ಸುಮಾರು ೨೦೦೦ವರ್ಷಗಳಿಂದಲೂ ‘ರಾಮಾಯಣ’ವನ್ನು ಭಾರತದ ಎರಡು ಮಹಾನ್ ಕಾವ್ಯಗಳಲ್ಲಿ ಒಂದೆಂದು ಪರಿಗಣಿಸುತ್ತ ಬಂದಿದ್ದೇವೆ. ರಾಮಾಯಣವನ್ನು ‘ಆದಿಕಾವ್ಯ’ವೆಂದು, ಪುರಾಣವೆಂದು, ಇತಿಹಾಸವೆಂದು ಎಲ್ಲ ಜ್ಞಾನ ಮತ್ತು ವಿವೇಕದ ಗಣಿಯೆಂದು ಭಾವಿಸಿದ್ದೇವೆ. ಕಷ್ಟಕಾಲದಲ್ಲಿ ಮೊರೆಹೋಗಲು ಮಾತ್ರವಲ್ಲದೆ ದಿನವೂ ಪಾರಾಯಣ ಮಾಡಬೇಕಾದ ಕೃತಿಯೆಂದೂ ಬಗೆದಿದ್ದೇವೆ. ಹೀಗೆ ರಾಮಾಯಣವು ಒಂದಲ್ಲ ಒಂದು ಬಗೆಯಲ್ಲಿ ಸರ್ವವ್ಯಾಪಿ, ಸರ್ವಪ್ರಭಾವಶಾಲಿ ಗುಣವನ್ನು ಹೊಂದಿದೆ. ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತ ಮುಂತಾದ ಪಾತ್ರಗಳು ಹಾಗೂ ರಾಮಾಯಣದ ಏಕಮುಖೀ ಕಥಾವಸ್ತುವನ್ನು ಎಲ್ಲ ಜನರೂ ಸ್ಮರಿಸುತ್ತಾರೆ. ಮಹಾಭಾರತಕ್ಕೆ ಈ ಬಗೆಯ ಮನ್ನಣೆ ಇಲ್ಲ. ವಸ್ತುವಿಸ್ತಾರ ಮತ್ತು ಪಾತ್ರ ವೈವಿಧ್ಯದಿಂದಾಗಿ ಮಹಾಭಾರತವು ಸೀಮಿತ ಪ್ರಮಾಣದ ವಾಚಕರು ಹಾಗೂ ಶ್ರೋತೃಗಳನ್ನು ಆಕರ್ಷಿಸಿದೆ.

ರಾಮಾಯಣದ ಸಾರ್ವತ್ರಿಕ ಆಕರ್ಷಣೆಯಿಂದಾಗಿ ರಾಮನನ್ನು ದೇವರೆಂದೂ ವಿಷ್ಣುವಿನ ಅಂಶವೆಂದೂ ನಂಬುವ ರೂಢಿ ಬೆಳೆಯಿತು. ಒಂದು ಅಭಿಪ್ರಾಯದಂತೆ ರಾಮನು ಈ ಭೂಮಿಯನ್ನು ಕೆಲವು ಶತ ಸಹಸ್ರ ವರ್ಷಗಳ ಕಾಲ ಆಳಿದನಂತೆ, ಇದರ ಜೊತೆಗೆ ‘ರಾಮರಾಜ್ಯ’ವು ಆದರ್ಶ ರಾಜ್ಯವೊಂದರ ಕಲ್ಪನೆಯಾಗಿ ಜನಜನಿತವಾಯಿತು.

ಗತಾನುಗತಿಕವಾದ ಈ ನಂಬಿಕೆಗೆ ಸಂತ ಕವಿ ತುಲಸೀದಾಸನಿಂದ ಉತ್ತೇಜನ ದೊರೆಯಿತು. ಅವನಿಂದಾಗಿ ಉತ್ತರ ಪ್ರದೇಶ ಹಾಗೂ ಬಿಹಾರದ ಶೇ.೫೦ರಷ್ಟು ಸ್ತ್ರೀ ಪುರುಷರ ಹೆಸರುಗಳ ಪೂರ್ವಾರ್ಧದಲ್ಲಿ ರಾಮನಾಮವಿದೆ. ರಾಮ ಹಾಗೂ ಹನುಮಂತನ ನೂರಾರು ದೇವಾಲಯಗಳಿವೆ. ರಾಮ ಹಾಗೂ ‘ಸಂಕಷ್ಟಹರ’ ಹನುಮಂತನ ಭವ್ಯ ದೇವಾಲಯಗಳಿಗೆ ವಾರಣಾಸಿ ಹೆಸರುವಾಸಿಯಾಗಿದೆ.

ಉತ್ತರದಲ್ಲಿ ರಾಮಾಯಣವನ್ನು ತುಲಸೀದಾಸ ಜನಪ್ರಿಯಗೊಳಿಸಿದರೆ, ಮಹಾರಾಷ್ಟ್ರದಲ್ಲಿ ಆ ಕೆಲಸ ಮಾಡಿದಾತ ಸಂತ ರಾಮದಾಸ. ರಾಮ-ಹನುಮಂತ ಪಂಥದ ಪುನರುತ್ಥಾನದಿಂದಾಗಿಯೆ ಪುಣೆ ಹಾಗೂ ಮಹಾರಾಷ್ಟ್ರದ ಇನ್ನೂ ಅನೇಕ ಹಳ್ಳಿ ಪಟ್ಟಣಗಳ ರಸ್ತೆ ತಿರುವಿನಲ್ಲಿ ರಾಮ ಸೀತೆಯರ ದೇವಾಲಯಗಳು ಹಾಗೂ ಮಾರುತಿಯ ಮೂರ್ತಿ ಕಂಗೊಳಿಸುತ್ತವೆ.

ಈ ಸುದೀರ್ಘ ಪರಂಪರೆಗೆ ಗಾಂಧೀಜಿ ತಮ್ಮ ದೇಣಿಗೆ ಸಲ್ಲಿಸಿದರು. ಅವರು ತಮ್ಮ ಪ್ರಾರ್ಥನಾ ಸಭೆಗಳಲ್ಲಿ ದಿನಕ್ಕೆರಡು ಬಾರಿಯಾದರೂ ‘ರಾಮನಾಮ’ವನ್ನು ಪಠಿಸುವ ಅಭ್ಯಾಸವನ್ನು ಚಾಲ್ತಿಗೆ ತಂದರು. ಇದು ಸ್ಥೂಲವಾಗಿ, ರಾಮ ಹಾಗೂ ರಾಮಾಯಣದ ಕುರಿತಾದ ಪಾಂರಪರಿಕ ದೃಷ್ಟಿ. ಈ ದೃಷ್ಟಿಯು ರಾಮಾಯಣದಲ್ಲಿ ಬರುವ ವಿವಿಧ ಘಟನಾವಳಿಗಳು ಹಾಗೂ ರಾಮನ ಕಾಲದ ಐತಿಹಾಸಿಕತೆಯನ್ನು ಪ್ರಶ್ನಿಸುವ ಪ್ರಯತ್ನವನ್ನೆಂದೂ ಮಾಡಿದ್ದಿಲ್ಲ. ರಾಮನನ್ನು ದೇವರಿಗಿಂತ ಕಡಿಮೆ ಎಂದು ಈ ದೃಷ್ಟಿ ಎಂದೂ ಭಾವಿಸಿದ್ದಿಲ್ಲ.

ಭಾರತೀಯ ಸಾಹಿತ್ಯ ಅದರಲ್ಲೂ ಮುಖ್ಯವಾಗಿ ಸಂಸ್ಕೃತ ಸಾಹಿತ್ಯದ ಕುರಿತು ಐರೋಪ್ಯ ವಿದ್ವಾಂಸರು ಆಸಕ್ತಿ ವಹಿಸತೊಡಗಿದ ಮೇಲೆಯೇ ಅಂದರೆ ಸುಮಾರು ೧೦೦ವರ್ಷಗಳಿಂದೀಚೆಗೆ ಭಾರತದ ಪ್ರಾಚೀನ ಕಾವ್ಯಗಳನ್ನು ಚಾರಿತ್ರಿಕ ಮತ್ತು ವಿಮರ್ಶಾತ್ಮಕ ವ್ಯಾಖ್ಯಾನಕ್ಕೆ ಒಡ್ಡುವ ಕ್ರಮ ಆರಂಭವಾಯಿತು. ೧೮೪೩ರಿಂದ ೧೮೬೭ರ ಅವಧಿಯಲ್ಲಿ ಗೊರೆಸ್ಯೋನ ‘ರಾಮಾಯಣ’ದ ಆವೃತ್ತಿ (ಆರು ಸಂಪುಟಗಳಲ್ಲಿ) ಪ್ರಕಟವಾಯಿತು. ಆ ಬಳಿಕ ರಾಮಾಯಣದ ಕುರಿತು ವಿಮರ್ಶೆ ಬರೆದ ವಿದ್ವಾಂಸರಲ್ಲಿ ಎ.ವೆಬರ್ (೧೮೭೩) ಅವರೇ ಮೊದಲಿಗರಿರಬೇಕು.

ಆ ವಿಚಾರ ಏನೇ ಇರಲಿ, ಕವಿ ಭವಭೂತಿಗೆ ನಾವು ಗೌರವ ಸಲ್ಲಿಸಲೇಬೇಕು. ಏಕೆಂದರೆ ೭ನೇ ಶತಮಾನದಷ್ಟು ಹಿಂದೆಯೇ ಆತ ತನ್ನ ‘ಉತ್ತರ ರಾಮಚರಿತ’ದಲ್ಲಿ ವಾಲಿಯ ವಧೆ, ಸೀತೆ ಪವಿತ್ರಳೆಂದು ಅಗ್ನಿಪರೀಕ್ಷೆಯಿಂದ ಸಾಬೀತಾದರೂ ರಾಮ ಆಕೆಯನ್ನು ಸ್ವೀಕರಿಸದಿರುವುದು ಇವೇ ಮುಂತಾದ ರಾಮನ ಕೃತ್ಯಗಳನ್ನು ಲವ-ಕುಶ ಹಾಗೂ ಪೃಥ್ವಿಯ ಮೂಲಕ ಪ್ರಶ್ನಿಸುತ್ತಾನೆ. ಇದಕ್ಕೂ ಮುಂಚೆಯೇ, ಕಾಳಿದಾಸನ ಸೀತೆ ರಾಮನ ಅಜ್ಞಾನುಸಾರ ವನವಾಸಕ್ಕೆ ಹೊರಟಾಗ ರಾಮನನ್ನು ರಾಜನೆಂದು, ಕೇವಲ ಅರಸನೆಂದು ಕರೆಯುತ್ತಾಳೆ. ಆ ಶ್ಲೋಕ ಭಾಗಗಳು ಉಲ್ಲೆಖನೀಯವಾಗಿವೆ.

