ರಾಮಾಯಣ-ಮಹಾಭಾರತ ಮಹಾಕಾವ್ಯಗಳು ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊಂಡು, ಹಲವಾರು ಬಗೆಯ ವಿಮರ್ಶೆಗಳು-ವಿಶ್ಲೇಷಣೆಗಳು ಇಂದಿಗೂ ನಡೆಯುತ್ತಲೇ ಇವೆ. ಮಹಾಭಾರತಕ್ಕಿಂತಲೂ ರಾಮಾಯಣಗಳ ಸಂಖ್ಯೆ ದೊಡ್ಡದು. ಮೂಲ ಕಥಾ ಹಂದರಕ್ಕೆ ಸಾವಿರಾರು ಮಾರ್ಪಾಡುಗಳನ್ನೂ ಸೇರ್ಪಡೆಗಳನ್ನೂ ಮಾಡಿಕೊಂಡು ಭಾರತದಲ್ಲಷ್ಟೇ ಅಲ್ಲದೆ, ಸುತ್ತ ಮುತ್ತಲಿನ ದೇಶಗಳಲ್ಲೂ ಸಾವಿರಾರು ರಾಮಾಯಣಗಳ ಸೃಷ್ಟಿಯಾಗಿದೆ. ಇಂದು ವಿಶ್ವದಲ್ಲಿ ರಾಮಾಯಣಗಳ ಒಟ್ಟು ಸಂಖ್ಯೆ ಒಂದು ಲಕ್ಷವನ್ನು ಮೀರಿದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ, ರಾಮಕಥೆಯಲ್ಲಿರುವ ಸಾರ್ವತ್ರಿಕ ಗುಣ. ಇಂತಹ ಒಂದು ಕಥೆ ಎಲ್ಲಿ ಬೇಕಾದರೂ ನಡೆದಿರಬಹುದು. ರಾಮ-ಸೀತೆ-ಮಾರುತಿ-ರಾವಣರು ಸಂಕೇತ ಮಾತ್ರ. ಕೆಟ್ಟ ವಿಚಾರಗಳ ಮೇಲೆ ಒಳ್ಳೆ ವಿಚಾರಗಳ ವಿಜಯವನ್ನು ಯಾರು ತಾನೆ ಆಶಿಸುವುದಿಲ್ಲ? ಹಾಗಾಗಿಯೇ ರಾಮಕಥೆ ಎಲ್ಲೆಡೆಯೂ ಬಹುಸುಲಭವಾಗಿ ಆಯಾ ದೇಶ – ಭಾಷೆ – ಸಂಸ್ಕೃತಿಗಳೊಂದಿಗೆ ಸಮ್ಮಿಳಿತಗೊಂಡಿದೆ. ಇನ್ನೊಂದು ಪ್ರಮುಖ ಕಾರಣವೆಂದರೆ, ರಾಮಾಯಣ ಮಹಾಕಾವ್ಯದ ಗೇಯತೆ. ವಾಲ್ಮೀಕಿಯವರೇ ಹೇಳುವಂತೆ, ಅವರ ರಾಮಾಯಣ ತಂತ್ರೀ ವಾದ್ಯಕ್ಕೆ ಅನುಗುಣವಾದ ಮಧುರವಾದ ಛಂದಸ್ಸುಳ್ಳ ಕಾವ್ಯ (ಪಾದಬದ್ಧೋಕ್ಷರಸಮಸ್ತಂತ್ರೀಲಯಸಮನ್ವಿತಃ). ಈ ಕಾವ್ಯ ರಚಿತವಾದ ಕಾಲಕ್ಕಾಗಲೇ ಸಂಗೀತ, ನೃತ್ಯಪ್ರಕಾರಗಳು ಪ್ರಬುದ್ಧವಾಗಿ ಬೆಳೆದಿತ್ತು ಎನ್ನುವುದನ್ನೂ ಅವರೇ ಹೇಳುತ್ತಾರೆ. ಹಾಗಾಗಿಯೇ ಇದು ತಾನು ಹೋದ ಕಡೆಗಳಲ್ಲೆಲ್ಲಾ ಅಲ್ಲಿನ ಸಂಗೀತ-ನೃತ್ಯ ಪ್ರಕಾರಗಳನ್ನೂ ಮೈಗೂಡಿಸಿಕೊಂಡು ಮಧುರನಾದ ಹರಿಸುತ್ತಿದೆ.

ರಾಮಕಥೆ ಮಹಾಕಾವ್ಯವಾದ ಬಗೆ

ಕ್ರಿ.ಶ. ೫೦೦ರ ಸುಮಾರಿಗೆ ಲಿಖಿತರೂಪಕ್ಕೆ ಬಂದ ವಾಲ್ಮೀಕಿ ರಾಮಾಯಣ, ಅದಕ್ಕೆ ಹಿಂದೆ ಹಲವು ನೂರು ವರುಷಗಳು ಮೌಖಿಕ ಪರಂಪರೆಯಲ್ಲಿಯೆ ಉಳಿದು ಬಂದದ್ದು ಸ್ಪಷ್ಟವಾಗಿ ತೋರುತ್ತದೆ. ಅಷ್ಟೇ ಅಲ್ಲದೆ, ವಾಲ್ಮೀಕಿಗಳು ರಾಮಾಯಣವನ್ನು ರಚಿಸುವುದಕ್ಕೆ ಮುಂಚಿತವಾಗಿಯೇ ರಾಮನ ಕಥೆ ಜನ ಸಾಮಾನ್ಯರ ನಡುವೆ ಪ್ರಚಲಿತವಾಗಿತ್ತು ಎನ್ನುವ ಸೂಚನೆಯೂ ಅಲ್ಲಿಯೇ ಸಿಗುತ್ತದೆ. ವಾಲ್ಮೀಕಿಗಳು ನಾರದರನ್ನು, ಈ ಲೋಕದಲ್ಲಿ ಆದರ್ಶ ಗುಣಗಳನ್ನು ಹೊಂದಿರುವ ಪುರುಷ ಇದ್ದಾನೆಯೇ ಎಂದು ಕೇಳುತ್ತಾ ಧರ್ಮಜ್ಞ, ಸತ್ಯವಾದಿ, ದೃಢವ್ರತ, ವಿದ್ವಾಂಸ, ಸರ್ವಜೀವಿಗಳ ಹಿತಾಸಕ್ತ, ರ-ಸಮರ್ಥ… ಹೀಗೆ ಹದಿನಾರು ಗುಣಗಳನ್ನು ಪಟ್ಟಿ ಮಾಡುತ್ತಾರೆ. ಅದಕ್ಕೆ ಉತ್ತರವಾಗಿ, ನಾರದರು ಇಕ್ಷ್ವಾಕು ವಂಶದಲ್ಲಿ ಜನಿಸಿರುವ ರಾಮನೆಂಬ ರಾಜ ನೀವು ಕೇಳುವ ಎಲ್ಲಾ ಗುಣಗಳನ್ನೂ ಹೊಂದಿದ್ದಾನೆ ಎಂದು ಹೇಳಿ ರಾಮಾಯಣ ಕಥೆಯನ್ನು ಸಂಕ್ಷೇಪವಾಗಿ ತಿಳಿಸುತ್ತಾನೆ. ರಾಮ, ರಾವಣನನ್ನು ಕೊಂದು, ಸೀತಾ ಲಕ್ಷ್ಮಣರೊಡನೆ ಅಯೋಧ್ಯೆಗೆ ಬಂದು ಸುಖವಾಗಿ ರಾಜ್ಯವಾಳುತ್ತಿದ್ದಾನೆ ಎನ್ನುವಲ್ಲಿಗೆ ನಾರದ ಹೇಳಿದ ಕಥೆ ಮುಗಿಯುತ್ತದೆ. ಇದನ್ನು ಮುಂದೆ, ವಾಲ್ಮೀಕಿಗಳು ೨೪ ಶ್ಲೋಕಗಳಲ್ಲಿ ವಿಸ್ತಾರವಾಗಿ ಹೇಳಿ, ಮಹಾಕಾವ್ಯವಾಗಿಸಿದರು ಎನ್ನುವುದೂ ಅಲ್ಲಿಯೇ ಕಂಡುಬರುತ್ತದೆ. ಈಗ ನಮಗೆ ದೊರಕಿರುವ ರಾಮಾಯಣ ಅಲ್ಲಿನ ಬಾಲಕಾಂಡದಲ್ಲಿ ಹೇಳಿರುವ ಒಟ್ಟು ಶ್ಲೋಕಗಳ ಸಂಖ್ಯೆಗೆ ಹೊಂದಿಕೆಯಾಗುವುದಿಲ್ಲ. ಅದರ ನಂತರ ಉತ್ತರ ರಾಮಾಯಣವನ್ನೂ ವಾಲ್ಮೀಕಿಗಳೇ ರಚಿಸಿದರು ಎಂದು ಅಲ್ಲಿ ಹೇಳಿದ್ದರೂ, ಅನೇಕ ಪ್ರಕ್ಷಿಪ್ತಗಳು ಸೇರಿ ಹೋಗಿ ಯಾವುದು ಮೂಲ ಯಾವುದು ಅಲ್ಲ ಎಂದು ನಿರ್ಧರಿಸುವುದು ಸುಲಭ ಸಾಧ್ಯವಲ್ಲ. ಹೀಗೆ, ನಾರದರು ಸಂಕ್ಷೇಪವಾಗಿ ಹೇಳಿದ ರಾಮಕಥೆಗೆ ಅಂದಿನಿಂದ ಇಂದಿನವರೆಗೂ ಹೊಸ ಆಯಾಮಗಳ ಸೇರ್ಪಡೆಯಾಗುತ್ತಲೇ ಬಂದಿದೆ. ರಾಮ, ಎಲ್ಲೋ ಮೇಲಣ ಲೋಕದಲ್ಲಿದ್ದ ವಿಷ್ಣುವಿನ ಒಂದು ಅವತಾರ ಎನ್ನುವುದಕ್ಕಿಂತಲೂ, ಅವನನ್ನು ತಮ್ಮಲ್ಲೇ ಒಬ್ಬ ಆದರ್ಶ ಪುರುಷನೆಂದು ಜನರು ತಿಳಿದದ್ದು ಹಲವು ರಾಮಾಯಣಗಳಲ್ಲಿ ಕಂಡು ಬರುತ್ತದೆ. ರಾಮಕಥೆ ಹಾಡಾಗಿ ಹರಿದು ಹೋದ ಕಡೆಯಲ್ಲೆಲ್ಲಾ ಆಯಾ ಪ್ರದೇಶದ ರಾಜರು, ರಾಜ ರಾಮನ ಆದರ್ಶವನ್ನು ಇಟ್ಟುಕೊಂಡು ತಮ್ಮ ನಾಡನ್ನು ರಾಮರಾಜ್ಯವನ್ನಾಗಿಸಲು ಪ್ರಯತ್ನಿಸಿದರು.

ರಾಮ ಭೂಮಿಗಿಳಿದು ಬಂದ ಭಗವಂತನೇ ಅಥವಾ ತನ್ನ ದೈವಿಕ ಗುಣಗಳಿಂದ ದೈವತ್ವಕ್ಕೆ ಏರಿದ ಚಾರಿತ್ರಿಕ ವ್ಯಕ್ತಿಯೇ?

