“ಯಾವ ಚಿನ್ನದ ದೋಣಿಯು ಬಹುಕಾಲ ಹೊಡೆದಾಡಿ ಬಿರುಗಾಳಿಯ ಕೈಯಿಂದ ಪಾರಾಯಿತೋ ಆ ದೋಣಿಯು ತೀರದ ಬಂಡೆಗೆ ತಗುಲಿತೋ ಇಲ್ಲವೋ ಕ್ಷಣಮಾತ್ರದಲ್ಲಿ ಎರಡು ತುಂಡಾಗಿ ಒಡೆದುಹೋಯಿತು”[1] ಹೀಗೆ ಹೇಳುತ್ತಾರೆ ಕವಿ ರವೀಂದ್ರರು, ರಾಮಾಯಣದ ಉತ್ತರಕಾಂಡದಲ್ಲಿ ಅತ್ಯಂತ ದಾರುಣವಾದ ಸೀತಾಪರಿತ್ಯಾಗ ಸಂದರ್ಭವನ್ನು ಕುರಿತು. ಆಜನ್ಮ ದುಃಖಿನಿಯಾದ ಸೀತಾದೇವಿಗೆ ಒದಗಿದ ಪಾಡು ಇಂಥದು. ಹದಿಮೂರು ವರ್ಷಗಳ ವನವಾಸದ ಹಾಗೂ ಒಂದು ವರ್ಷದ ರಾಕ್ಷಸ ಸೆರೆಯ ಸಂಕಟದ ತೆರೆಗಳ ಮೇಲೆ ಹೊಯ್ದಾಡಿ, ಬಿರುಗಾಳಿಯ ಕೈಯಿಂದ ಪಾರಾಗಿ ಇನ್ನೇನು ಪ್ರಿಯಸಮಾಗಮದ ಸುಖದ ತೀರವನ್ನು ಈ ಚಿನ್ನದ ದೋಣಿ ತಲುಪಿತೋ ಇಲ್ಲವೋ ಎನ್ನುವಷ್ಟರಲ್ಲಿಯೇ ಬಂಡೆಯೊಂದಕ್ಕೆ ಬಡಿದು ಚೂರಾಯಿತು. ಸುಖದ ತೀರವನ್ನು ತಲುಪುತ್ತಲೇ ಈ ಅನರ್ಥಕ್ಕೆ ಕಾರಣವೇನಿರಬಹುದು ಎಂದು ಯೋಚಿಸಿದಾಗ, ಜನಜನಿತವಾದ ರಾಮಾಯಣದ ಕತೆಯನ್ನು ಕೇಳಿರುವ ಬಹು ಮಂದಿಯ ಮುಂದೆ ಬಂದು ನಿಲ್ಲುತ್ತದೆ ರಜಕನೊಬ್ಬನ ಪಾತ್ರ!

ಇವನಾವನು ಈ ರಜಕ? ಇವನು ಎಲ್ಲಿಂದ ಬಂದ? -ಎಂದು ಪರಿಶೀಲಿಸಿದರೆ ವಾಲ್ಮೀಕಿ ರಾಮಾಯಣದ ಉತ್ತರಕಾಂಡದ ಸೀತಾಪರಿತ್ಯಾಗದ ಕಥೆಯಲ್ಲಿ ಇವನಿಲ್ಲವೇ ಇಲ್ಲ! ಹಾಗೆ ನೋಡಿದರೆ ಸೀತಾಪರಿತ್ಯಾಗದ ಭಾಗವನ್ನೊಳಗೊಳ್ಳುವ ‘ಉತ್ತರಕಾಂಡ’ವೇ ಮಹರ್ಷಿ ವಾಲ್ಮೀಕಿಗಳಿಂದ ರಚಿತವಾದುದಲ್ಲ, ಅದು ಅನಂತರ ಯಾರೋ ಬರೆದು ಸೇರಿಸಿದ್ದು ಎಂದು ವಿದ್ವಾಂಸರನೇಕರ ಏಕಾಭಿಪ್ರಾಯ.[2] ಆದರೂ ಉತ್ತರಕಾಂಡದ ಕಥೆ ಕವಿಗಳ ಪ್ರತಿಭೆಯನ್ನು, ವಿಮರ್ಶಕರ ಬುದ್ಧಿಯನ್ನು ಕೆಣಕಿದೆ. ಕಾಳಿದಾಸನಿಂದ ಹಿಡಿದು ಮುದ್ದಣನ ತನಕ ಆ ವಸ್ತುವಿನ ರಮ್ಯವೇದನೆಗೆ ಮನ ಸೋಲದವರಿಲ್ಲ. ಹೀಗಾಗಿ ಈ ಭಾಗ ಕವಿಗಳಿಂದ ಹಾಗೂ ಪುರಾಣ ಕರ್ತೃಗಳಿಂದ ಕಾಲದಿಂದ ಕಾಲಕ್ಕೆ ಬದಲಾಯಿಸುತ್ತ ಬೆಳೆಯುತ್ತ ಬಂದಿದೆ. ಈ ಬೆಳವಣಿಗೆಯಲ್ಲಿ, ಸೀತಾಪರಿತ್ಯಾಗಕ್ಕೆ ನಿಮಿತ್ತನಾದ ರಜಕನ ಪಾತ್ರ ಬಂದು ಸೇರಿಕೊಂಡ ವಿಷಯವೂ ಸ್ವಾರಸ್ಯವಾಗಿದೆ.

