ಪಂಡಿತ್‌ ರಾಮರಾವ್‌ ವೆಂಕಾಜಿರಾವ್‌ ನಾಯಕ್‌ ಅವರು ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಕಳೆದ ಏಳು ದಶಕಗಳಿಗಿಂತಲೂ ಮಿಗಿಲಾಗಿ ಅಸಾಧಾರಣ ಸೇವೆ ಸಲ್ಲಿಸಿ ಆ ಸಂಗೀತ ಪರಂಪರೆಯನ್ನು ಶ್ರೀಮಂತಗೊಳಿಸಿರುವ ಹಿರಿಯ ಕಲಾವಿದರು.

೧೯೦೯ ಸೆಪ್ಟೆಂಬರ್ ೨೮ ರಂದು ಮೈಸೂರಿನಲ್ಲಿ ಜನಿಸಿದ ರಾಮರಾವ್‌ ವಿ. ನಾಯಕ್‌ ಅವರ ತಂದೆ ವೆಂಕಾಜಿರಾವ್‌ ನಾಯಕ್‌, ತಾಯಿ ಶ್ರೀಮತಿ ಲಕ್ಷ್ಮೀಬಾಯಿ. ಮೂಲತಃ ಇವರು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ನೀಲಗಿರಿ ಗ್ರಾಮದವರು. ಚಿಕ್ಕ ವಯಸ್ಸಿನಲ್ಲಿ ಹಸಿರು ಹುಲ್ಲುಗಾವಲು, ಗೋವುಗಳು, ಕುರಿಗಳು ಮತ್ತು ಹಕ್ಕಿ ಪಕ್ಷಿಗಳ ಕಡೆಗೆ ತುಂಬಾ ಆಕರ್ಷಿತನಾದ ಬಾಲಕ, ಕೇವಲ ಎರಡನೇ ತರಗತಿಯವರೆಗೆ ಮಾತ್ರ ಓದು ಕಲಿತದ್ದು. ಶಾಲಾ ದಿನಗಳನ್ನು ತುಂಬ ಪ್ರಾಮಾಣಿಕವಾಗಿ ಗೊಲ್ಲರ ಹಾಡುಗಳನ್ನು ಸವಿಯುವುದರಲ್ಲಿ ಕಳೆದ ಬಾಲಕನಿಗೆ ತನ್ನ ಮುಂದಿನ ಹೆಜ್ಜೆ ಗ್ರಾಮಾಫೋನ್‌ ರೆಕಾರ್ಡ್‌ ಅಂಗಡಿ ಆಗಿತ್ತು. ಅಲ್ಲಿ ಅಂಗಡಿಯ ಒಡೆಯನಿಗೆ ತುಂಬಾ ಆಪ್ತನಾಗಿ ಸಹಕರಿಸುತ್ತ ತನಗೆ ಬೇಕಾದ ಗ್ರಾಮಾಫೋನ್‌ ರೆಕಾರ್ಡುಗಳಲ್ಲಿ ಸಂಗೀತ ಕೇಳಲು ಸೌಲಭ್ಯವನ್ನು ಗಿಟ್ಟಿಸಿಕೊಂಡಿದ್ದ. ಜವಾರಾ ಬಾಯಿಯವರ ಸಂಗೀತದಿಂದ ಸ್ಪೂರ್ತಿ ಪಡೆದಿದ್ದ. ಸಂಗೀತದಲ್ಲಿ ಅಪಾರ ಆಸಕ್ತಿ, ಪ್ರತಿಭೆಯಿದ್ದ ಬಾಲಕ ಎಳೆ ವಯಸ್ಸಿನಲ್ಲಿಯೇ ಕರ್ನಾಟಕ ಸಂಗೀತದಿಂದ ತನ್ನ ಅಭ್ಯಾಸವನ್ನು ಆರಂಭಿಸಿದ. ಅವರ ಮೊದಲ ಗುರು ಹಾರ್ಮೋನಿಯಂ ವಾದಕ ಶ್ರೀನಿವಾಸ ರಾವ್‌. ಕೇವಲ ಎರಡು ವರ್ಷಗಳ ಶ್ರದ್ಧೆಯ ಕಲಿಕೆಯ ಸಾಧನೆಯಿಂದ, ತಮ್ಮ ಗುರುಗಳು ನೀಡುತ್ತಿದ್ದ ಸಂಗೀತ ಶಿಕ್ಷಣ ಪಾಠಗಳಿಗೆ ತಾವೂ ಸಹಕರಿಸುವ ಮಟ್ಟಕ್ಕೇರಿದರು.

ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ತಂದೆಯವರಿಗೊಮ್ಮೆ ಹಣಕಾಸಿನ ವಹಿವಾಟಿನಲ್ಲಿ ತೊಂದರೆ ಉಂಟಾದಾಗ, ಧೈರ್ಯದಿಂದ ಬಾಲಕ ರಾಮರಾವ್‌ ತನ್ನ ಒಂಬತ್ತು ಅಥವಾ ಹತ್ತನೇ ವಯಸ್ಸಿನಲ್ಲಿಯೇ ದಿನವಿಡೀ ಹತ್ತು, ಹನ್ನೆರಡು ಮನೆ ಸಂಗೀತಪಾಠ ಮಾಡಿ, ಆಗಿನ ಅಂದರೆ ಸುಮಾರು ೧೯೨೦ರ ಸುಮಾರಿನಲ್ಲಿಯೇ ಪ್ರತಿ ದಿನ ಐದು ರೂಪಾಯಿಗಳನ್ನು ಗಳಿಸುತ್ತಿದ್ದರು. ಮನೆ ಖರ್ಚುಕಳೆದು, ಎರಡು ರೂಪಾಯಿ ಉಳಿಸಿ, ದುಡ್ಡಿನ ತೊಂದರೆಯಿಂದ ತನ್ನ ತಂದೆಯವರನ್ನು  ಪಾರುಮಾಡಿದರು.

ನಂತರ ಸುಪ್ರಸಿದ್ಧ ನಾಟಕ ಕಂಪನಿಗಳಲ್ಲಿ ನಟರಾಗಿ ಸೇವೆ ಸಲ್ಲಿಸಿದರು. ಬಾಲ ಕಲಾವಿದನಾಗಿ “ಧ್ರುವ ಹಾಗೂ “ಪ್ರಹ್ಲಾದ”ನ ಪಾತ್ರಗಳಿಗೆ ಜೀವ ಕಳೆ ನೀಡಿ ಅಭಿನಯಿಸುತ್ತಿದ್ದರು. ಚಿಕ್ಕವರಿದ್ದಾಗ ಸ್ತ್ರೀ ಪಾತ್ರಗಳನ್ನೇ ಅವರು ಹೆಚ್ಚಾಗಿ ಮಾಡುತ್ತಿದ್ದು, ಅವು ತುಂಬಾ ಪ್ರಭಾವಾಶಾಲಿಯೂ ಮನೋಜ್ಞವೂ ಆಗಿರುತ್ತಿದ್ದವು . ಒಮ್ಮ ರಾಧೆಯ ಪಾತ್ರ ಮಾಡುವಾಗ, ಕೆಲವು ತುಂಟ ಹುಡುಗರು ಹಿಂಬಾಲಿಸಿ, ಹಳ್ಳಿಯೊಂದರಲ್ಲಿ ಕೀಟಲೆ ಮಾಡಿದುದೂ ಉಂಟು. ಗುಬ್ಬಿ ವೀರಣ್ಣ, ಹಿರಣ್ಣಯ್ಯ, ವರದಾಚಾರ್ ಕಂಪನಿಯಂತಹ ಆಗಿನ ಕಾಲದ ಸುಪ್ರಸಿದ್ಧ ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದು. ಸದಾರಮೆ ನಾಟಕದ ಕಳ್ಳನ ಪಾತ್ರದಲ್ಲಿ ಇವರ ನಟನೆಯನ್ನು ಕನ್ನಡ ರಂಗಭೂಮಿಯ ಅಧ್ವರ್ಯುಗಳು ಮೆಚ್ಚಿಕೊಂಡಿದ್ದರು. ಪ್ರೇಕ್ಷಕನ ನಾಡಿ ಮಿಡಿತವನ್ನು ರಂಗ ಮಂಚದ ಮೇಲೆ ಅಭಿನಯಿಸುವಾಗ ಮಾತ್ರ ಹಿಡಿಯಲು ಸಾಧ್ಯವೆನ್ನುತ್ತಿದ್ದರು.

