ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣ ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊಂಡು, ಅದರ ಕುರಿತು ಹಲವಾರು ಬಗೆಯ ವಿಮರ್ಶೆ-ವಿಶ್ಲೇಷಣೆಗಳು ಇಂದಿಗೂ ನಡೆಯುತ್ತಿವೆ. ಹಾಗೆಯೇ ಭಾರತದ ಮಹಾನ್ ಕಾವ್ಯಗಳಲ್ಲಿ ಒಂದೆಂದು ಪರಿಗಣಿಸುತ್ತಾ ಬಂದಿದ್ದೇವೆ. ರಾಮಾಯಣವನ್ನು ‘ಆದಿಕಾವ್ಯ’ವೆಂದು, ಪುರಾಣವೆಂದು, ಇತಿಹಾಸವೆಂದು ಎಲ್ಲ ಜ್ಞಾನ ಮತ್ತು ವಿವೇಕದ ಗಣಿಯೆಂದು ಭಾವಿಸಿದ್ದೇವೆ. ಕಷ್ಟಕಾಲದಲ್ಲಿ ಮೊರೆಹೋಗಲು ಮಾತ್ರವಲ್ಲದೆ ದಿನವೂ ಪಾರಾಯಣ ಮಾಡಬೇಕಾದ ಕೃತಿಯೆಂದು ತಿಳಿದಿದ್ದೇವೆ. ಅದೊಂದು ಸಾಮುದಾಯಿಕ ಸಾಂಸ್ಕೃತಿಕ ಸ್ಮೃತಿಕೋಶವಾಗಿದ್ದು ಅದೊಂದು ಕಥೆ, ಆದರ್ಶ ನಡವಳಿಕೆ ಎಂದು ಅರಿತಿದ್ದೇವೆ. ರಾಮಾಯಣ ಮೂಲತಹವಾಗಿ ಆರ್ಯ ದ್ರಾವಿಡ ಸಂಘರ್ಷದ ಕಥನ ಹೇಗೆ ಆಗಿದೆಯೋ, ಹಾಗೆಯೇ ಬ್ರಾಹ್ಮಣ-ಶೂದ್ರ, ಉತ್ತರ ಭಾರತ-ದಕ್ಷಿಣ ಭಾರತ, ಭೂಮಾಲೀಕರು­-ಭೂರಹಿತರು, ವರ್ಣಗಳ ಘರ್ಷಣೆ, ಸಂಸ್ಕೃತೀಕರಣದ ವಿರುದ್ಧದ ದಂಗೆ, ಜೊತೆಗೆ ಸಂಸ್ಕೃತಿ ವಿಕಾಸದ ಅಂದಿನ ಆಧುನಿಕ-ನಾಗರೀಕ ಹಂತದ ಪ್ರತೀಕವಾಗಿ ಕಾಣುತ್ತದೆ. ನಾಗರೀಕತೆಯೆಂದು ಕರೆಯುವ ಶ್ರೀರಾಮನ ಹಂತವು ಹಾದು ಬಂದ ಸಂಸ್ಕೃತಿ ವಿನ್ಯಾಸಗಳನ್ನು ರಾವಣಾದಿಗಳ ಜೀವನ ವಿಧಾನವು ಪ್ರತಿನಿಧಿಸಿದರೆ, ವಾಲಿ-ಸುಗ್ರೀವ-ಆಂಜಿನೇಯಾದಿಗಳ ಸಂಸ್ಕೃತಿ ವಿನ್ಯಾಸಗಳು ರಾವಣಾದಿಗಳ ಜೀವನ ವಿಧಾನಕ್ಕಿಂತ ಹಿಂದಿನ ವಾನರ ವಿಕಾಸದ ಹಂತವನ್ನು ಸೂಚಿಸುತ್ತವೆ. ಹೀಗೆ ಹಲವಾರು ಹಂತದ ಸಂಸ್ಕೃತಿ ರೂಪಕಗಳು ಒಟ್ಟಿಗೇ ರಾಮಾಯಣದಲ್ಲಿ ವಿಜೃಂಭಿಸುತ್ತವೆ.

