ನಮ್ಮ ಈ ರಾಮಾಯಣದಲ್ಲಿ ರಾಮಸೀತೆಯರ ಲಗ್ನ ಮಾತ್ರ ನಡೆಯುತ್ತದೆಯೇ ಹೊರತು, ಒಟ್ಟು ನಾಲ್ಕು ಜನ ಅಣ್ಣ ತಮ್ಮಂದಿರ ಸಮೂಹ ಲಗ್ನವಲ್ಲ. ದಶರಥ ಮತ್ತು ಅವನ ರಾಣಿಯರು ಇಲ್ಲಿ ಬರಲು ಸಾಧ್ಯವೇ ಇಲ್ಲ, ಯಾಕೆಂದರೆ ದಶರಥ ಈಗಾಗಲೇ ತೀರಿಕೊಂಡಿದ್ದಾನೆ! ಆದರೆ ಇದಕ್ಕೆ ಮೊದಲೇ ಅಯೋಧ್ಯೆ ಮತ್ತು ಅಲ್ಲಿನ ರಾಜ್ಯಭಾರಕ್ಕೆ ಸಂಬಂಧಿಸಿದ ವಿಚಾರ ಗೊಂಡರ ರಾಮಾಯಣದಲ್ಲೂ ಬರುತ್ತದೆ. ಭರತ ಮತ್ತು ಶತೃಜ್ಞರು ರಾಮನನ್ನು ಹುಡುಕಿ ಬಂದು, ರಾಮ ಹಿಂದಕ್ಕೆ ಬರಲು ಒಪ್ಪದೇ ಇದ್ದಾಗ, ಅವನ ಕಾಡೋವಿ ಅಂದರೆ ಪಾದುಕೆಗಳನ್ನು ಪಡೆದು ಅವರು ಹಿಂತಿರುಗಿದರು. ಹಿಂತಿರುಗುವಾಗ ಅವರು ರಾಮನಿಗೆ ಷರತ್ತೊಂದನ್ನು ಹಾಕಿದರು. ಹನ್ನೆರಡು ವರ್ಷಗಳೊಳಗಾಗಿ ಬರದಿದ್ದಲ್ಲಿ ‘ಕೊಂಡ ತೆಗೆದು, ಕೆಂಡ ಮಾಡಿ ಅದರಲ್ಲಿ ಹಾರುತ್ತೇವೆ’ ಎಂದು ಹೇಳಿ ಹಿಂತಿರುಗಿದ್ದರು. ಅವರು ರಾಜ್ಯ ತಲುಪಿ ಸುಖದಿಂದ ರಾಜ್ಯವಾಳಿಕೊಂಡು ಇದ್ದರು. ಭರತನ ರಾಜ್ಯಭಾರ ಹೇಗಿತ್ತು ಎಂದರೆ:

ಸುಖದಲ್ಲು ಕಳಿವಂಗಾ ತಾನ
ಅರುಮನೆಯಲ್ಲವರೆ ಉಳುವವರಾ
ಒಕ್ಕುಲು ಮಕ್ಕೂಳು ಸಲಿಕೊಂಡಾ ತಾನ
ಆಳೂ ಮಕ್ಕೂಳು ಕಟ್ಟಿಕೊಂಡಾ

ಇದು ನಮ್ಮ ಬುಡಕಟ್ಟು ಕಥೆಗಾರರ ಆಶಯ. ಯಾವ ರಾಜನೇ ಬಂದರೂ ದುಡಿಯುವ ಸಮುದಾಯಕ್ಕೆ ಸೇರಿದ ಅನ್ನ ಹಾಕುವ ಒಕ್ಕಲು ಮಕ್ಕಳು ಮತ್ತು ಆಳು ಮಕ್ಕಳನ್ನು ಸಲುಹುವುದು ಅವನ ಕರ್ತವ್ಯ. ಇದು ಕಥೆಗಾರನ ಆದರ್ಶವಿರಬಹುದು. ಆದರೆ ಅಂದಿನ ದಿನಗಳಲ್ಲಿ ಈ ಶೂದ್ರ ಸಮುದಾಯದ ಬಾಳು ಹೇಗಿತ್ತು ಎಂಬುದನ್ನು ವಾಲ್ಮೀಕಿ ರಾಮಾಯಣದ ಮೂಲಕವೇ ಗಮನಿಸುವುದು ಒಳ್ಳೆಯದು. “ರಾಮ ವನವಾಸಕ್ಕೆ ಹೋದ ನಂತರ ಅಯೋಧ್ಯೆಯನ್ನು ತಲುಪಿದ ಭರತ, ದುಃಖತಪ್ತಳಾಗಿರುವ ಕೌಸಲ್ಯೆಯ ಬಳಿ ಬಂದು ತನ್ನ ನಿರ್ದೋಷಿತ್ವವನ್ನು ಹೀಗೆ ಹೇಳಿಕೊಳ್ಳುತ್ತಾನೆ. ತಾಯಿ, ನಾನು ಈ ಪಾತಕದಲ್ಲಿ ಭಾಗಿಯಾಗಿಲ್ಲ, ಹಾಗೆ ಭಾಗಿಯಾದವನಾಗಿದ್ದರೆ ನೀಚ ಕುಲಗಳಿಗೆ ಸೇವೆ ಮಾಡಿದ ಪಾಪ ತಗಲುತ್ತದೆ”.[1] ಈ ರೀತಿಯಲ್ಲಿ ಶೂದ್ರರ ಸೇವೆ ಮಾಡಬಾರದೆಂಬ ಅಭಿಪ್ರಾಯಗಳು ಅನೇಕ ಸಂದರ್ಭಗಳಲ್ಲಿ ಶಿಷ್ಟ ರಾಮಾಯಣದ ತುಂಬ ಕೇಳಿ ಬರುತ್ತವೆ. ಶ್ರವಣ ಮತ್ತು ಶಂಬೂಕರನ್ನು ಮತ್ತೆ ಇಲ್ಲಿ ನೆನಪಿಸಿಕೊಳ್ಳಬಹುದು ಕೂಡ.

ಸೀತೆಯನ್ನು ಲಗ್ನ ಮಾಡಿಕೊಂಡು ಸೀದಾ ಗೋರಾರಣ್ಯಕ್ಕೆ ಹಿಂತಿರುಗಿದ ರಾಮ ಲಕ್ಷ್ಮಣರು ಅವರ ಪಾಡಿಗೆ ಅವರು ಸುಖವಾಗೇನೋ ಇದ್ದರು. ಆದರೆ ಮೂರು ದಿನವಾದರೂ ಸೀತೆಯನ್ನು ಆಳುತ್ತೇನೆ ಎಂದು ಪ್ರತಿಜ್ಞೆಗೈದಿದ್ದ ರಾವಣ ಸುಮ್ಮನಿರಬೇಕಲ್ಲ?

ಲಂಕಾ ಪಟ್ನದ ರವಣಾನು
ತಂಗಿ ಕೂಡೊಂದು ನುಡಿತನಿಯಾ
ರೂಪ ನೀನೆ ಬಿಡುಬೇಕಾ
ಸೂಳಿ ಸುಂಗಾರುನೆ ತಾಳುಬೇಕಾ
ರಾಮುಗು ಮಳ್ಳೊಂದೆ ಮಾಡಬೇಕಾ
ರಾಮುಗು ಲಗ್ಗಿನ ಆಗುಬೇಕಾ
ರಾಮುನು ಸೀತಿ ನಾನು ಆಳುಬೇಕಾ

ಅಣ್ಣನ ಮಾತಿನಂತೆ ರಾಮನನ್ನು ಮಳ್ಳು ಮಾಡಲು ಸೂಳಿ ಸುಂಗಾರದ ರೂಪ ತಾಳಿ ಬಂದ ಸೂರ್ಪನಖಿಯನ್ನು ರಾಮ ತಿರಸ್ಕರಿಸಿ ತನ್ನ ತಮ್ಮನಾದ ಲಕ್ಷ್ಮಣನಲ್ಲಿಗೆ ಹೋಗುವಂತೆ ಹೇಳಿದ್ದಲ್ಲದೆ ಅವಳ ಬೆನ್ನ ಮೇಲೆ ಹೀಗೆ ಬರೆಯುತ್ತಾನೆ.

ಅವ್ಳ ಮೂಗು ಮೊಲಿನೇ ಕೊಯ್ಯಬೇಕಾ
ಮೂಗು ಮೊಲಿನೊಂದೆ ಕೊಯ್ಯಬೇಕಾ ಈಗಿನ್ನು
ಮಾನು ಭಂಗನೆ ಕಳಿಬೇಕಾ
ಕೋಪಾದಲ್ಲವಳ ಬಿಡಬೇಕಾ

ತನ್ನ ಸ್ವಂತ ಕುಟುಂಬಕ್ಕೆ ಸೇರಿದವರ ಶೀಲದ ಬಗ್ಗೆ ಸದಾ ಎಚ್ಚರದಿಂದಿರುವ ಆರ್ಯ ಸತ್ಕುಲ ಸಂಜಾತನೆನಿಸಿದ ರಾಮ ತನ್ನ ವೈರಿ ಪಡೆಯ ಹೆಂಗಸಿನ ಬಗ್ಗೆ ಕ್ರೌರ್ಯದಿಂದ ನಡೆದುಕೊಂಡಿದ್ದಾನೆಂಬುದನ್ನು ಗಮನಿಸಬೇಕಾಗುತ್ತದೆ. ಮೂಲ ರಾಮಾಯಣದಲ್ಲಿ ಮೂಗು ಮತ್ತು ಕಿವಿಯನ್ನು ಕೊಯ್ಯುವ ಪ್ರಸ್ತಾಪವಿದ್ದರೆ, ಇಲ್ಲಿ ಅವಳ ಮೂಗು ಮತ್ತು ಮೊಲೆಗಳನ್ನು ಕೊಯ್ಯುವ ಮೂಲಕ ಅತ್ಯಂತ ತುಚ್ಛ ಕಾರ್ಯವನ್ನು ಎಸಗಿದ್ದಾನೆ. ಅಷ್ಟೇ ಅಲ್ಲ, ಮಾನಭಂಗವನ್ನು ಮಾಡುವಂತೆ ಲಕ್ಷ್ಮಣನಿಗೆ ಆಜ್ಞಾಪಿಸಿದ್ದಾನೆ. ಲಕ್ಷ್ಮಣ ಮಾನಭಂಗ ಮಾಡಿದನೇ ಇಲ್ಲವೇ ಎನ್ನುವ ಪ್ರಸ್ತಾಪ ಇಲ್ಲವಾದರೂ ಮೂಗು ಮೊಲೆಯನ್ನು ಕೊಯ್ದು, ಅವಳನ್ನು ಕೋಪಾವಿಷ್ಟಳಾಗುವಂತೆ ಮಾಡಿ ಕಳಿಸುತ್ತಾನೆ. ಅಂದರೆ ಮುಂದಿನ ದ್ವೇಷಕ್ಕೆ ಇನ್ನಷ್ಟು ಪ್ರಚೋದನೆಯನ್ನೇ ಅವರಿಬ್ಬರೂ ಮಾಡುತ್ತಾರೆ. ಕಷ್ಟಗಳನ್ನು ತಾವೇ ಆಹ್ವಾನಿಸಿಕೊಳ್ಳುತ್ತಾರೆ. ರಾವಣನಿಗೂ ಇಷ್ಟೇ ಬೇಕಾಗಿತ್ತು. ಅವನು ಮಾವ ಮಾರೀಚನನ್ನು ಕರೆದು ‘ಮಾಯದ ಮುರುಗ’ನ ರೂಪ ತಾಳಿ ‘ನವುಲ ಕುಣಿತ’ ಕುಣಿದು ಸೀತೆಯ ಮನಸ್ಸು ಸೆಳೆಯಬೇಕು ಎಂದು ಆಜ್ಞಾಪಿಸುತ್ತಾನೆ. ಮಾರೀಚ ಅದೇ ಪ್ರಕಾರ ಸುಂದರ ಮೃಗವಾಗಿ ಸುಳಿದಾಡುತ್ತಾನೆ. ಗೊಂಡರ ರಾಮಾಯಣದಲ್ಲಿ ಸೀತೆಯ ಅಭೀಪ್ಸೆಯ ಮೂಲಕ ಅತ್ಯಂತ ವಿಶಿಷ್ಟವಾದ ಜೀವನ ವಿಧಾನವೊಂದು ಇಲ್ಲಿ ಪ್ರಕಟಗೊಳ್ಳುತ್ತದೆ. ಮೂಲ ರಾಮಾಯಣದಲ್ಲಿ ಈ ಸುಂದರ ಮೃಗವನ್ನು ನೋಡಿದ ಸೀತೆ ಅದನ್ನು ತಂದು ಕೊಡಲೇಬೇಕೆಂದು ಹಠ ಮಾಡುತ್ತಾಳೆ. ಅದು ರಾಕ್ಷಸರ ಮಾಯೆ, ಯಾವ ಕಾರಣಕ್ಕೂ ಬೇಡವೆಂದು ರಾಮ ಬುದ್ದಿವಾದ ಹೇಳಿದಾಗ ಅದನ್ನು ಕೊಂದಾದರೂ ತರುವಂತೆ ಕೇಳಿಕೊಳ್ಳುತ್ತಾಳೆ. ಮಧ್ಯ ಭಾರತದ ಭಿಲ್ಸ್ ಮತ್ತು ಸಂತಾಲರ ರಾಮಾಯಣದಲ್ಲಿ ಸೀತೆ ಆ ಸುಂದರ ಜಿಂಕೆಯ ಮಾಂಸವನ್ನು ಬಯಸುತ್ತಾಳೆ. ಅದರ ರುಚಿಯನ್ನು ನೆನೆದು ಅಂಥ ಸೊಗಸಾದ ಜಿಂಕೆಯ ಮಾಂಸ ತಮಗೆ ಬೇಕೇಬೇಕು ಎಂದು ಹಠ ಹಿಡಿಯುತ್ತಾಳೆ. ಕಾಡಿನ ವಾಸಿಗಳಿ ಇದು ಅತ್ಯಂತ ಸಹಜ. ಆ ಸಹಜ ದಾರಿಯನ್ನೇ ಸಂತಾಲರ ಸೀತೆ ಹಿಡಿದಿದ್ದಾಳೆ[2] ಆದರೆ ನಮ್ಮ ಕನ್ನಡದ ಗೊಂಡರ ಸೀತೆ ಕೇವಲ ಜಿಂಕೆಯನ್ನು ಬಯಸುವವಳಲ್ಲ ಅಥವಾ ಸಂತಾಲರ ಸೀತೆಯಂತೆ ಕೇವಲ ಅದರ ಮಾಂಸ ಅಪೇಕ್ಷಿಸುವವಳೂ ಅಲ್ಲ. ಅವಳಿಗೆ ಬೇಕಾಗಿರುವುದು ಆ ಸುಂದರ ಜಿಂಕೆಯ ಚರ್ಮ. ಆ ಚರ್ಮದಿಂದ ಅವಳು ತನ್ನ ದೇಹಕ್ಕೊಪ್ಪುವ ಸುಂದರ ಕುಬಸ ಹೊಲೆದುಕೊಳ್ಳಬೇಕಾಗಿದೆ.!

