ಬಾಬರಿ ಮಸೀದಿ ಮತ್ತು ರಾಮಜನ್ಮಭೂಮಿಯ ಹಗರಣ ಮುಗಿಯದ ಪ್ರಕರಣವಾಗಿದೆ. ಭಾರತದಲ್ಲಿಯ ಜನ/ಜಾತಿಗಳು ಈಗಿರುವಂತೆಯೇ ಇದ್ದುದಾದರೆ ಖಂಡಿತ ಈ ಪ್ರಕರಣ ಮುಗಿಯುವುದಿಲ್ಲ. ಭಾರತದ ನಾಶದೊಂದಿಗೆ ಈ ಹಗರಣ ಮುಕ್ತಾಯಗೊಳ್ಳಬಹುದು. ಯಾಕೆಂದರೆ ಇದು ಕೇವಲ ಒಂದು ಸ್ಥಳದ ಪ್ರಶ್ನೆ ಅಲ್ಲ. ಭಾರತದ ಮಿಥ್ ಮತ್ತು ರಿಯಾಲಿಟಿಗಳ ನಡುವೆ ಇರುವ ಘರ್ಷಣೆ. ‘ಹಿಂದೂ’ ಅನ್ನುವುದು ‘ಮುಸ್ಲಿಂ’ ಅನ್ನು ವಿರೋಧಿಸುತ್ತಲೇ ತನ್ನ ರಿಯಾಲಿಟಿಯನ್ನು ಸಾದರಪಡಿಸಿಕೊಳ್ಳುತ್ತದೆ ಎನ್ನುವುದರ ಅರ್ಥವೇನು? ಹಾಗೆಯೇ ಮುಸ್ಲಿಂ ಹಿಂದೂಗೆ ಜಾಗೃತವಾದ ಎಚ್ಚರಿಕೆಯ ಮನಸ್ಸಾಗಿ ಕೆಲಸ ಮಾಡುವುದರ ಔಚಿತ್ಯವಾದರೂ ಏನು?

ವಾಸ್ತವತೆ ಮತ್ತು ಪುರಾಣ

ಈಗಿರುವ ಪರಿಸ್ಥಿತಿಯಲ್ಲಿ ಬಾಬರಿ ಮಸೀದಿಯೊಂದೆ ವಾಸ್ತವವಾದುದು. ರಾಮಜನ್ಮಭೂಮಿ ಒಂದು ಪುರಾಣ ಅಥವಾ ಕಟ್ಟುಕಥೆ. ಆ ಕಾರಣಕ್ಕೆಂದೆ ರಾಮನ ಕಡೆಯವರು ಈ ಪ್ರಕರಣವನ್ನು ಇಡೀ ಭಾರತದ ಪ್ರಕರಣವನ್ನಾಗಿ ಪರಿವರ್ತಿಸಿದ್ದಾರೆ. ಮುಸ್ಲಿಮರ ಬಾಬರಿ ಮಸೀದಿಯಾದರೋ ಒಂದು ವಾಸ್ತವತೆ. ಆ ಕಾರಣಕ್ಕಾಗಿಯೇ ಅವರು ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಮ ರಾಜನಾಗಿದ್ದದ್ದು, ಹುಟ್ಟಿದ್ದು, ಮದುವೆಯಾದದ್ದೆಲ್ಲ ಈಗ ಪುರಾಣ. ಕೆಲವರು ರಾಮ ದೇವತ್ವದ ಒಂದು ಸಂಕೇತವೇ ಹೊರತು ಆತ ಮನುಷ್ಯ ಅಲ್ಲ ಎಂದು ಹೇಳುತ್ತಾರೆ. ಹಾಗಿದ್ದರೆ ಆತ ನಿರ್ದಿಷ್ಟ ಸ್ಥಳದಲ್ಲಿ ಹುಟ್ಟಿರಲಿಕ್ಕೆ ಸಾಧ್ಯವಿಲ್ಲ. ಪುರಾಣ ಒಂದು ಕಾಲದ ಇತಿಹಾಸ ಕೂಡ ಆಗಿರುತ್ತದೆ ಎಂಬ ವಾದವೂ ಇದೆ-ಈ ಮಾತು ಸತ್ಯ. ಆದರೆ ಈ ಇತಿಹಾಸ ದಾಖಲಾದ ಇತಿಹಾಸವಲ್ಲ. ಜನಪದ ಅರ್ಥಾತ್ ನೆನಪಿನ ಅಥವಾ ಕತೆಯಾಗಿ ಬಂದ ಇತಿಹಾಸ. ಇದನ್ನು ಅಫಿಷಿಯಲ್ ಇತಿಹಾಸಕಾರ ಒಪ್ಪುವುದಿಲ್ಲ. ಭಾರತದ ಜನಾಂಗಗಳ ಘರ್ಷಣೆಯ ಪ್ರಶ್ನೆ ಬಂದಾಗ ರಾಮನಿಗೆ ಜೀವ ಬರುತ್ತದೆ. ಏಕೆಂದರೆ ರಾವಣನ ಕಡೆಯವರು ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ರಾಮ ಆರ್ಯ ಜನಾಂಗದ ನಾಯಕ. ಒಬ್ಬ ಸಾಮಾನ್ಯ ರಾಜನಾದ ಅವನನ್ನು ಅವನ ಕಡೆಯ ಜನ ಅವನಿಗೆ ಉಪ್ಪು ಕಾರ ಹಾಕಿ ಸೊಗಸಾದ ಭೋಜನವನ್ನಾಗಿ ಮಾಡಿದರು. ಆದರೆ ರಾಮಾಯಣದ ಇತಿಹಾಸವನ್ನು ಪರಿಶೋಧಿಸಿದ ಪಾಶ್ಚಿಮಾತ್ಯರು ರಾಮ ವಿಂದ್ಯಪರ್ವತವನ್ನು ದಾಟಲಿಲ್ಲ. ಆ ಸಂದರ್ಭದಲ್ಲಿ ಲಂಕೆ ಎಂಬುದು ಇರಲಿಲ್ಲ. ಸ್ವತಃ ಶ್ರೀಲಂಕಾದಲ್ಲಿಯೇ ರಾಮ ಲಂಕೆಗೆ ಬಂದ ಕಥೆ ಇಲ್ಲ. ಈಗ ರಾಜೀವಗಾಂಧಿ ದೆಹಲಿಯಿಂದ ಲಂಕೆಗೆ ಸೈನ್ಯ ಕಳಿಸಿದ ಕಥೆಯಷ್ಟೆ ಅವರಿಗೆ ಗೊತ್ತಿದೆ.

