ಭೌತಿಕ ಸಂಗತಿಗಳಷ್ಟೇ ಅಲ್ಲದೆ ಅಮೂರ್ತ ಸಾಂಸ್ಕೃತಿಕ ಸಂಗತಿಗಳನ್ನೂ ಪರಿಗಣಿಸುವುದಾದರೆ, ವಿಶ್ವದ ಅನೇಕ ಅದ್ಭುತಗಳಲ್ಲಿ ಪ್ರಥಮ ಹಾಗೂ ಮಹಾ ಅದ್ಭುತವೆಂದರೆ ಭಾರತದ ರಾಮಾಯಣ-ಮಹಾಭಾರತ ಕಥನಗಳು. ಆದಿ ಕವಿ ವಾಲ್ಮೀಕಿ ಕೃತ ರಾಮಾಯಣದಿಂದ ಇಂದಿನವರೆವಿಗೂ, ಎಂದರೆ ಕನಿಷ್ಠ ಪಕ್ಷ ಎರಡು ಸಾವಿರ ವರ್ಷಗಳ ಅವಧಿಯಲ್ಲಿ, ಭಾರತದ ಎಲ್ಲಾ ಭಾಷೆಗಳಲ್ಲಿಯೂ ಈ ಕಥನಗಳು ಮತ್ತೆ ಮತ್ತೆ ಮರು ರೂಪುಗಳನ್ನು ಪಡೆದಿವೆ; ದೃಶ್ಯ ಹಾಗೂ ಶ್ರವಣ ಮಾಧ್ಯಮಗಳಲ್ಲಿ ನಾನಾ ರೂಪಾಂತರಗಳನ್ನು ತಾಳಿವೆ; ಭಾರತದಿಂದ ಹೊರಗೆ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿಯೂ ವಿವಿಧ ಆಕೃತಿಗಳಲ್ಲಿ ಇಂದಿಗೂ ಜೀವಂತವಾಗಿವೆ. “ತಿಣಿಕಿದನು ಫಣಿರಾಯ ರಾಮಾಯಣಂಗಳ ಭಾರದಲಿ” ಎಂದು ಕುಮಾರವ್ಯಾಸನು ೧೬ನೆಯ ಶತಮಾನದಲ್ಲಿಯೇ ಉದ್ಗರಿಸಿದನು. ಅವನೇನಾದರೂ ಇಂದು ಬದುಕಿದ್ದರೆ ಮತ್ತು ಅವನಿಗೆ ಎಲ್ಲಾ ಲಿಖಿತ-ಮೌಖಿಕ ರಾಮಾಯಣಗಳ ಪರಿಚಯವು ಇದ್ದಿದ್ದರೆ “ಉರುಳಿದನು ಫಣಿರಾಯ ರಾಮಾಯಣಂಗಳ ಭಾರದಲಿ” ಎಂದೇ ಹೇಳುತ್ತಿದ್ದನೋ ಏನೋ! ಈ ಹೇಳಿಕೆ ಮಹಾಭಾರತ ಕಥನಗಳಿಗೂ ಅನ್ವಯಿಸುತ್ತದೆ. ಎ.ಕೆ.ರಾಮಾನುಜನ್ ಅವರ ಒಂದು ಪ್ರಸಿದ್ಧ ಲೇಖನದ ಹೆಸರು “ಮುನ್ನೂರು ರಾಮಾಯಣಗಳು” (Three Hundred Ramayanas…”) ಆದರೆ, ಆ ಲೇಖನದಲ್ಲಿ ಅವರೇ ಒಂದು ಸಂದರ್ಭದಲ್ಲಿ ಹೇಳುವಂತೆ, ಭಾರತೀಯ ಮತ್ತು ಭಾರತೀಯೇತರ ಭಾಷೆಗಳ ಲಿಖಿತ-ಮೌಖಿಕ ರಾಮಾಯಣಗಳನ್ನು ಪರಿಗಣಿಸಿದರೆ ಆ ಸಂಖ್ಯೆ ಸಾವಿರಕ್ಕಿಂತಲೂ ಹೆಚ್ಚಾಗಬಹುದು.[1]

ಈ ಬಗೆಯಲ್ಲಿ ಸಾವಿರಾರು ವರ್ಷಗಳ ಕಾಲ ಭಾರತೀಯ ಮನಸ್ಸನ್ನು ಆವರಿಸಿರುವ ಮತ್ತು ಭಾರತೀಯ ಪ್ರಜ್ಞೆಯನ್ನು ರೂಪಿಸಿರುವ ರಾಮಾಯಣ-ಮಹಾಭಾರತ ಪರಂಪರೆಗಳು ಉತ್ತರಿಸಲು ಸುಲಭವೇನಲ್ಲದ ಅನೇಕ ಪ್ರಶ್ನೆಗಳನ್ನೆತ್ತುತ್ತವೆ. ಉದಾಹರಣೆಗೆ: ಭಾರತೀಯ ಮನಸ್ಸು ಮತ್ತೆ ಮತ್ತೆ ಅವರೆಡೇ ಕಥನಗಳಿಗೆ ಸ್ಪಂಧಿಸುತ್ತಿರುವುದು ಆ ಮನಸ್ಸು ಪರಂಪರೆಗೇ ಜೋತುಬಿದ್ದಿರುವುದನ್ನು ಮತ್ತು ಅದರ ನೂತನ ವಸ್ತುನಿರ್ಮಾಣಕ್ಷಮತೆಯ ದಾರಿದ್ರ್ಯವನ್ನು ಸೂಚಿಸುತ್ತದೆಯೇ[2]? ಇನ್ನೊಂದು ನೆಲೆಯಲ್ಲಿ, ಈ ಪರಂಪರೆಗಳಲ್ಲಿ ಯಾವುದೋ ಒಂದು ರಾಮಾಯಣವನ್ನು ಮಹಾಭಾರತವನ್ನು ‘ಮೂಲಕೃತಿ’ಯೆಂದು ಗುರುತಿಸಿ, ಉಳಿದೆಲ್ಲವನ್ನೂ ‘ಮರು/ಪರ್ಯಾಯ/ಉಪ’ಕಥನಗಳೆಂದು ನೋಡಬೇಕೆ? ಮತ್ತೆ, ಎಲ್ಲಾ ಬಗೆಯ ರಾಮಾಯಣ-ಮಹಾಭಾರತಗಳ ಹೋಲಿಕೆಯಲ್ಲಿ ಮೌಖಿಕ ರಾಮಾಯಣ-ಮಹಾಭಾರತಗಳು ಎಲ್ಲಿ ನಿಲ್ಲುತ್ತವೆ? ಇವುಗಳನ್ನೂ ಮರು/ಪರ್ಯಾಯ/ಕಥನಗಳೆಂದು ನೋಡಬೇಕೆ ಅಥವಾ ಅವುಗಳು ಕೇವಲ ‘ಭಿನ್ನ ಕಥನ’ಗಳೇ-ಇತ್ಯಾದಿ.

ಈ ಅಧ್ಯಾಯದಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ಪ್ರಾತಿನಿಧಿಕವೆನ್ನ ಬಹುದಾದ ಕೆಲವು ಮೌಖಿಕ ರಾಮಾಯಣಗಳನ್ನು ಪರಿಚಯಿಸಿ, ವಾಲ್ಮೀಕಿ ಮತ್ತಿತರ ಅಭಿಜಾತ ಕಥನಗಳಿಗಿಂತ ಅವುಗಳು ಭಿನ್ನವಾಗಿರುವ ನೆಲೆಗಳನ್ನು ಗುರುತಿಸಿ, ಆನಂತರ ಆ ಭಿನ್ನತೆಗಳ ಅಧಾರದಲ್ಲಿ ಈ ಮೊದಲು ಎತ್ತಿದ ಪ್ರಶ್ನೆಗಳಿಗೆ ಸಾಧ್ಯ ಉತ್ತರಗಳನ್ನು ಪರೀಕ್ಷಿಸುವ ಪ್ರಯತ್ನವಿದೆ. ಎರಡನೆಯ ಭಾಗದಲ್ಲಿ ಇದೇ ಬಗೆಯ ಮೌಖಿಕ ಮಹಾಭಾರತಗಳ ವಿಶ್ಲೇಷಣೆಯಿದೆ. ಮೂರನೆಯ ಭಾಗದಲ್ಲಿ ಅಲ್ಲಿಯವರೆಗೆ ನಡೆಸಿದ ಚರ್ಚೆಯನ್ನಾಧರಿಸಿದ, ಕೆಲವು ಸಾಧಾರಣೀಕೃತ ತೀರ್ಮಾನಗಳಿವೆ.

ಭಾಗ: ಮೌಖಿಕ ರಾಮಾಯಣಗಳು

ಈ ಭಾಗದಲ್ಲಿ ನಾನು ಕೆಳಗೆ ಕಾಣಿಸಲ್ಪಟ್ಟ ರಾಮಾಯಣಗಳನ್ನು ರಾಮಾಯಣ ಭಾಗಗಳನ್ನು ಪರಿಗಣಿಸಿದ್ದೇನೆ:

. ಅವದ್ ರಾಮಾಯಣ:[3] ಡಾ.ಕಿರಣ್ ಮರಾಲಿಯವರು ರಾಮಕಥೆಗೆ ಸಂಬಂಧಿಸಿದ ಅವಧಿ ಭಾಷೆಯ ಜಾನಪದ ಕಥನಗೀತೆಗಳನ್ನು ಸಂಪಾದಿಸಿ, ದೀರ್ಘ ಮುನ್ನುಡಿಯೊಡನೆ ಆ ಎಲ್ಲಾ ಗೀತೆಗಳನ್ನು ಲೋಕಗೀತಮೋಂಮೆ ರಾಮಕಥಾ: ಅವಧಿ ಎಂಬ ಹೆಸರಿನಲ್ಲಿ ೧೯೮೬ರಲ್ಲಿ ಪ್ರಕಟಿಸಿದರು. ಈ ಕಥನಗುಚ್ಛವು ಉತ್ತರ ರಾಮಾಯಣವೂ ಸೇರಿದಂತೆ ಸಂಪೂರ್ಣ ರಾಮಾಯಣದ ಕಥೆಯನ್ನು ಒಳಗೊಂಡಿದೆ. ಈ ಗುಚ್ಛದ ಆಯ್ದ ಭಾಗಗಳನ್ನು ಸಂದರ್ಭಕ್ಕನುಸಾರವಾಗಿ ಸ್ತ್ರೀಯರು ಹಾಡುತ್ತಾರೆಂದು ಮರಾಲಿ ತಿಳಿಸುತ್ತಾರೆ.