ಆಗಿನ ದಿನಗಳಲ್ಲಿ ಕಲಾ ಸೇವೆಗಾಗಿ, ಸಂಗೀತ ಶಿಕ್ಷಣಕ್ಕೆ ಪ್ರತಿಫಲವಾಗಿ ಕೇವಲ ಒಂದು ಸೇರು ರಾಗಿ ಅಥವಾ ಭತ್ತ ಅವರ ದಿನಗೂಲಿಯಾಗಿರುತ್ತಿತ್ತು. ಆದರೆ ಅವರೆಂದೂ ಅದಕ್ಕಾಗಿ ಬಡತನವನ್ನು ಹಳಿದವರಲ್ಲ. ಬದಲಿಗೆ ಹಾಸ್ಯವಗಿ “ನಾವು ಆಗರ್ಭ ದರಿದ್ರರು” ಎಂದು ನಗು ತೇಲಿಸಿ ನುಡಿಯುತ್ತಿದ್ದರು. ಸುಪ್ರಸಿದ್ಧ ಹಿಂದುಸ್ತಾನಿ ವಿದ್ವಾಂಸ ಪಂಡಿತ್‌ ಗೋವಿಂದ ವಿಠಲ ಭಾವೆ ಅವರಲ್ಲಿ ಹಲವು ವರ್ಷಗಳ ಕಾಲ ಹಿಂದುಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದರು. ಅನಂತರ ಆಗ್ರಾ ಘರಾಣೆಯ ಶ್ರೇಷ್ಠ ಸಂಗೀತ ವಿದ್ವಾಂಸರಾಗಿದ್ದ ಸ್ವಾಮಿ ವಲ್ಲಭದಾಸರು ಹಾಗೂ ಉಸ್ತಾದ್‌ ಅತ್ತಾಹುಸೇನ್‌ ಖಾನ್‌ ಅವರಲ್ಲಿ ಕಠಿಣ ತರಬೇತಿ ಪಡೆದರು. ಅವರಲ್ಲಿಯೇ ನಾಯಕ್‌ ಅವರಿಗೆ ಭಾರತೀಯ ಸಂಗೀತದ ಶ್ರೀಮಂತಿಕೆ, ಅದರ ಐತಿಹಾಸಿಕ ಹಾಗೂ ವೈಜ್ಞಾನಿಕ ಆಯಾಮಗಳ ಪರಿಚಯವಾಯಿತು. ಗುರುಶೀಷ್ಯ ಪರಂಪರೆಯ ಮೌಲಿಕತೆಯ ಅರಿವುಂಟಾಯಿತು. ಮುಂದೆ ರಾಮರಾವ್‌ ನಾಯಕ್‌ರವರು ಆಗ್ರಾ ಘರಾಣೆಯ ಅನನ್ಯ ಸಾಧಕರಾಗಿದ್ದ, ಮೇರು ಸದೃಶ ಉಸ್ತಾದ್‌ ಫಯಾಜ್‌ ಖಾನ್‌ ಅವರಲ್ಲಿ ಪ್ರಾಯೋಗಿಕಕ ಪರಿಷ್ಕಾರ ಪಡೆದು ಕಚೇರಿಯ ತಂತ್ರ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡರು. ಆಗ್ರಾ ಘರಾಣೆಯ ನುರಿತ ಗಾಯಕರಾಗಿ ರೂಪುಗೊಂಡರು.

