ಒಟ್ಟು ರಾಮಾಯಣದ ಕತೆಯನ್ನು ಸಂಗ್ರಹವಾಗಿ ಹೇಳಬೇಕೆಂದರೆ, ಚಿಕ್ಕಮ್ಮನ ಹಠದಿಂದಾಗಿ ಸಿಂಹಾಸನ ಕಳೆದುಕೊಂಡು ಹದಿನಾಲ್ಕು ವರ್ಷ ವನವಾಸ ಹೋಗಬೇಕಾಗಿ ಬಂದ ರಾಜಕುಮಾರ, ವನವಾಸದ ಸಮಯದಲ್ಲಿ ರಾಜಕುಮಾರನ ಹೆಂಡತಿಯನ್ನು ಅಪಹರಿಸುವ ರಾಕ್ಷಸನೊಬ್ಬನ ಮೇಲೆ ತಮ್ಮ ಹಾಗೂ ಇತರ ಸ್ನೇಹಿತರೊಂದಿಗೆ ಯುದ್ಧಮಾಡಿ ಗೆದ್ದು ಹೆಂಡತಿಯನ್ನು ಮರಳಿ ಪಡೆಯುತ್ತಾನೆ. ರಾಜ್ಯಕ್ಕೆ ಹಿಂತಿರುಗಿ ಸುಖವಾಗಿ ರಾಜ್ಯಭಾರ ಮಾಡುತ್ತಾನೆ.

ಜಾತಕ ಕತೆಗಳ ಆಧಾರವನ್ನು ಇಟ್ಟುಕೊಂಡು ಹೇಳುವುದಾದರೆ ಆ ಕಾಲಘಟ್ಟದಲ್ಲಿ ಹೀಗೆ ರಾಜ್ಯ ಭ್ರಷ್ಟರಾಗುತ್ತಿದ್ದ ರಾಜಕುಮಾರರ ಕತೆಗಳು ಹಲವಾರು ಕಡೆ ಹಲವಾರು ಸಲ ನಡೆದಿವೆ. ಬುಡಕಟ್ಟಿನ ಕುಲಾಚಾರ ಮೀರಿದ ಕಾರಣಕ್ಕೆ ವನವಾಸಕ್ಕೆ ಹೋಗಬೇಕಾಗಿ ಬರುತ್ತಿದ್ದ ಪ್ರಸಂಗಗಳು ಹಲವು. ಮತ್ತೊಂದು ಮಹಾಕಾವ್ಯವಾದ ಮಹಾಭಾರತದಲ್ಲೂ ವನವಾಸದ ಪ್ರಸ್ತಾಪ ಬರುತ್ತದೆ. ಬುಡಕಟ್ಟುಗಳ ಬೆಳವಣಿಗೆಯ ಸಂದರ್ಭದಲ್ಲಿ, ಒಂದೇ ರಕ್ತ ಸಂಬಂದೀ ಗುಂಪಿನ ಕಿರಿಯ ಬಣವೊಂದು ತನ್ನ ನೆಲೆಯನ್ನು ಬಿಟ್ಟು ವನವಾಸಕ್ಕೆ ಹೋಗಿ ಅಲ್ಲಿ ನೆಲೆವಾಸವನ್ನು ಸ್ಥಾಪಿಸಿಕೊಂಡು ರಾಜ್ಯಭಾರ ಆರಂಭಿಸಿದೆ. ರಾಜ್ಯ ವಿಸ್ತರಣೆಯ ಅಂಗವಾಗಿ ನಡೆದ ಈ ವನವಾಸಗಳು ಹೊಸ ರಾಜ ವಂಶಾವಳಿಗಳು ಸ್ಥಾಪನೆಯಾಗುವುದರಲ್ಲಿ ಮುಕ್ತಾಯವಾಗುತ್ತಿದ್ದವು.

ಸಾಮ್ರಾಟ ಅಶೋಕನ ಜೀವನ ಕಾಲದಲ್ಲೂ ವನವಾಸದ ಇಂತಹ ಘಟನೆ ನಡೆದಿದೆ. ಅಶೋಕನ ವೃದ್ಧಾಪ್ಯದಲ್ಲಿ ಆತನ ಕಿರಿಯ ಹೆಂಡತಿ ಹಾಗೂ ಆಕೆಯ ಮಗನ ತಂತ್ರದಿಂದಾಗಿ ಸಿಂಹಾಸನಾರ್ಹತೆಯಿದ್ದ ಕುನಾಲನನ್ನು ರಾಜ್ಯಭ್ರಷ್ಟನನ್ನಾಗಿಸಿದ ಕತೆಯನ್ನು ಬೌದ್ಧ ಸಾಹಿತ್ಯ ತಿಳಿಸುತ್ತದೆ.

ಮಲತಾಯಿಯ ತಂತ್ರದಿಂದಾಗಿ ಮನೆ ತೊರೆಯಬೇಕಾಗಿ ಬರುವ ಹಿರಿಯ ಹೆಂಡತಿಯ ಮಕ್ಕಳ ಕತೆಗಳಂತೂ ಜಾನಪದ ಸಾಹಿತ್ಯದಲ್ಲಿ ತುಂಬಾ ಹಿಂದಿನಿಂದಲೇ ಬಂದಿವೆ.

ರಾಕ್ಷಸರಿಂದ ರಾಜಕುಮಾರಿಯರು ಅಪಹರಣವಾಗುವ ಕತೆಗಳು ಮಧ್ಯಗಂಗಾ ಕಣಿವೆಯ ಇತಿಹಾಸಕ್ಕೆ ಅಪರಿಚಿತವೇನಲ್ಲ. ವೈಶಾಲಿಯ ಪ್ರಾಚೀನ ಇತಿಹಾಸದಲ್ಲಿ ಈ ಬಗ್ಗೆ ಹಲವಾರು ನಿದರ್ಶನಗಳು ಪ್ರಸ್ತಾಪವಾಗಿವೆ. ಅಂತಹ ರಾಜಕುಮಾರಿಯನ್ನು ಮರಳಿ ತಂದವರಿಗೆ ಮದುವೆ ಮಾಡುತ್ತಿದ್ದರು ಅಥವಾ ಆಕೆಯ ರಾಕ್ಷಸ ಗಂಡನ ಬಳಿಯೇ ಉಳಿಯಗೊಡುತ್ತಿದ್ದರು.

ಜಾನಪದ ಪರಂಪರೆಯ ಅಂಗವಾಗಿ ಬಂದ ಈ ಕತೆಗಳನ್ನು ಒಗ್ಗೂಡಿಸಿ ವಾಲ್ಮೀಕಿ ತನ್ನ ರಾಮಾಯಣದ ಬೃಹತ್‌ಕಾವ್ಯವನ್ನು ಕಟ್ಟಿದ. ಈ ಮಹಾಕಾವ್ಯದ ನಿರ್ದಿಷ್ಟ ಕಾಲಘಟ್ಟವನ್ನು ನಿರ್ಣಯಿಸಲು ಇರುವ ದೊಡ್ಡ ತೊಂದರೆಯೆಂದರೆ ಯಾವುದೇ ಮಹಾಕಾವ್ಯ ಒಂದು ನಿರ್ದಿಷ್ಟ ಕಾಲಘಟ್ಟದ ಘಟನೆಯೊಂದನ್ನೇ ಆಧರಿಸಿರುವುದಿಲ್ಲ. ರಾಮಾಯಣದ ಕತಾ ಮೂಲಗಳನ್ನು ಹುಡುಕಿದರೆ ಅವು ಹಲವಾರು ಜನಪದೀಯ ಹಾಡುಗಬ್ಬಗಳಲ್ಲಿ ಚದುರಿಹೋಗಿರುವುದನ್ನು ಕಾಣುತ್ತೇವೆ. ವಾಲ್ಮೀಕಿ ಕಾವ್ಯದ ಸಮೀಪ ಕಾಲವರ್ತಿ ಎಂದು ಗುರುತಿಸಬಹುದಾದ ಬೌದ್ಧ ಜಾತಕ ಕತೆಗಳಲ್ಲಿ ರಾಮಕತೆಯ ಮುಖ್ಯ ಕತಾ ವಸ್ತು ಬೇರೆ ಬೇರೆ ಕತೆಗಳಲ್ಲಿರುವುದನ್ನು ಗಮನಿಸುವ ಮೂಲಕ ಈ ಅಂಶಕ್ಕೆ ಸಮರ್ಥನೆಯೊದಗಿಸಬಹುದು.

ಅಯೋಧ್ಯೆಯ ಘಟನೆಗಳ ಸಾರಾಂಶ ದಶರಥ ಜಾತಕ ಹಾಗೂ ಸಾಮಜಾತಕ ಕತೆಗಳಲ್ಲಿ ಬರುತ್ತದೆ. ವನವಾಸದ ಕತೆಯ ವೆಸಂತರ ಜಾತಕ, ಸಂಬುಲಾ ಜಾತಕ ಕತೆ ನಲಿನಿಕಾ ಜಾತಕ, ಜಯದಿಸ್ಸ ಜಾತಕ ಹಾಗೂ ಚೀನೀ ಪರಂಪರೆಯ ಅನಾಮಿಕ ಜಾತಕ ಕತೆಗಳಲ್ಲಿ ಕಂಡುಬರುತ್ತದೆ.