ಜಿಂಕೆಯ ಚರ್ಮದಿಂದ ಕುಬುಸ ಹೊಲೆದುಕೊಳ್ಳುವ ಅದಮ್ಯ ಆಸೆ ವ್ಯಕ್ತಪಡಿಸುತ್ತಿರುವ ಸೀತೆ ರಾಮನ ಯಾವ ಉಪದೇಶಕ್ಕೂ ಕಿವಿಗೊಡುವುದಿಲ್ಲ. ಅಷ್ಟೇ ಅಲ್ಲ, ಮಾತೃಪ್ರಧಾನ ಕುಟುಂಬದ ದಕ್ಷ ಹೆಣ್ಣುಮಗಳ, ಸ್ವಚ್ಛಂದವಾಗಿ ಬದುಕುವ ಬುಡಕಟ್ಟು ಸಮಾಜದ ನಿರ್ಭೀತ ಹೆಣ್ಣುಮಗಳೊಬ್ಬಳ ನಿರಾತಂಕ ವರ್ತನೆಯನ್ನು ತೋರುತ್ತಾಳೆ.

ಅದರ ಚಮ್ಮಾನ ತೆಗೆದಿದುರಾ
ನನಗೊಂದು ಕುಬುಸ ಮಾಡದಿದುರಾ
ರಾಮಸ್ವಾಮಿಯೇ ಪತಿಯಲ್ಲಾ
ನನ್ನ ಪತಿಯೊಂದೆ ನೀವಲ್ಲಾ
ನಿಮ್ಮ ಮಾತೊಂದೆ ಕೇಳುವುದಿಲ್ಲಾ

ತನ್ನ ಇಷ್ಟವನ್ನು ಪೂರೈಸದ ಗಂಡ ಇದ್ದರೆಷ್ಟು, ಬಿಟ್ಟರೆಷ್ಟು. ನನ್ನ ಸುಖಾಕಾಂಕ್ಷೆಗಳನ್ನು ಈಡೇರಿಸಲಾರದ ನೀನು ಪತಿಯೇ ಅಲ್ಲ ಎಂಬ ಬಿರುನುಡಿಗಳನ್ನು ಆಡುತ್ತಾಳೆ. ಒಟ್ಟಾರೆ ಸೀತೆಯ ಈ ಆಸೆ ಮತ್ತು ಕುಬುಸದ ಬಗೆಗಿನ ತೀವ್ರಾಸಕ್ತಿಯ ಈ ಭಾಗ ಆದಿಮ ಸಮಾಜಗಳ ವಸ್ತ್ರ ವಿನ್ಯಾಸದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.

ರಾವಣ ಸೀತೆಯನ್ನು ಹೊತ್ತೊಯ್ಯುತ್ತಾನೆ. ಜಟಾಯಿಯ ಯುದ್ಧವೂ ನಡೆಯುತ್ತದೆ. ಏಳು ಸಮುದ್ರ ದಾಟಿ ಲಂಕೆಯನ್ನು ಸೇರುವ ರಾವಣ ಅಲ್ಲಿನ ಮಾವಿನ ತೋಪಿನಲ್ಲಿ ಕ್ಷೇತ್ರವೊಂದನ್ನು ಕಟ್ಟಿಸಿ ಸೀತೆಯನ್ನು ಅಲ್ಲಿಡುತ್ತಾನೆ. ಅಶೋಕ ವನದ ಬದಲು ಮಾವಿನ ತೋಪಿನ ಕಲ್ಪನೆಯೂ ಅಷ್ಟೇ ಸಹಜವಾಗಿದೆ.

ಇತ್ತ ‘ಆ ಲಕ್ಷಣಾ’ ಎಂದು ಕೂಗಿದ ರಾಮನನ್ನು ಹುಡುಕಿ ಲಕ್ಷ್ಮಣ ಹೋಗುತ್ತಾನೆ. ಇದು ರಾಕ್ಷಸಮಾಯೆ ಎಂಬುದು ಇಬ್ಬರಿಗೂ ತಿಳಿಯುತ್ತದೆ. ಸೀತೆಯನ್ನು ಯಾಕೆ ಬಿಟ್ಟು ಬಂದೆ ಎಂದು ರಾಮ ಲಕ್ಷ್ಮಣನ ಮೇಲೆ ಸಿಟ್ಟು ಮಾಡುತ್ತಾನೆ. ಈ ಸಂದರ್ಭವನ್ನು ವರ್ಣಿಸುವಾಗ ನಮ್ಮ ಕಥೆಗಾರ ತಿಮ್ಮಪ್ಪನ ಬಾಯಿಂದ ಅಪರೂಪದ ಆಂಗ್ಲ ಪದವೊಂದು ನುಸುಳಿ ಬಂದಿದೆ. ಬಹುಶಃ ಇಡೀ ಕಾವ್ಯದಲ್ಲಿ ಬಳಕೆಯಾಗಿರುವ ಏಕೈಕ ಆಂಗ್ಲ ಪದ ಇದಾಗಿದೆ. ಸೀತೆ ತನ್ನನ್ನು ಹೇಗೆ ಜರಿದಳು ಎಂಬುದನ್ನು ಲಕ್ಷ್ಮಣ ರಾಮನಿಗೆ ವಿವರಿಸುವಾಗ ನುಸುಳಿರುವ ಪದ ಇದು.

ರಾಮಾ ಸತ್ತಾರು ಸಾಯಲಿ ಎಂದು
ನನ್ನ ನೀನೇನು ಆಳಬೇಕಾ
ಆಳುವ ಮನಸು ನಿನಗೇನಾ
ಅಂದಳು ನನಗೀ ಜರಿದಿದುಳು
ಇನಸಟ್ಟು ನನಗೆ ಮಾಡಿದಳು

(ಇನ್ ಸಲ್ಟ್) ಅವಹೇಳನ ಎಂಬ ಪದ ನಮ್ಮ ತಿಮ್ಮಪ್ಪನ ಬಾಯಲ್ಲಿ ‘ಇನಸಟ್ಟು’ ಆಗಿ ಹೊರಬಿದ್ದಿದೆ. ಪರಭಾಷಾ ಪ್ರಭಾವದ ಮೂಲಕ ಅಪರಿಚಿತ ಪದಗಳು ಹೇಗೆ ಕನ್ನಡೀಕರಣಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ.

* * *

ಮುಂದಿನ ಲೋಕ ವಾನನರಿಗೆ ಸಂಬಂಧಿಸಿದ್ದು. ರಾಮಾಯಣ ಮಹಾಕಾವ್ಯದ ಮೊದಲ ಹಂತವಾದ ಮಾನವ ಲೋಕ, ಎರಡನೇ ಹಂತದ ವಾನರ ಲೋಕ ಹಾಗೂ ಮೂರನೇ ಹಂತದ ರಾಕ್ಷಸ ಲೋಕಗಳು ವಿಚಾರಾರ್ಹವಾದ ಸಂಗತಿಗಳಾಗಿವೆ. ಉತ್ತರದ ವಿಶಾಲ ನದೀ ಮುಖಜ ಭೂಮಿಗಳಲ್ಲಿ ಆ ಕಾಲಕ್ಕೆ ಮುಂದುವರಿದ ರೀತಿಯ ಬೇಸಾಯ ಕ್ರಮವನ್ನು ಅನುಸರಿಸಿ, ಬದುಕಿನಲ್ಲೂ ನಾಗರೀಕತೆಯನ್ನು ರೂಢಿಸಿಕೊಂಡು ಬದುಕುತ್ತಿದ್ದ ಆರ್ಯರು ತಮ್ಮ ಬೇಸಾಯದ ಉದ್ದೇಶದಿಂದಲೇ ಕೃಷಿ ಪ್ರದೇಶಗಳನ್ನು ವಿಸ್ತರಿಸತೊಡಗಿದರು. ಹೀಗೆ ವಿಸ್ತರಿಸುತ್ತಾ ಬರುತ್ತಿದ್ದಂತೆ ಪಾಳೇಪಟ್ಟುಗಳು ಜನಪದಗಳಾಗಿಯೂ ಜನಪದಗಳು ರಾಜ್ಯಗಳಾಗಿಯೂ ಪರಿವರ್ತಿತವಾಗುತ್ತಾ ಬಂದವು. ಆ ಕಾಲಕ್ಕೆ ಪ್ರಚಲಿತದಲ್ಲಿದ್ದ ಅಯೋಧ್ಯೆ, ಕೋಶಲ, ಮಿಥಿಲ, ಮಗಧ, ಗಾಂಧಾರ, ಗಿರಿವ್ರಜ, ಕೈಕೇಯ, ಕಾಂಬೋಜ ಮುಂತಾದ ಜನಪದಗಳನ್ನು ವಿಸ್ತರಿಸಿ ರಾಜ್ಯಗಳನ್ನಾಗಿ ಪರಿವರ್ತಿಸುತ್ತಿದ್ದ ಪದ್ಧತಿ ಕಂಡುಬರುತ್ತದೆ.