ರಾಮಾಯಣದ ಉತ್ತರಕಾಂಡದಲ್ಲಿ ಈ ಭಾಗದ ಕಥೆ ಹೀಗಿದೆ: ಆಯೋಧ್ಯಾಪತಿಯಾದ ರಾಜಾರಾಮನು ಒಂದು ದಿನ ಸರಸಗೋಷ್ಠಿಯಲ್ಲಿರುವಾಗ ಭದ್ರ ಎನ್ನುವ ತನ್ನ ಗೂಢಚಾರನನ್ನು ಈ ರೀತಿ ಕೇಳುತ್ತಾನೆ: “ನನ್ನನ್ನು ಆಶ್ರಯಿಸಿರುವ ಪೌರರು, ಸೀತೆಯನ್ನು ಕುರಿತು, ಭರತನನ್ನು ಕುರಿತು, ಶತ್ರುಘ್ನನನ್ನು ಕುರಿತು, ತಾಯಿ ಕೈಕೇಯಿಯನ್ನು ಕುರಿತು ಏನೆಂದು ಮಾತನಾಡುತ್ತಾರೆ. ಹೇಳು”- ಎಂದು. ಆಗ ಭದ್ರ ಹೇಳುತ್ತಾನೆ: “ಜನ ಹೇಳುತ್ತಾರೆ, ರಾಮನೇನೋ ಸೇತುಬಂಧ, ರಾವಣವಧ ಇತ್ಯಾದಿ ಬಹು ದುಷ್ಕರವಾದ ಕೆಲಸಗಳನ್ನು ಮಾಡಿದ; ಆದರೆ ಅಸಮಾಧಾನವನ್ನು ಹಿಂದಿಟ್ಟು ಸೀತೆಯನ್ನು ಮತ್ತೆ ತನ್ನ ಅರಮನೆಗೆ ತಂದನು. ರಾವಣನ ತೊಡೆಯನ್ನೇರಿದ ಸೀತೆಯನ್ನು ಅವನು ಹೇಗೆ ತಾನೆ ಸ್ವೀಕರಿಸಿದನೋ. ನಾವು ಕೂಡ ಹೆಂಡತಿಯರು ಏನು ಮಾಡಿದರೂ ಅದನ್ನು ಸಹಿಸಿಕೊಳ್ಳಬೇಕಾಗುತ್ತದೆ. ರಾಜನು ಹೇಗೆ ನಡೆದುಕೊಳ್ಳುತ್ತಾನೊ, ಪ್ರಜೆಗಳೂ ಅದನ್ನೆ ಅನುಸರಿಸುತ್ತಾರೆ. ಹೀಗೆ ಬಹು ವಿಧವಾಗಿ ಜನರು ನಗರಗಳಲ್ಲಿ ಗ್ರಾಮಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.”[3] ಈ ಮಾತನ್ನು ಕೇಳಿ ಶ್ರೀರಾಮನು ಸೀತೆಯನ್ನು ಪರಿತ್ಯಜಿಸುವ  ನಿರ್ಧಾರವನ್ನು ಹಿಂದೆ ಮುಂದೆ ನೋಡದೆ ಕೈಕೊಳ್ಳುತ್ತಾನೆ.

