನರ ಅಣ್ಣ ಜಗನ್ಮೋಹನರು ತೀರಿಹೋದರು. ಅವರ ಪತ್ನಿ ಅಲಕಮಂಜರಿ, ತನ್ನ ಪತಿಯೊಡನೆ ‘ಸಹಗಮನ’ ಮಾಡಬೇಕಾಗಿದ್ದಿತು. ಶವಸಂಸ್ಕಾರದ ಸಿದ್ಧತೆಗಳು ನಡೆದವು. ನೆಂಟರಿಷ್ಟರೆಲ್ಲ ಸೇರಿದ್ದರು. ಅಲಕಮಂಜರಿಯು ಜರಿಯ ಸೀರೆಯುಟ್ಟು, ಹಣೆಯ ತುಂಬ ಕುಂಕುಮವಿಟ್ಟಿದ್ದಳು. ತಲೆ ಕೆದರಿದ್ದಿತು. ಅವರ ಮುಖದಲ್ಲಿ ಭಯ ತಾಂಡವವಾಡುತ್ತಿದ್ದಿತು. ಶವವನ್ನು ಸ್ಮಶಾನಕ್ಕೆ ತಂದರು. ರಾಮಮೋಹನರು ಅತ್ತಿಗೆಯನ್ನು ‘ಸತಿ’ ಹೋಗಬೇಡವೆಂದು ಅಂಗಲಾಚಿದರು. ನೆಂಟರಿಷ್ಟರು ರಾಮಮೋಹನರನ್ನು ಹಾಗೆ ಅನ್ನಕೂಡದೆಂದು ತಡೆದು ಅಲಕಮಂಜರಿಯನ್ನು ಶವದೊಡನೆ ಕಟ್ಟಿ ಚಿತೆಗೆ ಏರಿಸಿದರು. ಸುತ್ತಲೂ ಚಿತೆಗೆ ಬೆಂಕಿ ಇಡಲಾಯಿತು.

ಅಲಕಮಂಜರಿ ಹೆದರಿದರೂ, ಅತ್ತರೂ ಬಿಡಲಿಲ್ಲ. ಪಾಪ, ಆಕೆ ಗಂಡನ ಶವದೊಡನೆ ಸುಟ್ಟು ಬೂದಿಯಾದಳು. ಅಲ್ಲಿದ್ದ ಅವಳ ಬಂಧುಗಳೆಲ್ಲ ‘ಮಹಾಸತಿ! ಮಹಾಸತಿ!’ ಎಂದು ಜಯಘೋಷ ಮಾಡಿ ಊರಿಗೆ ಹಿಂತಿರುಗಿದರು.

ಅತ್ತಿಗೆ ‘ಸತಿ’ ಹೋದ ಈ ಹೃದಯವಿದ್ರಾವಕ ದೃಶ್ಯವು ರಾಮಮೋಹನರ ಮನಸ್ಸಿನ ಮೇಲೆ ಅಚ್ಚಳಿಯದೇ ನಿಂತಿತು. ಆಗಲೇ ಅವರು ಮನಸ್ಸಿನಲ್ಲಿಯೇ ಈ ದುಷ್ಟ ಪದ್ಧತಿಯನ್ನು ತೊಡೆದುಹಾಕುವ ವೀರಪ್ರತಿಜ್ಞೆ ಮಾಡಿದರು. ಗಂಡನ ಜೊತೆಗೆ ಹೆಂಡತಿಯೂ ಸಾಯಬೇಕು ಎಂದು ಧರ್ಮಶಾಸ್ತ್ರಗಳು ಹೇಳುತ್ತವೆ ಎಂದು ಹಲವರು ನಂಬಿದ್ದರು. ರಾಮಮೋಹನರು ಧರ್ಮಶಾಸ್ತ್ರಗಳನ್ನೆಲ್ಲ ಓದಿ ನೋಡಿದರು. ‘ಸಹಗಮನ’ಕ್ಕೆ ಆಧಾರವೇನಾದರೂ ಇದೆಯೇ ಎಂದು ಹುಡುಕಿದರು. ಆದರೆ ಯಾವ ಶಾಸ್ತ್ರವೂ ‘ಸಹಗಮನ’ ಮಾಡಬೇಕೆಂದು ಹೇಳಿರಲಿಲ್ಲ. ಯಾವುದೋ ಒಂದು ಕಾಲದಲ್ಲಿ ಈ ಪದ್ಧತಿ ಬಂದುಬಿಟ್ಟಿತು. ಅದು ತಪ್ಪೆಂದು ತಿಳಿದರೂ ಅದನ್ನು ಖಂಡಿಸುವ ಧೈರ್ಯವಿರಲಿಲ್ಲ ಅನೇಕರಿಗೆ. ಧೀರ ರಾಮಮೋಹನರು ಆ ಸಾಹಸಕ್ಕೆ ಕೈಹಾಕಿದರು.

