ತೋಪುಗಳು ಸಿದ್ಧವಾಗಿ ನಿಂತಿದ್ದವು.

ಅಂದು ೫೦ ಜನರ ಆಹುತಿ ಆಗಲಿತ್ತು. ಇದನ್ನು ನೋಡಲು ನೂರಾರು ಮಂದಿ ನೆರೆದಿದ್ದರು. ಬ್ರಿಟಿಷ್ ಅಧಿಕಾರಿ ಕಾವನ್‌ಕುರ್ಚಿಯ ಮೇಲೆ ಕುಳಿತಿದ್ದ. ಪಕ್ಕದಲ್ಲಿ ಅವನ ಹೆಂಡತಿಯೂ ಇದ್ದಳು.

ಗುಂಡಿಗೆ ಬಲಿಯಾಗಿ ಸಾಯುವಾಗ ಆ ೫೦ ಜನ ಬಂದಿಗಳು ಹೇಗೆ ನಡೆದುಕೊಳ್ಳಬಹುದು? ಗೊಳೋ ಎಂದು ಅಳಬಹುದೇ? ಕುಳಿತಿದ್ದ ಬ್ರಿಟಿಷ್ ಅಧಿಕಾರಿಯ ಕಾಲಿಗೆ ಬೀಳಬಹುದೇ? ಇದೊಂದು ಸಲ ಕ್ಷಮಿಸಿ ಎಂದು ಗೋಗರೆಯಬಹುದೇ? ಸೈನಿಕರು ಅವರನ್ನು ತೋಪಿನ ಬಾಯೆದುರು ಎಳೆದು ತರುವಾಗ ರಂಪಾಟ ಮಾಡಬಹುದೇ?

ಅಲ್ಲಿ ಕಂಡ ದೇಶ

ಇಲ್ಲ, ಅಲ್ಲಿ ಕಂಡ ದೃಶ್ಯವೇ ಬೇರೆ.

ಬಂದಿಗಳ ಮುಖವನ್ನು ಮುಚ್ಚಿ, ಕೈಕಾಲು ಕಟ್ಟಿ ತೋಪಿನ ಬಾಯಿಗಿಟ್ಟು ಉಡಾಯಿಸಬೇಕೆಂದು ಅಧಿಕಾರಿಗಳು ಅಂದುಕೊಂಡಿದ್ದರು. ಆದರೆ ಬಂದಿಗಳು ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಒಬ್ಬೊಬ್ಬರನ್ನು ಒಂದೊಂದು ತೋಪಿನ ಬಾಯಿಗೆ ಬೆನ್ನು ಮಾಡಿ ನಿಲ್ಲಿಸಿದರು. ಬಂದಿಗಳು ಅದನ್ನೂ ವಿರೋಧಿಸಿದರು. ಗುಂಡು ನಮ್ಮ ಎದೆಯ ಮೇಲೇ ಸಿಡಿಯಲಿ ಎಂದರು. ಮುಗುಳ್ನಗುತ್ತಾ ತೋಪಿನ ಬಾಯಿಗೆ ಎದೆಗೊಟ್ಟು ನಿಂತರು! “ಸದ್ಗುರು ರಾಮ್‌ಸಿಂಗ್‌ರಿಗೆ ಜಯವಾಗಲಿ” ಎಂದು ಘೋಷಿಸಿದರು.

ಬಲಿಯಾದವರಿಗಿಂತ ಅದನ್ನು ನೋಡುವವರ ಎದೆಯಲ್ಲೇ ಭಯ ಹುಟ್ಟಿತ್ತಿತ್ತು.

ಎಲ್ಲರ ಕಣ್ಣು, ಕಿವಿ, ಮನಸ್ಸು ತೋಪಿನ ಕಡೆ ನೆಟ್ಟಿದ್ದವು. ಬಲಿದಾನದ ಆ ಕ್ಷಣವನ್ನು ನೋಡಲು ಎಲ್ಲರೂ ಉಸಿರು ಬಿಗಿಹಿಡಿದು ಕಾದಿದ್ದರು.

ಬ್ರಿಟಿಷ್‌ಅಧಿಕಾರಿ ಕಾವನ್‌ತೋಪುಗಳನ್ನು ಚಲಾಯಿಸಲು “ಶೂಟ್‌” ಎಂದು ಆಜ್ಞೆ ಇತ್ತು. ಭಯಂಕರ ಸದ್ದು ಮಾಡುತ್ತಾ ಗುಂಡುಗಳು ಸಿಡಿದವು. ಬಂದಿಗಳ ದೇಹ ಚಿಂದಿಚಿಂದಿಯಾದವು. ಖಾಲಿಯಾದ ತೋಪಿನ ಬಾಯಿಗೆ ಮತ್ತೊಬ್ಬ ಬಂದಿ ಎದೆಗೊಡುತ್ತಿದ್ದ. ತನ್ನ ಜೊತೆಗಾರರು ಮಾಡಿದ್ದನ್ನೇ ತಾನೂ ಅನುಸರಿಸುತ್ತಿದ್ದ.

ನೋಡುತ್ತಿದ್ದ ಕೆಲವು ಜನರ ಕಣ್ಣು ನೀರಾಡುತ್ತಿತ್ತು. ಕಣ್ಣೀರ ಹನಿಗಳು ಪಳಪಳನೆ ಉದುರುತ್ತಿದ್ದವು. ಗಂಟಲು ಕಟ್ಟುತ್ತಿತ್ತು. ದುಃಖ ಉಮ್ಮಳಿಸಿ ಬರುತ್ತಿತ್ತು. ಆದರೆ ಅಲ್ಲದಿದ್ದ ಕಾವನ್‌ಹಾಗೂ ಇತರ ಬ್ರಿಟಿಷ್‌ಅಧಿಕಾರಿಗಳಿಗೆ ಇದೊಂದು ಮೋಜು. ಅವರ ಪತ್ನಿಯರಿಗೂ ಇದೊಂದು ಮನರಂಜನೆ.

ಹಾಲುಗೆನ್ನೆ ಹುಡುಗ

೪೯ ಬಂದಿಗಳನ್ನು ತೋಪಿನಿಂದ ಉಡಾಯಿಸಲಾಯಿತು. ಕೊನೆಯದಾಗಿ ೫೦ನೇ ಸರದಿ ಒಬ್ಬ ಬಾಲಕನದು. ಕೇವಲ ಹನ್ನೆರಡು ವರ್ಷದ ಹಾಲುಗೆನ್ನೆಯ ಹುಡುಗ ಆತ. ಇನ್ನೂ ಆಟ ಆಡಿಕೊಂಡಿರಬೇಕಾದ ವಯಸ್ಸು. ಮಾತಾ ಖೇಮ್‌ಕೌರ್‌ಎಂಬುವಳ ಒಬ್ಬನೇ ಮಗ ಅವನು. ಎಲ್ಲರಂತೆ ಅವನೂ ಎದೆಯುಬ್ಬಿಸಿ ತೋಪಿನ ಬಾಯ ಮುಂದೆ ಹೋಗಿ ನಿಂತ.

ಕಾವನ್ನನ ಹೆಂಡತಿಯೂ ಈ ದೃಶ್ಯವನ್ನು ನೋಡುತ್ತಿದ್ದಳಷ್ಟೆ. ಆ ಹಸುಳೆ ಹುಡುಗನನ್ನು ನೋಡಿ ಅವಳ ಹೆಣ್ಣು ಹೃದಯ ಕರಗಿತು. ಅಂಥವನೇ ಮಗ ಅವಳ ಹೊಟ್ಟೆಯಲ್ಲೂ ಹುಟ್ಟಿದ್ದ. ಅದನ್ನು ನೆನೆಸಿಕೊಂಡು ಅವಳಿಗೆ ಒಡಲಲ್ಲಿ ಬೆಂಕಿ ಹೊತ್ತಿದಂತೆ ಸಂಕಟವಾಯಿತು. ಕಣ್ಣಲ್ಲಿ ನೀರು ತುಂಬಿತು. ಕಾವನ್ ಇನ್ನೇನು ಶೂಟ್ ಎಂದು ಆಜ್ಞೆಕೊಡಬೇಕು-

ಅಷ್ಟರಲ್ಲಿ, ಅವಳು ತನ್ನ ಪತಿಯನ್ನು ತಡೆದಳು.

ಆ ಒಬ್ಬ ಹುಡುಗನನ್ನಾದರೂ ಉಳಿಸಿ. ಆ ಹಸುಳೆ ಬಲಿಯಾಗುವುದನ್ನು ನಾನು ಕಣ್ಣಿನಿಂದ ನೋಡಲಾರೆ ಎಂದು ಗಂಡನನ್ನು ಬೇಡಿದಳು.

ಕಾವನ್‌ನಿಗೆ ಹೆಂಡತಿಯ ಮಾತನ್ನು ತೆಗೆದುಹಾಕಲು ಆಗಲಿಲ್ಲ. ಅವನು ಹುಡುಗನನ್ನು ಕುರಿತು, “ಏ ಹುಡುಗ, ಆ ಮುಠ್ಠಾಳ ರಾಮಸಿಂಗನ ಜೊತೆ ಬಿಟ್ಟೆಯಾದರೆ ನಿನ್ನ ಜೀವ ಉಳಿಸುತ್ತೇನೆ. ಬದುಕಿಕೋ ಹೋಗು” ಎಂದ ದರ್ಪದಿಂದ.

ಹುಡುಗ-ಹುಲಿ

ಗುರುವಿನ ನಿಂದೆಯನ್ನು ಕೇಳಿ ಬಾಲಕನಿಗೆ ಮೈಯೆಲ್ಲ ಉರಿಯಿತು. ಕೋಪದಿಂದ ಅವನ ಕಣ್ಣುಗಳು ಕೆಂಪಾದವು. ಅವನು ಒಂದೇ ನೆಗೆತಕ್ಕೆ ಹುಲಿಯ ಮರಿಯಂತೆ ಕಾವನ್‌ನ ಬಳಿಗೆ ಜಿಗಿದ. ಅವನ ಗಡ್ಡವನ್ನು ಮುಷ್ಠಿಯಿಂದ ಹಿಡಿದು ಜಗ್ಗಿದ. ಎಳೆತದ ರಭಸಕ್ಕೆ ಕಾವನ್ ಮುಗ್ಗರಿಸಿ ನೆಲಕ್ಕೆ ಬಿದ್ದ. ಜೋರಾಗಿ ಅರಚತೊಡಗಿದ.

ಸುತ್ತಲೂ ಇದ್ದ ಸೈನಿಕರು ದುಡುದುಡು ಓಡಿ ಬಂದರು. ಬಾಲಕನ ಮುಷ್ಟಿಯನ್ನು ಬಿಡಿಸಲು ಯತ್ನಿಸಿದರು. ಆದರೆ ಅದು ಯಾರೊಬ್ಬರಿಗೂ ಬಿಡಿಸಲಾಗದ ವಜ್ರಮುಷ್ಟಿಯಾಗಿತ್ತು! ಕಡೆಗೆ ಸೈನಿಕರು ಮೊನಚಾದ ಕತ್ತಿಯಿಂದ ಆ ಪುಟ್ಟ ಕೈಗಳನ್ನು ತುಂಡರಿಸಿ ಚೆಲ್ಲಿದರು.

ಜೀವ ಉಳಿಸಿಕೊಂಡು ಮೇಲೆದ್ದ ಕಾವನ್‌ನಿಗೆ ಕೋಪ ಉಕ್ಕಿತು. ಅವನು ಕಟಕಟನೆ ಹಲ್ಲು ಕಡಿಯುತ್ತಾ ಆ ಬಾಲಕನನ್ನು ನಿರ್ದಯವಾಗಿ ಕೊಚ್ಚಿ ಹಾಕಲು ಆಜ್ಞಾಪಿಸಿದ. ಸೈನಿಕರು ವಿಧೇಯರಾಗಿ ಅದನ್ನು ನೆರವೇರಿಸಿದರು.

ಇದು ನಡೆದದ್ದು ೧೮೭೨ನೇ ಇಸವಿ ಜನವರಿ ೧೭ರ ಮುಂಜಾನೆ ೭ ಗಂಟೆಯ ಸಮಯದಲ್ಲಿ. ಪಂಜಾಬ್ ಪ್ರಾಂತದ ಮಾಲೇರ್ ಕೋಟ್ಲಾ ಎಂಬ ಊರಿನಲ್ಲಿ. ಅಲ್ಲಿದ್ದ ಬ್ರಿಟಿಷ್ ಅಧಿಕಾರಿ ಕಾವನ್ ಲೂಧಿಯಾನಾ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಗಿದ್ದ.

ಬಾಲಕನೂ ಸೇರಿದಂತೆ ಗುಂಡಿಗೆ ಆಹುತಿಯಾದ ೫೦ ಜನರೇ ಕೂಕಾಗಳು; ಸದ್ಗುರು ರಾಮಸಿಂಗ್‌ರ ಅನುಯಾಯಿಗಳು. ಇಂತಹ ಶಿಷ್ಯರನ್ನು ಪಡೆದ ಆ ಗುರು ಇನ್ನು ಹೇಗಿರಬಹುದು?