ಪೃಥ್ವಿ ಹೇಳುತ್ತಾಳೆ:

ಪ್ರಮಾಣೀಕೃತಃ ಪಾಣಿರ್ಬಾಲ್ಯೆ ಬಾಲೇನ ಪೀಡಿತಃ |
ನಾಹಂ ಜನಕೋ ನಾಗ್ನಿರ್ನಾನುವೃತ್ತಿರ್ನ ಸಂತತಿಃ ||
(ಉತ್ತರ ರಾಮಚರಿತಂ)

ಸೀತೆ ಹೇಳುತ್ತಾಳೆ:

ವಾಚ್ಯಸ್ತ್ವಯಾ ಮದ್ವಚನಾತ್ಸ ರಾಜಾ ವಹ್ನೌ ವಿಶುದ್ಧಾಮಪಿ ಯತ್ಮಸಕ್ಷಮ್ |
ಮಾಂ ಲೋಕವಾದಶ್ರವಣಾದಹಾಸೀಃ ಶ್ರುತಸ್ಯ ಕಿಂ ತತ್ಸದೃಶ್ಯಂ ಕುಲಸ್ಯ ||
(ರಘುವಂಶ)

೧೫೦೦ ವರ್ಷಗಳಷ್ಟು ಹಿಂದೆಯೇ ಅಂದರೆ ಬ್ರಾಹ್ಮಣವಾದ ಪರಮೋಚ್ಚವಾಗಿದ್ದ ಕಾಲದಲ್ಲಿ ಹಿಂದೂವಾದ ಇನ್ನೂ ಭ್ರಷ್ಟವಾಗಿರದಿದ್ದ ಕಾಲದಲ್ಲಿ, ರಾಮನ ಕೃತ್ಯಗಳು ಪ್ರಶ್ನಾತೀತವಾಗಿರಲಿಲ್ಲ ಎಂದು ಈ ನಿದರ್ಶನಗಳು ಸಾಧಿಸುತ್ತವೆ.

ರಾಮಾಯಣವು ಪೌರಾಣಿಕ ಕಾವ್ಯ-ಕವಿಯ ಕಲ್ಪನೆಯ ಕೂಸು; ಆದ್ದರಿಂದಲೆ ಅದು ಚಾರಿತ್ರಿಕ ಮತ್ತು ವಿಮರ್ಶಾತ್ಮಕ ವ್ಯಾಖ್ಯಾನದ ಎಲ್ಲೆಯನ್ನು ಮೀರಿ ನಿಲ್ಲುತ್ತದೆ ಎಂಬ ಅಭಿಪ್ರಾಯ ಉಂಟು. ಈ ವಿಚಾರ ಪರೀಕ್ಷೆಗೆ ಒಳಪಡಬೇಕಾದುದು ಅವಶ್ಯ. ಏಕೆಂದರೆ ಪ್ರಸಕ್ತ ಅಧ್ಯಯನದ ಚೌಕಟ್ಟು ಈ ಬಗೆಗಿನ ಸರಿಯಾದ ತಿಳುವಳಿಕೆಯನ್ನು ಹೊಂದಿಕೊಂಡಿದೆ. ರಾಮಾಯಣವು ಒಂದು ಕಾವ್ಯವೆಂಬುದನ್ನು ಗ್ರಹೀತವಾಗಿಟ್ಟುಕೊಂಡರೂ ಯಾವುದೇ ದೇಶದ ಕವಿ ಒಂದು ನಿರ್ದಿಷ್ಟ ಕಾಲ ಹಾಗೂ ಪರಿಸರಕ್ಕೆ ಸೇರಿದನಲ್ಲವೇ? ಹೆಚ್ಚೇಕೆ, ಡಾಂಟೆಯ ‘ಡಿವೈನ್ ಕಾಮೆಡಿ’ಯು ೧೩ ಹಾಗೂ ೧೪ನೇ ಶತಮಾನದ ಆರಂಭದಲ್ಲಿ ಬದುಕಿದ್ದ ಇಟಲಿಯ ಕೃತಿಕಾರನ ಧಾರ್ಮಿಕ-ತಾತ್ವಿಕ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ‘ಡಿವೈನ್ ಕಾಮೆಡಿ’ಯಂಥ ಕೃತಿಯನ್ನು ಇದಕ್ಕೂ ಮುಂಚೆ ಬರೆದಿರಲು ಸಾಧ್ಯವಿಲ್ಲ. ಹಾಗೆಯೇ ಸಂಜಯನು ಕೂಡ ಕೇವಲ ತನ್ನ ಕಾಲಕ್ಕೆ ಸೇರಿದ ಸಂಗತಿಗಳನ್ನು ಮಾತ್ರ ಕಂಡು ಬಣ್ಣಿಸಲು ಸಾಧ್ಯ. ಸ್ವತಃಸಿದ್ಧವಾದ ಈ ದೃಷ್ಟಿಕೋನವನ್ನು ಒಪ್ಪಿಕೊಂಡರೆ ಮಾತ್ರವೇ ನಾವು ಯಾವುದೇ ಕಾವ್ಯ ಅಥವಾ ನಾಟಕವನ್ನು ಐತಿಹಾಸಿಕ, ಸಾಹಿತ್ಯಿಕ, ಪುರಾತತ್ವ ಶಾಸ್ತ್ರೀಯ, ಮನೋವೈಜ್ಞಾನಿಕ ಹಾಗೂ ಇನ್ನಿತರ ದೃಷ್ಟಿಕೋನಗಳಿಂದ ವಿಮರ್ಶಿಸಬಹುದು.

ರಾಮಾಯಣವನ್ನು ನಾವು ಕಾವ್ಯವಾಗಿ ಆಸ್ವಾದಿಸುವುದು ಮಾತ್ರವಲ್ಲದೆ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತರನ್ನು ಅವರ ಆದರ್ಶಗುಣಗಳಿಗಾಗಿ ಮೆಚ್ಚಿಕೊಳ್ಳುವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಶತಮಾನಗಳಿಂದಲೂ ಈ ಕಲ್ಯಾಣ ಗುಣಗಳು ಮನುಷ್ಯನ ಹೃದಯದ ಆಳವನ್ನು ತಟ್ಟಿವೆ. ರಾಮಾಯಣದಲ್ಲಿ ಬರುವ ಈ ಪಾತ್ರಗಳನ್ನು ದೇವಾಂಶಸಂಭೂತರೆಂದು ಭಾವಿಸಿ ಮೂರ್ತಿಪೂಜೆ ಮಾಡಲಾಗುತ್ತಿದೆ. ಇಂಥ ಮನೋಭಾವವು ರಾಮಾಯಣದ ಅಥವಾ ಇನ್ನಾವುದೇ ಧಾರ್ಮಿಕ-ತಾತ್ವಿಕ ಗ್ರಂಥಗಳ ಬಹುಮುಖವಾದ ವಿಮರ್ಶಾತ್ಮಕ ಅಧ್ಯಯನವನ್ನು ನಿರ್ಲಕ್ಷಿಸಬಾರದು. ಇದಕ್ಕೆ ವ್ಯತಿರಿಕ್ತವಾಗಿ, ನಾನಿಲ್ಲಿ ಕೈಗೊಂಡಿರುವಂಥ ವಿಮರ್ಶಾತ್ಮಕ ಅಧ್ಯಯನಗಳು-ಪ್ರತಿಯೊಂದು ಪಾತ್ರದ ನಿರ್ವಹಣೆಯನ್ನು ಹೆಚ್ಚು ಚೆನ್ನಾಗಿ ಗ್ರಹಿಸಲು ಸಹಕಾರಿಯಾಗಿವೆ.

ರಾಮಕಥೆಯನ್ನು ಕಾವ್ಯ ವಸ್ತುವನ್ನಾಗಿ ಮಾಡಿಕೊಂಡು ಸಾಂದರ್ಭಿಕವಾಗಿ ಟೀಕಿಸಿದ ಭಾಸ, ಕಾಳಿದಾಸ, ದಿನ್ನಾಗ ಅಥವಾ ಧೀರನಾಗ ಮತ್ತು ಭವಭೂತಿ ಮುಂತಾದವರನ್ನು ಹೊರತುಪಡಿಸಿದರೆ ಉಳಿದೆಲ್ಲ ವಿಮರ್ಶಾತ್ಮಕ ಅಧ್ಯಯನಗಳು ಕಳೆದ ನೂರು ವರ್ಷಗಳಲ್ಲಿ ಆಗಿರುವಂಥವು. (ಇವನ್ನು ಕೆಲವು ಗುಂಪುಗಳಾಗಿ ವಿಂಗಡಿಸಿ ನೋಡಬಹುದು.)

ರಾಮಾಯಣದ ಬೆಳವಣಿಗೆ ಹಾಗೂ ಕಾಲದ ಕುರಿತಾದ ಆಧುನಿಕ ವಿಮರ್ಶೆಗಳನ್ನು ಉಲ್ಲೇಖಿಸುವ ಮುನ್ನ ಸಾಂಪ್ರದಾಯಿಕ ಅಭಿಪ್ರಾಯಗಳ ಕುರಿತು ಒಂದು ಮಾತು. ಇವುಗಳಲ್ಲಿ ಯಾವುದೆ ಏಕಾಭಿಪ್ರಾಯ ಕಂಡುಬರುವುದಿಲ್ಲ. ಮೇಲಾಗಿ ರಾಮನ ಕಾಲ ನಿರ್ಣಯದ ವಿಚಾರದಲ್ಲಿ ಭಾರಿ ಭಿನ್ನಾಭಿಪ್ರಾಯ ಕಂಡುಬರುತ್ತದೆ. ರಾಮನು ತ್ರೇತಾಯುಗದಲ್ಲಿ ಅಂದರೆ ಒಂದು ಮಿಲಿಯ ವರ್ಷಗಳ ಹಿಂದೆ ಇದ್ದನೆಂಬ ದೃಷ್ಟಿ ಒಂದೆಡೆಯಾದರೆ ಕ್ರಿ.ಪೂ.೮ ಅಥವಾ ೬೭ ಅಥವಾ ೧೦೨ರಲ್ಲಿ ಇದ್ದನೆಂಬ ಅಭಿಪ್ರಾಯ ಇನ್ನೊಂದೆಡೆ.

ರಾಮಾಯಣದಲ್ಲೆ ಇದಕ್ಕೆ ವ್ಯತಿರಿಕ್ತವಾದ ಸಾಕ್ಷ್ಯಗಳು ದೊರೆಯುತ್ತವೆ. ರಾಮನು ದ್ವಾಪರಯುಗಕ್ಕೆ ಸೇರಿದವನೆಂಬ ಅಭಿಪ್ರಾಯ ಉತ್ತರ ಕಾಂಡದಿಂದ ವ್ಯಕ್ತವಾಗುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ಇದು ಸರಿ ಸುಮಾರು ಕ್ರಿ.ಪೂ.೩೧೦೦ರ ಹೊತ್ತು. ಅಂದರೆ ೫೦೦೦ವರ್ಷಗಳ ಹಿಂದಿನ ಮಾತು. ಸ್ವಾರಸ್ಯದ ಸಂಗತಿ ಎಂದರೆ ಸ್ವಲ್ಪ ಹೆಚ್ಚು ಕಡಿಮೆ ಈ ಅಭಿಪ್ರಾಯವನ್ನು ಶ್ರೀಲಂಕಾದ ಪರಂಪರೆ ಬೆಂಬಲಿಸುತ್ತದೆ. ವಿಲಿಯಂ ಜೋನ್ಸ್, ರಾಮಸ್ವಾಮಿಶಾಸ್ತ್ರಿ ಮುಂತಾದ ಐರೋಪ್ಯ ಹಾಗೂ ಭಾರತೀಯ ವಿದ್ವಾಂಸರೇ ಈ ಪರಂಪರೆಗಳನ್ನು ಒಪ್ಪಿಕೊಂಡಿರುವುದರಿಂದ ನಾವು ಹೆಚ್ಚು ವಿಮರ್ಶಿಸ ಹೋಗುವುದಿಲ್ಲ. ಇದರ ಪರಿಣಾಮವೆಂದರೆ ರಾಮ, ಕೃಷ್ಣರು ಸಾವಿರಾರು ವರ್ಷಗಳ ಹಿಂದೆ ಈ ನೆಲದಲ್ಲಿ ಬದುಕಿದ್ದರೆಂದು ಎಲ್ಲರೂ ಭಾವಿಸುತ್ತಾರೆ. ಹೀಗಾಗಿಯೆ ಅವರು ಕಣ್ಣಿಗೆ ಕಾಣುವ ಸಾಕ್ಷ್ಯಾಧಾರಗಳನ್ನು ಮಂಡಿಸಬೇಕೆಂದು ಪುರಾತತ್ವಶಾಸ್ತ್ರಜ್ಞರನ್ನು ಒತ್ತಾಯಿಸುತ್ತಾರೆ.