ಆದರೆ ಅವರ ಕೆಲಸ ಸುಗುಮವಾಗಿರಲಿಲ್ಲ. ಲಕ್ಷಾಂತರ ಮಂದಿ ‘ಸಹಗಮನ’ದಲ್ಲಿ ನಂಬಿಕೆ ಇಟ್ಟಿದ್ದರು. ಎಷ್ಟೋ ಮಂದಿ ರಾಮಮೋಹನರನ್ನು ವಿರೋಧಿಸಿದರು, ಬಯ್ದರು. ಕೆಲವರು ಅವರನ್ನು ಕೊಲ್ಲಲೂ ಪ್ರಯತ್ನ ಮಾಡಿದರು. ರಾಮಮೋಹನರು ಯಾವುದಕ್ಕೂ ಹೆದರಲಿಲ್ಲ. ಇದನ್ನು ಕಂಡ ಪಾಶ್ಚಾತ್ಯರೂ ಕೂಡ ಆಶ್ಚರ್ಯಪಟ್ಟರು. ಸರ್ಕಾರವೂ ಕೂಡ ‘ಸತಿ’ಯ ವಿಷಯಕ್ಕೆ ಕೈ ಹಾಕಲು ಹೆದರುತ್ತಿದ್ದಾಗ ಅದಕ್ಕಾಗಿ ರಾಮಮೋಹನರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಧೀರರು. ಕೊನೆಗೆ ಜಯ ಅವರದಾಯಿತು. ಸರ್ಕಾರವು ‘ಸತಿ’ಯು ಕಾನೂನಿಗೆ ವಿರುದ್ಧವೆಂದು ಅದನ್ನು ನಿಷೇಧಿಸಿತು.

ಸತಿ ಅಥವಾ ‘ಸಹಗಮನ’ ವನ್ನು ತಡೆಗಟ್ಟುವ ಕಾರ್ಯದೊಂದಿಗೇ ರಾಮಮೋಹನರು ಸ್ತ್ರೀಯರ ವಿದ್ಯಾಭ್ಯಾಸ, ಆಸ್ತಿಗೆ ಹಕ್ಕು-ಬಾಧ್ಯತೆ ಇವುಗಳಿಗಾಗಿ ಆಂದೋಳನ ನಡೆಸಿದರು. ಹಿಂದು ಧರ್ಮದ ಪ್ರಕಾರ ಹೆಂಗಸು ಗಂಡಸಿನಷ್ಟೆ ಸ್ವತಂತ್ರಳೆಂಬುದನ್ನು ತೋರಿಸಿಕೊಟ್ಟರು.

ಸ್ವಾತಂತ್ರ್ಯ ಪ್ರೇಮ

ರಾಮಮೋಹನರು ಅದ್ವಿತೀಯ ದೇಶಪ್ರೇಮಿಗಳು, ಸ್ವಾತಂತ್ರ್ಯ ಪ್ರೇಮಿಗಳು. ‘‘ಜಗತ್ತಿನಲ್ಲೆಲ್ಲ ಸ್ವಾತಂತ್ರ್ಯ ಮೆರೆಯುವ ಕಾಲವನ್ನು ಕಾಣುವ ಸುಯೋಗ ನನಗಿಲ್ಲ ಎಂದು ತೋರುತ್ತದೆ’’ ಎಂದು ಅವರು ಪೇಚಾಡುತ್ತಿದ್ದರು. ತಿಲಕರಂತೆ ರಾಮಮೋಹನರೂ ‘ಸ್ವಾತಂತ್ರ್ಯವು ಪ್ರತಿ ಮನುಷ್ಯನ ಜನ್ಮಸಿದ್ಧ ಹಕ್ಕು’ ಎಂದು ನಂಬಿದ್ದರು.

ರಾಮಮೋಹನರದು ಗಾಢವಾದ ದೇಶಪ್ರೇಮ.  ಅವರ ಹೃದಯ ಉದಾರವಾದದ್ದು. ವಿಶಾಲವಾದದ್ದು. ೧೮೨೩ ರಲ್ಲಿ ದಕ್ಷಿಣ ಅಮೆರಿಕದಲ್ಲಿ ಸ್ಪೇನ್ ದೇಶಕ್ಕೆ ಸೇರಿದ್ದ ವಸಾಹತುಗಳು ಸ್ವತಂತ್ರವಾದುವು. ಆ ಸಂತೋಷಕ್ಕೆ ರಾಮಮೋಹನರು ಸ್ನೇಹಿತರಿಗೆ ಔತಣವೇರ್ಪಡಿಸಿದ್ದರು. ‘‘ದಕ್ಷಿಣ ಅಮೆರಿಕದವರು ಸ್ವತಂತ್ರರಾದರೆ ನೀವೇಕೆ ಇಷ್ಟು ಸಂಭ್ರಮ ಪಡುತ್ತೀರಿ?’’ ಎಂದು ಅವರ ಸ್ನೇಹಿತರೊಬ್ಬರು ಕೇಳಿದರು. ರಾಮಮೋಹನರು, ‘‘ಏನು? ಅವರು ದಕ್ಷಿಣ ಅಮೆರಿಕದಲ್ಲಿದ್ದರೂ ನಮ್ಮ ಅಣ್ಣ ತಮ್ಮಂದಿರಲ್ಲವೆ? ಅವರ ಭಾಷೆ, ಮತ ಬೇರೆ ಇರಬಹುದು. ಆದರೆ ಅವರ ಕಷ್ಟಕ್ಕೆ ನಾವು ಅಯ್ಯೋ ಎನ್ನಬಾರದೆ?’’ ಎಂದರಂತೆ.