. ಭಿಲ್ಲ ರಾಮಾಯಣ:[4] ಉತ್ತರ ಗುಜರಾತಿನ ಡುಂಗರಿ ಭಿಲ್ಲರೆಂಬ ಬುಡಕಟ್ಟು ಸಮುದಾಯದವರು ರಾಮ್ ಸೀತ್ಮಾ ನಿ ವಾರ್ತಾ ಎಂಬ ದೀರ್ಘ ರಾಮಾಯಣವನ್ನು ಹಾಡುತ್ತಾರೆ. ಇದನ್ನು ಸಂಪಾದಿಸಿ, ಆಯ್ದ ಕೆಲ ಭಾಗಗಳನ್ನು ಗುಜರಾತಿಗೆ ಅನುವಾದಿಸಿ, ಪ್ರಕಟಿಸಿದವರು ಡಾ.ಭಗವಾನ್ ದಾಸ್ ಪಟೇಲ್. ಈ ರಾಮಾಯಣದ ಒಂದು ವಿಶಿಷ್ಟ ಭಾಗವನ್ನು (ರಾವಣ ವಧಾ ಪ್ರಸಂಗವನ್ನು) ಬರೋಡಾದ ಅರುಣಾ ಜೋಷಿಯವರು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ನಾನು ಈ ಭಾಗವನ್ನು ಮಾತ್ರ ಗಮನಿಸಿದ್ದೇನೆ.

. ಕುಕಣಾ ರಾಮಾಯಣ:[5] ಗುಜರಾತ್-ಮಹಾರಾಷ್ಟ್ರ ಗಡಿಭಾಗದಲ್ಲಿರುವ ಡಾಂಗ್ ಜಿಲ್ಲೆಯಲ್ಲಿ ವಾಸಿಸುವ ಒಂದು ಬುಡಕಟ್ಟು ಸಮುದಾಯದ ಹೆಸರು ಕುಕಣಾ. ಈ ಸಮುದಾಯದವರು ಹಾಡುವ ದೀರ್ಘ ರಾಮಾಯಣವನ್ನು ಸಂಪಾದಿಸಿರುವವರು ಅದೇ ಸಮುದಾಯಕ್ಕೆ ಸೇರಿದ ದಹ್ಯಾಭಾಯಿ ವಾಧು ಎಂಬುವವರು. ಇದರ ಒಂದು ಭಾಗವನ್ನು (ರಾವಣ ಜನ್ಮ ವೃತ್ತಾಂತವನ್ನು) ಜೆನಿ ರಾಠೋಡ್ ಎಂಬುವವರು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ನಾನು ಈ ಭಾಗವನ್ನು ಮಾತ್ರ ಪರಿಗಣಿದ್ದೇನೆ.

. ಗೊಂಡ ರಾಮಾಯಣ:[6] ಸಹ್ಯಾದ್ರಿ ಪರ್ವತಶ್ರೇಣಿಯ ಪಶ್ಚಿಮದ ತಪ್ಪಲುಗಳಲ್ಲಿ ವಾಸಿಸುವ ಗೊಂಡ ಸಮುದಾಯದ ಈ (ಕನ್ನಡ) ರಾಮಾಯಣವನ್ನು ಹಾಡಿರುವವರು ತಿಮ್ಮಪ್ಪ ಗೊಂಡರು. ಉ.ಕ. ಜಿಲ್ಲೆಯ ಹಲ್ಯಾಡಿ ಎಂಬಲ್ಲಿರುವ ಗೊಂಡ ಸಮುದಾಯದ ಪ್ರಮುಖರು. ಇಬ್ಬರು ಸಹ ಗಾಯಕರೊಡನೆ ಇವರು ಹಾಡಿರುವ ೩೦೦೦ ಸಾಲುಗಳಷ್ಟು ದೀರ್ಘವಾಗಿರುವ ಈ ಆವೃತ್ತಿಯನ್ನು ಸಂಪಾದಿಸಿ, ಮುನ್ನುಡಿಯೊಡನೆ ೧೯೯೯ರಲ್ಲಿ ಪ್ರಕಟಿಸಿದವರು ಡಾ.ಹಿ.ಚಿ.ಬೋರ ಲಿಂಗಯ್ಯನವರು. ಇದರಲ್ಲಿ ಸಂಪೂರ್ಣ ರಾಮಾಯಣದ ಕಥೆಯಿದೆ.

. ಜನಪದ ರಾಮಾಯಣ:[7] ನಾಲ್ಕು ಭಿನ್ನ ರಾಮಕಥೆಗಳಿರುವ ಕನ್ನಡದ ಈ ಸಂಕಲನವನ್ನು ಭಿನ್ನ ಗಾಯಕರಿಂದ ಸಂಪಾದಿಸಿ, ಮುನ್ನುಡಿಯೊಡನೆ ೧೯೭೩ರಲ್ಲಿ ಪ್ರಕಟಿಸಿದವರು ಡಾ.ರಾಮೇಗೌಡ, ಡಾ.ಪಿ.ಕೆ.ರಾಶೇಖರ, ಮತ್ತು ಡಾ.ಎಸ್.ಬಸವಯ್ಯ. ಇದರಲ್ಲಿರುವ “ಸೀತೆಯ ಜನನ, ಸೀತಾ ಸ್ವಯಂವರ, ಮತ್ತು ಸೀತಾ ಪರೀಕ್ಷೆ” ಈ ಭಾಗಗಳನ್ನು ಹಾಡಿರುವವರು ಹೊನ್ನಾಜಮ್ಮ; “ಸುಣ್ಕು ಮಾರನ ಕಥೆ”ಯನ್ನು ಸಾವಿತ್ರಮ್ಮ; “ಲವಕುಶರ ಕಾಳಗ”ವನ್ನು ಕಂಸಾಳೆ ಮಹಾದೇವಯ್ಯ; ಮತ್ತು “ತಂಬೂರಿ ರಾಮಾಯಣ”ವನ್ನು ಸಿದ್ದಯ್ಯ ಇವರುಗಳು ಹಾಡಿದ್ದಾರೆ. ಇದರಲ್ಲಿರುವ ಮೊದಲಿನ ಮೂರು ಕಥನಗಳು ರಾಮಾಯಣದ ಕೆಲವು ಭಾಗಗಳನ್ನು ಮಾತ್ರ ಒಳಗೊಂಡಿದ್ದರೆ, ೧೨೧ ಪುಟಗಳಷ್ಟು ದೀರ್ಘ ವಾಗಿರುವ ನಾಲ್ಕನೆಯ ‘ತಂಬೂರಿಯವರ ರಾಮಾಯಣ’ ಇಡಿಯಾಗಿ ರಾಮನ ಕಥೆಯನ್ನು ಪ್ರಸ್ತುತ ಪಡಿಸುತ್ತದೆ.

ಈ ಕೃತಿಗಳಲ್ಲಿ ಬರುವ ರಾಮಕಥೆಯನ್ನು ಹೀಗೆ ಸಂಗ್ರಹಿಸಬಹುದು:

. ಅವದ್ ರಾಮಾಯಣ: ಅವಧ ಪ್ರಾಂತ್ಯದಲ್ಲಿ ಅವಧೀ ಭಾಷೆಯಲ್ಲಿಯೇ ರಚಿಸಲ್ಪಟ್ಟಿರುವ ತುಳಸೀ ರಾಮಾಯಣವು ಅತ್ಯಂತ ಜನಪ್ರಿಯವಾಗಿರುವುದರಿಂದ ಈ ಸಂಕಲನದ ಗೀತೆಗಳೂ ಬಹುಮಟ್ಟಿಗೆ ಅದರ ಕಥೆಯನ್ನೇ ಅನುಸರಿಸುತ್ತವೆ. ಪರಿಣಾಮತಃದಶರಥನ ಯಾಗ ಮತ್ತು ರಾಮಜನ್ಮ, ಶಿವ ಧನುರ್ಭಂಗ, ಮಂಥರೆಯ ಪಾತ್ರ, ಶೂರ್ಪನಖಾ ಪ್ರಸಂಗ, ಮಾಯಾಜಿಂಕೆ, ಅಗ್ನಿಪರೀಕ್ಷೆ, ಸೀತಾ ಪರಿತ್ಯಾಗ, ಲವಕುಶರ ಕಾಳಗ-ಇತ್ಯಾದಿ ಘಟನೆ-ಪಾತ್ರಗಳು ಈ ಗೀತ ರಾಮಾಯಣದಲ್ಲಿಯೂ ಇವೆ. ಆದರೂ ಅಲ್ಲಲ್ಲಿ ಅರ್ಥಪೂರ್ಣ ಭಿನ್ನತೆಗಳು ಕಂಡುಬರುತ್ತವೆ.

ಗೀತೆಗಳಲ್ಲಿ ಇಲ್ಲದಿರುವ ಭಾಗಗಳೆಂದರೆ: ಕ್ರೌಂಚವಧೆ, ಅಹಲ್ಯಾ ವೃತ್ತಾಂತ, ವಾಲಿವಧೆ, ಇತ್ಯಾದಿ. ಮುಖ್ಯವಾಗಿ ವಾಲ್ಮೀಕಿ-ತುಳಸೀರಾಮಾಯಣಗಳೂ ಸೇರಿದಂತೆ ಅಭಿಜಾತ ರಾಮಾಯಣಗಳ ಹೋಲಿಕೆಯಲ್ಲಿ ಈ ಗೀತೆಗಳು ಪ್ರಸ್ತುತ ಪಡಿಸುವ ರಾಮಕಥೆ ಭಿವಾಗುವುದು ಸೀತೆಯ ಕಥೆಯಲ್ಲಿ.

ಸೀತೆಯ ಜನನ: ಸೀತೆ ರಾವಣಾತ್ಮಜೆ ಮತ್ತು ರಾವಣಕುಲ ನಾಶಕ್ಕಾಗಿಯೇ ಮಂಡೋದರಿಯ ಗರ್ಭದಲ್ಲಿ ಜನಿಸಿದವಳು. ಇವಳು ‘ಕುಲನಾಶ ನಿಮಿತ್ತಿಕೆ’ಯಾಗುತ್ತಾಳೆ ಎಂಬ ಭವಿಷ್ಯದ ಕಾರಣದಿಂದ ನಾರದರ ಸಲಹೆಯಂತೆ ನವಜಾತ ಶಿಶುವನ್ನು ಒಂದು ಮಡಕೆಯಲ್ಲಿಟ್ಟು ಜನಕನ ರಾಜ್ಯದ ಹೊಲವೊಂದರಲ್ಲಿ ಆ ಮಡಕೆಯನ್ನು ಹೂಳಲಾಗುತ್ತದೆ.

