ಸಹ್ಯಾದ್ರಿ ಶ್ರೇಣಿಯ ಪಶ್ಚಿಮದ ತಪ್ಪಲುಗಳಲ್ಲಿನ ನಿಬಿಡಾರಣ್ಯಗಳಲ್ಲಿ ಮಾಸವಾಗಿರುವ ಗೊಂಡರು ತಮ್ಮ ವಿಶಿಷ್ಟ ಜೀವನಕ್ಕೆ ಹೆಸರಾದವರು. ಮೂಲತಹ ಕೃಷಿ ಬುಡಕಟ್ಟುಗಳಾದ ಇವರು ಇಂದಿಗೂ ಅದೇ ವೃತ್ತಿಯನ್ನೇ ಆಧರಿಸಿ ಬದುಕುತ್ತಿದ್ದರಾದರೂ ಭೂಮಿಯ ಕೊರತೆಯಿಂದಾಗಿ ಒಂದೇ ವೃತ್ತಿಗೆ ಅಂಟಿಕೊಳ್ಳುವ ಸ್ಥಿತಿಯಲ್ಲಂತೂ ಇಲ್ಲ. ಈ ಗೊಂಡರ ಬಗ್ಗೆ ಒಂದು ಕಿರು ಟಿಪ್ಪಣಿಯನ್ನು ಗ್ರಂಥದ ಕೊನೆಯಲ್ಲಿ ಕೊಟ್ಟಿದ್ದೇನೆ.

ಈ ಕಾವ್ಯವನ್ನು ಹಾಡಿದವರು ಶ್ರೀ ತಿಮ್ಮಪ್ಪಗೊಂಡ ಅವರು. ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕಿನ ಹಲ್ಯಾಣಿ ಇವರ ಸ್ಥಳ. ಅಲ್ಲಿನ ಗೊಂಡ ಸಮುದಾಯದ ಮುಖಂಡರು ತಿಮ್ಮಪ್ಪ. ತಿಮ್ಮಪ್ಪನವರ ಮುಮ್ಮೇಳಕ್ಕೆ ಆರ್ಕಳದ ಸಂಕಯ್ಯ ಮತ್ತು ಹಿರೇಬಳ್ಳಿಯ ಮಂಜು ಹಿಮ್ಮೇಳ ಒದಗಿಸಿದ್ದಾರೆ. ಇವರೆಲ್ಲ ಕಳೆದ ಹದಿನೈದು ವರ್ಷಗಳಿಂದ ನನಗೆ ಗೊತ್ತಿರುವವರು. ಸಾಗರದ ಹಿರೇಮನೆ ಗಿರಿಜನ ಆಶ್ರಮ ಶಾಲೆಯ ಮುಖ್ಯ ಶಿಕ್ಷಕರೂ ನನ್ನ ಆತ್ಮೀಯ ಹಿರಿಯರೂ ಆಗಿರುವ ಶ್ರೀ ಹುಚ್ಚಪ್ಪ ಮಾಸ್ತರರ ಮೂಲಕ ನನಗೆ ಪರಿಚಯವಾದ ಗೊಂಡರ ಆ ಲೋಕಕ್ಕೆ ನಾನು ಹತ್ತಾರು ಬಾರಿ ಹೋಗಿ ಬಂದಿದ್ದೇನೆ. ಸಾಗರದಿಂದ ಪಶ್ಚಿಮ ಕರಾವಳಿಯ ಭಟ್ಕಳಕ್ಕೆ ಹೋಗುವ, ಮಹಾ ಅರಣ್ಯಗಳ ನಡುವಿನ ಆ ಅಂಕುಡೊಂಕು ರಸ್ತೆಯಲ್ಲಿ ಪಯಣಿಸುವುದೇ ಒಂದು ಆನಂದ. ಎಡಕ್ಕೆ ಆಕಾಶದೆತ್ತರ ಬೆಳೆದ ಮೇಘಾನೆ ಎಂಬ ಪರ್ವತ. ಬಲಕ್ಕೆ ಮಂಡಲಾಕಾರವಾಗಿ ಹಬ್ಬಿನಿಂತ ಗೋವರ್ಧನಗಿರಿ ಪರ್ವತಶ್ರೇಣಿ. ಇವುಗಳ ನಡುವೆ ಅಷ್ಟೇನೂ ಅಬ್ಬರವಿಲ್ಲದೆ ನಾಜೂಕಾಗಿ ಹರಿಯುವ ‘ಸರಳಾ’ ಎಂಬ ಹೊಳೆ. ಈ ಹೊಳೆಯ ದಂಡೆಗೆ ತಿಮ್ಮಪ್ಪನ ಮನೆ. ತಿಮ್ಮಪ್ಪನ ಮನೆಯ ಸುತ್ತಲಲ್ಲಿರುವ ಅಸದೃಶ ಸೌಂದರ್ಯವೋ, ಇಲ್ಲವೇ ಗೊಂಡ ಬುಡಕಟ್ಟಿನ ಸರಳ ಹಾಗೂ ಪ್ರಾಮಾಣಿಕ ನಡತೆಯೋ, ಅಥವಾ ತಿಮ್ಮಪ್ಪನ ಎದೆಯಲ್ಲಿ ಅಡಗಿರುವ ಕಲಾ ಸಂಪತ್ತೋ ಅಂತೂ ಈ ಯಾವುದಕ್ಕೋ ಮರುಳಾಗಿ ನಾನು ಆಗಾಗ ಆ ತಾಣಕ್ಕೆ ಹೋಗುತ್ತಿರುತ್ತೇನೆ.

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ.ಚಂದ್ರಶೇಖರ ಕಂಬಾರರು ಹಾಗೂ ಇದೀಗ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ಕಾಳೇಗೌಡ ನಾಗವಾರ ಅವರ ಜೊತೆ ಒಮ್ಮೆ ಅದೇ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದಾಗ, ನನ್ನ ಆ ಪ್ರೀತಿಯ ತಾಣಕ್ಕೆ ಅವರನ್ನು ಕರೆದೊಯ್ದು ತಿಮ್ಮಪ್ಪಗೊಂಡರನ್ನು ಪರಿಚಯಿಸಿದೆ. ಅತಿಥಿಗಳಿಗೆ ಸೀಯಾಳ ಕೊಟ್ಟು ಸತ್ಕರಿಸಿದ ತಿಮ್ಮಪ್ಪ ಕಂಬಾರರ ಅಪೇಕ್ಷೆಯಂತೆ ರಾಮಾಯಣ ಕಾವ್ಯದ ಕೆಲವು ಭಾಗಗಳನ್ನು ಹಾಡಿದ. ಸ್ವತಹ ಕವಿಗಳಾದ ಕಂಬಾರರಿಗೆ ಕಾವ್ಯದ ಜಾನಪದ ಸೊಗಡು ಮತ್ತು ಸರಳತೆ ಇಷ್ಟವಾದರೆ, ಬಂಡಾಯ ಲೇಖಕ ಕಾಳೇಗೌಡರಿಗೆ ತಿಮ್ಮಪ್ಪನ ರಾಮಾಯಣದ ಹೊಸ ಸೇರ್ಪಡೆಗಳು ಅತೀವ ಆಸಕ್ತಿ ಮೂಡಿಸಿದವು. ತಿಮ್ಮಪ್ಪನ ಕಾವ್ಯವನ್ನು ಸಂಗ್ರಹಿಸುವಂತೆ ಅಂದೇ ಅವರಿಬ್ಬರು ನನಗೆ ಒತ್ತಾಯಿಸಿದ್ದರು. ಇದೇ ರೀತಿಯ ಅನುಭವಗಳ ಕಾರಣದಿಂದಾಗಿಯೇ ಬುಡಕಟ್ಟು ಮಹಾಕಾವ್ಯಗಳನ್ನು ಸಂಗ್ರಹಿಸಿ ಪ್ರಕಟಿಸುವ ಕಾರ್ಯಯೋಜನೆಯನ್ನು ಅಷ್ಟರಲ್ಲಾಗಲೇ ಕನ್ನಡ ವಿಶ್ವವಿದ್ಯಾಲಯದ ಮೂಲಕ ನಾವು ರೂಪಿಸಿದ್ದೇವೆ. ಅದೇ ಯೋಜನೆಯ ಮೂಲಕವೇ ತಿಮ್ಮಪ್ಪನ ಕಾವ್ಯವನ್ನು ಸಂಗ್ರಹಿಸಲು ತೀರ್ಮಾನಿಸಿದೆವು. ಸಂಗ್ರಹವೂ ಚೆನ್ನಾಗಿಯೇ ಆಯಿತು. ಈ ನಡುವೆ ನಾವು ಮಂಟೇಸ್ವಾಮಿ, ಮಲೆಮಾದೇಶ್ವರ, ಜುಂಜಪ್ಪ ಹಾಗೂ ಕೃಷ್ಣಗೊಲ್ಲರ ಕಾವ್ಯಕ್ಕೆ ಹೆಚ್ಚು ಒತ್ತು ಕೊಟ್ಟು (ಅವು ಬೃಹತ್ ಸ್ವರೂಪದ ಕಾವ್ಯಗಳಾಗಿದ್ದ ಕಾರಣಕ್ಕೆ) ಅವುಗಳನ್ನು ಲಿಪ್ಯಂತರ ಮಾಡಿ ಪ್ರಕಟಿಸುವ ಕಾರ್ಯದಲ್ಲಿ ಮಗ್ನರಾದೆವು. ಆದರೆ ಕೆಲಸದ ತೀವ್ರ ಒತ್ತಡದಲ್ಲಿ ತಿಮ್ಮಪ್ಪನ ರಾಮಾಯಣ ಕಾವ್ಯ ಹಾಗೇ ಉಳಿಯಿತು.

ಅಷ್ಟರಲ್ಲಿ ಡಾ.ಎಂ.ಎಂ.ಕಲಬುರ್ಗಿಯವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡರು. ಈಗಾಗಲೇ ನಾವು ಪ್ರಕಟಿಸಿದ್ದ ಕಾವ್ಯಗಳನ್ನು ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇನ್ನೊಂದು ಅವಧಿಗೆ ಇದೇ ಯೋಜನೆಯನ್ನು ಮುಂದುವರೆಸುವಂತೆ ಸಲಹೆ ನೀಡಿದರು. ಹೀಗಾಗಿ ನಾವು ಗೊಂಡರ ರಾಮಾಯಣ, ಸೋಲಿಗರ ಬಿಳಿಗಿರಿರಂಗ, ಲಂಬಾಣಿಯರ ಸೇವಾಬಾಯ, ಕೃಷ್ಣಗೊಲ್ಲರ ಕಥನಗಳು, ಅಲೆಮಾರಿ ಕುರುಬರ ಮಾಳಿಂಗರಾಯ ಹಾಗೂ ಮ್ಯಾಸಬೇಡರ ಗಾದ್ರಿಪಾಲನಾಯಕ ಮುಂತಾದ ಕಾವ್ಯಗಳನ್ನು ಸಂಗ್ರಹಿಸಿ ಸಂಪಾದಿಸುವುದೆಂದು ತೀರ್ಮಾನಿಸಿದೆವು. ಗೊಂಡರ ತಿಮ್ಮಪ್ಪ ಹಾಡಿದ ರಾಮಾಯಣ ಕಾವ್ಯವನ್ನು ನಾನೇ ಸಂಪಾದಿಸುವುದಾಗಿ ನನ್ನೆಲ್ಲ ಸಹೋದ್ಯೋಗಿಗಳಿಗೆ ಹೇಳಿ, ಈಗಾಗಲೇ ಸಂಗ್ರಹಿಸಲ್ಪಟ್ಟಿದ್ದ ಕಾವ್ಯವನ್ನು ಮತ್ತೊಮ್ಮೆ ಕೇಳಲು ಆರಂಭಿಸಿದೆ. ತಿಮ್ಮಪ್ಪನ ಮತ್ತು ನನ್ನ ಪರಿಚಯ ನಾನೀಗಾಗಲೇ ಹೇಳಿದಂತೆ ಹದಿನೈದು ವರ್ಷದ್ದು. ಉತ್ತರ ಕನ್ನಡದ ಅನೇಕ ಗೊಂಡರ ಹಾಡುಗಳು ನನಗೆ ಚೆನ್ನಾಗಿ ಗೊತ್ತು. ಇಷ್ಟಾಗಿಯೂ ಕಾವ್ಯವನ್ನು ಕೇಳಲು ಕುಂತಾಗ ತಲೆ ಬುಡವೇ ನನಗೆ ಅರ್ಥವಾಗಲಿಲ್ಲ. ತಿಮ್ಮಪ್ಪ ಮಾತನಾಡುವುದಕ್ಕೂ, ರಾಗದಲ್ಲಿ ಕಥೆ ಹೇಳುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಾವ್ಯದಲ್ಲಿ ಬಳಕೆಯಾಗುವ ಭಾಷೆ ಕೆಲವೊಮ್ಮೆ ಕನ್ನಡವೇ ಅಲ್ಲವೇನೋ ಎಂಬಷ್ಟು ಮಟ್ಟಿಗೆ ಭಿನ್ನ. ಆದ್ದರಿಂದ, ಇದೊಂದು ಕನ್ನಡದ ಉಪಭಾಷೆ ಅಥವಾ ಉಪಭಾಷೆಯ ಲಕ್ಷಣಗಳಿರುವ ಹಳೆಯ ಭಾಷೆ ಎಂಬ ತೀರ್ಮಾನಕ್ಕೆ ಬಂದ ನಾನು, ಧ್ವನಿಮುದ್ರಿಸಿದ್ದ ಕ್ಯಾಸೆಟ್ಟ್‌ಗಳನ್ನೂ ಟೇಪ್‌ರೆಕಾರ್ಡ್‌ರನ್ನು ಬ್ಯಾಗಿಗೆ ಹಾಕಿ ಸೀದಾ ಶಿವಮೊಗ್ಗದ ಬಸ್ಸು ಹಿಡಿದೆ.