‘ಲೀಗ್ ಆಫ್ ನೇಷನ್ಸ್’ ಹೆಸರು ಕೇಳಿದ್ದೀರ? ೧೯೧೪ ರಿಂದ ೧೯೧೮ ರ ವರೆಗೆ ಪ್ರಪಂಚದ ಮೊದಲನೆಯ ಮಹಾಯುದ್ಧ ನಡೆಯಿತು. ಅನಂತರ, ಮತ್ತೆ ಇಂತಹ ಯುದ್ಧ ನಡೆಯಬಾರದು. ಒಂದು ದೇಶಕ್ಕೂ ಇನ್ನೊಂದು ದೇಶಕ್ಕೂ ಅಸಮಾಧಾನವಾದರೆ, ಜಗಳ ಬಂದರೆ ಶಾಂತ ರೀತಿಯಲ್ಲಿ ಬಗೆಹರಿಸಬೇಕು ಎಂದು ೧೯೨೦ ರಲ್ಲಿ ಇದನ್ನು ಸ್ಥಾಪಿಸಿದರು. (ಇದು ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ೧೯೪೫ ರಲ್ಲಿ ವಿಶ್ವಸಂಸ್ಥೆಯ ಸ್ಥಾಪನೆ ಆಯಿತು.)

ಇಂತಹ ಸಂಸ್ಥೆ ಇರಬೇಕು ಎಂದು, ಲೀಗ್ ಆಫ್ ನೇಷನ್ಸ್ ಸ್ಥಾಪನೆಗೆ ಸುಮಾರು ಒಂದು ನೂರು ವರ್ಷ ಮೊದಲೇ ರಾಮಮೋಹನರು ಹೇಳಿದರು. ಇಬ್ಬರು ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯ ಬಂದರೆ, ಅವರು ಹೊಡೆದಾಡುವುದಿಲ್ಲ, ಒಂದು ನ್ಯಾಯಸ್ಥಾನಕ್ಕೆ ಹೋಗಿ, ಅದರ ತೀರ್ಮಾನವನ್ನು ಒಪ್ಪಿಕೊಳ್ಳುತ್ತಾರೆ. ಎರಡು ದೇಶಗಳಿಗೆ ಭಿನ್ನಾಭಿಪ್ರಾಯ ಬಂದರೂ ಹೊಡೆದಾಟವಾಗಬಾರದು, ಅವುಗಳ ಜಗಳಗಳನ್ನು ಪರಿಹರಿಸುವುದಕ್ಕೆ ಮತ್ತು ಎಲ್ಲ ದೇಶಗಳೂ ಸಹಕಾರದಿಂದ ನಡೆಯುವಂತೆ ಸಹಾಯ ಮಾಡುವುದಕ್ಕೆ, ಎಲ್ಲ ರಾಷ್ಟ್ರಗಳ ಒಂದು ಸಂಸ್ಥೆ ಇರಬೇಕು ಎಂದರು.

ಪ್ರಥಮ ಪತ್ರಿಕಾ ಸಂಪಾದಕರು

ಬೆಳಿಗ್ಗೆ ಏಳುತ್ತಲೇ ವೃತ್ತಪತ್ರಿಕೆಗಾಗಿ ಕಾದಿರುತ್ತೇವೆ. ಕನ್ನಡದ ಪತ್ರಿಕೆ ಮನೆಗೆ ಬರುವುದೇ ತಡ, ಎಲ್ಲರಿಗೂ ಓದಬೇಕೆಂದು ಆತುರ.

ಒಂದು ಕಾಲವಿತ್ತು-ಪತ್ರಿಕೆಗಳ ಸಂಖ್ಯೆಯೇ ಬಹು ಕಡಿಮೆ, ಅವೆಲ್ಲ ಇಂಗ್ಲಿಷಿನಲ್ಲೆ. ಭಾರತದ ಒಂದು ಭಾಷೆಯಲ್ಲಿಯೂ ಒಂದು ಪತ್ರಿಕೆಯೂ ಇಲ್ಲ!

ಮೊದಲು ಭಾರತೀಯ ಭಾಷೆಯಲ್ಲಿ ಪತ್ರಿಕೆ ಹೊರಡಿಸಿದವರು ರಾಮಮೋಹನ ರಾಯ್.

ಜನಗಳನ್ನು ತಿದ್ದಬೇಕಾದರೆ ವೃತ್ತಪತ್ರಿಕೆಗಳ ಸಹಾಯ ಬೇಕೇ ಬೇಕು. ಸಾವಿರಾರು ಜನರಿಗೆ ಅವರ ಭಾಷೆಯಲ್ಲಿಯೇ ಅರ್ಥವಾಗುವಂತೆ ವಿಷಯಗಳನ್ನು ತಿಳಿಸಿ ಹೇಳಬಹುದು. ತಮ್ಮ ಅಭಿಪ್ರಾಯಗಳನ್ನು ಮನಮುಟ್ಟುವಂತೆ ಜನತೆಗೆ ತಿಳಿಸಲು ರಾಮಮೋಹನರು ಪತ್ರಿಕೆಯನ್ನೇ ಸಾಧನ ಮಾಡಿಕೊಂಡರು.