ವಾಲ್ಮೀಕಿ ರಾಮಾಯಣದ ಕತೆಯ ಸಾರಾಂಶಕ್ಕೆ ಹತ್ತಿರವಿರುವ, ಆದರೆ ವಿವರಗಳಲ್ಲಿ ಭಿನ್ನತೆಯಿರುವ ದಶರಥ ಜಾತಕ ಕತೆ ರಾಮಕತೆಯನ್ನು ಹೀಗೆ ವಿವರಿಸುತ್ತದೆ. ದಶರಥ ಬನಾರಸ್ಸಿನ ರಾಜನಾಗಿದ್ದ. ಆತನ ಹಿರಿಯ ಹೆಂಡತಿಯಿಂದ ಆತನಿಗೆ ರಾಮಪಂಡಿತ, ಲಕ್ಷ್ಮಣ ಎಂಬಿಬ್ಬರು ಗಂಡುಮಕ್ಕಳೂ, ಸೀತೆ ಎಂಬ ಮಗಳೂ ಇದ್ದರು. ಹಿರಿಯ ಹೆಂಡತಿ ಮರಣ ಹೊಂದಿದೊಡನೆ ಕಿರಿಯ ಹೆಂಡತಿ ರಾಣಿಯ ಪಟ್ಟಕ್ಕೇರಿದಳು. ಆಕೆ ಪಟ್ಟಕ್ಕೆ ಬಂದೊಡನೆ ತನ್ನ ಮಗನನ್ನೇ ಸಿಂಹಾಸನಕ್ಕೆ ವಾರಸುದಾರನನ್ನಾಗಿ ಮಾಡಬೇಕೆಂದು ಹಠಹಿಡಿದಳು. ತನ್ನ ಹಿರಿಯ ಹೆಂಡತಿಯ ಮಕ್ಕಳ ಪ್ರಾಣರಕ್ಷಣೆಯ ಬಗ್ಗೆ ಆತಂಕಿತನಾದ ದಶರಥ, ರಾಮ ಪಂಡಿತ ಹಾಗೂ ಲಕ್ಷ್ಮಣನಿಗೆ ೧೨ವರ್ಷಗಳ ಕಾಲ ದೇಶಾಂತರ ಹೋಗಿ ತನ್ನ ಮರಣದ ನಂತರ ಬಂದು ಸಿಂಹಾಸನ ಪಡೆದುಕೊ ಎಂಬ ಸಲಹೆಯಿತ್ತ. ತನ್ನ ಸೋದರರೊಂದಿಗೆ ಸೀತೆಯೂ ದೇಶಾಂತರ ಹೊರಟಳು. ಅವರೆಲ್ಲಾ ಹಿಮಾಲಯದೆಡೆಗೆ ಹೋದರು. ದಶರಥ ಒಂಬತ್ತು ವರ್ಷಗಳ ನಂತರ ಮರಣಹೊಂದಿದ. ಭರತ ರಾಮನನ್ನು ಹುಡುಕಿಕೊಂಡು ಬಂದು ರಾಜ್ಯ ಪರಿಗ್ರಹಿಸಲು ಕೇಳಿಕೊಂಡ. ರಾಮ ರಾಜ್ಯಕ್ಕೆ ಹಿಂತಿರುಗಲು ನಿರಾಕರಿಸಿ ೧೨ ವರ್ಷಗಳ ನಂತರವೇ ಹಿಂತಿರುಗುವುದಾಗಿ ಹೇಳಿ, ಅಲ್ಲಿಯವರೆಗೆ ಭರತನ ರಾಜ್ಯಭಾರಕ್ಕೆ ಮಾರ್ಗದರ್ಶನ ಮಾಡಲು ತನ್ನ ಪಾದುಕೆಗಳನ್ನು ನೀಡಿದ. ಅಂತಿಮವಾಗಿ ರಾಮ ಹಿಂತಿರುಗಿ ರಾಜ್ಯಭಾರ ಕೈಗೊಂಡ, ಸೀತೆ ಅವನ ರಾಣಿಯಾದಳು. ೧೬ ಸಾವಿರ ವರ್ಷ ಅವರ ರಾಜ್ಯಭಾರ ನಡೆಯಿತು. ಈ ಕತೆಯ ಪ್ರಕಾರ ಸೀತೆ ರಾಮನಿಗೆ ತಂಗಿ, ನಂತರ ಹೆಂಡತಿ. ಇದರಲ್ಲಿ ಸೀತಾಪಹರಣ, ರಾವಣನ ಮೇಲೆ ಯುದ್ಧದ ಪ್ರಸ್ತಾಪವಿಲ್ಲ.

ಈ ಕತೆ, ಬೌದ್ಧಧರ್ಮದ ಬೆಳವಣಿಗೆಯ ಸಂದರ್ಭದಲ್ಲಿ, ಇಕ್ಷ್ವಾಕು ವಂಶವು ಕೊಲಿಯ, ಸಾಖ್ಯ, ಲಿಚ್ಛವಿ ಮುಂತಾದ ಹಲವಾರು ಪ್ರಮುಖ ವಂಶಾವಳಿಗಳಾಗಿ ರೂಪುಗೊಂಡ ಸಮಯದ ದಂತ ಕತೆಗಳನ್ನು ಹೋಲುತ್ತದೆ. ಈ ಪರಂಪರೆಯಲ್ಲಿ ಸಾಮಾನ್ಯವಾಗಿ ಕಾಶಿಯ ರಾಜ ತನ್ನ ಮಕ್ಕಳನ್ನು ರಾಜ್ಯ ಭ್ರಷ್ಟನನ್ನಾಗಿ ಮಾಡುವುದು, ಅವರು ಉತ್ತರದ ಕಡೆ ನಡೆದು ಹಿಮಾಲಯಗಳಲ್ಲಿ ನೆಲೆಗೊಳ್ಳುವುದು ಪ್ರಸ್ತಾಪವಾಗುತ್ತಿರುತ್ತದೆ. ಅಣ್ಣ ತಂಗಿಯರ ಮದುವೆಯೆಂಬುದೂ ಈ ಪರಂಪರೆಯಲ್ಲಿ ವಂಶಾವಳಿಗಳ ಆರಂಭ ಬಿಂದುವನ್ನು ಪ್ರತಿನಿಧಿ ಸುತ್ತಿದ್ದು, ಸಾಮಾನ್ಯವಾಗಿ ವಂಶಾವಳಿಯ ಶುದ್ಧತೆಯನ್ನು ಕಾಪಾಡಿಕೊಳ್ಳಲು ಇಂತಹ ಮದುವೆಗಳು ನಡೆಯುತ್ತಿದ್ದವು. ಕ್ಷತ್ರಿಯ ಬುಡಕಟ್ಟುಗಳ ನಾಯಕ ಕುಟುಂಬಗಳು, ವಂಶಪಾರಂಪರ್ಯ ರಾಜತ್ವದ ಪ್ರಭುತ್ವಗಳಾಗಿ ಮಾರ್ಪಡುವ ಹಂತಕ್ಕೆ ಮೊದಲು ಇಂತಹ ಮದುವೆಗಳು ಸಂಭವಿಸುತ್ತಿದ್ದವು.

ರಾಮಕತೆಯ ಮತ್ತೊಂದು ಮುಖ್ಯಾಂಶವಾದ ಸೀತಾಪಹರಣದ ವಸ್ತು ಸಂಬುಲ ಜಾತಕ ಕತೆಯಲ್ಲಿ ಕಾಣಿಸಿಕೊಂಡಿದೆ. ಕುಷ್ಠ ರೋಗದಿಂದ ನರಳುತ್ತಿದ್ದ ರಾಜಕುಮಾರ ತನ್ನಷ್ಟಕ್ಕೇ ದೇಶಾಂತರ ಹೊರಡುತ್ತಾನೆ. ಆತನ ಹೆಂಡತಿಯೂ ಆತನೊಂದಿಗೆ ದೇಶಾಂತರ ತೆರಳುತ್ತಾಳೆ. ಆಕೆಯನ್ನು ದೆವ್ವವೊಂದು ಅಪಹರಿಸಿದಾಗ ಇಂದ್ರ ನೆರವಿಗೆ ಬಂದು ಮರಳಿ ಗಂಡನ ಬಳಿಗೆ ಆಕೆಯನ್ನು ಸೇರಿಸುತ್ತಾನೆ. ಆಕೆ ತನ್ನ ಪಾತಿವ್ರತ್ಯವನ್ನು ನಿರೂಪಿಸುವ ಪರೀಕ್ಷೆಯಾಗಿ ತನ್ನ ಗಂಡನ ಕುಷ್ಠರೋಗವನ್ನು ಗುಣಪಡಿಸುತ್ತಾಳೆ. ಅವರು ರಾಜ್ಯಕ್ಕೆ ಹಿಂತಿರುಗುತ್ತಾರೆ. ಆದರೆ ಗಂಡ ಆಕೆಯ ಬಗ್ಗೆ ಅನುಮಾನ ಪಡುವುದನ್ನು ಮುಂದುವರಿಸಿಯೇ ಇರುತ್ತಾನೆ. ಆಗ ಆತನ ತಂದೆ ಮಧ್ಯೆ ಪ್ರವೇಶಿಸಿ ಅನುಮಾನ ಬಗೆಹರಿಸಿ ಗಂಡ ಹೆಂಡಿರನ್ನು ಒಂದುಗೂಡಿಸುತ್ತಾನೆ.