ಜನಕನ ರಾಜ್ಯದಲ್ಲಿ ಅನಾವೃಷ್ಟಿಯ ಕಾರಣದಿಂದ ದುರ್ಭಿಕ್ಷಕಾಲ ಬಂದು ಪ್ರಜೆಗಳೆಲ್ಲರೂ ತೊಂದರೆಗೊಳಗಾಗಿರುತ್ತಾರೆ. ಜನಕರಾಜನ ಹೆಂಡತಿ ಸೋಧುಲಾ ಮಧ್ಯರಾತ್ರಿಯಲ್ಲಿ ವಿವಸ್ತ್ರಳಾಗಿ ಹೊಲವನ್ನು ಉತ್ತರೆ ಮಳೆ ಬರುತ್ತದೆಂದು ಪುರೋಹಿತರು ಹೇಳುತ್ತಾರೆ. ಹಾಗೆಯೇ, ಜನಕನ ಹೆಂಡತಿ ಹೊಲ ಉಳುವಾಗ ಮಡಕೆಯಲ್ಲಿದ್ದ ಮಗು ಸಿಕ್ಕಿ, ಅದನ್ನು ಅವಳು ಮನೆಗೆ ಕರೆತಂದು, ಸೀತೆ ಎಂದು ಹೆಸರಿಡುತ್ತಾಳೆ. ಕೂಡಲೇ ಮಳೆ ಸುರಿಯಲಾರಂಭಿಸುತ್ತದೆ. ‘ಇವಳು ಜಗಜ್ಜನನಿ; ಶ್ರೀರಾಮನನ್ನು ಮದುವೆಯಾಗುತ್ತಾಳೆ’ ಎಂದು ಪಂಡಿತರು ಭವಿಷ್ಯ ನುಡಿಯುತ್ತಾರೆ.

ಬೆಳೆಯುತ್ತಾ, ಸೀತೆ ಒಮ್ಮೆ ತಂದೆಯೊಡನೆ ಶಿವಾಲಯಕ್ಕೆ ಪೂಜೆ ಮಾಡಲು ಹೋಗುತ್ತಿರುವಾಗ ರಾಮ-ಲಕ್ಷ್ಮಣರು ಅಲ್ಲಿಗೆ ಬರುತ್ತಾರೆ. ಅವರ ಪ್ರಶ್ನೆಗೆ ‘ರಾಮ ಲಕ್ಷ್ಮಣರಿಗಾಗಿ ಮಾಲೆ ಕಟ್ಟುತ್ತಿದ್ದೇನೆ’ ಎಂದು ಸೀತೆ ಹೇಳುತ್ತಾಳೆ.

ಶಿವ ಧನಸ್ಸು: ಭಗವಾನ್ ಶಂಕರನು ರಾವಣನ ತಪಸ್ಸಿಗೆ ಮೆಚ್ಚಿ ತನ್ನ ಧನಸ್ಸನ್ನು ಅವನಿಗೆ ನೀಡುತ್ತಾನೆ; ಮತ್ತು “ಮಾರ್ಗದಲ್ಲಿ ಎಲ್ಲಿಯೂ ನೆಲದ ಮೇಲೆ ಇಡಬಾರದು ಮತ್ತು ಲಘುಶಂಕೆಯ ನಂತರ ಶುದ್ಧವಾಗದೆ ಮುಟ್ಟಬಾರದು” ಎಂಬ ಎಚ್ಚರಿಕೆಯನ್ನೂ ಕೊಡುತ್ತಾನೆ. ಹೆಗಲ ಮೇಲೆ ಧನಸ್ಸನ್ನು ಇಟ್ಟುಕೊಂಡು ರಾವಣನು ತನ್ನ ಪಟ್ಟಣಕ್ಕೆ ಹಿಂತಿರುಗುತ್ತಿರುವಾಗ ಜನಕನಗರಿಯಲ್ಲಿ ಲಘುಶಂಕೆಯನ್ನು ತಡೆಯಲಾರದೆ ಧನಸ್ಸನ್ನು ಜನಕನ ಅರಮನೆಯ ಬಾಗಿಲ ಬಳಿ ಇಡುತ್ತಾನೆ. ಅನಂತರ ಹಿಂತಿರುಗಿದಾಗ ಅವನಿಗೆ ಧನಸ್ಸನ್ನು ಎತ್ತಲಾಗುವುದಿಲ್ಲ. ಅಲ್ಲಿಯೇ ಅದನ್ನು ಬಿಟ್ಟಿರಲು ಅಶರೀರ ವಾಣಿಯಾಗುವುದರಿಂದ, ಅಲ್ಲಿಯೇ ಧನಸ್ಸನ್ನು ಬಿಟ್ಟು ರಾವಣನು ಲಂಕೆಗೆ ಹಿಂತಿರುಗುತ್ತಾನೆ.

ಜನಕನು ಧನಸ್ಸನ್ನು ಒಳಗಿಟ್ಟು ಪ್ರತಿದಿನವೂ ಅದನ್ನು ಪೂಜಿಸುತ್ತಿರುತ್ತಾನೆ. ಒಂದು ಸಂದರ್ಭದಲ್ಲಿ ಸೀತೆ ಆಟವಾಡುವುದಕ್ಕಾಗಿ ಅದನ್ನು ತೆಗೆದುಕೊಂಡಾಗ ಆಶ್ಚರ್ಯಚಕಿತನಾದ ಜನಕ ಆ ಧನಸ್ಸನ್ನು ಎತ್ತಿ ಹೆದೆಯೇರಿಸುವವನೇ ಅವಳ ಗಂಡ ಎಂದು ನಿರ್ಧರಿಸುತ್ತಾನೆ. ಸ್ವಯಂವರಕ್ಕೆ ಸಿದ್ಧತೆಗಳು ನಡೆದಾಗ ಜನಕನು ಅಯೋಧ್ಯೆಗೆ ಆಹ್ವಾನ ನೀಡುವುದಿಲ್ಲ; ಆಮಂತ್ರಣವು ತಲುಪಿದರೆ ವೃದ್ಧ ದಶರಥನೇ ಬಂದು ಸೀತೆಯನ್ನು ವಿವಾಹವಾಗಬಹುದೆಂಬ ಭೀತಿ. ಕೊನೆಗೆ ವಿಶ್ವಾಮಿತ್ರನು ರಾಮ-ಲಕ್ಷ್ಮಣರನ್ನು ಸ್ವಯಂವರಕ್ಕೆ ಕರೆದೊಯ್ಯುತ್ತಾನೆ. ರಾಮನು ಧನುರ್ಭಂಗ ಮಾಡಿ ಸೀತೆಯನ್ನು ಮದುವೆಯಾಗುತ್ತಾನೆ.

ಸೀತಾಪಹರಣ: ರಾವಣನೇ ಯತಿಯ ವೇಷದಲ್ಲಿ ಬಂದು “ಸೀತಾಕೋ ಮನ್ ಹೀ ಮನ್ ಮೆ ಪ್ರಣಾಮ್ ಕಿಯಾ” (ಮನಸ್ಸಿನಲ್ಲೇ ಸೀತೆಗೆ ನಮಸ್ಕಾರ ಮಾಡಿದನು) ಅನಂತರ ಅವಳನ್ನು ಬಲತ್ಕಾರವಾಗಿ ತನ್ನ ವಾಹನದಲ್ಲಿ ಕೂರಿಸಿಕೊಂಡು ಲಂಕೆಗೆ ಹೋಗುತ್ತಾನೆ. ಅಶೋಕ ವನದಲ್ಲಿ ಅವಳನ್ನು ಬಂಧನದಲ್ಲಿಟ್ಟ ನಂತರ, ಸೀತೆಗೆ “೧೨ ವರ್ಷ ಅಣ್ಣತಂಗಿಯರಂತೆ ನಮ್ಮ ಸಂಬಂಧವಿರುತ್ತದೆ; ಅನಂತರ ಯಾವ ಸಂಬಂಧಬೇಕಾದರೂ ಆಗಲಿ” ಎನ್ನುತ್ತಾನೆ.

ಸೀತಾ ಪರಿತ್ಯಾಗ: ರಾಮನೇ ಸೀತೆಗೆ ವಾಲ್ಮೀಕಿ ಮಹರ್ಷಿಯ ಆಶ್ರಮಕ್ಕೆ ಹೋಗಲು ಹೇಳುತ್ತಾನೆ. ಸೀತೆ ಕಾರಣವನ್ನು ಕೇಳಿದ ಹೀಗೆ ಉತ್ತರಿಸುತ್ತಾನೆ: “ಇಡೀ ಜಗತ್ತು ನಿನ್ನನ್ನು ಸ್ತುತಿಸುತ್ತಿದೆ ಮತ್ತು ನನ್ನನ್ನು ಧಿಕ್ಕರಿಸುತ್ತಿದೆ. ಆದ್ದರಿಂದ ವಾಲ್ಮೀಕಿ ಆಶ್ರಮಕ್ಕೆ ಈಗ ನೀನು ಹೋಗು; ಮುಂದೆ ನಿನ್ನ ಮಕ್ಕಳೊಡನೆ ನನ್ನ ಲೀಲೆಯನ್ನು ತೋರಿಸುತ್ತೇನೆ.”

ಇನ್ನೊಂದು ಗೀತೆಯ ಪ್ರಕಾರ, ತನ್ನ ‘ನನದ್’ (ನಾದಿನಿ) ಪುಸಲಾಯಿಸಿದಂತೆ ಸೀತೆ ರಾವಣನ ಚಿತ್ರವನ್ನು ಬರೆಯುತ್ತಾಳೆ. ಆನಂತರ ಆ ಸಂಗತಿಗೆ ಉಪ್ಪುಕಾರ ಬೆರೆಸಿ ನಾದಿನಿ ರಾಮನಿಗೆ ಹೇಳುತ್ತಾಳೆ. ಇದನ್ನು ಕೇಳಿದ ರಾಮ ಸೀತೆಯ ಚಾರಿತ್ರ್ಯವನ್ನು ಸಂದೇಹಿಸಿ ಅವಳನ್ನು ಕಾಡಿಗೆ ಕಳುಹಿಸುತ್ತಾನೆ.

ಲವಕುಶ: ಆಟವಾಡುವಾಗ ಲವಕುಶರನ್ನು ಅವರ ಒಡನಾಡಿಗಳು ತಂದೆಯ ಹೆಸರನ್ನು ಕೇಳಿ ಹಂಗಿಸಿದಾಗ ಲವಕುಶರು ಬಂದು ತಮ್ಮ ತಾಯಿಯನ್ನು ಕೇಳುತ್ತಾರೆ. ಆಗ ಸೀತೆ ಅವರು ಶ್ರೀರಾಮನ ಮಕ್ಕಳೆಂದು ಹೇಳುತ್ತಾಳೆ.

ಕೊನೆಯಲ್ಲಿ, ‘ವಿರೋಗ’ದಿಂದ (ಅನುರಾಗ-ಕ್ರೋಧ) ಸೀತೆ ರಾಮನನ್ನು ನೋಡಿ, ಒಂದೂ ಮಾತನಾಡದೆ ಭೂಮಿಯಲ್ಲಿ ಸೇರಿಹೋಗುತ್ತಾಳೆ.

