ಸುಮಾರು ಇನ್ನೂರೈವತ್ತು ವರ್ಷಗಳ ಹಿಂದಿನ ಕಾಲ. ಪೇಶ್ವೆಯರ ಆಳ್ವಿಕೆಯ ಸುವರ್ಣಕಾಲ. ಪೇಶ್ವೆ ಎಂದರೆ ಮಹಾರಾಜನ ಆಪ್ತನಂತೆ ಇರುವವನು.

ಮೊದಲನೆಯ ಬಾಜೀರಾಯನು ಪೇಶ್ವೆಯ ಅಧಿಕಾರವನ್ನು ವಹಿಸಿಕೊಂಡಾಗ, ಅವನ ವಯಸ್ಸು ಕೇವಲ ಇಪ್ಪತ್ತು. ತಾರುಣ್ಯದ ಹೊಸ್ತಿಲಲ್ಲಿ ಕಾಲಿರಿಸುತ್ತಿದ್ದ ಬಾಜೀರಾಯನು ತನ್ನ ಸಾಮ್ರಾಜ್ಯದ ಪರಮವೈಭವದ ಕನಸು ಕಾಣುತ್ತಿದ್ದನು. ಆ ಸ್ವಪ್ನವನ್ನು ಸಾಕಾರಗೊಳಿಸಲು ಸರ್ವ ಪ್ರಯತ್ನ ಮಾಡಿದನು. ಬುಂದೇಲಖಂಡದವರೆಗೆ ದಂಡೆತ್ತಿ ಹೋಗಿ ಬಹಾದೂರ್ ಶಾಹನನ್ನು ಸೋಲಿಸಿ ಹಿಂದಿರುಗಿದನು. ಎರಡು ಯುದ್ಧಗಳಲ್ಲಿ ನಿಜಾಮನನ್ನು ಸೋಲಿಸಿದನು. ಪೇಶ್ವೆ ಎಂದರೆ ಕೇವಲ ಪ್ರಧಾನ ಮಂತ್ರಿಯ ಉಡುಪು ಧರಿಸಿದ ಕಾರಕೂನನಲ್ಲ, ಪ್ರಸಂಗ ಬಂದರೆ ಸೇನಾಪತಿಯಾಗಿ ಯುದ್ಧ ಮಾಡಬಲ್ಲ ಎಂಬುದನ್ನು ಬಾಜೀರಾಯನು ತನ್ನ ಕೃತಿಯಿಂದ ಸಿದ್ಧಮಾಡಿ ತೋರಿಸಿದನು.

ಬಾಜೀರಾಯನ ನಂತರ ಬಂದ ಅವನ ಮಗ ಶ್ರೀಮಂತ ನಾನಾಸಾಹೇಬಹ ಪೇಶ್ವೆಯ ದಕ್ಷತೆ, ದೂರದರ್ಶಕತೆ, ರಾಜಕಾರ್ಯದುರಂಧರತೆ, ಗುಣಗ್ರಾಹಕತೆಗಳಿಂದಾಗಿ ಅನೇಕ ಧೀಮಂತ ವ್ಯಕ್ತಿಗಳು ಪೇಶ್ವೆಯ ಬೆಂಗಾವಲಿಗೆ ಬಂದು ನಿಂತರು. ಅವರಲ್ಲಿ ಒಬ್ಬ ನ್ಯಾಯದೇವತೆಯ ಪರಮ ಭಕ್ತನೂ, ನಿರ್ಭಯ, ನಿಸ್ಪೃಹ ನ್ಯಾಯಾಧಿಕಾರಿಯೂ ಆದ ಅಸಾಧಾರಣ ವ್ಯಕ್ತಿ ರಾಮಶಾಸ್ತ್ರಿ ಪ್ರಭುಣೆ.

ತುಂಟ ಹುಡುಗ

ಮಾಹುಲಿ ಒಂದು ಸುಪ್ರಸಿದ್ಧ ತೀರ್ಥಕ್ಷೇತ್ರ. ಅಲ್ಲಿ ಮಹಾದೇವನ ಒಂದು ಪ್ರಾಚೀನ ಮಂದಿರವಿದೆ. ದೂರ ದೂರದಿಂದ ಭಕ್ತ ಜನರು ಈ ತೀರ್ಥ ಕ್ಷೇತ್ರಕ್ಕೆ ಬಂದು ಮಹಾಶಿವನ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಯಾತ್ರಾರ್ಥಿಗಳ ಆಗಮನ ವರ್ಷವಿಡೀ ನಡೆದಿರುತ್ತದೆ. ಮೊದಲಿನಿಂದಲೂ ಅನೇಕ ಬ್ರಾಹ್ಮಣ ಕುಟುಂಬಗಳು ಇಲ್ಲಿ ಬಂದು ನೆಲೆಸಿವೆ. ಅವುಗಳಲ್ಲಿ ಪ್ರಭುಣೆ ಒಂದು ಮನೆತನ. ಒಂದು ಬಡಕುಟುಂಬ. ಈ ಪ್ರಭುಣೆ ಮನೆತನದಲ್ಲಿ ರಾಮಶಾಸ್ತ್ರಿಯ ಜನನವಾಯಿತು. ರಾಮ ಇನ್ನೂ ಚಿಕ್ಕವನಿರುವಾಗಲೇ ತಂದೆಯನ್ನು ಕಳೆದುಕೊಂಡು ಅನಾಥನಾದನು.

ತಾಯಿಗೆ ರಾಮನ ವಿದ್ಯಾಭ್ಯಾಸದಲ್ಲಿ ತುಂಬ ಆಸಕ್ತಿ. ಅವನು ಓದಿ ಪಂಡಿತನಾಗಬೇಕು, ‘ಶಾಸ್ತ್ರಿ’ ಎಂದು ಹೆಸರು ಪಡೆಯಬೇಕು, ಕೀರ್ತಿವಂತನಾಗಿ ಪೇಶ್ವೆಯವರ ಕಣ್ಣಿಗೆ ಬೀಳಬೇಕು ಎಂದು ಅವಳ ಆಸೆ. ಪೇಶ್ವೆಯವರಿಂದ ಶಾಲು, ಬಿರುದು ಬಾವಲಿಗಳನ್ನು ಅವನು ಪಡೆಯಬೇಕೆಂಬ ಹಂಬಲ. ಅದನ್ನೆಲ್ಲ ಚಿತ್ರಿಸಿಕೊಂಡು ಸಂತೋಷ ಪಡುವಳು. ಆದುದರಿಂದ ಅವಳಿಗೆ ತನ್ನ ಮಗನಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕೆಂಬ ಆಸೆ. ಗಂಡ ತೀರಿಕೊಂಡಿದ್ದರೂ, ಬಡತನವಿದ್ದರೂ ಅವನನ್ನು ಶಿಕ್ಷಣಕ್ಕಾಗಿ ಗುರುಗಳ ಬಳಿಗೆ ಕಳುಹಿಸಿದಳು.

ರಾಮನು ಬಾಲಕನಾಗಿದ್ದಾಗ ಬಹಳ ತುಂಟ ಹಾಗೂ ಕಿಡಿಗೇಡಿಯಾಗಿದ್ದನು. ಗಂಟೆಗಟ್ಟಲೆ ನದಿಯಲ್ಲಿ ಈಜಾಡುವುದು, ಗುಡ್ಡ -ಬೆಟ್ಟಗಳಲ್ಲಿ ಅಲೆದಾಡುವುದು, ಇವೇ ಅವನ ದೈನಂದಿನ ಕಾರ್ಯಕ್ರಮಗಳಾಗಿದ್ದವು. ಓರಗೆಯ ಗೆಳೆಯರು, ಮಂತ್ರ-ಜಪಕಾರಿಕಾ ಶ್ಲೋಕಗಳನ್ನು ಕಲಿತರೆ ಬಾಲಕ ರಾಮನಿಗೆ ಏನೂ ಬರುತ್ತಿರಲಿಲ್ಲ. ಗುರುಗಳ ಎಲ್ಲ ರೀತಿಯಿಂದ ಹೇಳಿ ನೋಡಿದರು. ಯಾವ ಪರಿಣಾಮವೂ ಆಗಲಿಲ್ಲ. ಇತ್ತ ರಾಮನ ತಾಯಿಗೆ ತುಂಬಾ ನಿರಾಸೆ. ಸದಾ ಆಟ-ತಿರುಗಾಟದಲ್ಲಿ ಕಾಲಕಳೆಯುವ, ಕೈಯಲ್ಲಿ ಪುಸ್ತಕ ಹಿಡಿಯದ ಮಗ ರಾಮನನ್ನು ನೋಡಿ ಮನದೊಳಗೆ ಕೊರಗುತ್ತಿದ್ದಳು.

ರಾಮನಿಗ ಹರಭಟ್‌ ಎಂಬ ಸೋದರ ಮಾವನಿದ್ದನು. ಅವನು ತನ್ನ ತಂಗಿ ರಾಮನ ತಾಯಿ ಕಷ್ಟದಲ್ಲಿರುವುದನ್ನು ಕಂಡು, ಅವಳಿಗೆ ಯಾವ ರೀತಿಯಿಂದಲಾದರೂ ನೆರವಾಗಬೇಕೆಂದು ಮಾಹುಲಿಗೆ ಬಂದು ನೆಲೆಸಿದನು. ಅವನು ಪುರಾಣ-ಪುಣ್ಯ ಕಥೆಗಳನ್ನು ಕೇಳಿ ಕೀರ್ತನೆ ನಡೆಸಿ ಜೀವನವನ್ನು ನಡೆಸುತ್ತಿದ್ದನು. ಹಾಗೂ ತನ್ನ ತಂಗಿಗೂ ನೆರವಾಗುತ್ತಿದ್ದನು.

ಪಾಠಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ

ಚಾತುರ್ಮಾಸದ ದಿನಗಳೆಂದರೆ ಮಾಹುಲಿಯ ಬ್ರಾಹ್ಮಣರಿಗೆಲ್ಲ ದೀಪಾವಳಿಯ ಹಬ್ಬ. ಸ್ವತಃ ಪೇಶ್ವೆ ದಾನ-ಧರ್ಮ ಮಾಡಲು ಪ್ರತಿವರ್ಷ ಮಾಹುಲಿಗೆ ಬರುವ ರೂಢಿ. ವಿದ್ವಾಂಸರಿಗೂ ವಿದ್ಯಾರ್ಥಿಗಳಿಗೂ ಪೇಶ್ವೆಯರು ಉದಾರವಾಗಿ ದಕ್ಷಿಣೆ ಕೊಡುತ್ತಿದ್ದರು.

ಪ್ರತಿ ವರ್ಷದಂತೆ ಪೇಶ್ವೆಯರು ಪರಿವಾರ ಸಹಿತ ರಾಜವೈಭವದಿಂದ ಮಾಹುಲಿಗೆ ಬಂದಿಳಿದರು. ಮಹಾದೇವರಿಗೆ ಪೇಶ್ವೆಯವರ ಕೈಯಿಂದ ಅಭಿಷೇಕ ನಡೆಯಿತು. ಸುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದ ಜನಕ್ಕೆಲ್ಲ ಅನ್ನ ಸಂತರ್ಪಣೆ ನಡೆಯಿತು. ಇನ್ನು ದಾನ-ದಕ್ಷಿಣೆಯ ಕಾರ್ಯಕ್ರಮ. ಇದಕ್ಕಾಗಿ ದೇವಾಲಯದ ಹೊರಗಡೆ ಒಂದು ಚಪ್ಪರ ಹಾಕಲಾಗಿತ್ತು. ನ್ಯಾಯ, ವೇದಾಂತ, ವ್ಯಾಕರಣ ಮುಂತಾದ ವಿಷಯಗಳಲ್ಲಿ ಪಾರಂಗತರಾದ ವಿದ್ವಾಂಸ ಮಂಡಳಿಯು ಅಲ್ಲಿ ನೆರೆದಿತ್ತು. ಪೇಶ್ವೆ ಪರಿವಾರದ ಒಬ್ಬ ವ್ಯಕ್ತಿ ಚಪ್ಪರದಿಂದ ಹೊರಗೆ ಬಂದು “ವಿಶೇಷ ಅಧ್ಯಯನ ಮಾಡಿದವರು ಹಾಗೂ ಪಾಠಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಒಳಗೆ ಬರಬೇಕು” ಎಂದು ಎತ್ತರದ ಧ್ವನಿಯಲ್ಲಿ ಸಾರಿದನು. ದಕ್ಷಿಣೆ ಸ್ವೀಕರಿಸುವ ಸಾಲಿನಲ್ಲಿ ಹರಭಟ್ಟನೂ ಬಾಲಕ ರಾಮ ಕೈಹಿಡಿದುಕೊಂಡು ನಿಂತಿದ್ದನು. ತಾನು ದಕ್ಷಿಣೆ ಪಡೆದು, ರಾಮನಿಗೂ ದಕ್ಷಿಣೆ ಪಡೆಯುವ ಲೆಕ್ಕಾಚಾರ ಅವನದು. ಪಾಠಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಎಂಬ ಮಾತನ್ನು ಕೇಳಿ ಬಾಲಕ ರಾಮನು ವಿಚಾರ ಮಗ್ನನಾದನು. “ನಾನು ಪಾಠಶಾಲೆಗೆ ಹೋಗುವುದಿಲ್ಲ.