ಆ ಕಾಲದಲ್ಲಿ ವನವಾಸ ಎಂದರೆ ಅದೊಂದು ರಾಜ್ಯ ವಿಸ್ತರಿಸುವ ಪ್ರಕ್ರಿಯೆಯೂ ಆಗಿತ್ತು ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ರಾಜರು ತಮ್ಮ ಮಕ್ಕಳುಗಳನ್ನು ದೇಶಭ್ರಷ್ಟರನ್ನಾಗಿಸಿ, ಅಥವಾ ರಾಜ್ಯತ್ಯಾಗ ಮಾಡಿಸಿ ಬಲವಂತವಾಗಿಯಾದರೂ ಅವರನ್ನು ಹೊರಗೆ ಕಳಿಸಿ ತಮ್ಮ ಆಡಳಿತದ ಭೂಮಿಯನ್ನು ವಿಸ್ತರಿಸುತ್ತಿದ್ದರು. ಈ ದೃಷ್ಟಿಯಿಂದ ಈ ಹಿಂದೆ ನೋಡಿದ ನಮ್ಮ ಬುಡಕಟ್ಟುಗಳು ಹೇಳುವ ದಶರಥನ ಕಥೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬಹುದು. “ಇದ್ದಕ್ಕಿದ್ದಂತೆ ದಶರಥ ತನ್ನ ಕೋಟೆಯ ಬಾಗಿಲಿನಲ್ಲಿ ನಿಂತು ಸಾರುತ್ತಾನೆ. “ಇಂದಿನಿಂದ ರಾಮ ಲಕ್ಷ್ಮಣರು ದೇಸಾಂತರ ಹೋಗುತ್ತಾರೆ. ಭರತನಿಗೆ ಪಟ್ಟ ಕಟ್ಟಲಾಗುತ್ತದೆ”ಎಂದು.

ಇನ್ನೊಂದು ಅಭಿಪ್ರಾಯದ ಪ್ರಕಾರ ರಾಜ ತಾನು ತನ್ನ ಅವಧಿಯಲ್ಲಿ ಸಂಪಾದಿಸಿದ ಆಸ್ತಿಪಾಸ್ತಿ ಹಾಗೂ ಧನಕನಕ ಸಂಪತ್ತು ತನ್ನೆಲ್ಲ ಮಕ್ಕಳಿಗೆ ಸಾಲದಾದಾಗ, ಅವರವರೊಳಗೆ ಆಸ್ತಿಯ ಬಗೆಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿತ್ತು. ಅಂಥ ಸಂದರ್ಭದಲ್ಲಿ ಮಹತ್ವಾ ಕಾಂಕ್ಷಿಗಳಾದ ರಾಜಕುಮಾರರು ತಾವೇ ಸ್ವತಹ ರಾಜ್ಯ ಬಿಟ್ಟು, ಅಥವಾ ಹಿರಿಯರ ಆಕಾಂಕ್ಷೆ ಯಂತೆ ರಾಜ್ಯತ್ಯಾಗ ಮಾಡಿ ತಮ್ಮದೇ ಆದ ಯುದ್ಧ ಮತ್ತು ಸಾಹಸಗಳ ಮೂಲಕ ಹೊಸ ಭಾಗಗಳನ್ನು ಸಂಪಾದಿಸಿ ಪ್ರತ್ಯೇಕ ಜನಪದ ಅಥವಾ ರಾಜ್ಯಗಳನ್ನು ಕಟ್ಟುತ್ತಿದ್ದರು. ಈ ಸಂದರ್ಭದಲ್ಲಿ ಪ್ರಖ್ಯಾತ ಇತಿಹಾಸ ತಜ್ಞೆ ರೋಮಿಲಾ ಥಾಪರ್ ಅವರ ಅಭಿಪ್ರಾಯಗಳನ್ನು ಅವಶ್ಯವಾಗಿ ಗಮನಿಸಬೇಕು.[3]

ಆ ಕಾಲವನ್ನು ಪ್ರತಿನಿಧಿಸುವಂತಹ ಲಭ್ಯವಿರುವ ಬೌದ್ಧ ಸಾಹಿತ್ಯದ ಆಕರಗಳ ಪ್ರಕಾರ ‘ವನವಾಸ’ ಎಂಬುದು ಕ್ಷತ್ರಿಯರಲ್ಲಿ ಅತ್ಯಂತ ಸಾಮಾನ್ಯವಾದ ಒಂದು ಸಂಪ್ರದಾಯವಾಗಿತ್ತು. ಈಗಾಗಲೇ ಸಂಸ್ಥಾಪಿತವಾಗಿರುವ ಹಿರಿಯ ಸಾಮ್ರಾಜ್ಯಗಳ ಕಿರಿಯ ಶಾಖೆಗಳಂತೆ ಹೊಸದಾಗಿ ಸೃಷ್ಟಿಗೊಳ್ಳುತ್ತಿದ್ದ ಈ ವಿಸ್ತರಣಾ ಪ್ರದೇಶಗಳ ಉದ್ದೇಶವೇ ಹೊಸ ಅರಣ್ಯ ಭೂಮಿಯನ್ನು ಸಾಗುವಳಿಗೆ ಮಾರ್ಪಡಿಸುವ ಇರಾದೆಯಿಂದ ಕೂಡಿರುತ್ತಿತ್ತು. ಹೀಗೆ ವನವಾಸ ಅಥವಾ ರಾಜ್ಯತ್ಯಾಗವೆಂಬ ಪರಿಕಲ್ಪನೆಯ ಮೂಲಕ ವಿಸ್ತರಣೆಗೊಳ್ಳುತ್ತಿದ್ದ ಭೂ ಪ್ರದೇಶವನ್ನು ‘ಜನಪದ’ ಎಂದು ಕರೆದು ಅದಕ್ಕೊಂದು ರಾಜಧಾನಿಯನ್ನು ನಿರ್ಮಾಣ ಮಾಡಲಾಗುತ್ತಿತ್ತು. ಈ ನಂತರ ಈ ವನವಾಸ ಎಂಬುದು ಒಂದು ಪುರಾಣವಾಗಿ ಮಾರ್ಪಟ್ಟಿದ್ದು ನಮ್ಮ ಕಾವ್ಯಗಳ ಮೂಲಕ ಮಾತ್ರ. ಈ ರೀತಿಯ ವಿಸ್ತರಣೆ ಕೇವಲ ರಾಮನೊಬ್ಬನಿಗೆ ಮಾತ್ರ ಮೀಸಲಾದುದೇನೂ ಅಲ್ಲ. ರಾಮ ಅಯೋಧ್ಯೆಯಿಂದ ಹೊರಟು ಮತ್ತೆ ಅಯೋಧ್ಯೆಗೆ ಸೇರುವವರೆಗಿನ ಕ್ರಿಯೆಯನ್ನು ಒಂದು ದೊಡ್ಡ ವಿಸ್ತರಣೆ ಎಂದು ಪರಿಗಣಿಸಿ ಅದಷ್ಟಕ್ಕೇ ಈ ಕ್ರಿಯೆ ನಿಂತಿತು ಎಂದು ಹೇಳುವ ಹಾಗಿಲ್ಲ. ರಾಮನ ಮಗನಾದ ಕುಶ ಕೂಡ ಇಂಥದೇ ಪ್ರಕ್ರಿಯೆಯ ಮೂಲಕ ಪ್ರತ್ಯೇಕ ರಾಜ್ಯವೊಂದನ್ನು ಕಟ್ಟಿ ‘ಕುಶಸ್ಥಲೀ’ ಎಂಬ ರಾಜಧಾನಿಯ ಮೂಲಕ ರಾಜ್ಯಭಾರ ಮಾಡಿದ ಎಂಬುದನ್ನು ಇಲ್ಲಿ ಗಮನಿಸಬೇಕು. ಇದೇ ಸಂದರ್ಭದಲ್ಲಿ ದಕ್ಷಿಣ ಕೋಶಲ ಮತ್ತು ಉತ್ತರ ಕೋಶಲ ಎಂಬ ವಿಂಗಡನೆಯನ್ನು ಗಮನಿಸಿದಾಗ ಉತ್ತರ ಕೋಶಲದ ಸ್ಥಾಪನೆಯ ನಂತರ, ಅದರ ಮುಂದುವರಿಕೆಯಾಗಿ ದಕ್ಷಿಣ ಕೋಶಲ ಸ್ಥಾಪನೆಯಾಗಿರುವುದನ್ನು ಯಾರಾದರೂ ಊಹಿಸಬಹುದು.

ಅಯೋಧ್ಯಾ ಕಾಂಡದಲ್ಲಿ ಬರುವ ತೋಟಗಳು, ಉದ್ಯಾನಗಳು, ಕೃಷಿ ಭೂಮಿ ಮತ್ತು ವಿವಿಧ ಕೃಷಿ ಚಟುವಟಿಕೆಗಳನ್ನು ಗಮನಿಸಿದರೆ ಆ ಕಾಲಕ್ಕೆ ಪ್ರಮುಖವೆನಿಸಿದ್ದ ವ್ಯವಸಾಯ ಭೂಮಿಯ ಅವಶ್ಯಕತೆ ಮನದಟ್ಟಾಗದೆ ಇರದು. ರಾಮನ ತಾಯಿಯಾದ ಕೌಸಲ್ಯೆಗೆ ಅವಳ ತಂದೆಯಿಂದ ಬಳುವಳಿಯಾಗಿ ಬಂದಿದ್ದ ಒಂದು ಸಾವಿರ ಹಳ್ಳಿಗಳು ಮುಖ್ಯವಾಗಿ ಇಂಥ ಕೃಷಿ ಚಟುವಟಿಕೆಯ ಪ್ರದೇಶಗಳನ್ನೇ ಒಳಗೊಂಡಿದ್ದವು ಎಂಬುದನ್ನು ನೋಡುವಾಗ ಮೇಲಿನ ಮಾತಿಗೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ.

ರಾಮಾಯಣವನ್ನು ಒಂದು ಪುರಾಣ ಕಾವ್ಯ ಎಂಬುದನ್ನು ಮರೆತು ಅಲ್ಲಿ ಬರುವ ವಿವಿಧ ಪಾತ್ರಗಳ ನಡುವಿನ ವೈಯಕ್ತಿಕ ಪ್ರೀತಿ ಅಥವಾ ದ್ವೇಷಗಳ ಮೂಲಕವೂ ಅವರ ಸಾಮ್ರಾಜ್ಯ ವಿಸ್ತರಣೆಯ ಆಶಯಗಳನ್ನು ನಾವು ವಿಶ್ಲೇಷಿಸಬಹುದು. ದಂಡಕಾರಣ್ಯದ ಹಾದಿಯ ಮಧ್ಯೆ ಮರವೊಂದುರ ಕೆಳಗೆ ವಿಶ್ರಮಿಸುತ್ತಾ ಆಹಾರಕ್ಕಾಗಿ ರಾಮ ಲಕ್ಷ್ಮಣರು ಹಂದಿಯೊಂದನ್ನು, ಹೋತವೊಂದನ್ನು ಬಾಣಬಿಟ್ಟು ಬೇಟಿಯಾಡಿದ ನಂತರ ಅಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದ ರಾಮ ತನ್ನ ರಾಜ್ಯತ್ಯಾಗದ ದುರದೃಷ್ಟಕ್ಕಾಗಿ ದುಃಖಿಸುತ್ತಾ ಹೀಗೆ ಹೇಳುತ್ತಾನೆ. “ದಶರಥ ಇಂತಹ ಕಷ್ಟ ತಂದಿಟ್ಟ ನೀಚ, ಕಾಮುಕ, ಮಗನನ್ನು ದಾರುಣ ಸಂಕಷ್ಟಕ್ಕೆ ಈಡು ಮಾಡಿದ. ಭರತ ರಾಜನಾಗಿ ಮೆರೆಯುತ್ತಿದ್ದಾನೆ. ಕೈಕೆಗೆ ಅಧಿಕಾರ ಬಂತು. ಸಿರಿಸಂಪದಗಳಲ್ಲಿ ಮುಳುಗಿ ತೇಲುತ್ತಿರುವ ಕೈಕೆಗೆ ಸೊಕ್ಕು ಬಂದಿರುತ್ತದೆಯೇ?” (ಅಯೋಧ್ಯಾಕಾಂಡ).