ರಾಮಾಯಣದ ಬಗ್ಗೆ ಕೇಳುವವರೂ ಇಂದಿಗೂ ಅದೊಂದು ಕಥೆ, ಆದರ್ಶ ನಡವಳಿಕೆ ಅಥವಾ ಜೀವನ ಎಂದು ತಿಳಿದುಕೊಂಡಿದ್ದಾರೆಯೆ ಹೊರತು ಸತ್ಯಸ್ಯ ಸತ್ಯ ಎಂದು ತಿಳಿದುಕೊಂಡಿಲ್ಲ. ಅದಕ್ಕಾಗಿಯೇ “ಪುರಾಣ ಹೇಳುವುದಕ್ಕೆ ಬದನೆಕಾಯಿ ತಿನ್ನುವುದಕ್ಕೆ” ಎಂದು ಹೇಳುತ್ತಾರೆ. ರಾಮಾಯಣ ನಾಟಕವನ್ನು ನೋಡಿದವರು ರಾತ್ರಿಯೆಲ್ಲಾ ರಾಮಾಯಣ ನೋಡಿ ಬೆಳಗೆದ್ದು ರಾಮ ಮತ್ತು ಸೀತೆಗೆ ಏನು ಸಂಬಂಧ ಎಂದು ಕೇಳಿದಂತಾಯಿತು ಎನ್ನುತ್ತಾರೆ. ವಾಸ್ತವವಾಗಿ ಜನಸಾಮಾನ್ಯರಿಗೂ ರಾಮ-ರಾಮಾಯಣಕ್ಕೂ ಇರುವ ನಿಜವಾದ ಸಂಬಂಧ ಇಷ್ಟೆ.

ರಾಮಾಯಣವನ್ನು ವಸ್ತುನಿಷ್ಠವಾಗಿ ತೆಗೆದುಕೊಂಡರೆ ಬಾಬರಿ ಮಸೀದಿಯಂಥ ಒಂದು ಪ್ರಕರಣದಲ್ಲಿ ನೂರಾರು, ಸಾವಿರಾರು ಪ್ರಕರಣಗಳು ಹುಟ್ಟಿಕೊಳ್ಳುತ್ತವೆ. ಮೊದಲನೆಯದು, ಆರ್ಯದ್ರಾವಿಡ ಘರ್ಷಣೆ; ಎರಡನೆಯದು, ಹಾರವ ಶೂದ್ರ ಘರ್ಷಣೆ; ಮೂರನೆಯದು, ಉತ್ತರ ಭಾರತ-ದಕ್ಷಿಣ ಭಾರತದ ಮಧ್ಯೆ ಘರ್ಷಣೆ! ನಾಲ್ಕು, ಭೂಮಾಲೀಕರು ಮತ್ತು ಭೂರಹಿತರ ನಡುವೆಯ ಘರ್ಷಣೆ; ಐದು, ವರ್ಣಗಳ ಘರ್ಷಣೆ; ಆರು, ಸಂಸ್ಕೃತಿಕರಣದ ವಿರುದ್ಧದ ಘರ್ಷಣೆ; ಏಳು, ಉದ್ಯೋಗಿ ಮತ್ತು ನಿರೋದ್ಯೋಗಿ ಘರ್ಷಣೆ; ಎಂಟು, ನಗರ ಮತ್ತು ಹಳ್ಳಿಗಳ ಘರ್ಷಣೆ; ಒಂಬತ್ತು, ಭಾರತದ ಅಸ್ತಿತ್ವದ ಘರ್ಷಣೆ. ಹೀಗಾಗಿ ರಾಮಾಯಣದ ಜಗಳ ಮುಗಿಯದ ಜಗಳ. ರಾಮಾಯಣ ಟಿ.ವಿ.ಯಲ್ಲಿ ಬರುತ್ತಿದ್ದಾಗ ಉತ್ತರ ಕರ್ನಾಟಕದ ವಕೀಲರೊಬ್ಬರು ಶಿವನಿಗೆ ಅವಮಾನವಾಗಿದೆ ಎಂದು ಕೋರ್ಟಿಗೆ ಹೋಗಿದ್ದ ಸಂದರ್ಭ ರಾಜ್ಯ ಸಭೆಯಲ್ಲಿ ಕ್ರಿಶ್ಚಿಯನ್ ಸದಸ್ಯರೊಬ್ಬರು ಈ ಪುರಾಣ ಪ್ರದರ್ಶನದಿಂದ ಸಮಯ ಹಾಳಾಗುತ್ತಿದೆ ಎಂದುದು ನಿಮಗೆ ಜ್ಞಾಪಕವಿರಬಹುದು.

