ರಾಮನು ರಾಮಾಯಣದ ನಾಯಕ. ರಾಮಾಯಣವನ್ನು ಬರೆದವನು ವಾಲ್ಮೀಕಿ, ರಾಮಾಯಣದ ಕಥೆಯು ತೀರಾ ಪುಟ್ಟದಾಗಿದೆ ಹಾಗೂ ಸರಳವಾಗಿದೆ, ಅಲ್ಲದೆ ಇದರಲ್ಲಿ ಭಾವೋದ್ವೇಗಗೊಳ್ಳುವಂತಹ ಯಾವುದೇ ಅಂಶಗಳೂ ನಮಗೆ ಕಂಡುಬರುವುದಿಲ್ಲ. ರಾಮನು ಅಯೋಧ್ಯೆ (ಈಗಿನ ಬನಾರಸ್)ಯ ರಾಜನಾದ ದಶರಥನ ಮಗನು, ದಶರಥನಿಗೆ ಕೌಸಲ್ಯೆ, ಕೈಕೇಯಿ ಮತ್ತು ಸುಮಿತ್ರೆ ಎಂಬ ಮೂವರು ಪತ್ನಿಯರು. ಇವರು ಮೂವರಲ್ಲದೆ, ನೂರಾರು ಮಂದಿ ಉಪಪತ್ನಿಯರೂ ಇದ್ದರು, ದಶರಥನು ಕೈಕೇಯಿಯನ್ನು ಮದುವೆಯಾಗುವ ಕಾಲಕ್ಕೆ, ಆಕೆ ಒಂದು ಶರತ್ತನ್ನು ಒಡ್ಡುತ್ತಾಳೆ. ಆ ಶರತ್ತಿನಂತೆ ಆಕೆ ಮುಂದೆ ಎಂದಾದರೂ ಒಮ್ಮೆ, ತನಗೆ ಬೇಕೆನಿಸಿದುದನ್ನು ಕೇಳಿದಾಗ, ದಶರಥನು ಅದನ್ನು ತಪ್ಪದೆ ನಡೆಸಿಕೊಡಬೇಕು ಎಂದು ವಚನ ಪಡೆಯುತ್ತಾಳೆ. ಬಹಳ ಕಾಲದವರೆಗೆ ದಶರಥನಿಗೆ ಮಕ್ಕಳಿರುವುದಿಲ್ಲ. ಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನು ಪಡೆಯಬೇಕೆಂಬ ಹಂಬಲ ಆತನಲ್ಲಿ ಬಲವಾಗಿತ್ತು. ಮೂವರು ಪತ್ನಿಯರಲ್ಲಿ ಯಾರೊಬ್ಬರೂ ಗರ್ಭಧರಿಸುವ ಸೂಚನೆಗಳು ಕಾಣದಾದಾಗ, ದಶರಥನು ಪುತ್ರಕಾಮೇಷ್ಟಿಯಜ್ಞವನ್ನು ನಡೆಸಲು ತೀರ್ಮಾನಿಸುತ್ತಾನೆ. ಆ ಯಜ್ಞವನ್ನು ನಡೆಸಿದ ಶೃಂಗನೆಂಬ ಋಷಿಯು ಪಿಂಡಗಳನ್ನು ಸೃಷ್ಟಿಸಿ ದಶರಥನ ಮೂವರು ಪತ್ನಿಯರಿಗೂ ತಿನ್ನಲು ಕೊಡುತ್ತಾನೆ. ಪಿಂಡವನ್ನು ಸೇವಿಸಿದ ಮೂವರೂ ಗರ್ಭಧರಿಸುತ್ತಾರೆ. ಕೌಸಲ್ಯೆಯು ರಾಮನಿಗೆ, ಸುಮಿತ್ರೆಯು ಲಕ್ಷ್ಮಣ ಮತ್ತು ಶತೃಘ್ನನಿಗೆ ಹಾಗೂ ಕೈಕೇಯಿಯು ಭರತನಿಗೆ ಜನ್ಮ ನೀಡುತ್ತಾರೆ. ಕಾಲಾನುಕ್ರಮದಲ್ಲಿ, ರಾಮನು ಸೀತೆಯನ್ನು ಮದುವೆಯಾಗುತ್ತಾನೆ. ರಾಮನು ಪ್ರಾಪ್ತ ವಯಸ್ಕನಾದಾಗ, ದಶರಥನು ರಾಮನಿಗೆ ರಾಜ್ಯಭಾರವನ್ನು ವಹಿಸಿಕೊಟ್ಟು ತಾನು ವಿಶ್ರಾಂತಿ ಜೀವನ ನಡೆಸಲು ಇಚ್ಛಿಸುತ್ತಾನೆ. ದಶರಥನು ತನ್ನ ನಿರ್ಧಾರವನ್ನು ಕಾರ‍್ಯರೂಪಕ್ಕೆ ತರಬೇಕೆಂದಿದ್ದಾಗ, ಕೈಕೇಯಿಯು ತಾನು ಮದುವೆಯ ಕಾಲಕ್ಕೆ ಒಡ್ಡಿದ ಶರತ್ತಿನಂತೆ, ತನ್ನ ಬೇಡಿಕೆಗಳನ್ನು ಈಗ ಪೂರೈಸಬೇಕೆಂದು ಕೇಳಿಕೊಳ್ಳುತ್ತಾಳೆ. ಆಕೆಯ ಬೇಡಿಕೆಗಳೇನೆಂಬುದನ್ನು ಸ್ಪಷ್ಟಪಡಿಸಲು ಕೇಳಿದಾಗ, ರಾಮನಿಗೆ ಬದಲಾಗಿ ತನ್ನ ಮಗನಾದ ಭರತನು ಸಿಂಹಾಸನವೇರಬೇಕು ಹಾಗೂ ರಾಮನು ಹನ್ನೆರಡುವರ್ಷ ವನವಾಸ ಮಾಡಬೇಕು ಎಂದು ಹೇಳುತ್ತಾಳೆ. ಬಹಳ ವೇದನೆಯಿಂದ ದಶರಥನು ಒಪ್ಪಿಕೊಳ್ಳುತ್ತಾನೆ. ಭರತನು ಅಯೋಧ್ಯೆಯ ರಾಜನಾಗುತ್ತಾನೆ. ರಾಮನು ತನ್ನ ಪತ್ನಿ ಹಾಗೂ ಲಕ್ಷ್ಮಣನೊಂದಿಗೆ ವನವಾಸಕ್ಕೆ ಹೋಗುತ್ತಾನೆ. ಅವರು ಕಾಡಿನಲ್ಲಿ ವಾಸಮಾಡುತ್ತಿದ್ದಾಗ ಲಂಕೆಯ ರಾಜನಾದ ರಾವಣನು ಸೀತೆಯನ್ನು ಅಪಹರಿಸಿ ಕೊಂಡೊಯ್ಯುತ್ತಾನೆ. ಆಕೆಯನ್ನು ತನ್ನ ಹೆಂಡತಿಯರಲ್ಲಿ ಒಬ್ಬಳನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ, ತನ್ನ ಅರಮನೆಯಲ್ಲಿಟ್ಟುಕೊಳ್ಳುತ್ತಾನೆ, ಸೀತೆಯನ್ನು ಹುಡುಕುತ್ತಾ ಬರುವ ರಾಮ ಲಕ್ಷ್ಮಣರಿಗೆ ವಾನರರಾದ ಸುಗ್ರೀವ ಮತ್ತು ಹನುಮಂತನ ಪರಿಚಯವಾಗಿ, ಸ್ನೇಹ ಉಂಟಾಗುತ್ತದೆ. ಅವರ ಸಹಾಯದಿಂದ ಸೀತೆಯನ್ನು ಅಡಗಿಸಿಟ್ಟ ಸ್ಥಳವನ್ನು ಪತ್ತೆಮಾಡುತ್ತಾರೆ. ಹಾಗೂ ವಾನರ ಸೈನ್ಯದೊಂದಿಗೆ ಲಂಕೆಗೆ ದಂಡೆತ್ತಿ ಹೋಗಿ, ರಾವಣನನ್ನು ಕೊಂದು ಸೀತೆಯನ್ನು ಮರಳಿ ಪಡೆಯುತ್ತಾರೆ. ಲಕ್ಷ್ಮಣ ಸೀತೆಯೊಂದಿಗೆ ರಾಮನು ಅಯೋಧ್ಯೆಗೆ ಹಿಂದಿರುಗುತ್ತಾನೆ, ಅಷ್ಟೊತ್ತಿಗೆ ಹನ್ನೆರಡು ವರ್ಷಗಳು ಕಳೆದು ಕೈಕೇಯಿಯ ಶರತ್ತು ಪೂರೈಕೆಯಾದದ್ದರಿಂದ, ಭರತನು ರಾಮನಿಗೆ ಸಿಂಹಾಸನ ಬಿಟ್ಟುಕೊಡುತ್ತಾನೆ. ರಾಮನು ಅಯೋಧ್ಯೆಯ ರಾಜನಾಗುತ್ತಾನೆ.

ಇದು ವಾಲ್ಮೀಕಿ ಬರೆದ “ರಾಮಾಯಣ”ದ ಸಂಕ್ಷಿಪ್ತ ಕಥೆ.

ಈ ಕಥೆಯಲ್ಲಿ ರಾಮನನ್ನು ಪೂಜನೀಯ ವ್ಯಕ್ತಿಯನ್ನಾಗಿಸುವ ಅಂಶಗಳಾವುವೂ ನಮಗೆ ಕಂಡುಬರುವುದಿಲ್ಲ. ಆತನು ಒಬ್ಬ ಕೇವಲ ಕರ್ತವ್ಯತತ್ಪರ ಮಗ, ಆದರೆ ವಾಲ್ಮೀಕಿಯು ಆತನಲ್ಲಿ ಇನ್ನೇನೂ ವಿಶಿಷ್ಟತೆಯನ್ನು ಕಂಡಿದ್ದಾನೆ. ಆದ್ದರಿಂದಲೇ ಆತ “ರಾಮಾಯಣ”ವನ್ನು ರಚಿಸಿದನು. ವಾಲ್ಮೀಕಿಯು ನಾರದನನ್ನು ಕೇಳುವ ಪ್ರಶ್ನೆಯಿಂದ ಇದು ನಮಗೆ ಸ್ಪಷ್ಟವಾಗುತ್ತದೆ.

“ಓ ನಾರದ ಇಂದಿನ ಪರಿಸ್ಥಿತಿಯಲ್ಲಿ ಈ ಜಗತ್ತಿನಲ್ಲಿ ಅತ್ಯಂತ ಪರಿಪೂರ್ಣನಾದವನು ಯಾರು” ಎಂದು ಕೇಳುವ ವಾಲ್ಮೀಕಿ ಮುಂದುವರೆದು “ಪರಿಪೂರ್ಣ” ವ್ಯಕ್ತಿಯ ಲಕ್ಷಣಗಳು ಏನೆಂದು ಹೇಳುತ್ತಾನೆ. “ಶಕ್ತಿಶಾಲಿಯಾದವನು, ಧರ್ಮ ಸೂಕ್ಷ್ಮವನ್ನು ಅರಿತವನು, ಉಪಕಾರ ಸ್ಮರಣೆಯುಳ್ಳವನು, ಸತ್ಯಸಂಧನು, ಧಾರ್ಮಿಕ ವೃತವನ್ನು ಪಾಲಿಸಲು ತನ್ನ ಸ್ವ ಹಿತವನ್ನು ತ್ಯಾಗಮಾಡಬಲ್ಲವನು, ಪ್ರಭಾವಪೂರ್ಣ ನಡವಳಿಕೆಯುಳ್ಳವನು, ಪರರ ಹಿತಾಸಕ್ತಿಗಳನ್ನು ರಕ್ಷಿಸಲು ಕಾತುರವುಳ್ಳವನು, ಬಲಿಷ್ಠನು, ಸೌಮ್ಯ ಮುಖಭಾವವುಳ್ಳವನು, ಇಂದ್ರಿಯ, ನಿಗ್ರಹವುಳ್ಳವನು, ಕೋಪ ತಾಪಗಳನ್ನು ನಿಗ್ರಹಿಸಬಲ್ಲವನು, ಪರರ ಏಳಿಗೆಗೆ ಅಸೂಯೆ ಪಡದವನು, ಮತ್ತು ರಣರಂಗದಲ್ಲಿ ದೇವತೆಗಳ ಎದೆಗಳಲ್ಲಿ ನಡುಕ ಹುಟ್ಟಿಸಬಲ್ಲವನು.”