ರಾಮಾಯಣ ಮೇಲೆ ಹೇಳಿದ ಸಂಸ್ಕೃತಿಗಳ ರೂಪಕಗಳ ಜೊತೆಗೇನೇ ಕಾವ್ಯವಾಗಿ ತನ್ನ ಉತ್ಕೃಷ್ಟತೆಯನ್ನು ಸಹ ಮೆರೆದಿದೆ. ಕ್ರಿ.ಶ.೫೦೦ರ ಸುಮಾರಿಗೆ ಲಿಖಿತ ರೂಪಕ್ಕೆ ಪಾದಾರ್ಪಣೆ ಮಾಡುವುದಕ್ಕೆ ಮೊದಲೇ ಮೌಖಿಕ ಪರಂಪರೆಯಲ್ಲಿ ಹಲವು ನೂರಾರು ವರ್ಷಗಳ ಕಾಲ ಪ್ರಚಾರದಲ್ಲಿರುವುದನ್ನು ನಾವು ಕಾಣಬಹುದು. ಆರಂಭದಲ್ಲಿ ರಾಮಾಯಣ ಒಂದು ಮಹಾಕಾವ್ಯ. ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಹಲವಾರು ಮನ ಕಲಕುವ ಜೀವನ ಪ್ರಸಂಗಗಳನ್ನು ಹೆಣೆದು ಅವುಗಳ ನಡುವೆ ಸಂಯೋಜನೆ ತರುವ ಕೆಲಸವನ್ನು ಮಹಾಕಾವ್ಯದ ಮೂಲಕ ವಾಲ್ಮೀಕಿ ಮಾಡಿದ್ದಾನೆ. ಪ್ರಸಿದ್ಧ ಇತಿಹಾಸ ತಜ್ಞೆ ರೋಮಿಲಾಥಾಪರ್ ಇದೇ ಅಭಿಪ್ರಾಯವನ್ನು ಹೇಳುತ್ತಾರೆ. ‘ಪ್ರಸಿದ್ಧ ವ್ಯಕ್ತಿಗಳ ಕತೆಯೊಂದರಲ್ಲಿ ಆ ಇಡೀ ಯುಗದ ಸಾರ್ವತ್ರಿಕ ಅನುಭವಗಳೆಲ್ಲವನ್ನೂ ಜೀವಂತ ಪ್ರಸಂಗಗಳಾಗಿ ಒಟ್ಟಿಗೆ ತಂದು ಹೆಣೆಯುವುದರಲ್ಲೆ ಮಹಾಕಾವ್ಯದ ಸಾಮರ್ಥ್ಯ ಅಡಗಿದೆ’. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ರಾಮಾಯಣ ಒಂದು ಉತ್ಕೃಷ್ಟ ಕಾವ್ಯ ಎಂಬುದರಲ್ಲಿ ಸಂಶಯವಿಲ್ಲ.