. ಭಿಲ್ಲ ರಾಮಾಯಣ: (“ರಾಮ್ ಔರ್ ಸೀತ್ಮಾ ನಿ ವಾರ್ತಾ)

ರಾವಣ ವಧೆ: ಯುದ್ಧದಲ್ಲಿ ರಾವಣನನ್ನು ಹೇಗೆ ಮಾಡಿದರೂ ಸೋಲಿಸಲು ಸಾಧ್ಯವಾಗದಿದ್ದಾಗ, ಅದರ ಬಗ್ಗೆಯೇ ಚಿಂತಿಸುತ್ತಿರುವ ಲಕ್ಷ್ಮಣ ಲಂಕೆಯ ಅರಮನೆಯ ಅಗಸನನ್ನು ಭೇಟಿಮಾಡುತ್ತಾನೆ. ಅಗಸನಿಗೆ ‘ನೌಲಾಖಾ ಹಾರ್’ದ ಲೋಭವನ್ನು ತೋರಿಸಿ, ಅವನಿಂದ ಮಂಡೋದರಿಯ ವಸ್ತ್ರಗಳನ್ನು ಪಡೆಯುತ್ತಾನೆ. (ಈ ಕಾವ್ಯದಲ್ಲಿ ಉದ್ದಕ್ಕೂ ಲಕ್ಷ್ಮಣನನ್ನು ‘ಪರಿಪೂರ್ಣ ಪುರುಷ’ ಎಂದು ಕರೆಯಲಾಗಿದೆ. ಇದೇ ರೀತಿ ಲಕ್ಷ್ಮಣನ ಅವತಾರವೆಂದು ಭಾವಿಸಲ್ಪಡುವ ಪಾಬೂಜಿ ಅದೇ ಹೆಸರಿನ ರಾಜಸ್ಥಾನಿ ಮೌಖಿಕ ಮಹಾಕಾವ್ಯದಲ್ಲಿ ‘ಮರುಳುಗಾಡಿನ ದೇವತೆ’ ಎಂದು ಉದ್ದಕ್ಕೂ ಕೀರ್ತಿಸಲ್ಪಡುತ್ತಾನೆ.[8] ಈ ಕೃತಿಗಳು ಜೈನ ರಾಮಾಯಣಗಳಿಂದ ಪ್ರಭಾವಿಸಲ್ಪಟ್ಟಿರಬಹುದು.)

ಅನಂತರ, ಲಕ್ಷ್ಮಣನು ಮಂಡೋದರಿಯಂತೆ ವೇಷಭೂಷಣಗಳನ್ನು ಧರಿಸಿ, ರಾವಣನಿಗಿಷ್ಟವಾದ ೩೨-೩೩ ಬಗೆಯ ವಿವಿಧ ಭಕ್ಷ್ಯಗಳನ್ನು ತಯಾರಿಸಿ, ಅವನನ್ನು ಸಂತೋಷಪಡಿಸುತ್ತಾನೆ. ಅನಂತರ, ಈ ಯುದ್ಧದಲ್ಲಿ ಅವನ ಪ್ರಾಣಹಾನಿಯಾಗುವ ಸಂಭವವಿದೆಯೆಂದು ಆದ್ದರಿಂದ ಅವಳು ಅನಾಥಳಾಗುತ್ತಾಳೆಂದು ಅಳಲು ಪ್ರಾರಂಭಿಸುತ್ತಾನೆ(ಳೆ). ಅವನನ್ನು (ಮಂಡೋದರಿಯನ್ನು) ಸಮಾಧಾನಪಡಿಸಲು ರಾವಣನು ತನ್ನನ್ನು ಸಾಯಿಸುವುದು ಅಷ್ಟು ಸುಲಭವಲ್ಲವೆಂದೂ, ತನ್ನ ಪ್ರಾಣವು ಸೂರ್ಯನ ರಥದಲ್ಲಿರುವ ಕಣಜದ ದೇಹದಲ್ಲಿದೆಯೆಂದೂ, ಮತ್ತು ಅಲ್ಲಿಗೆ ಯಾವ ನರ ಮನುಷ್ಯನೂ ಹೋಗುವುದು ಅಸಾಧ್ಯವೆಂದೂ ಹೇಳುತ್ತಾನೆ. ಏಕೆಂದು ಲಕ್ಷ್ಮಣನು ಕೇಳಿದಾಗ ಆ ಸಾಹಸವನ್ನು ರಾವಣನು ವಿವರಿಸುತ್ತಾನೆ: ಆ ಸಾಹಸ ಕೃತ್ಯವನ್ನು ಕೈಗೊಳ್ಳಲು ಅಪೇಕ್ಷಿಸುವವನು ಮೊದಲಿಗೆ ೧೨ ಗಾಣಗಳಿಂದ ಎಣ್ಣೆಯನ್ನು ತಂದು, ಅದನ್ನು ಒಂದು ದೊಡ್ಡ ಕಡಾಯಿಯಲ್ಲಿ ತುಂಬಿಸಿ, ಸೂರ್ಯೋದಯಕ್ಕೆ ಮೊದಲು ಅದನ್ನು ಕುದಿಸಬೇಕು. ಅನಂತರ ಕುದಿಯುತ್ತಿರುವ ಎಣ್ಣೆ ಕಡಾಯಿಯ ಎರಡು ಅಂಚುಗಳಲ್ಲಿ ಎರಡು ಕಾಲಿಟ್ಟುಕೊಂಡು, ಸೂರ್ಯನತ್ತ ಬಾಣವನ್ನು ಗುರಿಯಿಡಬೇಕು; ಸೂರ್ಯನು ಉದಯವಾದನಂತರ ಅವನ ಗತಿಯನ್ನೇ ಸದಾ ಲಕ್ಷಿಸುತ್ತಿರಬೇಕು; ಮಧ್ಯಾಹ್ನದ ಸಮಯದಲ್ಲಿ ಸೂರ್ಯನ ರಥದಲ್ಲಿರುವ ಕಣಜದ ನೆರಳು ಕಡಾಯಿಯ ಎಣ್ಣೆಯಲ್ಲಿ ಕಾಣಿಸುತ್ತದೆ. ಕೂಡಲೇ ಅದನ್ನು ಬಾಣದಿಂದ ಭೇದಿಸಿದರೆ ಅದು ಕೆಳಗೆ ಎಣ್ಣಿಯಲ್ಲಿ ಬಿದ್ದು ಸಾಯುತ್ತದೆ. ಕೂಡಲೇ ಅದನ್ನು ಭೇದಿಸಿದರೆ ಅದು ಕೆಳಗೆ ಎಣ್ಣೆಯಲ್ಲಿ ಬಿದ್ದು ಸಾಯುತ್ತದೆ. ಕೂಡಲೇ ಅದನ್ನು ಬೇಧಿಸಿದ ವ್ಯಕ್ತಿಯೂ ಮೂರ್ಛೆ ಹೋಗುತ್ತಾನೆ. ಇಷ್ಟೇ ಅಲ್ಲದೇ, ಈ ಬಗೆಯ ಸಾಹಸ ಹನ್ನೆರಡು ವರ್ಷಗಳ ಕಾಲ ಬ್ರಹ್ಮಚರ್ಯವನ್ನು ಪಾಲಿಸಿರುವ ವ್ಯಕ್ತಿಯಿಂದ ಮಾತ್ರ ಸಾಧ್ಯ.

ಹೀಗೆ ರಾವಣನ ಜೀವ ರಹಸ್ಯವನ್ನು ಅರಿತುಕೊಂಡು ಲಕ್ಷ್ಮಣನು ಅನಂತರ ತನ್ನ ಮೊದಲಿನ ವೇಷದಲ್ಲಿ ತನ್ನ ಶಿಬಿರಕ್ಕೆ ಮರಳಿ ರಾಮನಿಗೆ ಎಲ್ಲವನ್ನೂ ನಿರೂಪಿಸುತ್ತಾನೆ. ಅನಂತರ, ಹನ್ನೆರಡು ವರ್ಷಗಳ ಕಾಲ ಬ್ರಹ್ಮಚಾರಿಯೇ ಆಗಿದ್ದ ಲಕ್ಷ್ಮಣನು ರಾವಣನು ವಿವರಿಸಿದಂತೆಯೇ ಎಲ್ಲವನ್ನೂ ಮಾಡಿ, ಆ ಕಣಜವನ್ನು ಹೊಡೆದು, ಆ ಸತ್ವ ಪರೀಕ್ಷೆಯಲ್ಲಿ ಜಯಶಾಲಿಯಾಗುತ್ತಾನೆ; ಮತ್ತು ರಾವಣನು ಮರಣ ಹೊಂದುತ್ತಾನೆ.

. ಕುಂಕಣ ರಾಮಾಯಣ:

ರಾವಣಸೀತೆಯರ ಜನ್ಮ ವೃತ್ತಾಂತ: ಹಿಂದೊಮ್ಮೆ ಆರು ಜನ ಸಹೋದರರಿದ್ದರು; ಅವರೆಲ್ಲರೂ ದರೋಡೆಕೋರರು. ಅವರಲ್ಲಿ ಕೊನೆಯವನು ಕೈಕಾಲುಗಳಿಲ್ಲದವ. ಸ್ವಲ್ಪ ಸಮಯದ ನಂತರ ಅವನನ್ನು ನಿಷ್ಪ್ರಯೋಜಕನೆಂದು ಹೀಯಾಳಿಸಿ ಮನೆಯಿಂದ ಹೊರಗಟ್ಟುತ್ತಾರೆ. ಆ ಅಪಾಂಗನು ಕಷ್ಟದಿಂದ ತೆವಳುತ್ತಲೇ ಶಿವನನ್ನು ಪ್ರಾರ್ಥಿಸಲು ಕೈಲಾಸವನ್ನು ತಲುಪುತ್ತಾನೆ. ಅಲ್ಲಿ ಲಿಂಗದ ಎದುರು ಕುಳಿತು ಒಂದು ವರ್ಷದ ಕಾಲ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಇವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವನನ್ನು ಇತರರಿಗಿರುವಂತೆಯೇ ತನಗೂ ಕಾಲುಗಳನ್ನು ಕೊಡಲು ಪ್ರಾರ್ಥಿಸುತ್ತಾನೆ. “ಆಯಿತು; ನಿನ್ನ ಇಷ್ಟವನ್ನು ನೆರವೇರಿಸುತ್ತೇನೆ. ಆದರೆ ಈಗ ನನಗೆ ತುಂಬಾ ಕೆಲಸವಿದೆ; ಅದು ಮುಗಿದ ಬಳಿಕ ನಿನ್ನ ಬಳಿ ಬರುತ್ತೇನೆ. ಅಲ್ಲಿಯವರೆಗೂ ನೀನು ನನ್ನ ಅರಮನೆಯಲ್ಲಿರು. ಇಲ್ಲಿ ಎಲ್ಲಿಗೆ ಬೇಕಾದರೂ ಹೋಗು; ಆದರೆ ದಕ್ಷಿಣ ದಿಕ್ಕಿನ ಕೋಣೆಗೆ ಮಾತ್ರ ಹೋಗಬೇಡ. ಹೋದರೆ ನಿನಗೆ ಅಪಾಯ ತಪ್ಪಿದ್ದಲ್ಲ,” ಎಂದು ಶಿವನು ಹೇಳುತ್ತಾನೆ.