ಜುಳುಜುಳು ಹರಿಯುವ ಹೊಳೆ ದಂಡೆಗೆ ಹೊಂದಿಕೊಂಡೇ ಇರುವ ತಿಮ್ಮಪ್ಪನ ಮನೆ ಎಂದೂ ಸ್ಫೂರ್ತಿದಾಯಕವಾದದ್ದು. ಆ ಭಾಗದ ಗೊಂಡರ ಸಾಂಸ್ಕೃತಿಕ ನಾಯಕನಂತೆ ಇರುವ ತಿಮ್ಮಪ್ಪ ಯಾರ ಮನೆಯಲ್ಲಿ ಯಾವುದೇ ಧಾರ್ಮಿಕ ಆಚರಣೆ ಇದ್ದರೂ ಹೋಗಲೇಬೇಕು. ಅಂದು ಕೂಡ ತಿಮ್ಮಪ್ಪ ಅಂಥದ್ದೇ ಒಂದು ಕಾರ್ಯಕ್ಕಾಗಿ ಹೊರಟು ನಿಂತಿದ್ದರು. ನಾನು ಬಂದುದನ್ನು ಕಂಡು ಆ ಕಾರ್ಯಕ್ಕಾಗಿ ತನ್ನ ಮಗನನ್ನು ಕಳಿಸಿ ನನ್ನ ಜೊತೆಗೇ ಉಳಿದರು. ತಿಮ್ಮಪ್ಪನ ಮನೆಯ ಎರಡೂ ಮಗ್ಗಲುಗಳಲ್ಲಿ ಹಚ್ಚಹಸುರಿನ ಬತ್ತದ ಪೈರು. ಹೊಳೆದಂಡೆಗೆ ಹೊಂದಿಕೊಂಡಂತೆ ಒಂದಿಷ್ಟು ಅಡಿಕೆ, ತೆಂಗು, ಮನೆಯ ಮುಂಭಾಗಕ್ಕೆ ವಿಶಾಲವಾದ ಕಣ. ಕಣದ ಮಧ್ಯದಲ್ಲಿ ಮೇಟಿಕಂಬ. ಬಲಬದಿಗೆ ತುಳಸಿಕಟ್ಟೆ, ಹಸನಾದ ಕಣದ ತುಂಬ ರಂಗೋಲಿ ಚಿತ್ತಾರಗಳು. ಆಸುಪಾಸಿನಲ್ಲಿ ನಳನಳಿಸುವ ಹೂ ಗಿಡಗಳು. ಅಚ್ಚುಕಟ್ಟುತನಕ್ಕೆ ಮತ್ತೊಂದು ಹೆಸರು ಗೊಂಡರು. ತಿಮ್ಮಪ್ಪನ ವೈಯಕ್ತಿಕ ಜೀವನ ಮತ್ತು ಅಭಿಪ್ರಾಯಗಳು ಹಾಗೂ ಗೊಂಡರ ಬಗ್ಗೆ ತಿಳಿಯಬಯಸುವ ಸಹೃದಯರು ಈ ಗ್ರಂಥದ ಕೊನೆಯಲ್ಲಿ ಕೊಟ್ಟಿರುವ ಅವರ ಸಂದರ್ಶನವನ್ನು ದಯವಿಟ್ಟು ನೋಡಬೇಕೆಂದು ಪ್ರಾರ್ಥಿಸುತ್ತಾ ಈಗ ನೇರವಾಗಿ ರಾಮಾಯಣದ ವಿಚಾರಕ್ಕೆ ಬರುತ್ತೇನೆ.

ತಂದಾನ ತಾನನ ತಂದನುವೋ ತಾನ
ತಂದಾನ ತಾನನ ತಂದುನುವೋ ತಾನ| ತಂದಾನ
ದಶರಥುವೋ ಮಾರಾಜ ಎಂಬುವುನು ಈಗಿನ್ನು
ಚಂದೂದಿಂದುವೇ ಇರುವೊನೆಲ್ಲಾ ತಾನ| ತಂದಾನೆ

ಪಲ್ಲವಿಯ ಒಂದು ಸಾಲನ್ನು ತಿಮ್ಮಪ್ಪ ಗುನುಗಿದ ಬೆನ್ನಲ್ಲೇ ತಿಮ್ಮಪ್ಪನ ಜೊತೆಗೆ ಕೂರುವ ಇಬ್ಬರು ಸಹಗಾಯಕರು ಅದೇ ಪಲ್ಲವಿಯನ್ನು ಪುನರುಚ್ಚರಿಸಿ, ದೀರ್ಘವಾಗಿ ರಾಗ ಎಳೆದು ನಿಲ್ಲಿಸುತ್ತಾರೆ. ಈ ‘ತಂದಾನ ತಾನನ’ ಪಲ್ಲವಿಗಳ ನಡುವೆ ಕಥೆ ಸಾಂಗವಾಗಿ ಬೆಳೆಯುತ್ತಾ ಹೋಗುತ್ತದೆ. ಪ್ರತಿ ಎರಡನೆ ಸಾಲು ಪುನರುಕ್ತಿಯಂತೆ ಗೋಚರಿಸುತ್ತಾದಾದರೂ ಕಥೆಯ ಘಟನೆಗಳನ್ನು ಒಂದಕ್ಕೊಂದು ಬೆಸೆಯುವ ಪ್ರಮುಖ ಘಟನೆ ಇದೇ ಆಗಿರುತ್ತದೆ. ಗೊಂಡರ ತಿಮ್ಮಪ್ಪನ ಕಾವ್ಯದ ವಿಶೇಷ ಎಂದರೆ ‘ಅ’ ಅಕ್ಷರ ‘ಲ’ ವಾಗಿ ಮಾರ್ಪಡುತ್ತದೆ. ಉದಾಹರಣೆಗೆ ‘ಅವನು’ ಎಂಬುದು ‘ಲವುನು’ ಎಂದೂ ‘ಅಂದು’ ಎಂಬುದು ‘ಲಂದೂ’ ಎಂದೂ ‘ಆಕಾಶ’ ಎಂಬುದು ‘ಲಕಾಸು’ ಎಂದು ಪರಿವರ್ತಿತವಾಗಿರುವುದನ್ನು ಗಮನಿಸಬೇಕು. ಹಾಗೆಯೇ ‘ದಶರಥ’ ಎಂಬುದು ‘ದಶರಥು’ ‘ರಾಮ’ ಎಂಬುದು ‘ರಾಮು’ ‘ಸುಖದಲ್ಲಿ’ ಎಂಬುದು ‘ಸುಖದಲ್ಲು’ ಎಂದು ಆಕಾರ ಉಕಾರವಾಗಿರುವ ನೂರಾರು ಶಬ್ದಗಳು ಇಡೀ ಕಾವ್ಯದ ತುಂಬ ಗೋಚರಿಸುತ್ತವೆ. ಈ ಶಬ್ದಗಳಲ್ಲದೆ, ಸೌಮಿತ್ರೆ-ಕೌಮಿತ್ರೆ, ಭರತ-ಬಾರ್ತ, ಸತೃಜ್ಞ-ಸಸ್ತ್ರ, ಲಕ್ಷ್ಮಣ-ಲಚ್ಚುಮಣ, ಮೃಗ-ಮುರುಗ, ಸಣ್ಣ-ಚಣ್ಣ, ಚಂದ್ರ-ಚಂದುರು, ಅರಣ್ಯ -ಅರುಣ್ಣೀ, ಅಜ್ಞಾತವಾಸ-ಅಜ್ಞಾಸ, ರಾಕ್ಷಸ-ರಾಕಾಸ ಮುಂತಾದ ರೂಪಾಂತರಗಳನ್ನು ಓದುಗರು ಮೊದಲೇ ಗಮನಿಸಬೇಕೆಂದು ಕೋರುತ್ತೇನೆ. ಪದ-ಪದಗಳನ್ನು ಸನ್ನಿವೇಶಗಳನ್ನು ಬೆಸೆಯುವಾಗ ‘ಲಾಗೂ ತಾನೀಗು’, ‘ಲಂದೂ ತಾನಿಗೂ’ ‘ತಾನೂವಿಗೊಂದೆ’ ಮುಂತಾದ ಸಂಕೀರ್ಣ ಪದಪ್ರಯೋಗಗಳೂ ಆಗಿವೆ ಹೀಗೆ ಮತ್ತೆ ಮತ್ತೆ ಪುನರುಕ್ತಿಯಾಗುವ ಪದಗಳನ್ನಲ್ಲದೆ ಸಂಕೀರ್ಣ ರೂಪದ ಒತ್ತಕ್ಷರಗಳು ಸರಳೀಕರಣಗೊಳ್ಳುವ ಕ್ರಿಯೆಗಳನ್ನು ಮೊದಲೇ ಗಮನಿಸಿದರೆ ಒಳ್ಳೆಯದು. ಉಳಿದಂತೆ ಕಾವ್ಯ ಅತ್ಯಂತ ಸರಳವಾದ ರೀತಿಯಲ್ಲಿ ಮುನ್ನಡೆಯುತ್ತಾ ಯಾವುದೇ ವೈಭವೋಪೇತ ವರ್ಣನೆಗಳಿಲ್ಲದೆ ‘ಕಂಡದ್ದನ್ನು ಕಂಡ ಹಾಗೆ ಹೇಳುವ’ ಪರಿಕ್ರಮದಲ್ಲಿ ಮುಂದುವರೆಯುತ್ತದೆ. ಹಾಗೇ ನಮ್ಮಲ್ಲಿ ಅನೇಕ ಕುತೂಹಲಗಳನ್ನೂ ಹುಟ್ಟಿಹಾಕುತ್ತದೆ.

‘ರಾಮಾಯಣ ಯಾರಿಗೆ’ ಗೊತ್ತಿಲ್ಲ? ಭಾರತದ ಯಾವುದೇ ಭಾಗದ ಯಾವುದೇ ಜನಕ್ಕೆ ರಾಮಾಯಣ ಗೊತ್ತಿಲ್ಲ ಎಂದರೆ ಅವನು ಬುದ್ದಿಮಾಂದ್ಯ ಎಂದೇ ನಂಬುವಷ್ಟರಮಟ್ಟಿಗೆ ಅದರ ಜನಪ್ರಿಯತೆ ಹೆಚ್ಚು. ಹೀಗಿರುವಾಗ ಗೊಂಡರ ತಿಮ್ಮಪ್ಪನ ರಾಮಾಯಣವನ್ನು ಮತ್ತೊಮ್ಮೆ ಕೇಳುವ ಅಗತ್ಯವೇನಿದೆ? ತಿಮ್ಮಪ್ಪನ ರಾಮಾಯಣದಲ್ಲಿ ತಲ್ಲೀನವಾಗುವ ಮೊದಲು ಯಾರಾದರೂ ಈ ಪ್ರಶ್ನೆಗಳನ್ನು ಕೇಳಬಹುದು. ಆದರೆ, ಈ ದೇಶದಲ್ಲಿ ಎಷ್ಟು ರಾಮಾಯಣಗಳಿವೆ? ವಾಲ್ಮೀಕಿ ರಾಮಾಯಣ, ತುಲಸೀ ರಾಮಾಯಣದಂಥ ಪಾಂಡಿತ್ಯಪೂರ್ಣ ಸಂಸ್ಕೃತ ರಾಮಾಯಣಗಳು ಕುವೆಂಪು ಅವರ ‘ರಾಮಾಯಣ ದರ್ಶನ’ದಂತ ಹೊಸ ಬಗೆಯ ಕಾವ್ಯ, ಅಭಿನವ ಪಂಪನೆಂದು ಹೇಳಲಾಗುವ ನಾಗಚಂದ್ರನ ರಾಮಚಂದ್ರ ಚರಿತಪುರಾಣ-ಹೀಗೆ ಲಿಖಿತ ರೂಪದಲ್ಲಿರುವ ಹಾಗೂ ಒಬ್ಬೊಬ್ಬರೂ ಅವರ ಇಚ್ಛಾನುಸಾರ ವಿಸ್ತರಿಸಿರುವ ನೂರಾರು ರಾಮಾಯಣಗಳು ನಮಗೆ ಸಿಗುತ್ತವೆ. ಅವೆಲ್ಲವೂ ತಮ್ಮ ತಮ್ಮ ವಿಚಾರಗಳನ್ನು ರಾಮಾಯಣದ ಮೂಲಕ ಬೋಧಿಸುತ್ತವೆ. ಹಾಗೆ ಬೋಧಿಸುವ ಶಕ್ತಿ ಇರುವ ಕಾರಣಕ್ಕಾಗಿಯೇ ಅವುಗಳನ್ನು ಮಹಾಕಾವ್ಯಗಳೆಂದೂ ಕರೆಯಲಾಗಿದೆ.