ಈ ಜಿಜ್ಞಾಸೆ ಇಂದು ನೆನ್ನೆಯದಲ್ಲ. ಈ ಪ್ರಶ್ನೆಯನ್ನು ವಾಲ್ಮೀಕಿ ರಾಮಾಯಣದಲ್ಲಿ ರಾಮನೇ ಕೇಳುತ್ತಾನೆ. ರಾಮ-ರಾವಣರ ಯುದ್ಧ ನಡೆದು, ರಾವಣನ ವಧೆಯಾದ ಮೇಲೆ, ಯಾರಿಗಾಗಿ ಯುದ್ಧ ನಡೆಯಿತೋ ಆ ಸೀತಾದೇವಿ ರಾಮನಿಂದ ತಿರಸ್ಕೃತಳಾಗಿ ಅಗ್ನಿಪ್ರವೇಶ ಮಾಡುತ್ತಾಳೆ. ಆಗ, ಮೇಲಿನಿಂದ ದೇವಾಧಿದೇವತೆಗಳು ಬ್ರಹ್ಮನೊಡನೆ ಕೆಳಗಿಳಿದು ಬಂದು ರಾಮನನ್ನು-‘ಒಬ್ಬ ಸಾಮಾನ್ಯ ಮನುಷ್ಯ ಮಾಡುವಂತೆ ಹೀಗೇಕೆ ಮಾಡಿದೆ’ ಎಂದು ಕೇಳುತ್ತಾರೆ. ಅದಕ್ಕೆ, ರಾಮ-‘ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಮ್-ನಾನು ದಶರಥನ ಮಗನಾದ ಮಾನವ ಮಾತ್ರನೆಂದು ತಿಳಿದಿದ್ದೇನೆ’ ಎನ್ನುತ್ತಾನೆ. ನಂತರ, ಲೋಕ ಕಲ್ಯಾಣಕ್ಕೋಸ್ಕರ ವಿಷ್ಣು ತಳೆದ ವಿವಿಧ ಅವತಾರಗಳನ್ನೆಲ್ಲಾ ಬಹುದೀರ್ಘವಾಗಿ ಹೇಳುತ್ತಾ ಬ್ರಹ್ಮ, ಅವನ ದಿವ್ಯ ಸ್ವರೂಪದ ಬಗ್ಗೆ ತಿಳಿಸುತ್ತಾನೆ. ಅಷ್ಟರಲ್ಲಿ ಅಗ್ನಿದೇವನೂ ಸೀತೆಯನ್ನು ಕರೆದುಕೊಂಡು ಬಂದು ಅವಳ ಪಾವಿತ್ರ್ಯವನ್ನು ಕೊಂಡಾಡುತ್ತಾನೆ. ಆಗ ರಾಮನೂ ಹಲವಾರು ಮಾತುಗಳಲ್ಲಿ ಸೀತೆಯ ಬಗ್ಗೆ ತನಗೆ ಎಳ್ಳಷ್ಟೂ ಸಂಶಯವಿರಲಿಲ್ಲವೆಂದು ಹೇಳುತ್ತಾನೆ. ಸೂರ್ಯನಿಂದ ಅವನ ಪ್ರಭೆ ಹೇಗೆ ಬೇರೆಯಾಗುವುದಿಲ್ಲವೋ ಹಾಗೆಯೇ ಸೀತೆ ನನ್ನಿಂದ ಎಂದೂ ಬೇರೆಯಾಗಿರಲು ಸಾಧ್ಯವಿಲ್ಲ (ಮಾನಸಿಕವಾಗಿ)… ಇವಳು ಉರಿಯುವ ಬೆಂಕಿ… ರಾವಣನಂಥವನಿಗೆ ಇವಳು ಕಾಲಾಗ್ನಿ (ಅನನ್ಯಾ ಹಿ ಮಯಾ ಸೀತಾ ಭಾಸ್ಕರೇಣ ಪ್ರಭಾ ಯಥಾ… ದೀಪ್ತಾಮಗ್ನಿಶಿಖಾಮಿವ…) ಎಂದು ಹೇಳುತ್ತಾ, ತಾನು, ಲೋಕವನ್ನು ಮೆಚ್ಚಿಸುವುದಕ್ಕಾಗಿ, ಸಾಮಾನ್ಯ ಮಾನವರಂತೆ ನಡೆಯಬೇಕಾದದ್ದು ಅಗತ್ಯವಾಗಿತ್ತೆಂದು ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲದೆ, ಸೀತೆ ಅಗ್ನಿಯಲ್ಲಿ ಸುಡುವುದಿಲ್ಲ ಎಂದು ತನಗೆ ತಿಳಿದಿತ್ತು ಎನ್ನುವುದನ್ನು ಹಲವು ಬಗೆಯಲ್ಲಿ ಸೂಚ್ಯವಾಗಿ ಹೇಳುವ ರಾಮ, ಒಮ್ಮೆಗೇ ತನ್ನ ದೈಗುಣವನ್ನು ಪ್ರದರ್ಶಿಸುತ್ತಾನೆ. ಮೂರು ಲೋಕಗಳಲ್ಲಿಯೂ ಪರಿಶುದ್ಧಳಾದ ಜನಕಾತ್ಮಜೆಯನ್ನು ಪರಿತ್ಯಜಿಸಲು ಸಾಧ್ಯವೇ ಇಲ್ಲ (ನ ಹಿ ಹಾತುಮಿಯಂ ಶಕ್ಯಾ…) ಎನ್ನುತ್ತಾನೆ. ಹೀಗೆ, ಒಮ್ಮೆ ಮಾನವನಂತೆ ಕಾಣುತ್ತಾ, ಮತ್ತೊಮ್ಮೆ ತನ್ನ ದೈ ಗುಣವನ್ನು ಪ್ರದರ್ಶಿಸುವ ವಾಲ್ಮೀಕಿಯ ರಾಮ ಮುಂದೆ, ತನ್ನ ಪ್ರಜೆಗಳು ಸಂಶಯಪಟ್ಟರು ಎನ್ನುವ ಕಾರಣಕ್ಕೆ ಮತ್ತೆ, ಸೀತೆಯನ್ನು ಕಾಡಿಗೆ ಕಳುಹಿಸಿದ ‘ಉತ್ತರ ರಾಮಾಯಣ’ದ ಕಥೆಯ ಬಗ್ಗೆ ಹಲವಾರು ಪ್ರಶ್ನೆಗಳು ಕಾಡುತ್ತವೆ. ಇಂತಹ ಕೆಲವು ಪ್ರಶ್ನೆಗಳಿಗೆ ಜೈನ-ಬೌದ್ಧ-ಜಾನಪದ ರಾಮಾಯಣಗಳಲ್ಲಿ ಹಾಗೂ ಇತರ ದೇಶಗಳಲ್ಲಿ ರಚಿತವಾಗಿರುವ ರಾಮಾಯಣಗಳಲ್ಲಿ ಉತ್ತರ ಕಾಣುತ್ತದೆ. ಅಥವಾ, ರಾಮಾಯಣ ಒಳಗೊಂಡಿರುವ ಹಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕಲಿಕ್ಕಾಗಿಯೇ ವಿವಿಧ ಕಾಲಘಟ್ಟಗಳಲ್ಲಿ ಹಲವಾರು ಹೊಸ ಆಯಾಮಗಳಲ್ಲಿ ರಾಮಾಯಣಗಳು ಸೃಷ್ಟಿಯಾಗಿವೆ ಎನ್ನಬಹುದು! ಅದರಲ್ಲೂ ಭಾರತದ ಸುತ್ತ ಮುತ್ತಲ ದೇಶಗಳಲ್ಲಿ ರಚಿತವಾಗಿರುವ ರಾಮಾಯಣಗಳ ಅಧ್ಯಯನ ಹಲವು ರೋಚಕ ವಿಚಾರಗಳನ್ನು ತಿಳಿಸುತ್ತದೆ.

ಥಾಯ್ಲೆಂಡಿನ ರಾಮ್ ಕೀನ್ರಾಮ ಕೀರ್ತಿ ಅಥವಾ ರಾಮಆಖ್ಯಾನ

ಭಾರತೀಯ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ಬೆಳೆದ ಆಗ್ನೇಯ ದೇಶಗಳಲ್ಲಿ ಥಾಯ್ಲೆಂಡ್ ಹಾಗೂ ಕಾಂಬೋಡಿಯಾಗಳು ಅಗ್ರಪಂಕ್ತಿಯಲ್ಲಿ ನಿಲ್ಲುತ್ತವೆ. ಥಾಯ್ಲೆಂಡಿನಲ್ಲಂತೂ ರಾಮನಿಗೆ ವಿಶೇಷವಾದ ನಂಟಿದೆ. ವಿವಿಧ ಪ್ರಕಾರದ ರಾಮಾಯಣಗಳ ಪರಂಪರೆಯೇ ಇಲ್ಲಿ ಕಾಣುತ್ತದೆ. ಈಗಿನ ರಾಜಧಾನಿ ಬ್ಯಾಂಕಾಕ್ ನರಗದಿಂದ ೭೦ ಕಿಲೋಮೀಟರ್ ದೂರದಲ್ಲಿ ‘ಅಯುಥಾಯ’ (ಅಯೋಧ್ಯಾ) ಎಂಬ ನಗರವಿದೆ. ‘ಸಯಾಂ ದೇಶ’ವೆಂದು ಕರೆಯುತ್ತಿದ್ದ ಈ ದೇಶಕ್ಕೆ ಹಿಂದೆ ಆಯುಥಾಯ ರಾಜಧಾನಿಯಾಗಿತ್ತು. ಕ್ರಿ.ಶ.೧೩೫೦ರಿಂದ ೧೭೬೭ರ ವರೆಗೆ ಅಲ್ಲಿ ರಾಜ್ಯವಾಳಿದ ವಿವಿಧ ವಂಶಗಳ ರಾಜರ ಹೆಸರುಗಳು, ‘ರಾಮಾಧಿಬೋಧಿ, ರಾಮೇಶ್ವರ, ರಾಮರಾಜ, ರಾಮಾಧಿಪತಿ’ ಹೀಗೆ ಎಲ್ಲವೂ ರಾಮಮಯ. ಈ ಅವಧಿಯಲ್ಲಿ ಹಲವು ರಾಮಾಯಣಗಳು ರಚನೆಯಾದ ಉಲ್ಲೇಖ ಸಿಗುತ್ತದಾದರೂ ಅವ್ಯಾವುದೂ ಈಗ ಉಳಿದಿಲ್ಲ. ನಂತರ ಅಲ್ಲಿ ರಾಜ್ಯಭಾರ ಮಾಡಿದ ಥೋನ್ ಪುರಿಯ ರಾಜ ತಾಕ್ಸನ್ (೧೭೬೭-೧೭೮೨) ಬರೆದ ರಾಮಾಯಣದ ಕಾವ್ಯದ ಕೆಲವು ಭಾಗ ಮಾತ್ರ ಈಗಲೂ ದೊರೆಯುತ್ತದೆ.