ಪ್ರಸ್ತುತ ಅಧ್ಯಯನದ ಒಂದು ಉದ್ದೇಶವೆಂದರೆ ಈ ಬಗೆಯ ದೃಗ್ಗೋಚರ ಸಾಕ್ಷ್ಯಗಳ ಸಂಗ್ರಹ ಹಾಗೂ ರಾಮಾಯಣ ಮತ್ತು ರಾಮನ ಕಾಲದ ಮೇಲೆ ಅವು ಬೀರುವ ಬೆಳಕಿನ ಕುರಿತಾಗಿ ಜಿಜ್ಞಾಸೆ.

ಆರ್.ಸಿ. ಮಜುಮ್‌ದಾರ್ ಹಾಗೂ ಗೊರೆಸಿಯಾ ಅವರು ರಾಮಾಯಣವು ಕ್ರಿ.ಪೂ.೧೫-೧೪ನೆ ಶತಮಾನಗಳ ಮಧ್ಯೆ ರಚಿತವಾಗಿರಬೇಕೆಂದು ಭಾವಿಸುತ್ತಾರೆ. ವಿವಿಧ ಪೌರಾಣಿಕ ಸಾಕ್ಷ್ಯಾಧಾರಗಳನ್ನು ತೂಗಿನೋಡಿದ ಪುಸಲ್ಕರ್ ಅವರು ಮಹಾಭಾರತ ಯುದ್ಧಕ್ಕೆ ಮೊದಲು ಭಾರತವನ್ನು ಆಳಿದ ಅರಸರು ಹಾಗೂ ರಾಜವಂಶಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಭಾರತ ಯುದ್ಧಕ್ಕೆ ೫೦೦ ವರ್ಷಗಳಷ್ಟು ಹಿಂದಿನ ೪೦೦ ವರ್ಷಗಳ ಅವಧಿಯನ್ನು ಅವರ ರಾಮಚಂದ್ರ ಯುಗವು ಒಳಗೊಂಡಿದೆ. (ಕ್ರಿ.ಪೂ.೨೩೫೦-೧೯೫೦) ವೇದಗಳ ಆಧಾರ ಹಾಗೂ ಗ್ರಹಗತಿಗಳ ಲೆಕ್ಕಾಚಾರವನ್ನೇ ಅವಲಂಬಿಸಿದ ಸೀತನಾಥ ಪ್ರಧಾನರು ಲಂಕಾಯುದ್ಧವು ೧೪೫೦ರ ಸುಮಾರಿಗೆ ನಡೆಯಿತೆಂದೂ ರಾವಣ ವಧೆಯ ಕಾಲಕ್ಕೆ ರಾಮನಿಗೆ ೪೨ವರ್ಷವಾಗಿತ್ತೆಂದೂ ಧೈರ‍್ಯವಾಗಿ ನುಡಿಯುತ್ತಾರೆ.

ವೈದಿಕ, ಪೌರಾಣಿಕ ಹಾಗೂ ಜಾತಕ ಕಥೆಗಳ ಆಧಾರವನ್ನು ಎಚ್ಚರದಿಂದ ಪರಿಶೀಲಿಸಿದ ಹೇಮಚಂದ್ರ ರಾಯ ಚೌಧರಿಯವರು ರಾಮನ ಕಾಲ ಮತ್ತು ಐತಿಹಾಸಿಕತೆಯ ಕುರಿತು, ಅಡ್ಡಗೋಡೆಯ ಮೇಲೆ ದೀಪವಿಟ್ಟಂಥ ನಿಲುವು ತಳೆಯುತ್ತಾರೆ. ‘ಗೋಪಥ ಬ್ರಾಹ್ಮಣ’ದಲ್ಲಿ ಕೋಸಲದ ಪ್ರಸ್ತಾಪವಿದ್ದರೂ ಸರಯೂ ತೀರದಲ್ಲಿ ಆರ‍್ಯ ಕುಲಕ್ಕೆ ಸೇರಿದ ಚಿತ್ರರಥನು ವಾಸವಾಗಿದ್ದನೆಂದು ಋಗ್ವೇದ ತಿಳಿಸಿದರೂ ಕೋಸಲದಲ್ಲಿ ಯಾವುದೇ ನಗರ-ಕಡೆಗೆ ಅಯೋಧ್ಯೆ ಕೂಡ ಇತ್ತು ಎಂಬ ಪ್ರಸ್ತಾಪವಿಲ್ಲ ಎಂದು ಅವರು ನುಡಿಯುತ್ತಾರೆ. ಇಕ್ಷ್ವಾಕು ವಂಶದ ಅನೇಕ ಅರಸರು ಉದಾಹರಣೆಗೆ ಮಾಂಧಾತೃ, ಯೌವನಾಶ್ವ, ಪುರುಕುತ್ಸ, ಹರಿಶ್ಚಂದ್ರ ಮತ್ತು ಆತನ ಮಗ ಭಗೀರಥ, ಋತುಪರ್ಣ ಹಾಗೂ ಅಂಬರೀಶ ಮುಂತಾದವರ ಬಗೆಗೆ ವೈದಿಕ ಸಾಹಿತ್ಯದಲ್ಲಿ ಉಲ್ಲೆಖವಿದೆ. ದಶರಥ ಮತ್ತು ರಾಮನ ಹೆಸರು ಋಗ್ವೇದದಲ್ಲಿ ಕಂಡುಬಂದಿದೆ. ಆದರೆ ಅವಕ್ಕೂ ಇಕ್ಷ್ವಾಕು ವಂಶ ಅಥವಾ ಕೋಸಲ ದೇಶಕ್ಕೂ ಯಾವ ಸಂಬಂಧವೂ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ರಾಮ ಎಂಬ ಹೆಸರು ಋಗ್ವೇದದ ಪ್ರಕಾರ ಗಂಡಸಿಗೆ ನೀಡುವ ಹೆಸರು. ಇದಕ್ಕೂ ಕಥಾ ನಾಯಕನಿಗೂ ಯಾವುದೇ ಹೋಲಿಕೆಯಿಲ್ಲ ಎಂದು ಗುರುಗೆ ಅವರ ಅಭಿಪ್ರಾಯ. ಕುತೂಹಲಕರವಾದ ಮತ್ತು ಮುಖ್ಯವಾದ ಉಲ್ಲೇಖ ಸೀತೆಯದು. ‘ನೇಗಿಲಗೆರೆ’ ಎಂಬ ಅರ್ಥದಲ್ಲಿ ಈ ಪದ ಬಳಕೆಯಾಗಿದೆಯಾದರೂ ಇದನ್ನು ವ್ಯಕ್ತೀಕರಿಸಿದ್ದು ಹೀಗೆ ಸಂಬೋಧಿಸಲಾಗುತ್ತದೆ. “ಪವಿತ್ರ ಸೀತಾ, ಸಮೀಪ ಬಾ, ನಾವು ನಿನ್ನನ್ನು ಗೌರವಿಸಿ, ಪೂಜಿಸುತ್ತೇವೆ”. ಹೀಗೆ ರಾಮಾಯಣದಲ್ಲಿ ಸೀತೆಯ ಮೂಲವನ್ನು ಕುರಿತು ಕೆಲವು ಹೊಳಹುಗಳು ದೊರೆಯುತ್ತವೆ.

ದಶರಥ ಜಾತಕದ ಪ್ರಕಾರ ದಶರಥ ಮತ್ತು ರಾಮ ಇಬ್ಬರೂ ವಾರಣಾಸಿಯ ರಾಜರು, ಸೀತೆಗೆ ಜನಕನೊಂದಿಗೆ ಯಾವ ಸಂಬಂಧವೂ ಇಲ್ಲ.

ಹೀಗೆ ಪ್ರಚಲಿತದಲ್ಲಿರುವ ಅಲ್ಲಲ್ಲಿ ಚದುರಿದ ವಿಷಯಗಳನ್ನು ಒಟ್ಟುಗೂಡಿಸಿ ಪುರಾಣಗಳು ಮತ್ತು ವಾಲ್ಮೀಕಿಯ ರಾಮಾಯಣ ಕಥೆ ಹಾಗೂ ವಂಶಾವಳಿಯನ್ನು ಹೆಣೆದಿರಬೇಕು. ಇಲ್ಲಿ ಉಲ್ಲೇಖಿಸಿರುವ ಅಧ್ಯಯನಗಳು ರಾಮನ ಐತಿಹಾಸಿಕತೆಯ ಪ್ರಶ್ನೆಯನ್ನು ಪರಿಶೀಲಿಸುವುದಿಲ್ಲ. ಆದರೂ ಪ್ರಧಾನ್, ಪರ‍್ಗಿತರ್ ಹಾಗೂ ಪುಸಲ್ಕರ್ ಮೊದಲಾದವರು ೧೮ ಪುರಾಣಗಳಲ್ಲಿ ಬರುವ ರಾಜವಂಶಗಳ ವಿಚಾರವನ್ನು ಈ ಎರಡು ಮಹಾಕಾವ್ಯಗಳೊಂದಿಗೆ ತುಲನೆ ಮಾಡಿ ನೋಡಿದ್ದಾರೆ. ಈ ವಿದ್ವಾಂಸರ ಪ್ರಕಾರ ರಾಮನು ಕ್ರಿ.ಪೂ.೨೮೦೦ ಅಥವಾ ಕ್ರಿ.ಪೂ.೧೪೦೦ರಲ್ಲಿ ಅಥವಾ ಈ ಶತಮಾನಗಳ ನಡುವೆ ಬದುಕಿರಬೇಕು. ಹಾಗಿದ್ದರೆ, ಈ ಕಾಲಾವಧಿಯಲ್ಲೇ ಮುಖ್ಯ ಘಟನೆಗಳು ನಡೆದಿರಬೇಕು. ಇಲ್ಲಿ ಉದ್ಭವಿಸುವ ಪ್ರಶ್ನೆ: ಈ ಕಾಲಕ್ಕೆ (ಅಂದರೆ ಕ್ರಿ.ಪೂ. ೨೫೦೦ ಅಥವಾ ೧೫೦೦) ಉತ್ತರ ಪ್ರದೇಶ, ಬಿಹಾರ ಹಾಗೂ ಶ್ರೀಲಂಕೆಯಲ್ಲಿ ನಗರ ಸಂಸ್ಕೃತಿಯೊಂದು ಇತ್ತೇ?

ರಾಮಕೃಷ್ಣರ ಕಾಲಗಳು ೫,೫೦೦ವರ್ಷಗಳಷ್ಟು ಪ್ರಾಚೀನ ಅಥವಾ ‘ರಾಮಾಯಣ’, ‘ಮಹಾಭಾರತ’ಗಳು ಈ ಕಾಲದ ಜೀವನ ಚಿತ್ರಣ ನೀಡುತ್ತವೆ ಎಂದು ಹೇಳುವಾಗಲೆಲ್ಲ ನಾವು ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.