ಆದರೆ ಮೌಖಿಕ ಪರಂಪರೆಯಲ್ಲಿ ಕಾಲದಿಂದ ಕಾಲಕ್ಕೆ, ಬಾಯಿಂದ ಬಾಯಿಗೆ ಬೆಳೆದು ಬಂದ ಅದೆಷ್ಟೋ ರಾಮಾಯಣಗಳು ನಮ್ಮಲ್ಲಿ ಇವೆಯಲ್ಲ? ಅವು ಏನನ್ನು ಹೇಳುತ್ತವೆ? ಭಾರತದಾದ್ಯಂತ ಪ್ರಚಲಿತದಲ್ಲಿರುವ ಇಂಥ ಅನೇಕ ಬುಡಕಟ್ಟು ರಾಮಾಯಣಗಳ ಸ್ವರೂಪವನ್ನು, ಅವುಗಳ ಬಗ್ಗೆ ವಿದ್ವಾಂಸರು, ಸಂಶೋಧಕರು, ಚಿಂತಕರು ಹಾಗೂ ಇತಿಹಾಸಕಾರರು ಹೇಳಿರುವ ಅಭಿಪ್ರಾಯಗಳನ್ನು ಈ ನಮ್ಮ ತಿಮ್ಮಪ್ಪನ ಗೊಂಡರ ರಾಮಾಯಣದ ಮುಖೇನವೇ ಪ್ರಸ್ತಾಪಿಸಿ, ತುಲನೆ ಮಾಡುವ ಉದ್ದೇಶದಿಂದ ಈ ಪ್ರಸ್ತಾವನಾ ರೂಪದ ಬರಹವನ್ನು ಕೈಗೊಂಡದ್ದೇನೆ.

ರಾಮಾಯಣದ ದಶರಥನಾಗಲಿ, ರಾಮನಾಗಲಿ ನಮಗೆ ಸಾಮಾನ್ಯ ಜನರಂತೆ ಕಾಣುವುದಿಲ್ಲ. ಅವರು ರಾಜರು, ತಮ್ಮದೇ ಆದ ತತ್ವಾದರ್ಶಗಳನ್ನು ಇಟ್ಟುಕೊಂಡವರು. ಅವರು ಗುಣಶೀಲರು. ‘ರಾಮಾಯಣದಲ್ಲಿ ವಾಲ್ಮೀಕಿ ಆದರ್ಶ ವ್ಯಕ್ತಿಯೊಬ್ಬನನ್ನು ಚಿತ್ರಿಸುತ್ತಾನೆ. ಮಹದ್ಗುಣಗಳು, ಉನ್ನತಿ ಉಳ್ಳವನು; ಶುಚಿಶೀಲ ಘನವಾದ ಉದ್ದೇಶಗಳುಳ್ಳವನು; ನಡತೆಯಲ್ಲಿ ಉನ್ನತವಾದ ಆದರ್ಶವೇನು ಎಂಬುದನ್ನು ತೋರಿಸುವುದಕ್ಕೆ ಇದು ಮೀಸಲು; ಮಹತಿಯುಳ್ಳ ಮತ್ತು ದಕ್ಷನಾದ ಒಂದು ಸಾವಿರ ಸಂಗತಿಗಳ ನಡುವೆ ಅದರ ಪ್ರತಿಷ್ಠೆ ಎಷ್ಟು ದೊಡ್ಡದು ಎಂಬುದನ್ನು ಕಾಣಿಸುವಂಥದು. ಎಲ್ಲರೂ ಅದಕ್ಕೆ ಗೌರವ ತೋರಿಸುತ್ತಾರೆ. ದೇವತೆಗಳೂ ಮನುಷ್ಯರಲ್ಲಿ ಯಾರೂ ಅದನ್ನು ಎದುರಿಸಿ ನಿಲ್ಲಲು ಮನಸ್ಸು ಮಾಡುವುದಿಲ್ಲ. ಅಂತಹ ಪಾತ್ರಕ್ಕೆ ಆಳವಾದ ಸ್ವಂತ ಮನೋವೃತ್ತಿಗಳು ಲೆಕ್ಕಕ್ಕೆ ಬಾರವು. ಅದರ ಹಡಿಗೆ ಬಡಿದು ಈ ಭಾವಗಳು ಒಡೆದು ಚೂರಾಗುವ ಅಲೆಗಳನ್ನು ಸ್ನೇಹ ಪ್ರೀತಿಗಳ ನಿರೀಕ್ಷೆಗೂ ಪಾಕ್ಷಪಾತಗಳಿಗೂ ವಿರುದ್ಧವಾಗಿ ನಿಂತು ತಮ್ಮ ನ್ಯಾಯಶೀಲತೆಯನ್ನು ಅಖಂಡತೆಯನ್ನು ದೃಢ ನಿಶ್ಚಯವನ್ನು ಕಾರ್ಯಕಾರಿಯಾಗಿಸಿರುವ ಅನೇಕ ನಿದರ್ಶನಗಳು ಮಾನವ ಇತಿಹಾಸದ ತುಂಬಾ ಇವೆ’[1]. ಆದರೆ ನಮ್ಮ ಜನಸಾಮಾನ್ಯರು ಕಲ್ಪಿಸಿಕೊಂಡ ನಾಯಕರು ಹೀಗೇ ಇರಬೇಕೆಂದೇನಿಲ್ಲ. ಕಥೆ ಕೂಡ ವಾಲ್ಮೀಕಿ ರಾಮಾಯಣದ ಪಡಿಯಚ್ಚೆ ಆಗಬೇಕಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ಗೊಂಡರ ರಾಮಾಯಣ ಹಾಗೂ ಉತ್ತರಭಾರತದ ಕೆಲವು ಬುಡಕಟ್ಟುಗಳ ರಾಮಾಯಣಗಳಲ್ಲಿ ಚಿತ್ರಿತವಾಗಿರುವ ದಶರಥ, ವಾಲ್ಮೀಕಿಯ ದಶರಥನಂತೆ ಬೇಟೆಗೆ ಹೊರಡುವುದೇನೋ ನಿಜ. ಬೇಟೆಗೆ ಅವನ ಆಕಾಂಕ್ಷೆಯಾದರೂ ಏನು?

ಮುರುಗನು ಬ್ಯಾಟೀಗು ಹೋಗಬೇಕಾ ತಾನ
ಮಾಸಾ ಮಾಡಿ ನಾನೆ ಬರುಬೇಕಾ ತಾನ
ಬ್ಯಾಟಿ ಅಡುಗೇನೆ ಮಾಡುಬೇಕಾ ತಾನ

ಬ್ಯಾಟೆಗೆ ಹೋಗುವುದೇ ಪ್ರಾಣಿಗಳನ್ನು ಕೊಂದು, ಅವುಗಳ ಮಾಂಸ ತಂದು, ಬ್ಯಾಟೆ ಅಡುಗೆ ಮಾಡುವುದಕ್ಕೆ. ಇದಿಷ್ಟೇ ಬ್ಯಾಟೆಯ ಉದ್ದೇಶ. ಬುಡಕಟ್ಟು ಜನರ ಇಂಥ ಸರಳ ಉದ್ದೇಶದಿಂದ ಹೊರಟ ದಶರಥ ಬೇಟೆಗೆ ಹೊರಡುವ ರೀತಿ ನೋಡಿ.

ಚಣ್ಣಾ ಗುಂಡೀನ ಕೋವಿಯಲೋಗಿನ್ನು
ಮದ್ದು ಗುಂಡೊಂದೆ ತುಂಬಿದನೋವಿನ್ನು
ಹಂಡಾ ನಾಯೊಂದೆ ಕರಕೊಂಡಾಳ
ಹುಂಡಾ ನಾಯೊಂದೆ ಕರಕೊಂಡಾ

ದಶರಥ ಕೋವಿ ಇಟ್ಟುಕೊಂಡಿದ್ದ! ಗೊಂಡರ ಬೇಟೆಗಾರನೊಬ್ಬ ಸಹಜವಾಗಿ ಬೇಟೆಗೆ ಹೊರಡುವಂತೆ ಹೊರಟ. ಕೆರೆಯಲ್ಲಿ ನೀರು ಕುಡಿಯುತ್ತಿದ್ದ. ಅನೆಯೊಂದಕ್ಕೆ ಗುಂಡು ಹಾರಿಸಿದ. ಸಾಯುವ ಮೊದಲು ಆನೆ ‘ನಿನ್ನ ಪುತ್ರನಿಂದಲೇ ನೀನು ಸಾಯುತ್ತೀಯ’ ಎಂದು ಶಾಪ ಕೊಟ್ಟಿತು. ‘ನನಗೆ ಇನ್ನೂ ಪುತ್ರನೇ ಹುಟ್ಟಿಲ್ಲ. ಸಾಯುವುದೆಲ್ಲಿ ಬಂತು’ ಎಂದು ಉದಾಸೀನದ ಮಾತನ್ನಾಡಿದ ದಶರಥ ಹಿಂತಿರುಗಿ ಬಂದ.

ವಾಲ್ಮೀಕಿ ರಾಮಾಯಣದ ಪ್ರಕಾರ ದಶರಥ ಆನೆ ಎಂದು ಭ್ರಮಿಸಿ ಕೊಲ್ಲುವುದು ಮುನಿಕುಮಾರನೆನಿಸಿದ ಶ್ರವಣನನ್ನು. ಶ್ರವಣ ಕುಮಾರನ ಈ ಘಟನೆ ಅನೇಕ ವಿವಾದಗಳಿಗೆ ಎಡೆಮಾಡಿಕೊಟ್ಟಿದೆ, ಬ್ರಾಹ್ಮಣ ಅಥವಾ ಕ್ಷತ್ರಿಯರಲ್ಲದವರು ಮುನಿಕುಮಾರರಾಗುವ ಅಥವಾ ತಪಸ್ಸು ಆಚರಿಸುವಂಥ ಕಾಯಕವನ್ನು ಆ ಕಾಲದಲ್ಲಿ ಕೈಗೊಳ್ಳಬಾರದಿತ್ತು. ಈ ಧೋರಣೆಯನ್ನೇ ಪ್ರತಿಪಾದಿಸುತ್ತಿದ್ದ ಆಗಿನ ರಾಜರು ತಪಸ್ವಿಗಳಾಗ ಬಯಸಿದ ಶೂದ್ರರನ್ನು ಯಾವುದೋ ರೂಪದಲ್ಲಿ ಕೊಲ್ಲುತ್ತಿದ್ದರು. ಅಂಥ ಎರಡು ಬರ್ಬರ ಉದಾಹರಣೆಗಳು ರಾಮಾಯಣದಲ್ಲಿವೆ. ಒಂದು ಶ್ರವಣಕುಮಾರನ ಹತ್ಯೆ, ಮತ್ತೊಂದು ಶಂಬೂಕನ ಹತ್ಯೆ[2]. ಮೊದಲನೆಯದು ತಂದೆಯಾದ ದಶರಥನಿಂದ ಘಟಸಿದರೆ, ಎರಡನೆಯದು ಆತನ ಮಗನಾದ ರಾಮನಿಂದ ಘಟಿಸುತ್ತದೆ. ಆದರೆ, ಈ ಘಟನೆಯ ತಂಟೆಗೇ ಹೋಗದ ನಮ್ಮ ಗೊಂಡರ ರಾಮಾಯಣ ಆನೆಯ ಕೊಲೆಯನ್ನು ಎತ್ತಿ ತೋರಿಸುತ್ತದೆ. ಪ್ರಕೃತಿಯ ಬಹುಮುಖ್ಯ ಪ್ರಾಣಿಗಳಲ್ಲಿ ಒಂದಾದ ಆನೆಯನ್ನು ಕೊಲ್ಲುವ ಮೂಲಕ ನಿಸರ್ಗದ ಮೇಲೆ ಹಲ್ಲೆ ನಡೆಸುವ ಯಾವನೇ ಆದರೂ ಅವನಿಗೆ ಶ್ರೇಯಸ್ಸಿಲ್ಲ ಎಂಬ ದೇಸಿಧರ್ಮ ಸೂಕ್ಷ್ಮವೊಂದನ್ನು ಇಲ್ಲಿ ಹೇಳಲಾಗುತ್ತಿದೆ.