ಪಾಠಶಾಲೆಗೆ ಹೋಗುವವರಿಗೆ ಮಾತ್ರ ದಕ್ಷಿಣೆ. ಆದ್ದರಿಂದ ದಕ್ಷಿಣೆ ಸ್ವೀಕರಿಸುವ ಅರ್ಹತೆ ನನ್ನಲ್ಲಿ ಇಲ್ಲ”. ಇತ್ಯಾದಿ ವಿಚಾರಗಳ ತಿಕ್ಕಾಟದಿಂದ ಬಾಲಕ ರಾಮನ ಮುಖ ಗಂಭೀರವಾಯಿತು ರಾಮನ ಮುಖವನ್ನು ನೋಡಿ ಅವನ ಮನಸ್ಸಿನಲ್ಲಿ ಏನು ನಡೆದಿರಬಹುದೆಂಬುದನ್ನು ಸೋದರಮಾವನು ಸೂಕ್ಷ್ಮವಾಗಿ ತಿಳಿದನು. ಅವನು “ಮೂರ್ಖಾ, ನಾನು ಹೇಳಿದಂತೆ ನುಡಿ, ‘ನಾನು ಪಾಠಶಾಲೆಗೆ ಹೋಗುತ್ತೇನೆ’ ಎಂದು ಅನ್ನು. ಲಕ್ಷ್ಯವಿರಲಿ ದಕ್ಷಿಣೆ ಪಡೆಯಲೇ ಬೇಕು” ಎಂದು ಘರ್ಜಿಸಿದನು. ಪಂಡಿತರು ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಒಳಗೆ ಹೋಗಿ ತಮ್ಮ ತಮ್ಮ ಯೋಗ್ಯತೆಗೆ ತಕ್ಕಂತೆ ದಕ್ಷಿಣೆ ಪಡೆದು ಹೊರಬರುತ್ತಿದ್ದರು. ರಾಮನ ಸರದಿ ಬಂದಿತು. ಅವನು ಒಳಗೆ ಕಾಲಿಡುತ್ತಲೇ ಪೇಶ್ವೆಯವರ ಬಳಿ ಕುಳಿತ ಶಾಸ್ತ್ರಿಗಳು ‘ಮಗು ಯಾವ ಪಾಠಶಾಲೆಯಲ್ಲಿ ಓದುತ್ತಿರುವಿ?” ಎಂದು ಕೇಳಿದರು. ಬಾಲಕ ರಾಮನು ಉತ್ತರಿಸದೆ ಹಾಗೇ ನಿಂತನು. ಆಗ ಜೊತೆಯಲ್ಲಿದ್ದ ಹರಭಟ್ಟನು ಊರಲ್ಲಿಯ ಒಂದು ಪಾಠಶಾಲೆಯ ಹೆಸರು ಹೇಳಿದನು. ಹೆಚ್ಚು ವಿಚಾರಿಸದೆ ಶಾಸ್ತ್ರಿಗಳು ರಾಮನಿಗೆ ದಕ್ಷಿಣೆ ಕೊಟ್ಟರು. ರಾಮನು ಚಪ್ಪರದಿಂದ ಹೊರಗೆ ಬಂದನು. ಏನೂ ಮಾತಾಡದೆ ಮನೆಯ ಕಡೆ ನಡೆದನು.

ನನಗೆ ಅರ್ಹತೆಯಿಲ್ಲ

ಸ್ವಲ್ಪ ದೂರ ಹೋದಮೇಲೆ, ಏನೋ ನಿರ್ಧಾರಕ್ಕೆ ಬಂದವನಂತೆ, ರಾಮನು ತಿರುಗಿ ಚಪ್ಪರದ ಕಡೆಗೆ ನಡೆದನು. ಹೀಗೇಕೆ ಎಂದು ಹರಭಟ್ಟನು ಕೇಳಬೇಕೆನ್ನುವಷ್ಟರಲ್ಲಿ ರಾಮನು ಚಪ್ಪರದ ಒಳಗೆ ಹೋಗಿದ್ದನು. ಒಳಗೆ ಹೋದವನೇ ರಾಮನು ಶಾಸ್ತ್ರಿಗಳ ಪಾದಕ್ಕೆ ವಂದಿಸಿ ‘ಈ ದಕ್ಷಿಣೆಯನ್ನು ತಿರುಗಿ ತೆಗೆದುಕೊಳ್ಳಿರಿ’ ಎಂದು ನುಡಿದನು.

“ಏಕೆ ಮಗು, ದಕ್ಷಿಣೆಯನ್ನೇಕೆ ತಿರುಗಿ ಕೊಡುತ್ತಿರುವಿ?”

“ದಕ್ಷಿಣೆ ಸ್ವೀಕರಿಸುವ ಅರ್ಹತೆ ನನಗಿಲ್ಲ”

“ಅಂದರೆ, ನೀನು ಪಾಠಶಾಲೆಗೆ ಹೋಗುತ್ತಿಲ್ಲವೆ?”

“ಇಲ್ಲ”

“ಅಂದರೆ ಮೊದಲು ನೀನು………”

“ಹೌದು, ಆಗ ನಾನು ಸುಳ್ಳು ಹೇಳಿದೆ, ನಾನು ಯಾವ ಶಾಲೆಯಲ್ಲಿಯೂ ಕಲಿಯುತ್ತಿಲ್ಲ” ಇಷ್ಟು ಹೇಳಿ ಬಾಲಕ ರಾಮನು ಅಲ್ಲಿಂದ ಹೊರಬಿದ್ದನು. ಮನೆಗೆ ಬಂದವನೇ, ತಾಯಿಯ ಎದುರು ನಡೆದ ಘಟನೆಯೆಲ್ಲವನ್ನೂ ವಿವರವಾಗಿ ಹೇಳಿದನು.

ಹರಭಟ್ಟನಿಗೆ ಮೈಯೆಲ್ಲಾ ಉರಿಯುವಂತಹ ಕೋಪ. ‘ನನ್ನ ಮಾತನ್ನು ಕೇಳದೆ ತಾನೇ ಎಲ್ಲ ತಿಳಿದವನು ಎನ್ನುವ ಹಾಗೆ ನಡೆದ ಈ ಚೋಟುದ್ದ ಹುಡುಗ!’ ಎಂದು ಕೋಪ. ಆದರೆ ತಾಯಿಯ ಪ್ರತಿಕ್ರಿಯೆಯೇ ಬೇರೆ. ಹರಭಟ್ಟನ ಕೋಪವನ್ನು ಎದುರಿಸಿ, ದಕ್ಷಿಣೆಯನ್ನು ತಿರುಗಿ ಕೊಡುವುದರಲ್ಲಿ ತನ್ನ ಮಗನು ತೋರಿದ ಧೈರ್ಯವನ್ನೂ ಅವನ ಪ್ರಾಮಾಣಿಕತೆಯನ್ನೂ ತಾಯಿಯು ಬಹಳ ಮೆಚ್ಚಿಕೊಂಡಳು.

ಆ ದಕ್ಷಿಣೆಯ ಪ್ರಕರಣದಿಂದ ತುಂಟ ಬಾಲಕ ರಾಮನು ಗಂಭೀರ ಸ್ವಭಾವದವನಾಗಿ ಮಾರ್ಪಟ್ಟನು. ತನ್ನ ವಯಸ್ಸಿನ ಇತರ ಬಾಲಕರು, ತನ್ನ ಜೊತೆಗೆ ಆಡುವವರು ವಿದ್ಯಾರ್ಥಿಗಳೆಂದು ಪೇಶ್ವೆಯವರಿಂದ ಮರ್ಯಾದೆ ಪಡೆದರು. ತಾನು ಹೀಗೆ ಉಳಿದೆನಲ್ಲಾ ಎಂದು ಅವನಿಗೆ ಬೇಸರವಾಯಿತು. ಓದಿ ಪಂಡಿತನಾಗಬೇಕು. ಶಾಸ್ತ್ರಿಯಾಗಿ ಬಿರುದು-ಬಾವಲಿಗಳನ್ನು ಮಾನ-ಸನ್ಮಾನಗಳನ್ನು ಪಡೆಯಬೇಕೆಂಬ ಮಹತ್ವಾಕಾಂಕ್ಷೆ ಅವನಲ್ಲಿ ಬಲವತ್ತರವಾಗಿ ಬೆಳೆಯಿತು. ಮಾಹುಲಿ ಊರನ್ನು ಬಿಟ್ಟು ಹೊರಗೆ ಹೋಗದಿದ್ದರೆ ಇದು ಸಾಧ್ಯವಿಲ್ಲ ಎನ್ನಿಸಿತು ಅವನಿಗೆ. ಅವನು ಸಾತಾರೆಗೆ ಹೋಗಲು ನಿರ್ಧರಿಸಿದನು. ಅಲ್ಲಿ ಒಬ್ಬ ಸಾಹುಕಾರರ ಮನೆಯಲ್ಲಿ ಉಳಿದನು. ಆದರೆ ಸ್ವಾಭಿಮಾನಿಯೂ, ಸತ್ಯಪಕ್ಷಪಾತಿಯೂ ಆದ ರಾಮನಿಗೆ ಅಲ್ಲಿಯೂ ಕಾಲೂರಿ ನಿಲ್ಲಲು ಸಾಧ್ಯವಾಗಲಿಲ್ಲ. ಕೆಲದಿನಗಳ ವಾಸ್ತವ್ಯದ ನಂತರ ಮರಳಿ ಮನೆಗೆ ಬಂದನು.

ಕಾಶಿಗೆ

ಸಾತಾರೆಯಿಂದ ಬಂದ ಕೆಲ ದಿನಗಳಲ್ಲಿಯೇ ರಾಮನು ಕಾಶಿಗೆ ಹೊರಡಲು ನಿರ್ಧರಿಸಿದನು. ತನ್ನ ಮನೋಗತವನ್ನು ತಾಯಿಗೆ ತಿಳಿಸಿದನು. ತಾಯಿಗೆ ಅವನ ಮಾತು ಕೇಳಿ ಆತಂಕವಾಯಿತು. ಇನ್ನೂ ಹುಡುಗ, ಒಬ್ಬನೇ ಅಷ್ಟು ದೂರ ಹೋಗುವುದು ಹೇಗೆ? ಹೋಗಿ ಅಲ್ಲಿ ಏನು ಮಾಡಬಲ್ಲ ಎಂದು ಚಿಂತೆಯಾಯಿತು. ದೂರದ ದೇಶ,ಕೈಯಲ್ಲಿ ಕಾಸು ಇಲ್ಲ, ಜೊತೆಗಾರರೂ ಯಾರೂ ಇಲ್ಲ. “ಪುನಃ ವಿಚಾರ ಮಾಡು ರಾಮ” ಎಂದು ತಾಯಿ ತಿಳಿಸಿ ಹೇಳಿದಳು. “ನೀನು ಏನೂ ಯೋಚನೆ ಮಾಡಬೇಡ. ನಾನೇನು ಚಿಕ್ಕಬಾಲಕನಲ್ಲ. ಸಾಕಷ್ಟು ದೊಡ್ಡವನಾಗಿದ್ದೇನೆ. ಅಲ್ಲಿ ಹೋದ ಮೇಲೆ ಆಧಾರ-ಆಶ್ರಮ ಎಲ್ಲವೂ ದೊರೆಯುತ್ತದೆ. ನಾನು ಶಾಸ್ತ್ರಿಯಾಗಿಯೇ ಮಾಹುಲಿಗೆ ಮರಳುವೆ” ಎಂದು ನಿಶ್ಚಯ ಸ್ವರದಲ್ಲಿ ನುಡಿದನು. ತಾಯಿಗೆ ಮನಸ್ಸಿನಲ್ಲಿ ಚಿಂತೆಯಾದರೂ, ವಿದ್ಯೆ ಕಲಿಯಲು ಮಗ ಎಷ್ಟು ದೃಢ ಸಂಕಲ್ಪ ಮಾಡಿದ್ದಾನೆ ಎಂದು ಆಶ್ಚರ್ಯವಾಯಿತು, ಸಂತೋಷವಾಯಿತು. ಅವನನ್ನು ತುಂಬು ಮನಸ್ಸಿನಿಂದ ಹರಸಿದಳು.

