ಪ್ರತಿಯೊಂದು ಕಾಂಡದಲ್ಲಿ ಬಂದಿರುವ ವಸ್ತು, ಕಲ್ಪನೆ, ವ್ಯಕ್ತಿಗಳು ಮತ್ತು ಸ್ಥಳಗಳ ವಿಶ್ಲೇಷಣಾತ್ಮಕ ಅಧ್ಯಯನದ ಬಳಿಕ ಇಲ್ಲಿ ರಾಮಾಯಣದ ಯುಗದ ಬಗೆಗೆ ಒಂದು ಸುಸಂಬದ್ಧವಾದ ಚಿತ್ರಣವನ್ನು ನೀಡಲು ಯತ್ನಿಸಲಾಗಿದೆ.

ಕಥೆ ಹುಟ್ಟಿಕೊಂಡದ್ದು ಮಧ್ಯಪೂರ್ವಭಾರತದ ಅಯೋಧ್ಯೆಯಲ್ಲಿ, ಇದೇ ಕಾಲಕ್ಕೆ ಗಂಗಾ ಕಣಿವೆಯಲ್ಲಿ ಮಥುರಾ, ಕೌಶಾಂಬಿ, ಕಾನ್ಯಕುಬ್ಜ, ಶ್ರಾವಸ್ಥಿ, ವೈಶಾಲಿ ಮುಂತಾದ ಪ್ರಮುಖ ನಗರಗಳು ಅಸ್ತಿತ್ವಕ್ಕೆ ಬಂದಿರಬೇಕು.

ಗಂಗೆಯ ದಕ್ಷಿಣ ಭಾಗದ ಪ್ರದೇಶ ಅರಣ್ಯಮಯವಾಗಿತ್ತಲ್ಲದೆ ಅಲ್ಲಿ ಜನವಸತಿ ಬಹಳ ಕಡಿಮೆ ಇತ್ತು. ವಿಂಧ್ಯಗಳ ಬಗೆಗೆ ತಿಳಿದಿತ್ತು. ಆದರೆ ನರ್ಮದಾ ಮತ್ತು ದೇಶದ ದಕ್ಷಿಣ ಭಾಗದ ಪರಿಚಯ ಇದ್ದಿರಲಿಲ್ಲ. ಬಾಲಕಾಂಡ ಮತ್ತು ಅರಣ್ಯಕಾಂಡದಲ್ಲಿ ಬರುವ ನದಿಗಳ ಹೆಸರುಗಳಿಂದ, ಅರಣ್ಯ ಕಾಂಡದಲ್ಲಿ ಬರುವ ವಿಂಧ್ಯದ ವಿವರವಾದ ವರ್ಣನೆಯಿಂದ, ಕಿಷ್ಕಿಂಧಾಕಾಂಡದಲ್ಲಾದ ಪ್ರಕ್ಷೇಪಗಳಿಂದ, ಸುಂದರಕಾಂಡ ಮತ್ತು ಯುದ್ಧಕಾಂಡದಲ್ಲಿ ಬರುವ ಲಂಕಾ ನಗರದ ಕಾವ್ಯಮಯ ವರ್ಣನೆಯಿಂದ ಹಾಗೂ ಉತ್ತರಕಾಂಡದಲ್ಲಿ ದಕ್ಷಿಣದ ಹೆಸರುಗಳ ಪೂರ್ಣ ಅಭಾವದಿಂದ ಮೇಲಿನ ಮಾತು ರುಜುವಾತಾಗುತ್ತದೆ. ಆದರೂ ಕಿಷ್ಕಿಂಧಾ ಕಾಂಡದಲ್ಲಿ ಬರುವ ಪ್ರಕ್ಷೇಪಗಳು ಮತ್ತು ಸುಂದರಕಾಂಡ ಹಾಗೂ ಯುದ್ಧಕಾಂಡಗಳಲ್ಲಿ ಬರುವ ವಿವರಣೆಗಳಿಂದ ಈ ಭಾಗವನ್ನು ಸೇರಿಸಿದ ಕವಿಗೆ ಲಂಕೆಯು ಗಿರಿಶಿಖರದ ಮೇಲಿತ್ತು ಅಥವಾ ಹಿಂದೂ ಸಾಗರದ ದ್ವೀಪವಾಗಿತ್ತು ಎಂಬ ಕುರಿತು ಅಸ್ಪಷ್ಟ ಕಲ್ಪನೆಯಿತ್ತು. ಈ ದ್ವೀಪವು ಸಿಲೋನ್ (ಶ್ರೀಲಂಕಾ) ಆಗಿತ್ತು.ಕ್ರಿ.ಪೂ.೪ನೆ ಶತಮಾನದಿಂದ ಕ್ರಿ.ಶ.೭ನೆ ಶತಮಾನದ ತನಕ ಶಾಸನಗಳಲ್ಲಿ ಹಾಗೂ ಸಾಹಿತ್ಯ ಕೃತಿಗಳಲ್ಲಿ ಸಿಂಹಳ ಮತ್ತು ತಾಮ್ರಪರ್ಣಿ ಎಂದು ಇದು ಹೆಸರಾಗಿತ್ತು. ಆದರೆ ಮಹಾಭಾರತ ಹಾಗೂ ಇತರ ಪುರಾಣಗಳು ಮತ್ತು ಗುಜರಾತದ ಮಹಮ್ಮದ್ ಬೇಗದ ಎಂಬ ೧೬ನೆ ಶತಮಾನದ ಮುಸ್ಲಿಂ ರಾಜನ ಹಸ್ತಪ್ರತಿಯು ಲಂಕಾ ಹಾಗೂ ಸಿಂಹಳ ಎಂಬ ಎರಡೂ ಹೆಸರುಗಳನ್ನು ಪ್ರಸ್ತಾಪಿಸುತ್ತದೆ. ಆದರೆ ರಾಮಾಯಣವು ಎಲ್ಲಿಯೂ ಈ ಹೆಸರನ್ನು ಉಲ್ಲೇಖಿಸದಿರುವುದು ಆಶ್ಚರ್ಯಕರವಾಗಿದೆ. ಶಾಸನಗಳ ಪ್ರಕಾರ ೧೦ನೆ ಶತಮಾನದಲ್ಲಿ ಈ ಎರಡೂ ಹೆಸರುಗಳಿಂದ ಗೋವಾ ಪರಿಚಿತವಾಗಿತ್ತು.