ಸಮಗ್ರ ರಾಮಾಯಣವನ್ನು ಅತಿಪುರಾತನವೆಂದು ಪರಿಗಣಿಸಕೂಡದೆಂಬ ಎಚ್ಚರಿಕೆಯನ್ನು ಪದೇ ಪದೇ ನೀಡಿದ ಏಕಮೇವ ವಿದ್ವಾಂಸರು ಗುರುಗೆ ಎಂಬುದನ್ನು ನಾವಿಲ್ಲಿ ನೆನಸಿಕೊಳ್ಳಬೇಕು. ಈ ಪರಂಪರೆಗಳಿಗೆ ವಿಶೇಷ ಒತ್ತು ನೀಡುವುದು ವ್ಯರ್ಥ. ಏಕೆಂದರೆ ಇವುಗಳಿಗೆ ಅತಿ ಪ್ರಾಚೀನತೆಯನ್ನು ಒದಗಿಸುವ ವಿಷಯದಲ್ಲಿ ರಾಷ್ಟ್ರೀಯ ಉತ್ಸಾಹಕ್ಕಿಂತ ಧಾರ್ಮಿಕ ಉತ್ಸಾಹವೆ ಮೇರೆಮೀರಿದೆ. ಇಂದು ನಮ್ಮ ಮುಂದಿರುವ ರಾಮಾಯಣವು ಕ್ರಿ.ಪೂ.೪ನೇ ಶತಮಾನದಿಂದ ಹಿಡಿದು ಕ್ರಿ.ಶ.೨ನೇ ಶತಮಾನದವರೆಗಿನ ವಿಚಾರ ಸಾಮಾಗ್ರಿಯನ್ನು ಹೊಂದಿದೆ. ಆದ್ದರಿಂದ ಭಾರತೀಯ ಇತಿಹಾಸದ ಪುನರ್ ರಚನೆಗಾಗಿ ಈ ಸಾಮಗ್ರಿಯನ್ನು ಎತ್ತಿಕೊಳ್ಳುವಾಗ ಎಲ್ಲಿಲ್ಲದ ಎಚ್ಚರವಹಿಸಬೇಕು. ಇದಲ್ಲದೆ ಈ ಮಹಾಕಾವ್ಯದಲ್ಲಿ ಬರುವ ಪ್ರತಿಯೊಂದು ಹೇಳಿಕೆಯನ್ನು ಅದು ರಚನೆಯಾದ ಕಾಲದಲ್ಲಿದ್ದ ಪ್ರಾಚೀನ ಭಾರತೀಯ ಸಮಾಜದ ಚಿತ್ರಣ ಎಂದು ತಿಳಿಯಬೇಕು. ಇದಕ್ಕೆ ಬದಲಾಗಿ ಅದು ಪ್ರತಿಬಿಂಬಿಸಬೇಕಾಗಿದ್ದ ಕಾಲದ ಚಿತ್ರಣ ಎಂದು ತಿಳಿಯಬಾರದು.

ಭೂತಕಾಲದಲ್ಲಿ ಘಟಿಸಿದ ಘಟನೆಗಳನ್ನು ನಂಬಲು ಅಥವಾ ಒಪ್ಪಿಕೊಳ್ಳಲು ಎರಡು ಮಾರ್ಗಗಳಿವೆ. ಒಂದು ನಿರೂಪಿತವಾದ ಘಟನೆಗಳನ್ನು ಸ್ವತಃ ನಿರೂಪಕನೇ ಕಂಡಿರಬೇಕು ಅಥವಾ ಕಂಡವರಿಂದ ಕೇಳಿ ತಿಳಿದಿರಬೇಕು. ಇವು ಸಮಕಾಲೀನ ಅಥವಾ ಸಮೀಪ ಕಾಲೀನ ಚಿತ್ರಣಗಳು. ಇವು ಅತ್ಯಂತ ವಿಶ್ವಾಸಾರ್ಹವಾಗಿದ್ದು ನಿಜವಾದ ಇತಿಹಾಸದ ಬೆನ್ನೆಲುಬಾಗಿರುತ್ತವೆ. ನಿರೂಪಕನು ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ವರದಿಮಾಡಿರುವನೆಂಬುದನ್ನು ‘ಆಂತರಿಕ ಸಾಕ್ಷ್ಯ’ಗಳ ಮೂಲಕ ಪರಿಶೀಲಿಸಬೇಕು.

ನಮ್ಮ ಎರಡು ಮಹಾಕಾವ್ಯಗಳು ಮತ್ತು ಪುರಾಣಗಳನ್ನು ಕೆಲವೊಮ್ಮೆ ‘ಇತಿಹಾಸ’ ಎಂದು ಕರೆಯಲಾಗುತ್ತದೆ. ಇವು ಏನು ನಡೆದಿತ್ತು ಎಂಬುದನ್ನು ವರ್ಣಿಸುತ್ತವೆ. ಇತ್+ಹಾ+ಅಸ. ಆದರೆ ವ್ಯಾಸನು ಮಹಾಭಾರತ ಮತ್ತು ಪುರಾಣಗಳನ್ನು ಆಗ ರೂಢಿಯಲ್ಲಿದ್ದ ಸಾಹಿತ್ಯ ರಾಶಿಯಿಂದ ಸಂಗ್ರಹಿಸಿ ಅಚ್ಚುಕಟ್ಟಾದ ರೂಪಕೊಟ್ಟನೆಂದು ನಮ್ಮ ಭಾರತೀಯ ಪರಂಪರೆಯಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ.

ರಾಮಾಯಣವಾದರೋ ವಾಲ್ಮೀಕಿ ಎಂಬ ಓರ್ವ ಕೃತಿಕಾರನ ಕೃತಿ. ವಾಲ್ಮೀಕಿಯು ರಾಮನ ಸಮಕಾಲೀನನೆಂದು ನಂಬಲಾಗಿದೆಯಲ್ಲದೆ ಬಾಲ ಕಾಂಡದಲ್ಲಿ ಹೀಗೆ ಬಣ್ಣಿಸಲಾಗಿದೆ. ವಾಲ್ಮೀಕಿ ವ್ಯಾಸನಂತಲ್ಲ. ಆತ ಆದಿಕವಿ ಎಂದು ಜನಜನಿತವಾಗಿದ್ದಾನೆ. ಓರ್ವ ಕವಿಯಾಗಿ ಆತ ಸಾಮಾನ್ಯವಾಗಿ ಎಲ್ಲ ಕವಿಗಳೂ ಮಾಡುವಂತೆ, ರಾಮನ ಜೀವನವನ್ನು ತನ್ನದೇ ರೀತಿಯಲ್ಲಿ ಅರ್ಥೈಸಿಕೊಳ್ಳುವ ಸ್ವಾತಂತ್ರ್ಯವಹಿಸಿದ್ದಾನೆ.

ರಾಮಾಯಣವು ಮೂಲತಃ ಒಬ್ಬನೆ ಕವಿಯ ಕೃತಿಯಾದರೂ ಕಾಲಾಂತರದಲ್ಲಿ ಅದು ವಿಶಾಲ ಆಲದಂತೆ ಬೆಳೆದಿದೆ ಎಂದು ಈಗಾಗಲೇ ಅನೇಕ ವಿದ್ವಾಂಸರು ನಿರ್ಣಯಿಸಿದ್ದಾರೆ. ಈಗ ರಾಮಾಯಣದ ‘ವಿಮರ್ಶಾತ್ಮಕ ಆವೃತ್ತಿ’ಯ ಸಂಪಾದಕರು ಕೂಡ ಇದೇ ನಿರ್ಣಯಕ್ಕೆ ಬಂದಿದ್ದಾರೆ. ಈ ವೃಕ್ಷಕ್ಕೆ ಉತ್ತರ, ದಕ್ಷಿಣ ಎಂಬ ಎರಡು ಪರಿಷ್ಕರಣ ಶಾಖೆಗಳಿವೆ. ಪ್ರತಿಯೊಂದು ಶಾಖೆಗೂ ಹಲವಾರು ಉಪಶಾಖೆಗಳಿವೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಈ ಎರಡು ಶಾಖೆಗಳು ಪ್ರತಿನಿಧಿಸುವ ರಾಮಾಯಣದ ಕಾಲ ಕ್ರಿ.ಪೂ.೪೦೦ ರಿಂದ ಕ್ರಿ.ಶ.೨೦೦ರ ನಡುವೆ ಇರಬಹುದೆಂದು ಭಾಷಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮುಂತಾದ ಅಧ್ಯಯನಗಳು ಶ್ರುತಪಡಿಸಿವೆ. ಈ ಅಧ್ಯಯನಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಥಾ ಬೆಳವಣಿಗೆಯ ಗತಿಯನ್ನು ಗುರುತಿಸಿವೆ. ಈ ಬೆಳವಣಿಗೆ ಮುಖ್ಯವಾಗಿ ಈ ವಿವಿಧ ಹಂತಗಳಲ್ಲಾಗಿದೆ:

ಮೊದಲಿಗೆ ಅಯೋಧ್ಯೆ, ಕಿಷ್ಕಿಂಧೆ ಹಾಗೂ ಲಂಕೆಯ ಸುತ್ತ ಹೆಣೆದ ಹಾಡುಗಬ್ಬಗಳಿದ್ದವು. ಎರಡನೆಯದಾಗಿ, ಕವಿ ವಾಲ್ಮೀಕಿ ಅವೆಲ್ಲವನ್ನೂ ಒಟ್ಟುಗೂಡಿಸಿ ೧೨,೦೦೦ ಶ್ಲೋಕಗಳ ಕಾವ್ಯ ರಚನೆ ಮಾಡಿದ. ಮೂರನೆಯದಾಗಿ, ಮೂಲದಲ್ಲಿ ಅಧ್ಯಾಯಗಳಾಗಿದ್ದ ಈ ಕಾವ್ಯ ಮತ್ತೆ ವಿವಿಧ ಛಂದೋ ರಚನೆಗಳನ್ನೊಳಗೊಂಡ ಆರು ಕಾಂಡಗಳಾಗಿ ವಿಂಗಡಿಸಲ್ಪಟ್ಟಿತ್ತು. ನಾಲ್ಕನೆಯದಾಗಿ, ಮೂಲ ಪಠ್ಯವನ್ನು ಪರಿಷ್ಕರಿಸಲಾಯಿತಲ್ಲದೆ ಭೌಗೋಳಿಕವಾದ ಮತ್ತು ಅತಿಮಾನುಷವಾದ ಪ್ರಕ್ಷೇಪಗಳು ಕಾಣಿಸಿಕೊಂಡವು. ಅಂತಿಮವಾಗಿ ಬಾಲಕಾಂಡದ ಐತಿಹ್ಯ ಹಾಗೂ ಇಡಿ ಉತ್ತರ ಕಾಂಡವನ್ನು ಈ ಮಹಾಕಾವ್ಯಕ್ಕೆ ಸೇರಿಸಲಾಯಿತು. ಇದಕ್ಕೆ ಬ್ರಾಹ್ಮಣ್ಯದ ಸ್ವಭಾವವೇ ಕಾರಣವೆನ್ನಬಹುದು. ಕಾವ್ಯ ಒಳಗೊಂಡಿರುವ ವಸ್ತುವಿನ ಹೊಸ ಅನುಕ್ರಮಣಿಕೆಯ ಜೊತೆಗೆ ಕಾವ್ಯಾರಂಭವನ್ನು ಕುರಿತ ದೈವೀಸ್ಫೂರ್ತಿಯ ಕಾಲ್ಪನಿಕ ಚಿತ್ರಣವೂ ಸೇರಿಕೊಂಡಿತು. ಇದಾದ ಬಳಿಕ ಅಲ್ಲಿ ಅಲ್ಲಿ ಸಣ್ಣಪುಟ್ಟ ಅಂಶಗಳನ್ನು ಸೇರಿಸಲಾಯಿತಾದರೂ ಅನಂತರದ ವ್ಯಾಖ್ಯಾನಕಾರರು ಇದನ್ನು ತಿರಸ್ಕರಿಸಿದರು. ಈ ಬೆಳವಣಿಗೆಗೆ ಸಾಕಷ್ಟು ಕಾಲ ಹಿಡಿದಿರಬೇಕು. ಈ ಎಲ್ಲ ಬದಲಾವಣೆಗಳ ಕಾಲವನ್ನು ಚಾರಿತ್ರಿಕ, ಭೌಗೋಳಿಕ, ಧಾರ್ಮಿಕ, ತಾತ್ವಿಕ, ಭಾಷಿಕ ಹಾಗೂ ಖಗೋಳಶಾಸ್ತ್ರೀಯ ಹೀಗೆ ಹಲವು ನೆಲೆಗಳಲ್ಲಿ ನಿರ್ಣಯಿಸುತ್ತಾರೆ. ಕಳೆದ ಶತಮಾನದಲ್ಲಿ ಈ ನಿಟ್ಟಿನಲ್ಲಿ ಜಾಕೋಬಿಯವರು ಮಾಡಿದ ಪ್ರಯತ್ನ ಸರ್ವಪ್ರಥಮವಾದುದು. ಅಲ್ಲಿಂದೀಚೆಗೆ ಅನೇಕ ಪಾಶ್ಚಾತ್ಯ ಮತ್ತು ಭಾರತೀಯ ವಿದ್ವಾಂಸರು ಈ ಕೆಲಸ ಮಾಡುತ್ತಲಿದ್ದಾರೆ.