ಚೀನೀ ಪರಂಪರೆಯ ಅನಾಮಕ ಜಾತಕ ಕತೆ ರಾವಣ ಪ್ರಸಂಗದ ಸಮೀಪವರ್ತಿ ಅಂಶಗಳನ್ನು ಒಳಗೊಂಡಿದೆ. ತನ್ನ ಚಿಕ್ಕಪ್ಪನಿಂದ ಪ್ರಾಣಭಯಕ್ಕೀಡಾದ ರಾಜಕುಮಾರನೊಬ್ಬ ತನ್ನ ಹೆಂಡತಿಯೊಂದಿಗೆ ದೇಶಾಂತರಕ್ಕೆ ಹೋಗುತ್ತಾನೆ. ಆಕೆ ನಾಗನೊಬ್ಬನಿಂದ ಅಪಹರಿಸಲ್ಪಡುತ್ತಾಳೆ. ಆ ರಾಜಕುಮಾರ ದೊಡ್ಡ ಹಕ್ಕಿ ಹಾಗೂ ಕೆಲವು ಮಂಗಗಳ ಸಹಾಯದಿಂದ ತನ್ನ ಹೆಂಡತಿಯನ್ನು ಸೆರೆಯಲ್ಲಿಟ್ಟಿದ್ದ ದ್ವೀಪಕ್ಕೆ ಸೇತುವೆ ನಿರ್ಮಿಸಿ ಆಕೆಯನ್ನು ರಕ್ಷಿಸುತ್ತಾನೆ. ಆಕೆ ತನ್ನ ಪರಿಶುದ್ಧತೆ ನಿರೂಪಿಸುವುದಕ್ಕಾಗಿ ಅಗ್ನಿಪರೀಕ್ಷೆಗೊಳಗಾಗುತ್ತಾಳೆ. ಈ ಕತೆಯಲ್ಲಿ ದಶರಥ ಪ್ರಸಂಗ ಹಾಗೂ ಇಕ್ಷ್ವಾಕು ವಂಶದ ಪ್ರಸ್ತಾಪಗಳಿಲ್ಲದಿರುವುದೇ ಕುತೂಹಲಕರ.

ಈ ಹಿನ್ನೆಲೆಯಲ್ಲಿ, ಹಲವಾರು ಜಾನಪದ ಕತಾ ಮೂಲಗಳಿಂದ ಎರಡು ಮೂರು ಮುಖ್ಯ ಪ್ರಸಂಗಗಳನ್ನು ಜೋಡಿಸಿ ರಾಮಾಯಣದ ಮಹಾಕಾವ್ಯವನ್ನು ಕಟ್ಟಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಆರಂಭದಲ್ಲಿ ರಾಮಾಯಣ ಒಂದು ಮಹಾಕಾವ್ಯ. ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಹಲವಾರು ಮನ ಕಲಕುವ ಜೀವನ ಪ್ರಸಂಗಗಳನ್ನು ಹೆಣೆದು ಅವುಗಳ ನಡುವೆ ಸಂಯೋಜನೆ ತರುವ ಕೆಲಸವನ್ನು ಮಹಾಕಾವ್ಯದ ಮೂಲಕ ವಾಲ್ಮೀಕಿ ಮಾಡಿದ್ದಾನೆ. ಪ್ರಸಿದ್ಧ ಇತಿಹಾಸ ತಜ್ಞೆ ರೋಮಿಲಾ ಥಾಪರ್ ಇದೇ ಅಭಿಪ್ರಾಯವನ್ನು ಹೇಳುತ್ತಾರೆ. ‘ಪ್ರಸಿದ್ಧ ವ್ಯಕ್ತಿಗಳ ಕತೆಯೊಂದರಲ್ಲಿ ಆ ಇಡೀ ಯುಗದ ಸಾರ್ವತ್ರಿಕ ಅನುಭವಗಳೆಲ್ಲವನ್ನೂ ಜೀವಂತ ಪ್ರಸಂಗಗಳಾಗಿ ಒಟ್ಟಿಗೆ ತಂದು ಹೆಣೆಯುವುದ ರಲ್ಲೇ ಮಹಾಕಾವ್ಯದ ಸಾಮಾರ್ಥ್ಯ ಅಡಗಿದೆ.’

ಆರಂಭದಲ್ಲಿ ಈ ಬಗೆಯ ಮಹಾಕಾವ್ಯವಾಗಿದ್ದ ವಾಲ್ಮೀಕಿ ರಾಮಾಯಣದಲ್ಲಿ ಐದು ಕಾಂಡಗಳಿದ್ದವು. ಬಾಲಕಾಂಡ ಹಾಗೂ ಉತ್ತರ ಕಾಂಡಗಳು ಕ್ರಿ.ಶ.ದ ಮೊದಲ ಶತಾಬ್ದಿಯಲ್ಲಿ ಸೇರಿಸಲ್ಪಟ್ಟಿರಬೇಕು. ಅದರಲ್ಲಿಯೇ ರಾಮಕತೆಯ ವ್ಯಕ್ತಿಗಳೆಲ್ಲಾ ಇಕ್ಷ್ವಾಕು ಅಥವಾ ಸೂರ್ಯವಂಶದ ಪ್ರಸಿದ್ಧರೊಂದಿಗೆ ಜೋಡಿಸಲ್ಪಟ್ಟಿದ್ದು. ಈ ಬಾಲಕಾಂಡ ಹಾಗೂ ಉತ್ತರಕಾಂಡದ ಅತ್ಯಂತ ಗಮನಾರ್ಹ ಅಂಶವೇನೆಂದರೆ ಅವು ರಾಮನನ್ನು ವಿಷ್ಣುವಿನ ಅವತಾರ ಎಂದು ನಿರೂಪಿಸಿರುವುದು.

ವಾಲ್ಮೀಕಿ ಕೆಳಜಾತಿಯಿಂದ ಆವಿರ್ಭವಿಸಿದ ಮುನಿ ಎಂಬ ಅಂಶವನ್ನು ತುಂಬಾ ಪ್ರಚಲಿತಗೊಳಿಸಲಾಗಿದೆ. ಜನಪದೀಯ ಹಾಡುಗಬ್ಬಗಳನ್ನು ಹಾಡುತ್ತಿದ್ದ ಹಾಡುಗಾರರೆಲ್ಲಾ ಸಮಾಜದ ಕೆಳವರ್ಗದಿಂದ ಬರುತ್ತಿದ್ದರು ಎಂಬ ಐತಿಹಾಸಿಕ ಹಿನ್ನಲೆಯನ್ನು ಗಮನಿಸಿದರೆ ವಾಲ್ಮೀಕಿಯ ಶೂದ್ರತ್ವ ಅಸಂಭವವೇನಲ್ಲ. ಆದರೆ ಈ ಕವಿಯ ಮಹಾಕಾವ್ಯದ ಕಾರ್ಯವನ್ನು ಭೃಗುವಂಶದವರು ಬದಲಾಯಿಸಲು ನಿರ್ಧರಿಸಿದರು. (ಭೃಗು-ಕಾಲಿನಲ್ಲಿ ಒಂದು ಕಣ್ಣಿದ್ದವನು, ಎಂದು ಪ್ರತೀತಿ ಪಡೆದಿರುವ ಪೌರಾಣಿಕ ಋಷಿ. ವಿಷ್ಣುವಿನ ಅಂತಃಪುರಕ್ಕೆ ನೇರ ಪ್ರವೇಶಿಸಬಲ್ಲ ಸಾಮಾರ್ಥ್ಯ ಪಡೆದಿದ್ದನು ಎಂದು ಪುರಾಣ. ಆ ವಂಶದವರು ರಾಮಾಯಣವನ್ನು ಪುನಃ ಬರೆದರು ಎಂದು ರಾಮಾಯಣದ ಪ್ರಕ್ಷಿಪ್ತಗಳು ಹೇಳಿ ಕೊಂಡಿವೆ). ರಾಮನನ್ನು ವಿಷ್ಣುವಿನ ಅವತಾರವೆಂಬುದಾಗಿ ಈ ಕಾವ್ಯವನ್ನು ಪುನರ್‌ನಿರೂಪಿಸಿದ ಬಳಿಕ ಆ ಮಹಾಕಾವ್ಯವು ಪವಿತ್ರ ಗ್ರಂಥವಾಗಿ ಮಾರ್ಪಟ್ಟಿತು. ಮಹಾಕಾವ್ಯವು ಪುರಾಣವಾಗಿ ಬೆಳೆಯಿತು. ವೈಷ್ಣವವಾದಿ ಪ್ರಕ್ಷಿಪ್ತಗಳು ಪುನರ್‌ವ್ಯವಸ್ಥೀಕರಿಸಿದ ರಾಮಾಯಣ ಪುರಾಣವೇ, ರಾಮಕತೆಯ ಬೇರೆ ಬೇರೆ ಆವೃತ್ತಿಗಳಿಗಿಂತ ಹೆಚ್ಚು ಪ್ರಚಲಿತವಾಗುವಂತೆ ಆಗಿನ ರಾಜಪ್ರಭುತ್ವ ನೋಡಿಕೊಂಡಿತು. ನಾವು ಈಗ ವಾಲ್ಮೀಕಿ ರಾಮಾಯಣವೆಂದು ಓದುವ ಕೃತಿ ಈ ಭೃಗೂಕೃತ ಆವೃತ್ತಿ.