ಈಗ ರಾಮಾಯಣ ಮತ್ತು ರಾಮ ಅನೇಕ ಶತಮಾನಗಳ ಅನೇಕ ಜನಾಂಗಗಳ ಒಟ್ಟು ಅನುಭವಗಳ ಮೊತ್ತ ಮತ್ತು ಸಾಮಾಜಿಕ ರಚನೆಯ ಮೂಲಭೂತ ವೈರುಧ್ಯಗಳ ತಳಹದಿ. ಇದನ್ನು ಒಂದು ಪಂಗಡ ಅಥವಾ ಜನಾಂಗಕ್ಕೆ ಇಟ್ಟುಕೊಂಡು ಬಳಸಿಕೊಂಡು ಜೀವನ ಮಾಡುವುದು ಹೇಸಿಗೆಯ ಕೆಲಸ. ಈ ಪರಿಮಿತಿಯನ್ನು ಗೆದ್ದು ರಾಮಾಯಣ ಜಗತ್ತಿನ ಸೃಷ್ಟಿ ಮತ್ತು ಸಮಾನತೆಯ ಕಥೆಯನ್ನಾಗಿ ಮಾಡಲು ಮಹಾಕವಿ ಕುವೆಂಪು ಅವರು “ಶ್ರೀ ರಾಮಾಯಣ ದರ್ಶನ” ಕೃತಿಯನ್ನು ಬರೆಯಬೇಕಾಯಿತು. ಆಗ ರಾಮ ಶಂಭೂಕನನ್ನು ಕೊಲ್ಲುವಂಥ ನೀಚನಾಗಿ ಉಳಿಯಲಿಲ್ಲ. ಮಾನವ ಪ್ರೇಮಿ ದೇವನಾದ. ಈಗ ಕೂಡ ಮುಸಲ್ಮಾನರನ್ನು ಕೆರಳಿಸುವ, ಭಾರತವನ್ನು ಅಸ್ಥಿರಗೊಳಿಸುವ ಪುಢಾರಿ ಆಗಲಾರ ರಾಮ ಜನ್ಮ ಭೂಮಿಯ ಬಗ್ಗೆ ರೋಗಿಗಳಾಗಿರುವವರು ಯೋಚಿಸಬೇಕಾದ ರೀತಿ ಇದು.

ಅನೇಕ ಜನ-ಶತಮಾನಗಳ ಕಥೆಯಾದ ರಾಮಾಯಣವನ್ನು ಮುಸ್ಲಿಮರ ಕಥೆಯನ್ನಾಗಿ ಕೂಡ ಒಪ್ಪಿಕೊಳ್ಳಬೇಕಾಗಿದೆ. ಅರಿವಿನಿಂದಲೇ ಭಾರತದ ಮುಸ್ಲಿಮರು ಮುಂದೊಂದು ದಿನ ಅದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಆ ಪುರಾಣವೇ ಕೆಲಸವನ್ನು ಮಾಡುತ್ತದೆ. ಆದರೆ ಕೆಲವು ಜನ ರಾಮಾಯಣದ ಸಮಸ್ಯೆಯನ್ನು ಮುಸ್ಲಿಂ ವಿರೋಧದ ಆಯುಧವನ್ನಾಗಿ ಮಾಡಿಕೊಂಡಿದ್ದಾರೆ. ಇವತ್ತು ಅದು ಮುಸ್ಲಿಮರ ವಿರುದ್ಧ ಬಳಸಿದ ಅಸ್ತ್ರವಾದಂತೆ ಮುಂದೆ ಭಾರತದ ವಿವಿಧ ವರ್ಗ-ಜನಗಳ ಮಧ್ಯೆ ಬಳಸಬಹುದಾದ ಆಯುಧವೂ ಆಗುತ್ತದೆ. ಆದ್ದರಿಂದ ರಾಮ, ರಾಮಜನ್ಮಭೂಮಿ ವಿಷಯಗಳು ಪುರಾಣದ ವಿಷಯ ಆಗಬೇಕೆ ಹೊರತು ಸ್ಥಳ, ವ್ಯಕ್ತಿಗಳ ವಿಷಯ ಆಗಬಾರದು.

