ನಾಗಸ್ವರ ನಮ್ಮ ದಕ್ಷಿಣ ಭಾರತದ ಎಲ್ಲಾ ಧಾರ್ಮಿಕ, ಸಾಮಾಜಿಕ ಸಮಾರಂಭಗಳಲ್ಲಿಯೂ ಅಗತ್ಯವಾಗಿ ಕೇಳಿ ಬರುವ ಶುಭಪ್ರದವಾದ ಮಂಗಳವಾದ್ಯ. ಈ ವಾದ್ಯ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬಂದ ಹಿರಿಯ ಕಲಾವಿದರ ಸಾಲಿಗೆ ಸೇರುವವರು ರಾಮಸ್ವಾಮಪ್ಪ ಸಂಪಂಗಪ್ಪ ಇವರ ಜನನ ೧೮೮೪ರಲ್ಲಿ ಬೆಂಗಳೂರಿನಲ್ಲಿ.

ಅಲಸೂರು ಪೇಟೆಯ ಚಿಕ್ಕವೆಂಕಟರಮಣಪ್ಪನವರಲ್ಲಿ ಮೊದಲ ಶಿಕ್ಷಣ ಪಡೆದು ನಂತರ ಘನ ವಿದ್ವಾಂಸರೆಂಬ ಖ್ಯಾತಿಗೆ ಭಾಜನರಾಗಿದ್ದ ರಾಘವಯ್ಯನಾಯ್ಡ ಅವರಿಂದ ಉನ್ನತ ಶಿಕ್ಷಣ ಪಡೆದರು. ತಿರುಚಿನಾಪಳ್ಳಿಯ ಪ್ರಸಿದ್ಧ ವಿದ್ವಾಂಸ ರಾಜಾನಾಯ್ಡು ಅವರಲ್ಲಿ ಇನ್ನೂ ಹೆಚ್ಚಿನ ಅಭ್ಯಾಸ ಮಾಡಿದುದರ ಜೊತೆಗೆ ವಿದ್ವಾನ್‌ ಬಾಲಕೃಷ್ಣಅಯ್ಯರ್ ಅವರಲ್ಲಿ ಸಂಗೀತ ಶಿಕ್ಷಣವನ್ನು ಪಡೆದು ನಾಗಸ್ವರ ವಾದನದಲ್ಲಿ ವಿಶಿಷ್ಠತೆಯನ್ನು ಸಾಧಿಸಿದರು.

ಉತ್ತಮ ಗುರುವಾಗಿ ಇವರು ತರಬೇತಿ ನೀಡಿದ್ದ ಶಿಷ್ಯರಲ್ಲನೇಕರು ರಾಜಮಹೇಂದ್ರಿ, ರಂಗಾಪುರ, ಕೃಷ್ಣಗಿರಿ, ಪಾಂಡಿಚೇರಿ ಮುಂತಾದ ನೆರೆ ರಾಜ್ಯಗಳ ಸ್ಥಳಗಳಲ್ಲಿಯೂ, ನಮ್ಮ ನಾಡಿನ ಹಲವೆಡೆಯಲ್ಲಿಯೂ ವ್ಯಾಪಕವಾಗಿ ನೆಲೆಸಿ ಗುರುಗಳ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ. ಈ ಮಂಗಳ ವಾದ್ಯಕಲೆಯ ಪೋಷಣೆ ಮತ್ತು ಪ್ರಚಾರಕ್ಕಾಗಿ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ೧೯೭೩-೭೪ರ ಸಾಲಿನಲ್ಲಿ ಇವರನ್ನು ಸನ್ಮಾನಿಸಿತು.