ದಶರಥನ ವ್ಯಕ್ತಿತ್ವವನ್ನು ಕುರಿತಂತೆ ನಮ್ಮ ಇತರೆ ಬುಡಕಟ್ಟು ರಾಮಾಯಣಗಳ ನೋಟ ಇನ್ನಷ್ಟು ಕುತೂಹಲಕಾರಿಯಾಗಿದೆ. ಮಧ್ಯ ಭಾರತದ ಬಿಲ್ಸ್ ಮತ್ತು ಸಂತಾಲರಲ್ಲಿ ಪ್ರಚಲಿತವಿರುವ ಕಥೆಗಳ ಪ್ರಕಾರ ದಶರಥನಿಗೆ ಶಾಪದಿಂದ ಮಕ್ಕಳಿರುವುದಿಲ್ಲ. ಮಂತ್ರಗಾರನೊಬ್ಬನ ಸಹಾಯದಿಂದಾಗಿ ನಾಲ್ಕು ಜನ ಮಕ್ಕಳಾಗುತ್ತಾರೆ. ಆದರೆ, ಅವರು ಮಾಟಗಾರನ ಸಹಾಯದಿಂದ ಹುಟ್ಟಿದವರಾದ್ದರಿಂದ ಮೊದಲು ಹುಟ್ಟಿದ ಇಬ್ಬರು ಮಕ್ಕಳನ್ನು ಅವನಿಗೇ ಕೊಡಬೇಕೆಂದು ಮಾತಾಗಿರುತ್ತದೆ. ಆದರೆ ದಶರಥ ಕೊನೆಯ ಇಬ್ಬರನ್ನು ಮಾತ್ರ ಕೊಡುತ್ತೇನೆ ಎಂದು ಮಾತುಕೊಟ್ಟಿದ್ದೆ ಎಂದು ವಾದಿಸಿ ಸುಳ್ಳು ಹೇಳುತ್ತಾನೆ. ಹೀಗೆ ಸುಳ್ಳು ಹೇಳುವುದು ರಾಜರ ಸಾಮಾನ್ಯ ಗುಣ ಎಂಬುದು ಸಂತಾಲರ ತರ್ಕ. ಕಡೆಗೆ ಮಂತ್ರಗಾರ ನಿಜವನ್ನು ನಿರೂಪಿಸಿ ಹಿರಿಯರಾದ ರಾಮ ಮತ್ತು ಲಕ್ಷ್ಮಣರನ್ನು ಕರೆದುಕೊಂಡು ಹೋಗುತ್ತಾನೆ.

ಇವರದೇ ಮತ್ತೊಂದು ಕಥೆಯ ‘ದಶರಥನ ಹಿರಿಯ ಮಗ ರಾಮ ಕೇವಲ ಕೈಕೆಗೆ ಕೊಟ್ಟಿದ್ದ ವರಗಳಿಂದಾಗಿ ಅಯೋಧ್ಯೆ ಬಿಡುವುದಿಲ್ಲ. ಬದಲಾಗಿ, ರಾಮನನ್ನು ಸಹಿಸದ ದಶರಥ ಇದ್ದಕ್ಕಿಂದಂತೆ ಒಂದು ದಿನ ತನ್ನ ಅರಮನೆಯ ದ್ವಾರ ಬಾಗಿಲಿನಲ್ಲಿ ನಿಂತು ‘ಇವತ್ತಿನಿಂದ ಭರತ ಶತೃಜ್ಞರು ರಾಜ್ಯವಾಳುತ್ತಾರೆ. ರಾಮಲಕ್ಷ್ಮಣರು ಕಾಡಿಗೆ ಹೋಗುತ್ತಾರೆ’ ಎಂದು ಸಾರುತ್ತಾನೆ. ರಾಜರುಗಳೇ ಹೀಗೆ, ಬಹು ತಿಕ್ಕಲು ಸ್ವಭಾವದವರು. ಯಾವಾಗ ಏನು ತೀರ್ಮಾನ ಬೇಕಾದರೂ ತೆಗೆದುಕೊಳ್ಳಬಲ್ಲರು’ ಎಂಬ ಮಾತುಗಳ ಮೂಲಕ ರಾಜನಾದವನ ತಿಕ್ಕಲುತನವನ್ನು ಬುಡಕಟ್ಟು ಜನ ತಮ್ಮ ಕಥೆಗಳ ಮೂಲಕ ಬಯಲು ಮಾಡುತ್ತಾರೆ[3].

ದಶರಥ ಕೈಕೆಗೆ ವರ ಕೊಡುವ ಸಂದರ್ಭ ನಮ್ಮ ಗೊಂಡರ ರಾಮಾಯಣದಲ್ಲಿ ಭಿನ್ನವಾಗಿ ಬರುತ್ತದೆ. ಇಂದುರು ಲೋಕ, ಚಂದುರು ಲೋಕವನ್ನೊಮ್ಮೆ ನೋಡಿ ಬರಬೇಕು ಎಂದು ದಶರಥನಿಗೆ ಆಸೆಯಾಗುತ್ತದೆ. ಅದಕ್ಕಾಗಿ ಮಾಯದ ರಥವೊಂದನ್ನು ಮಾಡಿಸಿ ಅದರಲ್ಲಿ ದಶರಥ ಹೊರಡುತ್ತಾನೆ. ದಶರಥ ಆನಂದದ ವಿವಾಹರದಲ್ಲಿದ್ದಾಗ ರಥದ ಚಕ್ರ ದೋಷಕ್ಕೆ ಒಳಗಾಗುತ್ತದೆ. ಕೈಕೆ ತನ್ನ ಚಾಣಾಕ್ಷತೆಯಿಂದ ಅಪಾಯವನ್ನು ತಪ್ಪಿಸುತ್ತಾಳೆ.

‘ಚಂದದಲ್ಲೂ ಸುಖದಲ್ಲೂ’ ಕಾಲ ಕಳೆಯುತ್ತಿರುವಾಗ ಕೌಸಲ್ಯೆ, ಕೈಕೆ ಸೌಮಿತ್ರೆಯರಿಗೆ ಒಟ್ಟು ನಾಲ್ಕು ಜನ ಮಕ್ಕಳಾಗುತ್ತಾರೆ. ಅವರನ್ನು ಸಾಕಿ ಸಲುಹಿದ ರೀತಿ ನೋಡಿ:

ಹಸು ನೀರು ಬಿಸು ಮಾಡಿ ಹುಯ್ದರಾಲಾ
ಎಣ್ಣಿಲು ಬೆಣ್ಣೇಲಿ ಉಜ್ಜರಾಲಾ
ಉದ್ದು ದೊಡ್ಡಾನೆ ಮಾಡರಾಲಾ
ಬುದ್ದು ಬಲವಾಗು ಬಂದರಾಲಾ
ಇದ್ದಿ ಬುದ್ದೀನೆ ಕಲುಸರಾಲಾ
ಸಾಧಕು ಸಂಪತ್ತೆ ಕಲುಸರಾಲಾ
ಬಿಲ್ಲು ವಿದ್ದೀನೆ ಕಲುಸರಾಲಾ
ಜಾಲು ವಿದ್ದೀನೆ ಕಲುಸರಾಲಾ

ಒಂದು ಸ್ಥಳೀಯ ಜ್ಞಾನ ಪರಂಪರೆಯಲ್ಲಿ ಮಕ್ಕಳನ್ನು ಹೇಗೆ ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡಬಹುದೋ ಹಾಗೆ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ್ದಾರೆ. ಅಲ್ಲದೆ, ಅವರಿಗೆ ವಿದ್ಯೆಬುದ್ದಿ ಕಲಿಸಿದ್ದಾರೆ. ಗರಡಿ ಸಾಧನೆಗಳನ್ನು ಕಲಿಸಿಕೊಟ್ಟಿದ್ದಾರೆ. ಬಿಲ್ಲು ವಿದ್ಯೆಯೂ ಆಗಿದೆ. ಆದರೆ ಇಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸಬೇಕಾದದು ‘ಜಾಲು’ ವಿದ್ಯೆಯನ್ನು ಕಲಿಸಿದರು ಎಂಬುದು. ಒಂದು ಬುಡಕಟ್ಟು ಸಮಾಜ ಬಿಲ್ಲು ವಿದ್ಯೆ, ಗರಡಿ ವಿದ್ಯೆಗಳಿಗಿಂತ ಮಾಂತ್ರಿಕ ವಿದ್ಯೆಯನ್ನು ಹೆಚ್ಚು ಗೌರವಿಸುತ್ತದೆ. ಮಾಂತ್ರಿಕ ವಿದ್ಯೆಯ ಅನೇಕ ಮಜಲುಗಳ ಈ ‘ಜಾಲ’ ವಿದ್ಯೆಯನ್ನು ದಶರಥನ ಮಕ್ಕಳೂ ಕಲಿಯುತ್ತಾರೆ. ಬುಡಕಟ್ಟು ವಿದ್ಯೆ ಎನಿಸಿದ್ದ, ಪ್ರಾಚೀನ ಸಮಾಜದ ಅವಿಭಾಜ್ಯ ಅಂಗವೆನಿಸಿದ್ದ ಈ ವಿದ್ಯೆಯನ್ನು ದಶರಥನ ಮಕ್ಕಳೂ ಕಲಿತರೆಂಬುವಲ್ಲಿ ಒಂದು ಆದಿವಾಸಿ ಸಮಾಜದ ಜೀವನಾಕಾಂಕ್ಷೆಗಳೂ ಅಡಗಿವೆ ಎಂಬುದನ್ನು ಹೇಳಲು ಮಾತ್ರ ಈ ಪ್ರಸಂಗವನ್ನು ಬಣ್ಣಿಸಬೇಕಾಯಿತು.

ಗೊಂಡರ ರಾಮಾಯಣದ ಆರಂಭದಲ್ಲಿಯೇ ಬರುವ ಮತ್ತೊಂದು ಭಿನ್ನ ಪಾಠವೆಂದರೆ ರಾಮ ಲಕ್ಷ್ಮಣರ ವನವಾಸದ ವಿಚಾರ. ಇಲ್ಲಿನ ವನವಾಸ ರಾಮನ ವಿವಾಹದ ತರುವಾಯ ಬರುವಂಥದಲ್ಲ. ವಿವಾಹಕ್ಕೆ ಮೊದಲೇ ದಶರಥ ರಾಮನಿಗೆ ಪಟ್ಟಕಟ್ಟುವ ಯೋಚನೆ ಮಾಡುತ್ತಾನೆ. ಕೈಕೆ ಅದನ್ನು ತಡೆದು ತನಗೆ ಕೊಟ್ಟಿದ್ದ ವರಕ್ಕೆ ಅನುಗುಣವಾಗಿ ರಾಮ ಲಕ್ಷ್ಮಣರು ಆರು ವರ್ಷ ವನವಾಸ ಮತ್ತು ಆರು ವರ್ಷ ಅಜ್ಞಾತವಾಸ ಮಾಡಬೇಕು ಎಂದು ಕೇಳಿಕೊಳ್ಳುತ್ತಾಳೆ. (ಇಲ್ಲಿ ಮಂಥರೆಯ ವಿಚಾರವೇ ಬರುವುದಿಲ್ಲ) ಅದರಂತೆ ರಾಮಲಕ್ಷ್ಮಣರು ವನವಾಸಕ್ಕೆ ಹೊರಡುತ್ತಾರೆ. ಆರುವರ್ಷ ವನವಾಸ ಕಳೆದ ಮೇಲೆ, ಇನ್ನೂ ಆರು ವರ್ಷಗಳ ಅಜ್ಞತವಾಸ ಬಾಕಿ ಇರುವಾಗ ಸೀತೆಯ ಲಗ್ನದ ವಿಚಾರ ಬರುತ್ತದೆ. ಇದು ಗೊಂಡ ರಾಮಾಯಣದ ಬಹು ಮುಖ್ಯ ಭಾಗ ಎಂದೇ ನನ್ನ ಅಭಿಪ್ರಾಯ; ಯಾಕೆ ಮುಖ್ಯ ಎಂಬುದನ್ನು ಮುಂದೆ ಪ್ರಸ್ತಾಪಿಸುತ್ತೇನೆ.