ದಕ್ಷಿಣೆ ಸ್ವೀಕರಿಸುವ ಅರ್ಹಥೆ ನನಗಿಲ್ಲ

ರಾಮಪ್ರಭುಣೆಯ ಜ್ಞಾನಯಾತ್ರೆಯ ಪ್ರವಾಸ ಪ್ರಾರಂಭವಾಯಿತು. ದೂರದ ಪ್ರವಾಸ. ರಾಮನಿಗೆ ಇನ್ನೂ ಚಿಕ್ಕ ವಯಸ್ಸು. ಆದುದರಿಂದ ದಾರಿಯಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಧೈರ್ಯಗೆಡಲಿಲ್ಲ. ಎಷ್ಟೋ ದಿನ ಇರಲು ಸರಿಯಾದ ಸ್ಥಳ ಸಿಕ್ಕುತ್ತಿರಲಿಲ್ಲ. ಎಲ್ಲಿ ಸಾಧ್ಯವಾದರೆ ಅಲ್ಲಿ ಇರುತ್ತಿದ್ದ. ಮಲಗಲು ಎಲ್ಲಿ ಸ್ಥಳವಿದ್ದರೆ ಅಲ್ಲಿ ಮಲಗುತ್ತಿದ್ದ. ಹೊಟ್ಟೆಗೆ ಸಿಕ್ಕರೆ ಸಿಕ್ಕಿತು, ಇಲ್ಲದಿದ್ದರೆ ಇಲ್ಲ. ಹುಡುಗ ಉಪವಾಸಕ್ಕೆ ಹೆದರಲಿಲ್ಲ. ಅಂತೂ ಕಾಶಿಗೆ ಬಂದು ತಲುಪಿದನು.

ದೂರದಿಂದಲೇ ಕಾಣಿಸಿದ ಗಂಗಾ ನದಿಗೆ ಪ್ರಣಾಮ ಮಾಡಿದ. ಗಂಗೆಯ ಆ ವಿಶಾಲ ಪಾತ್ರ, ಎರಡೂ ದಡಗಳಲ್ಲಿ ಮುಳುಗಿ ಮೇಲೇಳುತ್ತಿರುವ ನೂರಾರು ಭಾವುಕ ಜನರು, ಮಂದ ಮಂತ್ರೋಚ್ಚಾರ, ದೇವಾಲಯಗಳ ಘಂಟನಾದ ಅದೆಲ್ಲವನ್ನೂ ನೋಡುತ್ತ ರಾಮ ಸ್ವಲ್ಪ ಕಾಲ ಹಾಗೆಯೇ ನಿಂತ. ಅನಂತರ ನದಿಯಲ್ಲಿಳಿದು ಮುಳುಗಿ ಮೇಲೆದ್ದ. ಕಾಶೀ ವಿಶ್ವನಾಥನ ದರ್ಶನ ಪಡೆದು, ಪಾಠಶಾಲೆಯ ಅನ್ವೇಷಣೆಯಲ್ಲಿ ತೊಡಗಿದ.

ಗುರೂಜಿ, ನಿಮ್ಮ ಪಾದಸಾಕ್ಷಿ

ಕೊನೆಗೂ ರಾಮನ ಭಾಗ್ಯದ ಬಾಗಿಲು ತೆರೆಯಿತು. ಅವನು ನೇರವಾಗಿ ಪಾಯಗುಂಡೆ ಗುರೂಜಿಯವರ ಪಾಠಶಾಲೆಗೆ ಬಂದು ತಲುಪಿದನು. ಪಾಯಗುಂಡೆ ಗುರೂಜಿ ಎಂದರೆ ಕರುಣಾ ಮೂರ್ತಿ, ಸರಸ್ವತಿಯ ಸಾಕ್ಷಾತ್‌ಪುತ್ರ ಎಂದು ಕಾಶಿಯಲ್ಲಿ ಹೆಸರಾಗಿದ್ದರು.

ರಾಮನು ಒಳಗೆ ಬಂದವನೇ ಗುರೂಜಿಯವರ ಕಾಲುಗಳನ್ನು ಗಟ್ಟಿಯಾಗಿ ಹಿಡಿದ. “ಏಳು ಮಗು, ಎಲ್ಲಿಂದ ಬಂದಿರುವಿ?”

ಗುರೂಜಿಯವರ ಆ ಪ್ರೇಮಪೂರಿತ ಮಧುರ ಧ್ವನಿಯು ರಾಮನಿಗೆ ಧೈರ್ಯವನ್ನು ತಂದು ಕೊಟ್ಟಿತು. “ದಕ್ಷಿಣ ದೇಶದ ‘ಮಾಹುಲಿ’ ಗ್ರಾಮದಿಂದ ಬಂದಿದ್ದೇನೆ.”

“ಇಷ್ಟು ದೂರ ಏಕೆ ಬಂದಿ?”
“ಶಾಸ್ತ್ರವಿದ್ಯೆಯನ್ನು ಕಲಿಯಲು”
“ಇದಕ್ಕೂ ಪೂರ್ವದಲ್ಲಿ ಯಾವ ಪಾಠಶಾಲೆಯಲ್ಲಿ ಕಲಿತಿರುವಿರಿ?”

ಗುರೂಜಿಯವರ ಈ ಪ್ರಶ್ನೆಗೆ ರಾಮನಲ್ಲಿ ಉತ್ತರವಿರಲಿಲ್ಲ. ಕೆಳಗೆ ಮೋರೆ ಹಾಕಿ ನಿಂತುಬಿಟ್ಟನು.

“ಒಳ್ಳೆಯದು”, ಅರ್ಥವಾಯಿತು. ನಿನಗೆ ಪ್ರಾರಂಭದಿಂದಲೇ ವಿದ್ಯಾಭ್ಯಾಸ ಆಗಬೇಕು. ನಿನಗೆ ಎಲ್ಲ ವಿದ್ಯೆಯನ್ನು ಕಲಿಸುವೆ. ಆದರೆ ಒಂದು ಮಾತು ಲಕ್ಷ್ಯದಲ್ಲಿರಲಿ. ಕಷ್ಟಪಡುವುದರಲ್ಲಿ, ಸೇವೆ ಮಾಡುವುದರಲ್ಲಿ ಕಿಂಚಿತ್ತೂ ಕೊರತೆಯಾಗಕೂಡದು.”

“ಗುರೂಜಿ, ನಿಮ್ಮ ಪಾದಸಾಕ್ಷಿಯಾಗಿ ಹೇಳುತ್ತೇನೆ. ಕಷ್ಟಪಟ್ಟು ಕಲಿಯುವುದರಲ್ಲಿ, ಸೇವೆ ಮಾಡುವುದರಲ್ಲಿ ಕಿಂಚಿತ್ತೂ ವ್ಯತ್ಯಾಸ ಬರದಂತೆ ನಡೆದುಕೊಳ್ಳುತ್ತೇನೆ” ಎಂದು ಹೇಳಿ ರಾಮನು ಪುನಃ ಗುರೂಜಿಯವರ ಪಾದಗಳಿಗೆ ವಂದಿಸಿದನು.

ರಾಮಶಾಸ್ತ್ರಿ

ಕಾಶಿಗೆ ಬಂದ ಮೇಲೆ ರಾಮನ ಜೀವನಕ್ಕೊಂದು ಹೊಸ ತಿರುವು ಸಿಕ್ಕಿತು. ಇಷ್ಟು ವರ್ಷಗಳವರೆಗೆ ಸುಪ್ತವಾಗಿದ್ದ ರಾಮನ ಪ್ರತಿಭೆ ಹಾಗೂ ಕಾರ್ಯ ಶಕ್ತಿಗಳು ಚಿಮ್ಮಿ ಹೊರ ಬಂದವು. ಓದಲು ಪ್ರಾರಂಭಿಸಿದ ಹಲವಾರು ತಿಂಗಳುಗಳಲ್ಲಿಯೇ ರೂಪಾವಲಿಯಿಂದ ಕೌಮುದಿಯವರೆಗೆ ಬಂದ. ದೃಢ ನಿಶ್ಚಯ ಹಾಗೂ ಅವಿಶ್ರಾಂತ ಪರಿಶ್ರಮ ಈ ಎರಡು ಗಾಲಿಗಳ ಮೇಲೆ ರಾಮನ ವಿದ್ಯಾಭ್ಯಾಸ ರಥವು ಭರದಿಂದ ಸಾಗಿತು. ಗುರುಗಳಿಗೆ ಕೊಟ್ಟ ವಚನವನ್ನು ಅಕ್ಷರಶಃ ಪಾಲಿಸಿದ. ಶ್ರದ್ಧೆಯಿಂದ ಅವರ ಸೇವೆ ಮಾಡಿದ. ಅವನ ವಿನಯ ವಿಧೇಯತೆ ಕಾರ್ಯನಿಷ್ಠೆ ಗುರುಗಳ ಅಂತಃಕರಣವನ್ನು ಕಲಕಿತು. ಒಂದೇ, ಎರಡೇ, ಅಖಂಡ ಹನ್ನೆರಡು ವರುಷಗಳ ದೀರ್ಘವಾದ ಜ್ಞಾನ ತಪಸ್ಸನ್ನು ಆಚರಿಸಿದ.

ಅಂದು ಪಾಠಶಾಲೆಯಲ್ಲಿ ವಿಶೇಷ ಸಮಾರಂಭ ಸೂರ್ಯೋದಯಕ್ಕೆ ಸರಿಯಾಗಿ ಸ್ನಾನಾದಿಗಳನ್ನು ಮುಗಿಸಿ ಗುರುಗಳ ಬಳಿಯಲ್ಲಿ ಎಲ್ಲರೂ ಬಂದು ಸೇರಿದರು. ಗುರುಗಳು ಮಾತಾಡಲು ಉದ್ಯುಕ್ತರಾದರು “ನನ್ನ ಪ್ರೀತಿಯ ಶಿಷ್ಯರೆ, ಇಂದಿನ ಈ ವಿಶೇಷ ಸಮಾರಂಭ ಏಕೆ ಏರ್ಪಟ್ಟಿದೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ನಿಮ್ಮ ಸಹಪಾಠಿ ರಾಮ ವೇದಶಾಸ್ತ್ರ ಪಾರಂಗತನಾಗಿದ್ದಾನೆ. ರಾಮಲನು ಪಟ್ಟ ಕಟ್ಟ, ಅವನ ಏಕಾಗ್ರವೃತ್ತಿ ಹಾಗೂ ವಿನಮ್ರ ಸೇವಾಭಾವಗಳಿಂದಾಗಿ ತಡಮಾಡಿ ಕಲಿಯಲು ಪ್ರಾರಂಭಿಸಿದರೂ ಅವನಿಗೆ ಈ ಯಶಸ್ಸು ಸಿಕ್ಕಿದೆ. ನಿಮ್ಮ ಸಹಾಧ್ಯಾಯಿ ಎಂದು ರಾಮಶಾಸ್ತ್ರಿಯಾಗಿದ್ದಾನೆ”.

‘ರಾಮಶಾಸ್ತ್ರಿ’ ಈ ಶಬ್ದ ಕಿವಿಗೆ ಬೀಳುತ್ತಲೇ ರಾಮನಿಗೆ ಅಮೃತದ ಮಳೆಗರೆದಂತಾಯಿತು. ತನ್ನ ತಾಯಿಯ ಹಂಬಲವು ಇಂದು ಸಫಲವಾಯಿತು ಎಂದು ಸಂತೋಷ ಉಕ್ಕಿತು. ರಾಮನು ಎದ್ದು ಗುರುಗಳಿಗೆ ದಂಡವತ್‌ಪ್ರಣಾಮ ಮಾಡಿದನು. ಗುರುಗಳು ಶಾಲು ಜೋಡಿಯನ್ನು ಹೊದಿಸಿ ಶ್ರೀ ಫಲವನ್ನು ಕೊಟ್ಟು ಶಿಷ್ಯನನ್ನು ಗೌರವಿಸಿದರು. ರಾಮ, ರಾಮಶಾಸ್ತ್ರಿ ಪ್ರಭುಣೆಯಾಗಿ ಮಾಹುಲಿಲಯತ್ತ ನಡೆದ.

ಪೇಶ್ವೆಯವರ ಸೇವೆಯಲ್ಲಿ

ರಾಮಶಾಸ್ತ್ರಿಯಾಗಿ, ಕೀರ್ತಿವಂತನಾಗಿ ಊರಿಗೆ ಬಂದ ರಾಮನನ್ನು ಊರಿನ ಜನರು ತುಂಬು ಹೃದಯದಿಂದ, ತೆರೆದ ಬಾಹುಗಳಿಂದ ಸ್ವಾಗತಿಸಿದರು. ಕೆಲವೇ ದಿನಗಳಲ್ಲಿ ರಾಮಶಾಸ್ತ್ರಿಯ ಕೀರ್ತಿ ಎಲ್ಲಡೆಗೆ ಹಬ್ಬಿತು. ಆಗ ನಾನಾಸಾಹೇಬ ಪೇಶ್ವೆಯ ಆಳ್ವಿಕೆಯಿತ್ತು. ನಾನಾ ಸಾಹೇಬನು ತನ್ನ ಸುತ್ತಲೂ ಒಳ್ಳೆ ದಕ್ಷ,ಸಮರ್ಥ ಆಡಳಿತಗಾರರನ್ನು ಕಲೆ ಹಾಕಿದ್ದನು. ಅದರಂತೆ ಗುಣಗ್ರಾಹಿಯಾದ ನಾನಾ ಸಾಹೇಬ ಪೇಶ್ವೆ, ರಾಮಶಾಸ್ತ್ರಿಗೆ ಪುಣೆಗೆ ಬರಲು ಹೇಳಿ ಕಳುಹಿಸಿದನು. ಮಾಹುಲಿಯನ್ನು ಬಿಟ್ಟು ರಾಮಶಾಸ್ತ್ರಿ ಪುಣೆಗೆ ಹೋಗಿ ಪೇಶ್ವೆ ಯವರ ಸೇವೆಯಲ್ಲಿ ನಿಂತನು. ಕೆಲ ದಿನಗಳಲ್ಲಿಯೇ ರಾಮಶಾಸ್ತ್ರಿ ತನ್ನ ಕರ್ತವ್ಯನಿಷ್ಠೆ, ನಿಸ್ಪೃಹತೆಯ ಗುಣಗಳಿಂದಾಗಿ ಪೇಶ್ವೆರವರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾದನು.