ಇದು ಉತ್ತರಕಾಂಡದ ಸಂಗತಿ. ‘ರಘವಂಶ’ವನ್ನು ಬರೆದ ಕಾಳಿದಾಸನೂ ಇದನ್ನೇ ಸಂಗ್ರಹಿಸಿ ಹೇಳಿದ್ದಾನೆ. ಇಲ್ಲಿ ಮುಖ್ಯವಾದದ್ದು ಜನಗಳ ಮಾತು. ಸೀತೆಯ ಶೀಲವನ್ನು ಕುರಿತು, ರಾಮನ ವರ್ತನೆಯನ್ನು ಕುರಿತು ಹೀಗೆ ಮಾತಾಡಿದವರು ಎಷ್ಟು ಜನವೋ; ಅವರ ನಾಮ ರೂಪ ಕುಲಗೋತ್ರಗಳೇನೋ ತಿಳಿಯದು. ರಾವಣ ಗೃಹವಾಸದಲ್ಲಿದ್ದ ಸೀತೆಯನ್ನು ಕುರಿತ ಅಸಮಾಧಾನವನ್ನು, ರಾಮ ಹಿಂದಕ್ಕೆ ಹಾಕಿ ಮತ್ತೆ ತನ್ನ ಮನೆಗೆ ತಂದನೆಂಬುದು, ಬಹುವಿಧವಾಗಿ ಮಾತನಾಡಿಕೊಳ್ಳುವ ಆ ಪೌರರ ಮಾತಿನ ಸಾರ. ಆದರೆ ಶ್ರೀರಾಮನು ಸೀತೆಯನ್ನು ಅಗ್ನಿವಿಶುದ್ಧಿಯ ಮೂಲಕವಲ್ಲವೆ ಸ್ವೀಕರಿಸಿದ್ದು? ಅದು ಅಯೋಧ್ಯೆಯ ಜನಕ್ಕೆ ಗೊತ್ತಿರಲಿಲ್ಲವೆ? ಒಂದು ವೇಳೆ ಗೊತ್ತಿದ್ದರೂ ಜನ ಹೀಗೆ ಮಾತನಾಡುವುದು ಉಚಿತವೆ? ಈ ಸಮಸ್ಯೆಗಳು ಭವಭೂತಿಯನ್ನು ಕಾಡಿವೆ. ಆತ ತನ್ನ ‘ಉತ್ತರ ರಾಮಚರಿತೆ’ಯಲ್ಲಿ ಈ ಜನಾಭಿಪ್ರಾಯದ ಹಿಂದಿನ ಸಂಗತಿ ಏನಿರಬಹುದು ಎಂಬುದಕ್ಕೆ ಬೇರೆಯ ಕಾರಣವನ್ನು ಕಲ್ಪಿಸಿದ್ದಾನೆ. ಅದು ಹೀಗೆ: ಜನಗಳಿಗೂ ಗೊತ್ತು, ಶ್ರೀರಾಮನು ಸೀತೆಯನ್ನು ಅಗ್ನಿಪರೀಕ್ಷೆಯ ಮೂಲಕ ತಂದನೆಂಬುದು. ಆದರೆ ಆ ಅಗ್ನಿದಿವ್ಯ ನಡೆದದ್ದು ದೂರದ ಲಂಕೆಯಲ್ಲಿ: ಅಯೋಧ್ಯೆಯ ಜನಕ್ಕೆ ಅದು ಕೇವಲ ಸುದ್ದಿ ಮಾತ್ರ; ಯಾರಿಂದಲೋ ಕೇಳಿದ ವರದಿ. ಹೀಗಾಗಿ ದೂರದ ಆ ಲಂಕೆಯಲ್ಲಿ ನಡೆದ ಈ ಘಟನೆ ಎಷ್ಟರ ಮಟ್ಟಿಗೆ ನಿಜವೋ ಎಂದು ಈ ಜನಕ್ಕೆ ಶಂಕೆ. ಭವಭೂತಿಯ ಈ ಮಾರ್ಪಾಡಿನಿಂದ ಸ್ಪಷ್ಟವಾಗುವುದಿಷ್ಟು. ಒಟ್ಟಿನಲ್ಲಿ ರಾಮನ ಕಾಲದ ಜನಕ್ಕೇ ತಮ್ಮ ರಾಜಾರಾಮನ ಪತ್ನಿಯ ಶೀಲದ ಬಗ್ಗೆ ಸಂದೇಹ. ಲಂಕೆಯಲ್ಲಿ ನಡೆದಂಥ ಒಂದು ಅಗ್ನಿ ಪರೀಕ್ಷೆಯ ದ್ವಿತೀಯ ಪ್ರದರ್ಶನವೊಂದು ತಮ್ಮ ಕಣ್ಣೆದುರಿಗೇ ಯಾಕೆ ನಡೆಯಬಾರದು ಎಂಬ ಚಪಲ ಈ ಜನಕ್ಕೆ! ಜನ ಯಾವಾಗಲೂ ಜನವೇ! ಹೀಗೆ ಸೀತೆಯ ಅಗ್ನಿವಿಶುದ್ಧಿಯನ್ನು ಶಂಕಿಸಿದ ಜನ ಸೀತೆಯ ಚಾರಿತ್ರ್ಯವನ್ನೇ ಶಂಕಿಸಿದಂತಾಯಿತು.

ರಾಮಾಯಣದ ಉತ್ತರ ಕಾಂಡದಿಂದ ಹಿಡಿದು ಭವಭೂತಿಯ ತನಕವೂ ಈ ಭಾಗದ ಕಥೆಯಲ್ಲಿ ಕೇವಲ ಜನಾಪವಾದದ ಮಾತು ಬರುತ್ತದೆ. ಹೀಗಾಗಿ ಇಲ್ಲೆಲ್ಲಾ ರಜಕನ ವಿಷಯವೇ ಇಲ್ಲ. ಅಗಸನೊಬ್ಬನ ಪ್ರವೇಶವಾದುದು ಪುರಾಣ ಕರ್ತೃಗಳಿಂದ. ಪದ್ಮಪುರಾಣ, ಆನಂದ ರಾಮಾಯಣ, ಸಂಸ್ಕೃತ ಜೈಮಿನಿ ಭಾರತ ಮುಂತಾದ ಉತ್ತರಕಾಲೀನ ಗ್ರಂಥಗಳಲ್ಲಿ ಶ್ರೀರಾಮನು ಸೀತೆಯನ್ನು ಪರಿತ್ಯಜಿಸಲು ಕಾರಣವಾದುದು ‘ಜನಾಪವಾದ’ವೆಂಬ ಅನಿರ್ದಿಷ್ಟ ರೂಪದಿಂದ, ಅಗಸನ ಮಾತೆಂಬ ನಿರ್ದಿಷ್ಟ ವ್ಯಕ್ತಿಯ ಅಭಿಪ್ರಾಯದ ರೂಪವನ್ನು ತಾಳಿತು. ಅಂತೂ ನಮ್ಮ ಪುರಾಣಕರ್ತರು ಅಗಸನೊಬ್ಬನನ್ನು ನಿರ್ಮಿಸಿ ಜನಾಪವಾದದ ಮೈಲಿಗೆಯ ಹೊರೆಯನ್ನು ಅವನ ಬೆನ್ನಿನ ಮೇಲೆ ಹೇರಿ ಅವನನ್ನು ಪ್ರಖ್ಯಾತನನ್ನಾಗಿ ಮಾಡಿದರು. ಸರಿ, ಅನಂತರ ಬಂದ ಕವಿಗಳು ಹಿಂಬಾಲಿಸಿದರು ಈ ಅಗಸನನ್ನು!