೧೭೮೨ರಲ್ಲಿ ರಾಜ ೧ನೇ ರಾಮ ಅಲ್ಲಿ ಚಕ್ರಿವಂಶವನ್ನು ಸ್ಥಾಪಿಸಿದ. ಥಾಯ್ಲೆಂಡ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಶತಮಾನಗಳಿಂದಲೂ ಜನಜನಿತವಾಗಿದ್ದ ರಾಮಕಥೆ ಮಹಾಕಾವ್ಯವಾಗಿ ಮೊದಲ ಬಾರಿ ಲಿಖಿತ ರೂಪ ಪಡೆದದ್ದು ಬೌದ್ಧ ಧರ್ಮಕ್ಕೆ ಸೇರಿದ್ದ ಈ ರಾಜ ೧ನೇ ರಾಮನಿಂದಲೇ, ಅದೇ ವಂಶದ ೨ನೇ ರಾಮ ಈ ಮಹಾಕಾವ್ಯವನ್ನು ಗೀತ-ನೃತ್ಯಗಳಿಗೆ ಅನುಕೂಲವಾಗುವಂತೆ ಅಳವಡಿಸಿದ ಎನ್ನುತ್ತಾರೆ. ಮತ್ತೆ, ೬ನೇ ರಾಮ ಅದನ್ನು ಇನ್ನೂ ವಿಸ್ತಾರವಾಗಿ ರಚಿಸಿದ್ದಾನೆ. ರಾಜರು ರಚಿಸಿದ ರಾಮಾಯಣಗಳಲ್ಲದೆ, ಅಲ್ಲಿನ ಇತರ ಕವಿಗಳೂ ಹಲವಾರು ರಾಮಾಯಣಗಳನ್ನು ರಚಿಸಿರುವುದು ತೋರುತ್ತದೆ. ಸವ್ಯಕಾವ್ಯ, ದೃಶ್ಯಕಾವ್ಯ, ಮುಖವಾಡಧಾರಿಗಳ ಆಟ (ನಂಜ್), ತೊಗಲು ಗೊಂಬೆ ಆಟ (ಖೋನ್) ಹಾಗೂ ಹಲವಾರು ನೃತ್ಯ ರೂಪಕಗಳು ಅಲ್ಲಿ ಪ್ರಚಾರದಲ್ಲಿದೆ. ದೇವಾಲಯಗಳಲ್ಲಿ ಸೇವಾರ್ಥವಾಗಿ ರಾಮಾಯಣದ ನೃತ್ಯ ನಡೆಯುತ್ತದೆ. ಅಲ್ಲಿನ ಯಾವ ಸಾಂಸ್ಕೃತಿಕ ಕಾರ್ಯಕ್ರಮವೂ ರಾಮಾಯಣ ನೃತ್ಯವಿಲ್ಲದೆ ಕೊನೆಗೊಳ್ಳುವುದಿಲ್ಲ. ಇವರ ರಾಮಕಥೆಗಳ ದೀರ್ಘಪಟ್ಟಿಗೆ ‘ರಾಮ್ ಕೀನ್’ ಆಧರಿಸಿ ಪಂಡಿತ ಸತ್ಯವ್ರತಶಾಸ್ತ್ರಿಗಳು ಬರೆದಿರುವ ‘ಶ್ರೀರಾಮಕೀರ್ತಿಮಹಾಕಾವ್ಯಂ’ ಎಂಬ ಸಂಸ್ಕೃತ ಮಹಾಕಾವ್ಯ ಹೋದ ದಶಕದಲ್ಲಷ್ಟೇ ಸೇರ್ಪಡೆಯಾಗಿದೆ. ಈ ರಾಮಾಯಣದ ಪ್ರಕಟಣೆಗೆ, ಈಗ ಅಲ್ಲಿ ರಾಜನಾಗಿರುವ ಚಕ್ರಿವಂಶದ ರಾಜ ೭ನೇ ರಾಮ, ಭೂಮಿಬಾಲ್ ಅದುಲ್ಯದೇಜ್ (ಭೂಮಿಪಾಲ ಅತುಲ್ಯತೇಜ ನೆರವು) ನೀಡಿದ್ದಾನೆ.

ಅಲ್ಲಿನ ಜನರ ನಂಬಿಕೆಯಂತೆ ಥಾಯ್ಲೆಂಡ್ ರಾವಣನ ಊರು. ರಾಮ-ರಾವಣರ ಯುದ್ಧ ನಡೆದದ್ದೇ ಅಲ್ಲಿ. ವಾನರ ಪುಂಗವ ಹನುಮಂತ ತಂದ ಸಂಜೀವಿನಿ ಪರ್ವತವೂ ಅಲ್ಲಿಯೇ ಇದೆ! ಅಲ್ಲಿ ದೊರೆತಿರುವ ೧೩ನೇ ಶತಮಾನಕ್ಕೂ ಹಿಂದಿನ ಶಿಲಾ ಶಾಸನದಲ್ಲಿ, ‘ರಾಮನ ಗುಹೆ (ಧಾಮ ಪ್ರಾರಾಮಾ)’ ಹಾಗೂ ಸೀತೆಯ ಗುಹೆ (ಧಾಮ್ ಮಂಗಸಿದಾ)’ಗಳ ಉಲ್ಲೇಖವಿದೆ. ಈಗಿನ ರಾಜಧಾನಿ ಬ್ಯಾಂಕಾಕ್ ನಗರದ ಮುಖ್ಯಬೀದಿಗಳಲ್ಲಿ ಹಾಗೂ ಅರಮನೆಯಲ್ಲಿ ಬೃಹತ್ ವಾನರ-ದಾನವ-ರಕ್ಷಕ ಮೂರ್ತಿಗಳು ಅಲ್ಲಲ್ಲಿ ಕಂಗೊಳಿಸುತ್ತವೆ. ಅಪರೂಪದ ವಾನರಿಯ ಶಿಲ್ಪದೊಂದಿಗೆ ಕಿನ್ನರಿಯೂ ಇಲ್ಲಿದ್ದಾಳೆ. ಮೂಲದಲ್ಲಿ, ವಾಲ್ಮೀಕಿ ರಾಮಾಯಣವನ್ನೇ ಅನುಸರಿಸುತ್ತದಾದರೂ ‘ರಾಮ್ ಕೀನ್’ ಕಥಾನಕದಲ್ಲಿ ಸ್ವಲ್ಪ ಮಟ್ಟಿಗೆ ಇಂಡಿಯಾದಲ್ಲಿ ಪ್ರಚಲಿತವಿರುವ ಜೈನ ಹಾಗೂ ಬೌದ್ಧ ರಾಮಾಯಣಗಳ ಪ್ರಭಾವ ಇರುವಂತೆ ತೋರುತ್ತದೆ. ಇಲ್ಲಿ ಕಾಣುವ ಪ್ರಮುಖ ಬದಲಾವಣೆಯೆಂದರೆ, ಆಜನ್ಮ ಬ್ರಹ್ಮಚಾರಿಯೆಂದು ಪ್ರಖ್ಯಾತನಾಗಿರುವ ನಮ್ಮ ಮಾರುತಿಗೆ ಇಬ್ಬರು ಹೆಂಡತಿಯರು. ಅವರಿಂದ ಹುಟ್ಟುವ ಇಬ್ಬರು ಗಂಡು ಮಕ್ಕಳೂ (ಅಸುರಪಾದ್ ಮತ್ತು ಮಚ್ಚಾನು) ಕೂಡ ಈ ಕಥಾನಕದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇಲ್ಲಿ ಹಲವಾರು ಸಂದರ್ಭಗಳಲ್ಲಿ ಹನುಮಂತನೇ ಕಥಾನಾಯಕ ರಾಮನಿಗಿಂತಲೂ ಹೆಚ್ಚಿನ ಸ್ಥಾನವನ್ನು ಪಡೆದಿರುವುದು ಕಾಣುತ್ತದೆ. ಹನುಮಂತನ ಜನನ ಕೂಡ ಇಲ್ಲಿ ರೋಚಕವಾಗಿದೆ. ಈಶ್ವರನ ಅಣತಿಯಂತೆ, ವಾಯುದೇವ ಸ್ವಾಹಾದೇವಿಯರಿಗೆ ಹನಮಂತ ಮಗನಾಗಿ ಜನಿಸುತ್ತಾನೆ. ಅವನು ಹುಟ್ಟಿದಾಗಲೇ ಹದಿನಾರು ವರ್ಷದ ಯುವಕನಾಗಿದ್ದ ಹಾಗೂ ಶ್ವೇತ ವರ್ಣದವನಾಗಿದ್ದ. ಅಲ್ಲಿನ ಕೆಲವು ಉಪಕಥೆಗಳಲ್ಲಿ, ಅವನಿಗೆ ನಾಲ್ಕು ಮುಖಗಳೂ ಎಂಟು ಕೈಗಳೂ ಇದ್ದವೆಂದು ಹೇಳುತ್ತಾ ನಮ್ಮ ಹನುಮನಿಗೆ ಪ್ರಮುಖ ದೇವತಾ ಸ್ಥಾನ ಕೊಡುತ್ತಾರೆ.

ಇನ್ನೊಂದು ಪ್ರಧಾನವಾದ ಅಂಶವೆಂದರೆ, ರಾಮ್‌ಕೀನ್‌ನಲ್ಲಿ ಕೆಲವು ವಾಸ್ತವಿಕ ಘಟನೆಗಳು ಸೇರ್ಪಡೆಯಾಗಿವೆ. ರಾವಣನೊಡನೆ ಯುದ್ಧಮಾಡಲು ವಾನರ ಸೈನ್ಯದೊಂದಿಗೆ ಬಂದ ರಾಮನಿಗೆ, ಸಮುದ್ರಕ್ಕೆ ಸೇತುವೆ ಕಟ್ಟಲು, ರಾಮ್ ಕೀನ್ ರಾಮಾಯಣದಲ್ಲಿ ಬಹುದೀರ್ಘಕಾಲ ಬೇಕಾಗುತ್ತದೆ. ಆ ಸಮಯದಲ್ಲಿ, ರಾವಣ ಏನು ಮಾಡುತ್ತಿದ್ದ? ಸಮುದ್ರಕ್ಕೆ ಸೇತುವೆ ಕಟ್ಟುತಿರುವುದು ಅವನಿಗೆ ತಿಳಿಯದೆ ಇರುವುದು ಸಾಧ್ಯವೇ? ತಿಳಿದೂ ಕೂಡ ಅಂತಹ ಮಾಯಾವಿ ರಾಕ್ಷಸ ಸುಮ್ಮನಿರುವುದು ಸಾಧ್ಯವೇ? ಎಂಬಂತಹ ವಾಸ್ತವಿಕ ಪ್ರಶ್ನೆಗಳಿಗೆ ‘ರಾಮ್ ಕೀನ್’ನಲ್ಲಿ ಉತ್ತರಗಳು ದೊರಕುತ್ತವೆ. ಈ ಸಮಯದಲ್ಲಿಯೇ ನಮ್ಮ ಮಾರುತಿಯ ಪ್ರಣಯ ಪ್ರಸಂಗಗಳೂ ಘಟಿಸುತ್ತವೆ.

ಮಾರುತಿಯ ಪ್ರಣಯ ಪ್ರಸಂಗಗಳು

ಮಾರುತಿಯ ಮೊದಲ ಹೆಂಡತಿ ವಿಭೀಷಣನ ಮಗಳು. ಅವಳ ಹೆಸರು ‘ಬೆಂಜಕಾಯಿ’. ರಾಮ, ತನ್ನ ಸೈನ್ಯದೊಂದಿಗೆ ಲಂಕೆಯ ಬಳಿ ಬಂದು ಸಮುದ್ರಕ್ಕೆ ಸೇತುವೆ ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾನೆ. ಅದನ್ನು ತಿಳಿದ ರಾವಣ, ರಾಮನೊಡನೆ ಯುದ್ಧ ತಪ್ಪಿಸಿಕೊಳ್ಳಲು ಹಲವಾರು ಉಪಾಯಗಳನ್ನು ಮಾಡುತ್ತಾನೆ. ರಾಮ ಪ್ರತಿದಿನವೂ ಸ್ನಾನ ಮಾಡಲು ಹೋಗುವ ನದಿಯಲ್ಲಿ ಈ ಬೆಂಜಕಾಯಿಯನ್ನು ಸೀತೆಯ ರೂಪ ಧರಿಸಿ, ಸತ್ತಂತೆ ತೇಲುತ್ತಿರುವಂತೆ ಅಜ್ಞಾಪಿಸುತ್ತಾನೆ. ರಾಮ ಅದನ್ನು ಕಂಡು ಇನ್ನು ಯುದ್ಧ ಮಾಡುವುದು ವ್ಯರ್ಥವೆಂದು ತಿಳಿದು ಮರಳಿ ಹೋಗಿಬಿಡುತ್ತಾನೆ ಎಂಬುದು ರಾವಣನ ಯೋಜನೆ. ಆದರೆ, ಅದು ರಾಕ್ಷಸ ಮಾಯೆಯೆಂದು ತಿಳಿದ ಹನುಮಂತ ಬೆಂಜಕಾಯಿಯನ್ನು ಬೆಂಕಿಗೆ ಎಸೆದಾಗ, ಅವಳು ತನ್ನ ನಿಜ ರೂಪವನ್ನು ತಳೆಯುತ್ತಾಳೆ. ಇಂತಹ ಘೋರ ಕೃತ್ಯ ಮಾಡಿದ ತನ್ನ ಮಗಳಿಗೆ ಕಟುಶಿಕ್ಷೆ ಕೊಡಬೇಕೆಂದು ವಿಭೀಷಣನೇ ಹೇಳಿದರೂ, ರಾಮ ಅವಳ ಈ ಅಪರಾಧವನ್ನು ಕ್ಷಮಿಸುತ್ತಾನೆ. ಈ ಬೆಂಜಕಾಯಿಯನ್ನು ಗೌರವದಿಂದ ಲಂಕೆಯಲ್ಲಿ ಬಿಟ್ಟು ಬರಲು ಹನುಮಂತನಿಗೆ ಹೇಳುತ್ತಾನೆ. ಹೀಗೆ, ಹನುಮಂತ, ಅವಳನ್ನು ಹೊತ್ತುಕೊಂಡು ಲಂಕೆಗೆ ಹೋಗುವಾಗ, ಮಾರ್ಗ ಮಧ್ಯೆ ಅವರಿಬ್ಬರಲ್ಲಿ ಮೋಹವುಂಟಾಗುತ್ತದೆ. ಅವರಿಗೆ ಹುಟ್ಟುವ ಮಗನ ಹೆಸರು ‘ಅಸುರಪಾದ್’. ಅವನು ಲಂಕೆಯಲ್ಲಿ ರಾಕ್ಷಸರ ನಡುವೆಯೇ ಬೆಳೆಯುತ್ತಾನೆ.