ಈ ಭೃಗೂಕೃತ ರಾಮಾಯಣದ ಕತೆಯಲ್ಲಿ ಬರುವ ಕೆಲವು ಮುಖ್ಯಾಂಶಗಳು ಏನನ್ನು ಪ್ರತಿಪಾದಿಸುತ್ತವೆ ಎಂಬುದನ್ನು ನೋಡಿ.

ದಶರಥ ಆಸ್ಥಾನದಲ್ಲಿ ಕೂತು ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿರುವಾಗ ವಿಶ್ವಾಮಿತ್ರ ಆಗಮಿಸುತ್ತಾನೆ. ಪುರೋಹಿತ ವಶಿಷ್ಠನ ಆದಿಯಾಗಿ ದಶರಥ ಎದ್ದು ಹೋಗಿ ವಿಶ್ವಾಮಿತ್ರನನ್ನು ಸ್ವಾಗತಿಸುತ್ತಾನೆ. ವಿಶ್ವಾಮಿತ್ರ ದಶರಥನ ಕುಶಲ ವಿಚಾರಿಸುವ ಸಂಭಾಷಣೆಯೊಂದು ಹೀಗಿದೆ.

‘ರಾಜಾ, ಸಾಮಂತರೆಲ್ಲಾ ನಿನಗೆ ಅಧೀನವಾಗಿದ್ದಾರಾ? ಯಜ್ಞ ಯಾಗಗಳನ್ನು ಮಾಡುತ್ತಾ ಬ್ರಾಹ್ಮಣರಿಗೆ ದಾನ ಧರ್ಮ ಮಾಡುತ್ತಿದ್ದೀಯಾ? ರರನ್ನು ವಿದ್ವಾಂಸರನ್ನು ಬಹುಮಾನಗಳಿತ್ತು ಮನವೊಲಿಸಿ ನಿನ್ನ ಪರ ಇಟ್ಟುಕೊಂಡಿರುವೆಯಾ? ವರ್ಣಸಂಕರ ನಡೆಯುತ್ತಿಲ್ಲ ತಾನೆ?’

ಈ ರಾಮಾಯಣದ ಮೂಲಕತೆಯೊಳಕ್ಕೆ ಭೃಗೂಕರಣದೊಂದಿಗೆ ನುಸುಳಿಕೊಂಡ ವಿಶ್ವಾಮಿತ್ರ ಮೂಲದಲ್ಲಿ ಕ್ಷತ್ರಿಯನಾಗಿದ್ದು ನಂತರ ಬ್ರಹ್ಮರ್ಷಿ ಪಟ್ಟಕ್ಕೆ ಏರಲು ನಿರಂತರವಾಗಿ ವಶಿಷ್ಠನೊಂದಿಗೆ ಸಂಘರ್ಷಕ್ಕೆ ನಿಂತವನು. ಆತನ ಬಾಯಿಂದ ಬರುವ ಪ್ರಶ್ನೆಯೇನೆಂದರೆ ‘ವರ್ಣ ಸಂಕರ ನಡೆಯುತ್ತಿಲ್ಲ ತಾನೇ? ರಾಮಾಯಣದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಈ ವರ್ಣ ಸಂಕರ ನಡೆಯುತ್ತಿಲ್ಲ ತಾನೇ? ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ರಾಜನಾದವನು ವರ್ಣಸಂಕರ ನಡೆಯಗೊಟ್ಟರೆ ಆತನ ರಾಜ್ಯಭಾರವೇ ಕುಸಿದುಬಿಡುತ್ತದೆ ಎಂಬ ಎಚ್ಚರಿಕೆಯನ್ನು ಹೆಚ್ಚು ಕಮ್ಮಿ ನಮ್ಮ ಪ್ರಾಚೀನ ಗ್ರಂಥಗಳೆಲ್ಲಾ ನೀಡುತ್ತಲೇ ಬಂದಿವೆ. ಅಂದರೆ ಈ ಪುರಾಣಗಳನ್ನು ಪರವಶತೆಯಿಂದ ಆಲಿಸುವ ಪ್ರತಿಯೊಬ್ಬರಿಗೂ ವರ್ಣ ಸಂಕರ ನಡೆಯದಿರುವಂತೆ ನೋಡಿಕೊಳ್ಳಬೇಕೆಂಬ ಮನಸ್ಥಿತಿ ಏರ್ಪಡಬೇಕು; ಅದಕ್ಕೋಸ್ಕರ ಈ ಸಾಂಸ್ಕೃತಿಕ ಆಯುಧಗಳನ್ನು ಬಳಸಿಕೊಂಡಿದ್ದಾರೆ.

ವಿಶ್ವಾಮಿತ್ರ ದಶರಥನಿಗೆ ಕೇಳುವ ಪ್ರಶ್ನೆಗಳ ಆಧಾರದಲ್ಲಿ ಯೋಚಿಸುವುದಾದರೆ ಆ ಸತ್ಯಯುಗಲ್ಲೂ ಈಗ ನಾವು ಕಂಡು ಕೇಳಿರುವುದಕ್ಕಿಂತ ವಿಶಿಷ್ಟವಾದ ಪರಿಸ್ಥಿತಿಯಿರುವಂತಿಲ್ಲ. ಆಗಲೂ ರರಿಗೆ, ವಿದ್ವಾಂಸರಿಗೆ ಬಹುಮಾನಗಳನ್ನಿತ್ತು ದಶರಥ ತನ್ನ ಪರವಾಗಿ ಇರಿಸಿಕೊಳ್ಳಬೇಕಿತ್ತು. ದಶರಥನ ಸತ್ಯವ್ರತ ಪರಿಪಾಲನೆ ನಿರ್ವಿವಾದವಾಗಿದ್ದ ಪಕ್ಷದಲ್ಲಿ ಆತನದೇ ರಾಜ್ಯದ ರರನ್ನು, ವಿದ್ವಾಂಸರನ್ನು ಮನವೊಲಿಸಿಕೊಳ್ಳಲು ಯತ್ನಿಸುವುದೇನಿದೆ? ಅವರು ಹೇಗೂ ಸತ್ಯನೀತಿ ನಿಷ್ಠರಾದುದರಿಂದ ಈತನ ಪರವಾಗಿಯೇ ಇರಬೇಕಿತ್ತು ತಾನೆ? ಆದರೆ ಈ ಸಂದರ್ಭದಲ್ಲಿ ಯಾವುದೋ ಪ್ರಾಚೀನ ಕತಾ ಹಂದರದ ಮೂಲಕ ವಿವರಿಸಲ್ಪಡುತ್ತಿರುವ ಬದುಕು ಯಾವ ಕಾಲಘಟ್ಟದ್ದೆಂದರೆ, ಜನರು ಲಾಭದಾಸೆಗಾಗಿ ತಮ್ಮ ನಿಷ್ಠೆಯನ್ನು ಬದಲಾಯಿಸಬಲ್ಲಂತಹ ಪರಿಸ್ಥಿತಿ ನಿರ್ಮಾಣವಾದ ಕಾಲದ್ದು. ‘ವರ್ಣಸಂಕರ ನಡೆಯುತ್ತಿಲ್ಲ ತಾನೇ’ ಎಂಬ ಎಚ್ಚರಿಕೆ ಏನನ್ನು ಸೂಚಿಸುತ್ತದೆ. ವರ್ಣಾಶ್ರಮ ಧರ್ಮ ಎಂಬುದು ಜನತೆ ತಾವೇ ನಿರ್ಮಿಸಿಕೊಂಡ ಆಚರಣೆಯಲ್ಲ. ಬದಲಾಗಿ ಬೆಳೆಯುತ್ತಿರುವ ಊಳಿಗಮಾನ್ಯ ಪ್ರಭುತ್ವ ತನ್ನ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗಲು ಜನತೆಯ ಮೇಲೆ ಬಲವಂತವಾಗಿ ಹೇರಿದ ಶ್ರಮ ವಿಭಜನೆ.