ವಾಲ್ಮೀಕಿಯ ಮಾತುಗಳನ್ನು ಕೇಳಿದ ನಾರದ ಸಾಕಷ್ಟು ಕಾಲಾವಕಾಶವನ್ನು ಪಡೆದು, ದೀರ್ಘಾಲೋಚನೆಯನ್ನು ಮಾಡಿ, ದಶರಥನ ಮಗನಾದ ರಾಮನು ಮಾತ್ರ “ಪರಿಪೂರ್ಣ” ವ್ಯಕ್ತಿಯ ಎಲ್ಲಾ ಲಕ್ಷಣಗಳನ್ನೂ ಹೊಂದಿರುವುದಾಗಿ ಹೇಳುತ್ತಾನೆ. ರಾಮನಲ್ಲಿದ್ದ ಈ ಸದ್ಗುಣಗಳ ಪ್ರಭಾವದಿಂದಾಗಿ, ಆತ ಅರಾಧಿಸಲ್ಪಡತೊಡಗಿದನೆಂದು ಹೇಳಲಾಗಿದೆ.

ಆದರೆ ರಾಮನಿಗೆ ದೈಕರಿಸಲ್ಪಡುವಂತಹ ವ್ಯಕ್ತಿತ್ವವಿತ್ತೇ? ಆತನನ್ನು ದೇವರೆಂದು ಪರಿಗಣಿಸಿ ಪೂಜೆ ಮಾಡುವವರು ಕೆಳಕಂಡ ಸತ್ಯ ಸಂಗತಿಗಳ ಕಡೆಗೆ ಗಮನ ಹರಿಸಲಿ.

ರಾಮನ ಹುಟ್ಟು ಒಂದು ಪವಾಡವೆಂಬಂತೆ ಹೇಳಲಾಗಿದೆ. ಅವನು ಶೃಂಗ ಮುನಿಯು ಸೃಷ್ಟಿಸಿದ ಪಿಂಡದಿಂದ ಕೌಸಲ್ಯೆಯ ಗರ್ಭದಲ್ಲಿ ಜನ್ಮ ತಾಳಿದನೆಂದು ಬರೆಯಲಾಗಿದೆ. ಕೌಸಲ್ಯೆ ಮತ್ತು ಶೃಂಗಮುನಿಯು ಪತಿ ಪತ್ನಿಯರಂತಲ್ಲದಿದ್ದರೂ ಸಂತಾನಕ್ಕಾಗಿ ಒಂದುಗೂಡಿದರು ಎಂಬ ಸತ್ಯವನ್ನು ಮರೆಮಾಚಲು ಹೆಣೆದಿರುವ ಕಟ್ಟು ಕಥೆಯಿದು. ಅದೇನೇ ಇರಲಿ, ರಾಮನ ಹುಟ್ಟಿನ ಮೂಲವು ಕಳಂಕಕಾರಿ ಎಂದು ಒಪ್ಪಲಾಗದಿದ್ದರೂ ಸಹಜ ರೀತಿಯದಂತೂ ಅಲ್ಲವೇ ಅಲ್ಲ. ಇದಲ್ಲದೆ ಅಷ್ಟೇ ಅಸಹಜವಾದ ಸಂಗತಿಗಳು ರಾಮನ ಹುಟ್ಟಿನೊಂದಿಗೆ ಹೆಣೆಯಲ್ಪಿಟ್ಟಿವೆ.

ರಾಮನು ವಿಷ್ಣುವಿನ ಅವತಾರವೆಂದು ಹೇಳುವುದರೊಂದಿಗೆ ವಾಲ್ಮೀಕಿಯು ರಾಮಾಯಣವನ್ನು ಆರಂಭಿಸುತ್ತಾನೆ. ವಿಷ್ಣುವು ದಶರಥನ ಮಗನಾಗಿ ಜನ್ಮ ತಾಳುವುದು ಬ್ರಹ್ಮನಿಗೆ ತಿಳಿಯುತ್ತದೆ. ರಾಮನ ಅವತಾರವು ಯಶಸ್ವಿಯಾಗಿಕೈಗೂಡಲು ರಾಮನಿಗೆ ಬಲಿಷ್ಟರಾದ ಸಹಚರರನ್ನು ಒದಗಿಸುವುದರ ಬಗ್ಗೆ ಯೋಚಿಸುತ್ತಾನೆ. ತಾನು ಯೋಚಿಸಿದಂತೆ ಆ ಕಾಲಕ್ಕೆ ಬಲಿಷ್ಟರಾದ ಸಹಚರರು ಭೂಮಿಯಲ್ಲಿಲ್ಲದಿದ್ದರಿಂದ ಅಂತಹವರನ್ನು ಬಹು ಸಂಖ್ಯೆಯಲ್ಲಿ ಸೃಷ್ಟಿಸಲು ವ್ಯವಸ್ಥೆಮಾಡುತ್ತಾನೆ, ಬ್ರಹ್ಮನ ಆಜ್ಞೆಯನ್ನು ಪರಿಪಾಲಿಸಲು ಒಪ್ಪಿಕೊಂಡ ದೇವತೆಗಳು ಸಾಮೂಹಿಕ ಸಂತಾನ ಕ್ರಿಯೆಯಲ್ಲಿ ತೊಡಗುತ್ತಾರೆ. ದೇವತಗಳ ವ್ಯಭಿಚಾರದಲ್ಲಿ ವೇಶ್ಯೆಯರಾದ ಅಪ್ಸರೆಯರು, ಅವಿವಾಹಿತ ಯಕ್ಷ ಮತ್ತು ನಾಗಕನ್ಯೆಯರಲ್ಲದೆ ರುಕ್ಷ, ವಿದ್ಯಾಧರ, ಗಂಧರ್ವ, ಕಿನ್ನರ ಮತ್ತು ವಾನರರ ಪತ್ನಿಯರನ್ನೂ ಬಳಸಿಕೊಳ್ಳಲಾಗುತ್ತದೆ. ಈ ಸಾಮೂಹಿಕ ವ್ಯಭಿಚಾರದ ಪ್ರತಿಫಲವೇ ರಾಮನ ಬೆಂಬಲಿಗರಾದ ವಾನರರು.

ಸೀತೆ ಮತ್ತು ರಾಮನ ವಿವಾಹವೂ ಸಹ ಟೀಕೆಯಿಂದ ಮುಕ್ತವಾಗಿಲ್ಲ, ಬುದ್ಧ ರಾಮಾಯಣದ ಪ್ರಕಾರ, ಸೀತೆಯು ರಾಮನ ಸಹೋದರಿ. ಇಬ್ಬರೂ ದಶರಥನ ಮಕ್ಕಳು. ಬುದ್ಧರಾಮಾಯಣದಲ್ಲಿನ ಈ ಸಂಬಂಧವನ್ನು ವಾಲ್ಮೀಕಿ ರಾಮಾಯಣ ಒಪ್ಪುವುದಿಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ ಸೀತೆ ವಿದೇಹದ ಜನಕರಾಜನ ಮಗಳು. ಆದರೆ ಇಲ್ಲಿಯೂ ಸಹ ಸೀತೆ ಜನಕರಾಜನ ಸ್ವಂತ ಮಗಳಾಗಿರುವುದಿಲ್ಲ.ತನ್ನ ಹೊಲವನ್ನು ಉಳುತ್ತಿದ್ದ ರೈತನಿಗೆ ನೆಲದಲ್ಲಿ ಹೆಣ್ಣು ಮಗುವೊಂದು ದೊರಕುತ್ತದೆ. ಆ ಮಗುವನ್ನು ಜನಕರಾಜನಿಗೆ ಉಡುಗೊರೆಯನ್ನಾಗಿ ನೀಡಲಾಗುತ್ತದೆ, ಆ ಮಗುವಿಗೆ ಸೀತೆ ಎಂದು ಹೆಸರಿಟ್ಟು ಜನಕರಾಜನು ಬೆಳೆಸುತ್ತಾನೆ. ಆದ್ದರಿಂದ ಜನಕರಾಜನ ಮಗಳೆಂಬುದು ಅರ್ಥವಿಲ್ಲದ ಪೊಳ್ಳು ಕಥೆಯಾಗುತ್ತದೆ. ಆದರೆ ಬುದ್ಧರಾಮಾಯಣದ ಕಥೆಯು ಸಹಜವಾಗಿರುವುದೇ ಅಲ್ಲದೆ, ಆರ್ಯರಲ್ಲಿ ಅಸ್ತಿತ್ವದಲ್ಲಿದ್ದ, “ಸಹೋದರ-ಸಹೋದರಿಯರ ವಿವಾಹ” ಪದ್ಧತಿಗೆ ಅನುಗುಣವಾಗಿದೆ. ಈ ಕಥೆಯು ನಿಜವೇ ಆಗಿದ್ದಲ್ಲಿ, ಸೀತಾ ರಾಮನ ವಿವಾಹವು “ಆದರ್ಶ ವಿವಾಹ”ವೆಂದು ಅನುಸರಿಸುವುದು ದಡ್ಡತನವಾಗುತ್ತದೆ. ರಾಮನಿಗೆ ಆರೋಪಿಸಿದ ಮತ್ತೊಂದು ಗುಣ. ಆತನು ಏಕಪತ್ನಿವ್ರತಸ್ಥನೆಂಬುದು. ರಾಮನ ಬಗ್ಗೆ ಇಂತಹ ಸಾಮಾನ್ಯ ಅಭಿಪ್ರಾಯ ಹೇಗೆ ರೂಪುಗೊಂಡಿತೆಂಬುದಕ್ಕೆ ವಾಸ್ತವವಾಗಿ ಯಾವುದೇ ಆಧಾರಗಳಿಲ್ಲ. ರಾಮನಿಗೆ ಹಲವಾರು ಪತ್ನಿಯರಿದ್ದರೆಂಬುದನ್ನು ಸ್ವತಃ ವಾಲ್ಮೀಕಿಯೇ ಹೇಳಿದ್ದಾನೆ. ಅಲ್ಲದೆ ರಾಮನು ತನ್ನ ನಾಮಕಾವಸ್ಥೆ ತಂದೆಯಾದ ದಶರಥನಂತೆ ಹಲವಾರು ಉಪಪತ್ನಿಯರನ್ನೂ ಪಡೆದಿದ್ದನು.

ಈಗ ರಾಮನು ವ್ಯಕ್ತಿಯಾಗಿ ಹಾಗೂ ರಾಜನಾಗಿ ಎಂತಹ ಗುಣಗಳನ್ನು ಪಡೆದಿದ್ದನು ಎಂಬುದನ್ನು ವಿಶ್ಲೇಷಿಸೋಣ. ಈತನನ್ನು ಒಬ್ಬ ವ್ಯಕ್ತಿಯಾಗಿ ವಿಶ್ಲೇಷಿಸಲು ಕೇವಲ ಎರಡು ಘಟನೆಗಳನ್ನು ಉಲ್ಲೇಖಿಸುತ್ತೇನೆ. ಒಂದನೆಯದು, ವಾಲಿಯನ್ನು ಕೊಲ್ಲುವ ಘಟನೆ ಹಾಗೂ ಎರಡನೆಯದು, ತನ್ನ ಪತ್ನಿ ಸೀತೆಯನ್ನು ನಡೆಸಿಕೊಂಡ ರೀತಿ, ಮೊದಲಿಗೆ ವಾಲಿಯ ಘಟನೆಯನ್ನು ಪರಿಶೀಲಿಸೋಣ.