ಹನುಮಂತನ ಎರಡನೆಯ ಪ್ರಣಯ ಪ್ರಸಂಗವೂ ಆ ಸಮಯದಲ್ಲಿಯೇ ನಡೆಯುತ್ತದೆ. ಸಮುದ್ರಕ್ಕೆ ಸೇತುವೆ ಕಟ್ಟುವ ಕಾರ್ಯಭಾರವಹಿಸಿದ್ದ ಹನುಮಂತ ತನ್ನ ಸೈನ್ಯದ ಸಹಾಯದಿಂದ ಹಗಲೆಲ್ಲಾ ಸಾವಿರಾರು ಕಲ್ಲುಗಳನ್ನು ಸಮುದ್ರದಲ್ಲಿ ಹಾಕುತ್ತಿದ್ದ. ಆದರೆ ಅವು ರಾತ್ರಿಯಲ್ಲಿ ಮಾಯವಾಗುತ್ತಿದ್ದವು. ಒಂದು ರಾತ್ರಿ, ಹನುಮಂತ ಕಾದು ನೋಡಿದಾಗ, ಆ ಕಲ್ಲುಗಳೆಲ್ಲವನ್ನೂ ತನ್ನ ಸೈನ್ಯದ ಸಹಾಯದಿಂದ ಸಮುದ್ರದಿಂದ ಹೊರಗೆಸೆಯುತ್ತಿದ್ದ ‘ಸುವರ್ಣಮತ್ಸ್ಯೆ’ ಎಂಬ ಮೀನುಗಳ ರಾಣಿ ಕಾಣಿಸುತ್ತಾಳೆ. ಅರ್ಧ ಮತ್ಸ್ಯ ಇನ್ನರ್ಧ ಮಾನವ ಶರೀರ ಹೊಂದಿದ್ದ ಅವಳು ರಾವಣನ ಮಗಳು. ಸೇತುವೆ ಪೂರ್ಣವಾಗಲು ಬಿಡಬಾರದೆಂಬ ರಾವಣನ ಅಣತಿಯಂತೆ, ಅವಳು ತನ್ನ ಸೈನ್ಯದ ಸಹಾಯದಿಂದ ಕಲ್ಲುಗಳನ್ನು ಹೊರಗೆಸೆಯುತ್ತಿದ್ದಳು. ರಾಮಚಂದ್ರನ ಮಡದಿ, ಸಾಧ್ವಿ ಸೀತೆಯನ್ನು ಬಲವಂತದಿಂದ ಹೊತ್ತು ತಂದು ರಾವಣ ಅಪರಾಧ ಮಾಡಿದ್ದಾನೆ ಎಂದು ಹನುಮಂತ ಅವಳಿಗೆ ತಿಳಿಹೇಳಿದಾಗ, ತನ್ನ ತಂದೆಯ ಬಗ್ಗೆ ಬೇಸರ ಪಟ್ಟು ‘ಸುವರ್ಣಮತ್ಸ್ಯೆ’ ತನ್ನ ನಿಜರೂಪ ತಳೆಯುತ್ತಾಳೆ. ಹೀಗೆ, ತನಗೆ ಒಳ್ಳೆಯ ದಾರಿ ತೋರಿಸಿದ, ಮಾರುತಿಯ ಮೇಲೆ ಮೋಹ ಗೊಂಡು ಅವನನ್ನು ವರಿಸುತ್ತಾಳೆ. ಅಲ್ಲಿಯೇ ಶುರುವಾದ ಅವರ ಸಂಸಾರದಿಂದ ಹುಟ್ಟಿದ ಮಗ ‘ಮಚ್ಚಾನು’. ಮಗ ಹುಟ್ಟಿದ ಕೂಡಲೇ, ‘ಸುವರ್ಣಮತ್ಸ್ಯೆ,’ ತಂದೆಯ ಭಯದಿಂದ ಮಗುವನ್ನು ಸಮುದ್ರದಡದಲ್ಲಿಯೇ ಬಿಟ್ಟು ಲಂಕೆಗೆ ಹೊರಟು ಬಿಡುತ್ತಾಳೆ. ಮುಂದೆ ಆ ಮಗುವನ್ನು, ಪಾತಾಳಾಧಿಪತಿ, ಮಯ್ಯರಾಭ ತೆಗೆದುಕೊಂಡು ಹೋಗಿ ಸಾಕಿದ ಕಥೆ ಬರುತ್ತದೆ. ಮುಂದಿನ ಕಥೆಯಲ್ಲಿ, ತಂದೆಯೆಂದು ತಿಳಿಯದೆ ಮಗ ‘ಮಚ್ಚಾನು’ ಹನುಮಂತ ನೊಂದಿಗೆ ಯುದ್ಧಕ್ಕೆ ನಿಲ್ಲುವ ಪ್ರಸಂಗವಿದೆ. ನಂತರ ಅವರಿಬ್ಬರ ಸಂಭಾಷಣೆಯಲ್ಲಿ, ತನ್ನ ತಂದೆಯೇ ಇವನೆಂದು ತಿಳಿದ ಮೇಲೆ ಮಯ್ಯರಾಭನ ವಧೆಗೆ ಅವನು ಪರ್ಯಾಯವಾಗಿ ಸಹಾಯ ಮಾಡಿದ ಎಂದು ಕಥೆ ಮುಂದುವರೆಯುತ್ತದೆ.

ವಿಭೀಷಣನ ರಾಜ್ಯಭಾರದಲ್ಲಿ ಬಂದ ವಿಪತ್ತುಗಳು

ರಾವಣ ಯುದ್ಧದಲ್ಲಿ ಮಡಿದು, ವಿಭೀಷಣ ರಾಜನಾದ ನಂತರವೂ ರಾಮ್ ಕೀನ್‌ನಲ್ಲಿ, ಲಂಕಾನಗರಿಯ ಕಥೆ ಮುಂದುವರಿಯುತ್ತದೆ. ರಾಮ-ರಾವಣರ ಯುದ್ಧದ ಸಮಾಚಾರವೇ ತಿಳಿಯದ, ರಾವಣನ ಪ್ರಿಯ ಮಿತ್ರ ಚಕ್ರವಾಲ ದೇಶದ ಅಧಿಪತಿ ಮಹೀಪಾಲ ಅವನನ್ನು ಕಾಣಲು ಲಂಕೆಗೆ ಬರುತ್ತಾನೆ. ಅಲ್ಲಿ ತನ್ನ ಮಿತ್ರನಿಗೆ ಒದಗಿದ ದುರಂತ ತಿಳಿದು, ಎಲ್ಲದಕ್ಕೂ ವಿಭೀಷಣನೇ ಕಾರಣನೆಂದು ಅವನ ಮೇಲೆ ಯುದ್ಧ ಹೂಡತ್ತಾನೆ. ಈ ವಿಪತ್ತಿನ ನಿವಾರಣೆಗೆ, ವಿಭೀಷಣ ರಾಮನಿಗೆ ಒಂದು ಪತ್ರ ಬರೆದು ಅದನ್ನು ಬಾಣದೊಂದಿಗೆ ಕಳುಹಿಸುತ್ತಾನೆ. ರಾಮ, ಹನುಮಂತನನ್ನು ವಿಭೀಷಣನ ಸಹಾಯಕ್ಕೆ ಕಳುಹಿಸುತ್ತಾನೆ. ಹೀಗೆ, ಹನುಮಂತನಿಂದ ಮತ್ತೆ ಲಂಕೆಗೆ ಸಹಾಯ ಒದಗುತ್ತದೆ. ಲಂಕೆಯ ಮುಂದುವರಿದ ಕಥೆಯಾಗಿ, ರಾವಣನ ಅಂತ್ಯವಾದ ಮೇಲೆ, ಮಂಡೋದರಿಗೆ ಒಬ್ಬ ಮಗ ಹುಟ್ಟುತ್ತಾನೆ. ಅವನ ಹೆಸರು ವೈನಾಸುರವಂಶ. ಅವನು ಪ್ರಾಪ್ತವಯಸ್ಕನಾದಾಗ, ಚಿಕ್ಕಪ್ಪ ವಿಭೀಷಣನನ್ನು ಕೊಲ್ಲಲು, ಮಲೀವದ ಎಂಬ ರಾಜನ ಸಹಾಯ ಕೋರುತ್ತಾನೆ. ಆಗ, ಲಂಕೆಯಲ್ಲಿಯೇ ಬೆಳೆದ ಹನುಮಂತ-ಬೆಂಜಕಾಯಿಯರ ಮಗ ಅಸುರಪಾದ್, ತನ್ನ ತಂದೆಯನ್ನು ಕರೆದುಕೊಂಡು ಬರುತ್ತಾನೆ. ಮತ್ತೆ ಘನ ಘೋರ ಯುದ್ಧವಾಗಿ ವೈನಾಸುರವಂಶ ಸಾಯುತ್ತಾನೆ.

ವಾಲ್ಮೀಕಿ ರಾಮಾಯಣದಲ್ಲಿರುವಂತೆಯೇ ಇಲ್ಲಿಯೂ ಎಲ್ಲಾ ಕ್ಲಿಷ್ಟ ಪರಿಸ್ಥಿತಿಗಳಲ್ಲಿಯೂ ಸಹಾಯಕ್ಕೆ ಒದಗುವವನು ಹನುಮಂತನೇ. ಅಲ್ಲಿಗಿಂತಲೂ ಇಲ್ಲಿ ಹೆಚ್ಚಿನ ಸಂಕಷ್ಟಗಳು ಬರುವುದರಿಂದ. ಎಲ್ಲವನ್ನೂ ನಿವಾರಿಸುವ ಮಾರುತಿಯ ಹಿರಿಮೆ ಇನ್ನೂ ಹೆಚ್ಚಿನದಾಗಿ ತೋರುತ್ತದೆ. ಹನುಮಂತನಷ್ಟೇ ಅಲ್ಲದೆ, ಅವನ ಒಬ್ಬ ಮಗ ರಾಮನ ಗೆಲುವಿಗೆ ಹಾಗೂ ಇನ್ನೊಬ್ಬ ಮಗ, ನಂತರ ವಿಭೀಷಣನ ರಾಜ್ಯಭಾರದಲ್ಲಿ ಲಂಕೆಯ ರಕ್ಷಣೆಗೆ ನೆರವಾಗುತ್ತಾನೆ ಎನ್ನುವುದು ರಾಮ್ ಕೀನ್ ರಾಮಾಯಣದ ವಿಶೇಷ.