ಪಂಡಿತ್‌ ರಾಮರಾವ್‌ ವಿ. ನಾಯಕ್‌ ಅವರು ಹಾಡುಗಾರಿಕೆಗಷ್ಟೇ ತಮ್ಮ ಪ್ರತಿಭೆಯನ್ನು ಸೀಮೀತಗೊಳಿಸಿಕೊಳ್ಳಲಿಲ್ಲ. ಅಲ್ಪಕಾಲದ ರಂಗ ಕಲೆಯ ಸಾಹಚರ್ಯಯಲ್ಲಿ ಅವರು ಹಾರ್ಮೋನಿಯಂ ವಾದನದಲ್ಲೂ ನೈಪುಣ್ಯವನ್ನು ಸಾಧಿಸಿದರು. ತನಿ ಹಾಡುಗಾರಿಕೆ ಹಾಗೂ ಸಮರ್ಥ ಸಾಥಿಗಳೆರಡರಲ್ಲೂ ಸಿದ್ಧ ಹಸ್ತರೆನಿಸಿದರು. ಬೆಂಗಳೂರಿಗೆ ಬಂದಾಗಲೆಲ್ಲಾ ಸಾಥ್‌ ನೀಡುತ್ತಿದ್ದ ರಾಮರಾಯರನ್ನು ವಲ್ಲಭದಾಸರು ಬರೋಡಕ್ಕೆ ಬರಲು ಆಹ್ವಾನಿಸಿದರು. ಹಣಕಾಸಿನ ತೊಂದರೆಯಿದ್ದರೂ ರಾಮರಾಯರು ಬರೋಡಕ್ಕೆ ಹೊರಟರು. ಆಗ್ರಾ ಘರಾಣೆಯ ಅಧಿದೇವತೆ ಉಸ್ತಾದ್‌ ಫಯಾಜ್‌ಖಾನ್‌ರ ಸಂಪರ್ಕಬೆಳೆಯಿತು. ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ನೈಪುಣ್ಯವನ್ನು ಪಡೆದುಕೊಂಡರು. ಫಯಾಜ್‌ಖಾನರ ಶಿಷ್ಯ ಹುಸೇನ್‌ ಖಾನರಲ್ಲಿ ಹೆಚ್ಚಿನ ಅಭ್ಯಾಸವನ್ನು ಮಾಡಿ ಆಗ್ರಾ ಘರಾಣೆಯನ್ನು ಕರಗತ ಮಾಡಿಕೊಂಡರು. ರಾಮರಾಯರು ಫಯಾಜ್‌ಖಾನರ ಜೊತೆಯಲ್ಲಿ ಹಲವು ನಗರಗಳಿಗೆ ಭೇಟಿ ನೀಡಿ ಅವರಿಗೆ ಹಾರ್ಮೋನಿಯಂ ಸಾಥ್‌ ನೀಡಿ ಭೇಷ್‌ ಎನಿಸಿಕೊಂಡರು.