ವಾಲಿ ಮತ್ತು ಸುಗ್ರೀವರಿಬ್ಬರೂ ಅಣ್ಣ ತಮ್ಮಂದಿರು. ಅವರು ವಾನರವಂಶದ ಆಳುವ ಮನೆತನಕ್ಕೆ ಸೇರಿದವರಾಗಿದ್ದು, ತಮ್ಮದೇ ಆದ ರಾಜ್ಯವನ್ನು ಹೊಂದಿರುತ್ತಾರೆ. ಕಿಷ್ಕಿಂದೆ ಅವರ ರಾಜಧಾನಿ. ಸೀತೆಯು ರಾವಣನಿಂದ ಅಪಹರಿಸಲ್ಪಟ್ಟ ಕಾಲಕ್ಕೆ, ವಾಲಿಯು ಕಿಷ್ಕಿಂದೆಯಲ್ಲಿ ರಾಜನಾಗಿ ಆಳುತ್ತಿರುತ್ತಾನೆ. ಅದೇ ಕಾಲಕ್ಕೆ ಮಾಯಾವಿಯೆಂಬ ರಾಕ್ಷಸನು ವಾಲಿಯ ಮೇಲೆ ಯುದ್ಧಕ್ಕೆ ಬರುತ್ತಾನೆ. ಇಬ್ಬರ ನಡುವೆ ನಡೆದ ಮುಷ್ಟಿ ಯುದ್ಧದಲ್ಲಿ ಮಾಯಾವಿಯು ಸೋತು, ಜೀವ ಭಯದಿಂದ ಓಡುತ್ತಾನೆ. ಮಾಯಾವಿಯನ್ನು ವಾಲಿ ಮತ್ತು ಸುಗ್ರೀವರಿಬ್ಬರೂ ಬೆನ್ನಟ್ಟುತ್ತಾರೆ. ಮಾಯಾವಿಯು ಒಂದು ಗುಹೆಯೊಳಗೆ ನುಗ್ಗುತ್ತಾನೆ. ವಾಲಿಯು ಸುಗ್ರೀವನನ್ನು ಗುಹೆಯ ಬಾಗಿಲಲ್ಲಿ ನಿಲ್ಲಿಸಿ, ತಾನು ಮಾತ್ರ ಒಳಗೆ ನುಗ್ಗುತ್ತಾನೆ. ಕೆಲವು ಕಾಲದ ನಂತರ, ಗುಹೆಯೊಳಗಿಂದ ರಕ್ತದ ಪ್ರವಾಹ ಹರಿದು ಬರುತ್ತದೆ. ಇದನ್ನು ಕಂಡು ಸುಗ್ರೀವನು ವಾಲಿಯು ಮಾಯಾವಿಯಿಂದ ಕೊಲ್ಲಲ್ಪಟ್ಟನೆಂದು ನಿರ್ಧರಿಸಿ, ಕಿಷ್ಕಿಂದೆಗೆ ಬಂದು ವಾಲಿಯ ಬದಲಿಗೆ ತಾನೇ ರಾಜನೆಂದು ಘೋಷಿಸಿಕೊಳ್ಳುತ್ತಾನೆ ಹಾಗೂ ಹನುಮಂತನನ್ನು ಪ್ರಧಾನ ಮಂತ್ರಿಯಾಗಿ ನೇಮಿಸುತ್ತಾನೆ.

ನಿಜವಾಗಿ ನಡೆದ ಸಂಗತಿಯೇನೆಂದರೆ ಕೊಲ್ಲಲ್ಪಟ್ಟವನು ವಾಲಿಯಾಗಿರದೆ, ಮಾಯಾವಿಯಾಗಿರುತ್ತಾನೆ. ಮಾಯಾವಿಯನ್ನು ಕೊಂದ ವಾಲಿ ಗುಹೆಯ ಹೊರಗೆ ಬರುತ್ತಾನೆ. ಗುಹೆಯ ಬಾಗಿಲಲ್ಲಿ ಸುಗ್ರೀವನನ್ನು ಕಾಣದೆ ಕಿಷ್ಕಿಂದೆಗೆ ವಾಪಸ್ಸಾಗುತ್ತಾನೆ. ಅಲ್ಲಿ ಸುಗ್ರೀವನು ಸಿಂಹಾಸನವನ್ನು ಆಕ್ರಮಿಸಿರುವುದನ್ನು ಕಂಡು ಪರಮಾಶ್ಚರ್ಯಗೊಳ್ಳುತ್ತಾನೆ. ತನ್ನ ಒಡಹುಟ್ಟಿದ ಸಹೋದರನು ಮಾಡಿದ ಮಹಾ ದ್ರೋಹದಿಂದ ಸಹಜವಾಗಿಯೇ ಕೋಪೋದ್ರಿಕ್ತನಾಗುತ್ತಾನೆ. ಮೊದಲನೆಯದಾಗಿ, ವಾಲಿ ಸತ್ತಿದ್ದರ ಬಗ್ಗೆ ಖಾತ್ರಿ ಮಾಡಿಕೊಳ್ಳದೆ ಸುಗ್ರೀವನು, ಕೇವಲ ರಕ್ತವನ್ನು ಕಂಡು ತನ್ನಷ್ಟಕ್ಕೆ ತಾನೇ ಊಹಿಸಿಕೊಂಡು ನಿರ್ಧಾರಕ್ಕೆ ಬರಬಾರದಾಗಿತ್ತು ಎರಡನೆಯದಾಗಿ ಸಿಂಹಾಸನಕ್ಕೆ ಉತ್ತರಾಧಿಕಾರಿಯಾದ ವಾಲಿಯ ಮಗನಾದ ಅಂಗದನನ್ನು ರಾಜನನ್ನಾಗಿ ಮಾಡಬೇಕಿತ್ತು. ಇವೆರಡನ್ನೂ ಮಾಡದ ಸುಗ್ರೀವನನ್ನು ವಾಲಿಯು ದ್ರೋಹಿ ಎಂದು ತೀರ್ಮಾನಿಸಿದ್ದರಲ್ಲಿ ತಪ್ಪೇನು ಇರಲಿಲ್ಲ. ಆದ್ದರಿಂದ, ಸುಗ್ರೀವನನ್ನು ಸಿಂಹಾಸನದಿಂದ ಕೆಳಗಿಳಿಸಿ ಕಿಷ್ಕಿಂದೆಯಿಂದ ಓಡಿಸಿಬಿಡುತ್ತಾನೆ. ಅಲ್ಲಿಂದ ಇಬ್ಬರು ಸಹೋದರರೂ ಆಜನ್ಮ ವೈರಿಗಳಾಗುತ್ತಾರೆ.

ಇದೇ ಸಮಯದಲ್ಲಿ, ರಾಮಲಕ್ಷ್ಮಣರು ಸೀತೆಗಾಗಿ ಹುಡುಕಾಡುತ್ತಿರುತ್ತಾರೆ. ಸುಗ್ರೀವ ಹನುಮಂತರು ಸಹ ವಾಲಿಯಿಂದ ಸಿಂಹಾಸನವನ್ನು ಕಸಿದುಕೊಡಬಲ್ಲ ಸ್ನೇಹಿತರಿಗಾಗಿ ಹುಡುಕಾಡುತ್ತಿರುತ್ತಾರೆ. ಆಕಸ್ಮಿಕವಾಗಿ, ಎರಡು ಗುಂಪುಗಳೂ ಭೇಟಿಯಾಗುತ್ತವೆ. ತಮ್ಮ ತಮ್ಮ ಕಷ್ಟಗಳನ್ನು ತೋಡಿಕೊಂಡ ಬಳಿಕ. ಇಬ್ಬರಲ್ಲೂ ಒಂದು ಒಪ್ಪಂದವೇರ್ಪಡುತ್ತದೆ. ಈ ಒಪ್ಪಂದದಂತೆ ರಾಮನು ವಾಲಿಯನ್ನು ಕೊಂದು ಸುಗ್ರೀವನಿಗೆ ಕಿಷ್ಕಿಂದೆಯ ಸಿಂಹಾಸನವನ್ನು ಮರಳಿ ಪಡೆಯಲು ಸಹಾಯಮಾಡಬೆಕು. ಇದಕ್ಕೆ ಪ್ರತಿಯಾಗಿ, ಸುಗ್ರೀವ ಹನುಮಂತರು ಸೀತೆಯನ್ನು ಮರಳಿ ಪಡೆಯಲು ನೆರವಾಗಬೇಕು. ವಾಲಿ ಮತ್ತು ಸುಗ್ರೀವರ ನಡುವೆ ದ್ವಂದ್ವಯುದ್ಧವನ್ನು ಏರ್ಪಡಿಸಲಾಗುತ್ತದೆ. ಒಂದೇ ರೀತಿ ಕಾಣುವ ಇಬ್ಬರಲ್ಲಿ ವಾಲಿಯನ್ನು ರಾಮನು ಗುರುತಿಸುವ ಸಲುವಾಗಿ, ಸುಗ್ರೀವನ ಕುತ್ತಿಗೆಯಲ್ಲಿ ಒಂದು ಹಾರವನ್ನು ಹಾಕಲಾಗಿರುತ್ತದೆ. ದ್ವಂದ್ವಯುದ್ಧ ನಡೆಯುತ್ತಿರುವಾಗ ರಾಮನು ಮರದ ಮರೆಯಿಂದ ಬಾಣ ಹೂಡಿ ವಾಲಿಯನ್ನು ಕೊಲ್ಲುತ್ತಾನೆ. ಸುಗ್ರೀವನು ಕಿಷ್ಕಿಂದೆಯ ರಾಜನಾಗುತ್ತಾನೆ. ವಾಲಿಯನ್ನು ಕೊಂದ ಈ ಘಟನೆ ರಾಮನ ವ್ಯಕ್ತಿತ್ವಕ್ಕೆ ಅಳಿಸಲಾಗದ ಮಸಿಯಾಗಿ ಉಳಿದಿದೆ. ವಾಲಿ ಮತ್ತು ರಾಮನ ನಡುವೆ ಯಾವುದೇ ದ್ವೇಷವಿರಲಿಲ್ಲ. ಅಲ್ಲದೆ ರಾಮನು ವಾಲಿಯನ್ನು ಕೊಲ್ಲಲು ವಾಲಿಯ ಕಡೆಯಿಂದ ಯಾವುದೇ ತಪ್ಪೂ ಜರುಗುವುದಿಲ್ಲ ಹಾಗೂ ಯಾವ ಪ್ರಚೋದನೆಯೂ ಇರುವುದಿಲ್ಲ ಮೇಲಾಗಿ ರಾಮನು ನಿರಾಯುಧನಾಗಿದ್ದ ವಾಲಿಯನ್ನು ಮರದ ಮರೆಯಿಂದ ಹೇಡಿಯಂತೆ ಕೊಂದಿದ್ದಾನೆ. ಇದು ಅತ್ಯಂತ ಹೇಯವಾದ ಪೂರ್ವ ನಿರ್ಧಾರಿತ ಕೊಲೆಯೇ ಹೊರತು ವಿರೋಚಿತ ಯುದ್ಧವಲ್ಲ.