ಉತ್ತರ ರಾಮಾಯಣ

ನಮ್ಮ ದೇಶದಲ್ಲಿ ಯಾವ ಆರ್ಷ ಕಾವ್ಯಗಳೂ (ನಾಟಕಗಳೂ ಸೇರಿದಂತೆ) ದುಃಖಾಂತವಾಗಿರುವುದಿಲ್ಲ. ಇದು ಈ ನೆಲದ ವೈಶಿಷ್ಟ್ಯ. ಆದರೆ, ಆದಿಕಾವ್ಯ ರಾಮಾಯಣದಲ್ಲಿ ಮಾತ್ರ, ನಾವು ಹೇಗೆ ಸೀತೆ ಕಂಡ ದುರಂತವನ್ನು ಒಪ್ಪಿಕೊಂಡಿದ್ದೇವೆ? ರಾಮ-ಸೀತೆಯರನ್ನು ಆದರ್ಶದಂಪತಿಗಳನ್ನಾಗಿ ಕಡೆದು ನಿಲ್ಲಿಸಿದ ವಾಲ್ಮೀಕಿ, ರಾವಣನ ಅಂತ್ಯವಾಗಿ, ಸೀತೆ ರಾಮನ ಎದುರು ಬರುವಾಗ ತೋರುವ ಕಾಠಿಣ್ಯದ ನಿಲುವು ಆಶ್ಚರ್ಯವೆನಿಸುತ್ತದೆ. ಅದರಲ್ಲೂ, ರಾಮ ಸೀತೆಯೊಡನೆ ಅಯೋಧ್ಯೆಗೆ ಬಂದು ಪಟ್ಟಾಭಿಷೇಕವಾಗುವಲ್ಲಿಗೆ ಸುಖಾಂತವಾಗಬೇಕಾಗಿದ್ದ ರಾಮಾಯಣ ಉತ್ತರ ರಾಮಾಯಣದಲ್ಲಿ ದುಃಖಾಂತವಾಗಿ ಮುಂದುವರಿದದ್ದು ವಾಲ್ಮೀಕಿಯ ಮೂಲ ಆಶಯವಾಗಿತ್ತೇ ಎಂಬ ಪ್ರಶ್ನೆ ಕಾಡುವುದು.

ವಾಲ್ಮೀಕಿ ಬರೆದದ್ದು ಎಂದು ಹೇಳುವ ಉತ್ತರ ರಾಮಾಯಣದಲ್ಲಿ, ಲವ-ಕುಶರಿಂದ ರಾಮಾಯಣ ಗಾನ ಕೇಳಿದ ರಾಮ ತನ್ನ ಅಶ್ವಮೆಧ ಯಾಗದ ಸಮಯದಲ್ಲಿ ಸೀತೆ ಎಲ್ಲರೆದುರಿಗೆ ಬಂದು ಮತ್ತೆ ತನ್ನ ಪಾವಿತ್ರ್ಯವನ್ನು ಸಿದ್ಧಮಾಡಬೇಕೆಂದು ಹೇಳಿದಾಗ, ಸೀತೆ-‘ಅಮ್ಮಾ ನನಗೆ ನಿನ್ನಲ್ಲಿ ಜಾಗ ಕೊಡು’ ಎಂದು ಕರೆದಾಗ ಭೂಮಿತಾಯಿ ಬಂದು ಅವಳನ್ನು ತನ್ನೊಡನೆ ಕರೆದುಕೊಂಡು ಹೋದಳು ಎನ್ನುವ ರಮ್ಯವಾದ ಕಥೆಯನ್ನು ನೂರಾರು ವರುಷಗಳಿಂದಲೂ ಹೇಳುತ್ತಾ ಬಂದಿದ್ದೇವೆ. ಆದರೆ ಅವಳು ನಿಜವಾಗಿ ಹೋಗಿದ್ದೆಲ್ಲಿಗೆ ಎನ್ನುವ ವಿವರ ಎಲ್ಲಿಯೂ ಕಾಣುವುದಿಲ್ಲ. ಆದರೆ, ಅದು ಥಾಯ್ಲೆಂಡ್‌ನ ರಾಮಾಯಣದಲ್ಲಿ ರೋಚಕವಾದ ತಿರುವನ್ನು ಕಾಣುತ್ತದೆ.

ಇಲ್ಲಿ, ರಾಮ ಸೀತೆಯನ್ನು ತೊರೆಯುವುದಕ್ಕೆ, ಶೂರ್ಪಣಖಿಯ ಮಗಳಾದ ಅತುಲಳು ಕಾರಣಳಾಗುತ್ತಾಳೆ. ಅವಳು ರಾಮ-ಲಕ್ಷ್ಮಣರಿಂದ ತನ್ನ ತಾಯಿಗಾದ ಅವಮಾನಕ್ಕೆ ಸೀತಾ ರಾಮರನ್ನು ಬೇರ್ಪಡಿಸಿ ಸೇಡು ತೀರಿಸಿಕೊಳ್ಳಲು, ಸೀತೆಯ ಬಳಿ ಒಳ್ಳೆಯ ಮಾತನ್ನಾಡಿಕೊಂಡು ಸ್ನೇಹ ತೋರುತ್ತಾಳೆ. ನಂತರ, ಮೋಸದಿಂದ ಸೀತೆಯ ಕೈಯಲ್ಲಿ ರಾವಣನ ಚಿತ್ರವನ್ನು ಬರೆಸಿ ಅದಕ್ಕೆ ಜೀವ ಬರಸಿ, ರಾಮನಿಗೆ ನಿಜಕ್ಕೂ ಸೀತೆಯ ಮೇಲೆ ಸಂಶಯ ಹುಟ್ಟುವಂತೆ ಮಾಡುತ್ತಾಳೆ. ಈ ತರಹದ ಕಥೆಗಳು ಭಾರತದಲ್ಲೇ ರಚಿತವಾದ ಹಲವಾರು ಜೈನ ರಾಮಾಯಣ ಹಾಗೂ ಜಾನಪದ ರಾಮಾಯಣಗಳಲ್ಲಿಯೂ ಕಂಡುಬರುತ್ತದೆ. ಒಟ್ಟಿನಲ್ಲಿ, ರಾಮನಿಗೆ ಸೀತೆ ರಾವಣನಲ್ಲಿ ಅನುರಕ್ತಳಾಗಿದ್ದಳು ಎನ್ನುವಂತಹ ಬಲವಾದ ಸಂಶಯ ಬಂದು, ಅವಳನ್ನು ಕೊಲ್ಲುವಂತೆ ಲಕ್ಷ್ಮಣನಿಗೆ ಆದೇಶ ನೀಡುತ್ತಾನೆ. ಆದರೆ, ಲಕ್ಷ್ಮಣನಿಗೆ ಹಾಗೆ ಮಾಡಲಾಗದೆ ಅವಳನ್ನು ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ. ನಂತರ, ಅವಳು ವಾಲ್ಮೀಕಿ ಆಶ್ರಮ ಸೇರಿ, ಅಲ್ಲಿ ಲವ-ಕುಶರ ಜನನ, ಅವರು ಬೆಳೆದು ರಾಮನಷ್ಟೇ ಪರಾಕ್ರಮಿಗಳಾಗಿ ಅವನನ್ನು ಯುದ್ಧದಲ್ಲಿ ಎದುರಿಸುವುದು ಮುಂತಾದ ವಿವರಗಳು ಹಲವಾರು ರಂಜನೀಯ ಮಾರ್ಪಾಡುಗಳೊಂದಿಗೆ ಇಲ್ಲಿಯೂ ಕಾಣುತ್ತದೆ. ಕೊನೆಗೆ, ಅವರು ತನ್ನ ಮಕ್ಕಳೆಂದು ತಿಳಿದು ರಾಮ, ಸೀತೆಯ ಬಳಿ ಬಂದು ಪರಿ ಪರಿಯಾಗಿ ಬೇಡಿಕೊಂಡರೂ ಅವನೊಂದಿಗೆ ಅಯೋಧ್ಯೆಗೂ ಹೋಗದೆ, ಸೀತೆ ಆಶ್ರಮದಲ್ಲಿಯೇ ಉಳಿಯುತ್ತಾಳೆ. ಮಕ್ಕಳು ರಾಮನೊಂದಿಗೆ ಹೋಗುತ್ತಾರೆ. ಮೋಸದಿಂದಲಾದರೂ, ಸೀತೆಯನ್ನು ಮರಳಿ ತನ್ನ ಬಳಿ ಕರೆತರಬೇಕೆಂದು ರಾಮ ಮಾಡಿದ ಪ್ರಯತ್ನದಿಂದ ಕೋಪಗೊಂಡ ಸೀತೆ, ಭೂಮಿತಾಯಿಯನ್ನು ಕರೆದು, ಪಾತಾಳ ಪ್ರದೇಶದ ರಾಜಧಾನಿಗೆ ಹೊರಟುಹೋಗುತ್ತಾಳೆ. ರಾಮ ತೀವ್ರ ಶೋಕದಿಂದ ಪ್ರಜ್ಞಾಹೀನನಾಗುತ್ತಾನೆ.

ಸೀತೆಯ ವಿಯೋಗದಿಂದ ರಾಮನು ಪಡುತ್ತಿರುವ ಶೋಕವನ್ನು ನಿವಾರಿಸಲು, ದೇವಲೋಕದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ ನಡೆಯುತ್ತದೆ. ಸ್ವಯಂ ಶಂಕರನೇ ಸೀತೆಯಿದ್ದ ಪಾತಾಳಕ್ಕೆ ರಾಮನೊಡನೆ ಹೋಗಿ, ರಾಮನಿಂದ ಕ್ಷಮಾಯಾಚನೆ ಮಾಡಿಸುವನು. ಸೀತೆ ಸಂಕರನ ಮಾತಿಗೆ ಒಪ್ಪಿ ರಾಮನೊಂದಿಗೆ ಅಯೋಧ್ಯೆಗೆ ಮರಳಿ ಬರುತ್ತಾಳೆ. ನಂತರ ಸೀತಾರಾಮರು ಬಹುಕಾಲ ಒಟ್ಟಿಗೆ ಸುಖವಾಗಿ ಇರುವರು ಎಂದು, ಥಾಯ್ಲೆಂಡ್ ಜನರ ಆಶಯದಂತೆ, ಅಲ್ಲಿನ ರಾಮಾಯಣ ಸುಖಾಂತವಾಗುವುದು. ನಮ್ಮ ದೇಶದಲ್ಲಿಯೂ, ಸೀತಾದೇವಿ ರಾಮನೊಂದಿಗೆ ಮರಳಿ ಅಯೋಧ್ಯೆಗೆ ಹೋಗಬೇಕೆಂಬ ಆಶಯವನ್ನು ಹಲವಾರು ಕವಿಗಳು ತಮ್ಮ ಕೃತಿಯಲ್ಲಿ ತೋರಿದ್ದಾರೆ. ‘ಉತ್ತರ ರಾಮಚರಿತಂ’ ಎಂಬ ನಾಟಕವನ್ನು ಬರೆದಿರುವ ಪ್ರಸಿದ್ಧ ಕವಿ ಭವಭೂತಿ ಹಾಗೂ ಕನ್ನಡದ ಲಕ್ಷ್ಮೀಶರೂ ಸೀತೆಯನ್ನು ರಾಮನೊಂದಿಗೆ ಅಯೋಧ್ಯೆಗೆ ಮರಳಿ ಹೋಗುವಂತೆ ಚಿತ್ರಿಸಿದ್ದಾರೆ.