ಮುಖ್ಯ ಕಥೆಯ ಪಾತ್ರಧಾರಿಗಳಾದ ರಾಮ, ಲಕ್ಷ್ಮಣ, ಸೀತಾ, ರಾವಣ, ಸುಗ್ರೀವ, ಹನುಮಂತ ಇವರೆಲ್ಲರೂ ಮನುಷ್ಯರೇ. ಕಡೆಗೆ ಪವಾಡ ಸದೃಶ ಅಂಶಗಳನ್ನು ಶಕ್ತಿಗಳನ್ನು ಎರೆದಾಗ ಅವರು ದೈ, ರಾಕ್ಷಸೀ ಹಾಗೂ ಅತಿಮಾನುಷ ಶಕ್ತಿಗಳನ್ನು ಗಳಿಸಿದರು. ಇಲ್ಲಿ ಎರಡು ಹಂತಗಳನ್ನು ನಾವು ಸ್ಪಷ್ಚವಾಗಿ ಗಮನಿಸಬಹುದು. ರಾಮಾಯಣದ ರಚನೆಯಾದಾಗ ಕವಿಯು ರಾಮನಲ್ಲಿ ದೈವೀಶಕ್ತಿಯನ್ನು ತುಂಬುವ ನಿರ್ಧಾರವನ್ನು ಮಾಡಿರಬೇಕು. ಇದರಿಂದಾಗಿ ಮುಂದೆ ಆತ ಏಕಾಂಗಿ ರನಾಗಿ ಹಲವು ಸಾಹಸಗಳನ್ನು ಮಾಡಲು ಸಾಧ್ಯವಾಗಿರಬೇಕು. ಅಂತಿಮವಾಗಿ ರಾಮ-ಸೀತೆಯನ್ನು ಸಂಪೂರ್ಣ ದೈಸ್ಥಿತಿಗೆ ಏರಿಸಲಾಯಿತು. ಇವರೊಂದಿಗೆ ರಾಕ್ಷಸರು ಹಾಗೂ ವಾನರರಿಗೂ ಬಡ್ತಿ ದೊರೆಯಿತು! ಸಂದರ್ಭಕ್ಕೆ ತಕ್ಕಂತೆ ಒಳ್ಳೆಯ, ಕೆಟ್ಟ ಗುಣಗಳು ಪ್ರಾಪ್ತವಾದವು. ಬಹಳ ತಡವಾಗಿ ಈ ಬಡ್ತಿ ಆಗಿರುವುದರಿಂದಾಗಿ ರಾಮ ದೇವಾಲಯಗಳು ಅಸ್ತಿತ್ವಕ್ಕೆ ಬರಲು ಕೆಲವು ಶತಮಾನಗಳೇ ಬೇಕಾದವು. ಎಲ್ಲ ಪಾತ್ರಗಳೂ ಮನುಷ್ಯ ಪಾತ್ರಗಳಾದ್ದರಿಂದ ಅವರವರ ಸ್ಥಾನಕ್ಕೊಪ್ಪುವ ಆಚರಣೆಗಳನ್ನು ಅವರು ಆಚರಿಸುತ್ತಾರೆ.

ಹೀಗಾಗಿ ರಾಮ ಮತ್ತು ರಾವಣರ ಮದುವೆಗಳು, ರಾಮ ಮತ್ತು ಹನುಮಂತನ ಸಖ್ಯ ‘ಅಗ್ನಿಸಾಕ್ಷಿ’ಯಾಗಿ ನೆರವೇರಿದವು. ಅದೇ ರೀತಿ ರಾಮ ಸುಗ್ರೀವರ ಪಟ್ಟಾಭಿಷೇಕಕ್ಕೆ ಸಪ್ತ ಸಮುದ್ರಗಳ ನೀರನ್ನು ತರಲಾಯಿತು; ಸುಗ್ರೀವನಿಗೆ ಬ್ರಾಹ್ಮಣನೊಬ್ಬನು ಅಭ್ಯಂಜನ ಮಾಡಿಸಲಿಲ್ಲ ಎಂಬ ಮಾತು ಒತ್ತಟ್ಟಿಗಿರಲಿ! ಇದೇ ರೀತಿ ದಶರಥ, ವಾಲಿ, ರಾವಣನ ಶವಸಂಸ್ಕಾರವು ಅತ್ಯಂತ ಸ್ವೀಕಾರಾರ್ಹ ವಿಧಾನವನ್ನೇ ಅನುಸರಿಸಿತ್ತು. ವಿರಾಧನ ಶವವನ್ನು ಮಾತ್ರ ಅವನ ಇಚ್ಛೆಯಂತೆ ಹೂಳಲಾಯಿತು. ಈ ಕಾಲದಲ್ಲಿ ಸ್ತ್ರೀಯರು ಪಾರ್ಥಿವ ಶರೀರದೊಂದಿಗೆ ರುದ್ರಭೂಮಿಯವರೆಗೆ ಬರುತ್ತಿದ್ದರು. ರುದ್ರ ಭೂಮಿಯು ನದೀತಟಾಕದಲ್ಲಿರುತ್ತಿತ್ತು. ಪಲ್ಲಕ್ಕಿ ಅಥವಾ ರಥದಲ್ಲಿ ರುದ್ರ ಭೂಮಿಗೆ ಹೋಗುವುದು ಮಾನ್ಯವಾಗಿತ್ತು ಎಂಬೀ ಅಂಶಗಳನ್ನೂ ಗಮನಿಸಿಬೇಕು. ಶವಸಂಸ್ಕಾರ ಕೂಡಲೆ ಆಗದಿದ್ದರೆ ಅಥವಾ ಶವವನ್ನು ಸಂರಕ್ಷಿಸುವುದು ಅಗತ್ಯವಾಗಿ ಕಂಡರೆ, ಅದನ್ನು ಎಣ್ಣೆ ತುಂಬಿದ ಪಾತ್ರೆಯಲ್ಲಿ ಅದ್ದಿ ಇಡುತ್ತಿದ್ದರು.