ಇನ್ನು ತನ್ನ ಪತ್ನಿಯಾದ ಸೀತೆಯನ್ನು ರಾಮ ಹೇಗೆ ನಡೆಸಿಕೊಡನೆಂಬುದನ್ನು ನೋಡೋಣ. ಸುಗ್ರೀವ ಮತ್ತು ಹನುಮಾನರು ಒದಗಿಸಿದ ವಾನರ ಸೈನ್ಯದೊಂದಿಗೆ, ರಾಮನು ಲಂಕೆಗೆ ದಂಡೆತ್ತಿ ಹೋಗುತ್ತಾನೆ. ಇಲ್ಲಿಯೂ ಸಹ ವಾಲಿ ಸುಗ್ರೀವರ ನಡುವೆ ಮಾಡಿದಂತಹ ಅಲ್ಪತನವನ್ನೆ ಮಾಡುತ್ತಾನೆ. ರಾವಣನ ತಮ್ಮನಾದ ವಿಭೀಷಣನಿಗೆ, ರಾವಣ ಮತ್ತು ಆತನ ಮಗನಾದ ಇಂದ್ರಜಿತ್‌ನನ್ನು ಕೊಂದು, ಲಂಕೆಯ ಪಟ್ಟಾಭಿಷೇಕ ಮಾಡುವ ಆಸೆಯನ್ನು ತೋರಿಸಿ, ಆತನ ಸಹಾಯ ಪಡೆಯುತ್ತಾನೆ. ರಣರಂಗದಲ್ಲಿ, ರಾಮನು ರಾವಣನನ್ನೂ ಇಂದ್ರಿಜಿತ್‌ನನ್ನೂ ಕೊಲ್ಲುತ್ತಾನೆ. ಯುದ್ಧ ಮುಗಿಯುತ್ತಿದ್ದಂತೆ, ರಾಮನು ಮಾಡುವ ಮೊದಲ ಕೆಲಸವೇನೆಂದರೆ, ರಾವಣನ ಕಳೇಬರಹಕ್ಕೆ ಅಂತ್ಯ ಸಂಸ್ಕಾರ ನಡೆಸುವುದು, ಅನಂತರ ಆತನ ಮುಂದಿನ ಆಸಕ್ತಿ ವಿಭೀಷಣನಿಗೆ ಪಟ್ಟಾಭಿಷೇಕ ಮಾಡುವುದಾಗಿರುತ್ತದೆ. ಇದೆಲ್ಲಾ ಮುಗಿದ ಮೇಲೆ, ಕೊನೆಯಲ್ಲಿ ಹನುಮಂತನನ್ನು ಸೀತೆಯ ಬಳಿಗೆ ಕಳುಹಿಸಿ, ತಾನು ಮತ್ತು ಲಕ್ಷ್ಮಣನು ಆರೋಗ್ಯವಾಗಿಯೂ ಸಂತೋಷವಾಗಿಯೂ ಇರುವುದಾಗಿ ಮತ್ತು ತಾವು ರಾವಣನನ್ನು ಕೊಂದಿರುವುದಾಗಿ ಸಂದೇಶ ಕಳುಹಿಸುತ್ತಾನೆ.

ರಾವಣನ ಅಂತ್ಯಕ್ರಿಯೆಗಳನ್ನು ಮುಗಿಸಿದ ಕೂಡಲೇ, ಆತ ಮಾಡಬೇಕಾಗಿದ್ದ ಮೊದಲ ಕೆಲಸ, ಸೀತೆಯ ಬಳಿಗೆ ಹೋಗುವುದು. ಸೀತೆಗಿಂತ ಆತನಿಗೆ ಪಟ್ಟಾಭಿಷೇಕವೇ ಮುಖ್ಯವಾಗಿರುತ್ತದೆ. ಪಟ್ಟಾಭಿಷೇಕ ಮುಗಿದ ಬಳಿಕವೂ ಸಹ, ಆತನೇ ಸೀತೆಯ ಬಳಿಗೆ ಹೋಗುವುದರ ಬದಲು ಹನುಮಂತನನ್ನು ಕಳುಹಿಸುತ್ತಾನೆ. ಆತ ಕಳುಹಿಸುವ ಸಂದೇಶವಾದರೂ ಏನು? ಆಕೆಯನ್ನು ಕರೆತರುವಂತೆ ತಿಳಿಸುವ ಬದಲು ತಾನು ಆರೋಗ್ಯವಾಗಿರುವುದನ್ನು ತಿಳಿಸಲು ಹನುಮಂತನಿಗೆ ಹೇಳುತ್ತಾನೆ. ಸೀತೆಯೇ ರಾಮನನ್ನು ನೋಡುವ ಬಯಕೆಯನ್ನು ಹನುಮಂತನಲ್ಲಿ ವ್ಯಕ್ತಪಡಿಸುತ್ತಾಳೆ. ರಾವಣನಿಂದ ಅಪಹರಿಸಲ್ಪಟ್ಟ ಹತ್ತು ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದ, ತನ್ನ ಪತ್ನಿ ಸೀತೆಯನ್ನು ಕಾಣಲು ರಾಮನು ಹೋಗುವುದಿಲ್ಲ. ಆಕೆಯನ್ನು ಕಂಡ ರಾಮನು ಹೇಳಿದ್ದಾದರೂ ಏನು? ಘೋರವಾದ ಮಾನಸಿಕ ಯಾತನೆಯಲ್ಲಿ ನರಳಿದ ಪತ್ನಿಯನ್ನು ಕುರಿತು ಮಾನಯ ಅನುಕಂಪವುಳ್ಳ ಯಾವನೇ ಪುರುಷನು ನಡೆದುಕೊಳ್ಳದ ರೀತಿಯಲ್ಲಿ ರಾಮನು ವರ್ತಿಸಿದನೆಂದರೆ ನಂಬಲು ಅಸಾಧ್ಯವಾಗುತ್ತದೆ. ಸೀತೆಯನ್ನು ಕುರಿತು ರಾಮನು ಹೇಳುವ ಮಾತುಗಳು ಇಂತಿವೆ:

“ನಿನ್ನನ್ನು ಕದ್ದೊಯ್ದಿದ್ದ ನನ್ನ ವೈರಿಯನ್ನು ಯುದ್ಧದಲ್ಲಿ ಗೆದ್ದದ್ದಕ್ಕಾಗಿ ನಿನ್ನನ್ನು ಬಹುಮಾನವನ್ನಾಗಿ ನಾನು ಪಡೆದಿರುವೆ. ನನ್ನ ವೈರಿಯನ್ನು ಶಿಕ್ಷಿಸಿ, ಕಳೆದು ಹೋಗಿದ್ದ ನನ್ನ ಗೌರವವನ್ನು ಮರಳಿ ಪಡೆದಿರುವೆ. ಜಗತ್ತು ನನ್ನ ಕಾರ್ಯಸಾಹಸವನ್ನು ಕಂಡಿದೆ. ನನ್ನ ಶ್ರಮ ಸಾರ್ಥಕವಾಯಿತು. ಸೀತೆ, ನಾನು ಇಲ್ಲಿಯವರೆಗೆ ಬಂದದ್ದು, ನಿನ್ನ ಸಲುವಾಗಿ ಅಲ್ಲ, ನಾನು ಇಲ್ಲಿಗೆ ಬಂದದ್ದು, ರಾವಣನನ್ನು ಕೊಂದು, ನನ್ನ ಕೀರ್ತಿಗೆ ಹತ್ತಿದ್ದ ಕಳಂಕವನ್ನು ಕಳೆಯುವುದಕ್ಕಾಗಿ” ಸೀತೆಗೆ ರಾಮನು ತೋರಿದ ಇಂತಹ ವರ್ತನೆಗಿಂತ ಕ್ರೂರವಾದದ್ದು ಬೇರೊಂದುಂಟೇ? ಆತ ಇಲ್ಲಿಗೆ ನಿಲ್ಲಿಸದೆ ಮುಂದುವರಿಸುತ್ತಾನೆ.

“ನಾನು ನಿನ್ನ ಶೀಲವನ್ನು ಶಂಕಿಸುತ್ತೇನೆ. ನೀನು ರಾವಣನಿಂದ ಕೆಡಿಸಲ್ಪಟ್ಟಿರಬಹುದು. ನಿನ್ನನ್ನು ನೋಡುವುದಕ್ಕೆ ನನಗೆ ಅಸಹ್ಯವಾಗುತ್ತದೆ. ಜಾನಕಿ, ನಿನಗೆ ಇಷ್ಟಬಂದಲ್ಲಿಗೆ ಹೋಗಲು, ನಿನಗೆ ಅನುಮತಿ ಕೊಡುತ್ತಿದ್ದೇನೆ. ನಿನಗೂ ನನಗೂ ಯಾವ ಸಂಬಂಧವೂ ಇಲ್ಲ. ನಿನ್ನನ್ನು ಮರಳಿ ಪಡೆಯುವುದು ನನ್ನ ಗುರಿಯಾಗಿತ್ತು. ಅದನ್ನು ಸಾಧಿಸಿದ ತೃಪ್ತಿ ನನಗೆ ಸಾಕು. ನಿನ್ನಂತಹ ಸುಂದರಿಯಾದ ಹೆಣ್ಣನ್ನು ರಾವಣನು ಸುಖಿಸದೆ ಬಿಟ್ಟಿರಲಾರ ಎಂದು ನನಗೆ ಅನ್ನಿಸುತ್ತದೆ.”

ರಾಮನಿಂದ ಇಂತಹ ನಿಂದನಾತ್ಮಕ ಮಾತುಗಳನ್ನು ಕೇಳಿದ ಸೀತೆ, ಸಹಜವಾಗಿಯೇ, ರಾಮನನ್ನು ನೀಚನೆಂದೂ ಕ್ಷುಲ್ಲಕನೆಂದೂ ಕರೆಯುತ್ತಾಳೆ. ಹನುಮಂತನು ಮೊದಲ ಬಾರಿಗೆ ತನ್ನನ್ನು ಕಾಣಲು ಬಂದಿದ್ದಾಗಲೇ, ತಾನು ಅಪಹರಿಸಲ್ಪಟ್ಟಿದ್ದರಿಂದ ತನ್ನನ್ನು ರಾಮನು ತೊರೆದಿರುವುದಾಗಿ ತಿಳಿಸಿದಿದ್ದರೆ, ತಾನು ಆ ಕೂಡಲೇ ಆತ್ಮಹತ್ಯೆ ಮಾಡಿಕೊಂಡು, ಆತನು ಇದುವರೆವಿಗೂ ತೆಗೆದುಕೊಂಡ ಎಲ್ಲಾ ಬಾಧೆಗಳನ್ನು ತಪ್ಪಿಸುತ್ತಿದ್ದೆ ಎನ್ನುತ್ತಾಳೆ. ತನ್ನ ಪಾತಿವ್ರತ್ಯವನ್ನು ನಿರೂಪಿಸಲು ಅಗ್ನಿಪ್ರವೇಶವನ್ನು ಮಾಡಿ, ಯಾವುದೇ ಅಪಾಯವಿಲ್ಲದೆ, ಹೊರಬರುತ್ತಾಳೆ. ಇದರಿಂದ ಸಂತೋಷಗೊಂಡ ದೇವತೆಗಳು ಸೀತೆ ಪುನೀತೆಯೆಂದು ಘೋಷಿಸುತ್ತಾರೆ. ಇಷ್ಟೆಲ್ಲಾ ಆದ ನಂತರ, ರಾಮನು ಸೀತೆಯನ್ನು ಅಯೋಧ್ಯೆಗೆ ಕರೆದೊಯ್ಯಲು ಒಪ್ಪುತ್ತಾನೆ.