ಲಂಕೆಯಲ್ಲಿ ನಡೆದ ಸೀತೆಯ ಅಗ್ನಿಪರೀಕ್ಷೆಯನ್ನು ಎಲ್ಲಾ ರಾಮಾಯಣಗಳೂ ಹೇಳುತ್ತವೆ. ಅದು ಅದನ್ನು ಕಣ್ಣಾರೆ ಕಂಡ ಹನುಮಂತ ಮುಂತಾದವರಿಂದ ನೇರವಾಗಿ ಎಲ್ಲಾ ವೃತ್ತಾಂತವನ್ನೂ ತಿಳಿದ, ಅಂದಿನ ರಾಮರಾಜ್ಯದ ಪ್ರಜೆಗಳು ಸೀತೆಯ ಪಾವಿತ್ರ್ಯವನ್ನು ಶಂಕಿಸಿರುವ ಸಾಧ್ಯತೆ ಕಾಣಿಸುವುದಿಲ್ಲ. ಆದರೆ, ಮತ್ಯಾವುದೋ ಮುಂದಿನ ಕಾಲಘಟ್ಟದಲ್ಲಿ, ಜನರಿಗೆ ಸೀತೆಯ ಪಾವಿತ್ರ್ಯ ಮತ್ತೆ ಪ್ರಶ್ನೆಯಾಗಿ, ಆ ಸಂಗತಿ ಅಲ್ಲಿಗೇ ಕೊನೆಯಾಗುವುದು ಬೇಕಿಲ್ಲದೆ, ಉತ್ತರ ರಾಮಾಯಣದ ಸೃಷ್ಟಿ ಆಗಿರಬೇಕು ಅನಿಸುತ್ತದೆ.

ಕಾಂಬೋಡಿಯಾ ದೇಶದ ರಾಮ್ ಕೇರ್ ರಾಮಾಯಣ

ಕಾಂಬೋಡಿಯಾ ದೇಶದ ಹಿಂದಿನ ಹೆಸರು ಕಾಂಬೋಜ. ಸುಮಾರು ಕ್ರಿ.ಶ. ೨ನೇ ಶತಮಾನದಲ್ಲಿ ದಕ್ಷಿಣ ಭಾರತದಿಂದ ಅಲ್ಲಿಗೆ ಹೋದ ಕೌಂಡಿನ್ಯ ಗೋತ್ರದ ಬ್ರಾಹ್ಮಣ ಯುವಕ ಅಲ್ಲಿನ ನಾಗವಂಶದ ರಾಜನ ಮಗಳನ್ನು ಮದುವೆಯಾಗಿ ಕೌಂಡಿನ್ಯ ರಾಜ್ಯಭಾರಕ್ಕೆ ನಾಂದಿ ಹಾಡಿದ ಚರಿತ್ರೆ ಅಲ್ಲಿದೆ. ಈ ರಾಜವಂಶದವರು ಬಹುಕಾಲ ಆ ಪ್ರದೇಶವನ್ನು ಆಳಿದ್ದು ಹಾಗೂ ಸಿಯಾಮ್ (ಥಾಯ್ ಲ್ಯಾಂಡ್)ನಲ್ಲಿದ್ದ ‘ದ್ವಾರಾಮತಿ’ ರಾಜರನ್ನು ಸೋಲಿಸಿ, ಸುಮಾರು ೧೦ನೇ ಶತಮಾನದಿಂದ ಕೌಂಡಿನ್ಯ ರಾಜರು ಆ ಪ್ರದೇಶವನ್ನು ಆಳಿದ್ದು ಅಲ್ಲಿನ ದಾಖಲೆಗಳಲ್ಲಿ ಕಂಡುಬರುತ್ತದೆ. ಕಾಂಬೋಡಿಯಾದ ಸುತ್ತ ಮುತ್ತಲ ಪ್ರದೇಶಗಳಲ್ಲಿ, ಹಿಂದೂ ಧರ್ಮಕ್ಕೆ ಸೇರಿದ್ದ ರಾಜರು ೧೪ನೇ ಶತಮಾನದವರೆಗೂ ರಾಜ್ಯವಾಳಿದ ಚರಿತ್ರೆ ಕಾಣುತ್ತದೆ.

ರಾಮಾಯಣ-ಮಹಾಭಾರತಗಳ ದಟ್ಟ ಪ್ರಭಾವ ಇಲ್ಲಿನ ದೇವಾಲಯಗಳಲ್ಲಿ, ಶಿಲಾಶಾಸನಗಳಲ್ಲಿ ಹಾಗೂ ಧಾರ್ಮಿಕ ನಂಬಿಕೆಗಳಲ್ಲಿ ಕಾಣುತ್ತದೆ. ಖ್ಮೇರ್ ಭಾಷೆಯಲ್ಲಿ ಪ್ರಖ್ಯಾತವಾಗಿರುವ ಇವರ ರಾಮಾಯಣದ ಹೆಸರು ‘ರಾಮ್ ಕೇರ್’. ಇದರಲ್ಲಿ, ವೈಕುಂಠದ ಅಧಿದೈವ ವಿಷ್ಣು ರಾಮನಾಗಿ ಅವತರಿಸಿದ ಎನ್ನುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿದೆ. ವಿಷ್ಣುವಿನ ದ್ವಾರಪಾಲಕ ಆಕೇಂಗಮೇಸೊ, ರಾವಣನಾಗಿ ಹುಟ್ಟುತ್ತಾನೆ. ಇಲ್ಲಿ, ಸೀತೆ ಇಂದ್ರನ ಹೆಂಡತಿ ಎನ್ನುವ ಸಂಗತಿ ಮೇಲುನೋಟಕ್ಕೆ ಆಶ್ಚರ್ಯ ತರಿಸಿದರೂ, ನಮ್ಮ ಪುರಾಣ ಕಥೆಯಲ್ಲಿ, ವಿಷ್ಣು ಉಪೇಂದ್ರನೆಂದೂ ಪ್ರಖ್ಯಾತನಾಗಿರುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಆಗ, ವಿಷ್ಣುಪತ್ನಿಯೇ ಸೀತೆಯಾಗಿ ಬಂದಳು ಎನ್ನುವುದು ಯಾವುದೇ ಸಂದಿಗ್ಧಕ್ಕೆ ಒಳಗಾಗುವುದಿಲ್ಲ. ಇಲ್ಲಿನ ವಿಶೇಷ ಎಂದರೆ, ಸೀತೆ ದುಷ್ಟ ಶಿಕ್ಷಣಕ್ಕಾಗಿ, ರಾವಣನ ಮಗಳಾಗಿ ಹುಟ್ಟುತ್ತಾಳೆ. ರಾವಣ, ಜ್ಯೋತಿಷಿ ವಿಭೀಷಣನ ಮಾತಿನಂತೆ ಮಗುವನ್ನು ಪೆಟ್ಟಿಗೆಯಲ್ಲಿಟ್ಟು ದೂರ ಪ್ರದೇಶದಲ್ಲಿ ನೆಲದಲ್ಲಿ ಹೂಳಿಸುತ್ತಾನೆ. ನಂತರ ಅದು ಜನಕನಿಗೆ ಸಿಗುವುದು ಹಾಗೂ ಲವ-ಕುಶರ ಜನನದ ಸಂಗತಿಗಳು ಕೆಲವು ಬೌದ್ಧ-ಜೈನ ರಾಮಾಯಣಗಳ ಜಾಡಿನಲ್ಲಿ ಸಾಗುತ್ತದೆ. ಈ ರಾಮಾಯಣದಲ್ಲಿ ಕಾಣುವ ಅತ್ಯಂತ ಪ್ರಮುಖ ಸಂಗತಿ ಎಂದರೆ, ಹನುಮಂತನ ಜನನ. ಅವನು ಸ್ವಾಹಾಳಲ್ಲಿ ನಾರಾಯಣನಿಂದ ಜನ್ಮ ತಾಳುತ್ತಾನೆ. ಸಾಮಾನ್ಯವಾಗಿ ಎಲ್ಲಾ ರಾಮಾ ಯಣಗಳಲ್ಲಿ ಹನುಮಂತನಿಗೂ ಪರಶಿವನಿಗೂ ಕಾಣುವ ನಂಟು ಇಲ್ಲಿ ಸಂಪೂರ್ಣವಾಗಿ ಇಲ್ಲವಾಗಿದೆ. ಮಿಕ್ಕೆಲ್ಲಾ ಪ್ರಮುಖ ಸಂಗತಿಗಳು ವಾಲ್ಮೀಕಿ ರಾಮಾಯಣದಂತೆಯೇ ಕಾಣುತ್ತವೆ.

ರಾಮನ ಆದರ್ಶಗಳಿಂದ ಪ್ರಭಾವಿತರಾಗಿದ್ದವರು ರಾಜರು, ರಾಮಾಯಣದ ಅನೇಕ ಪ್ರಮುಖ ಘಟನೆಗಳನ್ನು ತಮ್ಮ ಎಲ್ಲಾ ಮುಖ್ಯ ದೇವಾಲಯಗಳ ಭಿತ್ತಿಗಳಲ್ಲಿ ಕೆತ್ತಿಸಿದ್ದಾರೆ. ರಾಮನ ಮೂಲ ಸ್ವರೂಪ ವಿಷ್ಣುವಿನ ದೇವಾಲಯ, ಅಂಕೋರ್ ವಾಟ್, ವಿಶ್ವದ ಅತ್ಯಂತ ದೊಡ್ಡ ದೇವಾಲಯ. ಸುಮಾರು ೨೦೦ ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಎಪ್ಪತ್ತಕ್ಕೂ ಹೆಚ್ಚು ದೊಡ್ಡ ದೇವಾಲಯಗಳು ಹಾಗೂ ಅಸಂಖ್ಯಾತ ಚಿಕ್ಕ ಸ್ಮಾರಕಗಳನ್ನು ಹೊಂದಿರುವ ಅಂಕೋರ್ ಎಂಬ ಬೃಹತ್ ನಗರ ಸಮುಚ್ಚಯದಲ್ಲಿ ಕ್ರಿ.ಶ.೯ನೇ ಶತಮಾನದಿಂದ ೧೩ನೇ ಶತಮಾನದ ಅವಧಿಯಲ್ಲಿ ನಿರ್ಮಾಣವಾಗಿರುವ ಹಿಂದೂ ದೇವಾಲಯಗಳಿವೆ. ಅದ್ಭುತ ಶಿಲ್ಪಕಲಾ ಕೌಶಲವನ್ನು ಮೆರೆದಿರುವ ಇಲ್ಲಿನ ದೇವಾಲಯಗಳ ಅಳಿದುಳಿದಿರುವ ಸ್ಮಾರಕಗಳೇ ಇದನ್ನು ಈ ವಿಶ್ವದ ಅತ್ಯಂತ ದೊಡ್ಡ ಚಾರಿತ್ರಿಕ ಸ್ಮಾರಕವಾಗಿಸಿದೆ. ವಿಶ್ವಸಂಸ್ಥೆ ಇದನ್ನು ಸಂರಕ್ಷಿತ ವಿಶ್ವ ಸ್ಮಾರಕಗಳಲ್ಲಿ ಸೇರಿಸಿದೆ.

ಪ್ರಪಂಚದ ಅತ್ಯಂತ ದೊಡ್ಡ ವಿಷ್ಣು ದೇವಾಲಯ ಅಂಕೊರ್ ವಾಟ್

ಇದು ಇತ್ತೀಚೆಗೆ, ಪ್ರಪಂಚದ ಮಹಾ ಅಧ್ಬುತಗಳ ಪಟ್ಟಿಯಲ್ಲಿ ಸೇರಲು ತಾಜ್ ಮಹಲಿನೊಂದಿಗೆ ಅಂಕೊರ್ ವಾಟ್ ಕೂಡ ಕಾದಿತ್ತು!