ಕೃಷಿಗೆ ಅತ್ಯಗತ್ಯವಾದ ನಾಲ್ಕು ಕೆಲಸಗಳನ್ನು ನಿರ್ವಹಿಸಬೇಕಾದ ಅವಶ್ಯಕತೆಯಿಂದ ವರ್ಣಾಶ್ರಮದ ಶ್ರಮ ವಿಭಜನೆ ರೂಪುಗೊಂಡಿತು. ಋತುಮಾನ, ಮಳೆಯ ಕಾಲಮಾನಗಳನ್ನು ನಿರ್ಧರಿಸಿ ಫಲವತ್ತತೆಯನ್ನು ಹೆಚ್ಚಿಸುತ್ತವೆ ಎಂದು ನಂಬಲಾದ ಕರ್ಮಕಾಂಡಗಳನ್ನು ನಡೆಸಿ, ಕೃಷಿ ಚಟುವಟಿಕೆಗಳನ್ನು ವ್ಯವಸ್ಥೀಕರಿಸುವುದಕ್ಕೆ ಅಗತ್ಯವಾಗಿರುವ ಪಂಚಾಂಗದ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ಪುರೋಹಿತ ವರ್ಗ; ಕೃಷಿಕ್ಷೇತ್ರಗಳ ಕಾವಲು, ಕಾಡು ಪ್ರಾಣಿಗಳು ಹಾಗೂ ನೆರೆಯ ಬುಡಕಟ್ಟುಗಳು ದಾಳಿಯಿಂದ ಸಮುದಾಯವನ್ನು ರಕ್ಷಿಸಲು ಬೇಕಾದ ಸಮರಶೀಲ ಕ್ಷತ್ರಿಯವರ್ಗ, ವ್ಯವಸಾಯವನ್ನು ಮಾಡುವುದಕ್ಕೆ ವೈಶ್ಯ ವರ್ಗ, ಇತರೆ ದೈಹಿಕ ಶ್ರಮದ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಕೃಷಿ ಕ್ಷೇತ್ರಗಳನ್ನು ಸಿದ್ಧಪಡಿಸುವುದಕ್ಕೆ ಬೇಕಾಗಿರುವ ಶೂದ್ರವರ್ಗ-ಸಮಾಜವನ್ನು ಹೀಗೆ ನಾಲ್ಕು ಬಗೆಯ ಶ್ರಮದ ಪಂಗಡಗಳಾಗಿ ವರ್ಣಾಶ್ರಮದ ಹೆಸರಿನಲ್ಲಿ ವಿಂಗಡಿಸಿಕೊಳ್ಳಲಾಯಿತು. ಸ್ವಭಾವಿಕವಾಗಿ ಏರ್ಪಡುತ್ತಾ ಬಂದ ಶ್ರಮ ವಿಭಜನೆಯನ್ನು ಕೃಷಿಚಟುವಟಿಕೆಗಳು ವಿಸ್ತಾರಗೊಂಡಂತೆಲ್ಲಾ ಒಂದು ನಿರ್ದಿಷ್ಟ ಸಾಮಾಜಿಕ ಸಂಹಿತೆಯಡಿ ಪ್ರಭುತ್ವದ ಹೊಣೆ ಹೊತ್ತಿದ್ದ ಕ್ಷತ್ರಿಯರು ಕಾಪಾಡಬೇಕಾಗಿ ಬಂದಿತು. ಯಾಕೆಂದರೆ ವರ್ಣಾಶ್ರಮ ಪದ್ಧತಿಯೆನ್ನವುದು ಸ್ವಾಭಾವಿಕ ಶ್ರಮ ವಿಭಜನೆಯಾಗಿ ಉಳಿದುಕೊಳ್ಳದೆ ಮೇಲು ಕೀಳು ಎಂದು ಪರಿಗಣಿಸಲಾಗಿದ್ದ ಸಾಮಾಜಿಕ ವ್ಯವಸ್ಥೆಯಾಗಿ ಮಾರ್ಪಟ್ಟಿತ್ತು. ಮೇಲು ವರ್ಗಗಳಾದ ಬ್ರಾಹ್ಮಣ ಮತ್ತು ಕ್ಷತ್ರಿಯರು ಈ ಕೃಷಿ ಸಮಾಜದ ಉತ್ಪನ್ನಗಳಿಗೆ ಒಡೆಯರಾಗಿದ್ದರು. ಉಳಿದವರು ಆಯಾ ವರ್ಣಗಳಿಗೆ ಸೇರಿದ ಕಾರಣಕ್ಕಾಗಿಯೇ ದುಡಿದು, ಮೇಲ್ವರ್ಗಗಳಿಗೆ ಸಂಪತ್ತು ಸೃಷ್ಟಿಸಿ ತಾವು ಬದುಕಿರುವುದಕ್ಕೆ ಮಾತ್ರ ಸಾಕಾಗುವಷ್ಟನ್ನು ಪಡೆಯಬೇಕಾಗಿತ್ತು. ಇದನ್ನೇ ‘ಧರ್ಮ’ ‘ಆಚಾರ’ ಎಂದು ಕರೆಯಲಾಗುತ್ತಿತ್ತು.

ಊಳಿಗಮಾನ್ಯ ವ್ಯವಸ್ಥೆ ವಿಸ್ತಾರಗೊಳ್ಳುವಾಗ ಆರಂಭದಲ್ಲಿ ಮಗಧ ಕೋಸಲ ಮೊದಲಾದ ಪ್ರಥಮ ಸಮ್ರಾಜ್ಯಗಳ ಕಾಲದಲ್ಲಿ, ಆ ರಾಜ್ಯಗಳ ನೆರೆ ಹೊರೆಯಲ್ಲಿದ್ದ ಇನ್ನೂ ರಾಜವ್ಯವಸ್ಥೆ ರೂಪುಗೊಳ್ಳದ ದೆಸೆಯಲ್ಲಿದ್ದ ಗಣಸಂಘಗಳ ಮೇಲೆ ದಾಳಿ ಮಾಡಿ, ಆ ಜನರನ್ನು ತಂದು ಬಲವಂತವಾಗಿ ಶ್ರಮಪಡಬೇಕಾದ ವರ್ಣಗಳೊಳಕ್ಕೆ ಸೇರಿಸಿ ಅವರು ಓಡಿಹೋಗದಂತೆ ನಿರ್ಬಂಧ ವ್ಯವಸ್ಥೆಯನ್ನು ನಿರ್ಮಿಸಲಾಗಿತ್ತು ಎಂಬ ಅಂಶದ ಬಗ್ಗೆ ಇತಿಹಾಸಕಾರ ಡಿ.ಡಿ.ಕೋಶಾಂಬಿ ಬರೆದಿದ್ದಾರೆ.

ತಮ್ಮ ಗಣ ಸಂಘಗಳ, ಬುಡಕಟ್ಟು ಸಮಾಜಗಳ ವ್ಯವಸ್ಥೆಗೆ ವಿರೋಧವಾಗಿದ್ದ ಮೇಲು ಕೀಳಿನ ನಡಾವಳಿಯನ್ನು, ಅಸಮ ಪಾಲಿನ ಪದ್ಧತಿಗಳನ್ನು ಪಾಲಿಸಲು ಒಪ್ಪದೆ ಆ ನಿಯಮ ಮುರಿಯಲು ಯತ್ನಿಸುತ್ತಿದ್ದ ಜನರು ಇದ್ದಿದ್ದರಿಂದಲೇ ರಾಜನನ್ನು ಪ್ರತಿ ಪುರೋಹಿತ, ಋಷಿ ಭೇಟಿ ಮಾಡಿದಾಗ ಕೇಳುತ್ತಿದ್ದ ಪ್ರಮುಖ ಪ್ರಶ್ನೆ ತಮ್ಮ ಹಿತಾಸಕ್ತಿಯನ್ನು ಕುರಿತದ್ದಾಗಿತ್ತು. ವರ್ಣ ಸಂಕರ ನಡೆಯುತ್ತಿಲ್ಲ ತಾನೆ?’