ಕೇವಲ ಕೆಲವೇ ನಗರ-ಪಟ್ಟಣಗಳನ್ನು ಹೆಸರಿಸಲಾಗಿದೆ. ಇವುಗಳಲ್ಲಿ ಅಯೋಧ್ಯೆಯ ಬಗೆಗೆ ಸಾಕಷ್ಟು ವಿಸ್ತಾರವಾದ ವರ್ಣನೆ ಇದೆ. ತಕ್ಷಶಿಲೆ ಮತ್ತು ಪುಷ್ಕರಾವತಿಯ ವರ್ಣನೆ ತಕ್ಕಮಟ್ಟಿಗೆ ಆಗಿದೆ. ಕಿಷ್ಕಿಂಧೆ ಮತ್ತು ಲಂಕೆಯ ವರ್ಣನೆ ಸಾಂಪ್ರದಾಯಿಕ ನೆಲೆಯಲ್ಲಾದರೆ ಮಥುರಾ, ವಿದಿಷ ಮತ್ತು ಅಂಗದೀಯ ಮುಂತಾದ ನಗರಗಳ ಹೆಸರುಗಳನ್ನು ಮಾತ್ರ ಹೇಳಲಾಗಿದೆ.

ಅಯೋಧ್ಯೆಯು ‘ಮಂತ್ರಿ ಪರಿಷದ್’ ಮತ್ತು ಪುರೋಹಿತರ ನೆರವಿನಿಂದ ಆಳುವ ಅರಸನನ್ನು ಹೊಂದಿತ್ತು. ಎಲ್ಲ ಮುಖ್ಯ ವಿಚಾರಗಳ ಕುರಿತು ಜನರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿತ್ತು. ಜನರ ಅಭಿಪ್ರಾಯವು ಸಲಹೆಯ ಸ್ವರೂಪದ್ದಾಗಿತ್ತೇ ವಿನಾ ನಿರ್ಣಾಯಕವಾಗಿರಲಿಲ್ಲ. ಆದರೂ ರಾಮನು ಸೀತೆಯನ್ನು ಕಾಡಿಗೆ ಅಟ್ಟಲು ಈ ‘ಪೌರವಾದ’ವೇ ಕಾರಣ. ಜನತೆಯ ಧ್ವನಿಯನ್ನು ಮಾನ್ಯ ಮಾಡುವುದೇ ರಾಮರಾಜ್ಯವಾಗಿತ್ತು. ನಾವಿದನ್ನು ಕೆಲವೊಮ್ಮೆ ಸುವರ್ಣಯುಗವೆಂದು ಭಾವಿಸುತ್ತೇವೆ. ಆದರೆ ಈ ಯುಗದಲ್ಲೇ ಓರ್ವ ಬ್ರಾಹ್ಮಣನ ಮಗ ಮಡಿದ! ಸೀತೆ ಕಾಡಿಗೆ ಹೋದಳು!

ಲಂಕೆಯಲ್ಲೂ ಕೂಡ ‘ಮಂತ್ರಿ ಪರಿಷದ್’ ಇದ್ದಿರಬೇಕು. ಏಕೆಂದರೆ ರಾವಣನು ತನ್ನ ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡುತ್ತಿದ್ದ ಎಂದು ಮತ್ತೆ ಮತ್ತೆ ಹೇಳಲಾಗಿದೆ. ಅದೇ ರೀತಿ ಸುಗ್ರೀವನು ಕೂಡ ಮಂತ್ರಾಲೋಚನೆ ನಡೆಸುತ್ತಿದ್ದ. ಸರ್ವಾಧಿಕಾರವು ಅರಸನದೇ ಆಗಿದ್ದರೂ ಆತ ತನ್ನ ಸಲಹಾಕಾರರು ಹಾಗೂ ಇತರರಲ್ಲಿ ಸಲಹೆ ಪಡೆಯುತ್ತಿದ್ದ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಈ ನಗರಗಳಲ್ಲಿ ಬೇರೆ ಏನೇನು ಸಂಘಟನೆಗಳಿದ್ದವೆಂಬುದು ನಮಗೆ ತಿಳಿದುಬರುವುದಿಲ್ಲ. ಆದರೆ ಭರತನು ಚಿತ್ರಕೂಟಕ್ಕೆ ಹೋಗಿ ರಾಮನನ್ನು ಭೇಟಿ ಮಾಡಲು ಬಯಸಿದಾಗ ಆತ ಸುರಂಗ ಕೊರೆಯುವವರು, ಗಣಿ ತೋಡುವವರು, ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡುವವರನ್ನು ಮುಂದಾಗಿಯೆ ಕಳುಹಿಸಿದ. ಇದರಿಂದ ಆ ಕಾಲದಲ್ಲಿ ಶಿಲ್ಪಗಳು, ತಂತ್ರಜ್ಞರು, ಮೇಸ್ತ್ರಿಗಳು ಹಾಗೂ ಬಡಿಗಗಳ ಒಂದು ಸಂಘಟನೆ ಇದ್ದಿರಬೇಕೆಂದು ಊಹಿಸಬಹುದು. ಈ ಕಾಲಕ್ಕಾಗಲೇ ಇವೆಲ್ಲ ಅನುವಂಶೀಯ ವೃತ್ತಿಗಳಾಗಿದ್ದವು. ಅದೇ ರೀತಿ ನಿಷದ ವೃತ್ತಿ ಕೂಡ. ಗುಹನು ಮೊದಲು ರಾಮನನ್ನು ನಂತರ ಭರತ ಹಾಗೂ ಅವನ ಸೇನೆಯನ್ನು ಗಂಗಾನದಿ ದಾಟಿಸಿದ.