ಈ ರಜಕನ ಕತೆಯೂ ಸ್ವಾರಸ್ಯವಾಗಿದೆ. ಅಗಸನೊಬ್ಬನ ಹೆಂಡತಿ ಮುನಿಸಿಕೊಂಡು ತೌರುಮನೆಗೆ ಹೋದಳು. ಹೀಗೆ ಹೇಳದೆ ಬಂದ ಅವಳ ಚಂಡಿತನಕ್ಕೆ ಅವಳ ತಾಯ್ ತಂದೆಯರು ಹಿಂದಕ್ಕೆ ಕರೆದುಕೊಂಡು ಬಂದು ಅಳಿಯನನ್ನು ಒಪ್ಪಿಸಿಕೋ ಎಂದು ಕೇಳಿಕೊಂಡರು. ಆದರೆ ಮುಳಿದ ಅಳಿಯ ಅರಚಿದ: ಬಿಟ್ಟ ಹೆಂಡತಿಯನ್ನು ಮತ್ತೆ ಕೂಡಿಕೊಳ್ಳಲು ನಾನೇನೂ ಶ್ರೀರಾಮನಲ್ಲ -ಎಂದು.[4] ಜನಾಭಿಪ್ರಾಯದ ಸಂಗ್ರಹಣಾರ್ಥವಾಗಿ ಸುಳಿಯುತ್ತಿದ್ದ ರಾಜದೂತನೊಬ್ಬನ ಕಿವಿಗೆ ಈ ಮಾತು ಕೇಳಿಸಿತು. ಆತ ಆ ಸುದ್ದಿಯನ್ನು ತಂದ; ರಾಮನ ಕಿವಿಯಲ್ಲಿ ಊದಿದ. ರಾಮನಿಗೆ ಕಸಿವಿಸಿಯಾಯಿತು. ಕೂಡಲೇ ನಿರ್ಧರಿಸಿದ, ಸೀತೆಯನ್ನು ಈಗಲೆ ಬಿಡುವುದು ಉಚಿತವೆಂದು. ತನ್ನ ತಮ್ಮಂದಿರು ಸೀತೆಯ ಪರವಾಗಿ ವಾದಿಸಿ ಬೋಧಿಸಿ ಬಗೆಬಗೆಯಾಗಿ ಬೇಡಿಕೊಂಡರೂ ಈ ಸೀತಾಪತಿ ಕೇಳಲೇ ಇಲ್ಲ. ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿಯೇ ಬಿಟ್ಟ.[5] ಈ ಸೀತಾಪರಿತ್ಯಾಗದ ಕಥಾಸರಣಿಯನ್ನು ಗಮನಿಸಿದರೆ ಅನ್ನಿಸುವುದಿಷ್ಟು: ಉತ್ತರಕಾಂಡದಿಂದ ಹಿಡಿದು ಭವಭೂತಿಯ ತನಕ ಬಂದ ರಾಮ ಜನಾಪವಾದದ ಕೊಳ್ಳದಲ್ಲಿ ಬಿದ್ದರೆ, ಅನಂತರದ ಕತೆಗಳಲ್ಲಿ ಬರುವ ರಾಮ ಆಗಸನ ಹಳ್ಳಕ್ಕೆ ಬಿದ್ದನು!