ಹುಟ್ಟಿನಿಂದಲೇ ಒಳ್ಳೆಯ ನಡತೆ

ಸದ್ಗುರು ರಾಮಸಿಂಗ್‌ಹುಟ್ಟಿದ್ದು ೧೮೧೬ರಲ್ಲಿ, ವಸಂತ ಪಂಚಮಿಯ ಶುಭದಿನ. ಪಂಜಾಬ್ ಪ್ರಾಂತದ ಲೂಧಿಯಾನಾ ಜಿಲ್ಲೆಯ ಭೈಣಿ ಎಂಬ ಹಳ್ಳಿಯಲ್ಲಿ. ತಂದೆ ಜಸ್ಸಾಸಿಂಗ್ ಕಸುಬಿನಲ್ಲಿ ಬಡಗಿ. ತಾಯಿಯ ಹೆಸರು ಸದೌಕೌರ್. ದೈವಭಕ್ತೆಯಾದ ಆಕೆಗೆ ಮಗನನ್ನು ಕಂಡರೆ ಅತೀವ ವಾತ್ಸಲ್ಯ. ಪುಟ್ಟ ರಾಮಸಿಂಗ್‌ನನ್ನು ತನ್ನ ತೊಡೆಯ ಮೇಲೆ ಕೂಡಿಸಿಕೊಂಡು ತಾಯಿ ಮಹಾಪುರುಷರ ಕಥೆಗಳನ್ನು ಹೇಳುತ್ತಿದ್ದಳು. ಧಾರ್ಮಿಕ ಪುಸ್ತಕಗಳನ್ನು ಹೇಳಿಕೊಟ್ಟು ಬಾಯಿಪಾಠ ಮಾಡಿಸುತ್ತಿದ್ದಳು. ಎಳೆಯ ರಾಮಸಿಂಗ್ ಅದನ್ನು ಬಹುಬೇಗ ಕಲಿತು ಒಪ್ಪಿಸುತ್ತಿದ್ದ.

ತಂದೆ ಜಸ್ಸಾಸಿಂಗ್‌ಗೆ ಹಳ್ಳಿಯಲ್ಲಿ ಗಣ್ಯಸ್ಥಾನ. ಅವನು ಮರದ ಕೆಲಸವನ್ನೇ ಅಲ್ಲದೆ ಉಳಲು ಬೇಕಾದ ನೇಗಿಲು ಮುಂತಾದವುಗಳನ್ನೂ ಮಾಡುತ್ತಿದ್ದ. ಅವನ ಕುಲುಮೆಗೆ ಬಡವರು, ಸಿರಿವಂತರು ಎಲ್ಲರೂ ಬರುತ್ತಿದ್ದರು. ಜಸ್ಸಾಸಿಂಗ್‌ನ ಮನೆ ಎಂದರೆ ಹಳ್ಳಿಯ ಹಿರಿಯರು ಸೇರಿ ಮಾತುಕತೆಯಾಡುತ್ತಿದ್ದ ಚಟುವಟಿಕೆಯ ಕೇಂದ್ರ.

ತನ್ನ ಒಂಬತ್ತನೇ ವಯಸ್ಸಿನಲ್ಲೇ ರಾಮಸಿಂಗ್‌ತಂದೆಗೆ ಕೆಲಸದಲ್ಲಿ ಸಹಾಯ ಮಾಡಲು ಆರಂಭಿಸಿದ ಹಳ್ಳಿಯ ಇತರ ಹುಡುಗರಂತೆ ಹಸುಗಳನ್ನು ಮೇಯಿಸಲು ಹೋಗುತ್ತಿದ್ದ.

ರಾಮಸಿಂಗ್‌ನೇ ದೊಡ್ಡ ಮಗ. ಅವನಿಗೆ ಒಬ್ಬ ತಂಗಿ, ಒಬ್ಬ ತಮ್ಮ. ತಂಗಿಗೆ ಮದುವೆಯಾಗಿತ್ತು. ತಮ್ಮ ಬುಧಸಿಂಗ್ ರಾಮಸಿಂಗ್‌ನಿಗೆ ೪ ವರ್ಷ ಸಣ್ಣವನು. ಆಗಿನ ಪದ್ಧತಿಯಂತೆ ರಾಮಸಿಂಗ್‌ನಿಗೂ ೭ನೇ ವರ್ಷದಲ್ಲೇ ಮದುವೆಯಾಗಿತ್ತು. ರಾಮಸಿಂಗ್‌ನ ಹೆಂಡತಿ ಜಸ್ಸನ್ ಧಾರೌರ ಎಂಬ ಹಳ್ಳಿಯವಳು.

ಸಣ್ಣ ವಯಸ್ಸಿನಲ್ಲೇ ಧಾರ್ಮಿಕ ಮಂತ್ರಗಳನ್ನು ಕಲಿತು ಉಚ್ಚರಿಸುತ್ತಿದ್ದ ರಾಮಸಿಂಗ್‌ನನ್ನು ಕಂಡರೆ ನೆರೆಹೊರೆಯವರಿಗೆಲ್ಲ ತುಂಬ ಮೆಚ್ಚಿಕೆ. ಜೊತೆಗಾರ ದನಗಾಹಿ ಬಾಲಕರಿಗೂ ಅವನ್ನು ಕಂಡರೆ ಅಚ್ಚುಮೆಚ್ಚಚು. ಅವನ ಬುದ್ಧಿಶಕ್ತಿ, ಒಳ್ಳೆಯ ನಡತೆ ಸಂಗಡಿಗರಿಗೆ ಒಂದು ಆಕರ್ಷಣೆ. ಸರಳ ಮನಸ್ಸಿನ ಆ ಹುಡುಗರಿಗೆ ಇವನ ಮಾತೆಂದರೆ ಗೌರವ.

ತಾಯಿ ಪುಟ್ಟ ರಾಮಸಿಂಗ್‌ನಿಗೆ ಮಹಾಪುರುಷರ ಕಥೆಗಳನ್ನು ಹೇಳುತ್ತಿದ್ದಳು.

ಒಮ್ಮೆ ರಾಮಸಿಂಗ್‌ನ ಮನೆಗೆ ಅವನ ಸೋದರಮಾವ ಕಾಬೂಲಸಿಂಗ್ ಬಂದ. ಅವನು ಲಾಹೋರಿನ ಮಹಾರಾಜ ರಣಜಿತ್‌ಸಿಂಗ್‌ನ ಸೈನ್ಯದಲ್ಲಿದ್ದ. ಲಾಹೋರಿಗೆ ಹಿಂತಿರುಗುವಾಗ ಅವನು ರಾಮಸಿಂಗ್‌ನನ್ನು ಸೈನ್ಯಕ್ಕೆ ಸೇರಿಸಲು ತನ್ನೊಡನೆ ಕರೆದುಕೊಂಡು ಹೊರಟ. ಆಗ ರಾಮಸಿಂಗ್‌೨೦ ವರ್ಷದ ತರುಣ.

ಅಣ್ಣ”

ಲಾಹೋರ ಪಂಜಾಬ್ ಪ್ರಾಂತದ ರಾಜಧಾನಿ. ಅಲ್ಲಿ ಮಹಾರಾಜ ರಣಜಿತ್‌ಸಿಂಗ್‌ರಾಜನಾಗಿದ್ದ. ಸುತ್ತಲೂ ಶತ್ರುಗಳು, ದೇಶದ್ರೋಹಿಗಳು ತುಂಬಿದ್ದ ಕಾಲದಲ್ಲಿ ಅವನು ಸಿಖ್ಖರನ್ನು ಸಂಘಟಿಸಿ ಭದ್ರವಾದ ರಾಜ್ಯವನ್ನು ಕಟ್ಟಿದ್ದ. ಸ್ವತಃ ಅವನೂ ನುರಿತ ಯೋಧ. ತನ್ನ ಉದಾರತೆ, ಧಾರ್ಮಿಕ ನಡತೆ ಮತ್ತು ಆಡಳಿತ ಕುಶಲತೆಗಳಿಂದ ಎಲ್ಲರ ಗೌರವಕ್ಕೆ ಪಾತ್ರನಾಗಿದ್ದ. ಆದರೆ ಅವನ ಅಂತ್ಯ ಸಮೀಪಿಸುತ್ತಿದ್ದಂತೆ ಪರಿಸ್ಥಿತಿ ಬೇರೆಯೇ ಆಗತೊಡಗಿತು.

ಲಾಹೋರಿಗೆ ಬಂದ ರಾಮಸಿಂಗ್‌ನಿಗೆ ಸುತ್ತ ಮುತ್ತಲ ಜೀವನವನ್ನು ಆಳವಾಗಿನೋಡುವ ಅವಕಾಶ ಒದಗಿತು. ಮಿತಿ ಇಲ್ಲದ ಕುಡಿತ, ಮನಸ್ಸಿಗೆ ಬಂದಷ್ಟು ಹೆಂಡತಿಯನ್ನು ಹೊಂದಿರುವುದು, ಹೆಣ್ಣುಮಕ್ಕಳ ಮಾರಾಟ, ಶಿಶುಹತ್ಯೆ ಇವೆಲ್ಲ ಆಗ ಸಾಮಾನ್ಯವಾಗಿತ್ತು.

ಒಳಗೆ ಇಂತಹ ನೀತಿ ಕುಸಿದ ಜೀವನದಿಂದ ಅಪಾಯ. ಹೊರಗೆ ಇಂಗ್ಲೀಷರು ಲಾಹೋರನ್ನು ಕಬಳಿಸುವ ಹೊಂಚು.

ಇಂತಹ ಪರಿಸರ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಬೀರುತ್ತಿದ್ದರೂ ರಾಮಸಿಂಗ್‌ತನ್ನ ನಿಯಮಬದ್ಧ ಜೀವನ ನಡೆಸುತ್ತಿದ್ದ. ದಿನವೂ ಪ್ರಾರ್ಥನೆ, ಧ್ಯಾನ ಮಾಡುತ್ತಿದ್ದ. ಇದರಿಂದಾಗಿ ಅವನ ಮನಸ್ಸು ಸದಾ ನಿರ್ಮಲವಾಗಿರುತ್ತಿತ್ತು. ಅವನ ಭಾವನೆಗಳು ಪರಿಶುದ್ಧವಾಗಿರುತ್ತಿದ್ದವು. ಅವನ ಸಾತ್ವಿಕ ನಡವಳಿಕೆಯಿಂದಾಗಿ ಎಲ್ಲರೂ ಅವನ್ನು ಪ್ರೀತಿ ಹಾಗೂ ಗೌರವದಿಂದ “ಅಣ್ಣ” ಎಂದು ಕರೆಯುತ್ತಿದ್ದರು. ಅವನಿದ್ದ ಸೈನ್ಯ ತುಕಡಿಗೆ “ಸಂತನ ತುಕಡಿ” ಎಂದೇ ಹೆಸರು ಬಂತು. ಇಷ್ಟಾದರೂ ಸೈನ್ಯದ ವಾತಾವರಣದಲ್ಲಿ ಅವನ ದೈವೀ ಸ್ವಭಾವಕ್ಕೆ ಉತ್ತೇಜನ ಸಿಗುತ್ತಿರಲಿಲ್ಲ.

ಮರಳಿ ಹಳ್ಳಿಗೆ

೧೮೩೯ರಲ್ಲಿ ಮಹಾರಾಜ ರಣಜಿತ್‌ಸಿಂಗ್‌ನ ಸಾವು ಸಂಭವಿಸಿತು. ಆಗ ಅವನ ಮಕ್ಕಳೂ ಮಂತ್ರಿಗಳೂ ಪರಸ್ಪರ ಕಚ್ಚಾಟದಿಂದ ಲಾಹೋರಿನಲ್ಲಿ ರಕ್ತದ ಹೊಳೆಯನ್ನೇ ಹರಿಸಿದರು. ದೇಶದ್ರೋಹ ವಂಚನೆಗಳ ಪ್ರಕರಣಗಳು ಹೆಚ್ಚಿದವು. ಇಂಗ್ಲಿಷರು ಈ ಪರಿಸ್ಥಿತಿಯ ಲಾಭ ಪಡೆಯಲು ತಡಮಾಡಲಿಲ್ಲ. ೧೮೪೫ರಲ್ಲಿ ಮುಡ್ಕಿ ಎಂಬಲ್ಲಿ ಇಂಗ್ಲಿಷ್- ಸಿಖ್ಖರ ಮೊದಲ ಯುದ್ಧವಾಯಿತು. ಲಾಹೋರ್ ಇಂಗ್ಲಿಷರ ಆಡಳಿತಕ್ಕೆ ಒಳಪಟ್ಟಿತು.