ಊಳಿಗಮಾನ್ಯ ವ್ಯವಸ್ಥೆಯ ಅಸ್ಥಿಪಂಜರವಾದ ವರ್ಣಧರ್ಮ ನೆಲೆಯೂರುತ್ತಿದ್ದ ಸಮಯದಲ್ಲಿ ಅದಕ್ಕೆ ವಿರುದ್ಧವಾದ ವೈಚಾರಿಕ ಸಂಘರ್ಷವೂ ಪ್ರಬಲವಾಗಿತ್ತು. ವೈದಿಕ ಕರ್ಮಕಾಂಡ ಒಪ್ಪದ, ಪುನರ್ಜನ್ಮ, ಕರ್ಮ ಸಿದ್ದಾಂತ ನಂಬದ ಹಲವಾರು ನೈಸರ್ಗಿಕ ಭೌತವಾದಿಗಳು ಈ ಸಂಘರ್ಷ ನಡೆಸುತ್ತಿದ್ದರು. ಇವರ ವಿಚಾರಧಾರೆ ಹರಡದಂತೆ ನೋಡಿಕೊಳ್ಳುವುದು ರಾಜನಾದವನ ಕರ್ತವ್ಯ. ಹಾಗಾಗಿಯೇ ರಾಜನಾದವನು ಅರಿಭಯಂಕರನಾಗಿರುವುದು ಊಳಿಗಮಾನ್ಯತೆಯಲ್ಲಿ ತುಂಬಾ ಕೀರ್ತಿಸಲ್ಪಡುವ ಗುಣಾಂಶವಾಗಿತ್ತು. ವೈರಿಗಳೆಂದರೆ ಆತನ ಕುಟುಂಬದಲ್ಲೇ, ಸಿಬ್ಬಂದಿ ವರ್ಗದಲ್ಲೇ ಸಿಂಹಾಸನಕ್ಕಾಗಿ ಪೈಪೋಟಿ ಮಾಡುವರರು ಮಾತ್ರವಲ್ಲ; ನೆರೆಯ ರಾಜ್ಯದವರು, ತನ್ನ ರಾಜ್ಯದಲ್ಲೇ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಬಂಡಾಯ ಸಂಘಟಿಸುವವರು.

ದಶರಥನ ಪರಿಪಾಲನೆಯಲ್ಲೂ ಇದೇ ಇತ್ತು ಎಂಬುದನ್ನು ಕವಿ ಹೇಳಿದ್ದಾನೆ. ಮಹರ್ಷಿಯಾದ ವಿಶ್ವಾಮಿತ್ರ ಗಮನ ಹಾಕುತ್ತಿರುವುದೂ ಕೂಡ ಇಂತಹ ಹೊಟ್ಟೆಪಾಡಿನ ನಿರ್ವಹಣೆಯ ಪ್ರಶ್ನೆಗಳ ಮೇಲೆ-ಆತನ ಆಧ್ಯಾತ್ಮ ಚಿಂತನೆಯೆಂಬುದೆಲ್ಲಾ ಹೀಗೆ ಮಾನವ ದಮನ ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದರಲ್ಲೇ ಮುಗಿಯುತ್ತಿತ್ತೇನೋ!

ವಿಶ್ವಾಮಿತ್ರನನ್ನು ದಶರಥ ‘ತಾವು ಬಂದ ಕಾರ್ಯವೇನೆಂದು ತಿಳಿಸಿದರೆ, ನಾನು ನನ್ನ ಸೈನ್ಯ ಅದನ್ನು ಶಿರಸಾವಹಿಸಿ ನಿರ್ವಹಿಸುತ್ತೇವೆ ಎನ್ನುತ್ತಾನೆ. ತಾನು ‘ಯಜ್ಞ ಯಾಗಾದಿಗಳನ್ನು ನಿರ್ವಹಿಸುತ್ತಿದ್ದರೆ ರಾಕ್ಷಸರು, ಬಂದು ಆ ಕಾರ್ಯಕ್ಕೆ ತಡೆಯುಂಟು ಮಾಡುತ್ತಿದ್ದಾರೆ. ಅದನ್ನು ನಿವಾರಿಸಲು ರಾಮನನ್ನು ನನ್ನ ಜೊತೆ ಕಳುಹಿಸು’ ಎಂದು ವಿಶ್ವಾಮಿತ್ರ ಬೇಡಿಕೆ ಮಂಡಿಸುತ್ತಾನೆ.

ಪುರಾಣಗಳಲ್ಲಿ ಆಗಾಗ ರಾಕ್ಷಸರು ಈ ಯಜ್ಞ ಯಾಗಾದಿಗಳನ್ನು ತಡೆಯುವ ‘ಉಪಟಳ’ನೀಡುವ ಪ್ರಸಂಗಗಳನ್ನು ಕಾಣುತ್ತೇವೆ. ರಾಕ್ಷಸರು ಯಾಕೆ ಯಜ್ಞ ಯಾಗಾದಿಗಳಿಗೆ ತಡೆಯುಂಟು ಮಾಡುತ್ತಾರೆ? ಋಷಿ ಮುನಿಗಳು ಈ ಯಜ್ಞ ಯಾಗಾದಿಗಳನ್ನು ಎಲ್ಲಿ ನಿರ್ವಹಿಸುತ್ತಿದ್ದರು? ಎಂಬ ಪ್ರಶ್ನೆಗಳಿಗೆ ನಾವು ಹೋಗದೆ ಯಜ್ಞ ಯಾಗಾದಿಗಳನ್ನು ನಡೆಸುವವರು ಕಥಾನಾಯಕನ ಕಡೆಯವರು ಅದನ್ನು ತಡೆಯಲು ಬರುವವರು ದುಷ್ಟ ಶಕ್ತಿಗಳು ಹಾಗಾಗಿ ದುಷ್ಟಶಕ್ತಿಗಳನ್ನು ನಿವಾರಿಸುವ ಪ್ರಯತ್ನಗಳನ್ನು ಬೆಂಬಲಿಸಬೇಕು ಎಂಬ ಪೂರ್ವನಿಶ್ಚಿತ ಮನಸ್ಥಿತಿಯಲ್ಲಿ ನಾವಿರುತ್ತೇವೆ.

ಇತಿಹಾಸದ ಹಿನ್ನೆಲೆಯಲ್ಲಿ ನೋಡಿದರೆ ರಾಕ್ಷಸರು ಯಾಕೆ ಯಜ್ಞ ಯಾಗಾದಿಗಳ ವಿರೋಧಿಗಳಾಗಿರಬಹುದು ಎಂಬುದು ನಮಗೆ ಹೊಳೆಯುತ್ತದೆ. ರಾಕ್ಷಸರೆಂದರೆ ನರಭಕ್ಷಕ ಅಮಾನುಷರಲ್ಲ. ಜೈನ ರಾಮಾಯಣದ ಕತೆಯಲ್ಲಿ ರಾವಣ ‘ರಾಕ್ಷಸ‘ನ ವರ್ಣನೆ ಬರುತ್ತದೆ. ಆತ ಅದರಲ್ಲಿ ಬೇರೊಂದು ಬುಡಕಟ್ಟಿನ ನಾಯಕ. ಆತನ ವ್ಯಕ್ತಿತ್ವದ ವರ್ಣನೆ ಆ ಜೈನ ಪರಂಪರೆಯಲ್ಲಿ ವಾಲ್ಮೀಕಿಯ ರಾಮಾಯಣಕ್ಕಿಂತ ಹೆಚ್ಚು ಆಕರ್ಷಕವಾಗಿದೆ. ಜೈನ ರಾಮಾಯಣವಾದರೆ ರಾವಣನನ್ನು ಬಸದಿಗಳಲ್ಲಿ ತಪೋನಿಷ್ಠನಾಗಿದ್ದ ಜಿನಾನುಯಾಯಿ ಎಂಬುದಾಗಿ ವಿವರಿಸಿದೆ. ಆತ ಜೈನನಾಗಿದ್ದನೋ ಇಲ್ಲವೋ, ಆ ಅಂಶದ ವಾದ ವಿವಾದಕ್ಕೆ ಹೋಗುವುದಕ್ಕಿಂತ, ರಾವಣನ ಪಂಗಡದ ‘ರಾಕ್ಷಸ’ ಕುಲದವರು ರಾಮನ ಸಮಾಜದ ನೀತಿ ನಡಾವಳಿಗಳಿಗಿಂತ ಭಿನ್ನವಾದ ನೀತಿ ನಡಾವಳಿಗಳಿದ್ದವರು ಎಂಬ ಅಂಶವನ್ನು ಸ್ಪಷ್ಟಗೊಳಿಸಿಕೊಳ್ಳಬಹುದು. ಹಾಗಾಗಿ ಅವರು ಪ್ರಸ್ತುತ ಕತೆಯಲ್ಲಿ ಯಜ್ಞಯಾಗಾದಿಗಳನ್ನು ವಿರೋಧಿಸುತ್ತಿರಬೇಕು. ತಮ್ಮ ಮೌಲ್ಯಗಳನ್ನು ಒಪ್ಪದ ವಿರೋಧಿಗಳನ್ನು ನಿರ್ಮೂಲಗೊಳಿಸಲು ವಿಶ್ವಾಮಿತ್ರ ಇಲ್ಲಿ ರಾಜನ ಅಂದರೆ ಸಶಸ್ತ್ರ ಬಲದ ಬೆಂಬಲ ಕೇಳುತ್ತಿದ್ದಾನೆ.