ಶ್ರೀರಾಮನ ಈ ವರ್ತನೆಗೆ ಪ್ರಚೋದಕವಾಗಿ ಹಿನ್ನೆಲೆಯಾದ ಜನಸಮೂಹದಲ್ಲಿ ರಜಕನ ಪಾತ್ರ ಬಂದದ್ದು ಇತ್ತೀಚೆಗೆ. ಮೊದಮೊದಲು ರಾವಣನ ಸ್ಪರ್ಶದಿಂದ ಕಳಂಕಿತಳಾದಳೆಂದು ಸೀತೆಯ ಚಾರಿತ್ರ್ಯವನ್ನು ಸಂದೇಹಿಸಿದ, ಅಗ್ನಿ ವಿಶುದ್ಧಿಯನ್ನೇ ಶಂಕಿಸಿದ, ಜನಾಪವಾದ, ಕಡೆಗೆ ಅಗಸನೊಬ್ಬನ ಕತೆಯಾಗಿ ರೂಪು ತಾಳಬೇಕಾದರೆ ಸಾಕಷ್ಟು ವಿಚಾರ ಘರ್ಷಣೆಯೂ, ಕಾಲವೂ, ಕಳೆದಿರಬೇಕು. ಅನಿರ್ದಿಷ್ಟ ಜನಸಮೂಹದ ಮಾತು ಕ್ರಮೇಣ ವ್ಯಕ್ತಿಯೊಬ್ಬನಾದ ರಜಕನ ಮಾತಾಗಿ ಪರಿಣಮಿಸಬೇಕಾದರೆ ಕಾರಣ ಬಹುಶಃ ಹೀಗಿರಬೇಕು: ರಾಮನ ಕಾಲವೆಂದರೆ ಅದೊಂದು ಪುಣ್ಯ ಯುಗ. ಅಂಥ ಧರ್ಮಾತ್ಮನಾದ ಶ್ರೀರಾಮನ ಕಾಲದ ಜನರು ಬಹು ಧರ್ಮಾನುರಾಗಿಗಳೂ, ಸಜ್ಜನರೂ ಆಗಿಯೇ ಇದ್ದಿರಬೇಕು ಎಂದು ಬಹು ಮಂದಿಯ ಕಲ್ಪನೆ.[6] ಆದರೆ ಅಂಥ ರಾಮನ ಕಾಲದ ಜನವೇ ಸೀತೆಯ ಚಾರಿತ್ರ್ಯವನ್ನು ಶಂಕಿಸಿ, ಸೀತಾಪರಿತ್ಯಾಗದಂತಹ ದಾರುಣ ಘಟನೆಗೆ ಕಾರಣರಾದರೆಂದರೆ ಜನತೆಗೆ ಎಂಥ ಅಪಕೀರ್ತಿ. ಅದುದರಿಂದ ಅಂದಿನ ಜನ ಸಮಷ್ಟಿಗೇ ಇಂಥ ಅಪವಾದದ ಮಾಲಿನ್ಯವನ್ನು ಆರೋಪಿಸುವುದಕ್ಕಿಂತ ಯಾವನೋ ಒಬ್ಬ ವ್ಯಕ್ತಿ, ಎಂಥದೋ ಒಂದು ತಲೆಕೆಟ್ಟ ಘಳಿಗೆಯಲ್ಲಿ ಇಂಥದೊಂದು ಅನುಚಿತವಾದ ಮಾತನ್ನಾಡಿದನೆಂದರೆ ಅದು ಹೆಚ್ಚು ಸಂಭವನೀಯವೆನ್ನಿ ಸುವುದಲ್ಲವೆ ಎಂದು ಅನ್ನಿಸಿರಬೇಕು ಪುರಾಣಕರ್ತರಿಗೆ.[7] ಹೀಗೆ ಹೊಳೆದದ್ದು, ಹಾಗೆ ರಾಮನ ಕಾಲದಲ್ಲಿ ಅಂಥ ಮಾತನಾಡಬೇಕಾದರೆ, ಅಂಥವನು ಉತ್ತಮ ಕುಲಜನಾಗಲೀ ಉತ್ತಮ ಸಂಸ್ಕಾರದವನಾಗಲೀ ಆಗಿರಲಾರನೆಂಬ ವಿಚಾರಕ್ಕೆ ಬಂದು, ಕಡೆಗೆ ಅಗಸನೊಬ್ಬನ ಪಾತ್ರ ನಿರ್ಮಾಣವಾಗಿರಬೇಕು. ಹೀಗಿಲ್ಲದಿದ್ದ ಪಕ್ಷದಲ್ಲಿ ಬೇರೆ ಯಾರನ್ನಾದರೂ ಅವರು ಹೆಸರಿಸುತ್ತಿರಲಿಲ್ಲವೆ?[8] ಕವಿ ಲಕ್ಷ್ಮೀಶನಂತೂ “ಮಡಿವಾಳಿ ಮಲಿನಮಂ ತೊಳೆವನಾಗಿ ಕಾಳುಗೆಡೆದಂ” [೧೮-೪೫] -ಎಂದು ಗೂಢಚಾರನ ಬಾಯಲ್ಲಿ ಹೇಳಿಸಿದ್ದಾರೆ. ಸದಾ ಮಾಲಿನ್ಯದ ಸಂಸರ್ಗದಲ್ಲಿ ಬದುಕುವ ವ್ಯಕ್ತಿ ಇನ್ನೆಂಥ ಮಾತನ್ನು ಆಡಿಯಾನು; ರಜಕನೊಬ್ಬನು ಹೀಗೆ ಅಡಿದುದು ಸಹಜವೇ -ಎಂದು ಲಕ್ಷ್ಮೀಶನ ಅಭಿಪ್ರಾಯ. ಇದು ಹೇಗೇ ಇರಲಿ, ರಾಮನ ಕಾಲದ ಜನದ ಮರ್ಯಾದೆಯನ್ನು ಉಳಿಸಲು ಹೋಗಿ ನಮ್ಮ ಪುರಾಣಕರ್ತರು ರಜಕನನ್ನು ತಂದರು; ಆದರೆ ರಾಮನನ್ನು ಕೊಂದರು.