ಹೀಗೇ ಆಗುವುದೆಂದು ರಾಮಸಿಂಗ್‌ಎಣಿಸಿದ್ದ. ಯುದ್ಧದ ಸಮಯದಲ್ಲಿ ಅವನೊಂದು ನಿರ್ಧಾರ ಕೈಗೊಂಡು ಹಳ್ಳಿಗೆ ಹಿಂತಿರುಗಿದ. ದೇಶಭಕ್ತಿ ಇಲ್ಲದ ಕಾರಣ ಅವನು ಯುದ್ಧ ಮಾಡಲಿಲ್ಲವೆಂದಲ್ಲ. ಆದರೆ ಇಂತಹ ಸ್ವಾರ್ಥದ, ಕೆಳಮಟ್ಟದ ನಡವಳಿಕೆಯ ಜನರಿಂದ ಜಯಗಳಿಸಲು ಸಾಧ್ಯವಿಲ್ಲವೆಂದು ಅವನಿಗೆ ಅನಿಸಿತು.

ಹಳ್ಳಿಗೆ ಬಂದ ರಾಮಸಿಂಗ್‌ಪ್ರಾರ್ಥನೆ, ಧ್ಯಾನಗಳ ನಿತ್ಯವಧಿಯ ಜೊತೆಗೆ ಹೊಲದ ಉಳುಮೆಯಲ್ಲಿ ತೊಡಗಿದ. ಇಂಗ್ಲಿಷರ ದಬ್ಬಾಳಿಕೆ, ಪ್ರಭಾವಗಳ ಸುದ್ದಿಗಳು ಕಿವಿಗೆ ಬಿದ್ದು ಅವನ ಮನಸ್ಸನ್ನು ಅಸ್ವಸ್ಥಗೊಳಿಸುತ್ತಿದ್ದವು.

ಕ್ರಿಶ್ಚಿಯನ್‌ಪಾದ್ರಿಗಳು ಸೆರೆಮನೆಗಳಿಗೇ ಹೋಗಿ ಸೆರೆಸಿಕ್ಕ ಹಿಂದೂ ಸೈನಿಕರನ್ನು ಮತಾಂತರಿಸುತ್ತಿದ್ದರು. ಮಹಾರಾಜ ರಣಜಿತ್‌ಸಿಂಗ್‌ನ ಚಿಕ್ಕ ರಾಜಕುಮಾರ ದಿಲೀಪ್‌ಸಿಂಗ್‌ನನ್ನು ಕ್ರಿಶ್ಚಿಯನ್‌ಮತಕ್ಕೆ ಸೇರಿಸಿಕೊಂಡಿದ್ದರು. ಇಂಗ್ಲಿಷರ ಬಟ್ಟೆ, ವಸ್ತುಗಳ ಶೋಕಿಗೆ ಮರುಳಾಗಿ, ಜನ ಅವರು ನಮ್ಮ ಉದ್ಧಾರಕ್ಕಾಗಿಯೇ ಬಂದಿರುವೆರೆಂದು ಬಗೆಯುತ್ತಿದ್ದರು. ಇಂತಹ ಸನ್ನಿವೇಶದಲ್ಲಿ ರಾಮಸಿಂಗ್‌ಜನರ ಸ್ವಾಭಿಮಾನಕ್ಕೆ ಪುಟಗೊಟ್ಟು ಅವರನ್ನು ಎಚ್ಚರಿಸತೊಡಗಿದರು.

ಭೈಣಿ – ತೀರ್ಥಕ್ಷೇತ್ರ

ನಮ್ಮ ದೇಶದ ಪಂಜಾಬ ಪ್ರಾಂತದಲ್ಲಿ ಸಿಖ್ಖರ ಸಂಖ್ಯೆ ಹೆಚ್ಚು. ಎತ್ತರವಾದ, ದಷ್ಟಪುಷ್ಟವಾದ ಜನ ಅವರು. ನಮ್ಮ ದೇಶದ ರಕ್ಷಣೆಯ ಹೊಣೆ ಹೊತ್ತಿರುವ ಸೈನ್ಯದಲ್ಲಿ ಇಂದಿಗೂ ಅವರದೇ ಹೆಚ್ಚು ಸಂಖ್ಯೆ.

ರಾಮಸಿಂಗ್‌ನದೂ ಅದೇ ರೀತಿ ಅಜಾನುಬಾಹು ಶರೀರ, ಅವನ ವಿಶಾಲವಾದ ಎದೆ, ತೇಜಸ್ಸಿನಿಂದ ಕಂಗೊಳಿಸುವ ಕಣ್ಗಳು, ಮುಖದಲ್ಲಿ ಸದಾ ಪ್ರಸನ್ನತೆ, ಗಹನ ಚಿಂತನೆಯಿಂದ ಬರುವ ಮಾತುಗಳು, ಶುಭ್ರ ಉಡುಪು-ಇವೆಲ್ಲ ಜನರು ಅವನಿಗೆ ಸಹವಾಗಿ ಗೌರವದಿಂದ, ಆದರದಿಂದ ನಡೆದುಕೊಳ್ಳುವಂತೆ ಮಾಡುತ್ತಿದ್ದವು. ಪ್ರತಿನಿತ್ಯ ಬೆಳಗ್ಗೆ ೨ ಗಂಟೆಗೇ ಏಳುವುದು. ಧರ್ಮಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು. ದಿನವೂ ಮೂರು ಬಾರಿ ಸ್ನಾನ ಮಾಡಿ ಶುಭ್ರವಾಗಿರುವುದು. ದೀನದರಿದ್ರರಿಗೆ ಆಹಾರ, ಬಟ್ಟೆಗಳನ್ನು ನೀಡುವುದು. ಜಿಗುಪ್ಸೆಗೊಂಡವರಿಗೆ ಸಮಾಧಾನವಾಗುವಂತೆ ಹಿತವಚನಗಳನ್ನು ಹೇಳುವುದು ಇದೇ ಅವನ ಜೀವನವಾಯಿತು.

ಬರಬರುತ್ತಾ ರಾಮಸಿಂಗ್‌ನ ಕೀರ್ತಿ ಎಲ್ಲೆಡೆ ಪಸರಿಸಿತು. ಜನ ತಂಡೋಪತಂಡವಾಗಿ ಅವನ ಸನ್ನಿಧಿಗೆ ಬರತೊಡಗಿದರು. ಭೈಣಿ ಗ್ರಾಮ ಒಂದು ತೀರ್ಥಕ್ಷೇತ್ರವೇ ಆಯಿತು.

ಅಲ್ಲಿಗೆ ಬಂದ ಜನರು ಅವನ ದರ್ಶನ ಪಡೆಯುತ್ತಿದ್ದರು. ಅವನೆದುರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರು. ಅವನಿಂದ ಮಾರ್ಗದರ್ಶನ ಪಡೆದು ಶಾಂತಿ, ಸಮಾಧಾನ ತಾಳುತ್ತಿದ್ದರು. ಹೀಗೆ ಬಂದ ಜನರ ಉಟೋಪಚಾರಗಳನ್ನು ರಾಮಸಿಂಗ್‌ನ ಹೆಂಡತಿ ಜಸ್ಸನ್‌ನೋಡಿಕೊಳ್ಳುತ್ತಿದ್ದಳು. ಅವರಿಗೆಲ್ಲ ಅವಳು “ಮಾತಾ ಜಸ್ಸನ್‌” ಆದಳು.

ರಾಮಸಿಂಗ್‌ಈಗ ಸದ್ಗುರು ರಾಮಸಿಂಗ್‌ಆದರು. ಅವರ ಒಂದು ಸಂಪ್ರದಾಯವೇ ಆರಂಭವಾಯಿತು. ಅದಕ್ಕೆ “ಕೂಕಾ”, “ನಾಮಧಾರಿ” ಅಥವಾ “ಸಂತಖಾಲಸಾ” ಸಂಪ್ರದಾಯವೆಂಬ ಹೆಸರಾಯಿತು. ಅದರ ಅನುಯಾಯಿಗಳು “ಕೂಕಾಗಳು”, “ನಾಮಧಾರಿಗಳು” ಅಥವಾ “ಸಂತಖಾಲಸಾಗಳು” ಆದರು.

ಕೂಕಾ ಸಂಪ್ರದಾಯ

ಕೂಕಾಗಳ ನಡವಳಿಗೆ ಹೇಗಿತ್ತು? ಅವರು ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಏಳುತ್ತಿದ್ದರು. ಸ್ನಾನ ಮಾಡಿ ಶುಭ್ರವಾದ ಬಿಳಿ ಉಡುಪು, ಪೇಟ ಧರಿಸುತ್ತಿದ್ದರು. ಧರ್ಮಗ್ರಂಥಗಳನ್ನು ಓದಿ ಮನನ ಮಾಡಿದ ನಂತರವೇ ಏನನ್ನಾದರೂ ಸೇವಿಸುತ್ತಿದ್ದರು. ಸುಳ್ಳು ಹೇಳುವವರನ್ನು, ಕಳ್ಳತನ ಮಾಡುವವರನ್ನು, ಹೆಂಡ ಕುಡಿಯುವವರನ್ನು ಕೂಕಾ ಸಂಪ್ರದಾಯದಲ್ಲಿ ಸೇರಿಸುತ್ತಲೇ ಇರಲಿಲ್ಲ. ಮೂಢ ಪದ್ಧತಿಗಳು, ಬಾಲ್ಯವಿವಾಹ, ಶಿಶುಹತ್ಯೆ, ಹೆಣ್ಣು ಮಾರಾಟಗಳಿಗೆ ಕಠೋರ ನಿಷೇಧವಿತ್ತು. ಸದ್ಗುರು ರಾಮಸಿಂಗ್‌ರು ಕೂಕಾಗಳಲ್ಲಿ ದೈವಭಕ್ತಿ, ನಿಸ್ವಾರ್ಥ ಸೇವೆ. ನಿರ್ಮಲ ಜೀವನ, ಸರಳ ವ್ಯವಹಾರ, ಸತ್ಯಸಂಧತೆಗಳನ್ನು ಬೆಳೆಸುತ್ತಿದ್ದರು. ಹತ್ತನೇ ಗುರು ಗುರುಗೋವಿಂದ ಸಿಂಹರೇ ರಾಮಸಿಂಗ್‌ರಾಗಿ ಹುಟ್ಟಿ ಬಂದಿದ್ದಾರೆಂದು ಕೂಕಾಗಳು ತಿಳಿಯುತ್ತಿದ್ದರು.

ಒಂದು ದಿನ ದರಬಾರಸಿಂಗ್‌ಎಂಬುವ ಒಬ್ಬ ಕುಡುಕ ರಾಮಸಿಂಗ್‌ರ ಬಳಿ ಬಂದ. “ನನಗೆ ದುಃಖ-ಸಂಕಟಗಳು, ಸಂಸಾರ ಸಮಸ್ಯೆಗಳು ಕಾಡಿಸದಂತೆ ಮೈ ಮೆರೆಸುವ ಮದಿರೆಯನ್ನು ಕೊಡುವಿರಾ?” ಎಂದು ಕೇಳಿದ.

ಸದ್ಗುರು ರಾಮಸಿಂಗ್‌ರು ಅವನಿಗೆ, “ನಾಳೆ ನೀನು ಶುಭ್ರವಾಗಿ ಸ್ನಾನ ಮಾಡಿಕೊಂಡು ಬಾ” ಎಂದರು.

ಮೂರನೇ ದಿನ ಶುಭ್ರನಾಗಿ ಬಂದ ದರಬಾರಸಿಂಗ್‌ನಿಗೆ ರಾಮಸಿಂಗ್‌ರು “ದೇವರ ನಾಮವನ್ನು ಜಪಿಸುವುದರ ಮೂಲಕ ನಿನಗೆ ಶಾಂತಿ ದೊರೆಯುವಂತೆ ಮಾಡುತ್ತೇನೆ” ಎಂದರು.

ಅದರಂತೆ ದರಬಾರಸಿಂಗ್‌ನಿಗೆ ದೇವರ ನಾಮಸ್ಮರಣೆ ಮಾಡುತ್ತಾ ಒಬ್ಬ ಶ್ರೇಷ್ಠ ಭಗವದ್ಭಕ್ತನಾಗಿ ಪರಿವರ್ತನೆ ಹೊಂದಿದ. ಇದೇ ರೀತಿ ಬೇಕಾದಷ್ಟು ಜನ ಸದ್ಗುರು ರಾಮಸಿಂಗ್‌ರ ಬಳಿ ಬಂದು ಸನ್ಮಾರ್ಗದಲ್ಲಿ ನಡೆಯಲಾರಂಭಿಸಿದರು.

