ಕರ್ನಾಟಕದಲ್ಲಿ ಆಗ್ರಾ ಘರಾಣೆಯನ್ನು, ಕರ್ನಾಟಕೀ ಸಂಗೀತದ ಭದ್ರಕೋಟೆ ಎನಿಸಿದ ಬೆಂಗಳೂರಿನಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಬೆಳೆಸಿದ ಅಗ್ರಗಣ್ಯ ಹಿಂದೂಸ್ಥಾನಿ ಗಾಯಕರಲ್ಲಿ ಪಂ. ರಾಮರಾವ ವೆಂಕಾಜಿರಾವ ನಾಯಕ ಪ್ರಮುಖರು. ಸಂಗೀತ ಕಲೆಯ ಬೆಳವಣಿಗೆಗಾಗಿ ತಮ್ಮ ಜೀವನವನ್ನು ಮೀಸಲಾಗಿರಿಸಿದವರು.

ಪಂ. ರಾಮರಾವ್‌ ಅವರು ಜನಿಸಿದ್ದು ೧೯೦೯ರಲ್ಲಿ: ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ನೀರಲಗಿಯಲ್ಲಿ ಬೆಳೆದದ್ದು ಮೈಸೂರಿನಲ್ಲಿ; ನೆಲೆಸಿದ್ದು ಬೆಂಗಳೂರಿನಲ್ಲಿ. ಅವರ ತಂದೆ ವೆಂಕಾಜಿರಾವರು ಮೈಸೂರು ಅರಸರ ಸೇನೆಯಲ್ಲಿ ಹವಾಲ್ದಾರರಾಗಿ ಕೆಲಸ ಮಾಡಿದ. ಸಂಗೀತ ಪ್ರೇಮಿಗಳು. ಮೈಸೂರಿನಲ್ಲಿ ದಸರಾ ಉತ್ಸವದಲ್ಲಿ ನಡೆಯುವ ಸಂಗೀತ ದರ್ಬಾರ, ಅಲ್ಲಿ ದೇಶದ ಬೇರೆ ಬೇರೆ ಭಾಗದಿಂದ ಬಂದು ಕರ್ನಾಟಕೀ, ಹಿಂದುಸ್ಥಾನಿ  ಸಂಗೀತ ಕಚೇರಿ ನೀಡುತ್ತಿದ್ದ ಸಂಗೀತ ದಿಗ್ಗಜರ ಗಾಯನ ಬಾಲ್ಯದಲ್ಲಿಯೇ ರಾಮರಾಯರ ಮೇಲೆ ಪ್ರಭಾವ ಬೀರಿದವು. ಪ್ರಾರಂಭದಲ್ಲಿ ಕರ್ನಾಟಕೀ ಸಂಗೀತವನ್ನು ಕೆಲವು ದಿವಸ ಕಲಿತ ನಂತರ ರಾಮರಾವರು ಹಿಂದುಸ್ತಾನಿ ಸಂಗೀತದತ್ತ ತಮ್ಮ ಒಲವು ಹರಿಸಿದರು. ಆ ದಿನಗಳಲ್ಲಿ ನಾಟಕಗಳ ಸಂಗೀತ ಪ್ರಧಾನವಾಗಿರುತ್ತಿತ್ತು. ಬಾಲಕ ರಾಮರಾವರು ನಾಟಕ ಕಂಪನಿಗಳಲ್ಲಿ ನಟರಾಗಿ, ನಟ ಗಾಯಕರಾಗಿ ಸಂಗೀತದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