ಇದು ಹೇಗೆ ಎನ್ನುವಿರಾ? ಶ್ರೀರಾಮನು ತನ್ನ ರಾಜ್ಯದ ಬಹುಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಸೀತೆಯನ್ನು ಪರಿತ್ಯಜಿಸಿದನೆನ್ನುವುದು, ಕೇವಲ ಯಾವನೋ ಒಬ್ಬ ರಜಕನ ಮಾತಿಗೆ ಬೆಲೆಕೊಟ್ಟು ಸೀತೆಯನ್ನು ಬಿಟ್ಟನೆಂಬುದಕ್ಕಿಂತ ಹೆಚ್ಚು ಸಮರ್ಥನೀಯವಾದ ವಿಚಾರ. ಸಮಸ್ತ ಅಯೋಧ್ಯೆಯ ಹಾಗೂ ಜನಪದಗಳ ಜನ ಸೀತೆಯ ಚಾರಿತ್ರ್ಯವನ್ನು ಶಂಕಿಸಿದ್ದರಿಂದ, ಪ್ರಜಾವತ್ಸಲನಾದ ಶ್ರೀರಾಮ, ತನ್ನ ಪ್ರಾಣಪ್ರಿಯೆಯನ್ನು ಬಿಡಲು ಸಿದ್ಧನಾಗಿ, ಪ್ರಜೆಗಳ ಮಾತನ್ನು ಗೌರವಿಸಿದ ಎನ್ನೋಣ. ಆದರೆ ಅಗಸನೊಬ್ಬನ, ಅದೂ ಅಂದಿನ ಸಾಂಸಾರಿಕ ಕಲಹವೊಂದರ ಅವ್ಯವಸ್ಥಿತ ಮನಃಸ್ಥಿತಿಯಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡಿದ ಅಗಸನೊಬ್ಬನ, ಮಾತನ್ನು ಶ್ರೀರಾಮನು ಯಾವಾಗ ವಿಶೇಷವಾಗಿ ಗೌರವಿಸಿದನೋ, ಆಗ ಆತನಿಗೆ ಪೂರ್ವಾಪರ ವಿವೇಚನೆಯೇ ಹೋಯಿತೆಂದು ಹೇಳಬಹುದು. ಹೀಗಾಗಿ ಅಗಸನ ಮಾತನ್ನು ವೇದವಾಕ್ಯವೆಂದು ಭಾವಿಸಿ, ತಮ್ಮಂದಿರ ಸಲಹೆಗಳನ್ನು ಕಡೆಗಣಿಸಿ, ಅಗ್ನಿ ಶುದ್ಧಳಾದ ತನ್ನ  ಮಡದಿಯನ್ನು ತ್ಯಜಿಸಲು ನಿಶ್ಚಯಿಸಿದ ಪುರಾಣಗಳ ಹಾಗೂ, ಲಕ್ಷ್ಮೀಶ ಮುದ್ದಣ ಇವರ ಶ್ರೀರಾಮನು ದಿಢೀರನೆ ಉರುಳಿ ಬಿದ್ದಿದ್ದಾನೆ. ಒಟ್ಟಿನಲ್ಲಿ ಜನಸಮಷ್ಟಿಯ ಮರ್ಯಾದೆಯನ್ನುಳಿಸಲು ಪುರಾಣಕರ್ತರು ತಂದ ಈ ರಜಕ, ಶ್ರೀರಾಮನ ಮರ್ಯಾದೆಯನ್ನು ತೆಗೆದಂತಾಯಿತು. ಈ ರಜಕನ ಪಾತ್ರವನ್ನು ತಂದದ್ದರಿಂದ ಅಯೋಧ್ಯೆಯ ಜನಸಮಷ್ಟಿಯ ಗೌರವವನ್ನುಳಿಸಿದೆವೆಂದು ಭಾವಿಸಿದ ಪುರಾಣಕಾರರಿಗೆ ತಿಳಿಯದಾಯಿತು, ಈ ಬದಲಾವಣೆಯಿಂದ ಆ ಜನಸಮಷ್ಟಿಯ ಮರ್ಯಾದೆಯೂ ಹೋಗಬಹುದೆಂಬುದು. ಶ್ರೀರಾಮನು ರಜಕನೊಬ್ಬನ ಮಾತಿಗೆ ಬೆಲೆಕೊಟ್ಟು ಸೀತೆಯನ್ನು ತ್ಯಜಿಸಿದನೆಂದು ವಾದಿಸಿದರೆ [ಯಾರಾದರೂ ವಾದಿಸುವುದೇನು; ಲಕ್ಷ್ಮೀಶ, ಮುದ್ದಣ ಇವರ ಶ್ರೀರಾಮನೆ ಈ ಬಗ್ಗೆ ವಾದಿಸುತ್ತಾನೆ] ಶ್ರೀರಾಮನ ಘನತೆಗೂ ಬುದ್ಧಿಶಕ್ತಿಗೂ ಕುಂದು; ಅಥವಾ ಶ್ರೀರಾಮನು ಈ ಅಗಸನನ್ನು ತನ್ನ ಸಮಸ್ತ ಅಯೋಧ್ಯೆಯ ಜನದ ಪ್ರತಿನಿಧಿಯನ್ನಾಗಿ ಭಾವಿಸಿ, ತನ್ಮೂಲಕ ಜನಸಮಷ್ಟಿಯ ಮಾತಿಗೆ ಬೆಲೆಕೊಟ್ಟು ಸೀತಾ ಪರಿತ್ಯಾಗಕ್ಕೆ ಮನದಂದನೆಂದರೆ, ಸಮಸ್ತ ಅಯೋಧ್ಯೆಯ ಜನರ ಗೌರವಕ್ಕೇ ಕುಂದು. ಏಕೆಂದರೆ ಬಾಯಿಗೆ ಬಂದ ಹಾಗೆ ಯಾರ ಮಾನ ಮರ್ಯಾದೆಗಳನ್ನೂ ಗಮನಿಸದೆ ಅನುಚಿತವಾಗಿ ಮಾತನಾಡಿದ ಇಂಥ ಅಗಸನೊಬ್ಬನನ್ನು ಅಂದಿನ ಜನದ ನಿಜವಾದ ಪ್ರತಿನಿಧಿ ಎಂದು ಭಾವಿಸುವುದರಿಂದ ಜನತೆಗಾಗುವ ಅವಮಾನಕ್ಕಿಂತ, ಅದೊಂದು ಅನಿರ್ದಿಷ್ಟವಾದ ಜನಾಪವಾದವೆಂದು ಭಾವಿಸುವುದು ಎಷ್ಟೋ ಕಡಮೆ ಅಪಚಾರವೆಂಬಂತೆ ತೋರುತ್ತದೆ.