‘ಅಂಕೊರ್’ ಪದದ ಮೂಲ ಸಂಸ್ಕೃತದ ‘ನಗರ’. ಇದು ದೇವನಗರವೆಂದೂ ತಾವು ದೇವೇಂದ್ರನ ಪ್ರತಿನಿಧಿಗಳೆಂದೂ ಅಲ್ಲಿನ ರಾಜರು ತಿಳಿದಿದ್ದರು ಎಂದು ಅಲ್ಲಿನ ದಾಖಲೆಗಳು ಹೇಳುತ್ತವೆ. ಅಲ್ಲಿನ ನೂರಾರು ಭಗ್ನ ದೇವಾಲಯಗಳ ಮಧ್ಯೆ. ಅಂಕುರ ವಾಟ್-ವಿಷ್ಣು ದೇವಾಲಯ ಹೆಚ್ಚಿನ ಸುಸ್ಥಿತಿಯಲ್ಲಿರುವುದು ಸಂತಸ ತಂದರೂ ಪೂಜೆಗೊಳ್ಳುವ ಮೂಲವಿಗ್ರಹವೇ ಕಾಣೆಯಾಗಿರುವುದು ಕಂಡು ಮನಸ್ಸು ಮುದುಡುತ್ತದೆ. ೧೪೭೦x೧೩೦೦ ಮೀಟರ್ ವಿಸ್ತೀರ್ಣದ ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ನೆಲೆಯಾದ ಈ ದೇವಾಲಯವನ್ನು ಖ್ಮೇರ್ ವಂಶದ ರಾಜ, ೨ನೇ ಸೂರ್ಯವರ್ಮ ಕಟ್ಟಿದ್ದು ೧೨ನೇ ಶತಮಾನದಲ್ಲಿ. ಇದರ ಸುತ್ತಲೂ ಹರಿಯುತ್ತಿರುವ ೨೦೦ ಮೀಟರ ಉದ್ದದ ಕಾಲುವೆ ಈಗಲೂ ತುಂಬಿ ಹರಿಯುತ್ತಿದೆ.

ಈ ದೇವಾಲಯವನ್ನು ಕಟ್ಟಲು ೫೦ ಸಾವಿರ ಶಿಲ್ಪಿಗಳು, ಕೆಲಸಗಾರರು ೩೭ವರ್ಷಗಳು ಶ್ರಮಿಸಿದ್ದಾರೆ ಎಂದು ಇಲ್ಲಿನ ಶಿಲಾಶಾಸನ ಹೇಳುತ್ತಿದೆ. ಹೊರಗಿನ ದೊಡ್ಡ ಪ್ರಾಕಾರದ ಒಳಗೆ, ಮೂರು ಸ್ತರಗಳಲ್ಲಿ ಕಟ್ಟಿರುವ ಪ್ರಾಂಗಣಗಳಿದ್ದು ಅದರ ಮಧ್ಯೆ ೬೫ಮೀಟರ್ ಎತ್ತರದಲ್ಲಿರುವ ಗರ್ಭಗುಡಿಯ ಗೋಪುರದ ಸುತ್ತಲೂ ಮತ್ತೂ ನಾಲ್ಕು ಗೋಪುರಗಳು ಕಾಣುತ್ತವೆ. ಈ ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ಬರುವ ದೊಡ್ಡ ಪ್ರಾಂಗಣದ ಗೋಡೆಗಳಲ್ಲಿ ಹಾಗೂ ಸ್ತಂಭಗಳಲ್ಲಿ ಅನೇಕ ಕೆತ್ತನೆಗಳಿವೆ. ರಾಜರ ಆಸ್ಥಾನಗಳ ವೈಭವ, ಯುದ್ಧಗಳು, ದೇವತೆಗಳು, ಅಪ್ಸರೆಯರ ಕೆತ್ತನೆಗಳು ಇಲ್ಲಿ ಕಣ್ಮನ ಸೆಳೆಯುತ್ತವೆ. ಈ ಗೋಡೆಗಳಲ್ಲಿ ಒಂದು ಅಂಗುಲವನ್ನೂ ಬಿಡದೆ ತಮ್ಮ ಅದ್ಭುತ ಕೌಶಲವನ್ನು ಮೆರೆದಿರುವ ಇಲ್ಲಿನ ಶಿಲ್ಪಿಗಳಿಗೆ ಶಿರ ಬಾಗುತ್ತದೆ. ಇಲ್ಲಿ ಕಾಣುವ ಸುಮಾರು ೨೦೦೦ ಅಪ್ಸರೆಯರ ಕೆತ್ತನೆಗಳ ಸೊಬಗಂತೂ ಮನ ಸೂರೆಗೊಳ್ಳುತ್ತದೆ. ಅವರ ಅಲಂಕಾರಗಳ, ಭಾವ-ಭಂಗಿಗಳ ವೈವಿಧ್ಯಗಳಂತೆಯೇ ಕಿರೀಟಗಳು ಆ ಅಪ್ಸರೆಯರ ಅತಿಮಾನುಷ ಮೂಲವನ್ನು ನಮಗೆ ತಿಳಿಸುತ್ತಿವೆಯೇನೋ ಅನಿಸುತ್ತವೆ.

ಹೊರಗಿನ ಪ್ರಾಂಗಣಗಳಲ್ಲಿ ಹಾಗೂ ಮಂಟಪಗಳಲ್ಲಿ, ರಾಮಾಯಣ-ಮಹಾಭಾರತ ಕಥಾನಕಗಳ ಕೆತ್ತನೆಗಳು ಹಾಗೂ ಶಿಲಾ ಶಾಸನಗಳು ಆಕರ್ಷಿಸುತ್ತವೆ. ಇಲ್ಲಿನ ಅಮೃತ ಮಂಥನದ ಕೆತ್ತನೆಯಲ್ಲಿ, ದೇವತೆಗಳ ಕಡೆ ಹನುಮಂತ ಹಾಗೂ ದಾನವರ ಕಡೆ ರಾವಣ ಇರುವುದು ವಿಶೇಷ. ಅಷ್ಟೇ ಅಲ್ಲದೆ, ಇದರೊಂದಿಗೆ, ವಿಷ್ಣು, ಶಿವ, ಬ್ರಹ್ಮ, ಲಕ್ಷ್ಮಿಯರೂ ಇರುವುದು ಇನ್ನೆಲ್ಲೂ ಕಾಣದಂತಹ ನೋಟ. ಇಲ್ಲಿ ರಾವಣನ ಹತ್ತು ತಲೆಗಳನ್ನು ನಮ್ಮ ದೇಶದಲ್ಲಿ ಕಾಣುವುದಕ್ಕಿಂತ ಭಿನ್ನವಾಗಿ ಪಿರಮಿಡ್‌ನಂತೆ ಜೋಡಿಸಿದ್ದಾರೆ. ಪಾರಂಪರಿಕ ವಿನ್ಯಾಸವಷ್ಟೇ ಅಲ್ಲದೆ, ಈ ದೇವಾಲಯ ವಿಶ್ವಸೃಷ್ಟಿಯ ಮಾಹಿತಿಯನ್ನು ಸಾಂಕೇತಿಕವಾಗಿ ಹೇಳುತ್ತಿದೆ ಎನ್ನುತ್ತಾರೆ. ಇಲ್ಲಿ ಹರಿಯುತ್ತಿರುವ ಕಾಲುವೆ ಸಮದ್ರವನ್ನೂ, ದೇವಾಲಯ ಮೇರು ಪರ್ವತವನ್ನೂ, ಮುಖ್ಯ ಗರ್ಭಗುಡಿಗೆ ಕರೆದೊಯ್ಯುವ ಪ್ರಾಂಗಣಗಳು ವಿವಿಧ ಖಂಡಗಳನ್ನೂ ಸೂಚಿಸುತ್ತವೆ. ಮೇಲೆ ಮೇಲೆ ಹತ್ತಿ ಹೋಗುವಂತೆ ನಿರ್ಮಿಸಿರುವುದರಿಂದಾಗಿ, ಇದು ಮಾನವರ ಆಧ್ಯಾತ್ಮಿಕ ಪಥದ ಮುನ್ನಡೆಯನ್ನು ಸಂಕೇತಿಸುತ್ತದೆ. ಲಂಕೆಯಲ್ಲಿ ನಡೆದ ಯುದ್ಧ ಇಲ್ಲಿ ವಿವರವಾಗಿ ಕೆತ್ತನೆಯಾಗಿದೆ. ಇಪ್ಪತ್ತು ಕೈಗಳ ರಾವಣ ಸಿಂಹಗಳು ನಡೆಸುತ್ತಿರುವ ರಥದಲ್ಲಿದ್ದರೆ, ರಾಮ ಹನುಮಂತನ ಭುಜದ ಮೇಲೆ ಕುಳಿತು ಯುದ್ಧ ಮಾಡುತ್ತಿರುವುದು ಕಾಣುತ್ತದೆ. ನೀಲ-ಪ್ರಹಸ್ತ, ವಾಲಿಯ ಮಗ ಅಂಗದ-ಮನೋಹದರ ಹನುಮಂತ-ನಿಕುಂಭ, ಸುಗ್ರೀವ-ಕುಂಭ ಮುಂತಾದ ಎಲ್ಲಾ ಪ್ರಮುಖ ವಾನರ-ದಾನವರ ನಡುವಿನ ಯುದ್ಧದ ವಿವರ ಇಲ್ಲಿದೆ. ರಾಮ ಶಿವಧನುಸ್ಸನ್ನು ಮುರಿಯುವ ಬದಲು, ಮಹಾ ಭಾರತದಲ್ಲಿ ಅರ್ಜುನ ಮಾಡಿದಂತೆ, ಬಿಲ್ಲನ್ನು ಹೆದೆಯೇರಿಸಿ ಮೇಲಿನ ಲಕ್ಷದತ್ತ ಗುರಿ ಯಿಟ್ಟಿರುವ ಚಿತ್ರಣದೊಂದಿಗೆ, ಸೀತೆಯೂ ನಿಂತು ನೋಡುತ್ತಿರುವುದು ಇಲ್ಲಿ ಸೀತಾ ಸ್ವಯಂವರದ ಶಿಲ್ಪದಲ್ಲಿ ಕಾಣುತ್ತದೆ.