ಗಗನಯಾತ್ರೆಯ ಸಾಧ್ಯತೆಯನ್ನು ನಾವು ಅಲ್ಲಗಳೆದರೂ ಬೇರೆ ಬೇರೆ ಕಾವ್ಯಗಳಿಗೆ ಹೋಲಿಸಿದರೆ ರಾಮಾಯಣದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಈ ವಿಚಾರದಲ್ಲಿ ಕವಿಯ ಕಲ್ಪನಾ ಚಮತ್ಕಾರವನ್ನು ನಾವು ಪ್ರಶಂಸಿಸಬಹುದು. ಉತ್ತರಕಾಂಡದಲ್ಲಿ ರಾಮನು ತಪೋನಿರತನಾದ ಶೂದ್ರನನ್ನು ಹುಡುಕಿಕೊಂಡು ಹೊರಡುತ್ತಾನೆ. ಆಗ ಆತ ಕುಬೇರನಿಗೆ ಹಿಂದಿರುಗಿಸಿದ ಪುಷ್ಕಕವನ್ನು ನೆನೆಯಬೇಕಾಗುತ್ತದೆ. ಪಲ್ಲಕಿ, ಕುದುರೆ ಹಾಗೂ ಕತ್ತೆಗಳು ಎಳೆಯುವ ರಥಗಳು ಆ ಕಾಲದ ಸಾರಿಗೆ ಸಾಧನಗಳು.

ಈ ರಥಗಳಿಗೆ ಗಟ್ಟಿಮುಟ್ಟಾದ ಗಾಲಿಗಳಿದ್ದವೇ ಎಂಬುದು ಕಲ್ಪನೆಗೆ ಬಿಟ್ಟ ಸಂಗತಿ. ಒಂದಂತೂ ಖಂಡಿತ: ಸುವ್ಯವಸ್ಥಿತ ರಸ್ತೆಯ ಮೇಲಷ್ಟೇ ಈ ರಥಗಳು ಓಡಲು ಸಾಧ್ಯವಾಗಿತ್ತು. ಹೀಗಾಗಿ ರಾಮ ಮತ್ತು ಭರತರು ಸರಯೂ ಅಥವಾ ಗಂಗೆಯ ಉತ್ತರ ತೀರದಲ್ಲಿ ಮಾತ್ರ ಈ ರಥಗಳನ್ನು ನಡೆಸುತ್ತಿದ್ದರು. ದಕ್ಷಿಣ ತೀರದಲ್ಲಿ ನದಿ ದಾಟಿದ ಮೇಲೆ ಪ್ರಯಾಣವನ್ನು ಕಾಲ್ನಡಿಗೆಯಿಂದಲೆ ಮುಂದುವರಿಸಬೇಕಿತ್ತು.

ಸಾಮಾನ್ಯವಾಗಿ ಕ್ಷೌಮ (ಲಿನೆನ್) ವಸ್ತ್ರಗಳನ್ನೇ ಉಪಯೋಗಿಸುತ್ತಿದ್ದರು. ಸೀತೆಯೊಬ್ಬಳೇ ಉತ್ತರೀಯ ಮತ್ತು ಪೀತ ಕೌಶೇಯದ ಅಧೋವಸ್ತ್ರ ಧರಿಸುತ್ತಿದ್ದಳು. ಹತ್ತಿ ಬಟ್ಟೆಗಳು ಆಗ ಉಪಯೋಗದಲ್ಲಿದ್ದಿರಬೇಕು. ಏಕೆಂದರೆ ಹನುಮಂತನನ್ನು ಹತ್ತಿ (ಕಾರ್ಪಾಸಾ)ಯ ನೂಲು ಅಥವಾ ಹಗ್ಗದಿಂದ ಕಟ್ಟುವ ಯತ್ನ ನಡೆಯಿತೆಂದು ಬಣ್ಣಿಸಲಾಗಿದೆ. ಉಣ್ಣೆ ಮತ್ತು ಸೆಣಬಿನ ಉಪಯೋಗವು ಇತ್ತು. ಉಣ್ಣೆಯು ವಾಯವ್ಯ ಪ್ರಾಂತ್ಯದ ವಿಶೇಷ ಉಡುಪಾಗಿದ್ದು ಕೇಕೆಯನು ಕಳುಹಿಸುತ್ತಿದ್ದ ವಸ್ತುಗಳಲ್ಲಿ ಉಣ್ಣೆಗೆ ಮಹತ್ವವಿತ್ತು. ಆದರೂ ವೇಷಭೂಷಣ ಯಾವ ಬಗೆಯದೆಂದು ಹೇಳಲಾರೆವು. ಗಂಡಸರು ಹೆಂಗಸರಿಬ್ಬರೂ ಅದರಲ್ಲೂ ಮುಖ್ಯವಾಗಿ ಸಾಮಾನ್ಯ ಜನರು ಧೋತಿ ಉಡುತಿದ್ದರು. ಅವರು ಮೊಣಕಾಲಿನವರೆಗೆ ಕಚ್ಚೆ ಪಂಚೆ ಉಡುತ್ತಿದ್ದರು.