‘ಆತ್ಮೀಯ ಸಭೆ’ಯು ‘ಬಾಂಗ್ಲಾ ಗೆಜೆಟ್’ ಎಂಬ ವಾರಪತ್ರಿಕೆಯನ್ನು ಹೊರಡಿಸುತ್ತಿದ್ದಿತು. ಅಲ್ಲದೆ ರಾಮ ಮೋಹನರೇ ಸ್ವಂತವಾಗಿ ‘ಮಿರತ್-ಉಲ್-ಅಖಬಾರ್’ ಎನ್ನುವ ಪರ್ಷಿಯನ್ ಭಾಷೆಯ ಪತ್ರಿಕೆಯೊಂದನ್ನೂ ‘ಸಂವಾದ ಕೌಮುದಿ’ ಎನ್ನುವ ಬಂಗಾಳಿ ವಾರಪತ್ರಿಕೆಯೊಂದನ್ನೂ ನಡೆಸುತ್ತಿದ್ದರು.

ಆಗಿನ ಕಾಲದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳೂ,ಲೇಖನಗಳೂ ಸರ್ಕಾರದ ಕೈಗೆ ಹೋಗಿ, ಒಪ್ಪಿಗೆ ಪಡೆದು ಅಚ್ಚಾಗಬೇಕಾಗಿದ್ದಿತು. ಇದರಿಂದ ಪತ್ರಿಕೆಗಳಿಗೆ ಸ್ವಾತಂತ್ರ್ಯವೇ ಇರಲಿಲ್ಲ.

ರಾಮಮೋಹನರು ಈ ಪದ್ಧತಿಯನ್ನು ವಿರೋಧಿಸಿದರು. ಪತ್ರಿಕೆಗಳು ಸ್ವತಂತ್ರವಾಗಿರಬೇಕು, ಸರ್ಕಾರಕ್ಕೆ ಇಷ್ಟವಿಲ್ಲ ಎಂದು ಸತ್ಯವನ್ನು ಬಚ್ಚಿಡಬಾರದು. ಸತ್ಯವನ್ನು ಎತ್ತಿ ತೋರಿಸುವ ಹಕ್ಕು ಪತ್ರಿಕೆಗಳಿಗೆ ಇರಬೇಕು ಎಂದು ವಾದಿಸಿದರು. ನೂರೈವತ್ತು ವರ್ಷಗಳ ಹಿಂದೆ, ಭಾರತ ಬ್ರಿಟಿಷರ ಮುಷ್ಟಿಯಲ್ಲಿದ್ದಾಗ, ಇಂತಹ ಮಾತನ್ನು ಹೇಳುವುದಕ್ಕೇ ಧೈರ್ಯ ಬೇಕಿತ್ತು. ರಾಮಮೋಹನರ ಸತತ ಪ್ರಯತ್ನದಿಂದ ಪತ್ರಿಕಾ ಸ್ವಾತಂತ್ರ್ಯವು ಲಭ್ಯವಾಯಿತು.

ರಾಮ ಮೋಹನರು ಪತ್ರಿಕೆಗಳಲ್ಲಿ ಲೇಖನಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು. ತಮ್ಮ ಎದುರಾಳಿಗಳಿಗೆ ಉತ್ತರ ಕೊಡುತ್ತಿದ್ದರು. ಭಾಷೆಯನ್ನು ಬಹಳ ಎಚ್ಚರಿಕೆಯಿಂದ ಬಳಸುತ್ತಿದ್ದರು. ಯಾರ ಮನಸ್ಸನ್ನೂ ನೋಯಿಸದೆ ಸಹನೆಯಿಂದ ಟೀಕಿಸುತ್ತಿದ್ದರು. ಇದು ಮುಂದೆ ಪತ್ರಿಕೆಗಳನ್ನು ನಡೆಸುವವರಿಗೆ ಅವರು ಹಾಕಿಕೊಟ್ಟ ಒಳ್ಳೆಯ ಸಂಪ್ರದಾಯ.

ನ್ಯಾಯ-ಸಮಾನತೆಗಳಿಗಾಗಿ

ಆಗಿನ ಕಾಲದಲ್ಲಿ ನ್ಯಾಯಾಲಯಗಳ ವಿಚಾರಣೆಯಲ್ಲಿ ಒಂದು ಪದ್ಧತಿ ಇತ್ತು. ವಿಚಾರಣೆ ನಡೆಯುವಾಗ ಎಲ್ಲವನ್ನೂ ಕೇಳಲು ಕೆಲವರನ್ನು ಕರೆಯುತ್ತಿದ್ದರು; ವಿಚಾರಣೆ ಮುಗಿದ ಮೇಲೆ, ನ್ಯಾಯಾಧೀಶರಿಗೆ ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು. ಇವರಿಗೆ ‘ಜ್ಯೂರಿ’ ಎಂದು ಹೆಸರು. ಭಾರತೀಯರನ್ನು ಕೆಳಗಿನ ನ್ಯಾಯಾಲಯಗಳಿಗೆ ಮಾತ್ರ ಕರೆಯುತ್ತಿದ್ದರು; ಮೇಲಿನ ನ್ಯಾಯಾಲಯಗಳಿಗೆ ಇಂಗ್ಲಿಷರನ್ನು ಮಾತ್ರ ಕರೆಯುತ್ತಿದ್ದರು.