ಇತ್ತ ಕಡೆ ದೇಶದ ರಾಜಕೀಯದಲ್ಲಿ ಅನೇಕ ಬದಲಾವಣೆಗಳಾದವು. ಹದಿನೆಂಟನೆಯ ಶತಮಾನದಲ್ಲಿ ಅಫ್ಘಾನಿಸ್ಥಾನದಿಂದ ಅಹಮದ್‌ಷಾ ಎಂಬುವನು ಭಾರತದ ಮೇಲೆ ದಂಡೆತ್ತಿ ಬಂದ. ೧೭೬೧ರಲ್ಲಿ ಪಾನಿಪತ್‌ಎಂಬಲ್ಲಿ ಮರಾಠರು ಇವನೊಡನೆ ಯುದ್ಧ ಮಾಡಿ ಸೋತರು. ಈ ಪರಾಭವದಿಂದ ಮಹಾರಾಷ್ಟ್ರ ರಾಜ್ಯವು ತಲ್ಲಣಿಸಿ ಹೋಗಿತ್ತು. ರಾಜ್ಯದ ಒಳಗೂ ಹೊರಗೂ ಶತ್ರುಗಳು ತಲೆ ಎತ್ತಿದರು. ಆಡಳಿತವು ಕುಸಿದು ಹೋಗಿತ್ತು. ಇಲ್ಲಿಯವರೆಗೆ ಏಕನಿಷ್ಠರಾಗಿದ್ದ ಸರದಾರರು ಉನ್ಮತ್ತರಾಗಿ, ಸ್ವತಂತ್ರ ಪಾಳೆಯಗಾರರಂತೆ ವ್ಯವಹರಿಸಹತ್ತಿದರು. ಆಗ ತರುಣ ಮೇಧಾವಿ, ಶ್ರೀಮಂತ ಮಾಧವರಾಯರು ಪೇಶ್ವೆಯಾಗಿದ್ದರು.

ಅವರು ಆಡಳಿತದಲ್ಲಿ ಬಿಗುವನ್ನು ತರಲು ಎಲ್ಲ ಖಾತೆಗಳ ಪುನರ್ ರಚನೆ ನಡೆಸಿದ್ದರು. ಆಗ ನ್ಯಾಯಖಾತೆಯ ಅಧಿಪತಿ, ಮುಖ್ಯ ನ್ಯಾಯಾಧೀಶರನ್ನಾಗಿ ಯಾರನ್ನು ನೇಮಿಸಬೇಕೆಂಬ ಪ್ರಶ್ನೆ ಉದ್ಭವಿಸಿತು. ವಿದ್ವಾಂಸ, ವಿನಯಶಾಲಿ, ಪ್ರಾಮಾಣಿಕ ಎಂದು ರಾಮಶಾಸ್ತ್ರಿ ಕೀರ್ತಿ ಪಡೆದಿದ್ದರು. ಸಹಜವಾಗಿಯೇ ಮಾಧವರಾವ್‌ಪೇಶ್ವೆಯ ಕಣ್ಣೆದುರು ಬಂದ ವ್ಯಕ್ತಿಯೆಂದರೆ ರಾಮಶಾಸ್ತ್ರಿ ಪ್ರಭುಣೆ. ರಾಮಾಶಾಸ್ತ್ರಿ ಪ್ರಭುಣೆ ರಾಜ್ಯದ ಅತ್ಯಂತ ಉಚ್ಚತಮ ಅಧಿಕಾರಿ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡರು.

ಒಂದು ವಿವಾದ

ರಾಮಶಾಸ್ತ್ರಿ ಮುಖ್ಯ ನ್ಯಾಯಾಧೀಶರ ಹುದ್ದೆಯ ಅಧಿಕಾರ ಸ್ವೀಕರಿಸಿ ನಾಲ್ಕೈದು ತಿಂಗಳು ಗತಿಸಿರಬಹುದು. ಅಷ್ಟರಲ್ಲಿ ಅವರ ನ್ಯಾಯ ನಿಷ್ಠುರತೆ, ನಿರ್ಭಯ ಕರ್ತವ್ಯ ಪಾಲನೆ ಇವುಗಳ ಪರೀಕ್ಷಾ ಕಾಲವೇ ಒದಗಿತು. ವಿಸಾಜಪಂತಲೀಲೆ ವಸಯಿಯ ಸುಬೇದಾರ. ಒಳ್ಳೇ ಪ್ರಭಾವಿ, ಚೆನ್ನಾಗಿ ಕೆಲಸ ಮಾಡುವ ವ್ಯಕ್ತಿ. ಪೇಶ್ವೆಯ ದರ್ಬಾರದಲ್ಲಿ ವಿಸಾಜಿಪಂತನಿಗೆ ವಿಶಿಷ್ಟ ಗೌರವವಿತ್ತು. ಸಖಾರಾಮ ಬಾಪೂನ ಅಚ್ಚು ಮೆಚ್ಚಿನ ಮಿತ್ರ. ಇಂಗ್ಲಿಷರು ಭಾರತದಲ್ಲಿ ವ್ಯಾಪಾರ ಮಾಡಲು ‘ಈಸ್ಟ್‌ಇಂಡಿಯಾ ಕಂಪೆನಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ವಿಸಾಜಿ ಪಂತನು, ಮಾಲು ಹೊತ್ತ ತಮ್ಮ ಹಡಗನ್ನು ಲೂಟಿ ಮಾಡಿದನೆಂದು ಇಂಗ್ಲಿಷರು ಪೇಶ್ವೆಯ ದರ್ಬಾರಕ್ಕೆ ದೂರು ಒಯ್ದರು. ಆಗ ಮಾಧವರಾವ್‌ಪೇಶ್ವೆ ವಿಸಾಜಿಪಂತನ ವ್ಯವಹಾರದ ಪೂರ್ತಿ ವಿಚಾರಣೆ ನಡೆಸಬೇಕೆಂದು ರಾಮಶಾಸ್ತ್ರಿಗೆ ತಿಳಿಸಿದನು.

ಶನಿವಾರವಾಡೆಯ ಪೇಶ್ವೆಯ ನ್ಯಾಯ ಕಛೇರಿಯಲ್ಲಿ ವಿಚಾರಣೆ ಪ್ರಾರಂಭವಾಯಿತು. ಜನ ಕಿಕ್ಕಿರಿದು ಸೇರಿದ್ದರು. ನ್ಯಾಯಾಧೀಶರಿಗೆ ನೆರವಾಗಲೆಂದು ಪ್ರಜೆಗಳಲ್ಲಿ ಗೌರವಸ್ಥರಾದವರು. ನ್ಯಾಯ ಪಕ್ಷ ಪಾತಿಗಳು ಆದವರನ್ನು ‘ಪಂಚ’ರಾಗಿ ಕೆಲಸ ಮಾಡಲು ಆಹ್ವಾನಿಸಿತ್ತು. ಅವರು ನ್ಯಾಯಾಲಯದಲ್ಲಿ ತಮ್ಮ ತಮ್ಮ ಪೀಠಗಳಲ್ಲಿದ್ದರು. ದೂರು ಕೊಟ್ಟಿದ್ದ ಇಂಗ್ಲಿಷ್‌ಅಧಿಕಾರಿ ತನ್ನ ಸ್ಥಾನದಲ್ಲಿ ಎದ್ದು ನಿಂತು ನ್ಯಾಯಾಸನಕ್ಕೆ ನಮಸ್ಕರಿಸಿದನು.

ಒಂದೇ ಒಂದು ಪ್ರಾಯಶ್ಚಿತ್ತವೆಂದರೆ ಮರಣ ದಂಡನೆ

“ನಿಮ್ಮ ಆಪಾದನೆ ಏನು?” ನ್ಯಾಯಾಧೀಶ ರಾಮಶಾಸ್ತ್ರಿ ಪ್ರಶ್ನಿಸಿದರು.

“ಸುವರ್ಣ ದುರ್ಗದಿಂದ ವಸಯಿಗೆ ನಮ್ಮ ಹಡಗು ಹೊರಟಿತ್ತು. ಇಂತಹ ಹಡಗನ್ನು ಸುಂಕ ತೆಗೆದುಕೊಂಡು ಬಿಡುವುದು ಕ್ರಮ. ಆದರೆ ವಿಸಾಜಿಪಂತರು ಇಪ್ಪತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಾನುಗಳಿದ್ದ ಹಡಗನ್ನು ಲೂಟಿ ಮಾಡಿದರು. ಆಗ ನಾವು ವಿಸಾಜಿಪಂತರಿಗೆ ನಮ್ಮ ಮಾಲನ್ನಾದರೂ ವಾಪಸ್ಸು ಕೊಡಿರಿ, ಇಲ್ಲವೆ ಇಪ್ಪತ್ತು ಲಕ್ಷ ರೂಪಾಯಿಗಳ ನಷ್ಟವನ್ನು ತುಂಬಿಕೊಡಿರಿ ಎಂದು ಹೇಳಿ ಕಳುಹಿಸಿದೆವು. ವಿಸಾಜಿಪಂತರಿಂದ ಉತ್ತರ ಬಾರದ್ದಕ್ಕೆ, ಈ ನ್ಯಾಯಾಸನದೆದುರು ಬರಬೇಕಾಯಿತು. ನಮಗೆ ನ್ಯಾಯ ಬೇಕಾಗಿದೆ” ಎಂದು ಇಂಗ್ಲಿಷ್‌ಅಧಿಕಾರಿ ತನ್ನ ಹೇಳಿಕೆಯನ್ನಿತ್ತನು.

ನ್ಯಾಯಪೀಠದ ಮುಂದೆ ಎಲ್ಲರೂ ಒಂದೇ

“ವಿಸಾಜಿಪಂತರೆ, ನೀವು ಇಪ್ಪತ್ತು ಲಕ್ಷ ಬೆಲೆಬಾಳುವ ಸಾಮಾನುಗಳುಳ್ಳ ಹಡಗನ್ನು ಲೂಟಿ ಮಾಡಿರುವಿರೆಂದು ಇಂಗ್ಲಿಷರು ಆರೋಪಿಸಿದ್ದಾರೆ. ಆಪಾದನೆ ಸತ್ಯ ಎಂದು ನೀವು ಒಪ್ಪುತ್ತೀರಾ?” ಎಂದು ರಾಮಶಾಸ್ತ್ರಿ ವಿಸಾಜಿಪಂತರನ್ನು ಕೇಳಿದರು.

“ಇಲ್ಲ, ಅದು ಶುದ್ಧ ಸುಳ್ಳು” ಎಂದು ತೀವ್ರ ಸ್ವರದಲ್ಲಿ ವಿಸಾಜಿಪಂತನು ಉತ್ತರಿಸಿದನು.

ಅಷ್ಟರಲ್ಲಿ ಸಖಾರಾಮ ಬಾಪು ಎದ್ದು ನಿಂತು “ನ್ಯಾಯಾಧೀಶರ, ವಿಸಾಜಪಂತರು ಪೇಶ್ವೆಯವರ ಸುಬೇದಾರರು. ಅವರನ್ನೇನು ನೀವು ಕಳ್ಳಕಾಕರೆಂದು ತಿಳಿದಿರುವಿರಾ? ವಿಸಾಜಿಪಂತರ ಯೋಗ್ಯತೆ, ಅವರ ಸ್ಥಾನಮಾನಗಳ ಬಗ್ಗೆ ಯೋಚಿಸಿ ವಿಚಾರಣೆ ನಡೆಸಿರಿ. ಈ ವಿಚಾರಣೆ ವಿಸಾಜಿಪಂತರ ವಿರುದ್ಧವಲ್ಲ, ಪರ್ಯಾಯವಾಗಿ ಪೇಶ್ವೆಯವರ ವಿರುದ್ಧ ಎಂದು ನಾವು ಭಾವಿಸೋಣವೆ?” ಎಂದು ಸಂತೃಪ್ತವಾಗಿ ಕೇಳಿದನು.

ನ್ಯಾಯಾಲಯದಲ್ಲಿದ್ದವರು ಉಸಿರು ಬಿಗಿಹಿಡಿದು ಕೇಳುತ್ತಿದ್ದರು. ಏನು ಮಾಡುತ್ತಾರೆ ನ್ಯಾಯಾಧೀಶರು ಈಗ?