ರಾಮಾಯಣ ಮತ್ತು ಮಹಾಭಾರತದ ಜಗಳಕ್ಕೆ ಕೊನೆ ಇಲ್ಲ. ಇವೆರಡೂ ಪುರಾಣಗಳು. ಮೂಲತಃ ಸಾಂಸ್ಕೃತಿಕ-ಆರ್ಥಿಕ ಜಗಳಗಳೆ. ಹೊರಗಡೆಯಿಂದ ವಲಸೆ ಬಂದ ಜನ ಭಾರತದ ಭೂಮಿಯನ್ನು ಪಡೆಯಲು ನಡೆಸಿದ ಜಗಳವೇ ರಾಮಾಯಣ. ಅಣ್ಣ ತಮ್ಮಂದಿರ ಭೂಮಿಯ ಪಾಲು ಪಾರೀಕತ್ತಿನ ಜಗಳವೇ ಮಹಾಭಾರತ. ಈಗ ರಾಮಾಯಣ ಹಿಂದೂ ಮುಸ್ಲಿಂ ಜಗಳವಾಗಿ ಮಾರ್ಪಡುತ್ತಿದೆ. ಕಾಲ ಇದಕ್ಕೆ ಹೊಣೆಗಾರನಾಗಿದೆ. ಆದರೆ ಮುಸ್ಲಿಮರು ರಾಮಾಯಣದೊಂದಿಗೆ ಜಗಳಕ್ಕೆ ನಿಂತಿಲ್ಲ. ಭಾರತದ ಜೊತೆಗೆ ಇರುವ ವ್ಯವಸ್ಥೆಗೆ ಬದ್ಧರಾಗಿದ್ದಾರೆ. ಕೆಲ ಸಂದರ್ಭಗಳಲ್ಲಿ ಭಾರತದಿಂದ ಹೊರಗಿನವರು ಎಂಬಂತೆ ತೋರಿಸಿಕೊಳ್ಳುತ್ತ ಮತ್ತೊಮ್ಮೆ ಭಾರತದ ಜೊತೆಗೆ ಅನ್ಯೋನ್ಯವಾಗಿ ಬದುಕಲು ತವಕಿಸುವವರಂತೆ ಅಚ್ಚರಿ ಉಂಟುಮಾಡಿದ್ದಾರೆ. ಇದಕ್ಕೆ ಕಾರಣ ಅವರನ್ನು ಹಾಗೆ ಇಡಲಾಗಿದೆ. ಅಪ್ಪ ಮಗನನ್ನು ಸರಿಯಾಗಿ ನಡೆಸಿಕೊಳ್ಳದಿದ್ದಾಗ, ವಯಸ್ಸಿಗೆ ಬಂದರೂ ತಂದೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೆಂದು ಗೊತ್ತಾದಾಗ ಮಗ ತಂದೆಗೆ ಬೆದರಿಕೆ ಹಾಕುತ್ತಾನೆ. ‘ನಾನು ಮನೆ ಬಿಟ್ಟು ಹೋಗುತ್ತೇನೆ’ ಅಂತ. ಮನೆ ಆಳುವ ತಂದೆಗೆ ಗೊತ್ತು ಇದು ಕೇವಲ ಬೆದರಿಕೆ. ಮಗ ಮನೆ ಬಿಟ್ಟು ಎಲ್ಲಿ ಹೋದಾನು ಅಂತ. ಮಗನಿಗೂ ತಿಳಿದಿದೆ ನಾನು ತಂದೆಯನ್ನು ಕೇವಲ ಹೆದರಿಸುತ್ತಿದ್ದೇನೆಯೇ ಹೊರತು ತಂದೆ ಬೇಡವಾದವನಲ್ಲ ಅಂತ. ಮುಸ್ಲಿಮರದೂ ಇದೇ ಸ್ಥಿತಿ. ಭಾರತದ ಆಡಳಿತಶಾಹಿ ಆಂತರಿಕವಾಗಿ ಹಿಂದೂವಾಗಿಯೇ ಉಳಿಯಲು ತನ್ನ ಯಜಮಾನಿಕೆಯನ್ನು ನಡೆಸಲು ಇಷ್ಟ ಪಡುತ್ತದೆ. ಆಡಳಿತಶಾಹಿಗೆ ನಿಜವಾಗಿ ಮುಸ್ಲಿಮರಿಂದ ಭಯ ಇಲ್ಲ ಎಂದು ಗೊತ್ತು. ಅವರಿಗೆ ಇರುವ ಭಯ ತಮ್ಮ ಸೋದರರೇ ಆದ ಇತರ ಜಾತಿಗಳ ಜನರಿಂದ. ಇವರನ್ನು ನೇರವಾಗಿ ಎದುರಿಸಲು ಆಡಳಿತಶಾಹಿಗೆ ಭಯ. ಹಾಗೆ ಮಾಡಿದರೆ ನಿಜವಾದ ಪಾಲನ್ನು ಅವರಿಗೆ ಕೊಡಬೇಕಾಗುತ್ತದೆ. ಆದ್ದರಿಂದ ತನ್ನಿಂದ ತನ್ನ ಕೆಳಗಿನ ಜನರಿಗೆ ಅಪಾಯವಿಲ್ಲ; ಇರುವುದು ಸಾಕು ಮಕ್ಕಳಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಂದ ಎಂದು ಹೇಳಬೇಕು. ಅದಕ್ಕಾಗಿ ಆಗಾಗ ಮುಸ್ಲಿಂ ಸಮಸ್ಯೆಯನ್ನು ಕೈಗೆತ್ತಿಕೊಳ್ಳುತ್ತ, ಅವರನ್ನು ಬೆದರಿಸುತ್ತ ಇದರಿಂದ ಭಾರತಕ್ಕೆ ಭಯ ಇದೆ ಎಂದು ಪ್ರಚಾರ ಮಾಡಿಕೊಳ್ಳುತ್ತಾರೆ. ತಮ್ಮವರೇ ಆದ ಇತರ ಜಾತಿಗಳವರು, ತಮ್ಮ ಮೇಲೆ ಬೀಳದಂತೆ ಅನ್ಯ ವೈರಿಯೊಬ್ಬನನ್ನು ತೋರಿಸಿ ತಾನು ತಣ್ಣಗೆ ಉಣ್ಣುತ್ತಾ ಕೂರುವ ತಂತ್ರವೇ ಮುಸ್ಲಿಂ ಮತ್ತು ಹಿಂದೂಗಳ ಜಗಳಕ್ಕೆ ಕಾರಣವಾಗಿದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದವರು ಕೂಟದಲ್ಲಿ ಹಿಂದೂಗಳಾದರೂ ಊಟದಲ್ಲಿ ಹೊರಗಿನವರಾಗಿರುವ ಹಾರುವೇತರ ಜಾತಿಗಳವರು. ಕತ್ತೆಗಳಂತೆ ತಪ್ಪು ಸರಿಗಳೆರಡಕ್ಕೂ ಕೈ ಜೋಡಿಸುವ ಮೊದಲು ಅರ್ಹತೆ, ನ್ಯಾಯ ಮತ್ತು ಬದುಕನ್ನು ಅರ್ಥಮಾಡಿಕೊಳ್ಳಬೇಕು.