‘ಸ್ನೇಕ್ ಪೇನ್’-‘ನಾಗಬಂಧ’ ಶಿಲ್ಪ. ಅಂಕೋರಿನ ಬೇರೆಲ್ಲಾ ಸ್ಮಾರಕಗಳಿಗಿಂತಲೂ ಭಿನ್ನವಾಗಿದೆ. ಮಾನವ ನಿರ್ಮಿತ ಎಂಟು ಜಲಾಶಯಗಳಿಂದ ಸುತ್ತುವರೆದಿರುವ ಈ ಕೃತಕ ದ್ವೀಪದಲ್ಲಿ ಒಂದು ಪರ್ವತ-ಶಿಲ್ಪದ ತಳಭಾಗವನ್ನು ಬಳಸಿರುವ ಎರಡು ದೊಡ್ಡ ಹಾವುಗಳು ಕಾಣಿಸುವುದರಿಂದ ಇದನ್ನು ‘ನೇಕ್ ಪೇನ್’-‘ನಾಗಬಂಧ’ ಎನ್ನುತ್ತಾರೆ. ಈ ಕೆರೆಗಳು ೭ನೇ ಜಯವರ್ಮನಿಂದ ನಿರ್ಮಿತವಾದ ಅತ್ಯಂತ ದೊಡ್ಡ ಜಲಾಶಯ. ಈಗ ಇಲ್ಲಿನ ಬಹಳಷ್ಟು ಭಾಗದಲ್ಲಿ ಭತ್ತದ ಗದ್ದೆಗಳು ಇವೆ. ಈ ಜಲಾಶಯಗಳು ಸುಸ್ಥಿತಿಯಲ್ಲಿದ್ದ ಕಾಲದಲ್ಲಿ, ಇಲ್ಲಿನ ರೈತರು ವರ್ಷಕ್ಕೆ ಎರಡು ಮೂರು ಬೆಳೆ ತೆಗೆದು, ದೇಶದೆಲ್ಲೆಡೆ ಸುಖ ಸಮೃದ್ದಿ ನೆಲೆಸಿದ್ದನ್ನು ಇಲ್ಲಿಗೆ ಬಂದಿದ್ದ ಚೀನಾ ದೇಶದ ಪ್ರವಾಸಿಗಳು ದಾಖಲಿಸಿದ್ದಾರೆ. ಅವರು ಇಲ್ಲಿ ಅಂದು ಒಂದು ಮಿಲಿಯನ್ ಮೀರಿದ ಜನಸಂಖ್ಯೆ ಇತ್ತು ಎನ್ನುತ್ತಾರೆ. ಇಲ್ಲಿ ೧೨೦೦ ಸಂಸ್ಕೃತ ಶಿಲಾ ಶಾಸನಗಳು ದೊರಕಿವೆ. ಪ್ರಾಚೀನ ಗ್ರಂಥ ಲಿಪಿಯಲ್ಲಿಯೂ ಶಾಸನಗಳು ದೊರಕಿವೆ. ಪರಶಿವನ ದೇವಾಲಯಗಳೂ ಅಂಕೋರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತವೆ. ರಾವಣ ಕೈಲಸ ಪರ್ವತವನ್ನು ತನ್ನ ಕೈಯಿಂದ ಎತ್ತಲು ಹೋದಾಗ, ಅಲ್ಲಿದ್ದ ಪರಶಿವ ತನ್ನ ಕಾಲಿನಿಂದ ಪರ್ವತವನ್ನು ಒತ್ತಿ ಹಿಡಿದಾಗ ರಾವಣನ ಕೈ ಅಲ್ಲಿ ಸಿಕ್ಕಿಹಾಕಿಕೊಂಡು ಅವನ ಅಹಂಕಾರ ತಗ್ಗಿತು ಎನ್ನುವ ನಮ್ಮ ಪುರಾಣ ಕಥೆ ಅಲ್ಲಿ ಆಕರ್ಷಕವಾಗಿ ಕೆತ್ತನೆಯಾಗಿದೆ. ರಾವಣ ಪರ್ವತವನ್ನು ಅಲುಗಿಸಿದಾಗ, ಹೆದರಿ ಪಾರ್ವತಿ ಶಿವನನ್ನು ಅಪ್ಪಿ ಹಿಡಿದಿರುವುದು ಹಾಗೂ ಪರ್ವತದಲ್ಲಿರುವ ಪ್ರಾಣಿ ಪಕ್ಷಿಗಳ ಬೆದರು ನೋಟಗಳು ಕಣ್ಸೆಳೆಯುತ್ತದೆ. ಒಮ್ಮೆ, ಕೈಲಾಸ ಪರ್ವತಕ್ಕೆ ಹಾನಿಯಾದಾಗ, ರಾವಣನನ್ನು ಸರಿಪಡಿಸಲು ಕರೆಯುವ ಕಥೆಯನ್ನೂ ಅಲ್ಲಿ ಹೇಳುತ್ತಾರೆ. ಹೀಗೆ, ಅಲ್ಲಿಗೆ ಹೋದ ರಾವಣ ಇಡೀ ಪರ್ವತವನ್ನು ಎತ್ತಿಹಿಡಿದು ಮತ್ತೆ ಅದನ್ನು ಯಥಾಸ್ಥಿತಿಯಲ್ಲಿ ಇಟ್ಟ ಶಿಲ್ಪವೂ ಅಂಕೋರಿನ ದೇವಾಲಯದಲ್ಲಿ ಕಾಣುತ್ತದೆ.

ಕಾಂಬೋಡಿಯಾ ಹಾಗೂ ಇಂಡಿಯಾ ದೇಶಗಳ ನಡುವಿನ ಧಾರ್ಮಿಕ ಬಾಂಧವ್ಯದ ದ್ಯೋತಕವಾಗಿ ಅಂಕೋರ್ ವಾಟಿನಲ್ಲಿ ನಿಂತಿರುವ ಈ ಭವ್ಯ ಶಿಲಾ ಸ್ಮಾರಕಗಳನ್ನು ಕಂಡಾಗ, ಇದನ್ನು ಕಂಡ ಫ್ರಾನ್ಸ್ ದೇಶದ ಚರಿತ್ರಕಾರ, ಹೆನ್ರಿ ಮೌಹೂತ್ ಹೇಳುವುದನ್ನು ನಾವೂ ಹೇಳಬೇಕೆನಿಸುತ್ತದೆ; ‘ಇಂತಹ ವಿಶಾಲ ನಾಗರೀಕ ಸುಸಜ್ಜಿತ ನಗರವೊಂದು ನಿರ್ಮಾಣವಾಗಬೇಕಾದರೆ, ಎಂಜನಿಯರಿಂಗ್, ವಿಜ್ಞಾನ, ಗಣಿತಶಾಸ್ತ್ರ ಹಾಗೂ ಕಲಾ ಪ್ರಕಾರಗಳಲ್ಲಿ ಮಹೋನ್ನತ ಪರಿಣತಿಯನ್ನು ಸಾಧಿಸಿದ್ದ ಜನರಿಂದ ಮಾತ್ರ ಸಾಧ್ಯ. ಈ ಶಿಲ್ಪಕಲಾ ನೈಪುಣ್ಯಕ್ಕೆ ಸಮನಾದಂತಹುದು, ಬಹುಶಃ ಹಿಂದೆಂದೂ ಈ ಭೂಮಿಯ ಮೇಲೆ ನಿರ್ಮಾಣವಾಗಿರಲಾರದು. ಕಂಡಿತವಾಗಿಯೂ ಇಲ್ಲ… ಅಂಕೋರನ್ನು ನೋಡುವ ಮೊದಲು ಯಮ ನಿಮ್ಮ ಬಳಿ ಸಾರದಿರಲಿ’. ಹೀಗೆ ನೂರಾರು ಕ್ಷಕರು ಹರ್ಷೋದ್ಗಾರಗಳಿಂದ ಮುಕ್ತವಾಗಿ ಪ್ರಶಂಸಿಸಿರುವ ಈ ಅದ್ಭುತ ತಾಣ ಹಲವಾರು ಕಾರಣಗಳಿಂದಾಗಿ ಹಲವು ಶತಮಾನಗಳಷ್ಟು ಕಾಲ ಜನರ ಕಣ್ಣಿನಿಂದ ಮರೆಯಾಗಿತ್ತು. ೧೯ನೇ ಶತಮಾನದಲ್ಲಿ ಮತ್ತೆ ಬೆಳಕಿಗೆ ಬಂದ ಈ ಸ್ಮಾರಕಗಳು ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಕ್ರಿ.ಪೂ.೨೦೦ ವರ್ಷಗಳಿಂದ ಸಾವಿರದ ಐನೂರು ವರುಷಗಳಷ್ಟು ಕಾಲ ಗ್ರೇಟರ್ ಇಂಡಿಯಾ ಪ್ರದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ರಾಜ್ಯವಾಳಿದ ರಾಜವಂಶದವರು ಕಾಲಾನುಕ್ರಮದಲ್ಲಿ ಇತರ ಬೌದ್ಧಮತದತ್ತ ಒಲವು ತೋರಿದ್ದನ್ನು ಇತಿಹಾಸ ನಮಗೆ ತಿಳಿಸುತ್ತದೆ. ಹಲವಾರು ಶತಮಾನಗಳು ಅಲ್ಲಿ ಬೌದ್ಧ ಹಾಗೂ ಹಿಂದೂ ಧರ್ಮಗಳೆರಡೂ ವ್ಯಾಪಕವಾಗಿ ಆಚರಣೆಯಲ್ಲಿ ಇದ್ದದ್ದು ಕಾಣುತ್ತದೆ. ಇಂದಿಗೂ ಅಲ್ಲಿನ ಸಾಹಿತ್ಯ-ಸಂಗೀತ-ನೃತ್ಯ-ಶಿಲ್ಪಕಲಾ ಪ್ರಕಾರಗಳಲ್ಲಿ ಭಾರತೀಯ ಸಂಸ್ಕೃತಿ ಜೀವಂತವಾಗಿರುವುದಕ್ಕೆ ಮೂಲಕಾರಣವಾಗಿರುವ ರಾಮಾಯಣ-ಮಹಾಭಾರತಗಳು ಮಹಾಕಾವ್ಯಗಳ ಪಾತ್ರ ಗಣನೀಯವಾದುದು. ಇದರೊಂದಿಗೆ, ಕಾಳಿದಾಸನ ಕಾವ್ಯಗಳ ಪ್ರಭಾವವೂ ಅಲ್ಲಿನ ಶಿಲಾ ಶಾಸನಗಳಲ್ಲಿ ಕಾಣಿಸುತ್ತದೆ. ಆದರೂ ರಾಮಾಯಣದ ಪ್ರಭಾವ ಎಲ್ಲಕ್ಕಿಂತಲೂ ಹೆಚ್ಚಿನದು ಎನ್ನುವುದು ನಿಚ್ಚಳವಾಗಿ ಕಂಡುಬರುತ್ತದೆ. ರಾಮನ ಆದರ್ಶವನ್ನು ಅಲ್ಲಿನ ರಾಜರು ಇಟ್ಟುಕೊಂಡ ಹಾಗೆಯೇ ಅಲ್ಲಿನ ಜನರು ಈಗಲೂ ರಾಮನ ಗುಣಗಳನ್ನು ಮುಕ್ತಕಂಠದಿಂದ ಪ್ರಶಂಸೆ ಮಾಡುತ್ತಾರೆ.

ಹೀಗೆ, ಹಲವು ಸಾಗರಗಳನ್ನು ದಾಟಿ ಹೋಗಿ, ಅಲ್ಲಿ ಕಂಡುಬರುತ್ತಿರುವ ರಾಮಾಯಣದ ಮೋಡಿ ಅಚ್ಚರಿ ಮೂಡಿಸುತ್ತದೆ. ರಾಮಾಯಣವನ್ನು ವಾಲ್ಮೀಕಿಗಳು ಮಹಾಕಾವ್ಯವಾಗಿಸಿದ ಮೇಲೂ ಬಹುಕಾಲ ಮೌಖಿಕವಾಗಿ ಜನರ ನಾಲಿಗೆಯಲ್ಲಿ ನಲಿಯುತ್ತಿದ್ದ ರಾಮನ ಕಥೆಗೆ ವಿವಿಧ ಕಾಲಘಟ್ಟಗಳಲ್ಲಿ ಹಲವಾರು ಹೊಸ ಸೇರ್ಪಡೆಗಳು ಹಾಗೂ ಮಾರ್ಪಾಡುಗಳು ನಡೆಯುತ್ತಲೇಹೋದದ್ದೂ ಅಲ್ಲಿ ಕಾಣುತ್ತದೆ. ಹಾಗೆ ಸೇರ್ಪಡೆಗೊಂಡ ಅಥವಾ ಆಯಾ ಕಾಲಘಟ್ಟದ ಜನಸಮುದಾಯದ ಭಾವಸ್ರೋತಕ್ಕೆ ತಕ್ಕ ಹಾಗೆ ಬದಲಾದ ರಾಮನ ಕಥೆಗಳು ಬೇರೆ ಬೇರೆ ರಾಮಾಯಣಗಳಾಗಿ ಇಂದಿಗೂ ಉಳಿದು ಬಂದಿವೆ. ನಮ್ಮ ಸುತ್ತಮುತ್ತಲೂ ಹಲವಾರು ರಾಮಾಯಣಗಳ ಸೃಷ್ಟಿ ಈಗಲೂ ನಡೆಯುತ್ತಲೇ ಇದೆ. ಹಾಗಾಗಿ, ‘ಈ ವಿಶ್ವದಲ್ಲಿ ಪರ್ವತಗಳು ಹಾಗೂ ನದಿಗಳು ಇರುವವರೆಗೂ ರಾಮಾಯಣದ ಪ್ರಚಾರವೂ ನಡೆಯುತ್ತಿರುತ್ತದೆ’ ಎಂದು ಹೇಳಿರುವ ಮಾತು ನಿಜವಾಗುವುದರಲ್ಲಿ ಸಂಶಯವಿಲ್ಲ.

ಯಾವತ್ ಸ್ಥಾತ್ಯಂತಿ ಗಿರಿಯಃ ಸರಿತಶ್ಚ ಮಹೀತಲೇ
ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