ರಾಮಶಾಸ್ತ್ರಿಗಳು ಸ್ವಲ್ಪವೂ ವಿಚಲಿತರಾಗಲಿಲ್ಲ. ಗಂಭೀರವಾಗಿ ಉಚ್ಚ ಸ್ವರದಲ್ಲಿ “ನ್ಯಾಯದಾನದಲ್ಲಿ ಯಾರೂ ಅಡ್ಡಿಮಾಡಕೂಡದು. ವಿಸಾಜಿಪಂತರ ಸ್ಥಾನಮಾನಗಳು ಏನಿದ್ದರೂ ಅವು ನ್ಯಾಯಮಂದಿರದ ಹೊರಗೆ. ಆದರೆ ನ್ಯಾಯಾಸನದ ಎದುರು ಯಾವ ಆರೋಪಿಯೂ ಆರೋಪಿಯೇ ಆಗಿರುತ್ತಾನೆ.” ಯಾರದೇ ಮಟ್ಟ, ಸ್ಥಾನಮಾನಗಳನ್ನು ನ್ಯಾಯದೇವತೆ ಲಕ್ಷಿಸುವುದಿಲ್ಲ. ಸ್ವತಃ ರಾಜ್ಯವನ್ನಾಳುವವರೇ ಆದರೂ ನ್ಯಾಯಾಲಯದಲ್ಲಿ ಅವರು ಇತರರೊಂದಿಗೆ ಸ್ಥಾನ ಪಡೆಯುವರು. ನ್ಯಾಯದೇವತೆಗೆ ಗೊತ್ತಿರುವುದು ಒಂದೇ ಒಂದು-ನ್ಯಾಯ” ಎಂದು ಉತ್ತರಿಸಿದರು.

ತೀರ್ಪು

ಅನಂತರ ರಾಮಾಶಾಸ್ತ್ರಿ ವಿಸಾಜಿಪಂತರತ್ತ ತಿರುಗಿ ಕೇಳಿದರು. “ವಿಸಾಜಿಪಂತರೆ, ಈ ಆರೋಪದ ಬಗ್ಗೆ ಏನಾದರೂ ಹೇಳುವುದಿದೆಯೇ?”

“ನಾನು ಹಡಗನ್ನು ಲೂಟಿ ಮಾಡಿಲ್ಲ. ಸುಬೇದಾರನಾಗಿ ಅದನ್ನು ಜಪ್ತಿ ಮಾಡಿದ್ದೇನೆ”.

“ಜಪ್ತಿ ಮಾಡಿದ ಮಾಲನ್ನು ಸರಕಾರಕ್ಕೆ ಒಪ್ಪಿಸಿರುವಿರಾ?”.

ವಿಸಾಜಿಪಂತನು ಉತ್ತರಿಸದೆ ನಿಂತನು.

ಆಗ ರಾಮಾಶಾಸ್ತ್ರಿಯವರು ತಮ್ಮೆದುರು ಇದ್ದ ಕಾಗದ ಪತ್ರಗಳನ್ನು ತೋರಿಸುತ್ತ “ವಿಸಾಜಿಪಂತರೆ, ಆ ಜಪ್ತಿ ಮಾಡಿದ ಮಾಲು ಇಪ್ಪತ್ತು ಲಕ್ಷ ರೂಪಾಯಿಗಳ ಬೆಲೆ ಬಾಳುವದಿತ್ತೆಂದು ಸ್ಪಷ್ಟವಾಗಿದೆ. ಇದರ ಬಗ್ಗೆ ನೀವು ಏನಾದರೂ ಹೇಳುವುದಿದೆಯೆ?” ಎಂದು ಕೇಳಿದರು.

ವಿಸಾಜಿಪಂತನು ದಂಗು ಬಡೆದು ನಿಂತನು. ವಿಚಾರಣೆಗೆ ಕಾವು ಏರಹತ್ತಿತು.

ಅಷ್ಟರಲ್ಲಿ ಪಂತರು ತಮ್ಮೆದುರು ಸಾದರ ಪಡಿಸಿದ ಕಾಗದ ಪತ್ರಗಳನ್ನು ಪರೀಕ್ಷಿಸಿ ತಮ್ಮ ಒಟ್ಟು ಅಭಿಪ್ರಾಯವನ್ನು ತಿಳಿಸಿದರು.

ಕೊನೆಗೆ ನ್ಯಾಯಾಧೀಶ ರಾಮಶಾಸ್ತ್ರಿ ಪ್ರಭುಣೆ ತೀರ್ಪನ್ನು ಓದಿದರು. “ವಿಸಾಜಿಪಂತರೆ, ನಿಮ್ಮ ಮೇಲಿನ ಆರೋಪದ ಬಗ್ಗೆ ನಮ್ಮೆದುರು ಸಾಕಷ್ಟು ಪುರಾವೆಗಳು ದೊರೆತಿವೆ. ಆರೋಪ ಸಿದ್ಧವಾಗಿದೆ. ನೀವು ಅಪರಾಧಿಯಾಗಿದ್ದೀರಿ. ನೀವು ಇಂಗ್ಲಿಷರಿಗೆ ಅವರ ಮಾಲು ಅಷ್ಟನ್ನೂ ವಾಪಸ್ಸು ಕೊಡಬೇಕು. ದಂಡರೂಪದಲ್ಲಿ ಒಂದೂವರೆ ಲಕ್ಷ ರೂಪಾಯಿಗಳನ್ನು ಸರಕಾರಿ ಖಜಾನೆಗೆ ಜಮಾ ಮಾಡಬೇಕು.”

ಆ ತೀರ್ಪನ್ನು ಕೇಳಿ ವಿಸಾಜಿಪಂತನು ದಿಗ್ಬ್ರಾಂತನಾದನು.

ಪಾನಿಪತ್ತದ ಪರಾಭವದ ನಂತರ ರಾಜ್ಯದ ಆಡಳಿತವೇ ಶಿಥಿಲಗೊಂಡಿತ್ತು. ಸರದಾರರೆಲ್ಲರೂ ತಲೆಯೆತ್ತ ತೊಡಗಿದ್ದರು. ರಾಮಶಾಸ್ತ್ರಿಯವರ ನಿರ್ಣಯದಿಂದ ವಿಸಾಜಪಂತನಂತಹ ಅತ್ಯಂತ ಪ್ರಭಾವಿ ವ್ಯಕ್ತಿಯ ಹಣೇಬರಹವೇ ಹೀಗಾದ ಮೇಲೆ ತಮ್ಮ ಪಾಡೇನು ಎಂದು ಉಳಿದ ಸರದಾರರೆಲ್ಲರೂ ದಾರಿಗೆ ಬರುವಂತಾಯಿತು.

ರಾಜ್ಯ ರಕ್ಷಣೆ ಪರಮ ಕರ್ತವ್ಯ

ಶ್ರೀಮಂತ ಮಾಧವರಾವ್‌ಪೇಶ್ವೆ ಚಿಕ್ಕ ವಯಸ್ಸಿನಲ್ಲಿಯೇ ಪೇಶ್ವೆ ಗಾದಿಗೆ ಬಂದಿದ್ದರು. ಒಂದು ಕಡೆ ಅವರ ಚಿಕ್ಕಪ್ಪನೂ ಕಾರಸ್ಥಾನಿಯೂ ಆದ ರಘುನಾಥರಾವ್‌, ಇನ್ನೊಂದು ಕಡೆ ತಲೆಯೆತ್ತಿ ನಿಂತ ಹಿರಿಯ ಸರದಾರರು. ಹೀಗೆ ಅಡಕೊತ್ತಿನಲ್ಲಿ ಸಿಕ್ಕು ಒದ್ದಾಡುತ್ತಿದ್ದರು. ಹೀಗಾಗಿ ಅಡಕೊತ್ತಿನಲ್ಲಿ ಸಿಕ್ಕು ಒದ್ದಾಡುತಿದ್ದರು. ಹೀಗಾಗಿ ಮಾಧವರಾವ್‌ಪೇಶ್ವೆಯವರು ಪೂಜೆ ಪುನಸ್ಕಾರ ಹೋಮ ಹವನ ಹಾಗೂ ವ್ರತಗಳಲ್ಲಿ ಹೆಚ್ಚು ಕಾಲ ಕಳೆಯಹತ್ತಿದರು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದಾಗ ಅಧಿಕಾರಿಗಳಿಗೆ ಪೇಶ್ವೆಯವರನ್ನು ಕಾಣಲು ಸಾಧ್ಯವಾಗುತ್ತಿದ್ದಿಲ್ಲ. ಸ್ವತಃ ರಾಮಶಾಸ್ತ್ರಿಯವರಿಗೆ ಒಂದೆರಡು ಸಲ ಇಂತಹ ಅನುಭವ ಬಂದಿತು.

ಪೇಶ್ವೆಯವರನ್ನು ಅಧಿಕಾರಿಗಳು ಕಾಣಲು ಸಾಧ್ಯವಾಗದೆ ಹೋದರೆ ಆಡಳಿತ ಹೇಗೆ ನಡೆಯಬೇಕು? ಸರಿ, ಒಬ್ಬೊಬ್ಬ ಅಧಿಕಾರಿಯೂ ತನಗೆ ತೋರಿದಂತೆ ನಡೆಯುವನು. ಜೊತೆಗೆ ಪೇಶ್ವೆಯವರು ಪೂಜೆ ಜಪ-ತಪಗಳಲ್ಲಿಯೇ ಮುಳುಗಿರುತ್ತಾರೆ, ಆಡಳಿತಕ್ಕೆ ಗಮನ ಕೊಡುವುದಿಲ್ಲ ಎಂಬ ನಂಬಿಕೆ ಬಂದ ಮೇಲೆ ದುಷ್ಟ ಅಧಿಕಾರಿಗಳು ಧೈರ್ಯವಾಗಿ ತಮ್ಮ ಮನಸ್ಸು ಬಂದಂತೆ ನಡೆಯುವರು. ಇದರ ಕಷ್ಟವೆಲ್ಲ ಪ್ರಜೆಗಳಿಗೆ. ಇದರ ಬಗ್ಗೆ ಮಾಧವರಾವ್‌ಪೇಶ್ವೆಯವರಿಗೆ ಯಾರು ಹೇಳಬೇಕು? ರಾಜ್ಯದ ಹಿರಿಯ ಅಧಿಕಾರಿಗಳು ಸೇರಿ ಈ ಕೆಲಸವನ್ನು ರಾಮಶಾಸ್ತ್ರಿಯವರಿಗೆ ಒಪ್ಪಿಸಿದರು.

ಒಂದು ಸಲ ಮಾಧವರಾವ್‌ಪೇಶ್ವೆಯವರ ಭೆಟ್ಟಿಗೆ ಹೋದಾಗ ರಾಮಶಾಸ್ತ್ರಿಯವರು “ಬಹಳ ದಿನಗಳಿಂದ ತಮ್ಮಲ್ಲಿ ಒಂದು ವಿಷಯದ ಬಗ್ಗೆ ಅರಿಕೆ ಮಾಡಿಕೊಳ್ಳಬೇಕೆಂದು ಯೋಚಿಸುತ್ತಿದ್ದೇನೆ” ಎಂದು ಮಾತು ಪ್ರಾರಂಭಿಸಿದರು.

“ರಾಮಶಾಸ್ತ್ರಿಗಳೇ, ನೀವು ನಮ್ಮ ರಾಜ್ಯದ ಶ್ರೇಷ್ಠ ನ್ಯಾಯಾಧೀಶರು. ಯಾವ ರೀತಿಯಿಂದಲೂ ಸಂಕೋಚ ಪಡದೆ ಹೇಳಬೇಕು. ನಿಮ್ಮ ಸಲಹೆ ಸೂಚನೆಗಳು ನಮಗೆ ಗ್ರಾಹ್ಯ” ಎಂದು ಪೇಶ್ವೆಯವರು ಹೇಳಿದರು.

“ಶ್ರೀಮಂತರೆ, ತಾವು ಜನ್ಮತಃ ಬ್ರಾಹ್ಮಣರಾದರೂ, ಯಾವ ಆಸನದಲ್ಲಿ ಕುತಿಳಿರುವಿರೋ ಅದು ಕ್ಷತ್ರಿಯರದು. ತಮ್ಮ ಪೂಜಾದಿ ಕರ್ಮಗಳು ರಾಜ್ಯದ ಆಡಳಿತಕ್ಕೆ ಬಾಧೆಯಾಗದಂತೆ ನೋಡಿಕೊಳ್ಳಬೇಕು. ಪೂಜಾದಿ ಕರ್ಮಗಳಿಗಿಂತಲೂ ರಾಜ್ಯ ರಕ್ಷಣೆ ಮಾಡುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ”.

ರಾಮಶಾಸ್ತ್ರಿಯವರ ಈ ಸ್ಪಷ್ಟ ಸೂಚನೆಯನ್ನು ಪೇಶ್ವೆಯವರು ಸಂತೋಷದಿಂದ ಸ್ವಾಗತಿಸುತ್ತ ನುಡಿದರು, “ರಾಮಶಾಸ್ತ್ರಿಗಳೇ, ನೀವು ನಮ್ಮ ಕರ್ತವ್ಯದ ಬಗ್ಗೆ ಅರಿವು ಮಾಡಿಕೊಟ್ಟಿರಿ. ಇನ್ನು ಮುಂದೆ ನಮ್ಮ ಪೂಜಾದಿ ಕರ್ಮಗಳಿಂದ ರಾಜ್ಯದ ಆಡಳಿತಕ್ಕೆ ವ್ಯತ್ಯಯ ಬರದಂತೆ ನೋಡಿಕೊಳ್ಳುತ್ತೇವೆ”.