ಸಂಸ್ಕೃತ ಸಾಹಿತ್ಯ ಮತ್ತು ಭಾರತಶಾಸ್ತ್ರದ ಹಳೆಯ ತಲೆಮಾರಿನ ವಿದ್ವಾಂಸರು ರಾಮಾಯಣದ ಪ್ರಥಮ ಹಂತದ (ಹಾಡುಗಬ್ಬಗಳು) ಕಾಲವನ್ನು ಕ್ರಿ.ಶ.೫೦೦ ಅಥವಾ ಬ್ರಾಹ್ಮಣಗಳ ಕಾಲಕ್ಕೆ ಕೊಂಡೊಯ್ಯುತ್ತಾರೆ. ಆದರೆ ಈ ಹಂತದ ನಿಖರವಾದ ಆರಂಭ ಯಾವಾಗ ಆಯಿತೆಂದು ಹೇಳುವುದು ಕಷ್ಟ.

ಪಿ.ವಿ. ಕಾಣೆಯವರು ರಾಮಾಯಣದ ಕೇಂದ್ರ ವಸ್ತುವು ಕ್ರಿ.ಪೂ.೩೦೦ರಷ್ಟು ಹಳೆಯದೆನ್ನುತ್ತಾರೆ. ಇಂದು ನಾವು ಕಾಣುತ್ತಿರುವ ರಾಮಾಯಣವು ಕ್ರಿ.ಶ.೨೦೦ಕ್ಕಿಂತ ಈಚಿನದಲ್ಲ.

ಎರಡನೆಯ ಹಂತವು (ಕಾವ್ಯದ ಸಾರವನ್ನು ವಾಲ್ಮೀಕಿಯು ಸೃಷ್ಟಿಸಿದ ಕಾಲ) ಕ್ರಿ.ಪೂ.೫೦೦ ರಿಂದ ಕ್ರಿ.ಪೂ. ೩೦೦ರ ನಡುವೆ ಬರುತ್ತದೆ. ಈ ನಿರ್ಣಯಕ್ಕೆ ಬರಲು ಕಾರಣ ಪಾಣಿನಿಯು ತನ್ನ ‘ಅಷ್ಟಾಧ್ಯಾಯಿ’ಯಲ್ಲಿ ಕೋಸಲ, ಕೌಸಲ್ಯ, ಕೇಕೆಯ, ಕೈಕೇಯ ಮತ್ತು ಭರತನ ಹೆಸರುಗಳನ್ನು ಬಿಟ್ಟರೆ ಬೇರೆ ಯಾವ ಹೆಸರುಗಳನ್ನೂ ಹೇಳುವುದಿಲ್ಲ. ಸಾಹಿತ್ಯಕ ಸಾಕ್ಷ್ಯಗಳನ್ನು ಆಧರಿಸಿದ ಈ ಅನುಮಾನವು ಬಹಳ ಮುಖ್ಯವಾದುದು. ಇದನ್ನು ಪುರಾತತ್ವಶಾಸ್ತ್ರವು ಹೇಗೆ ಬೆಂಬಲಿಸುವುದೆಂದು ಮುಂದೆ ನೋಡೋಣ.

ಆನಂದ ಗುರುಗೆ ಅವರ ಪ್ರಕಾರ ಮೂರನೆಯ ಹಂತವು ಕ್ರಿ.ಪೂ.೩೦೦ರಿಂದ ಕ್ರಿ.ಶ.೧೦೦ರ ನಡುವೆ ಕಾಣಿಸಿಕೊಳ್ಳುತ್ತದೆ. ಈ ಕಾಲದಲ್ಲೇ ಮಹಾಕಾವ್ಯದ ಶೈಲಿಯು ಕಾವ್ಯದ ಮೇಲೆ ಪರಿಣಾಮ ಬೀರಿರಬೇಕು. ರಾಮಾಯಣದಲ್ಲಿ ಬರುವ ಕಾವ್ಯಾಲಂಕಾರಗಳು ಮತ್ತು ಪ್ರತಿಮೆಗಳು ರುದ್ರ ಧಾಮನನ ಗಿರ‍್ನಾರ್ ಶಾಸನ (ಕ್ರಿ.ಶ.೧೫೦)ಕ್ಕೂ ಮೊದಲಿನದಿರಬೇಕು; ಮೇಲಾಗಿ ಅಶ್ವಘೋಷನು ತನ್ನ ಬುದ್ಧಚರಿತ ಹಾಗೂ ಸೌಂದರಾನಂದ ಕಾವ್ಯದಲ್ಲಿ ಇದನ್ನು ಉಪಯೋಗಿಸಿರುವನೆಂದೂ ಸೂಚಿಸಲಾಗಿದೆ. ಕೊನೆಯಲ್ಲಿ ಸೇರಿಸಲಾದ ಶ್ಲೋಕಗಳ ಛಂದಸ್ಸು ಅಶ್ವಘೋಷನ ಕಾಲಕ್ಕೂ ಹಿಂದಿನದೆಂದು ಹೇಳಲಾಗಿದೆ.

ಕ್ರಿಸ್ತಪೂರ್ವ ಯುಗಕ್ಕೆ ಮೊದಲು ಅಷ್ಟೇನೂ ಪರಿಚಿತವಾಗಿರದ ಪ್ರಪಂಚದ ಜ್ಞಾನ ಈ ಹಂತದಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತದೆ. ಅನಂತರದ ಸ್ಮೃತಿ ಸಾಹಿತ್ಯಕ್ಕೆ ಸನಿಹವಾದ ನೀತಿ ವ್ಯಕ್ತವಾಗುತ್ತದೆ. ಅತಿಮಾನುಷವಾದ ಅನೇಕ ಅಂಶಗಳು ರಾಮಾಯಣದಲ್ಲಿ ಸೇರಿಕೊಂಡವು ಎನ್ನಲಾಗಿದೆ. ಆದರೆ ಸಿ.ಬಕೆ ಅವರ ತೀರ್ಮಾನ ಇಲ್ಲಿ ಮಹತ್ವಪೂರ್ಣ ವೆನಿಸುತ್ತದೆ. ಈ ಮೂರೂ ಪರಿಷ್ಕರಣಗಳ ವಸ್ತುವನ್ನು ತೌಲನಿಕವಾಗಿ ಅಧ್ಯಯನ ಮಾಡಿದ ಅವರು ಶ್ಲೋಕಗಳ ಸಂಖ್ಯೆ ಇತ್ಯಾದಿಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದರೂ ನಿರೂಪಣೆಯಲ್ಲಿ ಮಾತ್ರ ಏನೆಂದೂ ಬದಲಾವಣೆಯಿಲ್ಲ ಎಂಬ ನಿರ್ಣಯಕ್ಕೆ ಬರುತ್ತಾರೆ.

ನಮ್ಮ ಅಧ್ಯಯನದ ದೃಷ್ಟಿಯಿಂದ ಈ ನಿರ್ಣಯ ಬಹಳ ಮುಖ್ಯವಾದುದು. ಏಕೆಂದರೆ ರಾಮಾಯಣದ ಮುಖ್ಯ ಕಥೆಯ ಪ್ರಾಚೀನತೆಯ ಕುರಿತು ಇತ್ಯಾತ್ಮಕವಾಗಿ ಹೇಳಲು ಇದು ನಮ್ಮ ನೆರವಿಗೆ ಬರುತ್ತದೆ. ಮೇಲಾಗಿ ರಾಜಕುಮಾರರ ಜನನ ದಿನ. ಅರಣ್ಯಕಾಂಡದಲ್ಲಿ ವರ್ಣಿತವಾದ ರಾಮನ ದೈಶಕ್ತಿ, ರಾವಣನ ಅರಮನೆ, ಪುಷ್ಪಕ ವಿಮಾನ, ಹಾಗೂ ಚೈತ್ಯ ಪ್ರಾಸಾದದ ನಿರ್ನಾಮ ಮುಂತಾದ ವಿವಿಧ ವಿವರಗಳ ಪ್ರಕ್ಷಿಪ್ತತೆಯ ಕಾಲವನ್ನು ನಿರ್ಣಯಿಸಲು ಇದು ಸಹಾಯಕ.

ಇದೇ ರೀತಿ ಬಾಲಕಾಂಡವನ್ನೂ ರಾಮಾಯಣದ ಎರಡನೆಯ ಹಾಗೂ ಮೂರನೆಯ ಹಂತದ ಭಾಗವೆಂದು ಒಪ್ಪಿಕೊಳ್ಳಲಾಗಿದೆ. ಉತ್ತರಕಾಂಡ ಅದರಲ್ಲೂ ಮುಖ್ಯವಾಗಿ ರಾಮನು ವಿಷ್ಣುವಿನ ಅವತಾರವೆಂಬ ಪ್ರಸ್ತಾಪವಿರುವ ಭಾಗಗಳನ್ನು ರಾಮಾಯಣದ ನಾಲ್ಕನೆಯ ಹಂತಕ್ಕೆ ಸೇರಿದ್ದೆಂದು ನಂಬಲಾಗಿದೆ.

ಈ ಎಲ್ಲ ಪ್ರಶ್ನೆಗಳನ್ನು ಮತ್ತೊಮ್ಮೆ ಪಠ್ಯ ವಿಮರ್ಶೆ ಹಾಗೂ ‘ಉನ್ನತ ವಿಮರ್ಶೆ’ಯ ದೃಷ್ಟಿಯಿಂದ ಪರಿಶೀಲಿಸಬೇಕು. ರಾಮನು ಬಳಸುವ ದೈಅಸ್ತ್ರಗಳ ಉಲ್ಲೇಖವಿರುವ ಶ್ಲೋಕಗಳನ್ನು ರಾಮನು ಅವತಾರಪುರುಷನೆಂದು ಹೇಳುವ ಶ್ಲೋಕಗಳಿಂದ ಪ್ರತ್ಯೇಕಿಸಿ ನೋಡಬೇಕು.