ಕೆಲ ದಿನಗಳ ನಂತರ ಆ ಅಪಾಂಗನು ಶಿವನ ಮೇಲಿನ ಕೋಪದಿಂದ ಅದದ್ದಾಗಲಿ ಎಂದು ದಕ್ಷಿಣ ದಿಕ್ಕಿನ ಕೋಣೆಯನ್ನು ಪ್ರವೇಶಿಸುತ್ತಾನೆ. ಅಲ್ಲೊಂದು ಅಮೃತದ ಕೊಳವಿತ್ತು. ಅವನು ಅದಕ್ಕೆ ಬಿದ್ದ ಕೂಡಲೇ ಅವನಿಗೆ ಒಂಬತ್ತು ಹೊಸ ತಲೆಗಳು ಮತ್ತು ಹದಿನೆಂಟು ಹೊಸ ಕೈಗಳು ಬೆಳೆಯುತ್ತವೆ. ಅವನೂ ಬೆಳೆದು ದಷ್ಟಪುಷ್ಟ ತರುಣನಾಗುತ್ತಾನೆ. ಆ ಸಮಯಕ್ಕೆ ಅಲ್ಲಿಗೆ ಬಂದ ಶಿವನು ಅವನನ್ನು ನೋಡಿ ಆಶ್ಚರ್ಯದಿಂದ ಹೀಗೆ ಹೇಳುತ್ತಾನೆ: “ನಿನಗೆ ದೇವರಕೃಪೆಯಿದೆ ಎಂದು ತೋರುತ್ತದೆ. ಇನ್ನು ಮುಂದೆ ನೀನು ಭೂಮಿಯಲ್ಲಿ ರಾವಣನೆಂಬ ಹೆಸರಿನಿಂದ ಪ್ರಸಿದ್ಧನಾಗಿ ಲಂಕಾಪಟ್ಟಣದ ರಾಜನಾಗು. ನಿನ್ನನ್ನು ಯಾರು ಸೋಲಿಸಲಾರರು. ನಿನ್ನ ರಕ್ಷಣೆಗೆ ಅಹಿ ಎಂಬ ಸರ್ಪ ಮತ್ತು ಮಹಿ ಎಂಬ ಹಸು ನಿನ್ನೊಡನೆ ಇರುತ್ತವೆ.”

ಸ್ವಲ್ಪ ಸಮಯದನಂತರ ರಾವಣನು ಶಿವನನ್ನು ಮತ್ತೆ ಕೇಳುತ್ತಾನೆ: “ನನ್ನಂತಹ ವಿಕೃತ ರೂಪಿಯನ್ನು ಯಾರೂ ಮದುವೆಯಾಗುವುದಿಲ್ಲ. ಆದ್ದರಿಂದ ಈಗ ತಾನೆ ಮನೆಯೊಳಗೆ ಪ್ರವೇಶಿದ ತರುಣಿ ಪಾರ್ವತಿ. ನನ್ನ ಪತ್ನಿಯಾಗುವಂತೆ ಕರುಣಿಸು” ಆ ತರುಣಿ ಪಾರ್ವತಿ ತನ್ನ ಪತ್ನಿಯನ್ನೇ ರಾವಣನಿಗೆ ಹೇಗೆ ಕೊಡುವುದೆಂದು ಶಿವನಿಗೆ ಚಿಂತೆಯಾದರೂ ವಚನಬದ್ಧನಾದುದರಿಂದ ರಾವಣನೊಡನೆ ಹೋಗಲು ಪಾರ್ವತಿಗೆ ಆಜ್ಞೆಮಾಡುತ್ತಾನೆ. ಪತಿವ್ರತೆಯೂ ಗುಣಶೀಲೆಯೂ ಆದ ಪಾರ್ವತಿ ರಾವಣನನ್ನು ಹಿಂಬಾಲಿಸುತ್ತಾಳೆ.

ಈ ಪರಿಸ್ಥಿತಿಯಲ್ಲಿ ತಮ್ಮನ್ನು ಕಾಪಾಡಿ, ಪಾರ್ವತಿಯು ಕೈಲಾಸದಲ್ಲಿಯೇ ಉಳಿಯುವಂತೆ ಮಾಡಲು ದೇವತೆಗಳೆಲ್ಲರೂ ದೇವದೇವನಾದ ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ತಥಾಸ್ತು ಎಂದ ಕೃಷ್ಣನು (ನಾರಾಯಣನು) ಒಬ್ಬ ಬುಡಕಟ್ಟು ಮನುಷ್ಯನಂತೆ ವೇಷ ಧರಿಸಿ, ಲಂಕೆಗೆ ಹೋಗುತ್ತಿದ್ದ ರಾವಣನನ್ನು ಸಂಧಿಸಿ, ಶಿವನು ಅವನಿಗೆ ಮೋಸ ಮಾಡಿದ್ದಾನೆಂದೂ ಅವನೊಡನೆ ಇರುವವಳು ನಿಜವಾದ ಪಾರ್ವತಿಯಲ್ಲ, ಅವಳ ದಾಸಿ ಎಂದೂ ಹೇಳುತ್ತಾನೆ. ಸಂಶಯದಿಂದ ರಾವಣನು ಕೈಲಾಸಕ್ಕೆ ಮರಳುವ ಹೊತ್ತಿಗೆ ಕೃಷ್ಣನು ಕಪ್ಪೆಯೊಂದನ್ನು ಹಿಡಿದು, ಅದಕ್ಕೆ ಪಾರ್ವತಿಯ ರೂಪು ಕೊಟ್ಟು, ಅವಳ ಶಿರದ ಹಿಂದೆ ಪ್ರಭಾವಳಿಯೊಂದನ್ನು ಸೃಷ್ಟಿಸುತ್ತಾನೆ. ಕೈಲಾಸಕ್ಕೆ ಹಿಂದಿರುಗಿದ ರಾವಣನು ಪ್ರಭಾವಳಿಯಿದ್ದುದರಿಂದ ಆ ಮಾಯಾ ಪಾರ್ವತಿಯನ್ನೇ ನಿಜವಾದ ಪಾರ್ವತಿಯೆಂದು ನಂಬಿ ಅವಳೊಡನೆ ಲಂಕೆಗೆ ಮರಳುತ್ತಾನೆ. ನಿಜವಾದ ಪಾವರ್ತಿಯು ಶಿವನನ್ನು ಸೇರುತ್ತಾಳೆ.

ಮತ್ತೆ ದಾರಿಯಲ್ಲಿ ರಾವಣನನ್ನು ಭೇಟಿ ಮಾಡುವ ಅದೇ ಬುಡಕಟ್ಟಿನ ಮನುಷ್ಯ (ಕೃಷ್ಣ) ಶಿವನು ಅವನನ್ನು ಮತ್ತೂ ವಂಚಿಸಿದ್ದಾನೆಂದೂ ಅವನು (ರಾವಣನು) ಶಿವನಿಂದ ಮೃತ್ಯುಸಿಂಹಾಸನವನ್ನು ಕೇಳಬೇಕಾಗಿತ್ತೆಂದೂ ಹೇಳುತ್ತಾನೆ. ಅದಕ್ಕಾಗಿ ಮತ್ತೆ ಕೈಲಾಸಕ್ಕೆ ಬರುವ ರಾವಣನು ಶಿವನನ್ನು ಮೃತ್ಯುಸಿಂಹಾಸನಕ್ಕಾಗಿ ಬೇಡಲು ಶಿವನು ಲೆಕ್ಕಣಿಕೆಯಿಂದ ಕಾಗದದ ಮೇಲೆ ಹೀಗೆ ಬರೆಯುತ್ತಾನೆ: “ಅಯೋಧ್ಯೆಯ ರಾಜನಿಗೆ ಕೈಕಯಿಯೆಂಬ ರಾಣಿಯಲ್ಲಿ ಏಳನೆಯ ಅವತಾರವಾದ ರಾಮನು ಜನ್ಮಿಸುತ್ತಾನೆ. ಆ ಮುಹೂರ್ತದಲ್ಲಿ ಭೂಮಿಯೆಲ್ಲವೂ ನಡುಗುತ್ತದೆ; ರಾವಣನ ಕಾಲಿಗೆ ಬಲವಾದ ಮುಳ್ಳು ಚುಚ್ಚಿ ಅದರ ನೋವು ಅವನ ತಲೆಗೇರುತ್ತದೆ. ಅನಂತರ ಅವನು ಮಲೇರಿಯಾ ಜ್ವರದಿಂದ ನರಳುತ್ತಾನೆ. ಕೊನೆಗೆ ರಾಮನಿಂದ ರಾವಣನ ಸಾವು ಘಟಿಸುತ್ತದೆ.”

ಇದನ್ನು ಕೇಳಿದ ರಾವಣನು ಮಾನವನಾದ ರಾಮನನ್ನು ತಾನೇ ಮೊದಲು ಕೊಲ್ಲಬಹುದೆಂಬ ಧೈರ್ಯದಿಂದ ಮಾಯಾ ಪಾರ್ವತಿಯೊಡನೆ ಲಂಕೆಗೆ ಮರಳುತ್ತಾನೆ. ದಾರಿಯಲ್ಲಿ ಗಂಗಾನದಿಯ ಬಳಿ ವಿಶ್ರಾಂತಿ ಪಡೆಯಲು ನಿರ್ಧರಿಸಿ ಪಾರ್ವತಿಯ ತೊಡೆಯ ಮೇಲೆ ತಲೆಯಿಟ್ಟು ನಿದ್ರಿಸುತ್ತಾನೆ. ಸುತ್ತಲೂ ಕಪ್ಪೆಗಳು ಕೂಗುತ್ತಿರುವುದನ್ನು ಕೇಳಿ ಮಾಯಾ ಪಾರ್ವತಿಯು ಥಟ್ಟನೆ ನೀರಿಗೆ ಧುಮುಕಿ ಆನಂದದಿಂದ ಈಜಾಡುತ್ತಾಳೆ. ನಿದ್ರೆಯಿಂದೆದ್ದ ರಾವಣನು ಪಾರ್ವತಿಯನ್ನು ಕಾಣದೆ ‘ರಾಣೀ’ ಎಂದು ಘರ್ಜಿಸುತ್ತಾನೆ. ಆ ಘರ್ಜನೆಗೆ ಅವಳು ಬೆಚ್ಚಿ ಬೀಳುತ್ತಾಳೆ ಮತ್ತು ಅವಳ ಗರ್ಭದಲ್ಲಿದ್ದ ಎರಡು ತಿಂಗಳ ಭ್ರೂಣವು ಕೆಳಗೆ ಬಿದ್ದು ನೀರಿನಲ್ಲಿ ತೇಲಿಹೋಗುತ್ತದೆ. ಮಾಯಾ ಪಾರ್ವತಿಯ ಪ್ರಭಾವಳಿಯೂ ಇಲ್ಲದಂತಾಗಿ ಅವಳು ಮಂಕಾಗುತ್ತಾಳೆ. ಅನಂತರ ಅವಳೊಡನೆ ರಾವಣನು ಲಂಕೆಗೆ ತಲುಪಿ ರಾಜ್ಯವಾಳುತ್ತಾನೆ.