ಅಯೋಧ್ಯೆಗೆ ಮರಳಿದ ಮೇಲೆ ರಾಮನು ರಾಜನಾಗುತ್ತಾನೆ. ಸೀತೆ ರಾಣಿಯಾಗುತ್ತಾಳೆ. ಆದರೆ, ಕೆಲವೇ ದಿನಗಳಲ್ಲಿ, ಆಕೆ ರಾಣಿಯ ಪಟ್ಟವನ್ನು ಕಳೆದುಕೊಳ್ಳುತ್ತಾಳೆ. ಪಟ್ಟಾಭಿಷೇಕವಾದ ಕೆಲವೇ ದಿನಗಳಲ್ಲಿ, ಸೀತೆ ಗರ್ಭಿಣಿಯಾದಳು ಎಂದು ವಾಲ್ಮೀಕಿ ತನ್ನ ರಾಮಾಯಣದಲ್ಲಿ ಬರೆದಿದ್ದಾನೆ. ಆಕೆ ಗರ್ಭಿಣಿಯಾದುದನ್ನು ಕಂಡ ಕೆಲವು ನೀಚ ಜನರು, ಆಕೆ ರಾವಣನಿಂದಲೇ ಗರ್ಭ ಧರಿಸಿರಬಹುದೆಂದು ಸುದ್ದಿ ಹರಡುತ್ತಾರೆ. ಹಾಗೂ ಅಂತಹವಳನ್ನು ವಾಪಸ್ಸು ಕರೆತಂದ ರಾಮನನ್ನು ನಿಂದಿಸುತ್ತಾರೆ. ಈ ಹೊಲಸು ಗಾಳಿಸುದ್ದಿಯು ಆಸ್ಥಾನ ವಿಧೂಷಕನಾದ ಭದ್ರನ ಮೂಲಕ ರಾಮನಿಗೆ ತಿಳಿಯುತ್ತದೆ. ಈ ಸುದ್ದಿಯನ್ನು ಕೇಳಿ ಸಹಜವಾಗಿಯೇ, ರಾಮನು ತಲ್ಲಣಗೊಳ್ಳುತ್ತಾನೆ. ತನಗೆ ಒದಗಿದ ಅಪಕೀರ್ತಿಯಿಂದ ಕುಸಿದುಹೋಗುತ್ತಾನೆ. ಇದು ತೀರ ಸಹಜವಾದದ್ದು. ಆದರೆ ತನಗೆ ಬಂದ ಅಪಕೀರ್ತಿಯನ್ನು ತೊಳೆದುಕೊಳ್ಳಲು ಆತನು ಅನುಸರಿಸಿದ ಮಾರ್ಗ ಮಾತ್ರ ತೀರಾ ಅಸಹಜವಾದದ್ದು. ರಾಮನು ಯೋಚಿಸಿದ ಸುಲಭವಾದ ಹಾಗೂ ಕ್ರೂರವಾದ ಪರಿಹಾರ, ಸೀತೆಯನ್ನು ತ್ಯಜಿಸುವುದು, ಅದೂ ಸಹ ತುಂಬು ಗರ್ಭಿಣಿಯನ್ನು, ಯಾರ ಸಹಕಾರ ಸ್ನೇಹಗಳಿಲ್ಲದೆ, ಆಕೆಯ ಅರಿವಿಗೂ ಬಾರದಂತೆ, ಕಾಡಿನ ಮಧ್ಯೆಬಿಟ್ಟು ಬರುವುದು. ಸೀತೆಯನ್ನು ತ್ಯಜಿಸುವ ಆಲೋಚನೆ ರಾಮನಿಗೆ ತಕ್ಷಣಕ್ಕೆ ಹೊಳೆದುದಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಆ ಯೋಚನೆಯ ಬೀಜಾಂಕುರ ಮತ್ತು ಬೆಳವಣಿಗೆ ಮತ್ತು ಅದನ್ನು ಕಾರ್ಯಗತಗೊಳಿಸುವುದರ ಬಗ್ಗೆ ವಿವರವಾಗಿ ಹೇಳುವುದು ಅವಶ್ಯಕ. ಗಾಳಿಸುದ್ದಿಯು ನಗರದಾದ್ಯಂತ ಹರಡಿರುವುದನ್ನು ಭದ್ರನು ಹೇಳಿದಾಗ, ರಾಮನು ತನ್ನ ಸಹೋದರನನ್ನು ಕರೆದು, ತನ್ನ ಮನಸ್ಸಿನಲ್ಲಿದ್ದುದನ್ನು ಹೇಳುತ್ತಾನೆ. “ಸೀತೆಯ ಶೀಲ ಮತ್ತು ಪಾತಿವ್ರತ್ಯವು ಲಂಕೆಯಲ್ಲಿ ದೇವತೆಗಳ ಸಮ್ಮುಖದಲ್ಲಿ ನಿರೂಪಿಸಲ್ಪಟ್ಟಿತು. ತಾನೂ ಸಹ ಆಕೆಯ ಪಾವಿತ್ರ್ಯವನ್ನು ನಂಬಿದೆ. ಆದರೆ ಜನತೆ ಸೀತೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹಾಗೂ ನನ್ನನ್ನೂ ನಿಂದಿಸುತ್ತಿದ್ದಾರೆ. ಯಾರೇ ಆಗಲಿ, ಇಂತಹ ಅಪಕೀರ್ತಿಯನ್ನು ಸಹಿಸುವುದಿಲ್ಲ. ಗೌರವವೆಂಬುದು ಬಹುದೊಡ್ಡ ಆಸ್ತಿ. ದೇವತೆಗಳಿಗೂ, ಮಹಾಪುರುಷರೂ ಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಸಾಕಷ್ಟು ಹೆಣಗಿದ್ದಾರೆ. ಇಂತಹ ಅಗೌರವವನ್ನು ಅಪಕೀರ್ತಿಯನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ. ಇಂತಹ ಅಪಕೀರ್ತಿಯನ್ನು ಕಳೆದುಕೊಳ್ಳಲು, ನಾನು ನಿಮ್ಮನ್ನೂ ತೊರೆಯಲು ಸಿದ್ಧ. ಹಾಗಿರುವಲ್ಲಿ ಸೀತೆಯನ್ನು ತ್ಯಜಿಸಲು ನಾನು ಹೇಸುತ್ತೇನೆ ಎಂದು ತಿಳಿಯಬೇಡಿ.”

ಇಲ್ಲಿ ನಮಗೆ ತಿಳಿಯುವುದು ಏನೆಂದರೆ, ತನ್ನ ವಿರುದ್ಧ ಎದ್ದಿದ್ದ ಅಪಪ್ರಚಾರವನ್ನು ತಡೆಯಲು ಸುಲಭವಾದ ಮಾರ್ಗ ಸೀತೆಯನ್ನು ತ್ಯಜಿಸುವುದು ಎಂದು ರಾಮನು ಮೊದಲೇ ನಿರ್ಧರಿಸಿಬಿಟ್ಟಿದ್ದನು. ತಾನು ಅನುಸರಿಸುವ ಮಾರ್ಗ ಸರಿಯೇ, ತಪ್ಪೇ ಎಂದು ಯೋಚಿಸುವ ತಾಳ್ಮೆಯೂ ಆತನಲ್ಲಿರಲಿಲ್ಲ, ಆತನಿಗೆ ತನ್ನ ಪ್ರತಿಷ್ಟೆ ಮತ್ತು ಹೆಸರು ಮುಖ್ಯವಾಗಿತ್ತೇ ಹೊರತು, ಸೀತೆಯ ಜೀವ ಲೆಕ್ಕಕ್ಕೇ ಇರಲಿಲ್ಲ. ಒಬ್ಬ ರಾಜನಾಗಿ ಹಾಗೂ ತನ್ನ ಪತ್ನಿಯ ಮುಗ್ದತೆಯ ಬಗ್ಗೆ ಅರಿವಿದ್ದ ಹೊಣೆಯರಿತ ಪತಿಯಾಗಿ, ರಾಮನು ಜನರ ನಿಂದನೆಯನ್ನು ನಿವಾರಿಸಲು ಮಾನಯ ಮಾರ್ಗವನ್ನು ಆಲೋಚಿಸುವ ಗೋಜಿಗೇ ಹೋಗಲಿಲ್ಲ. ಜನರು ಹಬ್ಬಿಸಿದ ಗಾಳಿ ಸುದ್ದಿಗೆ ರಾಮನು ಸುಲಭವಾಗಿ ಶರಣಾಗುತ್ತಾನೆ. ರಾಮನ ಇಂತಹ ದುರ್ಬಲ ಹಾಗೂ ಹೇಡಿತನದ ನಡವಳಿಕೆಯನ್ನೇ ಪ್ರಜಾಸತ್ತಾತ್ಮಕ ವರ್ತನೆ ಎಂದು ಹಿಂದೂಗಳೂ ಹೇಳಬಹುದು. ಇದನ್ನೇ ಸರಿಯೆಂದು ಒಪ್ಪಿಕೊಂಡರೂ, ರಾಮನು ತನ್ನ ಕ್ರೂರ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿದ ವಿಧಾನವನ್ನು ಯಾರೂ ಒಪ್ಪುವುದಿಲ್ಲ. ತನ್ನ ಯೋಜನೆಯಿಂದ ಆಗುವ ಪರಿಣಾಮವನ್ನು ಅನುಭವಿಸುವ ಏಕೈಕ ವ್ಯಕ್ತಿ ಸೀತೆ. ಆದರೆ ಆಕೆಗೆ ಅದರ ಅರಿವೇ ಇರುವುದಿಲ್ಲ. ಉಳಿದಂತೆ ತನ್ನ ತಮ್ಮಂದಿರೆಲ್ಲರಿಗೂ ರಾಮನು ತನ್ನ ಯೋಜನೆಯ ಕಾರ್ಯವೈಖರಿಯನ್ನು ತಿಳಿಸಿರುತ್ತಾನೆ. ತನ್ನ ಯೋಜನೆಯನ್ನು ಬಹುದೊಡ್ಡ ರಹಸ್ಯವೆಂಬಂತೆ ಸೀತೆಯಿಂದ ಮುಚ್ಚಿಟ್ಟ ರಾಮ ಸರಿಯಾದ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ದುರದೃಷ್ಟವಶಾತ್ ಸೀತೆಯೇ ಅಂತಹ ಅವಕಾಶವನ್ನು ರಾಮನಿಗೆ ಒದಗಿಸಿಕೊಡುತ್ತಾಳೆ. ಗರ್ಭಿಣಿ ಸ್ತ್ರೀಯರಿಗೆ ಅನೇಕ ಹಂಬಲ, ಬಯಕೆಗಳಿರುತ್ತವೆ. ರಾಮನಿಗೆ ಇದು ತಿಳಿದಿರುತ್ತದೆ. ಒಂದು ದಿನ, ಸೀತೆಗೇನಾದರೂ ಅಂತಹ ತೀವ್ರವಾದ ಬಯಕೆಗಳಿವೆಯೇ, ಎಂದು ರಾಮನು ಕೇಳುತ್ತಾನೆ. ಹೌದೆಂದು ಹೇಳಿದ ಸೀತೆ, ಗಂಗಾನದಿ ತೀರದಲ್ಲಿರುವ ತಪಸ್ವಿಗಳ ಆಶ್ರಮದ ಬಳಿ, ಹಣ್ಣು-ಹಂಪಲಗಳನ್ನು ತಿನ್ನುತ್ತಾ ಕನಿಷ್ಟ ಒಂದು ರಾತ್ರಿಯನ್ನಾದರೂ ಕಳೆಯುವ ಬಯಕೆಯಿರುವುದಾಗಿ ಹೇಳುತ್ತಾಳೆ. ಇದನ್ನು ಕೂಡಲೇ ರಾಮನು “ಪ್ರಿಯೆ, ಸಾವಧಾನದಿಂದಿರು, ನಾಳೆಯೇ ನಿನ್ನನ್ನು ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ” ಎನ್ನುತ್ತಾನೆ.ಪಾಪ ಸೀತೆ, ಈ ಮಾತನ್ನು ಪ್ರೇಮಮಯಿ ಗಂಡನ ಪ್ರಾಮಾಣಿಕ ಭರವಸೆಯೆಂದು ಭಾವಿಸುತ್ತಾಳೆ. ಆದರೆ, ರಾಮನು ಮಾಡಿದ್ದಾದರೂ ಏನು? ಸೀತೆಯನ್ನು ತೊರೆಯುವ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಲು ಸದಾವಕಾಶವೆಂದು ತಿಳಿಯುತ್ತಾನೆ. ಅದರಂತೆ, ತನ್ನ ತಮ್ಮಂದಿರನ್ನು ಕರೆದು ರಹಸ್ಯ ಸಭೆಯನ್ನು ನಡೆಸಿದ ರಾಮ, ಸೀತೆಯ ಬಯಕೆಯನ್ನೇ ಆಕೆಯನ್ನು ತ್ಯಜಿಸುವ ಮಾರ್ಗವನ್ನಾಗಿ ಬಳಸುವುದಾಗಿ ಬಹಿರಂಗಪಡಿಸುತ್ತಾನೆ. ಇದರಲ್ಲಿ, ಸೀತೆಯ ಪರ ಮಧ್ಯಸ್ಥಿಕೆ ವಹಿಸುವುದಾಗಲೀ ಅಥವಾ ಅಡ್ಡ ಬರುವುದಾಗಲೀ ಮಾಡಿದ್ದಲ್ಲಿ, ತನ್ನ ತಮ್ಮಂದಿರನ್ನೇ ಪರಮ ವೈರಿಗಳನ್ನಾಗಿ ಪರಿಗಣಿಸುವುದಾಗಿ ಎಚ್ಚರಿಸುತ್ತಾನೆ. ನಂತರ, ಮರುದಿನ ಸೀತೆಯನ್ನು ರಥದಲ್ಲಿ ಕರೆದೊಯ್ದು, ಗಂಗಾನದಿಯ ತೀರದ ಕಾಡಿನ ನಡುವಿರುವ ಆಶ್ರಮದ ಬಳಿಯಲ್ಲಿ ಬಿಟ್ಟುಬರಲು ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ. ಈ ವಿಷಯವನ್ನು ಸೀತೆಗೆ ಹೇಗೆ ತಿಳಿಸುವುದೆಂದು ಕಸಿವಿಸಿಗೊಳ್ಳುತ್ತಿದ್ದ ಲಕ್ಷ್ಮಣನಿಗೆ ರಾಮನು, ಈಗಾಗಲೇ ಸೀತೆಯೆ ಕೆಲವು ಕಾಲವನ್ನು ಆಶ್ರಮದ ಬಳಿ ಕಳೆಯುವ ಬಯಕೆ ವ್ಯಕ್ತಪಡಿಸಿರುವುದನ್ನು ಹೇಳುತ್ತಾನೆ. ಈ ಇಡೀ ಚರ್ಚೆ ರಾತ್ರಿಯ ವೇಳೆ ನಡೆಯುತ್ತದೆ. ಮರುದಿನ ಬೆಳಿಗ್ಗೆ ಲಕ್ಷ್ಮಣನು ಕುದುರೆಗಳನ್ನು ರಥಕ್ಕೆ ಕಟ್ಟಲು ಸುಮಂತನಿಗೆ ಹೇಳುತ್ತಾನೆ. ರಥವನ್ನು ಸಿದ್ಧಗೊಳಿಸಿರುವುದಾಗಿ ಸುಮಂತನು ಹೇಳುತ್ತಾನೆ. ನಂತರ ಲಕ್ಷ್ಮಣನು ಅರಮನೆಯೊಳಕ್ಕೆ ನಡೆದು, ಸೀತೆಯನ್ನು ಭೇಟಿಯಾಗುತ್ತಾನೆ. ಆಶ್ರಮದ ಬಳಿ ಕೆಲವು ಕಾಲ ಕಳೆಯುವ ಬಯಕೆಯನ್ನು ರಾಮನಲ್ಲಿ ವ್ಯಕ್ತಪಡಿಸಿದುದನ್ನು ಹಾಗೂ ಆ ಬಯಕೆಯನ್ನು ನೆರವೇರಿಸುವುದಾಗಿ ರಾಮನು ಭರವಸೆ ಕೊಟ್ಟಿರುವುದನ್ನು, ಸೀತೆಗೆ ನೆನಪಿಸಿದ ಲಕ್ಷ್ಮಣನು, ಆ ಕಾರ‍್ಯವನ್ನು ನಿರ್ವಹಿಸುವ ಜವಾಬ್ದಾರಿಯನ್ನು ರಾಮನು ತನಗೆ ವಹಿಸಿರುವುದಾಗಿ ಹೇಳುತ್ತಾನೆ. ಹೊರಗಡೆ ರಥವು ಸಿದ್ಧವಾಗಿರುವುದನ್ನು ತಿಳಿಸಿ “ನಾಗ ಹೊರಡೋಣ” ಎನ್ನುತ್ತಾನೆ. ರಾಮನ ಬಗ್ಗೆ ಮನಸ್ಸಿನಲ್ಲಿ ತುಂಬಾ ಕೃತಜ್ಞತೆಯನ್ನು ತುಂಬಿಕೊಂಡು, ಸೀತೆ ರಥವನ್ನೇರುತ್ತಾಳೆ. ಲಕ್ಷ್ಮಣನು ಜೊತೆಗಾರನಾಗಿ, ಸುಮಂತನು ಸಾರಥಿಯಾಗಿ ರಥವು ಗೊತ್ತುಪಡಿಸಿದ ಸ್ಥಳದತ್ತ ನಡೆಯುತ್ತದೆ. ಕೊನೆಗೆ, ಗಂಗೆಯ ತೀರವನ್ನು ತಲುಪುತ್ತಾರೆ. ಬೆಸ್ತರ ಸಹಾಯದಿಂದ ಗಂಗಾನದಿಯನ್ನು ದಾಟುತ್ತಾರೆ. ಕಣ್ಣಿಂದ ಬಿಸಿಯಾದ ಕಂಬನಿಯನ್ನು ಸುರಿಸುತ್ತಾ ಲಕ್ಷ್ಮಣನು, ಸೀತೆಯ ಕಾಲುಗಳ ಬಳಿ ಬಿದ್ದು ಹೇಳುತ್ತಾನೆ: ‘ಓ ನಿಷ್ಕಳಂಕ ಮಾತೆ, ನಾನು ಮಾಡುತ್ತಿರುವ ಅಪರಾಧಕ್ಕಾಗಿ ನನ್ನನ್ನು ಕ್ಷಮಿಸು. ನಿನ್ನನ್ನು ಮನೆಯಲ್ಲಿ ಇರಿಸಿಕೊಂಡು, ರಾಮನು ಜನರ ನಿಂದೆಗೆ ತುತ್ತಾದುದರಿಂದ ನಿನ್ನನ್ನು ಇಲ್ಲಿ ತೊರೆದು ಹೋಗಬೇಕೆಂದು ನನಗೆ ಆಜ್ಞೆಯನ್ನು ವಿಧಿಸಲಾಗಿದೆ”