ಈ ದೃಷ್ಟಿಯಿಂದಲೇ ನಾನು ಬಾಬರಿ ಮಸೀದಿ ಮತ್ತು ರಾಮಜನ್ಮ ಭೂಮಿಯ ವಿಷಯದ ಬಗ್ಗೆ ಕೆಲವು ಪ್ರಜ್ಞಾವಂತ ಮುಸ್ಲಿಂರನ್ನು ಸಂದರ್ಶಿಸಬೇಕಾಯಿತು. ಆಟೋ, ಕೂಲಿ ಮುಸ್ಲಿಂರನ್ನು ಕೇಳಿದಾಗ ಅವರಲ್ಲಿ ಆಂತರಿಕವಾಗಿ ಸಿಟ್ಟಿದ್ದರೂ ತೋರಗೊಡಲಿಲ್ಲ. ನಮ್ಮದೇನಿದೆ ಸಾರ್. ನಮಗೆ ಅದೆಲ್ಲಾ ಗೊತ್ತಿಲ್ಲ. ನಮ್ಮ ಹಿರಿಯರು, ತಿಳಿದವರು ಹೇಳಿದ್ದನ್ನು ಒಪ್ಪಿಕೊಳ್ಳುತ್ತೇವೆ. ನಾವು ಮಾತ್ರ ಏನನ್ನೂ ಹೇಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು. ಅವರಿಗೆ ಸಿಟ್ಟಿದ್ದರೂ ಹೇಳದಿರುವುದನ್ನು ಕಂಡು ಇದು ದುರ್ಬಲನ ಸ್ಥಿತಿ ಎಂಬುದು ಗೊತ್ತಾಯಿತು.

ಯಾವಾಗಲೂ ಸಿಟ್ಟುಗೊಳ್ಳುವವನು ಆರ್ಥಿಕ ದುರ್ಬಲ ಇಲ್ಲವೆ ಸಾಂಸ್ಕೃತಿಕ ದುರ್ಬಲ. ಮೊದಲು ಕೈಗೆ ಆಯುಧ ತೆಗೆದುಕೊಳ್ಳುವವನೂ ಇವನೆ. ರಾಮಜನ್ಮ ಭೂಮಿಯ ವಿಷಯವನ್ನು ಇಡೀ ಭಾರತದ ಸಮಸ್ಯೆಯನ್ನಾಗಿ ಪರಿವರ್ತಿಸುವವರ ಹುನ್ನಾರೇ ಇದನ್ನು ಸ್ಪಷ್ಟಪಡಿಸುತ್ತದೆ. ಇಟ್ಟಿಗೆಗಳನ್ನು ರಾಜ್ಯ ರಾಜ್ಯಗಳಿಂದ ತರಬೇಕಿಲ್ಲ. ಒಂದೆ ಕಡೆ ತಯಾರಿಸಬಹುದು. ರಾಮಜನ್ಮಭೂಮಿ ವಾಸ್ತವತೆ ಅಲ್ಲದೆ ಇರುವುದರಿಂದ (ಬಾಬರ್ ಮಸೀದಿ ವಾಸ್ತವತೆ ಆಗಿರುವುದರಿಂದ) ಜನರನ್ನು ಕೆರಳಿಸಿ ಅವರನ್ನು ಬಳಸಿಕೊಳ್ಳಬೇಕಿದೆ. ಬಾಯುಳ್ಳವನು ಬರದಲ್ಲಿಯೂ ಸಾಯಲಿಲ್ಲ ಎಂಬಂತೆ ಉಚ್ಚೆಯಲ್ಲಿ ಮೀನು ಹಿಡಿಯುವ ಕೆಲಸವನ್ನು ಮತೀಯವಾದಿಗಳು ಮಾಡುತ್ತಿದ್ದಾರೆ. ಇವರಿಗೆ ತಮ್ಮದೇ ಸರ್ಕಾರದಲ್ಲಿ, ನ್ಯಾಯಾಂಗದಲ್ಲಿ ನಂಬಿಕೆ ಇಲ್ಲ. ತಮ್ಮ ಸ್ವಾರ್ಥ ಸಾಧನೆಯಲ್ಲಿ ಮಾತ್ರ ನಂಬಿಕೆ.

ಈ ಹಿನ್ನೆಲೆಯಲ್ಲಿ ಒಬ್ಬ ವಯೋವೃದ್ಧ ಮತ್ತು ಗಂಭೀರ ಸ್ವಭಾವದ ಮುಸ್ಲಿಂ ಒಬ್ಬರನ್ನು ಕೇಳಿದೆ. ಅದಕ್ಕೆ ಅವರು ಕೊನೆಯ ಪಕ್ಷ ವಿವಾದದ ಸ್ಥಳವನ್ನು ಕೆಲವರು ಹೇಳುವಂತೆ ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡುವುದು ಕ್ಷೇಮ ಎಂದರು. ಅವರಿಗೆ ಹೇಗಾದರೂ ಈ ಸಮಸ್ಯೆ ಮುಗಿದರೆ ಸಾಕು ಎನಿಸುವಂತಿತ್ತು. ಮತ್ತೊಬ್ಬರು ಹೇಳಿದರು: ಸಾರ್ ನಮ್ಮ ಮೈ ದುಡಿಮೆ ಮಾರಿಯಾದರೂ ಪರವಾಗಿಲ್ಲ. ನಿಗದಿತ ಹಣವನ್ನಾದರೂ ತೆಗೆದುಕೊಂಡು ಆ ಜಾಗವನ್ನು ನಮಗೆ ಬಿಟ್ಟುಕೊಟ್ಟರೆ ಸಾಕು. ಈ ಹಗರಣ ಬೇಡ. ದಿನನಿತ್ಯ ನಮ್ಮ ಜನಾಂಗದ ಬಹುಪಾಲು ಹೊಟ್ಟೆ ಪಾಡಿಗಾಗಿಯೇ ಕಷ್ಟ ಪಡುತ್ತಿದೆ. ಅದರೊಳಗೆ ಈ ಸಮಸ್ಯೆ ನಮಗೆ ಬೇಡವಾಗಿದೆ ಎಂದರು. ಸಮಾಧಾನ ಚಿತ್ತದಿಂದ ಕುಳಿತ್ತಿದ್ದ ವ್ಯಕ್ತಿಯೊಬ್ಬರು ‘ಏನು ಬಿಡಿ ಸಾರ್, ನಮಗೆ ಹಿಂಸೆ ಬೇಡ, ಬೇರೆಯವರು ಪ್ರಚೋದಿಸುತ್ತಾರೆ ಎನ್ನುವ ಕಾರಣಕ್ಕೆ ನಾವು ರಕ್ಷಣೆಗೆ ನಿಲ್ಲುತ್ತೇವೆ’ ಎಂದರು.