ಭರತನು ತನ್ನ ಅಣ್ಣನಾದ ರಾಮನನ್ನು ಮತ್ತೆ ಹಿಂದಕ್ಕೆ ಬರುವಂತೆ ಮನವೊಲಿಸಲು ತನ್ನ ‘ಸೈನ್ಯದ ಸಮೇತ’ ಚಿತ್ರಕೂಟಕ್ಕೆ ಬರುತ್ತಿದ್ದಾನೆ. ಆ ಗದ್ದಲ ಕೇಳಿ ಅಲ್ಲಿ ಬರುತ್ತಿರುವವರು ಯಾರು ನೋಡು ಎಂದು ಲಕ್ಷ್ಮಣನಿಗೆ ರಾಮ ಹೇಳುತ್ತಾನೆ. ಮರವೊಂದನ್ನು ಹತ್ತಿ ಅದನ್ನು ನೋಡಿದ ಲಕ್ಷ್ಮಣನ ಪ್ರತಿಕ್ರಿಯೆ ನೋಡಿ “ಇನ್ನಾರು ಬರುತ್ತಿದ್ದಾರೆ, ಕೈಕೆಯ ಮಗ ನಮ್ಮೊಂದಿಗೆ ಯುದ್ಧಕ್ಕೆ ಬರುತ್ತಿದ್ದಾನೆ. ರಾಜ್ಯವನ್ನೆಲ್ಲಾ ಆಕ್ರಮಿಸಿದರೂ ತೃಪ್ತಿ ಇಲ್ಲ. ಕೊಲ್ಲುತ್ತೇನೋ ಭರತ, ನಿನ್ನ ತಾಯಿ, ಬಂಧು, ಸ್ನೇಹಿತರನ್ನೆಲ್ಲಾ ಕೊಲ್ಲುತ್ತೇನೆ.” (ಅಯೋಧ್ಯಾಕಾಂಡ ೬೬) ‘ಲಕ್ಷ್ಮಣನ ವರ್ತನೆ ತಂದೆಯ ಮಾತುಳಿಸಲು ತ್ಯಾಗಮಯಿಗಳಾಗಿ ಅರಣ್ಯವಾಸಕ್ಕೆ ತೆರಳಿದ, ಸತ್ಪುರುಷನಂತಿಲ್ಲ. ಸಧ ಕ್ಕೆ ರಾಜ್ಯಭ್ರಷ್ಟನಾಗಿ, ಸಮಯಕ್ಕಾಗಿ ಕಾದು ತಲೆ ಮರೆಸಿಕೊಂಡಿರುವ ಕೂಟದ ಸದಸ್ಯನಂತೆ ಅರಚಾಡುತ್ತಿದ್ದಾನೆ. ರಾಜ್ಯತ್ಯಾಗಕ್ಕೆ ಮೊದಲು ರಾಮ ಲಕ್ಷ್ಮಣ ಭರತ ಶತೃಜ್ಞರ ನಡುವೆ ವೈಮನಸ್ಯವಿದ್ದ ಉಲ್ಲೇಖವಿಲ್ಲ ಅಥವಾ ಭರತ ಹಿಂದಿನಿಂದಲೇ ಸ್ವಾರ್ಥಿಯೂ, ಆಕ್ರಮಣಕಾರಿಯೂ ಆಗಿ ತೊಂದರೆ ಕೊಡುತ್ತಾ ಬಂದ ಸ್ವಭಾವದ ಬಗ್ಗೆಯಾದರೂ ಪ್ರಸ್ತಾಪವಿಲ್ಲ. ಕೈಕೆ ರಾಜ್ಯಾಧಿಕಾರದ ವರವನ್ನು ಕೇಳಿದಾಗಲೂ ಭರತ ಹಾಜರಿರಲಿಲ್ಲ. ಆ ಸಂದರ್ಭದಲ್ಲಿ ಭರತನ ನಿಲುವೇನು ಎಂಬ ಬಗ್ಗೆ ಕವಿ ಬರೆದಿಲ್ಲ. ಹೀಗಿರುವಾಗ ಕೈಕೆಯ ಮಗ ಬರುತ್ತಿದ್ದಾನೆ ಎಂದೊಡನೆ ತಮ್ಮೊಂದಿಗೆ ಯುದ್ಧಕ್ಕೇ ಬರುತ್ತಿದ್ದಾನೆಂದು ಲಕ್ಷ್ಮಣ ಯಾಕೆ ಭಾವಿಸಬೇಕು, ಅವನ ತಾಯಿ ಬಂಧು ಬಳಗವನ್ನೆಲ್ಲಾ ಕೊಲ್ಲುತ್ತೇನೆ ಎಂದು ಯಾಕೆ ಲಕ್ಷ್ಮಣ ಮಾತನಾಡುತ್ತಿರುವುದು? ದಾಯಾದಿ ಕಲಹದಿಂದ ರಾಜ್ಯಭ್ರಷ್ಟನಾಗಿ ಬಂದಿರುವ ರಾಮಕಥೆಯೊಂದರ ಪಾತ್ರವಾಗಿ”[4]

ರಾಮನ ಪಟ್ಟಾಭಿಷೇಕ ಪ್ರಕರಣವೂ ಅಷ್ಟೆ. ಭರತ ಅಯೋಧ್ಯೆಯಲ್ಲಿ ಇರುವುದೇ ಇಲ್ಲ. ಕೇವಲ ಮೂರು ದಿನಗಳಲ್ಲಿ ಪಟ್ಟಾಭಿಷೇಕ ಆಗಬೇಕು ಎಂದು ದಶರಥ ನಿಶ್ಚಯಿಸುತ್ತಾನೆ. ತುಂಬ ಗಡಬಿಡಿಯಲ್ಲಿ ಪಟ್ಟಾಭಿಷೇಕದ ಸಿದ್ಧತೆಗಳು ನಡೆಯುತ್ತವೆ. ಆದರೆ ಕೊನೆಗೂ ಅದು ಕೈಗೂಡುವುದಿಲ್ಲ ಎಂಬ ಮಾತು ಬೇರೆ. ಅಂಥ ಒಂದು ಮಹತ್ವದ ಕಾರ್ಯಕ್ರಮಕ್ಕೆ ಭರತನನ್ನು ಕರೆಸುವ ಪ್ರಯತ್ನವನ್ನೂ ಮಾಡುವುದಿಲ್ಲ, ಬದಲಾಗಿ ದಶರಥನೇ ತನ್ನ ಅನುಮಾನವನ್ನು ವ್ಯಕ್ತಪಡಿಸಿ ಅವನು ಬರುವಷ್ಟರಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಮುಗಿಸಿಬಿಡಬೇಕು ಎಂಬ ಇರಾದೆಯಲ್ಲಿ ಇರುತ್ತಾನೆ.

ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೊರಟಿದ್ದುದೇ ನಿಜವಾಗಿದ್ದ ಪಕ್ಷದಲ್ಲಿ ರಾಮ ಲಕ್ಷ್ಮಣರು ಸದಾ ಧನುರ್ಧಾರಿಗಳಾಗಿ ಇರಬೇಕಾಗಿದ್ದ ಅವಶ್ಯಕತೆ ಇರಲಿಲ್ಲ. ಕೇವಲ ಧನಸ್ಸು ಅಷ್ಟೇ ಅಲ್ಲ, ಇನ್ನೂ ಹಲವು ಬಗೆಯ ಆಯುಧಗಳೂ ಅವರಲ್ಲಿದ್ದವು ಎಂಬುದಕ್ಕೆ, ಹಾಗೂ ಆ ಮೂಲಕ ಅವರು ಕಾಡಿನಲ್ಲಿ ಅನೇಕ ರೀತಿಯ ಹಿಂಸೆಗಳನ್ನೂ ಮಾಡುತ್ತಿದ್ದರೆಂಬುದಕ್ಕೆ ಸೀತೆ ಹೇಳುವ ಈ ಮಾತುಗಳನ್ನೇ ಗಮನಿಸೋಣ.

ಕ್ಷತ್ರಿಯಾಣಾಂ ಹಿ ಧನುಃ ಹುತಾಶಸ್ಸೇಂದನಾನಿ ||

“ಶಸ್ತ್ರ ಹಿಡಿದ ಕ್ಷತ್ರಿಯನು, ಸೌದೆಯ ಹತ್ತಿರದ ಬೆಂಕಿಯಂತೆ, ಅತಿ ಬಲಿಷ್ಟನಾಗಿ, ಆ ಬಲಾವೇಶದಲ್ಲಿ ಇತರರಿಗೆ ಹಿಂಸಾಕರನಾದನು.”

ಅಗ್ನಿ ಸಂಯೋಗವದ್ದೇತುಃ ಶಸ್ತ್ರಸಂಯೋಗ ಉಚ್ಯತೇ ||

“ಆದ್ದರಿಂದ ನೀವು (ರಾಮ ಲಕ್ಷ್ಮಣರು) ಆಯುಧಪಾಣಿಗಳಾಗಿರುವುದನ್ನು ನೋಡಿ ನನಗೆ ಭಯವುಂಟಾಗಿದೆ. ನಿಷ್ಕಾರುಣವಾಗಿ ನೀವು ಪ್ರಾಣಿ ಹಿಂಸೆ ಮಾಡೀರಿ; ಈ ಶಸ್ತ್ರಾಸ್ತ್ರಗಳು ನಿಮ್ಮಲ್ಲಿ ಕ್ರೂರಬುದ್ದಿಯನ್ನುಂಟು ಮಾಡಿಯಾವು.; ನಿಮ್ಮಿಂದ ನಿರಪರಾಧಿಗಳಿಗೆ ಬಾಧೆ ತಾಕೀತು.

ಸ್ನೇಹಾಚ್ಚ ಬಹುಮಾನಾಚ್ಚ ಸ್ಮಾರಯೇ ತ್ವಾಃ ಶಿಕ್ಷಯೇ ||

“ನಾನು ಹೇಳುತ್ತಿರುವ ನೀತಿ ನಿಮಗೆ ತಿಳಿಯದ್ದೇಂದಲ್ಲ. ನಿಮಗೆ ನಾನು ಉಪದೇಶ ಮಾಡಹೊರಟಿಲ್ಲ. ನಿಮಗೆ ತಿಳಿದಿರುವುದನ್ನೇ ಮತ್ತೆ ನೆನಪಿಗೆ ತರುತ್ತಿದ್ದೇನೆ. ನಿಮ್ಮಲ್ಲಿ ನನಗಿರುವ ಪ್ರೀತಿಯಿಂದ ಚೋದಿತಳಾಗಿ, ನಿಮ್ಮ ವಿಷಯದಲ್ಲಿ ನನಗಿರುವ ಹೆಮ್ಮೆಗೆ ಕುಂದುಂಟಾಗಬಾರದೆಂಬ ಅಭಿಮಾನಕ್ಕೆ ವಶಳಾಗಿ, ಈ ರೀತಿ ನಾನು ನಿಮಗೆ ಜ್ಞಾಪಕ ಕೊಡುತ್ತಿದ್ದೇನೆ”[5] ಸೀತೆಯ ಇಂಥ ಬುದ್ದಿಮಾತುಗಳನ್ನು ಕೇಳಿ ರಾಮಲಕ್ಷ್ಮಣರು ಶಾಂತಿಪ್ರಿಯರಾಗಿದ್ದ ಪಕ್ಷದಲ್ಲಿ ಆ ಮುಂದಿನ ರಾಮಾಯಣ ನಡೆಯುವ ಅಗತ್ಯವೇ ಇರಲಿಲ್ಲ. ಈ ರಾಜಕುಮಾರರಿಬ್ಬರೂ ವನವಾಸಕ್ಕೆ ಬಂದಿದ್ದ ಉದ್ದೇಶ ಕೇವಲ ಪಿತೃವಾಕ್ಯ ಪರಿಪಾಲನೆಗಾಗಿಯೇ ನಿಜವಾಗಿದ್ದ ಪಕ್ಷದಲ್ಲಿ ಅವರು ಸೀತೆಯ ಮಾತುಗಳನ್ನು ಕೇಳುತ್ತಿದ್ದರು ಎಂಬುದು ನಿಜ. ಅಷ್ಟೇ ಅಲ್ಲ, ಕಾಡಿನ ದುಷ್ಟ ಮೃಗಗಳ ರಕ್ಷಣೆಗಾಗಿ ಮಾತ್ರ ತಮ್ಮ ಶಸ್ತ್ರಾಸ್ತ್ರಗಳನ್ನು ಬಳಸಿದ್ದರೂ ಮುಂದಿನ ಅನಾಹುತಗಳೇನೂ ನಡೆಯುತ್ತಿರಲಿಲ್ಲ. ಸೀತೆ ಹೀಗೆ ಉಪದೇಶ ಹೇಳುತ್ತಿದ್ದಂತೆಯೇ ಅಣ್ಣತಮ್ಮಂದಿರಿಬ್ಬರೂ ಸೇರಿ ಅನೇಕ ‘ರಾಕ್ಷಸ’ರನ್ನು ಕೊಂದರು. ಅವರು ಅಲೆಯುತ್ತಾ ಬಂದು ಸೇರಿಕೊಂಡ ಕಾಡು ಮೂಲತಃ ಶೂರ್ಪನಖಿಗೆ ಸೇರಿದುದಾಗಿತ್ತು ಎಂದು ಊಹಿಸೋಣ. ದಕ್ಷಿಣದ ಆ ಭಾಗ ಮಾತೃಪ್ರಧಾನ ವ್ಯವಸ್ಥೆಯಲ್ಲಿ ಇತ್ತಾದ್ದರಿಂದ ಶೂರ್ಪನಖಿ ಆ ನೆಲದ ‘ಒಡತಿ’ಯಾಗಿದ್ದಿರಬಹುದು. ಅಲ್ಲದೆ, ರಾಮ ವಂಶಸ್ಥರಿಗೆ ಇದ್ದಂತೆ ಒಬ್ಬ ಗಂಡ, ಪಾತಿವ್ರತ್ಯ ಅಥವಾ ಶೀಲದ ಕಲ್ಪನೆಗಳು ಅಲ್ಲಿನ ಜನರಲ್ಲಿ ಇರಲಿಲ್ಲ. ಹೀಗಾಗಿ ಅತ್ಯಂತ ಸಹಜವಾಗಿ ಶೂರ್ಪನಖಿ ರಾಮಲಕ್ಷ್ಮಣರೆಂಬ ಆ ರಾಜಕುಮಾರರನ್ನು ಮೋಹಿಸಿರಬಹುದು. ಪ್ರೇಮಭಿಕ್ಷೆಯನ್ನು ಬೇಡಿರಲೂಬಹುದು. ಅವರಿಗೆ ಶೂರ್ಪನಖಿ ಇಷ್ಟವಿಲ್ಲದಿದ್ದ ಪಕ್ಷದಲ್ಲಿ ಖಂಡತುಂಡವಾಗಿ ಹೇಳಿ ಬರಿ ಮಾತಿನಲ್ಲೇ ನಿರಾಕರಿಸಬಹುದಾಗಿತ್ತು. ಆದರೆ ಆ ಮಹಾನುಭಾವರು ಮಾಡಿದ್ದೇನು? ತಮ್ಮ ವಿಕಾರತೆಯನ್ನು ಅಮಾನತೆಯನ್ನು ಮೆರೆದರು. ಇದು ಅವರ ಒಂದು ತಂತ್ರವೂ ಆಗಿದ್ದಿರಬಹುದು. ಹೀಗೆ ಹೆಣ್ಣೊಬ್ಬಳಿಗೆ ಅವಮಾನ ಮಾಡುವ ಮೂಲಕ ಅವಳ ಅಣ್ಣನಾದ ‘ದಕ್ಷಿಣಾಧಿಪತಿ’ಯನ್ನು ಕೆಣಕುವ ಉದ್ದೇಶವೂ ಅವರಿಗಿತ್ತು. ಬಹುಶಃ ಇವರ ಇಂಥ ಉದ್ದೇಶವನ್ನು ಅರಿತೇ ಸೀತೆ ಮೇಲಿನ ಉಪದೇಶವನ್ನು ಅವರಿಗೆ ನೀಡಿರಲೂಬಹುದು.