ರಾಮನಿಂದ ತ್ಯಜಿಸಲ್ಪಟ್ಟ ಸೀತೆಯನ್ನು, ಕಾಡಿನಲ್ಲಿ ಸಾಯಲು ಬಿಟ್ಟು ಬರಲಾಯ್ತು. ಅಲ್ಲಿಯೇ ಪಕ್ಕದಲ್ಲಿದ್ದ ವಾಲ್ಮೀಕಿ ಆಶ್ರಮದಲ್ಲಿ ಆಶ್ರಯ ಪಡೆದ ಸೀತೆಯನ್ನು ವಾಲ್ಮೀಕಿಯೇ ಕಾಪಾಡುತ್ತಾನೆ. ಕೆಲವು ಕಾಲದ ನಂತರ, ಅಲ್ಲಿಯೇ, ಸೀತೆಯು ಲವಕುಶರೆಂಬ ಅವಳಿಗಳಿಗೆ ಜನ್ಮ ನೀಡುತ್ತಾಳೆ. ಮೂವರೂ ವಾಲ್ಮೀಕಿಯೊಂದಿಗೆ ಜೀವಿಸುತ್ತಾರೆ. ವಾಲ್ಮೀಕಿಯು ಅವಳಿ ಮಕ್ಕಳಿಗೆ ವಿದ್ಯೆ ಬುದ್ದಿ ಕಲಿಸಿ, ಬೆಳೆಸುತ್ತಾನೆ. ತಾನೇ ರಚಿಸಿದ ರಾಮಾಯಣವನ್ನು ಸುಶ್ರಾವ್ಯವಾಗಿ ಹಾಡಲು ಕಲಿಸುತ್ತಾನೆ. ಸುಮಾರು ಹನ್ನೆರಡು ವರ್ಷಗಳ ಕಾಲ, ಲವಕುಶರು ಕಾಡಿನಲ್ಲಿಯೇ ಕಳೆಯುತ್ತಾರೆ. ಈ ಆಶ್ರಮವು ಅಯೋಧ್ಯೆಗೆ ಬಹಳ ದೂರವಿರುವುದಿಲ್ಲ. ಈ ಹನ್ನೆರಡು ವರ್ಷಗಳ ಕಾಲಾವಧಿಯಲ್ಲಿ ಆದರ್ಶ ಪತಿ ಹಾಗೂ ಪ್ರೇಮಮಯಿ ತಂದೆ, ಒಂದೇ ಒಂದು ಬಾರಿಯಾದರೂ ಸೀತೆ ಸತ್ತಳೇ ಬದುಕಿರುವಳೇ ಎಂದು ವಿಚಾರಿಸುವ ಗೋಜಿಗೆ ಹೋಗುವುದಿಲ್ಲ. ಹನ್ನೆರಡು ವರ್ಷಗಳ ನಂತರ, ರಾಮನು ಸೀತೆಯನ್ನು ಅತ್ಯಾಶ್ಚರ್ಯಕರ ರೀತಿಯಲ್ಲಿ ಭೇಟಿಯಾಗುತ್ತಾನೆ. ರಾಮನು ಅಶ್ವಮೇಧಯಾಗ ವನ್ನು ನಡೆಸಲು ನಿಶ್ಚಯಿಸಿ, ಎಲ್ಲ ಋಷಿಗಳಿಗೂ ಆಹ್ವಾನವನ್ನು ಕಳಿಸುತ್ತಾನೆ. ಆದರೆ ಅಯೋಧ್ಯೆಗೆ ಹತ್ತಿರದಲ್ಲೇ ಇರುವ ವಾಲ್ಮೀಕಿ ಮಹರ್ಷಿಗೆ ಆಹ್ವಾನವನ್ನು ಕಳುಹಿಸುವುದಿಲ್ಲ. ಆಹ್ವಾನವಿಲ್ಲದಿದ್ದರೂ, ವಾಲ್ಮೀಕಿಯೂ ಲವಕುಶರೊಂದಿಗೆ ಅಯೋಧ್ಯೆಗೆ ಬರುತ್ತಾನೆ. ಲವಕುಶರನ್ನು ತನ್ನ ಶಿಷ್ಯರೆಂದು ಹೇಳಿಕೊಳ್ಳುತ್ತಾನೆ. ಯಜ್ಞ ನಡೆಯುತ್ತಿರುವ ಸಂದರ್ಭದಲ್ಲಿ ಸೀತೆಯ ಮಕ್ಕಳು ಸಭಿಕರ ಮುಂದೆ ರಾಮಾಯಣವನ್ನು ಮನಮುಟ್ಟುವಂತೆ ಹಾಡುತ್ತಾರೆ. ಹರ್ಷಗೊಂಡ ರಾಮನು, ಆ ಮಕ್ಕಳ ಬಗ್ಗೆ ವಿಚಾರಿಸಿದಾಗ, ಅವರು ಸೀತೆಯ ಮಕ್ಕಳೆಂಬುದು ತಿಳಿಯುತ್ತದೆ. ರಾಮನಿಗೆ ಆಗಷ್ಟೇ ಸೀತೆಯ ನೆನಪು ಆಗುತ್ತದೆ. ಆಗ ಅವನು ಮಾಡುವುದಾದರೂ ಏನು? ನಮ್ಮ ತಂದೆ ತಾಯಿಗಳ ಅಪರಾಧಗಳ ಬಗ್ಗೆ ಏನನ್ನೂ ಅರಿಯದ ಹಾಗೂ ಯಾವ ತಪ್ಪೂ ಮಾಡದೆ ಶಿಕ್ಷೆಗೊಳಗಾಗಿರುವ ಮುಗ್ಧ ಮಕ್ಕಳನ್ನು ಕುರಿತು, ವಾಲ್ಮೀಕಿಯೇ ಸೀತೆಯನ್ನು ಸಭಿಕರ ಮುಂದೆ ಹಾಜರು ಪಡಿಸಲಿ ಎನ್ನುತ್ತಾನೆ. ಆಕೆ ಸುಶೀಲಳೂ, ಪತಿವ್ರತೆಯೂ ಆಗಿದ್ದ ಪಕ್ಷದಲ್ಲಿ, ತನ್ನ ಪಾವಿತ್ರ್ಯವನ್ನು ನಿರೂಪಿಸಿ, ತನಗೆ ಮತ್ತು ಆಕೆಗೆ ಅಂಟಿರುವ ಕಳಂಕವನ್ನು ನೀಗಲಿ ಎಂದು ಹೇಳುತ್ತಾನೆ. ಇಂತಹುದೇ ಪರೀಕ್ಷೆಯನ್ನು ಸೀತೆ, ಲಂಕೆಯಲ್ಲೊಮ್ಮೆ ಎದುರಿಸಿರುತ್ತಾಳೆ. ಆಕೆಯನ್ನು ಕಾಡಿಗೆ ಕಳುಹಿಸುವ ಮೊದಲು ರಾಮನು ಕೋರಿದಿದ್ದರೆ, ಮತ್ತೊಮ್ಮೆ ಅಂತಹ ಅಗ್ನಿಪರೀಕ್ಷೆಗೆ ತನ್ನನ್ನು ತಾನೇ ಒಡ್ಡಿಕೊಳ್ಳುತ್ತಿದ್ದಳು. ಇಂತಹ ಪರೀಕ್ಷೆಗಳ ಮೂಲಕ ಸೀತೆ, ತನ್ನ ಪಾತಿವ್ರತ್ಯವನ್ನು ಸಾಬೀತುಪಡಿಸಿದರೂ ಆಕೆಯನ್ನು ರಾಮನು ಮರಳಿ ಕರೆದುಕೊಳ್ಳುವ ಭರವಸೆಯಿರಲಿಲ್ಲ. ಅದರೂ, ವಾಲ್ಮೀಕಿ ಆಕೆಯನ್ನು ಸಭೆಗೆ ಕರೆತರುತ್ತಾನೆ. ರಾಮನನ್ನು ಕುರಿತು ವಾಲ್ಮೀಕಿ “ಓ ದಶರಥಕುಮಾರ, ಜನನಿಂದೆಯ ಪರಿಣಾಮವಾಗಿ ನೀನು ತ್ಯಜಿಸಿದ ಸೀತೆ ಇಲ್ಲಿದ್ದಾಳೆ. ನೀನು ಅಪ್ಪಣೆ ಕೊಟ್ಟಲ್ಲಿ ಆಕೆ ತನ್ನ ನಿಷ್ಕಳಂಕ ವ್ಯಕ್ತಿತ್ವವನ್ನು ನಿರೂಪಿಸುತ್ತಾಳೆ. ನಾನು ನನ್ನ ಆಶ್ರಮದಲ್ಲಿ ಸಾಕಿ ಬೆಳೆಸಿದ ನಿನ್ನ ಅವಳಿ ಪುತ್ರರು ಇಲ್ಲಿದ್ದಾರೆ ನೋಡು ಎನ್ನುತ್ತಾನೆ. ಅದಕ್ಕೆ ರಾಮನು “ಸೀತೆ ಪವಿತ್ರಳೆಂದು ನನಗೆ ಗೊತ್ತಿದೆ. ಇವರಿಬ್ಬರೂ ನನ್ನ ಮಕ್ಕಳೆಂಬುದೂ ನನಗೆ ಗೊತ್ತಿದೆ. ಸೀತೆ, ಲಂಕೆಯಲ್ಲಿ ಅಗ್ನಿಪ್ರವೇಶ ಮಾಡಿ ತನ್ನ ಪಾವಿತ್ರ್ಯವನ್ನು ನಿರೂಪಿಸಿದ್ದಾಳೆ. ಆದ್ದರಿಂದಲೇ ಆಕೆಯನ್ನು ಪುನಃ ಸ್ವೀಕರಿಸಿದೆ. ಆದರೆ, ಇಲ್ಲಿನ ಜನತೆ ಆಕೆಯ ಬಗ್ಗೆ ಇನ್ನೂ ಸಂದೇಹವಿಟ್ಟುಕೊಂಡಿದ್ದಾರೆ. ಆದ್ದರಿಂದ ಇಲ್ಲಿ ಸೇರಿರುವ ಜನರ ಮತ್ತು ಋಷಿಗಳ ಮುಂದೆ, ಆಕೆ ಮತ್ತೊಮ್ಮೆ ತನ್ನ ಪಾವಿತ್ರ್ಯವನ್ನು ಸಾಬೀತು ಪಡಿಸಲಿ” ಎನ್ನುತ್ತಾನೆ.