ಆನಂದ ವಿವಾಹ”

ರಾಮಸಿಂಗ್‌ರು ಮಾಡಿದ ಒಂದು ಅತಿ ಮುಖ್ಯ ಸುಧಾರಣೆ ಎಂದರೆ ವಿವಾಹ ಪದ್ಧತಿಯದು. ಈಗಲೂ ನಮ್ಮಲ್ಲಿ ಇರುವಂತೆ ಆಗ ಹೆಣ್ಣು ಮಕ್ಕಳ ಮದುವೆಗೆ ತುಂಬ ಹಣ ಖರ್ಚಾಗುತ್ತಿತ್ತು. ಬಡವರಿಗಂತೂ ಇದು ತುಂಬ ದುಬಾರಿಯಾಗಿತ್ತು. ಹೆಣ್ಣು ಮಕ್ಕಳ ಮದುವೆಗಾಗಿ ನೂರಾರು, ಸಾವಿರಾರು ರೂಪಾಯಿಗಳನ್ನು ಸಾಲ ಮಾಡಿ ಜೀವನಪೂರ್ತಿ ಅವರು ತೊಳಲಾಡುತ್ತಿದ್ದರು. ಮದುವೆಗೆ ಬೀಳುವ ಖರ್ಚು ಅವರ ತಲೆಯ ಮೇಲೆ ಬೀಳುವ ಕಲ್ಲು ಚಪ್ಪಡಿಯಂತೆ ಆಗುತ್ತಿತ್ತು.

ಇದನ್ನು ನಿವಾರಿಸಲು ರಾಮಸಿಂಗ್‌ಒಂದು ಸಾಮೂಹಿಕ ವಿವಾಹ ಪದ್ಧತಿಯನ್ನು ಹಾಕಿಕೊಟ್ಟರು. ೧೮೬೩ರ ಜೂನ್‌೩ರಂದು ಖೋಟೆ ಎಂಬಲ್ಲಿ ಈ ರೀತಿಯ ಮದುವೆಯ ಸಮಾರಂಭ ಮೊದಲ ಬಾರಿಗೆ ನಡೆಯಿತು. ಇದಕ್ಕೆ “ಆನಂದ ವಿವಾಹ” ಎಂದು ಹೆಸರು ಬಂತು.

ಈ ಪದ್ಧತಿಯಿಂದ ಬಡವರಿಗೆ ತುಂಬ ಅನುಕೂಲವಾಯಿತು. ಇದರಲ್ಲಿ ಒಂದು ಮದುವೆಗಾಗಿ ಅವರಿಗೆ ಕೇವಲ ಕೆಲವೇ ರೂಪಾಯಿಗಳ ಖರ್ಚು ಆಗುತ್ತಿತ್ತು. ಆದರೆ ಇಂತಹ ವಿವಾಹ ಪದ್ಧತಿಯನ್ನು ಪುರೋಹಿತವರ್ಗದವರು ಬಲವಾಗಿ ವಿರೋಧಿಸಿದರು. ಕಾರಣ ಅವರಿಗೆ ಸಿಗುತ್ತಿದ್ದ ದಕ್ಷಿಣೆ ನಿಂತುಹೋಯಿತು! ಸದ್ಗುರು ರಾಮಸಿಂಗ್‌ರು ವಿರೋಧವನ್ನು ಲೆಕ್ಕಿಸಲಿಲ್ಲ.

ಇಂದಿಗೂ ಅವರು ಹಾಕಿಕೊಟ್ಟ ಮದುವೆಯ ವಿಧಾನ ಕೂಕಾಗಳಲ್ಲಿ ಆಚರಣೆಯಲ್ಲಿದೆ.

ದುಬಾರಿ ಮದುವೆಗಳನ್ನು ನಿಲ್ಲಿಸುವುದೇ ಅಲ್ಲದೆ ಇನ್ನೂ ಮುಂದೆ ಹೋದರು ರಾಮಸಿಂಗ್‌. “ನಾನು ಮೇಲು ನೀನು ಕೀಳು” ಎಂದು ಕಚ್ಚಾಟವನ್ನು ಹುಟ್ಟಿಸುತ್ತಿದ್ದ ಜಾತಿ ವೈಷಮ್ಯವನ್ನು ಕಿತ್ತೊಗೆಯಲು ಅಂತರ ಜಾತೀಯ ವಿವಾಹವನ್ನು ನಡೆಸಿದರು. ವಿಧವಾ ವಿವಾಹವನ್ನು ಪ್ರೋತ್ಸಾಹಿಸಿದರು. ಹೆಂಗಸರಿಗೆ ಸಮಾಜದಲ್ಲಿ ಪ್ರಾಧಾನ್ಯ ನೀಡಲು, ಹೆಂಗಸರು ಗಂಡಸರೊಡನೆ ಮಾತುಕತೆಗಳಲ್ಲಿ, ಚರ್ಚೆಗಳಲ್ಲಿ ಭಾಗವಹಿಸಲು ಸಭೆಗಳಲ್ಲಿ ಅವಕಾಶ ಮಾಡಿದರು. ಇವೆಲ್ಲದರ ಪರಿಣಾಮವಾಗಿ ಅವರ ಖ್ಯಾತಿ ಹೆಚ್ಚಿತು.

ಸ್ಚದೇಶಿ ವ್ರತ

ಮೊದಮೊದಲು ಕೂಕಾ ಸಂಪ್ರದಾಯ ಕೇವಲ ಧಾರ್ಮಿಕ, ಸಾಮಾಜಿಕ ವಿಷಯಗಳಿಗೆ ಮೀಸಲಾಗಿತ್ತು. ಒಮ್ಮೆ ಗುರುರಾಮದಾಸ್‌ಎಂಬುವರು ಸದ್ಗುರು ರಾಮಸಿಂಗ್‌ರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಅಂದಿನಿಂದ ರಾಜಕೀಯ ಜಾಗೃತಿಯೂ ಆ ಪಂಥದಲ್ಲಿ ಉಂಟಾಯಿತೆಂದು ಹೇಳುತ್ತಾರೆ. ಗೋವುಗಳ ರಕ್ಷಣೆ ಈಗ ಒಂದು ಪ್ರಮುಖ ಅಂಶವಾಯಿತು. ನೋಡನೋಡುತ್ತ ಸದ್ಗುರು ರಾಮಸಿಂಗ್‌ಕೂಕಾ ಅವರ ಅನುಯಾಯಿಗಳು ಎಲ್ಲೆಲ್ಲೂ ಕಾಣಬರತೊಡಗಿದರು. ಪಂಜಾಬ ಪ್ರಾಂತದ ೨೧ ಜಿಲ್ಲೆಗಳಲ್ಲೂ ಕೂಕಾಗಳ ಚಟುವಟಿಕೆಗಳ ಜಾಲ ಹಬ್ಬಿತು.

"ನಾನು ಬೆಲೆ ತೆರಲು ಹೋಗುತ್ತಿದ್ದೇನೆ."

ಭಾರತ ನಮ್ಮ ಮನೆ ಇದ್ದಂತೆ. ಇದು ಮುಂದುವರಿಯಬೇಕು, ಜಗತ್ತಿನಲ್ಲೆಲ್ಲ ವೈಭವದಿಂದ ಮೆರೆದಾಡಬೇಕು ಎಂದು ನಮಗನಿಸುತ್ತದೆ. ಭಾರತದ ಐಶ್ವರ್ಯವನ್ನು ದೋಚಿಕೊಂಡು ಹೋಗಲು ವ್ಯಾಪಾರಿಗಳ ಸೋಗು ಹಾಕಿಕೊಂಡು ಬಂದ ಬ್ರಿಟಿಷರಿಗೆ ಇದು ಅವರ ಮನೆ ಅಲ್ಲವಾದ ಕಾರಣ ಅವರು ಇಲ್ಲಿನ ಸಂಪತ್ತನ್ನು ಸುಲಿಗೆ ಮಾಡಿದರು. ನಮ್ಮ ದೇಶದಲ್ಲೇ ನಾವು ದಾಸರಾಗಿ ಅಪಮಾನಗಳನ್ನು ಸಹಿಸಬೇಕಾಯಿತು.

ಸದ್ಗುರು ರಾಮಸಿಂಗ್‌ರು ಬ್ರಿಟಿಷರ ಇಂತಹ ದಬ್ಬಾಳಿಕೆಯನ್ನು ತಮ್ಮ ಶಕ್ತಿಯುತ ಮಾತುಗಳಿಂದ ಖಂಡಿಸಲಾರಂಭಿಸಿದರು. ಅವರ ವಾಣಿ ದಾಸ್ಯದಲ್ಲಿ ಬಿದ್ದಿದ್ದ ಜಡಜನತೆಯನ್ನು ತಟ್ಟಿ ಎಬ್ಬಿಸಿತು. ೧೮೩೭ರ ಏಪ್ರಿಲ್‌೧೪ರ ದಿನ ಭೈಣಿಯಲ್ಲಿ ತ್ರಿಕೋಣಾಕಾರದ ಬಿಳಿಯ ಬಾವುಟವನ್ನು ಹಾರಿಸಿದರು. ಪರಕೀಯರ ಆಕ್ರಮಣವನ್ನು ಕಿತ್ತೊಗೆಯಲು ಕೆಲವು ಕ್ರಮಗಳನ್ನೂ ಅವರು ಸೂಚಿಸಿದರು. ಬೇರೆ ದೇಶದವರು ತಯಾರಿಸಿದ ವಸ್ತುಗಳನ್ನು ನಾವು ಕೊಂಡರೆ ಆ ದೇಶಗಳಿಗೇ ಲಾಭವೂ ಹೋಗುತ್ತದೆ. ಆದ್ದರಿಂದ ವಿದೇಶದ ವಸ್ತುಗಳನ್ನು ಬಹಿಷ್ಕಾರ ಮಾಡಬೇಕು. ರಾಮಸಿಂಗ್‌ರ ಇಂತಹ ವಿಚಾರ ಕೇಳಿ ಜನ ಸ್ವದೇಶ ವ್ರತಕೈಗೊಂಡರು. ಹೀಗೆ ಮಾಡಿ ನಮ್ಮ ಐಶ್ವರ್ಯವೆಲ್ಲ ವಿದೇಶಕ್ಕೆ ಹೋಗುವುದನ್ನು ತಡೆಗಟ್ಟಬಹುದು ಎಂದು ಮನಗಂಡರು. ಇದಲ್ಲದೆ ಬ್ರಿಟಿಷರು ನಡೆಸುತ್ತಿದ್ದ ಕೋರ್ಟು, ಕಚೇರಿಗಳಿಗೆ ಹೋಗುವುದನ್ನೂ ಜನ ನಿಲ್ಲಿಸಿದರು. ರೈಲ್ವೆ, ಸಾರಿಗೆ ಸಂಚಾರವನ್ನೂ ತೊರೆದರು. ದಿನೇದಿನೇ ಕೂಕಾಗಳ ಸಂಖ್ಯೆ ಬೆಳೆಯಿತು. ಬ್ರಿಟಿಷ್‌ಸರ್ಕಾರದ ಹದ್ದಿನ ಕಣ್ಣಿಗೆ ಇದು ಬಿತ್ತು. ರಾಮಸಿಂಗ್‌ರ ಮೇಲೆ ತಕ್ಷಣ ನಿರ್ಬಂಧಗಳನ್ನು ಹೇರಲಾಯಿತು. ಅವರು ಆಗಾಗ್ಗೆ ಮಾಡುತ್ತಿದ್ದ ಪ್ರವಾಸಗಳನ್ನು ನಿಲ್ಲಿಸಬೇಕಾಯಿತು. ಆದರೆ ಕೂಕಾಗಳ ಚಟುವಟಿಕೆ ಒಳಗಿಂದೊಳಗೇ ನಡೆಯಲಾರಂಭಿಸಿತು.

ವ್ಯವಸ್ಥೆ

ಕೂಕಾಗಳ ಒಂದು ಸ್ವತಂತ್ರ ಅಂಚೆ ವ್ಯವಸ್ಥೆಯೇ ಆರಂಭಗೊಂಡಿತು. ಗುಪ್ತ ಕಾಗದ ಪತ್ರಗಳ ಓಡಾಟ ನಡೆಯಿತು. ಒಬ್ಬ ಕೂಕಾ ಒಂದು ಹಳ್ಳಿಗೆ ಬಂದು ಆಟ ಮಾಡುತ್ತಿದ್ದರೂ ಸಹ ಮೇಲೆದ್ದು ಕಾಗದವನ್ನು ಮುಂದಿನ ಹಳ್ಳಿಗೊಯ್ದು ತಲುಪಿಸುತ್ತಿದ್ದ. ಹೀಗೇ ಅದು ಸೇರಬೇಕಾದ ಕಡೆ ಹೋಗುತ್ತಿತ್ತು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಾಲ್ನಡಿಗೆಯಿಂದ ಅಥವಾ ಕುದುರೆಯ ಮೇಲೆ ಕೂಕಾಗಳು ಹೋಗುತ್ತಿದ್ದರು. ಹೆದ್ದಾರಿಗಳಲ್ಲಿ ಹೋಗದೆ ಗುಪ್ತವಾಗಿ ಕಾಲುದಾರಿಗಳಲ್ಲಿ ಹೋಗುತ್ತಿದ್ದರು. ಅತ್ಯಂತ ಗುಪ್ತವಾದ ರಾಜಕೀಯ ಹಾಗೂ ಬ್ರಿಟಿಷ್‌ವಿರೋಧೀ ಸಂದೇಶಗಳನ್ನು ಬಾಯಿಮಾತಿನಲ್ಲೇ ತಿಳಿಸಲಾಗುತ್ತಿತ್ತು. ಇಂತಹ ವ್ಯವಸ್ಥೆಯಿಂದಾಗಿ ಕೂಕಾಗಳಿಗೆ ತಾವು ಕೈಗೊಂಡಿರುವ ಕೆಲಸ ಗಂಭೀರವಾದದ್ದು, ಮಹತ್ವದ್ದು ಎನಿಸುತ್ತಿತ್ತು.