ಕಡೆಯ ಪಕ್ಷ ಗೊಂಡರ ರಾಮಾಯಣದ ಲಕ್ಷ್ಮಣನಂತೆ ನಿರಾಯುಧವಾಗಿ ರಾಮ ಲಕ್ಷ್ಮಣರು ಕಾಡಿಗೆ ಬಂದಿದ್ದ ಪಕ್ಷದಲ್ಲಿ ಈ ರಾಮಾಯಣವೆಂಬುದು ಹೀಗೆ ದ್ವೇಷಾಸೂಯೆಗಳ ದುರಂತ ಕಥೆಯಾಗಿ ಬೆಳೆಯುತ್ತಿರಲಿಲ್ಲವೇನೋ

ಕುಡುವೋನೆಂದುರು ಕತ್ತಿಯಿಲ್ಲಾ
ಕೊಯ್ಯುವನಂದರು ಚೂರಿಯಿಲ್ಲಾ
ಕೈಯ್ಯಲು ತಾವೆ ಮುರಿದಿದುರಾ
ಸೊಪ್ಪಿನು ತುಂಡೀನೆ ಮುರಿದಿದುರಾ
ಅಲ್ಲೊಂದು ಮನೆಯ ಮಾಡಿದುರಾ

ತಂದೆಯ ವಾಕ್ಯ ಪೂರೈಸಲು ಬಂದ ಮಕ್ಕಳಾಗಿದ್ದರೆ ಹೀಗೇ ಇರಬೇಕಿತ್ತು. ಆದರೆ ಹಾಗಾಗಲಿಲ್ಲ. ರಾವಣನ ಸೋದರರೆಂದು ಬಣ್ಣಿಸಲಾದ ಖರದೂಷಣರ ಮೇಲೆ ಮೊದಲು ಕಾಳಗ ಮಾಡಿದರು. ರಾಕ್ಷಸರ ಪಂಥದವರೆಂದು ಪರಿಗಣಿಸಲಾದ ಅನೇಕರ ಮೇಲೆ ಹರಿಹಾಯ್ದರು. ಮುನಿಗಳ ರಕ್ಷಣೆಯ ನೆಪವೊಡ್ಡಿ ಕಾಡಿನಲ್ಲಿ ವಾಸವಿದ್ದ ಅರ್ಥಾತ್ ಆ ನೆಲದ ಒಡೆಯರಾದ ಅಲ್ಲಿನ ಮೂಲನಿವಾಸಿಗಳನ್ನು ಸರ್ವನಾಶ ಮಾಡಲು ಹೊರಟರು. ಮೇಲೆ ಸೀತೆ ಹೇಳಿದ ಉಪದೇಶದ ಮಾತುಗಳನ್ನು ವಾಲ್ಮೀಕಿಯ ಆದರ್ಶ ಎಂದು ಹೇಳಿ ಬಣ್ಣಿಸುತ್ತಾ ಮನುಷ್ಯನಲ್ಲಿ ಸಂಸ್ಕೃತಿ ಎಂದರೆ ಹೀಗಿರಬೇಕು ಎಂದು ತಮ್ಮ ‘ಸಂಸ್ಕೃತಿ’ ಎಂಬ ಪುಸ್ತಕದ ಮೂಲಕ ಸಾರಿದ ಕನ್ನಡದ ಹಿರಿಯ ಚಿಂತಕ ಡಿ.ವಿ.ಜಿ.ಯವರು, ಸೀತೆಯ ಮಾತಿಗೆ ರಾಮ ಎಂಥ ಉತ್ತರ ಕೊಟ್ಟ ಎಂಬುದನ್ನು ಮಾತ್ರ ಉಲ್ಲೇಖಿಸದೆ ಉದ್ದೇಶಪೂರ್ವಕವಾಗಿ ಬಿಟ್ಟಿದ್ದಾರೆ ಅನ್ನಿಸುತ್ತದೆ. “ತಪಸ್ವಿಗಳು ಮುನಿಗಳು ಹಾಗೂ ದಂಡಕಾರಣ್ಯದ ಆಶ್ರಮವಾಸಿಗಳೇ ನನ್ನ ರಕ್ಷಣೆ ಕೋರಿದ್ದಾರೆ. ನಮ್ಮ ತಪಸ್ಸಿಗೆ ಭಂಗತರುವ ನರಮಾಂಸ ಭಕ್ಷಕರಾದ ರಾಕ್ಷಸರಿಂದ ಕಾಪಾಡಬೇಕೆಂದು ಅವರೇ ನನ್ನನ್ನು ಪ್ರಾರ್ಥಿಸಿದ್ದಾರೆ” ಎಂದು ಹೇಳುವ ರಾಮ ಅಷ್ಟಕ್ಕೇ ಸುಮ್ಮನಿದ್ದರೆ ಸಾಕಿತ್ತು. ಹೀಗೆ ಬುದ್ದಿವಾದ ಹೇಳಿದ ಸೀತೆಯನ್ನು ಕುರಿತು.

ಅಪ್ಯಹಂ ಜೀವಿತಂ ಜಹಯಾಂ ತ್ವಾಂ ಸೀತೆ ಸುಲಕ್ಷಣಮ್ ಣಿ
ನತು ಪ್ರತಿಜ್ಞಾಂ ಸಂಶ್ರುತ್ವ ಬ್ರಾಹ್ಮಣೇಭ್ಯೋ ವಿಶೇಷತ
ಸದೃಶಂ ಜಾನುರೂಪಂ ಕುಲಸ್ಯ ತವ ಶೋಭತೇಣಿ

“ಹೆಂಗಸಿನ ಸ್ತ್ರೀ ಚಾಪಲ್ಯಕ್ಕೆ ತಕ್ಕುನಾಗಿ ಸೀತೆ ಮಾತನಾಡುತ್ತಾಳೆ, ಅಷ್ಟೇ ಅಲ್ಲ ಅವಳಾಡಿದ ಮಾತು ಅವಳ ಕುಲಸಂಪ್ರದಾಯ ಮತ್ತು ಗುಣ ನಡತೆಗೆ ಅನುರೂಪವಾಗಿವೆ” ಎಂದೂ ಹೇಳುತ್ತಾಳೆ.

ಅಷ್ಟು ದೂರದ ಅಯೋಧ್ಯೆಯಿಂದ ರಾಮ ಲಕ್ಷ್ಮಣರು ಋಷ್ಯಾಶ್ರಮಗಳನ್ನು ಕಾಪಾಡಲು ಬಂದದ್ದರ ಉದ್ದೇಶವೂ ಇಲ್ಲಿ ಸ್ಪಷ್ಟ. ಋಷ್ಯಾಶ್ರಮಗಳೆಂದರೆ ಅವು ಕೇವಲ ವೇದಾಧ್ಯಯನದ ಕೇಂದ್ರಗಳಾಗಿರಲಿಲ್ಲ. “ಅರಣ್ಯದಲ್ಲಿ ಈ ಆಶ್ರಮಗಳು ಗುರುಕುಲದ ಕೆಲಸ ನಿರ್ವಹಿಸುತ್ತಿದ್ದವು. ಶಸ್ತ್ರಾಸ್ತ್ರ ತರಬೇತಿ, ವೇದಾಧ್ಯಯನ, ವಿದ್ಯಾಭ್ಯಾಸದ ಕೆಲಸಗಳನ್ನು ನಿರ್ವಹಿಸುವುದು ಅವುಗಳ ಒಂದು ಕರ್ತವ್ಯ. ಬಹಳ ಮುಖ್ಯವಾದ ಮತ್ತೊಂದು ಕರ್ತವ್ಯವೆಂದರೆ ನಿರ್ಜನ ಅರಣ್ಯಗಳನ್ನು ಕೃಷಿ ಕ್ಷೇತ್ರಗಳನ್ನಾಗಿ ಮಾರ್ಪಡಿಸುವುದು. ಆ ಪ್ರದೇಶದ ಸುತ್ತಮುತ್ತಲ ಆದಿವಾಸಿ ಸಮುದಾಯಗಳಿಗೆ ವ್ಯವಸಾಯ ಪದ್ಧತಿಗಳನ್ನು ಕಲಿಸುವುದು. ಅಲ್ಲಿ ತಮ್ಮ ಕೆಲಸ ಮುಗಿದ ನಂತರ ಬೇರೆ ಕಡೆ ತೆರಳುವುದು. ಅದಕ್ಕೇ ಋಷಿಮುನಿಗಳು ಒಂದೇ ಸ್ಥಳದಲ್ಲಿ ಹೆಚ್ಚುಕಾಲ ನಿಲ್ಲಬಾರದು ಎಂಬ ಆಚಾರವೂ ಬಂದಿರಬಹುದು. ಆದಿವಾಸಿ ಸಮುದಾಯಗಳನ್ನು ವ್ಯವಸಾಯ ಪದ್ಧತಿಗೊಳಪಡಿಸುವುದು ಎಂದರೆ ಅಭಿವೃದ್ದಿ ಎಂದು ನಾವು ಭಾವಿಸಬೇಕಾಗಿಲ್ಲ. ವ್ಯವಸಾಯಿಕ ಸಮಾಜದ ಪದ್ಧತಿಗಳನ್ನು ಕಲಿಸುವುದು ಎಂದರೆ ಊಳಿಗಮಾನ್ಯ ವ್ಯವಸ್ಥೆಯ ಚೌಕಟ್ಟಿನೆಡೆಗೆ ಸೆಳೆಯುವುದು, ಇದು ಬೋಧನೆಯ ಮೂಲಕ ಆಗಬಹುದು, ಆಮಿಷಗಳೊಡ್ಡುವುದರ ಮೂಲಕ ಆಗಬಹುದು, ಆಗಲೂ ಆಗದಿದ್ದರೆ ಶಸ್ತ್ರಾಸ್ತ್ರ ಬೆಂಬಲ ಪಡೆದು ಆಕ್ರಮಿಸುವುದರ ಮೂಲಕವೂ ಆಗಬಹುದು.”[6]