ಇದು ಭಾರತೀಯರಿಗೆ ಅಪಮಾನ ಎಂದು ರಾಮಮೋಹನರು ಸರ್ಕಾರಕ್ಕೆ ಬರೆದರು, ವಾದಿಸಿದರು. ಕಡೆಗೆ ಈ ತಾರತಮ್ಯವನ್ನು ಸರ್ಕಾರ ತೆಗೆದುಹಾಕಿತು.

‘ಉಳುವವನಿಗೇ ಹೊಲ’ ಎಂಬ ಘೋಷಣೆಯನ್ನು ಈಗ ಕೇಳುತ್ತೇವಲ್ಲವೆ?

ಆಗಿನ ಕಾಲದಲ್ಲಿ ಜಮೀನುದಾರರಿಗೆ ಬಹಳ ಸ್ವಾತಂತ್ರ್ಯವಿತ್ತು, ಅಧಿಕಾರವಿತ್ತು. ಕೆಲವರು ರೈತರನ್ನು ಸುಲಿಗೆ ಮಾಡುತ್ತಿದ್ದರು. ಅವರ ಸುಖ, ವೈಭವ, ಅಟ್ಟಹಾಸಗಳಿಗೆ ಕೊನೆ ಮೊದಲಿರಲಿಲ್ಲ. ರೈತರು ಬೆಳೆದ ಬೆಳೆಯಲ್ಲಿ ಹೆಚ್ಚುಕಡಿಮೆ ಎಲ್ಲವನ್ನೂ ಗುತ್ತಿಗೆಯ (ಗೇಣಿ)ರೂಪದಲ್ಲಿ ಕೊಟ್ಟುಬಿಡಬೇಕಾಗಿತ್ತು. ಬಡ ರೈತರ ಕಣ್ಣಿನಲ್ಲಿ ನೀರೇಕೆ, ರಕ್ತವೇ ಬರುತ್ತಿದ್ದಿತು. ಇದನ್ನೆಲ್ಲ ಕಂಡ ರಾಮಮೋಹನರು ಆ ಕಾಲದಲ್ಲೇ ಉಳುವವನಿಗೇ ಭೂಮಿ ಇರಬೇಕೆಂದು ಹೇಳಿದ್ದರು.

ಬ್ರಹ್ಮಸಭೆ ಅಥವಾ ಬ್ರಹ್ಮಸಮಾಜ

ರಾಮಮೋಹನರೂ, ಅವರ ಅನುಯಾಯಿಗಳೂ ಕೆಸ್ತರ ಒಂದು ಪಂಗಡದವರ ಪ್ರಾರ್ಥನಾಮಂದಿರಕ್ಕೆ ಪ್ರಾರ್ಥನೆಗಾಗಿ ಹೋಗುತ್ತಿದ್ದರು. ರಾಮಮೋಹನರ ಶಿಷ್ಯ ಚಂದ್ರಶೇಖರ ದೇವ್ ಮುಂತಾದವರು ತಮ್ಮದೇ ಆದ ಒಂದು ಪ್ರಾರ್ಥನಾಮಂದಿರವನ್ನು ಮಾಡಿಕೊಳ್ಳಬಾರದೇಕೆ ಎಂದು ಆಲೋಚಿಸಿದರು. ರಾಮಮೋಹನರೂ ಆ ಸಲಹೆಗೆ ಒಪ್ಪಿದರು. ರಾಮಕಮಲ ವಸು ಎಂಬುವರ ಮನೆಯನ್ನು ಬಾಡಿಗೆಗೆ ಗೊತ್ತುಮಾಡಿ ಅಲ್ಲಿ ‘ಬ್ರಹ್ಮಸಭೆ’ ಎಂಬ ಹೆಸರಿನಲ್ಲಿ ಪ್ರಾರ್ಥನಾಮಂದಿರದ ಪ್ರಾರಂಭವಾಯಿತು. ಮುಂದೆ ಅದೇ ‘ಬ್ರಹ್ಮಸಮಾಜ’ವೆಂದು ಹೆಸರು ಪಡೆಯಿತು.

ಪ್ರತಿ ಶನಿವಾರವೂ ಸದಸ್ಯರೆಲ್ಲರೂ ಮಂದಿರದಲ್ಲಿ ಸೇರುತ್ತಿದ್ದರು. ಸಂಸ್ಕೃತ ಪಂಡಿತರಿಂದ ವೇದಘೋಷ, ಉಪನಿಷತ್ತುಗಳ ವಾಚನ, ಇವಲ್ಲದೆ ಶಾಸ್ತ್ರಗಳನ್ನು ಕುರಿತು ಚರ್ಚೆ ನಡೆಯುತ್ತಿದ್ದಿತು. ರಾಮಮೋಹನರು ತಾವು ರಚಿಸಿದ ಧರ್ಮಬೋಧಕ ಹಾಡುಗಳನ್ನು ಹಾಡುತ್ತಿದ್ದರು. ಕೆಸ್ತ ಮತ್ತು ಮುಸ್ಲಿಂ ಬಾಲಕರು ಇಂಗ್ಲಿಷ್ ಮತ್ತು ಪಾರ್ಸಿ ಹಾಡುಗಳನ್ನು  ಹಾಡುತ್ತಿದ್ದರು. ಸಭೆಗೆ ಅನೇಕ ಹಿಂದುಗಳೂ, ವಿದೇಶೀಯರೂ ಬರುತ್ತಿದ್ದರು.