ರಾಮಾಯಣದ ಇಂಥ ಒಂದು ಅಧ್ಯಯನ ಈವರೆಗೆ ಆದಂತಿಲ್ಲ. ವಾಲ್ಮೀಕಿಯು ಮೊದಲು ರಾಮಾಯಣವನ್ನು ಬರೆಯಲು ಯೋಚಿಸಿದಾಗ, ರಾಮ ಲಕ್ಷ್ಮಣರ ಅಸಾಧಾರಣವಾದ ಅಸಾಮಾನ್ಯವಾದ ಸಾಧನೆಗಳು ಅವನ ಕಣ್ಮುಂದೆ ನಿಂದಿರಬೇಕು. ಇವು ನಿಜಕ್ಕೂ ವೀರಯುಗಕ್ಕೆ ಸಲ್ಲುವ ಸಂಗತಿಗಳು. ಅನಂತರ ರಾಮನ ಅಸಾಧಾರಣ ವ್ಯಕ್ತಿತ್ವದ ಬಗೆಗೆ ವ್ಯಾಖ್ಯಾನ ಆರಂಭಗೊಂಡಿತು. ಇದರ ಪರಿಣಾಮವೆಂಬಂತೆ ರಾಮನನ್ನು ವಿಷ್ಣುವಿನ ಅವತಾರವೆಂದು ಭಾವಿಸುವ ಸ್ಥಿತಿ ಉದ್ಭವಿಸಿತು.

ಹಾಗಿದ್ದರೆ ರಾಮಾಯಣದ ರಚನೆಯ ಸಂಭಾವ್ಯ ದಿನಾಂಕ ಅಥವಾ ಕಾಲ ಯಾವುದು? ವಿಮರ್ಶಾತ್ಮಕ ಆವೃತ್ತಿಯು ಇದಕ್ಕಿಂತ ಎಷ್ಟು ಭಿನ್ನವಾಗಿದೆ? ಎರಡನೆಯ ಪ್ರಶ್ನೆಗೆ ಈ ಅಧ್ಯಯನದ ಕೊನೆಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದು. ಸದಕ್ಕೆ, ಪಿ.ಸಿ.ಸೇನ್‌ಗುಪ್ತ ಅವರ ಅಭಿಪ್ರಾಯವನ್ನು ಉಲ್ಲೇಖಿಸಬಯಸುತ್ತೇನೆ. ಅವರ ಅಭಿಪ್ರಾಯದಂತೆ ರಾಮಾಯಣದ ಕವಿ ಅಥವಾ ಅದರ ಅಂತಿಮ ಪರಿಷ್ಕರಣಕಾರನು ಕ್ರಿ.ಶ.೪೩೮ರಲ್ಲಿ ಅಂದರೆ ಕಾಳಿದಾಸನಿಗಿಂತ ಒಂದು ನೂರು ವರ್ಷಗಳಷ್ಟು ಹಿಂದೆ ಬದುಕಿರಬೇಕು. ಕೆಲವೊಂದು ಗ್ರಹಗತಿಗಳ ಆಧಾರದಿಂದ ಇಷ್ಟೊಂದು ನಿಖರವಾಗಿ ದಿನಾಂಕವನ್ನು ಸೂಚಿಸುವುದು ಅವರಿಗೆ ಸಾಧ್ಯವಾಗಿದೆಯಂತೆ. ರಾಮನು ಬುದ್ಧನ ನಂತರ ಬಂದವನೆಂದು ಸೇನ್‌ಗುಪ್ತರು ಭಾವಿಸುತ್ತಾರೆ. ಏಕೆಂದರೆ ರಾಮಾಯಣದಲ್ಲೇ ಬುದ್ಧ, ತಥಾಗತ, ಭಿಕ್ಷು, ಶ್ರಮಣ ಹಾಗೂ ಚೈತ್ಯಪ್ರಾಸಾದ ಮುಂತಾಗಿ ಬುದ್ಧನನ್ನು ಕುರಿತು ಉಲ್ಲೇಖಗಳಿವೆ.

ಈ ದೃಷ್ಟಿಕೋನಗಳನ್ನು ಬೇರೊಂದು ಸಂದರ್ಭದಲ್ಲಿ ವಿವರವಾಗಿ ಪರಿಶೀಲಿಸಿ ಅವಕ್ಕೆ ಪುರಾತತ್ವಶಾಸ್ತ್ರೀಯ ಆಧಾರಗಳಿವೆಯೆ ಎಂಬುದನ್ನು ಕಂಡುಕೊಳ್ಳಬೇಕು. ಈ ವಿವರಗಳು ಬೆಳವಣಿಗೆಯ ಎರಡು ಹಂತಗಳನ್ನು ಸೂಚಿಸುತ್ತವೆ. ಕ್ರಿ.ಪೂ.೩ನೆ ಶತಮಾನ ಹಾಗೂ ಕ್ರಿ.ಪೂ. ಒಂದನೆ ಶತಮಾನದ ನಡುವೆ ಒಂದು ಬೆಳವಣಿಗೆ ಆಗಿದ್ದರೆ ಇನ್ನೊಂದು ಅನಂತರದ ಕಾಲಘಟ್ಟದಲ್ಲಿ ಆಗಿರಬೇಕು.

ಟಿ.ಮೈಕಲ್‌ಸನ್.ಎನ್.ಎಮ್.ಸೇನ್ ಹಾಗೂ ಇತರರು ಮಾಡಿರುವ ಭಾಷಿಕ ವಿಶ್ಲೇಷಣೆಯ ಮೂಲಕ ತಿಳಿದುಬರುವ ಸಂಗತಿಯೆಂದರೆ ದಾಕ್ಷಿಣಾತ್ಯ ಆವೃತ್ತಿಗಳಲ್ಲಿ ವ್ಯಾಕರಣ ರೀತ್ಯಾ ಅನೇಕ ಹಳೆಯ ರೂಪಗಳಿವೆ. ಇವು ಕ್ರಿ.ಪೂ.೫ನೆ ಶತಮಾನದ ಸುಮಾರಿಗೆ ಇದ್ದ ಪಾಣಿನಿಯ ವ್ಯಾಕರಣ ಗ್ರಂಥದಲ್ಲಿ ಕಂಡುಬರುವುದಿಲ್ಲ. ಈ ಪ್ರಾಚೀನ ರೂಪಕಗಳು ಔತ್ತರೇಯ ಪರಿಷ್ಕರಣಗಳಲ್ಲಿ ಇಲ್ಲ.

ರಾಮಾಯಣವನ್ನು ‘ಸಂಸ್ಕೃತೀಕರಿಸುವ’ ಅಥವಾ ಪರಿಷ್ಕರಿಸುವ ಈ ಕ್ರಮಕ್ಕೆ ಒಂದು ಹಿನ್ನೆಲೆ ಇದೆ. ಉತ್ತರದಲ್ಲಿ ಸಂಸ್ಕೃತವು ಜೀವಂತ ಭಾಷೆಯಾಗಿತ್ತು. ವಾಲ್ಮೀಕಿ ರಚಿಸಿದ ಮೂಲ ಕಾವ್ಯದ ಪ್ರಾಚೀನ ಭಾಷಾ ರೂಪಗಳನ್ನು ಓದುಗರು, ಕೇಳುಗರು, ಲೇಖಕರು, ಸೂತರು ಹಾಗೂ ಕಥೆಗಾರರು ಬದಲಿಸುವ ಸ್ವಾತಂತ್ರ್ಯವಹಿಸಿದರು. ಈ ಬದಲಾವಣೆಗಳಿಂದ ಮತ್ತು ಕಥೆ ನಡೆದ ಸ್ಥಳದಿಂದ ಸಾಕಷ್ಟು ದೂರದಲ್ಲಿದ್ದ ದಕ್ಷಿಣದವರು ಬಹಳಷ್ಟು ಮಟ್ಟಿಗೆ ಮೂಲ ಭಾಷೆಯನ್ನೇ ಕಾಪಾಡಿಕೊಂಡು ಬಂದರು. ದಕ್ಷಿಣ ಭಾರತದ ಮೂರು ಮುಖ್ಯ ಆವೃತ್ತಿಗಳಲ್ಲಿ ಸರ್ಗಗಳು ಹಾಗೂ ಶ್ಲೋಕಗಳ ಸಂಖ್ಯೆ, ಭಾಷೆ ಮತ್ತು ವಸ್ತುವಿನ ದೃಷ್ಟಿಯಿಂದ ಗಣನೀಯವಾದ ಏಕರೂಪತೆ ಕಂಡುಬಂದಿದೆ.

ಹೀಗಾಗಿ ರಾಮಾಯಣದ ವಿಮರ್ಶಾತ್ಮಕ ಆವೃತ್ತಿಯು ಬಹುಮಟ್ಟಿಗೆ ದಕ್ಷಿಣ ಭಾರತದ ಪರಿಷ್ಕರಣವನ್ನೇ ಅವಲಂಬಿಸಿದೆ. ಆದರೆ ವಿಮರ್ಶಾತ್ಮಕ ಆವೃತ್ತಿಯು ದಾಕ್ಷಿಣಾತ್ಯ ಆವೃತ್ತಿಯ ಕುರುಡು ಪ್ರತಿಯಾಗದಂತೆ ನೋಡಿಕೊಳ್ಳಲಾಗಿದೆ. ದಾಕ್ಷಿಣಾತ್ಯ ಆವೃತ್ತಿಯು ಅತ್ಯಂತ ಪ್ರಾಚೀನವೆಂದು ಸಾರ್ವತ್ರಿಕ ಮನ್ನಣೆ ಗಳಿಸಿದೆ. ಇದನ್ನು ಒಂದು ಶತಮಾನದ ಕೆಳಗೆ ಮೊದಲು ಸಾರಿದವರು ಜಾಕೋಬಿಯವರು. ಎನ್.ಎಮ್.ಸೇನ್‌ರವರು ನೂರಾರು ಹಸ್ತಪ್ರತಿಗಳನ್ನು ಸಂಗ್ರಹಿಸಿ ಭಾಷಿಕ ವಿಶ್ಲೆಷಣೆಗೆ ಒಳಪಡಿಸಿ ಇದನ್ನು ರುಜುವಾತು ಪಡಿಸಿದ್ದಾರೆ. ಇಷ್ಟಾದರೂ ಇದು ಕ್ರಿ.ಶ.೧೫ನೆ ಶತಮಾನದಲ್ಲಿ ನಡೆದ ಘಟನೆ ಮತ್ತು ಸಂಗತಿಗಳನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ.

ಈ ಬಗೆಯ ಅಡಕಗಳನ್ನು, ಪ್ರಕ್ಷಿಪ್ತ ಭಾಗಗಳನ್ನು ಅಥವಾ ಘಟನೆಗಳ ಪರಿಷ್ಕರಣವನ್ನು ನಾವು ಹೇಗೆ ಕಂಡು ಹುಡುಕುತ್ತೇವೆ?

ಕಳೆದ ಶತಮಾನದಿಂದೀಚೆಗೆ ಹಲವಾರು ಪ್ರಯತ್ನಗಳು ಈ ದಿಸೆಯಲ್ಲಾಗಿವೆ. ವೆಬರ್ ಮತ್ತು ಜಾಕೋಬಿಯವರು ಹಾಗೂ ಜರ್ಮನ್ ವಿದ್ವಾಂಸರು ಐತಿಹಾಸಿಕ ಮತ್ತು ಭಾಷಿಕ ವಿಧಾನಗಳನ್ನು ಅಳವಡಿಸಿ ನೋಡಿದರು. ಬಳಿಕ ಉಳಿದ ಪಾಶ್ಚಾತ್ಯ ಹಾಗೂ ಭಾರತೀಯ ವಿದ್ವಾಂಸರು ಈ ಹಾದಿಯನ್ನು ತುಳಿದರು.