ಆದ್ದರಿಂದ, ಯಜ್ಞಯಾಗಾದಿಗಳನ್ನು ರಕ್ಷಿಸುವುದು ಹೇಗೋ ಹಾಗೆ ರಾಜ್ಯವ್ಯವಸ್ಥೆಯ ಗಡಿಗಳನ್ನು ವಿಸ್ತರಿಸಲು ನಡೆಸುತ್ತಿದ್ದ ಪ್ರಯತ್ನಗಳಿಗೆ ಬೆಂಗಾವಲಾಗಿ ನಿಲ್ಲುವುದು ಕೂಡ ರಾಮಲಕ್ಷ್ಮಣರಂಥ ರಾಜಕುಮಾರರ ಕರ್ತವ್ಯವಾಗಿತ್ತು. ಈ ರೀತಿಯಲ್ಲಿ ತಮ್ಮ ಜನಪದಗಳ ಅಥವಾ ರಾಜ್ಯಗಳ ವಿಸ್ತರಣೆಯಲ್ಲಿ ನಿರ್ಧಿಷ್ಟ ಉದ್ದೇಶವನ್ನು ಇಟ್ಟುಕೊಂಡು ಅರಣ್ಯಗಳನ್ನು ಪ್ರವೇಶಿಸಿದ ರಾಮಲಕ್ಷ್ಮಣರಿಗೆ ಪ್ರತಿರೋಧ ಕೂಡ ಅಷ್ಟೇ ತೀವ್ರವಾಗಿತ್ತು. ಅರಣ್ಯಗಳಲ್ಲಿ ಅನಾದಿಕಾಲದಿಂದ ನೆಲೆ ನಿಂತಿದ್ದ, ಅಥವಾ ಅಲೆಮಾರಿಗಳಾಗಿಯೂ ಕಾಡನ್ನೇ ತಮ್ಮ ಜೀವನಕ್ಕಾಗಿ ಆಶ್ರಯಿಸಿದ್ದ ಎಷ್ಟೋ ಜನ ವರ್ಗಗಳು ಅಲ್ಲಿದ್ದವು. ಅಂದಮೇಲೆ ಇನ್ನೊಬ್ಬರ ಮೇಲೆ ಅಸ್ತಿತ್ವ ಸ್ಥಾಪನೆ ಮಾಡಲು ಹೊರಟ ರಾಜಕುಮಾರರಿಗೆ ಎದುರಾದ ಪ್ರತಿರೋಧಗಳು ಎಂಥವು? ಪ್ರತಿರೋಧಿಸುತ್ತಿದ್ದ ಅನಾದಿ ಜನಗಳಾದರೂ ಯಾರು? ರಾಮಾಯಣದ ಸ್ವಾರಸ್ಯ ಇರುವದೇ ಇಲ್ಲಿ.

ಖರದೂಷಣರೊಡನೆ ಯುದ್ಧ ಮಾಡುವ, ಶೂರ್ಪನಖಿಯನ್ನು ಅಪಮಾನ ಮಾಡುವ ಹಾಗೂ ರಾವಣನ ಸೀತಾಪಹರಣ ಸಂದರ್ಭಗಳಲ್ಲಿ ‘ರಾಕ್ಷಸ’ರ ಪ್ರವೇಶವಂತೂ ಈಗಾಗಲೇ ಆಗಿದೆ. ಇನ್ನು ಪ್ರವೇಶಿಸಬೇಕಾದವರು ‘ವಾನರರು’, ರಾಮಾಯಣವೆಂಬುದು ಬಹುತೇಕ ಕಾಡಿನ ಕಥೆಯೇ ಆದುದರಿಂದ, ಆ ಕಾಡಿನ ನಿವಾಸಿಗಳಾದ ‘ರಾಕ್ಷಸರು’ ಮತ್ತು ‘ವಾನರ’ರ ಪಾತ್ರ ಇಲ್ಲಿ ಬಹುಮುಖ್ಯ. ಬಹುಶಃ ಇದು ಕಾಡಿನ ಕಥೆಯಾದ ಕಾರಣಕ್ಕಾಗಿಯೇ ಬುಡಕಟ್ಟು ಜನವರ್ಗಗಳಿಗೆ ಈ ಕಥೆಯ ಮೇಲೆ ಹೆಚ್ಚು ಪ್ರೀತಿ. ಆದ್ದರಿಂದಲೇ ಇಲ್ಲಿ ಅಯೋಧ್ಯೆ ಅಥವಾ ಅದರ ಗರ್ಭದ ಜೀವನಕ್ಕಿಂತ ಕಾಡಿನ ಒಡಲಿನ ಜೀವನವೇ ಅವರಿಗೆ ಅಪ್ಯಾಯಮಾನ. ವಾಲ್ಮೀಕಿ ರಾಮಾಯಣದಲ್ಲಿ ರಾಮನ ವಿದ್ಯಾಭ್ಯಾಸದ ಸಂದರ್ಭದಲ್ಲಿ ವಿವಾಹದ ಮಾರ್ಗದಲ್ಲಿ ಹಾಗೂ ವನವಾಸದ ವಿವಿಧ ಘಟ್ಟಗಳಲ್ಲಿ ರಾಕ್ಷಸ ಸಂಹಾರಕ್ಕೇ ಆದ್ಯತೆ. ಯಜ್ಞಗಳನ್ನು ಋಷಿಗಳನ್ನೂ ಸಂರಕ್ಷಿಸುವುದೇ ಅವನ ಪರಮ ಕರ್ತವ್ಯ. ಆ ಮೂಲಕ ಅವನು ಆರ್ಯ ಮೌಲ್ಯಗಳನ್ನು ಕಾಪಾಡುವ ಕ್ಷತ್ರಿಯರ. ಆದರೆ, ಬುಡಕಟ್ಟುಗಳ ಮಧ್ಯೆ ರೂಪುಗೊಂಡ ರಾಮ ಅಂಥ ಯಾವ ಉದ್ದೇಶಗಳನ್ನು ಇಟ್ಟುಕೊಂಡವನಲ್ಲ ಎಂದೇ ಅನ್ನಿಸುತ್ತದೆ. ಇಲ್ಲಿ ರಾಮ ಕೂಡ ಸಾಮಾನ್ಯ ಮನುಷ್ಯ. ಎಲ್ಲವೂ ಸಹಜವಾಗಿ ನಡೆಯುತ್ತದೆ.

ಶಿಷ್ಟ ಮಹಾಕಾವ್ಯಗಳ ಕರ್ತೃಗಳು ಸಾಮಾನ್ಯವಾಗಿ ಒಂದು ಉದ್ದೇಶ ಇಟ್ಟುಕೊಂಡು ಕಾವ್ಯದ ರಚನೆಗೆ ತೊಡಗುತ್ತಾರೆ. ಅವರ ಮನಸ್ಸಿನಲ್ಲಿ ಈಗಾಗಲೇ ಕಲ್ಪಿತ ಪಾತ್ರಗಳಿರುತ್ತವೆ. ಯಾರು ಶಿಷ್ಟ ಮತ್ತು ಯಾರು ದುಷ್ಟ ಎಂದು ಈಗಾಗಲೇ ತೀರ್ಮಾನಗೊಂಡಿರುತ್ತದೆ. ಅದೇ ನಂಬಿಕೆಯ ಪಾತಳಿಯಲ್ಲಿ ಕಥೆ ಸಾಗುತ್ತದೆ. ಅಲ್ಲಿ, ಆರ್ಯ ಸಂಸ್ಕೃತಿ ಪ್ರಾಧಾನ್ಯತೆಯ ಪ್ರಸಾರಕ್ಕಾಗಿ, ವೈಷ್ಣವ ಪಂಥದ ಪ್ರಸಿದ್ದಿಗಾಗಿ ಕಥಾ ಭಾಗಗಳು ಬೆಳೆಯುತ್ತವೆ. ಆದರೆ, ಈ ಯಾವ ಪೂರ್ವೋದ್ದೇಶಗಳೂ ಇಲ್ಲದ ಬುಡಕಟ್ಟು ಜನರ ಕಾವ್ಯ ವಾಸ್ತವಕ್ಕೆ ಹತ್ತಿರವಾಗುತ್ತದೆ. ಇಲ್ಲಿನ ರಾಮ ಲಕ್ಷ್ಮಣರಿಗೆ ಎಲ್ಲ ಜನಸಾಮಾನ್ಯರಿಗೆ ಬಂದಂತೆ ಕಷ್ಟಗಳು ಬರುತ್ತವೆ. ರಾಮನಿಗೂ ರಾವಣನಿಗೂ ಸಮಾನವಾದ ದ್ವೇಷಾಸೂಯೆಗಳಿರುತ್ತವೆ. ಯುದ್ಧ ಯಾವ ವೈಭಕರಣವಿಲ್ಲದೆ ನಡೆಯುತ್ತದೆ. ಯುದ್ಧ ಹೇಗಿರುತ್ತದೆಯೆಂದರೆ ಎರಡು ಬುಡಕಟ್ಟುಗಳ ನಡುವಿನ ಹೊಡೆದಾಟದಂತೆ ಮಾತ್ರ.

ಹಾಗಾದರೆ ರಾಮಾಯಣವೆಂಬುದು ಎರಡು ಬುಡಕಟ್ಟುಗಳ ನಡುವಿನ ವೈಷಮ್ಯವೇ? ಸಾರಾಸಗಟಾಗಿ ಹಾಗೆ ಒಪ್ಪಲು ಸಾಧ್ಯವಿಲ್ಲ ನಿಜ. ರಾಮಲಕ್ಷ್ಮಣರು ಈಗಾಗಲೇ ರಾಜ್ಯ ಸ್ವರೂಪ ಪಡೆದಿರುವ ಅಯೋಧ್ಯಾ ಎಂಬ ಒಂದು ಅಧಿಕೃತ ಪ್ರಾಂತದ ರಾಜಕುಮಾರರು. ಅವರ ರಾಜ್ಯವನ್ನು ಮತ್ತಷ್ಟು ವಿಸ್ತರಿಸುವ ದೀರ್ಘ ಸಾಹಸದಲ್ಲಿ ಅನೇಕ ರೀತಿಯ ತೊಡಕುಗಳುಂಟಾಗಿ, ಆ ತೊಡಕುಗಳು ಘಟನೆಗಳಾಗಿ ಪರಿಣಮಿಸಿವೆ. ಆ ಘಟನೆಗಳ ಮುಖ್ಯ ತಿರುವಿನಲ್ಲಿ ಕಾಡಿನ ಜನರು ಪಾತ್ರದಾರಿಗಳಾಗಿದ್ದಾರೆ. ಆರ್ಯರಲ್ಲದ ಯಾರೂ ಮನುಷ್ಯರಲ್ಲ ಎಂಬ ಭಾವನೆ ನಾಗರೀಕರೆನ್ನಿಸಿಕೊಂಡ ಅಯೋಧ್ಯೆಯ ರಾಜಕುಮಾರರಿಗೆ ಇದೆ. ಅವರ ದೃಷ್ಟಿಯಲ್ಲಿ ಅಲ್ಲಿನ ಮೂಲ ನಿವಾಸಿಗಳು ‘ವಾನರ’ರಾಗಿಯೂ, ‘ರಾಕ್ಷಸ’ರಾಗಿಯೂ ಕಾಣಿಸಿಕೊಂಡಿದ್ದಾರೆ.