ಅಯೋಧ್ಯಾಕಾಂಡ ಮತ್ತು ಉತ್ತರಕಾಂಡದಲ್ಲಿ ಅನೇಕ ಬಗೆಯ ಆಹಾರ ಪದಾರ್ಥಗಳ ಹೆಸರು ಬಂದಿವೆಯಾದರೂ ತೀರ ಸಾಮಾನ್ಯ ಆಹಾರವೆಂದರೆ ಅನ್ನ. ಅಯೋಧ್ಯೆಯ ಅಂಗಡಿಗಳಲ್ಲಿ ಅಕ್ಕಿಯ ರಾಶಿ ಇರುತ್ತಿತ್ತಂತೆ. ಗೋಧಿ ಅಥವಾ ಇನ್ನಿತರ ಧಾನ್ಯಗಳ ಹೆಸರು ಕಂಡುಬರುವುದಿಲ್ಲ. ಇದು ಆಶ್ಚರ‍್ಯಕರವಾಗಿದೆ. ಇನ್ನೂ ಆಶ್ಚರ‍್ಯ ಹುಟ್ಟಿಸುವ ಅಂಶವೆಂದರೆ ಅಯೋಧ್ಯೆ, ಲಂಕೆ ಮತ್ತು ಭಾರದ್ವಾಜರ ಆಶ್ರಮದಲ್ಲಿ ಕೂಡ ಮಾಂಸ ಹಾಗೂ ಮಾಂಸಾಹಾರದ ಬಗೆಗೆ ಪ್ರಸ್ತಾಪವಿದೆ. ಸೀತಾ ಪರಿತ್ಯಾಗದವರೆಗೆ ರಾಮ ಸೀತೆ ಲಕ್ಷ್ಮಣರು ಮಾಂಸಹಾರಿಗಳಾಗಿದ್ದರು. ಪಾನೀಯಗಳಲ್ಲಿ ಮಹುವಾ ಹೂವುಗಳಿಂದ ತೆಗೆದ ಮಧು, ಮೈರೇಯಗಳು ಯಾವಾಗಲೂ ದೊರೆಯುತ್ತಿದ್ದವು. ಎರಡು ಬಾರಿ ವಾರುಣಿಯ ಪ್ರಸ್ತಾಪ ಮಾಡಲಾಗಿದೆ. ಸುರಾ ಮತ್ತು ಸುರಾಪಾನ ನಿಷಿದ್ಧವಾಗಿತ್ತು. ಸುರೆಯನ್ನು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಬಳಸಲಾಗುತ್ತಿತ್ತೆಂಬ ಕೆಲವು ವಿದ್ವಾಂಸರ ಅಭಿಪ್ರಾಯ ತಪ್ಪು. ಆದ್ದರಿಂದ ರಾಮಾಯಣದಲ್ಲಿ ಬರುವ ಅವುಗಳ ಪ್ರಸ್ತಾಪವು ಹೊಸ ಸಾಮಾಜಿಕ-ಆರ್ಥಿಕ ಘಟನೆಗಳಿಂದ ಪ್ರಭಾವಿತವಾಗಿದೆ ಎಂದು ತಿಳಿಯಬೇಕು.

ವಾರುಣಿ, ಮುದ್ರೆಯುಂಗುರ, ಮರೀಚಿ ಪಟ್ಟಣದ ಉಲ್ಲೇಖ. ಭಾರದ್ವಾಜರ ಆಶ್ರಮದ ಔತಣದ ವೈಭವ ಹಾಗೂ ರಾವಣನ ಅಂತಃಪುರದ ಮದ್ಯಪಾನ ಕೂಟದ ವೈಭವ ಇವೆಲ್ಲವೂ ಈ ಮಹಾಕಾವ್ಯದ ಒಂದು ಹಂತದ ರಚನೆಯ ಕಾಲ ಕ್ರಿ.ಶ. ಒಂದನೆಯ ಶತಮಾನ ಎಂದು ನಿರ್ಣಯಿಸಲು ಸಹಕಾರಿಯಾಗಿದೆ. ಈ ಕಾಲದಲ್ಲಿ ರೋಮ್ ಮತ್ತು ಪಾಶ್ಚಾತ್ಯ ಜಗತ್ತಿನೊಂದಿಗೆ ನಡೆಸುತ್ತಿದ್ದ ವ್ಯಾಪಾರ ವಹಿವಾಟಿನಿಂದಾಗಿ ರೋಮಿನಿ ಮದ್ಯವು ಭಾರತದಾದ್ಯಂತ ಸಾರ್ವತ್ರಿಕಗೊಂಡಿತು. ಈ ಹಿಂದಿನ ಯಾವ ವಿದ್ವಾಂಸರೂ ಇದನ್ನು ಊಹಿಸಲೇ ಇಲ್ಲ. ಸರ್ ಮೋರ್ಟಮ್ ವ್ಹೀಲರ್ ಅವರಿಗೆ ನಾವು ಧನ್ಯರಾಗಿರಬೇಕು. ಏಕೆಂದರೆ ನಮ್ಮ ಸಂಸ್ಕೃತಿಯ ಮೇಲಾದ ಈ ಪ್ರಭಾವದ ಕುರಿತು ನಮ್ಮ ಗಮನ ಸೆಳೆದವರಲ್ಲಿ ಅವರೇ ಮೊದಲಿಗರು. ಈ ಪ್ರಭಾವದ ಆಳ ಅಗಲಗಳು ಇದೀಗ ನಿಧಾನವಾಗಿ ಪರಿಚಯವಾಗುತ್ತಿವೆ.