ತಗ್ಗಿದ ತಲೆ, ಜೋಡಿಸಿದ ಕೈಗಳೊಂದಿಗೆ, ನೆಲ ನೋಡುತ್ತಾ ಸೀತೆ ಹೇಳುತ್ತಾಳೆ: “ರಾಮನನ್ನು ಹೊರತು ಬೇರಾರನ್ನೂ ನಾನು ಮನಸ್ಸಿನಲ್ಲೂ ನೆನೆಸದಿದ್ದುದರಿಂದ ಭೂತಾಯಿ ಬಾಯ್ತೆರೆದು ನನ್ನನ್ನು ಒಳಸೆಳೆದುಕೊಳ್ಳಲಿ. ಮಾತು ಮನಸ್ಸು ಕೃತಿಗಳಲ್ಲಿ ರಾಮನನ್ನೇ ಪ್ರೀತಿಸುವುದು ನಿಜವಾದಲ್ಲಿ, “ಓ ಭೂಮಾತೆ ನಿನ್ನ ಒಡಲಲ್ಲಿ ನನ್ನ ಸೇರಿಸಿಕೋ” ಎನ್ನುತ್ತಿದ್ದಂತೆಯೇ, ಭೂಮಿ ಇಬ್ಭಾಗವಾಗಿ ಸೀಳುತ್ತದೆ. ಬಂಗಾರದ ಸಿಂಹಾಸನದಲ್ಲಿ ಕುಳಿತು, ಸೀತೆ ಭೂಮಿಯಲ್ಲಿ ಮರೆಯಾಗುತ್ತಾಳೆ. ಸೇರಿದ್ದ ಜನತೆ, ಮೂಕವಿಸ್ಮಿತರಾಗಿ ನೋಡುತ್ತಿದ್ದಂತೆಯೆ ಸೀತೆಯ ತಲೆಯ ಮೇಲೆ ಪುಷ್ಪವೃಷ್ಟಿಯಾಗುತ್ತದೆ.

ಅಂದರೆ, ಮೃಗದಂತೆ ವರ್ತಿಸಿದ ರಾಮನನ್ನು ಸೇರುವುದಕ್ಕಿಂತ ಸೀತೆಗೆ ಸಾಯುವುದೆ ಸರಿಯೆನಿಸಿತು. ಈ ರೀತಿ ಸೀತೆಯ ದುರಂತ ಹಾಗು ದೇವಾಂಶ ಪುರುಷನಾದ ರಾಮನ ಕ್ರೂರತನ ನಮ್ಮ ಮುಂದಿದೆ.

ಈಗ ರಾಮನು ಎಂತಹ ರಾಜನಾಗಿದ್ದನೆಂಬುದರ ಬಗ್ಗೆ ಸ್ವಲ್ಪ ಕಣ್ಣು ಹಾಯಿಸೋಣ.

ರಾಜಾರಾಮನನ್ನು ಒಬ್ಬ ಆದರ್ಶ ರಾಜನೆನ್ನಲಾಗಿದೆ. ಆದರೆ, ಇಂತಹ ಅಭಿಪ್ರಾಯಕ್ಕೆ ಯಾವುದಾದರೂ ಆಧಾರಗಳಿವೆಯೇ?

ವಾಸ್ತವವಾಗಿ, ರಾಮನು ಎಂದಿಗೂ ರಾಜನಾಗಿ ಕರ್ತವ್ಯಗಳನ್ನು ನಿರ್ವಹಿಸಿದವನೇ ಅಲ್ಲ. ಆತ ಕೇವಲ ನಾಮಕಾವಸ್ಥೆ ರಾಜನಾಗಿದ್ದ. ವಾಲ್ಮೀಕಿಯ ಪ್ರಕಾರ ರಾಜ್ಯದ ಆಡಳಿತ ನಿರ್ವಹಣೆಯಲ್ಲ ಭರತನದೇ ಆಗಿತ್ತು. ತನ್ನ ಪ್ರಜೆಗಳ ಮತ್ತು ರಾಜ್ಯದ ಹಿತಚಿಂತನೆಗಳಿಂದ ರಾಮನು ತನ್ನಷ್ಟಕ್ಕೆ ತಾನೇ ಮುಕ್ತಗೊಂಡಿದ್ದ. ರಾಜನಾದ ಮೇಲೆ ರಾಮನ ದೈನಂದಿನ ಚಟುವಟಿಕೆಯ ಬಗ್ಗೆ ವಾಲ್ಮೀಕಿಯು ಅತ್ಯಂತ ಸೂಕ್ಷ್ಮಚಿತ್ರಣವನ್ನು ನೀಡುತ್ತಾನೆ. ಇಡೀ ದಿನವನ್ನು ಬೆಳಗಿನಿಂದ ಮಧ್ಯಾಹ್ನದವರೆಗೆ ಒಂದು ಭಾಗವನ್ನಾಗಿ ಹಾಗೂ ಮಧ್ಯಾಹ್ನದ ನಂತರ ಎರಡನೆ ಭಾಗವನ್ನಾಗಿ ವಿಭಜಿಸಲಾಗಿರುತ್ತದೆ. ರಾಮನು ಬೆಳಗಿನಿಂದ ಮಧ್ಯಾಹ್ನದ ತನಕ ಪೂಜೆಪುರಸ್ಕಾರ ಇತ್ಯಾದಿ ಧಾರ್ಮಿಕ ವಿಧಿಗಳನ್ನು ನಿರ್ವಹಿಸುವುದರಲ್ಲಿ ಕಳೆಯುತ್ತಿದ್ದ. ಮಧ್ಯಾಹ್ನದ ನಂತರ ಸರದಿಯಂತೆ, ಆಸ್ತಾನ ವಿದೂಷಕರೊಂದಿಗೆ ಹಾಗೂ ಜನಾನದಲ್ಲಿ ಕಳೆಯುತ್ತಿದ್ದ. ಜನಾನದಲ್ಲಿ ಬೇಸರವಾದಾಗ, ಆಸ್ತಾನ ವಿಧೂಷಕರೊಂದಿಗೆ ಮತ್ತು ವಿಧೂಷಕರೊಂದಿಗೆ ಬೇಸರವಾದಾಗ ಜನಾನಕ್ಕೆ ಹಿಂದಿರುಗುತ್ತಿದ್ದ. ರಾಮನು ಜನಾನದಲ್ಲಿ ತನ್ನ ಬದುಕನ್ನು ಹೇಗೆ ಕಳೆಯುತ್ತಿದ್ದ ಎಂಬುದರ ಬಗ್ಗೆ ವಾಲ್ಮೀಕಿ ಮತ್ತಷ್ಟು ವಿವರಣೆ ಕೊಡುತ್ತಾನೆ. ರಾಮನ ಜನಾನ ಅಶೋಕ ಎಂಬ ಉದ್ಯಾನವನದಲ್ಲಿರುತ್ತದೆ. ರಾಮನು ಅಲ್ಲಿಯೇ ತನ್ನ ಮಧ್ಯಾಹ್ನದ ಭೋಜನವನ್ನು ಮಾಡುವುದು ವಾಡಿಕೆ. ರಾಮನ ಭೋಜನದಲ್ಲಿ ಎಲ್ಲಾ ರೀತಿಯ ರುಚಿಕರವಾದ ಪದಾರ್ಥಗಳು ಇರುತ್ತಿದ್ದವು; ಹಣ್ಣು, ಹಂಪಲು ಮಧ್ಯಮಾಂಸಗಳು ಹೇರಳವಾಗಿರುತ್ತಿದ್ದವು. ರಾಮನು ಮಧ್ಯಪಾನವರ್ಣಿತನಾಗಿರಲಿಲ್ಲ. ಆತನು ಹೇರಳವಾಗಿ ಕುಡಿಯುತ್ತಿದ್ದುದೇ ಅಲ್ಲದೆ, ತಾನು ನಡೆಸುವ ಮಧ್ಯಪಾನ ಗೋಷ್ಠಿಗಳಲ್ಲಿ, ತನ್ನೊಂದಿಗೆ ಸೀತೆಯೂ ಮಧ್ಯಪಾನ ಸೇವಿಸುವಂತೆ ಮಾಡುತ್ತಿದ್ದನು. ಜನಾನಾದ ಬಗ್ಗೆ ವಾಲ್ಮೀಕಿಯ ವರ್ಣನೆಯಂತೆ, ಅವು ಎಲ್ಲಾ ರೀತಿಯಲ್ಲೂ ಅಸಹ್ಯಕರವಾಗಿದ್ದವು. ಅಲ್ಲಿ ಅಪ್ಸರೆಯರು ಉರಗ(ನಾಗ)ಕನ್ಯೆಯರು, ಹಾಗೂ ಕಿನ್ನರಿಯರು ಹಾಡುತ್ತಾ ಕುಣಿಯುತ್ತಾ ಇರುತ್ತಿದ್ದರು. ಇವರಲ್ಲದೆ ಬೇರೆ ಬೇರೆ ಪ್ರದೇಶಗಳಿಗೆ ಸೇರಿದ ಸ್ತ್ರೀಯರನ್ನು ಅಲ್ಲಿ ಕೂಡಿಡಲಾಗಿತ್ತು. ಈ ಕನ್ಯೆಯರ ಮಧ್ಯೆ ಕುಳಿತು, ರಾಮನು ಕುಡಿಯುತ್ತಾ ನರ್ತಿಸುತ್ತಿದ್ದನು. ಅವರ ಹಾಡು ಕುಣಿತದಿಂದ ಸಂತೋಷಗೊಂಡ ರಾಮನು, ಅವರಿಗೆ ಮಾಲಾರ್ಪಣೆ ಮಾಡುತ್ತಿದ್ದನು. ರಾಮನನ್ನು ವಾಲ್ಮೀಕಿಯು “ಸ್ತ್ರೀ ಲಂಪಟರಲ್ಲಿ ಅಗ್ರಗಣ್ಯ” (Prince among Women’s Men) ಎಂದು ಕರೆದಿದ್ದಾನೆ. ಇದು ಒಂದು ದಿನದ ಕಥೆಯಲ್ಲ. ಆತನ ಜೀವನ ಪರ್ಯಂತ ಸತತವಾಗಿ ನಡೆದು ಬಂದ ಆಚರಣೆ.