ತಾವು ಈ ನಂಬಿಕೆಯವರೋ ಅಲ್ಲವೋ, ಮತ್ತೊಂದು ನಂಬಿಕೆಯವರ ಮೇಲೆ ಸುಮ್ಮನೆ ದಾಳಿ ಮಾಡುವ ದುಂಡಾವರ್ತಿತನ ತೋರಿಸುವವರು ಯಾರೇ ಇರಲಿ ಶಿಕ್ಷೆಗೊಳಪಡ ಬೇಕಾದದ್ದೇ. ಆದರೆ ರಾಮಾಯಣದ ಸಂದರ್ಭದಲ್ಲಿ ರಾಕ್ಷಸರು ಹೀಗೆ ಸುಮ್ಮನೆ ದುಂಡಾವರ್ತಿತನ ಮಾಡುತ್ತಿದ್ದವರಲ್ಲ. ಸಾಮಾನ್ಯವಾಗಿ ಋಷ್ಯಾಶ್ರಮಗಳು ದೂರದ ಅರಣ್ಯಗಳಲ್ಲಿ ರಾಜ್ಯದ ಗಡಿಗಳಾಚೆ ಇರುತ್ತಿದ್ದವು. ಹಾಗಾಗಿಯೇ ಅವುಗಳನ್ನು ರಾಜಾದೇಶದ ಅಂಕೆಯಲ್ಲಿಡಬಾರದು ಎಂಬ ಸಂಪ್ರದಾಯವೂ ಬೆಳೆದಿತ್ತು. ಅರಣ್ಯದಲ್ಲಿ ಈ ಆಶ್ರಮಗಳು ಗುರುಕುಲದ ಕೆಲಸ ನಿರ್ವಹಿಸುತ್ತಿದ್ದವು. ಶಸ್ತ್ರಾಸ್ತ್ರ ತರಬೇತಿ, ವೇದಾಧ್ಯಯನ ವಿದ್ಯಾಭ್ಯಾಸದ ಕೆಲಸಗಳನ್ನು ನಿರ್ವಹಿಸುವುದು ಅವುಗಳ ಒಂದು ಕರ್ತವ್ಯ. ಬಹಳ ಮುಖ್ಯವಾದ ಮತ್ತೊಂದು ಕರ್ತವ್ಯವೆಂದರೆ ನಿರ್ಜನ ಅರಣ್ಯಗಳನ್ನು ಕೃಷಿ ಕ್ಷೇತ್ರಗಳನ್ನಾಗಿ ಮಾರ್ಪಡಿಸುವುದು. ಆ ಪ್ರದೇಶದ ಸುತ್ತಮುತ್ತಲ ಆದಿವಾಸಿ ಸಮುದಾಯಗಳಿಗೆ ವ್ಯವಸಾಯ ಪದ್ಧತಿಗಳನ್ನು ಕಲಿಸುವುದು. ಅಲ್ಲಿ ತಮ್ಮ ಕೆಲಸ ಮುಗಿದ ನಂತರ ಬೇರೆ ಕಡೆ ತೆರಳುವುದು. ಅದಕ್ಕೇ ಋಷಿಮುನಿಗಳು ಒಂದೇ ಸ್ಥಳದಲ್ಲಿ ಹೆಚ್ಚುಕಾಲ ನಿಲ್ಲಬಾರದು ಎಂಬ ಆಚಾರವೂ ಬಂದಿರಬಹುದು.

ಆದಿವಾಸಿ ಸಮುದಾಯಗಳಿಗೆ ವ್ಯವಸಾಯ ಪದ್ಧತಿಗೊಳಪಡಿಸುವುದು ಎಂದರೆ ಅಭಿವೃದ್ದಿ ಎಂದು ನಾವು ಭಾವಿಸಬೇಕಾಗಿಲ್ಲ. ವ್ಯವಸಾಯಿಕ ಸಮಾಜದ ಪದ್ಧತಿಗಳನ್ನು ಕಲಿಸುವುದು ಎಂದರೆ ಊಳಿಗಮಾನ್ಯ ವ್ಯವಸ್ಥೆಯ ಚೌಕಟ್ಟಿನೆಡೆಗೆ ಸೆಳೆಯುವುದು, ಇದು ಬೋಧನೆಯ ಮೂಲಕ ಆಗಬಹುದು, ಆಮಿಷಗಳೊಡ್ಡುವುದರ ಮೂಲಕ ಆಗಬಹುದು, ಆಗಲೂ ಆಗದಿದ್ದರೆ ಶಸ್ತ್ರಾಸ್ತ್ರ ಬೆಂಬಲ ಪಡೆದು ಆಕ್ರಮಿಸುವುದರ ಮೂಲಕವೂ ಆಗಬಹುದು.

ಜೈನ ಧರ್ಮದ ಶ್ರವಣರು ತಮ್ಮ ಪರ್ಯಾಟನೆಯ ಮೂಲಕ ವ್ಯಾಪಾರಿ ಜಾಲಗಳನ್ನು ಆದಿವಾಸಿ ಸಮುದಾಯಗಳ ನಡುವೆ ಜೋಡಿಸುತ್ತಿದ್ದರು. ನಿರ್ಜನ ಪ್ರದೇಶಗಳ ಇವರ ಬಸದಿಗಳು ವ್ಯಾಪಾರಿ ತಂಡಗಳಿಗೆ ತಂಗುದಾಣಗಳೂ, ಮಾರ್ಗಸೂಚಿಗಳೂ ಆಗಿರುತ್ತಿದ್ದವು. ಪ್ರತಿ ಧರ್ಮವೂ ಈ ಬಗೆಯಲ್ಲಿ ಯಾವುದಾದರೊಂದು ಭೌತಿಕ ವ್ಯವಸ್ಥೆಯ ಮೂಲಕ ತನ್ನ ಅಸ್ತಿತ್ವವನ್ನು ಅಭಿವ್ಯಕ್ತಿಸುತ್ತದೆ. ಅಂತಹ ಧರ್ಮಗಳ ಪ್ರವರ್ತಕರಾದ ಋಷಿ ಮುನಿಗಳು ಕೇವಲ ಚಿಂತನೆಯ ಮೂಲಕ ಆ ಧರ್ಮಕ್ಕೆ ಸಹಾಯಮಾಡುವುದಿಲ್ಲ. ಊಳಿಗಮಾನ್ಯತೆಯ ವಿಸ್ತರಣೆಯ ಕಾಲದಲ್ಲಿ ಈ ಗುರುಕುಲಗಳು ರಾಜ್ಯ ವಿಸ್ತರಣೆಯ ಕೆಲಸಕ್ಕೂ ನೆರವಾಗುತ್ತಿದ್ದವು. ಧರ್ಮ ಪ್ರಸಾರವೆಂದರೆ ಹೊಸ ವ್ಯವಸ್ಥೆಯ ಪ್ರತಿಪಾದನೆಯ ಪ್ರಯತ್ನ ತಾನೆ! ಆಗಿನ ಹೊಸಧರ್ಮವೆಂದರೆ ಕೃಷಿಯಾಧಾರಿತ ಸಮಾಜ. ಕೃಷಿಯ ವಿಸ್ತರಣೆಯೆಂದರೆ ಬೇರೆ ಪದ್ಧತಿಗಳಲ್ಲಿ ಬದುಕುತ್ತಿದ್ದ ಜನರನ್ನು ಊಳಿಗಮಾನ್ಯತೆಯ ವರ್ಣ ವ್ಯವಸ್ಥೆಯೊಳಕ್ಕೆ ತಂದು ನಿರ್ಬಂಧಿಸುವುದು. ಸಾಮಾನ್ಯವಾಗಿ ಕಾಡನ್ನು ದಹಿಸುವುದು ನಂತರ ಅಲ್ಲಿ ಕೃಷಿ ಕ್ಷೇತ್ರಗಳನ್ನು ಏರ್ಪಡಿಸುವುದು ಗುರುಕುಲಗಳ ಕೆಲಸವಾಗಿದ್ದಾಗ, ಅವರ ನಿತ್ಯಚಟುವಟಿಕೆಗಳ ಆರಂಭಕ್ಕೆ ದೇವಾನುದೇವತೆಗಳ ಅನುಗ್ರಹ ಬೇಡಲು ನಡೆಸುತ್ತಿದ್ದ ಯಜ್ಞ ಯಾಗಾದಿಗಳನ್ನು ಹಾಳುಗೆಡುವುದೆಂಬುದು ರಾಕ್ಷಸ, ನಾಗ ಮುಂತಾದವರಿಗೆ ತಮ್ಮ ಬುಡಕಟ್ಟಿನ ಕ್ಷೇತ್ರಗಳನ್ನು ಕಾಪಾಡಿಕೊಳ್ಳುವ ಸಂಘರ್ಷದ ಅಂಶವಾಗಿತ್ತು. ಯಾಕೆಂದರೆ ಋಷಿಮುನಿಗಳು ನಿರ್ಜನ ಅರಣ್ಯಗಳೆಂದು ಹುಡುಕಿಕೊಂಡು ಹೋಗುವ ಪ್ರದೇಶಗಳು ಯಾವುದಾದರೂ ಅರಣ್ಯವಾಸಿ ಸಮುದಾಯದ ಬೇಟೆಯ ಕ್ಷೇತ್ರವಾಗಿರುತ್ತಿತ್ತು. ಇಂತಹ ಸಂಘರ್ಷದ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರಕ್ಕೆ ಒತ್ತರಿಸಿಕೊಂಡು ಬರುತ್ತಿದ್ದ ಋಷಿ ಮುನಿಗಳ ಆಶ್ರಮಗಳಿಗೆ ತೊಂದರೆಯುಂಟುಮಾಡುವುದು ಅರಣ್ಯವಾಸಿ ಜನರ ಅಸ್ತಿತ್ವ ರಕ್ಷಣೆಯ ಸ್ವಾಭಾವಿಕ ಕ್ರಿಯೆಯಾಗಿದ್ದಿರಬೇಕು.