ಕಾವ್ಯ ಕಟ್ಟಿದ ವಾಲ್ಮೀಕಿ ಕೆಳಜಾತಿಯಿಂದ ಆವಿರ್ಭವಿಸಿದ ಮುನಿ ಎಂಬ ಅಂಶವನ್ನು ತುಂಬಾ ಪ್ರಚಲಿತಗೊಳಿಸಲಾಗಿದೆ. ಜನಪದೀಯ ಹಾಡುಗಬ್ಬಗಳನ್ನು ಹಾಡುತ್ತಿದ್ದ ಹಾಡುಗಾರರೆಲ್ಲಾ ಸಮಾಜದ ಕೆಳವರ್ಗದಿಂದ ಬರುತ್ತಿದ್ದರು ಎಂಬ ಐತಿಹಾಸಿಕ ಹಿನ್ನೆಲೆಯನ್ನು ಗಮನಿಸಿದರೆ ವಾಲ್ಮೀಕಿಯ ಶೂದ್ರತ್ವ ಅಸಂಭವವೇನಲ್ಲ. ಆದರೆ ಈ ಕವಿಯ ಮಹಾಕಾವ್ಯದ ಕಾರ್ಯವನ್ನು ಬದಲಾಯಿಸಿ ರಾಮನನ್ನು ವಿಷ್ಣುವಿನ ಅವತಾರವೆಂಬುದಾಗಿ ಕಾವ್ಯವನ್ನು ಪುನರ್ ನಿರೂಪಿಸಿದರು. ಪುನರ್ ನಿರೂಪಣೆಗೊಂಡ ಕಾವ್ಯ ಪವಿತ್ರಗ್ರಂಥವಾಗಿ ಮಾರ್ಪಾಟಾಯಿತು. ಮಹಾಕಾವ್ಯ ಪುರಾಣವಾಗಿ ಬೆಳೆಯಿತು. ಹಾಗೆಯೇ ಜನರ ಸಾಂಸ್ಕೃತಿಕ ಜೀವನದ ಮಹತ್ವದಿಂದಾಗಿಯೇ ರಾಮಾಯಣಕ್ಕೆ ಹಲವಾರು ಅವಸ್ಥಾಂತರಗಳುಂಟಾದವು. ಈ ಹಿನ್ನೆಲೆಯಲ್ಲಿ ಮಹಾಕಾವ್ಯ ಜಾತಿ ಮತ್ತು ವರ್ಣಗಳ ಛಾಯೆಯನ್ನೊಳಗೊಂಡಿದೆ.

ಹೀಗೆ ರಾಮಾಯಣ ಮಹಾಕಾವ್ಯದ ಪಠ್ಯದ ಮೇಲೆ ಕೆಲಸ ಮಾಡುವ ಸಂದರ್ಭ(Context)ಗಳು ಬದಲಾಗಿ ವಿವಿಧ ಪಠ್ಯಗಳ ಸೃಜನತೆಗೆ ಕಾರಣವಾಯಿತು. ಅವೆಲ್ಲವುಗಳು ಅವುಗಳ ಸಂದರ್ಭಗಳಲ್ಲಿ ಮಹತ್ವವಾದವುಗಳಾದವು. ಈ ತರಹದ ಚರ್ಚೆಯನ್ನು ಪ್ರಸ್ತುತ ಸಂಕಲನದಲ್ಲಿರುವ ಹಲವಾರು ಲೇಖನಗಳು ನಮಗೆ ಮಾಹಿತಿಯನ್ನೊದಗಿಸುತ್ತವೆ.

ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯಕ್ಕೆ ಚರಿತ್ರೆಯ ಉದ್ದಕ್ಕೂ ಕಾಲದಿಂದ ಕಾಲಕ್ಕೆ ಜೋಡಿಸುತ್ತಾ ಬಂದಿದ್ದಾರೆ. ಹಾಗೆಯೇ ಆದಿಕವಿ ವಾಲ್ಮೀಕಿಯೇ ದಾಖಲಿಸುವ ಘಟನೆಗಳನ್ನು ಸೆನ್ಸಾರ್ ಮಾಡುತ್ತಲೇ ಬಂದಿದ್ದಾರೆ. ಹೀಗೆ ಮಾಡುವುದಕ್ಕೆ ಪ್ರತಿ ಆಯ್ಕೆಗಾರನಿಗೆ ಹಕ್ಕಿರುತ್ತದೆ. ಆದರೆ ಆ ಆಯ್ಕೆ ಆಯಾ ಕೃತಿಕಾರನ ಪೂರ್ವಾಗ್ರಹಗಳನ್ನು, ಪೂರ್ವ ನಿರ್ಣಯಗಳನ್ನು ಆಧರಿಸಿರುತ್ತದೆ. ಯಾವುದರ ಮೇಲೆ ಬೆಳಕು ಚೆಲ್ಲಬೇಕು, ಯಾವುದರ ಮೇಲೆ ಚೆಲ್ಲಬಾರದು ಎಂಬ ನಿರ್ಣಯದಲ್ಲಿಯೇ ಇತಿಹಾಸವನ್ನು ಪ್ರತಿ ಇತಿಹಾಸಕಾರ ಜೋಡಿಸಿಕೊಳ್ಳುತ್ತಾನೆ ಎಂದು ಇ.ಎಚ್.ಕಾರ್ ಎಂಬ ಪ್ರಸಿದ್ಧ ಇತಿಹಾಸಕಾರ ಹೇಳುತ್ತಾನೆ. ಹೀಗೆ ರಾಮಾಯಣವನ್ನು ಕಾಲದಿಂದ ಕಾಲಕ್ಕೆ ಜೋಡಿಸುತ್ತಾ ಬಂದ ಪ್ರತಿಯೊಬ್ಬರೂ ತಮ್ಮ ತಮ್ಮ ನೇರದಲ್ಲೇ ಚಿತ್ರಿಸುತ್ತಾ ಬಂದರು. ಮಧ್ಯಕಾಲೀನ ಊಳಿಗಮಾನ್ಯ ವ್ಯವಸ್ಥೆಯು ಸಹ ತನ್ನ ಅವತಾರ ಕೇಂದ್ರಿತ ಕಲ್ಟ್ ಹಾಗೂ ಭಕ್ತಿ ಪಂಥದ ಮೂಲಕ ರಾಮ ಮತ್ತು ಕೃಷ್ಣರನ್ನು ವಿಜೃಂಭಿಸಿತು. ಅದೇ ರೀತಿ ವಸಾಹತುಶಾಹಿ ಕಾಲಘಟ್ಟದಲ್ಲಿ ವಿದೇಶೀ ಆಡಳಿತವನ್ನು ವಿರೋಧಿಸಲೂ ಸಹ ರಾಮ ಮತ್ತು ಕೃಷ್ಣ ಕಲ್ಟ್‌ಗಳನ್ನು ದೇಸೀಮಾಡೆಲ್‌ಗಳಾಗಿ ಸೃಷ್ಟಿಸಿದರು. ಆ ಮುಖಾಂತರ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿ, ಅದರಲ್ಲಿ ಗೆಲುವನ್ನು ಸಹ ಪಡೆದರು.

ಸ್ವತಂತ್ರ್ಯ ಹೋರಾಟದ ಕೊನೇಘಟ್ಟ ಹಾಗೂ ಸ್ವಾತಂತ್ರ್ಯನಂತರದಲ್ಲಿ ಈ ದೇಸೀ ಮಾಡೆಲ್‌ಗಳನ್ನು (ರಾಮ, ಕೃಷ್ಣ) ಬಳಸಿ ಜಾತಿ ವ್ಯವಸ್ಥೆಯನ್ನು ಭದ್ರಗೊಳಿಸಿದರು. ಈ ಸಂದರ್ಭದಲ್ಲಿಯೇ ಅವುಗಳು ಪುರಾಣವೋ ಚರಿತ್ರೆಯೋ ಎಂಬಂತಹ ಚರ್ಚೆಗಳು ನಡೆದವು.