ಮಾಧವರಾವ್‌ ಪೇಶ್ವೆ ಇನ್ನಿಲ್ಲ

ರಘುನಾಥರಾಯ ಮಾಧವರಾಯನ ಹತ್ತಿರ ನಂಟ. ಅವನ ಕಾರಸ್ಥಾನ ದಿನಕ್ಕೊಂದು ರೀತಿಯಲ್ಲಿ ಬೆಳೆಯುತ್ತಲೇ ನಡೆಯಿತು. ಇದೆಲ್ಲಕ್ಕೂ ಪ್ರೇರಕ ಶಕ್ತಿಯಾಗಿ ನಿಂತ ವ್ಯಕ್ತಿಯೆಂದರೆ, ಅವನ ಮಹತ್ವಾಕಾಂಕ್ಷಿಣಿಯಾದ ಹೆಂಡತಿ ಆನಂದಿಬಾಯಿ. ತನ್ನ ಗಂಡ ಪೇಶ್ವೆಯಾಗಬೇಕು, ಅಧಿಕಾರ ನಡೆಸಬೇಕು, ತಾನು ಪೇಶ್ವೆಯ ಹೆಂಡತಿಯಾಗಿ ವೈಭವದ ಜೀವನ ನಡೆಸಬೇಕು. ಇಂತಹ ಕನಸುಗಳು ಆಕೆಗೆ. ಮಾಧವರಾವ್‌ಪೇಶ್ವೆ, ಮತ್ತು ರಘುನಾಥರಾವ್‌ಇವರ ನಡುವೆ ಬೆಳೆದು ನಿಂತ ಅವಿಶ್ವಾಸ, ಅಪನಂಬಿಕೆಗಳು ಗೃಹ ಕಲಹಕ್ಕೆ ನಾಂದಿಯಾದವು. ಶನಿವಾರ ವಾಡೆಯ ಒಳಗೆ (ರಘುನಾಥರಾಯರು) ಮತ್ತು ಅಧಿಕಾರ ರೂಢ ಪೇಶ್ವೆ ಹೀಗೆ ಎರಡು ಬಣಗಳಾದವು. ಗೃಹ ಕಲಹ ವಿಕೋಪಕ್ಕೆ ಹೋಯಿತು.

ಇಷ್ಟರಲ್ಲಿ ಮಾಧವರಾವ್‌ಪೇಶ್ವೆ ಕ್ಷಯ ರೋಗದಿಂದ ಹಾಸಿಗೆ ಹಿಡಿದರು. ಅಂತಃ ಕಲಹದಿಂದ ಉಂಟಾದ ಮಾನಸಿಕ ವೇದನೆಯನ್ನು ಕಡಿಮೆ ಮಾಡಿಕೊಳ್ಳಲು, ಗಣಪತಿಯ ಪವಿತ್ರ ಸ್ಥಳವಾದ “ದೇವೂರಿ”ಗೆ ಹೋಗಿ ನಿಂತರು. ಪೇಶ್ವೆಯ ಜೊತೆ ರಾಮಶಾಸ್ತ್ರಿಯೂ ಹೋದರು. ದಿನ-ದಿನಕ್ಕೂ ಕ್ಷೀಣವಾಗುತ್ತ ನಡೆದ ಮಾಧವರಾವ್‌ಪೇಶ್ವೆಯ ಪ್ರಕೃತಿಯನ್ನು ನೋಡಿ ರಾಮಶಾಸ್ತ್ರಿ ಚಿಂತಿತರಾದರು. ಇನ್ನು ಮೇಲೆ ಪೇಶ್ವೆ ಗಾದಿಗೆ ವಾರಸುದಾರರು ಯಾರು ಎಂಬುದು ನಿಶ್ಚಯವಾಗಿರಲಿಲ್ಲ. ಮಾಧವರಾಯರ ಅಂತ್ಯಕಾಲ ಸನ್ನಿಹಿತವಾಗಿರುವುದನ್ನು ಕಂಡು ರಾಮಶಾಸ್ತ್ರಿ, ರಘುನಾಥರಾಯರನ್ನು ಕರೆಸಿಕೊಳ್ಳಬೇಕೆಂದು ಮಾಧವರಾವ್‌ಪೇಶ್ವೆಗೆ ಸೂಚಿಸಿದರು. ತತ್‌ಕ್ಷಣ ಹೊರಟು ಬರಲು ರಘುನಾಥರಾಯರಿಗೆ ಮಾಧವರಾವ್‌ಪೇರ್ಶವೆ ಹೇಳಿ ಕಳುಹಿಸಿದರು. ದೇವೂರಿಗೆ ಬಂದ ರಘುನಾಥರಾಯನು ಮಾಧವರಾಯನ ಆ ಚಿಂತಾಜನಕ ಸ್ಥಿತಿಯನ್ನು ನೋಡಿ “ಮಾಧವಾ ಹೀಗೇಕೆ ನಿನ್ನ ಸ್ಥಿತಿ?” ಎಂದು ಬಿಕ್ಕಿ-ಬಿಕ್ಕಿ ಅಳಹತ್ತಿದನು.

“ಕಾಕಾ ನಿಮ್ಮ ದರ್ಶನವಾಯಿತು. ನಾನಿನ್ನು ಚಿಂತೆ ಇಲ್ಲದೆ ಸಾಯುವೆ. ನನ್ನ ಕೊನೆಯ ಇಚ್ಛೆ …. ನನ್ನ ಮಗ ನಾರಾಯಣನನ್ನು ಪೇಶ್ವೆ ಗಾದಿಗೆ ಕೊಡಿಸಿರಿ. ಎಲ್ಲ ರಾಜ್ಯ ಕಾರಭಾರ ನೀವೇ ನಡೆಸಿರಿ” ಮುಂದೆ ಮಾತಾಡಲು ಸಹ ಮಾಧವರಾವ್‌ಗೆ ಶಕ್ತಿ ಉಳಿಯಲಿಲ್ಲ.

“ಮಾಧವ, ನಾರಾಯಣ ನನ್ನವ. ನಿನ್ನ ಇಚ್ಛೆಯನ್ನು ಪೂರ್ಣಗೊಳಿಸುವೆ” ಎಂದು ರಘುನಾಥರಾಯ ನುಡಿದನು.

“ಗಜಾನನ …. ಗಜಾನನ” ಎಂದು ನುಡಿಯುತ್ತ ಮಾಧವರಾವ್‌ಪೇಶ್ವೆ ಕೊನೆಯುಸಿರನ್ನೆಳೆದರು.

ದುರಾಶೆಯ ಶಕ್ತಿಗಳು

ಶ್ರೀಮಂತ ಮಾಧವರಾಯನಿಗೆ ಕೊಟ್ಟ ವಚನದ ಪ್ರಕಾರ ರಘುನಾಥರಾಯನು ಸ್ವತಃ ಸಾಲಾರಕ್ಕೆ ಹೋಗಿ, ಛತ್ರಪತಿಯವರ ಕಡೆಯಿಂದ ಬಾಲಕ ನಾರಾಯಣರಾವ್‌ನಿಗೆ ಪೇಶ್ವೆಯ ಅಧಿಕಾರ ವಸ್ತ್ರಗಳನ್ನು ಕೊಡಿಸಿದನು. ಶ್ರೀಮಂತ ನಾರಾಯಣರಾವ್‌ಈಗ ಪೇಶ್ವೆ ಆದರು. ರಾಜ್ಯ ಕಾರಭಾರದ ಜವಾಬ್ದಾರಿಯೆಲ್ಲವನ್ನು ರಘುನಾಥರಾವ್‌ವಹಿಸಿಕೊಂಡನು. “ಪೇಶ್ವೆ ಪದವಿ ನಾರಾಯಣನಿಗಿದ್ದರೂ ಅಧಿಕಾರವೆಲ್ಲ ನನ್ನದೇ” ಎಂದು ಸಮಾಧಾನ ಪಟ್ಟುಕೊಂಡನು. ಆದರೆ ಅವನ ಹೆಂಡತಿ ಆನಂದಿಬಾಯಿಗೆ ಇಷ್ಟರಿಂದಲೇ ಸಮಾಧಾನವಾಗಲಿಲ್ಲ. ಆಕೆಗೆ ನಿರಂಕುಶ ಅಧಿಕಾರ ಬೇಕಾಗಿತ್ತು. ತನ್ನ ಗಂಡನ ಮೈಮೇಲೆ ಪೇರ್ಶವೆಯ ಅಧಿಕಾರದ ಉಡುಪು ಬೆಳಗುತ್ತಿರುವುದನ್ನು ಕಾಣುವ ಹಂಬಲ ಅವಳದು. ರಘುನಾಥರಾಯನು ನಾನು ಈಗ ಸರ್ವಾಧಿಕಾರಿಯೇ ಆಗಿದ್ದೇನೆ. ನಾನಿಲ್ಲದೆ, ಒಂದು ಹುಲ್ಲು ಕಡ್ಡಿ ಕೂಡ ಈ ಪೇಶ್ವೆ ರಾಜ್ಯದಲ್ಲಿ ಅಲುಗಾಡುವುದಿಲ್ಲ ಎಂದೆಲ್ಲ ಎಷ್ಟು ಪರಿಯಿಂದ ತಿಳಿಸಿ ಹೇಳಿದರೂ ಅವಳಿಗೆ ಸಮಾಧಾನವಾಗಲಿಲ್ಲ. ಅವಳು ತನ್ನ ಕಾರಸ್ಥಾನವನ್ನು ಮುಂದುವರಿಸಿದಳು.

ನೀವು ಅಪರಾಧಿಯಾಗಿದ್ದೀರಿ’

ಹೊಸದಾಗಿ ಪೇಶ್ವೆ ಗಾದಿಗೆ ಬಂದ ನಾರಾಯಣರಾಯ ತೀರ ಚಿಕ್ಕವ. ಅವನ ಸ್ವಭಾವವೂ ಅಷ್ಟೇ ವಿಚಿತ್ರವಾಗಿತ್ತು. ಶೀಘ್ರಕೋಪಿ. ಕಡ್ಡಿ ಮುರಿದಂತೆ ಮಾತು. ಪೂರ್ವಾಪರ ವಿಚಾರವಿಲ್ಲದೆ ಮುಖಕ್ಕೆ ಹೊಡೆದಂತೆ ಅಂದು ಬಿಡುತ್ತಿದ್ದನು. ಹೀಗಾಗಿ ಅನೇಕ ಕಾರಭಾರಿಗಳು, ಸರದಾರರು ನಾರಾಯಣರಾಯನ ವರ್ತನೆಯಿಂದ ಅಸಮಾಧಾನಗೊಂಡರು. ಅಂತಹ ಅಸಂತುಷ್ಟ ಜನರೆಲ್ಲರಿಗೂ ರಘುನಾಥರಾವ್‌, ಆನಂದಿಬಾಯಿ ಇವರ ಬೆಂಬಲ ಸಹಾನುಭೂತಿ ಇದ್ದೇ ಇರುತ್ತಿತ್ತು.

ರಾಮಶಾಸ್ತ್ರಿ ಮುಖ್ಯ ನ್ಯಾಯಾಧೀಶರಾಗಿದ್ದರಷ್ಟೆ. ರಘುನಾಥರಾಯನ ಸಂಶಯಾಸ್ಪದ ವ್ಯವಹಾರಗಳನ್ನು ರಾಮಶಾಸ್ತ್ರಿಯವರು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು. ಇತ್ತ ಆನಂದಿಬಾಯಿಯ ಮಹಲಿನಲ್ಲಿ ಒಂದಿಲ್ಲ ಒಂದು ಪಿತೂರಿ ನಡೆದೇ ಇರುತ್ತಿತ್ತು. ಆಗ ರಾಮಶಾಸ್ತ್ರಿಗಳಿಗೆ ನಾರಾಯಣರಾಯನಿಗೆ ಏನು ವಿಪತ್ತು ಬರುವುದೋ ಎಂದು ಸಂಶಯವಾಯಿತು. ಮಾಧವರಾಯನ ಅಂಗರಕ್ಷಕನಾಗಿ ಕೆಲಸ ಮಾಡಿದ ರಾಣೋಜಿಯನ್ನೇ ನೇಮಿಸಿಕೊಳ್ಳಲು ನಾರಾಯಣರಾಯನಿಗೆ ಸೂಚಿಸಿದರು.