‘‘ದೇವರು ಒಬ್ಬನೇ. ಅವನ ಸಮಾನ ಯಾರೂ ಇಲ್ಲ. ಅವನಿಗೆ ನಾಶ ಎಂಬುದಿಲ್ಲ. ಅವನು ಪ್ರಪಂಚದ ಎಲ್ಲ ಜೀವರಾಶಿಗಳಲ್ಲಿಯೂ ಇದ್ದಾನೆ’’  ಎಂಬುದೇ ಬ್ರಹ್ಮ ಸಮಾಜದವರ ನಂಬಿಕೆ. ಅದು ರಾಮಮೋಹನರು ಹೇಳಿದ ಉಪದೇಶ. ಬ್ರಹ್ಮಸಮಾಜದಲ್ಲಿ ಜಾತಿ, ಮತ, ಜನಾಂಗ, ದೇಶ ಇವೆಲ್ಲ ಭೇದಗಳಿರಲಿಲ್ಲ. ಅದು ವಿಶ್ವವ್ಯಾಪಿ ಸೋದರಭಾವ ಮೂಡಿಸುತ್ತದೆ.

ಇಂಗ್ಲೆಂಡಿನಲ್ಲಿ ರಾಮಮೋಹನರು

ಸಮುದ್ರ ದಾಟಿ ಬೇರೆ ದೇಶಕ್ಕೆ ಹೋಗುವುದು ತಪ್ಪು! ಹೀಗೆಂದರೆ ಇಂದು ನಮಗೆ ಹಾಸ್ಯವಾಗಿ ಕಾಣುತ್ತದೆ.

ಆದರೆ ಸುಮಾರು ನೂರೈವತ್ತು ವರ್ಷಗಳ ಹಿಂದೆ ಹಿಂದು  ಆದವನು ಸಮುದ್ರ ದಾಟಬಾರದು, ಅದು ದೊಡ್ಡ ತಪ್ಪು, ಅಂಥವನಿಗೆ ಜಾತಿಯೇ ಹೋಗಬೇಕು ಎಂದು ನಂಬಿಕೆ ಇತ್ತು.

ಈ ನಂಬಿಕೆಯನ್ನು ತಳ್ಳಿಹಾಕಿ ಭಾರತದಿಂದ ಇಂಗ್ಲೆಂಡಿಗೆ ಹೋದ ಮೊದಲಿಗರಲ್ಲಿ ರಾಮಮೋಹನರಾಯ್ ಒಬ್ಬರು. ಮೊಗಲ್ ಬಾದಷಹ ಎರಡನೆಯ ಅಕ್ಬರನಿಗೆ ಬ್ರಿಟಿಷರು ನಿಗದಿ ಮಾಡಿದ್ದ ನಿವೃತ್ತಿ ವೇತನ (ಪೆನ್‌ಷನ್) ಬಹಳ ಕಡಿಮೆ. ಅದನ್ನು ಹೆಚ್ಚಿಸಬೇಕೆಂದು ಬ್ರಿಟಿಷ್ ಚಕ್ರವರ್ತಿಯಲ್ಲಿ ಬಾದಷಹನು ಒಂದು ಮನವಿ ಪತ್ರವನ್ನು ಸಲ್ಲಿಸಬೇಕಾಗಿದ್ದಿತು. ಬಾದಷಹನು ಇದಕ್ಕಾಗಿ ರಾಮಮೋಹನರನ್ನು ಇಂಗ್ಲೆಂಡಿಗೆ ತನ್ನ ಖರ್ಚಿನಲ್ಲಿ ಕಳುಹಿಸಿಕೊಡಲು ನಿರ್ಧರಿಸಿದನು. ಇಂಗ್ಲೆಂಡಿಗೆ ಹೊರಡುವುದಕ್ಕೆ ಮುಂಚೆ ಬಾದಷಹನು ರಾಮಮೋಹನರಿಗೆ ‘ರಾಜಾ’ ಎಂಬ ಬಿರುದು ಕೊಟ್ಟನು.

ರಾಜಾ ರಾಮಮೋಹನರು ಇಂಗ್ಲೆಂಡಿಗೆ ಹೊರಡಲು ಎರಡನೆಯ ಕಾರಣ, ‘ಸಹಗಮನ’ , ಪದ್ಧತಿಯನ್ನು ರದ್ದುಪಡಿಸಲು ಇಂಗ್ಲೆಂಡಿನ ಪಾರ್ಲಿಮೆಂಟನ್ನು ಬೇಡುವುದು.