ಜನಾಂಗದ ಚರಿತ್ರೆಯ ಮಟ್ಟಕ್ಕೆ ಏರಿಸಲು ಹಲವರು ಪ್ರಯತ್ನಿಸಿ, ಆಧುನಿಕ ರಾಷ್ಟ್ರದ ವಿದ್ಯಮಾನಗಳನ್ನು ಇದರ ಮೂಲಕ ನಿರ್ಣಯಿಸಬೇಕೆಂಬ ಹಠ ಮಾಡಿ, ಅದರಂತೆ ಪ್ರಯತ್ನಿಸಿದ್ದು, ಆ ಸಂದರ್ಭದಲ್ಲಿ ರಾಮಾಯಣ ಮತ್ತು ಮಹಾಭಾರತಗಳೇ ಭಾರತೀಯ ಸಾಂಸ್ಕೃತಿಕ ಧಾರೆಯ ಅನನ್ಯ ಆಧಾರಗಳು (ಅಥೆಂಟಿಕ್ ಡಾಕುಮೆಂಟ್ಸ್) ಎಂದು ಹೇಳಿದ್ದು ಉಂಟು. ಹೀಗೆ ಏಕೆ ಹೇಳಿದರು ಅಂದರೆ ಕೆಲವು ವರ್ಗಗಳನ್ನು ಧಮನಿಸಿ, ಏಕಸಾಂಸ್ಕೃತಿಕ ಪಡಿಯಚ್ಚನ್ನು ನಿರ್ಮಿಸಿಲು ಪ್ರಯತ್ನಿಸಿ (ಅಧಿಕೃತ ಸಾಂಸ್ಕೃತಿಕ ಪಡಿಯಚ್ಚು) ಅದರ ವಾದವನ್ನೇ ಮಾಡಿದರು.

ಇದು ಇತಿಹಾಸವಲ್ಲದ್ದನ್ನು ಇತಿಹಾಸ ಎಂದು ಪ್ರತಿಪಾದಿಸುತ್ತಾ, ವಾಸ್ತವ ಇತಿಹಾಸಕ್ಕೆ ದ್ರೋಹಬಗೆಯುವ ಒಂದು ಬಗೆ. ವಾಸ್ತವ ಸಾಂಸ್ಕೃತಿಕ ಇತಿಹಾಸವಾಗಿ ಜೈನ, ಬೌದ್ಧ, ಶೈವ, ಬುಡಕಟ್ಟು, ನಾಸ್ತಿಕ, ವೈಷ್ಣವ, ನಾಗರ, ತಾಂತ್ರಿಕ ಪಂಥಗಳು ನಿರೀಶ್ವರವಾದಿ ಪಂಥಗಳು, ವಿಧಿವಾದ, ಹಾಗೂ ಜನಪದ ಧಾರೆಗಳು ಇದ್ದಾಗಲೂ ಒಂದನ್ನು ಮಾತ್ರ ಪ್ರಧಾನ ಸಂಸ್ಕೃತಿಕ ಧಾರೆ ಎಂದು ಕರೆದು ಮೇಲಿನವುಗಳನ್ನು ಹತ್ತಿಕ್ಕುತ್ತಾ, ಅವಮಾನಗೊಳಿಸಿದರು. ಆ ಮುಖಾಂತರ ವಾಸ್ತವ ಧಾರೆಗಳ ನಿರಾಕರಣೆಯನ್ನು ಮಾಡಿ ಧಮನಕ್ಕೊಳಪಡಿಸಿದರು. ವಾಲ್ಮೀಕಿ ರಾಮಾಯಣದ ಸಾಂಸ್ಕೃತಿಕ ಪಠ್ಯವನ್ನು ಏಕೈಕ ಮಾದರಿ (ರೋಲ್ ಮಾಡೆಲ್) ಎಂದು ಮಾಡಿದರೋ, ಇದರಿಂದ ವರ್ತಮಾನ ಜಗತ್ತಿನ ಅರ್ಥಪೂರ್ಣತೆಯನ್ನು ಕಂಡುಕೊಳ್ಳದವರು ತೀವ್ರವಾಗಿ ವಿರೋಧಿಸುತ್ತಾ, ನಿರಾಕರಿಸಿದರು. ವಾಸ್ತವವಾಗಿ ಅನನ್ಯವಾಗಿರುವ ಸಾಂಸ್ಕೃತಿಕ ಪಠ್ಯ (ರಾಮಾಯಣ) ಸಾಂಸ್ಕೃತಿಕ ಪುನರ್ ನಿರ್ಮಾಣಕ್ಕೆ ಆರ್ಗ್ಯಾನಿಕ್ ರಿಸೋರ್ಸ್ (ಸಾವಯವ ಆಕರ) ಆಗಬೇಕಾದದ್ದು, ಪರಸ್ಪರ ಸಂಘರ್ಷದ ಹಿತಾಸಕ್ತಿಯ ಕಾರಣಕ್ಕಾಗಿ ಧೂಷಣೆಗೊಳಗಾಯಿತು. ಹಾಗೆಯೇ ಆ ಪಠ್ಯದೊಂದಿಗೆ ಸಂವಾದ ಏರ್ಪಡಲಿಲ್ಲ.