ಗಂಗಾ ನದಿಯ ಒಂದು ಕಡೆ ಜನಕರಾಜನ ರಾಜ್ಯವಿದ್ದರೆ ಮತ್ತೊಂದು ಕಡೆ ಜಂಬುಮಾಲಿಯ ಚಿಕ್ಕ ರಾಜ್ಯವಿರುತ್ತದೆ. ನೀರಿನಲ್ಲಿ ತೇಲುತ್ತಿದ್ದ ಭ್ರೂಣವು ಜಂಬುಮಾಲಿಯ ರಾಜ್ಯಕ್ಕೆ ಸೇರಿದ ತೋಟವನ್ನು ತಲುಪಿದ ಕೂಡಲೇ ಅಲ್ಲಿಯೇ ನಿಂತು, ಬೆಳೆದು ಬಾಲಿಕೆಯಾಗುತ್ತದೆ. ತೋಟದ ಎಲ್ಲಾ ಮರಗಳೂ ಹೂಹಣ್ಣುಗಳಿಂದ ತುಂಬುತ್ತವೆ. ಕನಸಿನಲ್ಲಿ ಈ ಅದ್ಭುತವನ್ನು ಕಂಡ ಜಂಬುಮಾಲಿಯು ಮರುದಿನ ತೋಟಕ್ಕೆ ಹೋಗಿ ಅಲ್ಲಿ ಅಳುತ್ತಿದ್ದ ಮಗುವನ್ನು ಮನೆಗೆ ತಂದು, ಸೀತೆಯೆಂದು ಹೆಸರಿಟ್ಟು, ಪ್ರೀತಿಯಿಂದ ಬೆಳೆಸುತ್ತಾನೆ. ಬಹುಬೇಗ ಅವಳು ಬೆಳೆದು ದೊಡ್ಡವಳಾಗುತ್ತಾಳೆ.

ಗೌರಿ ಹಬ್ಬದ ಸಂದರ್ಭದಲ್ಲಿ ಈ ಎರಡೂ ರಾಜ್ಯಗಳ ಸ್ತ್ರೀಯರ ನಡುವೆ ಕಲಹವಾಗಿ, ಸೀತೆಯೊಬ್ಬಳೇ ಜನಕರಾಜ್ಯದ ೩೬೦ ಸ್ತ್ರೀಯರನ್ನು ಸೋಲಿಸಿ ಓಡಿಸುತ್ತಾಳೆ. ಅನಂತರ ಅದಕ್ಕೆ ತಪ್ಪು ಕಾಣಿಕೆಯಾಗಿ ಜನಕನು ಸೀತೆಯನ್ನೇ ಕೇಳುತ್ತಾನೆ. ಅನಂತರ ಸೀತೆ ಜನಕನ ಅರಮನೆಯಲ್ಲಿ ಅವನ ಮಗಳಂತೆಯೇ ಇರುತ್ತಾಳೆ.

ಅಯೋಧ್ಯೆಯ ರಾಜನಾದ ದಶರಥನು ಜನಕನ ಹೆಂಡತಿಯ ಅಣ್ಣ. ಒಮ್ಮೆ ತನ್ನ ತಂಗಿಯನ್ನು ನೋಡಲು ಅಲ್ಲಿಗೆ ದಶರಥನು ಬಂದಾಗ ತನ್ನ ಬೃಹದಾಕಾರದ ಧನಸ್ಸನ್ನು ಅರಮನೆಯ ಪಡಸಾಲೆಯಲ್ಲಿ ಇಡುತ್ತಾನೆ. ಊಟವಾದ ಮೇಲೆ ಎಲ್ಲರೂ ಮಲಗಿರುವಾಗ, ಸೀತೆಯು ಆ ಧನಸ್ಸನ್ನು ತೆಗೆದುಕೊಂಡು ಹೋಗಿ ಉದ್ಯಾನದಲ್ಲಿ ಆಟವಾಡುತ್ತಿರುತ್ತಾಳೆ. ನಿದ್ದೆ ತಳೆದ ನಂತರ ತನ್ನ ಧನಸ್ಸನ್ನು ಕಾಣದೆ ದಶರಥನು ಚಿಂತಿಸುತ್ತಿದ್ದಾಗ ಸೀತೆಯು ಅದರೊಡನೆ ಆಟವಾಡುತ್ತಿರುವುದನ್ನು ಕಂಡು ಆಶ್ಚರ್ಯಚಕಿತನಾಗುತ್ತಾನೆ. ಕೂಡಲೇ ತನ್ನ ಭಾವ ಜನಕನಿಗೆ ಹೀಗೆ ಹೇಳುತ್ತಾನೆ. “ನನ್ನ ಈ ಧನಸ್ಸು ಮತ್ತು ಎರಡೂವರೆ ಮಣತೂಕದ ಕತ್ತಿಯಂತಿರುವ ಈ ಬಾಣ ಇವೆರಡನ್ನೂ ಇಲ್ಲಿಯೇ ಬಿಟ್ಟು ಹೋಗುತ್ತೇನೆ. ಸೀತೆಗೆ ಹದಿನಾರು ತುಂಬಿದಾಗ ಅವಳ ಸ್ವಯಂವರವನ್ನು ಏರ್ಪಡಿಸು. ಯಾರು ಈ ಬಿಲ್ಲುಬಾಣಗಳನ್ನು ತನ್ನ ಎಡಗಾಲಿನ ಕಿರು ಬೆರಳಿನಿಂದ ಎತ್ತಿ, ಅನಂತರ ಕುದಿಯುತ್ತಿರುವ ಎಣ್ಣೆಯ ದೊಡ್ಡ ಕಡಾಯಿಯ ಮೇಲೆ ನಿಂತು ಅದರ ಮೇಲೆ ಕಟ್ಟಲ್ಪಟ್ಟಿರುವ ಚಲಿಸುವ ಮೀನನ್ನು ಭೇದಸಿ ಆ ಮೀನು ಮತ್ತು ಬಾಣ ಎರಡೂ ಕೆಳಗೆ ಎಣ್ಣೆಯೊಳಗೆ ಬೀಳುವಂತೆ ಮಾಡಿ, ಅನಂತರ ತಾನೂ ಆ ಎಣ್ಣೆಯಲ್ಲಿ ಮೂರು ಬಾರಿ ಮುಳುಗೆದ್ದು, ತಾಂಬೂಲವನ್ನು ಸೇವಿಸಿ, ಅದರ ರಸವನ್ನು ದೂರದ ಕಾಡಿನ ತನಕ ಉಗಿದು ಆ ಕಾಡನ್ನು ಸುಡುತ್ತಾನೋ ಅಂತಹ ರನೇ ಸೀತೆಯ ಕೈಹಿಡಿಯಲು ಯೋಗ್ಯ ವರ.”

ಹೀಗೆ ಹೇಳಿ ದಶರಥನು ತನ್ನ ಬಿಲ್ಲುಬಾಣಗಳನ್ನು ಅಲ್ಲಿಯೇ ಬಿಟ್ಟು ಅಯೋಧ್ಯೆಗೆ ಮರಳುತ್ತಾನೆ. ಸೀತೆ ದಿನದಿಂದ ದಿನಕ್ಕೆ ಪ್ರವರ್ಧಮಾನಳಾಗುತ್ತಾ, ಶೋಡಷಿಯಾಗುತ್ತಾಳೆ.

. ಗೊಂಡ ರಾಮಾಯಣ: (ಕನ್ನಡ)

ವಾಲ್ಮೀಕಿ ರಾಮಾಯಣದ ಹೋಲಿಕೆಯಲ್ಲಿ ಈ ರಾಮಾಯಣದಲ್ಲಿ ಇಲ್ಲದಿರುವ ಭಾಗಗಳೆಂದರೆ: ಕ್ರೌಂಚವಧೆ, ಶ್ರವಣ ಕುಮಾರನ ಕಥೆ, ಪುತ್ರಕಾಮೆಷ್ಟೀ, ಮಂಥರೆ, ಅಹಲ್ಯಾ ಪ್ರಸಂಗ, ಶಿವ ಧನುಸ್ಸಿನ ಭಂಗ, ಶಬರಿ, ಅಗ್ನಿಪರೀಕ್ಷೆ, ಇತ್ಯಾದಿ; ಮತ್ತು ಇದರಲ್ಲಿ ಇರುವ ಹಾಗೂ ಅಭಿಜಾತ ರಾಮಾಯಣಗಳಲ್ಲಿ ಇಲ್ಲದಿರುವ ಕೆಲವು ಮುಖ್ಯ ಸಂಗತಿಗಳು ಹೀಗಿವೆ:

. ಆಕಾಶಕಾಕಿ: ಶಿವ ಧನುಸ್ಸಿನ ಬದಲಿಗೆ ಇಲ್ಲಿ ಆಕಾಶಕಾಕಿ ಬರುತ್ತದೆ. ಜನಕರಾಜನು ಸ್ನಾನಮಾಡಿ ಬಂದನಂತರ ದಿನವೂ ಅವನ ಧ್ಯಾನಕ್ಕೆ ಭಂಗ ತರುತ್ತಿದ್ದ ‘ಆಕಾಶಕಾಕಿ’ಯನ್ನು ಹೊಡೆದವರಿಗೆ ಸೀತೆಯನ್ನು ಮದುವೆ ಮಾಡಿಕೊಡುವುದಾಗಿ ಜನಕನು ಘೋಷಿಸುತ್ತಾನೆ. ‘ಆಕಾಸ ಕಾಕಿ’ಯನ್ನು ಹೊಡೆಯಬೇಕಾದರೆ “ಕಂಕ್ಳಲ್ಲೂ ಕವುಡೇನೆ ಕಟ್ಟಬೇಕು; ಮೂಗುನಲು ನೆಲಮುಸುರಿ ಕಟ್ಟಬೇಕಾ; ಬೆನ್ನು ಮ್ಯಾಲೊಂದೆ…ನಾಗುಬೆತ್ತಾನೆ ಬೆಳಿಬೇಕಾ; ಗಂಟ್ಳಲ್ಲಿ… ಸಾವಿಗನೆ ಬಲೆಯೊಂದ ಕಟ್ಟಬೇಕಾ,…” ಇಂತಹ ನೇಮ-ನಡತೆಗಳುಳ್ಳ ಲಕ್ಷ್ಮಣನು ತನ್ನ ತಪಃಶಕ್ತಿಯಿಂದ ಆಕಾಸ ಕಾಕಿಯನ್ನು ಹೊಡೆಯುತ್ತಾನೆ. ಆದರೆ ಸೀತೆಯ ಮದುವೆ ರಾಮನೊಡನೆ ಆಗುತ್ತದೆ.