ಇಲ್ಲವಾದರೆ ಪ್ರತಿ ಹಿಂಸೆಯು ನಮ್ಮ ಜಾತಿಯ ಬಡವನ ಹೊಟ್ಟೆಯನ್ನು ಕಿತ್ತುಕೊಳ್ಳುತ್ತದೆ. ನಾವೇ ಆ ಮಸೀದಿಯನ್ನು ಹೊರಗೆ ತಂದರೆ ಆಯಿತು ಎಂದರು. ನನ್ನನ್ನೂ ಒಬ್ಬ ಹಿಂದೂ ಎಂದು ತಿಳಿದು ಹೀಗೆ ಮಾತನಾಡುತ್ತಿರಬಹುದೆ ಎನಿಸಿತು ನನಗೆ. ನಾನು ಕೇಳಿದೆ: ಎಲ್ಲಾ ಮಸೀದಿ-ದೇವಸ್ಥಾನಗಳನ್ನು ರಾಷ್ಟ್ರೀಯ ಸ್ಮಾರಕಗಳನ್ನಾಗಿ ಮಾಡಿ ತಮ್ಮ ತಮ್ಮ ದೇವರನ್ನು ತಮ್ಮ ಮನೆಯಲ್ಲೆ ಕಂಡುಕೊಂಡರೆ ಹೇಗೆ ಅಂತ. ಅದೇನೋ ಸರಿಯೆ, ಆದರೆ ಅದರಿಂದ ಸಮೂಹದ ಒಗ್ಗಟ್ಟು ಬರುವುದಿಲ್ಲ ಎಂದರು. ಇದರಿಂದ ದೇವರ ಮತ್ತು ದೇವಸ್ಥಾನಗಳ ಮೂಲಭೂತ ಆಶಯವಾಗಿರಬೇಕು ಎಂಬುದು ಸ್ಪಷ್ಟವಾಗುತ್ತದೆ.

ಈಗಾಗಲೇ ಪ್ರಗತಿಪರ ಕೆಲ ಗುಂಪುಗಳಲ್ಲಿ ಬಾಬರಿ ಮಸೀದಿ ಮತ್ತು ರಾಮ ಜನ್ಮಭೂಮಿಗಳನ್ನು ರಾಷ್ಟ್ರೀಯ ಸ್ಮಾರಕಗಳನ್ನಾಗಿ ಮಾಡಿ ಎಂಬ ವಾದವಿದೆ. ಈ ಬಗ್ಗೆ ನಾನು ಕೇಳಿದಾಗ ತುಂಬ ತಿಳಿದವರಂತೆ, ವಿವೇಕಿಗಳಂತೆ ಶಾಂತ ಚಿತ್ತದಿಂದ ಇದ್ದ ಮುಸ್ಲಿಂ ವ್ಯಕ್ತಿಯೊಬ್ಬರು ನನಗೆ ಹೇಳಿದರು. ಅದು ತುಂಬಾ ಅಪಾಯ ಸಾರ್. ಒಂದು ಮಸೀದಿಯನ್ನು ರಾಷ್ಟ್ರೀಕರಣ ಮಾಡಿಕೊಳ್ಳುವ ಸಮಸ್ಯೆ ಅಲ್ಲಿಗೆ ಮುಗಿಯುವ ವಿಷಯವಲ್ಲ.

ಈ ತೀರ್ಮಾನ ನಮ್ಮ ಅನೇಕ ಮಸೀದಿಗಳನ್ನು ಆಕ್ರಮಿಸಿಕೊಳ್ಳಲು, ಆ ಮೂಲಕ ಅವುಗಳನ್ನು ರಾಷ್ಟ್ರೀಯ ಸ್ಮಾರಕಗಳನ್ನು ಮಾಡಲು ಈ ತೀರ್ಮಾನ ಮೊದಲು ಒಪ್ಪಿತ ದಾಖಲೆಯಾಗುತ್ತದೆ. ಒಂದು ಅರ್ಥದಲ್ಲಿ ಹಿಂದೂ ಮೂಲಭತವಾದಿಗಳಿಗೆ ತೆರೆದ ಲೈಸೆನ್ಸ್ ಆಗುತ್ತದೆ. ಈಗಾಗಲೆ ಐನೂರಕ್ಕೂ ಹೆಚ್ಚು ಮಸೀದಿಗಳ ಸಮಸ್ಯೆ ಬಾಬರಿ ಮಸೀದಿಯ ಥರದ್ದೆ ಇದೆ. ರಾಷ್ಟ್ರೀಯ ಸ್ಮಾರಕವಾಗಿ ಬಾಬರಿ ಮಸೀದಿಯನ್ನು ಘೋಷಿಸಿದ ತಕ್ಷಣ ಉಳಿದವು ನೆಲಕ್ಕುರಿಳಿದಂತೆ ಆಗುತ್ತದೆ ಎಂದರು.