ಕೇವಲ ಆಹಾರ ಸಂಗ್ರಹಣೆಯ ಹಂತದ ಸಮಾಜದಲ್ಲಿದ್ದ, ಕಪಿಯ ಚಿತ್ರವನ್ನು ತಮ್ಮ ಕುಲ ಚಿಹ್ನೆಗಳನ್ನಾಗಿ ಹೊಂದಿದ್ದ ಮೂಲ ನಿವಾಸಗಳನ್ನು ‘ವಾನರರು’ ಎಂದು ಕರೆಯುತ್ತಾ ಕ್ರಮೇಣ ಅವರನ್ನು ಕೋತಿಗಳನ್ನಾಗಿ ಮಾಡಲಾಗಿದೆ. ‘ವನವಾಸಿ ವಾನರ ಪದಕ್ಕೆ ಮೂಲ ಎಂಬ ಅಭಿಪ್ರಾಯವೂ ಇದೆ. ಕರಡಿಯ ಕುಲಚಿಹ್ನೆ ಇಟ್ಟುಕೊಂಡಿದ್ದ ಜಾಂಬುವಂತನೇ ಮೊದಲಾದವರನ್ನು ಕರಡಿಗಳೇ ಎಂದು ಭಾವಿಸಲಾಗಿದೆ. ಅಯೋಧ್ಯೆಯಷ್ಟು ಮುಂದುವರಿಯದಿದ್ದರೂ ಬೇಟೆ ಮತ್ತು ಕೃಷಿಯನ್ನು ಅವರದೇ ಸಾಂಪ್ರದಾಯಿಕ ವಿಧಾನದಲ್ಲಿ ಮಾಡುತ್ತಿದ್ದ ದಕ್ಷಿಣದ ಬುಡಕಟ್ಟುಗಳು, ರಾಜ್ಯವಿಸ್ತರಣೆಯ ಆಸೆಯಿಂದ ಬಂದು ತಮ್ಮ ಕಾಡಿಗೆ ಲಗ್ಗೆಯಿಟ್ಟು ಆರ್ಯರನ್ನು ಸ್ವಾಭಿಮಾನದಿಂದ ವಿರೋದಿಸಿದರು. ಮೂಲ ನಿವಾಸಿಗಳ ಈ ಪ್ರತಿರೋಧನ ಗುಂಪನ್ನು ರಾಕ್ಷಸರು ಎಂದು ಕರೆಯಲಾಗಿದೆ. ಬಹುಶಃ ಭೂತ, ಪ್ರೇತ, ಪಿಶಾಚಿಗಳ ಬಗ್ಗೆ ನಂಬಿಕೆ ಇಟ್ಟುಕೊಂಡು ಆರಾಧಿಸುತ್ತಲೋ, ಇಲ್ಲವೇ ಅಂಥ ಮುಖವಾಡಗಳನ್ನು ಪೂಜಿಸುತ್ತಲೋ ಅಥವಾ ಅದೇ ಚಿಹ್ನೆಯ ಕುಲ ಲಾಂಛನಗಳನ್ನು ಇಟ್ಟುಕೊಂಡೋ ಅವರು ಬದುಕುತ್ತಿದ್ದರು ಎಂದು ಕೂಡ ಊಹಿಸಬಹುದಾಗಿದೆ.

ರಾಮಾಯಣವೆಂಬುದು ಅನೇಕ ಹಾಡುಗಬ್ಬಗಳನ್ನು ಸೇರಿಸಿಕೊಂಡು ಬೃಹತ್ ಕೃತಿಯಾಗಿ ಮಾರ್ಪಟ್ಟಿತು ಎಂಬ ಚರ್ಚೆ ಒಂದು ಕಡೆಗಿದೆ. ಹಾಗೆ ಕಾಲಾಂತರದಲ್ಲಿ ವಿವಿಧ ಕವಿಗಳು ಅದಕ್ಕೆ ತಮ್ಮದೇ ಆದ ರೂಪುಗಳನ್ನು ವಿಸ್ತರಿಸಿದರು ಎಂಬ ಅಭಿಪ್ರಾಯವೂ ನಿಜವೇ. ಇಂಥ ಅವಸ್ಥಾಂತರದಲ್ಲಿ ‘ನಾಗರೀಕ’ ಮನುಷ್ಯರು ಮಾನವರಾಗಿಯೂ, ‘ಅನಾಗರೀಕ’ ಹಂತದ ಕಾಡಿನ ಜನರು ವಾನರರು ಮತ್ತು ರಾಕ್ಷಸರಾಗಿಯೂ ಪರಿವರ್ತಿತರಾದರು. ಅಷ್ಟೇ ಅಲ್ಲ, ಇಡೀ ಕಾವ್ಯ ವೈಷ್ಣಕರಣಗೊಂಡ ಸಂದರ್ಭದಲ್ಲಂತೂ ಅನೇಕಾನೇಕ ಪ್ರಕ್ಷೇಪಗಳ ಮೂಲಕ ಅದೊಂದು ದೈಕೃತಿಯಾಗಿ ಮಾರ್ಪಟ್ಟುದಲ್ಲದೆ, ರಾಮ ಎಂಬ ರಾಜ ವಿಷ್ಣುವಿನ ಅವತಾರದ ದೈವಪುರುಷನೇ ಆದ. ಇವೆಲ್ಲ ಹಾಗಿರಲಿ, ಹೆಚ್ಚು ಕಡಿಮೆ ರಾಮಾಯಣವೆಂಬ ಮೂಲ ಕೃತಿಯ ಕಾಲಘಟ್ಟದಲ್ಲಿಯೇ ರಚಿಸಲ್ಪಟ್ಟ ಬೌದ್ಧ ಮತ್ತು ಜೈನ ಜಾತಕ ಕಥೆಗಳಲ್ಲಿ ವಾಸ್ತವಕ್ಕೆ ಹತ್ತಿರವಾಗುವ ರಾಮಾಯಣದ ಅನೇಕ ಕಥೆಗಳಿವೆ. ಅವುಗಳಲ್ಲಿ ಜೈನಧರ್ಮದ ಪಾವುಮ ಚರಿಯಮ್ ಹಾಗೂ ಬೌದ್ಧ ಧರ್ಮದ ‘ದಶರಥ ಜಾತಕ’ ಅತ್ಯಂತ ಮುಖ್ಯವಾದವುಗಳು.

ಈ ಪಾವುಮಚರಿಯಮ್‌ನ ಬಹುಭಾಗ ರಾವಣನ ಜೀವನ ಹಾಗೂ ರಾಮನ ವನವಾಸದ ಬಗೆಗಿನ ಚಿತ್ರಣವನ್ನೇ ಹೊಂದಿದೆ. ಇದರ ಪ್ರಕಾರ ರಾವಣನ ವಂಶಸ್ಥರು ಯಾರೂ ರಾಕ್ಷಸರಲ್ಲ. ಅವರೂ ಮನುಷ್ಯರೇ. ರಕ್ಷಕ ಎಂಬ ಪದ ಪ್ರಯೋಗದ ಮೂಲಕ ಇವರ ಬುಡಕಟ್ಟಿನ ಹೆಸರು ರೂಪುಗೊಂಡಿದೆಯೇ ವಿನಹ ಇವರು ಮೂಲತಹ ರಾಕ್ಷಸರಲ್ಲ.

ವಿಧ್ಯಾದರ ಎಂಬ ಮೂಲ ವ್ಯಕ್ತಿಯಿಂದ ವಾನರ ಕುಲ ಆರಂಭಗೊಂಡಿತು. ಆ ವಾನರ ಕುಲದ ಮತ್ತೊಂದು ಶಾಖೆಯಾಗಿ ರಾಕ್ಷಸ ಕುಲ ಬೆಳೆಯಿತು. ಕಾಲ ಕ್ರಮೇಣ ಈ ಶಾಖೆಗಳ ನಡುವೆ ಕೊಟ್ಟು ತರುವ ವೈವಹಿಕ ಸಂಬಂಧಗಳೂ ನಡೆದವು. ರಾವಣನ ಹೆಂಡತಿಯರಲ್ಲಿ ಒಬ್ಬಳಾದ ಶ್ರೀಪ್ರಭ ವಾನರ ವಂಸದವಳಾಗಿದ್ದಳು. ಆದರೆ, ಈ ಎರಡು ವಂಶಗಳ ನಡುವೆ ಅಷ್ಟೇ ಮಟ್ಟಿನ ಬದ್ಧ ದ್ವೇಷವೂ ಇತ್ತು.[7] ಹೀಗಾಗಿ ರಾಕ್ಷಸರೆಂಬಂತೆ ಚಿತ್ರಿತಗೊಂಡಿರುವ ರಾವಣನ ವಂಶದವರಾಗಲೀ ವಾನರರಂತೆ ಚಿತ್ರಿತವಾಗಿರುವ ವಾಲಿ ಸುಗ್ರೀವರಾಗಲೀ ಮನುಷ್ಯರೇ ಹೊರತು ಬೇರಾರೂ ಅಲ್ಲ. ಆದರೆ ಇವರ ಜೀವನಕ್ರಮಗಳು ಆರ್ಯರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದುವು. ವಾಲಿಗೂ ರಾವಣನಿಗೂ ಹಳೆಯ ದ್ವೇಷವಿತ್ತು. ರಾಮ ವಾಲಿಯನ್ನು ಬಾಣ ಬಿಟ್ಟು ಕೊಲ್ಲುವ ಸಂದರ್ಭದಲ್ಲಿ ಈ ವಿಚಾರ ಪ್ರಕಟಗೊಳ್ಳುವುದನ್ನು ನೆನೆದಾಗ, ಆ ಎರಡು ವಂಶಗಳ ನಡುವೆ ಇದ್ದ ಸಂಬಂಧ ಮತ್ತು ದ್ವೇಷಗಳ ಅರಿವು ನಮಗುಂಟಾಗದೆ ಇರದು. ಈ ಹಿನ್ನೆಲೆಯಲ್ಲಿ ‘ವಾನರರ’ ಜೊತೆ ರಾಮ ಬೆಳೆಸಿಕೊಂಡ ಸಖ್ಯವನ್ನು ನಮ್ಮ ಕಾವ್ಯದ ಮೂಲಕವೇ ಪರಿಶೀಲಿಸಬಹುದಾಗಿದೆ.

ಗುಹಾವಾಸಿಗಳಾಗಿದ್ದುಕೊಂಡು ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಬದುಕುತ್ತಿದ್ದ ಮೂಲ ನಿವಾಸಿ ಬುಡಕಟ್ಟುಗಳಾದ ವಾನರರಿಗೆ ವಾಲಿ ನಾಯಕ. ವಾಲಿ ಇಲ್ಲದಿರುವ ಸಂದರ್ಭದಲ್ಲಿ ನಾಯಕತ್ವವನ್ನು ಕಸಿದುಕೊಂಡು ಮೋಸ ಮಾಡಿದ್ದ ಎಂಬ ಕಾರಣಕ್ಕೆ ಅವನ ತಮ್ಮ ಸುಗ್ರೀವನನ್ನು ರಾಜ್ಯ ಭ್ರಷ್ಟನನ್ನಾಗಿಸಿ, ಅವನ ಹೆಂಡತಿಯನ್ನು ತನ್ನ ಜೊತೆಗೇ ಇಟ್ಟುಕೊಂಡಿದ್ದ ವಾಲಿ. ಆದ್ದರಿಂದ ವಾಲಿಯನ್ನು ಕಂಡರೆ ಸುಗ್ರೀವನಿಗೆ ಸಹಜವಾಗಿ ದ್ವೇಷವಿತ್ತು. ಬಹುಶಃ ಬಿಲ್ಲುಬಾಣಗಳ ಉಪಯೋಗವನ್ನೇ ಅರಿಯದ ವಾನರ ವಂಶಸ್ಥರಿಗೆ ಧನುರ್ಧಾರಿಗಳಾದ ರಾಮಲಕ್ಷ್ಮಣರ ಸಾಹಸ ಖಂಡಿತವಾಗಿಯೂ ಮರುಳು ಮಾಡಿದೆ. ಇವರ ಸಹಾಯದಿಂದ ವಾಲಿಯನ್ನು ಕೊಂದು ತಾನೇ ನಾಯಕ ಪಟ್ಟಕಟ್ಟಿಕೊಳ್ಳಬೇಕೆಂಬುದು ಸುಗ್ರೀವನ ಆಸೆ. ಹನುಮಂತನೂ ಸುಗ್ರೀವನ ಬೆನ್ನಿಗಿದ್ದಾನೆ. ಇಂಥ ಒಂದು ಸಂದರ್ಭವನ್ನು ರಾಮಲಕ್ಷ್ಮಣರು ಸದುಪಯೋಗಪಡಿಸಿಕೊಳ್ಳುತ್ತಾರೆ. ಸುಗ್ರೀವ ರಾಮನಿಗೆ ಹೇಳುತ್ತಾನೆ.