ವರ್ತಮಾನದ ಸಾಂಸ್ಕೃತಿಕ ಗತಿಯೊಂದಿಗೆ ಒಂದು ಪ್ರಾಚೀನ ಸಾಂಸ್ಕೃತಿಕ ಪಠ್ಯ ಸಂವಾದ ಕಳೆದುಕೊಂಡ ತಕ್ಷಣ ಸ್ಥಾವರವಾಗುತ್ತದೆ. ಹಾಗೆಯೇ ರಾಮಾಯಣವೂ ಸ್ಥಗಿತವಾಯಿತು. ವರ್ತಮಾನದ ಆಧುನಿಕರ ಕೈಯಲ್ಲಿ ಸಿಕ್ಕಿದ್ದರೆ, ಪಠ್ಯದ ಬಗೆಗೆ ಹೇಳಿಕೊಂಡು ಪ್ರೀತಿಪಡುತ್ತಿದ್ದರು. ಘಟನೆಗಳನ್ನು ಮೆಲುಕು ಹಾಕುತ್ತಿದ್ದರು. ಒಂದು ಸಾಂಸ್ಕೃತಿಕ ಪಠ್ಯವನ್ನು ಧಾರ್ಮಿಕ ಪಠ್ಯವನ್ನಾಗಿ ಮಾಡುವ ಮುಖಾಂತರ ನಿರ್ಜೀವ ಪಠ್ಯವನ್ನಾಗಿ ಮಾಡಿದರು. ಹಾಗಾಗಿ ರಾಮಾಯಣದ ದ್ವಂದ್ವವನ್ನು ಬಿಡಿಸಿಕೊಳ್ಳಲು ಆಗಲಿಲ್ಲ.

ಪ್ರಾಚೀನ ತಪ್ಪುಗಳಿಗೆ ವರ್ತಮಾನದಲ್ಲಿ ಬೆಲೆತೆತ್ತಬೇಕಾಗಿಲ್ಲ ಎಂಬುದನ್ನು ಅರಿತಿದ್ದಕ್ಕೆ ಈಲಿಯಡ್, ಓಡಿಸ್ಸಿ, ಕ್ಯಾಲಿಬುಲಾ ಇವುಗಳು ಈಗಲೂ ಪ್ರಚಲಿತದಲ್ಲಿವೆ. ಈ ಹಿನ್ನೆಲೆಯಲ್ಲಿ;

. ವಾಲ್ಮೀಕಿ ರಾಮಾಯಣ ಎಂಬುದು ಒಂದು ಸಮುದಾಯದ ಅನುಭವ ಮೊತ್ತಗಳ ಸಂಕಥನ.