ಮೊದಲೇ ತಿಳಿಸಿದಂತೆ, ರಾಮನು ಎಂದೂ ಸಾರ್ವಜನಿಕ ವ್ಯವಹಾರಗಳಲ್ಲಿ ತಲೆಯಿಟ್ಟವನೇ ಅಲ್ಲ. ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಆತ ಪ್ರಜೆಗಳ ಸುಖದುಃಖಗಳನ್ನು ಕೇಳಿ ತಿಳಿದುಕೊಂಡು, ಪರಿಹರಿಸುವ ಗೋಜಿಗೇ ಹೋದವನಲ್ಲ. ರಾಮನು ಪ್ರಜೆಗಳ ಕಷ್ಟವನ್ನು ವಿಚಾರಿಸಿದನು ಎಂಬುದನ್ನು, ಕೇವಲ ಒಂದೇ ಒಂದು ಸಂದರ್ಭವನ್ನು ಮಾತ್ರ ವಾಲ್ಮೀಕಿ ದಾಖಲೆಯಾಗಿ ಒದಗಿಸುತ್ತಾನೆ. ಆದರೆ, ದುರದೃಷ್ಟವಶಾತ್, ಆ ಸಂದರ್ಭವೂ ಸಹ ಒಂದು ದುರಂತವೇ ಆಗಿದೆ. ಈ ಘಟನೆಯಲ್ಲಿ ಆಗಿರಬಹುದಾದ ಅನ್ಯಾಯವನ್ನು ಸ್ವತಃ ತಾನೇ ಸರಿಗಟ್ಟಲು ಹೋಗಿ ಇತಿಹಾಸ ಹಿಂದೆಂದೂ ಕಂಡರಿಯದ ಘೋರ ಆಕೃತ್ಯವನ್ನು ತನ್ನ ಕೈಯಿಂದಲೇ ಮಾಡಿಬಿಡುತ್ತಾನೆ, ಈ ಘಟನೆಯೇ ಶೂದ್ರ ತಪಸ್ವಿ ಶಂಭೂಕನ ಕಗ್ಗೊಲೆ. ರಾಮನ ಆಳ್ವಿಕೆಯಲ್ಲಿ, ವಾಲ್ಮೀಕಿ ಹೇಳುತ್ತಾನೆ. ಅಕಾಲ ಮರಣಗಳಿರುವುದಿಲ್ಲ. ಈ ರೂಢಿಗೆ ವಿರುದ್ಧವಾಗಿ ಒಬ್ಬ ಬ್ರಾಹ್ಮಣನ ಮಗನು ಅಕಾಲ ಮರಣಕ್ಕೀಡಾಗುತ್ತಾನೆ. ಶೋಕ ತಪ್ತನಾದ ಬ್ರಾಹ್ಮಣನು, ಸತ್ತ ಬಾಲಕನ ಶವವನ್ನು ಹೊತ್ತು ತಂದು, ಅರಮನೆಯ ಬಾಗಿಲಿನ ಮುಂದಿಟ್ಟು ಗೋಳಾಡುತ್ತಾನೆ. ತನ್ನ ಮಗನ ಸಾವಿಗಾಗಿ ರಾಮನನ್ನು ದೂರುತ್ತಾ, ಆತನ ರಾಜ್ಯದಲ್ಲೆಲ್ಲೂ ಜರುಗಿರುವ ಪಾಪದ ಪರಿಣಾಮವಾಗಿ ತನ್ನ ಮಗನು ಸತ್ತಿದ್ದಾನೆ ಹಾಗೂ ಅಂತಹ ಪಾಪವನ್ನು ಎಸಗಿದ ಪಾಪಿಯನ್ನು ಶಿಕ್ಷಿಸದಿದ್ದಲ್ಲಿ ರಾಜನೇ ತಪ್ಪಿತಸ್ಥನೆಂದಾಗುತ್ತದೆ ಎನ್ನುತ್ತಾನೆ. ಕೊನೆಯದಾಗಿ ತನ್ನ ಮಗನು ಮರಳಿ ಜೀವ ಪಡೆಯುವವರೆಗೆ, ತಾನು ರಾಮನ ವಿರುದ್ಧ ಅಮರಣಾಂತ ಉಪವಾಸ ಸತ್ಯಾಗ್ರಹ (ಧರಣಿ) ಮಾಡುವುದಾಗಿ ಬೆದರಿಸುತ್ತಾನೆ. ಆಗ ರಾಮನು ತನ್ನ ಎಂಟುಮಂದಿ ಮಹಾ ಮೇಧಾವಿ ಋಷಿಗಳುಳ್ಳ ಮಂತ್ರಿ ಮಂಡಲದೊಡನೆ ಸಮಾಲೋಚನೆ ನಡೆಸುತ್ತಾನೆ.ಅವರಲ್ಲಿ, ನಾರದನು ಹೇಳುತ್ತಾನೆ, ‘ರಾಮನ ಪ್ರಜೆಗಳಲ್ಲಿ ಒಬ್ಬನಾದ ಯಾರೋ ಶೂದ್ರನು ತಪಸ್ಸನ್ನು ಮಾಡುತ್ತಿರಬಹುದು. ಆ ಮೂಲಕ ಧರ್ಮಕ್ಕೆ ಚ್ಯುತಿ ಬಂದಿರಬಹುದು” ಎನ್ನುತ್ತಾನೆ.ಏಕೆಂದರೆ, ತಪಸ್ಸು ಮಾಡುವ ಹಕ್ಕು ಕೇವಲ ದ್ವಿಜರಿಗೆ (ಎರಡು ಬಾರಿ ಹುಟ್ಟಿದವರಿಗೆ) ಮಾತ್ರ ಇರುತ್ತದೆ. ಶೂದ್ರರ ಕೆಲಸ ದ್ವಿಜರ ಸೇವೆ ಮಾಡುವುದು ಮಾತ್ರ ಆಗಿರುತ್ತದೆ. ಶೂದ್ರನೊಬ್ಬನು ತಪಸ್ಸು ಮಾಡುತ್ತಿರುವುದರಿಂದ, ಧರ್ಮಕ್ಕೆ ಸಂಚಕಾರ ಬಂದಿದೆ. ಆದ್ದರಿಂದಲೇ ಬ್ರಾಹ್ಮಣನ ಮಗನು ಅಕಾಲ ಮರಣಕ್ಕೆ ಈಡಾದನು ಎಂಬುದು ರಾಮನಿಗೆ ಮನದಟ್ಟಾಗುತ್ತದೆ. ಕೂಡಲೇ ತನ್ನ ಪುಷ್ಪಕ ವಿಮಾನವನ್ನೇರಿ, ಆ ಕೊಲೆಪಾತಕಿಗಾಗಿ ಹುಡುಕಲಾರಂಭಿಸುತ್ತಾನೆ. ಕೊನೆಗೆ ದಕ್ಷಿಣ ಭಾಗದ ದಟ್ಟವಾದ ಪ್ರದೇಶದಲ್ಲಿ, ಒಬ್ಬ ವ್ಯಕ್ತಿಯು ಉಗ್ರ ತಪಸ್ಸು ಮಾಡುತ್ತಿರುವುದನ್ನು ನೋಡುತ್ತಾನೆ. ಆತನ ಬಳಿಗೆ ನಡೆದು ಬಂದ ರಾಮ ಆತನು ಶಂಭೂಕನೆಂಬ ಶೂದ್ರನು ಹಾಗೂ ಶರೀರ ಸಮೇತ ಸ್ವರ್ಗ ಸೇರುವುದಕ್ಕಾಗಿ ತಪಶ್ಚರ್ಯ ನಡೆಸುತ್ತಿದ್ದಾನೆ ಎಂದು ತಿಳಿದು, ಯಾವುದೇ ಎಚ್ಚರಿಕೆಯನ್ನಾಗಲೀ ಬುದ್ದಿವಾದವನ್ನಾಗಲೀ ಹೇಳುವ ತಾಳ್ಮೆಯನ್ನು ತೋರದೇ, ಆತನ ತಲೆಯನ್ನು ಕಡೆದು ಬಿಡುತ್ತಾನೆ. ಆ ಕ್ಷಣದಲ್ಲಿ ದೂರದ ಅಯೋಧ್ಯೆಯಲ್ಲಿ ಸತ್ತುಬಿದ್ದಿದ್ದ ಬ್ರಾಹ್ಮಣನ ಮಗನು ಉಸಿರಾಡಲಾರಂಭಿಸುತ್ತಾನೆ.! ಇಲ್ಲಿ ದೇವತೆಗಳು ರಾಮನ ತಲೆಯ ಮೇಲೆ ಪುಷ್ಪವೃಷ್ಟಿಯನ್ನು ಮಾಡಿ, ತನಗೆ ಧಾರ್ಮಿಕ ಹಕ್ಕಿಲ್ಲದಿದ್ದರೂ ತಪಸ್ಸಿನ ಮೂಲಕ ಸ್ವರ್ಗ ಸೇರಲಿದ್ದ ಶೂದ್ರನನ್ನು ತಡೆದಿದ್ದಕ್ಕಾಗಿ ತಮ್ಮ ಹರ್ಷವನ್ನು ವ್ಯಕ್ತಪಡಿಸುತ್ತಾರೆ. ಅಷ್ಟೇ ಅಲ್ಲದೆ ರಾಮನ ಮುಂದೆ ಪ್ರತ್ಯಕ್ಷವಾಗಿ, ಆತನ ಮಹಾಕೃತ್ಯಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾರೆ. ಆಗ ರಾಮನು ಸತ್ತ ಬ್ರಾಹ್ಮಣನನ್ನು ಬದುಕಿಸುವಂತೆ ದೇವತೆಗಳನ್ನು ಕೋರಿಕೊಳ್ಳುತ್ತಾನೆ. ಆತನು ಈಗಾಗಲೇ ಮರಳಿ ಜೀವ ಪಡೆದಿರುವುದಾಗಿ ತಿಳಿಸಿದ ದೇವತೆಗಳು ಅದೃಶ್ಯರಾಗುತ್ತಾರೆ. ನಂತರ, ರಾಮನು ಅಗಸ್ತ್ಯ ಮುನಿಯ ಆಶ್ರಮಕ್ಕೆ ನಡೆಯುತ್ತಾನೆ. ಶಂಬೂಕನ ವಿರುದ್ಧ ರಾಮನು ತೆಗೆದುಕೊಂಡ ಕ್ರಮವನ್ನು ಪ್ರಶಂಶಿಸಿದ ಅಗಸ್ತ್ಯನು ಆತನಿಗೆ ದೈವಿಕವಾದ ಕೈ ಕಡಗವನ್ನು ಉಡುಗೊರೆಯಾಗಿ ಕೊಡುತ್ತಾನೆ. ರಾಮನು ತನ್ನ ರಾಜಧಾನಿಗೆ ಹಿಂದಿರುಗುತ್ತಾನೆ.

ಇವಿಷ್ಟೂ ಅವತಾರ ಪುರುಷ ರಾಮನ ಕಲ್ಯಾಣ ಗುಣಗಳು!