ಅಷ್ಟರಲ್ಲಿ ವೆಂಕಾಜಿರಾವ ಅವರಿಗೆ ಮೈಸೂರಿನಿಂದ ಬೆಂಗಳೂರಿಗೆ ವರ್ಗವಾಯಿತು. ಪಂ. ವಿಷ್ಣು ದಿಗಂಬರ ಪಲುಸ್ಕರ ಅವರ ಶಿಷ್ಯ. ಬೆಂಗಳೂರಿನಲ್ಲಿ ನೆಲೆಸಿದ್ದ ಹಿಂದೂಸ್ಥಾನಿ ಗಾಯಕ ಶ್ರೀ ಗೋವಿಂದ ವಿಠಲ ಭಾವೆಯವರ ಹತ್ತಿರ ರಾಮರಾವರು ಹಿಂದುಸ್ಥಾನಿ  ಸಂಗೀತ ಕಲಿತರು. ನಂತರ ಆಗ್ರಾಘರಾಣೆಯ ಅಧ್ವರ್ಯ ಉಸ್ತಾದ್‌ ಫೈಯಾ ಜ್‌ಖಾನ್‌ ಹಾಗೂ ಬರೋಡಾದ ಸ್ವಾಮಿ ವಲ್ಲಭದಾಸ ಅವರಲ್ಲಿ ಹಿಂದೂಸ್ಥಾನಿ ಸಂಗೀತದ ಉನ್ನತ ಶಿಕ್ಷಣ ಪಡೆದರು. ತಮ್ಮ ನಿರಂತರ ಅಭ್ಯಾಸ, ಸಮರ್ಥ ಗುರುವಿನ ಮಾರ್ಗದರ್ಶನದ ಫಲವಾಗಿ ರಾಮರಾವ ನಾಯಕರು ಆಗ್ರಾ ಘರಾಣೆಯ ಖ್ಯಾತನಾಮ ಗಾಯಕರೆಂದು ಹೆಸರು ಗಳಿಸಿದರು. ಅವರು ಕೆಲವು ವರ್ಷ ಅತ್ರಾಣಿ ಘರಾಣೆಯ ಅತಾ ಹುಸೇನಖಾನರಲ್ಲಿ ತಾಲೀಮು ಪಡೆದುಕೊಂಡರು.

ಭಾರತದ ದಕ್ಷಿಣ ಭಾಗದಲ್ಲಿ ಹಿಂದೂಸ್ಥಾನಿ ಸಂಗೀತ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ಪಂ. ರಾವರಾವ ನಾಯಕರು ಸಮಾನ ಮನಸ್ಕ ಹಿಂದೂಸ್ಥಾನಿ ಗಾಯಕರ ಸಹಕಾರದಿಂದ ಬೆಂಗಳೂರಿನಲ್ಲಿ ‘ಹಿಂದೂಸ್ಥಾನಿ ಕಲಾಕಾರ ಮಂಡಳಿ’ ಸ್ಥಾಪಿಸಿದರು. ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಿದರು. ಅವರ ಶಿಷ್ಯರಲ್ಲಿ ಡಾ. ಎಂ.ಆರ್. ಗೌತಮ, ಲಲಿತಾ ಉಭಯಕರ್, ಮೀರಾ ಸವೂರ್, ಲಲಿತಾ ಜೆ.ರಾವ್‌, ಶಾಂತಾ ಜಯತೀರ್ಥ, ರಾಧಾಭಾಯಿ ಸುಜೀರ, ಮನೊರಮಾ ಗಂಗೂಲಿ, ಸುಮತಿ ಸುಮಾ, ಕೆ.ವಿ. ನಂದಕುಮಾರ ಪ್ರಮುಖರು. ಆಕಾಶವಾಣಿಯ ‘ಎ’ ಶ್ರೇಣಿ ಕಲಾವಿದ ಪಂ. ರಾಮರಾವ ವ್ಹಿ. ನಾಯಕ ಅವರ ಸಂಗೀತ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರ ಬಂದಿವೆ. ಅಂಥವುಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (೧೯೭೦-೭೧), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೫), ಚೌಡಯ್ಯ ಸ್ಮಾರಕ ಪ್ರಶಸ್ತಿ (೧೯೯೨), ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೯೨), ಮಧ್ಯಪ್ರದೇಶ ಸರ್ಕಾರದ ತಾನಸೇನ ಪ್ರಶಸ್ತಿ (೧೯೯೨), ಗಾಂಧರ್ವ ಮಹಾ ವಿದ್ಯಾಲಯದ ಕಲಾ ಭೂಷಣ ಪ್ರಶಸ್ತಿ (೧೯೭೭), ಗಾನಕಲಾ ಭೂಷಣ, ಗಾನ ಕಲಾ ತಿಲಕ – ಮುಂತಾದವು ಉಲ್ಲೇಖನೀಯವಾಗಿದೆ.