ಅಂತೂ ರಜಕನೊಬ್ಬನ ಪ್ರವೇಶದಿಂದ ಎಷ್ಟೊಂದು ಪುರಾಣಕರ್ತರ ಹಾಗೂ ಕವಿಗಳ ಬುದ್ಧಿಗೆ ನಿಕಷವೇರ್ಪಟ್ಟಿದೆ! ಸೀತಾ ಪರಿತ್ಯಾಗದಂತಹ ಅತ್ಯಂತ ಸಂದಿಗ್ಧವೂ ದಾರುಣವೂ ಆದ ಈ ಪ್ರಸಂಗವೊಂದರ ಸುತ್ತ ನಮ್ಮ ಕವಿಗಳ ಪ್ರತಿಭೆ ಹೇಗೆ ಕೆಲಸ ಮಾಡಿದೆ ಎಂಬುದು ಸ್ವಾರಸ್ಯವಾದ ಸಂಗತಿ. ಇನ್ನೂ ಸೀತಾಪರಿತ್ಯಾಗದ ಈ ಪ್ರಸಂಗ, ಅದನ್ನೊಂದು ಕಾವ್ಯದಲ್ಲೋ ನಾಟಕದಲ್ಲೋ ಕಂಡರಿಸುವ ಮಹಾ ಪ್ರತಿಭಾಶಾಲಿಯನ್ನು ಎದುರು ನೋಡುತ್ತಾ ಕಾಯುತ್ತಿದೆ!

* * *


[1] ಪ್ರಾಚೀನ ಸಾಹಿತ್ಯ: ರವೀಂದ್ರನಾಥ ಠಾಕೂರ್, ಅನು: ಟಿ.ಎಸ್. ವೆಂಕಣ್ಣಯ್ಯ, ಪುಟ: ೬೦.

[2] ನಮ್ಮ ಜನತೆಯೂ ಇದನ್ನು ಒಪ್ಪಿಕೊಂಡಂತಿದೆ. ರಾಮಾಯಣ ಪಾರಾಯಣ ಮಾಡುವ ಯಾರೂ ಏಳನೆಯ ಕಾಂಡವನ್ನು ಪಾರಾಯಣ ಮಾಡುವ ಪದ್ಧತಿಯಿಲ್ಲ. ರಾಮಾಯಣ ಪಾರಾಯಣವೆಂದರೆ ಅರುಕಾಂಡದ ಪಾರಾಯಣ. ಶ್ರೀರಾಮನ ಪಟ್ಟಾಭಿಷೇಕದ ಮಂಗಳ ಮುಹೂರ್ತದಲ್ಲೇ ಕವಿ ವಾಲ್ಮೀಕಿಗಳೂ ಕಾವ್ಯದ ಫಲಶ್ರುತಿಯನ್ನು ಹೇಳಿಬಿಟ್ಟಿದ್ದಾರೆ.

[3] ಶ್ರೀಮದ್ವಾಲ್ಮೀಕಿ ರಾಮಾಯಣ: ಪ್ರಕಾಶಕರು: ನಾರಾಯಣಸ್ವಾಮಿ ಅಯ್ಯರ್, ಮದ್ರಾಸು ೧೯೩೪. ಉತ್ತರಕಾರಡ ೪೩- ಶ್ಲೋ. ೧೪ ರಿಂದ ೨೦.

[4] ಇದು ಲಕ್ಷ್ಮೀಶನಲ್ಲಿ ಬಂದಿರುವುದರ ಸಾರಾಂಶ. ಅಗಸ ಏತಕ್ಕೆ ತನ್ನ ಹೆಂಡತಿಯ ಮೇಲೆ ಮುಳಿದನೆಂಬ ವಿಚಾರವೂ ಉಳಿದೆಡೆ ಬೇರೆ ಬೇರೆಯಾಗಿದೆ:  ಪದ್ಮಪುರಾಣದ ಪ್ರಕಾರ ಆಕೆ ಪರಗೃಹಕ್ಕೆ ಹೋಗಿದ್ದಳು [ಭಾರ‍್ಯಾಮನ್ಯಗೃಹೋಷಿತಾಮ್] ಎಂಬುದು ಅಗಸನ ಕೋಪಕ್ಕೆ ಕಾರಣ. ಆನಂದ ರಾಮಾಯಣದ ಪ್ರಕಾರ ಆಕೆ ವ್ಯಭಿಚಾರಿಣಿ. ಸಂಸ್ಕೃತ ಜೈಮಿನಿ ಭಾರತದ ಪ್ರಕಾರ ಅಗಸನೇ ಹೆಂಡತಿಯ ಮೇಲೆ ಕೋಪಿಸಿಕೊಂಡು ತನ್ನ ಮನೆಯಿಂದ ಓಡಿಸಿದನು- ಎಂದಿದೆ. ಆದರೆ, ಈ ನೆಪದಲ್ಲಿ ಈ ಎಲ್ಲ ‘ರಜಕ’ರೂ ರಾಮನನ್ನು ಕುರಿತು ಮಾಡಿದ ದೂಷಣೆ ಹೆಚ್ಚು ಕಡಿಮೆ ಒಂದೇ ಆಗಿದೆ.