ಜನಕರಾಜನ ಮಗಳಾದ ಸೀತೆ ನೆಲದಲ್ಲಿ ಸಿಕ್ಕಿದ ಮಣ್ಣಿನ ಮಗಳು ಎಂಬುದು ಮೂಲ ರಾಮಾಯಣದ ವಿಚಾರವೂ ಹೌದು. ಆದರೆ, ಗೊಂಡ ರಾಮಾಯಣದ ಜನಕ ರಾಜನಲ್ಲ. ಒಬ್ಬ ರೈತ, ಇವನು ಹೊಲ ಉಳುತ್ತಿರುವಾಗ ಅವನ ನೇಗಿಲಿಗೆ ಸೀತೆ ಸಿಕ್ಕುತ್ತಾಳೆ. ಹೀಗೆ ಸಿಕ್ಕ ಭೂಮಿತಾಯಿಯ ಮಗಳಿಗೆ ‘ಸೀತಿ’ ಎಂದು ಹೆಸರಿಡುತ್ತಾನೆ. ಜನಕ ಒಂದು ಕಲ್ಲಿನ ಮೇಲೆ ಕುಳಿತು ದಿನವೂ ಜಪ ಮಾಡುತ್ತಿರುತ್ತಾನೆ. ಆಕಾಶದಲ್ಲಿ ಹಾರುವ ಕಾಗೆಯೊಂದು ದಿನವೂ ಅಲ್ಲಿಗೆ ಬಂದು, ಕಲ್ಲಿನ ಮೇಲೆ ಹೇತು, ಹೊಲಸು ಮಾಡುವ ಮೂಲಕ ಜಪವನ್ನು ಕೆಡಿಸುತ್ತಿರುತ್ತದೆ. ಹೀಗೆ ತನ್ನ ಜಪ ಕೆಡಿಸುವ ‘ಆಕಾಶ ಕಾಕಿ’ಯನ್ನು ಕೊಲ್ಲಿಸಲು ‘ಬೂಮು ತೂಕದ ಬಿಲ್ಲು, ಅಕಾಸು ಬಾಣ’ ಸಿದ್ಧಪಡಿಸುತ್ತಾನೆ.

ಭೂಮು ತೂಕದ ಬಿಲ್ಲು
ಅಕಾಸು ತೂಕದ ಬಾಣ
ಇಡೀ ಭೂಮಿನೇ ಎತ್ತುಬೇಕು
ಇಡೀ ಆಕಾಸನೆ ನಗಿಬೇಕು
ಅಕಾಸು ಕಾಕಿನೆ ಕೊಲುಬೇಕು

ಹೀಗೆ ‘ಆಕಾಸ ಕಾಕಿ’ಯನ್ನು ಕೊಲ್ಲಲು ಬಿಲ್ಲಿನ ಹಬ್ಬವೊಂದನ್ನು ಏರ್ಪಾಡು ಮಾಡುತ್ತಾನೆ. ಹಣ್ಣು ಅರಸುತ್ತಾ ಕಾಡಿಗೆ ಹೋಗಿದ್ದ ಲಕ್ಷ್ಮಣನಿಗೆ ಈ ಬಿಲ್ಲಿನ ಹಬ್ಬದ ವಿಷಯ ಗೊತ್ತಾಗುತ್ತದೆ. ತನ್ನ ಅಣ್ಣನಿಗೆ ಈ ವಿಚಾರವನ್ನು ಹೇಳುತ್ತಾನೆ. ಅವನ ಅಣ್ಣನಾದ ರಾಮನಿಗೂ ಈ ವಿಷಯ ಮೊದಲೇ ತಿಳಿದಿರುತ್ತದೆ. ಆದರೆ ಆ ಕಾಕಿಯನ್ನು ಹೊಡಿಯಬೇಕಾದ ನೇಮ ನಿಯಮವನ್ನು ರಾಮ ಪಾಲಿಸಿರುವುದಿಲ್ಲ. ಆಗ ಲಕ್ಷ್ಮಣನಿಗೆ ಅವನು ಹೇಳುತ್ತಾನೆ. ‘ಹನ್ನೆರಡೂರುಷ ಅನ್ನ ಆಹಾರ ತಿಂದಿರಬಾರದು, ಹಣ್ಣು ಹಾಲು ಮುಟ್ಟಿರಬಾರದು, ಅಷ್ಟೆ ಅಲ್ಲ,

ಕಂಕ್ಳಲ್ಲಿ ಕವುಡೆ ಕಟ್ಟಬೇಕು
ಮೂಗಲ್ಲಿ ನೆಲ ಮುಸುರೆ ಕಟ್ಟಬೇಕು
ಬೆನ್ನಲ್ಲಿ ನಾಗುಲಿ ಬೆತ್ತ ಬೆಳಿಬೇಕು
ಗಂಟ್ಲಲ್ಲಿ ಸಾಲುಗನ ಬಲೆ ಕಟ್ಟಬೇಕು

ಹಣ್ಣು ಆಹಾರಾದಿಗಳನ್ನು ತ್ಯಜಿಸಿ ಇಂಥ ತಪಸ್ವಿಯಾಗಿದ್ದವನಿಗೆ ಮಾತ್ರ ಆ ಬಿಲ್ಲನ್ನು ಎತ್ತಿ ಆಕಾಸು ಕಾಕಿಯನ್ನು ಹೊಡೆಯಲು ಸಾಧ್ಯ. ಆ ನೇಮ ನಿಯಮವನ್ನು ಮಾಡದ ನಾವು ಅದನ್ನು ಮಾಡಲು ಸಾಧ್ಯವೇ?. ಇದು ರಾಮನ ಪ್ರಶ್ನೆ. ಆದರೆ ಲಕ್ಷ್ಮಣ ಅಂಥ ನೇಮ ನಿಯಮದಿಂದಲೇ ಇರುತ್ತಾನೆ. ಕಾಡಿನಲ್ಲಿ ಇರುವಷ್ಟೂ ದಿನ ಅವನಿಗೆ ಸಿಗುತ್ತಿದ್ದುದು ಎರಡೇ ಹಣ್ಣು. ಆ ಎರಡು ಹಣ್ಣುಗಳನ್ನು ತಂದು ಅವನ ಅಣ್ಣನಿಗೆ ಒಪ್ಪಿಸುತ್ತಿದ್ದ. ಆದರೆ ಅಣ್ಣನಾದವನು ಒಂದನ್ನು ತಿಂದು ಇನ್ನೊಂದನ್ನು ತಮ್ಮನಿಗೆ ಕೊಡುತ್ತಿದ್ದನಾದರೂ ‘ತಿನ್ನು’ ಎಂದು ಹೇಳುತ್ತಿರಲಿಲ್ಲ. ಅಲ್ಲದೆ ದೇವರ ಅಭಿಷೇಕಕ್ಕೆ ಹಣ್ಣು ಉಳಿಯುತ್ತಿರಲಿಲ್ಲ. ಹೀಗಾಗಿ ಆ ಉಳಿದ ಒಂದು ಹಣ್ಣನ್ನು ದೇವರಿಗೆ ಅರ್ಪಿಸಿ ಅವನು ಹಾಗೇ ಇದ್ದು ಬಿಡುತ್ತಿದ್ದ. ಈ ವಿಚಾರವನ್ನು ಈಗ ರಾಮನಿಗೆ ಹೇಳುತ್ತಾನಲ್ಲದೆ, ಅವನ ಕಂಕಳು, ಬೆನ್ನು, ಮೂಗು ಹಾಗೂ ಗಂಟಲನ್ನು ತೋರಿಸುತ್ತಾನೆ. ಈ ರೀತಿಯಲ್ಲಿ ಆ ಬಿಲ್ಲುನ್ನು ಎತ್ತಿ ಆಕಾಸು ಕಾಕಿಯನ್ನು ಕೊಲ್ಲಲು ಸಿದ್ಧನಾಗುತ್ತಾನೆ.

ಅವರಿಬ್ಬರು ಜನಕುರಾಜನ ಅರಮನೆಗೆ ಬಿಲ್ಲಿನ ಹಬ್ಬಕ್ಕಾಗಿ ಹೋಗುತ್ತಾರೆ. ಲಕ್ಷ್ಮಣನಿಗೆ ಈಗ ಮನವರಿಕೆಯಾಗಿದೆ. ತಾನು ಆಕಾಸ ಕಾಕಿಯನ್ನು ಕೊಲ್ಲುವುದು ನಿಜ ಎಂದು. ಕಾಕಿಯನ್ನು ಕೊಂದ ನಂತರ ಬಳುವಳಿಯಾಗಿ ಸಿಗುವ ಸೀತೆ ಹೇಗಿರುತ್ತಾಳೊ, ನೋಡಬೇಕಲ್ಲ! ಇಷ್ಟೆಲ್ಲಾ ಕಷ್ಟಪಟ್ಟಪ, ನಂತರ ಸಿಗಬೇಕಾದ ಬಳುವಳಿಯೇ ಕುರೂಪವಾಗಿದ್ದರೆ? ಲಕ್ಷ್ಮಣ ಒಂದು ಉಪಾಯ ಮಾಡುತ್ತಾನೆ. ನಮ್ಮ ಬುಡಕಟ್ಟು ರಾಮಾಯಣಗಳ ತಿರುಳು ಇರುವುದೇ ಇಂಥ ಕಡೆ. ಅರಮನೆಯಲ್ಲಿ ಹೆಣ್ಣುಮಕ್ಕಳು ವಾಸ ಇರುವ ಕಡೆ ಹೋಗಿ ಬಾಯಾರಿಕೆಯಾಗಿದೆ ನೀರು ಕೊಡಿ ಎಂದು ಕೇಳುತ್ತಾನೆ. ಒಬ್ಬಳು ಹುಡುಗಿ ನೀರು ಕೊಡುತ್ತಾಳೆ. ಅವಳು ಸೀತೆಯಾಗಿರುವುದಿಲ್ಲ. ಸೀತೆಯನ್ನು ಇಲ್ಲಿಗೇ ಕರೆಸಬೇಕಾದರೆ ಏನು ಮಾಡುವುದು? ಬಾಯಲ್ಲಿ ಕುಡಿದ ನೀರನ್ನು ಮೂಗಿನಲ್ಲಿ ಬಿಡುವ ಚಮತ್ಕಾರ ಮಾಡತೊಡಗುತ್ತಾನೆ. ಈ ಚಮತ್ಕಾರ ನೋಡಲು ಸೀತೆಯೂ ಬರುತ್ತಾಳೆ. ಸೀತೆಯನ್ನು ಹೀಗೆ ಮೊದಲೇ ಕಂಡು, ನಂತರ ಬಿಲ್ಲಿನ ಸಾಹಸಕ್ಕೆ ಹೋಗುತ್ತಾರೆ.