ತಮ್ಮ ಕಾರ್ಯವನ್ನು ಯಶಸ್ವಿಯಾಗಿ, ಯೋಜನಾಬದ್ಧವಾಗಿ ನಿರ್ವಹಿಸಲು ರಾಮಸಿಂಗ್‌ರು ೨೨ ಮಂದಿ ಮುಂದಾಳುಗಳನ್ನು ನೇಮಿಸಿದರು. ಇವರನ್ನು ಸುಬಾಗಳು ಎಂದು ಕರೆಯುತ್ತಾರೆ. ಸುಬಾಗಳು ಇಡೀ ಪಂಜಾಬಿನಲ್ಲಿ ಸಂಚರಿಸಿ ರಾಮಸಿಂಗ್‌ರ ಪ್ರತಿನಿಧಿಗಳಾಗಿ ಅವರ ವಿಚಾರವನ್ನು ಹರಡಿದರು. ತಮ್ಮ ಸಂಪ್ರದಾಯ ಪ್ರಬಲವಾಗಿ ಬೆಳೆದು ಬ್ರಿಟಿಷರನ್ನು ಹೊರ ಅಟ್ಟುವುದರ ಜೊತೆಗೆ ಧಾರ್ಮಿಕ, ಸಾಮಾಜಿಕ, ರಾಜಕೀಯ ಜನಜಾಗೃತಿ ಉಂಟಾಗಲೆಂದು ರಾಮಸಿಂಗ್‌ರು ಈ ವ್ಯವಸ್ಥೆ ಮಾಡಿದರು.

ಸದ್ಗುರು ರಾಮಸಿಂಗ್‌ರು ತಮ್ಮ ಅನುಯಾಯಿಗಳ ಮೂಲಕ ಕಾಶ್ಮೀರ ಹಾಗೂ ನೇಪಾಳ ರಾಜ್ಯಗಳೊಂದಿಗೆ ಸಂಬಂಧ ಬೆಳೆಸಿದರು. ಸಮಯ ಬಂದಾಗ ಅವರ ಸಹಾಯದ ಭರವಸೆಯನ್ನೂ ಪಡೆದರು. ಇಷ್ಟಕ್ಕೇನಿಲ್ಲದೆ ರಾಮಸಿಂಗ್‌ರ ದೂತರು ರಷ್ಯಾಕ್ಕೂ ಹೋದರು. ನಮ್ಮ ದೇಶದ ಸ್ವಾತಂತ್ರ‍್ಯವ್ಯಾಪ್ತಿಗೆ ಹೊರದೇಶ ದವರ ಸಹಾಯವನ್ನು ಪಡೆಯಲು ಹೊರಟವರಲ್ಲಿ ಮೊದಲಿಗರಾದರು. ಈ ರೀತಿ ರಷ್ಯಾಕ್ಕೆ ಹೋದ ಕೂಕಾಗಳ ಹೆಸರು ಸರ್ಕಾರಿ ಗುಪ್ತ ದಾಖಲೆಗಳಲ್ಲಿ ಇಂದಿಗೂ ಇವೆ.

ಸರ್ಕಾರಕ್ಕೆ ಭಯ

ಕೂಕಾಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ವರದಿಮಾಡಲು ಸರ್ಕಾರ ಅನೇಕ ಗುಪ್ತಚಾರರನ್ನು ನೇಮಿಸಿತು. ೧೮೬೬ರಲ್ಲಿ ಅಂಬಾಲದ ಕಮಿಷನರ್‌ಆರ್‌.ಜಿ.ಟೇಲರ್ “ಕೂಕಾ ಸಂಪ್ರದಾಯದ ಕುರಿತು ವಿವರಣೆಯುಳ್ಳ ವರದಿ” ಸಿದ್ಧಪಡಿಸಿದ. ಅವನು ಪಂಜಾಬಿನ ಬ್ರಿಟಿಷ್‌ಸರ್ಕಾರಕ್ಕೆ ಒಪ್ಪಿಸಿದ ವರದಿ ಅತ್ಯಂತ ಪ್ರಮುಖವಾಗಿದೆ. “ಈ ಕೂಕಾ ತರುಣರು ಒಂದಲ್ಲ ಒಂದು ದಿನ ಯುದ್ಧಕ್ಕೆ (ಬ್ರಿಟಿಷರ ವಿರುದ್ಧ) ನಿಂತೇ ನಿಲ್ಲುತ್ತಾರೆ ಎಂಬುದು ನನ್ನ ದೃಢವಾದ ನಂಬಿಕೆ” ಎಂದವನು ಅದರಲ್ಲಿ ಹೇಳಿದ್ದಾನೆ.

ಅಂಬಾಲಾದ ಅಫಿಷಿಯೇಟಿಂಗ್‌ಕಮಿಷನರ್ ಜೆ.ಡಬ್ಲು. ಮ್ಯಾಕನಾಬ್‌ಎಂಬುವನು ಬ್ರಿಟಿಷ್‌ಸರ್ಕಾರಕ್ಕೆ ತಕ್ಷಣ ರಾಮಸಿಂಗ್‌ರನ್ನು ಸೆರೆಹಿಡಿಯುವಂತೆ ಮನವಿ ಮಾಡಿದ, ಆ ಮನವಿಯಲ್ಲಿ “ಪ್ರಾರಂಭದಲ್ಲಿ ಈ ಸಂಪ್ರದಾಯದ ನಾಯಕರ ಉದ್ದೇಶ ಏನೇ ಇದ್ದಿರಬಹುದು, ಆದರೆ ಈಗ ಅದರ ಉದ್ದೇಶ ರಾಜಕೀಯವೇ ಎಂಬುದು ಸುಸ್ಪಷ್ಟ…..” ಎಂದು ಬರೆದ.

ಗುಪ್ತಚರರ ಕಿರುಕುಳದ ನಡುವೆಯೂ ಕೂಕಾಗಳ ಸಂಖ್ಯೆ ದಿನದಿನವೂ ಬೆಳೆಯಿತು. ೧೮೭೧ರ ವೇಳೆಗೆ ಅದು ೪,೩೦,೦೦೦ವನ್ನು ಮುಟ್ಟಿತು. ಸದ್ಗುರು ರಾಮಸಿಂಗ್‌ರು ತಾವು ನೇಮಿಸಿದ ಸುಬಾಗಳು ದರಬಾರನ್ನು ನಡೆಸುತ್ತಿದ್ದರು. ಅವರಿಗೆ ಹೇಗೆ ಮುಂದುವರಿಯ ಬೇಕೆಂಬುದನ್ನು ವಿವರಿಸುತ್ತಿದ್ದರು.

ಒಡೆದು ಆಳುವ ನೀತಿ

ಹಬ್ಬಹರಿದಿನಗಳಂದು ಮನೆಯಲ್ಲಿ ನಿಮ್ಮ ಅಮ್ಮ ಗೋವಿಗೆ ಪೂಜೆ ಮಾಡುವುದನ್ನು ನೀವು ನೋಡಿರಬೇಕಲ್ಲ ? ಆಕಳಿಗೆ ಅಕ್ಕಿ-ಬೆಲ್ಲವನ್ನು ತಿನ್ನಲು ನೀಡಿ, ಅದರ ಹಣೆಗೆ ಅರಿಶಿನ ಕುಂಕುಮ ಹಚ್ಚಿ, ಪ್ರದಕ್ಷಿಣೆ ಹಾಕಿ, ಅದರ ಮೈದಡವಿ ಕಣ್ಣಿಗೊತ್ತಿಕೊಳ್ಳುವ ದೃಶ್ಯ ನೀವು ಕಂಡಿರಲೇಬೇಕು. ಗೋವಿಗೆ ನಾವು ತಾಯಿಯ ಸ್ಥಾನವನ್ನು ನೀಡಿದ್ದೇವೆ. ಅದು ನಮಗೆ ಪೂಜ್ಯ. ಆದರೆ ಇಂಗ್ಲಿಷರು ಹಸುಗಳನ್ನು ಕೊಲ್ಲುವುದಕ್ಕೆ ಪ್ರೋತ್ಸಾಹ ನೀಡಿದರು. ಭಾರತದ ಜನರನ್ನು ಒಡೆಯುವ ಅವರ ನೀತಿಯಲ್ಲಿ ಇದೊಂದು ಅಸ್ತ್ರ.

ಹಿಂದೂಗಳು ಮತ್ತು ಮುಸ್ಲಿಮರು ಒಂದಾಗಿ ಅವರ ವಿರುದ್ಧ ತಿರುಗಿಬಿದ್ದರೆ ಅವರ ಅಧಿಕಾರ ನಡೆಯದು. ಆದ್ದರಿಂದ ಇಂಗ್ಲಿಷರು ಉದ್ದೇಶಪೂರ್ವಕವಾಗಿ ಹಿಂದೂ ಮುಸ್ಲಿಮರಲ್ಲಿ ಜಗಳ ಹುಟ್ಟಿಸುತ್ತಿದ್ದರು. ಅವರಿಬ್ಬರೂ ಕಚ್ಚಾಡುತ್ತಿರುವಾಗ ನಮ್ಮ ತಂಟೆಗೆ ಯಾರು ಬರುವುದಿಲ್ಲ ಎಂಬುದು ಅವರ ವಿಚಾರ.

ಅವರು ಪಂಜಾಬಿನಲ್ಲಿ ಮಾಡಿದ್ದೂ ಹೀಗೇ. ಪಂಜಾಬ್‌ತಮ್ಮ ಕೈಗೆ ಬಂದ ಹೊಸತರಲ್ಲಿ ಬ್ರಿಟಿಷ್‌ಸರ್ಕಾರ “ದೇವಸ್ಥಾನಗಳಲ್ಲಿ ಪ್ರಾರ್ಥನಾ ಮಂದಿರಗಳಲ್ಲಿ ಚಪ್ಪಲಿ ಹಾಕಿಕೊಂಡು ಹೋಗಬಾರದು” ಎಂದು ಹೇಳಿಕೆ ನೀಡಿತ್ತು. ಆದರೆ ಅದೇ ಸರ್ಕಾರ ಕೆಲವು ದಿನಗಳ ಅನಂತರ “ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರಿಗೆ ಗೋಮಾಂಸ ಭಕ್ಷಣೆ ನಿಷಿದ್ಧವಲ್ಲ. ಅವರು ಗೋಮಾಂಸ ಭಕ್ಷಿಸಿದರೆ ಹಿಂದೂಗಳು ಅದನ್ನು ಅಡ್ಡಿಪಡಿಸಬಾರದು” ಎಂಬರ್ಥದ ಕಾನೂನು ಹೊರಡಿಸಿತು. ಇಷ್ಟು ಮಾತ್ರವಲ್ಲ, ಹಿಂದೂಗಳು ಸಿಖ್ಖರೂ ವಾಸವಾಗಿದ್ದ ಸ್ಥಳಗಳಲ್ಲಿ, ಅವರ ದೇವಾಲಯ-ಗುರುದ್ವಾರಗಳ ಬಳಿ ಗೋಮಾಂಸದ ಮಾರಾಟ ಆಗದಂತೆ ಎಚ್ಚರಿಕೆ ವಹಿಸಲಿಲ್ಲ.