ವಿಮರ್ಶಾತ್ಮಕ ಆವೃತ್ತಿಯ ನಿರ್ಮಾಣದ ಬಗೆಗೆ ಈಗಾಗಲೆ ಪ್ರಸ್ತಾಪಿಸಲಾಗಿದೆ. ಇದು ವೆಬರ್ ಮತ್ತು ಜಾಕೋಬಿಯವರು ಮೊದಲಿಗೆ ಸೂಚಿಸಿದ, ನಂತರ ರೊಬೆನ್ ಹಾಗೂ ಬಕೆ ಅವರು ಕೈಗೊಂಡ ಅನ್ವೇಷಣೆಯ ಮುಗಿತಾಯ. ಹಲವಾರು ಆವೃತ್ತಿಗಳನ್ನು ಒಳಗೊಂಡ ಹಳೆಯ ಕೃತಿಯೊಂದರ ಸಂಶೋಧಿತ ಆವೃತ್ತಿಯ ತಯಾರಿಯು ಹಲವಾರು ಬಗೆಯ ಅಧ್ಯಯನಗಳಿಗೆ ಅಡಿಪಾಯ. ಒಮ್ಮೆ ಅಡಿಪಾಯ ಸಿದ್ಧವಾದರೆ ಮತ್ತೆ ಕಟ್ಟಡ ಕಟ್ಟಬಹುದು. ಈ ಬಗೆಯ ಅಧ್ಯಯನವು ಈ ಮುಂದೆ ಹೇಳುವ ರೂಪಗಳನ್ನು ತಳೆಯಬಹುದು.

೧. ಭಾಷಿಕ ೨. ಐತಿಹಾಸಿಕ ೩. ಪುರಾತತ್ವಶಾಸ್ತ್ರೀಯ ೪. ಭೌಗೋಳಿಕ ಹಾಗೂ ಜನಾಂಗಿಕ ೫.ತತ್ವಶಾಸ್ತ್ರೀಯ ಹಾಗೂ ಧಾರ್ಮಿಕ ೬. ಸಸ್ಯಶಾಸ್ತ್ರೀಯ.

ಪ್ರಾಯಶಃ ಇವೆಲ್ಲವನ್ನೂ ಉನ್ನತ ವಿಮರ್ಶೆ ಒಳಗೊಳ್ಳುತ್ತದೆ. ತೌಲನಿಕ ಅಧ್ಯಯನದ ಮೂಲಕ ಹೀಗೆ ಪ್ರಶ್ನಿಸಬಹುದು.

೧. ಕೆಲವೊಂದು ವ್ಯಾಕರಣ ರೂಪಗಳ ಅಥವಾ ಅಭಿವ್ಯಕ್ತಿ ಕ್ರಮಗಳ ಅಸ್ತಿತ್ವ ಹಾಗೂ ಅವುಗಳ ಔಚಿತ್ಯ.

೨. ಕೆಲವೊಂದು ರಾಜರ, ವ್ಯಕ್ತಿಗಳ, ಜನಾಂಗಗಳ ಅಸ್ತಿತ್ವ.

೩. ಕೆಲವೊಂದು ಸ್ಥಳಗಳು ಹಾಗೂ ಅವುಗಳ ನಿವೇಶನಗಳ ಅಸ್ತಿತ್ವ.

೪. ವಸ್ತುಗಳು, ಪದಾರ್ಥಗಳು, ನಗರಗಳು, ಸ್ಮಾರಕಗಳು, ವಿಗ್ರಹಗಳು, ಆಭರಣಗಳು ಹಾಗೂ ಅವುಗಳಿಗೆ ಬಳಸುತ್ತಿದ್ದ ಕಚ್ಚಾ ಪದಾರ್ಥಗಳು.

೫. ಕೆಲವೊಂದು ವಿಚಾರ-ಪರಿಕಲ್ಪನೆಗಳ ಅಸ್ತಿತ್ವ.

೬. ಆಯಾ ಪ್ರದೇಶಗಳಲ್ಲಿರುವ ನಿರ್ದಿಷ್ಟ ಜಾತಿಯ ಮರಗಿಡಗಳು, ಹೂವು ಹಣ್ಣುಗಳ ಪ್ರಸ್ತಾಪ; ಆಯಾ ಕಾಲದ ಚರ್ಚೆಯ ಸಂದರ್ಭದಲ್ಲಿ ಉಲ್ಲೇಖಗೊಂಡ ಪ್ರಾಣಿ ಪಕ್ಷಿಗಳ ವಿಚಾರ.

ಈ ದೃಷ್ಟಿಕೋನಗಳಲ್ಲಿ ಪ್ರತಿಯೊಂದನ್ನು ಈ ಹಿಂದೆಯೇ ಬಳಸಿಕೊಳ್ಳಲಾಗಿತ್ತು. ಆದರೆ ಒಂದು ವಿಮರ್ಶಾತ್ಮಕ ಆವೃತ್ತಿ ಇಲ್ಲದೇ ಇದ್ದುದರಿಂದಾಗಿ ಈ ಪ್ರಯತ್ನಗಳಿಗೆ ಅಡಚಣೆ ಉಂಟಾಯಿತು. ವಾಸ್ತವವಾಗಿ ವಿಂಟರ್‌ನಿಟ್ಜ್ ವಿದ್ವಾಂಸರು ಈ ಮೂರು ಆವೃತ್ತಿಗಳಿಗೆ ಒಂದಲ್ಲ ಹಲವು ವಿಮರ್ಶಾತ್ಮಕ ಆವೃತ್ತಿಗಳಿರಬೇಕೆಂದು ಬಯಸಿದ್ದರು. ಈ ಕ್ಷೇತ್ರದಲ್ಲಿ ನಡೆಸಲಾದ ಹಲವಾರು ಸಂಶೋಧನೆಗಳಿಂದಾಗಿ ಸದ್ಯ ಇರುವ ರಾಮಾಯಣ ಕಾವ್ಯದ ರಚನೆಯ ಸಂಭಾವ್ಯ ಕಾಲವ್ಯಾಪ್ತಿಯನ್ನು ನಿಗದಿಗೊಳಿಸಲು ಮತ್ತು ಅದರ ಬೆಳವಣಿಗೆಯ ವಿವಿಧ ಘಟ್ಟಗಳನ್ನು ಗುರುತಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.

ಈ ಎಲ್ಲ ಸಂಶೋಧನೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಮಾತ್ರ ಪುರಾತತ್ವ ಶಾಸ್ತ್ರದ ನೆರವನ್ನು ಪಡೆಯಲಾಗಿದೆ. ಎದ್ದು ಕಾಣುವ ಈ ನಿರ್ಲಕ್ಷ್ಯಕ್ಕೆ ಕಾರಣಗಳು ಹಲವು. ಮುಖ್ಯ ಕಾರಣವೆಂದರೆ ನಮ್ಮಲ್ಲಿ ಅನೇಕರಿಗೆ ಪುರಾತತ್ವಶಾಸ್ತ್ರದ ಪೂರ್ಣ ಪರಿಚಯವಿಲ್ಲ. ತಡವಾಗಿಯಾದರೂ ಈಗ ಈ ಶಾಸ್ತ್ರದ ವ್ಯಾಪ್ತಿ ನಿಚ್ಚಳಗೊಳ್ಳುತ್ತಿದೆ. ರಾಮಾಯಣದಲ್ಲಿ ನಿರೂಪಿತವಾಗಿರುವ ನಗರಗಳು ಹಾಗೂ ವಸ್ತುಗಳ ಪ್ರಾಚೀನತೆಯ ಕುರಿತು ನಮಗೆ ವಿಶ್ವಾಸಾರ್ಹ ಮಾಹಿತಿ ಹೆಚ್ಚೇನೂ ದೊರಕಲಿಲ್ಲ. ಇದಕ್ಕೆ ಕಾರಣ ರಾಮಾಯಣದಲ್ಲಿ ಉಲ್ಲೇಖಗೊಂಡ ಘಟನೆಗಳು ನಡೆದ ಸ್ಥಳಗಳೆನಿಸಿದ ಉತ್ತರ ಪ್ರದೇಶ, ಬಿಹಾರ ಹಾಗೂ ದಕ್ಷಿಣ ಭಾರತದಲ್ಲಿ ಕೆಲವು ವರ್ಷಗಳಿಂದೀಚೆಗಷ್ಟೆ ಉತ್ಖನನಗಳು ನಡೆದಿವೆ.

ಮೂರನೆಯದಾಗಿ ಭೂಸ್ತರಗಳನ್ನು ಪದರ ಪದರಗಳಾಗಿ ಉತ್ಖನನ ಮಾಡುವ ವಿಧಾನ ಹಾಗೂ ಕಾಲ ನಿರ್ಣಯದ ಹೊಸ ವಿಧಾನಗಳು ಬೆಳಕಿಗೆ ಬಂದಿರುವುದರಿಂದ ನಾಗ ರಾಮಾಯಣದ ಕೆಲವು ಮುಖ್ಯ ಅಖ್ಯಾನಗಳ ಕಾಲವನ್ನು ಹೆಚ್ಚು ನಿಖರವಾಗಿ ನಿರ್ಣಯಿಸುವ ಸ್ಥಿತಿಯಲ್ಲಿದ್ದೇವೆ.

ಪುರಾತತ್ವಶಾಸ್ತ್ರೀಯ ದೃಷ್ಟಿಕೋನಕ್ಕೆ ಅದರದೇ ಆದ ಮಿತಿಗಳಿವೆ. ಸ್ಮಾರಕಗಳ ಹಾಗೂ ಉತ್ಖನನದ ಮೂಲಕ ಪಡೆದ ವಸ್ತುಗಳ ಪರಿಶೀಲನೆಯ ಹೊಣೆ ಪುರಾತತ್ವಶಾಸ್ತ್ರಕ್ಕೆ ಸೇರಿದೆ. ಉತ್ಖನನಗಳು ಎಷ್ಟೇ ಯಶಸ್ವಿಯಾದರೂ ಉತ್ಖನನದಿಂದ ದೊರೆತ ವಸ್ತುಗಳು ಸಾಮಾನ್ಯವಾಗಿ ಆ ಕಾಲದ ಸಂಸ್ಕೃತಿ ಅಥವಾ ನಾಗರೀಕತೆಗೆ ಸಂಬಂಧಿಸಿದ ತೀರ ಸಣ್ಣ ಅಥವಾ ಅಮುಖ್ಯ ಅಂಶವೊಂದನ್ನು ಮಾತ್ರ ಪ್ರತಿನಿಧಿಸುತ್ತವೆ. ಭಾರತದ ಪುರಾತತ್ವಶಾಸ್ತ್ರಜ್ಞನ ಪಾಲಿಗೆ ತುತಾಂಖಮೆನಂನ ಭೂಗತ ಸಮಾಧಿಯೊಂದು ದೊರೆಯುವುದು ದುರ್ಲಭ. ಈ ಸಮಾಧಿಯ ಮೇಲಿನ ಮಣ್ಣನ್ನು ಬದಿಗೆ ಸರಿಸಿ, ಫೋಟೊ ಹೊಡೆಸಿದ ಬಳಿಕ ಅದರಿಂದ ಕ್ರಿ.ಪೂ.೧೫-೧೪ನೆ ಶತಮಾನದ ಇಜಿಪ್ಟಿನ ನಾಗರೀಕತೆಯ ಎಲ್ಲ ವಿವರಗಳು ಬೆಳಕಿಗೆ ಬಂದವು. ಇಂಥ ಸೌಲಭ್ಯ ಭಾರತೀಯ ಪುರಾತತ್ವಶಾಸ್ತ್ರಜ್ಞನಿಗೆ ದೊರೆಯದು. ಭೂಮಿಯ ಮೇಲಿರುವ ಸ್ಮಾರಕಗಳ ಬಳಕೆಯ ಅವಕಾಶಗಳು ಕಡಿಮೆ. ಏಕೆಂದರೆ ಶತಮಾನಗಳಲ್ಲಿ ನಡೆದ ಆಂತರಿಕ ಕಲಹಗಳು, ವಿದೇಶಿ ದಾಳಿಗಳು, ಪ್ರವಾಹ ಹಾಗೂ ಭೂಕಂಪಗಳ ತತ್ತರಕ್ಕೊಳಗಾಗಿ ಈಗ ಕೆಲವೇ ಕೆಲವು ಸ್ಮಾರಕಗಳು ಉಳಿದಿವೆ.