ನಿಯಮದಂತೆ ಆಕಾಸದ ಕಾಕಿಯನ್ನು ಕೊಲ್ಲುವ ಲಕ್ಷ್ಮಣ ಸೀತೆಯನ್ನು ಗೆಲ್ಲುತ್ತಾನೆ. ತಾನು ಗೆದ್ದ ಸೀತೆಯನ್ನು ರಾಮನಿಗೆ ಮದುವೆ ಮಾಡಿಸುತ್ತಾನೆ. ಬಹುಶಃ ಇದುವರೆಗೆ ಸಿಕ್ಕಿರುವ ಜನಪದ ರಾಮಾಯಣಗಳಲ್ಲೇ ಇದು ವಿಶಿಷ್ಟವಾದದ್ದು. ಯಾಕೆಂದರೆ ಲಕ್ಷ್ಮಣ ಗೆದ್ದ ಸೀತೆಯನ್ನು ರಾಮನಿಗೆ ನೀಡುವ ವಿಶೇಷ ಪ್ರಸಂಗ ಇದು. ರಾಮಲಕ್ಷ್ಮಣ ಮತ್ತು ಸೀತೆಯ ನಡುವಿನ ಸಂಬಂಧಗಳು ಬುಡಕಟ್ಟು ರಾಮಾಯಣಗಳಲ್ಲಿ ತುಂಬ ವರ್ಣಮಯ. ವಾಲ್ಮೀಕಿಯ ಲಕ್ಷ್ಮಣ ಕೇವಲ ಸೀತೆಯ ಕಾಲುಗಳನ್ನು ಮಾತ್ರ ಕಂಡ ಸಾಧ್ವಿ. ಆದರೆ ಆ ಅತಿಪಾತಿವ್ರತ್ಯ ನಮ್ಮ ಬುಡಕಟ್ಟುಗಳಿಗೆ ಬೇಕಿಲ್ಲ. ಇಲ್ಲಿ ಸಹಜತೆಗೇ ಹೆಚ್ಚು ಬೆಲೆ. ರಾಮನ ಸೀತೆಯನ್ನು ಲಕ್ಷ್ಮಣನೂ ಇಂದ್ರಿಯಾಪೇಕ್ಷೆಯ ದೃಷ್ಟಿಯಿಂದ ನೋಡುತ್ತಿದ್ದ ಎಂಬಂತೆ ನಮ್ಮ ಅನೇಕ ಬುಡಕಟ್ಟು ರಾಮಾಯಣಗಳು ಚಿತ್ರಿಸಿವೆ. ಇಂಥ ಭಿನ್ನ ದೃಷ್ಟಿಕೋನಗಳ ಒಂದೆರಡು ಕಥೆಗಳನ್ನು ಈಗ ಅವಲೋಕಿಸಬಹುದು.

ಮಧ್ಯಭಾರತದ ಆದಿವಾಸಿ ಗೊಂಡರ ಅನೇಕ ಕಥೆಗಳಲ್ಲಿ ಲಕ್ಷ್ಮಣನೇ ನಾಯಕ. ಸೀತೆಯ ಜೊತೆಗಿನ ಅವನ ಒಡನಾಟ ಅಷ್ಟೇ ಸ್ವಾಭಾವಿಕ. ಇವರ ಪೌರಾಣಿಕ ನಾಯಕ ಲಕ್ಷ್ಮಣನಾದರೆ, ಐತಿಹಾಸಿಕ ನಾಯಕ ರಾವಣ. ರಾವಣನನ್ನು ತಮ್ಮ ಮೂಲಪುರುಷನೆಂದು, ರಾವಣನ ಮಗನಾದ ಮೇಘನಾದನನ್ನು ತಮ್ಮ ದೈವವೆಂದೂ ಅವರು ಪೂಜಿಸುತ್ತಾರೆ. ತಾವು ರಾವಣನ ವಂಶಸ್ಥರು ಎಂದು ಕೇಳಿಕೊಳ್ಳಲು ಕೂಡ ಅವರು ಹಿಂಜರಿಯುವುದಿಲ್ಲ. ಗೊಂಡರ ಒಂದು ಕಥೆಯ ಪ್ರಕಾರ ರಾಮ, ಲಕ್ಷ್ಮಣ ಮತ್ತು ಸೀತೆಯರ ಸಂಬಂಧಗಳು ಹೀಗಿವೆ. ಇಲ್ಲಿ ಲಕ್ಷ್ಮಣನೇ ನಾಯಕ. ಕಥೆಯಲ್ಲಿನ ಅವನ ಹೆಸರು ಲಕ್ಷ್ಮಣ ಜಟಿ ಎಂದು. “ರಾಮ ಮತ್ತು ಸೀತೆ ಊರಿನ ಅರಮನೆಯಲ್ಲಿ ವಾಸವಾಗಿದ್ದರೆ, ಲಕ್ಷ್ಮಣ ಊರಾಚೆಯ ಅರಮನೆಯಲ್ಲಿ ವಾಸವಾಗಿರುತ್ತಾನೆ. ಸೀತೆ ಪ್ರತಿದಿನ ಅವನಿಗೆ ಊಟ ತೆಗೆದುಕೊಂಡು ಹೋಗುತ್ತಿರುತ್ತಾಳೆ. ಲಕ್ಷ್ಮಣ ಜಟಿಯ ಹತ್ತಿರ ಒಂದು ಕಿನ್ನರಿ ಇರುತ್ತದೆ. ಲಕ್ಷ್ಮಣ ಅದರಿಂದ ಸದಾ ಪ್ರೇಮಗೀತೆಗಳನ್ನು ನುಡಿಸುತ್ತಿರುತ್ತಾನೆ. ಆದರೆ ರಾಮ ಆ ಕಿನ್ನರಿಯನ್ನು ಅಷ್ಟೊಂದು ನುಡಿಸಬೇಡವೆಂದು ಲಕ್ಷ್ಮಣನಿಗೆ ತಾಕೀತು ಮಾಡುತ್ತಾನೆ. ಆದ್ದರಿಂದ ಲಕ್ಷ್ಮಣ ತನ್ನ ಹಾಸಿಗೆಯ ಮೇಲೆ ಗೋಡೆಯೊಂದಕ್ಕೆ ಅದನ್ನು ನೇತು ಹಾಕಿರುತ್ತಾನೆ. ಇದರಿಂದ ದುಃಖಗೊಂಡ ಕಿನ್ನರಿ ಕಂಬನಿ ಮಿಡಿಯುತ್ತದೆ. ಅದನ್ನು ನೋಡಿದ ಲಕ್ಷ್ಮಣ ಮತ್ತೆ ಕಿನ್ನರಿ ನುಡಿಸಲು ಆರಂಭಿಸುತ್ತಾನೆ. ಕಿನ್ನರಿ ನುಡಿಸುತ್ತಾ ಅನೇಕ ಪವಾಡಗಳನ್ನು ಮಾಡುತ್ತಾನೆ. ಹೀಗೆ ಇರುವಾಗ ಇಂದ್ರಕಾಮಿನಿ ಎಂಬ ಹೆಣ್ಣು ಲಕ್ಷ್ಮಣ ಜಟಿಯ ಮನೆಗೆ ದಾರಿ ಕಂಡುಕೊಳ್ಳುತ್ತಾಳೆ. ಅವನನ್ನು ವಶಪಡಿಸಿಕೊಳ್ಳುವುದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಾಳೆ. ಆದರೆ ನಿದ್ರೆಯಲ್ಲಿರುವ ಲಕ್ಷ್ಮಣ ಜಟಿ ಮೇಲೇಳುವುದೇ ಇಲ್ಲ. ಕೋಪಗೊಂಡ ಇಂದ್ರ ಕಾಮಿನಿ ತನ್ನ ಬಳೆಗಳನ್ನು ಒಡೆದು ಹಾಕಿ ಅವನ ಹಾಸಿಗೆಯ ಮೇಲೆ ಚೆಲ್ಲಾಡುತ್ತಾಳೆ. ತನ್ನ ಎಡಗಿವಿಯ ಓಲೆಯನ್ನು ತೆಗೆದು ಅಲ್ಲಿಟ್ಟು ಇದು ಸೀತೆಯ ಕಿವಿಗಲ್ಲದೆ ಮತ್ತಾರ ಕಿವಿಗೂ ಸರಿಹೋಗುವುದು ಬೇಡ ಎಂದು ಹೇಳಿ ಹೊರಟು ಬರುತ್ತಾಳೆ. ನಸುಕಿಗೆ ಸೀತೆ ಲಕ್ಷ್ಮಣನ ಕೋಣೆಗೆ ಬರುತ್ತಾಳೆ. ಹಾಸಿಗೆಯ ಮೇಲೆ ಬಿದ್ದ ಬಳೆಗಳು ಮತ್ತು ಕಿವಿಯೋಲೆಯನ್ನು ನೋಡಿ ದಿಗ್ಭ್ರಮೆಗೊಂಡು ರಾಮನಿಗೆ ಈ ವಿಷಯ ತಿಳಿಸುತ್ತಾಳೆ. ಇದನ್ನು ಬಂದು ನೋಡಿದ ರಾಮ ಊರ ಯುವತಿಯರನ್ನೆಲ್ಲಾ ಕರೆದು ಆ ಕಿವಿಯೋಲೆ ಯಾರ ಕವಿಗೆ ಆಗುತ್ತದೆ ಎಂದು ಪರೀಕ್ಷಿಸಲು ಮುಂದಾಗುತ್ತಾನೆ. ಅದು ಯಾರ ಕಿವಿಗೆ ಆಗುತ್ತದೋ ಆಕೆ ತನ್ನ ತಮ್ಮನಿಗೆ ಹೆಂಡತಿಯಾಗುತ್ತಾಳೆ ಎಂದು ಸಾರುತ್ತಾನೆ. ಆದರೆ ದುರದೃಷ್ಟದಿಂದ ಅದು ಯಾರ ಕಿವಿಗೂ ಆಗದೆ ಸೀತೆಯ ಕಿವಿಗೆ ಮಾತ್ರ ಆಗುತ್ತದೆ. ಆಗ ರಾಮ ದಿಗ್ಭ್ರಾಂತನಾಗಿ ತನ್ನ ತಮ್ಮನನ್ನು ಕೊಲ್ಲಲು ತೀರ್ಮಾನಿಸಿ ಕಬ್ಬಿಣದ ಕೊಪ್ಪರಿಕೆಯನ್ನು ಸಿದ್ಧಪಡಿಸುತ್ತಾನೆ. ಹನ್ನೆರಡು ಮಂದಿ ಕಮ್ಮಾರರು ಎಂಟು ಇರುಳು ಮತ್ತು ಹಗಲು ಬೆಂಕಿಯುರಿಸುತ್ತಾರೆ. ಆದರೆ ಲಕ್ಷ್ಮಣ ಕಿನ್ನರಿಯ ಪ್ರಭಾವದಿಂದ ಅದನ್ನು ನುಡಿಸುತ್ತಲೇ ಬದುಕಿ ಹೊರಗೆ ಬರುತ್ತಾನೆ. ಹೀಗೆಯೇ ಲಕ್ಷ್ಮಣನನ್ನು ಕೊಲ್ಲಲು ಮಾಡಿದ ಉಪಾಯಗಳೆಲ್ಲ ವಿಫಲವಾಗಿ ಲಕ್ಷ್ಮಣನು ಕಿನ್ನರಿ ನುಡಿಸುವುದು ಮಾತ್ರ ಮುಂದುವರಿಯುತ್ತದೆ. ಅಣ್ಣನ ಈ ಮನೋಭಾವನನ್ನು ಸಹಿಸಲಾರದೆ ಲಕ್ಷ್ಮಣನು ಅವನಿಂದ ದೂರ ಹೋಗುತ್ತಾನೆ. ಅಲ್ಲೊಂದು ಕಡೆ ಭೂಮಿ ಬಾಯಿಬಿಟ್ಟು ಅವನನ್ನು ಕರೆದುಕೊಳ್ಳುತ್ತದೆ. ಭೂಮಿಯೊಳಗಿನ ನಾಗರಾಜನಿಗೆ ಹನ್ನೆರಡು ವರ್ಷ ಸೇವೆ ಸಲ್ಲಿಸಿದ ಕಾರಣಕ್ಕಾಗಿ ಅವನು ತನ್ನ ಮಗಳನ್ನು ಲಕ್ಷ್ಮಣನಿಗೆ ಕೊಡುತ್ತಾನೆ. ಮದುವೆಯ ನಂತರ ಚಿನ್ನದ ಬುಟ್ಟಿಯೊಂದರಲ್ಲಿ ಕೂರಿಸಿ ಮನೆ ಸೇರುವವರೆಗೆ ಬುಟ್ಟಿಂiನ್ನು ತೆರೆಯಬಾರದೆಂದು, ಒಂದು ವೇಳೆ ಮಧ್ಯದಲ್ಲಿ ತೆರೆದರೆ ಅವಳು ಮಾಯವಾಗುತ್ತಾಳೆ ಎಂದು ಹೇಳುತ್ತಾನೆ. ಭೂಮಿಯಿಂದ ಮೇಲಕ್ಕೆ ಬಂದ ಲಕ್ಷ್ಮಣ ಮನತಡೆಯಲಾರದೆ ಪೆಟ್ಟಿಗೆಯನ್ನು ತೆರೆಯುತ್ತಾನೆ. ಅವಳು ತಕ್ಷಣವೆ ಮಾಯವಾಗುತ್ತಾಳೆ. ಹಾಗೆ ಮಾಯವಾದ ಅವಳು ಮಿಂಚಾಗಿ ಮತ್ತೆ ಮತ್ತೆ ಆಕಾಶದಲ್ಲಿ ಸರ್ಪದ ರೂಪದಲ್ಲಿ ಕಾಣಿಸಿಕೊಳ್ಳುತ್ತಲೆ ಇದ್ದಾಳೆ. ಅವಳನ್ನು ಹುಡುಕಿ ಅಲೆಯುತ್ತಿರುವ ಲಕ್ಷ್ಮಣನ ಬಾಣ, ಗುಡುಗಿನಂತೆ ಘರ್ಜಿಸುತ್ತಲೇ ಇದೆ. ಈ ಮಿಂಚು ಮತ್ತು ಗುಡುಗುಗಳ ಕಾರಣದಿಂದ ಭೂಮಿಯಲ್ಲಿ ಮಳೆ ಮತ್ತು ಬೆಳೆ ಆಗುತ್ತದೆ”[4].