ಘರ್ಷಣೆ

ಯಾವ ದೇಶದಲ್ಲೇ ಆಗಲಿ, ಯಾವ ಧರ್ಮವನ್ನೇ ಅನುಸರಿಸುವವರಿಗೂ ಇತರರಿಂದ ಮನಸ್ಸು ನೋಯಬಾರದು. ಈ ಅಂಶವನ್ನು ಸ್ವತಂತ್ರ ಭಾರತದ ರಾಜ್ಯಾಂಗ ಸ್ಪಷ್ಟ ಮಾಡಿದೆ. ಆದರೆ ಇಂಗ್ಲಿಷರಿಗೆ ಬೇಕಾಗಿದ್ದುದು ಇಲ್ಲಿನ ಜನರಲ್ಲಿ ಒಡಕು, ಜಗಳ. ಇದರಿಂದ ಕೆಲವರು ಬೀದಿ ಬೀದಿಗಳಲ್ಲಿ ಢಾಣಾ ಡಂಗುರವಾಗೇ ಗೋಮಾಂಸ ಮಾರಲಾರಂಭಿಸಿದರು. ಹಿಂದೂಗಳು ಇದನ್ನು ಸಹಿಸದಾದರು. ಪಂಜಾಬಿನ ಅಮೃತಸರದ ವಾತಾವರಣದಲ್ಲಿ ಕಾವೇರಿತು. ಅಮೃತಸರದ ಸಿಖ್ಖರ ಧಾರ್ಮಿಕ ಕೇಂದ್ರವೂ ಆಗಿತ್ತು. ಹೋಳಿ ಹಬ್ಬ ದೀಪಾವಳಿಗಳ ದಿನ ಅಮೃತಸರಕ್ಕೆ ಬಂದ ಸುತ್ತ ಮುತ್ತಲ ಹಳ್ಳಿಗರಿಗೆ ನಡುಬೀದಿಯಲ್ಲೇ ಗೋಮಾಂಸ ಮಾರಾಟವಾಗುವುದನ್ನು ಕಂಡು ಆಶ್ಚರ್ಯವಾಯಿತು.

ಇಂತಹ ಸನ್ನಿವೇಶದಲ್ಲಿ ಕೆಲವು ಕೆರಳಿದ ಕೂಕಾಗಳು ೧೮೭೧ರ ಜೂನ್‌೧೫ ರಂದು ಅಮೃತಸರದಲ್ಲಿ ಕಟುಕರ ಮೇಲೆ ಹಲ್ಲೆ ಮಾಡಿದರು. ನಾಲ್ಕು ಜನರನ್ನು ಕೊಂದರು.

ಧೀರರ ಸಾವು

ತಕ್ಷಣ ಸರ್ಕಾರ ಸಿಕ್ಕಸಿಕ್ಕಲ್ಲಿ ಕೂಕಾಗಳನ್ನು ಹಿಡಿದು ಹಾಕಿತು. ತಪ್ಪಿತಸ್ಥರಲ್ಲದವರನ್ನೂ ಹಿಡಿದು ಚಿತ್ರಹಿಂಸೆಕೊಟ್ಟು ತಪ್ಪು ಮಾಡಿದೆವೆಂದು ಹೇಳುವಂತೆ ಬಲಾತ್ಕರಿಸಲಾಯಿತು. ಅಮೃತಸರದಲ್ಲಿ ಮನೆಮನೆಗೆ ನುಗ್ಗಿ ಪೊಲೀಸರು ಕಿರುಕುಳ ಕೊಡಲಾರಂಭಿಸಿದರು. ನಿರಪರಾಧಿ ಸಾಮಾನ್ಯ ಜನರ ಅವಸ್ಥೆ ಹೇಳತೀರದಾಯಿತು.

ಇದನ್ನು ಕೇಳಿದ ಸದ್ಗುರು ರಾಮಸಿಂಗ್‌ರು ಸಾವಿರಾರು ನಿರಪರಾಧಿ ಜನರ ಸಂಕಟವನ್ನು ತಪ್ಪಿಸಲು ನಿರ್ಧರಿಸಿದರು. ಅವರು ನಿಜವಾದ ತಪ್ಪಿತಸ್ಥ ಕೂಕಾಗಳನ್ನು ಕರೆದು ಸರ್ಕಾರದ ಮುಂದೆ ತಪ್ಪೊಪ್ಪಿಕೊಳ್ಳುವಂತೆ ಹೇಳಿದರು. ಅಪ್ರತಿಮ ನಿಷ್ಠೆಯನ್ನು ಪ್ರಕಟಿಸಿ ಕೂಕಾಗಳು ಗುರುಗಳ ಮಾತನ್ನು ಚಾಚೂ ತಪ್ಪದಂತೆ ಪಾಲಿಸಿದರು.

ಈ ಪ್ರಸಂಗದಿಂದ ಇಂಗ್ಲಿಷರ ನ್ಯಾಯದ ವೈಖರಿಯೂ ಬೆಳಕಿಗೆ ಬಂದಂತಾಯಿತು. ತಪ್ಪು ಮಾಡದವರು ಸರ್ಕಾರ ಕೊಟ್ಟ ಚಿತ್ರಹಿಂಸೆ ತಡೆಯಲಾರದೆ, ತಾವು ತಪ್ಪು ಮಾಡಿದೆವು ಎಂದು ಒಪ್ಪಿಕೊಂಡರು. ಕೆಳಗಿನ ಕೋರ್ಟು ಅವರು ತಪ್ಪಿತಸ್ಥರು ಎಂದು ಮೇಲಿನ ಕೋರ್ಟಿಗೆ ವಿಚಾರಣೆಗೆ ಕಳುಹಿಸಿತು. ಆಗ ನಿಜವಾಗಿ ಮಾಡಿದ್ದವರು ಮುಂದೆ ಬಂದರು. ಸರ್ಕಾರ ನಾಚಿಕೆಗೀಡಾಯಿತು.

ನಾಲ್ಕು ಜನರಿಗೆ ಬ್ರಿಟಿಷ್‌ಸರ್ಕಾರ ನೇಣುಗಂಬದ ಶಿಕ್ಷೆ ವಿಧಿಸಿತು. ಇನ್ನು ಕೆಲವರನ್ನು ಸೆರೆಮನೆಗೆ ತಳ್ಳಿತು. ನೇಣಿಗೆ ತಲೆಕೊಡುವ ಮುನ್ನ ಕೂಕಾಗಳು ಕಿಂಚಿತ್ತೂ ಅಳುಕಲಿಲ್ಲ. ಪಶ್ಚಾತ್ತಾಪದ ಭಾವನೆಯೂ ಅವರಲ್ಲಿ ಇರಲಿಲ್ಲ. ಹಿಂದಿನ ದಿನ ಜೈಲಿನ ಅಧಿಕಾರಿಗಳು ನಾಳೆ ಸಾಯಲಿರುವ ಖೈದಿಗಳು ಒಂದು ದಿನವಾದರೂ ಸಂತೋಷವಾಗಿರಲಿ ಎಂದು, “ನೀವು ಏನನ್ನು ಬೇಕಾದರೂ ತಿನ್ನಿ, ಕೊಡುತ್ತೇವೆ. ಬಂಧುಬಳಗ, ಸ್ನೇಹಿತರು-ಯಾರನ್ನು ಬೇಕಾದರೂ ಭೇಟಿ ಮಾಡಬಹುದು” ಎಂಬ ಸ್ವಾತಂತ್ರ್ಯ ಕೊಟ್ಟಿದ್ದರು. ಆದರೆ ಕೂಕಾಗಳಿಗೆ ಅದು ಬೇಕಾಗಿರಲಿಲ್ಲ.

ಭಜನೆ, ಕೀರ್ತನೆಗಳನ್ನು ಮಾಡುತ್ತಾ ಸೆಪ್ಟೆಂಬರ್ ೧೫ ರಂದು ಅವರು ವಧಾಸ್ಥಾನಕ್ಕೆ ಹೊರಟಿದ್ದನ್ನು ನೋಡಿದ ಯಾರಿಗೂ ಅವರು ಸಾವನ್ನಪ್ಪಲು ಹೊರಟವರೆಂದು ಅನಿಸುತ್ತಿರಲಿಲ್ಲ. ದಾರಿಯ ಅಕ್ಕಪಕ್ಕದಲ್ಲಿ ನೆರೆದ ಜನರು ಕೂಕಾಗಳು ಧೈರ್ಯವಾಗಿ ಸರ್ಕಾರಕ್ಕೆ ಸೆರೆಯಾದದ್ದನ್ನು ಮುಕ್ತವಾಗಿ ಕೊಂಡಾಡುತ್ತಿದ್ದರು.

ಆ ಕೂಕಾಗಳು ನೇಣಿಗೇರುವ ಸಮಯದಲ್ಲಿ, “ನಮ್ಮ ಕುತ್ತಿಗೆಗೆ ಅಪವಿತ್ರವಾದ ಚರ್ಮದ ಹಗ್ಗವನ್ನು ಬಿಗಿಯಬಾರದು. ಬೇರೆ ನೂಲಿನ ಹಗ್ಗವನ್ನು ಹಾಕಬೇಕು. ನಮ್ಮ ನೇಣನ್ನು ನಾವೇ ಹಾಕಿಕೊಳ್ಳಲು ಅವಕಾಶ ಕೊಡಬೇಕು” ಎಂದು ಕೇಳಿದರು. ಜೈಲಿನ ಅಧಿಕಾರಿಗಳು ಅದಕ್ಕೆ ಸಮ್ಮತಿಸಿದರು. ಕೂಕಾಗಳು ನಗುನಗುತ್ತಾ ಸ್ವರ್ಗ ಸೇರಿದರು.

ಹಕಿಮ್‌ಸಿಂಗ್‌ಎಂಬುವನು ಪ್ರಾಣ ತೆತ್ತವರಲ್ಲಿ ಒಬ್ಬ. ಅವನು ತನ್ನ ತಾಯಿಯ ಒಬ್ಬನೇ ಮಗ. ತಾಯಿ ವಿಧವೆ. ಆಕೆಗೆ ಮಗ ಸತ್ತದ್ದರಿಂದ ದುಃಖವಾಗಿರಬಹುದೆಂದು ಒಬ್ಬರು ಸಮಾಧಾನ ಹೇಳಲು ಹೊರಟರು. ಆ ವೃದ್ಧ ಮಾತೆ ಏನು ಹೇಳಿದಳು ಗೊತ್ತೆ? “ಗೋಮಾತೆಗಾಗಿ, ಬಡಜನರಿಗಾಗಿ, ದೇಶದ ಸ್ವಾತಂತ್ರ‍್ಯಕ್ಕಾಗಿ ನನ್ನ ಮಗ ಜೀವ ತೆತ್ತ. ಇದು ನಂಗೆ ಹೆಮ್ಮೆಯ ವಿಷಯವೇ ಸರಿ” ಎಂದಳಾಕೆ!

ಮತ್ತೆ ಹುಟ್ಟಿ ಬರುತ್ತೇನೆ”

ಅಮೃತಸರದ ಘಟನೆಯಾದ ಒಂದು ತಿಂಗಳ ನಂತರ ರಾಯಕೋಟೆಯಲ್ಲೂ ಇದೇ ರೀತಿಯ ಪ್ರಸಂಗ ನಡೆಯಿತು. ಗುರುದ್ವಾರದ ಬಳಿ ಮಾಂಸದ ಅಂಗಡಿಗೆ ಸರ್ಕಾರ ಅನುಮತಿ ನೀಡಿತ್ತು. ಇದರಿಂದ ಜಗಳವಾಯಿತು. ಇಬ್ಬರು ಸತ್ತರು. ಏಳು ಜನ ಕೂಕಾಗಳು ಸೆರೆಸಿಕ್ಕರು. ೧೮೭೧ರ ನವೆಂಬರ್ ೨೬ ರಂದು ಅವರನ್ನೆಲ್ಲ ನೇಣು ಹಾಕಲಾಯಿತು.

ರತನಸಿಂಗ್ ಎಂಬ ಆಪಾದಿತ ಕೂಕಾ ಅಲ್ಲಿದ್ದ ಇಂಗ್ಲಿಷ್ ಅಧಿಕಾರಿಗೆ ಹೀಗೆ ಹೇಳಿದ: “ನಾನು ಮತ್ತೆ ೯ ತಿಂಗಳು ಸಿಖ್‌ತಾಯಿಯ ಗರ್ಭದಲ್ಲಿದ್ದು ಹುಟ್ಟಿಬರುತ್ತೇನೆ. ನಿಮ್ಮ ನ್ಯಾಯವೆಲ್ಲ ಬರೇ ಸುಳ್ಳು. ನಿಮ್ಮ ಪತನ ದೂರವಿಲ್ಲ. ಮತ್ತೆ ಹುಟ್ಟಿದ್ದ ನಾವು ನಿಮ್ಮ ವಿರುದ್ಧ ಖಡ್ಗ ಹಿಡಿಯುತ್ತೇವೆ. ನಿಮ್ಮ ಆಡಳಿತವನ್ನು ಮುಗಿಸಿಬಿಡುತ್ತೇವೆ.”

ಮಾಘಿಯಾತ್ರೆಯ ಆ ಘಟನೆ

ಮಾಘಮಾಸದಲ್ಲಿ ಸದ್ಗುರು ರಾಮಸಿಂಗ್‌ರ ಹುಟ್ಟೂರಾದ ಭೈಣಿಯಲ್ಲಿ ಜಾತ್ರೆ ನಡೆಯುವುದು ಪದ್ಧತಿ. ದೂರ ದೂರದ ಊರುಗಳಿಂದ ಬಂದ ಸಾವಿರಾರು ಕೂಕಾಗಳು ಅಲ್ಲಿ ಸೇರುತ್ತಿದ್ದರು. ಭಜನೆ, ಕೀರ್ತನೆ, ಗುರುಗ್ರಂಥಪಠನ, ಪ್ರವಚನಗಳ ಮೇಳ ನಡೆಯುತ್ತಿತ್ತು. ಭೈಣಿಗೆ ಹೀಗೆ ಬರುವ ಯಾತ್ರಿಕರು ಮಾಲೇರ್ ಕೋಟ್ಲಾದ ಮೂಲಕ ಹಾದು ಬರಬೇಕಾಗುತ್ತಿತ್ತು.