ನನ್ನ ಅಣ್ಣಾನೆ ಎಂಬುವನಾಲಾ
ನನ್ನ ಹೆಣ್ತೀನೆ ಆಳುಕೊಂಡಾ
ನನ್ನ ಹೆಣ್ತಿ ನನಗೆ ಕೊಡಿಸಿದುರೆ
ನನ್ನಾ ಸೈನ್ಯಾನ ಕೊಡುತೀದಾ

ಇಲ್ಲಿ ಸ್ನೇಹಕ್ಕಿಂತ ಸ್ಪಷ್ಟವಾದ ಒಂದು ವ್ಯವಹಾರ ಸಂಬಂಧ ಇದೆ. ರಾಜ್ಯಭ್ರಷ್ಟನಾಗಿರುವ ಸುಗ್ರೀವನಿಗೆ ಮೊದಲನೆಯದಾಗಿ ಅವನ ಹೆಂಡತಿ ಬೇಕು. ಅವನ ಹೆಂಡತಿಯನ್ನು ಅವನಿಗೆ ಕೊಡಿಸುವುದು ಎಂದರೆ ವಾಲಿಯನ್ನು ಗೆಲ್ಲುವುದು ಎಂದೇ ಅರ್ಥ. ವಾಲಿ ಎಂಥ ಅಸಹಾಯ ಶೂರ ಎಂದರೆ ರಾವಣನಂಥ ಬಲಾಢ್ಯನನ್ನೇ ಒಮ್ಮೆ ಹಿಡಿದು ತಂದು ತನ್ನ ಶಿಶುವಿನ ತೊಟ್ಟಿಲಿಗೆ ಕಟ್ಟಿದವನು. ಆದರೆ ಅಂಥ ಅಸಹಾಯ ಶೂರನನ್ನು ನಾಗರೀಕ ಜಗತ್ತಿನ ರಾಮ ತನ್ನ ‘ಆಧುನಿಕ ಅಸ್ತ್ರವಾದ ಧನಸ್ಸು’ ಬಳಿಸಿ ಒಂದೇ ಏಟಿಗೆ ಕೊಲ್ಲುತ್ತಾನೆ. ಆಗ ವಾಲಿಯ ಪ್ರತಿಕ್ರಿಯೆ ನೋಡಿ.

ಯಾವ ಕಳ್ಳಾನೋ ನೀನಿನ್ನು ತಾನ
ಎದುರು ಬಂದು ನನ್ನ ಹೊಡಿಲಾಕ ತಾನ
ಮರೆಯಲು ಬಂದು ನಿತ್ತು ಹೊಡಿದಿಯಾಲಾ

ವಾಲಿಯ ಈ ಮಾತುಗಳಿಂದ ರಾಮನಿಗೆ ನಾಚಿಕೆಯಾಗುತ್ತದೆ. ಬಹುಶಃ ಸುಗ್ರೀವನಿಗಿಂತ ವಾಲಿಯೇ ಬಲಾಢ್ಯ ಎಂತಲೂ, ರಾವಣನ ಮೇಲೆ ಇವನಿಗೂ ಹಳೇ ದ್ವೇಷ ಇದೆ ಎಂತಲೂ ಮೊದಲೇ ಗೊತ್ತಿದ್ದರೆ ಸುಗ್ರೀವನನ್ನು ಬಿಟ್ಟು ವಾಲಿಯನ್ನೇ ಗೆಳೆಯನನ್ನಾಗಿ ಮಾಡಿಕೊಳ್ಳುತ್ತಿದ್ದನೋ ಏನೋ. ಒಟ್ಟಿನಲ್ಲಿ ವಾಲ್ಮೀಕಿ ರಾಮಾಯಣದ ಪ್ರಕಾರವೇ ಶೂದ್ರರನ್ನು ಕೊಂದರೆ ಯಾವ ಪಾಪವೂ ಬರದೆಂಬುದನ್ನು ತಿಳಿದಿದ್ದ ರಾಮ ಹಿಂದೆ ನಿಂತು ಮೋಸದಿಂದ ವಾಲಿಯನ್ನು ಕೊಲ್ಲುತ್ತಾನೆ. ಎಷ್ಟೇ ಆದರೂ ಕ್ಷತ್ರಿಯನಲ್ಲವೆ? ಒಬ್ಬ ಪರಾಕ್ರಮಿಯನ್ನು ನೇರವಾಗಿ ಎದುರಿಸಲು ಸಾಧ್ಯವಾಗದ್ದಕ್ಕೆ ಹಾಗೂ ಮೋಸದಿಂದ ಕೊಂದದ್ದಕ್ಕೆ ಪಶ್ಚಾತ್ತಾಪ ಪಡುತ್ತಾ ಹೀಗೆ ನುಡಿಯುತ್ತಾನೆ:

ಈಗೊಂದು ತಪ್ಪ ಮಾಡ್ಯನಾಲಾ
ನನ್ನ ಸೀತೀನೆ ತರಬೇಕೆಂದು
ತಪ್ಪುನ ಕೆಲಸನೊಂದು ಮಾಡ್ಯನಾಲಾ

ಮುಂದಿನ ಜನ್ಮದಲ್ಲಿ ಇಂಥದ್ದೇ ಮತ್ತೊಂದು ಸಂದರ್ಭ ಬರುತ್ತದೆ. ಆಗ ನೀನೂ ಹೀಗೆ ಮರೆಯಲ್ಲಿ ನಿಂತು ನನ್ನನ್ನು ಕೊಲ್ಲು ಎಂದು ರಾಮ ಹೇಳುತ್ತಿರುವಾಗಲೇ ವಾಲಿ ಸಾಯುತ್ತಾನೆ. ಮೂಲ ರಾಮಾಯಣದಿಂದ ಪ್ರಭಾವ ಪಡೆದು ಹೇಳುತ್ತಿರುವ ಇಂಥ ಮರು ಜನ್ಮದ ಮಾತುಗಳು ಅಥವಾ ರಾಮ ವಿಷ್ಣುವಿನ ಅವತಾರದವನು ಎಂಬ ಕಲ್ಪನೆ ಇಲ್ಲೊಂದು ಕಡೆ ಮಾತ್ರ ಬಂದಿದೆ. ಎಷ್ಟೇ ಆಗಲಿ ಬುಡಕಟ್ಟುಗಳು ಸೃಷ್ಟಿಸಿದ ರಾಮನಾದ್ದರಿಂದ ತನ್ನ ತಪ್ಪನ್ನು ಒಪ್ಪಿಕೊಂಡು ಇಲ್ಲಿ ವಿನೀತನಾದ. ಆದರೆ ವಾಲ್ಮೀಕಿಯ ರಾಮ ಹಾಗಲ್ಲ. ವಾಲಿಯನ್ನು ಮರೆಯಲ್ಲಿ ನಿಂತು ಕೊಂದದ್ದಕ್ಕೆ ಅವನಿಗೆ ಪಶ್ಚಾತ್ತಾಪವಿಲ್ಲ. “ವಾನರನ ಚಪಲ ಬುದ್ದಿಯಿಂದಾಗಿ ನನ್ನನ್ನು ಬಯ್ಯುತ್ತಿದ್ದೀಯ. ರಾಜನಾದ ಭರತನ ಆಜ್ಞಾನುಸಾರ ಧರ್ಮ ಸಂಸ್ಥಾಪನೆಗಾಗಿ ನಾನು ಹಾಗೂ ಕೆಲವು ರಾಜರು ಪರ್ಯಟಿಸುತ್ತಿದ್ದೇವೆ” ಎಂದು ಹೇಳಿ ವಾಲಿಗೆ ಸದ್ಗತಿ ತೋರಿಸುತ್ತಾನೆ!

ಸುಗ್ರೀವನ ಹೆಂಡತಿ ವಿಚಾರ ಗೊಂಡರ ಕಥೆಯಲ್ಲಿ ಮೊದಲಿಗೆ ಬರುತ್ತದೆಯೇ ಹೊರತು ವಾಲಿಯ ವಧೆಯ ನಂತರ ವಾಲಿಯ ಹೆಂಡತಿ ಏನಾದಳು ಎಂಬ ವಿಚಾರ ಈ ರಾಮಾಯಣದಲ್ಲಿ ಬರುವುದಿಲ್ಲ. ಆದರೂ ಅಂದಿನ ಬುಡಕಟ್ಟುಗಳಲ್ಲಿ ಇದ್ದ ವೈವಾಹಿಕ ಸಂಬಂಧಗಳನ್ನು ತಿಳಿದುಕೊಳ್ಳಬೇಕಾದರೆ ಮತ್ತೆ ಮೂಲ ರಾಮಾಯಣವನ್ನೇ ನಾವು ಆಶ್ರಯಿಸಬೇಕಾಗಿದೆ. ವಾಲಿ, ದುಂಧುಭಿ ಎಂಬ ರಾಕ್ಷಸನ ಮೇಲೆ ಯುದ್ಧಕ್ಕೆ ಹೋಗಿ ಹಿಂತಿರುಗಿ ಬಹಳ ಕಾಲ ಬಾರದೆ ಇದ್ದಾಗ, ಅವನು ಸತ್ತನೆಂದು ತಿಳಿದು ಸುಗ್ರೀವ ರಾಜ್ಯವಹಿಸಿಕೊಂಡ. ಅಂದರೆ ಕೇವಲ ವಾಲಿಯ ರಾಜ್ಯಾಧಿಪತ್ಯವನ್ನು ವಹಿಸಿಕೊಳ್ಳಲಿಲ್ಲ. ಅವನ ಹೆಂಡತಿಯಾದ ತಾರೆಯನ್ನು ವರಿಸಿ ತನ್ನ ಜೊತೆಯೇ ಇಟ್ಟುಕೊಂಡ. ವಾಲಿ ಹಿಂತಿರುಗಿ ಬಂದ ನಂತರ ಸುಗ್ರೀವನನ್ನು ಓಡಿಸಿ ತನ್ನ ಹೆಂಡತಿಯಾದ ತಾರೆಯನ್ನು ಬಿಡಿಸಿಕೊಂಡನಲ್ಲದೆ ಸುಗ್ರೀವನ ಹೆಂಡತಿಯಾದ ರುಮೆಯನ್ನೂ ವರಿಸಿದ. ವಾಸ್ತವವಾಗಿ ರಾಮ ವಾಲಿಯ ಮೇಲೆ ಕೋಪಗೊಂಡಿದ್ದು ಸುಗ್ರೀವನ ಹೆಂಡತಿಯನ್ನು ವಾಲಿಯೇ ಇಟ್ಟುಕೊಂಡಿದ್ದಾನೆ ಎಂಬ ಕಾರಣಕ್ಕಾಗಿ. ಆದರೆ ವಾಲಿಯ ವಧೆಯ ನಂತರ ಆದದ್ದೇನು? ಅಣ್ಣನ ಹೆಂಡತಿಯಾದ ತಾರೆಯನ್ನು ಕೂಡ ರಾಣಿಯನ್ನಾಗಿ ಸ್ವೀಕರಿಸಿದ ಅದೇ ಸುಗ್ರೀವ. ಆಗ ರಾಮ ಆಕ್ಷೇಪಣೆಯನ್ನೂ ಎತ್ತಲಿಲ್ಲ.

[1] ಬಂಜಗರೆ ಜಯಪ್ರಕಾಶ: ಇದೇ ರಾಮಾಯಣ, ಪುಟ-೨.

[2] Ramakata in Tribal and Folk Traditions of India, K.S.Singh, Birendra Nath Datta

[3] Romila Thaper: Exile and Kingdom

[4] ಬಂಜಗೆರೆ ಜಯಪ್ರಕಾಶ: ಇದೇ ರಾಮಾಯಣ

[5] ಡಿ.ವಿ.ಜಿ.: ಸಂಸ್ಕೃತ, ಪುಟ-೧೦೯

[6] ಬಂಜಗೆರೆ ಜಯಪ್ರಕಾಶ: ಇದೇ ರಾಮಾಯಣ, ಪುಟ-೧೬-೧೭

[7] ಪಾವುಮ ಚರಿಯಮ್: ಉಲ್ಲೇಖ-ರೋಮಿಲಾ ಥಾಪರ್