. ಅದೊಂದು ಸಾಂಸ್ಕೃತಿಕ ಕಥನವಾಗಿ ಆರಂಭವಾಗುವಾಗಲೇ ದಮನಕಾರಿ ಪ್ರವೃತ್ತಿವುಳ್ಳದ್ದಾಗಿಲ್ಲ. (ಅಪಾಯಕಾರಿ ಇನ್ಟೆನ್ಷನ್ ಇಲ್ಲ) ನಂತರದಲ್ಲಿ ಹಾಗೆ ಬಳಸಿಕೊಂಡದ್ದು,

. ಒಂದು ಇತಿಹಾಸದ ಅಲಿಖಿತ ಕಾಲಘಟ್ಟದ ಅಮೂಲ್ಯ ಮಾಹಿತಿಯನ್ನು ಪ್ರತ್ಯಕ್ಷವಾಗಿ ಪರೋಕ್ಷ ವಾಗಿ ಕೊಡುತ್ತೆ.

. ನಮಗೆ ಅದರ ಬಗೆಗೆ ವಿಶೇಷ ಮಮಕಾರವೂ ಬೇಕಾಗಿಲ್ಲ, ತಿರಸ್ಕಾರವೂ ಬೇಕಾಗಿಲ್ಲ.

ಮೇಲೆ ಹೇಳಿರುವ ವಿಧಾನಗಳಲ್ಲಿ ನಮಗೆ ಅದರ ಪ್ರವೇಶ ಸಾಧ್ಯವಾಗುವುದಾದರೆ ಕಾಲಾನಂತರದಲ್ಲಿ, ಆ ಸಾಂಸ್ಕೃತಿಕ ಪಠ್ಯದ ಮೇಲೆ ಹೇರಲ್ಪಟ್ಟ ಅವಾಸ್ತವಿಕತೆಗಳನ್ನು ತೊಳೆಯಬಹುದು. ಅವಾಸ್ತವಿಕತೆಗಳನ್ನು ತೊಳೆಯಬೇಕಾದರೆ;

. ರಾಮಾಯಣವನ್ನು ದೈವಿಕಗೊಳಿಸದೇ, ಅದರ ಪ್ರಕ್ಷಿಪ್ತಗಳನ್ನು, ಜಾತಿವರ್ಣಗಳ ಪರವಾದ ನೀತಿಗಳನ್ನು ವಿಮರ್ಶಿಸುವವರ ಮುಖಾಂತರವಾಗಿ ಅದನ್ನು ಗ್ರಹಿಸುವ ಧೈರ್ಯ ತೋರಬೇಕು.

. ಸಾಧ್ಯವಾದಷ್ಟು ವಾಲ್ಮೀಕಿ ರಾಮಾಯಣ ಹಾಗೂ ಅದರ ಪಾಠಾಂತರದ ಪಠ್ಯಗಳನ್ನು ಅಧ್ಯಯನ ಮಾಡುವ ಮುಖಾಂತರ ಸಾಧ್ಯವಾದಷ್ಟು ಮೂಲ ಪಠ್ಯವನ್ನು ಕಂಡುಕೊಳ್ಳುವುದು.

. ಮುಖಾಂತರ ನಮ್ಮ ಸಾಂಸ್ಕೃತಿಕ ಜೀವನದ ಜೀವಂತ ಬೇರುಗಳನ್ನು, ಆದಷ್ಟು ಕಂಡುಕೊಳ್ಳಲು ಪ್ರಯತ್ನಿಸುವುದು.