ಲಿಖಿತ ದಾಖಲೆಗಳೊಂದಿಗೆ ತುಲನೆ ಮಾಡಿ ನೋಡಿದರೆ ಪುರಾತತ್ವ ಶಾಸ್ತ್ರವು ನಮಗೆ ಗತಕಾಲದ ಬಗೆಗೆ ಹೆಚ್ಚಿನದೇನನ್ನೂ ಹೇಳಲಾರದು. ಅದರೂ ಭಾರತದಲ್ಲಿ ಇದಕ್ಕೆ ಮಹತ್ವವಿದೆ. ಏಕೆಂದರೆ ಇಲ್ಲಿರುವ ಸಮಕಾಲೀನ ದಾಖಲೆಗಳ ಪ್ರಮಾಣ ಬಲುಕಡಿಮೆ. ಲಿಖಿತ ದಾಖಲೆಗಳು ಈಚಿನ ಕಾಲಮಾನಕ್ಕೆ ಸೇರಿದವುಗಳಾಗಿರುತ್ತವೆ. ವಿಚಾರ ಮತ್ತು ವಸ್ತುಗಳು ಶತಮಾನಗಳ ಕಾಲ ಉಳಿಯುವ ಪ್ರವಹಿಸುವ ಸಾಧ್ಯತೆಯುಳ್ಳವುಗಳು. ಇದಕ್ಕೂ ಮಿಗಿಲಾಗಿ ಆಧುನಿಕ ಪುರಾತತ್ವಶಾಸ್ತ್ರದ ನೆರವಿನಿಂದ ನಮ್ಮ ಸಾಹಿತ್ಯದಲ್ಲಿ ಪ್ರಸ್ತಾಪ ಮಾಡಲಾದ ವಸ್ತುಗಳನ್ನು ನಿಖರವಾಗಿ ಗುರುತಿಸಿ ಕಾಲ ನಿರ್ಣಯದ ಉದ್ದೇಶಕ್ಕೆ ಬಳಸಿಕೊಳ್ಳಬಹುದು.

ಇಂಥ ಪುರಾತತ್ವಶಾಸ್ತ್ರೀಯ ಆಧಾರಗಳನ್ನು ಇತರ ದತ್ತಾಂಶಗಳೊಂದಿಗೆ ಉಪಯೋಗಿಸಿಕೊಂಡಾಗ ಯಾಕೆ ಮತ್ತು ಹೇಗೆ ಕೆಲವೊಂದು ಘಟನೆಗಳು ಅಥವಾ ಪ್ರಸಂಗಗಳು ರಾಮಾಯಣ ಅಥವಾ ಅಂಥದೇ ಇತರ ಕೃತಿಗಳೊಳಗೆ ನುಸುಳಿಕೊಂಡವೆಂದು ತಿಳಿಯಲು ಸಾಧ್ಯವಾಗುತ್ತದೆ. ಈ ಬಗೆಯಲ್ಲಿ ನಾವು ರಾಮಾಯಣವನ್ನು ಪರಿಶೀಲಿಸಿದಾಗ ಪಠ್ಯ ವಿಮರ್ಶೆಯ ಕಕ್ಷೆಯಿಂದ ಆಚೆಗೆ ಜಿಗಿದು ಉನ್ನತ ವಿಮರ್ಶೆಯ ಪ್ರಪಂಚವನ್ನು ಪ್ರವೇಶಿಸುತ್ತೇವೆ. ನಮಗೆ ಈವರೆಗೆ ಏನು ತಿಳಿದು ಬಂದಿದೆ ಎಂಬುದನ್ನು ಪುರಾತತ್ವಶಾಸ್ತ್ರ ಅವಂಲಬಿಸಿದೆ. ಒಂದರ್ಥದಲ್ಲಿ ಈ ಜ್ಞಾನ ತಾತ್ಕಾಲಿಕ ಸ್ವರೂಪದ್ದು. ಆದ್ದರಿಂದಲೇ ನಾವು ಅನಿರೀಕ್ಷಿತವಾದುದಕ್ಕೆ ಸಿದ್ಧವಾಗಿರಬೇಕು. ಉದಾಹರಣೆಗೆ ೪೫-೫೦ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಬೆಳಕಿಗೆ ಬಂದ ಸಿಂಧೂ ಕಣಿವೆಯ ನಾಗರೀಕತೆಯನ್ನು ತೆಗೆದುಕೊಳ್ಳಿ, ಗುದ್ದಲಿಯ ಒಂದು ಹೊಡೆತಕ್ಕೇನೇ ಭಾರತದ ಇತಿಹಾಸ ೩೦೦೦ವರ್ಷಗಳಷ್ಟು ಹಿಂದಕ್ಕೆ ಚಿಮ್ಮಿತು. ಕಳೆದ ೧೦ವರ್ಷಗಳಿಂದ ಈ ‘ಇತಿಹಾಸ ಪೂರ್ವ’ ನಾಗರೀಕತೆಗೆ ಇನ್ನೂ ಪ್ರಾಚೀನತೆ ಇದೆ ಎನ್ನಲಾಗುತ್ತಿದೆ. ವಿವರಗಳು ಎಷ್ಟೇ ಅಮೂಲ್ಯವಾಗಿರಲಿ, ಕ್ಷುದ್ರವಾಗಿರಲಿ ಆಧುನಿಕ ಪುರಾತತ್ವಶಾಸ್ತ್ರಜ್ಞನಿಗೆ ಅವು ಬೇಕು. ವಿವರಗಳೇ ಅವನ ಗ್ರಾಸ. ಆತ ಅತ್ಯುತ್ತಮ ಪತ್ತೇದಾರನಾಗಿರಬೇಕು. ಅನ್ವಯಿಕ ಪುರಾತತ್ವ ಶಾಸ್ತ್ರಕ್ಕೆ ಇತಿಮಿತಿಗಳಿಲ್ಲ. ಇದನ್ನು ರಾಮಾಯಣಕ್ಕೂ ಅನ್ವಯಿಸಿ ನೋಡಬಹುದು.

ಈ ಮಹಾಕಾವ್ಯವನ್ನು ಪುರಾತತ್ವಶಾಸ್ತ್ರೀಯ ನೆಲೆಯಲ್ಲಿ ಪರಿಶೀಲಿಸಿದ ಬಳಿಕ ಧಾರ್ವಿಕ, ರಾಜಕೀಯ, ಸಾಮಾಜಿಕ, ಆಧ್ಯಾತ್ಮಿಕ, ನೈತಿಕ ಮುಂತಾದ ವಿವಿಧ ಮುಖಗಳನ್ನು ಇತಿಹಾಸದ ಕಣ್ಣಿಂದ ನೋಡಲು ಬಯಸಿದೆ. ಹೀಗೆ ಮಾಡಲು ದೃಷ್ಟಿಕೋನದಲ್ಲಿ ಬದಲಾವಣೆ ಅಗತ್ಯವೆನಿಸಿತು. ರಾಮಾಯಣವನ್ನು ಇಡಿಯಾಗಿ ಪರಿಶೀಲಿಸುವ ಬದಲು, ಪ್ರತಿಯೊಂದು ಕಾಂಡವನ್ನು ಪ್ರತ್ಯೇಕ ಘಟಕವಾಗಿ ಅಧ್ಯಯನ ಮಾಡಿದೆ.

ಇದು ಕುತೂಹಲಕರ ಫಲಿತಾಂಶಗಳಿಗೆ ಹಾದಿ ಮಾಡಿಕೊಟ್ಟಿತು. ಹೀಗಾಗಿ ಆಡಳಿತದ ಪರಿಕಲ್ಪನೆ ಮತ್ತು ವಿಧಾನಗಳು, ಸಾಮಾಜಿಕ ಕಟ್ಟುಕಟ್ಟಳೆಗಳು ಮತ್ತು ಧಾರ್ಮಿಕ ಆಚರಣೆಗಳು ಹಾಗೂ ಕೆಲವೊಂದು ಘಟನೆಗಳ ವಿವರಗಳಲ್ಲಿರುವ ವ್ಯತ್ಯಾಸವನ್ನು ಕಂಡುಕೊಳ್ಳಲು ನನಗೆ ಸಾಧ್ಯವಾಯಿತು.

ಕಾಳಿದಾಸನ ಶಾಕುಂತಲ ನಾಟಕದ ಉಂಗುರ ಪ್ರಕರಣದಂತೆ, ಇಲ್ಲಿ ಬರುವ ಉಂಗುರ ಪ್ರಕರಣವು ಕಥೆಯ ಅಂತ್ಯ ಪರಿಣಾಮವನ್ನು ವಸ್ತುತಃ ಬದಲಾಯಿಸಿದೆ ಎಂಬುದನ್ನು ಒಪ್ಪಿಕೊಂಡರೆ-ಸುಂದರಕಾಂಡ, ಯುದ್ಧಕಾಂಡ ಮತ್ತು ಕಿಷ್ಕಿಂಧಾಕಾಂಡದ ಕೆಲವು ಭಾಗಗಳು ಮೂಲಕಥೆಗೆ ಅನಂತರ ಸೇರಿಕೊಂಡವೆಂಬ ನನ್ನ ಅಭಿಪ್ರಾಯ ಹಲವಾರು ಓದುಗರಿಗೆ ಅಘಾತಕಾರಿಯಾದೀತು. ಪ್ರಾಯಶಃ ಕ್ರಿ.ಶ.ಒಂದು, ಎರಡನೆ ಶತಮಾನದ ಕಾಲಕ್ಕೆ ಈ ಸೇರಿಕೆಗಳಾಗಿರಬೇಕು. ಇದೇ ಕಾಲದಲ್ಲಿ ಅಥವಾ ಕೊಂಚ ಅನಂತರ ಕವಿಯು ನಾಗಾರ್ಜುನಕೊಂಡ ಅಥವಾ ಅಂಥದೇ ಮತ್ತೊಂದು ಇಂಡೋರೋಮನ್ ನಗರವನ್ನು ಲಂಕೆಯ ವರ್ಣನೆಗೆ ಮಾದರಿ ಎಂದು ಬಳಸಿಕೊಂಡಿರಬೇಕು.

ಹೀಗೆ ಇಲ್ಲಿ, ಹಲವು ಬಗೆಯಲ್ಲಿ ಎಲ್ಲಾ ಪರಿಚಿತ ಮತ್ತು ಅಪರಿಚಿತ ಕಥೆಗಳನ್ನು, ದೃಶ್ಯಗಳನ್ನು ಹೊಸ ದೃಷ್ಟಿಕೋನದಿಂದ ಅತ್ಯಂತ ವಿಮರ್ಶಾತ್ಮಕವಾಗಿ ಪರಿಶೀಲಿಸಲಾಗಿದೆ.