ದುರದೃಷ್ಟವಶಾತ್-ಮಹಾಕಾವ್ಯವು ಈ ಕಾಲದಲ್ಲಿ ಬಳಕೆಯಲ್ಲಿದ್ದ ಪೀಠೋಪಕರಣಗಳ ಬಗೆಗೆ ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ಇರುವ ಉಲ್ಲೇಖಗಳು ತೀರ ಸಾಮಾನ್ಯ ಸ್ವರೂಪದವುಗಳು. ಆದರೆ ಕಾಲ ನಿರ್ಣಯದ ದೃಷ್ಟಿಯಿಂದ ರಾವಣನ ಅರಮನೆಯ ಕಂಬಗಳಲ್ಲಿ ಕಂಡುಬಂದ ಈಹಾಮೃಗ ಮತ್ತು ಗಜಲಕ್ಷ್ಮಿಯ ಆಶಯಗಳು ಮಹತ್ವಪೂರ್ಣವಾಗಿವೆ. ಅದೇ ರೀತಿ ಕ್ರೀಡಾಗೃಹ ಮತ್ತು ಲಂಕಾ ವೈಭವದ ಪ್ರಸ್ತಾಪ ಕೂಡ. ನಾಗಾರ್ಜುನಕೊಂಡದಲ್ಲಿ ಒಂದಕ್ಕಿಂತ ಹೆಚ್ಚು ಕ್ರೀಡಾ ಗೃಹಗಳು ಕಂಡುಬಂದಿವೆ. ಲಂಕೆಯ ವರ್ಣನೆಯು ಇಂಡೋ-ರೋಮನ್ ನಗರವಾದ ಅಮರಾವತಿ ಮತ್ತು ನಾಗಾರ್ಜುನಕೊಂಡವನ್ನು ಆಧರಿಸಿರುವ ಸಾಧ್ಯತೆಗಳಿವೆ. ಅದೇ ರೀತಿ ಅಯೋಧ್ಯೆಯ ವರ್ಣನೆ ತಕ್ಷಶಿಲೆಯನ್ನು ಆಧರಿಸರಬೇಕು. ತಕ್ಷಶಿಲೆಯಲ್ಲಿ ಕೈಗೊಂಡ ಉತ್ಖನನಗಳು ಈ ಅಂಶವನ್ನು ಸಾಬೀತುಪಡಿಸಿವೆ. ಇಂಥ ಉತ್ಖನನಗಳಿಂದ ನಮ್ಮ ಸಾಂಪ್ರದಾಯಿಕ ಆಯುಧಗಳಾದ ಬಿಲ್ಲು, ಬಾಣ, ಕತ್ತಿ, ಈಟಿ, ಗುರಾಣಿ ಮುಂತಾದವುಗಳು ಕಾಲಕ್ರಮದಲ್ಲಿ ರೂಪಾಂತರ ಹೊಂದಿದ ಬಗೆಯನ್ನು ತಿಳಿಯಲು ಸಾಧ್ಯ. ಇಲ್ಲೂ ಕೂಡ ನಮಗೆ ತಕ್ಷಶಿಲೆಯ ಉತ್ಖನನಗಳಿಂದ ಆಧಾರಗಳು ದೊರೆಯುತ್ತವೆ. ಇಂಡೋ ಗ್ರೀಕರು, ಪಾರ್ಷಿಯನ್ನರು ಮತ್ತು ಶಕರು ನಮ್ಮ ದೇಶದ ಮೇಲೆ ದಾಳಿಯಿಟ್ಟಲಾಗಾಯ್ತು ವಿವಿಧ ರೂಪಗಳು ಮತ್ತು ಯುದ್ಧ ತಂತ್ರಗಳ ಮೇಲೆ ಎಂಥ ಪ್ರಭಾವ ಆಯಿತೆಂಬುದನ್ನು ಇದು ಸೂಚಿಸುತ್ತದೆ. ರಾಮಾಯಣವು ಬಹಳ ಸ್ಪಷ್ಟವಾಗಿ ಈ ಅಂಶವನ್ನು ದಾಖಲಿಸಿದೆ.

ಅದೇನೇ ಇರಲಿ, ರಾಮಾಯಣ ಕಾಲದ ಭೌತಿಕ ಜೀವನದ ಅಧ್ಯಯನದಿಂದ ನಮಗೆ ಅಂಥ ವಿಶೇಷವಾದ ಚಿತ್ರವೇನೂ ದೊರೆಯುವದಿಲ್ಲ. ಆದರೆ ಅತ್ಯಂತ ಗಮನಾರ್ಹವಾದುದು ಮತ್ತು ಶತಮಾನಗಳುದ್ದಕ್ಕೂ ಆದರ್ಶ ಪ್ರಾಯವಾಗಿರುವುದೆಂದರೆ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತರ ಗುಣನಡತೆ. ಹಲವಾರು ಪ್ರಕ್ಷೇಪಗಳ ನಡುವೆಯೂ ಇದು ಹಾಗೆಯೇ ಉಳಿದಿದೆ.

ಧರ್ಮದ ಅನುಸರಣೆ ಒಂದು ಆದರ್ಶವಾಗಿತ್ತು. ಸಂದರ್ಭ ಬಂದಾಗಲೆಲ್ಲ ಈ ಅಂಶವನ್ನು ರಾಮ, ಸೀತೆ, ವಾನರರು, ರಾಕ್ಷಸರು, ರಾವಣ, ವಿಭೀಷಣ, ಮಾಲ್ಯವಾನ್, ಕಡೆಗೆ ಸುಪಾರ್ಶ್ವ ಕೂಡ ಪ್ರತಿಪಾದಿಸಿದ್ದುಂಟು. ಧರ್ಮಾನುಷ್ಠಾನಕ್ಕೆ ಕೊಟ್ಟಿರುವ ಈ ಒತ್ತು ಭಾರತೀಯರನ್ನು ಆಕರ್ಷಿಸಿದೆ. ಸ್ವಾಭಾವಿಕವಾಗಿ ರಾಮ ಸೀತೆಯರ ಪಾತ್ರ ಎದ್ದು ನಿಲ್ಲುವಂಥದ್ದಾಗಿದೆ. ರಾಮನು ಆದರ್ಶ ರಾಜ, ಕರ್ತವ್ಯನಿಷ್ಠ ಪುತ್ರ ಮತ್ತು ಪತಿ, ಸೀತೆಯಾದರೋ ಭಾರತೀಯ ನಾರಿತ್ವಕ್ಕೆ ಆದರ್ಶಪ್ರಾಯಳು. ಕೋಮಲೆ, ಧೈರ್ಯವಂತೆ, ಕರ್ತವ್ಯ ಪರಾಯಣೆ. ಆದರೆ ತನ್ನ ಮುಗ್ಧತೆಯನ್ನು ರುಜುಗೊಳಿಸಲು ಆತ್ಮತ್ಯಾಗ ಮಾಡುತ್ತಾಳೆ. ರಾಮನಾದರೊ ನಿಜವಾದ ಜನಪ್ರಿಯ ರಾಜನಂತೆ, ಜನರ ಅಭಿಪ್ರಾಯಕ್ಕೆ ಮನ್ನಣೆ ಇತ್ತು ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ (ಹೀಗೆಂದು ಸ್ಪಷ್ಟವಾಗಿ ಹೇಳಿದೆ) ಸೀತೆಯನ್ನು ಕಾಡಿಗೆ ಅಟ್ಟುತ್ತಾನೆ.