ರಾಮಮೋಹನರು ಇಂಗ್ಲೆಂಡಿಗೆ ಹೋಗುತ್ತಾರೆ ಎಂದು ಕೇಳಿ ತುಂಬ ಮಂದಿ ಆಕ್ಷೇಪಿಸಿದರು. ಹಲವರು ಬ್ರಿಟಿಷ್ ಅಧಿಕಾರಿಗಳೂ ಕೂಡ ಅವರು ಇಂಗ್ಲೆಂಡಿಗೆ ಹೋಗುವುದನ್ನು ವಿರೋಧಿಸಿದರು. ಆದರೆ, ಅವರ ಕೀರ್ತಿ ಆಗಲೇ ಇಂಗ್ಲೆಂಡಿಗೆ ಹಬ್ಬಿತ್ತು.

ರಾಮಮೋಹನರು ಲಿವರ್‌ಪೂಲ್‌ಗೆ ಬಂದಿಳಿದಾಗ ಊರಿನ ಗಣ್ಯರೆಲ್ಲ ಸ್ವಾಗತಿಸಲು ಬಂದಿದ್ದರಂತೆ. ಸುಪ್ರಸಿದ್ಧ ಚರಿತ್ರಕಾರ ವಿಲಿಯಂ ರಾಸ್ಕೋ ಎಂಬುವರು ಪಾರ್ಶ್ವವಾಯುವಿನಿಂದ ಮಲಗಿದ್ದರೂ ತಮ್ಮ ಮಗನನ್ನು ಕಳುಹಿಸಿದರು; ರಾಮಮೋಹನರನ್ನು ತಮ್ಮ ಮನೆಗೆ ಕರೆಸಿಕೊಂಡು, ಅವರೊಡನೆ ಸಂಭಾಷಿಸಿ ತಮ್ಮ ಅಂತಿಮ ಆಸೆಯನ್ನು ಈಡೇರಿಸಿಕೊಂಡರು. ಹಲವು ಸಂಘಗಳು ಅವರನ್ನು ಗೌರವಿಸಿದವು. ಅವರು ಫ್ರಾನ್ಸ್ ದೇಶಕ್ಕೂ ಭೇಟಿಕೊಟ್ಟರು. ಎಲ್ಲ ಕಡೆ ವಿದ್ವಾಂಸರು ಅವರ ವಿದ್ವತ್ತನ್ನೂ ಪಾಂಡಿತ್ಯವನ್ನೂ ಮೆಚ್ಚಿಕೊಂಡರು.

ಬಾದಷಹ ಅಕ್ಬರನಿಗೆ ಪೆನ್‌ಷನ್ ನಿಗದಿಗೊಳಿಸುವ ಕಾರ್ಯವು ಸಂಪೂರ್ಣವಾಗಿ ಕೈಗೂಡದಿದ್ದರೂ ಅವನಿಗೆ ವರ್ಷಕ್ಕೆ ಮೂರು ಲಕ್ಷ ರೂಪಾಯಿಗಳಷ್ಟು ಕೊಡಬಹುದೆಂದು ನಿಗದಿಯಾಯಿತು. ‘ಸಹಗಮನ’ ನಿಲ್ಲಿಸಬೇಕೆಂದು ಅವರು ಮಾಡಿದ ಪ್ರಯತ್ನವೂ ಬಹುಮಟ್ಟಿಗೆ ಗೆದ್ದಿತು; ಅದಕ್ಕೆ ಸಂಬಂಧಿಸಿದ ಮಸೂದೆಯು ಪಾರ್ಲಿಮೆಂಟಿನ ಒಪ್ಪಿಗೆ ಪಡೆದು ಹೊರಬಿದ್ದ ದಿನ ರಾಮ ಮೋಹನರ ಸಂತಸಕ್ಕೆ ಪಾರವಿರಲಿಲ್ಲ.

ರಾಮಮೋಹನ ರಾಯ್ ಅವರು ತುಂಬ ಶ್ರೀಮಂತರು, ತಮ್ಮ ಹಣವನ್ನು ಇತರರಿಗಾಗಿ ಮತ್ತು ದೇಶಕ್ಕಾಗಿ ಖರ್ಚು ಮಾಡಿದ ಮಹಾನುಭಾವರು. ಕಲ್ಕತ್ತದಲ್ಲಿ ಸಮಯ ಬಿದ್ದಾಗ ವಿದೇಶದವರೂ ಇವರಿಂದ ಸಾಲ ಪಡೆಯುತ್ತಿದ್ದರು. ಇಂತಹ ಶ್ರೀಮಂತರು ಇಂಗ್ಲೆಂಡಿನಲ್ಲಿ ಊಟಕ್ಕೂ ಕೂಡ ಪರರನ್ನು ಆಶ್ರಯಿಸಬೇಕಾದ ಶೋಚನೀಯ ಸ್ಥಿತಿ ಒದಗಿತು. ಅವರ ಆರೋಗ್ಯ ಕೆಟ್ಟಿತು. ಅವರು ಬಂಡವಾಳ ಹೂಡಿದ್ದ ಒಂದು ಕಂಪನಿ ದಿವಾಳಿಯಾದದ್ದು ಅವರ ಹಣಕಾಸಿನ ಮುಗ್ಗಟ್ಟಿಗೆ ಮುಖ್ಯ ಕಾರಣ.