. ವಿವಾಹಪೂರ್ವ ಪ್ರಸಂಗ: ಆರು ವರ್ಷ ವನವಾಸವನ್ನು ಪೂರೈಸಿ, ಜನಕ ಮಹಾರಾಜನ ಬಿಲ್ಲುಹಬ್ಬಕ್ಕೆ ಬರುವ ರಾಮ-ಲಕ್ಷ್ಮಣರು ‘ಆಕಾಸ ಕಾಕಿ’ಯನ್ನು ಹೊಡೆಯುವ ಮೊದಲು ಸೀತೆಯನ್ನು ನೋಡುವ ಇಚ್ಛೆಯಿಂದ ನೀರು ಕೇಳುವ ನೆಪದಲ್ಲಿ ಅವಳ ಅಂತಃಪುರಕ್ಕೆ ಬಂದು, ಅಲ್ಲಿ ಏನೂ ತಿಳಿಯದ ಮೂರ್ಖರಂತೆ ವರ್ತಿಸಿ ಸೀತೆಯನ್ನು ಪರೀಕ್ಷಿಸುತ್ತಾರೆ: ಸೀತೆ ನೀರು ಕುಡಿಯಲು ಕೊಟ್ಟಾಗ ಬಾಯಿಯಿಂದ ಕುಡಿದು ಮೂಗಿನಿಂದ ಬಿಡುತ್ತಾರೆ, ಮೂಗಿನಿಂದ ಕುಡಿದು ಬಾಯಿಯಿಂದ ಬಿಡುತ್ತಾರೆ.

. ಸೀತಾಪಹರಣ: ಮಾಯಾಮೃಗವನ್ನು ಕಂಡಕೂಡಲೇ ಅದರ ಚರ್ಮದಿಂದ ಕುಬಸ ಹೊಲಿದುಕೊಳ್ಳಲು ಸೀತೆ ಆಸೆಪಡುತ್ತಾಳೆ. ರಾಮನ ಸಹಾಯಕ್ಕೆ ಲಕ್ಷ್ಮಣನು ಹೋಗಲು ಹಿಂಜರಿಯುವಾಗ ಅವನನ್ನು ತುಚ್ಛವಾಗಿ ಜರಿಯುತ್ತಾಳೆ: “ರಾಮಾ ಸತ್ತರೂ ಸಾಯಲಿ ಎಂದೂ ಗಿನ್ನೂ ನನ್ನ ನೀವೇನೂ ಆಳುಬೇಕಾ ಎಂದಾಳು.”

ರಾವಣನು ಸೀತೆಯನ್ನು ಲಂಕೆಗೆ ಬಲಾತ್ಕಾರದಿಂದ ಕರೆದೊಯ್ದಾಗ “ಐದೊರುಷ ಅಜ್ಞಾಸ ಮಾಡಬೇಕಾ… ನನ್ನ ಮೈಯಾರು ಮುಟ್ಟಬಾರ್ದು ಗಿನ್ನು” ಎಂದು ರಾವಣನಿಗೆ ಕಟ್ಟಳೆ ಮಾಡುತ್ತಾಳೆ.

. ಸೀತಾ ಪರಿತ್ಯಾಗ: ಅಯೋಧ್ಯೆಯಲ್ಲಿ ಮಡಿವಾಳ ಮಾಚಣ್ಣನು ತನ್ನ ಹೆಂಡತಿಯೊಡನೆ ಜಗಳವಾಡುವಾಗ ಹೇಳುವ ಮಾತುಗಳನ್ನು ಕೇಳಿ, ರಾಮನು ಸೀತೆಯನ್ನು ಕಾಡಿನಲ್ಲಿ ವಧಿಸಲು ಕಿರಾತರಿಗೆ ಆದೇಶಿಸುತ್ತಾನೆ. ಅಡವಿಯಲ್ಲಿ ಅವರು ಕತ್ತಿಯನ್ನೆತ್ತಿದಾಗ ಆಲಗಿನಲ್ಲಿ ಶಿಶು ಕಾಣಿಸುತ್ತದೆ; ಅವರು ಸೀತೆಯನ್ನು ವಧಿಸದೆ ಕಾಡಿನಲ್ಲಿಯೇ ಬಿಟ್ಟು ಹೋಗುತ್ತಾರೆ.

ಸೀತೆ ವಾಲ್ಮೀಕಿ ಮುನಿಗಳ ಆಶ್ರಮವನ್ನು ಸೇರಿದಾಗ ಅಲ್ಲಿ ಅವಳಿಗೆ ಲವನು ಹುಟ್ಟುತ್ತಾನೆ. ಒಂದು ದಿನ ಮಗುವನ್ನು ಸೀತೆ ತನ್ನ ಜೊತೆಯಲ್ಲೆ ಹೊಳಗೆ ಕರೆದುಕೊಂಡು ಹೋದಾಗ, ತೊಟ್ಟಿಲಿನಲ್ಲಿ ಮಗುವಿಲ್ಲದಿರುವುದನ್ನು ಕಂಡು ವಾಲ್ಮೀಕಿ ತಮ್ಮ ಮಂತ್ರದಿಂದ ಕುಶನನ್ನು ಸೃಷ್ಟಿಸುತ್ತಾರೆ. ಕೊನೆಯಲ್ಲಿ ಮಕ್ಕಳು ರಾಮನೊಡನೆ ಅಯೋಧ್ಯೆಗೆ ಹೊರಟಾಗ “ಭೂಮಿ ಬಾಯೊಂದೇ ಬಿಡಬೇಕು ಈಗಿನ್ನು ಭೂಮಿ ಪಾಲಾಗಿ ಹೋಗುತೀನಾ” ಎಂದು ಹೇಳುತ್ತಾ ಸೀತೆ ಭೂಮಿಯಲ್ಲಿ ಸೇರಿ ಹೋಗುತ್ತಾಳೆ.

. ಜನಪದ ರಾಮಾಯಣ: (ಕನ್ನಡ)

೧. ಈ ಸಂಕಲನದಲ್ಲಿ ನಾಲ್ಕು ರಾಮಾಯಣಗಳಿವೆ. ಮೊದಲನೆಯದು ಕೇವಲ ಸೀತೆಯ ಬಗ್ಗೆ ಇರುವ ದೀರ್ಘ ಗೀತೆ.

ಈ ಗೀತೆಯ ಪ್ರಕಾರ, ಸೀತಮ್ಮ ಅರಮನೆಯ ಕೊಳದಲ್ಲಿ “ತಾವರೆಯ ಹೂವಾಗಿ” ಮೂಡುತ್ತಾಳೆ. ರಾವಾಳ (ರಾವಣ) ಹೂವನ್ನು ಮೂಸಿದಾಗ ಮೂಗಿನೊಳಕ್ಕೆ ಹೋಗಿ, ಮನೆಯಲ್ಲಿ ಅವನು ಸೀತಾಗ “ಹರಿದು ಬಿದ್ದಾರು ಧರೆಗೆ.” ಅವಳಿಂದ ಲಂಕೆ ಹಾಳಾಗುತ್ತದೆಂದು ಜೋಯಿಸರು ಭವಿಷ್ಯ ನುಡಿಯುತ್ತಾರೆ; ಆದ್ದರಿಂದ ಸೀತೆಯನ್ನು ಬ್ರಾಹ್ಮಣರಿಗೆ ದಾನವಾಗಿ ಕೊಡುತ್ತಾರೆ. ಅನಂತರ ಅವಳು ಜನಕರಾಜನ ಅರಮನೆಯನ್ನು ಸೇರುತ್ತಾಳೆ.

ಜನಕರಾಯನ ಮನೆಯಲ್ಲಿ ಬೆಳೆಯುವ ಸೀತೆ ತನಗೆ ಬೇಕೆಂದು ರಾವಾಳ ಕೇಳುತ್ತಾನೆ. “ನೀವು ಬಿತ್ತೀದ ಬೆಳೆಯ ನೀವೇಯೆ ಉಂಡಾರೆ” ಎಂದು ಜನಕನು ಅವನಿಗೆ ತಿಳಿಯ ಹೇಳುತ್ತಾನೆ. ಆದರೆ ರಾವಾಳನ ಮನಸ್ಸು ಬದಲಾಗುವುದಿಲ್ಲ ಆಗ ಜನಕನು ‘ಮದಲಿಂಗ ಧನುಸ್ಸನ್ನು ಎತ್ತಿದವರು’ ಸೀತೆಯನ್ನು ಮದುವೆಯಾಗಬಹುದೆಂದು ಪಂಥವನ್ನು ಒಡ್ಡುತ್ತಾನೆ. ರಾವಣನಿಗೆ ಸಾಧ್ಯವಾಗುವುದಿಲ್ಲ. ಅನಂತರ, ಆರು ವರ್ಷಗಳ ವನವಾಸವನ್ನು ಮುಗಿಸಿ ಅಲ್ಲಿಗೆ ರಾಮ-ಲಕ್ಷ್ಮಣರು ಬರುತ್ತಾರೆ; ರಾಮನು ಧನುಸ್ಸನ್ನು “ಮುಂಬೆಳ್ಳಲ್ಲೆತ್ತಿ ಎಸೆದಾರ.”

ಮುಂದೆ, ರಾವಣವಧೆಯ ನಂತರ ರಾಮನು ಸೀತೆಗೆ ಮೂರು ಪರೀಕ್ಷೆಗಳನ್ನು ಒಡ್ಡುತ್ತಾನೆ: ಮರಳ ಹರವಿಯಲ್ಲಿ ನೀರು ತುರುವುದು; ಸರ್ಪವನ್ನು ಸಿಂಬಿ ಮಾಡಿ ನೀರು ತರುವುದು; ಮತ್ತು ಕೊಂಡ ಹಾಯುವುದು. “ನನ್ನ ಕಾಪಾಡು” ಎಂದು ಸೀತೆ ಮಾವ ದಶರಥನನ್ನು ಪ್ರಾರ್ಥಿಸಿ, ಇವೆಲ್ಲ ಪರೀಕ್ಷೆಗಳನ್ನೂ ಎದುರಿಸುತ್ತಾಳೆ. ದಶರಥನು ಸ್ವತಃ ಅಲ್ಲಿಗೆ ಬಂದು ಸೀತೆಯ ಪಾತಿವ್ರತ್ಯವನ್ನು ರಾಮನಿಗೆ ತಿಳಿಸಿಹೇಳುತ್ತಾನೆ.

೨. ಈ ಗೀತೆ ಶೂರ್ಪನಖಿಯ ಮಗ ಸುಣ್ಕುಮಾರನ ಕಥೆಯನ್ನು ಹೇಳುತ್ತದೆ.