ಆದ್ದರಿಂದ ಯಜ್ಞ ಯಾಗಾದಿಗಳನ್ನು ರಕ್ಷಿಸುವುದೆಂಬುದು ಈ ಲೋಕಕ್ಕೆ ಸಂಬಂಧಿಸದ, ಸರ್ವರ ಕಲ್ಯಾಣಕ್ಕಾಗಿ ನಡೆಯುತ್ತಿದ್ದ ಕರ್ಮ ಕಾಂಡಗಳ ರಕ್ಷಣೆಯ ಪುಣ್ಯಕಾರ್ಯವೆಂಬಂತೆ ಪುರಾಣಗಳ ಕರ್ತೃಗಳು ಪ್ರಚಾರ ಮಾಡಿದರೆ ನಾವು ನಂಬಬೇಕಾದುದಿಲ್ಲ. ಅವರ ಪರವಾಗಿ ನಿಲುವು ತೆಗೆದುಕೊಳ್ಳಬೇಕಾಗಿಯೂ ಇಲ್ಲ.

ರಾಜ್ಯ ವ್ಯವಸ್ಥೆಯ ಗಡಿಗಳನ್ನು ವಿಸ್ತರಿಸಲು ನಡೆಸುತ್ತಿದ್ದ ಪ್ರಯತ್ನಗಳಿಗೆ ಬೆಂಗಾವಲಾಗಿ ನಿಲ್ಲುವುದು ರಾಜನ ಕರ್ತವ್ಯ ತಾನೇ, ದಶರಥನೇನೋ ಆ ಕರ್ತವ್ಯಕ್ಕೆ ಬದ್ಧ. ಆದರೆ ವಿಶ್ವಾಮಿತ್ರ ಕೇಳುತ್ತಿರುವುದು ಮುದ್ದುರಾಮನನ್ನು ಕಳುಹಿಸು ಎಂದು. ದಶರಥ ಬೇಡಿಕೊಳ್ಳುತ್ತಾನೆ-‘ನಾನೂ ನನ್ನ ಸೈನ್ಯ ಬೇಕಾದರೆ ಬರುತ್ತೇವೆ. ಆದರೆ ಆಟ ಪಾಠಗಳಲ್ಲಿ ಇರಬೇಕಾದ ವಯಸ್ಸಿನಲ್ಲಿ ರಾಮನನ್ನು ರಾಕ್ಷಸರೊಂದಿಗೆ ಯುದ್ಧಕ್ಕೆ ಕಳುಹಿಸುವುದೆಂದರೆ ಕಷ್ಟದ ಮಾತು.’

ಸಾಮಾನ್ಯವಾಗಿ ಹರಿಶ್ಚಂದ್ರನ ವಂಶವಾದ ಸೂರ್ಯವಂಶದವರನ್ನು ಕೊಟ್ಟ ಮಾತಿಗೆ ತಪ್ಪದವರೆಂಬಂತೆ ಕೀರ್ತಿಸಲಾಗುತ್ತದೆ. ದಶರಥನನ್ನೂ ಮಹಾ ಸತ್ಯವ್ರತನೆನ್ನುತ್ತಾರೆ. ವಿಶ್ವಾಮಿತ್ರನಿಗೆ ಆರಂಭದಲ್ಲೇ-‘ನೀವು ಬಂದ ಕಾರ್ಯವಾವುದು ತಿಳಿಸಿ, ಶಿರಸಾವಹಿಸಿ ಪಾಲಿಸುತ್ತೇನೆ-’ಎಂದು ಬಿಟ್ಟ ದಶರಥ. ಈಗ ಅದಕ್ಕೆ ಉಪ ನಿಬಂಧನೆಗಳನ್ನು ಹೇಳುತ್ತಿದ್ದಾನೆ.

‘ಕೊಟ್ಟ ಮಾತಿಗೆ ತಪ್ಪಿದವನೆಂಬ ಲೋಕಾಪವಾದಕ್ಕೆ ಗುರಿಯಾಗಿ ಇಕ್ಷ್ವಾಕು ವಂಶದ ಕೀರ್ತಿ ಹಾಳು ಮಾಡಬೇಡ’ ಎಂದು ವಿಶ್ವಾಮಿತ್ರ ಎಚ್ಚರಿಸಿದ ಮೇಲೆ ದಶರಥ ರಾಮ ಲಕ್ಷ್ಮಣರನ್ನು ಕಳುಹಿಸಲು ಒಪ್ಪುತ್ತಾನೆ.

ರಾಕ್ಷಸ ನಿವಾರಣೆಯೊಂದೇ ಕೆಲಸವಾಗಿದ್ದರೆ ರಾಮನಾದರೆ ಏನು? ದಶರಥನಾದರೆ ಏನು? ಆದರೆ ರಾಮಕತೆಯನ್ನು ಪುರಾಣಗೊಳಿಸಿದವರು ರಾಮನನ್ನು ಅವನ ಬಾಲಕತನದಿಂದಲೇ ಅವತಾರಪುರುಷನೆಂಬುದನ್ನು ನಿರೂಪಿಸಬೇಕು. ಪ್ರತಿ ಸಾಹಸ ಕಾರ್ಯವೂ ಅವನಿಂದಲೇ ನಡೆಯಿತೆಂಬಂತಾಗಿ ಆತನ ಶೌರ್ಯ ಪ್ರತಾಪಗಳು ಜಗಜ್ಜಾಹೀರಾಗಬೇಕು, ಅದಕ್ಕಾಗಿ ತಳಹದಿ ನಿರ್ಮಿಸುತ್ತಿದ್ದಾರೆ.

ಅದಿರಲಿ, ಮೊದಲು ಮಾತು ಕೊಟ್ಟಿದ್ದರೂ ಬಾಲಕ ರಾಮನನ್ನು ರಾಕ್ಷಸರೊಂದಿಗಿನ ಯುದ್ಧದಂತಹ ಕಠಿಣ ಕೆಲಸಕ್ಕೆ ಹೇಗೆ ಕಳುಹಿಸುವುದು ಎಂಬ ಪಿತೃಸಹಜ ವ್ಯಾಮೋಹದಲ್ಲಿ ಚಿಂತಿತನಾಗಿದ್ದ ದಶರಥ. ಎಷ್ಟಾದರೂ ತಂದೆಯಲ್ಲವೆ-ಹಾಗೆ ವರ್ತಿಸುವುದೇ ಸ್ವಾಭಾವಿಕ ಎಂದು ನಾವಂದುಕೊಳ್ಳುವಷ್ಟರಲ್ಲಿ ದಶರಥ ರಾಮನನ್ನು ಕಳುಹಿಸಲು ನಿರ್ಧರಿಸಿಬಿಟ್ಟ. ಅದಕ್ಕೆ ಕಾರಣವೇನೆಂದರೆ ತಾನು ಕೊಟ್ಟ ಮಾತಿಗೆ ತಪ್ಪಿದ ಅಪಕೀರ್ತಿಗೆ ಒಳಗಾಗುವುದು. ಕೀರ್ತಿ ಹಾಗೂ ಅಪಕೀರ್ತಿಯೆಂಬುದು ಮಗನನ್ನು ಬಲಿಕೊಟ್ಟು ಬೇಕಾದರೂ ಉಳಿಸಿಕೊಳ್ಳಬೇಕಾಗಿರುವಂತಹ ವಿಷಯ ಎಂದಿರಬೇಕು ವಾಲ್ಮೀಕಿಯ ಸಂದೇಶ. ತನ್ನನ್ನು ತಾನು ಬಲಿಕೊಟ್ಟುಕೊಂಡು ಇಂತಹ ವಿಷಯಗಳಿಗಾಗಿ ಹೋರಾಡುವವರನ್ನು ಯಾವುದಾದರೊಂದು ಕಾರಣಕ್ಕೆ ಮೆಚ್ಚಿಕೊಳ್ಳಬಹುದೇನೋ. ಆದರೆ ತನ್ನ ಕೀರ್ತಿಗಾಗಿ ತನ್ನ ವಂಶದ ಕೀರ್ತಿಗಾಗಿ ಹೆಂಡತಿ, ಮಕ್ಕಳನ್ನು, ತಮ್ಮಂದಿರನ್ನು ಬಲಿಕೊಡಲು ಸಿದ್ಧರಾಗುವ ನೀತಿಯನ್ನು ಈ ಪುರಾಣಗಳು ಬೋಧಿಸಿದರೆ ಅದನ್ನು ಏನೆಂದು ಒಪ್ಪಿಕೊಳ್ಳಬೇಕು.