[5] ಸೀತಾ ಪರಿತ್ಯಾಗದ ಕಥೆ ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ’ ಅಥವಾ ‘ಪಂಪರಾಮಾಯಣ’ದಲ್ಲಿಯೂ ಬರುತ್ತದೆ. ಇಲ್ಲಿ ಸೀತೆಯ ಪರವಾದ ಶಂಕೆಯನ್ನು ತಾಳಿದವರೂ ಜನರೇ. ಅವರು ಜನಪದ ಜನ. ಅವರ ಪರವಾಗಿ ‘ಪ್ರಜೆಗಳ ಅನುಮತದಿಂ ವಿಜಯನೆಂಬ ಮಹತ್ತರಂ ಬಂದು’ ಸೀತೆಯ ಸೌಂದರ್ಯಕ್ಕಾಗಿ ಶ್ರೀರಾಮನು ವಿಚಾರಿಸದೆ ಲಂಕೆಯಿಂದ ಆಕೆಯನ್ನು ಕರೆದುತಂದದ್ದು ಕ್ರಮವೇ, ಧರ್ಮವೇ- ಎನ್ನುತ್ತಾನೆ. ಈ ರಾಮಾಯಣದ ಪ್ರಕಾರ ರಾಮ ಸೀತೆಯನ್ನು ‘ವಿಚಾರಿಸದೆ’ ತಂದನು. ಏಕೆಂದರೆ ಅಗ್ನಿ ಪ್ರವೇಶದ ವಿಷಯವೇ ಇಲ್ಲ ಅದರಲ್ಲಿ. ಹೀಗಾಗಿ ಅಲ್ಲಿ ಜನದ ಪ್ರಶ್ನೆಯೂ, ರಾಮನ ವರ್ತನೆಯೂ ಸಕಾರಣವಾಗೇ ಇದೆ. [ಪಂ. ರಾ. ಸಂ: ೯-೧೩].

[6] ಈ ಕಲ್ಪನೆಯನ್ನು ಕವಿಗಳು ಪೋಷಿಸಿದ್ದಾರೆ. ಪದ್ಮಪುರಾಣದಲ್ಲಿ ಶ್ರೀರಾಮನ ಕಾಲದ ಜನದ ಬಗ್ಗೆ ಹೀಗೆ ಹೇಳಿದೆ.

‘ನಿತ್ಯಂ ಶ್ರೀರಘುನಾಥಸ್ಯ ಪಾದಪದ್ಮ ಕಥೋತ್ಸುಕಃ|
ಕದಾಪಿ ಪರನಿಂದಾಸು ವಾಚಸ್ತೇಷಾಂಭವಂತಿನ- [ಪಾತಾಳಖಂಡ, ಭಾಗ ೧-೫-೨೫]

ಲಕ್ಷ್ಮೀಶನೂ ಜೈಮಿನಿ ಭಾರತದಲ್ಲಿ “ಸಕಲ  ಸಂಪತ್ಸಮೃದ್ಧಿಗಳಿಂ ಸ್ವಧರ್ಮದಿಂ ನಿರ್ವಿಘ್ನ ಮಾಗಿ ಸಕಲ ಪ್ರಕೃತಿ ಜಾತಿ ಚಾತುರ್ವರ್ಣ್ಯಮಂ ಬಿಡದೆ ಪೊರೆವಲ್ಲಿ” [೧೮-೧೫] ‘ಪೆಣ್ಗಂಡುಗಳೊ ಳೊರ್ವರುಂ ನಿಜಾಚಾರವಿರಹಿತರಾಗಿ ನಡೆವರಿಲ್ಲ’ [೧೫-೧೩], ಎಂದು ರಾಮರಾಜ್ಯವನ್ನು ವರ್ಣಿಸುತ್ತಾನೆ.

[7] ಭಾಗವತದಲ್ಲಿ, ಸೀತೆಯ ಬಗ್ಗೆ ಹೀಗೆ ಮಾತಾಡಿದವರು ಸಮಸ್ತ ಜನವಲ್ಲ; ಯಾರೋ ಒಬ್ಬನು  [ಕಸ್ಯಚಿತ್] ಎಂಬ ಮಾತಿದೆ. [ಭಾಗವತ; ಸ್ಕಂಧ-ಅಧ್ಯಾಯ ೧೧-ಶ್ಲೋಕ ೮]

ಈ “ಯಾರೋ ಒಬ್ಬ- ಆಮೇಲೆ ‘ಅಗಸ’ನಾಗಿ ಮಾರ್ಪಟ್ಟನೋ ಏನೋ ಉಳಿದ ಕಥೆಗಳಲ್ಲಿ.

[8] ಇತ್ಥಂ ಪಾಲಯ ತಸ್ತಸ್ಯ ಧರ್ಮೇಣ ಧರಣೀತಲಂ|
ಸಹಸ್ರಾಣಿ ವ್ಯತೀಯುರ್ವೈವರ್ಷಾಣ್ಯೇಕಾದಶ ಪ್ರಭೋಃ|
ತತ್ರನೀಚಜನಾಚ್ಛ್ರಾತ್ವಾ ಸೀತಾಯಾ ಅಪಮಾನತಾಂ|
ಸ್ವವನಿತಾಂ ರಜಕೋಕ್ತ್ಯಾತಾಂ ತತ್ವಾಜ ರಘೂದ್ವಹಃ||
[ಪದ್ಮಪುರಾಣ- ಪಾತಾಳಖಂಡ, ಭಾಗ ೧: ೫-೪೫, ೪೬]