ಸೃಜನ ಶೀಲ ಪ್ರತಿಭೆಯ ರಾಮರಾವ್‌ ವಿ. ನಾಯಕ್‌ ಅವರು ಅನೇಕ ರಾಗಗಳಲ್ಲಿ ಖಯಾಲ್‌ಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ಕಲ್ಯಾಣ ವಸಂತ ರಾಗದಿಂದ ಪ್ರಭಾವಿತರಾಗಿ ಅಪರೂಪದ ನಾಗರಂಜನಿ ಎಂಬ ನೂತನ ರಾಗವನ್ನು ಸಂಯೋಜಿಸಿದ್ದಾರೆ. ಉತ್ತಮ ವಜನ್‌ ತುಂಬಿದ ಸ್ವರೋಚ್ಚಾರ, ನಾದ ಗಾಂಭೀರ್ಯ, ಇಳುಕಲು ಸ್ವರಗಳಲ್ಲಿ ವಿಶೇಷ ಜಾಣ್ಮೆ, ಭಾವ ಪೋಷಕವದ ಸ್ವರ ಸಂಯೋಜನೆ ನಾಯಕರ ಗಾಯನದ ವೈಶಿಷ್ಟ್ಯಗಳು. ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮದಲ್ಲಿ, ಮೈಸೂರು ದಸರಾ, ಕೇಂದ್ರ ಸಂಗೀತ ನಾಟಕ ಅಕಾಡೆಮಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ.

ತಾವು ಸತತ ಸಾಧನೆಯಿಂದ ಗಳಿಸಿಕೊಂಡ ಸಂಗೀತವನ್ನು ಶಿಕ್ಷಕರಗಿ ಶಿಷ್ಯವೃಂದಕ್ಕೆ ಧಾರೆ ಎರೆದು, ಅನೇಕ ಪ್ರತಿಭಾವಂತ ಸಂಗೀತ ಕಲಾವಿದರನ್ನು ರೂಪಿಸಿದ ಹಿರಿಮೆಗೂ ನಾಯಕರು ಪಾತ್ರರಾಗಿದ್ದಾರೆ.

ಪಂಡಿತ್‌ ರಾಮರಾವ್‌ ವಿ. ನಾಯಕ್‌ ಅವರ ಗಾನ ಪ್ರೌಢಿಮೆಗೆ ವಹಿಸಿದ ಮನ್ನಣೆ ಗೌರವಗಳು ಅಪಾರ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಗಂಧರ್ವ ಮಹಾ ವಿದ್ಯಾಲಯದಿಂದ ‘ಸಂಗೀತ ಕಲಾ ಭೂಷಣ’ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಧ್ಯ ಪ್ರದೇಶ ಸರ್ಕಾರದ ಪ್ರತಿಷ್ಠಿತ ತಾನ್‌ಸೇನ್‌ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ.

ಮೈಸೂರಿನ ಹೆಮ್ಮೆಯ ಪುತ್ರರಾದ ರಾಮರಾವ್‌ ವಿ. ನಾಯಕ್‌ ಅವರಿಗೆ ಇತಿಹಾಸ ಪ್ರಸಿದ್ಧ ಮೈಸೂರು ಅರಮನೆಯ ಆವರಣದಲ್ಲಿ ರಾಜ್ಯದ ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ “ರಾಜ್ಯ ಸಂಗೀತ ವಿದ್ವಾನ್‌” ನೀಡಿ ೧೯೯೫ರಲ್ಲಿ ಗೌರವಿಸಿದ್ದಾರೆ.

ಅಪಾರ ಶಿಷ್ಯ ವೃಂದ ಹೊಂದಿದ್ದ ನಾಯಕರಿಗೆ ಮೀರಾ ಸಾವೂರ್, ಸೌವೂರ್, ಲಲಿತ್‌ ರಾವ್‌ ಮತ್ತು ಸುಧೀಂದ್ರ ಭೌಮಿಕ್‌ರಂತಹ ಪ್ರತಿಭಾವಂತರು ತಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಬಗ್ಗೆ ಅಪಾರ ಭರವಸೆಯನ್ನು ಹೊಂದಿದ್ದರು. ರಾಮರಾವ ನಾಯಕರು ದಿನಾಂಕ ೨೧.೧೦.೧೯೯೮ರಂದು ಹರಿಪಾದ ಸೇರಿ ಸಂಗೀತ ಕ್ಷೇತ್ರದ ಧ್ರುವತಾರೆಯಾಗಿ ಮೆರೆದಿದ್ದಾರೆ.