ಭಾರತದ ಆಡಳಿತ, ಸಂಸ್ಕೃತಿ, ಜನ, ಭೂಮಿ, ವ್ಯಾಪಾರ, ವ್ಯವಹಾರ, ಧರ್ಮ, ಹಿಂದುವೇ ಆಗಿರುವುದರಿಂದ ಮೇಲಿನ ಮಾತು ನನಗೆ ನಿಜ ಎನಿಸಿತು. ಒಕ್ಕಲಿಗ ದೇವಸ್ಥಾನ ಕಟ್ಟಿದರೂ ಪೂಜಾರಿ ಮಾತ್ರ ಮೇಲು ಜಾತಿಯವನೆ. ಇಡೀ ಭಾರತದ ಆರ್ಥಿಕ-ಸಾಮಾಜಿಕ-ರಾಜಕೀಯ ಪೌರೋಹಿತ್ಯ ಇರುವುದು, ಮೇಲುಜಾತಿ ಕೈಯಲ್ಲಿ. ಈಗಲೂ ಸಮಾಜವಾದಿಗಳು ನೆಹರೂ ಅವರ ಯೋಜನಾ ನೀತಿಯು ಭಾರತದ ಬೆನ್ನು ಮೂಳೆಯನ್ನು ಮುರಿಯಿತು ಎಂದು ಹೇಳುತ್ತಾರೆ. ಇಂಥ ಸಂದರ್ಭದಲ್ಲಿ ಹೆಚ್ಚಿನ ಅಧಿಕಾರ, ಅಂತಸ್ತು, ಸಂಪತ್ತು, ಜನಬಲ ಹೊಂದಿರುವ ಹಿಂದೂಷಾಹಿ ಒತ್ತಾಯ, ಪ್ರಚಾರ, ಹಣದ ಮೂಲಕ ಒಂದಾದ ಮೇಲೊಂದರಂತೆ ಅನೇಕ ಮಸೀದಿಗಳನ್ನು ರಾಷ್ಟ್ರೀಕರಣಗೊಳಿಸಿದರೆ ಆಶ್ಚರ್ಯವಿಲ್ಲ. ಇಲ್ಲವೇ ಅವನ್ನು ಬೇರೆ ರೀತಿಯ ದೇವಸ್ಥಾನಗಳನ್ನಾಗಿ ಮಾಡಬಹುದು. ಇವತ್ತಿಗೂ, ಆಕಾಶವಾಣಿ ದೂರದರ್ಶನ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೋದ ಯಾವ ಜಾತಿಯವನಾದರೂ ನವ ಬ್ರಾಹ್ಮಣನಾಗಿ ಪರಿವರ್ತಿತವಾಗುವ ಸ್ಥಿತಿಯನ್ನು ನೋಡಿದರೆ ಹಿರಿಯ ಮುಸ್ಲಿಂ ವ್ಯಕ್ತಿಯ ಅನುಮಾನ ಸಹಜವಾದುದು ಎನಿಸಿತು.

ಮತ್ತೆ ಆ ಯಜಮಾನರನ್ನು ನಾನು ಕೇಳಿದೆ: ಹಾಗಾದರೆ ಹಿಂದೂ ಶಕ್ತಿಯ ಜೊತೆಗೆ ಹೋರಾಟ ಮುಂದುವರಿಸುತ್ತೀರೇನು ಎಂದು. ಅವರು ಖಂಡಿತವಾಗಿ ಹೇಳಿದರು: ಸಾರ್, ಭಾರತವನ್ನು ನಾವು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದೇವೆ. ಬೇರೆಯವರು ನಮ್ಮ ಬಗ್ಗೆ ತಪ್ಪು ಪ್ರಚಾರ ಮಾಡುತ್ತಾರೆ. ನಾವು ಭಾರತದ ರಾಜ್ಯಾಂಗವನ್ನು ಬಿಟ್ಟು ಒಂದು ಇಂಚು ಕೂಡ ಹೊರಗೆ ಹೋಗುವುದಿಲ್ಲ, ಅದು ತನ್ನ ಸಾಮಾಜಿಕ ನ್ಯಾಯ ವಿತರಣೆಗೆ ಅನುಗುಣವಾಗಿ ನಮ್ಮನ್ನು ರಕ್ಷಿಸಲಿ. ಇಲ್ಲದಿದ್ದರೆ ಬಿಡಲಿ, ನಮ್ಮ ಅಸ್ತಿತ್ವ ಖಂಡಿತ ಭಾರತೀಯವಾದದ್ದೇ. ಭಾರತದ ಉಳಿಯುವಿಕೆಯೆ ಆಗಿದೆ. ನಾವು ನ್ಯಾಯಾಂಗವನ್ನು ಆಶ್ರಯಿಸುತ್ತೇವೆ, ಅದರ ಕೊನೆಯ ತೀರ್ಮಾನವೇ ನಮ್ಮ ತೀರ್ಮಾನ. ಗುಂಪು ಕಟ್ಟಿಕೊಂಡು ನಾವು ಗಲಾಟೆ ಮಾಡುವುದಿಲ್ಲ. ಹಣಕೊಟ್ಟು ಬಾಬರಿ ಮಸೀದಿಯೆ ಇರಲಿ, ರಾಮ ಜನ್ಮಭೂಮಿಯೆ ಇರಲಿ ಅದನ್ನು ಕೊಂಡುಕೊಳ್ಳುವುದಿಲ್ಲ. ಧರ್ಮದೇವರುಗಳನ್ನು ಹಣಕೊಟ್ಟು ಕೊಂಡುಕೊಳ್ಳುವ ಸಣ್ಣತನ ಮಾಡಲಾರೆವು. ದೇವರನ್ನು ಜಗಳದ ವಿಷಯ ಮಾಡಲಾರೆವು ಎಂದರು.