೧೮೨೭ರ ಜನವರಿ ೧೩ನೆಯ ದಿನ ಕೆಲವು ಕೂಕಾಗಳ ತಂಡ ಮಾಲೇರ್ ಕೋಟ್ಲಾವನ್ನು ಹಾದು ಬರುತ್ತಿತ್ತು. ಆಕಸ್ಮಾತ್ ಒಬ್ಬ ಕೂಕಾ ಒಂಟಿಯಾಗಿ ಹಿಂದುಳಿದು ಬಿಟ್ಟ. ಅವನ ಮೇಲೆ ಹಲ್ಲೆಯಾಯಿತು, ಅವನನ್ನು ಹೊಡೆದು ಉರುಳಿಸಿದರು. ತೀರ ಕ್ರೂರವಾಗಿ ಅವನಿಗೆ ಅಪಮಾನ ಮಾಡಿ ಓಡಿಸಿದರು.

ಇದೇ ಅವಸ್ಥೆಯಲ್ಲಿ ಆ ಕೂಕಾ ರಾಮಸಿಂಗ್‌ರ ಮುಂದೆ ಬಂದು ನಿಂತ. ಭಯದಿಂದ ಅವನ ಶರೀರವೆಲ್ಲ ಥರಥರ ನಡುಗುತ್ತಿತ್ತು. ದುಃಖದಿಂದ ಅವನು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಅವನ ಬಾಯಿಂದ ಮಾತುಗಳೇ ಹೊರಡುತ್ತಿರಲಿಲ್ಲ.

ಸೇಡಿನ ಜ್ವಾಲೆ

ಅಲ್ಲಿ ನೂರಾರು ಜನ ಯಾತ್ರಿಕರು ಸೇರಿದ್ದರು. ಅವರೆಲ್ಲ ಅವನ್ನು ಸಮಾಧಾನಪಡಿಸಿ ಏಕೆ ಹೀಗಾಯಿತೆಂದು ಕೇಳಿದರು. ಆ ಕೂಕಾ ನಡೆದದ್ದನ್ನು ಹೇಳಿದ. ಅದನ್ನು ಕೇಳಿ ಕೂಕಾಗಳಿಗೆ ಕೋಪ ಉಕ್ಕಿತು. ಸೇಡಿನ ಜ್ವಾಲೆ ಹೊರಬಂತು. ಎಲ್ಲರೂ ಇದಕ್ಕೆ ಪ್ರತೀಕಾರ ಮಾಡಬೇಕೆಂದು ಹೇಳತೊಡಗಿದರು.

ಸದ್ಗುರು ರಾಮಸಿಂಗ್‌ರಿಗೂ ಅಪಮಾನಿತ ಕೂಕಾನ ಕಥೆ ಕೇಳಿ ಅತ್ಯಂತ ವ್ಯಥೆಯಾಯಿತು. ಆದರೆ ಅವರು ದುಃಖವನ್ನು ನುಂಗಿಕೊಂಡು ಶಾಂತವಾಗಿ ಎಲ್ಲವನ್ನೂ ಕೇಳಿದರು.

ಅಲ್ಲಿದ್ದ ತರುಣ ಮುಂದಾಳು ಹೀರಾಸಿಂಗ್‌ನಿಗೆ ಇನ್ನು ತಡೆಯಲಾಗಲಿಲ್ಲ. ಆತನ ಕಣ್ಣುಗಳು ಕೋಪದಿಂದ ಕಿಡಿಕಾರ ತೊಡಗಿದವು. ಅವನು ರಾಮಸಿಂಗ್‌ರಿಗೆ ಮಂಡಿಯೂರಿ ವಂದಿಸಿ, “ಗುರುಗಳೇ, ಇದರ ಸೇಡು ತೀರಿಸಿಕೊಳ್ಳುತ್ತೇವೆ, ನೀವು ಅಪ್ಪಣೆ ಕೊಡಿ. ಇಂತಹ ಭಯಂಕರ ಅಪಮಾನವನ್ನು ನಾವು ಸಹಿಸೆವು. ಪುಂಡರ ಹುಟ್ಟಡಗಿಸಿ ಬರುತ್ತೇವೆ. ಆಶೀರ್ವಾದ ಮಾಡಿ” ಎಂದು ಕೇಳಿಕೊಂಡ.

ರಾಮಸಿಂಗ್‌ರು ಚಿಂತಾಮಗ್ನರಾದರು. ಕೊನೆಗೆ ಗಂಭೀರವಾಗಿ ನುಡಿದರು. “ಸ್ವಲ್ಪ ತಾಳ್ಮೆ ವಹಿಸಿ. ದುಡುಕುವುದು ಉಚಿತವಲ್ಲ”.

ಅಲ್ಲಿದ್ದ ತರುಣರಿಗೆ ಈ ಮಾತುಗಳು ಹಿಡಿಸಲಿಲ್ಲ. ತಾವು ಸೇಡು ತೀರಿಸಲೇಬೇಕೆಂದು ಅವರು ಪಟ್ಟು ಹಿಡಿದರು. ಹೀರಾಸಿಂಗ್ ಅಂಥವರ ನಾಯಕತ್ವ ವಹಿಸಿದ. ಅವನು ತನ್ನ ಖಡ್ಗವನ್ನು ಒರೆಯಿಂದ ಹೊರಗೆಳೆದ. ಅದರಿಂದ ನೆಲದ ಮೇಲೆ ಒಂದು ಗೆರೆ ಎಳೆದು, ಸವಾಲೆಸೆಯುವಂತೆ ಗರ್ಜಿಸಿದ: “ಯಾರು ಬಲಿದಾನ ನೀಡಲು ಸಿದ್ಧರಿರುವಿರೋ ಅಂಥವರು ಈ ಗೆರೆಯನ್ನು ದಾಟಿ ಬನ್ನಿ”.

ವಾತಾವರಣವೆಲ್ಲ ನಿಶ್ಯಬ್ಧವಾಯಿತು. ಸುಮಾರು ೧೪೦ ಜನ ಆ ಗೆರೆಯನ್ನು ದಾಟಿ ಮುಂದೆ ಬಂದರು. ಜನವರಿ ೧೪ರ ಮಧ್ಯಾಹ್ನ ಅವರೆಲ್ಲ ಬಿಚ್ಚುಗತ್ತಿಗಳನ್ನು ಹಿಡಿದು ರೋಷಾವೇಶದಿಂದ ಮಾಲೇರ್ ಕೋಟ್ಲಾದ ಕಡೆಗೆ ಹೆಜ್ಜೆ ಹಾಕಿದರು.

"ಸ್ವಲ್ಪ ತಾಳ್ಮೆ ವಹಿಸಿ. ದುಡುಕುವುದು ಉಚಿತವಲ್ಲ."

ಮಾಲೇರ್ ಕೋಟ್ಲಾದ ಮುತ್ತಿಗೆ

ಶಸ್ತ್ರಾಸ್ತ್ರಗಳು ಇನ್ನೂ ಬೇಕಾಗಿದ್ದವು. ಅದನ್ನು ಸಂಪಾದಿಸಿಕೊಳ್ಳಲು ಬಂಡೆದ್ದ ಕೂಕಾಗಳ ಈ ಗುಂಪು ಮಾಲೋಧ್ ಎಂಬ ಕೋಟೆಯನ್ನು ಆಕ್ರಮಿಸಿತು. ಅಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಯುದ್ಧ ಕುದುರೆಗಳು ಕೂಕಾಗಳಿಗೆ ಸಿಕ್ಕವು.

ಅಲ್ಲಿಂದ ಅವರು ನೇರವಾಗಿ ಮಾಲೇರ್ ಕೋಟ್ಲಾವನ್ನು ಮುತ್ತಿದರು. ಜನವರಿ ೧೫ ರಂದು ಅವರು ಮಾಲೇರ್ ಕೋಟ್ಲಾ ಮುಟ್ಟುವ ವೇಳೆಗೆ ಅಲ್ಲೆಲ್ಲ. ಸುದ್ದಿ ಹರಡಿತ್ತು. ಇವರನ್ನು ಎದುರಿಸಲು ಅಲ್ಲಿನ ಬ್ರಿಟಿಷ್‌ಸರ್ಕಾರದ ಸೈನ್ಯ ಸಿದ್ಧವಾಗಿತ್ತು.

ಹೆಸರಿಗೆ ಮಾತ್ರ ಅದು ಬ್ರಿಟಿಷ್‌ಸೈನ್ಯ. ಅದರಲ್ಲಿದ್ದವರೆಲ್ಲ ಭಾರತೀಯರೇ. ಅಧಿಕಾರಿಗಳು ಮಾತ್ರ ಇಂಗ್ಲಿಷರು. ಯುದ್ಧ ನಡೆದಾಗ ಎರಡೂ ಕಡೆ ಸಾಯುತ್ತಿದ್ದವರು ಭಾರತೀಯರು.

ಶಸ್ತ್ರಾಸ್ತಗಳಿಂದ ಸುಸಜ್ಜಿತವಾದ ಆ ಸೈನ್ಯ ಕೂಕಾಗಳ ಸಂಖ್ಯೆಯ ಹತ್ತುಪಟ್ಟು ಹೆಚ್ಚು ಇತ್ತು. ಹುತಾತ್ಮರಾಗುವ ಹೆಬ್ಬಯಕೆಯಿಂದ ಬಂದಿದ್ದ ಕೂಕಾಗಳು ಪರಾಕ್ರಮದಿಂದ ಹೋರಾಡಿದರು. ಶತ್ರು ಸೈನ್ಯಕ್ಕೆ ಅಪಾರ ಹಾನಿ ಉಂಟುಮಾಡಿದರು. ಹೋರಾಟದಲ್ಲಿ ಹೀರಾಸಿಂಗ್‌ನ ಎಡಗೈ ತುಂಡಾಗಿ ಕೆಳಕ್ಕೆ ಬಿತ್ತು.

ಏನೇ ಆದರೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಬ್ರಿಟಿಷ್‌ಸೈನ್ಯವನ್ನು ಹಿಡಿಯಷ್ಟು ಕೂಕಾಗಳು ಎದುರಿಸುವುದು ಕಷ್ಟವೇ. ಕೂಕಾಗಳ ಕೈ ಸೋಲತೊಡಗಿತು.

ಇನ್ನು ಹೋರಾಡಿ ಗೆಲ್ಲುವುದು ಅಸಂಭವ ಎಂದು ಹೀರಾಸಿಂಗ್‌ನಿಗೆ ಅನ್ನಿಸಿತು. ಅವನು ಸೆರೆ ಸಿಕ್ಕಲು ನಿರ್ಧರಿಸಿ, ತನ್ನ ಜೊತೆಗಾರರಿಗೆ, “ನನ್ನೊಡನೆ ಉಳಿದವರೂ ಸೆರೆಯಾಗಬೇಕೆಂದು ನಾನು ಬಲತ್ಕಾರಿಸುವುದಿಲ್ಲ. ಆದರೆ ಯಾರಿಗೆ ಬಲಿದಾನ ನೀಡುವ ಮನಸ್ಸಿದೆಯೋ ಅಂಥವರು ಮುಂದೆ ಬನ್ನಿ” ಎಂದು ಹೇಳಿದ.

ಹುತಾತ್ಮರು

ಒಬ್ಬಿಬ್ಬರ ಹೊರತು ಉಳಿದ ೬೮ ಕೂಕಾಗಳೂ ಒಟ್ಟಿಗೆ ಸೆರೆಯಾದರು. ಸೆರೆಸಿಕ್ಕ ಅವರನ್ನು ಜನವರಿ ೧೭ರಂದು ಬೆಳಗ್ಗೆ ಅಮಾನುಷ ರೀತಿಯಲ್ಲಿ ಗುಂಡಿಟ್ಟು ಕೊಲ್ಲಲಾಯಿತು. ಡೆಪ್ಯುಟಿ ಕಮಿಷನರ್ ಕಾವನ್ ತಾನೇ ಮುಂದೆ ನಿಂತು ಅದನ್ನು ಮಾಡಿಸಿದ. ಈ ಪುಸ್ತಕದ ಪ್ರಾರಂಭದಲ್ಲೇ ಅದರ ವರ್ಣನೆ ಇದೆ. ೧೭ ರಂದು ಬಾಲ ಕೂಕಾನನ್ನು ಸೇರಿಸಿ ೫೦ ಕೂಕಾಗಳನ್ನು ವಧೆ ಮಾಡಲಾಯಿತು.