ಲಕ್ಷ್ಮಣನು ಯಥಾ ಪ್ರಕಾರ ಹಿರಿಯಣ್ಣನ ಆಜ್ಞೆಯನ್ನು ಶಿರಸಾ ವಹಿಸಿದ. ಮೊದಲು ಆತ ದೂರ್ವಾಸರನ್ನು ತಡೆದ ಬಳಿಕ ನಿರ್ವಾಹವಿಲ್ಲದೆ ಯಾರನ್ನೂ ನನ್ನ ಬಳಿಗೆ ಕಳುಹಿಸಬಾರದು ಎಂದ ರಾಮನಲ್ಲಿಗೆ ದುರ್ವಾಸನನ್ನು ಕಳುಹಿಸಿದ. ಹೀಗೆ ಆತ ಪ್ರಾಣವನ್ನು ಪಣವಾಗಿಟ್ಟು ಅಣ್ಣನ ಆಜ್ಞೆಯನ್ನು ನೆರವೇರಿಸಿದ. ಹೀಗೆ ಈ ಮೂರು ಪಾತ್ರಗಳು ತಂತಮ್ಮ ‘ಧರ್ಮ’ಕ್ಕೆ ನಿಷ್ಠವಾಗಿವೆ.

ಇತರ ನೈತಿಕ, ಆಧ್ಯಾತ್ಮಿಕ, ಸಾಮಾಜಿಕ ಹಾಗೂ ತತ್ವಶಾಸ್ತ್ರೀಯ ಕಲ್ಪನೆಗಳಿಗೆ ಸಂಬಂಧಪಟ್ಟಂತೆ ನಾವು ಕಾಂಡದಿಂದ ಕಾಂಡಕ್ಕೆ ಬದಲಾವಣೆಗಳನ್ನು ಕಾಣುತ್ತೇವೆ. ಇವು ಕೆಲವೇ ಕೆಲವಾದರೂ ರಾಜಕೀಯದಲ್ಲಾಗುತ್ತಿದ್ದ ಬದಲಾವಣೆಗಳ ಪರಿಣಾಮ ಹಿಂದೂ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ಈ ಕಾಂಡಗಳು ಪ್ರತಿಬಿಂಬಿಸಿವೆ. ಬಹಳ ಮುಖ್ಯವಾದುದೆಂದರೆ, ವರ್ಣಾಶ್ರಮ ಧರ್ಮದ ಬಿಗಿಯಾದ ಅನುಸರಣೆ ಮತ್ತು ಸತಿ ಪದ್ಧತಿಯ ಬಹಿರಂಗ ಆಚರಣೆ. ಇದು ಅಯೋಧ್ಯಾಕಾಂಡ, ಕಿಷ್ಕಿಂಧಾಕಾಂಡ ಮತ್ತು ಯುದ್ಧ ಕಾಂಡಗಳಲ್ಲಿಲ್ಲ. ಅದರೆ ಉತ್ತರಕಾಂಡದಲ್ಲಿ ಈ ಕುರಿತು ಸ್ಪಷ್ಟ ಉಲ್ಲೇಖವಿದೆ.

ಲಂಕೆಗೆ ಸಂಬಂಧಿಸಿದಂತೆ ಶಾಸನಗಳ ಆಧಾರದ ಪ್ರಕಾರ ಕ್ರಿ.ಪೂ. ೪ನೆ ಶತಮಾನದಲ್ಲಿ ಸಿಂಹಳ ಮತ್ತು ಲಂಕಾ ಬೇರೆ ಬೇರೆಯಾಗಿದ್ದವು. ಸಿಂಹಳವನ್ನು ತಾಮ್ರಪರ್ಣಿ ದ್ವೀಪವೆಂದು ಕರೆಯುತ್ತಿದ್ದರು. ಮೂಲ ಲಂಕೆಯು ಮಧ್ಯಪ್ರದೇಶದ ಪೂರ್ವಭಾಗದಲ್ಲಿದ್ದಿರಬೇಕು. ಆದರೂ ಕ್ರಿ.ಶ.೪ನೆ ಶತಮಾನದ ಹೊತ್ತಿಗೆ ಅದು ಹಿಂದೂ ಸಾಗರದಲ್ಲಿದೆ ಎಂಬ ಭಾವನೆ ಬೆಳೆಯಿತು. ಆದರೆ ಆಗಲೂ ಅದನ್ನು ಸಿಂಹಳದೊಂದಿಗೆ ಸಮೀಕರಿಸಿರಲಿಲ್ಲ. ಆದರೆ ಕಳೆದ ಕೆಲವು ಶತಮಾನಗಳಿಂದೀಚೆಗಿನ ಭಾರತೀಯ ಮನಸ್ಸು ಸಿಲೋನ್ ಶ್ರೀಲಂಕಾ ಆದಂತೆ ಲಂಕೆಯನ್ನು ಸಿಂಹಳದೊಂದಿಗೆ ಸಮೀಕರಿಸಿತು.