ಭಾರತದ ನ್ಯಾಯಾಂಗದ ಬಗ್ಗೆ ಅವರು ತೋರಿಸಿದ ನಿಷ್ಠೆ ವಸ್ತುನಿಷ್ಠವಾದುದು ಎನಿಸಿತು. ಈ ದೃಷ್ಟಿಯಿಂದ ಅವರು ಸಾಕಷ್ಟು ವಾಸ್ತವಾಂಶಗಳಿಗೆ ಬದ್ಧರಾಗಿದ್ದಾರೆ ಎಂಬುದು ಸ್ಪಷ್ಟವಾಯಿತು. ಈ ನ್ಯಾಯಾಂಗ ಹಿಂದೂ ಸ್ವಭಾವದ್ದು ರಾಜಕೀಯ ಬೆಂಕಿಗೆ ಹುಟ್ಟಿದ್ದು ಎನಿಸುವುದಿಲ್ಲವೆ? ನಿಮ್ಮ ಅನುಕೂಲಕ್ಕೆ ರಾಜಕಾರಣಿಗಳೆ ಉಪಯುಕ್ತ ಅಲ್ಲವೆ? ಎಂದೆ. ಸಾರ್ ಯಾವ ಜಾತಿಯವರಾದರೂ ರಾಜಕಾರಣಿಗಳು ರಾಜಕಾರಣಿಗಳೆ; ಯಾವ ಕಾರಣಕ್ಕೂ ತಿಪ್ಪೆಯನ್ನು ಸೊಪ್ಪು ಎನ್ನಲಾದೀತೆ. ನ್ಯಾಯ ಮಾತ್ರ ನ್ಯಾಯವೆ. ಅದನ್ನೇ ಭಾರತದ ಜನತೆಯಿಂದ ಅವರು ರೂಪಿಸಿದ ನ್ಯಾಯಾಂಗದಿಂದ ಬಯಸುತ್ತೇವೆ. ಇಲ್ಲಿ ಪರ ವಿರೋಧದ ಪ್ರಶ್ನೆ ಇಲ್ಲ. ನ್ಯಾಯ ವಿತರಣೆಯ ಪ್ರಶ್ನೆ ಅಷ್ಟೆ ಎಂದರು. ರಾಜಕಾರಣಿ ಶಹಬುದ್ದೀನ್ ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆ ಮುಸ್ಲಿಂ ಜನತೆಗೆ ರೊಚ್ಚಿಗೇಳದಂತೆ ಈ ಸಂಗತಿಗಳನ್ನು ತಿಳಿಸಲಾಗುತ್ತಿದೆ ಎಂದು ಆ ಯಜಮಾನರು ಹೇಳಿದರು.

ಜಾತಿಯ ಶಕ್ತಿಗಳು, ನೌಕರರ ಸಂಘಗಳು ನಮ್ಮ ಕರ್ತವ್ಯವನ್ನು ಮರೆತು ನಮ್ಮ ಬೇಡಿಕೆಗಳನ್ನೇ ಪ್ರಧಾನ ಮಾಡಿಕೊಂಡು ಜನಸಾಮಾನ್ಯರನ್ನು ಹಿಂಸೆಗೆ ಒಳಪಡಿಸುತ್ತಿರುವ, ಜನ ಸಾಮಾನ್ಯರ ನ್ಯಾಯವನ್ನು ತಿರಸ್ಕರಿಸಿ ತಮ್ಮ ನ್ಯಾಯವನ್ನೇ ಜಗತ್ತಿನ ನ್ಯಾಯ ಎಂದು ಅಬ್ಬರಿಸುತ್ತಿರುವ ಈ ಸಂದರ್ಭದಲ್ಲಿ ಮುಸ್ಲಿಂ ಹಿರಿಯ ನಾಯಕರು ನ್ಯಾಯಾಂಗದ ಬಗ್ಗೆ ತೋರಿಸಿದ ಗೌರವ ಸಾಂದರ್ಭಿಕವಾಗಿ ಸರಿ ಎನಿಸಿದೆ. ಷಹಬಾನು ಪ್ರಕರಣದ ಬಗ್ಗೆ ನಮಗೆ ಅಸಹ್ಯ ಮತ್ತು ಅವಾಸ್ತವ ಎನ್ನುವ ಪರಿಸ್ಥಿತಿಯಲ್ಲೂ ಈ ತೀರ್ಮಾನಯುಕ್ತ ಆಗಿದೆ. ಆ ವಿಷಯ ಕೂಡ ಕೋರ್ಟಿನಲ್ಲಿ ಮಹಿಳೆಯ ಪರವಾಗಿ ಗಂಡಸಿನ ಮರ್ಯಾದೆ ಉಳಿಸುವ ನ್ಯಾಯವೇ ಆಗಿತ್ತು. ರಾಜಕೀಯದ ತಿಪ್ಪೆಗುಂಡಿಗೆ ಬಿದ್ದು ಬೇರೆಯ ಷೇಪ್ ಪಡೆದುಕೊಂಡಿತು.

ಇನ್ನೂ ಮುಖ್ಯ ಸಮಸ್ಯೆ ಎನಿಸಿದ್ದು ಇದು ಕೇವಲ ಬಾಬರಿ ಮಸೀದಿ ಮತ್ತು ರಾಮ ಜನ್ಮಭೂಮಿಯ ಸಮಸ್ಯೆ ಅಲ್ಲ, ಮುಸ್ಲಿಂ ಜನಾಂಗದಲ್ಲಿ ಇರುವ ವ್ಯಾಪಕ ಅವಿದ್ಯಾವಂತಿಕೆ ಮತ್ತು ಸಮಾಜದ ಮುಖ್ಯ ವಾಹಿನಿಯಲ್ಲಿ ಮುಸ್ಲಿಮರು ಭಾಗವಹಿಸದಿರುವಿಕೆ ಎಂಬುದು.