ಮೂರನೆಯ ದಿನ ಸೆರೆಸಿಕ್ಕ ಉಳಿದ ಕೂಕಾಗಳನ್ನು ಗುಂಡಿಗೆ ಆಹುತಿ ನೀಡಲಾಯಿತು. ಅದರಲ್ಲಿ ಒಬ್ಬನಾದ ವಾರ್ಯಮ್‌ಸಿಂಗ್ ತುಂಬ ಕುಳ್ಳಗಿದ್ದ. ತೋಪಿನ ಬಾಯಿಂದ ಬಂದ ಗುಂಡು ಅವನಿಗೆ ತಾಕುತ್ತಿರಲಿಲ್ಲ. ಅಧಿಕಾರಿಗಳು ಅವನನ್ನು ಬಿಟ್ಟು ಬಿಡಲು ನಿರ್ಧರಿಸಿದರು. ಆದರೆ ಅದನ್ನೊಪ್ಪಬೇಕಲ್ಲ ? ಸುತ್ತಲೂ ಕಣ್ಣಾಡಿಸಿ. ಕೆಲವು ಇಟ್ಟಿಗೆಗಳನ್ನು ತಂದು, ಅದನ್ನು ನೆಲದ ಮೇಲೆ ಜೋಡಿಸಿದ. ಕೊನೆಗೆ ಅದರ ಮೇಲೆ ನಿಂತು ತನ್ನ ಆಹುತಿಯನ್ನು ತೆಗೆದುಕೊಳ್ಳುವಂತೆ ಹೇಳಿದ!

ನಾವು ಕಷ್ಟಕ್ಕೆ ಸಿದ್ಧರಾಗಿಲ್ಲದಿದ್ದರೆ-“

ಇದಾದ ಮೇಲೆ ಸರ್ಕಾರ ಕೂಕಾಗಳನ್ನು, ಅವರ ನಾಯಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಸಲಾರಂಭಿಸಿತು. ೧೮೭೨ರ ಜನವರಿ ೧೯ ರಂದು ಸದ್ಗುರು ರಾಮಸಿಂಗ್‌ರನ್ನು ಹಾಗೂ ಮುಖ್ಯರಾದ ಸುಬಾಗಳನ್ನು ಬಂಧಿಸಲಾಯಿತು.

ರಾಮಸಿಂಗ್‌ರು ಭೈಣಿಯನ್ನು ಬಿಟ್ಟು ಹೊರಡುವ ದೃಶ್ಯ ಹೃದಯ ಕರಗಿಸುವಂತಿತ್ತು.

ಸೈನ್ಯದ ಅಧಿಕಾರಿಗಳು ಬಂದು, “ನಿಮ್ಮನ್ನು ಸೆರೆಹಿಡಿಯಲಾಗಿದೆ. ನೀವು ಲೂಧಿಯಾನಾಕ್ಕೆ ಹೊರಡಬೇಕು” ಎಂದಾಗ, “ನಾನು ಇದನ್ನು ನಿರೀಕ್ಷಿಸಿಯೇ ಇದ್ದೆ” ಎಂದರು. ರಾಮಸಿಂಗ್‌.

ಹೇಗೆ ಹೋಗುವುದೆಂಬ ಪ್ರಶ್ನೆ ಬಂತು. ಆಗ ಅವರು ತಮ್ಮ ಶಿಷ್ಯರಿಗೆ ಎತ್ತಿನ ಗಾಡಿಯನ್ನು ಸಿದ್ಧಪಡಿಸುವಂತೆ ಹೇಳಿದರು. ಗಾಡಿ ಗುರುದ್ವಾರದ ಎದುರು ಬಂದು ನಿಂತಿತು. ಸದ್ಗುರು ರಾಮಸಿಂಗ್‌ರು ಹೊರಡಲು ಅನುವಾದರು.

ಅವರ ದರ್ಶನವನ್ನು ಪಡೆಯಲು ಹಳ್ಳಿಗೆ ಹಳ್ಳಿಯೇ ಸೇರಿತು. ಅಲ್ಲಿ ನೆರೆದಿದ್ದವರ ದುಃಖ ವರ್ಣಿಸಲಾಗದು. ಕೆಲವರಿಗೆ ಕಣ್ಣೀರು ಪಳಪಳನೆ ಉದುರುತ್ತಿದ್ದರೆ ಮತ್ತೆ ಕೆಲವರು ಮುಖ ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಪ್ರಭು ಶ್ರೀರಾಮಚಂದ್ರ ೧೪ ವರ್ಷ ವನವಾಸಕ್ಕೆಂದು ಹೊರಟು ನಿಂತಾಗ ಅಯೋಧ್ಯಾಪುರ ಜನರಿಗಾದ ಸ್ಥಿತಿಯಂತೆಯೇ ಆಗಿತ್ತು ಭೈಣಿಯ ಜನರ ಸ್ಥಿತಿ.

ರಾಮಸಿಂಗ್‌ರ ತಂದೆ ಜಸ್ಸಾಸಿಂಗ್‌ನ ಕಣ್ಣಲ್ಲಿ ಒಂದೇ ಸಮನೆ ಕಣ್ಣೀರು ತೊಟ್ಟಿಕ್ಕುತ್ತಿತ್ತು. ರಾಮಸಿಂಗ್‌ರ ತಮ್ಮ ಕೂಡ ಆಳುತ್ತಿದ್ದ. ಅವರು ಅವನಿಗೆ, “ದುಃಖಿಸಬೇಡ. ಪ್ರತಿಯೊಂದು ವಿಷಯಕ್ಕೂ ಬೆಲೆ ತೆರಲೇಬೇಕಾಗುತ್ತದೆ. ನಾನು ಅದೇ ರೀತಿ ಬೆಲೆ ನೀಡಲು ಹೋಗುತ್ತಿದ್ದೇನೆ. ನಾವು ಕಷ್ಟಪಡಲು ಸಿದ್ಧವಾಗಿಲ್ಲದೆ ಹೋದರೆ ನಮ್ಮ ದೇಶ, ನಮ್ಮ ನೆಚ್ಚಿನ ಪಂಜಾಬ್‌ಎಂದೆಂದಿಗೂ ದಾಸ್ಯದಲ್ಲಿರಬೇಕಾಗುತ್ತದೆ” ಎಂದರು. ಅಣ್ಣನ ಬದಲು ತಾನು ಜೈಲಿಗೆ ಹೋಗುವೆನೆಂದು ಆ ತಮ್ಮ ಮುಂದಾದ. ಆದರೆ ಅಣ್ಣ ಒಪ್ಪಿಯಾರೇ?

ಸೆರೆಮನೆಯಲ್ಲೆ ಕೊನೆ

ಮೊದಲು ರಾಮಸಿಂಗ್‌ರನ್ನು ಅಲಹಾಬಾದಿನ ಕೋಟೆಯಲ್ಲಿ ಸೆರೆಯಿಡಲಾಯಿತು. ಅದು ಪಂಜಾಬಿಗೆ ಹತ್ತಿರವಾದ್ದರಿಂದ ಅವರನ್ನು ಬರ್ಮಾದ ರಂಗೂನಿಗೆ ರವಾನಿಸಲಾಯಿತು. ಅವರ ವಿಚಾರಣೆ ನಡೆಸಿದರೆ ಗೆಲ್ಲಲಾರವೆಂಬ ಭಯದಿಂದ ಅಧಿಕಾರಿಗಳು ವಿಚಾರಣೆಯನ್ನು ನಡೆಸದೆ ಅವರನ್ನು ಸೆರೆ ಇಟ್ಟರು.

ಅಷ್ಟಕ್ಕೇ ರಾಮಸಿಂಗ್‌ರ ಚಟುವಟಿಕೆಗಳು ನಿಲ್ಲಲಿಲ್ಲ. ಜೈಲಿನಿಂದಲೇ ಪತ್ರಗಳನ್ನು ಬರೆದು ಅವರು ತಮ್ಮ ಅನುಯಾಯಿಗಳಿಗೆ ಮಾರ್ಗದರ್ಶನ ಮಾಡಿದರು. ಅವರ ಶಿಷ್ಯರು ಬರ್ಮಾದವರೆಗೂ ಹೋಗಿ ಅವರ ದರ್ಶನ ಪಡೆಯುತ್ತಿದ್ದರು. ಸರ್ಕಾರಕ್ಕೆ ಇದು ಗೊತ್ತಾಯಿತು. ರಾಮಸಿಂಗ್‌ರನ್ನು ಭೇಟಿ ಮಾಡುವ ಅವಕಾಶವನ್ನು ನಿಲ್ಲಿಸಿ, ಸೆರೆಮನೆಯ ಸುತ್ತ ಕಾವಲನ್ನು ಬಿಗಿಗೊಳಿಸಲಾಯಿತು.

ಆದರೂ ರಾಮಸಿಂಗ್‌ರ ಪತ್ರಗಳು ಹೊರಗೆ ಬರುತ್ತಿದ್ದವು. ಸೆರೆಮನೆಯ ಹೊರಭಾಗದಲ್ಲಿ ಸುಳಿದಾಡುತ್ತಿದ್ದ ಶಿಷ್ಯರಿಗೆ ರಾಮಸಿಂಗರು ಪತ್ರ ಬರೆದು ಅದನ್ನು ಕಲ್ಲು ಅಥವಾ ಮಣ್ಣಿನ ಹೆಂಟೆಗೆ ಕಟ್ಟಿ ಎಸೆಯುತ್ತಿದ್ದರು. ಶಿಷ್ಯರಿಂದಲೂ ಹೀಗೆ ಉತ್ತರ ಬರುತ್ತಿತ್ತು.

ಸರ್ಕಾರ ಕೊನೆಗೆ ಅವರನ್ನು ೧೮೭೮ರಲ್ಲಿ ರಂಗೂನ್‌ನಿಂದ ಮೆರಗಿ ಎಂಬಲ್ಲಿಗೆ ಸಾಗಿಸಿತು. ಶಿಷ್ಯರು ಅಲ್ಲಿಗೂ ಹೋಗಿ ಮುಟ್ಟಿದರು. ಸುಮಾರು ೧೪ ವರ್ಷಗಳ ಕಾಲ ಜೈಲುವಾಸವನ್ನು ಅನುಭವಿಸಿ ೧೮೮೫ ರಲ್ಲಿ ರಾಮಸಿಂಗ್‌ರು ನಿಧನ ಹೊಂದಿದರು.

ಸಾವಿರಾರು ಸಂಖ್ಯೆಯಲ್ಲಿ ರಾಮಸಿಂಗ್‌ರ ಪತ್ರಗಳು ಪಂಜಾಬನ್ನು ಸೇರುತ್ತಿದ್ದವು. ಶಿಷ್ಯರಿಗೆ ಪ್ರೇರಣೆ ನೀಡುತ್ತಿದ್ದವು. ಆ ಎಲ್ಲ ಪತ್ರಗಳಲ್ಲಿ ಅವರಿಗೆ ತಮ್ಮ ಶಿಷ್ಯರಲ್ಲಿದ್ದ ಉತ್ಕಟ ಪ್ರೀತಿ, ದೇಶದ ಮುಕ್ತಿಯ ಕುರಿತು ಅತ್ಯಂತ ಕಳಕಳಿ ಹಾಗೂ ಆಗಿನ ರಾಜಕೀಯ ಆಗುಹೋಗುಗಳ ಬಗ್ಗೆ ಅವರಿಗಿದ್ದ ತಿಳುವಳಿಕೆಗಳು ಎದ್ದು ಕಾಣುತ್ತವೆ.

ಪ್ರಬಲ ಸಾಮ್ರಾಜ್ಯ ಒಂದರ ವಿರುದ್ಧ ಧೈರ್ಯವಾಗಿ ನಿಂತರು ಸ್ವಾತಂತ್ರ್ಯ ವೀರ ಗುರು ರಾಮಸಿಂಗ್‌. ಸೆರೆಮನೆಯಲ್ಲೂ ಅವರ ಯೋಚನೆ ತಮ್ಮ ವಿಷಯವಾಗಿ ಅಲ್ಲ – ದೇಶದ ಕಲ್ಯಾಣಕ್ಕಾಗಿ. ಧರ್ಮಗುರುಗಳಾದ ರಾಮಸಿಂಗ್‌ರು ತಮ್ಮ ಶಿಷ್ಯರು ಒಳ್ಳೆಯ ನಡತೆಯವರಾಗಬೇಕು ಎಂದು ದಾರಿ ತೋರಿಸಿದರು. ಜೊತೆಗೇ ನಾಡಿಗಾಗಿ ಸರ್ವತ್ಯಾಗ ಮಾಡುವುದು ಅಗತ್ಯ ಎಂಬುದಕ್ಕೆ ಮೇಲ್ಪಂಕ್ತಿಯಾದರು.