ಸಧ್ಯ ಪಶ್ಚಿಮ ಒರಿಸ್ಸದ ಬೊಲಂಗಿರ್ ಜಿಲ್ಲೆಯಲ್ಲಿ ತೆಲ್ ಮತ್ತು ಮಹಾನದಿಯ ಸಂಗಮ ಸ್ಥಳದಲ್ಲಿರುವ ಸೋನ್‌ಪುರವನ್ನು ಪಶ್ಚಿಮ ಲಂಕೆ ಎಂದು ಗುರುತಿಸಲಾಗಿದೆ. ಈ ಕುರಿತಾಗಿ ಸೋನ್‌ಪುರದಲ್ಲಿ ೯-೧೦ನೆ ಶತಮಾನದ ಕುಮಾರ ಸೋಮೇಶ್ವರ ದೇವನ ಶಾಸನವೊಂದು ದೊರೆತಿದೆ. ಆರಂಭಿಕ ಶೋಧನೆಗಳಿಂದ ಈ ಸ್ಥಳವು ಬಹಳ ಪುರಾತನವಾದುದೆಂದು ಅಂದರೆ ಕ್ರಿ.ಪೂ. ೧ನೆ ಶತಮಾನದಷ್ಟು ಹಳೆಯದೆಂದು ತಿಳಿದುಬಂದಿದೆ. ಕೋಟೆ ಗೋಡೆಗಳ ಪಳೆಯುಕೆಗಳು ದೊರೆತಿವೆ. ವಿವಿಧ ಐತಿಹಾಸಿಕ ಅವಧಿಗಳಿಗೆ ಸೇರಿದ ಮಡಕೆ ಚೂರುಗಳು, ಕಬ್ಬಿಣದ ಸಾಧನಗಳು ಮತ್ತು ಆಯುಧಗಳು ಕಂಡುಬಂದಿದೆ. ೩೦ವರ್ಷಗಳ ಕೆಳಗೆ ಇಲ್ಲಿ ಬಹುಸಂಖ್ಯೆಯ ಮುದ್ರೆಯುಳ್ಳ ಬೆಳ್ಳಿಯ ನಾಣ್ಯಗಳು ದೊರೆತಿದ್ದವು. ಉತ್ಖನನಗಳಿಂದ ಇನ್ನಷ್ಟು ಕುತೂಹಲಕರ ವಿವರಗಳು ದೊರೆಯಲಿವೆ. ಗೋದಾವರಿ ನದಿ ಮುಖಜ ಭೂಮಿಯಲ್ಲೂ ಇಂಥದೇ ಉತ್ಖನನಗಳಾದರೆ ಲಂಕೆಯ ಇತಿಹಾಸದ ಮೇಲೆ ಹೆಚ್ಚಿನ ಬೆಳಕು ಬೀಳಬಹುದು.

ಕೊನೆಯದಾಗಿ, ರಾಮನ ದೈವತ್ವದ ಪ್ರಶ್ನೆ: ರಾಮನ ದೈವತ್ವವು ಹಂತ ಹಂತವಾಗಿ ಆಗಿರಬೇಕು. ಎಲ್ಲ ದೇವರುಗಳ (ವೈದಿಕ, ಅವೈದಿಕ ಅಥವಾ ಪೌರಾಣಿಕ) ಪ್ರಸ್ತಾಪ ರಾಮಾಯಣದಲ್ಲಿ ಆಗುವುದಿಲ್ಲ. ಮುಖ್ಯ ಕಥೆಯಲ್ಲಿ ಶಿವನ ಪಾತ್ರವೇನೂ ಇಲ್ಲ. ವಿಷ್ಣು ನಿಧಾನವಾಗಿ ಕಾಣಿಸಿಕೊಂಡ. ಆತ ಬಾಲಕಾಂಡ ಮತ್ತು ಉತ್ತರಕಾಂಡದಲ್ಲಿ ರಾಮನನ್ನು ವಿಷ್ಣು, ಕೃಷ್ಣ, ನಾರಾಯಣರೊಂದಿಗೆ, ಸೀತೆಯನ್ನು ಲಕ್ಷ್ಮಿಯೊಂದಿಗೆ ಸಮೀಕರಿಸಿದಾಗ ಮಾತ್ರ ಪ್ರಮುಖನಾದ. ಈ ಏಕೀಭವನ ೫ನೆ ಶತಮಾನದಲ್ಲಿ ನಡೆದರೂ ಶತಮಾನಗಳ ನಂತರ ಇರಬೇಕು. ಕ್ರಿ.ಶ.೭ನೇ ಶತಮಾನದ ಹೊತ್ತಿಗೆ ರಾಮಾಯಣವು ಆಗ್ನೇಯ ಏಷ್ಯಾದ ಭಾರತೀಯ ವಸಾಹತುಗಳಲ್ಲಿ ಪ್ರಚುರಗೊಂಡಿತು. ಡಾ.ಬಿ..ರಾಜೇಂದ್ರಪ್ರಸಾದರ ಪ್ರಕಾರ “ಕ್ರಿ.ಶ.೧೦ನೇ ಶತಮಾನದವರೆಗೆ ರಾಮನಿಗಾಗಿ ಯಾವುದೇ ದೇವಾಲಯ ನಿರ್ಮಾಣವಾಗಲಿಲ್ಲ. ಆದರೆ ೭ನೇ ಶತಮಾನದಿಂದಲೆ ರಾಮಾಯಣದ ಚಿತ್ರಗಳು ದೇವಾಲಯದ ಗೋಡೆಗಳ ಮೇಲೆ ಕಾಣಿಸಿಕೊಳ್ಳತೊಡಗಿದವು.

ಹೀಗೆ ಒಂದಲ್ಲ ಒಂದು ರೀತಿಯಲ್ಲಿ ರಾಮಾಯಣದ ಉನ್ನತ ಮಿವರ್ಶೆಯು ಭೂತಕಾಲದ ಬಗೆಗಿನ ನಮ್ಮ ತಿಳುವಳಿಕೆಯನ್ನು ನಿಚ್ಚಳಗೊಳಿಸಿದೆ. ಪುರಾತತ್ವಶಾಸ್ತ್ರವು ತನ್ನ ವಿಧಾನ ಮತ್ತು ತಂತ್ರಗಳನ್ನು ಇನ್ನಷ್ಟು ಮೊನಚುಮಾಡಿಕೊಂಡಾಗ ನಮ್ಮ ತಿಳುವಳಿಕೆ ಹೆಚ್ಚು ಸ್ಪಷ್ಟವಾಗುತ್ತದೆ.