ರಾಮಮೋಹನರ ಮೇಲಿನ ಮಾತ್ಸರ್ಯದಿಂದ ಕಲ್ಕತ್ತದಲ್ಲಿ ಕೆಲವರು ಅವರ ಮೇಲೂ, ಅವರ ಮಗನ ಮೇಲೂ ಹಣದ ದುರುಪಯೋಗವಾಗಿದೆಯೆಂದು ಮೊಕದ್ದಮೆ ಹೂಡಿದರು. ನ್ಯಾಯವು ತಮ್ಮ ಕಡೆಗಿದೆಯೆಂದು ಸಾಧಿಸಲು ರಾಮಮೋಹನರು ಹಣವನ್ನು ನೀರಿನಂತೆ ಖರ್ಚುಮಾಡಬೇಕಾಯಿತು. ನ್ಯಾಯ ಇವರಿಗೆ ದೊರಕಿತಾದರೂ ಹಣವೆಲ್ಲ ಕೈಬಿಟ್ಟು ಹೋಯಿತು. ಪರದೇಶವಾದ ಇಂಗ್ಲೆಂಡಿನಲ್ಲಿ ತಮ್ಮ ಗೌರವ, ಅಂತಸ್ತುಗಳನ್ನು ಕಾಪಾಡಿಕೊಳ್ಳಲು ಹೆಣಗಾಡಿದರು. ಮಗನಿಂದ ಬರುತ್ತಿದ್ದ ಧನಸಹಾಯವೂ ನಿಂತುಹೋಯಿತು. ಅದಲ್ಲದೆ ಇಂಗ್ಲೆಂಡಿನಲ್ಲಿ ಒಬ್ಬಿಬ್ಬರು ಇವರಿಗೆ ಬಹಳ ಮೋಸ ಮಾಡಿದರು. ಅವರನ್ನು ಚಿಂತೆ ಆವರಿಸಿತು. ಅವರು ಹಾಸಿಗೆ ಹಿಡಿದರು.

ಅವರಲ್ಲಿ ಗೌರವವಿದ್ದ ಹಲವರು ಬಂಧುಗಳಂತೆ ಅವರ ಶುಶ್ರೂಷೆ ಮಾಡಿದರು. ಒಳ್ಳೆಯ ವೈದ್ಯರು ಚಿಕಿತ್ಸೆ ಮಾಡಿದರು. ಆದರೆ ರಾಮಮೋಹನರ ಆರೋಗ್ಯ ಸುಧಾರಿಸಲಿಲ್ಲ.

೧೮೩೩ ನೇ ಸೆಪ್ಟೆಂಬರ್ ೨೭ ರಂದು ರಾತ್ರಿ ಎರಡೂ ವರೆ ಘಂಟೆಗೆ ರಾಮಮೋಹನರು ನಿಧನರಾದರು.

೧೮೪೩ ರಲ್ಲಿ ರಾಮಮೋಹನರ ಮಿತ್ರರೊಬ್ಬರು ಇಂಗ್ಲೆಂಡಿಗೆ ಭೇಟಿ ಕೊಟ್ಟಾಗ, ಸ್ಟೇಪಲ್ಟನ್ ತೋಪಿನಲ್ಲಿದ್ದ  ರಾಮಮೋಹನರ ಶವಪೆಟ್ಟಿಗೆಯನ್ನು ತೆಗೆದು ಆರ್ನೋಸ್ ವೇಲ್ ಎಂಬಲ್ಲಿಗೆ ತೆಗೆದುಕೊಂಡು ಹೋಗಿ ಅಲ್ಲಿ ಸಮಾಧಿ ಮಾಡಿದರು. ಸಮಾಧಿಯ ಮೇಲೆ  ಭಾರತೀಯರ ರೀತಿಯ ಸ್ಮಾರಕ ಮಂಟಪವೊಂದನ್ನು ನಿರ್ಮಿಸಿದರು.

ರಾಮಮೋಹನರು ಕಣ್ಮರೆಯಾಗಿ ಇಂದಿಗೆ ೧೪೦ ವರ್ಷಗಳಾದರೂ ಭಾರತದ ಜನಮನದಲ್ಲಿ ಅವರ ನೆನಪು ಅಚ್ಚಳಿಯದೆ ನಿಂತಿದೆ. ಭಾರತವನ್ನು ಆಧುನಿಕತೆಯ ಕಡೆಗೆ ನಡೆಸಲು ಶ್ರಮಿಸಿದ ಜ್ಞಾನಿಗಳು ಅವರು; ಅರ್ಥವಿಲ್ಲದ ನಂಬಿಕೆಗಳನ್ನೂ ಆಚಾರಗಳನ್ನೂ ಬಿಟ್ಟು ಹಿಂದು ಧರ್ಮದ ತಿರುಳನ್ನು ಅರ್ಥಮಾಡಿಕೊಳ್ಳುವಂತೆ ನಡೆಸಿದ ದಾರಿದೀಪ ಅವರು. ನಮ್ಮ ಜೀವನವನ್ನು ಉನ್ನತಗೊಳಿಸಲು ಅವರ ನೆನಪೇ ಮಾರ್ಗದರ್ಶಕ.