ಮಧ್ಯಭಾರತ ಮತ್ತು ಈಶಾನ್ಯ ಭಾರತದ ಬಹುತೇಕ ಬುಡಕಟ್ಟುಗಳ ರಾಮಾಯಣಗಳಲ್ಲಿ ಲಕ್ಷ್ಮಣನ ಸಾಹಸವೇ ಬಹುದೊಡ್ಡದು. ಅನೇಕ ಭಾಗಗಳಲ್ಲಿ ಲಕ್ಷ್ಮಣ ದಾನವರ ಜೊತೆ ಹೋರಾಡುವ ರಂಗುರಂಗಿನ ಕಥೆಗಳಿವೆ. ಈ ದೃಷ್ಟಿಯಿಂದ ಬುಡಕಟ್ಟು ರಾಮಾಯಣಗಳಲ್ಲೆಲ್ಲ ಲಕ್ಷ್ಮಣನೇ ನಿಜವಾದ ಹೀರೋ. ಈಶಾನ್ಯ ಭಾರತದ ಮಕ್ಕಳಿಗೆ ಆಕಾಶದಲ್ಲಿ ಕಾಮನಬಿಲ್ಲು ಎದ್ದರೆ ಅದು ಲಕ್ಷ್ಮಣನ ಧನಸ್ಸು ಎಂಬ ನಂಬಿಕೆ.[5]

ಮಧ್ಯ ಪ್ರದೇಶದ ಗೊಂಡರು ಹೇಗೆ ಲಕ್ಷ್ಮಣನನ್ನು ನಾಯಕನನ್ನಾಗಿ ಕಾಣುತ್ತಾರೋ ಹಾಗೇ ಕರ್ನಾಟಕದ ಸಹ್ಯಾದ್ರಿಯ ಗೊಂಡರಿಗೆ ಕೂಡ ಲಕ್ಷ್ಮಣನೇ ಮುಖ್ಯ ವ್ಯಕ್ತಿ. ಸೀತೆಯನ್ನು ಅವನಿಂದಲೇ ಗೆಲ್ಲಿಸುವ ಮೂಲಕ ಇದನ್ನು ನಿರೂಪಿಸುತ್ತಾರೆ. ನೇಮ, ನಿಯಮ, ತಪಸ್ಸು ಮತ್ತು ಸಾತ್ವಿಕತೆ ಎಲ್ಲದರಲ್ಲಿಯೂ ರಾಮನಿಗಿಂತ ಲಕ್ಷ್ಮಣನೇ ಮುಂದು.

ಇನ್ನು ಇವರು ಚಿತ್ರಿಸುವ ಜನಕ ಈಗಾಗಲೇ ಹೇಳಿದಂತೆ ಒಬ್ಬ ರೈತ. ತಾನೇ ಸ್ವತಹ ಉಳುವಾಗ ಸಿಕ್ಕಿದ ಸೀತೆಯನ್ನು ತಂದು ಸಾಕುತ್ತಾನೆ. ಭಾರತದ ಇತರೆಡೆಯಲ್ಲಿ ಲಭ್ಯವಿರುವ ಬುಡಕಟ್ಟು ರಾಮಕಥೆಗಳಲ್ಲೂ ಅಷ್ಟೆ. ಮೂಲ ರಾಮಾಯಣಕ್ಕಿಂತ ಭಿನ್ನವಾದ ಜನಕರಾಜನ ಚಿತ್ರಣ ಅವನೊಬ್ಬ ಅಪ್ಪಟ ರೈತ ಎಂದೇ ಹೇಳುತ್ತದೆ. ಅವನು ಅರಮನೆಯಲ್ಲಿ ವಾಸವಿರಲಿಲ್ಲ. ಹೊಲದ ಬಳಿಯ ಒಂದು ಗುಡಿಸಲಿನಲ್ಲಿ ಇರುತ್ತಾನೆ. ಬಿಲ್ಲರು ಮತ್ತು ಸಂತಾಲರ ಪ್ರಕಾರ ಜನಕ ರಾಜನಿಗೆ ಮಗು ಸಿಗುವುದು ಪವಾಡದಿಂದಲ್ಲ. ಭೀಕರ ಬರಗಾಲದ ಕಾರಣ ಜೀವಂತ ಮಕ್ಕಳನ್ನೇ ಮಣ್ಣಿಗೆ ಹಾಕುವ ಪರಿಪಾಠ ಆ ಭಾಗದಲ್ಲಿ ಇರುತ್ತದೆ. ಅಂಥ ನತದೃಷ್ಟ ಮಕ್ಕಳಲ್ಲಿ ಒಬ್ಬಳು ಸೀತಾ. ವಾಸ್ತವಕ್ಕೆ ಹತ್ತಿರವಾದ ಇಂಥ ಸತ್ಯಗಳನ್ನು ನಮ್ಮ ಶಿಷ್ಟ ಕಾವ್ಯಗಳು ಹೇಳಲು ಸಾಧ್ಯವಿಲ್ಲ. ಬರಗಾಲ ಅನುಭವಿಸಿದ ಜನರಿಗೆ ಮಾತ್ರ ಈ ಸತ್ಯ ಹೊಳೆಯಬಲ್ಲದು.

ಛೋಟಾ ನಾಗಪುರದ ಹತ್ತಿರ ಕಂಡುಬರುವ ತೀರಾ ಅಲ್ಪಸಂಖ್ಯಾತರೆನಿಸಿದ ಬಿರ್‌ಹೋರ್ಸ್ ಎಂಬ ಬುಡಕಟ್ಟು ಜನರ ರಾಮಾಯಣದ ಪ್ರಕಾರ ರಾಮ, ಲಕ್ಷ್ಮಣ ಮತ್ತು ಸೀತಾ ಪಕ್ಕಾ ಕಾಡು ಜನರ ರೀತಿಯಲ್ಲಿಯೇ ಜೀವಿಸುತ್ತಿರುತ್ತಾರೆ. ಕಾಡಿನ ಸೊಪ್ಪು ಸದೆಯಿಂದ ಮಾಡಿದ ಗುಡಿಸಲಿನಲ್ಲಿ ಎರಡು ಭಾಗ ಮಾಡಿ ಒಂದರಲ್ಲಿ ರಾಮ ಲಕ್ಷ್ಮಣರೂ ಇನ್ನೊಂದರಲ್ಲಿ ಸೀತೆಯೂ ವಾಸ ಮಾಡುತ್ತಿರುತ್ತಾರೆ. ಅರಾಮ ಲಕ್ಷ್ಮಣರು ಗೆಡ್ಡೆ ಗೆಣೆಸು ತಂದು ಕೊಟ್ಟರೆ ಸೀತೆ ಅದನ್ನು ಅಡುಗೆ ಮಾಡಿ, ಮೂರು ಭಾಗ ಮಾಡಿ ರಾಮನಿಗೂ ಲಕ್ಷ್ಮಣನಿಗೂ ಒಂದೊಂದು ಭಾಗ ಕೊಡುತ್ತಾಳೆ. ಲಕ್ಷ್ಮಣನಿಗೆ ಕೊಡುವಾಗ ‘ತೆಗೆದುಕೋ’ ಎಂದು ಕೊಡುತ್ತಾಳೆಯೇ ಹೊರತು ‘ತಿನ್ನು’ ಎಂದು ಕೊಡುವುದಿಲ್ಲ. ಹಾಗಾಗಿ ಲಕ್ಷ್ಮಣ ಒಂದು ದಿನವೂ ತಿನ್ನುವುದೇ ಇಲ್ಲ. ಹೀಗೆ ಅವನು ಮಾಡುವ ಉಪವಾಸ ಲಂಕೆಯಯುದ್ಧದ ಸಮಯದಲ್ಲಿ ನೆರವಿಗೆ ಬರುತ್ತದೆ.[6] ಪ್ರಸ್ತುತ ಗೊಂಡರ ಈ ಕಾವ್ಯದ ಲಕ್ಷ್ಮಣ ಹೇಗೆ ಉಪವಾಸವಿದ್ದು ಬಿಲ್ಲಿನ ಹಬ್ಬದಲ್ಲಿ ಸೀತೆಯನ್ನು ಗೆಲ್ಲುತ್ತಾನೋ ಹಾಗೇ ಬಿರ್ ಹೋರ್ಸ್ ಜನರ ಲಕ್ಷ್ಮಣನೂ ಸಾಧಕನೇ. ಈ ಸಾಮ್ಯ ತೀರಾ ಕುತೂಹಲಕರವಾದದ್ದು.

ಲಕ್ಷ್ಮಣ ಸೀತೆಯನ್ನು ಗೆಲ್ಲುತ್ತಾನೆ. ಅಲ್ಲೇ ಇದ್ದ ರಾವಣ ಅಸಮಾಧಾನಗೊಳ್ಳುತ್ತಾನೆ. ಯಾಕೆಂದರೆ ಸೀತೆಯನ್ನು ಗೆಲ್ಲುವ ಅಕಾಂಕ್ಷೆಯಲ್ಲಿಯೇ ಅವನೂ ಜನಕನ ಬಿಲ್ಲಿನ ಹಬ್ಬಕ್ಕೆ ಬಂದಿರುತ್ತಾನೆ. ‘ಬಿಲ್ಲಿನ ಹಬ್ಬ’ ಇಲ್ಲಿ ಒಂದು ವಿಶೇಷವಾದ ಅರ್ಥವನ್ನು ಕೊಡುವಂತಿದೆ. ಕೃಷಿ ಮತ್ತು ಬೇಟೆ ಎರಡನ್ನು ಉಳಿಸಿಕೊಂಡ ಬುಡಕಟ್ಟುಗಳ ನಾಯಕನಾಗಿ ಜನಕ ನಮಗೆ ಕಾಣುತ್ತಾನೆ. ಆದಾಗ ತಾನೇ ಅನೇಕ ರೀತಿಯಲ್ಲಿ ಬಿಲ್ಲುಗಳು ನಕರಣಗೊಳ್ಳುತ್ತಿದ್ದ ಹಾಗೂ ಹೊಸಹೊಸ ರೀತಿಯ ಚಮತ್ಕಾರ ಪ್ರದರ್ಶಿಸುವ ರೀತಿಯಲ್ಲಿ ‘ಬಿಲ್ಲಿನ ಹಬ್ಬ’ ನಡೆದಿರುವಂತಿದೆ ಎಂದು ಮಾತ್ರ ಸದ್ಯಕ್ಕೆ ಊಹಿಸಬಹುದಾಗಿದೆ.

ಅದೇನೇ ಇರಲಿ, ಅಸಮಾಧಾನಗೊಂಡ ರಾವಣನ ಮಾತುಗಳನ್ನು ಇಲ್ಲಿ ಗಮನಿಸಬೇಕು. ತನಗೆ ದಕ್ಕಬೇಕಾಗಿದ್ದ ಸೀತೆ ಇನ್ನೊಬ್ಬರ ಪಾಲಾಗಿದ್ದಾಳೆ. ಅದರೇನಂತೆ ಇಂದಲ್ಲ ನಾಳೆ ‘ಮೂರು ದಿನವಾದರೂ ನಾನು ಸೀತೆಯನ್ನು ಆಳದಿದ್ದರೆ ಲಂಕಾ ಪಟ್ನದ ರಾವಣನೆ ಅಲ್ಲ’ ಎಂಬ ಪ್ರತಿಜ್ಞೆಯನ್ನು ಮಾಡಿ ಅವನು ಹೊರಟುಹೋಗುತ್ತಾನೆ.