ಕಾಕಾ, ನನ್ನನ್ನು ರಕ್ಷಿಸಿ

ಕೊನೆಗೂ ಆ ಕರಾಳ ದಿನ ಉದಿಸಿತು. ೧೭೭೩ ಆಗಸ್ಟ್‌ದಿನಾಂಕ ಹತ್ತು. ಸೋಮವಾರ. ಮಧ್ಯಾಹ್ನದ ಬಿಸಿಲು ಮೇಲೇರುತ್ತಿತ್ತು. ನಾರಾಯಣರಾವ್‌ಪೇಶ್ವೆ ಶನಿವಾರ ವಾಡೆಯ ತಮ್ಮ ಮಹಲಿನಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದರು. ಇತ್ತ ಆನಂದಿ ಬಾಯಿಯು ಕಾತರಳಾಗಿ ಯಾರಿಗಾಗಿಯೋ ಕಾಯುತ್ತಿದ್ದಳು. ರಘುನಾಥರಾಯನ ಏಕನಿಷ್ಠ ಸೇವಕನಾದ ತುಳೋಜಿಯು ಒಳಗೆ ಬಂದು ನಾರಾಯಣರಾಯನು ಮಹಲಿನಲ್ಲಿ ಮಲಗಿಕೊಂಡಿರುವ ವಾರ್ತೆಯನ್ನು ಮುಟ್ಟಿಸಿದನು. ಅಷ್ಟರಲ್ಲಿ ಶನಿವಾರ ವಾಡೆಯ ಒಳಗೆ ಕೆಲವು ಸೈನಿಕರು ನುಗ್ಗಿದರು. ಎಲ್ಲೆಡೆಗೂ ಗೊಂದಲ ಗಡಿಬಿಡಿ ಪ್ರಾರಂಭವಾಯಿತು. ನಾರಾಯಣರಾಯನ ಅಂಗರಕ್ಷಕ ರಾಣೋಜಿ, ನಾರಾಯಣರಾಯನನ್ನು ಎಬ್ಬಿಸಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ನಡೆದನು. ಇದೇ ಸಮಯ ಸಾಧಿಸಿ, ಜೋರಾವರಸಿಂಗ್‌, ಸಮಸೇರ ಸಿಂಗ್‌ಮತ್ತು ತುಳೋಜಿ ಬಿಚ್ಚುಗತ್ತಿಯನ್ನು ಝಳಪಿಸುತ್ತ ನಾರಾಯಣ ರಾಯನನ್ನು ಬೆನ್ನಟ್ಟಿದರು. ನಾರಾಯಣರಾಯ ದಿಕ್ಕುಗೆಟ್ಟು ಓಡಹತ್ತಿದನು.

ದಾರಿಯಲ್ಲಿ ರಘುನಾಥರಾಯನ ಮಹಲು ಕಾಣಿಸಿತು. ನಾರಾಯಣರಾಯನು ‘ಕಾಕಾ, ನನ್ನನ್ನು ಉಳಿಸಿರಿ- ನನ್ನನ್ನು ಕೊಲ್ಲಲು ಬರುತ್ತಿದ್ದಾರೆ ಕಾಕಾ ಉಳಿಸಿರಿ’ ಎಂದು ಚೀರುತ್ತ ಒಳಗೆ ಹೋದನು. ರಘುನಾಥರಾಯನನ್ನು ನೋಡಿದ ಕೂಡಲೆ ಅವನ ತೆಕ್ಕೆಗೆ ಬಿದ್ದನು.

ಭೀಕರ ಕೊಲೆ

ಆಗ ರಘುನಾಥರಾಯನು “ಸಮಸೇರಸಿಂಗ್‌ದೂರ ಸರಿ” ಎಂದು ಆಜ್ಞಾಪಿಸಿದನು.

“ರಘುನಾಥರಾಯರೆ, ಅವನನ್ನು ಬಿಟ್ಟು ಬಿಡಿರಿ. ನಾರಾಯಣರಾಯನನ್ನು ಕೊಲ್ಲಲು ನಮಗೆ ಆಜ್ಞೆಯಾಗಿದೆ”.

“ಅದೆಂತಹ ಆಜ್ಞೆ?” ಎಂದು ರಘುನಾಥರಾಯನು ಘರ್ಜಿಸಿದನು.

‘ನಿಮ್ಮ’ ಸಹಿ, ಮುದ್ರೆ ಇರುವ ಆಜ್ಞಾ ಪತ್ರ ನಮ್ಮ ಕೈಯಲ್ಲಿದೆ’ ಎಂದು ಹೇಳಿ ಕೊಲೆಗಡುಕರು ಅದನ್ನು ರಘುನಾಥರಾಯನಿಗೆ ತೋರಿಸಿದರು. ಆ ಆಜ್ಞಾ ಪತ್ರವನ್ನು ನೋಡಿ ರಘುನಾಥರಾಯನು ಆನಂದಿಬಾಯಿಯ ಕಡೆ ನೋಡಿದನು. ಆಜ್ಞಾ ಪತ್ರವನ್ನು ಸಿದ್ಧಮಾಡಿ ಅವಳು ಕೊಟ್ಟಿದ್ದಳು. ವಿಜಯಶ್ರೀ ಅವಳ ಮುಖದಲ್ಲಿ ಲಾಸ್ಯವಾಡುತ್ತಿತ್ತು. ರಘುನಾಥರಾಯನು ದಿಗ್ಭ್ರಾಂತನಾದನು.

ಆನಂದಿಬಾಯಿಗೆ ಇದೇ ಅವಕಾಶ ದೊರೆಯಿತು. ಗಂಡನು ಮುಂದೇನು ಮಾಡಬೇಕೆಂದು ತಿಳಿಯದೆ ಬೆಪ್ಪಾಗಿ ನಿಂತಾಗ ಅವಳು ಸಮಸೇರಸಿಂಗ್‌ಮೊದಲಾದವರಿಗೆ ‘ಹೂಂ,ಏನು ನೋಡುತ್ತೀರಿ? ಮುಗಿಸಿ ನಾರಾಯಣನನ್ನು’ ಎಂದಳು. ಅವರ ಪ್ರೋತ್ಸಾಹದಿಂದ ಕೊಲೆಗಡುಕರು ರಘುನಾಥರಾಯನು ನೋಡುತ್ತಿದ್ದಂತೆಯೇ ಅವನ ಎದುರಿನಲ್ಲಿ ನಾರಾಯಣರಾಯನನ್ನು ಎಳೆದು ಕತ್ತರಿಸಿ ಹಾಕಿದರು ‘ಶಾಭಾಸ್‌ಸಮಸೇರಸಿಂಗ್‌’ ಎಂದು ಆನಂದಿಬಾಯಿ ನುಡಿದಳು.

ರಾಜ್ಯಾಭಿಷೇಕದ ಸಡಗರ

ಅತ್ತ ನಾರಾಯಣರಾಯನ ಚಿತಾಗ್ನಿ ಇನ್ನೂ ತಣ್ಣಗಾಗಿರಲಿಲ್ಲ. ಇತ್ತ ಕಡೆ ರಘನಾಥರಾಯನ ರಾಜ್ಯಾಭಿಷೇಕದ ತಯಾರಿ ಭರದಿಂದ ಸಾಗಿತು. ಹೊಸ ಪೇಶ್ವೆಯವರು ಗಾದಿಗೆ ಕೂಡವ ಪ್ರಸಂಗದಲ್ಲಿ ಮನೆ-ಮನೆಯೂ ತಳಿರು-ತೋರಣಗಳಿಂದ ಸಾರಣೆ-ಕಾರಣೆಗಳಿಂದ ಅಲಂಕೃತಗೊಳ್ಳಬೇಕೆಂಬ ರಾಜಾಜ್ಞೆ ಹೊರಟಿತು. ಆನಂದಿಬಾಯಿಯ ಸಂತೋಷಕ್ಕಂತೂ ಪಾರವೇ ಇರಲಿಲ್ಲ. ತನ್ನ ಗಂಡನು ಪೇಶ್ವೆಯ ಅಧಿಕಾರ ಪೀಠವನ್ನೇರುವ ದೃಶ್ಯವನ್ನು ನೋಡುವ ಅಮೃತಘಳಿಗೆ ಇಂದು ಒದಗಿ ಬಂದಿತ್ತು. ಅವಳ ಕಣ್ಣುಗಳಿಗೆ ಹಬ್ಬ ಸನ್ನಿಹಿತವಾಗಿತ್ತು. ಶನಿವಾರ ವಾಡೆಯ ಹೇರಂಬ ಮಹಲಿನ ಒಡ್ಡೋಲಗವು ಸಾಮಂತ ರಾಜರಿಂದ, ಸರದಾರರಿಂದ, ಪ್ರತಿಷ್ಠಿತ ನಾಗರಿಕರಿಂದ ತುಂಬಿತ್ತು.

ಹೊಸ ಪೇಶ್ವೆ ರಘುನಾಥರಾಯರ ಆಗಮನದ ಸೂಚನೆ ಕೊಡಲಾಯಿತು. ಎಲ್ಲರು ತಮ್ಮ ತಮ್ಮ ಸ್ಥಾನಗಳಲ್ಲಿ ಎದ್ದು ನಿಂತರು. ರಘುನಾಥರಾಯನು ಎಲ್ಲರ ಪ್ರಣಾಮಗಳನ್ನು ಸ್ವೀಕರಿಸುತ್ತ ಆಸನದ ಸಮೀಪಕ್ಕೆ ಬಂದನು. ನೆರೆದ ಸಭಿಕರತ್ತ ತಿರುಗಿ ‘ಇಂದು ನನಗೆ ಮಾಧವರಾಯನ ನೆನಪು ಬರುತ್ತಿದೆ’ ಎಂದು ನುಡಿದು ಮೊಸಳೆಯ ಕಣ್ಣೀರು ಹಕಿದನು.

ಸಖರಾಮ ಬಾಪು ಎದ್ದು ಬಂದು, ರಘುನಾಥರಾಯನ ಕೈಹಿಡಿದು ಆಸನದತ್ತ ಕರೆದೊಯ್ದನು.

ರಘುನಾಥರಾಯ ಕೊಲೆಗಡುಕ

ಇನ್ನೇನು ರಘುನಾಥರಾಯನು ಪೇರ್ಶವೆಯವರ ಗಾದಿಯ ಮೇಲೆ ಕೊಡಬೇಕು.

‘ನಿಲ್ಲಿ! ನಿಲ್ಲಿ!’

ಅನಿರೀಕ್ಷಿತವಾಗಿ ಆದರೆ ಗಟ್ಟಿಯಾಗಿ, ಸ್ಪಷ್ಟವಾಗಿ ಕೇಳಿಸಿದ ಮಾತು ಸಭಿಕರನ್ನೆಲ್ಲ ಚಕಿತಗೊಳಿಸಿತು. ಎಲ್ಲರೂ ಮಹಾದ್ವಾರದ ಕಡೆಗೆ ನೋಡಿದರು. ಆ ‘ನಿಲ್ಲಿ’ ಎಂಬ ಎರಡಕ್ಷರಗಳಲ್ಲಿ ವಿಲಕ್ಷಣ ಶಕ್ತಿ, ಕಾಠಿಣ್ಯ ನಿಶ್ಚಯತೆಯ ಭಾವಗಳಿದ್ದವು. ಒಂದು ರೀತಿಯ ಆಜ್ಞೆಯೇ ಆಗಿತ್ತು.

‘ನಿಲ್ಲಿ’ ಎಂದು ನುಡಿದ ವ್ಯಕ್ತಿ ಬೇರೆ ಯಾರೂ ಅಲ್ಲ. ಪೇಶ್ವೆಯ ಪ್ರಧಾನ ನ್ಯಾಯಾಧೀಶ ರಾಮಶಾಸ್ತ್ರಿ ಪ್ರಭುಣೆ.

ರಾಮಶಾಸ್ತ್ರಿ ಕೈಯಲ್ಲಿ ಕಾಗದದ ಸುರುಳಿಯನ್ನು ಹಿಡಿದು ನೇರವಾಗಿ ವೇದಿಕೆಯನ್ನೇರಿದರು. ಸಭಿಕರನ್ನುದ್ದೇಶಿಸಿ ನುಡಿದರು, “ಶ್ರೀಮಂತ ರಘುನಾಥರಾಯರು ಪೇಶ್ವೆಯ ಗಾದಿಯನ್ನ ಲಂಕರಿಸಲಾರರು. ಆ ಪವಿತ್ರ ಗಾದಿಯನ್ನು ಸ್ಪರ್ಶಿಸಲೂ ಸಹ ಅವರಿಗೆ ಅಧಿಕಾರವಿಲ್ಲ. ಅವರು ಅಪರಾಧಿಗಳಾಗಿದ್ದಾರೆ. ಅವರ ಕೈಗಳು ನಾರಾಯಣರಾಯನ ರಕ್ತದಿಂದ ಕಲಂಕಿತಗೊಂಡಿವೆ”.

ಸಭೆಯಲ್ಲಿ ಮಿಂಚು ಆಡಿದಂತಾಯಿತಿ. ಕೆಲವು ನಿಮಿಷ ಎಲ್ಲರೂ ಮೂಕರಾದರು. ಅನಂತರ ಗಜಿ-ಬಿಜಿ ಪ್ರಾರಂಭವಾಯಿತು. ಭಯಂಕರ ಕೊಲೆ! ರಘುನಾಥರಾವ್‌ಅಪರಾಧಿ! ಎಂದು ಜನರು ಉದ್ಗಾರ ತೆಗೆದರು.

ಪ್ರಾಯಶ್ಚಿತ್ತ ಮರಣದಂಡನೆ

“ರಾಮಶಾಸ್ತ್ರಿ, ನಿಮ್ಮ ಬುದ್ಧಿ ಸ್ತಿಮಿತದಲ್ಲಿದೆಯೆ?” ಎಂದು ಆನಂದಿಬಾಯಿ ಆಕ್ರೋಶದಿಂದ ಕೇಳಿದಳು.