ರಾವಣನ ತಂಗಿ ಶೂರ್ಪನಖಿ; ಹಲ್ಲೂರ ಅವಳ ಗಂಡ. ಹಲ್ಲೂರನಿಗೆ “ಉರಿನಾಲ್ಗೆ, ಹಲ್ಲುಗಳು ಕೆಂಡ.” ಅವನು ಒಂದು ಸಂದರ್ಭದಲ್ಲಿ ರಾವಣನ ಪಾದಕ್ಕೆ ಬೀಳಲು ತಿರಸ್ಕರಿಸುತ್ತಾನೆ. ಇದರಿಂದ ಕೋಪಗೊಂಡ ರಾವಣ ಅವನನ್ನು ಕೊಲ್ಲುತ್ತಾನೆ.

ರಾವ್ಳನಿಗೆ ಶಾಪ ಹಾಕುತ್ತಾ ಶೂರ್ಪನಖಿ ಸೇಡು ತೀರಿಸಿಕೊಳ್ಳಲು ಮಗ ಸುಣ್ಕುಮಾರನಿಗೆ ಚಂದಾಯವನ್ನು (ಚಂದ್ರಾಯುಧ) ಪಡೆಯಲು ಹೇಳುತ್ತಾಳೆ. ಸುಣ್ಕುಮಾರ ಹನ್ನೆರಡು ವರ್ಷ ತಪಸ್ಸು ಮಾಡುತ್ತಾನೆ. ಆದರೆ, ಅವನ ಬಳಿಗೆ ಚಂದ್ರಾಯುಧ ಬಂದಾಗ ಲಕ್ಷ್ಮಣನೂ ಅಲ್ಲಿಯೇ ಇರುತ್ತಾನೆ ಮತ್ತು ಚಂದ್ರಾಯುಧವು ಅವನನ್ನು ಸೇರುತ್ತದೆ. ಇಬ್ಬರಿಗೂ ಯುದ್ಧವಾಗಿ ಲಕ್ಷ್ಮಣನು ಸುಣ್ಕುಮಾರನನ್ನು ಕೊಲ್ಲುತ್ತಾನೆ. ಮಗನ ಸಾವಿಗೆ ದುಃಖಪಡುತ್ತಾ, ರಾಮ-ಲಕ್ಷ್ಮಣರ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಅಣ್ಣ ರಾವಣನನ್ನು ಎತ್ತಿ ಕಟ್ಟುತ್ತಾಳೆ.

೩. ಈ ದೀರ್ಘ ಗೀತೆಯು ಉತ್ತರ ರಾಮಾಯಣದ ಕಥೆಯನ್ನು ನಿರೂಪಿಸುತ್ತದೆ.

ಗರ್ಭವತಿ ಸೀತೆಗೆ “ಏಳು ಹುಣಸೆಕಾಯಿ” ತಂದು ಕೊಡಲು ರಾಮ ಹೊರಟಾಗ ಮಡುವಾಳ ಮಾಚಪ್ಪನ ಹೀಯಾಳಿಕೆಯನ್ನು ಕೇಳುತ್ತಾನೆ. ಅವಮಾನದಿಂದ ಮನೆಗೆ ಬಂದ ರಾಮನು ಅವಳ ಶಿರಚ್ಛೇದ ಮಾಡಲು ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ. “ಅಪ್ಪಾ, ಜನಕಮಾರಾ ಜುರ್ಗೆ ಮಗಳಾಗಿ ದಶರಥನು ಮಾರಾಜುರ್ಗೆ ಸೊಸೆಯಾಗಿ… ಎಂಥಾ ಕಷ್ಟಕ್ಕೆ ಗುರಿಯು ಆದೆದ್ನಯ್ಯ” ಎಂದು ಅಳುತ್ತಾ, ಸೀತೆ ಕೊನೆಯ ಬಾರಿಗೆ ಅವರೆಲ್ಲರಿಗೂ ಅಡಿಗೆಮಾಡಿ ಬಡಿಸುತ್ತಾಳೆ. ಆಗ “ಒಂತೊಟ್ಟು ಮೂರಲೆ”ಯ ಎಲೆಯಲ್ಲಿ ಊಟ ಮಾಡಿದುದರಿಂದ ಅಂದಿನಿಂದ ‘ಮುತ್ತೈದೆ ಹೆಸರಿನಲ್ಲಿ ಮುತ್ತುಗದ ಎಲೆಯಲ್ಲಿ ಲೋಕವೆಲ್ಲಾ ಊಟಮಾಡಲಿ’ ಎಂದು ಸೀತೆ ಹರಸುತ್ತಾಳೆ. “ಹೆಣ್ಣಾಗಿ ಹುಟ್ಟಿದ ಪುಣ್ಯ ಸಾಕಪ್ಪ ರಾಮ ರಾಮ” ಎಂದು ಸಂಕಟಪಡುತ್ತಾ ಲಕ್ಷ್ಮಣನೊಡನೆ ಕಾಡಿಗೆ ಹೋಗುತ್ತಾಳೆ.

ಸೀತೆಯು ಸತ್ತಳೆಂದು ಕೊರಗುವ ರಾಮನ ಕಣ್ಣೀರು ನದಿಯಾಗಿ ಹರಿಯುತ್ತದೆ ಮತ್ತು ಅವನ ಮೂಗಿನ ಗೊಣ್ಣೆ ಎರಡು ಮೀನುಗಳಾಗುತ್ತವೆ. ಸೀತೆ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಧುಮಿಕಿದಾಗ ಆ ಮೀನುಗಳು ಅವಳನ್ನು ಬದುಕಿಸುತ್ತವೆ. ಸೀತೆ ತನ್ನ ಮಕ್ಕಳಿಗೆ ಕುಶ್ಚಲ್ವುಲು ಎಂದು ಆ ಮೀನುಗಳ ಹೆಸರನ್ನೇ ಇಡುತ್ತಾಳೆ. ವಾಲ್ಮೀಕಿ ಮುನಿಗಳು ಅಲ್ಲಿಗೆ ಬಂದಾಗ ತನ್ನ ಮಾನ ಕಾಪಾಡಿಕೊಳ್ಳಲು ಸೀತೆ ಅಲ್ಲಿಯೇ ಇದ್ದ ಒಂದು ದೊಡ್ಡ ಮರದ ಹಿಂದೆ ಅವಿತುಕೊಳ್ಳುತ್ತಾಳೆ. ಮುಂದೆ ಆ ಮರ ‘ಬಸರಿ ಮರ’ ಎಂದೇ ಪ್ರಸಿದ್ಧವಾಗುತ್ತದೆ.

ವಾಲ್ಮೀಕಿಯಾಶ್ರಮದಲ್ಲಿ ಸೀತೆ ಜನ್ಮ ಕೊಡುವುದು ಒಂದೇ ಮಗುವಿಗೆ; ಇನ್ನೊಂದನ್ನು ವಾಲ್ಮೀಕಿ ಸೃಷ್ಟಿಸುತ್ತಾರೆ. ಅನಂತರ, ಲವಕುಶರ ಕಾಳಗ, ರಾಮನ ಸೋಲು, ಇತ್ಯಾದಿ. ಕೊನೆಗೆ, ಎಲ್ಲರೂ ಅಯೋಧ್ಯೆಗೆ ಹೊರಟಾಗ “ಎಳ್ಳು ಜೀರಿಗೆಯ ಬೆಳೆವಂತ ಭೂಮ್ತಾಯ ಕೂಗಿ ಕರೆದಾಳು ತಾಯಿ ಸೀತಮ್ಮ ರಾಮರಾಮ.”

[1] A.K.Ramanuan, “Three Hundred Ramayanas: Five Examples and Three Thoughts on Translation,” in vinay Dhawadkar, ed. The Collected Essays of A.K. Ramanuja (New Delhi: OUP, 1999), pp.133-134.

[2] ಸ್ವತಂತ್ರ ವಸ್ತುನಿರ್ಮಾಣಕ್ಷಮತೆಯ ಅಭಾವವೇ ಈ ಬಗೆಯ ರಾಮಾಯಣ ಮಹಾಭಾರತಗಳ ಮರುಕಥನಗಳಿಗೆ ಕಾರಣವೆಂದು ಸುಚೇತನ ಸ್ವರೂಪ್ ವಾದಿಸುತ್ತಾರೆ. ನೋಡಿ: ಆ ಪೂರ್ವ, ಈ ಪಶ್ಚಿಮ (ಕನ್ನಡ ವಿ.ವಿ.ಹಂಪಿ: ೨೦೦೩) ಈ ಕೃತಿಯಲ್ಲಿ ಲೇಖಕರು ಕೈಗೊಂಡಿರುವ ಪಾಶ್ಚಾತ್ಯ ಪೌರ್ವಾತ್ಯ ಮಹಾಕಾವ್ಯಗಳ ತೌಲನಿಕ ವಿಮರ್ಶೆ ತುಂಬಾ ಸರಳೀಕೃತವಾಗಿದೆ ಮತ್ತು ಅವರ ಪ್ರತಿಯೊಂದು ತೀರ್ಮಾನವೂ ಚರ್ಚಾಸ್ಪದವಾಗಿದೆ.

[3] ಕಿರಣ ಮರಾಲಿ, ಸಂ.ಲೋಕಗೀತೋಮೆ ರಾಮಕಥಾ ಅವಧಿ (ಅಲಹಾಬಾದ್: ಸಾಹಿತ್ಯ ಭವನ್, ೧೯೮೬).

[4] ಅರುಣಾ ಜೋಷಿ, “ದ ಕಿಲಿಂಗ್ ಆಫ್ ರಾವಣ”, ರಾಮ್ ಸೀತ್ಮಾನಿ ವಾರ್ತಾ: ಸಂ. ಭಗವಾನ್‌ದಾಸ್ ಪಟೇಲ್; ಅಪ್ರಕಟಿತ ಲೇಖನ.

[5] ನಾಥೂ ದಹ್ಯಾಭಾಯಿ, ಸಂ. ಕುಂಕಣಾ ಕಥಾಓ (ನ್ಯೂ ಡೆಲ್ಲಿ: ಸಾಹಿತ್ಯ ಅಕಾಡೆಮಿ, ೨೦೦೦). ಇದರ ಒಂದು ಭಾಗದ ಇಂಗ್ಲೀಷ್ ಅನುವಾದ: ಜೆನಿ ರಾಠೋಡ್, “From the Kunknaa Raamaayana,” Painted Words, ed. Ganesh Devy (New Delhi:Penguin Books India, 2002), pp. 35-59.

[6] ಹಿ.ಚಿ.ಬೋರಲಿಂಗಯ್ಯ, ಸಂ. ಗೊಂಡ ರಾಮಾಯಣ (ಕನ್ನಡ ವಿ.ವಿ. ೧೯೯೯).

[7] ರಾಮೇಗೌಡ, ಪಿ.ಕೆ. ರಾಜಶೇಖರ, ಮತ್ತು ಎಸ್.ಬಸವಯ್ಯ, ಸಂ.ಜನಪದ ರಾಮಾಯಣ (ಮೈಸೂರು: ಮೈಸೂರು (ಮೈಸೂರು ವಿ.ವಿ.,೧೯೭೩).

[8] John D. Smith, The Epic of Pabuji: A Study, Transcription and Translation ( Cambridge: CUP, 1991).