ಲಗ್ನದ ನಂತರ ರಾಮ ಲಕ್ಷ್ಮಣರಿಬ್ಬರೂ ವನವಾಸ ಪೂರೈಸಲು ಕಾಡಿಗೆ ಹೊರಟು ನಿಲ್ಲುತ್ತಾರೆ. ಉಳಿಕೆ ಇರುವ ಆರು ವರ್ಷಗಳ ಅಜ್ಞಾತ ವಾಸವನ್ನು ಮುಗಿಸಿ ಬಂದ ನಂತರ ಸೀತೆಯನ್ನು ಕರೆದುಕೊಂಡು ಹೋಗುವುದಾಗಿ ಪರಿಪರಿಯಾಗಿ ಹೇಳಿದರೂ ಅವಳು ಕೇಳುವುದಿಲ್ಲ. ‘ಅಲ್ಲಿ ತಿನ್ನಲು ಅನ್ನವಿಲ್ಲ, ಕುಡಿಯಲು ಹಾಲಿಲ್ಲ’ ಎಂದು ಹೇಳಿದರೂ ನಿಮಗೆ ಅದದ್ದೇ ನನಗೂ ಆಗಲಿ ಎಂದು ಹೇಳಿ ಅವರೊಡನೆ ಹೊರಟು ನಿಲ್ಲುತ್ತಾಳೆ. ಅವರು ಸೀತೆಯನ್ನು ಕೂಡಿಕೊಂಡು ಮತ್ತೆ ಗೋರಾರಣ್ಯಕ್ಕೆ ಬರುತ್ತಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಅರಣ್ಯ ಮತ್ತು ಅರಣ್ಯ ಜೀವನದ ಹೊರತಾಗಿ ಅಯೋಧ್ಯೆ ಎಂಬ ನಗರ ಎಲ್ಲಿಯೂ ಅಷ್ಟು ಮುಖ್ಯವಾಗಿ ಪರಿಗಣಿತವಾಗದಿರುವುದು. ವಾಲ್ಮೀಕಿ ರಾಮಾಯಣದ ಅಯೋಧ್ಯೆಯ ವರ್ಣನೆಯನ್ನು ನೋಡಬೇಕು. “ಪುರಾತನ ಕಾಲದಲ್ಲಿ ಒಂದು ರಾಜಧಾನಿಯನ್ನಾಗಿ ಅಯೋಧ್ಯೆಯನ್ನು ಮನು ಕಟ್ಟಿದನಂತೆ. ಅವನ ತರುವಾಯ ಬಂದ ಆ ವಂಶದ ರಾಜರು ಅದನ್ನು ವಿಸ್ತರಿಸಿದರು. ಇನ್ನಷ್ಟು ಚಂದಗೊಳಿಸಿದರು. ರಾಜಧಾನಿಯಲ್ಲಿ ನಡೆಯುತ್ತಿದ್ದ ನಗರ ಜೀವನ, ಅಲ್ಲಿನ ಬದುಕು… ಹೇಗೆ ಸುಖವ್ಯವಸ್ಥೆಗೊಂಡಿದ್ದಿತು ಎಂಬುದರ ಸುಂದರ ವರ್ಣನೆ ಅಲ್ಲಿ ದೊರಕುತ್ತದೆ. ಬದುಕಿನ ಧಾರಾಳ, ಮನೋಹರತೆ, ಅನೇಕ ಮಟ್ಟಗಳಲ್ಲಿ ಜೀವನಕ್ಕಿದ್ದ ಅವಕಾಶಗಳು, ಜನರ ಕಸುಬು ಉದ್ಯೋಗಗಳು ಇವುಗಳ ಚೆಲುವಾದ ವರ್ಣನೆಗಳು ಬರುತ್ತವೆ. ಸಾವಿರಾರು ವರ್ಷಗಳ ಮೇಲೆ ಅದನ್ನು ಓದಿದವರಿಗೆ ಈಗಿನ್ನು ನಮ್ಮ ಊರು ಅಷ್ಟು ಚೆನ್ನಾಗಿ ಸುರಚಿತವಾಗಿ ಆಳಿಕೆಗೊಂಡು ಸುಖಸಂಪತ್ತುಗಳಿಂದ ಕೂಡಿ ಅಯೋಧ್ಯೆಯಂತೆ ಇರುವ ಹಾಗಿದ್ದರೆ! ರಾಮನು ಮದುವೆಯಾದ ಒಂದು ವರ್ಷಕಾಲ ಸುಮಾರು ಅರಸು ಕುಮಾರರು ತಮ್ಮ ಮಡದಿಯರೊಡನೆ ತಮ್ಮ ಬೇರೆ ಬೇರೆ ಮಹಲುಗಳಲ್ಲಿ ಸುಖವಾಗಿದ್ದರು. ಸೀತೆಗೆ ಕೂಡ ರಾಮನ ಅರಮನೆಯಲ್ಲಿ ಸ್ಥಾಯಿಯಾದ ನೆಲೆಯಿದ್ದಿತು ಎಂಬುದನ್ನು ‘ನಿತ್ಯಂ ಹೃದಿ ಸಮರ್ಪಿತಃ’ ಎಂದು ಅವಳೇ ತಿಳಿಸುತ್ತಾಳೆ. ಆದರೆ ಅರಮನೆಯ ಪರಿಸ್ಥಿತಿಗಳು ಬೇರೆಯಾಗಿದ್ದವು. ರಾಜನ ಮೂವರು ರಾಣಿಯರಿಗೂ ಅವರ ಸಿಬ್ಬಂದಿಯವರಿಗೂ ನಡುವೆ ಬೆಳೆದ ಸಂಬಂಧಗಳಲ್ಲಿ ವಿರಸವಿತ್ತು”.[7]

ವಾಲ್ಮೀಕಿ ಅಯೋಧ್ಯೆಯ ಬಗ್ಗೆ ಎಷ್ಟೇ ಸುಂದರವಾಗಿ ವರ್ಣಿಸಿದರೂ ನಮ್ಮ ಬುಡಕಟ್ಟು ಕಥೆಗಾರರಿಗೆ ಅದರ ಗೊಡವೆಯೇ ಬೇಡ. ತಾವು ನೋಡಿರದ ಲೋಕವೊಂದರ ಸುಳ್ಳುವರ್ಣನೆ ಅವರಿಗೆ ಬೇಕಿಲ್ಲ. ತಮ್ಮ ಕಾಲ್ಪನಿಕ ಲೋಕದಿಂದ ಪವಾಡಗಳನ್ನು ಸೃಷ್ಟಿಮಾಡಬಲ್ಲರೇ ಹೊರತು ಅವರ ಅರಮನೆಗಳ ವೈಭವೋಪೇತ ಜೀವನವನ್ನಂತೂ ಅಲ್ಲ. ಆದರೆ ವಾಲ್ಮೀಕಿ ವರ್ಣಿಸಿರುವ ಅಯೋಧ್ಯೆಯಾದರೂ ಸತ್ಯವಾದದ್ದೆ? ಪ್ರಸಿದ್ಧಪುರಾತತ್ವ ಶಾಸ್ತ್ರಜ್ಞ ಪ್ರೊ.ಎಚ್.ಡಿ.ಸಂಕಾಲಿಯಾ ಅವರ ಪ್ರಕಾರ ಸದ್ಯದ ರಾಮಾಯಣದಲ್ಲಿ ಕಂಡುಬರುವ ಅಯೋಧ್ಯೆಯ ವರ್ಣನೆ ಖಂಡಿತ ಅನಂತರ ಸೇರಿಸಿದ್ದಿರಬಹುದು. “ಉತ್ತರಪ್ರದೇಶ ಹಾಗೂ ಬಿಹಾರಗಳಲ್ಲಿ ದೊರೆತ ಪುರಾತತ್ವ ಶಾಸ್ತ್ರೀಯ ಆಧಾರಗಳ ಹಿನ್ನೆಲೆಯಲ್ಲಿ ನೋಡಿದಾಗ ಕ್ರಿ.ಪೂ.ನಾಲ್ಕನೇ ಶತಮಾನಕ್ಕೆ ಮೊದಲೇ ಅಯೋಧ್ಯೆಯು ಇಟ್ಟಿಗೆಗಳಿಂದ ನಿರ್ಮಿತವಾಗಿದ್ದಿರಬಹುದೆಂಬ ರಾಮಾಯಣದ ವರ್ಣನೆಯನ್ನು ಅನುಮೋದಿಸಲು ಸಾಧ್ಯವಾಗದು. ಅರಮನೆಗಳನ್ನು ಹೇಗೆ ಸಜ್ಜುಗೊಳಿಸುತ್ತಿದ್ದರೆಂಬ ಅಂಶವನ್ನು ಪರಿಶೀಲಿಸಿದಾಗ ಕೂಡ ಇದೇ ಬಗೆಯ ನಿರ್ಣಯಕ್ಕೆ ಬರಬಹುದು. ಮುತ್ತು, ರತ್ನ, ವಜ್ರ, ವೈಢೂರ್ಯಗಳ ಆಭರಣಗಳ ಜೊತೆಗೆ ಹಿರಣ್ಯ ಮತ್ತು ಸುವರ್ಣದ ಆಭರಣಗಳನ್ನು ಸ್ತ್ರೀಪುರುಷರು ಧರಿಸುತ್ತಿದ್ದರು. ಕುಶಾನ ಮತ್ತು ರೋಮನ್ ಸಾಮ್ರಾಜ್ಯಗಳ ಸ್ಥಾಪನೆಯ ಬಳಿಕ ರೋಮ್‌ನೊಂದಿಗೆ ಭೂ ಹಾಗೂ ಜನಸಂಪರ್ಕಗಳು, ವಾಣಿಜ್ಯ ವ್ಯವಹಾರಗಳು ಕುದುರಿದ ಬಳಿಕ ಕ್ರಿ.ಪೂ. ಒಂದನೆಯ ಶತಮಾನದಲ್ಲಿ ಇಂಥ ಒಂದು ಸಮೃದ್ಧ ರಾಜ್ಯದ ಸ್ಥಾಪನೆಯಾಯಿತು. ನಗರದ ಮೇರೆಗಳು, ಅರಮನೆಗಳ ಕಟ್ಟಡ, ಪೀಠಗಳು, ಸಾರಿಗೆ ಸಾಧನಗಳು ಇವೇ ಮುಂತಾದ ಭೌತ ವಸ್ತುಗಳ ವರ್ಣನೆ ಅತ್ಯಂತ ಅಭಿವೃದ್ದಿ ಹೊಂದಿದ ಸ್ಥಿತಿಗೆ ದ್ಯೋತಕ. ಈ ವರ್ಣನೆ ಇತಿಹಾಸ ಯುಗದ ಆರಂಭ ಘಟ್ಟದಲ್ಲಿ ಅಂದರೆ ಕ್ರಿ.ಪೂ. ೨೫೦ ಮತ್ತು ಕ್ರಿ.ಶ.೩೫೦ರ ನಡುವೆ ಇದ್ದ ಪಟ್ಟಣ ನಗರಗಳನ್ನು ನೆನಪಿಗೆ ತರುವಂತಿದೆ. “ನಾಗಾರ್ಜುನಕೊಂಡದಂಥ ಸಮಕಾಲೀನ ನಗರ ವೈಭವವನ್ನು ಕಂಡಿದ್ದ ಒಬ್ಬ ಕವಿ ಆ ನಂತರ ಈ ವರ್ಣನೆಯನ್ನು ಮಾಡಿ ಅಯೋಧ್ಯೆಯ ಜೊತೆಗೆ ಸಮೀಕರಿಸಿರಲೂಬಹುದು ಎಂದು ಖ್ಯಾತ ತಜ್ಞೆ ರೋಮಿಲಾ ಥಾಪರ್ ಅಭಿಪ್ರಾಯ ಪಡುತ್ತಾರೆ.[8]

[1] ವಾಲ್ಮೀಕಿ ರಾಮಾಯಣ: ಪ್ರಸ್ತಾವನೆ-ವಿ.ಸೀತಾರಾಮಯ್ಯ

[2] ನೋಡಿ: ಕುವೆಂಪು ಅವರ ಶೂದ್ರ ತಪಸ್ವಿ

[3] ನೋಡಿ: RAMA-KATHA in Tribal and folk traditions of India, Edited by K.S.Singh. Birendra Nata Datta P-12-13.

[4] Songs of the Forest: Verrier Elwin, Shama Rao Hivale

[5] Ramakata in Tribal and Folk Traditions of India, K.S.Singh, Birendra Nath Datta

[6] Ramakata in Tribal and Folk Traditions of India, K.S.Singh, Birendra Nath Datta

[7] ವಾಲ್ಮೀಕಿ ರಾಮಾಯಣ: ವಿ.ಸೀತಾರಾಮಯ್ಯ, ಪುಟ-೧೭

[8] Romila Thaper: Exile and Kingdom (Some thoughts on Ramayana)