“ಇಲ್ಲ, ನಾನು ನಾರಾಯಣರಾಯನ ಕೊಲೆ ಮಾಡಿಲ್ಲ” ಎಂದು ತತ್ತರಿಸುತ್ತಾ, ಗಾಬರಿಗೊಂಡು ರಘುನಾಥರಾಯನು ಚೀರಿದನು.

ವಯೋವೃದ್ಧ ಸರದಾರನೊಬ್ಬನು ‘ನಿಮ್ಮ ಮಾತಿಗೆ ಆಧಾರವಿದೆಯೆ?’ ಎಂದು ರಾಮಶಾಸ್ತ್ರಿಯನ್ನು ಪ್ರಶ್ನಸಿದನು.

ರಾಮಶಾಸ್ತ್ರಿಯವರು ಜನತೆಯನ್ನುದ್ದೇಶಿಸಿ ನುಡಿದರು, “ಪ್ರಜಾ ಜನರೇ, ನಾನು ಪೇಶ್ವೆಯವರ ನ್ಯಾಯಾಧೀಶ. ಸರಿಯಾದ ಪುರಾವೆಗಳಿಲ್ಲದೆ ಮಾತನಾಡುವುದಿಲ್ಲ ಇದೋ ನೋಡಿ ರಘುನಾಥರಾಯನ ಸಹಿ ಮತ್ತೆ ಮುದ್ರೆ ಇರುವ ಪತ್ರ” ಎಂದು ಸಭಿಕರಿಗೆ ತೋರಿಸುತ್ತಾ ಅದನ್ನು ಓದಿದರು. “ರಾಜಶ್ರೀ ಸುಮಸೇರಸಿಂಹ, ಜೋರಾವರಸಿಂಹ, ಜಮಾದಾರ ನಿಸಬತ ಇವರಿಗೆ. ನೀವು ಸಮಕ್ಷ ಒಪ್ಪಿಕೊಂಡ ಪ್ರಕಾರ ನಾರಾಯಣರಾಯನನ್ನು ಕೊಲ್ಲಬೇಕು. ಆ ಕಾರ್ಯಕ್ಕಾಗಿ ನಿಮಗೆ ನಗದು ಐದು ಲಕ್ಷ ರೂಪಾಯಿಗಳನ್ನು ಕೊಡುವ ಕರಾರು ಆಗಿದೆ. ಮತ್ತು ….”.

ರಘುನಾಥರಾಯನ ಮುಖ ಕಪ್ಪಿಟ್ಟಿತು. ಮೈಯೆಲ್ಲ ಬೆವರಿತು. ಅವನು ಎದ್ದುನಿಂತು ರಾಮಶಾಸ್ತ್ರಿಗಳಿಗೆ “ಆಗಬಾರದ ಕೆಲಸ ನನ್ನಿಂದ ಆಗಿಹೋಗಿದೆ. ನನಗೆ ಪಶ್ಚಾತ್ತಾಪವಾಗಿದೆ. ಇದಕ್ಕೆ ಪ್ರಾಯಶ್ಚಿತ್ತವೇನು ಹೇಳಿರಿ”. ಎಂದು ದೈನ್ಯದಿಂದ ಬೇಡಿಕೊಂಡನು.

ರಘುನಾಥರಾಯರೆ, ತಮ್ಮ ಕೈಯಿಂದ ಶ್ರೀಮಂತ ನಾರಾಯಣರಾವ್‌ಪೇಶ್ವೆಯ ಹತ್ಯೆಯಾಗಿದೆ. ಈ ಘೋರ ಅಪರಾಧಕ್ಕಾಗಿ ಧರ್ಮಶಾಸ್ತ್ರ, ನ್ಯಾಯಶಾಸ್ತ್ರ ಎರಡೂ ದೃಷ್ಟಿಯಿಂದ ಇರುವ ಒಂದೇ ಒಂದು ಪ್ರಾಯಶ್ಚಿತ್ತವೆಂದರೆ ಮರಣದಂಡೆನ” ಎಂದು ನಿಷ್ಠುರವಾದ ಸ್ಷಷ್ಟವಾದ ಧ್ವನಿಯಲ್ಲಿ ರಾಮಶಾಸ್ತ್ರಿಗಳು ಸಾರಿದರು.

ಅಭೂತಪೂರ್ವವಾದ ನಿರ್ಣಯವನ್ನು ಕೇಳಿ ಸಭೆಯಲ್ಲಿದ್ದವರಿಗೆಲ್ಲ ಸಿಡಿಲು ಬಡಿದಂತಾಯಿತು.

ಅಷ್ಟರಲ್ಲಿ ರಘುನಾಥರಾಯನ ಅಂಗರಕ್ಷಕರು ಬಿಚ್ಚುಗತ್ತಿಯನ್ನು ತೆಗೆದುಕೊಂಡು ರಾಮಶಾಸ್ತ್ರಿಯ ಮೇಲೆ ಏರಿ ಬಂದರು. ಆಗ ಸರದಾರ ಶಿಂಧೆ ಮುಂದೆ ಬಂದು ರಾಮಶಾಸ್ತ್ರಿಯವರ ರಕ್ಷಣೆಗೆ ನಿಂತನು.

ರಾಮಶಾಸ್ತ್ರಿಯವರು “ಶಿಂಧೆಯವರೇ, ನೀವು ಕಷ್ಟ ತೆಗೆದುಕೊಳ್ಳಬೇಡಿರಿ. ನಾನಾಗಿಯೇ ಇಲ್ಲಿಂದ ಹೊರಡುತ್ತೇನೆ. ಈ ಪಾಪಿಯ ರಾಜ್ಯದಲ್ಲಿ ನಿಂತು ನೀರನ್ನೂ ಕುಡಿಯಲಾರೆ” ಎಂದು ಹೇಳಿ ವ್ಯಾಸಪೀಠದಿಂದ ಕೆಳಗಿಳಿದು ಹೊರಟೇ ಹೋದರು.

ಅಲ್ಲಿ ನೆರೆದ ಜನರಿಗೆ ರಾಮಶಾಸ್ತ್ರಿಯ ರೂಪದಲ್ಲಿ ನ್ಯಾಯ ದೇವತೆಯೇ ಪುಣೆಯ ನಗರವನ್ನು ಬಿಟ್ಟು ಹೊರಟು ಹೋಗುತ್ತಿರುವಳೆಂದು ಅನಿಸಿತು.

ಮತ್ತೆ ಪೇಶ್ವೆಯರ ಸೇವೆ

ಪುಣೆಯಿಂದ ಹೊರಬಿದ್ದ ರಾಮಶಾಸ್ತ್ರಿಯವರ ಮನಸ್ಸು ತುಂಬಾ ಕಲಕಿ ಹೋಗಿತ್ತು. ಮನಸ್ಸನ್ನು ಸ್ತಿಮಿತಗೊಳಿಸಲು ಪವತ್ರ ಕ್ಷೇತ್ರಗಳನ್ನು ಸಂದರ್ಶಿಸಲು ತೀರ್ಮಾನಿಸಿದರು. ತೀರ್ಥಯಾತ್ರೆಗಳನ್ನು ಮುಗಿಸಿ ಪಾಂಡವವಾಡಿಗೆ ಬಂದು ನೆಲೆಸಿದರು. ಇತ್ತ ರಘುನಾಥರಾಯನು ಪೇಶ್ವೆಯಾದನು. ರಾಜ್ಯ ಕಾರಭಾರ ನಡೆಸಿದನು. ಆನಂದಿಬಾಯಿಯು ತನ್ನ ಮನೋರಥ ಈಡೇರಿದ್ದಕ್ಕೆ ಹರ್ಷಿತಳಾಗಿದ್ದಳು.

ಆದರೆ ಅವಳ ಆನಂದ-ಸಮಾಧಾನಗಳು ಕ್ಷಣಿಕವಾಗಿ ಪರಿಣಮಿಸಿದವು. ರಘುನಾಥರಾಯನ ಆಡಳಿತ ಬಹಳ ದಿನಗಳ ಕಾಲ ನಡೆಯಲಿಲ್ಲ. ನಾನಾಫಡ್ನವೀಸನ ನೇತೃತ್ವದಲ್ಲಿ ಎಲ್ಲ ಸರದಾರರು ಒಟ್ಟುಗೂಡಿ ನಾರಾಯಣರಾಯ ಪೇರ್ಶವೆಯ ಮಗನಾದ ಮಾಧವರಾಯನನ್ನು ಪೇಶ್ವೆಯ ಪಟ್ಟಕ್ಕೆ ಕೂಡಿಸಿದರು. ನಾನಾಫಡ್ನವೀಸನು ರಾಮಶಾಸ್ತ್ರಿಯವರನ್ನು ಪುನಃ ಸನ್ಮಾನಪೂರ್ವಕ ಕರೆಸಿಕೊಂಡನು.

ರಾಮಶಾಸ್ತ್ರಿ ಪ್ರಭುಣೆಯವರು, ನಾನಾಸಾಹೇಬ, ಹಿರಿಯ ಮಾಧವರಾಯ ಮತ್ತು ಸವಾಯಿಮಾಧವರಾಯ ಹೀಗೆ ಮೂರು ಜನ ಪೇಶ್ವೆಯ ವರ ಆಳ್ವಿಕೆಯಲ್ಲಿ ಸುಮಾರು ನಲವತ್ತು ವರುಷಗಳ ಕಾಲ ಅಖಂಡ ಸೇವೆಯನ್ನು ಸಲ್ಲಿಸಿದರು.

ಅಪೂರ್ವ ವ್ಯಕ್ತಿತ್ವ

ರಾಮಶಾಸ್ತ್ರಿಯವರು ನಿಷ್ಠುರ, ನಿಸ್ಪೃಹ ನ್ಯಾಯ ಬುದ್ಧಿಗೆ ಹೆಸರಾದಂತೆ, ದಕ್ಷ ಸಮರ್ಥ ಆಡಳಿತಗಾರರೂ ಸಮಾಜ ಸುಧಾರಕರೂ ಆಗಿದ್ದರು. ಪರಶುರಾಮ ಪಂತ ಎನ್ನುವವರ ಮಗಳು ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡಳು. ಆ ಹುಡುಗಿಗೆ ಮತ್ತೆ ಮದುವೆ ಮಾಡುವ ಪ್ರಶ್ನೆ ಬಂದಿತು. ಆಗಿನ ಕಾಲದಲ್ಲಿ ವಿಧವಾ ವಿವಾಹಯವು ಪಾಪವೆಂದು ಪರಿಗಣಿಸಲಾಗಿತ್ತು. ಈ ಪ್ರಶ್ನೆಯನ್ನು ರಾಮಶಾಸ್ತ್ರಿಯವರ ಎದುರು ಮಂಡಿಸಲಾಯಿತು. ರಾಮಶಾಸ್ತ್ರಿಯವರು ದೊಡ್ಡ ವಿದ್ವಾಮಸರೂ ದೈವಭಕ್ತರೂ ಆದರೂ ಆ ಹುಡುಗಿಯ ಪುನರ್ವಿವಾಹಕ್ಕೆ ಒಪ್ಪಿಗೆಯನ್ನು ಕೊಟ್ಟರು. ಆ ಕಾಲದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು.

ರಾಮಶಾಸ್ತ್ರಿಯವರ ಸಾಂಸಾರಿಕ ಜೀವನವು ಸಂತೃಪ್ತಿಯಿಂದ ಕೂಡಿತ್ತು. ಇದ್ದ ಒಬ್ಬನೇ ಒಬ್ಬ ಮಗನು ತಂದೆಯಂತೆ ಪ್ರತಿಭಾಶಾಲಿಯಾಗಿರದಿದ್ದರೂ ಗೌರವದಿಂದ ಬಾಳಿದ. ಕೈ ಹಿಡಿದ ಹೆಂಡತಿ ಜಾನಕಿಬಾಯಿ ಹೆಸರಿಗೆ ತಕ್ಕಂತೆ ಸಾಧ್ವಿ ಶಿರೋಮಣಿಯಾಗಿದ್ದಳು. ಇಚ್ಛೆಯರಿವ ಸತಿಯಾಗಿದ್ದಳು.

೧೭೮೯ರಲ್ಲಿ ರಾಮಶಾಸ್ತ್ರಿಯವರು ಇಹಲೋಕ ಯಾತ್ರೆಯನ್ನು ಪೂರೈಸಿದರು. ರಾಮಶಾಸ್ತ್ರಿಯವರಿಂದ ಪ್ರಭುಣೆ ಮನೆತನವು ಇತಿಹಾಸದಲ್ಲಿ ಅಜರಾಮರವಾಯಿತು. ಅತ್ಯಂತ ನ್ಯಾಯನಿಷ್ಠನಾದವನನ್ನು “ಅವನೊಬ್ಬ ರಾಮಶಾಸ್ತ್ರಿ” ಎಂದು ಜನರು ಹೇಳುವಷ್ಟರ ಮಟ್ಟಿಗೆ ಅವರ ಕೀರ್ತಿ ನಿಂತಿತು.