ವಾಲ್ಮೀಕಿ ರಾಮಾಯಣದ ಮೂಲವನ್ನು ಹುಡುಕುವಲ್ಲಿ ವಿಮರ್ಶಕರ ಕಣ್ಣಿನ ಮೂಲಕ ನೋಡುವ ಮೊದಲ ಪ್ರಯತ್ನವಾಗಬೇಕು. ಏಕೆ ವಿಮರ್ಶಕರ ಕಣ್ಣಿನಲ್ಲಿ ನೋಡಬೇಕೆಂದರೆ, ಅದಕ್ಕೊಂದು ತನ್ನ ಮೂಲದಿಂದ ಬಹಳ ದೂರ ಸಾಗಿದ ಪ್ರತಿಗಾಮಿ ಪಾತ್ರ ನಿರ್ವಹಣೆ ಬಂದೊದಗಿದೆ. ಇಷ್ಟೊಂದು ಪ್ರಭಾವಶಾಲಿಯಾಗಿರುವ ಸಾಂಸ್ಕೃತಿಕ ಪಠ್ಯವನ್ನು ಹುಸಿ ಮಮಕಾರಗಳಿಗೆ ಒಳಗಾಗದೇ ಪ್ರವೇಶಿಸುವುದಕ್ಕೆ ಇದೊಂದು ಮಾರ್ಗ. ರಾಮಾಯಣದ ಪರಿಶೀಲನೆಗೆ ಏನೇನು ಮಾರ್ಗ ಇವೆ ಎಂಬುದಕ್ಕೆ ಒಂದು ಮಾರ್ಗ.

ಆದಿಕವಿ ವಾಲ್ಮೀಕಿ ರಾಮಾಯಣ, ಜನಪದ ರಾಮಾಯಣ ಹಾಗೂ ಇತರೆ ರಾಮಾಯಣ ಕುರಿತ ಹದಿನೈದು ಲೇಖನಗಳನ್ನು ಕ್ರೋಡೀಕರಿಸಲಾಗಿದೆ. ಇದಕ್ಕೂ ಹೆಚ್ಚಿನ ಲೇಖನಗಳನ್ನು ಸಂಗ್ರಹಿಸುವ ಉದ್ದೇಶವಿಟ್ಟುಕೊಂಡು ಸಂಗ್ರಹಿಸಲಾಗಿದ್ದರೂ ಹದಿನೈದನ್ನು ಮಾತ್ರ ಪ್ರಕಟಿಸಲಾಗಿದೆ. ಕಾರಣ ಲೇಖಕರ/ಪ್ರಕಾಶರ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಅವುಗಳನ್ನು ಬಿಡಲಾಗಿದೆ. ಈ ಕಾರ್ಯಕ್ಕೆ ಪ್ರೋತ್ಸಾಹಿಸಿದ ಮಾನ್ಯ ಕುಲಸಚಿವರಾದ ಡಾ. ಹಿ.ಚಿ. ಬೋರಲಿಂಗಯ್ಯ ಹಾಗೂ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರುಗಳಿಗೆ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್, ಅಕ್ಷರ ಸಂಯೋಜಿಸಿದ ಶ್ರೀ ಕೆ. ವಿರೇಶ, ಮುದ್ರಕರಿಗೆ, ಮುಖಪುಟ ವಿನ್ಯಾಸಗಾರ ಶ್ರೀ ಕೆ.ಕೆ. ಮಕಾಳಿ ಹಾಗೂ ಸಂಗ್ರಹ ಹಾಗೂ ಪ್ರಕಟಣೆ ಸಂದರ್ಭದಲ್ಲಿ ಸಹಾಯ ಮಾಡಿದ ಡಾ. ಬಂಜಗೆರೆ ಜಯಪ್ರಕಾಶ, ಡಾ. ಬಿ. ತಾರಾಮತಿ, ಡಾ. ಕೃಷ್ಣವೇಣಿ, ಡಾ. ಗುರುಪ್ರಸಾದ್, ಶ್ರೀ ಅರುಣಕುಮಾರ ಜೋಳದಕೂಡ್ಲಿಗಿ, ಶ್ರೀ ಜಗದೀಶಕುಮಾರ ಚ.ನಾಯಕ, ಶ್ರೀ ಎ.ಡಿ. ಬಸವರಾಜ ಲೇಖನಗಳನ್ನು ಪ್ರಕಟಿಸಲು ಪರವಾನಿಗಿ ನೀಡಿದ ಲೇಖಕರು ಹಾಗೂ ಪ್ರಕಾಶಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು.

ಪ್ರೊ. ಮಂಜುನಾಥ ಬೇವಿನಕಟ್ಟಿ